close logo

ಕೆನಡಾದ ದೇಶೀ ಕಲೆಗಳು ಮತ್ತು ಭಾರತೀಯ ಸಂವೇದನೆಗಳು

ಜಾನಪದ ಶಬ್ಧದ ಅರ್ಥವಿವೇಚನೆ ಮತ್ತು ಅಮೇರಿಕಾದ ಮೂಲಜನರ ಕಲೆಗಳ-ಕಲ್ಪನೆಗಳ ಸುತ್ತ ಒಂದು ಹೊಸತಾದ ಭಾರತೀಯ ನೋಟ

ಜಾನಪದ, ದೇಶೀ, ಮಾರ್ಗ ಮತ್ತು ಶಾಸ್ತ್ರ ಈ ವರ್ಗೀಕರಣಗಳ ಅರ್ಥವನ್ನು ಉತ್ತರ ಕೆನಡಾದ ಐರೋಪ್ಯ ಮತ್ತು ಆರ್ಕಟಿಕ್ ವಲಯದ ಮೂಲಜನರಾದ ಇನ್ಯೂಟ್, ಕ್ರೀ, ಅನಿಶ್ನಾಬಿ, ಕಲಾಲ್ಲಿತ್ ಮತ್ತು ಮೇಟಿಸ್ ಇತ್ಯಾದಿ ಸಮುದಾಯಗಳ ಜನರ ಕಲೆಗಳಿಗೆ ಅನ್ವಯಿಸುವ ಮತ್ತು ಈ ಕಲೆಗಳಿಗೂ ಭಾರತೀಯ ಸಂವೇದನೆಗಳಿಗೂ ಇರುವ ಸಾಮ್ಯವನ್ನು ಕಂಡುಕೊಳ್ಳುವ ಪ್ರಯತ್ನ ಇದು. ಜಾನಪದ ಎಂದೊಡನೆ ಪರಿಷ್ಕೃತ ಅಲ್ಲದ ಎಂಬಿತ್ಯಾದಿ ಸೀಮಿತ ಅರ್ಥವನ್ನು  ಗ್ರಹಿಸುವ ಅಭ್ಯಾಸ ಇದೆ. ಜಾನಪದವನ್ನು ಜನಾಂಗಕ್ಕೆ ತಾಳೆಹಾಕಿ ಜನಾಂಗದ ಅಧ್ಯಯನದ ಅಂಗವಾಗಿ ನೋಡುವುದು ಐರೋಪ್ಯ ಅಧ್ಯಯನಕಾರರಿಗೆ (ethnomusicology) ರೂಢಿಯಾಗಿದೆ. ಇದು ಸರಿಯಲ್ಲ. ಹಾಗಾಗಿ ಇಲ್ಲಿನ ಸ್ಥಳೀಯ ಕಲೆಗಳನ್ನು ಭಾರತೀಯ ಕಲಾಮೀಮಾಂಸೆಯ, ನಾಟ್ಯಶಾಸ್ತ್ರದ ದೃಷ್ಟಿಯಿಂದ ನೋಡಿದರೆ, ಜಟಿಲತೆ-ಗೋಜಲು ಕಳೆದು ಹೊಸ ಅರ್ಥ ಹೊಳೆಯಬಹುದು. ಹಾಗೆಯೇ ಈ ದೃಷ್ಟಿ ಮೂಲಜನರು ತಮ್ಮನ್ನು ನೋಡುವ ದೃಷ್ಟಿಗೆ ವಿರುದ್ಧವಾಗಿಯೂ ಇರಬಾರದು. ಇದು ಇನ್ನೂ ಮಾಡಲು ಬಾಕಿ ಇರುವ ಸಂಶೋಧನೆಯ ಮತ್ತು ಸಾಹಿತ್ಯದ ಕೆಲಸ. ಹಾಗಾಗಿ ಇಲ್ಲಿ ಪ್ರಾರಂಭಿಕವಾಗಿ ಆದಷ್ಟು ಸರಳವಾಗಿ ಮೂಲಜನರ ಕಲೆಯ ಹಿನ್ನೆಲೆಯಲ್ಲಿ ಒಂದು ಮಿತಿಯಲ್ಲಿ ವಿಚಾರ ಮಾಡಿದ್ದೇನೆ. ಈ ದಿಕ್ಕಿನಲ್ಲಿ ಮುಂದಾಗುವ ಕೆಲಸಕ್ಕೆ ಪೂರಕವಾಗಲಿ ಎನ್ನುವ ಆಸೆ.

ಅರ್ಥ- ಬಳಕೆ:

ಜನಪದ ಎಂದರೆ ಜನರ ಸ್ಥಾನ, ಜನರ ನಡೆ ಇರುವ, ಜನರಿರುವ ಪ್ರದೇಶ, ದೇಶ ಎನ್ನುವ ಅರ್ಥ. ಇದರಲ್ಲಿ ಜನ ಎಂದರೆ ಸಹಜವಾಗಿರುವ ಜನ. ಪದ ಎಂದರೆ ಅವರ ಸ್ಥಾನ. ಜನಪದಕ್ಕೆ ಸಂಬಂಧಿಸಿದ್ದು ಜಾನಪದ. ಅಂದರೆ ಜನ ಸಹಜವಾಗಿ ಬಳಸುವುದೆಲ್ಲ ಜಾನಪದ. ಸ್ವಾಭಾವಿಕವಾದ್ದು, ಬುದ್ಧಿಪೂರ್ವಕವಾದ ಕೃತ್ರಿಮಕ್ಕೆ ಕೃತಕ ವ್ಯವಸ್ಥೆಗೆ ಆಸ್ಪದ ಇಲ್ಲದ್ದು ಎಂಬ ಅರ್ಥ. ಜನ ಜನನೇ, ಪ್ರಸವೇ, ಅಂದರೆ ಹುಟ್ಟಿನಿಂದ, ಪದ ಗತೌ ಅಂದರೆ ಗತಿ, ಸ್ಥಾನ, ಚಲನ ಇರುವ, ಎಂಬ ಎರಡು ಧಾತುಗಳಿಂದ ಜನ-ಪದ ಶಬ್ಧ ಆಗಿದೆ. ಈ ಲೇಖನಕ್ಕಾಗಿ ವಿದ್ವಾನ್ ಶ್ರೀ ಉಮಾಕಾಂತ ಭಟ್ಟರು ಶಬ್ಧದ ವ್ಯುತ್ಪತ್ತಿಯ ಬಗ್ಗೆ ಮಾಹಿತಿ ಒದಗಿಸಿ ಮಾರ್ಗದರ್ಶನ ಮಾಡಿದ್ದನ್ನು ಇಲ್ಲಿ ಕೃತಜ್ನತೆಯಿಂದ ನೆನೆಯುತ್ತೇನೆ. ಅವರು, ಜನ ಮತ್ತು ಪದ ಶಬ್ಧ ಒಟ್ಟಿಗೆ ಇರುವುದರಿಂದ, ಜನ್ಯತೇ ಇತಿ ಜನ: ಎಂದೂ ಗತಿ ಎಂದರೆ ಜ್ಞಾನ ಎಂದೂ ಬಳಸಿ ಅರ್ಥ ಹುಡುಕುವುದು ಬೇಕಾಗುವುದಿಲ್ಲ ಎನ್ನುತ್ತಾ ಅವರು ಪದಪುಂಜ ಇದ್ದಾಗ ಶಬ್ಧದ ಉದ್ದೇಶವೂ ಅದಲ್ಲ, ಜನರ ಸ್ಥಾನ ಎಂಬ ಅರ್ಥ ಗ್ರಹಿಕೆ ಸಾಕಾಗುತ್ತದೆ ಎನ್ನುವ ಅಭಿಮತ ವ್ಯಕ್ತಪಡಿಸಿದ್ದಾರೆ. ಜನಪದಕ್ಕೆ ಸಂಬಂಧಿಸಿದ್ದು ಜಾನಪದ (ಜನಪದೇಷು ಭವಂ). ಈ ಅರ್ಥ, ಕಲೆಗಳಿಗೆ ಸೀಮಿತವಾದ್ದಲ್ಲ. ಸಂಪೂರ್ಣ ಸಂಸ್ಕೃತಿಗೆ ಅನ್ವಯ ಆಗುವಂತಾದ್ದು. ಕಲೆಗಳಿಗೆ ಇದನ್ನು ಬಳಸಿದ್ದು ಇತ್ತೀಚೆಗೆ, ಬಹಳ ಹಿಂದೆ ಅಲ್ಲ. ಬಹಳ ಹಿಂದಿನಿಂದ ಇದಕ್ಕೆ ಬಳೆಕೆಯಾಗುತ್ತಿರುವ ಶಬ್ಧ ‘ದೇಶೀ’ ಎಂದು. ಭಾರತೀಯ ಸಂಗೀತದ ಲಕ್ಷಣ ಗ್ರಂಥಗಳಲ್ಲಿ  ಸ್ಥಳೀಯ ಎಂಬ ಅರ್ಥದಲ್ಲಿ ದೇಶೀ ಎಂಬ ಪದವನ್ನು ಬಳಸಿದ್ದಾರೆ. ಜಾನಪದ ಎಂಬ ಶಬ್ಧವನ್ನು ಬಳಸಿಲ್ಲ.

ದೇಶೇ ದೇಶೇ ಜನಾನಾಂ ಯದ್ರುಚ್ಯಾ ಹೃದಯರಂಜಕಮ್.  ಶಾರ್ಙ್ಗದೇವನ ಸಂಗೀತರತ್ನಾಕರ (ಸ್ಥಳೀಯವಾದ, ಜನರನ್ನು ರಂಜಿಸುವುದು ದೇಶೀ)

ಇನ್ನು, ಹೆಚ್ಚಿನ ನಿಯಮ ಕಟ್ಟಳೆ ಇರುವ ವ್ಯವಸ್ಥೆಗೆ ಶಾಸ್ತ್ರದಲ್ಲಿ ಮಾರ್ಗ ಎಂಬ ಹೆಸರು. ಮಾರ್ಗ ಎಂಬ ಭಾರತದ ಕಲೆಗಳ ವಿಭಾಗ ಈಗ ಇಲ್ಲವಾಗಿದೆ. ಕರ್ನಾಟಕಿ, ಯಕ್ಷಗಾನ, ಉತ್ತಾರಾದಿ ಇವನ್ನೆಲ್ಲ ಶಾಸ್ತ್ರಗಳಲ್ಲಿ ದೇಶೀ ಎಂಬ ವಿಭಾಗಕ್ಕೆ ಸೇರಿಸಲಾಗಿದೆ. ದೇಶೀಯಲ್ಲೂ ನಿಯಮ ಹಲವಿದೆ ಆದರೆ ಅವು ಸಹಜವಾಗಿ ಪ್ರಾಕೃತಿಕವಾಗಿವೆ. ದೇಶೀ ಎಂಬ ಪದದಲ್ಲಿ ಕನಿಷ್ಠ ಗರಿಷ್ಠ ಎಂಬುದಿಲ್ಲ. ಎಲ್ಲ ಸ್ಥಳೀಯ ಕಲೆ, ವಸ್ತು ಮತ್ತು ವಿಷಯಗಳು ಇದರಡಿಯೇ ಬರುತ್ತವೆ.  ಇದು ದೇಶೀ ಮತ್ತು ಜಾನಪದದ ಮೂಲ ಅರ್ಥದ ಹರಹು.

