close logo

ಸೃಷ್ಟಿ-ಸ್ಥಿತಿ-ಲಯ ಮಾಲಿಕೆ-ಭಾಗ-I: ಪುರುಷಾರ್ಥದ ದೃಷ್ಟಿಕೋನ

ಸಾರಾಂಶ

ಈ ಲೇಖನದ ಮುಖ್ಯ ಉದ್ದೇಶ “ಪರಿಸರವಾದ” ಮತ್ತು “ನಿರಂತರತೆ” ಯಾವ ರೀತಿಯಲ್ಲಿ ಭಾರತೀಯ ಪ್ರಾಚೀನ ನಾಗರೀಕತೆಯ ಒಂದು ಅವಿಭಾಜ್ಯ ಅಂಗವಾಗಿದೆ ಎನ್ನುವುದನ್ನು ಚಿತ್ರಿಸುವುದಾಗಿದೆ. ಭಾರತೀಯ ಪಾರಂಪರಿಕ ಜೀವನದ ಪ್ರತಿಯೊಂದು ಅಂಶವನ್ನೂ “ಪುರುಷಾರ್ಥ”-ದ ಪರಿಕಲ್ಪನೆ ಮಾರ್ಗದರ್ಶಿಸುತ್ತದೆ ಎನ್ನುವುದು ಸಾಮಾನ್ಯ ಜ್ಞಾನವಾಗಿದೆ. ಅದರ ಭಾಗವಾದ ಅರ್ಥ ಮತ್ತು ಕಾಮಗಳ ಪೂರೈಕೆಯೇ ವಸ್ತು-ಸಂಪನ್ಮೂಲಗಳ ಬಳಕೆಗೆ ಕಾರಣವಾಗುತ್ತದೆ. ಸಂಪನ್ಮೂಲಗಳ ಅತಿ-ಬಳಕೆ ನಿರಂತರತೆಗೆ ಧಕ್ಕೆ ತರುವ ಸಾಧ್ಯತೆ ಹೊಂದಿರುತ್ತದೆ. ಕೆಲವೊಮ್ಮೆ ಸಂಪನ್ಮೂಲದ ಕೊರತೆಗೆ ಕಾರಣವಾದರೆ, ಕೆಲವೊಮ್ಮೆ ಪರಿಸರ ಮಾಲಿನ್ಯಕ್ಕೆ ದಾರಿಮಾಡಿಕೊಡುತ್ತದೆ.

ಆದರೆ “ಧರ್ಮ”ವು ಅರ್ಥ-ಕಾಮದ ಈ ನಾಗಾಲೋಟವನ್ನು ಸಮತೋಲನಕ್ಕೆ ತಂದು ಸರಿದೂಗಿಸುತ್ತದೆ. ಪರಿಸರವಾದ ಮತ್ತು ನಿರಂತರತೆ ಧರ್ಮದ ಈ ಸಮತೋಲನ-ಪ್ರಿಯತೆಯ ಪರಿಣಾಮವಾಗಿದೆ. ಧರ್ಮವಾದರೂ ತನ್ನಿಂದ ತಾನೇ ಇದೆಯೇ? ಧರ್ಮವು ಮೋಕ್ಷವಿಲ್ಲದೆ ತನ್ನನ್ನು ತಾನೇ ಉಳಿಸಿಕೊಳ್ಳಲಾರದು. ಮೋಕ್ಷಸಾಧನೆಯೇ ಧಾರ್ಮಿಕತೆಗೆ ಅವಕಾಶವನ್ನುಂಟು ಮಾಡುವುದು. ಆದ ಕಾರಣ  ಪುರುಷಾರ್ಥದ ಸಂಪೂರ್ಣ ಪರಿಕಲ್ಪನೆ ನಿರಂತರತೆ ಮತ್ತು ಪರಿಸರವಾದಕ್ಕೆ ಮುಖ್ಯವಾಗುತ್ತದೆ. ಈ ಪುರುಷಾರ್ಥದ ಪರಿಕಲ್ಪನೆಗೆ ಮೂಲವಾದರೂ ಏನು? ಈ ಲೇಖನದ ಬಹುಮುಖ್ಯ ಪರಿಶೀಲನೆಯೇ ಪುರುಷಾರ್ಥದ ಮೂಲ-ಶೋಧನೆಯಾಗಿದೆ. ಅದರ ಮೂಲ ಭಾರತೀಯ ಸಂಸ್ಕೃತಿಯ ವಿಶಿಷ್ಟ ಪರಿಕಲ್ಪನೆಯಾದ “ಸೃಷ್ಟಿ-ಸ್ಥಿತಿ-ಲಯ” ಮತ್ತು ಅವುಗಳ ನಡುವಣ ಸಂಬಂಧ ಎನ್ನುವುದನ್ನು ಈ ಲೇಖನ ಪ್ರತಿಪಾದಿಸುತ್ತದೆ.

 ಭಾರತೀಯ ಸಂಸ್ಕೃತಿ ಬ್ರಹ್ಮಾಂಡದ ಚಲನಶೀಲತೆಯನ್ನು ಎರಡು ರೀತಿಯಲ್ಲಿ ಹಿಡಿದಿಡುತ್ತದೆ. ಒಂದೆಡೆ ಅದು ಸೃಷ್ಟಿ-ಸ್ಥಿತಿ-ಲಯಗಳ ತಾತ್ವಿಕ ಪರಿಕಲ್ಪನೆಯಲ್ಲಿ ಮೂಡುತ್ತದೆ. ಅದರ ಒಂದು ಪ್ರತಿಬಿಂಬ ಪುರುಷಾರ್ಥದ ಭಾಗವಾದ ‘ಅರ್ಥ’ ಮತ್ತು ‘ಕಾಮ’ ಗಳ ಪರಿಕಲ್ಪನೆಯಲ್ಲಿ ಒಡಮೂಡುತ್ತದೆ. ಈ ಪುರುಷಾರ್ಥವಾದರೂ ನಮ್ಮ ದೈನಿಕವನ್ನು ನಿರ್ವಹಿಸಿ ರೂಪುಕೊಡುವಂತಹ ಪರಿಕಲ್ಪನೆ. ಸೃಷ್ಟಿ-ಸ್ಥಿತಿ-ಲಯವಾದರೂ ಒಟ್ಟು ಬ್ರಹ್ಮಾಂಡವನ್ನೇ ಅಂಗೈಯಲ್ಲಿ ಹಿಡಿದುವಂತಹ ಪರಿಕಲ್ಪನೆ. ಒಂದು ವಿಶ್ವಕ್ಕೆ ಸಂಬಂಧಿಸಿದ್ದು. ಮತ್ತೊಂದು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದುದಾಗಿದೆ. ಇವೆರಡರ ಒಟ್ಟು ಬಂಧದಲ್ಲಿ ಪರಿಸರವಾದ ಮತ್ತು ನಿರಂತರತೆ ಒಡಮೂಡುತ್ತದೆ. ನಮ್ಮ ದೈನಂದಿನ ಜೀವನವನ್ನು ಮಾರ್ಗದರ್ಶಿಸುವ ಅದೇ ಚೌಕಟ್ಟು (ಪುರುಷಾರ್ಥ) ವಿಶ್ವದ ಸಮತೋಲನ ಮತ್ತು ನಿರಂತರತೆಗೂ ದಾರಿಮಾಡುತ್ತದೆ. ಅರ್ಥಾತ್, ನಮ್ಮ ಪರಿಸರವಾದ ಮತ್ತು ನಿರಂತರತೆ – ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗೆ ವಿಶಿಷ್ಟವಾದ ತಾತ್ವಿಕ ಪರಿಕಲ್ಪನೆಗಳಿಂದ ರೂಪುಗೊಂಡದ್ದಾಗಿದೆ ಎನ್ನುವುದು ಈ ಲೇಖನದ ಮುಖ್ಯ ಪ್ರತಿಪಾದನೆಯಾಗಿದೆ.

ಪುರುಷಾರ್ಥದ ಪರಿಕಲ್ಪನೆ ಮತ್ತು ದೃಷ್ಟಿಕೋನ

ಚತುರ್ವಿಧ ಪುರುಷಾರ್ಥ ದೃಷ್ಟಿ ಮತ್ತು ಅವುಗಳ ನಡುವಣ ಪರಸ್ಪರ ಸಂಬಂಧಗಳು ಜಗತ್ತಿಗೆ ಭಾರತೀಯ ಸಂಸ್ಕೃತಿಯ ಅನನ್ಯ ಕೊಡುಗೆಯಾಗಿದೆ. ಚತುರ್ವಿಧ ಪುರುಷಾರ್ಥಗಳನ್ನು – ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ – ಎಂದು ಆಗಾಗ್ಗೆ ಇದೆ ಅನುಕ್ರಮದಲ್ಲಿ ಉಚ್ಚರಿಸಲಾಗುತ್ತದೆ. ಈ ನಾಲ್ಕೂ ಅಂಶಗಳು ಬೇರೆ ಬೇರೆ ಪಠ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರತಿಪಾದಿತವಾಗುತ್ತದೆ. ಆದ್ದರಿಂದ ಅನೇಕ ಪಠ್ಯಗಳು ಮತ್ತು ಪಾರಂಪರಿಕ ಜೀವನದ ಅನುಭವ ಮಾತ್ರವೇ ಇವುಗಳ ಒಟ್ಟು ಸಾರಾಂಶವನ್ನು ಹಿಡಿಯಬಲ್ಲದು.  ಕೆಲವು ಪಠ್ಯಗಳು ಈ ನಾಲ್ಕನ್ನೂ ಒಂದೇ ಮಟ್ಟದಲ್ಲಿ ನೋಡುತ್ತವೆ. ಇನ್ನಿತರ ಪಠ್ಯಗಳು ಇವುಗಳಲ್ಲಿ ಒಂದನ್ನು ಎತ್ತಿ ಹಿಡಿಯುತ್ತವೆ. ಆದರೆ ಅವುಗಳ ನಡುವಣ ಸಂಬಂಧವನ್ನು ವಿಶದವಾಗಿ ನೋಡಿದಾಗ ಮಾತ್ರವೇ ದೃಷ್ಟಿ ಸ್ಪಷ್ಟವಾಗುತ್ತದೆ.  ಧರ್ಮಾರ್ಥಕಾಮಮೋಕ್ಷ ಎನ್ನುವ ಈ ಅನುಕ್ರಮದಲ್ಲಿಯೂ ಒಂದು ಸ್ವಾರಸ್ಯವಿದೆ. ಆದರೆ ಈ ಲೇಖನವು ಈ ಮೂಲಭೂತ ಅಂಶಗಳ ಪ್ರಮುಖ ಲಕ್ಷಣಗಳನ್ನು ಸಾರಾಂಶದಲ್ಲಿ ಮತ್ತು ಅವುಗಳ ನಡುವಣ ಸಂಬಂಧದಲ್ಲಿ ಮಾತ್ರ ಪ್ರಸ್ತುತಪಡಿಸುತ್ತದೆ.

ಚತುರ್ವಿಧ ಪುರುಷಾರ್ಥ ಪರಿಕಲ್ಪನೆಯ ಪ್ರತಿಪಾದನೆ ಮತ್ತು ಮುಖ್ಯಅಂಶಗಳು ಈ ರೀತಿಯಾಗಿವೆ:

  • ಅರ್ಥ (ಸಂಪತ್ತು, ಭದ್ರತೆ ಇತ್ಯಾದಿ.,) ಮತ್ತು ಕಾಮ (ಬಯಕೆ) ಗಳನ್ನು  ಮೋಕ್ಷಕ್ಕೆ ಸಮಾನವಾದ ಗಾಂಭೀರ್ಯದಿಂದ ಭಾರತೀಯ ಸಂಸ್ಕೃತಿ ಪರಿಗಣಿಸಿದೆ. ಅದೇ ಮಟ್ಟದ ಗೌರವದಿಂದ ಕಾಣಲಾಗುತ್ತದೆ.
  • ಅರ್ಥವನ್ನು ಭೌತಿಕ ಸಂಪತ್ತು ಎನ್ನುವ ಸೀಮಿತ ಅರ್ಥದಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಮಾನಸಿಕವಾದ ಸಂಪತ್ತು ಕೂಡ ಇದರ bhaagavaagide. ಸಂಪತ್ತು, ಭದ್ರತೆ, ಅರ್ಥ, ಆರೋಗ್ಯ ಇತ್ಯಾದಿ, ಜೀವನದ ಸಂತೋಷಕ್ಕೆ ಅಗತ್ಯವಾದ ಎಲ್ಲವೂ ಅದರ ವ್ಯಾಪ್ತಿಯಲ್ಲಿ ಬರುತ್ತದೆ. ಅಷ್ಟಲಕ್ಷ್ಮಿಯ ಪರಿಕಲ್ಪನೆಯೇ ಇದಕ್ಕೆ ಸಾಕ್ಷಿಯಾಗಿದೆ.
  • ಕಾಮವು ಜೀವನದ ಬಯಕೆ ಮತ್ತು ಆಕರ್ಷಣೆಗಳಾಗಿದ್ದು ಮಾನವ ಜೀವನದ ನಿರಾಕರಿಸಲಾಗದ ಅಂಶವಾಗಿದೆ. ಭಾರತೀಯ ಸಂಸ್ಕೃತಿ ಇದನ್ನು ಕೀಳಾಗಿ ಕಾಣುವುದಿಲ್ಲ. ಯಾವ ಮಹತ್ತರವಾದ ಉದ್ದೇಶವಿಲ್ಲದಿದ್ದರೂ ಸಹ ಮನುಷ್ಯನಿಗೆ ತನ್ನ ಆಸೆಗಳನ್ನು ಮತ್ತು ಮೋಹವನ್ನು ಬೆನ್ನುಹತ್ತಿ ಪೂರೈಸಿಕೊಳ್ಳುವ ಹಕ್ಕಿದೆ. ಆದರೆ ಇವುಗಳಿಗೆ ಮಿತಿ ಇದೆ. ಈ ಅನ್ವೇಷಣೆಯನ್ನು ಧರ್ಮದಿಂದ ನಿಯಂತ್ರಿಸಬೇಕಾಗಿದೆ. ನಮ್ಮ ಅಸೆ-ಮೋಹಗಳು ಸರಿಯಾಗಿ ಪೂರೈಸದೆ ಧರ್ಮದ ಅನ್ವೇಷಣೆ ಮತ್ತು ಮೋಕ್ಷಸಾಧನೆ ಅಸಾಧ್ಯವಾಗುತ್ತದೆ. ಈ ಮಹತ್ತರವಾದ ವಾಸ್ತವವನ್ನು ಭಾರತೀಯ ಸಂಸ್ಕೃತಿ ಗುರುತಿಸುತ್ತದೆ. ಈ ಬಗೆಯಲ್ಲಿ ಅರ್ಥ-ಕಾಮಗಳು ತತ್ತ್ವಶಾಸ್ತ್ರದ ಅಡಿಪಾಯದ ಪರಿಕಲ್ಪನೆಯಲ್ಲೇ ಪರಿಗಣಿತವಾಗಿರುವುದು ಭಾರತೀಯ ಸಂಸ್ಕೃತಿಯಾಳ್ಳಿ ಮಾತ್ರ. ಒಂದು ಮಟ್ಟದಲ್ಲಿ ಕೆಲವು ಪ್ರಾಚೀನ ಸಂಸ್ಕೃತಿಗಳಲ್ಲಿ ಇದನ್ನು ಕಾಣಬಹುದಾದರೂ ಆಧ್ಯಾತ್ಮಿಕತೆಯ ಸಮಾನವಾಗಿ ಮತ್ತು ಯಾವುದೇ ಹೀನಭಾವನೆಯಿಲ್ಲದೆ ತಾತ್ವಿಕತೆಯ ಭಾಗವಾಗಿರುವುದು ಭಾರತೀಯ ಸಂಸ್ಕೃತಿಯಲ್ಲಿ ಮಾತ್ರವೇ.
  • ಧರ್ಮ ಇವೆರಡನ್ನೂ  ನಿರ್ಬಂಧಿಸಿ ಮತ್ತು ಒಟ್ಟಾರೆ ಜೀವನದಲ್ಲಿ ಸಮತೋಲನವನ್ನು ಸೃಷ್ಟಿಸುತ್ತದೆ. ‘ಧಾರಯತಿ ಇತಿ ಧರ್ಮ’ ಎನ್ನುವ ಮೂಲಾರ್ಥದಲ್ಲಿ ಎಲ್ಲವನ್ನು ಸಮತೋಲಕಣದಲ್ಲೇ ಎತ್ತಿ ಹಿಡಿಯುವುದೇ ಧರ್ಮ. ಯಾವುದು ಎತ್ತಿಹಿಡಿಯುವುದೇ ಅದೆಲ್ಲವೂ ಧರ್ಮ. ಧರ್ಮವಿಲ್ಲದೇ ಅರ್ಥ ಮತ್ತು ಕಾಮಗಳು ಜಾರಿಯೇ ಜಾರುತ್ತವೆ. ನಮ್ಮ ಮಹಾಕಾವ್ಯಗಳು ಇದನ್ನು ಎಷ್ಟು ವಿಸ್ತಾರವಾಗಿ ಮತ್ತು ಆಳದಲ್ಲಿ ಚಿತ್ರಿಸುತ್ತವೆ ಎಂದರೆ ಇದಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ.

ಆದರೆ ಇಷ್ಟು ಮಾತ್ರವಲ್ಲ. ಮೋಕ್ಷವಿಲ್ಲದೆ ಧರ್ಮವನ್ನು ಉಳಿಸಿಕೊಳ್ಳುವುದು ಸಹ ಅಸಾಧ್ಯ. ಮಹಾಕಾವ್ಯಗಳ ಅನೇಕ ಕಥೆಗಳು ಯಾವರೀತಿಯಲ್ಲಿ ಮೋಕ್ಷಸಾಧನೆಯಿಲ್ಲದೆ ಧರ್ಮಕ್ಕೆ ಅನುಕ್ರಮಿಸುವ ಧಾರ್ಮಿಕರು ಹಾದಿತಪ್ಪುತ್ತಾರೆ ಎನ್ನುವುದನ್ನು ಎತ್ತಿತೋರುತ್ತವೆ. ಒಂದೆಡೆ ಧರ್ಮದಿಂದ ಅರ್ಥ ಮತ್ತು ಕಾಮಗಳ ಪೂರೈಕೆಯಾಗದೆ ಮೋಕ್ಷದ ದಾರಿ ತೆರೆಯುವುದಿಲ್ಲ. ಮತ್ತೊಂದೆಡೆ ಮೋಕ್ಷದ ಅಭಿಲಾಷೆಯಿಲ್ಲದೆ ಧರ್ಮಮಾರ್ಗದಲ್ಲಿ ನಡೆಯುವುದು ಸಾಧ್ಯವಿಲ್ಲ. ಈ ಅಂಶವು ಅತ್ಯಂತ ನಿರ್ಣಾಯಕವಾಗಿದೆ ಮತ್ತು ಭಾರತೀಯ ಸಂಸ್ಕೃತಿಗೇ ವಿಶಿಷ್ಟವಾದ ಒಳನೋಟವಾಗಿದೆ. ನಮ್ಮ ಸಂಸ್ಕೃತಿಯ ಒಟ್ಟು ಸ್ವಾರಸ್ಯದ ಬೇರು ನಮ್ಮ ಮೋಕ್ಷದ ಪರಿಕಲ್ಪನೆ ಮತ್ತು ಆ ಪರಿಕಲ್ಪನೆ ಯಾವ ರೀತಿಯಲ್ಲಿ  ಧರ್ಮವನ್ನು ಧರಿಸುತ್ತದೆ ಎನ್ನುವುದರಲ್ಲಿ ಅಡಗಿದೆ. ನಮ್ಮ ಸಂಸ್ಕೃತಿಯ ಎಲ್ಲ ರೆಂಬೆ-ಕೊಂಬೆ-ಫಲ-ಪುಷ್ಪಗಳು ಇದರ ತತ್ಪರಿಣಾಮವಾಗಿದೆ. 

ಇದರಲ್ಲಿ ಮತ್ತೊಂದು ಮಹತ್ವಪೂರ್ಣ ಅಂಶವಿದೆ. ಈ ವಿಷಯದಲ್ಲಿ ನಮ್ಮ ಪರಂಪರೆ ‘ತಾತ್ವಿಕ ಜ್ಞಾನ’ಕ್ಕಿಂತ ‘ಕ್ರಿಯಾತ್ಮಕ ಪರಿಪೂರ್ಣತೆ’ಯ ಪರವಾಗಿ ಭಾರೀ ಪಕ್ಷಪಾತವನ್ನು ಹೊಂದಿದೆ. ಅರ್ಥಾತ್ ಪುರುಷಾರ್ಥ ಪರಿಕಲ್ಪನೆಯ ತಾತ್ವಿಕ ಜ್ಞಾನ ಎಲ್ಲರಿಗೂ ಅವಶ್ಯವಾದ್ದೇನೂ ಅಲ್ಲ. ಆ ಪರಿಕಲ್ಪನೆಗೆ ಅನುಗುಣವಾಗಿ ಜೀವನ ನಡೆಸಿದರೆ ಸಾಕು, ಅದರ ಫಲ ಪ್ರಾಪ್ತಿಯಾಗುತ್ತದೆ. ಮನುಷ್ಯರು ತಾತ್ವಿಕ ಸ್ಪಷ್ಟತೆಯಿಂದ ಧಾರ್ಮಿಕ/ಉತ್ತಮ ಮಾರ್ಗದ  ಕ್ರಿಯೆಗಳನ್ನು ಮಾಡಬೇಕು,ಧರ್ಮ ಮತ್ತು ಮೋಕ್ಷದ ಬಗ್ಗೆ ಸ್ಪಷ್ಟವಾದ ಜ್ಞಾನವನ್ನು ಹೊಂದಿರಲೇಬೇಕು ಎಂದು ಸಂಪ್ರದಾಯವು ಹೇಳುವುದಿಲ್ಲ. ಯಾವುದೇ ಮನುಷ್ಯ ತನ್ನ ಅರ್ಥ ಮತ್ತು ಕಾಮಗಳನ್ನು ಸಮರ್ಥನೀಯವಾದ ರೀತಿಯಲ್ಲಿ, ಸಂಘರ್ಷವನ್ನು ಸೃಷ್ಟಿಸದೆ, ನಿರ್ವಹಿಸಿದರೆ – ಅದೇ ಧರ್ಮ. ಅರ್ಥಾತ್, ನಿಜವಾದ ಧಾರ್ವಿುಕರಾಗಲು ಒಬ್ಬರು ಧರ್ಮವನ್ನು ಆಳವಾಗಿ ತಿಳಿದುಕೊಳ್ಳಬೇಕಾಗಿಲ್ಲ, ನಡೆದುಕೊಂಡರೆ ಸಾಕು. ಆದ್ದರಿಂದಲೇ ಭಾರತೀಯ ಸಂಸ್ಕೃತಿ, ಇತ್ತೀಚಿನವರೆಗೆ, ತನ್ನ ತಾತ್ವಿಕಯಿಂದ ಜನರಿಗೆ ಹೊರೆಯಾಗಲಿಲ್ಲ. ಅನೇಕ ಮಾರ್ಗಗಳನ್ನು ಸೃಷ್ಟಿಸಿ, ಪ್ರತಿಮಾರ್ಗದಲ್ಲಿ ವಿಶಿಷ್ಟವಾದ ಕ್ರಿಯಾತ್ಮಕೆಯನ್ನು ತುಂಬಿ, ಆ ಮಾರ್ಗದಲ್ಲಿ ನಡೆಯುವವರು ಮೋಕ್ಷವನ್ನು ಪಡೆಯಬಹುದು ಎನ್ನುವುದನ್ನು ಸಾಧಿಸಿ ತೋರಿತು, ಆತ್ಮವಿಶ್ವಾಸವನ್ನು ಸಾಮಾನ್ಯರಲ್ಲಿ ತುಂಬಿತು. ಈ ಕುರಿತಾದ ಅನೇಕ ಕಥೆಗಳನ್ನು ನಮ್ಮ ಪರಂಪರೆಯಲ್ಲಿ ಕಾಣಬಹುದು. ಅಲ್ಲಿ ಸಾಮಾನ್ಯ ಜನರು ಮೋಕ್ಷವನ್ನು ಪಡೆಯುತ್ತಾರೆ ಮಾತ್ರವಲ್ಲದೆ, ತಮ್ಮ ಸಾಮಾನ್ಯ ಜೀವನವನ್ನು ಪ್ರಾಮಾಣಿಕತೆಯಿಂದ ನಡೆಸುವ ಮೂಲಕ ಶ್ರೇಷ್ಠ ಧಾರ್ವಿುಕ ವ್ಯಕ್ತಿಗಳಾಗಿ ಗೌರವಿಸುತ್ತಾರೆ. ಉದಾ., ಮಹಾಭಾರತದ ಧರ್ಮವ್ಯಾಧನ ಕಥೆ.

ಧರ್ಮವಿಲ್ಲದೆ, ಅರ್ಥ (ನಮ್ಮ ಜೀವನದ ಭದ್ರತೆಗಳು) ಮತ್ತು ಕಾಮ (ಆಸೆ) ತಪ್ಪುತ್ತವೆ ಎಂದು ಎನ್ನುವುದನ್ನು ನಮ್ಮ ಸಂಪ್ರದಾಯ ಸಾರಿ ಸಾರಿ ಹೇಳುತ್ತದೆ. ಅರ್ಥ ಮತ್ತು ಕಾಮವು ಅನಿಯಂತ್ರಿತವಾಗಿ ಹೋಗಿ ವಿನಾಶವನ್ನು ಸೃಷ್ಟಿಸುವ ಪ್ರವೃತ್ತಿಯನ್ನು ತಮ್ಮೊಳಗೆ ಹೊಂದಿವೆ ಎನ್ನುವುದು ಭಾರತೀಯ ಸಂಸ್ಕೃತಿಯ ಒಳನೋಟ, ಎಚ್ಚರಿಕೆ ಮತ್ತು ಜ್ಞಾನ. ಒಬ್ಬರ ಅರ್ಥ ಮತ್ತು ಕಾಮಗಳು ಮತ್ತೊಬ್ಬರದ್ದೊಂದಿಗೆ ಘರ್ಷಿಸಿಯೇ ತೀರುತ್ತದೆ, ಸಂಘರ್ಷವನ್ನುಂಟು ಮಾಡಿಯೇ ತೀರುತ್ತದೆ. ಅರ್ಥ-ಕಾಮಗಳ ಅಗೌರವ ಸಲ್ಲದು, ಮಾತ್ರವಲ್ಲದೆ ಅವುಗಳ ಪೂರೈಕೆ ಅತ್ಯಗತ್ಯ. ಜೀವನದ ಮೂಲಭೂತ ಅಂಶವಾಗಿ ಧರ್ಮ, ಮೋಕ್ಷಗಳ ಜೊತೆಯಲ್ಲಿಯೇ ಅದೇ ಪೀಠದಲ್ಲಿ ಅವುಗಳಿಗೆ ಸ್ಥಾನವಿದೆ. ಆದಾಗ್ಯೂ, ಪರಂಪರೆ ಎರಡು ಮೂಲಭೂತ ಅಂಶಗಳನ್ನು ಮಾಡುತ್ತದೆ.

ಅರ್ಥ, ಕಾಮ ಘರ್ಷಣೆಗಳ ಸ್ವರೂಪ ಹೇಗಿರುತ್ತದೆಂದರೆ – ಆ ಘರ್ಷಣೆಗಳಲ್ಲಿ ದಾರಿತಪ್ಪದಿರಲು ಮಾನವನು ಸನ್ಮಾರ್ಗದಲ್ಲಿ ನಡೆಯಲು ಸತತವಾಗಿ ಪ್ರಯತ್ನಿಸಬೇಕಾಗುತ್ತದೆ. ಅದೇ ಧರ್ಮಮಾರ್ಗ. ಆದರೆ, ಮೋಕ್ಷಸಾಧನೆಯಿಲ್ಲದೆ, ಮೋಕ್ಷಾಭಿಲಾಷೆಯಿಲ್ಲದೆ ಈ ಧರ್ಮಮಾರ್ಗ ಕೂಡ ಅಸಾಧ್ಯವಾಗಿಬಿಡುತ್ತದೆ. ಉದಾ., ಕಾರ್ತವೀರ್ಯಾರ್ಜುನನು ಉದಾಹರಣೆಯಾಗಿ ನಿಲ್ಲುತ್ತಾನೆ.

ಮೋಕ್ಷ-ಧರ್ಮಗಳ ಈ ಒಳನೋಟ ಭಾರತೀಯ ತತ್ವಶಾಸ್ತ್ರ, ಜ್ಞಾನಪರಂಪರೆಗೆ ವಿಶಿಷ್ಟವಾಗಿದೆ. ನಮ್ಮ ಒಟ್ಟು ದೃಷ್ಟಿಕೋನದ ಅಡಿಪಾಯವಾಗಿದೆ. ನಮ್ಮ ಸಂಸ್ಕೃತಿಯ ಅನನ್ಯತೆಗೆ ಕಾರಣವಾಗಿದೆ. ಆದರೆ ಈ ಪರಿಕಲ್ಪನೆ ಬಂದಿರುವುದಾದರೂ ಎಲ್ಲಿಂದ? ಅದನ್ನು ಮುಂದಿನ ಭಾಗದಲ್ಲಿ ನೋಡೋಣ.

(ಮುಂದುವರೆಯುವುದು…)

Feature Image Credit: wikipedia.org

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply