(ವೀಣಾಪಾಣಿ, ಹಂಸವಾಹಿನಿ ನಿಲುವಾಂಬೆ ಶಾರದೆ ಕೂಡಲಿ. ಚಿತ್ರಕೃಪೆ : ಕೂಡಲಿ ಮಹಾಸಂಸ್ಥಾನ)
ತಾಯಿ ಶಾರದೆಯ ನಾಮವನ್ನಾಲಿಸಿದೊಡೆ ಮನದೊಳೊಂದು ಪ್ರಜ್ಞೆ ಜಾಗೃತವಾಗುತ್ತದೆ. ಆ ಪ್ರಜ್ಞೆ ವಿಶ್ವಪ್ರಜ್ಞೆಯಲ್ಲಿ ಲೀನವಾದಾಗ ಮಾತ್ರವೇ ಬ್ರಹ್ಮತತ್ವದ ನೈಜಾನುಭವದತ್ತ ನಾವು ಸಾಗಬಲ್ಲೆವು. ಭರತಖಂಡದ ಉದ್ದಗಲಕ್ಕೂ, ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಪುಣ್ಯಭುವಿಯ ಜನಮಾನಸವೆಲ್ಲ ಜ್ಞಾನವನ್ನರಸಿ ಆಕೆಯಲ್ಲಿ ಮೊರೆಯಿಡುತ್ತಾರೆ. ಆಕೆಗೆಂದೇ ಮೀಸಲಾದ ಹಲವು ಶಕ್ತಿ- ಪೀಠಗಳು, ದೇಗುಲಗಳು ಮತ್ತು ಪರಂಪರೆಗಳು ನಮ್ಮಲ್ಲಿವೆ.
ಅದರಲ್ಲೂ ಭಾರತದಾದ್ಯಂತ ಸಂಚರಿಸಿ, ಈ ನೆಲದ ಅಧ್ಯಾತ್ಮ ಪರಂಪರೆಯನ್ನು ಗಟ್ಟಿಗೊಳಿಸಿದ ಆಚಾರ್ಯತ್ರಯರಲ್ಲಿ ಮೊದಲಿಗರಾದ ಶ್ರೀ ಆದಿಶಂಕರಾಚಾರ್ಯರ ಶಾರದಾ ಭಕ್ತಿ ಅನನ್ಯವೂ ಮತ್ತು ಅಪೂರ್ವವೂ ಆಗಿದೆ. ಅವರಿಂದ ಸಂಸ್ಥಾಪಿತಗೊಂಡ ನಾಲ್ಕು ಪೀಠಗಳಲ್ಲಿ ದಕ್ಷಿಣಾಮ್ನಾಯ (ಶೃಂಗೇರಿ) ಮತ್ತು ಪಶ್ಚಿಮಾಮ್ನಾಯ (ದ್ವಾರಕೆ) ಪೀಠಗಳು ಆಕೆಗೇ ಮುಡಿಪಾಗಿವೆ. ಕಾಶ್ಮೀರದ ಶಾರದಾ ಪೀಠಕ್ಕೂ ಶಂಕರಾಚಾರ್ಯರು ಭೇಟಿ ನೀಡಿದ್ದರು.
ಅಂತೆಯೇ ಸ್ವತಃ ಜಗದ್ಗುರು ಶ್ರೀ ಶಂಕರಾಚಾರ್ಯರಿಂದಲೇ ಪ್ರತಿಷ್ಠಾಪಿತವಾದ ಶಾರೆದೆಯ ಪೀಠಗಳಲ್ಲಿ ಕರ್ನಾಟಕದ ಹೃದಯ ಭಾಗದಲ್ಲಿರುವ ಶಿವಮೊಗ್ಗ ಜಿಲ್ಲೆಯ ಕೂಡ್ಲಿ (ಕೂಡಲಿ) ಪೀಠವೂ ಕೂಡ ಒಂದಾಗಿದೆ. ಕೂಡ್ಲಿ ಕ್ಷೇತ್ರದ ಐತಿಹ್ಯ ಅನಾದಿ ಕಾಲದತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಈ ಸಿದ್ಧಿಕ್ಷೇತ್ರದಲ್ಲಿ ತುಂಗಾ ಮತ್ತು ಭದ್ರಾ ನದಿಗಳ ಸಂಗಮವಾಗುತ್ತದೆ. ಪುರಾಣಗಳಲ್ಲಿ ಈ ಎರಡು ನದಿಗಳನ್ನು “ಯುಗಳ ನದಿ” ಅಥವಾ “ಯಮಳ ನದಿ” ಎಂದು ಕರೆದಿದ್ದಾರೆ. ಹಾಗಾಗಿ ಈ ಊರನ್ನು “ಯಮಳಪುರಿ” ಎಂದೂ ಕರೆದಿದ್ದಾರೆ. ಸಂಗಮದ ನಂತರ ಈ ನದಿ “ತುಂಗಭದ್ರಾ” ಎಂದೇ ಕರೆಯಲ್ಪಟ್ಟಿದೆ. ಇನ್ನು ಕೂಡಲಿ ಕ್ಷೇತ್ರದ ಮಹಿಮೆಯು ಸ್ಕಾಂದ ಪುರಾಣ, ಭವಿಷ್ಯೋತ್ತರ ಪುರಾಣ, ಹಾಗೂ ಬ್ರಹ್ಮಾಂಡ ಪುರಾಣಗಳಲ್ಲಿ ಕೂಡ ವರ್ಣಿಸಲ್ಪಟ್ಟಿದೆ.
ದಂಷ್ಟ್ರಾಭ್ಯಾಂ ನಿಸೃತೇ ಘೋರೇತರಾಭೂಚ್ಚ ನದೀದ್ವಯಂ ।
ತುಂಗಭದ್ರೇತಿ ವಿಖ್ಯಾತಾ ನದೀನಾಂ ಪ್ರವರಾ ಶುಭಾ ।
ವೇದಪಾದೋದ್ಭವೇ ದೇವೀ ಶ್ರೀ ಶೈಲೋತ್ತುಂಗಗಾಮಿನೀ ।
ತುಂಗಭದ್ರೇತಿ ವಿಖ್ಯಾತಾ ಮಹಾಪಾತಕನಾಶನೀ ॥ – ಬ್ರಹ್ಮಾಂಡ ಪುರಾಣ
ಅರ್ಥ: (ವರಾಹಮೂರ್ತಿಯ) ದಾಡೆ (ದವಡೆ) ಗಳಿಂದ ಹರಿದು ಬಂದ ಎರಡು ನದಿಗಳು ಒಂದಾಗಿ ತುಂಗಭದ್ರೆ ಎಂಬ ಹೆಸರಿನಿಂದ ನದಿಗಳಲ್ಲಿ ಶ್ರೇಷ್ಠವೂ ಶುಭಪ್ರದವೂ ಎನ್ನಿಸಿಕೊಂಡು ವಿಖ್ಯಾತವಾಯಿತು.
ವೇದಪಾದ ಕ್ಷೇತ್ರದಲ್ಲಿ ಹುಟ್ಟಿ, ಶ್ರೀ ಶೈಲ ಬೆಟ್ಟದ ಬಳಿಗೆ ಹೋಗುವ ತುಂಗಭದ್ರೆಯು ಮಹಾಪಾತಕವನ್ನು ಕೂಡ ನಾಶ ಮಾಡುವವಳೆಂದೇ ಪ್ರಸಿದ್ಧಳಾಗಿದ್ದಾಳೆ.
ಗಂಗಾಷ್ಟಕ ಯಮುನಾಷ್ಟಕಗಳಂತೆಯೇ ತುಂಗಭದ್ರೆಯನ್ನು ವಂದಿಸುವ ಸ್ತೋತ್ರವನ್ನು ಬ್ರಹ್ಮಾಂಡಪುರಾಣದಲ್ಲಿ ಅಂತರ್ಗತವಾಗಿರುವ ತುಂಗಭದ್ರಮಹಾತ್ಮೆಯಲ್ಲಿ ತುಂಗಭದ್ರಾಸ್ತುತಿಯಲ್ಲಿ ಕಾಣಬಹುದು.(1)
ಇದೇ ಪುರಾಣದಲ್ಲಿ ಈ ನದಿಯ ಹುಟ್ಟಿನ ಬಗ್ಗೆಯೂ ಕಥೆ ಇದೆ. ಶ್ರೀ ವಿಷ್ಣುವು ವರಾಹರೂಪವನ್ನು ಧರಿಸಿ ಹಿರಣ್ಯಾಕ್ಷನನ್ನು ಸಂಹರಿಸುತ್ತಾನೆ. ಅನಂತರ ಅವನು ಸಹ್ಯಾದ್ರಿಪರ್ವತಪ್ರದೇಶಕ್ಕೆ ಬಂದು ವರಾಹರೂಪವನ್ನು ತ್ಯಜಿಸಿ, ಭಗವದ್ರೂಪವನ್ನು ತಾಳುತ್ತಾನೆ. ಈ ಸ್ಥಳವನ್ನು ‘ವೇದಪಾದ’ ಎಂದು ಕರೆಯುತ್ತಾರೆ. (ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ, ಈಗಿನ ಕುದುರೆಮುಖ ಗಣಿ ಪ್ರದೇಶದಲ್ಲಿ ವೇದಪಾದ ಎಂದು ಕರೆಸಿಕೊಂಡಿರುವ ಸ್ಥಳವೂ, ವರಾಹಮೂಲ ಎಂಬ ಪ್ರದೇಶವೂ ಇವೆ). ಅಲ್ಲಿ ವರಾಹದ (ಹಂದಿಯ) ದಾಡೆಗಳ ಆಕೃತಿಯಲ್ಲಿರುವ ಬಂಡೆಗಳಿಂದ ಈ ಎರಡು ನದಿಗಳು ಹರಿದು ಬರುವುದನ್ನು ಕಾಣಬಹುದು.
ವರಾಹ ವಾಮದಂಷ್ಟ್ರಾತ್ತು ತುಂಗಾ ತುಂಗಫಲಪ್ರದಾ ।
ಸಮುದ್ಭೂತಾ ನೃಪಶ್ರೇಷ್ಠ ಭದ್ರಾ ದಕ್ಷಿಣದಂಷ್ಟ್ರತಃ ॥
ಅಂದರೆ ವಿಶಿಷ್ಟ ಫಲಗಳನ್ನು ಕೊಡುವ ತುಂಗೆಯು ವರಾಹದ ಎಡದಾಡೆಯಿಂದಲೂ ಭದ್ರೆಯು ಬಲದಾಡೆಯಿಂದಲೂ ಹೊರಬಂದವು ಎಂದರ್ಥ.
ಹೀಗೆ ಹರಿದು ಬರುವ ತುಂಗಾ ಮತ್ತು ಭದ್ರಾ ನದಿಗಳು ಈಗಿನ ಕೂಡಲಿ ಕ್ಷೇತ್ರದಲ್ಲಿ ಒಂದಾಗುತ್ತವೆ. ಈ ಪುಣ್ಯ ಸಂಗಮ ಕ್ಷೇತ್ರದ ಪ್ರಾಚೀನ ಸ್ಥಳ ಪುರಾಣ ಬಹಳ ಸ್ವಾರಸ್ಯಕರವಾಗಿದೆ.
