close logo

ಕಾಶೀಕ್ಷೇತ್ರದ ನವದುರ್ಗೆಯರು

ದೇವರದೇವ ಮಹಾದೇವನು ಲಿಂಗರೂಪದಲ್ಲಿ ಆವಿರ್ಭವಿಸಿದ ಪ್ರಥಮ ಸ್ಥಳವೇ ಕಾಶಿ.ಭಾರತದಲ್ಲಿ 108 ಜ್ಯೋತಿರಲಿಂಗಗಳಿದ್ದು, ಅವುಗಳಲ್ಲಿ 12 ಕ್ಷೇತ್ರಗಳಲ್ಲಿರುವ ಸ್ವಯಂಭೂಲಿಂಗಗಳು ದ್ವಾದಶ ಜ್ಯೋತಿರ್ಲಿಂಗಗಳೆಂದೇ ಪ್ರಸಿದ್ಧಿ ಹೊಂದಿವೆ.ಈ ಜ್ಯೋತಿರ್ಲಿಂಗಗಳಲ್ಲಿ ಕಾಶಿ ಪುಣ್ಯಕ್ಷೇತ್ರವು ಅತ್ಯಂತ ಪ್ರಾಚೀನವಾದದ್ದು. ವಿಶ್ವನಾಥನನ್ನು ದರ್ಶಿಸಲು ಭಕ್ತಾದಿಗಳು ಕಾಶಿಗೆ  ತೀರ್ಥಯಾತ್ರೆ ಕೈಗೊಳ್ಳುವಂತೆ, ನವರಾತ್ರಿಯ ಸಮಯದಲ್ಲಿ ಕಾಶಿಯ ನವದುರ್ಗ ಯಾತ್ರೆಯನ್ನು ಕೈಗೊಳ್ಳಲಾಗುತ್ತದೆ.

ನ ಶಿವೇನ ವಿನಾ ಶಕ್ತಿರ್ನಶಕ್ತಿ ರಹಿತಃ ಶಿವಃ । ಉಮಾಶಂಕರ ಜೋವೈಕ್ಯಂ ಯಃ ಪಶ್ಯತಿ ಸ ಪಶ್ಯತಿ ॥

ಅರ್ಥಾತ್ , ಶಿವನೆಂದೂ ಶಕ್ತಿಯಿಂದ ದೂರನಾಗುವುದಿಲ್ಲ. ಶಕ್ತಿ ಮತ್ತು ಶಿವ ಅಭಿನ್ನ. ಇವರ ಏಕತ್ರ ಅನುಭೂತಿಯನ್ನೇ ತತ್ತ್ವದರ್ಶನವೆನ್ನುತ್ತಾರೆ. ಮತ್ತೊಂದು ಮಾತು ಹೀಗಿದೆ,

‘ ವ್ಯಕ್ತಂ ಸರ್ವಂ ಉಮಾರೂಪಮ್, ಅವ್ಯಕ್ತನ್ನು ಮಹೇಶ್ವರಮ್  ‘

ಅರ್ಥಾತ್, ಜಗತ್ತಿನಲ್ಲಿ ಏನೇನು ವ್ಯಕ್ತವೋ ಪ್ರಕಾಶಮಾನವೋ ಅದೆಲ್ಲವೂ ಉಮಾಮಯ. ಈ  ವ್ಯಕ್ತದ ಹಿಂದೆ ಆಧಾರವಾಗಿರುತ್ತಾ, ಅವ್ಯಕ್ತ, ಅಪ್ರಕಾಶಿತವೆಲ್ಲವೂ ಮಹೇಶ್ವರ. ಶಕ್ತಿ ತನ್ನ ಇಚ್ಛೆಯ ಮೇರೆಗೆ ಸೃಷ್ಟಿಸುತ್ತಾಳೆ, ಪರಿಪಾಲಿಸುತ್ತಾಳೆ ಮತ್ತು ತನ್ನ ಸ್ವ-ಇಚ್ಛೆಯಿಂದಲೇ ಸಂಹಾರ ಮಾಡುತ್ತಾಳೆ. ಶಿವ-ಶಕ್ತಿಯರ ಅಸ್ತಿತ್ತ್ವವನ್ನು ಅರಿಯಬೇಕಾದರೆ ಪವಿತ್ರ ಕಾಶಿ ಕ್ಷೇತ್ರದ ದರ್ಶನ ಮಾಡಬೇಕು.ಈ ಪವಿತ್ರವಾದ ಕಾಶಿ ಕ್ಷೇತ್ರದಲ್ಲಿ ಪ್ರತಿಷ್ಠಿತವಾಗಿರುವ ಶಿವಲಿಂಗುಗಳಷ್ಟೇ  ಶಕ್ತಿಪೀಠಗಳನ್ನು  ಕಾಣಬಹುದು.