ಇನ್ನು Folk ಎನ್ನುವ ಆಂಗ್ಲ ಪದವೂ ಹತ್ತೊಂಬತ್ತನೆಯ ಶತಮಾನದಲ್ಲಿ ಕಲೆಯ ವಿಭಾಗವಾಗಿ ಬಳಕೆಗೆ ಬಂದಿದ್ದು. ಅದು ಜೆರ್ಮ್ಯಾನಿಕ್ ಮೂಲದ volk ಎಂಬುದರಿಂದ ಹುಟ್ಟಿ, ಹಳೆಯ ಇಂಗ್ಲಿಷ್ನಲ್ಲಿ floc ಆಗಿದೆ. ಡಚ್ ಮತ್ತು ಜರ್ಮನ್ನ್ನಲ್ಲಿ volk ಎಂದೇ ಇದೆ. Volkswagen ಕಾರ್ ಇಲ್ಲವೇ. ಅದೂ ಜನರಗಾಡಿ ಎಂದರ್ಥ! Folk ಎಂಬ ಪದಕ್ಕೆ ಸಂವಾದಿ ಅಥವಾ ಸಮಾನ ಅರ್ಥದ ಪದವಾಗಿ ಜಾನಪದ ಎಂದು ಇತ್ತೀಚೆಗೆ ಬಳಕೆಯಾಗುತ್ತಿದೆ. Folk ಪರಿಷ್ಕೃತವಾಗಿ ಮುಖ್ಯವಾಹಿನಿಗೆ ಬರುತ್ತದೆ ಎನ್ನುವುದು ಐರೋಪ್ಯರ ನಂಬಿಕೆಗಳಲ್ಲಿ ಒಂದು. ಪರಿಷ್ಕೃತವಾಗುತ್ತದೆ ಎನ್ನಬೇಕಾದರೆ ಪರಿಷ್ಕೃತವಾಗಿಲ್ಲ ಪರಿಷ್ಕರಣೆ ಬೇಕು, ಏನೋ ನ್ಯೂನತೆ ಇದೆ ಎಂದೂ ನಂಬಬೇಕಾಗುತ್ತದೆ. ಈ ನಂಬಿಕೆಗೆ ಕಾರಣ, ಎಲ್ಲವೂ ಬೆಳವಣಿಗೆಯ ದಿಕ್ಕಿಗೇ ಹೋಗುತ್ತವೆ ಎನ್ನುವ ಪಾಶ್ಚಾತ್ಯರ ನಂಬಿಕೆ. ಆದರೆ ಇತಿಹಾಸವನ್ನು ನೋಡಿದರೆ ಅದು ಹಾಗೇ ಆಗುವುದೇನೂ ಕಾಣುವುದಿಲ್ಲ. ಕಲೆಗಳು ಕಾಲಕ್ರಮದಲ್ಲಿ ಕ್ಷೀಣವಾದ್ದು ಇಲ್ಲವಾದ್ದು ಇದೆಯಲ್ಲ! ಕರ್ನಾಟಕಿ ಮತ್ತು ಯಕ್ಷಗಾನದಲ್ಲಿ ಮರೆಯಾಗುತ್ತಿರುವ ಆದ ಮಟ್ಟುಗಳು ರಾಗಗಳು, ಕರ್ನಾಟಕದ ದೇವದಾಸಿ ನೃತ್ಯ, ಆಸ್ಟ್ರೇಲಿಯಾದ ಮೂಲವಾಸಿಗಳ ಸಂಗೀತ ಹೀಗೆ ಅನೇಕ ಕಲೆಗಳು ಸಂಪೂರ್ಣವಾಗಿಯೋ ಅಥವಾ ಕೆಲವು ಕಲೆಯಲ್ಲಿನ ಸಮೃದ್ಧ ಅಂಶಗಳೋ ಕಾಲವಶಾತ್ ನಷ್ಟವಾಗಿವೆ. ದೊಡ್ಡಾಟ ಕ್ಷೀಣವಾಗಿದೆ. ಇನ್ನು ಉತ್ತಮವಾಗಿರುವ ಎಷ್ಟೋ ಗೀತೆಗಳನ್ನು ಕನಿಷ್ಠ ಎಂದು ಪರಿಗಣಿಸಿ ಮೂಲೆಗುಂಪು ಮಾಡಿದಿದ್ದೆ. ಉದಾಹರಣೆಗೆ ಎಷ್ಟೋ ಕಳೆದು ಹೋಗಿವೆ ಎಂದುಕೊಂಡಿದ್ದ ಕನ್ನಡದ ಛಂದಸ್ಸುಗಳು, ರಾಗಗಳು ತಾಳಗಳು ಯಕ್ಷಗಾನದ ಪದಗಳಲ್ಲಿ ಗುರುತಿಸಲ್ಪಟ್ಟಿವೆ. ಈ ಕೆಲಸ ಮಾಡಿದ ಅನೇಕರಲ್ಲಿ ಇತ್ತೀಚೆಗೆ ತೀರಿಕೊಂಡ ಕನ್ನಡದ ಶ್ರೇಷ್ಠ ಛಂದೋವಿದರಾದ ಡಾ.ನಾರಾಯಣ ಶೆಟ್ಟರು ಒಬ್ಬರು. ಅವರ ಕೃತಿ “ಯಕ್ಷಗಾನ ಛಂದೋಂಬುಧಿ”ಯನ್ನು ಇಲ್ಲಿ ನೆನೆಯಲೇಬೇಕು. ಡೊಳ್ಳು ಇತ್ಯಾದಿ ಕುಣಿತಗಳಲ್ಲಿ ತಾಳದ ಕೆಲವು ಮೂಲ ರೂಪಗಳನ್ನು ಈ ಲೇಖಕರೇ ಗುರುತಿಸಿ ದಾಖಲಿಸಿದ್ದಾರೆ. ಹಾಗಾಗಿ ಕಲೆಯ ಇಂದಿರುವ ರೂಪ ನಿಮ್ನ ಆಗಿರಬಹುದು. ಹಿಂದೆ ಚಂದ ಇದ್ದಿರಲೂ ಬಹುದು. ಇಂದೇ ಚಂದ ಇದ್ದರೂ ನಾವು ಅದನ್ನು ಕಾಣಲು ವಿಫಲರಾಗಿರಬಹುದು. ಉದಾಹರಣೆಗೆ ಕನ್ನಡದಲ್ಲಿ ಅತಿಹೆಚ್ಚು ಸಾಹಿತ್ಯ ಇರುವುದು ಯಕ್ಷಗಾನದಲ್ಲಿ. ಯಾವ ಕಾವ್ಯದಲ್ಲೂ ಇರದ ಅತಿ ಹೆಚ್ಚು ಛಂದೋವೈವಿಧ್ಯ ಇರುವುದು ಯಕ್ಷಗಾನದಲ್ಲಿ. ಆದರೂ ಯಕ್ಷಗಾನದ ಕವಿಗಳು ಮತ್ತು ಸಾಹಿತ್ಯ ಶಿಷ್ಠವಲ್ಲವೆಂದೇ ಇಂದಿಗೂ ಪರಿಗಣಿಸಲ್ಪಟ್ಟಿದೆ. ಈ ಅರ್ಥದಲ್ಲಿ folk ಎನ್ನುವ ಪದದ ಬಳಕೆ ಮತ್ತು ಅದೇ ಅರ್ಥದಲ್ಲಿ ಈಗ ಕನ್ನಡದಲ್ಲಿ ಬಳಕೆಯಲ್ಲಿರುವ ಜಾನಪದ ಎಂಬ ಪದ, ಎಲ್ಲ ಕಲೆಗಳಿಗೂ ಅಷ್ಟು ಸರಿ ಹೊಂದುವುದಿಲ್ಲ. ಯಕ್ಷಗಾನ ಜಾನಪದ ಅಲ್ಲ. ಯಕ್ಷಗಾನ ಕರ್ನಾಟಕಿ ಉತ್ತರಾದಿಗಳಂತೆಯೆ ಒಂದು ದೇಶೀ ಕಲೆ. ಮೇಲೆ ಹೇಳಿದಂತೆ  ಜಾನಪದ ಶಬ್ಧದ ಮೂಲ ಅರ್ಥ folk ಎನ್ನುವುದಲ್ಲ. ಪಾಶ್ಚ್ಯಾತ್ಯ folk ಕಲ್ಪನೆಯನ್ನು ನಮ್ಮ ಜಾನಪದ ಶಬ್ಧದ ಮೇಲೆ ಹೇರಲಾಗಿದೆ. ಇದು ಆಂಗ್ಲರ ತಿಳುವಳಿಕೆ ಪಾಠವನ್ನು ಅನುವಾದಿಸಿ ನಮ್ಮ ಕಲೆಗಳಿಗೆ ನಾವು ಮಾಡಿಕೊಂಡ ಅಪಚಾರ. ನಮ್ಮವು ದೇಶೀ ಕಲೆಗಳು ಜಾನಪದ ಅಲ್ಲ. ಈಗಿರುವ ಅರ್ಥದಲ್ಲಂತೂ ಅಲ್ಲವೇ ಅಲ್ಲ. ಇದು ಉತ್ತರ ಕೆನಡಾದ ಮೂಲಜನರ ಸಂಗೀತಕ್ಕೂ ಹೇಗೆ ಅನ್ವಯ ಆಗುತ್ತದೆ ಎಂದು ಇನ್ನುಮುಂದೆ ನೋಡೋಣ. ಸ್ಥಳೀಯ ಕಲೆಗಳಿಗೆ ಶಾಸ್ತ್ರಗಳಲ್ಲಿ ಇರುವಂತೆ ಮೂಲಜನರ ಕಲೆಗೂ ದೇಶೀ ಕಲೆ ಎಂದು ಇಲ್ಲಿ ಕರೆಯುತ್ತೇನೆ. ಅಂದರೆ ಕೆನಡಾಕ್ಕೆ ಸ್ಥಳೀಯವಾದ್ದು ಎಂಬ ಅರ್ಥದಲ್ಲಿ. ಇದರಲ್ಲಿ ಕತೆ ಹೇಳುವುದು ಹಾಡಿನಲ್ಲಿ ಕತೆ ಹೀಗೆಲ್ಲ ಇರುವವನ್ನು ಮಾತಿನ ಸಾಹಿತ್ಯ ಎಂದು ಗ್ರಹಿಸೋಣ. ಅವೂ ದೇಶೀ ಕಲೆಗಳೇ. ದಿನನಿತ್ಯದ ಪರಿಕರಗಳಲ್ಲಿ ಕಲಾಪೂರ್ಣತೆ, ಪೂಜೆ, ನಂಬಿಕೆಗೆ ಸಂಬಂಧಿಸಿದ ವಸ್ತು, ಸಾಹಿತ್ಯವೂ ದೇಶೀ ಕಲೆಯೆಂದೆ ಗಣಿಸಬಹುದು. ಕಲೆಗೂ ಜೀವನಕ್ಕೂ ಎಷ್ಟು ದೂರ ಕಡಿಮೆ ನೋಡಿ!