ಪ್ರಾಚೀನ ಋಷ್ಯಾಶ್ರಮ ಹಾಗೂ ಹರಿಹರರ ಪಾವನ ಕ್ಷೇತ್ರ
ಬಹಳ ಹಿಂದೆ , ಅಂದರೆ, ತುಂಗಾ ಮತ್ತು ಭದ್ರಾ ನದಿಗಳು ಉಗಮ ಆಗುವುದಕ್ಕೂ ಮುಂಚಿನ ಕಾಲದಲ್ಲಿ ಈ ಸಂಗಮ ಪ್ರದೇಶದಲ್ಲಿ, ಒಂದು ಪ್ರಾಚೀನ ಸರೋವರವಿತ್ತು. ಅದರ ಸುತ್ತ ಅನೇಕ ಋಷಿಗಳ ಮತ್ತು ಮುನಿಗಳ ಆಶ್ರಮಗಳಿದ್ದವು. ಅವರೆಲ್ಲರೂ ನಿರಂತರ ಧ್ಯಾನಪರಾಯಣರೂ, ತ್ರಿಕಾಲಜ್ಞಾನಿಳೂ, ವೇದವಿದರೂ ಆಗಿದ್ದರು. ಒಮ್ಮೆ ಶ್ರೀಮನ್ನಾರಾಯಣನು ಗರುಡನನ್ನೇರಿ ಸಿದ್ಧಗಂಧರ್ವರೊಡನೆ ಭೂಲೋಕದತ್ತ ಬರುತ್ತಿದ್ದಾಗ, ಈ ಪ್ರದೇಶದಲ್ಲಿದ್ದ ಋಷಿಮುನಿಗಳನ್ನು ನೋಡುತ್ತಾನೆ. ಇಲ್ಲಿನ ಮಂಗಳ ಸನ್ನಿವೇಶದಿಂದ ಆಕರ್ಷಿತನಾದ ಅವನು ಬ್ರಾಹ್ಮಣ ವೇಷವನ್ನು ಧರಿಸಿ, ಸರೋವರದ ಬಳಿ ಬಂದು ನಿಲ್ಲುತ್ತಾನೆ. ಇವನೊಂದಿಗೆ ಬಂದ ಸಿದ್ಧರೂ ಗಂಧರ್ವರೂ ಗರುಡನೂ ಆ ಬ್ರಾಹ್ಮಣನ ಅನುಚರರಾಗಿ ಬಂದು ನಿಲ್ಲುತ್ತಾರೆ. ಆಗಂತುಕರಾಗಿ ಬಂದ ಬ್ರಾಹ್ಮಣನನ್ನೂ, ಅವನ ಅನುಚರರನ್ನೂ ಋಷಿಗಳು ಅರ್ಘ್ಯಪಾದ್ಯಾದಿಗಳಿಂದ ಸ್ವಾಗತಿಸಿ, ಅವರ ಆಗಮನಕ್ಕೆ ಕಾರಣವನ್ನು ಕೇಳುತ್ತಾರೆ.
ಆಗ ಬ್ರಾಹ್ಮಣನು – ‘ನಾನು ಶ್ವೇತದ್ವೀಪವಾಸಿ, ಋಷಿಗಳ ದರ್ಶನ ಪಡೆಯುತ್ತಾ ಅನುಚರರೊಂದಿಗೆ ಸಂಚರಿಸುತ್ತಿದ್ದೇನೆ. ಇಲ್ಲಿ ನಿಮ್ಮ ಮುನಿಸಮಾಜವನ್ನೂ, ಕಮಲಗಳಿಂದ ತುಂಬಿರುವ ಈ ಸರೋವರವನ್ನೂ, ಮರಗಿಡ ಬಳ್ಳಿಗಳಿಂದ ಪ್ರಶಾಂತವಾದ ಈ ಪ್ರದೇಶವನ್ನೂ ನೋಡಿ ನನಗೆ ಒಂದು ದಿನ ಇಲ್ಲಿ ಉಳಿಯಬೇಕೆಂಬ ಅಪೇಕ್ಷೆಯುಂಟಾಗಿದೆ. ಆದ್ದರಿಂದ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳುತ್ತಾನೆ. ಅವನ ಮಾತುಗಳನ್ನು ಕೇಳಿ ಋಷಿಗಳಿಗೆ ಬಹಳ ಸಂತೋಷವಾಗುತ್ತದೆ. ಅಷ್ಟೇ ಅಲ್ಲ, ಆ ಋಷಿಗಳು ತ್ರಿಕಾಲ ಜ್ಞಾನಿಗಳಾದ್ದರಿಂದ ಈ ಬ್ರಾಹ್ಮಣನು ಶ್ರೀಮನ್ನಾರಾಯಣನೆಂಬುದನ್ನೂ, ಅನುಚರರು ಸಿದ್ಧಗಂಧರ್ವರು ಎಂಬುದನ್ನೂ ತಕ್ಷಣವೇ ತಿಳಿದುಕೊಳ್ಳುತ್ತಾರೆ. ಅನಂತರ ಅವರನ್ನೆಲ್ಲ ಭಕ್ತಿಯಿಂದ ಗೌರವಿಸಿ ಸ್ತುತಿಸುತ್ತಾರೆ.