ವಾರಣಾಸಿಯ ನವದುರ್ಗೆಯರು: ಮುಸಲ್ಮಾನರ ದಾಳಿಯಿಂದ ಭಯಗೊಂಡು,ಪುರೋಹಿತರು ತಾವು ಪೂಜಿಸುತ್ತಿದ್ದ ದೇವಿಯರ ವಿಗ್ರಹಗಳನ್ನು ತಮ್ಮ ತಮ್ಮ ಮನೆಗೆ ಕೊಂಡೊಯ್ಯುತ್ತಾರೆ. ಅಲ್ಲಿಯೇ ಒಂದು ಪುಟ್ಟ ಗುಡಿ ನಿರ್ಮಾಣ ಮಾಡಿ ಪೂಜಿಸಲಾರಂಬಿಸುತ್ತಾರೆ. ಇದೇ ಕಾರಣಕ್ಕೆ ವಾರಣಾಸಿಯ ಪುಟ್ಟ ಪುಟ್ಟ ಗುಡಿಗಳಲ್ಲೂ ಭವ್ಯವಾದ ಸುಂದರ ದೇವೀಮೂರ್ತಿಗಳನ್ನು ಕಾಣಬಹುದು.

ದುರ್ಗಾಸಪ್ತಶತಿಯ ಪ್ರಾರಂಭದಲ್ಲಿಯೇ ಚಂಡೀಕವಚದಲ್ಲಿ ನವದುರ್ಗೆಯರ ಬಗ್ಗೆ ಹೀಗೆ ವರ್ಣಿಸಲಾಗಿದೆ :

 ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ ।
ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ ।
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ।
ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ ।
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್ ।
ನವಮಂ ಸಿದ್ಧಿದಾತ್ರೀ ಚ ನವದುರ್ಗಾ ಪ್ರಕೀರ್ತಿತಾಃ ॥1.

ಶೈಲಪುತ್ರಿ:ದೇವಿಯ ಮಂದಿರ ಅಲ್ಲಾಯಿಪುರದ ಭಾಗದಲ್ಲಿ ಬರುತ್ತದೆ.ಅಂಧಕಾರದಿಂದ ಕೂಡಿದ ಗರ್ಭಗುಡಿಯಲ್ಲಿ,ದೇವಿಯ ಕಪ್ಪು ಕಲ್ಲಿನ ಚಿಕ್ಕ ಮೂರ್ತಿಯ ಮುಖ ಮಾತ್ರ ಕಾಣಬಹುದು. ದೇವಿಯು ವೃಷಭನ ಮೇಲೆ ಕುಳಿತಿದ್ದು, ಬಲಗೈಯಲ್ಲಿ ತ್ರಿಶೂಲ,ಎಡಗೈಯಲ್ಲಿ ಕಮಲ-ಪುಷ್ಪ ಹಿಡಿದಿದ್ದಾಳೆ.ದೇವಿಗೆ ಸಂಬಂಧಿಸಿದ ಒಂದು ಶ್ಲೋಕವು ಹೀಗೆ ಇದೆ :

ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತ ಶೇಖರಾಮ್।
ವೃಷಾರೂಢಾ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ॥

