close logo

ಕಥಾಮಾಲಿಕೆ- ಗುರುವಾಕ್ಯ ಪರಿಪಾಲನೆ

[ಮಕ್ಕಳಿಗೆ, ಈಗ ತಾನೇ ೫-೬ನೇ ತರಗತಿ-ಗೆ ಬರುತ್ತಿರುವ ಹುಡುಗ ಹುಡುಗಿಯರಿಗೆ ಮೊದ-ಮೊದಲು ಹೇಳುವ ಕಥೆ – ಆರುಣಿ ಮತ್ತು ಉಪಮನ್ಯುವಿನ ಕಥೆ. ಮಹಾಭಾರತದ ಆದಿಪರ್ವದಲ್ಲೇ ಬರುವ ಈ ಕಥೆಗಳು ಅತ್ಯಂತ ಸರಳವಾಗಿದ್ದರೂ, ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನು ಬೀರಬಲ್ಲಂಥವು. ಇದು ಗುರು-ವಾಕ್ಯಪರಿಪಾಲನೆಯಲ್ಲದೇ, ಗುರು-ಶಿಷ್ಯ ಸಂಬಂಧದ ಆಳವನ್ನು ಎತ್ತಿ ತೋರಿಸುವಂತಹ ಕಥೆಗಳು. ಇದನ್ನು ಓದುವ ಮಕ್ಕಳು ಶಿಷ್ಯರಾಗಲು ತಯಾರಾಗುವಂತೆಯೇ, ಓದುವ ಶಿಕ್ಷಕರು ಗುರುವಾಗಲು ತಪಸ್ಸು ನಡೆಸಬೇಕಾಗುತ್ತದೆ. ಆದುದರಿಂದ ಇದು ಸರ್ವತೋಮುಖ, ಸರ್ವ-ರೀತಿಯಾದ ಮನಃ-ಪರಿವರ್ತನೆಯನ್ನು ಸದಾ ಕಾಲ ನಡೆಸುವಂತಹ ಕಥೆಗಳು. ಭಾರತೀಯ ಸಂಸ್ಕೃತಿಯ ಹೆದ್ದಾರಿಯಲ್ಲಿ ನಡೆಯುವುದಕ್ಕೆ ನಮ್ಮನ್ನು ತಯಾರು ಮಾಡುವಂತಹ, ಸಮಾಜವನ್ನು ಪ್ರೇರೇಪಿಸುವಂತಹ ಬೆಳಕಿನಂತಹ ಕಥೆಗಳು. ಈ ಕಥೆಗಳಲ್ಲಿನ ಆರ್ದ್ರತೆಗೆ ಮನಸೋಲದಿರುವುದಕ್ಕೆ ಸಾಧ್ಯವಿಲ್ಲ. ಆ ದೃಷ್ಟಿಕೋನ ಮತ್ತು ಮನಃಸತ್ವವನ್ನು ಭಾರ್ಗವ ರಾಮ್ ಸೊಗಸಾಗಿ ತಂದಿದ್ದಾರೆ ಈ ಬರಹದಲ್ಲಿ, ಇದು ನಮ್ಮ ಕಥಾಮಾಲಿಕೆ-ಯ ಮೊದಲ ಕನ್ನಡ ಕಥೆ. – ಸಂಪಾದಕರು].

ಹಿಂದಿನ ಕಾಲದ ವಿದ್ಯಾಭ್ಯಾಸದ ಬಗ್ಗೆ  ಅರಿವು ಮೂಡಿಸುವಂತಹ, ಮಹಾಭಾರತದ ಆದಿಪರ್ವದಲ್ಲಿ  ಬರುವ ಒಂದು ಅಪರೂಪದ ಕಥೆಯಿದು.

ಜನಮೇಜಯನ ಕಾಲದಲ್ಲಿ ಆಯೋಧಧೌಮ್ಯರೆಂಬ ಹೆಸರಿನ ಮಹರ್ಷಿಗಳೊಬ್ಬರಿದ್ದರು. ಅವರಿಗೆ ಆರುಣಿ, ಉಪಮನ್ಯು ಮತ್ತು ವೇದ ಎಂಬ ಮೂವರು ಶಿಷ್ಯರಿದ್ದರು.

