ಹಿಂದಿನ ಭಾಗದಲ್ಲಿ ಶ್ರೀರಾಮ ಭರತನಿಗೆ ರಾಜ್ಯಪಾಲನೆಯ ವಿವಿಧ ಅಂಗಗಳ ಕುರಿತಾಗಿ ಮಾಡಿದ ಉಪದೇಶವನ್ನು ಕುಶಲೋಪರಿಯ ರೀತಿಯಲ್ಲಿ ಕಂಡೆವು. ಈ ಭಾಗದಲ್ಲಿ ರಾಮ ಭರತನಿಗೆ ರಾಜನ ರೀತಿಯನ್ನು, ಅವನು ನಡೆಯಬೇಕಾದ ಭಾರತೀಯ ಘನ ಮಾರ್ಗವನ್ನು ವಿವರಿಸುವುದನ್ನು ನೋಡೋಣ.
ಯಾವ ಮಾರ್ಗದಲ್ಲಿ ಸಮೃದ್ಧಿ ಸಾಧಿಸಬೇಕು? ಶ್ರೀರಾಮನ ದೃಷ್ಟಿ ನೋಡಿ – “ವೃದ್ಧರನ್ನೂ, ಮಕ್ಕಳನ್ನೂ, ಜ್ಞಾನಿಗಳನ್ನೂ ಚೆನ್ನಾಗಿ ನೋಡಿಕೊಳ್ಳುವುದರ ಮೂಲಕ ಅಭಿವೃದ್ಧಿ ಸಾಧಿಸಬೇಕು”. ಮೇಲ್ನೋಟಕ್ಕೆ ಇದು ಬರಿಯ ಒಳ್ಳೆಯತನದ ಮಾತುಗಳಾಗಿ ಕಂಡರೂ ಇದರಲ್ಲೊಂದು ಸ್ವಾರಸ್ಯವಿದೆ. ಅಭಿವೃದ್ಧಿಯ ವಿಭಿನ್ನವಾದ ಪರಿಕಲ್ಪನೆಯನ್ನು ನಾವಿಲ್ಲಿ ಕಾಣಬಹುದು. “ಒಂದೆಡೆ ಅಭಿವೃದ್ಧಿ ಸಾಧಿಸಿದರೂ ಮತ್ತೊಂದೆಡೆ ದುರ್ಬಲರನ್ನು ಚೆನ್ನಾಗಿ ನೋಡಿಕೊಳ್ಳಬೇಕು” ಎನ್ನುವುದು ಆಧುನಿಕ ಮಾರ್ಗ. ಈಗಿನ ಅಭಿವೃದ್ಧಿಯ ಪರಿಕಲ್ಪನೆಯೇ ಹಾಗಿದೆ. ಅಭಿವೃದ್ಧಿ ಮಾರ್ಗ ದುರ್ಬಲರನ್ನು ಕಡೆಗಣಿಸಿಬಿಡುತ್ತದೆ ಎನ್ನುವುದು ಇಂದು ನಾವೆಲ್ಲರೂ ತಿಳಿದಿರುವ ವಿಷಯ. ಆದರೆ ಮಕ್ಕಳನ್ನೂ, ವೃದ್ಧರನ್ನೂ ಚೆನ್ನಾಗಿ ನೋಡಿಕೊಳ್ಳುವ ಮಾರ್ಗದಲ್ಲೇ ಅಭಿವೃದ್ಧಿ ಸಾಧಿಸಬೇಕು ಎನ್ನುವುದು ಭಿನ್ನವಾದ ಮಾರ್ಗ. ದುರ್ಬಲರಿಗೆ ಸಮಾಜದಲ್ಲಿ ರಕ್ಷಣೆಯಿದ್ದು ಅವರಿಂದಲೂ ಅಭಿವೃದ್ಧಿಗೆ ಕಾಣಿಕೆಯಿದ್ದಾಗ ಸಾಧಿಸುವ ಅಭಿವೃದ್ಧಿ ದೀರ್ಘಕಾಲ ಬಾಳುವಂಥದ್ದು. ಈ ಮರ್ಮವನ್ನು ಈ ಶ್ಲೋಕದಲ್ಲಿ ಕಾಣಬಹುದು.
