close logo

ಅ ಆ ಇ ಈ ಕನ್ನಡ ಪದಗಳಿಗೆಲ್ಲಿಂದ ಬಂದವು

ನಾವು ಮೊದಲಿಗೆ ಕನ್ನಡದ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಅ ಆ ಇ ಈ ಎಲ್ಲಿಂದ ಬಂದವು? ಅವನ್ನು ಮಾಡಿದವರು ಯಾರು? ಈ ರೀತಿ ಪೋಣಿಸಿದವರು ಯಾರು? ಇದನ್ನೆಲ್ಲಾ ನಮಗೆ ಈಗಿನ ಪಠ್ಯಕ್ರಮದಲ್ಲಿ ಹೇಳುವುದೆ ಇಲ್ಲ. ಹಾಗಾಗಿ ನಾನು ಅದರ ಮೂಲ ಹುಡುಕುತ್ತ ಕೆಲಕಾಲ ಆಯಿತು. ಅ ಆ ಇ ಈ ಭಾರತೀಯ ಭಾಷೆಗಳಿಗೆಲ್ಲಾ  ಸುಮಾರಾಗಿ ಒಂದೆ. ಬರೆಯುವ ಕ್ರಮವೂ ಒಂದೆ. ಅಕ್ಷರದ ಚಿತ್ರ(ಲಿಪಿ) ಮಾತ್ರ ಬೇರೆ. ಹಾಗಾದರೆ ಅದರ ಪ್ರಾಚೀನ ಉಲ್ಲೇಖ ಎಲ್ಲಿ? ಅದು ಹಾಗೇ ಏಕೆ? ಇವನ್ನು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಿದ್ದೇನೆ. ಇವು ನಾವು ತಿಳಿದುಕೊಳ್ಳಲೇ ಬೇಕಾದ “ಹೊಸ” ವಿಷಯಗಳು.

ಅತಿಪ್ರಾಚೀನ ಎನಿಸಿದ ಭಾರತೀಯ ಜ್ಞಾನದ ಸಂಗ್ರಹವಾದ ಋಗ್ವೇದದ ಐತರೇಯ ಆರಣ್ಯಕದಲ್ಲಿ (2.2.4) ಮೊಟ್ಟಮೊದಲನೆಯದು ಎನ್ನಬಹುದಾದ ಅಕ್ಷರ ಸ್ವರ ವರ್ಣಗಳ ಉಲ್ಲೇಖ ಇದೆ.

ತದ್ವಾ ಬೃಹತೀಸಹಸ್ರಂ ಸಂಪನ್ನಂ ತಸ್ಯ ಯಾನಿ ವ್ಯಂಜನಾನಿ ತಚ್ಛರೀರಂ ಯೋ ಘೋಷಃ ಸ ಆತ್ಮಾ ಯ ಊಷ್ಮಾಣಃ ಸ ಪ್ರಾಣಃ ಇತಿ[೧]
ಐತರೇಯ ಆರಣ್ಯಕ (2.2.4)

ಈ ಬೃಹತೀ ಛಂದಸ್ಸಿನ ಮಂತ್ರಗಳಿಗೆ ವ್ಯಂಜನಗಳು ಶರೀರ, (ಘೋಷಃ) ಸ್ವರಗಳು ಆತ್ಮ, ಊಷ್ಮಾಣಗಳು (ಶ ಷ ಸ ಹ) ಪ್ರಾಣ ಎಂಬುದು ಇದರ ಅರ್ಥ (ವೇದಮಂತ್ರಾರ್ಥ ಆಚಾರ್ಯ ರಾಮಕೃಷ್ಣ ಭಟ್ ಮೂಡೆಬೈಲು ಅವರಿಂದ ಪರಿಷ್ಕೃತ). ಆಲ್ಲದೇ ಮೊದಲಿಂದ ಹಿಡಿದು ವೇದದ ಮಂತ್ರಗಳಲ್ಲಿ ಇರುವುದೂ ಇಂದಿಗೂ ಬಳಕೆಯಲ್ಲಿರುವ ಅ ಇ ಏ ಇತ್ಯಾದಿ ಉಚ್ಚಾರವೇ ಆದರೂ ಅದರಲ್ಲಿ ಬಳಕೆಯಾಗುವ ಅಕ್ಷರಮಾಲೆ ಕ ಖ ಗ ಘ ಙ ಹೀಗೆ ಇದೇ ಇಂದಿರುವ ಕ್ರಮದಲ್ಲೇ ಪೋಣಿಸಲ್ಪಟ್ಟಿದ್ದವೆಂದು ಆಧಾರ ಸಿಗುವುದಿಲ್ಲ. ಆದರೆ ಈ ರೀತಿ ಸ್ಪಷ್ಟವಾದ ವಿಭಜನೆ ನೋಡಿದರೆ ಈಗ ಬಳಕೆಯಲ್ಲಿರುವ ಕ್ರಮದಲ್ಲೆ ಪೋಣಿಸಲ್ಪಟ್ಟಿದ್ದವೆಂದು ಊಹಿಸಬಹುದು. ಅಷ್ಟೆ ಅಲ್ಲ ಇದಕ್ಕೂ  ಬಹಳ ಹಿಂದೆಯೇ ಈ ಕಲ್ಪನೆಗಳು ಬಲಿಷ್ಟವಾಗಿದ್ದವು ಎಂದೇ ಗ್ರಹಿಸಬೇಕಾಗುತ್ತದೆ.

