ಋಗ್ವೇದದಲ್ಲಿ ನದಿಗಳ ಪಾತ್ರ ಬಹಳ ಪ್ರಧಾನವಾದದ್ದು. ಋಗ್ವೇದದಲ್ಲಿ ಉಲ್ಲೇಖಗೊಂಡ ನದಿಗಳ ಅಧ್ಯಯನದ ಮೂಲಕ ನಮಗೆ ಬಹಳಷ್ಟು ಪ್ರಜ್ಞೆ, ಒಳನೋಟಗಳು ದೊರಕುತ್ತವೆ. ಹತ್ತನೇ ಮಂಡಲದ 75ನೆಯ ಸೂಕ್ತಕ್ಕೆ ನದೀಸೂಕ್ತ ಅಥವಾ ನದಿಸ್ತುತಿ ಸೂಕ್ತವೆಂದೇ ಹೇಳಲಾಗುತ್ತದೆ. ಇದರಲ್ಲಿ ಒಂಬತ್ತು ಋಕ್ಕುಗಳಿದ್ದು, ಹೆಸರೇ ಹೇಳುವಂತೆ, ನದಿಗಳ ವರ್ಣನೆ ಮತ್ತು ಸ್ತುತಿಗಳೇ ಇದರ ವಸ್ತು.
ಆದರೆ, ನದಿಗಳ ವರ್ಣನೆ ಮತ್ತು ಸ್ತುತಿಗಳು ನದೀಸೂಕ್ತಕ್ಕೆ ಮಾತ್ರ ಸೀಮಿತವಾಗಿಲ್ಲ. ಋಗ್ವೇದದ ಸಮಸ್ತ ಸೂಕ್ತಕಾರರು, ದ್ರಷ್ಟಾರರು ಪ್ರತಿಯೊಂದು ಮಂಡಲದಲ್ಲೂ ಬೇರೆ ಬೇರೆ ನದಿಗಳನ್ನು ವರ್ಣಿಸಿ ಪೂಜಿಸಿದ್ದಾರೆ.
ಋಗ್ವೇದದಲ್ಲಿ ಬರುವ ನದಿಗಳ ಸೂಕ್ತ/ಋಕ್ಕುಗಳಲ್ಲಿ ಇರುವ ಮಾಹಿತಿ
ಋಗ್ವೇದದಲ್ಲಿ ನದಿಗಳ ವಿಷಯವನ್ನು ಈ ಕೆಳಗಿನ ಶೀರ್ಷಿಕೆಗಳಲ್ಲಿ ನಾವು ಕಾಣಬಹುದು.
-
ಸಾಧಾರಣ ಮಾಹಿತಿ: ಋಗ್ವೇದದಲ್ಲಿ ಇಪ್ಪತ್ತೊಂದಕ್ಕೂ ಹೆಚ್ಚು ನದಿಗಳು ಉಲ್ಲೇಖವಾಗಿವೆ. ಇವುಗಳಲ್ಲಿ ಸಿಂಧು, ಸರಸ್ವತಿ, ಮತ್ತು ಸರಯೂ ಬಹಳವಾಗಿ ನೀರಿರುವ ನದಿಗಳು. (ಋ. ಸಂ. 10.64. 9) ರಸಾ (ಅವೆಸ್ತಾ ಹೆಸರು ರಂಘಾ) ಎಂಬ ನದಿಯು ಬಹಳ ಬಹಳ ಆಳವಾದದ್ದು. (ಋ. ಸಂ. 5.53.9, 10.108.1, 2) ಸಾಧಾರಣವಾಗಿ ನದಿಗಳನ್ನು ಸ್ತ್ರೀಲಿಂಗವಾಚಕವಾದ ಶಬ್ದಗಳಿಂದ ಕರೆಯುವುದು ರೂಢಿ. ಆದರೆ, ಕೆಲವು ನದಿಗಳನ್ನು “ನದ” ಎಂದು ಪುಲ್ಲಿಂಗವಾಚಕವಾಗಿ ಸೂಚಿಸುತ್ತಾರೆ. ಉದಾಹರಣೆಗೆ, ಸರಸ್ವಾನ್, ಬ್ರಹ್ಮಪುತ್ರ.
ಓದುಗರಿಗೆ ಋಗ್ವೇದದ ಭೂಭಾಗದ ಕಲ್ಪನೆ ನೀಡುವುದಕ್ಕಾಗಿ ಕೆಳಗೆ ನದಿಗಳ ನಕ್ಷೆಯನ್ನು (ಶ್ರೀಕಾಂತ ತಲಗೇರಿಯವರ ‘The Rigveda, A Historical Analysis’ ಪುಸ್ತಕದಿಂದ) ಕೊಟ್ಟಿದ್ದೇನೆ.
-
ಋಗ್ವೇದದ ಋಷಿಗಳು: ಋಗ್ವೇದದ ಸೂಕ್ತಕಾರರಾದ ಋಷಿಗಳು, ಅವರ ವಂಶಾವಳಿ, ಸಾಧನೆ, ಸಿದ್ಧಿಗಳು; ಅವರು ಯಾವ ನದಿಗಳನ್ನು ವರ್ಣಿಸಿದ್ದಾರೆ, ಅವರ ಸೂಕ್ತಗಳಿಂದ ನಮಗೆ ಲಭಿಸುವ ಹೊಸ ಚಿಂತನೆಗಳು ಯಾವುವು, ಇತ್ಯಾದಿ.
-
ಕಥೆಗಳು: ಋಗ್ವೇದದಲ್ಲಿ, ಹೆಚ್ಚೇಕೆ, ನಮಗೆ ಕೊಡುಗೆಯಾಗಿ ಬಂದ ಇತಿಹಾಸ, ಪುರಾಣದ ಕಥೆಗಳೆಲ್ಲ ರೂಪಕಗಳೇ. ಕೌತುಕವೆಂದರೆ, ಋಗ್ವೇದದ ಕಥೆಗಳೇ ಇತರ ಪುರಾಣ–ಇತಿಹಾಸಗಳಲ್ಲೂ ಮತ್ತೊಮ್ಮೆ ಕೇಳಸಿಗುತ್ತವೆ. ಆದರೆ, ಇವುಗಳು ಕಥೆಗಳು ಮಾತ್ರವಲ್ಲ, ಇವುಗಳಿಗೆ ಒಂದು ಗೂಢಾರ್ಥ ಇದೆ, ಇವುಗಳಿಗೆ ಐತಿಹಾಸಿಕ, ಭೌಗೋಳಿಕ, ದಾರ್ಶನಿಕ ಆಯಾಮಗಳಿವೆ ಎಂಬುದನ್ನು ಅಲ್ಲಗಳೆಯಲು ಅಸಾಧ್ಯ.
-
ನಿರುಕ್ತ: ಋಗ್ವೇದದ ನದಿಗಳನ್ನು ಸೂಕ್ತಕಾರರು ಯಾವ ರೀತಿ ವರ್ಣಿಸಿದ್ದಾರೆ? ಯಾವ ಶಬ್ದಗಳನ್ನು ಉಪಯೋಗಿಸಿದ್ದಾರೆ? ನಿರುಕ್ತಕಾರರ ಭಾಷ್ಯದಿಂದ ಶಬ್ದಾರ್ಥ ಮಾತ್ರವಲ್ಲ, ಅವುಗಳ ಭಾಷೆ, ಭಾವ, ಸಂದರ್ಭ ಮತ್ತು ಅನುಭೂತಿಗಳನ್ನೂ ನಾವು ತಿಳಿಯಬಹುದು. ಋಗ್ವೇದದಲ್ಲಿ ನದಿ ಎಂಬ ಅರ್ಥವನ್ನು ಸೂಚಿಸುವ 37 ಶಬ್ದಗಳಿವೆ. ಇವುಗಳ ಅರ್ಥವಿವರಣೆ, ನಿರುಕ್ತ ಇತ್ಯಾದಿಗಳನ್ನು ತರುವಾಯ ಪರಿಚಯಿಸಿಕೊಳ್ಳೋಣ.
-
ಐತಿಹಾಸಿಕ ಮತ್ತು ಭೌಗೋಳಿಕ ವಿಶ್ಲೇಷಣೆ ಮತ್ತು ತೀರ್ಮಾನಗಳು.
ಈ ಲೇಖನದಲ್ಲಿ ಋಗ್ವೇದದಲ್ಲಿ ಬರುವ ನದಿಗಳ ಬಗೆಗಿನ ಸೂಕ್ತ/ಋಕ್ಕುಗಳನ್ನು ಅಧ್ಯಯಿಸಿ ಮೇಲೆ ಕೊಟ್ಟ ಎಲ್ಲ ದೃಷ್ಟಿಕೋನಗಳಿಂದ ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.
ಸರಸ್ವತಿಯ ಪ್ರಾಮುಖ್ಯತೆ
ಸರಸ್ವತಿಯು ಒಂದು ನದಿ ಅಥವಾ ನದಿಯ ಹೆಸರು ಮಾತ್ರವಲ್ಲ. ಅವಳು ದೇವತಾಸ್ವರೂಪಳು. ಸರಸ್ವತಿಯು ಆಕಾಶದ ಅಭಿಮಾನಿ ದೇವತೆಗಳಾದ, ತಿಸ್ರೋ ದೇವ್ಯಃ ಎಂದು ಹೇಳಲ್ಪಡುವ ಇಳಾ, ಭಾರತಿ, ಮತ್ತು ಸರಸ್ವತಿ ದೇವಿಯರಲ್ಲಿ ಒಬ್ಬಳು, ಎಂದು ಅಪ್ರೀ ಸೂಕ್ತಗಳು ಹೇಳುತ್ತವೆ. [ಋಗ್ವೇದದಲ್ಲಿ ಹತ್ತು ಅಪ್ರೀ ಸೂಕ್ತಗಳಿವೆ.] ಭೂಮಿ, ಅಂತರಿಕ್ಷ, ಮತ್ತು ಸ್ವರ್ಗಗಳಲ್ಲಿ ಅಗ್ನಿಯು ಮೂರು ರೂಪಗಳಲ್ಲಿ ಆರಾಧಿಸಲ್ಪಡುತ್ತಾನೆ. ಸೂರ್ಯನು ಸ್ವರ್ಗದಲ್ಲಿರುವ ಅಗ್ನಿಯ ರೂಪವು. ಭಾರತಿಯು ಸೂರ್ಯನ ಕಿರಣಗಳನ್ನು ಸೂಚಿಸುವ ದೇವತೆಯಾದ್ದರಿಂದ ಸ್ವರ್ಗದಲ್ಲಿರುವ ಅಗ್ನಿಯ ಪ್ರತೀಕ. ಸರಸ್ವತಿಯು ಸಿಡಿಲು ಮಿಂಚುಗಳ ದೇವತೆ. ಹೀಗಾಗಿ ಇವಳು ಅಂತರಿಕ್ಷದಲ್ಲಿರುವ ಅಗ್ನಿಯ ರೂಪವು. ಇಳಾದೇವಿಯು ಭೂಮಿಯ ಮೇಲಿನ ಜನಗಳಿಗೆ ಧನಾದಿಗಳನ್ನೂ ದೀರ್ಘಾಯುವನ್ನೂ ಕೊಡುವವಳಾದ್ದರಿಂದ, ಇಳೆಯು ಭೂಮಿಯಲ್ಲಿನ ಅಗ್ನಿಯ ರೂಪವು.
ಎಲ್ಲಕ್ಕಿಂತ ಮುಖ್ಯವಾಗಿ, ಸರಸ್ವತಿಯು ವಾಗ್ದೇವತೆ, ಜ್ಞಾನಸ್ವರೂಪಿ. ಅವಳು ಶಬ್ದ ಮತ್ತು ಅರ್ಥಗಳ ಅಧಿದೇವತೆ. ಭಕ್ತನಿಗೆ ಮಾತು, ಸಂಗೀತ, ಕಲೆ ಮತ್ತು ಅಭಿವ್ಯಕ್ತಿಗಳನ್ನು ದಯಪಾಲಿಸುವ ಆರಾಧ್ಯದೈವ.
ಸರಸ್ವತಿಯ ಸ್ವರೂಪವು ಆ ನದೀತೀರದಲ್ಲಿ ಬೆಳೆದು ಹೊಮ್ಮಿದ ಭಾರತೀಯ ಸಂಸ್ಕೃತಿಯ ಪ್ರತೀಕ. ನಮ್ಮ ಸನಾತನ ಸಂಸ್ಕೃತಿಯು ಸರಸ್ವತಿ ನದೀ ತೀರದಲ್ಲೇ ಹುಟ್ಟಿತು, ವಿಕಸಿತವಾಯಿತು, ಎಂಬುದರಲ್ಲಿ ಸಂದೇಹವೇ ಇಲ್ಲ. ಸರಸ್ವತಿ ನದೀ ತೀರದಲ್ಲಿ ಎಷ್ಟೋ ಋಷಿ–ಮುನಿಗಳು, ರಾಜರು, ಕವಿ–ಚಿಂತಕರು, ಸಾಮ್ರಾಜ್ಯಗಳು ನಿರ್ಮಾಣವಾದವು, ಅಭಿವೃದ್ಧಿಗೊಂಡವು. ಅದರಿಂದಲೇ ಸರಸ್ವತಿಗೆ ಜ್ಞಾನದೇವತೆಯ ಅಭಿದಾನವಿದೆ, ಎಂಬುದರಲ್ಲಿ ಆಶ್ಚರ್ಯವೇನು?
ಹಿಂದೆ ಹೇಳಿದಂತೆ, ಸರಸ್ವತಿಗೆ ವಾಗ್ರೂಪತ್ವಾದಿಗಳು ಇರುವುದರಿಂದ, ಸರಸ್ವತಿಯು ಉಷೆಯ ಮತ್ತೊಂದು ರೂಪ. ಉಷೆ ಎಂದರೆ ಸಂಧಿಕಾಲ, ತಪಃಚರಣೆಯ ಕಾಲ; ಅಭ್ಯಾಸ, ಅಧ್ಯಯನಗಳ ಕಾಲ. ಉಷೆಯ ಹೆಸರುಗಳಾದ ಸೂನೃತಾ, ಸೂನೃತಾವತಿ, ಸೂನೃತಾವರೀ, ಇತ್ಯಾದಿ ಶಬ್ದಗಳು ಸರಸ್ವತಿಯ ಹೆಸರುಗಳೂ ಆಗಿವೆ. ಸೂನೃತ ಎಂದರೆ, ಪ್ರಿಯವೂ ಸತ್ಯವೂ ಆದ ಮಾತುಗಳು ಎಂಬ ಅರ್ಥ ಬರುತ್ತದೆ.
ಋಗ್ವೇದದಲ್ಲಿ ಅತ್ಯಂತ ಪ್ರಮುಖವಾದ ನದಿಯೆಂದರೆ, ಸರಸ್ವತಿ. ಸರಸ್ವತಿಯು ಋಗ್ವೇದದ ಮೊದಲನೆಯ ಮಂಡಲಗಳಲ್ಲಿ ಸಮುದ್ರದಂತೆ ಭೋರ್ಗರೆಯುತ್ತಾ ಹರಿಯುವ ನದಿಯಾಗಿದ್ದು, ಕಡೆಯ ಮಂಡಲದ ನದೀಸೂಕ್ತವನ್ನು ರಚಿಸುವ ವೇಳೆಗೆ, ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಒಂದು ಚಿಕ್ಕ ನದಿಯಾಗಿತ್ತು. ಮುಂದೆ ನಾವು ನೋಡುವಂತೆ, ನದೀಸೂಕ್ತದಲ್ಲಿ ಸರಸ್ವತಿಯ ಉಲ್ಲೇಖವಿದ್ದರೂ ಕೂಡ, ಅದರ ಪ್ರಮುಖ ದೇವತೆಯೆಂದರೆ, ಸಿಂಧೂ ನದಿ.
ಉದಾಹರಣೆಗೆ, ಮೊದಲನೆಯ ಮಂಡಲದ ಈ ಸೂಕ್ತವನ್ನು ನೋಡೋಣ.
ಮಹೋ ಅರ್ಣಃ ಸರಸ್ವತೀ ಪ್ರ ಚೇತಯತಿ ಕೇತುನಾ ।
ಧಿಯೋ ವಿಶ್ವಾ ವಿ ರಾಜತಿ ।।
(ಋ. ಸಂ. 1.3.12)
ಸರಸ್ವತಿ ನದಿಯು ಅಗಾಧವಾದ ಪ್ರವಾಹದಲ್ಲಿ ಹರಿಯುತ್ತಾ, ಈ ದೇವಿಯು ತನ್ನನ್ನು ಆರಾಧಿಸುವ ಜನರ ಮನಸ್ಸನ್ನು ಪ್ರಕಾಶಿಸುವಳು (ಎಂದರೆ, ಅವರ ಬುದ್ಧಿಯು ಚುರುಕಾಗುವಂತೆ ಪ್ರೇರೇಪಿಸುವಳು.)
ಹಿಂದಿನ (ಸೋಮನ ಕುರಿತಾದ) ಒಂದು ಲೇಖನದಲ್ಲಿ ನಾವು ಶ್ರೀಕಾಂತ ತಲಗೇರಿಯವರು ಬೆಳಕಿಗೆ ತಂದ ಋಗ್ವೇದದ ಮಂಡಲಗಳ ಕಾಲಾವಧಿಯ ಬಗ್ಗೆ ತಿಳಿದುಕೊಂಡೆವು. 10ನೇ ಮಂಡಲವು ಎಲ್ಲ ಮಂಡಲಗಳಿಗಿಂತ ಹೊಸತು. (ತಲಗೇರಿಯವರು ನಿರೂಪಿಸಿದ ಚಿತ್ರವನ್ನು ಮತ್ತೊಮ್ಮೆ ಇಲ್ಲಿ ಕೊಟ್ಟಿದ್ದೇನೆ.) ಈ ಪಟ್ಟಿಯನ್ನು ನೋಡಿದರೆ, 1ನೇ ಮಂಡಲವು ಋಗ್ವೇದದ ಮಧ್ಯದ ಕಾಲಾವಧಿಯಲ್ಲಿ ರಚಿತವಾಗಿದೆ. ಈ ಕಾಲದಲ್ಲಿ ಕೂಡ, ಸರಸ್ವತಿಯು ‘ಅಗಾಧವಾದ ಪ್ರವಾಹದಲ್ಲಿ‘ ಹರಿಯುತ್ತಿದ್ದ ನದಿ. 10ನೇ ಮಂಡಲಕ್ಕೆ ಬರುವ ವೇಳೆಗೆ, ಸರಸ್ವತಿ ನದಿಯ ಪಾತ್ರ ಬಲು ಕಿರಿದಾಗಿದ್ದು, ನದೀ ಸೂಕ್ತದಲ್ಲಿ ಒಂದೇ ಒಂದು ಸ್ತೋತ್ರದಲ್ಲಿ ಸರಸ್ವತಿಯ ಉಲ್ಲೇಖವಿದೆ. ಮಹಾಭಾರತದ ವನಪರ್ವದಲ್ಲಿ, ಸರಸ್ವತಿ ನದಿಯು ಕಣ್ಮರೆಯಾಗುವ ವಿನಶನ ಕ್ಷೇತ್ರದ ಉಲ್ಲೇಖವಿದೆ.
ಸರಸ್ವತಿ ನದಿಯ ಬಗ್ಗೆ ಋಗ್ವೇದದ ಇತರ ಸೂಕ್ತಗಳು
ಮೇಲೆ ಹೇಳಿದಂತೆ, ಋಗ್ವೇದದಲ್ಲಿ ಸರಸ್ವತಿ ನದಿಯ ಗುಣಗಾನ ಮಾಡಿರುವಂತೆ ಬೇರೆ ಯಾವ ನದಿಯನ್ನೂ ಸ್ತುತಿಸಿಲ್ಲ. ಈ ನದಿಗೆ ಮೂರು ಸೂಕ್ತಗಳೂ ಅನೇಕ ಬಿಡಿ ಸ್ತೋತ್ರಗಳೂ ಮೀಸಲಾಗಿವೆ. ಸರಸ್ವತಿ ದಡದಲ್ಲಿರುವ ರಾಜರು, ಜನಗಳ ಬಗ್ಗೆ ಉಲ್ಲೇಖಗಳಿವೆ (ಋ. ಸಂ. 7.96.2, 8.21.18)
ಸರಸ್ವತಿಯು ಆಕಾಶದ ಸಾಗರದಿಂದ ಹರಿದು ಬರುತ್ತದೆ. (ಋ. ಸಂ. 7.95.1) (ನಮಗೆ ಗಂಗೆ ಆಕಾಶದಿಂದ ಧುಮುಕಿದ ಗಂಗಾವತರಣದ ಕಥೆ ಗೊತ್ತು. ಭಗೀರಥನು ತಪಸ್ಸು ಮಾಡಿದ ನಂತರ ಗಂಗೆಯು ಶಿವನ ಮುಡಿಯೊಳಗೆ ಅಂತರಿಕ್ಷದಿಂದ ಇಳಿದು ಬಂದಳು, ಎಂದು ಮಹಾಭಾರತದ ವನಪರ್ವದಲ್ಲಿ ಕಥೆ ಇದೆ.) ಪ್ರಚಂಡವಾದ ಅಲೆಗಳಿಂದ ಪರ್ವತದ ಶಿಖರಗಳನ್ನೇ ಕೊಚ್ಚಿಕೊಂಡು ಹೋಗುತ್ತದೆ. (ಋ. ಸಂ. 6.61.2,8) [ಭೌಗೋಲಿಕ ಮಾರ್ಪಾಡುಗಳ ಬಗ್ಗೆ ಈ ಸೂಕ್ತ ಹೇಳುತ್ತಿದೆಯೇ?]
ಸರಸ್ವತಿಗೆ ಏಳುಜನ ಸೋದರಿಯರು, ಆಕೆ ಏಳು ವಿಧವಾಗಿದ್ದಾಳೆ. (ಋ. ಸಂ. 6.61.10,12) ಅವಳು ನದೀ ಮಾತೃ. ಅವಳಿಗೆ ಪಾವೀರವಿ, ಎಂದರೆ ಸಿಡಿಲಿನ ಮಗಳು ಎಂಬ ಅಭಿದಾನವಿದೆ. (ಋ. ಸಂ. 6.49.7)
ಸರಸ್ವತಿಯ ನೀರು ಐಶ್ವರ್ಯ, ಸಂತಾನ, ಮತ್ತು ಅಮರತ್ವಗಳನ್ನು ಮಾತ್ರವಲ್ಲ, ವೀರ್ಯವನ್ನೂ ಅನುಗ್ರಹಿಸುತ್ತಾಳೆ. (ಋ. ಸಂ. 10.20.12, 2.41.17) ವಧ್ರ್ಯಾಶ್ವನಿಗೆ ಸರಸ್ವತಿಯು ದಿವೋದಾಸನೆಂಬ ಪುತ್ರನನ್ನು ಅನುಗ್ರಹಿಸಿದ ಕಥೆ ಇದೆ. (ಋ. ಸಂ. 6.61.1) ಸರಸ್ವತಿಯು ದೇವರನ್ನು ದೂಷಿಸುವವರನ್ನು ನಾಶಮಾಡುತ್ತಾಳೆ. ವೃತ್ತ್ರನನ್ನು ಕೊಲ್ಲುವವಳು. ಆದರೆ, ತನ್ನನ್ನು ಪೂಜಿಸುವವರನ್ನು ರಕ್ಷಿಸಿ, ಅವರ ಶತ್ರುಗಳನ್ನು ನಾಶ ಮಾಡುತ್ತಾಳೆ. (ಋ. ಸಂ. 7. 95. 4, 5; 2.30.8; 9.49.7)
ನದೀಸೂಕ್ತ
ಋಗ್ವೇದದಲ್ಲಿ ಸರಸ್ವತಿಗೆ ಇರುವ ಪ್ರಾಮುಖ್ಯತೆ ಬೇರೆ ಯಾವ ನದಿಗೂ ಇಲ್ಲ. ಹಾಗೆಂದು, ಬೇರೆ ನದಿಗಳ ಉಲ್ಲೇಖ ಇಲ್ಲವೆಂದಲ್ಲ. ನದೀಸೂಕ್ತದಲ್ಲಿ ಸರಸ್ವತಿಗಿಂತ ಬೇರೆ ನದಿಗಳಿಗೆ, ಮುಖ್ಯವಾಗಿ, ಸಿಂಧೂ ನದಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ.
ಇದಕ್ಕೆ ಒಂದು ಸ್ವಾರಸ್ಯವಾದ, ಆದರೆ, ವಿಮರ್ಶಾತ್ಮಕ ದೃಷ್ಟಿಗೆ ಮಾತ್ರವೇ ಕಾಣುವ ಕಾರಣ ಇದೆ.
ಕಾಲಾವಧಿಯ ಪಟ್ಟಿಯನ್ನು ನೋಡಿದರೆ, ಹಳೆಯ ಮಂಡಲಗಳು ರಚನೆಯಾದ ಸಮಯದಲ್ಲಿ ಭೋರ್ಗರೆದು ಹರಿಯುತ್ತಿದ್ದ ಸರಸ್ವತಿಯು ನದೀಸೂಕ್ತವು ರಚನೆಯಾಗುವ ವೇಳೆಗೆ ತನ್ನ ರಭಸದೊಡನೆ ಪ್ರಾಮುಖ್ಯತೆಯನ್ನೂ ಕಳೆದುಕೊಂಡಿದ್ದಳು ಎಂಬುದು ಸಿದ್ಧವಾಗುತ್ತದೆ.