ಇನ್ನು ಉತ್ತರ ಕೆನಡಾದ ಮೂಲವಾಸಿಗಳಾದ ಇನ್ಯೂಟ್ ಜನರಲ್ಲಿ ಈ folk ಎನ್ನುವ ಅರ್ಥದ ಜಾನಪದ ಎಂಬ ಕನ್ನಡದಲ್ಲಿನ ಕಲ್ಪನೆ ಇದೆಯೇ ಎಂದು ನೋಡೋಣ. ಇನ್ಯೂಟ್ ಎಂದರೆ ಅವರ ಇನುಕ್ಟಿಟುಟ್ ಭಾಷೆಯಲ್ಲಿ “ಜನ” ಎಂದರ್ಥ. ಇನುಕ್ ಎಂದರೆ ಇನ್ಯೂಟ್ ಪಂಗಡದವರು, ನಾವು ಕನ್ನಡದವರನ್ನು ಕನ್ನಡಿಗ ಎನ್ನುವಂತೆ. ಇವರು ತೀರ ಉತ್ತರದ ಆರ್ಕಟಿಕ್ನಲ್ಲಿ ಇರುವವರು. ಇಲ್ಲಿನ ಕ್ರೀ, ಅನಿಶ್ನಾಬಿ ಇತ್ಯಾದಿ ಸಮುದಾಯಗಳು ಸ್ವಲ್ಪ ಕೆನಡಾದ ಕೆಳಭಾಗದಲ್ಲಿನ ಜನರು. ಈ ಎಲ್ಲ ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯಲ್ಲಿ ವ್ಯತ್ಯಾಸ ಇದೆ. ಭಾರತದಲ್ಲಿ ವ್ಯತ್ಯಾಸಗಳ ನಡುವೆ ಸಾಮ್ಯತೆ ಏಕತೆ ಇರುವಂತೆ ಇಲ್ಲಿ ಈ ಸಮುದಾಯಗಳ ನಡುವೆ ಏಕತೆ ಇದೆ. ಆ ಅರ್ಥದಲ್ಲಿ ಎಲ್ಲ ಮೂಲ ಜನರನ್ನು ಒಂದಾಗಿ ಪರಿಗಣಿಸಿ ಮುಂದುವರೆಯೋಣ. ಇನ್ಯೂಟ್ ಜನರಲ್ಲಿ ‘ಸನಾಕ್’ ಎಂದರೆ ಕೈಯ್ಯಲ್ಲಿ ಮಾಡಿದ ಕರಕುಶಲ ವಸ್ತುಗಳು. ‘ನೂನಾಹ್ಕ್ಕಟಿಗೀಟ್’ ಎಂದರೆ ತಮ್ಮ ಜನ. ಹಾಡುವುದು ಅಥವಾ ಪೂಜೆಯಹಾಡು ‘ಟುಟ್ಸಿಯಕ್’, ಹಾಡು ಕೂಡಿಡುವವನಿಗೆ ‘ನೀನಾಗುಡ್’ ಎಂದು ಹೇಳುತ್ತಾರೆ. ಕಥೆ ಹೇಳುವವ ‘ಊನಿಕ್ಕೌಸಿಕ್’. ಸಾಂಪ್ರದಾಯಿಕ ತಿಳುವಳಿಕೆಗೆ ‘ಕ್ವಾಯಿಮಾಯಾಟುಕ್ವಾಯಿಟ್’. ಬೇರೆ ಬೇರೆ ನೃತ್ಯಕ್ಕೆ ಬೇರೆ ಬೇರೆ ಹೆಸರು. ನೃತ್ಯ ಎಂಬ ಸ್ವತಂತ್ರ ಬಳಕೆಯೂ ಕಾಣುವುದಿಲ್ಲ (ಕೋಮಿಕ್, ಆಲ್ಲುಅಸಿಯಕ್ ಇತ್ಯಾದಿ). ಹೀಗೆ ಗಮನಿಸಿದಾಗ ಹೊಳೆಯುವುದು, ಜಾನಪದ ಎನ್ನುವ ಕಲ್ಪನೆ ಮೂಲಜನರಲ್ಲಿ ಇಲ್ಲ. ಬೇರೆ ಬೇರೆ ವಿಚಾರಕ್ಕೆ ಬೇರೆ ಬೇರೆ ಹೆಸರು. ಎಲ್ಲವೂ ಜೀವನದ ಅಂಗ. ಎಲ್ಲವೂ ಜನರದೆ! ಅದನ್ನು ಹಾಗೆ ಹೀಗೆಂದು  ಜಾನಪದ ಎಂದು ವಿಭಾಗ ಮಾಡುವುದು, ಅಧ್ಯಯನ ಮಾಡುವವರು ಅಷ್ಟೆ. ಹಾಗಾಗಿ ಶಾಸ್ತ್ರಗಳಲ್ಲಿ ಬಳಸಿದ ದೇಶೀ ಎನ್ನುವ ಪದ ಸ್ಠಳೀಯ ಎನ್ನುವ ಅರ್ಥದಲ್ಲಿ ಇಲ್ಲಿಗೂ ಎಲ್ಲಿಗೂ ಅನ್ವಯ ಆಗುತ್ತದೆ ಎಂದುಕೊಳ್ಳಬಹುದು.

ಉತ್ತರ ಕೆನಡಾದ ದೇಶೀ ಸಂಗೀತ-ಸಾಹಿತ್ಯ:

ಐರೋಪ್ಯ ವಲಸಿಗರು ಮತ್ತು ಮೂಲ ಇನ್ಯೂಟ್ ಜನರ ದಿನ ನಿತ್ಯದ ಬಳಕೆಗೆ ಮಾಡಿಕೊಂಡ, ಬರೆದುಕೊಂಡ, ವ್ಯಾಪಾರ ವಹಿವಾಟುಗಳಿಂದ ಹೊರಗೆ ಉಳಿದ, ಹಾಡು ಶೇಡಿಗಳನ್ನು ಇಲ್ಲಿನವರು ದೇಶೀ folk ಎಂದು ಗಣಿಸುವುದು. ಇಲ್ಲಿನ ದೇಶೀ ಎಂದರೆ ಬರಿ ಇನ್ಯೂಟ್ ಜನರದ್ದಲ್ಲ. ಇಂದೂ ಹಿಂದೂ ಐರೋಪ್ಯರ ಮನೆ ಬಳಕೆಯ ಹಾಡುಗಳು ಇದ್ದವು. ಕೆನೆಡಾದ ಬಲ್ಲಾಡ್ಗಳು ಮತ್ತು ಕಡಲಗೀತೆಗಳು (Ballads and Sea Songs) ಎಂಬವನ್ನು ಹೆಲೆನ್ ಕ್ರೈಗ್ಟನ್ ಎಂಬಾಕೆ ಸಂಗ್ರಹ ಮಾಡಿ ೧೯೩೨ರಲ್ಲಿ ಪ್ರಕಟಿಸಿದರು. ಮುಂದೆ ಪೋಕ್ ರಾಕ್ ಎನ್ನುವ ಪ್ರಬೇಧವೂ ರಾಕ್ ಪ್ರೇರಣೆಯಿಂದ ಹುಟ್ಟಿಕೊಂಡಿತು(ಸಂಗ್ರಹ ಗ್ಯಾರಿ ಕ್ರಿಸ್ಟಾಲ್).

ಇನ್ನು ಮೂಲ ಜನರ ಸಂಗೀತ ಸಾಹಿತ್ಯವನ್ನು ಗಮನಿಸೋಣ. ಸಂಗೀತ ಎನ್ನುವುದಕ್ಕೆ ‘ನಿ:ಹ ಯೂಟ್’ ಎಂಬ ಪದವನ್ನು ಇಲ್ಲಿನ ಮೂಲ ಜನರು ಕೆಲವರು ಬಳಸುತ್ತಾರಂತೆ. ಆದರೆ ಮೇಲೆ ಹೇಳಿದಂತೆ ಕಲೆಗಳಿಗೆಲ್ಲ ಬೇರೆ ಬೇರೆ ಹೆಸರೇ ಹೊರತು ಮ್ಯೂಸಿಕ್ ಎಂಬ ಅರ್ಥದಲ್ಲಿ ಬಳಸುವ ಸಂಗೀತ ಎಂಬ ಪದ ಹೆಚ್ಚಿನ ಮೂಲಜನರಲ್ಲಿ ಇಲ್ಲ. ಸಂಗೀತವೇ ಕೆನಡಾದ ಮೂಲಜನರಲ್ಲಿ ಇಲ್ಲ ಎಂದೆಲ್ಲ ಐರೋಪ್ಯರು ಘೋಷಿಸಿದ್ದು ಉಂಟಂತೆ! ಭಾರತೀಯ ಶಾಸ್ತ್ರದಲ್ಲೂ ಸಂಗೀತ ಎನ್ನುವುದಕ್ಕೆ ಅರ್ಥ ಬೇರಿದೆ ಎಂದು ಈಗಾಗಲೇ ಅನೇಕರು ಹೇಳಿದ್ದಾರೆ. 

ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತಮುಚ್ಚತೆ – ಶಾರ್ಙ್ಗದೇವನ ಸಂಗೀತರತ್ನಾಕರ

ಭಾರತೀಯರಲ್ಲೂ ಹಾಡು ವಾದ್ಯ ನೃತ್ಯ ಇವು ಮೂರೂ ಇದ್ದಾಗ ಮಾತ್ರ ಸಂಗೀತ ಎಂದು ಕರೆಯಲ್ಪಡುತ್ತದೆ ಎನ್ನುವ ಲಕ್ಷಣಕಾರನ ಮಾತು ಯಕ್ಷಗಾನ ಇತ್ಯಾದಿ ಜನಕ್ಕೆ ಹತ್ತಿರವಾದ ರಂಗ ಕಲೆಗಳಲ್ಲಿ ಜೀವಂತ ಕಾಣುತ್ತದೆ. ಅಂದರೆ ನೃತ್ಯವಿಲ್ಲದ ಹಾಡನ್ನು ಸಂಗೀತ ಎಂದು ಶಾಸ್ತ್ರಗಳು ಕರೆದಿಲ್ಲ. ಅಂದರೆ ನಮ್ಮ ಶಾಸ್ತ್ರಗಳಲ್ಲಿ ಇರುವ ಸಂಗೀತದ ಕಲ್ಪನೆ ಜನಜೀವನದಲ್ಲಿ ಇದ್ದ ಕಲ್ಪನೆಗಳಿಗೆ ಹೊಂದುವಂತಾದ್ದು. ಬರಿ ಹಾಡುವುದಕ್ಕೆ ಕನ್ನಡದಲ್ಲಿ ಪದಹೇಳುವುದು ಎಂದು ಕರೆಯುತ್ತಾರೆ. ಇದು ಐರೋಪ್ಯರ ಮ್ಯೂಸಿಕ್ ಕಲ್ಪನೆಗಿಂತ ಭಿನ್ನವಾದ್ದು. ಅದೇ ರೀತಿ ಕೆನೆಡಾದ ಇನ್ಯೂಟ್ ಜನರ ಕಲ್ಪನೆಯೂ ಭಾರತೀಯ ಮತ್ತು ಐರೋಪ್ಯ ಕಲ್ಪನೆಗಳೆರಡಕ್ಕಿಂತ ಭಿನ್ನವಾದ್ದು. ಕಥೆ ಹೇಳುವ ಊನಿಕ್ಕೌಸಿಕ್, ಕುಶಲ ಕಲೆ ಸನಾಕ್, ಗುನುಗುಡುವ ಕಟಾಜ್ಜಾಕ್ ಹೀಗೆ ಹಾಡಿನ ಸಂಗೀತದ ಪ್ರಕಾರಗಳನ್ನು ಬೇರೆ ಬೇರೆಯಾಗಿ ಗುರುತಿಸುವುದು ಇಲ್ಲಿನ ಮೂಲ ಜನರ ಕ್ರಮ.

ಅರ್ಥವಿರುವ ಸಣ್ಣ ಸಣ್ಣ ಹಾಡುಗಳನ್ನು  ಗಂಭೀರವಾದ ಧ್ವನಿಮಾಡುವ ಟೊಳ್ಳುಮಾಡಿದ ಮರಕ್ಕೆ ಚರ್ಮ ಕಟ್ಟಿ ಢಕ್ಕೆ ನಗಾರಿಯಂತೆ ಧ್ವನಿ ಬರುವಂತೆ ಬಾರಿಸುತ್ತಾ ಹೇಳುವುದು ಪಾರಮಾರ್ಥಿಕಕ್ಕೆ ಸಂಬಂಧಿಸಿದ ಪೂಜಾ ವಿಧಿಗಳಲ್ಲಿ.  ನೇರವಾಗಿ ಊದುವ ಕೊಳಲು, ಎಮ್ಮೆ ಅಥವಾ ಜಿಂಕೆ ಚರ್ಮದಲ್ಲಿ ಕಲ್ಲ ಹರಳು ತುಂಬಿ ಮಾಡಿದ ರ್ಯಾಟಲ್ (ಈ ಗಿಲಿಗಿಚ್ಚಿಗೆ ಶಿಶಿಕೋಯಿಸ್ ಎಂದು ಹೆಸರು), ಚರ್ಮವಾದ್ಯ ಇವನ್ನೆಲ್ಲ ಬಳಸಿ ಹಾಡು ಹಾಡುವುದು ಸಾರ್ವಜನಿಕರಿಗಾಗಿ. ಇಲ್ಲಿ ಅರ್ಥವಿಲ್ಲದ ಆಲಾಪನೆ ಇತ್ಯಾದಿಯೂ ಇದೆ. ಹೀಗೆ ಪೂಜಾ ಸಂಗೀತ ಮತ್ತೆ ಮನೋರಂಜನೆಗೆ ಇವು ಎರಡು ಮೂಲಜನರಲ್ಲಿ ಇರುವ ಮುಖ್ಯವಾದ ಸಂಗೀತದ ಪ್ರಬೇಧಗಳು. ಭಾರತೀಯ ಸಾಮವೇದದ ಪಠಣವನ್ನು ಮತ್ತು ಮಂತ್ರಗಳನ್ನು ಇಲ್ಲಿನ ಪೂಜಾವಿಧಿಯ ಸಂಗೀತಕ್ಕೆ ನೇರವಾಗಿ ಹೋಲಿಸಲಾಗದಿದ್ದರೂ ವೈಚಾರಿಕ ಸಾಂದರ್ಭಿಕ ಸಾಮ್ಯತೆ ಇದೆ ಎನ್ನಬಹುದು.  

ಇನುಕ್ಟಿಟುಟ್ ಎಂಬುದು ಕೆನಡಾದ ಇನ್ಯೂಟ್ ಮೂಲಜನರ ಭಾಷೆ. ಈ ಭಾಷೆಯಲ್ಲಿ ‘ಕಾಟಯಾಕ್’ ಎಂದು ಕರೆಯುವ ಒಂದು ಸಂಗೀತ ಇದೆ. ಇದು ಗಂಟಲಿನಲ್ಲಿ ಗುನುಗುವ, ಗೊಂಯ್ಗರಿಯುವ ಸಂಗೀತ. ಇದರಲ್ಲಿ ಪದಗಳಿಲ್ಲ, ಲಯ ತಾಳಗಳಿವೆ, ಧಾಟಿ ಇದೆ, ಛಂದೋಲಯಗಳಿವೆ. ಇಲ್ಲಿ ಅರ್ಥವಿರದ ಧ್ವನಿಯೇ ಮುಖ್ಯ. ನಮ್ಮಲ್ಲಿನ ಸರಿಗಮಕ್ಕೂ  ಸ್ವರಸ್ಥಾನ ತಿಳಿಸುವುದು ಬಿಟ್ಟು ಬೇರೆ ಅರ್ಥವಿಲ್ಲ ತಾನೇ? ಇದನ್ನು ಹೆಚ್ಚಾಗಿ ಹೆಂಗಸರೇ ಹಾಡುವುದು ಕ್ರಮ. ಇಬ್ಬಿಬ್ಬರು ಜೊತೆಯಾಗಿ ಹಾಡುವುದೂ ಇದೆ. ಕನ್ನಡ ಸಮೂಹಗೀತೆಗಳಲ್ಲಿ ಹೆಂಗಸರು ಸರುಗೂಡುವ ಕ್ರಮ ಇದೆ. ಇದಕ್ಕೆ ಅಷ್ಟೇ ಸಾಮ್ಯ. ಇದು ವಿಶಿಷ್ಟವಾದ್ದು. ಕೇವಲ ಗಂಟಲ ಗುರುಗುಡಿತದಿಂದ ಹಲವಾರು ಭಾವನೆ ಅಭಿನಯದ ಮೂಲಕ ಕಥೆ ಹೀಗೆಲ್ಲ ಮಾಡುವುದೂ ಇದೆ. ಇದು ಬೇರೆಡೆ ಇಲ್ಲದ ವಿಶೇಷ ಸಂಗೀತ.

ಒಜಿಬ್ವ ಜನರ ಹುಡುಗನ ಚಿತ್ರ (ಸಂಪ್ರದಾಯದ ಉಡುಗೆ)

ಪಿಸಿಟ್’ ಎಂದರೆ ಕಥೆ ಹೇಳುವ ಹಾಡು. ಇದರಲ್ಲಿ ಸಂಪ್ರದಾಯ ಇತಿಹಾಸ ಎಲ್ಲವೂ ಸೇರಿ ಇದು ಒಂದು ರೀತಿಯ ಪುರಾಣದ ಹಾಡು ಆಗುತ್ತದೆ. ನಮ್ಮಲ್ಲಿ ಕನ್ನಡದ ಗೋವಿನ ಹಾಡು, ಸತ್ಯವಾನ-ಸಾವಿತ್ರೀ, ಗಜೇಂದ್ರ ಮೋಕ್ಷ ಹಾಡಿನ ತೆರ. ಕನ್ನಡದ ಲಾವಣಿಗಳೂ ಕೋಲಾಟದ ಡೊಳ್ಳಿನ ಪದಗಳು ಕಥೆ ಹೇಳುವುದಿದೆ. ಆಂಗ್ಲರ ಬಲ್ಲಾಡ್ ಎನ್ನುವ ಕಥೆ ಹೇಳುವ ಹಾಡಿನ ಕ್ರಮವೂ ಇದೇ. ಇದರಲ್ಲಿ ಶಿಶುಗೀತೆಗಳೂ ಇವೆ. ಆಶ್ಚರ್ಯ ಎಂದರೆ ಇವುಗಳ ಹಾಡಿನ ಕ್ರಮ ನಮ್ಮ ಜೋಗುಳದ ಹಾಡಿಗೆ ಬಲು ಸಮೀಪ ಇದೆ ಎನ್ನಿಸುತ್ತದೆ. ‘ಅಯಯ’ ಎಂದರೆ ತಮಟೆಯ ಜೊತೆ ಹಾಡುವ ಆತ್ಮ ಕಥನದ ಹಾಡು. ಇದು ಪ್ರತಿಯೊಬ್ಬರಿಗೂ ಒಂದು ತಮ್ಮದೇ ಆದ ಹಾಡು. ಎಂತಹ ಚಂದ ಅಲ್ಲವೇ? ನಮಗೆ ಹೆಸರಿದ್ದ ಹಾಗೆ ಹಾಡೂ ಒಂದು! ಇದರಲ್ಲಿ ನಮ್ಮಲ್ಲಿ ‘ತಂದಾನಿ ತಾನೋ’ ಬಳಸುವಹಾಗೆ, ‘ಅಯಾ ಅಯಾಯಾ’ ಎಂಬ ಬಳಕೆ ಇದೆ. ‘ಆ ವೂ ಆ ಯೀ’ ಎಂದು ಸಾಮವೇದದ ಪಠಣದಲ್ಲೂ ಇದೆಯಲ್ಲ! ಪೆಟ್ಟು ೧ ೨ ೩ ೪ ಎಂದು ಸಾಗುತ್ತಿರುತ್ತದೆ. ಇದರಲ್ಲಿ ೨ ಪೆಟ್ಟು ೩ ಪೆಟ್ಟು ಹೀಗೆ ಬೇರೆ ಬೇರೆ ಆದರೂ, ಲಯ ಯಕ್ಷಗಾನದ ಏಕತಾಳಕ್ಕೆ ಹೊಂದುತ್ತದೆ. ಸಾಹಿತ್ಯದಲ್ಲಿ ಅಂಶ ಛಂದಸ್ಸಿನ ಗುಣ ಕಾಣಿಸುತ್ತದೆ. ‘ಇವಿಯುಟೀಟ್’ ಎಂದು ಹಾಡುವ ಕ್ರಮ ಒಂದು. ಇದರಲ್ಲಿ ಎದುರಿನವರ ಆಣಕವೇ ಪ್ರಧಾನ. ದೊಡ್ಡವರು ಸಿಟ್ಟು ಮಾಡಿಕೊಳ್ಳುವಂತಿಲ್ಲ, ಸಿಟ್ಟನ್ನು ಅಣಕಿನ ಮೂಲಕ ತೋಡಿಕೊಳ್ಳಬೇಕೆಂಬ ಸಂಪ್ರದಾಯ. ಕನ್ನಡಿಗರಲ್ಲಿ ಜರೆದು ಹಾಡುವುದು ಎಂಬ ಕ್ರಮ ಇದೆ. ಇದು ಉತ್ತರ ಭಾರತದಲ್ಲೂ ಇದೆ. ಹೆಚ್ಚಾಗಿ ಮದುವೆ ಸಮಯದಲ್ಲಿ ದಿಬ್ಬಣವನ್ನು ಮದುಮಗನನ್ನು ಸೊಟ್ಟಮೋರೆಯವ ಓರೆಮೂಗಿನವ ಎಂದೆಲ್ಲ ಅಣಕಿಸುವ ಹಾಸ್ಯದ ಸನ್ನಿವೇಷ ಇದೆ. ಈ ಮೂಲಜನರ ಕ್ರಮವೂ ಅದೇ ಒಂದು ರೀತಿ. ಈ ರೀತಿಯ ಮೌಖಿಕ ಪರಂಪರೆ ಭಾರತೀಯರಿಗೆ ಹೊಸತಲ್ಲ. ವೇದ ವೇದಾಂಗಗಳು ಇತಿಹಾಸ ಶಾಸ್ತ್ರ ಪುರಾಣಗಳು ಭಾರತದಲ್ಲಿ ಮೌಖಿಕವಾಗಿಯೇ ಉಳಿದವು. ಮೌಖಿಕಕ್ರಮ ಉತ್ಕೃಷ್ಟ ಕ್ರಮ ಎಂದು ನಮ್ಮ ಪೂರ್ವಜರ ಮತ. ಆಗ ಸಂಪ್ರದಾಯದ ಅಂಶಗಳು ಜೀವಂತ ಪರಂಪರೆಯಾಗಿ ನುಡಿಯಲ್ಲಿ ಅಷ್ಟೇ ಅಲ್ಲದೇ ನಡೆಯಲ್ಲೂ ಉಳಿಯುತ್ತದೆ ಎನ್ನುವ ಆಶಯ. ಅದು ಇನ್ಯೂಟ್ ಜನರಲ್ಲೂ ಎದ್ದುಕಾಣುತ್ತದೆ. ಅವರಲ್ಲಿ ಅದರ ಬಗ್ಗೆ ಹೆಮ್ಮೆಯೂ ಇದೆ.

ಕತೆಗಳು – ಮಾತು ಸಾಹಿತ್ಯ

ವಿಶ್ವದ ಅತ್ಯಂತ ಪ್ರಾಚೀನ ಸಾಹಿತ್ಯ ಬರೆದಿಟ್ಟದ್ದಲ್ಲ: ಕಂಠಪಾಠ ಮಾಡಿ ಉಳಿಸಿದ ಸುಮಾರು ಏಳೆಂಟು ಸಾವಿರ ವರ್ಷಗಳು ಹಳತಾದ ವೇದಗಳು. ಬರೆದವು ಎಷ್ಟೋ ನಷ್ಟವಾಗಿವೆ. ಹೀಗೆಯೇ ಇಲ್ಲಿನ ಮೂಲಜನರ ಸಾಹಿತ್ಯ ಮಾತಿನಲ್ಲೇ ಉಳಿದು ಬಂದಿದೆ! ಮಾತು-ಕತೆ, ಮಾತೇ ಕತೆ! ಆದರೆ ಚಿತ್ರದಲ್ಲಿ ಬರೆಯುವುದು ಇತ್ತು. ಕಲ್ಲು ದಿನನಿತ್ಯದ ವಸ್ತುಗಳ ಮೇಲೆ ಚಿತ್ರದ ಮೂಲಕ ಸಂದೇಶದ ದಾಖಲಾತಿ ಇತ್ತು. ಸುಮಾರು ೧೮೪೦ರಲ್ಲಿ ಕೆನಡಾದ ಮೂಲಜನರ ಭಾಷೆಗಳಿಗೆ ಜೇಮ್ಸ್ ಈವಾನ್ಸ್ ಎಂಬಾತ ಲಿಪಿಯನ್ನು ಸಿದ್ಧಪಡಿಸಿದ. ಇದನ್ನು ಭಾರತದ ಬರವಣಿಗೆಯ ಕ್ರಮವನ್ನು ಮತ್ತು ದೇವನಾಗರಿ ಲಿಪಿ ವ್ಯವಸ್ಥೆಯನ್ನು ಆಧರಿಸಿ ಜೇಮ್ಸ್ ಈವಾನ್ಸ್ ಸಿದ್ಧಪಡಿಸಿದನೆಂದೂ ಆತ ಅಕ್ಷರ ಪದ್ಧತಿ (alphasyllabary) ಕಲಿತಿದ್ದನೆಂದೂ ಹಲವು ವರ್ಷಗಳ ಹಿಂದೆ ನಾನು ಸಂಶೋಧಿಸಿ ಕಂಡುಕೊಂಡೆ. ಇನ್ಯೂಟರ ಬರವಣಿಗೆಯೂ ಅಕ್ಷರ ಕ್ರಮದಲ್ಲೇ ಇದೆ. ಇದು ಹೆಚ್ಚಿನವರಿಗೆ ಗೊತ್ತಿಲ್ಲ ಹಾಗಾಗಿ ಇಲ್ಲಿ ಉಲ್ಲೇಖಿಸಿದ್ದೇನೆ (ವಿಕಿಪೀಡಿಯಾಕ್ಕೆ ಈ ಮಾಹಿತಿಯನ್ನು ಸೇರಿಸಿದ್ದೇನೆ). ಅವರಲ್ಲಿ ೩ ಸ್ವರ ಮತ್ತು ೧೪ ವ್ಯಂಜನಗಳು ಬಳಕೆಯಲ್ಲಿವೆ. ಈ ಬರಹ ಈಗ ಇನ್ಯೂಟರಲ್ಲಿ ಬಳಕೆಯಲ್ಲಿದೆ. ಆದರೆ ಮೌಖಿಕ ಪರಂಪರೆ ಹೋಗಿಲ್ಲ. ಇನ್ನೂ ಪ್ರಚಲಿತದಲ್ಲಿದೆ. ಭಾಷೆಯಲ್ಲಿ ವಾಕ್ಯಸಂಧಿ ಇದೆ. ಅಂದರೆ ಕನ್ನಡದಲ್ಲಿ ಶಬ್ಧಗಳು ಸಂಧಿಸುವಂತೆ ಇನುಕ್ಟಿಟುಟ್ ನಲ್ಲಿ ವಾಕ್ಯಗಳು ಸಂಧಿಸುತ್ತವೆ (ಈ ವಾಕ್ಯಸಂಧಿಗಳು ಸಂಸ್ಕೃತದಲ್ಲೂ ಒಂದು ರೀತಿಯಾಗಿ ಇದೆ)! ಅಂದರೆ ಕೆನಡಾದ ಮೂಲಜನರ ಭಾಷೆ ಬಹಳ ಬಲಿಷ್ಟವಾಗಿದೆ. ಸುಮಾರು ೧೫೦ಕ್ಕೂ ಹೆಚ್ಚು ಮೂಲಜನರ ಸಮುದಾಯಗಳಿವೆ – ಪ್ರತಿ ಸಮುದಾಯದಲ್ಲೂ ನೂರಾರು ಕಥೆಗಳು ಬಾಯಿಯಿಂದ ಬಾಯಿಗೆ ಸಾವಿರಾರು ವರ್ಷಗಳಿಂದ ಹರಿದು ಬಂದಿವೆ. ಈ ಕಥೆಗಳ ಸಂಖ್ಯೆ ದಿಗ್ಭ್ರಮೆ ಆಗುವಷ್ಟು ಇವೆ ಎಂತಾದರೆ ಅವುಗಳ ವೈವಿದ್ಯತೆಯನ್ನು ಮತ್ತು ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬಹುದು.

ರಾಮಾಯಣ ಮಹಾಭಾರತದಲ್ಲಿ ಇರುವಂತೆ ನೂರಾರು ಪಾತ್ರಗಳು ವ್ಯಕ್ತಿ ವಿಶೇಷಗಳು ಮೂಲಜನರಲ್ಲಿ ಮೌಖಿಕವಾಗಿ ಬಂದ ಕಥೆಗಳಲ್ಲಿ ಇವೆ. ಮಾನವ ಸಂವೇದನೆಗಳ ಅನುಭವದ ಸಾಮ್ಯತೆ ಎಲ್ಲೆಡೆ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿಯೂ ದೇವರು ರಾಕ್ಷಸರು ಭೂತ ಪಿಶಾಚಿಗಳು ವೀರರು ವೀರರಮಣಿಯರು ಹೀಗೆಲ್ಲ ಇದ್ದಾರೆ. ಅದು ಅವರ ಇತಿಹಾಸದಲ್ಲಿನ  ನಿಜ ವ್ಯಕ್ತಿಗಳು ಅಗಿದ್ದರೂ ಆಗಿರಬಹುದು. ಆದರೆ ಈ ಎಲ್ಲ ಪಾತ್ರಗಳು ಒಂದೇ ಕಥೆಯಲ್ಲಿರದೇ ಹಲವಾರು ಬೇರೆ ಬೇರೆ ಕಥೆಗಳಲ್ಲಿ ಒಂದೊಂದರಂತೆ ಇರುತ್ತವೆ. ಉದಾಹರಣೆಗೆ ಕ್ರೀ ಸಮುದಾಯದ ಕಥೆಗಳಲ್ಲಿ ‘ಕಿಸೆಮನಿಟೊ’ ಸೃಷ್ಟಿಕರ್ತ ಬ್ರಹ್ಮ ಅಥವಾ ಗ್ರೇಟ್ ಸ್ಪಿರಿಟ್ -ಪರಮಾತ್ಮ. ‘ವೆಸಾಕೆಚಕ್’ ಎಂಬ ಸಜ್ಜನ ಬ್ರಹ್ಮನ ಮಗ. ‘ವಿಟಿಕೋ’ ಒಬ್ಬ ನರಭಕ್ಷಕ ರಾಕ್ಷಸ, ‘ಮಿಮೆಕ್ವೇಸಿವ್’ ನೀರಿನ ಭೂತಗಳು ಅವಕ್ಕೆ ನಮ್ಮಲ್ಲಿ ಭೂತಕ್ಕೆ ಆದಂತೆ ಹಣ್ಣು ಕಾಯಿ ಪೂಜೆ ಎಲ್ಲ ಆಗಬೇಕು ಇಲ್ಲದಿದ್ದರೆ ಕೈಕೊಟ್ಟಾವು. ಇನುಕರ ಕಥೆಯಲ್ಲಿ ‘ಅಗುಂಟ’ ಪರಮೋಚ್ಛ ದೇವರು, ‘ಸಿಲಾ’ ವಾಯುದೇವ, ‘ಪುಕಿಮ್ನ’, ‘ಇಸರ್ರಟೈಟ್ಸೋಕ್’ ಎಂಬಿತ್ಯಾದಿ ಸ್ತ್ರೀದೈವಗಳು, ‘ಸೆಡ್ನಾ’ ಜಲಪ್ರಾಣಿದೈವ, ‘ಟಟ್ಕಿಮ್’ ಚಂದ್ರದೇವ, ‘ನುನಮ್’ ಭೂಮಿದೇವಿ, ‘ತಪಸುಮ’ ಯಮದೇವ, ‘ಸೆಕಿನೆಕ್’ ಸೂರ್ಯದೇವಿ. ಇದರಲ್ಲಿ ಸೆಡ್ನಾ ಬಹಳ ಖ್ಯಾತೆ. ಆಕೆ ದೇವತೆ ಅಲ್ಲ. ಸೆಡ್ನಾ ಎಂಬುದು ಕ್ರೈಸ್ತ ಪಾದ್ರಿಗಳು ಇಟ್ಟ ಹೆಸರು. ‘ನುಲಿಯಯುಕ್’ ಅಥವಾ ‘ಟಲುಲಿಯಕ್’ ಎನ್ನುವುದು ಆಕೆಯ ಸರಿಯಾದ ಹೆಸರು. ಆಕೆ ಜಲಕನ್ಯೆಯಾಗಿ ಸೋಬೇಟೆ ದೊರಕಿಸಿಕೊಡುವ ಒಡತಿ, ದೈವ (ಭೂತ).  ಹೀಗೆ ಕಥೆಗಳಲ್ಲಿ ಪಾತ್ರಗಳ ಜೊತೆಯಲ್ಲಿಯೇ ಇತಿಹಾಸ ನೀತಿ ಕಲಿಕೆ ಎಲ್ಲ ಸಮಾಗಮವಾಗಿದೆ. ನಮ್ಮಲ್ಲಿ ಗುಮ್ಮ ಗುಡುಗುಮ್ಮ ಇದ್ದಂತೆ ವಿಟಿಕೋನನ್ನು ನೆನೆದರೆ ಮಕ್ಕಳಿಗೆ ಹೆದರಿಕೆ! ಭಾರತದ ಇತಿಹಾಸ ಪುರಾಣಗಳ ನಾವು ಊಹಿಸಬಹುದಾದ ಉದ್ದೇಶವೇ ಇಲ್ಲಿಯೂ ಕಾಣುತ್ತದೆ. ಇವು ಮನೋರಂಜಕವಾಗಿಯೂ ಇವೆ. ಒಂದು ರೀತಿಯಲ್ಲಿ ನೋಡಿದರೆ ಭಾರತೀಯ ಪುರಾಣಗಳಿಗಿಂತ ಭಿನ್ನವಾಗಿ ಅತಿಮಾನುಷವಾಗಿವೆ. ದೇವತೆಯರೇ ಹೆಚ್ಚು. ಎಲ್ಲಕ್ಕಿಂತ ಮೇಲಿನ ದೇವರು ಕಾಡೆಮ್ಮೆಯ ಆತ್ಮ. ಎಮ್ಮೆಯ ದೇಹದ ಮೂಲಕ ಆಹಾರ ಕೊಟ್ಟು ತಮ್ಮನ್ನು ಬದುಕಿಸುವ ದಿವ್ಯ ಶಕ್ತಿ ಎಂಬ ನಂಬಿಕೆ. ಇಲ್ಲಿ ನಮಗೆ ಭಾರತೀಯರ ನಿರಾಕಾರ ಬ್ರಹ್ಮ ನೆನಪಾದರೆ ಅದಕ್ಕೆ ಒಂದು ರೀತಿಯ ಸಾಮ್ಯ ಕಂಡರೆ ತಪ್ಪಿಲ್ಲ. ಆದರೆ ಎರಡೂ ಬೇರೆ ಬೇರೆ. 

ಉತ್ತರ ಕೆನಡಾದ ದೇಶೀ ಕರಕುಶಲ-ಸಾಹಿತ್ಯ:

ಜಾನಪದ ಎಂಬುದರ ಅರ್ಥ ಬರಿ ಹಾಡು ಕಥೆಗೆ ಸಂಬಂಧಿಸಿದ್ದಲ್ಲ ಎಂದು ಈಗಾಗಲೆ ಗಮನಿಸಿದ್ದಾಗಿದೆ. ಅದು ಸ್ಥಳಿಕರಿಗೆ ಸಂಬಂಧಿಸಿದ ಎಲ್ಲದೂ. ಇದರಲ್ಲಿ ಬಟ್ಟೆ ಬರೆ ಬಣ್ಣ ವೇಷ ಧಿರಿಸು, ವಾದ್ಯ, ಬೇಟೆಯ ಆಯುಧ, ಇತ್ಯಾದಿ ಸಾಧನಗಳಲ್ಲಿನ ಕುಸುರಿ ಮತ್ತು ಕಲಾತ್ಮಕತೆಯಲ್ಲಿ ವಿಶೇಷ ಇವೆಲ್ಲ ಇವೆ. ಕನ್ನಡನಾಡಿನಲ್ಲಿ ಸಹ್ಯಾದ್ರಿಯಲ್ಲಿ ಬೆಳೆಯುವ ಬೆತ್ತದದಿಂದ ಬುಟ್ಟಿಯನ್ನು ಮಾಡಿದರೆ ಕೆನಡಾದಲ್ಲಿ ಬರ್ಚ್ ಮರದ ಚಕ್ಕೆಯಿಂದ ಬುಟ್ಟಿ ಮಾಡುತ್ತಾರೆ. ಈ ಬರ್ಚ್ ಎಂಬ ಮರ ಸಪೂರ ಗಟ್ಟಿಯಲ್ಲ. ಇದರ ತೊಗಟೆಯ ಒಳಾಯ ತುಂಬಾ ನಯ. ಅದರ ಮೇಲೆ ಸುಂದರವಾದ ಕೆತ್ತನೆ ಕೊರೆಯುವುದು ಎಲ್ಲ ಇದೆ. ಮೂಸ್ ಎಂಬ ದೊಡ್ಡ ಜಿಂಕೆಗೆ ಸಾಮ್ಯದ ಪ್ರಾಣಿಯ ಚಿತ್ರವೋ ಹೂವೋ ಏನೋ ಒಂದು. ಬರ್ಚ್ ಬುಟ್ಟಿಯನ್ನು ನೋಡಿದಾಗ ಕನ್ನಡನಾಡಿನ ಹಸೆ ಚಿತ್ತಾರ ನೆನಪಾಗುತ್ತದೆ. ಬೆತ್ತದ ಬುಟ್ಟಿಗೆ ಕೆಮ್ಮಣ್ಣು ಹಚ್ಚಿ, ಜೇಡಿ ಮಣ್ಣಿನ ಬಿಳಿ ಚಿತ್ತಾರ. ಚಿತ್ರದ ಮೂಲ ಅಂಶಗಳು ಮತ್ತು  ಶೈಲಿ ಬೇರೆ. ಆದರೆ ಅದೇ ಬುಟ್ಟಿ ಅದರ ಮೇಲೆ ಒಂದು ಚಿತ್ರ ಎಂಬುದರಲ್ಲಿ ಸಾಮ್ಯ ಅಷ್ಟೆ.

 

ಎಡಕ್ಕೆ ಬರ್ಚ್ ಮರದ ತೊಗಟೆಯ ಬುಟ್ಟಿ, ಬಲಕ್ಕೆ ಬೆತ್ತದ ಬುಟ್ಟಿಯ ಮೇಲೆ ಕನ್ನಡಿಗರ ಹಸೆ ಚಿತ್ತಾರ

ಈ ಚಿತ್ತಾರ ಕೇವಲ ಬುಟ್ಟಿಗಳಿಗಷ್ಟೇ ಸೀಮಿತ ಅಲ್ಲ. ಬಟ್ಟೆ, ಸಂಗೀತವಾದ್ಯ, ದೋಣಿ, ಬತ್ತಳಿಕೆ ಹೀಗೆ ಎಲ್ಲ ಕಡೆ ಬರೆಯುತ್ತಾರೆ. ಕಲ್ಲಿನ ಮೇಲೂ ಚಿತ್ತಾರ ಬರೆದು ಮುಂದಿನ ಪೀಳಿಗೆಗೆ ತಾವು ಕಂಡಿದ್ದನ್ನು ಅನುಭವಿಸಿದ್ದನ್ನು ಹೇಳಿಕೊಡುವ ಪ್ರಯತ್ನವೂ ಕಾಣುತ್ತದೆ. ಉತ್ತರ ಅಮೇರಿಕಾದ ಅನೇಕ ಕಡೆ ಇರುವ ಪೆಟ್ರೋಗ್ಲಿಫ್ ಅಥವಾ ಶಿಲಾ ವಿನ್ಯಾಸಗಳನ್ನು ಶಿಕ್ಷಾ ಶಿಲೆಗಳು ಎಂದು ಮೂಲಜನರು ಕರೆಯುತ್ತಾರೆ (ಕಿನೂಮಾಗೆವಾಪ್ಕಕೊಂಗ್). ಇವು ಸುಮಾರು ೧೦೦೦ ವರ್ಷದ ಹಿಂದಿನವು.

ಪೀಟರ್ಬರೋ ಹತ್ತಿರದ ಶಿಲಾವಿನ್ಯಾಸ – ಒಂಟೇರಿಯೋ, ಕ್ಯಾನಡ ಮತ್ತು ಕೆಲವು ದೇಶೀ ಚಿಹ್ನೆಗಳು

ಟ್ರೋಗ್ಲಿಫ್ ಪಾರ್ಕ್ ನಲ್ಲಿ ಇರುವ ಇಲ್ಲಿನ ಮೂಲ ಓಜಿಬ್ವ ಜನರಲ್ಲಿ ಇದರಬಗ್ಗೆ ಮಾತಾಡಿದಾಗ ಅನೇಕ ಆಶ್ಚರ್ಯಕಾರಕ ವಿಷಯಗಳು ಹೊರಬಂದವು. ಅನಿಶ್ನಾಬಿಮೊವಿನ್ ಎಂಬ ಉಪಭಾಷೆ ಮಾತಾಡುವ ಇವರಿಗೆ ಈ ಶಿಕ್ಷಾಶಿಲೆಗಳು ಪವಿತ್ರ ಸ್ಥಾನ. ಇಲ್ಲಿ ಹಿರಿಯರು ಬಂದು ಇವನ್ನು ವಿವರಿಸಿ ಕಲಿಸುವ ಕ್ರಮ ಇದೆಯಂತೆ. ಆಮೆ, ಮಗು ಹುಟ್ಟುವುದು, ಚಕ್ರ ಇವಕ್ಕೆಲ್ಲ ಗೂಢಾರ್ಥ ಇದೆ. ಪೂರ್ವ ಹುಟ್ಟಿನ ಪ್ರತೀಕವಾದರೆ ಪಶ್ಚಿಮ ಮುಪ್ಪು, ಉತ್ತರ ಸ್ವರ್ಗ, ಹೀಗೆ. ಆಮೆ ಭೂಮಿತಾಯಿಯ ಸಂಕೇತ (ಕೂರ್ಮಾವತಾರ ನೆನಪಿಸಿಕೊಳ್ಳಿ!) ಧೀರ್ಘಾಯು ಸೃಷ್ಟಿಯ ಸಂಕೇತ, ಸ್ವಸ್ತಿಕ, ನಾಲ್ಕುಕಾಲ, ಜೀವನದ ನಾಲ್ಕುಹಂತ ಮತ್ತು ನಾಲ್ಕುದಿಕ್ಕಿನ ಸಂಕೇತ. ಕೆಂಪು ಬಣ್ಣ ಹುಟ್ಟಿನ ಸಂಕೇತ, ಅರಿಶಿಣ ಬೆಳವಣಿಗೆ, ಕಪ್ಪು ಪ್ರಬುದ್ಧತೆ, ಬಿಳಿ ಸಾವು. ಈ ಬಣ್ಣದ ಅರ್ಥ ಬಹಳ ವಿಭಿನ್ನವಾದ್ದು. “ಅಲ್ಲಿ ಕೆಲವು ತಾಮ್ರದ ಪಾತ್ರೆಗಳಿವೆಯಾಕೆ?” ಎಂದು ಕೇಳಿದಾಗ ಭಾರತೀಯ ಪೂಜೆಯಂತೆ ಒಜಿಬ್ವ ಜನರು ತಾಮ್ರದ ಪಾತ್ರೆ, ನೀರು ಉಪಯೋಗಿಸಿ ಹಣ್ಣು ಅರ್ಪಿಸಿ ಈ ಶಿಕ್ಷಾಶಿಲೆಗಳ ಬಳಿ ಪೂಜೆಮಾಡುವುದು ತಿಳಿಯಿತು. ನೀರು ಅವರಿಗೆ ಪವಿತ್ರವಾದ್ದು. ಪೂಜೆಗೆ ತಾಮ್ರದ ಪಾತ್ರೆಯೇ ಆಗಬೇಕು. ಎಷ್ಟು ಸಾಮ್ಯ ಎಂದು ಆಶ್ಚರ್ಯವಾಯಿತು. ಹೀಗೆ ಇದು ಮೂಲಜನರ ನಂಬಿಕೆ ಮತ್ತು ದೇಶೀ ಕರಕುಶಲ ಕಲೆಗಳಬಗ್ಗೆ ಒಂದು ಮೇಲ್ನೋಟ.

ಸಮನ್ವಯ:

ಇಷ್ಟೆಲ್ಲ ಇದ್ದರೂ, ಮೂಲ ಕೆನಡಾದ ಜನರ ಭಾಷೆಯಲ್ಲಿ, ಸಂಗೀತ, ಕಲೆ ಎನ್ನುವುದಕ್ಕೆ ಪ್ರತ್ಯೇಕ ಶಬ್ಧವೇ ಇಲ್ಲದ್ದರಿಂದ ಅವರಲ್ಲಿ ಜೀವನದಲ್ಲಿ ಕಲಾತ್ಮಕತೆ ಇದೆ ಆದರೆ ಕಲೆ ಎಂಬುದಾಗಿ ಪ್ರತ್ಯೇಕ ಇಲ್ಲ ಎಂದು ಐರೋಪ್ಯ ಸೌಂದರ್ಯ ಮತ್ತು ಜನಾಂಗಗಳನ್ನು ಅಧ್ಯಯನ ಮಾಡುವ ಪಂಡಿತರು (aesthetic, anthropology) ಘೋಷಿಸಿಯೂ ಆಗಿದೆ! ಆದರೆ ಜಾನಪದ ಎಂಬ ಶಬ್ಧ ಇಲ್ಲದಿದ್ದರೂ ಅವರದೆಲ್ಲವು ಜಾನಪದ folklore, folk, music ಎಂಬ ಅರ್ಥದಲ್ಲಿ ಘೋಷಿಸಿ ಆಗಿದೆ! ಈ ವೈರುಧ್ಯ ಪ್ರಾಮಾಣಿಕವಾಗಿ ಅಧ್ಯಯನಮಾಡುವವರದ್ದಲ್ಲ. ಸ್ಟೀವನ್ ಲ್ಯೂತೋಲ್ಡ್ (Steven Leuthold) ನಂತಹ ಅಧ್ಯಯನಕಾರರರು ಇದನ್ನು ಪ್ರಶ್ನಿಸಿ ಐರೋಪ್ಯರ ಕಲಾಸಿದ್ಧಾಂತ ತಪ್ಪೆಂದು ಬೇರೆ ಬೇರೆ ಸಂಸ್ಕೃತಿಗಳು ಕಲೆಯನ್ನು ನೋಡುವ ಅನುಭವಿಸುವ ರೀತಿ ಬೇರೆಂದು ವಾದಿಸಿದ್ದಾರೆ. ನಾಟ್ಯಶಾಸ್ತ್ರದಲ್ಲೂ ಗ್ರಾಮ್ಯ ನಡುವಳಿಕೆ ನಾಟಕವನ್ನು ಹಾಳುಮಾಡುತ್ತದೆ ಎಂಬ ಕಲ್ಪನೆ ಇದೆ! ಆದರೆ ನಂತರ ಕಾಲಕ್ರಮದಲ್ಲಿ ಭಾರತದಲ್ಲೂ ಹಳ್ಳಿಗಾಡಿನ ಅನುಭವಗಳ ಅರ್ಥ ಆಗಿ ಶಾಸ್ತ್ರಗಳು ಲಕ್ಷಣ ಗ್ರಂಥಗಳು ದೇಶೀ ಎಂಬ ವಿಭಾಗದಲ್ಲಿ ಸಾಮಾನ್ಯರ ಕಲೆಗಳಿಗೆ ಸೂಕ್ತ ಗೌರವಯುತ ಸ್ಥಾನ ಕಲ್ಪಿಸಿವೆ ಅನ್ನಿಸುತ್ತದೆ. ಉದಾಹರಣೆಗೆ ಸಂಗೀತ ಶಾಸ್ತ್ರಗಳಲ್ಲಿ ಇರುವ ನಿಯಮಗಳೆಲ್ಲ ಉತ್ಕೃಷ್ಟವಾದ ದೇಶೀ ಗೀತೆಗಳಲ್ಲಿ ಸ್ವಾಭಾವಿಕವಾಗಿ ಇರುವ ಅಂಶಗಳೇ ಆಗಿವೆ. ಹಾಗಾಗಿ, ಕೆನಡಾದ ಮೂಲಜನರ ಜೀವನದ ಕಲಾತ್ಮಕತೆಯನ್ನೇ ಕಲೆಯಾಗಿ ಬೆಳೆಸಿ ಅನುಭವಿಸುವ ವಿಷಯದಲ್ಲಿ ಶಾಸ್ತ್ರಗಳಲ್ಲಿ ಇರುವ ದೇಶೀ ಎಂಬ ಕಲ್ಪನೆ ನನಗೆ ಸಂವಾದಿಯಾಗಿ ಕಾಣುತ್ತದೆ. ಕಲೆ ಎಂಬುದು ಜನ ಜೀವನದಿಂದ ಬೇರೆಯಾಗಿ ಇರಬೇಕಿಲ್ಲ ಎನ್ನುವುದು ದೇಶೀ ಎಂಬ ಶಾಸ್ತ್ರದ ಕಲ್ಪನೆಯಲ್ಲಿ ಅಂತರ್ಗತವಾಗಿದೆ. ಹಾಗಾಗಿ ಆ ದೃಷ್ಟಿಯಿಂದ ಮತ್ತು ಭಾರತೀಯ ದೇಶೀ ವಸ್ತು-ವಿಷಯಗಳ ಅನುಭವದ ದೃಷ್ಟಿಯಿಂದ ಕೆನೆಡಾದ ಮೂಲಜನರನ್ನು ನೋಡಿದಾಗ ಅಶಾಸ್ತ್ರೀಯ ಅಥವಾ ಗ್ರಾಮ್ಯ ಎಂಬ ವಿಸಂಗತಿಗಳು ಮಾಯವಾಗುತ್ತವೆ. ಕೆನಡಾದ ಮೂಲಜನರ ಸೌಂದರ್ಯಶಾಸ್ತ್ರದಲ್ಲಿ ಎರಡು ಬಹುಮುಖ್ಯವಾದ ಅಂಶಗಳಿವೆ ಎಂದು ಸ್ಟೀವನ್ ಲ್ಯೂತೋಲ್ಡ್ ಹೇಳುತ್ತಾರೆ. ಒಂದನೆಯದು ತಾವಿರುವ ಸ್ಥಳವನ್ನು ಪವಿತ್ರ ಎಂದೂ, ಸ್ಥಳಕ್ಕಂಟಿ ಏನೋ ವಿಶೇಷ ಸಂವೇದನೆಯನ್ನೂ ಬಂಧನವನ್ನೂ ಎಲ್ಲದರಲ್ಲೂ ತೋರುವುದು, ಎರಡನೆಯದು, ಅಧ್ಯಾತ್ಮವನ್ನು ಪ್ರಕೃತಿಯಲ್ಲೇ ಅರ್ಥೈಸಿಕೊಳ್ಳುವುದು. ಇವು ಎರಡೂ ಭಾರತೀಯ ತತ್ವಶಾಸ್ತ್ರದಲ್ಲೂ (ದರ್ಶನಗಳು) ಬಹಳ ಮುಖ್ಯ ಎನಿಸುವಂತಾದ್ದು: ಲೌಕಿಕದಲ್ಲಿ ಪುಣ್ಯಭೂಮಿ ಎಂಬ ಕಲ್ಪನೆ ಮತ್ತು ಈ ಪೂರ್ಣ ಅಸ್ತಿತ್ವವೇ(ಪ್ರಕೃತಿ) ಪರಬ್ರಹ್ಮ ವಸ್ತುವೆಂಬ ಸಿದ್ಧಾಂತ. ಭಾರತೀಯ ಸೌಂದರ್ಯಶಾಸ್ತ್ರಕ್ಕೆ ಭಾರತೀಯ ದರ್ಶನಗಳು ತಳಹದಿ ಎಂದು ಖ್ಯಾತ ವಿದ್ವಾಂಸರಾದ ಮೈಸೂರು ಹಿರಿಯಣ್ಣನವರು (ಅವರ Art Experience ಪುಸ್ತಕ ನೋಡಿ) ತೋರಿಸಿದ್ದನ್ನು ಗಮನಿಸಿದಾಗ ಭಾರತೀಯರ ಸೌಂದರ್ಯಶಾಸ್ತ್ರಕ್ಕೂ ಕೆನಡಾದ ಮೂಲಜನರ ಸೌಂದರ್ಯಪ್ರಜ್ಞೆಗೂ ಸಾಮ್ಯ ಇರುವುದು ಕಾಣುತ್ತದೆ. ಈ ಸಾಮ್ಯ ದರ್ಶನದಲ್ಲೂ ಒಂದುರೀತಿಯಲ್ಲಿ ಇದೆ ಎಂದರೆ ತಪ್ಪಾಗಲಾರದು. ಇದನ್ನು ಸರಳವಾಗಿ ಹೇಳಬೇಕೆಂದರೆ, ವಸ್ತು ಕ್ಷೇತ್ರಗಳ ಪಾವಿತ್ರ್ಯ ಮತ್ತು ಪ್ರಕೃತಿಯ ಆರಾಧನೆ ಇವುಗಳ ವಿಚಾರದಲ್ಲಿ ಎರಡೂ ಸಂಸ್ಕೃತಿಗಳಿಗೆ ಸಾಮ್ಯ ಇದೆ.

ಅಮೇರಿಕಾದ ಮೂಲ ಜನ ಇಂಕಾ ಮಾಯಾ ಮೊದಲಾದ ಮಹಾನಾಗರಿಕತೆಗಳನ್ನು ಕಟ್ಟಿದ ವಿಜೃಂಭಣೆಯಿಂದ ಮೆರೆದ ಜನ ಎನ್ನುವುದನ್ನು ಮರೆಯಬಾರದು. ಜಗತ್ತಿನ ಜನರ ಹೊಟ್ಟೆ ತುಂಬಿಸುವ ಈಗಿರುವ ಜೋಳ ಆಲೂಗೆಡ್ಡೆ ಹೀಗೆ ಅನೇಕ ತಳಿಗಳನ್ನು ಕಂಡು ಹಿಡಿದವರು ಇವರು. ಅಮೇರಿಕಾದ ಸುಮಾರು ೨೫ ಶೇಕಡಾ ಔಷಧಿಗಳಲ್ಲಿ ಮೂಲಜನರು ಬಳಸುತ್ತಿದ್ದ ಔಷಧೀ ವಸ್ತುಗಳಿವೆ ಎಂಬ ಅಂದಾಜಿದೆ. ಹೀಗಿರುವಾಗ ಈಗಿರುವ ಅವರ ಕಲೆಗಳು ಹಿಂದೇ ಇನ್ನೂ ಉಚ್ಛ್ರಾಯದಲ್ಲಿ ಇದ್ದಿರಬಹುದು. ಇವೆಲ್ಲದರಲ್ಲೂ ಭಾರತಕ್ಕೆ ಸಾಮ್ಯ ಇದೆ. ಕೆನಡಾದ ಮೂಲಜನರ ಜೀವನದ ಅಂಶಗಳಲ್ಲಿ ನಮ್ಮಲ್ಲಿಲ್ಲದ ಎಷ್ಟೋ ಹೊಸತೂ ಇದೆ ಅದಕ್ಕೆ ಸಂವಾದಿಯಾದ್ದು ಇದೆ, ಅದೇ ತೆರನಾದ್ದು ಇದೆ. ಅದನ್ನು ಜನ ಸಂಪ್ರದಾಯದ ದೃಷ್ಟಿಯಿಂದ ಭಕ್ತಿಯಿಂದ ಜೀವಂತ ಪರಂಪರೆಯಾಗಿ ನೋಡುವುದೂ ಕಾಣುತ್ತದೆ. ಇವನ್ನೆಲ್ಲ ಚಿಂತಿಸಿ ನಾವು ಕಲೆಗಳಿಗೆ ಗರಿಮೆಯನ್ನೂ, ಕಲಾವಿದರಿಗೆ ಮತ್ತು ಪರಂಪರೆಗೆ ಸ್ವಾತಂತ್ರ್ಯವನ್ನೂ ಕಲ್ಪಿಸಬೇಕಾಗುತ್ತದೆ. ಲೂಯೀಸ್ ರಿಯಾಲ್ ಎನ್ನುವ ಮೇಟೀ ಜನರ ಹಕ್ಕಿಗೆ ಹೋರಾಡಿ ಜೀವ ಕೊಟ್ಟಾತ ಆಡಿದ ಮಾತೊಂದಿದೆ: “Life, without the dignity of an intelligent being, is not worth having.” (ಬುದ್ದಿಮತ್ತೆ ಇದೆ ಎಂಬ, ಗೌರವ ಸಲ್ಲದ ಜೀವನವನ್ನು ಪಡೆದು ಪ್ರಯೋಜನವಿಲ್ಲ). ನಿಮ್ನ, ಕನಿಷ್ಠ ಎಂಬ ಹಣೆಪಟ್ಟಿ ಇಲ್ಲದ ಎಲ್ಲಾ ರೀತಿಯ ಎಲ್ಲಾ ಗುಣಮಟ್ಟದ ಕಲೆಗಳಲ್ಲಿ ತೊಡಗಿಸಿಕೊಳ್ಳುವ ಸ್ವಾತಂತ್ರ್ಯ, ಉತ್ಸಾಹ ಎಲ್ಲ ಜನರಿಗೂ ದಕ್ಕುವಂತಾಗಬೇಕು. ಜಾನಪದ ಎಂದರೆ ಭೂಮಿಗಂಟಿದ ಕೃತಕವಲ್ಲದ ಉತ್ಕೃಷ್ಟವಾದ ಜನಜೀವನದ ಅಂಶಗಳು, ನಿಮ್ನವಾದುವಲ್ಲ ಎನ್ನುವ ಭಾವನೆ ಸ್ಥಾಪನೆ ಆಗಬೇಕು. ಈ ಅರಿವು ನಮ್ಮಲ್ಲಿ ಮೂಡಿ ಅಂತಸ್ಥವಾಗಬೇಕು. ಆಗ ವಸ್ತುನಿಷ್ಠವಾಗಿ ದೇಶೀ ವ್ಯವಸ್ಥೆಯ ಒಳ್ಳೆಯ ಗುಣಗಳನ್ನು ಗ್ರಹಣಮಾಡಲು, ಅನುಭವಿಸಲು, ಅಭಿವೃದ್ಧಿಗೊಳಿಸಲು ಅವಕಾಶ ಉಂಟಾಗುತ್ತದೆ. ದೇಶೀ ಕಲೆಗಳು ಮತ್ತು ಅವುಗಳಲ್ಲಿನ ಉತ್ಕೃಷ್ಟಅಂಶಗಳು ವಿನಾಶವಾಗುವುದನ್ನು ತಪ್ಪಿಸಬಹುದು.

(‘ಅಮೇರಿಕನ್ ಜಾನಪದ – ಕನ್ನಡದ ಕಂಗಳಿಗೆ ಕಂಡಂತೆ’ ಎಂಬ ಕನ್ನಡ ಸಾಹಿತ್ಯ ರಂಗ ಉತ್ತರ ಅಮೇರಿಕಾ ಇವರ ಪುಸ್ತಕದಲ್ಲಿ ೨೦೨೨ ಎಪ್ರಿಲ್ ನಲ್ಲಿ ಪ್ರಕಟಿತವಾದ ಒಂದು ಮುಖ್ಯ ಪ್ರಬಂಧದ ಸಂಪಾದಿತ ರೂಪ)

ಪರಾಮರ್ಶಿತ ದಾಖಲೆಗಳು:

  1. ಇನ್ಯೂಟ್ ನಿಘಂಟು: https://tusaalanga.ca/glossary?l=T,http://www.labradorvirtualmuseum.ca/english-inuttut.htm
  2. Indegenous perspectives on contemporary native art: https://digitalrepository.unm.edu/cgi/viewcontent.cgi?article=1036&context=educ_llss_etds
  3. Indegenous Peoples in Canada – The Canadian Encyclopedia

ವಿ.ಸೂ: “ನಿ:ಹ ಯೂಟ್” ಇತ್ಯಾದಿ ಮೂಲಜನರ ಪದಗಳ ಉಚ್ಛಾರಗಳಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ ಆದರೆ ಇವು ಆದಷ್ಟು ಕನ್ನಡಕ್ಕೆ ಸುಮಾರು ಸಮೀಪವಾಗಿವೆ. 

Picture Credits:

Picture of a Chippewa boy and some symbols:  https://www.warpaths2peacepipes.com

Birch basket: https://homeandaway.gallery

Hase Basket: https://hasiruvasi.com

Petroglyphs: https://www.ancient-origins.net

Glyphs: https://www.legendsofamerica.com http://www.groseducationalmedia.ca/petroglyphs

Feature Image Credit: wikipedia.org

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply