ಪ್ರಭು ಶ್ರೀ ರಾಮನಿಗೆ ಪೌಷ, ಶುಕ್ಲ ದ್ವಾದಶಿ ವಿಕ್ರಮ ಸಂವತ್ಸರ 2080, ಸೋಮವಾರ, 22 ಜನವರಿ 2024, ಗರ್ಭಗುಡಿಯಲ್ಲಿ ಪಟ್ಟಾಭಿಷೇಕ ನಡೆಯಿತು. ಕೊನೆಗೂ, ರಘುನಂದನ ಸತತ ಐನೂರು ವರ್ಷಗಳ ಸಂಘರ್ಷಗೈದು ತನ್ನ ರಾಜ್ಯವನ್ನು ಮರಳಿ ಪಡೆದುಕೊಂಡಿದ್ದಾನೆ. ಈ ಶುಭ ಸಂದರ್ಭವನ್ನು ಸಂಪೂರ್ಣ ದೇಶವೇ ಸಂಭ್ರಮದಿಂದ ಎದುರುಗೊಂಡಿತು. ಅಮೃತಕಾಲದ ಹೊಸ್ತಿಲಲ್ಲಿ ನಿಂತಿರುವ ದೇಶಕ್ಕೆ ಮಾರ್ಗದರ್ಶಗೈಯ್ಯಲು ಸ್ವತಃ ಶ್ರೀ ರಾಮನೇ ಆಗಮಿಸುತ್ತಿದ್ದಾನೆಂಬುದು ನಮ್ಮೆಲ್ಲರ ಸಂತಸಕ್ಕೆ ಕಾರಣವಾಗಿದೆ. ಆತನನ್ನು ಕಣ್ತುಂಬಿಕೊಂಡು ಸಮಸ್ತ ಪ್ರಜಾಗಣ ಕೊಂಡಾಡುತ್ತಿರುವ ಈ ಸಂದರ್ಭದಲ್ಲಿ, ಆತ ನಡೆದು ಬಂದ ಐನೂರು ವರ್ಷಗಳ ಹಾದಿಯನ್ನೊಮ್ಮೆ ಮೆಲುಕು ಹಾಕೋಣ .
ಆದರೆ ಅದಕ್ಕೆ ಮುನ್ನ ರಾಮನೇಕೆ ನಮ್ಮ ಹೃದಯಸಿಂಹಾಸನವನ್ನು ಅಲಂಕರಿಸಿದ್ದಾನೆಂದು ವಿದಿತವಾಗಿ ತಿಳಿಸುವ ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳ ಸಾರಾಂಶವನ್ನು ಅವಲೋಕಿಸಿದಾಗ ಹಲವು ಸಂಗತಿಗಳು ನಮಗರಿವಾಗುತ್ತವೆ.
ಭಗವಂತನಾದ ಮಹಾವಿಷ್ಣುವು ಶ್ರೀರಾಮನಾಗಿ ಮನುಷ್ಯರೂಪದಲ್ಲಿ ಅವತರಿಸಿದನು. ತದನಂತರ ತನ್ನ ಮೂಲ ಸ್ವರೂಪವಾದ ಮಹಾವಿಷ್ಣು ಪದವಿಗೆ ಏರಿದನು. ಹೀಗಾಗಿಯೇ ವಾಲ್ಮೀಕಿ ರಾಮಾಯಣವು ವೇದಪ್ರಾಯವೆನ್ನಿಸಿಕೊಂಡಿತು. ಮೊದಲನೆಯದನ್ನು ಅನುಗ್ರಹಾಪೇಕ್ಷೆಯ ದೃಷ್ಟಿಯಾಗಿ ಕಂಡರೆ, ಎರಡನೇಯದನ್ನು ಅರ್ಹತಾ ಸಂಪಾದನೆಯ ದೃಷ್ಟಿಯಿಂದ ಸಂಬೋಧಿಸಬಹುದು. ಇವೆರಡೂ ಬೇರೆಬೇರೆ ದೃಷ್ಟಿಗಳಂತೆ ಕಂಡರೂ ಕೂಡ ಪರಸ್ಪರ ವಿರೋಧಿಗಳಲ್ಲ. ಹಾಲೂ ತುಪ್ಪವೂ ಬೇರೆಬೇರೆ, ಆದರೆ ವಿರೋಧಿಗಳಲ್ಲ. ಹಲಸೂ ಜೇನೂ ಬೇರೆಬೇರೆ, ಆದರೆ ವೈರಿಗಳಲ್ಲ. ಎರಡೂ ಹೇಗೆ ಒಟ್ಟಿಗೆ ಇರುತ್ತವೆಯೋ ಹಾಗೆಯೇ ಎನ್ನಬಹುದು. ಮೊದಲನೆಯ ದೃಷ್ಟಿಯಲ್ಲಿ ಭಗವಂತನ ಅವತಾರವಾದ ಶ್ರೀ ರಾಮನ ಕೃಪೆಗೆ ಪಾತ್ರವಾಗಲು ಭಕ್ತನೋರ್ವನು ಶ್ರದ್ಧಾಭಕ್ತಿಯಿಂದ ಯತ್ನಿಸಬೇಕು. ಇನ್ನು ಎರಡನೆಯ ದೃಷ್ಟಿಯಲ್ಲಿ ಪ್ರಯತ್ನದಾರ್ಢ್ಯವನ್ನು ಅಪೇಕ್ಷಿಸಲಾಗಿದೆ ಎನ್ನಬಹುದು. ಶ್ರೀರಾಮನು ಮನುಜಕುಲಕ್ಕೆ ಆದರ್ಶಮೂರ್ತಿ. ತನ್ನ ಆತ್ಮಸಂಯಮದಿಂದ ಆತ್ಮಪರೀಕ್ಷಣದಿಂದ, ಆತ್ಮಶಿಕ್ಷಣದಿಂದ, ಆತ್ಮಪ್ರಯತ್ನದಿಂದ, ಆತ್ಮಶೌರ್ಯದಿಂದ ಲೋಕಜೀವನದ ಕಷ್ಟಪರೀಕ್ಷೆಗಳಿಂದ ಪಾರಾಗಿ ಪರಮಪದವಿಗೇ ಹೇಗೆ ಏರಬಹುದು –ಎಂಬುದಕ್ಕೆ ನಿದರ್ಶನವೇ ರಾಮಚರಿತೆ. ಹೀಗಾಗಿಯೇ ಪ್ರಭು ಶ್ರೀ ರಾಮನನ್ನು ಸದಾ ಅನುಕರಣಸಾಧ್ಯ ಗುರುವನ್ನಾಗಿ ಭಾರತೀಯರು ಕಾಣುತ್ತಾರೆ. ಈ ದೇಶದ ಪ್ರತೀ ಪ್ರಜೆಯ, ಜಾನಪದೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ, ಸಮಸ್ತ ಜನಸಮೂಹದ ಹೃದಯ ಸಾಮ್ರಾಟನಾಗಿ ಪ್ರಭು ಶ್ರೀ ರಾಮಚಂದ್ರ ನಿಂತಿದ್ದಾನೆ. ಆತ ಮನುಷ್ಯರಿಗೆ ಸ್ವಾಭಾವಿಕವಾಗಿ ತಗಲುವ ಮನೋವೇದನೆ ಮತ್ತು ವಿಕಾರಗಳನ್ನು ತಾನು ಪಟ್ಟವನೆಂದು ಸ್ವತಃ ಹೇಳಿಕೊಂಡದ್ದು ಆತನನ್ನು ನಮಗೆ ಸಮೀಪಗೊಳಿಸಿದೆ. ಹೀಗಾಗಿಯೇ ಪ್ರಭು ಶ್ರೀ ರಾಮ ಇಂದಿಗೂ ಭಾರತದ ಅಂತರಾತ್ಮದ ಪ್ರತೀಕವಾಗಿ ನಿಲ್ಲುತ್ತಾನೆ. ಆದರೆ ಇಂತಹ ಪ್ರಭುವಿಗೂ ಕೂಡ ದಾರಿ ಸುಗಮವಾಗಿರಲಿಲ್ಲ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಕಟ್ಟಿ, ಕೆಡವಿ, ಕಟ್ಟಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ . ಆದಿ ಪುರುಷ ಶ್ರೀರಾಮನ ಅಯೋಧ್ಯೆಯು ವರ್ಣನೆಗೂ ನಿಲುಕದ ಸುಭಿಕ್ಷ ನೆಲೆ. ಕಲೆ, ಸಂಸ್ಕೃತಿ, ಖುಷಿ, ವಿಶ್ವಾಸ, ಆನಂದದ ವೈಭವೋಪೇತ ರಾಮರಾಜ್ಯ! ರಾಮನು ಜಲ ಸಮಾಧಿ ತೆಗೆದುಕೊಂಡ ನಂತರದಲ್ಲಿ ಭವ್ಯ ಅಯೋಧ್ಯೆ ನಗರವು ಕಳೆಗುಂದಲು ಶುರುವಾಗಿತ್ತು ಎಂಬ ಐತಿಹ್ಯವಿದೆ. ರಾಮನ ಮಗ ಕುಶನು ಅಯೋಧ್ಯೆಯನ್ನು ಪುನಃ ನಿರ್ಮಿಸಿದನು. ಕ್ಷೀಣಿಸಿದ ನಗರವು ಮರಳಿ ವೈಭವ ಕಂಡಿತು. ಅಯೋಧ್ಯೆಯನ್ನು ನೋಡಿಕೊಳ್ಳುತ್ತಿದ್ದ ಸೂರ್ಯವಂಶದ ಕೊನೆಯ ಮಹಾರಾಜ ಬೃಹದ್ಬಲನು ಮಹಾಭಾರತ ಯುದ್ಧದಲ್ಲಿ ಅಭಿಮನ್ಯುವಿನಿಂದ ಮರಣಹೊಂದಿದನು. ಕಾಲಾನಂತರದಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಯು ಮತ್ತೆ ಸೊರಗಲು ಶುರುವಾಯಿತು. ಅದರ ನಂತರ ರಾಜ ವಿಕ್ರಮಾದಿತ್ಯನು ಮತ್ತೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದನು ಎಂಬ ಇತಿಹಾಸ ಇದೆ. ಅರಣ್ಯದಿಂದ ಸುತ್ತುವರಿದುಕೊಂಡಿದ್ದ ಅಯೋಧ್ಯೆಯನ್ನು ಗಮನಿಸಿದ ವಿಕ್ರಮಾದಿತ್ಯನು, ಶೋಧನೆಯ ಬಳಿಕ ಅದು ರಾಮ ಜನ್ಮಭೂಮಿ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಋಷಿಮುನಿಗಳಿಂದ ಸ್ಥಳದ ಮಹಿಮೆಯನ್ನು ತಿಳಿದು ಭವ್ಯವಾದ ಮಂದಿರ ಮತ್ತು ಸುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಮಾಡಿದನು. ಅದರ ನಂತರ ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಮ ಮಂದಿರ ಸುಭಿಕ್ಷೆಯಲ್ಲಿತ್ತು. ಅಲ್ಲಿಂದ ಹಲವರ ಕಾಳಜಿಯಲ್ಲಿದ್ದ ರಾಮ ಮಂದಿರವು 14ನೇ ಶತಮಾನದಲ್ಲಿ ಅಪಾಯಕ್ಕೆ ಒಳಗಾಯಿತು.
ನಮ್ಮ ದೇಶದ ಮೇಲೆ ಮೊಘಲರ ಆಕ್ರಮಣವಾಗಿ ಇಂದಿನ ಉಜ್ಬೇಕಿಸ್ತಾನಕ್ಕೆ ಸೇರಿದ ಫರ್ಗಾನಾ ನಗರದ ಜಹೀರ್ ಉದ್ ದಿನ್ ಮೊಹಮ್ಮದ್ ಬಾಬರ್ ಎಂಬ ಮೊಘಲ್ ದೊರೆ 1527ರಲ್ಲಿ ಭಾರತದ ಮೇಲೆ ದಾಳಿ ನಡೆಸಿ ಸಂಗ್ರಾಮ ಸಿಂಗರನ್ನು ಸೋಲಿಸಿದ ನಂತರ ಮತಾಂಧತೆಯ ಉನ್ಮಾದ ಮತ್ತು ದೇವಾಲಯಗಳ ಸಂಪತ್ತುಗಳನ್ನು ಲೂಟಿ ಮಾಡುವ ಉದ್ದೇಶದಿಂದ ಅನೇಕ ದೇವಾಲಯಗಳನ್ನು ನಾಶಪಡಿಸಿಕೊಂಡು ಬರುತ್ತಿರುವಾಗಲೇ ಅವರ ಕಣ್ಣು ಅಯೋಧ್ಯೆಯ ರಾಮ ಮಂದಿರದ ಮೇಲೆ ಬಿದ್ದು ಬಾಬರನ ಸೇನಾಧಿಪತಿ ಮೀರ್ ಬಾಕಿ ಅನೇಕ ಹಿಂದೂಗಳ ತೀವ್ರ ಹೋರಾಟದ ನಡುವೆಯೂ 1528 ರಲ್ಲಿ ಅಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ಧ್ವಂಸ ಮಾಡಿ ಅದರ ಮೇಲೊಂದು ಮಸೀದಿಯನ್ನು ನಿರ್ಮಿಸಿ ತನ್ನ ಒಡೆಯನ್ನನ್ನು ಸಂಪ್ರೀತಗೊಳಿಸಲು ಅದಕ್ಕೆ ಬಾಬರ್ ಮಸೀದಿ ಎಂದು ಹೆಸರಿಡುತ್ತಾನೆ. ಕಾಲ ಕ್ರಮೇಣ ಅದು ಜನರ ಆಡು ಭಾಷೆಯಲ್ಲಿ ಬಾಬ್ರಿ ಮಸ್ಜೀದ್ ಎಂದೇ ಪ್ರಖ್ಯಾತವಾಗುತ್ತದೆ. ರಾಮ ಮಂದಿರ ನಾಶವಾದಗಲಿಂದಲೂ ಅದರ ಪುರರ್ನಿಮಾಣ ಮಾಡಲು ಅನೇಕ ಹಿಂದೂಗಳು ಪ್ರಯತ್ನಿಸಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರ ತ್ಯಾಗ ಬಲಿದಾನಗಳಾಗಿವೆ. ಅನೇಕರು ಅಲ್ಲಿನ ನವಾಬರಿಗೆ ಹಣವನ್ನು ಕೊಟ್ಟು ಆ ಪ್ರದೇಶವನ್ನು ಖರೀದಿಸಿ ಅಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಪ್ರಯತ್ನಿಸಿದರಾದರೂ ಫಲಕಾರಿಯಾಗದೇ ಯಥಾ ಸ್ಥಿತಿಯೇ ಮುಂದುವರಿದುಕೊಂಡು ಹೋಗಿತ್ತು. 1857ರಲ್ಲಿ ಮುಸಲ್ಮಾನರು ಇಡೀ ರಾಮಮಂದಿರದ ಸಂಕೀರ್ಣವನ್ನು ಹಿಂದೂಗಳಿಗೆ ಬಿಟ್ಟು ಕೊಡಲು ಮುಂದಾದರೂ ಬ್ರಿಟೀಷರ ವಿರುದ್ಧದ ಯುದ್ದದಲ್ಲಿ ಸೋಲುಂಟಾದ ಪರಿಣಾಮ ಆ ವಿಷಯ ನೆನೆಗುದಿಗೆ ಬೀಳುತ್ತದೆ. 1885ರಲ್ಲಿ ಪ್ರಪ್ರಥಮ ಬಾರಿಗೆ ಮಹಂತಾ ರಘುವರ್ ದಾಸ್ ಎಂಬವರು ರಾಮ ಜನ್ಮಸ್ಥಳಕ್ಕೆ ಮೇಲ್ಛಾವಣಿ ನಿರ್ಮಿಸಲು ಅವಕಾಶ ನೀಡಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಾರೆ. ಹೀಗೆ ಹಿಂದೂ-ಮುಸ್ಲಿಮರ ನಡುವೆ ಪೂಜಾ ಸ್ಥಳ ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವುದನ್ನು ಮನಗಂಡ ಬ್ರಿಟೀಷರು, ಮೂರು ಗುಮ್ಮಟಗಳು ಮತ್ತು ರಾಮ ಚಬೂತರ್ ಗಳ ಮಧ್ಯೆ ಗೋಡೆಗಳನ್ನು ನಿರ್ಮಿಸಿ ಎರಡೂ ಧರ್ಮೀಯರಿಗೆ ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುತ್ತಾರೆ.
ತೀವ್ರವಾಗುತ್ತಿದ್ದ ಸ್ವಾತಂತ್ತ್ಯ ಹೋರಾಟವನ್ನು ಹತ್ತಿಕ್ಕಲು ಹೈರಾಣಾಗಿದ್ದ ಬ್ರಿಟೀಷರು ಹಿಂದೂ ಮತ್ತು ಮುಸಲ್ಮಾನರ ನಡುವೆ ಸಂಘರ್ಷನ್ನು ತರಲು ಸ್ಥಳೀಯ ಮುಸಲ್ಮಾನರಿಗೆ ಕುಮ್ಮಕ್ಕು ನೀಡಿ 1934ರಲ್ಲಿ ರಾಮಮಂದಿರದ ಸ್ಥಳದಲ್ಲಿ ಗೋಹತ್ಯೆ ಮಾಡುತ್ತಾರೆ. ಇದರಿಂದ ಕೆರಳಿದ ಹಿಂದೂ ಯುವಕರು ಅಂದಿನ ಕಾಲದಲ್ಲಿಯೇ ವಿವಾದಿತ ಪ್ರದೇಶಕ್ಕೆ ನುಗ್ಗಿ ಮೂರು ಗುಂಬಜ್ ಗಳ ಮೇಲೇರಿ ಬಹಳಷ್ಟು ಹಾನಿ ಮಾಡುತ್ತಿರುವಾಗ ಬ್ರಿಟೀಷರ ಬಲ ಪ್ರಯೋಗದಿಂದಾಗಿ ಅದನ್ನು ವಿಫಲಗೊಳಿಸಿದ ನಂತರ ಆ ಪ್ರದೇಶಕ್ಕೆ ಮತ್ತೆಂದೂ ಮುಸಲ್ಮಾನರು ಕಾಲು ಇಡಲೇ ಇಲ್ಲ.
ಆದರೂ ಮುಸಲ್ಮಾನರ ತುಷ್ಟೀಕರಣಕ್ಕೆ ಮುಂದಾದ ಅಲ್ಲಿನ ಕಲೆಕ್ಟರ್ ಹಿಂದುಗಳ ಮೇಲೆ ಪುಂಡಗಂದಾಯ ಹೇರಿ ಅದರಿಂದ ಬಂದ ಹಣದಲ್ಲಿ ಹಾನಿಯಾಗಿದ್ದ ಗುಂಬಜ್ ಗಳನ್ನು ಸರಿಪಡಿಸುತ್ತಾನೆ. ಇಷ್ಟೆಲ್ಲಾ ಗಲಾಟೆಗಳು ಆದರೂ ಅಲ್ಲಿ ನಿರಂತರವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇರುತ್ತದೆ. ಸ್ವಾತಂತ್ರ್ಯಾ ನಂತರ ಸರ್ದಾರ್ ಪಟೇಲ್ ಗುಜರಾತಿನಲ್ಲಿ ಸೋಮನಾಥ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲು ಮುಂದಾದಾಗ ಅನೇಕ ಸಾಧು ಸಂತರು ಅದರ ಜೊತೆಯಲ್ಲಿಯೇ ಅಯೋಧ್ಯೆಯಲ್ಲಿಯೂ ರಾಮ ಮಂದಿರವನ್ನು ಭವ್ಯವಾಗಿ ನಿರ್ಮಿಸಲು ಅಂದಿನ ಸರ್ಕಾರಕ್ಕೆ ಕೋರಿಕೆ ಸಲ್ಲಿಸುತ್ತಾರೆ. 1949ರ ಡಿಸೆಂಬರ್ 23ರಂದು ಗುಂಬಜ್ ಇದ್ದ ಮಸೀದಿಯ ಒಳಗೆ ಇದ್ದಕ್ಕಿದ್ದಂತೆಯೇ ಪುಟ್ಟ ಶ್ರೀರಾಮ ಲಲ್ಲಾನ ವಿಗ್ರಹವನ್ನು ಕಾಣಿಸಿಕೊಂಡ ಪರಿಣಾಮವಾಗಿ ಹಿಂದೂಗಳೆಲ್ಲರೂ ಉತ್ಸಾಹದಿಂದ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ರಾಮಲಲ್ಲಾನ ದರ್ಶನ ಮಾಡಲು ಧಾವಿಸುತ್ತಿದ್ದಂತೆಯೇ ಅಂದಿನ ನೆಹರೂ ಸರ್ಕಾರ ಸ್ಥಳೀಯ ಉತ್ತರ ಪ್ರದೇಶದ ಸರ್ಕಾರದ ಮೇಲೆ ಒತ್ತಡ ಹೇರಿ ರಾಮನ ವಿಗ್ರಹವನ್ನು ತೆಗೆಸಲು ಪ್ರಯತ್ನಿಸಿತಾದರೂ ವಿಫಲವಾದ ಪರಿಣಾಮ ಕೇವಲ ಪೂಜೆಗೆ ಮಾತ್ರವೇ ಅವಕಾಶ ನೀಡಿ, ದೇವಾಲಯಕ್ಕೆ ಬೀಗವನ್ನು ಜಡಿದು, ಭಕ್ತಾದಿಗಳಿಗೆ ಬಾಗಿಲಿನ ಹೊರಗಿನಿಂದಲೇ ಸರಳುಗಳ ಮೂಲಕ ದೇವರ ದರ್ಶನ ಮಾಡಲು ಅನುವು ಮಾಡಿಕೊಡುತ್ತದೆ. ಇದೇ ಸಮಯದಲ್ಲಿ ಸ್ಥಳೀಯ ಮುಸಲ್ಮಾನರಿಂದ ಸಿವಿಲ್ ಕೇಸ್ ದಾಖಲಾದ ನೆಪ ಹಿಡಿದುಕೊಂಡು ಆ ಪ್ರದೇಶವನ್ನು ವಿವಾದಿತ ಸ್ಥಳ ಎಂದು ಘೋಷಿಸಿ ಸುಲಭವಾಗಿ ಪರಿಹರಿಸಬಹುದಾಗಿದ್ದ ಸಮಸ್ಯೆಯನ್ನು ಮತ್ತೊಮ್ಮೆ ಜಟಿಲಗೊಳಿಸುತ್ತದೆ.
ಅಯೋಧ್ಯೆಯಲ್ಲಿ ಆಗ ವಿವಾದಿತ ಎನಿಸಿ ಕೊಂಡಿದ್ದ ಭೂಮಿಯಲ್ಲಿ ಮಂದಿರ ನಿರ್ಮಿಸಬೇಕೋ ಬೇಡವೋ ಎಂಬ ಚರ್ಚೆ ದೇಶದ ಬಹುತೇಕ ನಗರಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು.ಆದರೆ 1949 ರಿಂದ ಕೋರ್ಟ್ ನಲ್ಲಿ ಎದುರು ಬದರು ಹೋರಾಡಿದ ರಾಮ ಚಂದ್ರ ಪರಮ ಹಂಸರು ಮತ್ತು ಹಾಶಿಮ್ ಅನ್ಸಾರಿ ನಡುವಿನ ಗೆಳೆತನ ಕ್ಕೆ ಮಾತ್ರ ಕೊನೆಯಗಳಿಗೆಯವರೆಗೂ ಕುಂದು ಬರಲಿಲ್ಲ. 1949 ರಲ್ಲಿ ರಾಮಚಂದ್ರ ಪರಮಹಂಸರ ನೇತೃತ್ವದಲ್ಲಿ ರಾಮ ಸೀತೆಯರ ಮೂರ್ತಿಗಳು ಆಗಿನ ವಿವಾದಿತ ಕಟ್ಟಡದಲ್ಲಿ ಕಾಣಿಸಿ ಕೊಂಡಾಗ ಮೊಟ್ಟ ಮೊದಲು ಫೈಜಾಬಾದ್ ಕೋರ್ಟ್ ಮೆಟ್ಟಿಲು ಹತ್ತಿದವರು ಹಾಶಿಮ್ ಅನ್ಸಾರಿ.ಆಗ ಹಿಂದುಗಳ ಪರವಾಗಿ ರಾಮ ಲಲ್ಲಾ ನ ಪರವಾಗಿ ಕೋರ್ಟ್ ನಲ್ಲಿ ನಿಂತವರು ರಾಮ ಚಂದ್ರ ಪರಮ ಹಂಸರು. ಇಬ್ಬರು ಅಯೋಧ್ಯೆಯಿಂದ ಮೊದಲು ಟಾಂಗಾ ನಂತರ ರಿಕ್ಷಾ ದಲ್ಲಿ ಒಟ್ಟಿಗೆ ಫೈಜಾಬಾದ್ ಗೆ ಬರುತ್ತಿದ್ದರಂತೆ.ಕೋರ್ಟ್ ನ ವಾದ ಪ್ರತಿವಾದ ದೇಶದಲ್ಲಿ ಹಿಂದೂ ಮುಸ್ಲಿಮರ ನಡುವೆ ತ್ವೇಶ ಕ್ಕೆ ಕಾರಣವಾದರೂ ಈ ಇಬ್ಬರು ಕಕ್ಷಿದಾರರ ಗೆಳೆತನ ಎಂದು ಮುರಿಯಲಿಲ್ಲ.ಪರಮ ಹಂಸರು ಮುಂದೆ ಭಕ್ತರ ನೆರವಿನಿಂದ ಕಾರು ತೆಗೆದು ಕೊಂಡರು ಕೂಡ ಹಾಶಿಮ್ ಅನ್ಸಾರಿ ಯನ್ನು ಜೊತೆಗೆ ಕರೆದು ಕೊಂಡೆ ಕೋರ್ಟ್ ಗೆ ಹೋಗುತ್ತಿದ್ದರು. ಮೂಲ ದಾವೇದಾರರಾದ ಹಾಶಿಮ್ ಅನ್ಸಾರಿ ಮತ್ತು ರಾಮಚಂದ್ರ ಪರಮಹಂಸ ಇಬ್ಬರು ಕೂಡ ಈಗಿಲ್ಲ.ಆದರೆ ಅವರಿಬ್ಬರ ನಡುವಿನ ಕಾನೂನು ಹೋರಾಟ ಸತತ ಏಳು ದಶಕಗಳ ಸುದೀರ್ಘ ಹೋರಾಟಕ್ಕೆ ಮುನ್ನುಡಿ ಬರೆದು ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ಸುಖಾಂತ್ಯ ಕಂಡಿತು.
ಸ್ವಾತಂತ್ರ್ಯ ಪೂರ್ವದಲ್ಲಿ ಒಂದು ರೀತಿಯಿದ್ದ ಹೋರಾಟ, ಸ್ವಾತಂತ್ರ್ಯಾ ನಂತರ ರಾಜಕೀಯ ರಂಗವನ್ನು ಕೂಡ ಆವರಿಸಿಕೊಂಡಿತು. ಜನಸಂಘ (ಈಗಿನ ಭಾರತೀಯ ಜನತಾ ಪಕ್ಷ) ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ತೀವ್ರತರ ಹೋರಾಟಗಳು ನಡೆದವು. ಕೊನೆಗೂ ಈ ಎಲ್ಲ ಘಟನೆಗಳ ಮುಖೇನ ತನಗೆ ಸೇರಬೇಕಿದ್ದ ಜಾಗವನ್ನು ಪ್ರಭುವು ಮರಳಿ ಪಡೆದಿದ್ದಾನೆ. ಆದರೆ All Bad things happen at a good time ಎಂಬಂತೆ ರಾಮಮಂದಿರದ ಪುಣ್ಯಕಾರ್ಯ ಜರುಗುವಾಗಲು ನಮ್ಮದೇ ಸಮಾಜದಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳು ಮೂಡಿ ಬಂದವು. ಆದರೆ ಲೇಖಕರಾದ ಪ್ರವೀಣ್ ಕುಮಾರ್ ಮಾವಿನಕಾಡು ಅವರು ಹೇಳುವುದನ್ನು ಅವಲೋಕಿಸಿದಾಗ
‘ಮಂದಿರ ನಿರ್ಮಾಣದ ಪ್ರಕ್ರಿಯೆ ಒಂದು ಕಲ್ಯಾಣ ಕಾರ್ಯದಂತೆಯೇ ತೋರಿಬರುತ್ತದೆ. ಮಾಡುವೆ ಮಾಡಿ ನೋಡು ಎನ್ನುವಂತೆ, ಮಂದಿರ ಕಟ್ಟಿ ನೋಡು ಎನ್ನುವ ಸಾಂದರ್ಭಿಕತೆಯನ್ನು ಕೂಡ ನಾವೆಲ್ಲಾ ಎದುರುಗೊಂಡಿದ್ದೇವೆ. ಮದುವೆಯ ಸಂದರ್ಭದಲ್ಲಿ ಕೂಡ ಅಲ್ಲಿನ ಊಟ, ವ್ಯವಸ್ಥೆ, ಮಂಟಪದ ಅಲಂಕಾರ, ವಧು-ವರರ ಶಿಕ್ಷಣ, ವಯಸ್ಸು, ಹೋಲಿಕೆ, ಆಮಂತ್ರಣ, ಬೀಗರು ಮತ್ತು ಅತಿಥಿಗಳು ಸೇರಿದಂತೆ ಎಲ್ಲ ರೀತಿಯ ವಿಷಯಗಳ ಕುರಿತಾಗಿ ಸ್ವರಾಪಸ್ವರಗಳು ಕೇಳಿ ಬಂದರೂ ಕೂಡ ‘ಮದುವೆ ತೃಪ್ತಿಪ್ರದವಾಗಿ’ ಹೇಗೆ ಸರ್ವರನ್ನೂ ಒಳಗೊಂಡು ಮುಗಿವುದೋ, ಹಾಗೆಯೇ ಐದು ಶತಮಾನದ ಸಂಘರ್ಷದ ಹಾದಿಯನ್ನು ಕಂಡ ರಾಮನ ಪಾದುಕೆಗಳನ್ನು ಸುರಕ್ಷಿತವಾಗಿ ಮಂದಿರದೊಳಿಟ್ಟು, ರಾಮಭಕ್ತರಿಗೆ ಮತ್ತು ಭಾರತಕ್ಕೆ ನೀಡುವ ಪ್ರಕ್ರಿಯೆಯಲ್ಲಿ ಹಲವು ಅಭಿಪ್ರಾಯಗಳು ಮೂಡಿಬಂದರೂ ಕೂಡ ಸರ್ವರನ್ನೊಳಗೊಂಡು ಮಂದಿರ ಉದ್ಘಾಟನಾ ಕಾರ್ಯ ಜರುಗಿಯಾಗಿದೆ. ರಾಜವೈಭವಕೆ ರಾಯಭಾರಿ ಸಿಂಹಾಸನಾಧೀಶ್ವರ ಶ್ರೀ ರಘುನಂದನನನ್ನು ಅದ್ದೂರಿಯಾಗಿ ಬರಮಾಡಿಕೊಂಡಾಗಿದೆ. ಇನ್ನು ಆತನ ಮುಂದಿನ ಆದೇಶಕ್ಕಾಗಿ ನಾವೆಲ್ಲಾ ಎದುರುನೋಡೋಣ
ಜೈ ಶ್ರೀರಾಮ್!
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.