2. ಬ್ರಹ್ಮಚಾರಿ: ದುರ್ಗಾ ಘಾಟಿನ ಸಮೀಪದ ಒಂದು ಸಣ್ಣ ಗಲ್ಲಿಯಲ್ಲಿ, ವೇಣೀಮಾಧವ ಘಾಟಿನ ಉತ್ತರ ದಿಕ್ಕಿಗೆ ದೇವಿಯ ಮಂದಿರ ಬರುತ್ತದೆ. ಇದೊಂದು ಚಿಕ್ಕ ಗುಡಿಯಾಗಿದೆ. ಕಮಲದ ಮೇಲೆ ಆಸೀನಳಾಗಿರುವ ದೇವಿಯ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲವಿದೆ. ದೇವಿಗೆ ಸಂಬಂಧಿಸಿದ ಒಂದು ಶ್ಲೋಕವು ಹೀಗೆ ಇದೆ:

ದಧಾನಾ ಕರಪದ್ಮಾಭ್ಯಾಂ ಅಕ್ಷಮಾಲ ಕಮಂಡಲು ।
ದೇವಿ ಪ್ರಸೀದತು ಮಯಿ ಬ್ರಹ್ಮಚಾರಿಣಾನುತ್ತಮ ॥

3. ಚಂದ್ರಘಂಟಾ:ಕಾಶಿಯ ಚೌಕ್ ಪ್ರದೇಶದ ಎಡಗಡೆ ಲಕ್ಷ್ಮೀಚೌತಾರಾದ ಅಂಕುಡೊಂಕಿನ  ಗಲ್ಲಿಗಳನ್ನು ದಾಟಿ ಮುಂದೆ ಹೋದರೆ ಚಂದುನಾಉ ಗಲ್ಲಿಯಲ್ಲಿ ದೇವಿಯ ಚಿಕ್ಕ ಮಂದಿರವಿದೆ. ಒಂದು ಮೊಳದ ಎತ್ತರದ ಕೆಂಪು ವಸ್ತ್ರಾಲಂಕೃತ ದೇವಿ ಮೂರ್ತಿಯ ಪಕ್ಕದಲ್ಲಿಯೇ ಒಂದು ದೊಡ್ಡ ಗಂಟೆ ಇದೆ. ಮಂದಿರದ ಹಿಂಭಾಗದಲ್ಲಿ,ಪಾರ್ಶ್ವಗಳಲ್ಲಿ ನವದುರ್ಗೆಯರ ಪುಟ್ಟ 8 ಮೂರ್ತಿಗಳಿವೆ.ದೇವಿಗೆ ಸಂಬಂಧಿಸಿದ ಒಂದು ಶ್ಲೋಕವು ಹೀಗೆ ಇದೆ :

ಪಿಂಡಜ ಪ್ರಬರಾ ರೂಢ ಚಂಡಕೋಪಾಸ್ತ ಕೈರ್ಯುತು ।
ಪ್ರಸಾದಂ ತನುತೇ ವಹಂ ಚಂದ್ರಘಂಟೇತಿ ವಿಶ್ರುತ ॥

4. ದುರ್ಗಾದೇವಿ(ಕುಷ್ಮಾಂಡ): ದೇವಿಯು ವಾರಣಾಸಿ ಕ್ಷೇತ್ರದ ದಕ್ಷಿಣ ಭಾಗವನ್ನು ಸದಾ ರಕ್ಷಿಸುತ್ತಿರುತ್ತಾರೆ. ದುರ್ಗಮಾಸುರನೊಂದಿಗೆ ಯುದ್ಧ ಮಾಡುತ್ತಾ ವಾರಣಾಸಿಯ ದಕ್ಷಿಣ ದಿಕ್ಕಿನಲ್ಲಿ ಅವನನ್ನು ಸಂಹರಿಸುತ್ತಾಳೆ. ಇದೆ ಸ್ಥಳದಲ್ಲಿ ಪ್ರಸ್ತುತ ದೇವಿ ಮಂದಿರವಿರುವಿದು.ದೇವಿಗೆ ಸಂಬಂಧಿಸಿದ ಒಂದು ಶ್ಲೋಕವು ಹೀಗೆ ಇದೆ :

ಸುರ ಸಂಪೂರ್ಣ ಕಲಸಂ ರುಧಿರಾಪ್ಲೂತಮೇವ ಚ ।
ದದಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತುಮೇ ॥

5. ಸ್ಕಂದಮಾತ : ಔಸಾನ್ ಗಂಜ್ ನ ಬಳಿ ಬರುವ ನಾಗಕೂಪವನ್ನು ಬಿಟ್ಟು ಮುಂದೆ ಬಂದರೆ ವಿಶಾಲ ಮೈದಾನವಿದೆ,ಅಲ್ಲಿ ದೇವಿ ಮಂದಿರ ಸಿಗುತ್ತದೆ. ಸಿಂಹದ ಮೇಲೆ ಆಸೀನಳಾಗಿರುವ ದೇವಿಯ ಮೂರ್ತಿಯು ಕಪ್ಪು ಕಲ್ಲಿನಿಂದ ಕೂಡಿದ್ದು, ಎಡಗೈಯಿಂದ ಕಾರ್ತಿಕೇಯನನ್ನು ಅಕ್ಕರೆಯಿಂದ ತಬ್ಬಿ ಹಿಡಿದಿದ್ದಾಳೆ ಹಾಗೂ ಬಲಹಸ್ತ ಅಭಯ ಮುದ್ರೆಯಲ್ಲಿದೆ.ದೇವಿಗೆ ಸಂಬಂಧಿಸಿದ ಒಂದು ಶ್ಲೋಕವು ಹೀಗೆ ಇದೆ :

ಸಿಂಹಾಸನಗತ ನಿತ್ಯಂ ಪದ್ಮಾಶ್ರಿತ ಕರದ್ವಯ ।
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ ॥

6. ಕಾತ್ಯಾಯಿನಿದೇವಿ:ಆತ್ಮ ವೀರೇಶ್ವರ ಮಂದಿರದ ಉತ್ತರದ ಪೂರ್ವ ಭಾಗದಲ್ಲಿ ದೇವಿ ಕಾತ್ಯಾಯಿನಿಯ ಮಂದಿರವಿದೆ.ದೇವಿ ಮೂರ್ತಿ ಸಿಂಹದ ಬೆನ್ನಿನ ಮೇಲೆ ಬಲಪಾದವನ್ನು ಊರಿ,ಎರಡನೆಯ ಪಾದವನ್ನು ಮಹಿಶಾಸುರನ ಕೊರಳ ಸಮೀಪವಿರಿಸಿ ನಿಂತಿದ್ದಾಳೆ.ಅಷ್ಟಭುಜಗಳುಳ್ಳ ಕಪ್ಪು ಕಲ್ಲಿನ ಮೂರ್ತಿ,ಬಲಗೈಯಲ್ಲಿರುವ ತ್ರಿಶೂಲ ಅಸುರನ ಎದೆಯಲ್ಲಿ ನಾಟಿಕೊಂಡಿದೆ.ದೇವಿಗೆ ಸಂಬಂಧಿಸಿದ ಒಂದು ಶ್ಲೋಕವು ಹೀಗೆ ಇದೆ :

