ಹಿಂದಿನ ಭಾಗದ ಲೇಖನವನ್ನು ಇಲ್ಲಿ ಓದಬಹುದು.
‘ಪುರುಷಾರ್ಥ’ ಚೌಕಟ್ಟಿನ ಕಾಳಜಿಯಾದರೂ ಏನು
ಪುರುಷಾರ್ಥದ ಒಟ್ಟು ಕಾಳಜಿಯಾದರೂ ಏನು? ಮೇಲುನೋಟಕ್ಕೆ ಅದು ಮನುಷ್ಯನೊಬ್ಬನ ಸಾಧನೆಯಾಗಿದೆ. ಅದರ ಪರಿಚಯ ನಮಗಿರುವ ರೀತಿಯೂ ಅದೇ. ಆದರೆ ಪುರುಷಾರ್ಥದ ಕಾಳಜಿ ಅದಕ್ಕೂ ಮಿಗಿಲು. ಒಟ್ಟು ಇಡಿಯ ಸಮಾಜ ಸಾರ್ಥಕವಾದ ಜೀವನ ನಡೆಸುವುದಕ್ಕೆ ಬೇಕಾದ ಚೌಕಟ್ಟು ಮತ್ತು ತಂತ್ರಗಳನ್ನು ಒದಗಿಸುವುದು ಅದರ ಕಾಳಜಿಯಾಗಿದೆ. ಈ ಬಗೆಯ ಜೀವನ ಎಲ್ಲರಿಗೂ ಸಮಾನವಾದ ಮತ್ತು ಸುಸ್ಥಿರ ರೀತಿಯಲ್ಲಿ ಸಾಧ್ಯವಾಗಿಸುವುದು, ಅದಕ್ಕೆ ಬೇಕಾದ ಜೀವನದ ಚೌಕಟ್ಟನ್ನು ರಚಿಸುವುದು ಪುರುಷಾರ್ಥ ಪರಿಕಲ್ಪನೆಯ ಗುರಿ. ಅರ್ಥಾತ್, ಇದು ಕೇವಲ ಒಬ್ಬರ ಪುರುಷಾರ್ಥ ಸಾಧನೆಯಲ್ಲ. ವ್ಯಕ್ತಿ ಸಮಾಜದಲ್ಲಿಯೇ ಇರುವುದರಿಂದ ವ್ಯಕ್ತಿಗೆ ಅನ್ವಯಿಸಿದ್ದು ಸಮಾಜಕ್ಕೂ ಅನ್ವಯಿಸುತ್ತದೆಯಲ್ಲವೇ? ಒಂದು ವ್ಯತ್ಯಾಸವಿದೆ. ವ್ಯಕ್ತಿಗಳ ಪುರುಷಾರ್ಥ ಸಾಧನೆಯಲ್ಲಿ ಉಂಟಾಗುವ ಘರ್ಷಣೆಯನ್ನು ನಿವಾರಿಸುವುದು, ಸಮಸ್ತ ಸಮಾಜದಲ್ಲಿ ಎಲ್ಲರಿಗೂ ಸರಿಸಮಾನವಾದ ರೀತಿಯಲ್ಲಿ ಸಾರ್ಥಕ ಜೀವನ ನಡೆಸುವುದು ಸಾಧ್ಯವಾಗುವುದು ಇದರ ಕಾಳಜಿ.
ಅಂತೆಯೇ, ಇದು ಕೇವಲ ಇಂದಿನ ಕಾಳಜಿಯಲ್ಲದೆ ನಾಳಿನ ಕಾಳಜಿಯೂ ಆಗಿದೆ. ಅರ್ಥಾತ್, ಇಂದು ನಾಳಿನ ನಡುವೆ ಘರ್ಷಣೆ ಇರುವುದನ್ನೂ ಸಹ ಪುರುಷಾರ್ಥ ಪರಿಕಲ್ಪನೆ ಗುರುತಿಸುತ್ತದೆ. ಇಂದಿನ ಸಮಾಜ ಮಾತ್ರವಲ್ಲದೆ ಮುಂದಿನ ಪೀಳಿಗೆಗಳೂ ಸಾರ್ಥಕ ಬದುಕನ್ನು ನಡೆಸುವುದಕ್ಕೆ ಸಾಧ್ಯವಾಗುವಂತಹ ಜೀವನರೀತಿಯನ್ನು ರೂಪಿಸುವುದೇ ಪುರುಷಾರ್ಥ ಕಲ್ಪನೆಯ ಕಳಕಳಿ. ವರ್ತಮಾನವು ಇದರ ಪ್ರಾಥಮಿಕ ಕಾಳಜಿಯಾಗಿದ್ದರೂ ಅದು ಭವಿಷ್ಯದ ದೃಷ್ಟಿಯನ್ನು ಕಳೆದುಕೊಳ್ಳದೆ ವರ್ತಮಾನವನ್ನು ಸಾಧಿಸುವ, ಪರಿಮಿತಗೊಳಿಸುವ ಪರಿಕಲ್ಪನೆಯಾಗಿದೆ. ಇಂದಿನ ದಿನವನ್ನು ಸುಂದರವಾಗಿ ಮುನ್ನಡೆಸುವುದು ಮತ್ತು ಸುಸ್ಥಿರವಾದ ನಾಳೆಯನ್ನು ಸಿದ್ಧಪಡಿಸುತ್ತಾ ನಡೆಯುವುದು ಪುರುಷಾರ್ಥದ ಉದ್ದೇಶವಾಗಿದೆ.
ಸಾಮಾನ್ಯವಾಗಿ ನೋಡಿದಾಗ, ಧರ್ಮದ ಹಾದಿಯಲ್ಲಿ ಅರ್ಥ-ಕಾಮಗಳನ್ನು ನಡೆಸುತ್ತಾ ಮೋಕ್ಷಮಾರ್ಗದಲ್ಲಿ ನಡೆಯುವುದು – ಪುರುಷಾರ್ಥದ ಸಮಗ್ರದೃಷ್ಟಿ. ವಿರುದ್ಧ ದಿಕ್ಕಿನಲ್ಲಿ ನೋಡಿದಾಗ, ಮನುಕುಲಕ್ಕೆ ಸುಸ್ಥಿರವಾದ ಅರ್ಥ ಮತ್ತು ಕಾಮ ಸಾಧ್ಯತೆಗಳನ್ನು ಸೃಷ್ಟಿಸುವುದು ಧರ್ಮ ಮತ್ತು ಮೋಕ್ಷಗಳ ಕಾಳಜಿಗಳಲ್ಲಿ ಒಂದು ಹೇಳಬಹುದಾಗಿದೆ. ಅರ್ಥಾತ್, ಸುಸ್ಥಿರ ಮರ್ತ್ಯಲೋಕದ ಬದುಕನ್ನು ಸೃಷ್ಟಿಸುವುದು ಧರ್ಮ-ಮೋಕ್ಷಗಳಿಲ್ಲದೆ ಸಾಧ್ಯವಿಲ್ಲ ಎನ್ನುವುದು ಇದರ ಮಹತ್ತರ ಧರ್ಶನ. ಇಹವು ಪರಕ್ಕಾಗಿ ದುಡಿಯುವುದು ಮತ್ತು ಪರವು ಇಹವನ್ನು ನೆಲೆಗೊಳಿಸುವುದು – ಹೀಗೆ ಇದು ಪರಸ್ಪರ ಒಂದನ್ನೊಂದು ಅವಲಂಬಿಸಿದೆ ಮತ್ತು ಒಂದು ಮತ್ತೊಂದನ್ನು ಸಾಧ್ಯವಾಗಿಸುತ್ತದೆ. ಈ ರೀತಿಯಲ್ಲಿ ಪುರುಷಾರ್ಥದ ಚೌಕಟ್ಟು ಜೀವನದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಧರ್ಮವೆನ್ನುವುದು ಮಿಗಿಲಾದದ್ದು ಈ ರೀತಿಯಲ್ಲಿ. ಒಂದು ದಿಕ್ಕಿನಲ್ಲಿ ಅದು ಅರ್ಥ-ಕಾಮಗಳನ್ನು ರೂಪಿಸುತ್ತದೆ. ಮತ್ತೊಂದು ದಿಕ್ಕಿನಲ್ಲಿ ಮೋಕ್ಷಕ್ಕೆ ಮಾರ್ಗ ಕಲ್ಪಿಸುತ್ತದೆ.
ಪರೋಕ್ಷವಾಗಿ ಇದು ಗೃಹಸ್ಥ ಧರ್ಮವು ನಮ್ಮ ಪರಂಪರೆಯಲ್ಲಿ ಪಡೆದಿರುವ ಪ್ರಮುಖತೆ ಮತ್ತು ಗೌರವವನ್ನು ವಿವರಿಸುತ್ತದೆ. ಸಮಾಜದಲ್ಲಿ ಎಲ್ಲರಿಗೂ ಒಳ್ಳೆಯ ಜೀವನ ಮತ್ತು ಧಾರ್ಮಿಕ ಪರಿಸರ ಸಿಗುವುದರಲ್ಲಿ ಗೃಹಸ್ಥಾಶ್ರಮದ ಪಾತ್ರ ಮಿಗಿಲು. ಅಂತೆಯೇ, ಮೋಕ್ಷ ಮಾರ್ಗ ಎಟಕುವಂತಾಗುವುದಕ್ಕೂ ಗೃಹಸ್ಥನ ಪಾತ್ರ ಹಿರಿದಾದ್ದು. ಏಕೆಂದರೆ, ಸನ್ಯಾಸವು ಗೃಹಸ್ಥರಿಂದಲೇ ಸಮಾಜದಲ್ಲಿ ನೆಲೆಗೊಳ್ಳುವುದು.
ಪುರುಷಾರ್ಥದ ಈ ದೃಷ್ಟಿಕೋನ ರೂಪುಗೊಂಡದ್ದಾದರೂ ಹೇಗೆ? ಕೇವಲ ವೈಚಾರಿಕತೆಯಿಂದ ಇದು ಸಿದ್ಧವಾಯಿತೇ? ನಮ್ಮೀ ಭಾರತೀಯ ಪರಂಪರೆಯ ಜೀವನ ರೀತಿ ಹೇಗೋ ಹರಿದು ಇಲ್ಲಿಗೆ ಬಂದು ನಿಂತಿಲ್ಲ. ಪುರುಷಾರ್ಥದ ಈ ದೃಷ್ಟಿ ಮನುಷ್ಯ ನಿರ್ಮಿತವಾದ ವೈಚಾರಿಕತೆಯಿಂದ, ಸೈದ್ಧಾಂತಿಕ ದೃಷ್ಟಿಕೋನದಿಂದ ಹುಟ್ಟಿಕೊಂಡಿಲ್ಲ, ಇದು ಕೇವಲ ಬೌದ್ಧಿಕ ದೃಷ್ಟಿಯೂ ಅಲ್ಲ. ಇದು ಸನಾತನ ಧರ್ಮದಲ್ಲಿರುವ ಮತ್ತೊಂದು ವಿಶಿಷ್ಟ ದೃಷ್ಟಿಯ ಕಾರಣವಾಗಿ ನೆಲೆಗೊಂಡಿದೆ. ಅದುವೇ ನಮ್ಮ ಸೃಷ್ಟಿ-ಸ್ಥಿತಿ-ಲಯ-ಗಳ ಪರಿಕಲ್ಪನೆ, ಪುರಾಣಗಳಲ್ಲಿ ಬರುವ ಬ್ರಹ್ಮಾಂಡದ ಪರಿಕಲ್ಪನೆ. ಈ ದೃಷ್ಟಿ ಆಳವಾದ ತಪಸ್ಸಿನಿಂದ ನಮ್ಮ ಋಷಿಮುನಿಗಳು ಸಾಕ್ಷಾತ್ಕರಿಸಿಕೊಂಡ ಬ್ರಹ್ಮಾಂಡದ ವಾಸ್ತವತೆಯಿಂದ ಹೊರಹೊಮ್ಮಿದೆ. ಐಹಿಕ ಭೋಗವನ್ನು ತ್ಯಜಿಸಿ, ಇಂದ್ರಿಯಗಳು ನಿಯಂತ್ರಣದಲ್ಲಿದ್ದಾಗ ಮಾತ್ರ ಸಾಧ್ಯವಾಗುವ ತಪಸ್ಸು ಇದು. ಅದೃಷ್ಟವಶಾತ್, ಬ್ರಹ್ಮಾಂಡದ ಈ ಆಳವಾದ ತತ್ತ್ವ ಗೋಚರಿಸುವುದು ಕಷ್ಟವಾದರೂ, ಮರ್ತ್ಯಲೋಕದಲ್ಲಿ ಭೌತಿಕ ಜೀವನದಲ್ಲಿಯೂ ಇದನ್ನು ಎಲ್ಲರೂ ಅನುಭವಕ್ಕೆ ತಂದುಕೊಳ್ಳಬಹುದು. ಸತ್ಯವನ್ನು ಶೋಧಿಸಿ ಸ್ಥಾಪಿಸಿಕೊಳ್ಳಬಹುದಾಗಿದೆ. ಇದೂ ಸಹ ಋಷಿಗಳ ಕೃಪೆಯೇ ಆಗಿದೆ. ಸೃಷ್ಟಿ-ಸ್ಥಿತಿ-ಲಯಗಳ ಮೂಲಭೂತ ತತ್ತ್ವ ಪುರುಷಾರ್ಥ ಪರಿಕಲ್ಪನೆಯಾಗಿ ನಮಗೆ ದೊರೆಯುವುದಕ್ಕೆ ಬೇಕಾದ ಸಾಧನಗಳನ್ನು ಸಹ ಋಷಿಗಳು ಸೃಷ್ಟಿಮಾಡಿ ಕೊಟ್ಟಿದ್ದಾರೆ. ಈ ರೀತಿಯಲ್ಲಿ, ಈ ಜೀವನ-ದೃಷ್ಟಿ, ಅದನ್ನು ಸಾಕ್ಷಾತ್ಕರಿಸಿಕೊಂಡ ಆ ಮಹಾತಪಸ್ಸು ಮತ್ತು ಅದನ್ನು ಸಾಧಿಸಲು ಬೇಕಾದ ಮಾರ್ಗಗಳು ಈ ಮೂರೂ ಭಾರತಕ್ಕೆ ವಿಶಿಷ್ಟವಾಗಿದೆ, ದೂರಗಾಮಿ ಪರಿಣಾಮವುಳ್ಳದ್ದಾಗಿದೆ.
ಮಹತ್ತರ ಮೂಲತತ್ತ್ವವಾದ ಸೃಷ್ಟಿ-ಸ್ಥಿತಿ-ಲಯದ ಪರಿಚಯ ಮಾಡಿಕೊಳ್ಳೋಣ. ಸ್ಥಿತಿಯ ಮೂಲಕ ಮೊದಲಾಗೋಣ.
ಮಹತ್ತರವಾದ ವೈದಿಕ ದೃಷ್ಟಿ – ಸ್ಥಿತಿ : ನಿರಂತರವಾಗಿ ಸಮತೋಲನವಾದ ಚಲನೆಯಲ್ಲಿರುವ ಬ್ರಹ್ಮಾಂಡ
ಈ ಆಧುನಿಕ ಕಾಲದಲ್ಲಿ ಒಂದು ಮಾತು ವೇದವಾಕ್ಯವೆಂಬಂತೆ ಪ್ರಚಲಿತದಲ್ಲಿದೆ. “ಬದಲಾವಣೆಯೊಂದನ್ನು ಹೊರತುಪಡಿಸಿ ಮತ್ಯಾವುದೂ ಸ್ಥಿರವಲ್ಲ” ಎನ್ನುವುದೇ ಆ ಮಾತು – ಅರ್ಥಾತ್ “ಪ್ರಪಂಚವೆಂಬುದೊಂದಿದೆ, ಅದರ ಜೊತೆಯಲ್ಲಿ ನಿರಂತರವಾದ ಬದಲಾವಣೆ ಇದೆ”. ಭಾರತೀಯ ತತ್ವಶಾಸ್ತ್ರವು ಇದನ್ನು ಆಂಶಿಕವಾಗಿ ಒಪ್ಪುತ್ತದೆಯಾದರೂ, ವಿಭಿನ್ನವಾದ ರೀತಿಯಲ್ಲಿ ಗುರುತಿಸುತ್ತದೆ. ಇದರ ಮೂಲಭೂತ ಅಂಶಗಳು ಹೀಗಿವೆ –
- ಬ್ರಹ್ಮಾಂಡವು ನಿರಂತರ ಚಲನೆಯಲ್ಲಿದೆ ಮತ್ತು ನಿರಂತರವಾಗಿ ಬದಲಾವಣೆಗೆ ಒಳಗಾಗುತ್ತಿದೆ.
- ಆದರೂ, ಈ ತನ್ನ ನಿರಂತರ ಬದಲಾವಣೆಯಲ್ಲಿ ಅದು ಸಮತೋಲನದಲ್ಲಿದೆ.
- ತನ್ನ ಪ್ರತಿಯೊಂದು ಬದಲಾದ ಸ್ಥಾನದಲ್ಲಿಯೂ ಸಹ ಅದು ಸಮತೋಲನದಲ್ಲಿದೆ ಅಥವಾ ಹಾಗಿರಬೇಕಾದದ್ದು ಅವಶ್ಯಕವಾಗಿದೆ. ಇದುವೇ ನೈಸರ್ಗಿಕವಾದ ರೀತಿ.
- ಬ್ರಹ್ಮಾಂಡ ಹೀಗಿರುವುದನ್ನು ಸ್ಥಿತಿ ಎಂದು ಕರೆಯುತ್ತದೆ ಭಾರತೀಯ ತತ್ತ್ವಶಾಸ್ತ್ರ. ಬ್ರಹ್ಮಾಂಡದ ಈ ಬದಲಾಗುವ ಸ್ವರೂಪವನ್ನು ಸೃಷ್ಟಿ ಎಂದು ಕರೆಯಲಾಗುತ್ತದೆ.
ಗಮನಾರ್ಹ ವಿಷಯವೆಂದರೆ – ಈ ಭಾರತೀಯ ತಾತ್ವಿಕ ದರ್ಶನದಲ್ಲಿ, ಬದಲಾವಣೆ/ಸೃಷ್ಟಿ ಎನ್ನುವುದು ಅಂಗೀಕರಿಸಲ್ಪಟ್ಟ ಮೂಲಭೂತ ವಾಸ್ತವವಾಗಿದೆ. ಅಷ್ಟೇ ಏಕೆ, ಬದಲಾವಣೆ ಬ್ರಹ್ಮಾಂಡದ ಪರಿಕಲ್ಪನೆಯಲ್ಲಿನ ವ್ಯಕ್ತ-ಮಧ್ಯಭಾಗದಲ್ಲಿದೆ. ಬ್ರಹ್ಮಾಂಡದ ಮೂಲಭೂತ ವಸ್ತುವಾದ ‘ಚಲನೆ/ಗತಿ’-ಯ ಭಾಗವಾಗಿದೆ.
ಮರ್ತ್ಯಲೋಕದಲ್ಲಿನ ಮನುಷ್ಯನ ಜೀವನಕ್ಕೂ, ಬ್ರಹ್ಮಾಂಡದ ಈ ತಾತ್ವಿಕ ಚಲನೆ/ಗತಿ/ಬದಲಾವಣೆಗೂ ಏನು ಸಂಬಂಧ ಎನ್ನುವ ಪ್ರಶ್ನೆ ಏಳಬಹುದು. ಅದಕ್ಕೆ ಉತ್ತರ ಪುರುಷಾರ್ಥ-ದಲ್ಲಿನ ಅರ್ಥ-ಕಾಮ ಮತ್ತು ಬ್ರಹ್ಮಾಂಡದ ನಡುವಣ ಸಂಬಂಧ. ಅರ್ಥ-ಕಾಮಗಳು ಬ್ರಹ್ಮಾಂಡದ ಈ ಬದಲಾವಣೆಯ ಸಾಧನಗಳು. ಆದ್ದರಿಂದ ಅವು ಸೃಷ್ಟಿಯ ಸಾಧನಗಳು. ಕಾಮ (ಆಕರ್ಷಣೆ ಮತ್ತು ಆಸೆ) ಮತ್ತು ಅರ್ಥ (ಹಣ, ಸಂಪತ್ತು, ಭದ್ರತೆ) ಧರ್ಮ-ಮೋಕ್ಷಗಳಿಗೆ ಸಮಾನವಾದ ಸ್ಥಾನಮಾನವನ್ನು ಹೊಂದಿರುವುದರಿಂದ, ಸೃಷ್ಟಿ ಎನ್ನುವುದು ಸ್ಥಿತಿಯ ಒಳಗೇ ಇರುವುದುದರಿಂದ – ಬದಲಾವಣೆ ಬ್ರಹ್ಮಾಂಡದ ಮೂಲಭೂತವಾದ ರೀತಿ ಎನ್ನುವುದನ್ನು ಭಾರತೀಯ ಪರಂಪರೆ ಗುರುತಿಸುತ್ತದೆ. ಆದರೆ, ಬ್ರಹ್ಮಾಂಡದ ಈ ಬದಲಾವಣೆಯ ಸ್ವರೂಪವೇನು ಮತ್ತು ಈ ಬದಲಾವಣೆಯನ್ನು ನಾವು ಯಾವ ರೀತಿಯಲ್ಲಿ ಅನುಸಂಧಾನ-ಗೊಳಿಸಬಹುದು ಎನ್ನುವ ಅಂಶದಲ್ಲಿ ಭಾರತೀಯ ಪರಂಪರೆ ಇನ್ನಿತರ ಪರಂಪರೆಗಳಿಗಿಂತ ಭಿನ್ನವಾಗಿದೆ. ಈ ಲೇಖನ ಮಾಲಿಕೆಯ ಪ್ರಮುಖ ಉದ್ದೇಶ ಈ ಭಿನ್ನತೆಯನ್ನು ನಿರೂಪಿಸುವುದೇ ಆಗಿದೆ.
ಮಹತ್ತರವಾದ ಪರಂಪರೆಯನ್ನು ಹೊಂದಿರುವ ಭಾರತೀಯ ಜೀವನ ಬದಲಾವಣೆಯನ್ನು ಅಷ್ಟಾಗಿ ಸಹಿಸಿವುದಿಲ್ಲ ಎಂದು ಆಗಾಗ್ಗೆ ಆಧುನಿಕರು ಆರೋಪಿಸುತ್ತಾರೆ. ಇದು ಸಂಪೂರ್ಣವಾಗಿ ತಪ್ಪು ತಿಳುವಳಿಕೆ. ವಾಸ್ತವದಲ್ಲಿ, ಭಾರತೀಯ ಸಂಪ್ರದಾಯಗಳು ಸರಿಯಾದ ಬದಲಾವಣೆಯನ್ನು ಸಾಧ್ಯಗೊಳಿಸುವುದಕ್ಕಾಗಿಯೇ ವಿನ್ಯಾಸಗೊಂಡಿವೆ. ಅದಕ್ಕೆ ಮೂಲಕಾರಣ ನಮ್ಮ ಅತ್ಯಂತ ಮೂಲಭಾತವಾದ ತಾತ್ವಿಕ ಪರಿಕಲ್ಪನೆಯಾದ ಸೃಷ್ಟಿ-ಸ್ಥಿತಿ-ಲಯ-ಗಳಲ್ಲಿ ಬದಲಾವಣೆಗಿರುವ ಮಹತ್ತರವಾದ ಸ್ಥಾನ. ಈ ಪ್ರಪಂಚದ ಮೂಲಭೂತ ಸ್ವರೂಪವೇ ಬದಲಾವಣೆ ಎನ್ನುವುದನ್ನು ಭಾರತೀಯ ದೃಷ್ಟಿಕೋನಕ್ಕಿಂತ ಮಿಗಿಲಾಗಿ ಯಾವ ದರ್ಶನವೂ ಪ್ರತಿಪಾದಿಸಿಲ್ಲ.
ಇಷ್ಟಾಗಿದ್ದರೆ ಅದು ಕೇವಲ ಕಲ್ಪನೆಯಾಗಿ ಉಳಿದುಬಿಡುತ್ತಿತ್ತು. ಆದರೆ ಈ ವಿಶಿಷ್ಟ ಸಂಯೋಜನೆಯ ಕಾರಣದಿಂದಲೇ ಅನೇಕ ವೈಶಿಷ್ಟ್ಯತೆಗಳು ಉದ್ಭವವಾಗಿವೆ. ಭಾರತೀಯ ಪರಂಪರೆಯಲ್ಲಿ ನಾವು ಕಾಣುವ ಅತ್ಯಂತ ಮಹತ್ತರವಾದ ಅನೇಕ ವೈಶಿಷ್ಟ್ಯತೆಗಳು (ಪರಿಸರವಾದ, ಸುಸ್ಥಿರತೆ, ವಿಭಿನ್ನತೆ…) ಬದಲಾವಣೆಯ ಈ ತಾತ್ವಿಕ ದೃಷ್ಟಿಕೋನದಿಂದ ಹರಿಯುತ್ತದೆ. ಅದನ್ನು ಈ ಮಾಲಿಕೆಯ ಮುಂದಿನ ಲೇಖನಗಳಲ್ಲಿ ನೋಡೋಣ.
(ಮುಂದುವರೆಯುತ್ತದೆ…)
Feature Image Credit: wikipedia.org
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.