close logo

ಸೃಷ್ಟಿ-ಸ್ಥಿತಿ-ಲಯ ಭಾಗ ೩: ಋತ ಮತ್ತು ಋಷಿ 

ಹಿಂದಿನ ಭಾಗದ ಲೇಖನವನ್ನು ಇಲ್ಲಿ ಓದಬಹುದು.

ವೈದಿಕ ದೃಷ್ಟಿ: ಋತ  – ಬ್ರಹ್ಮಾಂಡದ ನೈಸರ್ಗಿಕ ಹರಿವನ್ನು ನಿರ್ಧರಿಸುವ ಮೂಲಭೂತ ತತ್ವಗಳು

ಭಾರತೀಯ ವೈದಿಕ ದೃಷ್ಟಿಕೋನದಲ್ಲಿ, ಬ್ರಹ್ಮಾಂಡದಲ್ಲಿನ ಬದಲಾವಣೆಯು ಕೆಲವು ಮೂಲಭೂತ ತತ್ವಗಳಿಂದ ರೂಪುಗೊಂಡಿದೆ. ಈ ತತ್ವಗಳು ಒಟ್ಟು ಸ್ವರೂಪವೆಂದರೆ ಅವುಗಳಿಂದುಂಟಾಗುವ ನೈಸರ್ಗಿಕವಾದ ಜೀವನದ ಹರಿವು. ಈ ತತ್ವಗಳನ್ನು ಒಟ್ಟಾಗಿ ‘ಋತ’ ಎಂದು ವೈದಿಕ ವಾಂಗ್ಮಯ ಗುರುತಿಸುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ‘ಋ’ ಪದಕ್ಕೆ ಭಾರತೀಯ ಪರಂಪರೆಯಲ್ಲಿರುವ ಪ್ರಮುಖತೆ. ಋಷಿ, ಋತಂಬರ, ಋತು ಇವೆಲ್ಲವುಗಳಿಗೂ ಋತ-ದ ಜೊತೆ ಒಂದು ಅವಿನಾಭಾವ ಸಂಬಂಧವಿದೆ. ಋತವೆಂದರೆ ‘ವಿಶ್ವನಿಯಾಮಕ ತತ್ವ’  – ಈ ತತ್ತ್ವವೇ  ಬ್ರಹ್ಮಾಂಡದ ಹರಿವನ್ನು ನಿರ್ಧರಿಸುತ್ತದೆ. ಆ ಹರಿವಿಗೆ ಹೊಂದಿಕೊಂಡೇ ಮನುಷ್ಯ ಜೀವನದ ಬದಲಾವಣೆ ಇರತಕ್ಕದ್ದು. ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ – ಈ ತತ್ವಗಳನ್ನು ಸಾಮಾನ್ಯ ಮನುಷ್ಯರು ಗ್ರಹಿಸುವುದು ಸುಲಭವಲ್ಲ. ಅವುಗಳನ್ನು ಪೂರ್ಣವಾಗಿ ಗ್ರಹಿಸಲು ತಪಸ್ಸಿನ ಅಗತ್ಯವಿರುತ್ತದೆ. ಅಂತಹ ತಪಸ್ಸನ್ನು ಸಾಧಿಸುವವನೇ ಋಷಿ. 

ಮತ್ತೊಂದು ಗಹನವಾದ ವಿಷಯ. ಋತ ಎನ್ನುವುದು ಸ್ವತಃ ಪ್ರಪಂಚದ ಹರಿವಲ್ಲ. ಆ ಹರಿವನ್ನು ನಿರ್ದೇಶಿಸುವಂತಹ ಮೂಲಭೂತ ತತ್ವಗಳು. ಅರ್ಥಾತ್  ಹರಿವು ಸಂಪೂರ್ಣವಾಗಿ ಪೂರ್ವನಿರ್ಧರಿತವಲ್ಲ. ಬ್ರಹ್ಮಾಂಡದ ಪ್ರತಿಯೊಂದು ಹಂತದಲ್ಲೂ, ಈ ಹರಿವಿಗೆ ಹಲವು ಸಾಧ್ಯತೆಗಳಿವೆ. ಕಾಲ, ದೇಶ, ವರ್ತಮಾನಗಳಲ್ಲಿ ಮನುಷ್ಯಪ್ರಯತ್ನದ ಮೂಲಕ ಉಂಟಾಗುವ ಕ್ರಿಯೆಗಳೂ ಸಹ ಸೇರಿ ಈ ತತ್ವಗಳಿಗೆ ಅನುಗುಣವಾಗಿ ಬ್ರಹ್ಮಾಂಡದ ಹರಿವು ಉಂಟಾಗುತ್ತದೆ. ಇದೇಕೆ ಮಹತ್ತರವಾದ ವಿಷಯವೆಂದರೆ ಈ ದೃಷ್ಟಿ ಸಾಮಾನ್ಯವಾಗಿ ಇನ್ನಿತರ ತತ್ವಶಾಸ್ತ್ರಗಳಲ್ಲಿ ಕಂಡುಬರದ ಸ್ವಾತಂತ್ರ್ಯವನ್ನು ಮನುಷ್ಯ ಜೀವನಕ್ಕೆ ನೀಡುತ್ತದೆ. ಈ ದೃಷ್ಟಿಕೋನ ಋತದ ಮೇಲೆ ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಪ್ರಭಾವ ಬೀರುವ ಸ್ವಾತಂತ್ರ್ಯವನ್ನು ಮನುಷ್ಯರಿಗೆ ನೀಡುತ್ತದೆ. ಅರ್ಥಾತ್ ಪ್ರಾಕೃತಿಕವಾಗಿ ಆ ಸ್ವಾತಂತ್ರ್ಯ ಮನುಷ್ಯನಿಗೆ. ಈ ದೃಷ್ಟಿಕೋನ ಅದನ್ನು ಗುರುತಿಸುತ್ತದೆ. ಮನುಷ್ಯ ಪ್ರಯತ್ನದ ಮೂಲಕ  ಆ ನೈಸರ್ಗಿಕ ಹರಿವಿನ ಅನೇಕ ಮಾರ್ಗಗಳಲ್ಲಿ ಒಂದನ್ನು ಅನುಸರಿಸುವ ಸ್ವಾತಂತ್ರ್ಯ ಮನುಷ್ಯನಿಗೆದೆ. ಆದರೆ ಮನುಷ್ಯ ಪ್ರಯತ್ನ ತಪ್ಪಾದಲ್ಲಿ ಜೀವನ ಋತದ ಹಾದಿಗಳಿಂದ ದೂರ ಸರಿದು ಅವಗಢದ ದಾರಿಯಲ್ಲಿ ನಡೆಯುತ್ತದೆ. ಈ ದೂರ ಅತಿಯಾದಲ್ಲಿ ಪ್ರಳಯ ಎಂದು ಕರೆಯಬಹುದಾದ ದೊಡ್ಡ ವಿನಾಶಗಳಿಗೆ ಕಾರಣವಾಗುತ್ತದೆ. ಅರ್ಥಾತ್, ಋತದ  ಅನುಗುಣವಾಗಿದ್ದಲ್ಲಿ ಜೀವನದ ರಕ್ಷಣೆಯಾಗುತ್ತದೆ. ಋತದಿಂದ ದೂರ ಸರಿಯುವುದರಿಂದ ಜೀವನ ಕುಸಿಯುತ್ತದೆ. ಮನುಕುಲದ ಒಟ್ಟು ಕರ್ಮ ತನ್ನ ಪರಿಣಾಮವನ್ನು ಋತಕ್ಕೆ ಅನುಗುಣವಾಗಿ ಪಡೆಯುತ್ತದೆ. 

ಈ ಋತದ ತತ್ತ್ವ ಭಾರತದ ಸಂಪ್ರದಾಯಗಳ ಹಿಂದಿನ ಪ್ರಮುಖ ವಸ್ತುವಾಗಿದೆ. ಈ ತತ್ವಕ್ಕೆ ಅನುಗುಣವಾಗಿ ನಮ್ಮ ಸಂಪ್ರದಾಯಗಳು ತಮ್ಮ ವಿಕಾಸವನ್ನು ಪಡೆದುಕೊಂಡಿವೆ. ಈ ಸಂಪ್ರದಾಯಗಳನ್ನು ಯಾರೋ ಮೇಲಿನಿಂದ ಹೇರಿದ್ದಲ್ಲ. ಋತವನ್ನು ಗ್ರಹಿಸಬಲ್ಲಂತಹ ಋಷಿಗಳನ್ನು ಗುರುತಿಸುವ ಶಕ್ತಿಯನ್ನು ಭಾರತೀಯ ಸಮುದಾಯಗಳು ಉಳಿಸಿಕೊಂಡಿವೆ. ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಪ್ರದಾಯಗಳನ್ನು ಬೆಳೆಸಿಕೊಂಡಿದ್ದರಿಂದ ಭಾರತೀಯ ಜೀವನ ಋತದ ಹಾದಿಯಲ್ಲಿ ಸಾಗಿದೆ. ಭಾರತೀಯ ದೃಷ್ಟಿಕೋನದಲ್ಲಿ ಮನುಷ್ಯರಿಗೆ ಅಗಾಧವಾದ ಸ್ವಾತಂತ್ರ್ಯವಿದೆ, ಆದರೆ ಆ ಸ್ವಾತಂತ್ರ್ಯದೊಂದಿಗೆ ಜವಾಬ್ದಾರಿಯೂ ಇದೆ. ನಮ್ಮ ಪರಂಪರೆ ಈ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಪ್ರಯತ್ನಿಸುವುದಿಲ್ಲ. ಆದರೆ ಇದು ಖಂಡಿತವಾಗಿಯೂ ಅದನ್ನು ಋತದ ದಿಕ್ಕಿನಲ್ಲಿ ನಡೆಸುವ ಪ್ರಯತ್ನ ಮಾಡಿದೆ. ಅದರಲ್ಲಿ ಯಶಸ್ವಿಯೂ ಆಗಿದೆ. 

ವೈದಿಕ ದೃಷ್ಟಿ: ಋಷಿಯ ಪಾತ್ರ

ಋತದ ಪ್ರಮುಖತೆಯನ್ನು ಗಮನಿಸಿದ್ದಾದರೆ ಪರಂಪರೆ ಋತವನ್ನು ಕಾಣಬಲ್ಲ ಅತ್ಯುತ್ಕೃಷ್ಟ ಮನುಷ್ಯರಿಗೆ ವಿಶೇಷವಾದ ಸ್ಥಾನವನ್ನು ನೀಡುವುದು ಸಹಜ. ಯಾವುದೇ ಒಂದು ತತ್ವದ ಮೇಲೆ ಸಮಾಜ ಅವಲಂಬಿತವಾಗಿದ್ದರೆ, ಈ ತತ್ವವನ್ನು ಗ್ರಹಿಸುವ, ರಕ್ಷಿಸುವ, ಪ್ರಸರಿಸುವ, ನಡೆಸುವ ಮತ್ತು ಸಮಾಜವನ್ನು ತತ್ವಕ್ಕೆ ಅನುಗುಣವಾಗಿ ಬದುಕಲು ಅನುವು ಮಾಡಿಕೊಡುವ ವಿಶಿಷ್ಟ ಜನರ ಅವಶ್ಯಕತೆ ಸಮಾಜಕ್ಕೆ ಇರುವುದು ಸಹಜವೇ ಸರಿ. ಅಂತಹ ವಿಶಿಷ್ಟ ಮನುಷ್ಯರನ್ನೇ ಪರಂಪರೆ ಋಷಿಗಳು ಎಂದು ಗುರುತಿಸಿದೆ. ಋತದ ಪರಿಣಾಮವಾಗಿ ಋಷಿಗಳಿಗೆ  ಭೂತ, ವರ್ತಮಾನ ಮತ್ತು ಭವಿಷ್ಯತ್ತಿನ ಜ್ಞಾನ ಪ್ರಾಪ್ತವಾಗಿರುತ್ತದೆ. ಋತದ ಮಾರ್ಗಗಳು ಮತ್ತು ನೈಸರ್ಗಿಕ ಹರಿವುಗಳು ಋಷಿಗಳಿಗೆ ಗೋಚರಿಸುತ್ತವೆ. ಪರಿಣಾಮವಾಗಿ ಅವರಿಗೆ ಮನುಷ್ಯ ಕ್ರಿಯೆಗಳ ಫಲಿತಾಂಶವೂ ಕಾಣುತ್ತದೆ. ಮನುಷ್ಯನ ಕರ್ಮ ಋತಕ್ಕೆ ಅನುಗುಣವಾಗಿವೆಯೇ ಎಂದು ಮೌಲ್ಯಮಾಪನ ಶಕ್ತಿ ಋಷಿಗಳಿಗಿರುತ್ತದೆ.

ಈ ಅಂತಃಶಕ್ತಿಯನ್ನು ಋಷಿಗಳು ಪಡೆದುಕೊಳ್ಳುವುದು ತಮ್ಮ ತಪಸ್ಸಿನ ಮೂಲಕ. ಅದು ಸಾಧ್ಯವಾಗುವುದು ಇಂದ್ರಿಯಗಳ ಸಂಪೂರ್ಣ ನಿಯಂತ್ರಣದ ಮೂಲಕ ಮಾತ್ರ. ಋತದ ತತ್ವ ಕೇವಲ ಬುದ್ಧಿಯಿಂದ ಗ್ರಹಿಸಬಹುದಾದ ವಸ್ತುವಲ್ಲ. ಆದ್ದರಿಂದಲೇ ಅವು ಮನುಷ್ಯ ನಿರ್ಮಿತವಾದ ಕಾನೂನುಗಳಲ್ಲ. ಭಾರತವು ಅನಾದಿ ಕಾಲದಿಂದಲೂ ಅತೀಂದ್ರಿಯ ಈ ಶಕ್ತಿಯನ್ನು ಸಾಧಿಸಲು ತೊಡಗುವ, ಇಂದ್ರಿಯಗಳ ಮಾರ್ಗವನ್ನು ತ್ಯಜಿಸಿದ, ನಿಸ್ವಾರ್ಥ ಮತ್ತು ದೂರದೃಷ್ಟಿಯನ್ನು ಹೊಂದಿರುವ ಜನರನ್ನು, ಜೀವನವನ್ನು ಪೋಷಿಸಲು, ರಕ್ಷಿಸಲು ತೊಡಗುವ ಋಷಿ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಈ ಕಾರಣದಿಂದಲೇ ಭಾರತೀಯ ಪರಂಪವೆ ಇನ್ನಿತರ ಪರಂಪರೆಗಳಿಗಿಂತ ಭಿನ್ನವಾಗಿದೆ. 

Feature Image Credit: istockphoto.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.