ಮತ್ತೊಂದೆಡೆ, ಜ್ಞಾನಿಗಳನ್ನು ಇದೇ ಗುಂಪಿಗೆ ಸೇರಿಸಿರುವ ಕಾರಣ – ಜ್ಞಾನವೆನ್ನುವುದು ಕೂಡ ಸೂಕ್ಷ್ಮ. ಅನೇಕ ಜ್ಞಾನಪ್ರಕಾರಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ, ಆದರೆ ಒಳ್ಳೆಯ ಸಮಾಜಕ್ಕೆ ಅದರ ಅವಶ್ಯಕತೆಯಿದೆ. ಅದರಿಂದ ದೀರ್ಘಕಾಲೀನ ಅಭಿವೃದ್ಧಿಯಿದೆ, ಹಿತವಿದೆ. ಆದ್ದರಿಂದ ರಕ್ಷಣೆ. ಯಾವ ರೀತಿಯಲ್ಲಿ ಇವರನ್ನು ನೋಡಿಕೊಳ್ಳಬೇಕು ಎನ್ನುವುದನ್ನೂ ಹೇಳಿಬಿಡುತ್ತಾನೆ, ರಾಮ. “ದಾನ, ಒಳ್ಳೆಯ ಮಾತು ಮತ್ತು ಪ್ರೀತಿ” ಎನ್ನುತ್ತಾನೆ ರಾಮ. ಅರ್ಥಾತ್ – ಒಟ್ಟು ಸಮಾಜದಲ್ಲಿ ಅವರಿಗೆ ಗೌರವಯುತವಾದ ಸ್ಥಾನವಿರುವಂತೆ ರಾಜ್ಯಪರಿಪಾಲನೆ ನಡೆಸಬೇಕಾದ್ದು ರಾಜಧರ್ಮ. ಅದೇ ತೆರವಾಗಿ “ಗುರುಹಿರಿಯರು, ವೃದ್ಧರು, ದೇವತೆಗಳು, ತಪಸ್ವಿಗಳು, ದೇವತೆಗಳು, ಚೈತ್ಯಗಳು (ದೇವಸ್ಥಾನಗಳು), ಸಿದ್ಧರು, ಬ್ರಾಹ್ಮಣರು – ಇವರನ್ನೆಲ್ಲಾ ಸರಿಯಾಗಿ ಗೌರವಿಸುತ್ತಿದ್ದೀಯ ತಾನೇ ಭರತ?”. ರಾಮನ ದೃಷ್ಟಿ ನಿತ್ಯ-ಸದ್ಯಗಳ ಸಮದೃಷ್ಟಿ..
