“ಜಗನ್ಮಾತೆ ! ನನ್ನ ಮೇಲೆ ಕೃಪೆ ತೋರು. ನನ್ನ ಗುರುಗಳ ಶಾಪದಿಂದ ನನ್ನ ತೇಜಸ್ಸಿನೊಂದಿಗೆ ನನ್ನ ಸ್ಮರಣಶಕ್ತಿಯೂ ಹೋಯಿತು. ನಾನು ದುಃಖಿತನಾಗಿದ್ದೇನೆ. ದೇವಿ, ನನಗೆ ಜ್ಞಾನ, ಸ್ಮೃತಿ, ವಿದ್ಯೆ, ಪ್ರತಿಷ್ಠೆ, ಕವಿತ್ವ, ಪ್ರಬೋಧನಾ ಕೌಶಲ್ಯ, ಮತ್ತು ಗ್ರಂಥರಚನಾ ಸಾಮರ್ಥ್ಯವನ್ನು ಪ್ರಧಾನಿಸು ಎಂದು ಪ್ರಾರ್ಥಿಸುತ್ತೇನೆ. ನನಗೆ ಯೋಗ್ಯ ಶಿಷ್ಯರನ್ನು ನೀಡು ತಾಯಿ! ವಿಚಾರವಂತರ, ಮೇಧಾವಿಗಳ ಸಭೆಯಲ್ಲಿ ನನ್ನ ವಾಕ್ ಸಾಮರ್ಥ್ಯ ಮತ್ತು ಪ್ರತಿಭೆ ತೋರುವಂತೆ ಮಾಡು “. “ಹೇ ಮಾತೆ ! ದುರ್ಭಾಗ್ಯದಿಂದಾಗಿ ನನ್ನ ಜ್ಞಾನಭಂಡಾರ ಬರಿದಾಗಿದೆ. ಹೇ ದೇವಿ, ಬೂದಿಯಲ್ಲಿ ಮುಚ್ಚಿರುವ ಬೀಜವು ಚಿಗುರಿ ಹೆಮ್ಮರವಾಗುವಂತೆ ನನ್ನ ಜ್ಞಾನವನ್ನು ಪುನರುತ್ಥಾನಗೊಳಿಸು. ಹೇ ಬ್ರಹ್ಮ–ಸ್ವರೂಪಿಣೀ, ಪರಮ–ದೇವಿ, ಜ್ಯೋತಿರೂಪಾ, ಸನಾತನಿ, ಸರ್ವ ವಿದ್ಯೆಗಳ ಅಧಿಷ್ಠಾನ ದೇವತೆ, ನಿನಗೆ ವಂದನೆಗಳು. ಹೇ ವಾಣಿ ! ನಿನ್ನ ಆಶೀರ್ವಾದವಿಲ್ಲದೆ ಈ ಜಗತ್ತೇ ಅರ್ಥಹೀನವಾಗಿದೆ. ನೀನೇ ವಿಸರ್ಗ, ಬಿಂದು, ಮಾತ್ರೆ ಮುಂತಾದವುಗಳ ಅಧಿಷ್ಠಾನ ದೇವತೆಯಾಗಿರುವೆ. ನೀನಿಲ್ಲದೆ ಸಾಂಖ್ಯ ಮತ್ತು ಗಣಿತವೆಲ್ಲಿ? ದೇವಿ, ನೀನೇ ಸ್ಮೃತಿ ಶಕ್ತಿ (ಸ್ಮರಣ ಶಕ್ತಿ), ಜ್ಞಾನ ಶಕ್ತಿ, ಬುದ್ಧಿ ಶಕ್ತಿ ಮತ್ತು ಕಲ್ಪನಾ ಶಕ್ತಿಯಾಗಿರುವೆ. ನೀನೇ ನಾಲಿಗೆ, ಮನಸ್ಸು, ವಿಚಾರ ಮತ್ತು ವಾಣಿಯ ದೇವತೆಯಾಗಿರುವೆ. ಸನಕ ಕುಮಾರರು ಭ್ರಮ ಮತ್ತು ಸಿದ್ಧಾಂತಗಳನ್ನು ನಿರ್ಮಿಸಲು ಹೊರಟಾಗ ಸಾಕ್ಷಾತ್ ಬ್ರಹ್ಮದೇವರೇ ಶ್ರೀಕೃಷ್ಣನ ಮೊರೆಹೋದರು, ಶ್ರೀಕೃಷ್ಣನು ಪ್ರಜಾಪತಿಯಲ್ಲಿ ನಿನಗೆ ಪ್ರಾರ್ಥನೆ ಮಾಡಲು ಹೇಳಿದ ಮೇಲೆ ತಾನೇ ಸಿದ್ಧಾಂತಗಳ ನಿರ್ಮಿತಿಯಾಗಿದ್ದು ! ಪೃಥ್ವಿಯು ಜ್ಞಾನದ ರಹಸ್ಯವನ್ನು ತಿಳಿಸುವಂತೆ ಆದಿಶೇಷನಲ್ಲಿ ಕೇಳಿದಾಗ, ಆದಿಶೇಷನಿಗೆ ಅದು ಸಾಧ್ಯವಾಗದೆ ಋಷಿ ಕಶ್ಯಪರು ನಿನ್ನನ್ನು ಪ್ರಾರ್ಥಿಸಿದಾಗ ಸಿದ್ಧಾಂತಗಳನ್ನು ವಿವರಿಸಿದ್ದು ನೀನೇ ಅಲ್ಲವೇ ತಾಯಿ. ಹೇ ವಾಣಿ, ಮಹರ್ಷಿ ವಾಲ್ಮೀಕಿಯು ವೇದ ವ್ಯಾಸರು ಕೇಳಿದ ಪುರಾಣ ಸೂತ್ರಗಳ ಪ್ರಶ್ನೆಗೆ ಉತ್ತರಿಸಲಾಗದೆ ನಿನ್ನಲ್ಲಿ ಪ್ರಾರ್ಥಿಸಿದಾಗ ನಿನ್ನ ಕೃಪೆಯಿಂದ ವಾಲ್ಮೀಕಿ ಋಷಿಗಳು ಅದನ್ನು ಕಾವ್ಯರೂಪದಲ್ಲಿ ವೇದ ವ್ಯಾಸರಿಗೆ ತಿಳಿಸಿದ ನಂತರ ವೇದ ವ್ಯಾಸರು ವೇದಗಳನ್ನು ವಿಭಾಜಿಸುವಷ್ಟು ಜ್ಞಾನಿಗಳಾಗಿದ್ದು. ಹೇ ದೇವಿ ಸರಸ್ವತಿ ನಿನ್ನ ಕೃಪೆಯಿಂದಲೇ ಬೃಹಸ್ಪತಿಗೆ ಶಬ್ದ ಶಾಸ್ತ್ರದ ಜ್ಞಾನವಾಗಿ ಇಂದ್ರಾದಿ ಶಿಷ್ಯರೂ ಆ ಜ್ಞಾನದ ಅಧಿಕಾರಿಗಳಗದ್ದು. ಅಸಂಖ್ಯ ಮನು, ಮುನಿ ಮತ್ತು ಮಾನವರು ನಿನ್ನ ಕೃಪೆಯಿಂದಲೇ ಪೂಜಾದಿ ಕಾರ್ಯಗಳನ್ನು ಮಾಡುವ ಜ್ಞಾನವನ್ನು ಪಡೆದರು. ಬ್ರಹ್ಮ, ವಿಷ್ಣು, ಶಿವ, ದೇವತೆಗಳು ದಾನವರೆನ್ನದೆ ಎಲ್ಲರೂ ನಿನ್ನ ಗುಣಗಾನವನ್ನು ಮಾಡುತ್ತಾರೆ. ಹೇ ಮಾತೆ ಸರಸ್ವತೀ, ಸಾವಿರ ತಲೆಯ ಶೇಷ, ಪಂಚಮುಖದ ಶಂಕರ, ತ್ರಿಮುಖ ಬ್ರಹ್ಮರೆಲ್ಲರೂ ದೇವಿ ಸರಸ್ವತಿಯ ಧ್ಯಾನಮಗ್ನರಾಗಿರುವಾಗ, ಈ ಹುಲು ಮಾನವನೇನು! “
ಹೀಗೆ ತಾಯಿ ಸರಸ್ವತಿಯಲ್ಲಿ ಅಂಗಲಾಚಿಕೊಂಡವರು ಬೇರಾರೂ ಅಲ್ಲ, ಸ್ಮೃತಿಕಾರರೂ ಬ್ರಹ್ಮರ್ಷಿಗಳೂ ಆದ ಯಾಜ್ಞವಲ್ಕ್ಯರು!
ಹಿಂದೊಮ್ಮೆ ವೈಶಂಪಾಯನ ಮುನಿಗಳ ಶಾಪದಿಂದ ಯಾಜ್ಞವಲ್ಕ್ಯಮುನಿಯ ವಿದ್ಯೆಯು ನಷ್ಟವಾಯಿತು. ಪುನಃ ವಿದ್ಯಾರ್ಜನೆಗೆ ಅವರು ಸೂರ್ಯನ ಉಪಾಸನೆಯನ್ನು ಮಾಡಿದರು. ಪ್ರಸನ್ನರಾದ ಸೂರ್ಯದೇವರು ಅವರಿಗೆ ವೇದ ಮತ್ತು ವೇದಾಂಗಗಳನ್ನು ಉಪದೇಶಿಸಿ, ಆ ವಿದ್ಯೆಯು ಸದಾ ಅವರೊಂದಿಗಿರಲು ವಾಗ್ದೇವಿಯನ್ನು ಸ್ತುತಿಸುವಂತೆ ಹೇಳಿದರು.
ಆಗ ಮೇಲ್ಕಂಡ ರೀತಿ ಯಾಜ್ಞವಲ್ಕ್ಯರು ಪರಿಪರಿಯಾಗಿ ದೇವಿಯಲ್ಲಿ ಬೇಡಿಕೊಂಡು ಕಣ್ಣೀರು ಸುರಿಸುತ್ತಿರಲು, ಅವರ ಮುಂದೆ ಪ್ರಕಾಶಮಾನಳಾದ ದೇವಿ ಸರಸ್ವತಿಯು ಪ್ರಕಟಳಾಗಿ, ಪ್ರಸನ್ನಳಾಗಿ ‘ಎಲ್ಲೆಡೆ ಕೀರ್ತಿ ಗಳಿಸುವ ಮೇಧಾವಿ ಮತ್ತು ಪ್ರಸಿದ್ಧ ಸ್ಮೃತಿಕಾರರಾಗುವ ವರವನ್ನು ಯಾಜ್ಞವಲ್ಕ್ಯರಿಗೆ ನೀಡಿದಳು.
ಯಾಜ್ಞವಲ್ಕ್ಯ ಸರಸ್ವತಿಯ ಸ್ತುತಿಯ ಅಂತರ್ಯವನ್ನು ಅರಿಯಲು ಯತ್ನಿಸಿದರೆ ಆಕೆಯ ಶಕ್ತಿಯ ಅಖಂಡತ್ವದ ಪರಿಕಲ್ಪನೆಯನ್ನು ಮಾಡಿಕೊಳ್ಳಬಹುದು. ಹಿಂದೂ ಪುರಾಣಗಳ ಪ್ರಕಾರ, ಸರಸ್ವತಿ ದೇವಿಯನ್ನು ಯಾರು ಪೂಜಿಸುತ್ತಾರೋ, ಅವರು ಜ್ಞಾನ, ಬುದ್ಧಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಕಲೆ, ವಿಜ್ಞಾನ ಮತ್ತು ಸಂಗೀತಗಳ ಅಧಿದೇವತೆಯೇ ಈ ಸರಸ್ವತಿ ದೇವಿ. ಈಕೆಯನ್ನು ಒಲಿಸಿಕೊಳ್ಳುವುದಕ್ಕಾಗಿ ಭಕ್ತರು ಸರಸ್ವತಿ ಪೂಜೆಯನ್ನು ಮಾಡುತ್ತಾರೆ. ದೇವಾಲಯಗಳಲ್ಲಿ ಸರಸ್ವತಿ ದೇವಿಯ ಪ್ರೀತ್ಯರ್ಥವಾಗಿ ಮಂತ್ರೋಪಚಾರಗಳನ್ನು ಮಾಡುತ್ತಾರೆ. ಸರಸ್ವತಿ ದೇವಿಯನ್ನು ಪೂಜಿಸುವುದರಿಂದ ಜ್ಞಾನ ಮತ್ತು ಸೃಜನಶೀಲತೆಯನ್ನು ಗಳಿಸಿಕೊಳ್ಳಬಹುದು ಎಂಬ ನಂಬಿಕೆ ಭಾರತೀಯ ನಾಗರೀಕತೆಯಲ್ಲಿದೆ.
ಭಾರತದ ಪೂರ್ವ, ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ, ನವರಾತ್ರಿ ಹಬ್ಬವನ್ನು ದುರ್ಗಾ ದೇವಿಯ 9 ರೂಪವನ್ನು ಪೂಜಿಸುವ ಮೂಲಕ ಆಚರಿಸಲಾಗುತ್ತದೆ. ದಸರಾವನ್ನು ದುಷ್ಟರ ವಿರುದ್ಧದ ಜಯದ ಸಂಕೇತದಂತೆ ಕಾಣುತ್ತೇವೆ. ಹಲವೆಡೆ ನವರಾತ್ರಿಯ 9 ನೇ ದಿನ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಸರಸ್ವತಿ ದೇವಿಯನ್ನು ಜ್ಞಾನ, ಸಂಗೀತ, ಕಲೆ ಮತ್ತು ಭಾರತೀಯ ನಾಗರೀಕತೆಯ ಪ್ರಜ್ಞಾಸ್ವರೂಪವಾಗಿಯೇ ನಾವೆಲ್ಲಾ ಆರಾಧಿಸುತ್ತೇವೆ. ದೇವಿಯನ್ನ ಪೂಜಿಸುವ ಮೊದಲು ಆವಾಹನೆ ಮಾಡಲಾಗುತ್ತದೆ. ಆವಾಹನ ಎನ್ನುವ ಪದವು ಆವಾಹನೆಯನ್ನು ಸೂಚಿಸುತ್ತದೆ. ಆದ್ದರಿಂದ ಈ ದಿನದಂದು ಸರಸ್ವತಿ ದೇವಿಯ ಆಶೀರ್ವಾದವನ್ನು ಕೇಳಲು ಪೂಜೆಯನ್ನು ನಡೆಸಲಾಗುತ್ತದೆ. ಸರಸ್ವತಿಯು ಬ್ರಹ್ಮ ದೇವನ ಪತ್ನಿ. ಬ್ರಹ್ಮನು ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ದೇವಿ ಸರಸ್ವತಿಯು ಜ್ಞಾನವನ್ನು ಕರುಣಿಸುವವಳಾಗಿದ್ದಾಳೆ. ಸರಸ್ವತಿ ದೇವಿಯ ಆಶೀರ್ವಾದ ಪಡೆಯಲು ಭಕ್ತರು ನವರಾತ್ರಿಯಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಜೈನ ಧರ್ಮವು ಸರಸ್ವತಿಯನ್ನು ಎಲ್ಲಾ ಕಲಿಕೆಯ ಮೂಲವೆಂದು ಪರಿಗಣಿಸಿದೆ. ಬೌದ್ಧ ಧರ್ಮದ ಅನುಯಾಯಿಗಳು ಸಹ ಸರಸ್ವತಿ ದೇವಿಯನ್ನು ಅಪಾರ ಭಕ್ತಿಯಿಂದ ಪೂಜಿಸುತ್ತಾರೆ ಮತ್ತು ಗೌತಮ ಬುದ್ಧನ ಪವಿತ್ರ ಬೋಧನೆಗಳನ್ನು ಸಂರಕ್ಷಿಸಲು ಸರಸ್ವತಿ ದೇವಿಯು ಬೆಂಬಲಿಸುತ್ತಾಳೆ ಎಂದು ನಂಬುತ್ತಾರೆ.
ಅಶ್ವಯುಜ ಮಾಸ ಶುಕ್ಲಪಕ್ಷ ಪಾಡ್ಯದಿಂದ ದುರ್ಗಾರಾಧನೆ, ನವರಾತ್ರಿ ಉತ್ಸವ ಆರಂಭವಾದರೆ ಸಪ್ತಮಿಯಿಂದ ಶಾರದಾ ಪೂಜೆ ಆರಂಭವಾಗಿ ದಶಮಿಯಂದು ಸಮಾಪ್ತಿಯಾಗುತ್ತದೆ. ಸಮಸ್ತ ಬ್ರಹ್ಮಾಂಡದ ಜ್ಞಾನಸಂಪನ್ನೆಯಾದ ಸರಸ್ವತಿಯನ್ನು ಜ್ಞಾನವನ್ನು, ವಿದ್ಯೆಯನ್ನು ಅನುಗ್ರಹಿಸೆಂದು ಪ್ರಾರ್ಥಿಸುವುದು. ವಿದ್ಯೆಯಿಲ್ಲದೇ, ಜ್ಞಾನವಿಲ್ಲದೇ ಯಾವುದೇ ಕಾರ್ಯವೂ ಅಪೂರ್ಣ. ವಿದ್ಯಾ ವಿಹೀನಂ ಪಶುಸಮಾನಂ ಎಂಬಂತೆ ವಿದ್ಯೆಗಾಗಿ ಅನವರತ ತುಡಿಯಬೇಕು, ಶ್ರಮಿಸಬೇಕು.
ಅಂಕುಶಂ ಚಾಕ್ಷ ಸೂತ್ರಂ ಚ ಪಾಶಪುಸ್ತಕಧಾರಿಣೀಂ ।
ಮುಕ್ತಾಹಾರೈಃ ಸಮಾಯುಕ್ತಾಂ ದೇವೀಂ ಧ್ಯಾಯೇ ಚತುರ್ಭುಜಾಂ ॥
(ಸರಸ್ವತಿ ಸಹಸ್ರನಾಮ ಸ್ತೋತ್ರ ಪೂಜಾ ಕವಚ)
ಗ್ರಂಥಗಳು ಜ್ಞಾನಸ್ವರೂಪ. ಹಾಗಾಗಿಯೇ ಶಾರದಾ ಪೂಜೆಯಂದು ಪುಸ್ತಕಗಳಿಗೆ, ಗ್ರಂಥಗಳಿಗೆ ವಿಶೇಷ ಪೂಜೆ. ಅಂಧಕಾರವನ್ನು ನಿವಾರಿಸಿ ಜ್ಞಾನಜ್ಯೋತಿಯನ್ನು ಬೆಳಗುವವಳು ಶಾರದೆ.
ಶ್ರೀಲಲಿತೆ–ಭಂಡಾಸುರ ನಡುವಿನ ಯುದ್ಧದ ಸಂದರ್ಭ. ಭಂಡಾಸುರನ ಅಸ್ತ್ರಗಳೆಲ್ಲವೂ ಶ್ರೀಲಲಿತೆಯ ಸೈನ್ಯದ ಮಂತ್ರೋಚ್ಚಾರಣೆಯ ಓಘಕ್ಕೆ ನಾಶವಾಗುತ್ತಿರುತ್ತವೆ. ಮಂತ್ರದ ಧ್ವನಿತರಂಗಗಳು ಇದ್ದರಲ್ಲವೇ ಎಂದು ಭಂಡಾಸುರ ಮೂಕಾಸ್ತ್ರ ಪ್ರಯೋಗಿಸಿ ಸಮಸ್ತ ಬ್ರಹ್ಮಾಂಡದ ಧ್ವನಿಯನ್ನೇ ಉಡುಗಿಸುತ್ತಾನೆ. ಅಂಥ ಸಂದರ್ಭದಲ್ಲಿ ಶ್ರೀಲಲಿತೆಯು ಸರಸ್ವತಿಯನ್ನು ಆವಾಹಿಸಿ ವಾಗ್ವಾದಿನೀ ಅಸ್ತ್ರ ಪ್ರಯೋಗಿಸುವಂತೆ ಸೂಚಿಸುತ್ತಾಳೆ. ಶಾರದೆಯ ವೀಣೆಯಿಂದ ಹೊಮ್ಮಿದ ಸಪ್ತಸ್ವರಗಳ ಧ್ವನಿತರಂಗಗಳು ಮೂಕಾಸ್ತ್ರವನ್ನು ಶಿಥಿಲಗೊಳಿಸಿ ನಾಶಮಾಡುತ್ತವೆ. ಜಗದ ಸಂಕಟ ವಾಗ್ವಾದಿನೀ ಅಸ್ತ್ರದಿಂದ ನಿವಾರಣೆಯಾಗುತ್ತದೆ.
ಹಾಗಿದ್ದರೆ ವಿದ್ಯೆ, ಅವಿದ್ಯೆಗಳು ಯಾವುವು? ಎಂಬ ಪ್ರಶ್ನೆ ಬಂದಾಗ ಕೇನೋಪನಿಷತ್ತು ಹೇಳುವುದೇನೆಂದರೆ ಪ್ರತಿ ಶರೀರವೂ ಸ್ತ್ರೀ, ಪುರುಷ ಭಾಗಗಳ ಸಂಯೋಗದಿಂದ ಆದದ್ದು, ಪಂಚೇಂದ್ರಿಯಾದಿಯಾಗಿ ಪೂರ್ಣ ಕಾಯವು ಅಹಸ್ ಎಂಬ ಸ್ತ್ರೀರೂಪ, ಮನಸ್ಸು, ಬುದ್ಧಿ, ಆತ್ಮ ಹೇಳುವಂಥದ್ದು ಪುರುಷ ರೂಪ… ಬ್ರಹ್ಮಾಂಡ ಯಾ ಪರಬ್ರಹ್ಮ ಸ್ವರೂಪವನ್ನು ಪರಿಗಣಿಸಿದರೆ, ನಾವು ಉಪಾಸನೆ ಮಾಡುವ ಸತ್ಯದೇವತೆಗಳೆಲ್ಲವೂ ಸ್ತ್ರೀ ಭಾಗವಾದ ಸತ್ಯ ಅಷ್ಟೇ…. ಪುರುಷ ಭಾಗವಾದ ಋತದ ಸಾಕ್ಷಾತ್ಕಾರ ಆಗಬೇಕಾದರೆ ಮನಸ್ಸು, ಆತ್ಮದಿಂದ ಉಪಾಸನೆ ಮಾಡಬೇಕು. ಹೀಗಾಗಿ ಮನನವೇ ಉಪಾಸನೆ ಎನ್ನುತ್ತದೆ.
ಪ್ರತಿಬೋಧ ವಿದಿತಂ ಮತಮಮೃತತ್ವಂ ಹಿ ವಿಂದತೇ ।
ಆತ್ಮನಾ ವಿಂದತೇ ವೀರ್ಯಂ ವಿದ್ಯಯಾ ವಿಂದತೇಮೃತಂ ॥
(ಕೇನೋಪನಿಷತ್ – 12)
ವಿದ್ಯೆಯನ್ನು ಮನನ ಮಾಡಬೇಕು ಎನ್ನುತ್ತದೆ. ಇದಕ್ಕೂ ವ್ಯಾಖ್ಯಾನ ಇದೆ. ವಿದ್ಯೆ ಎಂದರೆ ಪುರುಷ ಭಾಗವಾದ ಋತದ ಜ್ಞಾನ, ಅವಿದ್ಯೆ ಎಂದರೆ ಸ್ತ್ರೀ ಭಾಗವಾದ ಸತ್ಯದ ಜ್ಞಾನ….
ಅವಿದ್ಯಯಾ ಮೃತ್ಯುಂ ತೀರ್ತ್ವಾ । ವಿದ್ಯಯಾಮೃತಮಶ್ನುತೇ ॥
(ಈಶಾವಾಸ್ಯೋಪನಿಷತ್ – 11)
ಶರೀರ ಎಂಬ ಸ್ತ್ರೀಯ ಮೂಲಕ ದೇವರ ಉಪಾಸನೆ ಮಾಡಿದರೆ ಬ್ರಹ್ಮ ಸಾಕ್ಷಾತ್ಕಾರ ಆಗುವುದಿಲ್ಲ…. ಮನಸ್ಸು ಅಥವಾ ಅಂತರಾತ್ಮ ಎಂಬ ಪುರುಷ ಉಪಾಸನೆ ಮಾಡಬೇಕು, ಆಗ ಬ್ರಹ್ಮಸಾಕ್ಷಾತ್ಕಾರ ಸಾಧ್ಯ.
ವಿದ್ಯೆ, ಅವಿದ್ಯೆ ಎರಡೂ ಬೇರೆಯೇ ಆಗಿದ್ದು, ಪರಸ್ಪರ ವಿರುದ್ಧವಾದುದು. ವಿದ್ಯೆ ಎಂದರೆ ಬ್ರಹ್ಮವಿದ್ಯೆ ಮಾತ್ರ. ಮತ್ತೆ ಉಳಿದದ್ದು ನಾವು ಏನೆಲ್ಲ ಕಲಿಯುತ್ತೇವೆಯೋ ಅವೆಲ್ಲ ಅವಿದ್ಯೆಯೇ ಎಂದು ಅಧ್ಯಾತ್ಮದ ಪರಿಧಿಯಲ್ಲಿ ಪರಿಗಣಿಸಲ್ಪಡುತ್ತದೆ.
ಪ್ರಜ್ಞಾನ ಹೇಳುವಂಥ ಜೀವಾಂಶನಲ್ಲಿ ಏಳುವ ಬಯಕೆಗಳು 2 ಬಗೆಯಾದವು ಇವೆ.
1) ಪ್ರೇಯಸ್ಸು
2) ಶ್ರೇಯಸ್ಸು
ಅವಿದ್ಯೆಯಿಂದ ಪ್ರೇಯಸ್ಸು ಗಳಿಸುವುದಕ್ಕೆ ಮಾತ್ರ ಸಾಧ್ಯ. ಶ್ರೇಯಸ್ಸು ಪಡೆಯಬೇಕಾದರೆ ಬ್ರಹ್ಮಜ್ಞಾನ ತಿಳಿದುಕೊಳ್ಳುವ ವಿದ್ಯೆಬೇಕು. ಇದನ್ನು ಪುರುಷ ಮಾಡಬೇಕು ಎನ್ನುತ್ತದೆ ಕಠೋಪನಿಷತ್ತು. ಪುರುಷ ಎಂದರೆ ಅಂತರಾತ್ಮ, ಮನಸ್ಸು, ಬುದ್ಧಿ.
ಓಮಿತ್ಯೇತದಕ್ಷರಮುದ್ಗೀಥಮುಪಾಸೀತ…. ಎನ್ನುತ್ತದೆ ಛಾಂದೋಗ್ಯ ಉಪನಿಷತ್ತು. ಓಂ ಎಂಬ ಪ್ರಣವವೇ ಬ್ರಹ್ಮ. ಅದರ ಅನಂತತೆಯ ಅರಿಯುವುದಕ್ಕೆ ಕರ್ತವ್ಯ, ಕರ್ಮಗಳನ್ನು ಅರಿತುಕೊಳ್ಳುವುದೇ ಬ್ರಹ್ಮಚರ್ಯ ಎನ್ನುತ್ತದೆ.
ಋತಂ ಪಿಬಂತೌ ಸುಕೃತಸ್ಯ ಲೋಕೇ | ಗುಹಾಂ ಪ್ರವಿಷ್ಟೌ ಪರಮೇ ಪರಾರ್ಧೇ || ಛಾಯಾ ತಪೌ ಬ್ರಹ್ಮವಿದೋ ವದಂತಿ | ಪಂಚಾಗ್ನಯೋ ಯೇಚ ತ್ರಿಣಾಚಿಕೇತಾ | (ಕಥಾಉಪನಿಷದ್ 1.3.1)
ಸ್ತ್ರೀರೂಪಿಯಾದ ಶರೀರ ಎಂಬ ಅಪೋಲೋಕದಲ್ಲಿ ಪುರುಷರೂಪಿಯಾದ ಋತ ಎಂಬ ಆತ್ಮರೂಪಿ ಬ್ರಹ್ಮ ನೆಲೆಸಿದ್ದಾನೆ. ಪ್ರಜ್ಞಾನ ಎಂಬ ಗುಹೆಯಲ್ಲಿ ಈ ಆತ್ಮಬ್ರಹ್ಮನ ವಾಸ. ಸ್ತ್ರೀ, ಪುರುಷರೂಪಿ ಶಕ್ತಿಗಳೆರಡನ್ನೂ ಛಾಯೆ ಮತ್ತು ತಪ ಎನ್ನುತ್ತಾರೆ.
ಏಷ ಸರ್ವೇಷು ಭೂತೇಷು ಗೂಢೋತ್ಮಾನ ಪ್ರಕಾಶತೇ | ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ಸೂಕ್ಷ್ಮ ದರ್ಶಿಭಿಃ | (ಕಠೋಪನಿಷತ್ ತೃತೀಯ ವಲ್ಲೀ 1 )
ಆತ್ಮ ಎಂಬ ಪರಮಪುರುಷನನ್ನು ಕಾಣುವುದು ಸುಲಭದ ವಿಚಾರ ಅಲ್ಲ. ಉಮಾಹೈಮವತಿ, ಅಥವಾ ಶರೀರ ಎಂಬ ಸ್ತ್ರೀರೂಪ (ಇದುವೇ ಆತ್ಮ ಎಂಬ ಪುರುಷನನ್ನು ತೋರಿಸುವ ಗುರು ಎಂದು ಮೃತ್ಯು ನಚೀಕೇತನಿಗೆ ಹೇಳುತ್ತಾನೆ) ಮೂಲಕವಾಗಿ ಉಪಾಸನೆಯ ದಾರಿ ಕಂಡುಕೊಂಡು ನಂತರ ಬುದ್ಧಿ ಎಂಬ ಪುರುಷರೂಪದ ಮೂಲಕ ಮನಸ್ಸಿನಿಂದ ಉಪಾಸನೆ ಮಾಡಿದರೆ ಪರಮಪುರುಷನಾದ ಆತ್ಮದ ಬೆಳಕು ಕಾಣುತ್ತದೆ.
ಇಂಥ ಪರಮಜ್ಞಾನವನ್ನು ಅರಿತುಕೊಳ್ಳುವ ಪ್ರಯತ್ನ ಮಾಡೋಣ. ಶಾರದೆಯ ಗುಣಗಾನ ಮಾಡುತ್ತಾ ಜ್ಞಾನೋಪಾಸನೆಯ ಮಾರ್ಗ ಕಂಡುಕೊಂಡು ನಿಜಜ್ಞಾನದ ಸಾಕ್ಷಾತ್ಕಾರ ಮಾಡಿಕೊಳ್ಳೋಣ.
”ಈ ಪೃಥ್ವಿಯ ಭವಿಷ್ಯತ್ತು ಪ್ರಜ್ಞೆಯ ಪರಿವರ್ತನೆಯ ಮೇಲೆ ನಿಂತಿದೆ. ಭವಿಷ್ಯತ್ತಿಗಿರುವ ಭರವಸೆಯೆಂದರೆ ಪ್ರಜ್ಞೆಯ ಪರಿವರ್ತನೆಯಲ್ಲಿ; ಆ ಪರಿವರ್ತನೆ ಬರಲೇಬೇಕು“. ಈಗ ಲೋಕದ ಮುಂದಿರುವ ಸಮಸ್ಯೆಯ ಸಮಸ್ಯೆ, ರಾಜಸಮಸ್ಯೆ – ಈ ಪ್ರಜ್ಞಾ ಪರಿವರ್ತನೆಯನ್ನು ತರುವ ಬಗೆ ಹೇಗೆ? ಅದು ಭಾರತದಿಂದಲೇ ಸಾಧ್ಯ ಎಂಬುದು ಶ್ರೀ ಅರವಿಂದರ ಅಭಿಪ್ರಾಯವಾಗಿತ್ತು. ಇದೇ ವರ್ಷ ಭಾರತ ತನ್ನ ಮುಂದಿನ ಸಹಸ್ರ ವರ್ಷಗಳ ಪಯಣ ಯಾವ ದಿಶೆಯಲ್ಲಿ ಸಾಗಬೇಕೆಂದು ದಿಟವಾದ ನಿರ್ಧಾರಗೈದಂತಿತ್ತು. ಈ ನಿಟ್ಟಿನಲ್ಲಿ ತಾಯಿ ಶಾರದೆ ನಮಗೆಲ್ಲ ಕೃಪೆದೋರಲಿ ಎಂದು ನವರಾತ್ರಿಯ ಪುಣ್ಯಘಳಿಗೆಯಲ್ಲಿ ಪ್ರಾರ್ಥಿಸೋಣ.
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.