ಕಾತ್ಯಾಯಿನೀಂ ದಶಭುಜಾಂ ಮಹಿಷಾಸುರ ಘಾತಿನೀಮ್ ।
ನಮಾಮಿ ವರದಾಂ ದೇವೀಂ ಸರ್ವದೇವ ನಮಸ್ಕೃತಾಮ್  ॥

7. ಕಾಳರಾತ್ರಿದೇವಿ: ದುರ್ಗಮಾಸುರನ ಸಂಹಾರ ಕಾಲದಲ್ಲಿ ಪಾರ್ವತಿ ದೇವಿಯು ಕಾಳರಾತ್ರಿಯನ್ನು ಸೃಷ್ಟಿಸಿ, ದೂತಳನ್ನಾಗಿ ಕಳುಹಿಸುತ್ತಾಳೆ. ಕುಪಿತನಾದ ದುರ್ಗಮಾಸರನು ದೇವಿಯನ್ನು ಬಂಧಿಸಲು ಆಜ್ಞಾಪಿಸುತ್ತಾನೆ. ಆಗ ದೇವಿಯು ಕೇವಲ ಅವಳ ಹೂಂಕಾರದಿಂದಲೇ ಅದೆಷ್ಟು ಮಂದಿ ಅಸುರನ್ನು ಅಸುನೀಗುತ್ತಾಳೆ. ಬೆಂಕಿಯ ಉಂಡೆಗಳನ್ನು ಉಗುಳಿ ಭಸ್ಮಮಾಡುತ್ತಾಳೆ. ಕಾಶಿ ಕ್ಷೇತ್ರದಲ್ಲಿ ಈ ಕಾಳಿಕಾಮಾತೆ ಬಹುಜಾಗೃತ ದೇವತೆ ಎಂದೇ ಖ್ಯಾತಳು.ಬಹಳ ದೊಡ್ಡ ಆಕಾರದ ಕಪ್ಪು ಶಿಲೆಯ  ಕಾಳಿ ಮೂರ್ತಿ ಮುಖದಲ್ಲಿನ ಆಳವಾದ ಗುಳಿಗಳಲ್ಲಿ ಗುಂಡಗಿನ ಕಣ್ಣುಗಳು, ಕೆಂಪು ಮುಖದಲ್ಲಿ ಕಡು ಕೆಂಪು ನಾಲಿಗೆ ಹೊರಚಾಚಿದ್ದಾಳೆ.ನಾಲ್ಕು ಕೈಗಳಲ್ಲಿ ಖಡ್ಗ-ಮುಂಡ-ವರದಾಭಯ ದೊಂದಿಗೆ ಶೋಭಿಸುತ್ತಿದ್ದಾಳೆ,ಭಕ್ತ ಅಭಯಂಕರಿ. ಮಹಾಶ್ರಮಿ ಮತ್ತು ದೀಪಾ ಅನ್ವಿತಾ ಅಮಾವಾಸ್ಯೆಯ ದಿನದಂದು ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

8. ಅನ್ನಪೂರ್ಣೇಶ್ವರಿ(ಮಹಾಗೌರಿ):ಅನ್ನಪೂರ್ಣೇಶ್ವರಿ ಎಂಬ ಹೆಸರು ಪುರಾಣಗಳಲ್ಲಿ ಕಂಡು ಬರುವುದಿಲ್ಲ.  ದೇವಿಯು ಭವಾನಿ ಎಂದೇ ಖ್ಯಾತಳು. ಆಚಾರ್ಯ ಶಂಕರರು ಮೊದಲು ರಚಿಸಿ,ಭವಾನ್ಯಷ್ಟಕ ನಂತರ ಅನ್ನಪೂರ್ಣಾಷ್ಟಕ ರಚಿಸಿದರು. ವಾರಣಾಸಿಯಲ್ಲಿ ಅನ್ನಪೂರ್ಣಭವಾನಿ ಎಂಬ ಹೆಸರು ವಾಡಿಕೆಯಲ್ಲಿದೆ.ಈ ದೇವಿಯು ನವದುರ್ಗೆಯರಲ್ಲಿ ಎಂಟನೆಯವಳಾದ  ಮಹಾಗೌರಿಯಾಗಿದ್ದಾಳೆ.ಪ್ರಸ್ತುತ ಇರುವ ದೇವಿ ಮೂರ್ತಿ ಮೂಲ ವಿಗ್ರಹವಲ್ಲ. ಕ್ರಿ.ಶ,1977ರಲ್ಲಿ ಶೃಂಗೇರಿಯ ಶಂಕರಾಚಾರ್ಯರು ಈಗಿನ ವಿಗ್ರಹವನ್ನು ಪ್ರತಿಷ್ಠಾಪಿಸಿದವರು. ಮೊದಲಿದ್ದ ಪ್ರಾಚೀನ ಮೂರ್ತಿ ಅಮೃತಶಿಲೆಯಿಂದ ತಯಾರಿಸಿದ್ದಾಗಿದ್ದು,ಆಸನದಲ್ಲಿ ಕುಳಿತಿರುವ ದೇವಿ ಮೂರ್ತಿಯ ಮೂಗು ಸಂಪೂರ್ಣವಾಗಿ ಸವೆದು ಹೋಗಿ,ಒಂದು ಕೈ ಭಗ್ನವಾಗಿತ್ತು. ಭವಾನಿಗೌರಿ ಎಂದು ಕರೆಯಲಾಗುತ್ತಿದ್ದ ಈ ಮೂರ್ತಿಯನ್ನು ಬದಲಾಯಿಸಿ ಗಂಗೆಯಲ್ಲಿ ವಿಸರ್ಜಿಸಲಾಯಿತು. ಅನ್ನಪೂರ್ಣೇಶ್ವರಿಯ ಮಂದಿರವು ವಿಶ್ವನಾಥನ ಗುಡಿಗೆ ಹೋಗುವ ದಾರಿಯಲ್ಲಿಯೇ ಇದೆ.ಸ್ಕಂದ ಪುರಾಣದ ಕಾಶಿ ಕಂಡ, ಅಧ್ಯಾಯ 61 ರಲ್ಲಿ ಮಹಾವಿಷ್ಣುವು ಕಾಶಿಯ ತೀರ್ಥಗಳು, ದೇವಿ ಮಂದಿರಗಳ ವಿವರಗಳನ್ನು ಬಿಂದುಮಹರ್ಷಿಗಳಿಗೆ ಹೇಳುವಾಗ ಭವಾನೀ ಅನ್ನಪೂರ್ಣೇಶ್ವರಿಯ  ಪ್ರಸ್ತಾಪವಿದೆ. ದೇವಿ ಅನ್ನಪೂರ್ಣೇಶ್ವರಿಯನ್ನು ದರ್ಶಿಸಿದರೆ,ದೇಶದ ಎಲ್ಲಾ ದೇವಿಯರನ್ನು ದರ್ಶಿಸಿದ ಹಾಗೆ ಎಂದು ಹೇಳಲಾಗುತ್ತದೆ.

9. ಸಿದ್ಧಿದಾತ್ರಿ :ಕಾಲಭೈರವ ಮಂದಿರದ ಪಶ್ಚಿಮ ದಿಕ್ಕಿಗೆ ಒಂದು ಗಲ್ಲಿಯಲ್ಲಿ ಹೋದರೆ ಸಂಕಟ ದೇವಿಯ ಮಂದಿರವಿದೆ.ಇದರ ಸಮೀಪ ಪಶ್ಚಿಮ ದಿಕ್ಕಿನಲ್ಲಿ ಸಿದ್ದಿದಾತ್ರಿಯ ಮಂದಿರ ದೊರಕುತ್ತದೆ. ದೇವಿಯ ಮೂರ್ತಿಯು ಕಪ್ಪು ಕಲ್ಲಿನಿಂದ ಮಾಡಿದ್ದು, ಚತುರ್ಭುಜೆಯಾದ, ತ್ರಿನಯನೆಯು  ಕೈಗಳಲ್ಲಿ ಶಂಕ-ಚಕ್ರ-ಗದ-ಪದ್ಮಗಳನ್ನು ಹಿಡಿದಿದ್ದಾಳೆ.ದೇವಿಗೆ ಸಂಬಂಧಿಸಿದ ಒಂದು ಶ್ಲೋಕವು ಹೀಗೆ ಇದೆ :

ಸಿದ್ಧ ಗಂಧರ್ವ ಯಕ್ಷಾದ್ಯೈ ಅಸುರೈ: ಅಮರೈರಪಿ ।
ಸೇವ್ಯಮಾನಾ ಸದಾ ಭೂಷಾತ್ ಸಿದ್ಧಿದಾ ಸಿದ್ಧಿದಾಯಿನೀ ॥

ವಾರಣಾಸಿ ಕ್ಷೇತ್ರದ ಉಳಿದ ದೇವೀ ಮಂದಿರಗಳು

  • ಕಾಶಿದೇವಿ:ಈ ದೇವಿಯ ಮಂದಿರ ಕಾಶಿಪುರ ಮೊಹಲ್ಲಾದ,ಆಲದ ಮರದ ಬಳಿಯಲ್ಲಿ ಇದ್ದು, ಕಾಶಿನಗರವನ್ನು ಸಂರಕ್ಷಿಸುತ್ತಿದ್ದಾಳೆ.
  • ವಾರಾಣಸೀದೇವಿ:ತಿರುಲೋಚನ ಮಂದಿರದ ಪ್ರಾಂಗಣದಲ್ಲಿ,ಈ ದೇವಿಯ ಕಪ್ಪು ಶಿಲೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
  • ವಿಶಾಲಾಕ್ಷೀದೇವಿ: ಮೀರ್ ಘಾಟ್ ಬಳಿ ದೇವಿಯ ಗುಡಿ ಇದೆ. ಸಿಂಹಾಸನದ ಮೇಲೆ ಕುಳಿತಿರುವ ಚಿಕ್ಕದಾದ ದ್ವಿಭುಜ ಮೂರ್ತಿ,ಸ್ಕಂದ ಪುರಾಣದ,ಕಾಶಿ ಖಂಡ ಅಧ್ಯಾಯ 70 ರಲ್ಲಿ ಈ ದೇವಿಯ ಮಹಿಮೆ ವಿಸ್ತಾರವಾಗಿ ವರ್ಣಿಸಲಾಗಿದೆ.
  • ಸಂಕಟಾದೇವಿ:ದೇವಿ ಮಂದಿರವು ಸಂಕಟಾಜೀ ಗಲ್ಲಿಯಲ್ಲಿದೆ.ಕಪ್ಪು ಕಲ್ಲಿನ ಮಹಿಶಾಸುರ ಮರ್ದಿನಿಯ ಈ ಮೂರ್ತಿಯು, ಕಾಶಿಯಲ್ಲಿ ಸತ್ಯಯುಗದ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗುತ್ತದೆ.
  • ವಾರಾಹಿದೇವಿ:ಮಂದಿರವು ಮಾನಮಂದಿರ ಘಾಟ್ ನ ಸಮೀಪದಲ್ಲಿದೆ.ದೊಡ್ಡ ಆಕೃತಿಯ ವಾರಾಹಿ ದೇವಿಯ ಮೂರ್ತಿ ಇದಾಗಿದೆ.ದೇವಿಗೆ ಸಂಬಂಧಿಸಿದ ಒಂದು ಶ್ಲೋಕವು ಹೀಗೆ ಇದೆ : ನಮಾಮಿ ವರದಾಂ ದೇವೀಂ ದಂಷ್ಟ್ರೋಧೃತ ವಸುಂಧರಾಮ್ ।ಶುಭದಾಂ ಪೀತವಸನಾಂ ವಾರಾಹೀಂ ತ್ವಾಂ ನಮಾಮ್ಯಹಮ್ ॥
  • ಕಾಮಾಕ್ಯದೇವಿ:ಸ್ಕಂದ ಪುರಾಣದ,ಕಾಶಿ ಖಂಡ ಅಧ್ಯಾಯ 72 ರಲ್ಲಿ ಹೇಳಿರುವಂತೆ ದುರ್ಗಮಾಸುರನೊಂದಿಗೆ ಯುದ್ಧ ಮಾಡುವಾಗ ದುರ್ಗೆಯು ಸೃಷ್ಟಿಸಿದ ಅನೇಕ ಶಕ್ತಿಗಳಲ್ಲಿ ಕಾಮಾಕ್ಯದೇವಿಯು ಒಬ್ಬಳು. ದೇವಿಯ ಮಂದಿರವು ಕಾಮಾಚ್ಚ ಮೊಹಲ್ಲಾದಲ್ಲಿದೆ.

ನವದುರ್ಗೆಯರಂತೆಯೇ ಕಾಶಿಯ  ನವಗೌರಿಯರು

ನವದುರ್ಗೆಯರ ಹಾಗೆ ಕಾಶಿಯಲ್ಲಿ ನವ ಗೌರಿಯರನ್ನು ಕಾಣಬಹುದು. ನವದುರ್ಗೆಯರ ಮಂದಿರಗಳಿಗೆ ಹೋಗುವ ದಾರಿಯಲ್ಲಿ ನವಗೌರಿಯರು ಪ್ರತಿಷ್ಠಿತರಾಗಿದ್ದಾರೆ. ಪ್ರಥಮವಾಗಿ ಮೀರಘಾಟ್ ನ ಬಳಿ ದೇವಿ ವಿಶಾಲಾಕ್ಷೀಗೌರಿ, ಜೇಷ್ಠೇಶ್ವರ ಶಿವ ಮಂದಿರದ ಸಮೀಪದಲ್ಲಿ ಜೇಷ್ಠ ಗೌರಿ, ಗಾಯ್ ಘಾಟ್ ನ ಬಳಿ ಹನುಮಾನ್ ಮಂದಿರದಲ್ಲಿ ಮೂಖನಿರ್ಮಾಲಿಕಾಗೌರಿ, ಬಾಂಶಫಟಕ್,ಆದಿವಿಶ್ವೇಶ್ವರ ಮಂದಿರದ ಅಂಗಳದ ಬಲಗಡೆ  ಸೌಭಾಗ್ಯ ಗೌರಿ, ವಿಶ್ವನಾಥ ಮಂದಿರದ ಉತ್ತರ ದಿಕ್ಕಿನಲ್ಲಿ ಶೃಂಗಾರ ಗೌರಿ,ಲಲಿತ ಘಾಟ್ ನ ಸಮೀಪ ಲಲಿತಾಗೌರಿ, ಅನ್ನಪೂರ್ಣೇಶ್ವರಿ ದೇವಿಯೇ ಭವಾನಿ ಗೌರಿ,ಲಕ್ಸದ ರಾಮಕೃಷ್ಣ ಅದ್ವೈತ ಆಶ್ರಮದ ಉತ್ತರ ಭಾಗಕ್ಕೆ ಲಕ್ಷ್ಮಿ ಕುಂಡದ ಸಮೀಪ ಮಹಾಲಕ್ಷ್ಮಿ ಗೌರಿ, ವಿಶಾಲಾಕ್ಷಿ ಮಂದಿರದ  ಆವರಣದ ಜಾಗದಲ್ಲಿ ಒಂದು ಪ್ರಾಚೀನ ಮಂದಿರದ ಕೆಳಗೆ  ವಿಶ್ವಭುಜಾಗೌರಿ ಮಂದಿರವನ್ನು ಕಾಣಬಹುದು.

ಅನ್ನಪೂರ್ಣೇಶ್ವರಿ, ದುರ್ಗಾದೇವಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಸ್ಕಂದಮಾತ, ಚಂದ್ರಘಂಟಾದೇವಿ, ಸಿದ್ಧಿದಾತ್ರಿ, ಕಾತ್ಯಾಯಿನಿ,ಕಾಳರಾತ್ರಿ, ಕಾಶಿದೇವಿ,ವಾರಣಾಸಿದೇವಿ, ವಿಶಾಲಾಕ್ಷೀದೇವಿ ,ಸಂಕಟಾದೇವಿ, ವಾರಾಹಿದೇವಿ,ಕಾತ್ಯಾಯಿನಿ ಇತ್ಯಾದಿ ಎಲ್ಲವೂ “ಸರ್ವರೂಪಮಯೀ ದೇವೀ ಸರ್ವಂ ದೇವೀಮಯಂ ಜಗತ್ ” ಎಂದು ಹೇಳುವ ಹಾಗೆ,ಆ ಜಗನ್ಮಾತೆಯ ನಾನಾ ರೂಪಗಳಷ್ಟೇ. ಯಾರು ಆ ತಾಯಿಯನ್ನು ಆಶ್ರಯಿಸುತ್ತಾರೆಯೋ ಅವಳಿಗಾಗಿ ಹಂಬಲಿಸುತ್ತಾರೆಯೋ ಅವರು ಅವಳನ್ನು ಪಡೆಯುತ್ತಾರೆ. ದುರ್ಗಮಾಸುರನನ್ನು ವಧೆ ಮಾಡಿ ದುರ್ಗಾ ಎಂದು ಕರೆಯಲ್ಪಡುವ  ದೇವಿಯು,ಮಾನವ ಕೋಟಿಯ ಜೀವನದಲ್ಲಿ ಘಟಿಸುವ ದುರ್ಗಮ ಸನ್ನಿವೇಶಗಳನ್ನು ನಿವಾರಿಸುತ್ತಾಳೆ.

(ಈ ಮೇಲ್ಕಂಡ ಎಲ್ಲಾ ಶ್ಲೋಕಗಳು ಸ್ಕಂದ ಪುರಾಣದ ಕಾಶಿ ಕಂಡದಿಂದ ಆರಿಸಲಾಗಿದೆ.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.