ಮುಂದಿನ ಶ್ಲೋಕದಲ್ಲಿ ಶ್ರೀರಾಮ ಈವರೆಗೆ ಹೇಳಿದ್ದೆಲ್ಲದರ ಮರ್ಮವನ್ನು ಬಹಿರಂಗಪಡಿಸುತ್ತಾನೆ. “ಅರ್ಥಕ್ಕಾಗಿ ಧರ್ಮವನ್ನೂ, ಧರ್ಮಕ್ಕಾಗಿ ಅರ್ಥವನ್ನೂ, ಕೇವಲ ಐಹಿಕಸುಖಕ್ಕಾಗಿ ಇವೆರಡನ್ನೂ ತ್ಯಜಿಸುತ್ತಿಲ್ಲವಷ್ಟೆ – ಭರತ?”. ಚಿಕ್ಕದಾಗಿ ಬಹಳಷ್ಟನ್ನು ಹೇಳಿರುವಂತ ತೂಕವಾದ ಸೂತ್ರರೂಪೀ ಶ್ಲೋಕ. ಅರ್ಥಕ್ಕಾಗಿ ಧರ್ಮವನ್ನು ಎಂದರೆ ಸುಲಭವಾಗಿ ಮನದಟ್ಟಾಗುವ ವಿಷಯ. ಜೀವನದ ಸುಸೂತ್ರತೆಗೆ ನಮಗೆ ಅನೇಕ ವ್ಯವಸ್ಥೆಗಳು ಬೇಕು. ಆದರೆ ಅದನ್ನು ಸಂಪಾದಿಸುವ ಮಾರ್ಗ ಧಾರ್ಮಿಕವಾಗಿರಬೇಕು. ಇಂದು-ಮುಂದಿನದರ ಸಮತೂಕದಲ್ಲಿ ನಡೆಯಬೇಕು. ಆದರೆ ಧರ್ಮಕ್ಕಾಗಿ ಅರ್ಥವನ್ನು ಬಿಡುತ್ತಿಲ್ಲವಷ್ಟೆ ಎಂದರೆ ಏನರ್ಥ? ಧರ್ಮಮಾರ್ಗದಲ್ಲಿ ನಡೆಯುವುದರ ಒಂದು ಕಷ್ಟವನ್ನು ರಾಮ ಇಲ್ಲಿ ಗುರುತಿಸುತ್ತಾನೆ. ಧರ್ಮಮಾರ್ಗದಲ್ಲಿ ನಡೆಯಬೇಕಾದ ಧಾವಂತದಲ್ಲಿ ಕೆಲವೊಮ್ಮೆ ಅರ್ಥವನ್ನು ಕಡೆಗಣಿಸಿ ಬಿಡುವ ಸಾಧ್ಯತೆಯಿರುತ್ತದೆ. ಒಳ್ಳೆಯತನಕ್ಕೆ ಆ ಸಂದಿಗ್ಧವಿರುತ್ತದೆ. ಅದು ವಿಪರೀತಕ್ಕೆ ಹೋದರೆ ನಾಳಿನ ಧರ್ಮಕ್ಕೆ ಅಪಚಾರವಾದೀತು ಎನ್ನುವ ಸ್ಪಷ್ಟವಾದ ಎಚ್ಚರಿಕೆಯಿದೆ. ಧರ್ಮದ ಮಾರ್ಗ ಸೂಕ್ಷ್ಮ ಮತ್ತು ಕಠಿಣವಾದುದು, ಕೇವಲ ಒಳ್ಳೆಯತನವಷ್ಟೇ ಅದನ್ನು ಸಾಧ್ಯವಾಗಿಸುವುದಿಲ್ಲ ಎನ್ನುವ ಎಚ್ಚರಿಕೆ ಗಂಟೆ ಇಲ್ಲಿದೆ. ಮೂರನೆಯ ಭಾಗ – ಐಹಿಕ ಸುಖಕ್ಕೆ ಇವೆರಡರ ತ್ಯಾಗ ಎನ್ನುವುದು. ಎಲ್ಲರಿಗೂ ಅರ್ಥವಾಗುವಂತಹ ವಿಷಯವೇ. ಭರತನಿಗಾದರೋ ಆ ಎಚ್ಚರಿಕೆ ಬೇಕಿಲ್ಲ, ಆದರೆ ನಮಗೆ ಬೇಕಾಗಿದೆಯಲ್ಲ.
“ಭರತನೇ – ಸಮಯಕ್ಕೆ ಸರಿಯಾದ ಕಾರ್ಯಸಾಧನೆಗೆ ನೀನು ಹೆಸರಾಗಿದ್ದೀಯೆ. ಜಯಶೀಲನೂ, ವರಪ್ರದಾನಿಯೂ ಆಗಿದ್ದೀಯೆ. ಜೀವನಕ್ಕೆ ಅಗತ್ಯವಾದ ಧರ್ಮ, ಅರ್ಥ, ಕಾಮಗಳಿಗೆ ಬೇಕಾದ ಸಮಯವನ್ನು ನೀನು ಕೊಡುತ್ತಿದ್ದೀಯೆ ತಾನೇ?”. ಈ ಶ್ಲೋಕದಲ್ಲಿ ಪ್ರಾಚೀನವಾದ ಪುರುಷಾರ್ಥ ಪ್ರಜ್ಞೆ ಎದ್ದು ಕಾಣುತ್ತದೆ. ಧರ್ಮ, ಅರ್ಥ, ಕಾಮಗಳನ್ನು ಒಂದೇ ಕಾಲಕ್ಕೆ ಏಕರೂಪವಾದ ಗಮನದಲ್ಲಿ ಪರಿಗಣಿಸಿರುವುದನ್ನು ಕಾಣಬಹುದು. ಇದರರ್ಥ ಇವುಗಳ ನಡುವಣ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಅವುಗಳಿಗೆ ಎಷ್ಟು ಸಮಯದ ಅಗತ್ಯವಿದೆಯೋ ಅಷ್ಟನ್ನು ಕೊಡುವುದು. ಎಂದರೆ ಒಂದು ಮತ್ತೊಂದಕ್ಕೆ ಘಾತಿಮಾಡದಂತೆ ನಡೆಸಿಕೊಂಡು ಹೋಗುವುದು – ಧರ್ಮಮಾರ್ಗದಲ್ಲಿ ಅರ್ಥಕಾಮಗಳನ್ನು ನಡೆಸುವುದು ಎಂದರ್ಥ. ಕೇವಲ ಅವುಗಳನ್ನು ಅರಿತರೆ ಸಾಕಿಲ್ಲ. ಅವುಗಳಿಗೆ ಅಗತ್ಯವಾದ ಸಮಯವೆಷ್ಟು ಎನ್ನುವುದು ತಿಳಿಯಬೇಕಾದರೆ, ಪ್ರಾಪಂಚಿಕ ವಿಷಯಗಳ ಸ್ಪಷ್ಟ ಜ್ಞಾನವಿರಬೇಕು. ಅರ್ಥಾತ್, ಅವುಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ನಿಜಜೀವನದ ಜ್ಞಾನವಿರಬೇಕು ರಾಜನಿಗೆ.
ಮುಂದೆ ದಿಕ್ಕನ್ನು ಬದಲಿಸುತ್ತಾನೆ ರಾಮ. “ಶಾಸ್ತ್ರಕೋವಿದರಾದ ಬ್ರಾಹ್ಮಣರೂ, ನಗರ-ಹಳ್ಳಿಗಳೆಲ್ಲ ಜನರೂ ನಿನ್ನ ಹಿತವನ್ನು ಬಯಸುತ್ತಿದ್ದಾರಷ್ಟೇ, ಭರತ?”. ಈ ಸರಳವಾದ ಮಾತಿನ ಹಿಂದೆ ಅದೆಷ್ಟು ಒಳನೋಟವಿದೆಯಲ್ಲವೇ. ಆಧುನಿಕ ಕಾಲದಲ್ಲಿ ರಾಷ್ಟ್ರನಾಯಕರ ಒಳಿತನ್ನು ಬಯಸುತ್ತಿದ್ದಾರೋ ಇಲ್ಲವೋ ಎನ್ನುವುದು ಒಂದು ಪ್ರಮುಖವಾದ ವಿಷಯವೇ ಅಲ್ಲ. ರಾಷ್ಟ್ರ, ರಾಜ ಮತ್ತು ಪ್ರಜೆಗಳ ನಡುವೆ ಒಂದು ಜೈವಿಕವಾದ ಸಂಬಂಧದ ಅಗತ್ಯತೆಯನ್ನು ರಾಮ ಒತ್ತಿಹೇಳುತ್ತಿದ್ದಾನೆ. ಪ್ರಜೆಗಳು ಮತ್ತು ರಾಜ್ಯವನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗಬಹುದಾದ ಬ್ರಾಹ್ಮಣರು ರಾಜನ ಒಳಿತನ್ನು ಬಯಸುವಂತಹ ರೀತಿಯಲ್ಲಿ ರಾಜ್ಯಪಾಲನೆ ಮಾಡಬೇಕಾದ್ದು ರಾಜನ ಕರ್ತವ್ಯ.
“ಭರತನೇ, ರಾಜನು ಮಾಡಬಾರದ ೧೪ ತಪ್ಪುಗಳನ್ನು ಮಾಡುತ್ತಿಲ್ಲ ತಾನೇ?”. ಈ ಹದಿನಾಲ್ಕು ತಪ್ಪುಗಳಾದರೂ ಯಾವುವು? ನಾಸ್ತಿಕತೆ, ಅನೃತ, ಕೋಪ, ಗಮನಹೀನತೆ, ಮುಂದೂಡುವಿಕೆ, ಜ್ಞಾನಿಗಳನ್ನು ದೂರವಿಡುವುದು, ಪಂಚೇಂದ್ರಿಯಗಳ ವಶವಾಗುವುದು, ರಾಜ್ಯಾಡಳಿತದ ಯೋಜನೆಯನ್ನು ತಾನೊಬ್ಬನೇ ಮಾಡುವುದು, ಅನರ್ಥಕಾರಿಯಾದ ಕೆಲಸ ಮಾಡುವವರ ಜೊತೆ ಸಮಾಲೋಚನೆ ನಡೆಸುವುದು, ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರದೇ ಇರುವುದು, ರಾಜ ರಹಸ್ಯ, ಸಲಹೆಗಳ ಗೌಪ್ಯತೆಯನ್ನು ಕಾಪಾಡದೇ ಇರುವುದು, ಶುಭ ಕಾರ್ಯಗಳನ್ನು ನಡೆಸದೇ ಇರುವುದು ಮತ್ತು ಎಲ್ಲ ಶತ್ರುಗಳನ್ನೂ ಏಕ ಕಾಲದಲ್ಲಿ ಎದುರಾಗುವುದು. ಇದು ಸುಲಭವಾಗಿ ಅರ್ಥವಾಗುವಂತಹ ವಿಚಾರ. ಒಂದು ಅಂಶವನ್ನು ಒತ್ತಿ ಹೇಳಬೇಕಾದ ಅವಶ್ಯಕತೆಯಿದೆ. ರಾಜ್ಯಾಡಳಿತದ ಯೋಜನೆಯನ್ನು ತಾನೊಬ್ಬನೇ ಮಾಡದೇ ಇರುವುದು. ನಾಯಕತ್ವವನ್ನು ವಹಿಸಿರುವ ಎಲ್ಲರೂ ಗಮನಿಸಬೇಕಾದ ಅಂಶವಿದು. ಯೋಜನೆಯಲ್ಲಿ ಯಾರ್ಯಾರು ಭಾಗಿಯಾಗುವುದು ಅವಶ್ಯವಿದೆಯೋ ಅವೆರೆಲ್ಲರೂ ಭಾಗಿಯಾಗಲೇ ಬೇಕು. ಇಲ್ಲದಿದ್ದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಯೋಜನೆಗಳು ತಲೆಕೆಳಗಾಗುವುದು ಸಹಜ. ಕಠಿಣ ಪರಿಸ್ಥಿತಿಯನ್ನು ಒಬ್ಬನೇ ಎದುರಾಗುವುದು ಸಾಧ್ಯವಿಲ್ಲ. ಅನೇಕರು ಎದುರಿಸಬೇಕಾದರೆ ಯೋಜನೆಯ ಸೃಷ್ಟಿಯಲ್ಲಿ ಅವರ ಭಾಗವಹಿಸುವಿಕೆ ಅತ್ಯಗತ್ಯ.
“ಓ ಭರತನೇ, ಚತುರ್ವರ್ಗಗಳ ಹದಿನೈದು ವಿಭಾಗಗಳು, ಸಪ್ತವರ್ಗಗಳು, ತ್ರಿವರ್ಗಗಳು, ಅಷ್ಟವರ್ಗಗಳು, ಮೂರು ವಿದ್ಯೆಗಳು, ಇಂದ್ರಿಯ ಜಯ, ಆರು ಗುಣಗಳ ಮೇಲಿನ ಜಯ, ವಿಧಿಯಿಂದಲೂ ಮಾನುಷಕಾರ್ಯಗಳಿಂದಲೂ ಸಂಭವಗೊಳ್ಳುವ ಉಂಟಾಗುವ ಅಕಾರ್ಯಗಳು, ಇಪ್ಪತ್ತು ವರ್ಗಗಳು, ಪ್ರಕೃತಿ, ಮಂಡಲ, ಎರಡು ಬಗೆಯ ಯಾತ್ರಾ ದಂಡ ವಿಧಾನಗಳು, ಶಾಂತಿ ಮತ್ತು ಯುದ್ಧ – ಇವುಗಳ ಸರಿಯಾದ ಸಹಜ ರೀತಿಯನ್ನು ಅರಿತು ಅದಕ್ಕೆ ತಕ್ಕಂತೆ ಪಾಲನೆ ಮಾಡುತ್ತಿದ್ದೀಯೆ ತಾನೇ?”. ಈ ವರ್ಗಗಳ ಬಗ್ಗೆ ಶಾಸ್ತ್ರಗಳಲ್ಲಿ ವಿಶದವಾದ ವಿವರಣೆಯಿದೆ. ಮುಖ್ಯವಾದ ವಿಷಯವೆಂದರೆ ಈ ಶ್ಲೋಕದಲ್ಲಿ ಒಟ್ಟು ಒಂದು ರಾಜ್ಯದ ದೈನಿಕದಲ್ಲಿ ಏನೆಲ್ಲಾ ಅಂಶಗಳು ಪಾತ್ರ ವಹಿಸುತ್ತವೆಯೋ ಅದನ್ನೆಲ್ಲ ರಾಜ ಸರಿಯಾಗಿ ಅರಿತಿರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದ್ದಾನೆ ರಾಮ. ಇವುಗಳನ್ನು ಆಧುನಿಕ ಕಾಲದಲ್ಲಿ ಎಷ್ಟು ನಾಯಕರು ಸರಿಯಾಗಿ ಅರಿತಿರಬಹುದು. ಆಧುನಿಕ ರಾಜಕೀಯದಲ್ಲಿ ಇವುಗಳನ್ನು ನಾಯಕರಿಂದ ಬೇರ್ಪಡಿಸಿ ಅಧಿಕಾರಶಾಹಿಗೂ, ಸಂಸ್ಥೆಗಳಿಗೂ ವಹಿಸಿಬಿಡಲಾಗಿದೆ. ಅವುಗಳೊಡನೆ ಸಹಯೋಗ ನಡೆಸಿ ಆಡಳಿತ ನಡೆಸುವುದೇ ಆಧುನಿಕ ನಾಯಕತ್ವದ ರೀತಿ. ಎರಡನೆಯದಾಗಿ, ಪ್ರಕೃತಿ ಮುಂತಾದುವುಗಳನ್ನು ಅರಿಯಬೇಕಾದ ಅಂಶ ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
“ನಿನಗೆ ಅತ್ಯಂತ ಆಪ್ತರಾದ ಮೂವರು ಸಲಹೆಗಾರರೊಡನೆ ಒಟ್ಟಾಗಿಯೂ, ಬೇರೆ-ಬೇರೆಯಾಗಿಯೂ ಚರ್ಚಿಸುತ್ತಿದ್ದೀಯೆ ತಾನೇ, ಭರತ? ಶಾಸ್ತ್ರದ ಅಭಿಪ್ರಾಯವೂ ಇದೆ ಆಗಿದೆ. ವೇದಾಭ್ಯಾಸ, ಶಾಸ್ತ್ರಾಭ್ಯಾಸ ಮಾಡಿದ್ದು ಫಲಪ್ರದವಾಗಿದೆಯೆಂದುಕೊಳ್ಳುತ್ತೇನೆ. ನಿನ್ನ ವೈವಾಹಿಕ-ಜೀವನ, ನಡೆಸುತ್ತಿರುವ ಕಾರ್ಯಗಳೂ ಸಹ ಫಲಪ್ರದವಾಗಿದೆಯೆಂದುಕೊಳ್ಳುತ್ತೇನೆ. ದೀರ್ಘಜೀವನಕ್ಕೆ ಬೇಕಾದಂತಹ ಬುದ್ಧಿಯಿಂದ ಇರುವೆ ಎಂದು ಆಶಿಸುತ್ತೇನೆ. ನಿನ್ನ ಸನ್ಮಾರ್ಗ, ಸಮೃದ್ಧಿಗೆ ಅನುಗುಣವಾದ ಕೀರ್ತಿ ನಿನಗೆ ದೊರೆಯುತ್ತಿದೆ ಎಂದು ಆಶಿಸುತ್ತೇನೆ. ನಮ್ಮ ಪೂರ್ವಜರು ನಡೆದ ಸನ್ಮಾರ್ಗದಲ್ಲಿಯೇ ನಡೆಯುತ್ತಿರುವೆ ಎಂದು ಆಶಿಸುತ್ತೇನೆ. ಅತ್ಯುತ್ತಮವಾದ ಭೋಜನವನ್ನು ನೀನೊಬ್ಬನೇ ಅಲ್ಲದೆ ಸ್ನೇಹಿತರೊಡನೆ ಹಂಚಿಕೊಂಡು ಸೇವಿಸುತ್ತಿದ್ದೀಯೆ ಎಂದು ನಂಬಿದ್ದೇನೆ”. ಹೀಗೆ ತನ್ನ ಉಭಯಕುಶಲೋಪರಿ ಸಂಭಾಷಣೆಯನ್ನು ಸಂಪೂರ್ಣಗೊಳಿಸುತ್ತಾನೆ ರಾಮ.
ಹೀಗೆ ಒಂದು ಸಂಕೀರ್ಣವಾದ ಉಪದೇಶವನ್ನು ಮಾತೃ-ಹೃದಯದಿಂದ ಅಪ್ಯಾಯಮಾನವಾಗಿ ಮಾಡುತ್ತಾನೆ ರಾಮ. ಈ ೭೬ ಶ್ಲೋಕಗಳಲ್ಲಿ ಬಹಳಷ್ಟನ್ನು ಹೇಳಿದ್ದಾರೆ ವಾಲ್ಮೀಕಿಗಳು, ಶ್ರೀರಾಮನ ಮೂಲಕ. ಮುಖ್ಯವಾಗಿ ಇದನ್ನು ಪ್ರತಿದಿನವೂ ಪಾರಾಯಣ ಮಾಡುವ ರೀತಿಯಲ್ಲಿ ಸರಳವಾಗಿ, ಸುಂದರವಾದ ರೂಪದಲ್ಲಿದೆ. ಇದರ ಹಿಂದಿನ ತಾತ್ವಿಕ ವಿಚಾರಗಳು ಈ ಶ್ಲೋಕಗಳಲ್ಲಿಲ್ಲ. ಅವುಗಳ ಕುರಿತಾದ ವಿಶದವಾದ ವಿವರಣೆಗೆ ಪುರಾಣಗಳಿಗೆ ಹೋಗಬೇಕಾಗುತ್ತದೆ. ವೇದಗಳಲ್ಲಿರುವ ತಾತ್ವಿಕ ವಿಚಾರಗಳಿಂದ ಇವುಗಳನ್ನು ವಿವರಿಸಬೇಕಾಗುತ್ತದೆ. ಎಲ್ಲವನ್ನೂ ಬರೆದಿಡುವ ಸಂಸ್ಕೃತಿ ನಮ್ಮದಾಗಿರಲಿಲ್ಲ. ಬರಹದ ರೂಪ ಕಾರ್ಯಸಾಧನೆಗೆ ಅನುಕೂಲವಾಗುವಂತಿರಬೇಕು – ಇದು ನಮ್ಮ ಸಂಸ್ಕೃತಿಯ ರೀತಿ. ಹಾಗೆಂದು ತಾತ್ವಿಕತೆಯನ್ನೇನೂ ತೃಣವಾಗಿ ಕಂಡಿರಲಿಲ್ಲ. ಮಹಾಭಾರತದ ಶಾಂತಿಪರ್ವದಲ್ಲಿ, ಅನುಶಾಸನ ಪರ್ವದಲ್ಲಿ ಇದರ ಬೃಹತ್ ಸ್ವರೂಪವನ್ನು ಕಾಣಬಹುದು. ಅನೇಕ ನೀತಿ-ಶಾಸ್ತ್ರಗಳಲ್ಲಿ ವಿವರಣೆ ನೋಡಬಹುದು. ಮುಂದಿನ ಕಾಲದಲ್ಲಿ ಚಾಣಕ್ಯನ ಅರ್ಥಶಾಸ್ತ್ರದಲ್ಲಿ ನೋಡಬಹುದು. ಆದರೆ ಎಲ್ಲಕ್ಕಿಂತ ಮಿಗಿಲಾಗಿ ನಮ್ಮದು ಶಾಸ್ತ್ರಜ್ಞರ, ಋಷಿಗಳ ಮತ್ತು ಸಾಧಕರ ದೇಶ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಸ್ತಾಂತರಿಸುವಲ್ಲಿ ಅವರ ಪಾತ್ರ ಮಿಗಿಲು. ಬರಹರೂಪದಲ್ಲಿರುವುದು ಅದಕ್ಕೆ ಅನುರೂಪವಾಗಿ ಮಾತ್ರ.
ಒಟ್ಟಾರೆಯಾಗಿ ಹೇಳುವುದಾದರೆ, ಈ ೭೬ ಶ್ಲೋಕಗಳಲ್ಲಿ ಒಂದು ಸಮಗ್ರತೆಯಿದೆ. ಇವುಗಳನ್ನು ಸದಾ ಮನನ ಮಾಡಿಕೊಳ್ಳುವ ರೂಪದಲ್ಲಿದೆ. ಇವುಗಳ ವಿವರಣೆಗೆ ಶಾಸ್ತ್ರಗಳಿಗೆ ಹೋಗಲೇಬೇಕಾಗುತ್ತದೆ. ಆದರೆ ಕಲಿಯುವ ಮುನ್ನ, ಕಲಿತ ನಂತರ ಶಾಸ್ತ್ರಕ್ಕೆ ಮುಖಾಮುಖಿಯಾಗುವುದಕ್ಕೆ ಯಾವ ರೂಪ ಬೇಕೋ ಅದಕ್ಕೆ ಅನುಗುಣವಾಗಿದೆ. ನಮ್ಮ ರಾಮಾಯಣ-ಮಹಾಭಾರತಗಳಲ್ಲಿ ಇಂತಹ ಅನೇಕ ವಿಚಾರಗಳು ಕಥೆಯ ಓಘಕ್ಕೆ ಸ್ವಲ್ಪವೂ ಧಕ್ಕೆ ಬರದ ರೀತಿಯಲ್ಲಿ ಕಂಡುಬರುತ್ತವೆ. ಈ ಅಂಶಗಳು ಮಹಾಕಾವ್ಯದ ಘನತೆಯನ್ನು ಹೆಚ್ಚಿಸಿವೆ. ನಮ್ಮ ಇತಿಹಾಸ-ಪುರಾಣ-ಮಹಾಕಾವ್ಯಗಳನ್ನು ಮತ್ತೆ ಮತ್ತೆ ಓದುತ್ತಿರಬೇಕಾದ್ದಕ್ಕೆ ಈ ಅಂಶಗಳು ಸಹ ಕಾರಣ.
(Image credit: Wikimedia Commons)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.