ಆದರೆ ಇಂದು ಬಳಕೆಯಲ್ಲಿರುವ ಕ್ರಮದಲ್ಲೇ ಅಕ್ಷರಗಳು ಪ್ರತ್ಯಕ್ಷವಾಗಿ ಎಲ್ಲಿ ವಿವರಿಸಲ್ಪಟ್ಟಿವೆ ಎಂದು ನೋಡಿದಾಗ ಅದು ಅತಿಪ್ರಾಚೀನವಾದ ಋಗ್ವೇದದ ಶಿಕ್ಷಾಗ್ರಂಥವಾದ ಸುಮಾರು ೩೦೦೦ ವರ್ಷದ ಹಿಂದೆ ಶೌನಕ ಮಹರ್ಷಿಗಳು ಬೋಧಿಸಿದ ಋಗ್ವೇದದ ಪ್ರಾತಿಶಾಖ್ಯದಲ್ಲಿ  ಕಾಣಿಸುತ್ತದೆ. ಋಗ್ವೇದದ ಪ್ರಾತಿಶಾಖ್ಯಕ್ಕೆ ಉವ್ವಾಟರು ಬರೆದ ಭಾಷ್ಯದಲ್ಲಿ ಇದರ ವಿವರಣೆಯೂ ಇದೆ. ಋಗ್ವೇದದ ಪ್ರಾತಿಶಾಖ್ಯದಲ್ಲಿ  (ಋಕ್ಪ್ರಾತಿಶಾಖ್ಯದಲ್ಲಿ) ಉ ಏ ಐ ಓ ಔ,  ಕ ಖ ಗ ಘ ಙ,  ಚ ಛ ಜ ಝ ಞ ಇತ್ಯಾದಿ ಇಂದು ಬಳಸುವ ಕ್ರಮದಲ್ಲೆ ಪೋಣಿಸಲ್ಪಟ್ಟಿದ್ದು ಕಾಣಿಸುತ್ತದೆ. ಶೌನಕ ಮಹರ್ಷಿಗಳ ಋಕ್ಪ್ರಾತಿಶಾಖ್ಯದ ಸೂತ್ರವನ್ನು ಆಧಾರಕ್ಕಾಗಿ ಕೆಳಗೆ ಕೊಟ್ಟಿದ್ದೇನೆ. ನೋಡಿ. ಇದರ ಅರ್ಥ ಅ ಋ ಇ ಉ ಎ ಐ ಓ ಔ ಇವು ಸ್ವರಗಳು ಎಂದು. ಇದರಲ್ಲಿ ದೀರ್ಘಸ್ವರ ಇತ್ಯಾದಿ ಬೇರೆ ಮುಂದೆ ಹೇಳಿದೆ.

ಸುಮಾರು ೩೦೦೦ ವರ್ಷದ ಹಿಂದೆ ಶೌನಕ ಮಹರ್ಷಿಗಳು ಬೋಧಿಸಿದ ಋಕ್ಪ್ರಾತಿಶಾಖ್ಯಕ್ಕೆ ಉವ್ವಾಟರು ಬರೆದ ಭಾಷ್ಯದಲ್ಲಿ ಬರುವ ಅ ಆ ಇ ಈ ವಿವರಣೆ. ಇದು ವೇದದ ಶಿಕ್ಷಾ ಗ್ರಂಥಗಳಲ್ಲಿ ಅತಿ ಪ್ರಾಚೀನ ಎಂದು ನಂಬಿಕೆ [2].
 

