close logo

ಯಹೂದಿ – ಇಸ್ರೇಲ್ ನಡೆದು ಬಂದ ರಣರೋಚಕ ನೆತ್ತರಹಾದಿ

‘ಯಹೂದಿ’ ಎಂಬ ಪದ ಕಿವಿಗೆ ಬಿದ್ದಾಕ್ಷಣ ಮನದಲ್ಲೇನೋ  “ರೋಮಾಂಚನ”! ಮಾಡುವ ಕಾರ್ಯಗಳಿಗೊಂದು ಸ್ಫೂರ್ತಿ ಮತ್ತು ಛಲ ದೊರಕುವ ಮೂಲವೇನೋ ಎಂಬಂತೆ ಸಹಜವಾಗಿ ಭಾಸವಾಗುತ್ತದೆ. ಮಾನವ ಕಲ್ಯಾಣಕಾರಿ ಸೇವೆ ಮಾಡಿದವರಿಗೆ, ವೈಜ್ಞಾನಿಕ ಸಾಧನೆ ಮಾಡಿದ ಮಹನೀಯರಿಗೆ 1901 ರಿಂದ ವಿಶ್ವದಲ್ಲಿ ನೊಬೆಲ್ ಪ್ರಶಸ್ತಿ ಕೊಡಲಾಗುತ್ತಿದೆ. ಜಗತ್ತಿನ ಅತ್ಯಂತ ಪ್ರತಿಷ್ಠಿತ ಪುರಸ್ಕಾರವಾಗಿರುವ ಇದನ್ನು ಪಡೆದವರ ಪೈಕಿ ಶೇಕಡಾ  22  ರಷ್ಟು ಸಾಧಕರು ಯಹೂದಿಗಳು! ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ೦.2 % ಪ್ರತಿಶತವೂ ಇರದ ಈ ಪುಟ್ಟ ವರ್ಗ ಇಷ್ಟೊಂದು ಪ್ರತಿಭಾಸಂಪನ್ನವಾಗಿರಲು ಕಾರಣವಾದರೂ ಏನು? ಎಂಬ ಪ್ರಶ್ನೆ ಸಹಜವಾಗಿ ಕಾಡದಿರಲು ಸಾಧ್ಯವಿಲ್ಲ. ಸಹಸ್ರಮಾನಗಳ ನರಮೇಧವನ್ನು ಎದುರಿಸಿ ಯಹೂದಿ ಜನಾಂಗ ಇವತ್ತಿಗೂ ಬದುಕಿ, ಇಸ್ರೇಲ್ ಎಂಬ ಸ್ವಂತ ರಾಷ್ಟ್ರ ನಿರ್ಮಿಸಿಕೊಂಡಿರುವುದೇ ಒಂದು ಪವಾಡ. ಸಾವಿರ ವೈರುಧ್ಯಗಳೊಂದಿಗೆ ಸೆಣಸಾಟದ ಕಥೆ ಒಂದು ಕಡೆಯಾದರೆ, ಕೃಷಿ, ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ, ಹಣಕಾಸು ಕ್ಷೇತ್ರಗಳಿಗೆ ಕೊಟ್ಟ ಕೊಡುಗೆ ಇನ್ನೊಂದು ಕಡೆ.

ಇಂತಹ ವಿಶೇಷ ನಾಗರೀಕತೆಯ ಕುರಿತು ಸಮಗ್ರವಾಗಿ ಸಂಶೋಧನೆ ನಡೆಸಿ, ಅದು ನಡೆದುಬಂದ ಹಾದಿಯನ್ನು ಸ್ಫುಟವಾಗಿ ದಾಖಲೀಕರಿಸಿ ಕನ್ನಡದ ಓದುಗರಿಗೆ ‘ಯಹೂದಿ’ – ಎಂಬ ಶೀರ್ಷಿಕೆಯೊಂದಿಗೆ ಇಸ್ರೇಲ್ ನಡೆದುಬಂದ ರಣರೋಚಕ ನೆತ್ತರಹಾದಿಯ ಪರಿಚಯವನ್ನು ಮಾಡಿಕೊಟ್ಟವರು ಕಾರ್ಕಳದ ಶ್ರೀಕಾಂತ ಶೆಟ್ಟಿ. ಓದುಗನನ್ನು ಎಲ್ಲಿಯೂ ನಿಲ್ಲಿಸದೇ ಓದಿಸಿಕೊಂಡು ಹೋಗುವ ಸಾಮರ್ಥ್ಯ ಈ ಪುಸ್ತಕಕ್ಕಿದೆ.

