‘ಯಜ್ಞ’ಎಂಬ ಪದದ ಮೂಲಾರ್ಥವನ್ನು ತಿಳಿಯದೇ, ಅದನ್ನು ವ್ಯರ್ಥ ಮತ್ತು ಆಹಾರದ್ರವ್ಯಗಳನ್ನು ಪೋಲು ಮಾಡುವ ಕ್ರಿಯೆ ಎಂದೂ ಹೇಳುತ್ತಾರೆ. ಯಜ್ಞದ ನಿಜಾರ್ಥವನ್ನು ಒಂದು ಉದಾಹರಣೆಯ ಮೂಲಕ ತಿಳಿಯೋಣ. ಒಬ್ಬ ಮನುಷ್ಯನು ಕೆಲವೇ ಕಾಳು ಕಡ್ಡಿಗಳನ್ನು ಹೊಂದಿದ್ದರೆ ಅವನಿಗೆ ಅವುಗಳನ್ನು ಮುಗಿಯದಂತೆ ಮಾಡುವದು ಹೇಗೆ ? ಎಂಬ ಆಲೋಚನೆಯುಂಟಾಗುವದು. ಆಗ ಅವನು ಜಾಣನಾದರೆ ತಾನು ತಿನ್ನುವದರಲ್ಲಿ ಉಳಿಸಿಯಾದರೂ ಸಕಾಲದಲ್ಲಿ ಮಳೆ ಬಂದಾಗ ವ್ಯವಸಾಯಮಾಡಿದ ಭೂಮಿಯಲ್ಲಿ ಆ ಕಾಳುಗಳನ್ನು ಬಿತ್ತಬೇಕು. ಆಗ ಅದು ಮೊಳಕೆಯಾಗಿ ಪೈರಾಗುವುದು. ಒಂದಕ್ಕೆ ನೂರರಷ್ಟು ಅಭಿವೃದ್ಧಿಹೊಂದುವುದು. ಇದನ್ನು ಕೃಷಿಯಜ್ಞವೆಂದು ಕರೆಯಬಹುದು. ಹೀಗೆಯೇ ಹೆಚ್ಚಿನ ಸೌಕರ್ಯ ಅಥವಾ ವ್ಯವಸ್ಥೆಯ ಅವಶ್ಯಕತೆಯಿದ್ದಾಗ ಯಜ್ಞವನ್ನು ಮಾಡಬೇಕೆಂಬುದು ಸಂಗತಿ.
ಯಜ್ಞವೆಂದರೆ ದೇವತೆಗಾಗಿ ಉದ್ದೇಶಿಸಿದ ದ್ರವ್ಯವನ್ನು ತ್ಯಾಗಮಾಡುವುದು. ಹಾಗೆ ಪದಾರ್ಥಗಳನ್ನು ಕೊಟ್ಟ ನಂತರವೂ ‘ನ ಮಮ’ (ನನಗೆ ಅಲ್ಲ) ಎನ್ನುವುದು. ಈ ತ್ಯಾಗಬುದ್ಧಿಯಿಲ್ಲದೇ ಮಾನವನಲ್ಲಿ ಬೆಳವಣಿಗೆಯಿಲ್ಲ. ಉದಾಹರಣೆಗೆ, ತಾಯಿಯು ತನ್ನ ಶರೀರ ಸುಖವನ್ನು ತ್ಯಾಗಮಾಡಿದಲ್ಲದೆ ಮಗುವನ್ನು ಪಡೆಯಲಾಗುವದಿಲ್ಲ. ಆ ಮಗುವಿಗಾಗಿ ಹಗಲು ರಾತ್ರಿ ಎನ್ನದೆ ಪಾಲನೆಪೋಷಣೆಗಳನ್ನು ಕೈಗೊಂಡು ತನ್ನ ಕಷ್ಟವನ್ನು ಬದಿಗಿರಿಸಿ, ಸ್ವಸುಖವನ್ನು ಬಲಿಗೊಡದೆ ಮತ್ತು ತ್ಯಾಗಭಾವನೆ ಇಲ್ಲದೇ ಆ ಮಗು ಬೆಳೆಯುವುದಿಲ್ಲ. ಇದೇ ರೀತಿ ಜಗತ್ತಿನಲ್ಲಿ ಎಲ್ಲಾ ವಸ್ತುಗಳೂ ತ್ಯಾಗದಿಂದಲೇ ಬದುಕಿರುವವು. ಗಿಡಮರ, ಹೂವು-ಹಣ್ಣು, ಸೌದೆ, ಗೋವು ಇತ್ಯಾದಿ ಪ್ರಾಣಿಪ್ರಪಂಚವು ತ್ಯಾಗಮಾಡದಿದ್ದರೆ ನಾವು ಬದುಕುವದಾದರೂ ಹೇಗೆ? ಆದ್ದರಿಂದ ನಮ್ಮ ಸುತ್ತಲಿನ ಪ್ರಕೃತಿಯೇ ನಮಗೆ ತ್ಯಾಗದ ಕಡೆಗಿನ ಪಾಠಕಲಿಸುತ್ತಿದೆ. ಇವೇ ಯಜ್ಞಗಳೆನಿಸಿರುವವು.
ನಮ್ಮ ಅವಶ್ಯಕತೆಗಳ ಪೂರೈಕೆಗೋಸ್ಕರ ನಾವು ದೇವರನ್ನು ಕೇಳಬೇಕಾದರೆ ಯಜ್ಞದ ಮೂಲಕ ಕೇಳಬೇಕು. ಕೇಳುವಾಗ ನಮ್ಮಲ್ಲಿ ಏನಿದೆಯೋ ಅದನ್ನು ಅರ್ಪಿಸಿ ಕೇಳಬೇಕು. ನಾವು ಕೊಟ್ಟ ಅಲ್ಪವನ್ನು ಸ್ವೀಕರಿಸಿ, ಆ ಅಲ್ಪವಸ್ತುವನ್ನು ಅಧಿಕವಾಗಿ ಮಾಡುತ್ತಾನೆ. ಈ ಅರ್ಪಿಸುವ ಕಾರ್ಯ ನಮ್ಮ ಜೀವನದಲ್ಲಿ ಸಂಭವಿಸುವ ಒಂದು ಅಪೂರ್ವ ಅವಕಾಶ. ನಮ್ಮ ಬೆಳವಣಿಗೆಗೆ, ಸ್ವಾರ್ಥದ ಕೊಳೆಯನ್ನು ತೊಳೆದುಕೊಳ್ಳುವ ಒಂದು ಹಾದಿಯಿದು. ನಾವು ದೇವರಿಗೆ ಅರ್ಪಿಸಿದ್ದೆಲ್ಲಾ ಅಲ್ಲೇ ಉಳಿಯುವುದಿಲ್ಲ. ಅದು ಒಂದು, ನೂರು, ಸಾವಿರ ಪಟ್ಟು ನಮಗೇ ಪುನಃ ಹಿಂದಿರುಗುವುದು. ನಾವು ಮಾಡುವ ಶ್ರಮಾದಾನ, ಅನ್ನದಾನ ಅಥವಾ ವಿದ್ಯಾದಾನ ಯಾವ ದಾನವಾದರೂ ಸರಿ ಅದು ನಿರರ್ಥಕವಲ್ಲ. ನಾವು ಕೊಟ್ಟಿರುವುದಕ್ಕಿಂತ ಅಧಿಕ ನಮಗೆ ಮರಳುವುದು. ನಮ್ಮ ಪಾಲಿನ ಕರ್ತವ್ಯವನ್ನು ದೇವರಿಗೆ ಯಜ್ಞರೂಪದಂತೆ ಮಾಡಿದರೆ, ದೇವರು ನಮಗೆ ಬೇಕಾದುದನ್ನು ವರರೂಪದಲ್ಲಿ ಕರುಣಿಸುವನು.
ದೇವಾನ್ ಭಾವಯತಾನೇನ
ತೇ ದೇವಾ ಭಾವಯಂತು ವಃ |
ಪರಸ್ಪರಂ ಭಾವಯಂತಃ
ಶ್ರೇಯಃ ಪರಮವಾಪ್ಸ್ಯಥ ||
ಗೀತೆಯಲ್ಲಿ ಬರುವ ಶ್ರೀಕೃಷ್ಣನ ಮಾತಿನಂತೆ, ಯಜ್ಞದ ಮೂಲಕ ದೇವತೆಗಳನ್ನು ತೃಪ್ತಿಪಡಿಸಿದರೆ, ಆ ದೇವತೆಗಳು ನಮ್ಮನ್ನು ತೃಪ್ತಿಪಡಿಸುತ್ತಾರೆ. ಪರಸ್ಪರ ಅನ್ಯೋನ್ಯತೆಯಿದ್ದರೆ ಪರಮ ಶ್ರೇಯಸ್ಸನ್ನು ಪಡೆಯುವಿರಿ.’ಕೃಷ್ಣಾರ್ಪಣಮಸ್ತು’ ಎನ್ನುತ್ತಾ ನಾವು ಮಾಡುವ ಕರ್ತವ್ಯವನ್ನು ಕೃಷ್ಣನಿಗೆ ಅರ್ಪಿಸಬೇಕು. ಆಗ ಮಾತ್ರ ನಮ್ಮ ಚಿತ್ತಶುದ್ಧಿಯಾಗುವುದು ಮತ್ತು ಮುಕ್ತಿಯ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗುವುದು.
ಯಜ್ಞ ಯಜ್ಞಪತಿರ್ಯಜ್ಞಾ
ಯಜ್ಞಾಂಗೋ ಯಜ್ಞವಾಹನಃ ||
-ವಿಷ್ಣುಸಹಸ್ರ ನಾಮದಲ್ಲಿ ಹೇಳಿರುವಂತೆ;
ಯಜ್ಞ ಎಂಬ ಹೆಸರಿನಿಂದ ಜ್ಞಾನರೂಪಿಯಾಗಿ ಎಲ್ಲೆಡೆ ಇರುವ ಭಗವಂತ, ಎಲ್ಲಾ ಕ್ರಿಯೆಗಳಿಂದ ಎಲ್ಲರೂ ಆರಾಧಿಸಬೇಕಾದ, ಯಜ್ಞದ ಅಂತರ್ಯಾಮಿಯಾಗಿದ್ದಾನೆ. ಯಜ್ಞಗಳ ಸ್ವಾಮಿ ಹಾಗೂ ಪಾಲಕ ಭಗವಂತನು ಯಜ್ಞಪತಿಃ, ಯಜ್ಞವನ್ನು ಸ್ವೀಕರಿಸಿ ನಮಗೆ ಫಲ ಕೊಡುವವನು. ನಮ್ಮಿಂದ ಯಜ್ಞ ಮಾಡಿಸುವ ಭಗವಂತನು ಯಜ್ವಾ, ಯಜ್ಞ ಮಾಡುವ ಯಜಮಾನನೊಳಗೆ ಅಂತರ್ಯಾಮಿಯಾಗಿದ್ದು ಯಜ್ಞ ಮಾಡಿಸುವವನೂ ಅವನೇ! ಯಜ್ಞದಲ್ಲಿ ಬಳಸುವ ಹವಿಸ್ಸುಗಳನ್ನು ತನ್ನ ಅಂಗಗಳಿಂದ ಸೃಷ್ಟಿಸಿದ ಭಗವಂತ ಯಜ್ಞಾಂಗ ಎಂದೆನಿಸಿಕೊಂಡನು. ಆ ಭಗವಂತನು ಯಜ್ಞವನ್ನು ವಾಹನವಾಗಿಸಿಕೊಂಡು ಬರುವವನು. ಎಲ್ಲಿ ಯಜ್ಞ ನಡೆಯುತ್ತಿರುತ್ತದೋ ಅಲ್ಲಿ ಭಗವಂತ ಸನ್ನಿಧಾನವಿರುತ್ತದೆ.
ಯಾವಾಗ ನಾವು ಯಜ್ಞದ ಮೂಲಕ ದೇವತೆಗಳ ಮೊರೆಹೋಗುತ್ತೇವೆಯೋ ಆಗಲೇ ನಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತದೆ. ನೆನಪಿರಲಿ, ನಮ್ಮ ಯೋಗ್ಯತೆಯ ಅನುಸಾರವಾಗಿ ಇಷ್ಟಾರ್ಥ ಸಿದ್ಧಿಸುತ್ತದೆ. ದೇವತೆಗಳು ಕೊಟ್ಟದ್ದನ್ನು ಪುನಃ ನೈವೇದ್ಯ ಮಾಡಿದ ಬಳಿಕ ಅದನ್ನು ಅನುಭವಿಸುವುದು ಉತ್ತಮ ನಡವಳಿಕೆ.
‘ಹರಿ ಸಮರ್ಪಣೆ ಮಾಡಿ ಬದುಕಿರೊ‘ ಎಂಬ ದಾಸರ ವಾಣಿಯಂತೆ:
ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವರಂತೆ ಕಾಣಿರೊ
ಹರಿಯ ಕರುಣದೊಳಾದ ಭಾಗ್ಯವ
ಹರಿ ಸಮರ್ಪಣೆ ಮಾಡಿ ಬದುಕಿರೊ
ಶ್ರೀ ಪುರಂದರ ವಿಠಲ ರಾಯನ
ಚರಣ ಕಮಲವ ನಂಬಿ ಬದುಕಿರೊ.
ನಾವು ಅರ್ಪಿಸಿರುವುದನ್ನು ಸ್ವೀಕರಿಸಿ ದೇವರು ತಾನೆ ಏನು ಮಾಡುವನು! ಭೋಗಿಸುತ್ತಾನೆಯೇ..? ಇಲ್ಲ, ಇಲ್ಲ. ನಾವು ಕೊಟ್ಟಿರುವುದನ್ನು ಮತ್ತೂ ಪವಿತ್ರ ಮಾಡಿ ಪುನಃ ಕೊಡುವನು. ಮನೆಯಲ್ಲಿ ನಾವು ಮೊದಲು ದೇವರಿಗೆ ಅರ್ಪಿಸಿ ನಂತರ ಸ್ವೀಕರಿಸುವ ಪದ್ದತಿ ಇದಕ್ಕೆ ಉದಾಹರಣೆ. ಹಾಗೆ ಸ್ವೀಕರಿಸಿದ ಪ್ರಸಾದದಿಂದ ನಮ್ಮ ಚಿತ್ತಶುದ್ಧಿಯಾಗುವುದು. ಅರ್ಪಣಾಭಾವವಿಲ್ಲದೇ ಯಾವನು ಭೋಗಿಸುತ್ತಾನೆಯೇ ಅವನೇ ಕಳ್ಳ ಎಂದು ಕೃಷ್ಣ ಗೀತೆಯಲ್ಲಿ ವ್ಯಕ್ತಪಡಿಸುತ್ತಾನೆ.
ಇಷ್ಟಾನ್ ಭೋಗಾನ್ ಹಿ ವೋ ದೇವಾ
ದಾಸ್ಯಂತೇ ಯಜ್ಞಭಾವಿತಾಃ |
ತೈರ್ದತ್ತಾನಪ್ರದಾಯೈಭ್ಯೋ
ಯೋ ಭುಂಕ್ತೇ ಸ್ತೇನ ಏವ ಸಃ ||
-ಯಜ್ಞದಿಂದ ತೃಪ್ತರಾದ ದೇವತೆಗಳು ನಿಮಗೆ ಇಷ್ಟವಾದ ಭೋಗಗಳನ್ನು ನೀಡುತ್ತಾರೆ. ಅವರು ಕೊಟ್ಟಿದ್ದನ್ನು ಅವರಿಗೆ ಕೊಡದೆ ಯಾರು ತಾನೇ ಅನುಭವಿಸುವನೋ ಅವನು ಕಳ್ಳ.
ದೇವತೆಗಳು ನಮಗೆ ಏನು ದಯಪಾಲಿಸಿದ್ದಾರೋ, ಅದೆಲ್ಲವೂ ಅವರದ್ದೇ ಆಗಿದೆ, ಅವರ ಕೆಲಸದ ಪೂರೈಕೆಗೆ ಇರುವುದು ಎಂದು ಭಾವಿಸಿ ಕೃತಾರ್ಥರಾಗಬೇಕು. ಯಾವಾಗ ದೇವರನ್ನು ಮರೆತು ನಾನೇ ಒಡೆಯ ಎಂದು ಕೂಗುವೆವೋ, ಆಗ ನಾವು ತಪ್ಪಿತಸ್ಥರು ಅಥವಾ ಕಳ್ಳರೇ ಸರಿ.
ಯಜ್ಞಶಿಷ್ಟಾಶಿನಃ ಸಂತೋ
ಮುಚ್ಯಂತೇ ಸರ್ವಕಿಲ್ಬಿಷೈಃ |
ಭುಂಜತೇ ತೇ ತ್ವಘಂ ಪಾಪಾ
ಯೇ ಪಚಂತ್ಯಾತ್ಮಕಾರಣಾತ್ ||
ಯಾರು ಪಡೆದದ್ದನ್ನು ಭಗವದರ್ಪಣೆ ಮಾಡಿ ಅದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸುತ್ತಾರೊ, ಅವರು ಬದುಕಿನ ಎಲ್ಲಾ ಕೊಳೆಗಳಿಂದ ಬಿಡುಗಡೆ ಹೊಂದಿ ಸ್ವಚ್ಛ ಬದುಕನ್ನು ಬಾಳುತ್ತಾರೆ. ಯಾರ ಮನೆಯಲ್ಲಿ ತಮಗೋಸ್ಕರ ಅನ್ನ ಬೇಯುತ್ತದೋ, ಅವರು ತಿನ್ನುವುದು ಅನ್ನವನ್ನಲ್ಲ, ಪಾಪವನ್ನು. ನಮಗೆ ಈ ಆಹಾರವನ್ನು ಕೊಟ್ಟವನು ಆ ಭಗವಂತ. ಅವನಿಗೆ ನಾವು ಮೊದಲು ಕೃತಜ್ಞತೆಯನ್ನು ತೋರಬೇಕು. ಅದನ್ನು ಬಿಟ್ಟು ಇದು ನನ್ನ ಸಂಪಾದನೆ, ನಾನ್ಯಾಕೆ ಇದನ್ನು ಇನ್ನೊಬ್ಬರಿಗೆ ಹಂಚಬೇಕು ಎನ್ನುವ ಭಾವನೆಯನ್ನು ಬೆಳಸಿಕೊಂಡರೆ ನಾವು ನಮ್ಮ ಪಾಪದ ಗಂಟನ್ನು ದೇವರಿಗೆ ಕೊಟ್ಟಿದ್ದಾವುದೂ ಹೊರಟು ಹೋಗಿ ಬಿಡುವುದಿಲ್ಲ, ಅದು ವೃದ್ಧಿಯಾಗುವುದು. ನಮ್ಮಲ್ಲಿರುವ ವಿದ್ಯೆಯನ್ನು ಕೊಟ್ಟರೆ ಆ ವಿದ್ಯೆ ಜಾಸ್ತಿಯಾಗುವುದು. ನಮ್ಮಲ್ಲಿರುವ ಸಂಗೀತವನ್ನು ಮತ್ತೊಬ್ಬನಿಗೆ ಕೊಟ್ಟರೆ ಅದು ನಮ್ಮಲ್ಲಿ ಮತ್ತೂ ಹೆಚ್ಚಾಗಿ ವೃದ್ಧಿಯಾಗುವುದು. ಕೊಟ್ಟಾದ ಮೇಲೆ ಉಳಿಯುವುದೇ ಶ್ರೇಷ್ಠವಾದುದು. ನಾವು ಮಾಡುವ ಕರ್ಮಕ್ಕೆ ಯಾವಾಗ ಯಜ್ಞದ ಬೆಂಕಿ ತಾಕುವುದಿಲ್ಲವೋ ಕೇವಲ ಸ್ವಾರ್ಥವೇ ತುಂಬಿರುವುದೋ ಆಗ ಅದರಲ್ಲಿರುವ ಪಾಪದ ಕ್ರಿಮಿಗಳೆಲ್ಲಾ ನಮ್ಮ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ.
ಅನ್ನಾದ್ಭವಂತಿ ಭೂತಾನಿ
ಪರ್ಜನ್ಯಾದನ್ನ ಸಂಭವಃ |
ಯಜ್ಞಾದ್ಭವತಿ ಪರ್ಜನ್ಯೋ
ಯಜ್ಞಃ ಕರ್ಮಸಮುದ್ಭವಃ ||
ಕರ್ಮಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್ |
ತಸ್ಮಾತ್ ಸರ್ವಗತಂ ಬ್ರಹ್ಮ
ನಿತ್ಯಂ ಯಜ್ಞೇ ಪ್ರತಿಷ್ಠಿತಮ್ ||
-ಅನ್ನದಿಂದ ಪ್ರಾಣಿಗಳು ಹುಟ್ಟುತ್ತವೆ. ಮಳೆಯಿಂದ ಅನ್ನವಾಗುವುದು. ಯಜ್ಞದಿಂದ ಮಳೆಯಾಗುವುದು. ಕರ್ಮದಿಂದ ಯಜ್ಞ ಆಗುವುದು. ಕರ್ಮ ಬ್ರಹ್ಮದಿಂದ ಉಂಟಾಯಿತು. ಬ್ರಹ್ಮ ಅಕ್ಷರದಿಂದ ಆಯಿತು. ಸರ್ವವ್ಯಾಪಿಯಾಗಿರುವ ಬ್ರಹ್ಮ ಸದಾ ಯಜ್ಞದಲ್ಲಿ ನೆಲೆಸಿದೆ.
ಆಹಾರವನ್ನು ಸೇವಿಸಿ ಪ್ರಾಣಿಗಳು ಬೆಳೆಯುತ್ತವೆ. ಈ ಆಹಾರ ಸಮೃದ್ಧವಾಗಿ ಬೆಳೆಯಬೇಕಾದರೆ ಮಳೆ ಬೇಕೇ-ಬೇಕು. ಮಳೆ ಇಲ್ಲದೆ ಆಹಾರ ಇಲ್ಲ. ಮನುಷ್ಯನ ಉಳಿವಿಗೆ ಬೇಕಾದ ಈ ಮಳೆ ಯಜ್ಞದಿಂದ ಉಂಟಾಗುವುದು. ಯಾರು ತಮ್ಮ ಪಾಲಿಗೆ ಬಂದ ಕರ್ತವ್ಯಗಳನ್ನು ನಿರ್ವಂಚನೆಯಿಂದ ಸಮಷ್ಟಿಯ ಹಿತಕ್ಕೆ ಅರ್ಪಿಸುವರೋ ಅವರೆಲ್ಲರೂ ಈ ಯಜ್ಞ ಮಾಡುತ್ತಿರುವರು. ಎಲ್ಲಿ ಇಂತಹ ಜನ ಹೆಚ್ಚಾಗಿ ಇರುವರೋ ಅಲ್ಲಿ ಕಾಲಕಾಲಕ್ಕೆ ಮಳೆ ಬೀಳುವುದು. ಜೊತೆಗೆ ಬೆಳೆಯಾಗುವುದು. ಇದು ಪ್ರಕೃತಿಯ ನಿಯಮ. ಮಳೆ ಬರದೆ ಇದ್ದರೆ ಬಾಹ್ಯ ಪ್ರಕೃತಿಯ ಅಡಚಣೆಗಿಂತ ಅಧಿಕವಾಗಿ ಅದು ನಾವು ಮಾಡುವ ಕರ್ತವ್ಯದ ಮೇಲೆ ಅವಲಂಬಿತವಾಗಿದೆ. ಅದಕ್ಕಾಗಿ ನಿರ್ವಂಚನೆಯಿಂದ ನಮ್ಮ ಹೊರಗೆ ತಪ್ಪನ್ನು ಹುಡುಕದೇ ಕರ್ತವ್ಯ ಪೂರೈಸಬೇಕು. ದೇವರನ್ನು ಮರೆತು, ಸ್ವಾರ್ಥವೇ ನಮ್ಮ ಮನಸ್ಸಿನಲ್ಲಿದ್ದರೆ, ಕೇವಲ ಲಾಭವೇ ನಮ್ಮ ಉದ್ದೇಶವಾಗಿ ನಾವು ಮಾಡುವುದೆಲ್ಲ ಕೇವಲ ಕರ್ಮವಾಗುವುದು. ಅದು ಯಜ್ಞವಾಗುವುದಿಲ್ಲ.
ಈ ಕರ್ಮ ಎನ್ನುವುದರ ಮೂಲಸ್ರೋತ ಆ ಸೃಷ್ಟಿಕರ್ತನೇ ಆಗಿದ್ದಾನೆ. ಅವನು ಪ್ರಪಂಚವನ್ನು ಸೃಷ್ಟಿಸಿದಾಗ ಪ್ರತಿಯೊಂದಕ್ಕೂ ಒಂದೊಂದು ಸ್ವಭಾವ ಮತ್ತು ಕ್ರಮವನ್ನು ನೀಡಿರುವನು. ಸಂಪೂರ್ಣ ಸೃಷ್ಟಿ ನಿಂತಿರುವುದೇ ಅನ್ಯೋನ್ಯ ಕರ್ಮದ ಆಶ್ರಯದಲ್ಲಿ. ‘ವಿವಿಧಮ್ ರಾಜತೇ ಇತಿ ವಿರಾಟ್ ‘ ಎಂಬ ವ್ಯುತ್ಪತ್ತಿಯಂತೆ ನಾನಾ ವಿಧವಾಗಿ ಹರಡಿಕೊಂಡಿರುವ ಚೇತನಾಚೇತನ ಭೂತವರ್ಗಗಳ ಶರೀರಕ್ಕೆ ಅಭಿಮಾನಿಯಾಗಿರುವ, ಆ ನಾರಾಯಣಪುರುಷನಿಂದ ಹುಟ್ಟಿದ ವಿರಾಟ್ ಪುರುಷನು ಹವಿಸ್ಸಾದಂತೆ, ನಾವೆಲ್ಲರೂ ನಮಗೆಷ್ಟು ಸಾಧ್ಯವೋ ಅಷ್ಟನ್ನು ಕೊಡುತ್ತಿದ್ದರೆ, ನಮ್ಮ ಅವಶ್ಯಕತೆ ಮತ್ತು ಯೋಗ್ಯತೆಗನುಗುಣವಾಗಿ ನಮಗೆ ಪುನಃ ಪವಿತ್ರವಾದದ್ದು ದೊರಕುವುದು. ಪ್ರತಿಯೊಬ್ಬನು ಮಾಡಬೇಕಾದ ಕೆಲಸ ಮಾಡಿದರೆ ಸಿಕ್ಕಬೇಕಾದುದು ಖಂಡಿತ ಸಿಗುವುದು. ಹೀಗೆ ಒಂದಕ್ಕೊಂದು ಸರಪಳಿಯಂತೆ ಹೆಣೆದುಕೊಂಡಿರುವುದು.
ಮಾನವ <->ಆಹಾರ <-> ಮಳೆ
<->ಯಜ್ಞ <>ಭಗವಂತ <->ವೇದ <-> ಮಾನವ
ಮೊದಲೇ ತಿಳಿದುಕೊಂಡಂತೆ ಕರ್ಮ ಎಂಬುದು ಬ್ರಹ್ಮದಿಂದ ಉಂಟಾಗಿ, ಆ ಬ್ರಹ್ಮ ಅಕ್ಷರದಿಂದ ಆಯಿತು. ಹಾಗೂ ಸರ್ವವ್ಯಾಪಿಯಾಗಿರುವ ಬ್ರಹ್ಮ ಸದಾ ಯಜ್ಞದಲ್ಲಿ ನೆಲೆಸಿದೆ. ಹೀಗೆ ಇಡೀ ಜೀವಜಗತ್ತು ಯಜ್ಞದ ಆಧಾರದ ಮೇಲೆ ನಿಂತಿದೆ. ಎಲ್ಲರೂ ಈ ಯಜ್ಞಕ್ಕೆ ಸಹಕರಿಸಬೇಕು.
ಏವಂ ಪ್ರವರ್ತಿತಂ ಚಕ್ರಂ
ನಾನುವರ್ತಯತೀಹ ಯಃ | ಅಘಾಯುರಿಂದ್ರಿಯಾರಾಮೋ
ಮೋಘಂ ಪಾರ್ಥ ಸ ಜೀವತಿ ||
-ಯಾರು ಆ ಪ್ರವರ್ತಿತವಾಗಿರುವ ಜಗಚ್ಚಕ್ರವನ್ನು ಅನುಕರಿಸುವುದಿಲ್ಲವೋ ಅವನು ಪಾಪಿಯು, ಇಂದ್ರಿಯ ಸುಖಾಭಿಲಾಷಿಯೂ ಆಗಿ ಅವನ ಬಾಳು ವ್ಯರ್ಥವಾಗುವುದು.
ಈ ಜಗಚ್ಚಕ್ರಕ್ಕೆ ಪಂಚಭೂತಗಳೂ, ಪಶುಪಕ್ಷಿಗಳು, ಸಸ್ಯವರ್ಗಗಳು, ಪ್ರತಿಯೊಂದು ಜೀವಿಯೂ ಸಹಕರಿಸಬೇಕು. ವಿಚಾರಪರ ವಿಷಯಗಳಲ್ಲೇ ಆಸಕ್ತನಾಗಿರುವ ಮಾನವನ್ನು ಇದನ್ನು ತಿಳಿದು ಅನುಸರಿಸಬೇಕು. ಯಾರು ಈ ನಿಯಮದ ವಿರುದ್ಧ ಹೊಗುತ್ತಾರೋ ಅವರೇ ಪಾಪಿ ಎಂದು ಕೃಷ್ಣ ಖಡಾಖಂಡಿತವಾಗಿ ಉದ್ಘೋಷಿಸುತ್ತಾನೆ. ಹಾಗೇ ಮಾನವರಾದ ನಾವು ಇಂದ್ರಿಯ ಸುಖಕ್ಕೆ ದಾಸರಾಗಿ ಅದನ್ನು ತೃಪ್ತಿಪಡಿಸುವ ಕಾರ್ಯದಲ್ಲಿ ತೊಡಗಿ ಬಾಳನ್ನು ವ್ಯರ್ಥಮಾಡಿಕೊಳ್ಳುತ್ತೇವೆ. ಇಂದ್ರಿಯದ ಬಲೆಗೆ ಬಿದ್ದ ನಾವು ಯಾವ ಉನ್ನತ ಮಟ್ಟದ ಆಲೋಚನೆಯನ್ನು ಮಾಡದ ಮೂಕಪ್ರಾಣಿಗಳಿಗಿಂತ ಕೀಳಾಗುತ್ತೇವೆ. ಅದಕ್ಕಾಗಿ ಇಂದ್ರಿಯ ಸುಖದಿಂದ ಪಾರಾಗಿ ಇಂದ್ರಿಯಾತೀತ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಅಣಿಯಾಗಬೇಕು. ದೇವರು ಕೊಟ್ಟ ಪ್ರಕೃತಿಯ ರಹಸ್ಯವನ್ನು ಅರಿತು, ಭವಬಂಧನದಿಂದ ಪಾರಾಗಬೇಕು.
ಅಹಂ ಹಿ ಸರ್ವಯಜ್ಞಾನಾಂ
ಭೋಕ್ತಾ ಚ ಪ್ರಭುರೇವ ಚ ।
ನ ತು ಮಾಮಭಿಜಾನನ್ತಿ
ತತ್ತ್ವೇನಾತತ್ಚ್ಯವನ್ತಿ ತೇ ||
ಯಜ್ಞದಲ್ಲಿ ಅರ್ಪಿಸುವ ಸರ್ವ ಹವಿಸ್ಸು ಭಗವಂತನ ಮುಖೇನವೇ ಇತರ ದೇವತೆಗಳನ್ನು ಸೇರುವುದು, ಆತ ಯಜ್ಞ ಪಾಲಕ; ಸರ್ವ ಯಜ್ಞ ಭೋಕ್ತಾರ. ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ.
ನಾವು ಏನು ಮಾಡಿದರೂ ಅದು
ನಾರಾಯಣನಿಗೆ ಅರ್ಪಿತ.
ಆಕರ ಗ್ರಂಥಗಳು :
* ಪುರುಷಸೂಕ್ತ ಭಾಷ್ಯ.
* ಗೀತಾ ಪ್ರವಚನ.
* ವಿಷ್ಣು ಸಹಸ್ರನಾಮ.
* ಗೀತಾಭಾವಧಾರೆ.
Featured Image Credits: artisera
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.