ಇದಲ್ಲದೇ ಅಷ್ಟೆ ಪ್ರಾಚೀನವಾದ ಯಜುರ್ವೇದದ ತೈತ್ತಿರೀಯ ಪ್ರಾತಿಶಾಖ್ಯದಲ್ಲೂ ಈ ವಿವರ ಇದೆ. ಯ,ರ,ಲ,ವ ಇವು ಅಂತಸ್ಥ ವ್ಯಂಜನಗಳು, ಉಪದ್ಮಾನೀಯ ಯಾವುವು, ಶ ಷ ಸ ಹ ಊಷ್ಮ ಸಂಜ್ಞೆಗಳು, ಸ್ಪರ್ಶ ವ್ಯಂಜನಗಳಲ್ಲಿ ಕಚಟತಪ ಎಂಬ ಐದು ವರ್ಗಗಳು. ಜಿಹ್ವಾಮೂಲೀಯ, ಅನುಸ್ವಾರ, ಅನುನಾಸಿಕ, ಹೀಗೆ ಅತಿ ವಿವರವಾಗಿ ವೇದದ ಶಿಕ್ಷಾಗ್ರಂಥಗಳಲ್ಲಿ ಕನ್ನಡದಲ್ಲಿ ಬಳಕೆಯಾಗುವ ಅಕ್ಷರಗಳದೇ ವಿವರಣೆ ಸಂಸ್ಕೃತದಲ್ಲಿ ಇದೆ.

ಷೋಡಶಾದಿತ: ಸ್ವರಾ: – 5ನೇ ಸೂತ್ರ , ಶೇಷಾ ವ್ಯಂಜನಾನಿ: – 6ನೇ ಸೂತ್ರ
ತೈತ್ತಿರೀಯ ಪ್ರಾತಿಶಾಖ್ಯ – ಕೃಷ್ಣಯಜುರ್ವೇದದ ಶಿಕ್ಷಾಗ್ರಂಥ. 

ಪ್ರಾತಿಶಾಖ್ಯಗಳು ವೇದದಷ್ಟು ಪುರಾತನ ಅಲ್ಲ, ಅದರಲ್ಲಿ ಪ್ರಕ್ಷಿಪ್ತ (ನಂತರ ಸೇರಿಸಿದವು) ಇದೆ ಎಂದು ಕೆಲವರು ಹೇಳಿದರೆ, ಶಿಕ್ಷಾ/ಪ್ರಾತಿಶಾಖ್ಯಗಳು ಋಗ್ವೇದದ ಕಾಲದಲ್ಲೇ ಇದ್ದವು ಮತ್ತು ಸ್ವರ ವ್ಯಂಜನಗಳ ವಿಭಜನೆ ಎಲ್ಲವೂ ಇದ್ದವು ಎಂದು ಹಲವರು ನಂಬುತ್ತಾರೆ (ಹಾರ್ಟ್ಮುಟ್ ಶ್ಕಾರ್ಪೆ). ಆದರೆ ಇದರಲ್ಲೇ ಕೆಲವರು ಇದು ಕೇವಲ ಮಾತಿಗೆ ಸಂಬಂಧಿಸಿದ್ದೇ ಹೊರತು ಅಕ್ಷರಗಳಿಗೆ ಬರವಣಿಗೆಗೆ ಸಂಬಂಧಿಸಿದ್ದು ಅಲ್ಲ, ಬರವಣಿಗೆ ಆಗ ಇರಲೇ ಇಲ್ಲ ಎನ್ನುವ ನಿಲುವನ್ನೂ ತಳೆಯುತ್ತಾರೆ(ಹಾರ್ಟ್ಮುಟ್ ಶ್ಕಾರ್ಪೆ ಸೇರಿ). ಆದರೆ ನಮ್ಮ ಪರಂಪರೆಯ ಮತ ಸ್ಪಷ್ಟವಾಗಿದೆ – ಇವು ಬರಿ ಮಾತಿಗಲ್ಲ, ಬರವಣಿಗೆಗೆ ಸಂಭಂದಿಸಿದ್ದು, ಅಕ್ಷರಗಳಿಗೆ ಸಂಭಂದಿಸಿದ್ದು. ವಿಶ್ವದಲ್ಲೇ ಅತ್ಯಂತ ವಿಸ್ತಾರವಾದ ಬಹುಬಾಷೆಗಳಲ್ಲಿ ಬಳಕೆಗೆ ಮೂಲವಾದ ಬರವಣಿಗೆಯ ವ್ಯವಸ್ಥೆಯನ್ನು (writing system) ವೇದಾಂಗಗಳು ಸ್ಪಷ್ಟವಾಗಿ ವಿವರಿಸುವಾಗ ಅದು ಬರವಣಿಗೆಗಲ್ಲ ಬರಿ ಮಾತಿಗೆ ಮಾತ್ರ ಹೇಳಿದ್ದು ಎನ್ನುವುದು ಸರಿಯಾಗುವುದಿಲ್ಲ. ಇವತ್ತಿಗೂ ಭಾರತದ ಎಲ್ಲ ಭಾಷೆಗಳೂ ಈ ವ್ಯವಸ್ಥೆಯನ್ನೇ ಯಥಾವತ್ತಾಗಿ ಬಳಸುತ್ತಿರುವಾಗ ಇದು ಬರೆಯಲೆಂದು ಮಾಡಿದ್ದಲ್ಲ ಎನ್ನುವವರು ಆಧಾರ ಕೊಡಬೇಕಾಗುತ್ತದೆ ಅಷ್ಟೆ. ವೇದವೇದಾಂಗಗಳಲ್ಲಿನ ಅಕ್ಷರವ್ಯವಸ್ಥೆ ಬರವಣಿಗೆಗೂ ಮಾಡಿದ್ದು ಎನ್ನುವುದು ಸ್ವತಃಸಿದ್ಧ. ಹಾಗಾಗಿ, ವೇದಮೂಲದಲ್ಲೇ ಬರೆಯುವ ಅಕ್ಷರಗಳಿದ್ದವು ಎಂದೇ ಒಪ್ಪಬೇಕಾಗುತ್ತದೆ.

ಈ ಅಕ್ಷರಗಳು ಶಿವ ತಾಂಡವ ಮಾಡುತ್ತಾ ಡಮರುವನ್ನು ಬಾರಿಸಿದಾಗ ಉದ್ಭವವಾದವು ಎಂಬುದು ಪ್ರಾಚೀನರ ಸುಂದರವಾದ ನಂಬಿಕೆಯೊಂದಿದೆ. ಹಾಗಾಗಿ ಪಾಣಿನಿ ಮಹರ್ಷಿಯ ವ್ಯಾಕರಣದಲ್ಲಿ ಶಿವಸೂತ್ರ ಎಂದು ಅ ಆ ಇ ಈ ಗೆ ಕರೆಯುತ್ತಾರೆ. ಒಟ್ಟು 14 ಮಹೇಶ್ವರ/ಶಿವ ಸೂತ್ರಗಳಿದ್ದಾವೆ. ಆದರೆ ವ್ಯಾಕರಣ ಮತ್ತು ಪೊನೆಟಿಕ್ ಕಾರಣಗಳಿಗಾಗಿ ಪಾಣಿನಿ ಅ ಆ ಇ ಈ ಗೆ ಬದಲು ಅ ಇ ಉ ಣ್, ಋ ಲೃ ಕ್ ಇತ್ಯಾದಿಯಾಗಿ ವಿಭಜನೆ ಮಾಡಿದ್ದಾನೆ. ಗಂಟಲಿಂದ ತುಟಿಯವರೆಗೆ ಬೇರೆ ಬೇರೆ ಸ್ಥಳಗಳಲ್ಲಿ ಉಚ್ಚಾರವಾಗುವ ಈ ಅಕ್ಷರಗಳನ್ನು ವ್ಯವಸ್ಥಿತವಾಗಿ ಸಂಯೋಜಿಸದಮೇಲೆ ಇಂದಿರುವ ಅ ಆ ಇ ಈ ಪೋಣಿಕೆ ಬಂದಿದೆ. ಓಂ ಎಂದಾಗ ಅ ಉ ಮ ಗಂಟಲಿಂದ ಆರಂಭಿಸಿ ಬಾಯಿ ಮತ್ತು ತುಟಿಯಿಂದ ಉಚ್ಚರಿಸಲ್ಪಡುತ್ತವೆ ಎಂಬುದನ್ನು ಗಮನಿಸಿ! ಅಂದರೆ ಅಕ್ಷರಗಳ ವಿಭಜನೆ ಕನ್ನಡದಲ್ಲಿ ಮತ್ತು ಸಂಸ್ಕೃತದಲ್ಲಿ ಅತಿ ವೈಜ್ಞಾನಿಕವಾಗಿ ಇದೆ ಎಂದೇ ಅರ್ಥ. ಇದು ಇಂಗ್ಲಿಷ್ ಇತ್ಯಾದಿ ಭಾಷೆಗಳಿಗಿಂತ ವಿಶೇಷವಾಗಿವೆ. ಇಂಗ್ಲಿಷ್ನಲ್ಲಿ ಇಷ್ಟು ಸ್ಪಷ್ಟವಾದ ವಿವರ ವಿಂಗಡನೆ ಇನ್ನೂ ಇಲ್ಲ. ಇದಲ್ಲದೇ ಇಂಗ್ಲಿಷಿನಲ್ಲಿ syllabic training ಇಲ್ಲ. ಅಕ್ಷರಗಳ ಜೋಡನೆಯಿಂದ ಶಬ್ದ ರಚನೆ ಮಾಡಲು ಬೇಕಾದ ಕ್ರಮವೇ ಇಲ್ಲ – ಅದನ್ನು ಮಕ್ಕಳಿಗೆ ಕಲಿಸುವುದಿಲ್ಲ. ಎಲ್ಲ ಭಾರತೀಯ ಭಾಷೆಗಳಲ್ಲಿ syllabic training ಇದೆ. ನಮ್ಮ ಮಕ್ಕಳಿಗೆ ಕನ್ನಡ ಅಥವಾ ಬೇರೆ ಒಂದಾದರೂ ಭಾರತೀಯ ಭಾಷೆಯನ್ನು ಕಲಿಸದಿದ್ದರೆ ನಾವು ಇವೆಲ್ಲ ವೈಜ್ಞಾನಿಕ ವಿಷಯಗಳಿಂದ ಅವರನ್ನು ವಂಚಿಸಿದಂತಾಗುತ್ತದೆ. ಅಲ್ಲವೇ?

ಭಾರತೀಯ ವ್ಯಾಕರಣ ವಿಶ್ವದಲ್ಲೇ ಅತಿ ಪುರಾತನವಾದ್ದು ಎನ್ನುವುದನ್ನು ಇಲ್ಲಿ ನೆನೆಯಲು ಇದು ಸೂಕ್ತ ಸಮಯ.  ಕಾರಣ ಇಷ್ಟೆ. ನಮ್ಮಲ್ಲಿ ವ್ಯಾಕರಣ ಎಂಬುದು ವಾಕ್ಯದಲ್ಲಿ ನಾನಾ ವಿಧದ ಪದಗಳ ಸ್ಥಾನ ಸೂಚಿಸುವ ಶಾಲಾಮಕ್ಕಳಿಗೆ ಹೇಳಿಕೊಡುವ ಪಠ್ಯಪುಸ್ತಕದ ವಿಚಾರವಲ್ಲ. ನಮ್ಮ ದೇಶದ ಶ್ರೇಷ್ಟ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಮಹಾಮಹೋಪಾಧ್ಯಾಯ ನಡಹಳ್ಳಿಯ ರಂಗನಾಥ ಶರ್ಮರು ‘ಭಾರತೀಯ ಸಂವೇದನೆ’ ಎಂಬ ಪಾದೇಕಲ್ಲು ನರಸಿಂಹ ಭಟ್ಟರ ಲೇಖನಕ್ಕೆ ಪ್ರತಿಕ್ರಿಯೆ ನೀಡುತ್ತಾ, ಅತಿ ಸೂಕ್ಷ್ಮವೂ ಆಳವೂ ಆದ ಅರ್ಥಬೋಧಕ ಶಬ್ದಶಕ್ತಿಗಳೇ ಮೊದಲಾದವನ್ನು ಗುರುತಿಸುವ ಘನವಾದ ಭಾಷಾತತ್ವಶಾಸ್ತ್ರವೇ ನಮ್ಮ ವ್ಯಾಕರಣ. ಇದು ಬರಿ grammar ಅಲ್ಲ ಎಂಬ ವಿಶೇಷವನ್ನು ತಿಳಿಯಹೇಳುತ್ತಾರೆ. ಇವು ನ್ಯಾಯ, ಪೂರ್ವಮೀಮಾಂಸೆ ಮತ್ತು ಸಂಸ್ಕೃತ ವ್ಯಾಕರಣ ಶಾಸ್ತ್ರಗಳಲ್ಲಿ ಇವೆ. ಇವೆಲ್ಲ ನಮಗೆ ನಮ್ಮ ಮಕ್ಕಳಿಗೆ ತಿಳಿಯಬೇಡವೇ? ನಮ್ಮ ಪಠ್ಯಗಳಲ್ಲಿ ಇವನ್ನು ಹೇಳದಿದ್ದರೆ ಹೇಗೆ ತಿಳಿಯಲುಸಾಧ್ಯ?

ಹಾಗೆಯೇ ಜರ್ಮನಿಯ ಕಿಟ್ಟೆಲ್ ಮೊದಲ ಕನ್ನಡದ ಪದಕೋಶ ಅಥವಾ dictionary ಬರೆದನೆಂಬ ಪ್ರಚಾರ ಇದೆ. ಇದು ತಪ್ಪು. ಕನ್ನಡದಲ್ಲಿ ಪ್ರಾಚೀನ ಕಾಲದಿಂದಲೂ ನಿಘಂಟುಗಳೂ ಇದ್ದವು. 10ನೇ ಶತಮಾನದಲ್ಲಿ ರನ್ನ ಕಂದ ಎಂಬುದು ಕನ್ನಡದಲ್ಲಿ ಲಭ್ಯವಿರುವ ಪ್ರಾಚೀನ ಪದಕೋಶ. ಇದು ಕಿಟ್ಟೆಲ್ಲರಿಗಿಂತ ಸುಮಾರು ಸಾವಿರ ವರ್ಷ ಮೊದಲು. ಭಾರತದಲ್ಲಿ ಸಾವಿರಾರು ವರ್ಷಗಳಿಂದ ನಿಘಂಟು ಅಲ್ಲದೇ ವಿಸ್ತಾರವಾದ ತಿಸಾರಸ್ ಬರೆಯುವ ಪರಿಪಾಠವೇ ಇತ್ತು. ಕಾಶ್ಯಪರು ಬರೆದರು ಎನ್ನುವ ವೈದಿಕ ನಿಘಂಟು ನಮಗೆ ಲಭ್ಯವಿರುವ ಭಾರತದ ಅತ್ಯಂತ ಪ್ರಾಚೀನ dictionary ಎಂದು ನಂಬಿಕೆ. ಅದಕ್ಕೆ ಯಾಸ್ಕ ಮಹರ್ಷಿಗಳು ಬರೆದ ನಿರುಕ್ತ ಗ್ರಂಥ ಲಭ್ಯವಿದೆ. ಯಾಸ್ಕರಿಗಿಂತ ಮೊದಲು ಅಂದರೆ ಸುಮಾರು ಇಂದಿಗೆ 2700 ವರ್ಷಗಳ ಹಿಂದೆ ಇನ್ನೂ ಅನೇಕ ವ್ಯಾಕರಣಕಾರರು ಇದ್ದರೂ ಎಂದು ಉಲ್ಲೆಖ ಲಭ್ಯವಿದೆ. ಅವರ ಹೆಸರು ಹೀಗಿದೆ: ಅಗ್ರಯಣ, ಔದುಂಬರಾಯಣ, ಔಪಮನ್ಯವ, ಔರ್ಣವಾಭ, ಕಾಥಕ್ಯ, ಕೌತ್ಸ, ಗಾಗ್ರ್ಯ, ಗಾಲಮ, ಧರ್ಮಶಿರಸ್, ವಾಷ್ರ್ಯಾಯಣಿ, ಶತವಲಾಕ್ಷ ಮೌದ್ಗಲ್ಯ, ಶಾಕಟಾಯನ, ಶಾಕಪೂಣಿ, ಸ್ಥೌಲಾಷ್ಠೀವೀ ಇತ್ಯಾದಿ [3]. ಇನ್ನು ಸಂಸ್ಕೃತ ನಿಘಂಟು ಬರೆದವರು ವರರುಚಿ, ಬಾಗುರಿ, ಶಾಶ್ವತ, ಅಮರಸಿಂಹ, ಗೋಪಾಲಕ, ಧನಂಜಯ, ಹಲಾಯುಧ ಇತ್ಯಾದಿ. ಕನ್ನಡದ ಶಬ್ದಕೋಶಗಳೂ ಬಹಳ ಇದ್ದವು. ಮುಮ್ಮಡಿ ಕೃಷ್ಣರಾಜನ ಚಾಮುಂಡಿಕಾ ಲಘು ನಿಘಂಟು(1848), ಕರ್ನಾಟಕ ಶಬ್ದಸಾರ, ಲಿಂಗಮಂತ್ರಿಯ ಕಬ್ಬಿಗರ ಕೈಪಿಡಿ, ಶೃಂಗಾರ ಕವಿಯ ಕರ್ನಾಟಕ ಸಂಜೀವನ,ದೇಮೋತ್ತಮನ ನಾನಾರ್ಥರತ್ನಾಕರ, ಶಬ್ದರತ್ನಾಕರ, ಭಾರತ ನಿಘಂಟು, ಚೆನ್ನಕವಿಯ ನಾನಾರ್ಥ ಕಂದ, ಸೂರ್ಯಕವಿಯ ಕವಿ ಕಂಠಹಾರ(1600), ವಿರಕ್ತ ತೋಂಟದಾರ್ಯನ “ಕರ್ನಾಟಕ ಶಬ್ದಮಂಜರಿ”(1560), ಅಮೃತನಂದಿಯ “ಅಕಾರಾದಿ ವೈದ್ಯ ನಿಘಂಟು”, ಧನ್ವಂತರೀಯ ನಿಘಂಟು (1500),ಚತುರಾಸ್ಯ ಬೊಮ್ಮರಸನ ಚತುರಾಸ್ಯ ನಿಘಂಟು(1450), 2ನೆಯ ನಾಗವರ್ಮನ ಅಬಿಧಾನ ವಸ್ತುಕೋಶ, 2ನೆಯ ಮಂಗರಾಜನ ಅಬಿನವ ನಿಘಂಟು (1398). ಹೀಗೆ ಕನ್ನಡದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಶಬ್ದಕೋಶಗಳಿದ್ದವು ಎಂದು ಅಂದಾಜುಮಾಡಿದ್ದಾರೆ. ಶಬ್ದಾರ್ಥಮಂಜರಿ  ಶಬ್ದಮಣಿದರ್ಪಣ ಹೀಗೆ ಸುಮಾರು ಕನ್ನಡದ ಕೋಶಗಳು ಇದ್ದವು[4].

ಸಾರಾಂಶ ಹೇಳುವುದಾದರೆ ಭಾರತದ ಪ್ರಾಚೀನ ವೇದ ನಮ್ಮ ಕನ್ನಡದ ಇಂದಿನ ಅಕ್ಷರಗಳಿಗೆ ಮೂಲ. ಸಂಸ್ಕೃತ ಮತ್ತು ಕನ್ನಡದಲ್ಲಿ ಸಾವಿರಾರು ವರ್ಷಗಳಿಂದ ಶಬ್ದಕೋಶಗಳೂ ಇದ್ದವು. “ಪ್ರಕೃತಿಃ ಸಂಸ್ಕೃತಮ್ ತತ್ರ ಭವೇತ್ ಪಾಕೃತಂ” ಅಂದರೆ ಸಂಸ್ಕೃತ ಸಹಜವಾದ್ದು ಎನ್ನುವ ಅರ್ಥ. ಸಂಸ್ಕೃತದಿಂದ ಪ್ರಾಕೃತ ಭಾಷೆಗಳಾಗಿವೆ ಎಂದು ಈಗ ಬಹಳ ಚರ್ಚೆಯ ನಂತರ ಸಿದ್ಧವಾಗಿರುವ ವಿಚಾರ. ಕನ್ನಡವು ಸಂಸ್ಕೃತದ ಕವಲು ಎಂದು ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ನಂಬಿಕೆ. ದ್ರಾವಿಡ ಭಾಷೆ ಎಂದು ಬೇರೆ ಮಾಡಿದ ಆಂಗ್ಲರಿಗೆ ಕನ್ನಡದ ಮತ್ತು ಸಂಸ್ಕೃತದ ಅನ್ಯೋನ್ಯತೆ ಗೊತ್ತಿರಲಿಲ್ಲ ಎನ್ನುವುದು ಡಾ. ರಾಘವ ನಂಬಿಯಾರರಂತಹ ವಿದ್ವಾಂಸರ ಮತ. ತಮ್ಮ ‘ದ್ರಾವಿಡ ನಾಡು ನುಡಿ’ ಎಂಬ ಗ್ರಂಥದಲ್ಲಿ ಈ ಅನ್ಯೋನ್ಯತೆಯನ್ನು ಸ್ಥಾಪಿಸಲು ಪ್ರಯತ್ನಮಾಡಿದ್ದಾರೆ. ಹಾಗಿದ್ದರೂ, ವೈಯ್ಯಕ್ತಿಕವಾಗಿ, ಸಂಸ್ಕೃತಕ್ಕೆ ಪರಕೀಯವಾದ ಕೆಲವು ಅಂಶಗಳು ಕನ್ನಡದಲ್ಲಿ ಇಲ್ಲದಿಲ್ಲ ಎಂದೇ ನನ್ನ ಭಾವನೆ. ತಾತ್ಪರ್ಯ ಇಷ್ಟೆ. ನಮ್ಮ ಕನ್ನಡದ ಅ ಆ ಇ ಈ ವೈದಿಕ ಸಂಸ್ಕೃತದಲ್ಲಿ ಇದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಅದು ಪರಕೀಯವಲ್ಲ. ಭಾರತೀಯ ಭಾಷೆಗಳೆಲ್ಲಾ ಒಂದು ರೀತಿಯಲ್ಲಿ ಒಂದೇ. ವೇದವನ್ನು ವಿಂಗಡಿಸಿದ ಮಹಾಭಾರತವನ್ನು ಸಂಸ್ಕೃತದಲ್ಲಿ ಸಂಯೋಜಿಸಿದ ಕೃಷ್ಣದ್ವೈಪಾಯನ ವೇದವ್ಯಾಸರು ಮತ್ಸ್ಯಗಂಧೀ ಎಂಬ ಮೀನುಗಾರ್ತಿಯ ಮಗ. ಪುರಾತನ ವೇದ ಎಲ್ಲ ಭಾರತೀಯರ ಸೊತ್ತು. ಭಾಷೆ ಜಾತಿ ಇತ್ಯಾದಿ ಗೋಜಿಗೆ ಹೋಗದೆ ಪುರಾತನ ಭಾರತೀಯ ವಾಙ್ಮಯಗಳೆಲ್ಲವೂ ನಮ್ಮವು ಎಂದುಕೊಂಡಾಗ ನಮ್ಮ ಕನ್ನಡದಕ್ಕರಗಳಿಗೆ ಎಷ್ಟು ಪುರಾತನ ಇತಿಹಾಸ ಇದೆ ಎಂಬ ಅರಿವಾಗಿ ಹೆಮ್ಮೆ ಮೂಡುತ್ತದೆ. ಹಾಗಾಗಿ ಅಕ್ಷರದ ಮೂಲಕ್ಕೆ ಹೋಗಿ ಇನ್ನಷ್ಟು ತಿಳಿದುಕೊಳ್ಳೋಣ. ಮಕ್ಕಳಿಗೆ ಕನ್ನಡದ ಅಕ್ಷರಗಳು ಎಷ್ಟು ಪುರಾತನ ಎಲ್ಲಿಂದ ಬಂದವು ಎಂದು ಕಲಿಸೋಣ.

References:

[1] Background of Shiksha http://bit.ly/shikshalink
[2] ಶೌನಕ ಮಹರ್ಷಿಗಳು ಬೋಧಿಸಿದ ಋಕ್ಪ್ರಾತಿಶಾಖ್ಯಕ್ಕೆ ಉವ್ವಾಟರು ಬರೆದ ಭಾಷ್ಯ
[3] ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ http://bit.ly/niruktalink
[4] ಕನ್ನಡ ನಿಘಂಟು ವಿವರ http://kanaja.in/?p=121713 http://bit.ly/nigantulinks

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply