close logo

ಭಗವದ್ಗೀತೆಯ ಅಧ್ಯಾತ್ಮಿಕ ಮಹತ್ವ

ಭಗವದ್ಗೀತೆ ಪಂಚಮವೇದವೆಂದು ಪ್ರಖ್ಯಾತವಾಗಿರುವ ವ್ಯಾಸಪ್ರಣ ೀತ ಮಹಾಭಾರತ ಭೀಷ್ಮಪರ್ವದಲ್ಲಿ ಬರುತ್ತದೆ. ಭಗವದ್ಗೀತೆ ಎಂದರೆ ಭಗವಂತನ ವಾಣ  ಎಂದರ್ಥ. ವಿಶ್ವದ ಶ್ರೇಷ್ಠ ಧಾರ್ಮಿಕ ಗ್ರಂಥಗಳಲ್ಲಿ ಗೀತೆಯೂ ಒಂದು. ಕ್ರಿಸ್ತಪೂರ್ವ ಶತಮಾನಗಳಲ್ಲೇ ಇಂದಿಗೂ ಮಾನವ ಜನಾಂಗಕ್ಕೆ ಅತ್ಯವಶ್ಯಕವಾಗಿ ಅನುಸರಿಸಲೇಬೇಕಾದ ಅತ್ಯಮೂಲ್ಯ ನುಡಿ ಮುತ್ತುಗಳನ್ನು ಒಳಗೊಂಡ ಗ್ರಂಥ. ಅದರ ಭವ್ಯತೆ, ಸೌಂದರ್ಯ, ಮಾನವ ಬದುಕಿನ ಸಮಸ್ಯೆಗಳಿಗೆ ಯಾವ ಕಾಲಕ್ಕೂ ಪ್ರಸ್ತುತವೆನಿಸುವ ಅದರ ಸಂದೇಶ. ವಸುಧ್ಯೆವ ಕುಟುಂಬಕಂ ಎನಿಸುವಂತೆ ಮಾಡುವ ಅದರ ಸಾರ್ವತ್ರಿಕ ದೃಷ್ಟಿ  ಮುಂತಾದ ಶ್ರೇಷ್ಠಾಂಶಗಳು ಬಹುಶ: ಗೀತೆಯಲ್ಲಿಯೇ ನಾವು ಕಾಣಬಹುದು.

ಪ್ರತಿಯೊಬ್ಬ ಮನುಷ್ಯನಲ್ಲಿಯೂ ತಾನು ಚೆನ್ನಾಗಿ ಬದುಕಬೇಕು, ತನ್ನ ಬದುಕನ್ನು ಚೆನ್ನಾಗಿ ನಡೆಸಬೇಕು ಎಂಬ ಆಶೆ ಸ್ವಾಭಾವಿಕವಾಗಿ ಇರುತ್ತದಲ್ಲವೇ/ ನಮ್ಮ ಬದುಕಿನಲ್ಲಿ ಯಾವುದು ಒಳಿತು ? ಯಾವುದು ಯೋಗ್ಯ ? ಯಾವುದು ಬೆಲೆಬಾಳತಕ್ಕದ್ದು ? ಅಂದರೆ ತಮ್ಮ ಬದುಕನ್ನು ಯೋಗ್ಯ ಮಾರ್ಗದಲ್ಲಿ ನಡೆಸಬೇಕು ಎನ್ನುವವರಿಗೆ ಮತ್ತು ಭಗವಂತನ ವಿಶ್ವರೂಪವನ್ನು ಇಂತಹ ಕಲಿಯುಗದಲ್ಲಿಯೂ ಅನುಭವಿಸಲು ನೀಡುವ ಗೀತೆಯೇ ಭಗವದ್ಗೀತೆಯಾಗಿದೆ. 

ಈ ಸೃಷ್ಟಿಯಲ್ಲಿ ನಾವು ಚೇತನ ಮತ್ತು ಅಚೇತನ ಎಂಬ 2 ವಿಭಾಗಗಳನ್ನು ನೋಡುತ್ತೇವೆ. ಸ್ವತಂತ್ರವಾಗಿ ಅಲೋಚನೆ ಮಾಡುವ, ತನ್ನ ಜೀವನವನ್ನು ತನಗೆ ಬೇಕಾದಂತೆ ರೂಪಿಸಬಲ್ಲ ಬುದ್ದಿ ಶಕ್ತಿ , ಪ್ರಜ್ಞೆ ಕೇವಲ ಮನುಷ್ಯನಿಗೆ ಮಾತ್ರ ಉಂಟು. ಮತ್ತಾವ ಚೇತನಕ್ಕೂ ಇಲ್ಲ. ಆದುದರಿಂದಲೇ ಮಾನವ ಜನ್ಮ ದೊಡ್ಡದು ಅದ ಹಾನಿ ಮಾಡಬೇಡಿರೋ ಹುಚ್ಚಪ್ಪಗಳಿರಾ ಎಂದು ಪುರಂದರ ದಾಸರು ಹೇಳುತ್ತಾರೆ. ಮಾನವ ಜನ್ಮ ಅಮೂಲ್ಯವಾದದ್ದು.ನಾವು ಜೀವನ ಯಾತ್ರೆಯನ್ನು ನಡೆಸಬೇಕಾದರೆ, ನಾವು ಯಾರು ? ಎಲ್ಲಿಂದ ಬಂದಿದ್ದೇವೆ ? ಎಲ್ಲಿಗೆ ಹೋಗುತ್ತೇವೆ ? ಎಂಬುದರ ಬದುಕಿನ ಅನಂತ ವ್ಯೆವಿಧ್ಯತೆಯನ್ನು ಮೊದಲು ತಿಳಿದುಕೊಳ್ಳಬೇಕು. ಇಂಥ ಪ್ರಯತ್ನದಲ್ಲಿ ಬೆಲೆಯುಳ್ಳ ನೆರವನ್ನು ನೀಡಬಲ್ಲ ಕೃತಿಗಳಲ್ಲಿ ಭಗವದ್ಗೀತೆ ಒಂದು. ಜನಸಾಮಾನ್ಯರಲ್ಲಿ ಜಾಗೃತಿ ಮತ್ತು ಧಾರ್ಮಿಕತೆ ಅಧ್ಯಾತ್ಮಿಕತೆ,ಘನತೆ , ವ್ಯಕ್ತಿತ್ವ ವ್ಯೆಚಾರಿಕ, ಕೆಚ್ಚು ತಂದು ಕೊಡುವುದೇ ಭಗವದ್ಗೀತೆ.

ಭಕ್ತಿ,ಕರ್ಮ,ಜ್ಞಾನ ಮಾರ್ಗಗಳ ಮೂಲಕ ಪರಮೋಚ್ಚಾರ ಮೋಕ್ಷ ತಲುಪಿಸುವ ಈ ಮಾರ್ಗಗಳ ವ್ಯೆಶಿಷ್ಟ್ಯತೆ ಅತ್ಯುನ್ನತ. ಗೀತೆಯ 18 ಅಧ್ಯಾಯಗಳಲ್ಲಿ 1 ರಿಂದ 6 ರವರೆಗಿನ ಅಧ್ಯಾಯಗಳು ಜ್ಞಾನ ಮಾರ್ಗದ ಬೋಧನೆಗೂ 7 ರಿಂದ 12 ರವರೆಗಿನ ಅಧ್ಯಾಯಗಳು ಭಕ್ತಿ ಮಾರ್ಗವನ್ನು ಪರೋಕ್ಷವಾಗಿ ಸಮರ್ಥಿಸುತ್ತದೆ. ಇದರಲ್ಲಿ ಆತ್ಮಜ್ಷಾನವೆಂದರೆ ತನ್ನ ನಿಜ ಸ್ವರೂಪದ  ಅರಿವು, ಪ್ರಪಂಚವೆಲ್ಲವೂ ಪ್ರತ್ಯಕ್ಷ ಗೋಚರವಾಗುವಂತೆ.ಜಗತ್ತಿನಲ್ಲಿ ಮಾನವ ಸೃಷ್ಟಿ ಶ್ರೇಷ್ಠವಾದುದು.ವಿಶ್ವದ ಏಕ್ಯೆಕ ಗ್ರಹ ಭೂಮಿಯ ಹಿತಕರ ವಾತಾವರಣದಲ್ಲಿ ವ್ಯೆವಿಧ್ಯಮಯ ಜೀವರಾಶಿ ವಿಕಾಸ ಹೊಂದಿ ಪೋಷಣೆ ಪಡೆಯುತ್ತಿದೆ. ವಿಕಾಸ ಯಂತ್ರದಲ್ಲಿ ಎಲ್ಲ ಪ್ರಾಣ ಗಳ ಆವತಾರವನ್ನು ದಾಟಿ ಮಾನವರೂಪ ತಾಳಿದ ಮಾನವ ಈ ಜೀವ ಜಾಲಗಳ ಉತ್ತುಂಗದಲ್ಲಿದ್ದಾನೆ. ದೇಹೇಂದ್ರಿಗಳ ತೃಪ್ತಿಯಿಂದ ಮಾನವ ಮನಸ್ಸು ಭಂಗುರ ಸುಖವನ್ನು ಪಡೆದರೂ  ಅದು ಸಂತೃಪ್ತವಾಗಲಾರದು. ಶಾಶ್ವತ ಶಾಂತಿಯನ್ನು ಪಡೆಯಲಾರದು. ಸತ್ಯ ಸಾಕ್ಷಾತ್ಕಾರ ಹಾಗೂ ಅಂತರ್ ಬಾಹ್ಯ ಶಕ್ತಿಗಳ ಸಮ್ಮೇಲನ ಇವೇ ಆ ಬಗೆಯ ಶಾಂತಿಯನ್ನು ಸಮಾಧಾನವನ್ನೂ ದೊರಕಿಸಿಕೊಡಬಲ್ಲದು. ಮನುಷ್ಯ ಬುದ್ದಿ ಶಕ್ತಿ, ಯೋಚನಾಶಕ್ತಿ, ಧರ್ಮಾಧರ್ಮಗಳ ಪ್ರಜ್ಞೆ ಇವುಗಳನ್ನೆಲ್ಲಾ ಹೊಂದಿದ್ದರೂ ತನ್ನ ಬಾಳನ್ನು ಸಾರ್ಥಕ ಪಡಿಸಿಕೊಂಡಾಗಲೇ ಅವನ ಬಾಳಿಗೊಂದು ಅರ್ಥ. ಜ್ಞಾನಯೋಗದಲ್ಲಿ ಶ್ರೀ ಕೃಷ್ಣನು ಹೇಳಿರುವ ಸಾರವನ್ನು ನಾವು ನೆನಪು ಮಾಡುವುದಾದರೆ, ಸಾಕ್ಷತ್ ಶ್ರೀ ಕೃಷ್ಣನು ಹೇಳಿದಂತೆ ತಾನೇ ಸಾಕ್ಷತ್ ಭಗವಂತ ಯಾವಾಗ ಯಾವಾಗ ಧರ್ಮಕ್ಕೆ ಗ್ಲಾನಿ ಬರುತ್ತದಯೋ , ಆ ಕೂಡಲೇ ಧರ್ಮವನ್ನು ರಕ್ಷಿಸಲು ಸಮತೋಲನವನ್ನು ಪುನ; ನೆಲೆಗೊಳಿಸಲು ತಾನು ಆವತರಿಸುವುದಾಗಿ ರಹಸ್ಯವನ್ನು ಹೇಳುತ್ತಾನೆ, ಅದಕ್ಕಾಗಿ ನಾವು ಯಾವುದೇ ಮಾರ್ಗದಲ್ಲಿ ಸಾಧನೆ ಮಾಡಿದರೂ , ನಡೆದರೂ ಧರ್ಮದ ಪರವಾಗಿ ನಡೆದರೆ ಈಗಲೂ ಖಂಡಿತವಾಗಿ ಭಗವಂತನು ನಮ್ಮೊಂದಿಗೆ ಇರುವುದನ್ನು ಅನುಭವಿಸಬಹುದು.ಪರಮಾತ್ಮನಲ್ಲಿ ಭಕ್ತಿಇಟ್ಟು ಯೋಗ ಸಾಧನೆ ಮಾಡುತ್ತಾ ಭಗವಂತನನ್ನು ಅರಿಯಬಹುದು. ಈ ಜಗತ್ತು ಭಗವಂತನ ಪರಾ ಮತ್ತು ಅಪರಾ ಪ್ರಕೃತಿಯಿಂದ ಅಂದರೆ ಭಗವಂತನಿಂದಲೇ ವ್ಯಾಪಿಸಿದೆ.ಭಗವಂತನ ಮಾಯೆ ಅಪಾರ ಎಲ್ಲರನ್ನೂ ಭ್ರಮೆಗೊಳಿಸಬಲ್ಲನು, ಅದಕ್ಕಾಗಿ ಭಕ್ತಿಮಾರ್ಗದಲ್ಲಿ ಭಗವಂತನಿಗೆ ಶರಣಾದರೆ ಮಾತ್ರ ಈ ಮಾಯೆಯನ್ನು ದಾಟಬಹುದು. 

ಜನ್ಮ ಜನ್ಮಾಂತರಗಳ ಕರ್ಮಶೇಷದ ಕಾರಣದಿಂದ ಜೀವವು ಹುಟ್ಟು ಸಾವುಗಳ ಸುಳಿಯಲ್ಲಿ ಬಿದ್ದು ಒದ್ದಾಡುತ್ತದೆ. ಅದೇ ಸಂಸಾರ. ಈ ಸಂಸಾರ ಸಾಗರದ ಸುಳಿಯಿಂದ ಬಿಡುಗಡೆಯಾಗುವುದೇ ಮೋಕ್ಷ.ಈ ಮೋಕ್ಷವನ್ನು ಪಡೆಯಲು ಈ ಮೂರು ಹಂತಗಳಲ್ಲಿ ಪರಸ್ಪರ ಅಂತರಂಗದ ಅಂತರಮನಸ್ಸು ತೊಡಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯೊಂದಿಗೆ ಖಂಡಿತ ಸಾಧ್ಯವಿದೆ.ಎಂದು ಭಗವಂತನು ನಮಗೆ ಅರಿವು ಮೂಡಿಸುತ್ತಾನೆ.

ನಮ್ಮೆಲ್ಲ ಕರ್ಮಗಳನ್ನೂ ಭಗವದರ್ಪಣೆ ಮಾಡಿ ಭಗವಂತನನ್ನೇ ಸ್ಥಿರ ಮನಸ್ಸಿನಿಂದ ಚಿಂತಿಸುತ್ತ ಕರ್ಮನಿರತವಾಗಿರುವವರು ಸಾವು – ನೋವುಗಳಿಂದ ಕೂಡಿ ಸಂಸಾರವೆಂಬ ಈ ಸಾಗರವನ್ನು ಸುಲಭವಾಗಿ ಸುಗಮವಾಗಿ ದಾಟುವರು.ಆದುದರಿಂದಲೇ ತನ್ನ ಮನಸ್ಸು ಬುದ್ದಿ ಸ್ಥಿರವಾಗಿರಸಬೇಕು, ನಮಗಾಗಿ ಮಾಡುವುದು ಕಷ್ಟವೆನಿಸಿದರೂ ಪರಮಾತ್ಮನಿಗಾಗಿ ಮಾಡುವುದನ್ನು ಅಭ್ಯಾಸಮಾಡಬೇಕು.ಇದು ಕೂಡ ಸಾಧ್ಯವಾಗದೇ ಇದ್ದರೆ ಸಂಯಮದ ಜೀವನವನ್ನು ನಡೆಸುತ್ತಾ ಮಾಡುವ ಎಲ್ಲಾ ಕರ್ಮಗಳ ಫಲವನ್ನು ಭಗವಂತನಿಗೆ ಅರ್ಪಿಸಬೇಕು.ಭಗವಂತನನ್ನೇ ಜೀವಿತದ ಪರಮ ಗುರಿಯೆಂದು ದೃಢವಾಗಿ ಅರಿತು ಈ ಚಿರ ಕಲ್ಯಾಣ ಮಾರ್ಗವನ್ನು ಅನುಸರಿಸಿ ಪಡೆಯುವಂತಹ ಭಕ್ತರೇ ಪರಮಾತ್ಮನಿಗೆ ಅತ್ಯಂತ ಪ್ರಿಯಾರಾಗುತ್ತಾರೆ.  

ನಮ್ಮ ತತ್ತ್ವಶಾಸ್ತ್ರಗ್ರಂಥಗಳಲ್ಲಿ ಭಕ್ತಿ, ಕರ್ಮ , ಜ್ಞಾನ – ಇವುಗಳ ಅನ್ಯೋನ್ಯ  ಶ್ರೇಷ್ಠತೆಯನ್ನು ಕುರಿತು ಜಿಜ್ಷಾಸೆ ತುಂಬಿದೆ.  ಭಕ್ತಿ, ಕರ್ಮ , ಜ್ಞಾನ   ಎಂಬ ಮೂರು ಬಗೆಯ ಸಾಧನಗಳು ಬೇರೆ ಬೇರೆಯೆಂದು ತೋರಿದರೂ, ಆ ಮೂರರ ಮೂಲದ್ರವ್ಯವು ಏಕ್ಯೆಕವಾದದ್ದು ,ಎಂಬುದರಲ್ಲಿ ಸಂದೇಹವೇ ಇಲ್ಲ.ಮನುಷ್ಯನ ಅಂತರಂಗದ್ರವ್ಯವು  ಒಂದು. ಅದಕ್ಕಿರುವ ಬಹಿಷ್ಪ್ರವಾಹಮಾರ್ಗಗಳು ನಾಲ್ಕರೂ. ಆ ಬಹುಮಾರ್ಗಗಳಲ್ಲಿ  ಭಕ್ತಿ,ಕರ್ಮ,ಜ್ಞಾನಗಳೆಂಬವು ಮುಖ್ಯವಾದ ಇವು ಮೂರು ಅಂತರಂಗದ್ರವ್ಯವು ಉದ್ದಿಷ್ಟವಸ್ತವಿನ ಕಡೆಗೆ ಅಂದರೆ 

ಹೃದಯ ದ್ವಾರದಿಂದ ಹರಿದರೆ ಭಕ್ತಿಯೆನಿಸುತ್ತದೆ. 

ಬುದ್ದಿಯ ದ್ವಾರದಿಂದ ಹರಿದರೆ ಜ್ಞಾನವಾಗುತ್ತದೆ. 

ದೇಹೇಂದ್ರಿಯಯಾದಿ ದ್ವಾರದಿಂದ ಹರಿದರೆ ಕರ್ಮವಾಗುತ್ತದೆ. 

ಈ ಮೂರು ದಾರಿಗಳಲ್ಲಿ ಮನುಷ್ಯನಿಗೆ ಯಾವ ಕ್ಷಣದಲ್ಲಿ ಯಾವ ದಾರಿ ಸುಲಭವೆಂದು, ಇಷ್ಟವೆಂದು ತೋರುತ್ತದೋ ಆ ದಾರಿಯಲ್ಲಿ ಅವನ ಅಂತರಂಗದ್ರವ್ಯ ಹರಿಯ ತೊಡಗುತ್ತದೆ. ಒಬ್ಬ ಮನುಷ್ಯನೇ ಒಂದು ಕ್ಷಣ ಭಕ್ತನಾಗಿ ಪೂಜೆ ಕೀರ್ತನೆಗಳಲ್ಲಿ ಸಂತೋಷ ಕಾಣಬಹುದು, ಇನ್ನೋಂದು ಕ್ಷಣ ಯೋಗಸಮಾಧಿಯಸ್ಥನಾಗಬಹುದು ಮತ್ತೊಂದು ಕ್ಷಣ ಪುಣ್ಯಕಾರ್ಯನಿಷ್ಠನಾಗಬಹುದು, ಈಗ ನಮಗೆ ಇದ್ದರಿಂದ ಈ ಮೂರು ಮಾರ್ಗಗಳ ಬಗ್ಗೆ ಸ್ಪಷ್ಟವಾಗಿರಬಹುದು.

ಪುರುಷಾರ್ಥಗಳು , ದೇವತೆಗಳು ಸನ್ಯಾಸ, ಗೃಹಸ್ಥಾಶ್ರಮಗಳ ಬಗ್ಗೆ ಶ್ರೀ ಕೃಷ್ಣನು ಪ್ರತಿಯೊಂದು ಅಧ್ಯಾಯದಲ್ಲಿ ಹೇಳುವಂತೆ ಸನಾತನ ಧರ್ಮದಲ್ಲಿ ನಾವು ಬದುಕುವುದು ಪುರುಷಾರ್ಥಗಳನ್ನು ಸಾಧಿಸಲು ಮಾತ್ರ ಅಂದರೆ ಧರ್ಮ,ಅರ್ಥ, ಕಾಮ , ಮೋಕ್ಷ  ಇದೇ ಅವನ ಧ್ಯೇಯ ಮತ್ತು ಗುರಿಯಾಗಿರುತ್ತದೆ. ಇವುಗಳನ್ನು ಸಾಧಿಸುವುದಕ್ಕೋಸ್ಕರ ಸಮಸ್ತ ಕರ್ಮಗಳನ್ನು ಮತ್ತು ಸಮಸ್ತ ಕಾರ್ಯ ಕಾರಣ ಕಲಾಪಗಳನ್ನು ಮಾಡುತ್ತಿರುತ್ತಾನೆ.ಸಂನ್ಯಾಸ ಮತ್ತು ಕರ್ಮಯೋಗ ಸಿದ್ದಾಂತಗಳನ್ನು ಇನಷ್ಟು ವಿವರಿಸುವುದಾದರೆ,ಯಾವೊಂದು ಫಲಾಪೇಕ್ಷೆಯೂ ಇಲ್ಲದೇ ಯಾವನು ತನಗೆ ವಿಧಿಸಿದ ಕರ್ತವ್ಯಗಳನ್ನು ಮಾಡುತ್ತಾನೆಯೋ ಅವನೇ ಸಂನ್ಯಾಸಿ ಮತ್ತು ಯೋಗಿ.ಇದರ ಅರ್ಥ ಕೆಟ್ಟ ಅಲೋಚನೆಗಳಿಂದ ನಾವು ಯಾವಾಗಲೂ ದೂರವಿರಬೇಕು. ಅದರಂತಯೇ ಗೃಹಸ್ಥನು ಕಾಮನೆಗಳನ್ನಟ್ಟಕೊಂಡು ಕರ್ಮಗಳನ್ನು ಮಾಡುತ್ತಾನೆ. ಪತ್ನಿಪುತ್ರರೀಗಾಗಿ, ಬಂಧುಮಿತ್ರರಿಗಾಗಿ ಮಾಡುತ್ತಾನೆ. ಅವನು ಆ ಕಾಮನೆಗಳನ್ನಿಟ್ಟುಕೊಂಡಿದ್ದರೆಯೇ ಜಗತ್ತು ನಡೆಯುವುದು ಕುಟುಂಬ ಪೋಷಣೆ ಅವನ ಧರ್ಮ. ಆ ಧರ್ಮಕ್ಕೋಸ್ಕರ ಕೆಲವು ಕರ್ಮಗಳನ್ನು ಮಾಡುತ್ತಾನೆ,ಮನುಷ್ಯನು ಕರ್ಮಗಳನ್ನು ಮಾಡಬೇಕಾದದ್ದು ಧರ್ಮ. ಕರ್ಮಯೋಗವಿಲ್ಲದೇ ಸಂನ್ಯಾಸ ಬರುವುದು ಕಷ್ಟ. ಕರ್ಮಯೋಗ ಮಾಡಿದ ಮೌನಿಯು ಸಂನ್ಯಾಸವನ್ನು ಎಂದರೆ ಆತ್ಮಜ್ಷಾನವನ್ನು ಪಡೆಯಲು ಬಹುಕಾಲ ಹಿಡಿಯಬಹುದು.ಅಗ್ನಿಹೋತ್ರಾದಿ ಕರ್ಮಗಳನನು ತೊರೆದಮಾತ್ರದಿಂದ ಸಂನ್ಯಾಸಿಯಾಗುವುದಿಲ್ಲ.ನಿಜವಾದ ಸಂನ್ಯಾಸದ ಲಕ್ಷಣವೆಂದರೆ, ಯಾರು ಯಾರನ್ನು ಯಾವುದನ್ನೂ ಎಂದೆಂದೂ ದ್ವೇಷಿಸನೋ, ಎಂದೆಂದೂ ಆಶಿಸನೋ ಅವನು ಸದಾ ಸಂನ್ಯಾಸಿ.

ನ ದ್ವೇಷ್ಟಿ, ನ ಕಾಂಕ್ಷತಿ ಎಂಬುದರಲ್ಲಿ ಅಡಗಿದೆ .

ವ್ಯಕ್ತಿ ಮತ್ತು ಸಮುದಾಯಗಳು ಇದರ ಲಾಭ ಮತ್ತು ಸ್ಫೂರ್ತಿಯನ್ನು ಹೇಗೆ ಪಡೆಯಬಹುದೆಂದರೆ ಶ್ರೀಮದ್ ಭಗವದ್ಗೀತೆಯಲ್ಲಿ ನಮಗೆ ಧರ್ಮದ ಬಗ್ಗೆ ಮಾತ್ರವಲ್ಲ, ದುಷ್ಯಕೃತ್ಯಗಳನ್ನು ಹಾಗೂ ನಕಾರತ್ಮಕ ಶಕ್ತಿಗಳನ್ನು ತಮ್ಮ ಜೀವನದಲ್ಲಿ ನಡೆಸಬಹುದೆನ್ನುವುದರ ಕುರಿತು ಕೂಡ ಪಾಠವನ್ನು ಕಲಿಸಿದೆ. ಇಂದಿನ ಕಲಿಯುಗದಲ್ಲಿ ಮನುಷ್ಯನು ತನ್ನ ಭಾವನಾತ್ಮಕ ಹಾಗೂ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡು ಚಿಕ್ಕ ಚಿಕ್ಕ ನೋವಿಗೂ ಕೂಡ ಸಾವನ್ನು ಆಯ್ಕೆಯಾಗಿ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಾನಸಿಕ ಹಾಗೂ ಭಾವನಾತ್ಮಕ ಸ್ಥಿತಿಯನ್ನು ಬಲಿಷ್ಠಗೊಳಿಸಲು ಭಗವದ್ಗೀತೆಯ ನಮ್ಮ ಜೀವನದಲ್ಲಿ ಅತ್ಯಂತ ಸ್ಫೂರ್ತಿದಾಯಕವಾಗಿದೆ.ಅದರೊಂದಿಗೆ ಪ್ರತಿಯೊಂಂದು ಹಂತದಲ್ಲಿ ತನ್ನ ಜೀವನದಲ್ಲಿ ಈ ಗೀತೆಯ ಮುಖಾಂತರ ಅಧ್ಯಾತ್ಮೀಕರಣ ಮಾಡಿದ್ದೇ ಆದಲ್ಲಿ ಶಾಶ್ವತವಾದ ಆನಂದವನ್ನು ನಿರಂತರವಾಗಿ ಪಡೆಯಬಹುದು, ಏಕೆಂದರೆ ನಿತ್ಯ ನಮ್ಮ ಜೀವನದಲ್ಲಿ ನಡೆಯುವ ಮನಸ್ಸಿನ ಸಂಘರ್ಷ, ವಿಚಾರದಾರೆಯ ತಿಕ್ಕಟವೇ ಗೀತೆಯ ರೂಪದಲ್ಲಿ ಸಿಕ್ಕಿರುವ ಸ್ಫೂರ್ತಿದಾಯಕ ವರದಾನ.

ಭಗವದ್ಗೀತೆಯಲ್ಲಿ ಅಡಕವಾಗಿರುವ ಧರ್ಮದ ದೃಷ್ಟಿಕೋನ ಅಂದರೆ  

ಜೀವವನ್ನು ಪರಿಶೋಧಿಸುವುದು ಮತ್ತು ಜೀವವನ್ನು ಉತ್ತಮದಶೆಗೆ ತರುವುದು ಜೊತೆಯಲ್ಲಿ ಮಾಯಾಪೂರೆಗಳನ್ನು ಕಳಚಿ ಅದಕ್ಕೆ ಪರಮಾತ್ಮನದರ್ಶನಾಹ್ತೆಯನ್ನು ಕೊಡುವುದು.ಇದೇ ಧರ್ಮ.ಗೀತೆಯು ಧರ್ಮತತ್ತ್ವವನ್ನು ಕುರಿತ ಗ್ರಂಥ. ಜೀವದ ಪ್ರಾಕೃತಮಲಗಳು ಹಿಂದಿನಿಂದ ಬಂದವು. ಈ ಸ್ಥಿತಿಯಿಂದ ಬಿಡುಗಡೆ ಹೇಗೆಂದು ಯೋಚನೆ ಮಾಡಬೇಕು. ಜೀವಕ್ಕೆ ಉತ್ತಮವಾದ ಸ್ಥಿತಿಯನ್ನು ನಾವು ಹೇಗೆ ಸಂಪಾದಿಸಿಕೊಳ್ಳುತ್ತೇವೆ, ಅದು ಧರ್ಮನಿಷ್ಠೆಯಿಂದ ಇದು ಶಾಸ್ತ್ರ ಕೊಟ್ಟಿರುವ ಭರವಸೆ. ಎಲ್ಲಾ ಪ್ರಾಣ ಗಳಿಗೂ ಒಂದೇ ಪಾಂಚಭೌತಪ್ರಪಂಚಕ್ಕೆ ಸೇರಿದುದಾಗಿ. ಅನ್ಯೋನ್ಯ ಸಂಪರ್ಕದಲ್ಲಿ ಜೀವಿಸಿ, ಒಂದೇ ಪೂರ್ವಚರಿತ್ರೆಯುಳ್ಳವಾಗಿರುವುದರಿಂದ ಅವೆಲ್ಲಕ್ಕೂ ಲಭಾಲಭ್ಯಗಳು ಗತಿಲಕ್ಷ್ಯಗಳು ಸಮಾನವಾಗಿರುತ್ತವೆ. ಆದದ್ದರಿಂದ ಅವುಗಳ ಧರ್ಮ,ಕರ್ಮಗಳು ಸಮಾನವಾಗಿರುತ್ತದೆ. ಧರ್ಮದ ದೃಷ್ಟಿಕೋನವು ನಮ್ಮ ರೀತಿ, ನೀತಿ ,ನಿಯಮ ತಿಳಿವಳಿಕೆ ಜ್ಞಾನದ ಅರಿವು ಇದಕ್ಕೆ ಸಂಬಂಧಿಸಿದೆ.

ಕೊನೆಯಲ್ಲಿ ಭಗವದ್ಗೀತೆಯು ಕಾಲಕ್ಕೆ ಅಗತ್ಯವಾದ ಕಾರ್ಯಶೀಲತೆಗೆ ನಮಗೆ ಹೇಗೆ ಸ್ಫೂರ್ತಿ ಸಿಗುತ್ತದೆ ಅಂದರೆ ಅದು ನಮ್ಮ ಕಾಲಕ್ಕೆ ಅತ್ಯಂತ ಉತ್ತಮ ಮಾರ್ಗದರ್ಶಿ ಎಂದು ಹೇಳಬಹುದು.

ಒಂದು ಪ್ರಸಂಗದಲ್ಲಿ ನೆನೆಪು ಮಾಡುವುದಾದರೆ, ಜ್ಞಾನ ಮುಖ್ಯವೋ ? ಕರ್ಮ ಮುಖ್ಯವೋ ? ಎಂಬ ಗೊಂದಲಕ್ಕೊಳದ ಅರ್ಜುನ ಈ ಎರಡರಲ್ಲಿ ಯಾವುದು ತನಗೆ ಹೆಚ್ಚು ಶ್ರೇಯಸ್ಕರ ಎಂದು ಕೇಳಿದಾಗ ಶ್ರೀ ಕೃಷ್ಣನು ಜ್ಞಾನಯೋಗ ಮತ್ತು ಕರ್ಮಯೋಗ 2 ಬಹು ಪೂರ್ವಕಾಲದಿಂದಲೂ ಇರುವ ರಾಜಮಾರ್ಗಗಳೇ ಅವುಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಕೊಡುತ್ತಾನೆ.ಮೊದಲನೆಯಾದರಲ್ಲಿ ಎಲ್ಲ ಕರ್ಮಗಳ ಪರಿತ್ಯಾಗ ಅವಶ್ಯಕ. ಲೋಕಹಿತಕ್ಕಾಗಿ ಮನೋನಿಗ್ರಹದಿಂದ ತಮ್ಮ ಕರ್ತವ್ಯಗಳನ್ನು ಮಾಡುವುದೇ ಬಹಳ ಜನರಿಗೆ ಹೆಚ್ಚು ಸುಲಭವಾದ ಮತ್ತು ಉತ್ತಮ ದಾರಿ. ಎಲ್ಲರೂ ತಮ್ಮ ತಮ್ಮ ಪಾಲಿನ ಕರ್ತವ್ಯಗಳನ್ನು ಮಾಡುವುದು. ಕರ್ಮದ ಬಗ್ಗೆ ಸರಿಯಾದ ಮನೋಧರ್ಮವನ್ನು ಬೆಳೆಸಿಕೊಂಡು ಎಲ್ಲ ಕರ್ಮಗಳನ್ನೂ ಈಶ್ವರಾರ್ಪಣ ಭಾವದಿಂದ ಮಾಡಿದ್ದೆ ಆದರೆ ಕರ್ಮದಲ್ಲಿ ತೊಡಗಿಯೂ ಅದರಿಂದ ಕಲುಷಿತವಾಗದೇ ಇರಬಹುದು. ಇಂದ್ರಿಯ ನಿಗ್ರಹ ಹಾಗೂ ಮನಸ್ಸನ್ನು ಆತ್ಮಸ್ತರಕ್ಕೇರಿಸುವುದು ಮೂಲಕ ಕಾಮಕ್ರೋಧಗಳನ್ನು ಗೆಲ್ಲಬಹುದು. ಸರಿಯಾದ ಭಾವನೆಯಿಂದ ಮಾಡಿದ ಕರ್ಮವು ಯೋಗಕ್ಕೆ ಅಥವಾ ಏಕಾಗ್ರತೆಗೆ ದಾರಿಯಾಗುತ್ತದೆ. ತನ್ನ ಉದ್ದಾರ ತನ್ನ ಕ್ಯೆಯಲ್ಲಿಯೇ ಇದೆ ಎಂದು ಶ್ರೀ ಕೃಷ್ಣನು ನಮಗೆ ಈ ಯುಗದಲ್ಲಿ ಅಂದರೆ ಕಲಿಯುಗದಲ್ಲಿ ಮನನ ಮಾಡಿಕೊಳ್ಳುವ ಬಗ್ಗೆ ಹೇಳುತ್ತಿದ್ದಾನೆ.

ನಮ್ಮ ಮನಸ್ಸು ಶುದ್ದವಾಗಿದೆಯೋ ಅಶುಧ್ದವಾಗಿದೆಯೋ ಎಂಬುದನ್ನು ಅವಲಂಬಿಸಿ ಅದು ನಮಗೆ ಮಿತ್ರನಾದರೂ ಆಗಬಹುದು. ಶತ್ರುವಾದರೂ ಆಗಬಹುದು ಮನಸ್ಸೇ ಉತ್ತಮ ಸಾಧನೆ. ಅತ್ತಿತ್ತ ಚಲಿಸುವ ಮನಸ್ಸನ್ನು ಹಿಡಿದು ನಿಲ್ಲಿಸಿ ಅದರ ಶಕ್ತಿಗಳನ್ನೇಲ್ಲ ಕ್ರೋಢಿಕರಿಸಿ ಪರಮಾತ್ಮನ ಕಡೆ ತಿರುಗಿಸಬೇಕು. ಆಗ ಶಾಂತಿಯು ಲಭಿಸುತ್ತದೆ, ಅತಿರೇಕಗಳನ್ನೇಲ್ಲ ವರ್ಜಿಸಿ ಸಮತೋಲನ ಜೀವನವನ್ನು ನಡೆಸುವವರಿಗೆ ಮಾತ್ರ ಅಂತಹ ಯೋಗ ಸಾಧ್ಯವಾಗುತ್ತದೆ. ಅಂತಹ ಯೋಗಿ ಎಲ್ಲ ಜೀವಿಗಳಲ್ಲೂ ದೇವರನ್ನೂ,ದೇವರಲ್ಲಿ ಎಲ್ಲ ಜೀವಿಗಳನ್ನೂ ಕಾಣಲು ಸಮರ್ಥನಾಗುತ್ತಾನೆ. ಚಂಚಲವಾಗಿರುವ ಮನಸ್ಸನ್ನು ನಿಯಂತ್ರಣದಲ್ಲಿ ಇಡಲು ಕಲಿಯುತ್ತಾನೆ, ತನ್ನ ಮನಸ್ಸನ್ನು ತಾನೇ ನಿಯಂತ್ರಿಸಿಕೊಳ್ಳುವ ವ್ಯಕ್ತಿಯು ಅನೇಕ ತೊಂದರೆಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ. ನಿಯಂತ್ರಿಸುವುದೆಂದರೆ ಅದೇನು ಸುಲಭವಾದ ಕೆಲಸವಲ್ಲ ಅದರಲ್ಲೂ ಈ ಕಲಿಯುಗದಲ್ಲಿ ಅಸಾಧ್ಯ ಆದರೆ ಪ್ರತಿ ನಿಮಿಷ ಭಗವಂತನ ಅನುಸಂಧಾನ, ಆರ್ತತೆ, ಭಗವಂತನ ಚಿಂತನೆಯಿಂದ ಸಾಧ್ಯ.

ಒಟ್ಟಾರೆಯಾಗಿ ನಾವು ನಮ್ಮ ಈ ಮನುಷ್ಯಜನ್ಮದ ಸಾರ್ಥಕತೆಯನ್ನು ಪಡೆಯಲು ನಮ್ಮ ಈ ನಶ್ವರ ದೇಹವನ್ನು ಭಗವಂತನ ಚರಣಗಳಿಗೆ ಸಮರ್ಪಿಸಲು ಗೀತೆಯ ಸಾರ ಧಾರೆಯೇ ಹರಿಯಬೇಕಿದೆ. ಯಾವ ಗ್ರಂಥದಿಂದ ನಮ್ಮ ಹೃದಯದಲ್ಲಿ ರಸವೆಂಬ ಒಂದು ಇಷ್ಟಾನುಭವಾಗುತ್ತದದೆಯೋ ಅದು ಕಾವ್ಯ. ಅದರ ವಿಷಯವು ಕಠಿನವಾದ ಶಾಸ್ತ್ರವಾಗಿದ್ದರೂ ಅದರಲ್ಲಿ ರಸವಿರುವಷ್ಟು ಮಟ್ಟಿಗೆ ಅದು ಕಾವ್ಯ. ಅದು ನಮ್ಮ ಆಚರಣೆಗೆ ಬರಲಿ, ನಮ್ಮ ಕೃತಿಯಲ್ಲಿ ಒಂದಾಗಲಿ.

(Editor’s Note: Srimad Bhagavad Gita, the nectar of knowledge for mankind, spanning over 18 Parvas and 700 verses which are conversations between Bhagawan Srikrishna and Arjuna at the beginning of the Kurukshetra war, is an ultimate repository of spiritual wisdom. On the occasion of Gita Jayanti, we celebrate this ‘Divine Song of Bhagawan’ as even today it continues to inspire us and guide us with its relevance. With this, we are publishing the best articles that we received as part of our Gita Jayanti Competition.)

Image credit: Pinterest   

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply

More Articles By Author