ಆರುಣಿ ‘ಉದ್ದಾಲಕ’ ನಾದ ಕಥೆ

ಒಮ್ಮೆ ಧೌಮ್ಯ ಮಹರ್ಷಿಗಳು ಆರುಣಿಯನ್ನು ಕರೆದು ಒಡೆದು ಹೋಗಿದ್ದ ಗದ್ದೆಯ ಬದುವನ್ನು ಕಟ್ಟಿ ಬರುವಂತೆ ಹೇಳಿ ಕಳುಹಿಸಿದರು. ಗುರುಗಳ ವಾಕ್ಯದಂತೆ ಆರುಣಿಯು ಗದ್ದೆಗೆ ಹೋಗಿ, ಅಲ್ಲಿರುವ ಒಡೆದುಹೋದ ಬದುವನ್ನು ಸರಿಪಡಿಸಲು ಪ್ರಯತ್ನಿಸಿದನು. ಎಷ್ಟೇ ಪ್ರಯತ್ನಿಸಿದರೂ ಆ ಕಾರ್ಯವನ್ನು ಸಂಪೂರ್ಣವಾಗಿಸಲು ಆರುಣಿ ವಿಫಲನಾದನು. ಸತತ ಪ್ರಯತ್ನದ ನಂತರ ಅವನೊಂದು ಉಪಾಯ ಮಾಡಿದನು. ನೀರು ಹರಿಯುತ್ತಿದ್ದ ಬದುವಿನ ಮಧ್ಯದಲ್ಲಿ ಅಡ್ಡಲಾಗಿ ಮಲಗಿಬಿಟ್ಟನು. ಗುರು ಧೌಮ್ಯರು ಹೇಳಿದ ಕೆಲಸವನ್ನು ಮಾಡುವುದು ಅವನ ಧ್ಯೇಯವಾಗಿತ್ತು.ಹರಸಾಹಸ ಪಟ್ಟು ಅಲ್ಲಿಯೇ ಮಲಗಿಕೊಂಡಿದ್ದನು.

ಬಹಳ ಹೊತ್ತಿನ ನಂತರ ನಂತರ ಧೌಮ್ಯರು ಆರುಣಿಗೆ ವಹಿಸಿದ ಕೆಲಸ ನೆನಪಿಸಿಕೊಂಡರು. ಶಿಷ್ಯರ ಜೊತೆಗೂಡಿ ಗದ್ದೆಯ ಬಳಿ ತೆರಳಿದರು. ಅಲ್ಲಿಗೆ ಹೋಗಿ ಆರುಣಿಯನ್ನು ಕೂಗಿದರು. ಗುರುಗಳ ಧ್ವನಿಯನ್ನು ಆಲಿಸಿದ ಆರುಣಿ ತಕ್ಷಣ ಮೇಲೆದ್ದು ಗುರುಗಳ ಎದುರುಗಡೆ ಬಂದು ನಿಂತು ವಿನಮ್ರತೆಯಿಂದ ನುಡಿದನು: “ಗುರುದೇವ! ಬದುವು ಕೊಚ್ಚಿಹೋಗಿ ಗದ್ದೆಯಿಂದ ಹರಿದು ಹೋಗುತ್ತಿದ್ದ ನೀರನ್ನು ತಡೆಯಬೇಕೆಂದು ತಮ್ಮಿಂದ ಅಜ್ಞಪ್ತನಾದ ನಾನು ಆ ಬದುವಿಗೆ ಅಡ್ಡಲಾಗಿ ಮಲಗಿದ್ದೆನು. ತಮ್ಮ ಧ್ವನಿಯನ್ನು ಕೇಳುತ್ತಲೇ ಆ ಜಾಗದಿಂದ ಮರಳಿ ನೀವು ಇದ್ದಲ್ಲಿಗೆ ಬಂದೆನು. ತಮ್ಮನ್ನು ಅಭಿವಾದನಮಾಡಿ ಕೇಳಿಕೊಳ್ಳುತ್ತೇನೆ, ನಾನು ತಮಗಾಗಿ ಮತ್ತಾವ ಕಾರ್ಯ ಮಾಡಲಿ? ತಿಳಿಸಿ ” ಎಂದನು.