ಋಷಿಗಳ ಭಕ್ತಿಗೆ ಮೆಚ್ಚಿದ ನಾರಾಯಣನು ಸಹಚರರೊಂದಿಗೆ ನಿಜರೂಪದಿಂದ ಕಾಣಿಸಿಕೊಳ್ಳುತ್ತಾನೆ. ಆ ದಿವ್ಯ ಮಂಗಳ ರೂಪವನ್ನು ಕಂಡ ಋಷಿಗಳು ಇನ್ನಷ್ಟು ಅಪ್ಯಾಯಮಾನರಾಗಿ ಭಗವಂತನನ್ನು ಸ್ತುತಿಸಿ – ‘ನಮ್ಮ ಪ್ರದೇಶವು ನಿನ್ನ ಪಾದಸ್ಪರ್ಶದಿಂದ ಪುನೀತವಾಗಿದೆ. ಆದ್ದರಿಂದ ನಿನ್ನ ಪಾದಚಿಹ್ನೆಗಳನ್ನು ಈ ಸರೋವರದ ದಡದಲ್ಲಿ ಬಿಟ್ಟು ಹೋಗಬೇಕು ‘ ಎಂದು ಪ್ರಾರ್ಥಿಸುತ್ತಾರೆ. ‘ಹಾಗೆಯೇ ಆಗಲಿ’ ಎಂದು ಹೇಳಿದ ನಾರಾಯಣನು ತನ್ನ ಪಾದಚಿಹ್ನೆಗಳ ಪಕ್ಕದಲ್ಲಿ ಶಿವನ ಪಾದ ಚಿಹ್ನೆಗಳೂ ಇರುವುದನ್ನು ಋಷಿಗಳಿಗೆ ತೋರಿಸುತ್ತಾನೆ. ಶಿವನ ಪಾದ ಚಿಹ್ನೆಗಳು ಅಲ್ಲಿ ಹೇಗೆ ಬಂದವು ಎಂದು ಋಷಿಗಳು ಕೇಳಲು ನಾರಾಯಣನು – ‘ಹಿಂದೆ ಬ್ರಹ್ಮಹತ್ಯಾ ದೋಷದ ನಿವಾರಣೆಗಾಗಿ, ಶಿವನು, ತ್ರಿಲೋಕಗಳನ್ನೂ ಸುತ್ತುತ್ತಿದ್ದಾಗ ಒಮ್ಮೆ ಈ ಸರೋವರದ ದಡದಲ್ಲಿ ಕುಳಿತು ವಿಶ್ರಮಿಸಿಕೊಂಡಿದ್ದನು. ಆಗ ಉಂಟಾದ ಪಾದ ಚಿಹ್ನೆಗಳು’ ಎಂದು ಹೇಳಿ – ‘ಇನ್ನು ಮುಂದೆ ಈ ಪ್ರದೇಶ ನನ್ನ ಮತ್ತು ಶಿವನ ಸಾನ್ನಿಧ್ಯದಿಂದ ಸದಾಕಾಲ ಪವಿತ್ರವಾಗಿರುತ್ತದೆ. ಅಷ್ಟೇ ಅಲ್ಲ, ಇನ್ನು ಕೆಲವು ಕಾಲಾನಂತರ ನನ್ನ ಅಂಶದಿಂದಲೇ ಹುಟ್ಟಿದ ತುಂಗಾ ಮತ್ತು ಭದ್ರಾ ಎಂಬ ನದಿಗಳು ಬಂದು ಈ ಸ್ಥಳದಲ್ಲಿ ಸಂಗಮವಾಗಿ, ಇಲ್ಲಿರುವ ಸರೋವರವನ್ನೂ, ಋಷ್ಯಾಶ್ರಮಗಳನ್ನೂ ಮುಳುಗಿಸಿ, ಮುಂದೆ ತುಂಗಭದ್ರಾ ಎಂದು ಪ್ರಸಿದ್ಧನದಿಯಾಗಿ ಹರಿಯುತ್ತವೆ. ಆಗಲೂ ಸಹ ಈ ಪಾದ ಚಿಹ್ನೆಗಳು ನಾಶವಾಗದೇ ಉಳಿಯುತ್ತವೆ’. ಎಂದು ಹೇಳಿ, ಅಂತರ್ಧಾನನಾಗುತ್ತಾನೆ.
ಅಂತೆಯೇ ಹಲವು ವರ್ಷಗಳ ನಂತರ ತುಂಗಾ ಮತ್ತು ಭದ್ರಾ ನದಿಗಳು ಹರಿ-ಹರರ ಈ ಪಾವನ ಕ್ಷೇತ್ರದಲ್ಲಿ ಒಂದುಗೂಡುತ್ತವೆ. ಸಂಗಮದ ಸ್ಥಳದಲ್ಲಿ ಈಗ ಸಂಗಮೇಶ್ವರ ದೇವಾಲಯವಿದೆ. ದೇವಾಲಯದ ಒಳಗಿನ ಸಣ್ಣ ಕೊಳವೊಂದರಲ್ಲಿ ಲಿಂಗಾಕೃತಿಯ ಎರಡು ಕಲ್ಲುಗಳಿವೆ. ಮುಟ್ಟಿದರೆ ಪಾದಸ್ಪರ್ಶದ ಅನುಭವವಾಗುವ ಈ ಕಲ್ಲುಗಳೇ ಹರಿ-ಹರರ ಪಾದ ಚಿಹ್ನೆಗಳು! ಇಂತಹ ಪುಣ್ಯಕ್ಷೇತ್ರದಲ್ಲಿ ದ್ರೋಣಪರ್ವತ ಸೇರಿದಂತೆ ಶಂಖತೀರ್ಥ, ಶಕ್ತಿತೀರ್ಥ, ವೈನಾಯಕ ತೀರ್ಥ ಮತ್ತು ಸಾಂಬ ತೀರ್ಥಗಳೂ ಕೂಡ ಇವೆ. ಸಂಗಮದಲ್ಲಿ ಶ್ರೀ ಶಾರದಾಂಬ ದೇಗುಲವನ್ನು ಹೊರತುಪಡಿಸಿ, ಸ್ವತಃ ಶ್ರೀ ರಾಮನಿಂದಲೇ ಪ್ರತಿಷ್ಠಾಪಿತವಾದ ರಾಮೇಶ್ವರ ದೇವಾಲಯ, ಪ್ರಹ್ಲಾದನಿಂದಲೇ ಪ್ರತಿಷ್ಠಾಪಿತವಾದ ಚಿಂತಾಮಣಿ ನರಸಿಂಹ ದೇಗುಲ ಮತ್ತು ಬ್ರಹ್ಮೇಶ್ವರ ದೇವಾಲಯವಿದೆ.
ಕೆಲವು ಐತಿಹಾಸಿಕ ಕಾವ್ಯ ಹಾಗೂ ಐತಿಹ್ಯಗಳ ಪ್ರಕಾರ.ಕೂಡಲಿಕ್ಷೇತ್ರದಲ್ಲಿರುವ ಶ್ರೀಶಾರದಾದೇವಿಯ ಸ್ವಯಂ ಆದಿ ಶಂಕರಾಚಾರ್ಯರೇ ಮಾಡಿದರು ಎಂದು ತಿಳಿದು ಬರುತ್ತದೆ. ಶಂಕರಭಗವತ್ಪಾದರು, ಬ್ರಹ್ಮನ ಅಪರಾವತಾರ ಎನ್ನಲಾಗುವ ಮಂಡನಮಿಶ್ರರನ್ನು ಮತ್ತು ಸರಸ್ವತಿಯ ಅವತಾರರೂಪಳೂ ಮತ್ತು ಸರ್ವವಿದ್ಯಾಪಾರಂಗಳೂ ಎನ್ನಲಾಗುವ ಮಂಡನಮಿಶ್ರರ ಪತ್ನಿ, ಉಭಯಭಾರತೀದೇವಿಯನ್ನು ವಾದದಲ್ಲಿ ಸೋಲಿಸಿದರು. ಮಂಡನಮಿಶ್ರರು ಸೋತು, ವಾದದ ಕರಾರಿನಂತೆ ಶಂಕರಾಚಾರ್ಯರ ಶಿಷ್ಯರಾಗಿ ಸಂನ್ಯಾಸ ಸ್ವೀಕರಿಸಿ ಸುರೇಶ್ವರಾಚಾರ್ಯ ಎಂಬ ಹೆಸರನ್ನು ಪಡೆದರು. ತನ್ನ ಪತಿಯು ಸಂನ್ಯಾಸಗ್ರಹಣ ಮಾಡಿದ್ದರಿಂದ, ಉಭಯಭಾರತಿಯು ತನ್ನ ಲೋಕಕ್ಕೆ ಹೋಗಲು ಸಿದ್ಧಳಾದಳು. ಆಗ ಶಂಕರಭಗವತ್ಪಾದರು ಅವಳನ್ನು ಶ್ರೀ ವನದುರ್ಗಾಮಂತ್ರದಿಂದ ಒಲಿಸಿಕೊಂಡು, ತಾವು ದಕ್ಷಿಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ದಕ್ಷಿಣಾಮ್ನಾಯ ಪೀಠದಲ್ಲಿ ನೆಲಸುವಂತೆ ಪ್ರಾರ್ಥಿಸಿದರು. ಇದಕ್ಕೆ ಒಪ್ಪಿದ, ಶಾರದೆಯು “ನಾನು ನಿಮ್ಮನ್ನು ಅನುಸರಿಸಿ ಬರುತ್ತೇನೆ. ನೀವು ನನ್ನನ್ನು ಹಿಂತಿರುಗಿ ನೋಡಬಾರದು. ಹಾಗೆ ನೋಡಿದಲ್ಲಿ, ನೋಡಿದ ಸ್ಥಳದಲ್ಲಿಯೇ ನಾನು ನೆಲೆ ನಿಲ್ಲುತ್ತೇನೆ’. ಎಂದಳು. ಶ್ರೀ ಶಂಕರರು ಈ ನಿಬಂಧನೆಗೆ ಒಪ್ಪಿ ದಕ್ಷಿಣಾಭಿಮುಖರಾಗಿ ನಡೆದರು. ತುಂಗಭದ್ರಾ ಸಂಗಮದ ಬಳಿ ಬಂದಾಗ, ಶ್ರೀ ಶಂಕರರು ಈ ಪ್ರದೇಶದ ಶ್ರೇಷ್ಠತೆಯನ್ನು ಅರಿತು, ದಕ್ಷಿಣಾಮ್ನಾಯ ಪೀಠಕ್ಕೆ ಯೋಗ್ಯವಾದ ಸ್ಥಳವೆಂದು ಭಾವಿಸಿ ಹಿಂತಿರುಗಿ ನೋಡಿದರು.. ಅಲ್ಲಿಯೇ ದೇವಿಯು ಸನ್ನಿಹಿತಳಾಗಿ ನಿಂತುಬಿಟ್ಟಳು. ಆಚಾರ್ಯ ಶಂಕರರು ಹಾಗೆ ನಿಂತ ಭಂಗಿಯಲ್ಲಿಯೇ ಶಾರದಾಂಬೆಯನ್ನು ಅಲ್ಲಿ ಪ್ರತಿಷ್ಠಾಪಿಸಿ, ಪೂಜಿಸಿದರು. ಹಾಗೆ ನಿಂತ ರೂಪದಲ್ಲಿರುವ ನಿಲುವಾಂಬೆಯಾದ ಶಾರದೆಯೇ ಈ ಪೀಠದ ಅಧಿದೇವತೆಯಾದಳು. ಇಂದಿಗೂ ಸಹ ಈ ದಿವ್ಯ ಸಂಗಮ ಕ್ಷೇತ್ರದಲ್ಲಿ ದೇವಿ ಶಾರದೆಯನ್ನು ನಿಂತ ಭಂಗಿಯಲ್ಲಿಯೇ ಪೂಜಿಸಲಾಗುತ್ತಿದೆ.
ದಕ್ಷಿಣಾಮ್ನಾಯ ಶಾರದಾ ಪೀಠ
ಶ್ರೀ ಶಂಕರಭಗವತ್ಪಾದರು ಶೃಂಗೇರಿಯಲ್ಲಿ ದಕ್ಷಿಣಾಮ್ನಾಯ ಪೀಠವನ್ನು ಸ್ಥಾಪಿಸಿ, ಅದಕ್ಕೆ ಮೊದಲನೇಯ ಪೀಠಾಧಿಪತಿಗಳನ್ನಾಗಿ ಸುರೇಶ್ವರಾಚಾರ್ಯರನ್ನು ನೇಮಿಸಿದ ವಿಷಯ ಎಲ್ಲರಿಗೂ ತಿಳಿದಿದೆ. ಶ್ರೀ ಸುರೇಶ್ವರಾಚಾರ್ಯರಿಂದ 1546 ಇಸವಿಯವರೆಗೆ (ಶ್ರೀ ಶ್ರೀ ತೃತೀಯ ನರಸಿಂಹ ಭಾರತಿಸ್ವಾಮಿಗಳವರೆಗೆ) ಪೀಠಾಧಿಪತಿಗಳಾಗಿದ್ದ ನಲವತ್ತೇಳು ಮಹನೀಯರು ಶೃಂಗೇರಿ ಜಗದ್ಗುರು ಪೀಠವನ್ನು ಅಲಂಕರಿಸಿದರು.2
ಶ್ರೀ ಶ್ರೀ ತೃತೀಯ ನರಸಿಂಹ ಭಾರತಿಗಳ ಸದರಿ ತೃತೀಯ ನರಸಿಂಹ ಭಾರತಿಗಳು 1546 ರಲ್ಲಿ (ಶಾಲಿವಾಹನ ಶಕ 1468) ಶ್ರೀ ಶೃಂಗೇರಿ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತರಾದರು. ಇವರ ಅಧಿಕಾರಾವಧಿಯಲ್ಲಿ ವಿಶೇಷ ಘಟನೆಯೊಂದು ನಡೆಯಿತು. 1551 ನೇ ಸವಿಯಲ್ಲಿ ಅವರು ತಮ್ಮ ಶಿಷ್ಯರೊಬ್ಬರಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟು, ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳೆಂದು ನಾಮಕರಣ ಮಾಡಿದರು. ಆರು ವರ್ಷಗಳ ನಂತರ ಎಂದರೆ 1557 ರಲ್ಲಿ (ಶಾಲಿವಾಹನ ಶಕೆ 1479ನೇ ನಳ ಸಂವತ್ಸರ) ತಮ್ಮ (ಶೃಂಗೇರಿ) ಪೀಠದ ಆಡಳಿತ ಸೂತ್ರವನ್ನು ಶ್ರೀ ವಿದ್ಯಾರಣ್ಯ ಭಾರತಿಗಳಿಗೆ ವಹಿಸಿ,ತಾವು ಉತ್ತರಭಾರತಕ್ಕೆ ತೀರ್ಥಯಾತ್ರೆ ಹೊರಟರು. ಬಹಳ ಕಾರಣಗಳಿಂದ ಶ್ರೀ ಶ್ರೀ ತೃತೀಯ ನರಸಿಂಹ ಭಾರತಿಗಳ ಈ ತೀರ್ಥಯಾತ್ರೆಯು ಸುಮಾರು ಇಪ್ಪತ್ತು ವರ್ಷಗಳ ದೀರ್ಘಕಾಲ ನಡೆಯಬೇಕಾಯಿತು.
1565ರ ಜನವರಿ 23 ರಂದು ಬಹಮನೀ ರಾಜ್ಯದ ಅರಸರಿಗೂ, ವಿಜಯನಗರದ ಅರಸರಿಗೂ ನಡೆದ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರದ ಅರಸರು ಸೋತ ನಂತರ ವಿಜಯನಗರ ಸಾಮ್ರಾಜ್ಯವು ಸಂಪೂರ್ಣವಾಗಿ ನಾಶವಾಗಿ ಸಾಮ್ರಾಜ್ಯದೆಲ್ಲೆಡೆ ಅರಾಜಕತೆಯುಂಟಾಯಿತು. ಇದರಿಂದಾಗಿ ವಿಜಯನಗರದ ಅರಸರ ಭಕ್ತಿಗೌರವಗಳಿಗೆ ಪಾತ್ರವಾಗಿದ್ದ ಧರ್ಮಪೀಠಗಳಿಗೂ ಧಕ್ಕೆಯುಂಟಾಯಿತು. ಆ ಸಮಯದಲ್ಲಿ ಶೃಂಗೇರಿಯಲ್ಲಿದ್ದ, ಶ್ರೀ ಶ್ರೀ ತೃತೀಯ ನರಸಿಂಹ ಭಾರತಿಗಳ ಶಿಷ್ಯರೂ, ಶೃಂಗೇರಿ ಪೀಠದ ಅಧಿಪತಿಗಳೂ ಆಗಿದ್ದ ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮಿಗಳು ಕೂಡಲಿ ಕ್ಷೇತ್ರಕ್ಕೆ ಬಂದು ಇಲ್ಲಿದ್ದ “ಹಳೆಯ ಮಠ”ದಲ್ಲಿ ವಾಸ ಮಾಡಬೇಕಾದ ಪ್ರಸಂಗವೊದಗಿತು. ( “ಹಳೆಯ ಮಠ” ಎಂದು ಅನೇಕ ದಾಖಲಾತಿಗಳಲ್ಲಿ ಹಾಗೂ ಪುಸ್ತಕಗಳಲ್ಲಿ ಉಲ್ಲೇಖಿಸಲ್ಪಟ್ಟ, ಕೂಡಲಿಯಲ್ಲಿದ್ದ ಹಳೆಯ ಮಠವು ಯಾವಾಗ ನಿರ್ಮಾಣವಾಗಿದ್ದು, ಯಾರು ಸ್ಥಾಪಿಸಿದ್ದು, ಏತಕ್ಕಾಗಿ ಕಟ್ಟಿಸಿದ್ದು ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.)
ಶ್ರೀ ವಿದ್ಯಾರಣ್ಯ ಭಾರತಿಗಳು ಶೃಂಗೇರಿಯನ್ನು ಬಿಟ್ಟು ಬಂದ ನಂತರ ಶೃಂಗೇರಿಯಲ್ಲಿದ್ದ ಸ್ಥಳೀಯ ಮಹಾಜನರೂ, ಸಂಸ್ಥಾನದ ಆಡಳಿತ ವರ್ಗದವರೂ, ಮಠದ ಶಿಷ್ಯರೂ ಸೇರಿ ಓರ್ವರಿಗೆ ದೀಕ್ಷೆ ಮತ್ತು ಶ್ರೀ ರಾಮಚಂದ್ರ ಭಾರತಿಗಳು ಎಂಬ ನಾಮಧೇಯವನ್ನು ನೀಡಿ , ಅವರನ್ನು ಶೃಂಗೇರಿಯ ಗುರುಪೀಠದ ಮೇಲೆ ಕುಳ್ಳಿರಿಸಿ ಪಟ್ಟಗಟ್ಟಿದರು.
ಕೆಲವು ಸಮಯದ ನಂತರ (1576 ಇಸವಿ ಧಾತೃ ಸಂವತ್ಸರದಲ್ಲಿ) ಯಾತ್ರೆಯಿಂದ ಮರಳಿ ಶೃಂಗೇರಿಗೆ ಹೊರಟ ಶ್ರೀ ಶ್ರೀ ತೃತೀಯ ನರಸಿಂಹ ಭಾರತಿ ಸ್ವಾಮಿಗಳಿಗೆ ಮಾರ್ಗದಲ್ಲಿರುವಾಗಲೇ ತಮ್ಮ ಪೀಠದಲ್ಲಿ ಈಗಾಗಲೇ ಬೇರೆಯವರು ಆಸೀನರಾಗಿದ್ದಾರೆ ಹಾಗೂ ತಮ್ಮ ಶಿಷ್ಯರಾದ ವಿದ್ಯಾರಣ್ಯ ಭಾರತಿಗಳು ಕೂಡ ಶೃಂಗೇರಿಯಲ್ಲಿಲ್ಲ ಎಂಬ ವರ್ತಮಾನ ತಿಳಿಯಿತು. ಆಗ ಅವರು ಶೃಂಗೇರಿಗೆ ಹೋಗದೇ ಶ್ರೀ ಕೂಡಲಿ ಕ್ಷೇತ್ರಕ್ಕೆ ಬಂದರು. ಅದೇ ಸಂದರ್ಭದಲ್ಲಿ ಹಳೆಯ ಮಠದಲ್ಲಿ ವಾಸ್ತವ್ಯ ಹೂಡಿದ್ದ ತಮ್ಮ ಶಿಷ್ಯರಾದ ಶ್ರೀ ವಿದ್ಯಾರಣ್ಯ ಭಾರತಿಗಳ ಭೇಟಿಯಾಗಿ, ಶೃಂಗೇರಿಯಲ್ಲಿ ನಡೆದ ವಿಷಯವೆಲ್ಲವೂ ಪೂರ್ಣವಾಗಿ ತಿಳಿಯಿತು.
ಶ್ರೀ ಶ್ರೀ ತೃತೀಯ ನರಸಿಂಹ ಭಾರತಿ ಸ್ವಾಮಿಗಳು ಕೂಡಲಿಗೆ ಬಂದಿರುವ ವಿಷಯವನ್ನು ತಿಳಿದ ತರೀಕೆರ, ಕೆಳದಿ, ಬಸವಾಪಟ್ಟಣ, ಚನ್ನಗಿರಿ, ಚಿತ್ರದುರ್ಗ, ಹರಪನಹಳ್ಳಿ, ಸಂತೇಬೆನ್ನೂರು, ಇತ್ಯಾದಿ ಸೀಮೆಗಳ ಪಾಳೆಯಗಾರರು ಕೂಡಲಿಗೆ ಬಂದರು. ವಿಜಯನಗರ ಪತನವಾದ್ದರಿಂದ ವಿವಿಧ ರಾಜರನ್ನು ಹಾಗೂ ಪಾಳೆಯಗಾರರನ್ನು ಒಗ್ಗೂಡಿಸುವ ಒಂದು ಕೇಂದ್ರದ ಅಗತ್ಯವಿದ್ದ ಆ ಸಮಯದಲ್ಲಿ ಎಲ್ಲರೂ ಸ್ವಾಮಿಗಳಲ್ಲಿ ಮೊರೆಹೋದರು. ಶ್ರೀಗಳವರು ಶೃಂಗೇರಿಗೆ ಹೋಗಬೇಕಾದ ಆಗತ್ಯವಿಲ್ಲವೆಂದೂ, ಕೂಡಲಿಯಲ್ಲಿಯೇ ನೆಲೆಸಿ, ತಮ್ಮನ್ನು ಅನುಗ್ರಹಿಸಬೇಕೆಂದೂ ಕೇಳಿಕೊಂಡರು. ಅವರಿಗೆ ಬೇಕಾದ ಎಲ್ಲ ಅನುಕೂಲಗಳನ್ನು ಇಲ್ಲಿಯೇ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಆ ವೇಳೆಗಾಗಲೇ ಶೃಂಗೇರಿಯ ಪೀಠಕ್ಕೆ ಮತ್ತೊಬ್ಬ ಪೀಠಾಧಿಪತಿಗಳನ್ನು ನೇಮಿಸಿಕೊಂಡಿರುವುದು ತಿಳಿದಿತ್ತಾದ್ದರಿಂದ ನರಸಿಂಹ ಭಾರತಿಗಳು ಕೂಡಲಿಯಲ್ಲಿಯೇ ನೆಲೆಸುವ ದೃಢ ನಿರ್ಧಾರ ಮಾಡಿದರು.
ಶ್ರೀ ನರಸಿಂಹ ಭಾರತಿಗಳ ಈ ನಿರ್ಧಾರದಿಂದ ಸಂತೋಷಗೊಂಡ, ಬಸವಾಪಟ್ಟಣದ ಪಾಳೆಯಗಾರನಾದ ಹನುಮಪ್ಪನಾಯಕನು, ಕೂಡಲಿಯಲ್ಲಿ ಹಳೆಯ ಮಠವಿದ್ದ ಜಾಗದಲ್ಲಿ ದೊಡ್ಡ ಮಠವನ್ನೂ ಶ್ರೀ ವಿದ್ಯಾಶಂಕರ ದೇವಾಲಯವನ್ನೂ ಹೊಸತಾಗಿ ಕಟ್ಟಿಸಿಕೊಟ್ಟನು. ಶ್ರೀ ಮಠದ ನಿತ್ಯ ಕೈಂಕರ್ಯಗಳಿಗಾಗಿ ಸಾಕಷ್ಟು ಭೂಮಿಯನ್ನು ಮಠಕ್ಕೆ ದಾನವಾಗಿ ಕೊಟ್ಟನು. ಅಲ್ಲದೆ ಮಠದ ಸಿಬ್ಬಂದಿ ವರ್ಗದವರ ವಾಸಕ್ಕಾಗಿ ಕೆಲವು ಮನೆಗಳನ್ನು ಕಟ್ಟಿಸಿಕೊಟ್ಟರು. ಹಾಗಾಗಿ ಶ್ರೀ ನರಸಿಂಹ ಭಾರತಿ ಸ್ವಾಮಿಗಳವರು ಶಾಲಿವಾಹನ ಶಕೆ ೧೪೯೮ನೆಯ ಧಾತೃಸಂವತ್ಸರದ ಕಾರ್ತಿಕ ಶುಕ್ಲಪ್ರತಿಪತ್, ಬಲಿಪಾಡ್ಯಮಿ, ಸೋಮವಾರ (26 ಅಕ್ಟೋಬರ್ 1576) ಸುಮುಹೂರ್ತದಲ್ಲಿ ಕೂಡಲಿ ಕ್ಷೇತ್ರದಲ್ಲಿ, ದಕ್ಷಿಣಾಮ್ನಾಯ ಜಗದ್ಗುರು ಪೀಠವನ್ನು ಸ್ಥಾಪಿಸಿದರು. ಇದರ ನೆನಪಿಗಾಗಿ ಇಂದಿಗೂ ಕೂಡಲಿಯ ಶ್ರೀಮಠದಲ್ಲಿ ಪ್ರತಿವರ್ಷ ಕಾರ್ತಿಕ ಶುದ್ಧ ಪ್ರತಿಪದೆಯ ದಿನ ಮಹಾಪೂಜೆ, ಮಹಾಭಿಷೇಕ ಮುಂತಾದ ವಿಶೇಷ ಕಾರ್ಯಕ್ರಮಗಳ ಸಂಪ್ರದಾಯವಿದೆ. ಅಂದಿನಿಂದ ಇಂದಿನವರೆಗೆ ಈ ಪೀಠದಲ್ಲಿ ಯತಿಗಳ ಪರಂಪರೆಯು ಮುಂದುವರೆದುಕೊಂಡು ಬರುತ್ತಿದ್ದು ಪ್ರಸ್ತುತ 72ನೇ ಪೀಠಾಧಿಪತಿಗಳಾಗಿರುವವರು ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಸ್ವಾಮಿಗಳು.
ಆದಿ ಶಂಕರರು ವೇದಗಳ ಸಂರಕ್ಷಣೆಗೆ ಹಾಗೂ ಪ್ರಚಾರಕ್ಕಾಗಿ ಭಾರತದ ಮೂಲೆ ಮೂಲೆಗಳಲ್ಲಿ ಆಮ್ನಾಯ ಪೀಠಗಳ ಸ್ಥಾಪನೆ ಮಾಡಿದರು. ಹೀಗೆ ಸನಾತನ ಧರ್ಮವನ್ನು ಸಂರಕ್ಷಣೆ ಮಾಡುವ ಮೂಲಕ ಮನುಕುಲಕ್ಕೆ ಲಾಭ ದೊರಕಲಿ ಮತ್ತು ಜ್ಞಾನ ಪರಂಪರೆ ಶಾಶ್ವತವಾಗಿರಲಿ ಎಂಬುದು ಅವರ ಆಶಯ. ಈ ಸಂಪ್ರದಾಯವನ್ನು ಅನುಸರಿಸುತ್ತಾ ಕೂಡಲಿ ಮಹಾಸಂಸ್ಥಾನವು ಪ್ರಾಚೀನ ಕ್ರಮವನ್ನು ಅನುಸರಿಸುವ ವೇದ ಪಾಠಶಾಲೆಗಳನ್ನು ನಿರ್ಮಿಸುತ್ತಿದೆ. ಗೋಶಾಲೆಗಳು ಪಾಠಶಾಲೆಗಳ ಅವಿಭಾಜ್ಯ ಅಂಗ, ಹಾಗಾಗಿ ಅವುಗಳ ಸ್ಥಾಪನೆ, ಗೋವುಗಳ ರಕ್ಷಣೆ ಕೂಡ ಜೊತೆಜೊತೆಗೇ ಸಾಗಿದೆ.ಮಹಾಸಂಸ್ಥಾನವು ಈ ಕೆಳಗಿನ ಸಂಸ್ಥೆಗಳನ್ನು ಸ್ಥಾಪಿಸಿ ಸಾಂಗೋಪಾಂಗವಾಗಿ ನಡೆಸಿಕೊಂಡು ಬರುತ್ತಿದೆ.
- ಶ್ರೀ ವಿದ್ಯಾಭಿನವ ವಾಲುಕೇಶ್ವರ ಭಾರತೀ ಗುರುಕುಲ, ಕೂಡಲಿ
- ಶ್ರೀ ಸಚ್ಚಿದಾನಂದ ಶಂಕರ ಭಾರತೀ ವೇದ ಭವನ, ವಾರಾಣಸಿ (ಕಾಶಿ)
- ವೇದಶಾಸ್ತ್ರ ಸಂಶೋಧನಾ ಕೇಂದ್ರ, ವಾರಾಣಸಿ (ಕಾಶಿ)
- ಭಾರತೀ ಗೋಶಾಲೆ, ಕೂಡಲಿ
ಈ ರೀತಿಯಾಗಿ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕೂಡಲಿ ಪೀಠವು ಭಾರತೀಯ ಜ್ಞಾನ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪುನರುತ್ಥಾನಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಜ್ಞಾನಸುಧಾಮೃತವನೆತ್ತಿನಿಂತ ಶಾರದೆಯ ಪುಣ್ಯಕ್ಷೇತ್ರವಾದ ಕೂಡಲಿ ಪೀಠದ ದರುಶನವ ಪಡೆಯಬೇಕೆಂದವರು ಶಿವಮೊಗ್ಗೆಯಿಂದ ಕೇವಲ 15 ಕಿಲೋಮೀಟರ್ ದೂರ ಸಾಗಿದರೆ ಸಾಕು. ಆಕೆಯ ಮಡಿಲಲ್ಲಿ ನೀವಿರುತ್ತೀರಿ.
ವಿಷಯ ಸಂಗ್ರಹ
(1) तुङ्गभद्रास्तुतिः tuṅgabhadrāstutiḥ
(2) ಕೂಡಲಿ ಮಠದ ಸಂಕ್ಷಿಪ್ತ ಇತಿಹಾಸ: ಲೇಖಕ ವಿಷ್ಣುತೀರ್ಥ
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.