ಇತ್ತೀಚಿಗೆ ಜನರ ಬಾಯಲ್ಲಿ ಇಸ್ರೇಲ್ ದೇಶದ ಹೆಸರು ಹೆಚ್ಚಾಗಿ ಕೇಳಿಬರಲು, ನಡೆಯುತ್ತಿರುವ ಸಂಘರ್ಷವೊಂದು ಕಾರಣವಾಗಿರಬಹುದು. ಈ ಸಂದರ್ಭದಲ್ಲಿ ‘ಯಹೂದಿ’ ಪುಸ್ತಕವನ್ನು ಓದುವುದು ಬಲುಸೂಕ್ತವೆಂದು ತೋರುತ್ತದೆ. ಕಾರಣ, ಒಂದು ನಾಗರೀಕತೆ ಕಳೆದ ಮೂರುಸಾವಿರ ವರ್ಷಗಳಲ್ಲಿ ಅನುಭವಿಸಿದ ಭೀಕರ ಸವಾಲುಗಳನ್ನು ಮೆಟ್ಟಿಬಂದು ಯಶದ ಹೊಸ್ತಿಲಲ್ಲಿ ನಿಂತ ಹಾದಿಯನ್ನು ಕಣ್ಣಿಗೆಕಟ್ಟುವಂತೆ ಈ ಪುಸ್ತಕ ಹೇಳುತ್ತದೆ. ಸೆಮೆಟಿಕ್ ಮತಗಳ ಮೂಲಪುರುಷನಾಗಿರುವ “ಅಬ್ರಹಾಂ” ಯಹೂದಿ ಮತದ ಸ್ಥಾಪಕನೂ ಹೌದು. ಈತನ ಕಥೆ ಮಧ್ಯಪ್ರಾಚ್ಯದ ಪೌರಾಣಿಕ ಹಿನ್ನೆಲೆ ಮತ್ತು ಯಹೂದ್ಯರ ಇತಿಹಾಸಕ್ಕೆ ಇರುವ ಕೊಂಡಿ. ಅಬ್ರಹಾಂನಿಗೆ ಒಂದು ದಿನ ದೇವರಿಂದ ಕರೆಬಂದು,  ದೇವರು ಅವನಲ್ಲಿ ಎರಡು ಮುಖ್ಯವಿಚಾರಗಳ ಬಗ್ಗೆ ಮಾತನಾಡಿರಂತೆ. ಮೊದಲನೇಯದಾಗಿ ನಾನು ನಿಜವಾದ ದೇವರು ಎಂದು ಅವನಿಗೆ ಮನವರಿಕೆ ಮಾಡಿದರಂತೆ ಮತ್ತು ಎರಡನೆಯದಾಗಿ ಮನುಷ್ಯರು ನನ್ನಜೊತೆ ಸಂಪರ್ಕ ಬೆಳೆಸುವ ಮುನ್ನ, ಅವರು ನನ್ನ  ಒಡಂಬಡಿಕೆ ಮಾಡಬೇಕು ಎಂದು ಹೇಳಿದರಂತೆ. ಈ ಒಪ್ಪಂದದಂತೆಯೇ ಅಬ್ರಹಾಂ ಜಗತ್ತಿನ ಮೊದಲ ಯಹೂದಿಯಾದ.   ಈ ಅಬ್ರಹಾಂನನ್ನೇ ಮುಸಲ್ಮಾನರು ಇಬ್ರಾಹಿಂ ಎಂದು ಕರೆಯುತ್ತಾರೆ. ಈತನ ಮಗನೇ ಐಸಾಕಯಾನೇ ಇಸಾಕ್. ಒಂದು ದಿನ ಜೆರುಸಲೆಮ್ಮಿನ ಗುಡ್ಡದಮೇಲೆ ದೇವರು ಇದ್ದಕ್ಕಿದ್ದ ಹಾಗೆ ಕಾಣಿಸಿಕೊಳ್ಳುತ್ತಾನೆ. ಅಬ್ರಹಾಂ ಬಳಿ ದೇವರು ಆತನ ಮಗ ಐಸಾಕನನ್ನು ತನಗೆ ಬಲಿ ನೀಡುವಂತೆ ಕೇಳುತ್ತಾನೆ. ಈ ಮಾತುಕೇಳಿ ಅಬ್ರಹಾಂ ದಂಗುಬಡಿದು ಹೋಗುತ್ತಾನೆ. ಆತನಿಗೆ ದೇವರ ಬಗ್ಗೆ ಅಪಾರಭಕ್ತಿ. ಹೀಗಾಗಿಯೇ ಇರುವ ಒಬ್ಬನೇ ಪುತ್ರನ ಮೇಲಿನ ವ್ಯಾಮೋಹವನ್ನು ತೊರೆದು ಮಗನನ್ನು ಬಲಿ ನೀಡಲು ಮುಂದಾಗಿ ಬೆಟ್ಟದಮೇಲೆ ಕರೆದುಕೊಂಡು ಹೋಗಲು ಉದ್ಯುಕ್ತನಾಗುತ್ತಾನೆ.   ಆದರೆ ದೇವರು ಅಬ್ರಹಾಂನನ್ನು ಕೇವಲ ಪರೀಕ್ಷಿಸುವ ಉದ್ದೇಶದಿಂದ ಬಲಿ ಕೇಳಿದ್ದರು ಎಂದು ತಿಳಿದುಬರುತ್ತದೆ.

ಹೀಗೆ ,ದೇವರು ಅಬ್ರಹಾಂನ ಅಚಲ ಶ್ರದ್ದೆಯನ್ನು ಕಂಡು ಸಂತುಷ್ಟನಾಗಿ ಅವರ ವಂಶಕ್ಕೆ ಕೆನಾನ್ ಪ್ರದೇಶವನ್ನು ಬಿಟ್ಟುಕೊಟ್ಟುಬಿಟ್ಟ. ಐಸಾಕನ ಮಗನ ಹೆಸರು ಜಾಕಬ್ ಯಾನೇ ಯಾಕೂಬ್. ಈತ ಒಂದು ದಿನ ರಾತ್ರಿ ವೇಳೆ ಕೆನಾನಿನ ಜೆರುಸಲೆಮ್ಮಿನಲ್ಲಿ ಅಡ್ಡಾಡುತ್ತಿದ್ದ ವೇಳೆಯಲ್ಲಿ ಆಗಂತುಕ ವ್ಯಕ್ತಿಯೊಬ್ಬ ಎದುರಾಗುತ್ತಾನೆ. ಗುರುತು ಪರಿಚಯವಿಲ್ಲದ ಆ ಆಸಾಮಿ ನೇರವಾಗಿ ಈತನನ್ನು ಕಾಳಗಕ್ಕೆ ಆಹ್ವಾನಿಸುತ್ತಾನೆ. ಈತನ ಪಂಥಾಹ್ವಾನವನ್ನು ಸ್ವೀಕರಿಸಿದ ಜಾಕಬ್ ಒಂದಿಡೀ ರಾತ್ರಿ ಆತನ ಜೊತೆಗೆ ಘನಘೋರವಾದ ಮುಷ್ಟಿಯುದ್ದ ನಡೆಸಿದ. ಬೆಳಗಾಗುವ ವೇಳೆಗೆ ಆ ಆಗಂತುಕ ಹೊಡೆದಾಟ ನಿಲ್ಲಿಸಿ ಜಿಗ್ಗನೇ ಆಗಸಕ್ಕೆ ಜಿಗಿದ. ನೋಡು ನೋಡುತ್ತಿದ್ದಂತೆ ಆತನ ಎರಡು ಪಕ್ಕೆಗಳಲ್ಲಿ ಭಾರೀಗಾತ್ರದ ರೆಕ್ಕೆಗಳು ಮೂಡಿದವು. ಜಾಕಬನಿಗೆ ಅಚ್ಚರಿ. ಅವನು ಒಂದಿಡೀ ರಾತ್ರಿ ಕಾದಾಡಿದ್ದು ಒಬ್ಬ ದೇವದೂತನ ಜೊತೆಗಾಗಿತ್ತು. ಜಾಕಬ್ ನ ಪರಾಕ್ರಮದಿಂದ ಪ್ರಸನ್ನನಾದ ದೇವದೂತ ಜಾಕಬನಿಗೆ ಇಸ್ರೇಲ ಎಂಬ ಹೊಸ ಹೆಸರು ನೀಡಿದ. ಇಸ್ರೇಲ ಎಂದರೆ ಸೆಣಸಿ ಗೆದ್ದವನು ಎಂದರ್ಥ. ಇಂದಿಗೂ ಆ ಜನಾಂಗದವರು ಸೆಣಸುತ್ತಲೇ ಇದ್ದಾರೆ. ಇಸ್ರೇಲಿನ ಸದ್ಯದ ಅನಾನುಕೂಲ ಸ್ಥಿತಿಗತಿಗಳನ್ನ ಅರ್ಥೈಸಿಕೊಳ್ಳಬೇಕೆಂದರೆ, ಅದರ ಇತಿಹಾಸದ ಮಜಲುಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ವ್ಯವಧಾನ ನಮ್ಮಲ್ಲಿರಬೇಕು. ಯಹೂದಿ ಎಂಬ  ಸೆಣಸಿ ಗೆದ್ದ ನಾಗರೀಕತೆ ನಡೆದು ಬಂದ ಹಾದಿ, ಪ್ರಾಸ್ತಾವಿಕ ಸನ್ನಿವೇಶದಲ್ಲಿ ಎದುರಿಸುತ್ತಿರುವ ಸವಾಲುಗಳಿಗೆ ಕೇವಲ ರಾಜತಾಂತ್ರಿಕ ಸಂಬಂಧ ಕುದುರಿಸುವಿಕೆ, ನೀತಿ ನಿರೂಪಣೆ, ಅಂತರರಾಷ್ಟ್ರೀಯ ಸಹಕಾರಗಳು ಸಮಾಧಾನ ನೀಡಬಲ್ಲವೇ? ಅಥವಾ ಅದಕ್ಕಿಂತಲೂ ಆಳದಲ್ಲಿ ಬೇರಿನ್ನೇನೋ ಹುದುಗಿದೆಯೋ?

ಪುಸ್ತಕದ ಮೊದಲಾರ್ಧ ಯಹೂದಿ ಜನಾಂಗದ ಹೆಜ್ಜೆಗುರುತುಗಳ ಮೂಲವನ್ನು ದಾಖಲಿಸಿದರೆ, ದ್ವಿತೀಯಾರ್ಧದಲ್ಲಿ ಈ ಜನಾಂಗದ ಅಭೂತಪೂರ್ವ ಮತ್ತು ವರ್ಣಿಸಲಸದಳ ಸಾಹಸಗಾಥೆಗಳ ಸರಮಾಲೆಯನ್ನು ವಿವರಿಸಿದ್ದಾರೆ. ವಿಶ್ವದ ಇತಿಹಾಸದ ಅವಲೋಕನದಲ್ಲಿ ಹಲವು ಬಾರಿ ಜನಾಂಗೀಯ ಘರ್ಷಣೆಗಳಾದಾಗ ಬಲಿಪಶುವಾದ ನಾಗರೀಕತೆಯೆಂದರೆ ಯಹೂದಿಗಳದ್ದೇ. ಸಂಘರ್ಷದಲ್ಲೇ ಹುಟ್ಟನ್ನು ಪಡೆದ ಇವರು ಹುಟ್ಟಿನಿಂದಲೇ ಸಂಘರ್ಷಕ್ಕೆ ಒಗ್ಗಿಕೊಂಡಿದ್ದರು. ಈಗಿನ ತಲೆಮಾರಿನ ಜನಸಮುದಾಯದ ಸ್ಮೃತಿಯಲ್ಲಿ ಅಚ್ಚಾಗಿರುವ ಯಹೂದ್ಯರ ಅತಿದೊಡ್ಡ ನರಮೇಧವೆಂದರೆ ಹಿಟ್ಲರ್ ನಡೆಸಿದ್ದ ಹೋಲೊಕಾಸ್ಟ್ ಎಂದೆನ್ನಬಹುದು. ಸರಿಸುಮಾರು 1941 ರಿಂದ 1945 ರ ಮಧ್ಯೆ, ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಅರವತ್ತು ಲಕ್ಷಕ್ಕಿಂತ ಹೆಚ್ಚು ಯಹೂದ್ಯರನ್ನ ಬರ್ಬರವಾಗಿ ಹತ್ಯೆಗಯ್ಯಲಾಯಿತು. ಈ ಭೀಕರತೆಯಿಂದ ಆ ಜನಾಂಗ ಹೊರಬರುವುದು ಅನುಮಾನವೇ ಎಂದು ಪರಿಗಣಿಸಿದ್ದರೂ, ಅಚ್ಚರಿ ಎಂಬಂತೆ ಫೀನಿಕ್ಸ್ ಹಕ್ಕಿಯ ರೀತಿಯಲ್ಲಿ ತಮ್ಮ ಅಸ್ತಿತ್ವಕ್ಕೆ ಮರುರೂಪವನ್ನು ಕೊಡುವಲ್ಲಿ ಯಹೂದ್ಯರು ಯಶಸ್ವಿಯಾದರು. ಕ್ರಿ.ಶ 132 ರ ಸಂದರ್ಭದ ಹೆಟ್ರಿಯನ್ ಆಳ್ವಿಕೆಯಲ್ಲಿ ರೂಪುಗೊಂಡ ರೋಮನ್ ಮತ್ತು ಯಹೂದಿಗಳ ನಡುವಿನ ಸಂಘರ್ಷ, ಮೊಟ್ಟಮೊದಲ ಬಾರಿಗೆ ಐದುಲಕ್ಷಕ್ಕೂ ಹೆಚ್ಚಿನ ಯಹೂದಿಗಳ ಸಾವಿನೊಂದಿಗೆ ಅಂತ್ಯವಾಯಿತು. ಇಲ್ಲಿಂದ ಆರಂಭಗೊಂಡ ನಾಗರೀಕ ಘರ್ಷಣೆ ಮುಂಬರುವ ಶತಮಾನಗಳಲ್ಲಿ ಮತ್ತಷ್ಟು ಭೀಕರಗೊಳ್ಳುತ್ತ ಸಾಗಿತು. ನಂತರದ ಶತಮಾನಗಳಲ್ಲಿ ‘ದಿ ಗ್ರೇಟ್ ಕಾನ್ಸ್ಟಂಟೈನ್’ ಎಂಬ ಕ್ರೈಸ್ತಪರ ಸಂಘರ್ಷವೂ ಕೂಡ ಯಹೂದ್ಯರ ನರಮೇಧಕ್ಕೆ ಕಾರಣವಾಯಿತು. ದಿಟದಲ್ಲಿ ನೋಡಿದರೆ, ಇತಿಹಾಸದ ಕರಾಳ ಪುಟಗಳಲ್ಲಿ, ಕ್ರೈಸ್ತರೂ ಮತ್ತು ಯಹೂದಿಗಳ ನಡುವಿನ ಸಂಘರ್ಷವೇ ಹೆಚ್ಚಿನ ಪ್ರಮಾಣದಲ್ಲಿತ್ತು. ಕ್ರಿ.ಶ 622 ರ ಸನಿಹದಲ್ಲಿ ಇಸ್ಲಾಂಧರ್ಮದ ಉದಯವಾಯಿತು. ತದನಂತರ ಮಧ್ಯಪ್ರಾಚ್ಯದಲ್ಲಿ ಉಂಟಾಗುವ ರಾಜಕೀಯ, ಸಾಮಾಜಿಕ, ಧಾರ್ಮಿಕ ಸ್ಥಿತ್ಯಂತರಗಳ ಆಳವಾದ ಅವಲೋಕನವನ್ನು ಪುಸ್ತಕದಲ್ಲಿ ಮಾಡಲಾಗಿದೆ. 1346 ರ ಸಂದರ್ಭದಲ್ಲಿ ಕೊರೋನಾದ ರೀತಿಯಲ್ಲೇ ‘ಬ್ಲಾಕ್ ಡೆತ್’ ಎಂಬ ಸಾಂಕ್ರಾಮಿಕ ರೋಗವೊಂದು ಯುರೋಪನ್ನು ಆವರಿಸಿಕೊಂಡು ಬಾಧಿಸುತ್ತದೆ. ಆ ಸಂದರ್ಭದಲ್ಲಿ ಉಂಟಾಗುವ ಸಾವುನೋವುಗಳು ಎಷ್ಟು ಭೀಕರವಾಗಿದ್ದುವೆಂದರೆ, ಆಗಿನ ಯೂರೋಪಿನ ಒಟ್ಟು ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಜೀವಗಳು ಈ ರೋಗಕ್ಕೆ ಬಲಿಯಾಗುತ್ತವೆ. ದುರದೃಷ್ಟವೆಂದರೆ, ಇದರ ಹೊಣೆಯನ್ನು ಕೂಡ ಯಹೂದ್ಯರ ತಲೆಮೇಲೆ ಕಟ್ಟಿ, ಅವರನ್ನು ಇಲ್ಲಸಲ್ಲದ ರೀತಿಯಲ್ಲಿ ಹಿಂಸಿಸುತ್ತಾರೆ. ಈ ರೀತಿಯಾಗಿ ಇತಿಹಾಸದ ತುಂಬೆಲ್ಲಾ ಪೆಟ್ಟುಗಳನ್ನು ತಿನ್ನುತ್ತಲೇ ಬಂದ ಸಮುದಾಯವೊಂದು 1896 ರ ಜಿಯೋನಿಸ್ಟ್ ಚಳುವಳಿಯ ಮುಖಾಂತರ ತಮ್ಮದೊಂದು ದೇಶದ ಪರಿಕಲ್ಪನೆಯನ್ನು ಮಾಡಿಕೊಳ್ಳುತ್ತಾರೆ. ಅವರ ಸಂಕಲ್ಪ ಕೊನೆಗೂ 1948 ಮೇ 14 ರಂದು ಈಡೇರುತ್ತದೆ.

ಆ ಸನ್ನಿವೇಶವೇನೂ ಅಂದುಕೊಂಡಷ್ಟು ಸುಲಭದ್ದಾಗಿರಲಿಲ್ಲ. ತದನಂತರ ಸುತ್ತಲಿನ ಎಲ್ಲ ದೇಶಗಳೂ ಇಸ್ರೇಲಿನ ಮೇಲೆ ಮುರಿದುಕೊಂಡು ಯುದ್ಧಕ್ಕೆ ಬಿದ್ದವು. ಮಧ್ಯಪ್ರಾಚ್ಯದಲ್ಲಂತೂ ಇಸ್ರೇಲಿನ ವಿರುದ್ಧ ತೊಡೆತಟ್ಟಿದ, ಯಹೂದ್ಯರ ಸರ್ವನಾಶದ ಕುರಿತು ಮಾತನಾಡಿದ ಪ್ರತಿಯೋರ್ವರನ್ನು ಹೀರೋಗಳಂತೆ ಬಿಂಬಿಸಲಾಯಿತು. ರಾಜತಾಂತ್ರಿಕವಾಗಿ ಕೈಗೊಂಡ ಎಲ್ಲ ಒಪ್ಪಂದಗಳನ್ನು ಕೂಡ ಮುರಿದು ಪುನಃ ಸಂಘರ್ಷಕ್ಕೆ ನಾಂದಿ ಹಾಡಿದ ಎಷ್ಟೋ ಸಂದರ್ಭಗಳಲ್ಲಿ, ತನ್ನ ಸಾಮರ್ಥ್ಯದ ನೈಜ ಪರಿಚಯವನ್ನು ಮಾಡುವ ಮುಖಾಂತರ ಬಿಸಿಮುಟ್ಟಿಸಿದೆ. ಈ ಸಂದರ್ಭದಲ್ಲಿ ಇಸ್ರೇಲಿನ ಗುಪ್ತಚರ ವಿಭಾಗವಾದ ಮೋಸ್ಸಾದ್ ಉದಯ, ಅದರ ಕಾರ್ಯತತ್ಪರತೆ ಮತ್ತು ಕೈಗೊಂಡ ಸಾಹಸೀ ಮಿಷನ್ಗಳ ಕುರಿತು ರಣರೋಚಕವಾದ ಬರವಣಿಗೆಯ ಶೈಲಿಯಲ್ಲಿ ಓದುಗರೆದುರು ಲೇಖಕರು ತೆರೆದಿಟ್ಟಿದ್ದಾರೆ. ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಭಾರತ ಕೂಡ ಇಸ್ರೇಲ್ ಎದುರಿಸಿದಷ್ಟೇ ಅಸಾಧಾರಣ ಸಂಕಷ್ಟಗಳ ಸರಮಾಲೆಯನ್ನು ಎದುರಿಸಿತ್ತು, ಎದುರಿಸುತ್ತಿದೆ ಮತ್ತು ಮುಂದೆಯೂ ಎದುರಿಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಕಣ್ಣೆದುರೇ ಇರುವ ಯಹೂದ್ಯ ಜನಾಂಗದ ಪ್ರೇರಣೆ, ಸಾಧನೆ ನಮಗೆ ಯಾವೆಲ್ಲ ರೀತಿಯಲ್ಲಿ ಮಾದರಿಯಾಗಬೇಕಿತ್ತು ಎಂದು ವಿವರಿಸಿದ ಭಾಗವನ್ನಂತೂ ಪ್ರತಿಯೋರ್ವರೂ ಓದಲೇಬೇಕು.

ಆಧುನಿಕ ಭಾರತದ ಆಳರಸರು ರಷ್ಯಾದಿಂದ, ಪಶ್ಚಿಮದ ದೇಶಗಳಿಂದ ಎರವಲು ತಂದ ಸೂತ್ರ ಸಿದ್ಧಾಂತಗಳ ಮೇಲೆ ಭಾರತವನ್ನು ಕಟ್ಟಿ ಆ ದೇಶಗಳ ಚಿಂತನೆಯ ಮೂಸೆಯಲ್ಲಿ ಭಾರತವನ್ನು ಎರಕಹೊಯ್ಯಲು  ಹೊರಟು ಆದ ಎಡವಟ್ಟುಗಳು ಸಾಕು. ನಾವು ನಮ್ಮ ಐದುಸಾವಿರ ವರ್ಷಗಳ ಭವ್ಯ ಪರಂಪರೆಯ ಅಡಿಪಾಯದಲ್ಲೇ ನವಭಾರತದ ನಿರ್ಮಾಣಕ್ಕೆ ಮುಂದಾಗೋಣ. ಶೂನ್ಯದಿಂದಲೇ ಸರ್ವವನ್ನೂ ಸಾಧಿಸಿಕೊಂಡು ಸಾಧನೆಯ ತುತ್ತತುದಿಯಲ್ಲಿ ಮಿಂಚುತ್ತಿರುವ ಇಸ್ರೇಲ್ ಎಂಬ ಧ್ರುವತಾರೆಯನ್ನು ಭಾರತದ ಭವಿತವ್ಯದ ದಾರಿಗೆ ದೀವಟಿಕೆ ಮಾಡಿಕೊಳ್ಳೋಣವೆಂಬ ಆಶಯವನ್ನು ಲೇಖಕರು ವ್ಯಕ್ತಪಡಿಸುವಾಗ ಓದುಗನೊಳಗೊಂದು ಪ್ರಜ್ಞೆ ಜಾಗೃತವಾದರೆ ಶ್ರೀಕಾಂತ ಶೆಟ್ಟಿಯವರ ಶ್ರಮ ಸಾರ್ಥಕ ವೆನಿಸುತ್ತದೆ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.