ಆರುಣಿಯ ಮಾತನ್ನು ಕೇಳಿದ ಧೌಮ್ಯರು ಹೀಗೆಂದರು : “ನನ್ನ ಕೂಗನ್ನು ಕೇಳಿದೊಡನೆಯೇ ನೀನು ಗದ್ದೆಯ ಬದುವನ್ನು ಭೇದಿಸಿಕೊಂಡು ಬಂದೆಯಾದ ಕಾರಣ ನೀನು ಅದೇ ಹೆಸರಿನಿಂದ ಪ್ರಸಿದ್ಧನಾಗುವೆ. ಬದುವನ್ನು ಕಟ್ಟಿ ಪುನಃ ಭೇದಿಸಿಕೊಂಡು ಬಂದೆಯಾದ ಕಾರಣ ನೀನು ‘ಉದ್ದಾಲಕ‘ ನೆಂಬ ಹೆಸರನ್ನು ಪಡೆಯುವೆ ಎಂದು ಬಹಳ ಪ್ರೀತಿಯಿಂದ ತನ್ನ ಶಿಷ್ಯನ ಶ್ರದ್ಧಾ-ಭಕ್ತಿಯನ್ನು ಮೆಚ್ಚಿ ಅನುಗ್ರಹಿಸಿದರು. ಅದರ ಜೊತೆಗೆ ಗುರುಗಳ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸಿದ ಕಾರಣ ನೀನು ಶ್ರೇಯೋವಂತನಾಗುತ್ತೀಯೆ, ಸಕಲ ಶಾಸ್ತ್ರ ಮತ್ತು ವೇದಗಳು ನಿನ್ನ ಬುದ್ಧಿಗೆ ಗೋಚರವಾಗಲಿ” ಎಂದು ಆಶೀರ್ವದಿಸಿದರು.

ಅಶ್ವಿನೀದೇವತೆಗಳ ಅನುಗ್ರಹಕ್ಕೆ ಪಾತ್ರನಾದ ಉಪಮನ್ಯುವಿನ ಕಥೆ

ಉಪಮನ್ಯು ಆಯೋಧಧೌಮ್ಯರ ಮತ್ತೊಬ್ಬ ಶಿಷ್ಯ. ಪ್ರತಿದಿನ ಮುಂಜಾನೆಯಿಂದ ಸಂಜೆಯ ತನಕ ಹಸು-ಕರುಗಳನ್ನು  ಕಾಯುವುದು ಅವನ ಕೆಲಸ. ಕೆಲಸವನ್ನು ಸ್ವತಃ ಗುರುಗಳೇ ಆಜ್ಞಾಪಿಸಿದ್ದರು. ಅವರ ವಚನದಂತೆ ಶಿಷ್ಯ ಉಪಮನ್ಯು ಹಗಲಿನ ಸಮಯದಲ್ಲಿ ದನ ಕಾಯುತ್ತಾ ರಾತ್ರಿಯ ಸಮಯದಲ್ಲಿ ಆಶ್ರಮಕ್ಕೆ ಬಂದು ಗುರುಗಳ ಆಜ್ಞಾಪನೆಗೆ ಕಾಯುತ್ತಿದ್ದ. ಹೀಗೆ ಕೆಲವು ದಿನಗಳು ಉರುಳಿದವು, ಉಪಮನ್ಯುವಿನ ದಿನಚರಿಯನ್ನು ನೋಡುತ್ತಿದ್ದ ಗುರುಗಳು ಅವನನ್ನು ಒಂದು ದಿನ ದಿಟ್ಟಿಸಿ ನೋಡುತ್ತಾ ಅವನು ದಷ್ಟಪುಷ್ಟನಾಗಿರುವುದನ್ನು ಲಕ್ಷಿಸಿ, ಪ್ರಶ್ನಿಸಿದರು: “ಉಪಮನ್ಯು! ನೀನು ನಿನ್ನ ಜೀವನವನ್ನು ಹೇಗೆ ಸಾಗಿಸುತ್ತಿರುವೇ..? ಇತ್ತೀಚೆಗೆ ನೀನು ಬಹಳ ಬಲಿಷ್ಠನಂತೆ ಕಾಣುತ್ತಿರುವೆಯಲ್ಲಾ..?”

ಅದಕ್ಕುತ್ತರವಾಗಿ “ಗುರುಗಳೇ ಪ್ರತಿದಿನ ಭಿಕ್ಷಾಟನೆ ಮಾಡಿ ಅನ್ನ ತಂದು ಊಟ ಮಾಡುವೆನು ಎಂದನು”.”ಮಗು ಸನಾತನ ಧರ್ಮಾನುಸಾರ ಆಚಾರದ ಪ್ರಕಾರ ಭಿಕ್ಷಾಟನೆ ಮಾಡಿ ತಂದದ್ದನ್ನು ಮೊದಲು ಗುರುಗಳಿಗೆ ಅರ್ಪಿಸಬೇಕು” ಎಂದು ಧೌಮ್ಯರು ತಿಳಿಹೇಳಿದರು. ಅದನ್ನು ಬಹಳ ಶ್ರದ್ಧೆಯಿಂದ ಒಪ್ಪಿ ಉಪಮನ್ಯುವು ಆ ಮಾತಿನಂತೆಯೇ ನಡೆದುಕೊಂಡನು. ಪ್ರತಿದಿನವೂ ಭಿಕ್ಷಾನ್ನವನ್ನು ಗುರುದೇವ ಧೌಮ್ಯರಿಗೆ ಶ್ರದ್ಧಾ-ಭಕ್ತಿಯಿಂದ ಅರ್ಪಿಸುತ್ತಿದ್ದನು. ನಂತರ ಗುರುಗಳ ಆಜ್ಞೆಗೆ ಕಾಯುತ್ತಾ ನಿಲ್ಲುತ್ತಿದ್ದನು. ಭಿಕ್ಷಾನ್ನವನ್ನು ಗುರುಗಳು ಇವನಿಗೆ ಸ್ವಲ್ಪವೂ ನೀಡುತ್ತಿರಲಿಲ್ಲ. ಹಾಗೆ ಇವನೂ ಸಹ ಕೇಳುತ್ತಿರಲಿಲ್ಲ. ನಂತರದ ದಿನಗಳಲ್ಲಿ ಉಪಮನ್ಯುವು ಮೊದಲಿನ ಹಾಗೆ ದನ ಕಾಯುವ ಕೆಲಸವನ್ನು ಮುಂದುವರೆಸಿದನು. ಅವನ ಮುಖದಲ್ಲಿ ಉತ್ಸಾಹ ಮತ್ತು ದೇಹದಲ್ಲಿ ಸದೃಢತೆ ಮೊದಲಿನಂತೆಯೇ ಇದ್ದಿತ್ತು.

ಇದನ್ನು ಗ್ರಹಿಸಿದ ಗುರುಗಳು ಮತ್ತೊಮ್ಮೆ ಅವನನ್ನು ಪರಿಶೀಲಿಸಿದರು. ಆಗ ಅವನು ಹೇಳಿದ “ಗುರುದೇವ ಮೊದಲನೆಯ ಭಿಕ್ಷೆಯನ್ನು ತಮಗರ್ಪಿಸಿ, ಎರಡನೆಯ ಸಲ ಮತ್ತೊಮ್ಮೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ”. ಆಗ ಧೌಮ್ಯರು ಹೀಗೆಂದು ಉತ್ತರಿಸಿದರು: “ನೀನು ಎರಡನೆಯ ಸಲ ಭಿಕ್ಷೆ ಬೇಡುವುದರಿಂದ ಮತ್ತೊಬ್ಬ ವಿದ್ಯಾರ್ಥಿಯ ಆಹಾರವನ್ನು ಅಪಹರಿಸಿದಂತಾಗುವುದಿಲ್ಲವೇ..? ಹೀಗೆ ಮಾಡುವುದು ಸರಿಯಲ್ಲ ಇದು ಅಧರ್ಮ”

ಎಂದು ತಿಳಿಸಿದರು. ಆದರೆ ಉಪಮನ್ಯು ಹೊಟ್ಟೆಗೇನು ಮಾಡಬೇಕೆಂದು ಹೇಳಲಿಲ್ಲ. ಶಿಷ್ಯನಾದ ಇವನಿಗೆ ಅವರು ಹೇಳಿದ ಮಾತು ವೇದವಾಕ್ಯದಂತಾಗಿತ್ತು.

ನಂತರದ ದಿನಗಳಲ್ಲಿ ಉಪಮನ್ಯುವಿನ ದಿನಚರಿ ಮೊದಲಿನ ಹಾಗೆ ಮುಂದುವರೆಯಿತು. ಉಪಮನ್ಯುವು ಕೂಡಾ ಸ್ವಲ್ಪವೂ ಕೃಶನಾಗದೇ ಮೊದಲಿನಂತೆಯೇ ಇದ್ದನು. ಮತ್ತೆ  ಸ್ವಲ್ಪ ದಿನಗಳ ನಂತರ ಮತ್ತೊಮ್ಮೆ ಗುರುಗಳು ಇವನನ್ನು ವಿಚಾರಿಸಿದರು. “ಮಗು ಈಗ ನಿನ್ನ ಜೀವಿಕೆಗಾಗಿ ಯಾವ ವೃತ್ತಿಯನ್ನು ಅವಲಂಬಿಸಿರುವೆ?” ಉಪಮನ್ಯು ಹೀಗೆಂದನು: “ಹಸುಗಳ ಹಾಲನ್ನು ಕುಡಿದು ಜೀವಿಸುತ್ತಿದ್ದೇನೆ, ಗುರುದೇವ!” ಆಗ ಅದಕ್ಕೆ ಪ್ರತ್ಯುತ್ತರವಾಗಿ “ನನ್ನ ಅನುಮತಿ ಇಲ್ಲದೆ ಆಶ್ರಮದ ಹಸುಗಳ ಹಾಲನ್ನು ಕುಡಿಯಬಾರದು” ಎಂದರು.

ಹತ್ತಾರು ದಿನ ಕಳೆದವು, ಉಪಮನ್ಯುವಿನ ದೇಹದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಲಿಲ್ಲ. ಎಂದಿನಂತೆ ಉತ್ಸಾಹದಿಂದ ಉಪಮನ್ಯುವು ತನ್ನ ಕೆಲಸಕಾರ್ಯಗಳಲ್ಲಿ ನಿರತನಾಗಿದ್ದ. ಹಸುಗಳನ್ನು ಕಾಯ್ದುಕೊಂಡು ಸಾಯಂಕಾಲ ಆಶ್ರಮಕ್ಕೆ ಹಿಂತಿರುಗಿದ ಉಪಮನ್ಯುವನ್ನು ಗುರುಗಳು ಕೇಳಿದರು. “ಭಿಕ್ಷೆಯನ್ನು ತಿನ್ನುತ್ತಿಲ್ಲ, ಹಾಲು ಕುಡಿಯುತ್ತಿಲ್ಲ, ಮತ್ತೆ ಹೊಟ್ಟೆಗಾಗಿ ಏನು ಮಾಡಿಕೊಂಡಿರುವೆ..?”

ಆಗ ಉಪಮನ್ಯು ಉತ್ತರಿಸಿದನು: “ಕರುಗಳು ಹಾಲು ಕುಡಿಯುವಾಗ ಅವುಗಳ ಕಟವಾಯಿಗಳಿಂದ ಹೊರಗೆ ಬರುವ ನೊರೆಯನ್ನು ತಿನ್ನುವೆನು, ಗುರುದೇವ!”. ಆಗ ಗುರುಗಳು “ಸಾಧುವಾದ ಕರುಣೆಯುಳ್ಳ ಕರುಗಳು ಅವು ಕುಡಿಯುವ ಹಾಲನ್ನೆಲ್ಲಾ ನೊರೆಯ ರೂಪವಾಗಿ ನಿನಗೆ ಕೊಟ್ಟುಬಿಡುತ್ತವೆ”. ಇದನ್ನು ಪರೋಕ್ಷವಾಗಿ ನೋಡಿದಾಗ ಅವುಗಳ ಆಹಾರವನ್ನು ನೀನು ಕಸಿದುಕೊಂಡಂತಾಗುತ್ತದೆ, ಇದು ಧರ್ಮವಲ್ಲ” ಎಂದು ಈ ಮಾರ್ಗವನ್ನೂ ನಿಷೇಧಿಸಿದರು.

ಈ ಪ್ರಕಾರವಾಗಿ ಉಪಮನ್ಯುವಿನ ಎಲ್ಲ ವಿಧವಾದ ಆಹಾರವೂ ನಿಷೇಧಿಸಲಾಯಿತು. ನಂತರದ ದಿನಗಳಲ್ಲಿ ಅವನು ಅತಿಯಾಗಿ ಬಳಲಿದವನಾದನು. ಹೊಟ್ಟೆಗಿಲ್ಲದೇ ಒಮ್ಮೆ ಅರಣ್ಯದಲ್ಲಿ ಸಿಗುವಂತಹ ಎಕ್ಕದೆಲೆಯನ್ನು ತಿಂದುಬಿಟ್ಟನು. ಎಕ್ಕದೆಲೆ ಸಾಮಾನ್ಯವಾಗಿ ಬಹಳ ಕಟು, ಕಹಿ ಮತ್ತು ತೀಕ್ಷ್ಣವಾಗಿತ್ತು. ಆದಕಾರಣ ಆ ಎಲೆ ಉಪಮನ್ಯುವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಎಕ್ಕದೆಲೆಯ ತೀಕ್ಷ್ಣತೆಯಿಂದಾಗಿ ಉಪಮನ್ಯುವು ದೃಷ್ಟಿಹೀನನಾದನು. ಕಣ್ಣು ಕಾಣದೆಯೇ ಅವನು ಅತ್ತಿತ್ತ ಅಲೆದಾಡುತ್ತಾ ದೊಡ್ಡ ಬಾವಿಗೆ ಬಿದ್ದುಬಿಟ್ಟನು.

ಸೂರ್ಯಾಸ್ತವಾದರೂ ಉಪಮನ್ಯುವು ಆಶ್ರಮಕ್ಕೆ ಹಿಂದಿರುಗದ ಕಾರಣ ಎಲ್ಲಾ ಶಿಷ್ಯರ ಜೊತೆ ಧೌಮ್ಯರು ಉಪಮನ್ಯುವು ಕುಪಿತನಾಗಿರಬಹುದೆಂದು ಊಹಿಸಿ, ಅವನನ್ನು ಹುಡುಕಲು ಹೊರಟರು. ಅರಣ್ಯದ ಕಡೆಯಲ್ಲಾ ಉಪಮನ್ಯುವನ್ನು ದೊಡ್ಡದಾಗಿ ಕೂಗುತ್ತಾ ಕರೆದರು. ಆಗ ಅಲ್ಲೊಂದು ಬಾವಿಯಿಂದ ಪ್ರತಿಧ್ವನಿ ಮೊಳಗಿತು, “ಗುರುದೇವಾ..! ನಾನು ಒಂದು ಬಾವಿಯಲ್ಲಿ ಬಿದ್ದು ಬಿಟ್ಟಿದ್ದೇನೆ” ಎಂದನು. ನಂತರ ಎಲ್ಲರೂ ಅಲ್ಲಿಗೆ ಆಗಮಿಸಿದರು. ನಡೆದ ವಿಷಯವನ್ನೆಲ್ಲ ಉಪಮನ್ಯುವು ತಿಳಿಸಿದನು. ಆಗ ಗುರುಗಳು ದೇವ ವೈದ್ಯರಾದ ಅಶ್ವಿನೀದೇವತೆಗಳನ್ನು ಸ್ತೋತ್ರ ಮಾಡು ಅವರು ನಿನಗೆ ಅನುಗ್ರಹಿಸುತ್ತಾರೆಂದು ನಿರ್ದೇಶಿಸಿದರು. ಗುರುಗಳ ಮಾತಿನಂತೆ ಉಪಮನ್ಯುವು ಅಶ್ವಿನೀದೇವತೆಗಳನ್ನು ಸ್ತೋತ್ರ ಮಾಡಲು ಪ್ರಾರಂಭಿಸಿದನು. ಪರಿಪರಿಯಾಗಿ ಶ್ರದ್ಧಾ- ಭಕ್ತಿಯಿಂದ ಅವರ ಶಕ್ತಿ, ಬಲಾ-ಬಲಗಳನ್ನು ಹೊಗಳಿದನು, ಪೂಜಿಸಿದನು.

ಸ್ತೋತುಂ ನ ಶಕ್ನೋಮಿ ಗುಣೈರ್ಭವಂತೌ
ಚಕ್ಷುರ್ವಿಹೀನಃ ಪಥಿ ಸಮ್ಪ್ರಮೋಹಃ ।
ದುರ್ಗೇऽಹಮಸ್ಮಿನ್ಪತಿತೋऽಸ್ಮಿ ಕೂಪೇ
ಯುವಾಂ ಶರಣೌ ಶರಣಂ ಪ್ರಪದ್ಯೇ ॥

“ಶರಣಾಗತ ವತ್ಸಲರಾದ ನಿಮ್ಮನ್ನು ನಾನು ಮೊರೆ ಹೊಕ್ಕಿದ್ದೇನೆ. ನನ್ನನ್ನು ಕಾಪಾಡಿರಿ” ಎಂದು ಅಶ್ವಿನೀದೇವತೆಗಳನ್ನು ಬೇಡಿಕೊಂಡನು. ಉಪಮನ್ಯುವಿನ ಸ್ತೋತ್ರದಿಂದ ಒಲಿದು ಬಂದ ಅಶ್ವಿನೀದೇವತೆಗಳು ಉಪಮನ್ಯುವಿನ ತಲೆಯನ್ನು ಸವರುತ್ತಾ “ಮಗು, ನಿನ್ನ ಭಕ್ತಿ ಮತ್ತು ಶ್ರದ್ಧೆಯನ್ನು ನಾವು ಮೆಚ್ಚಿದ್ದೇವೆ.” ಎಂದು ಹೇಳುತ್ತಾ,

ದೇವನಿರ್ಮಿತವಾದ ಭಕ್ಷ್ಯವೊಂದನ್ನು ಅವನ ಕೈಯಲ್ಲಿಟ್ಟು, ಇದನ್ನು ಸ್ವೀಕರಿಸು ನಿನಗೆ ಕಣ್ಣುಗಳು ಮರಳುವವು ಎಂದರು. ಆದರೆ ವಿಧೇಯನಾದ ಉಪಮನ್ಯು “ಈ ಅಪೂರ್ವವಾದ ಭಕ್ಷ್ಯವನ್ನು ತಿಂದರೆ ನನಗೆ ಕಣ್ಣುಗಳು ಬರುವುದರಲ್ಲಿ ಸಂಶಯವಿಲ್ಲ. ಆದರೆ ಗುರು ಧೌಮ್ಯರಿಗೆ ಅರ್ಪಿಸಿದೆ ನಾನೇ ತಿಂದು ಬಿಡಲು ನನಗೆ ಉತ್ಸಾಹವಿಲ್ಲ” ಎಂದನು. ಇವನ ಮಾತನ್ನು ಕೇಳಿದ ದೇವತೆಗಳು ಸಂತೋಷಚಿತ್ತರಾಗಿ, ಇನ್ನೊಮ್ಮೆ ಅವನನ್ನು ಪರೀಕ್ಷಿಸಲು ಹೀಗೆಂದು ನುಡಿದರು : “ಹಿಂದೆ ಇಂತಹುದೇ ಪರಿಸ್ಥಿತಿಯಲ್ಲಿ ನಿನ್ನ ಗುರುಗಳು ಹೀಗೆ ನಮ್ಮನ್ನು ಪ್ರಾರ್ಥಿಸಿದಾಗ ಫಲವನ್ನು ಅವರ ಗುರುಗಳಿಗೆ ಅರ್ಪಿಸದೇ ತಿಂದಿದ್ದರು” ಎಂದರು. ಆದರೆ ಈ ಮಾತಿಗೆ ಒಪ್ಪದೇ “ಗುರುಗಳಿಗೆ ಭಕ್ಷ್ಯವನ್ನು ಅರ್ಪಿಸಿ, ಅವರ ಆಜ್ಞೆಗೆ ಕಾಯುತ್ತಿರುತ್ತೇನೆ” ಎಂದು ಉಪಮನ್ಯು ನುಡಿದನು. ಈ ಉತ್ತರದಿಂದ ಸಂತುಷ್ಟರಾದ ಅಶ್ವಿನೀದೇವತೆಗಳು “ನಿನ್ನ ಗುರುಭಕ್ತಿಗೆ ನಾವು ಮೆಚ್ಚಿದ್ದೇವೆ, ನಿನ್ನ ಗುರುವಿನ ಹಲ್ಲುಗಳು ಕಪ್ಪಾದ ಲೋಹದ ರೂಪವಾಗಿದೆ, ಆದರೆ ನಿನ್ನ ಹಲ್ಲುಗಳು ಸುವರ್ಣಮಯವಾಗುವುದು, ನೀನು ಚಕ್ಷುಷ್ಮಂತನೂ ಶ್ರೇಯೋವಂತನೂ ಆಗುವೆ “ಎಂದು ಅನುಗ್ರಹಿಸಿ ಹೊರಟುಹೋದರು.

ಕಣ್ಣುಗಳನ್ನು ಪಡೆದವನಾದ ಉಪಮನ್ಯುವು ಬಾವಿಯಿಂದ ಮೇಲಕ್ಕೆ ಬಂದು ಗುರುಗಳ ಚರಣಾರವಿಂದಗಳಿಗೆ ವಂದಿಸಿದನು. ಆನಂದದಿಂದ ಗುರುಗಳು “ಮಗು! ಅಶ್ವಿನೀದೇವತೆಗಳ ಅನುಗ್ರಹದಂತೆ ನೀನು ಉತ್ತಮ ಶ್ರೇಯಸ್ಸನ್ನು ಪಡೆಯುವೆ ಎಂದು ಆಶೀರ್ವದಿಸಿದರು.

ಹೀಗೆ ಹಿಂದಿನ ಕಾಲದಲ್ಲಿ ಗುರು-ಶಿಷ್ಯರ ಸಂಬಂಧ ಬಹಳ ಅಪೂರ್ವವಾಗಿರುತ್ತಿತ್ತು. ಯಾವುದೇ ಅಹಂಕಾರ ಭಾವಗಳಿಲ್ಲದೆ ಶಿಷ್ಯರು ಗುರುಗಳ ಪಾದಾರವಿಂದಗಳ ಸೇವೆ ಮಾಡುತ್ತಿದ್ದರು. ಯಾವ ಮಾತಿಗೂ ಎದುರುತ್ತರಿಸದೇ, ಸೌಮ್ಯತೆಯಿಂದ ಪಾಲಿಸುತ್ತಿದ್ದರು.

(Image credit: rahasyamaya.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply