close logo

ಪುಸ್ತಕ ಪರಿಚಯ: ಸಿ. ಗೋಪಾಲನ್ ನಾಯರರ ‘ದಿ ಮೋಪ್ಲಾ ರಿಬೆಲ್ಲನ್ 1921’ 

ನಾವು ಚಿಕ್ಕವರಿದ್ದಾಗ, ನಮಗೆ ಮೋಪ್ಲಾ ಗಲಭೆಗಳ ಬಗ್ಗೆ ಏನೂ ತಿಳಿದಿರಲಿಲ್ಲ. ನಮ್ಮ ಪಠ್ಯಪುಸ್ತಕಗಳಲ್ಲಿ ಇದರ ಬಗ್ಗೆ ಏನೂ ಮಾಹಿತಿ ಇರಲಿಲ್ಲ; ಇದ್ದರೂ ಪ್ರಾಯಶಃ ಖಿಲಾಫತ್ ಚಳವಳಿಯ ಸಂದರ್ಭದಲ್ಲಿ ಒಂದು ಚಿಕ್ಕ ಟಿಪ್ಪಣಿಯ ಹಾಗೆ ಇದ್ದಿರಬೇಕು, ಅಷ್ಟೇ. ಭಾರತದ ಮುಸ್ಲಿಮರು ದೂರದ ಟರ್ಕಿಯಲ್ಲಿ ಖಲೀಫನನ್ನು ಸತ್ತೆಯಲ್ಲಿ ಮರುಸ್ಥಾಪಿಸಲು ಇಲ್ಲಿ, ಭಾರತದಲ್ಲಿ ಖಿಲಾಫತ್ ಚಳುವಳಿಯನ್ನು ಹೂಡಿದರು. ಇದು ವಾಸ್ತವತೆಗೆ ದೂರವಾದ ಅಸಂಬದ್ಧ, ಅಪ್ರಸ್ತುತ ವಿಷಯವಾಗಿ ಕಂಡುಬಂದರೂ, ಚಳುವಳಿ ನಡೆಯಿತು, ಇದನ್ನು ಕಾಂಗ್ರೆಸ್ ನೇತೃತ್ವ  ಸಮರ್ಥಿಸಿತು, ಎಂಬುದು ನಿಜ. ಪರಿಣಾಮವಾಗಿ 1921 ಮೋಪ್ಲಾ ದಂಗೆಯ ಸಮಯದಲ್ಲಿ ನಡೆದ ಭೀಕರ ಹಿಂದೂ ನರಮೇಧದ ವಿವರಗಳು ನಮ್ಮ ಸಾಮೂಹಿಕ ಪ್ರಜ್ಞೆಯಿಂದ ಸಂಪೂರ್ಣವಾಗಿ ಮರೆಮಾಚಲ್ಪಟ್ಟವು.

ಮೋಪ್ಲಾ ದಂಗೆಯ ಸಮಯದಲ್ಲಿ ಏನಾಯಿತು, ಎಂಬುದನ್ನು ತಿಳಿಯಲು ಇತ್ತೀಚೆಗೆ ಲಭ್ಯವಾದ ಲೇಖನಗಳನ್ನು ಓದಲು ಪ್ರಾರಂಭಿಸಿದೆ. ಸ್ವಾತಂತ್ರ್ಯದ ನಂತರವೂ ಹಿಂದೂಗಳ ವಿರುದ್ಧದ ನರಮೇಧದ ಕೃತ್ಯಗಳಲ್ಲಿ ಭಾಗವಹಿಸಿದ್ದಕ್ಕಾಗಿ ಮೋಪ್ಲಾಸ್ವಾತಂತ್ರ್ಯ ಹೋರಾಟಗಾರರಿಗೆ ಸರಕಾರ ಇನ್ನೂ ಪಿಂಚಣಿ ನೀಡುವುದನ್ನು ಮುಂದುವರಿಸಿದೆ, ಎಂದು ಕೆಲವು ಟ್ವೀಟ್ಗಳಿಂದ ತಿಳಿದು ನನಗೆ ಆಶ್ಚರ್ಯವಾಯಿತು

ವಿಕ್ರಮ್ ಸಂಪತ್ ಎರಡುಸಂಪುಟಗಳಲ್ಲಿ ಬರೆದ  ಸಾವರ್ಕರರ ಜೀವನಚರಿತ್ರೆ ಮೋಪ್ಲಾ ದಂಗೆಯ ಬಗ್ಗೆ ಆಳವಾದ ಕೆಲವು ಒಳನೋಟಗಳನ್ನು ನೀಡಿತು. ಮಲಬಾರಿನ ಹಿಂದೂ ನರಮೇಧದ ಭೀಕರತೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ ನಂತರ, ಡಾ. ಸಂಪತ್ ರಾಷ್ಟ್ರೀಯ ನಾಯಕತ್ವದ ಪ್ರತಿಕ್ರಿಯೆಯನ್ನು ಕೂಡ ಚಿಕ್ಕದಾಗಿ ತಿಳಿಸುತ್ತಾರೆ. ಆಶ್ಚರ್ಯವೆಂದರೆ, ಗಾಂಧೀಜಿ ಮೋಪ್ಲಾಗಳನ್ನು ಸಮರ್ಥಿಸಿ, ಅವರನ್ನು ಧೈರ್ಯಶಾಲಿಗಳೆಂದೂ, ದೈವಭಕ್ತರೆಂದೂ ವರ್ಣಿಸಿ, ಹಿಂದೂಗಳಿಗೆ ಮೋಪ್ಲಾ ಮತಾಂಧತೆಯ ನಿಜವಾದ ಕಾರಣಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಹಿಂದೂಗಳು ಮೋಪ್ಲಾಗಳನ್ನು ಅಸಡ್ಡೆ, ತಿರಸ್ಕಾರಗಳಿಂದ ನೋಡುತ್ತಾರೆಎಂದು ದೂಷಿಸಿದರು. ಅವರ ಮಿತ್ರರಾದ ಖಿಲಾಫತ್ ಹೋರಾಟಗಾರರು ಮೋಪ್ಲಾಗಳನ್ನು ಅವರ ಶೌರ್ಯಕ್ಕಾಗಿ ಅಭಿನಂದಿಸಿದರು. ಹಿಂದೂಗಳು ಬ್ರಿಟಿಷರೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದ ಮುಸ್ಲಿಂ ಲೀಗ್ ಮೋಪ್ಲಾ ಹತ್ಯಾಕಾಂಡವನ್ನು ಬೆಂಬಲಿಸಿ, ಅದು ಒಂದು ಧರ್ಮಯುದ್ಧ ಎಂದು ಘೋಷಿಸಿತು. ಹಿಂದೂ ನರಮೇಧದ ಭಯಂಕರ ಬರ್ಬರತೆಯ ವಿವರಗಳು ಬೆಳಕಿಗೆ ಬಂದ ನಂತರ, ಗಾಂಧಿಯವರಿಗೆ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಅಸಾಧ್ಯವಾಯಿತು. ಆಗ, ಕಾಂಗ್ರೇಸ್   ಹತ್ಯಾಕಾಂಡದ ಪ್ರಮಾಣ ಮತ್ತು ಪರಿಣಾಮಗಳನ್ನು ಗೌಣಗೊಳಿಸಲು ಪ್ರಯತ್ನಿಸಿ, ಮೋಪ್ಲಾಗಳ ವಿರುದ್ಧ ಒಂದು ತೋರಿಕೆಯ ಎಚ್ಚರಿಕೆಯ ನಿರ್ಣಯವನ್ನು ಅಂಗೀಕರಿಸಿತು.

ಅಂಬೇಡ್ಕರರು ಮೋಪ್ಲಾ ದೌರ್ಜನ್ಯಗಳ ಬಗ್ಗೆ ಗಾಂಧಿಯವರ ತೀವ್ರ ಮೌನದ ಧೋರಣೆಯನ್ನು ಟೀಕಿಸಿ ಅವರು ಹಿಂಸೆಗೆ ಬಲಿಯಾದ ಹಿಂದೂಗಳನ್ನು ಅಪಮಾನಿಸಿದ ವರ್ತನೆಯನ್ನು ಕಟುವಾಗಿ ದೂಷಿಸಿದರು. ಸಾವರ್ಕರರು ಮೋಪ್ಲಾಗಳ ಬರ್ಬರತೆಯನ್ನು ದೂಷಿಸಿ, ಕಾಂಗ್ರೆಸ್ಸಿನ ಭೀರುತನವನ್ನೂ  ಖಿಲಾಫತ್ ಆಂದೋಲನವನ್ನು ಹೇಗಾದರೂ ಪಾರುಮಾಡುವ ಬಯಕೆಯನ್ನೂ ಬಲವಾಗಿ ಖಂಡಿಸಿದರು.

ಅದೇ ತಾನೆ ಕಲ್ಲಿಕೋಟೆಯಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿದ್ದು ನಿವೃತ್ತರಾದ ದಿವಾನ್ ಬಹದ್ದೂರ್ ಸಿ. ಗೋಪಾಲನ್ ನಾಯರ್ ಅವರು ಮಲಬಾರಿನಲ್ಲಿ ನಡೆದ ಭೀಕರ ಹಿಂದೂ ಹತ್ಯಾಕಾಂಡದ ಬಗ್ಗೆ ಬರೆದ ವಿವರವಾದ, ನಿಷ್ಪಕ್ಷವಾದ ಪುಸ್ತಕ, 1921 ಮೋಪ್ಲಾ ದಂಗೆ (The Moplah Rebellion, 1921) 1923ರಲ್ಲಿ ಪ್ರಕಟವಾಯಿತು. ಲೇಖಕರು ತಾವೇ ಹೇಳುವಂತೆ, ಇದು ಮದ್ರಾಸ್ ಮೇಲ್, ವೆಸ್ಟ್ ಕೋಸ್ಟ್ ಸ್ಪೆಕ್ಟೇಟರ್ ಮತ್ತು ವೆಸ್ಟ್ ಕೋಸ್ಟ್ ರಿಫಾರ್ಮರ್ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ/ವರದಿ ಮತ್ತು ಲೇಖನಗಳನ್ನು ಆಧರಿಸಿದ ವೃತ್ತಾಂತ. ತಮ್ಮ ವಿಶ್ಲೇಷಣೆಯಲ್ಲಿ ಅವರು ಭಾವನೆಗಳಿಗೆ ಮಹತ್ವ ನೀಡದೆ, ವಾಸ್ತವಿಕತೆಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ

ಗೋಪಾಲನ್ ನಾಯರರು ಕೇರಳವನ್ನು ಪರಶುರಾಮನ ನಾಡು ಎಂದು ಬಣ್ಣಿಸಿ, ಪರಶುರಾಮನೇ ಅಲ್ಲಿ ನಂಬೂದಿರಿ ಬ್ರಾಹ್ಮಣರನ್ನು ಕರಾವಳಿಯ 64 ಹಳ್ಳಿಗಳಲ್ಲಿ ನೆಲೆಗೊಳಿಸಿದನೆಂಬ ಐತಿಹ್ಯವನ್ನು ಹೇಳುತ್ತಾರೆ. ನಂತರದ ಕಾಲಘಟ್ಟದಲ್ಲಿ, ನಂಬೂದಿರಿಗಳಿಗೆ ಆಡಳಿತವನ್ನು ನಿರ್ವಹಿಸಲು ಕಷ್ಟವಾದಾಗ, ಪಕ್ಕದ ರಾಜ್ಯಗಳಿಂದ ಪೆರುಮಾಳ್ ಎಂಬ ಕ್ಷತ್ರಿಯರನ್ನು ಅಧಿಕಾರ ನಿರ್ವಹಿಸಲು ಬರಮಾಡಿಕೊಂಡರು. ಪೆರುಮಾಳರ ಎಷ್ಟೋ ಪೀಳಿಗೆಗಳು ಕೇರಳ ರಾಜ್ಯವನ್ನು ಆಳಿದರು. ಚೇರಮನ್ ಪೆರುಮಾಳನು ಕಡೆಯವನು.

ಕಲ್ಲಿಕೋಟೆಯ ಸಮುದ್ರಿ ರಾಜರು ಅರಬರೊಡನೆ ನಡೆಯುತ್ತಿದ್ದ ವಾಣಿಜ್ಯದ ಮುಖ್ಯ ಪೋಷಕರಲ್ಲಿ ಒಬ್ಬರು. ಅರಬರ ಹಡಗುಗಳನ್ನು ನಡೆಸಲು, ವ್ಯಾಪಾರದಲ್ಲಿ ಪಾಲ್ಗೊಳ್ಳಲು, ಸ್ಥಳೀಯರನ್ನು ಇಸ್ಲಾಮಿಗೆ ಮತಾಂತರಗೊಳ್ಳಲು ಪ್ರೋತ್ಸಾಹಿಸಿ, ಪ್ರತಿ ಬೆಸ್ತರ ಕುಟುಂಬದಲ್ಲಿ ಒಬ್ಬಿಬ್ಬರನ್ನು ಮುಸ್ಲಿಮರಾಗಿ ಬೆಳೆಸಬೇಕೆಂದು ಆಜ್ಞೆ ನೀಡಿದರು.” (ಜಿಲ್ಲಾ ಗೆಜೆಟಿಯರ್). ಹೀಗೆ ಮುಸ್ಲಿಮರಾದವರೇ ಮೋಪ್ಲಾಗಳು.

ಮಲಬಾರಿನ ಆಕ್ರಮಣ (1766 – 1792)

ಮಲಬಾರ್ ಇಂದಿನ ಕಣ್ಣೂರು, ಕೋಳಿಕ್ಕೋಡು (ಕಲ್ಲಿಕೋಟೆ), ವೈನಾಡು, ಮಲಪ್ಪುರಂ ಮತ್ತು ಪಾಲಕ್ಕಾಡು ಜಿಲ್ಲೆಗಳನ್ನು ಒಳಗೊಂಡಿದೆ

ಹೈದರ್ ಅಲಿಯು 1766ರಲ್ಲಿ ಮಲಬಾರಿನ ಮೇಲೆ ದಾಳಿ ಮಾಡಿ, ತಮ್ಮಲ್ಲೇ ಪರಸ್ಪರ ಕಚ್ಚಾಡುತ್ತಿದ್ದ ಕೊಲತುನಾಡು, ಕೊಟ್ಟಾಯಂ, ಕಡತನಾಡು, ಕೋಳಿಕ್ಕೋಡು (ಕಲ್ಲಿಕೋಟೆ), ವಳ್ಳುವನಾಡು ಮತ್ತು ಪಾಲಘಾಟ್ ರಾಜ್ಯಗಳನ್ನು ಸೋಲಿಸಿದನು. ಹೈದರ್ ಅಲಿಯು ಮಲಬಾರ್ ರಾಜರ ಸಂಪತ್ಸಮೃದ್ಧ ಖಜಾನೆ ಮತ್ತು ಅವರ ಮಸಾಲೆ ವ್ಯಾಪಾರಗಳನ್ನು ಸೂರೆಗೊಳ್ಳಲು ಬಯಸಿ, ಎದುರಾದ ತೀವ್ರವಾದ ವಿರೋಧವನ್ನು ನಿವಾರಿಸಿ, ಮಲಬಾರನ್ನು ಸ್ವಲ್ಪ ಕಾಲ ತನ್ನ ಸ್ವಾಧೀನಕ್ಕೆ ತೆಗೆದುಕೊಂಡನು. ಕೊಚ್ಚಿಯ ರಾಜ ಹೈದರನಿಗೆ ಕಪ್ಪ ಸಲ್ಲಿಸಲು ಒಪ್ಪಿಕೊಂಡನು. ಆದರೆ ತಿರುವಾಂಕೂರು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು, ಕಪ್ಪ ನೀಡಲು ನಿರಾಕರಿಸಿತು.

ಅನೂಚಾನವಾಗಿ ಮಲಬಾರ್ ರಾಜರ ಯೋಧರಾಗಿದ್ದ ಕ್ಷತ್ರಿಯ ನಾಯರ್ ಸೈನಿಕರು ಛಲದಿಂದ ಹೈದರನ ಜೊತೆ ಯುದ್ಧ ಮಾಡಿದರು. ಸೋತ ಸೈನಿಕರನ್ನು ನಿರ್ದಯವಾಗಿ ಕೊಂದು, ಯುದ್ಧ ಕೈದಿಗಳ ದೊಡ್ಡ ತುಕಡಿಯನ್ನು ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಹೈದರನು ಗಡೀಪಾರು ಮಾಡಿದನು. ಹೀಗೆ ಗಡೀಪಾರು ಆದವರಲ್ಲಿ ಕೇವಲ ಕೆಲವೇ ಜನ ಬದುಕಿ ಉಳಿದರು.

ಹೈದರ್ ಅಲಿಯ ಮರಣಾನಂತರ ಅವನ ಮಗ ಟಿಪ್ಪು ಸುಲ್ತಾನನು  ಮಲಬಾರಿನ ಮೇಲೆ ದಬ್ಬಾಳಿಕೆಯನ್ನು ಮುಂದುವರೆಸಿದನು. ಮೂರನೇ ಆಂಗ್ಲೋಮೈಸೂರು ಯುದ್ಧದಲ್ಲಿ ಟಿಪ್ಪುವಿನ ಸೋಲಾದ ನಂತರ, ಮಲಬಾರ್ ಈಸ್ಟ್ ಇಂಡಿಯಾ ಕಂಪನಿಯ ಅಧೀನಕ್ಕೆ ಬಂದಿತು.

ಹೈದರ್ ಮತ್ತು ಟಿಪ್ಪು ನಡೆಸಿದ ಭೀಕರ ಅತ್ಯಾಚಾರಗಳು  

ಸಿ ಗೋಪಾಲನ್ ನಾಯರರು ಮೈಸೂರು ಸೈನ್ಯ ಮಲಬಾರಿನಲ್ಲಿ ಗೆದ್ದ (1766-1792) ನಂತರದ ಅನಾಯಕತೆಯ ಅವಧಿಯ ಬಗ್ಗೆ ಬರೆಯುತ್ತಾ, ಆಗ ನಡೆದ ಬಲವಂತದ ಮತಾಂತರ, ಅತ್ಯಾಚಾರ ಮತ್ತು ಲೂಟಿಯ ವಿಪತ್ತಿನ ಘಟನೆಗಳನ್ನು ವರ್ಣಿಸುತ್ತಾರೆ. ಟಿಪ್ಪುವಿನ ಆಕ್ರಮಣದ ಸಮಯದಲ್ಲಿ ಮಲಬಾರ್ನಲ್ಲಿನ ನಾಯರ್ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಜನರು ಕೊಲ್ಲಲ್ಪಟ್ಟರು, ಎಂದು ಅಂದಾಜಿಸಲಾಗಿದೆ. ಸಮುದ್ರಿ ರಾಜನು ಹೈದರನ ಚಿತ್ರಹಿಂಸೆಯನ್ನು ತಡೆದುಕೊಳ್ಳಲು ಸಾಧ್ಯವಾಗದೆ ತನ್ನೊಡನೆ ತನ್ನ ಅರಮನೆಯನ್ನೇ ಸುಟ್ಟುಹಾಕಿ, ತಾನೂ ಉರಿದು ಹೋದನು. ಕಡತನಾಡಿನ 2000 ನಾಯರ್ಸೈನ್ಯ ಸೋತು ಸಂಪೂರ್ಣವಾಗಿ ಮತಾಂತರಗೊಂಡಿತು. ಅದೇ ರೀತಿ, ನೂರಾರು ನೀಲಂಬೂರ್ ನಂಬೂದಿರಿಗಳು ಟಿಪ್ಪುವಿನ ಕತ್ತಿಗೆ ಗುರಿಯಾಗಿ ಬೇರೆ ವಿಧಿಯಿಲ್ಲದೇ ಮತಾಂತರಗೊಂಡರು.   ನಾಯರರು ಎಲ್ಲ ಘಟನೆಗಳನ್ನು ತಮ್ಮ ಪುಸ್ತಕದಲ್ಲಿ ಉದಾಹರಿಸುತ್ತಾರೆ.  

ಟಿಪ್ಪುಇಡೀ ಮಲಬಾರನ್ನು ಇಸ್ಲಾಮಿಗೆ ಮತಾಂತರಿಸುತ್ತೇನೆಎಂದು ಪದೇ ಪದೇ ಪ್ರತಿಜ್ಞೆ ಮಾಡುತ್ತಿದ್ದನು. ಉಳಿದಿರುವ ರಾಜರುಗಳು, ನಂಬೂದಿರಿಗಳು ಮತ್ತು ಚಿರಕ್ಕಲ್ (ಕೋಲತಿರಿ), ಕಲ್ಲಿಕೋಟೆ (ಸಮುದ್ರಿ), ಪುನ್ನತ್ತೂರು, ನಿಲಂಬೂರ್, ಕವಲಪಾರ ಮತ್ತು ಆಳ್ವಾಂಚೇರಿ ತಂಪ್ರಕ್ಕಲ್ನಾಯರರು, ‘ ಭಯಾನಕ ಅವಧಿಯಲ್ಲಿ ಆಶ್ರಯ ನೀಡಿದ ಸ್ವರ್ಗದಂತಹ ತಿರುವಾಂಕೂರಿಗೆಟಿಪ್ಪುವಿನಿಂದ ರಕ್ಷಣೆ ಕೋರಿ ತಮ್ಮ ಸ್ವಂತದ ಮತ್ತು ದೇವಾಲಯಗಳಿಂದ ಎಷ್ಟಾದಷ್ಟು  ಸಂಪತ್ತು ಸೇರಿಸಿಕೊಂಡು ಪಲಾಯನ ಮಾಡಿದರು.

ಈಗಾಗಲೇ ಮುಸ್ಲಿಮರ ವಶವಾಗಿದ್ದ ಕಣ್ಣೂರು ಸುಲ್ತಾನನ ಸಹಾಯದಿಂದ ಹೈದರನು ತನ್ನ ಸೈನ್ಯಕ್ಕೆ ಎದುರಾದವರೆಲ್ಲರನ್ನು ಕಡಿದು ಹಾಕುವಂತೆ ಆದೇಶ ನೀಡಿದನು. ಮೈಸೂರು ಸೈನ್ಯ ನಡೆದ ಹಾದಿಯ ಪ್ರದೇಶಗಳು ನಿರ್ಜೀವವಾದವು. ಸತ್ತ, ಸಾಯುತ್ತಿದ್ದ ದೇಹಗಳು ಮೈಲುಗಟ್ಟಲೆ ಎಲ್ಲೆಂದರಲ್ಲಿ ಬಿದ್ದಿದ್ದವು. ಸುಟ್ಟ ಮನೆಗಳಿಂದ ಹೊರಟ ಹೊಗೆ ಆಕಾಶವನ್ನೇ ತುಂಬಿತ್ತು. ಪ್ರತಿಯೊಂದು ದೇವಾಲಯವನ್ನೂ ದೋಚಿ ಸುಟ್ಟು ಹಾಕಿದರು. ಹೀಗೆ ನಾಶವಾದ ದೇವಾಲಯಗಳ ದೊಡ್ಡ ಪಟ್ಟಿಯನ್ನು ತಿರೂರ್ ದಿನೇಶರು ತಮ್ಮ ಮೋಪ್ಲಾ ಗಲಭೆ (Moplah Riots) ಎಂಬ ಪುಸ್ತಕದಲ್ಲಿ ನೀಡಿದ್ದಾರೆ. ವಿಲಿಯಂ ಲೋಗನ್ ತನ್ನ ಮಲಬಾರ್ ಕೈಪಿಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಸಹ ಕೊಲ್ಲದೆ ಬಿಡಲಿಲ್ಲ ಎಂದು ದಾಖಲಿಸಿದ್ದಾನೆ.

ಹೀಗೆ ಬಲವಂತದ ಮತಾಂತರಗಳಿಂದ ಮೋಪ್ಲಾ ಜನಸಂಖ್ಯೆ ಬಲಗೊಂಡಿತು.

1792 – 1921 ನಡುವಿನ ಕಾಲಾವಧಿ: ಪಾರಂಪರಿಕ ಅರ್ಥವ್ಯವಸ್ಥೆಯ ವಿಘಟನೆ  

ಬ್ರಿಟಿಷರು ಟಿಪ್ಪುವನ್ನು ಸೋಲಿಸಿದ ನಂತರ, ಮಲಬಾರ್ ನೇರವಾಗಿ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತು. ಕೊಚ್ಚಿನ್ ಮತ್ತು ತಿರುವಾಂಕೂರು ತಮ್ಮ ರಾಜಪ್ರಭುತ್ವದ ಅಧಿಕಾರದಲ್ಲಿ ಮುಂದುವರೆದವು. ಮೋಪ್ಲಾ ದೊಂಬಿಗಳು ತಮ್ಮ ಗಲಭೆಕಿರುಕುಳಗಳನ್ನು ಮುಂದುವರೆಸಿದರು. ಸಿ ಗೋಪಾಲನ್ ನಾಯರರು 1821 ಮತ್ತು 1921 ನಡುವೆ ನಡೆದ 51 ಪ್ರತ್ಯೇಕ ದಂಗೆಗಳನ್ನು ಪಟ್ಟಿ ಮಾಡಿದ್ದಾರೆ.

ಮೈಸೂರಿನಿಂದ ಸೋಲಾಗುವ ಮೊದಲು ಮಲಬಾರಿನಲ್ಲಿ, ನಾಯರ್ ಮುಖ್ಯಸ್ಥರು ಮತ್ತು ನಂಬೂದರಿ (ಪುರೋಹಿತರು) ಅರಸರು ಅನುವಂಶಿಕವಾಗಿ ಭೂಮಿಯ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದರು. ಭೂಅಧಿಕಾರಿಗಳನ್ನು ಜೆನ್ಮಿ ಎಂದು ಕರೆಯುತ್ತಾರೆ. ಭೂಮಿಯನ್ನು ಉಳಲು ತಿಯ್ಯಾ ಮತ್ತು ಮಾಪ್ಪಿಲರಿಗೆ ಗುತ್ತಿಗೆ ನೀಡಲಾಗುತ್ತಿತ್ತು. ಗ್ರಾಮದ ಇತರ ಪಾಲುದಾರರಾದ ಬಡಗಿಗಳು, ಅಕ್ಕಸಾಲಿಗರು, ಕೃಷಿ ಕಾರ್ಮಿಕರು ಮತ್ತು ಇತರರ ಪಾಲು ಸಲ್ಲಿಸಿದ ನಂತರದ ನಿವ್ವಳ ಉತ್ಪನ್ನದ ಸುಮಾರು ಮೂರನೇ ಒಂದು ಭಾಗದಿಂದ ಅರ್ಧವನ್ನು ತಾವು ಉಳಿಸಿಕೊಂಡು ಅದಕ್ಕೆ ಪ್ರತಿಯಾಗಿ ಅವರು ಭೂಮಿಯನ್ನು ಕೃಷಿ ಮಾಡುತ್ತಿದ್ದರು

ಮಲಬಾರಿನ ಕ್ರೂರ ಆಕ್ರಮಣಗಳಿಂದ ಸೋಲಾದ ನಂತರ, ಜೆನ್ಮಿಗಳು ತಮ್ಮ ಭೂಮಿಯನ್ನು ತೊರೆದು ಓಡಿಹೋದರು. ಟಿಪ್ಪುವು ಭೂಮಿಯ ಹೊಸ ಗುತ್ತಿಗೆದಾರರೊಂದಿಗೆ ತನ್ನದೇ ಒಪ್ಪಂದವನ್ನು ಮಾಡಿಕೊಂಡನು. ಗುತ್ತಿಗೆದಾರರು ಬಹುಪಾಲು ಹಿಂದೂ, ವಿಶೇಷವಾಗಿ ಕೆಳಜಾತಿಗಳಿಂದ ಮತಾಂತರಗೊಂಡ ಮೋಪ್ಲಾಗಳು.

ಆದರೆ ಮುಂದಿನ ಐದು ವರ್ಷಗಳಲ್ಲಿಯೇ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಟಿಪ್ಪುವನ್ನು ಸೋಲಿಸಿ, ಮಲಬಾರಿನಲ್ಲಿ ಅಂದು ಚಾಲ್ತಿಯಲ್ಲಿದ್ದ ಕಾನೂನು ವ್ಯವಸ್ಥೆಯನ್ನು ಮಾರ್ಪಡಿಸಿ ಸಂಪೂರ್ಣ ಆಸ್ತಿ ಹಕ್ಕುಗಳನ್ನು ಆಚರಣೆಗೆ ತಂದಿತು. ಬ್ರಿಟಿಷರು ಜೆನ್ಮಿಗಳನ್ನು ಅವರ ಭೂಮಿಯ ಸಂಪೂರ್ಣ ಮಾಲೀಕರೆಂದು ಗುರುತಿಸಿ, ಅವರು ತಮ್ಮ ಕೃಷಿಕರೊಂದಿಗೆ ತಾವೇ ಒಡಂಬಡಿಕೆಕರಾರುಗಳನ್ನು ನಿರ್ವಹಿಸುವ ಸ್ವಾತಂತ್ರ್ಯ ನೀಡಿತು. ಮೋಪ್ಲಾಗಳುತಮ್ಮಭೂಮಿಯನ್ನು ಕಳೆದುಕೊಂಡರು. ಇದರಿಂದಾಗಿ ಅವರು ಹಿಂದೂ ಮತ್ತು ಬ್ರಿಟಿಷರನ್ನು ಇನ್ನೂ ಪ್ರಖರವಾಗಿ ದ್ವೇಷಿಸತೊಡಗಿದರು.

ಮುಸ್ಲಿಮ್ ಆಕ್ರಮಣದ ಮೊದಲು, ಮಲಬಾರಿನಲ್ಲಿ ರಾಜಸಾಮಂತರು ತಮ್ಮ ನಾಯರ್ ಸೈನ್ಯ ಮತ್ತು ಶಸ್ತ್ರಸಜ್ಜಿತ ಶಾಂತಿಪಾಲಕ ಪಡೆಗಳ  ಬೆಂಬಲದಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಿದ್ದರು. ಮಲಬಾರ್ ಸೋತಾಗ ವ್ಯವಸ್ಥೆ ಹದಗೆಟ್ಟಿತು. ಇಸ್ಲಾಮಿಗೆ ಜನರನ್ನು  ಮತಾಂತರಗೊಳಿಸಲು ಟಿಪ್ಪು ಅನುಸರಿಸಿದ ಕ್ರೌರ್ಯಕ್ಕೆ ಹೆದರಿ ರಾಜರು, ಸಾಮಂತರು ಮತ್ತು ಅವರ ಸಾವಿರಾರು ಪ್ರಮುಖ ಅನುಯಾಯಿಗಳು ದೇಶವನ್ನೇ ಬಿಟ್ಟು ಚೆಲ್ಲಾಪಿಲ್ಲಿಯಾಗಿ ಓಡಿಹೋದರು. ಸಾಮಾಜಿಕ ಜೀವನ ನಷ್ಟಭ್ರಷ್ಟವಾಗಿ, ಹಿಂದೂ ಮತ್ತು ಮುಸ್ಲಿಮರ ನಡುವೆ ತೀವ್ರ ಮತ್ತು ನಿರಂತರವಾದ ದ್ವೇಷವನ್ನು ಹುಟ್ಟುಹಾಕಿತು. 1792ರಲ್ಲಿ ಬ್ರಿಟಿಷರು ಮಲಬಾರನ್ನು ವಶಪಡಿಸಿಕೊಂಡಾಗ, ಪರಸ್ಪರ ದ್ವೇಷವು ಹತ್ತಿ ಉರಿಯುವ ಸ್ಥಿತಿಯಲ್ಲಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಅಡಿಪಾಯವೇ ಶಿಥಿಲವಾಗಿತ್ತು. ದಕ್ಷಿಣ ಮಲಬಾರಿನ ಎರ್ನಾಡು ಮತ್ತು ವಳ್ಳುವನಾಡಿನ ಕಾಡುಗಳಲ್ಲಿ ಮೋಪ್ಲಾಗಳ ತಂಡಗಳು ಅಡಗಿಕೊಂಡು ಸುತ್ತಮುತ್ತಲ ಪ್ರದೇಶಗಳನ್ನು ಆತಂಕಕ್ಕೆ ಒಡ್ಡಿದ್ದರು. ಮಲಬಾರನ್ನು ಸ್ವಾಧೀನಪಡಿಸಿಕೊಂಡ ಹೊಸತರಲ್ಲಿ ಬ್ರಿಟಿಷರ ಸೈನ್ಯ ಶಾಂತಿಪಾಲನೆಯಲ್ಲಿ ತೊಡಗಿತು. ಆದರೆ ಟಿಪ್ಪುವಿನೊಡನೆ ಇನ್ನೂ ಯುದ್ಧ ಜಾರಿಯಲ್ಲಿತ್ತು. ಆದ್ದರಿಂದ ಕ್ರಮೇಣ ಸೈನ್ಯವನ್ನು ಬ್ರಿಟಿಷರು ವಾಪಸ್ಸು ಕರೆಸಿಕೊಂಡರು. 18ನೇ ಶತಮಾನದ ಅಂತ್ಯದ ವೇಳೆಗೆ, ಮಲಬಾರ್ ಜಿಲ್ಲೆಯನ್ನು ಕಲೆಕ್ಟರೇಟ್ಗಳಾಗಿ ವಿಭಜಿಸಲಾಯಿತು. ಅಲ್ಲಿ ನಿಯಮಿತ ಪೋಲೀಸ್ ಪಡೆಗಳನ್ನು ಸ್ಥಾಪಿಸಿದರೂ ಸಹ, ಹೆಚ್ಚು ಮಟ್ಟಿಗೆ ಕಂದಾಯದ ಪೇದೆಗಳೇ ಪೊಲೀಸ್ ಕೆಲಸವನ್ನೂ ಮಾಡುತ್ತಿದ್ದರು. 1823 ಹೊತ್ತಿಗೆ, ಪೇದೆಗಳು ಕಂದಾಯ ಸಮೀಕ್ಷೆಯಲ್ಲಿಯೇ ನಿರತರಾಗಿದ್ದ ಕಾರಣ ಪೋಲೀಸ್ ಕೆಲಸ ಮಾಡಲು ಯಾರೂ ಇರಲಿಲ್ಲ. 1856ರಲ್ಲಿ ಪ್ರಾರಂಭವಾದ ಹಿಂಸಾತ್ಮಕ ಮೋಪ್ಲಾ ದಂಗೆಗಳು ವ್ಯವಸ್ಥೆಯ ದೌರ್ಬಲ್ಯನ್ಯೂನತೆಗಳನ್ನು ಹೊರಹಾಕಿದವು. 1856ರಲ್ಲಿ ಮಲಬಾರಿನ ಕಲೆಕ್ಟರ್ ಕಾನೆಲ್ಲಿ ಸುಲಭವಾಗಿ ಮೋಪ್ಲಾಗಳಿಗೆ ಬಲಿಯಾದ ಘಟನೆ ಪೊಲೀಸರ ಸಂಪೂರ್ಣ ಅಸಮರ್ಥತೆಗೆ ಸಾಕ್ಷಿ.

ಲೋಗನ್ ತನ್ನ ಮಲಬಾರ್ ಮ್ಯಾನುಯಲ್ನಲ್ಲಿ ಮೋಪ್ಲಾ ದೌರ್ಜನ್ಯಗಳನ್ನು ತನಿಖೆ ಮಾಡಲು ಬಂದ ಮಲಬಾರ್ ವಿಶೇಷ ಆಯುಕ್ತ ಟಿ.ಎಲ್. ಸ್ಟ್ರೇಂಜ್ ಅನ್ನು ಉಲ್ಲೇಖಿಸಿ, ವಿಶೇಷವಾಗಿ ದಕ್ಷಿಣ ಮಲಬಾರ್ನಲ್ಲಿ ಭೂಮಾಲೀಕರು ಬಾಡಿಗೆದಾರರನ್ನು ದಬ್ಬಾಳಿಕೆಗೆ ಒಳಪಡಿಸಿದ್ದ ಒಂದೇ ಒಂದು ನಿದರ್ಶನವೂ ಇಲ್ಲ, ಮೋಪ್ಲಾ ಹಿಡುವಳಿದಾರರು ಬೇಜವಾಬ್ದಾರರಾಗಿ ಸುಳ್ಳು ದಾವೆಯ ಮನವಿಗಳನ್ನು ಮುಂದಿಡುತ್ತಾರೆ ಎಂದು ಆಕ್ಷೇಪಿಸುತ್ತಾನೆ.

ಖಿಲಾಫತ್ ಚಳವಳಿ

ಮೊದಲ ಮಹಾಯುದ್ಧದ ನಂತರ ಆಟೊಮನ್ ಸಾಮ್ರಾಜ್ಯದ ಪತನವಾಯಿತು. ಬ್ರಿಟೀಷರ ಆಳ್ವಿಕೆಯಲ್ಲಿದ್ದ ಭಾರತದ ಮುಸ್ಲಿಮರು ಖಲೀಫಾನ (ನಾಮಮಾತ್ರದ) ಆಳ್ವಿಕೆಯನ್ನು (ಖಿಲಾಫತ್) ಮುಂದುವರಿಸಬೇಕೆಂದು ಬ್ರಿಟಿಷರಿಗೆ ದುಂಬಾಲು ಬಿದ್ದರು. ಮುಸ್ಲಿಮರ ನಾಯಕನಾದ ಖಲೀಫನನ್ನು ತನ್ನ ಮೂಲ ಅಧಿಕಾರಕ್ಕೆ ಹಿಂದಿರುಗಿಸುವ ಸಲುವಾಗಿ ರಾಜಕೀಯ ಚಳುವಳಿಯನ್ನು ಪ್ರಾರಂಭಿಸಿದರು. ಖಿಲಾಫತ್ ಚಳವಳಿಯ ನಾಯಕರಾದ ಶೌಕತ್ ಅಲಿ, ಮಹಮ್ಮದ್ ಅಲಿ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದರು 1920ರಲ್ಲಿ ಭಾರತದ ಅತಿ ಪ್ರಭಾವಶಾಲಿ ರಾಜಕೀಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ರಾಷ್ಟ್ರೀಯತಾವಾದಿ ಚಳವಳಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಗಾಂಧಿ ಮತ್ತು ಖಿಲಾಫತ್ ನಾಯಕರು ಖಿಲಾಫತ್ ಮತ್ತು ಸ್ವರಾಜ್ಯದ ಧ್ಯೇಯಗಳಿಗಾಗಿ ಒಟ್ಟಿಗೆ ಹೋರಾಡುವ ಒಪ್ಪಂದ ಮಾಡಿಕೊಂಡರು.     

1920 ಏಪ್ರಿಲ್ 28ರಂದು ಎರ್ನಾಡು ತಾಲೂಕಿನ ಮಂಜೇರಿಯಲ್ಲಿ ನಡೆದ ಮಲಬಾರ್ ಜಿಲ್ಲಾ ಸಮ್ಮೇಳನದಲ್ಲಿ ಖಿಲಾಫತ್ ಚಳವಳಿಯ ನಿರ್ಣಯ ಕೈಗೊಳ್ಳಲಾಯಿತು. ಗಾಂಧಿ ಮತ್ತು ಶೌಕತ್ ಅಲಿ 18ನೇ ಆಗಸ್ಟ್ 1920 ರಂದು ಕಲ್ಲಿಕೋಟೆಗೆ ಭೇಟಿ ನೀಡಿದರು. ‘ಕಾಂಗ್ರೆಸ್ ಉದ್ದೇಶವು ಕಾನೂನುಬದ್ಧ ಮತ್ತು ಶಾಂತಿಯುತ ವಿಧಾನಗಳಿಂದ ಸ್ವರಾಜ್ಯವನ್ನು ಸಾಧಿಸುವುದಾಗಿತ್ತು. ಭಾರತೀಯ ಮುಸಲ್ಮಾನರನ್ಯಾಯಸಮ್ಮತವಾದ ಭಾವನೆಗಳನ್ನು ಅನುಸರಿಸಿ ಟರ್ಕಿಯ ಪ್ರಶ್ನೆಯನ್ನು ಇತ್ಯರ್ಥಗೊಳಿಸಲು ಸರ್ಕಾರದೊಡನೆ ಅಸಹಕಾರ ಮಾಡಬೇಕೆಂದು ಖಿಲಾಫತ್ ಚಳವಳಿಯ ನೀತಿಯಾಗಿತ್ತು. ಹೀಗೆ ಮಲಬಾರಿನಲ್ಲಿ ಹಲವಾರು ಖಿಲಾಫತ್ ಸಮಿತಿಗಳ ಸ್ಥಾಪನೆಯಾಯಿತು. ಮೋಪ್ಲಾಗಳಿಗೆ ಸ್ವರಾಜ್ಯದ ಕಲ್ಪನೆಯ ಪೂರಾ ಪರಿಚಯವಿತ್ತು; ಒಪ್ಪಿಗೆ ಕೂಡ ಇತ್ತು. ಅವರ ಮತ್ತು ಹಿಂದೂಗಳ ನಡುವೆ ಬ್ರಿಟಿಷರ ಹಸ್ತಕ್ಷೇಪ ಇಲ್ಲದಿದ್ದರೆ, ಮುಸ್ಲಿಂ ಸ್ವರಾಜ್ಯ ಶೀಘ್ರದಲ್ಲೇ ಸ್ಥಾಪನೆಯಾಗುವ ನಂಬಿಕೆ ದೃಢವಾಗಿತ್ತು. ಅವರ ಜೊತೆ ಹಿಂದೂಗಳೂ ಚಳವಳಿಯಲ್ಲಿ ಸೇರಿಕೊಂಡಿದ್ದರಿಂದ ಹಿಂಸಾಚಾರದಿಂದ ಅವರ ಗುರಿ ಸಾಧಿಸುವುದು ಸುಲಭವಾಯಿತು.’

ಖಿಲಾಫತ್ ಚಳುವಳಿಯನ್ನು ಬ್ರಿಟಿಷರ ವಿರುದ್ಧ ಹೂಡಿದ್ದರೂಹಿಂದಿನ ಹಲವಾರು ಕುಂದುಕೊರತೆಗಳು ಬೆಸೆದುಕೊಂಡ ಕಾರಣ ಪರಿಸ್ಥಿತಿ ಅತಿರೇಕಕ್ಕೆ ಹೋಯಿತು. ಶಸ್ತ್ರಾಸ್ತ್ರಗಳನ್ನು ಒಟ್ಟು ಮಾಡಿ, ಇಸ್ಲಾಮೀ ಸಾಮ್ರಾಜ್ಯವನ್ನು ಸ್ವಾಗತಿಸುವ ಘೋಷಣೆ ಮಾಡುವ ಸಿದ್ಧತೆಗಳು ನಡೆದವು. ಅಲಿ ಮುಸಲಿಯಾರ್ ಎಂಬ ಖಿಲಾಫತ್ ನಾಯಕನನ್ನು ರಾಜನೆಂದು ಘೋಷಿಸಿ, ಖಿಲಾಫತ್ ಧ್ವಜಗಳನ್ನು ಏರಿಸಿ, ಎರ್ನಾಡು ಮತ್ತು ವಳ್ಳುವನಾಡನ್ನು ಖಿಲಾಫತ್ ಸಾಮ್ರಾಜ್ಯಗಳೆಂದು ಘೋಷಿಸಲಾಯಿತು.

ಗಲಭೆಕೋರರೆಂದೇ ಹೆಸರಾದ ಮೋಪ್ಲಾಗಳಿಗೆ ಕಾಂಗ್ರೆಸ್ ಮತ್ತು ಗಾಂಧಿಯವರೊಂದಿಗಿನ ಒಡನಾಟದಿಂದಾಗಿ ಅನಿರೀಕ್ಷಿತವಾಗಿ ಸನ್ಮಾನಗೌರವಗಳು ಪ್ರಾಪ್ತವಾದವು. ಅಲಿ ಮುಸಲಿಯಾರನ ನೇತೃತ್ವದಲ್ಲಿ ಹಲವಾರು ಪ್ರತಿಭಟನೆಗಳು ನಡೆದವು. ಸ್ಥಳೀಯ ಖಿಲಾಫತ್ ಕಾರ್ಯದರ್ಶಿ ವಿ. ಮಹಮ್ಮದ್ ಅವರ ಮನೆಯನ್ನು ಪೊಲೀಸರು ಶೋಧಿಸಿದಾಗ ನಿಲಂಬೂರ್ ತಿರುಮುಲ್ಪಾಡರಿಂದ ಕಳವು ಮಾಡಲಾಗಿದ್ದ ಬಂದೂಕು ಸಿಕ್ಕಿತು. ಇದೇ ನೆಪ ಹೂಡಿ ಮೋಪ್ಲಾಗಳು ಗಲಭೆ ಪ್ರಾರಂಭ ಮಾಡಿದರು.

ಆಗಸ್ಟ್ 1921ರಲ್ಲಿ ಖಿಲಾಫತ್ ಚಳುವಳಿಯ ಭಾಗವಾಗಿ ಮಲಬಾರ್ ಮೋಪ್ಲಾ ದಂಗೆಯ ಹಿಂಸೆ ಶುರುವಾಯಿತು. ಈಗಾಗಲೇ ಆಗಾಗ್ಗೆ ನಡೆದ ಹಿಂಸಾತ್ಮಕ ಘಟನೆಗಳು, ಖಿಲಾಫತ್ ಬೋಧಕರು ಮತ್ತು ಮುಲ್ಲಾಗಳ ಪ್ರಚೋದನೆ, ಬಡತನ, ಅಶಿಕ್ಷಿತ ಜನ, ಮತ್ತು ತೀವ್ರವಾದ ಮತಾಂಧತೆಯ ವಿಷ ಎಲ್ಲವೂ ಸೇರಿ ಮೋಪ್ಲಾ ದಂಗೆಕೋರರು ಹುಚ್ಚೆದ್ದು ಹಿಂಸೆ, ದೌರ್ಜನ್ಯಗಳ ರೌದ್ರ ನೃತ್ಯವನ್ನೇ ನಡೆಸಿದರು.

ಹಿಂದೂಗಳನ್ನು ಹಿಂಸಿಸಿ, ಕ್ರೂರ ಅತ್ಯಾಚಾರಗಳಿಗೆ ಒಳಪಡಿಸಿ, ಅವರ ಮನೆಮಠಗಳನ್ನು ಲೂಟಿ ಮಾಡಿ, ಕೊಲ್ಲಲಾಯಿತು. ಜೀವಂತವಾಗಿದ್ದಾಗಲೇ ಚರ್ಮ ಸುಲಿದು, ತಮ್ಮ ಸಮಾಧಿಯನ್ನು ತಾವೇ ಅಗೆಯುವಂತೆ ಬಲಾತ್ಕರಿಸಿ, ತಾಯಿಯರ ಕೈಯಿಂದ ಮಕ್ಕಳನ್ನು ಕಿತ್ತುಕೊಂಡು ಅವರ ಮುಂದೆಯೇ ಕೊಂದು ಹಾಕಿ, ಹೆಂಗಸರನ್ನು ಮನೆಯಿಂದ ಬೆತ್ತಲೆಯಾಗಿ ಹೊರಕ್ಕೆ ತಳ್ಳಿ, ಅವರು ಹಸಿವು, ಬಾಯಾರಿಕೆಗಳಿಂದ ಕಾಡುಮೇಡುಗಳಲ್ಲಿ ಅಲೆಯುವಂತೆ  ಮಾಡಿದ ಭಯಾನಕ ನಿದರ್ಶನಗಳು ದಾಖಲಾಗಿವೆ.

ಮೋಪ್ಲಾ ಬಂಡುಕೋರರು ಸರ್ಕಾರಿ ಕಚೇರಿ, ಉಪ ಖಜಾನೆ ಮತ್ತು ಮನೆಗಳ ಮೇಲೆ ದಾಳಿ ಮಾಡಿ, ಕೈಗೆ ಸಿಕ್ಕಿದ ಸಮಸ್ತವನ್ನೂ ತೆಗೆದುಕೊಂಡು ಹೋದರು. ಸಾವಿರಾರು ಮನೆ, ಸಾರ್ವಜನಿಕ ಕಟ್ಟಡ ಮತ್ತು ದೇವಾಲಯಗಳನ್ನು ಸುಟ್ಟು ಬೂದಿ ಮಾಡಿದರು. ಎದುರಿಗೆ ಬಂದ ಪ್ರತಿಯೊಬ್ಬರನ್ನು ಹತ್ಯೆ ಮಾಡಿದರು. ನಾಯರರು ಹೇಳುವಂತೆ, ಭಯಾನಕ ಪರಿಸ್ಥಿತಿಯನ್ನು ಹದಕ್ಕೆ ತರಲು 28ರವರೆಗೆ ಸಾಕಷ್ಟು ಸರಕಾರಿ ಪಡೆಗಳು ಲಭ್ಯವಿರಲಿಲ್ಲ.

ಕ್ಯಾಪ್ಟನ್ ಪಿ. ಮೆಕೆನ್ರಾಯ್ ಮತ್ತು ಅವರ 125 ಲೀನ್ಸ್ಟರರ ಸಣ್ಣ ಸೈನ್ಯ ಮತ್ತು ವಿಶೇಷ ಪೊಲೀಸರ ಪಡೆಯು 4000 ಮೋಪ್ಲಾ ದಂಗೆಕೋರರೊಡನೆ 26 ಆಗಸ್ಟ್ 1921ರಂದು ಮಲ್ಲಪುರಂ ಅನ್ನು ಬಿಡಿಸಿಕೊಳ್ಳಲು ಐದು ಗಂಟೆಗಳ ಕಾಲ ಅವಿರತವಾಗಿ ಹೋರಾಡಿದರು. ಎರ್ನಾಡಿನ ಹಿಂದೂಗಳ ಜೀವಧರ್ಮಗಳು ವಿಜಯದಿಂದ ಉಳಿದವು ಎಂದು ಗೋಪಾಲನ್ ನಾಯರರು ಹೇಳುತ್ತಾ, ಕ್ಯಾಪ್ಟನ್ ಪಿ. ಮೆಕೆನ್ರಾಯ್ ಅವರಿಗೆ ಮತ್ತು ಅವರ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಏಕೆಂದರೆ ಮಂಜೇರಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಎಲ್ಲಾ ಹಿಂದೂಗಳನ್ನು ಮಸೀದಿಗಳಿಗೆ ಎಳೆದುಕೊಂಡು ಬಂದು, ಅವರನ್ನು ಅದೇ ದಿನ, ಅಂದರೆ ಶುಕ್ರವಾರದಂದು, ಜಾಮಾ ಪ್ರಾರ್ಥನೆಯ ನಂತರ ಇಸ್ಲಾಂಗೆ ಪರಿವರ್ತಿಸಲು ಮೋಪ್ಲಾಗಳು ಯೋಜಿಸಿದ್ದರು. ಟೋಪಿ, ಉಡುಗೆ ಮತ್ತು ಜಾಕೆಟ್ಗಳು ಆಗಲೇ ಮತಾಂತರಗೊಂಡವರಿಗೆ ವಿತರಿಸಲು ಸಿದ್ಧವಾಗಿದ್ದವು. ಆದರೆ ಪೂಕೋಟೂರು ಕದನದ ಪರಿಣಾಮವಾಗಿ ಮತಾಂತರದ ಯೋಜನೆಯನ್ನು ಕೈಬಿಡಲಾಯಿತು.

ಬ್ರಿಟೀಷ್ ಸೈನಿಕರು ಬಂಡುಕೋರರ ವಶದಲ್ಲಿದ್ದ ತಿರುರಂಗಡಿಯ ಕಿಝೆಕ್ಕೆಪಲ್ಲಿ ಮಸೀದಿಯನ್ನು ಸುತ್ತುವರೆದರು. ಒಂದೇಸಮನೆ ನಡೆದ ಕಾಳಗದ ನಂತರ, ಹಲವಾರು ಮೋಪ್ಲಾ ಸೈನಿಕರು ಮಡಿದರು. ಬದುಕಿ ಉಳಿದ ಅಲಿ ಮುಸಲಿಯಾರ್ ಮತ್ತು ಬಂಡಾಯದ ಇತರ ನಾಯಕರು ಶರಣಾದರು. ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಯಿತು. ಅಲಿ ಮುಸಲಿಯಾರ್ ಬಂಧನದೊಡನೆ ನಾಟಕದ ಮೊದಲ ಹಂತಕ್ಕೆ ತೆರೆ ಬಿದ್ದಿತು

ಸೇನಾ ಕಾರ್ಯಾಚರಣೆಗಳು ಜನವರಿ 1922 ಅಂತ್ಯದವರೆಗೆ ಮುಂದುವರೆದವು. ಚಿನ್ ಕಚಿನ್ಸ್, ಘರ್ವಾಲಿಗಳು, ಗೂರ್ಖಾಗಳ ಬೆಟಾಲಿಯನ್ ಮತ್ತು ವಿಶೇಷ ಪೊಲೀಸ್ ಪಡೆಗಳನ್ನು ಮೊಪ್ಲಾ ತುಕಡಿಗಳನ್ನು ಒಡೆಯಲು ಅಥವಾ ತಟಸ್ಥಗೊಳಿಸಲು ನಿಯೋಜಿಸಲಾಯಿತು. ‘ಖಿಲಾಫತ್ ಕಿಂಗ್,’ ವರಿಯನ್ ಕುನ್ನತ್ ಕುನ್ಹಮದ್ ಹಾಜಿಯ ಬಂಧನವಾದ ನಂತರ ದಂಗೆ ಅಂತಿಮವಾಗಿ ಕುಸಿದು ಬಿದ್ದಿತು.

ರಾಜೀವ್ ಶ್ರೀನಿವಾಸನ್ ಅವರ ಶ್ಯಾಡೋ ವಾರಿಯರ್ ಬ್ಲಾಗಿನಲ್ಲಿ ನಾನು ಒಂದು ಒಂದು ಅತೀವ ಕುತೂಹಲಕಾರಿ ಒಳನೋಟವನ್ನು ಕಂಡುಕೊಂಡೆ. ಅವರು ಡಾ ಹರಿ ಶಂಕರ್, ಪುರಾತತ್ವಶಾಸ್ತ್ರಜ್ಞ ಮತ್ತು ವಿದ್ವಾಂಸರು ಬರೆದ ಪುಸ್ತಕ, ಬಿಯಾಂಡ್ ರಾಂಪೇಜ್: ವೆಸ್ಟ್ ಏಷ್ಯನ್ ಕಾಂಟ್ಯಾಕ್ಟ್ಸ್ ಆಫ್ ಮಲಬಾರ್ ಮತ್ತು ದಿ ಖಿಲಾಫತ್ (quotes Beyond Rampage: West Asian Contacts of Malabar and the Khilafat) ಅನ್ನು ಉಲ್ಲೇಖಿಸುತ್ತಾ, ಶ್ರೀಮಂತ ಮುಸ್ಲಿಂ ವ್ಯಾಪಾರಿಗಳಿಗೆ ಮಧ್ಯಪ್ರಾಚ್ಯ ಮತ್ತು ಟರ್ಕಿಗಳೊಡನೆ ಅಂತರರಾಷ್ಟ್ರೀಯ ಸಾಗರ ವ್ಯಾಪಾರದ ಮೇಲಿನ ತಮ್ಮ ಏಕಸ್ವಾಮ್ಯವನ್ನು ವಿಸ್ತರಿಸಲು ನಿಲಂಬೂರ್ ಕಾಡುಗಳಿಂದ ತೇಗದ ಮರವನ್ನು ಕಡಿಸುವ ಹಕ್ಕು ಬೇಕಿತ್ತು. ಕಾಡು ಅಲ್ಲಿನ ದೇವಾಲಯಗಳ ಒಡೆತನದಲ್ಲಿದ್ದವು. ಭೂಮಿಯನ್ನು ವಶಪಡಿಸಿಕೊಳ್ಳಲು ಮೋಪ್ಲಾ ಗಲಭೆಯನ್ನು ಪ್ರಚೋದಿಸಿದರು, ಎಂದು ವಾದಿಸುತ್ತಾರೆ.

ಪರಿಹಾರ ಕಾರ್ಯ 

1923 ಫೆಬ್ರವರಿ 19ರಂದು ಕಲ್ಲಿಕೋಟೆಯಲ್ಲಿ ನಡೆದ ಸಮ್ಮೇಳನದಲ್ಲಿ ಕಲ್ಲಿಕೋಟೆಯ ಸಮುದ್ರಿ ರಾಜರು ಮಾತನಾಡಿ, ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಶ್ರೀ ಜಿ.ಕೆ. ದೇವಧರ್ ಮತ್ತು ಅವರೊಂದಿಗೆ ಬಂದ ಸ್ವಯಂಸೇವಕರು ನೀಡಿದ ಅಮೂಲ್ಯವಾದ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು.

ಅಕ್ಟೋಬರ್ 1921 ವೇಳೆಗೆ, ಆರ್ಯ ಸಮಾಜವು ಸಂಕಷ್ಟದಲ್ಲಿರುವ ನಿರಾಶ್ರಿತರಿಗೆ ಮತ್ತು ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಂಡ ಹಿಂದೂಗಳ ಮರುಪರಿವರ್ತನೆಗಾಗಿ ಮಲಬಾರ್ಗೆ ಭೇಟಿ ನೀಡಲು ಪಂಡಿತ್ ಋಷಿರಾಮರನ್ನು ನಿಯೋಜಿಸಿತು.

ಆರ್ಯ ಸಮಾಜವು ಸೆಪ್ಟೆಂಬರ್ 1922ರವರೆಗೆ ಪರಿಹಾರ ಕಾರ್ಯಗಳಿಗಾಗಿ ಮತ್ತು ಬಲವಂತದ ಮತಾಂತರದ ಮರುಪರಿವರ್ತನೆಗಾಗಿ ಸಾಕಷ್ಟು ಧನ ಸಂಗ್ರಹಿಸಿತು. ಸ್ಥಳೀಯ ವ್ಯಕ್ತಿಗಳಿಂದ ಬಂದ ಸಣ್ಣ ದೇಣಿಗೆಗಳನ್ನು ಹೊರತುಪಡಿಸಿ, ಹಣವು ಪಂಜಾಬ್ ಮತ್ತು ಮದ್ರಾಸ್ ಪ್ರೆಸಿಡೆನ್ಸಿಯ ಹೊರಗಿನ ಇತರ ಸ್ಥಳಗಳಿಂದ ಸಂಗ್ರಹವಾಯಿತು.

ಶುದ್ಧಿ ಚಳುವಳಿ

20 ಆಗಸ್ಟ್ 1922ರಂದು, ಸಮುದ್ರಿ ರಾಜರ ಅಧ್ಯಕ್ಷತೆಯಲ್ಲಿ ನಂಬೂದಿರಿ ವೈದೀಕರ ಮಂಡಳಿಯೊಂದಿಗೆ ನಡೆದ ಸಭೆಯಲ್ಲಿ ಹಲವಾರು ಗಣ್ಯರು, ಮತ್ತು ಮಲಬಾರ್ ಕಲೆಕ್ಟರ್ಶ್ರೀ R. H. ಎಲ್ಲಿಸ್, ICS, ರವರ ಸಮ್ಮುಖದಲ್ಲಿ ಮೋಪ್ಲಾ ದಂಗೆಯಲ್ಲಿ ಇಸ್ಲಾಮಿಗೆ ಬಲಾತ್ಕಾರದಿಂದ ಮತಾಂತರಗೊಂಡ ಹಿಂದೂಗಳ ಭವಿಷ್ಯದ ಬಗ್ಗೆ ಯೋಚಿಸಿ, ಅವರನ್ನು ಪುನಃ ಹಿಂದು ಧರ್ಮಕ್ಕೆ ಮರುಮತಾಂತರಗೊಳಿಸಲು ನಿರ್ಧರಿಸಿದರು.

ಆರ್ಯ ಸಮಾಜವು ಆರ್ಯ ಮಿಷನರಿ ಪಂಡಿತ್ ಋಷಿ ರಾಮರನ್ನು ಕಲ್ಲಿಕೋಟೆಗೆ ಕಳುಹಿಸಿತು. ಅವರು ನಿರಾಶ್ರಿತರಿಗೆ ಪರಿಹಾರವನ್ನು ನೀಡುವುದರ ಜೊತೆಗೆ ಬಲವಂತದ ಮತಾಂತರವನ್ನು ಹದಕ್ಕೆ ತರಲು ಕ್ರಮಗಳನ್ನು ತೆಗೆದುಕೊಂಡರು.

ದಂಗೆ ಶಮನವಾದಾಗ, ಆರ್ಯ ಸಮಾಜದ ಕಾರ್ಯಕರ್ತರು ಬಾಧೆಗೆ ಒಳಗಾದ ಪ್ರದೇಶಗಳಲ್ಲಿ ದಂಗೆಕೋರರ ಭಯದಿಂದ ಇನ್ನೂ ತ್ರಸ್ತರಾಗಿದ್ದ ಪರಿವರ್ತಿತ ಕುಟುಂಬಗಳಿಗೆ ಪರಿಹಾರ ನೀಡಿದರು. ಅವರನ್ನು ಕಲ್ಲಿಕೋಟೆ ಮತ್ತು ಇತರ ಸುರಕ್ಷಿತ ಸ್ಥಳಗಳಿಗೆ ಕರೆತಂದು ಹಿಂದೂ ಧರ್ಮಕ್ಕೆ ಸೇರಿಸಲಾಯಿತು. ಸಾಂಪ್ರದಾಯಿಕ ಜನರು ಮರುಸೇರ್ಪಡೆಯಾದ ವ್ಯಕ್ತಿಗಳಿಗೆ ಸಮಾನವಾದ ಗೌರವವನ್ನು ನೀಡುವ ಬಗ್ಗೆ ಆಕ್ಷೇಪಣೆಗಳು ಎದ್ದಾಗ ಸಮಾಜದ ಕಾರ್ಯಕರ್ತರು ಖುದ್ದಾಗಿ ಪರಿಸ್ಥಿತಿಯನ್ನು ವಿವರಿಸಿ, ದಂಗೆಯ ಮೊದಲಿನಂತೆಯೇ ಸಂತಪ್ತರನ್ನು ತಮ್ಮವರಂತೆಯೇ ಪರಿಗಣಿಸುವಂತೆ ಜನರನ್ನು ಮನವೊಲಿಸಲು ತೆರಳಿದರು! ಹಿಂದೂ ಧರ್ಮಕ್ಕೆ ಅವರು ಹಿಂತಿರುಗದಿದ್ದರೆ ಅವರು ಮೋಪ್ಲಾಗಳಾಗಿ ಅಥವಾ, ಯಾವುದೋ ಹಿಂದುಳಿದ ಪಂಗಡಗಳಾಗಿ ಉಳಿದುಹೋಗುತ್ತಿದ್ದರು.

ಗೋಪಾಲನ್ ನಾಯರರು ಮಲಬಾರ್ನಲ್ಲಿನ ಆರ್ಯಸಮಾಜ ಮಾಡಿದ ಅಪೂರ್ವವಾದ ಕೆಲಸವನ್ನು ಕೃತಜ್ಞತೆಯಿಂದ ಜ್ಞಾಪಿಸಿಕೊಂಡು ಹಿಂದೂ ಮಲಬಾರ್ ಆರ್ಯಸಮಾಜಕ್ಕೂ ಅದರ ಪ್ರತಿನಿಧಿ ಪಂಡಿತ್ ಋಷಿ ರಾಮರಿಗೂ ಎಂದೆಂದಿಗೂ ಕೃತಜ್ಞರಾಗಿರುತ್ತದೆ, ಎನ್ನುತ್ತಾರೆ. ಮೈಸೂರು ಮಲಬಾರನ್ನು ಆಕ್ರಮಣ ಮಾಡಿದ ವಿಷ ಘಳಿಗೆಯಿಂದ ಪ್ರಾರಂಭವಾದ ಬಲಾತ್ಕಾರದ ಮತಾಂತರಗಳಿಂದ ಪುನಃ ಹಿಂದೂ ಧರ್ಮಕ್ಕೆ ಮರಳುವುದು ಅಸಾಧ್ಯ ಎನ್ನುವುದು ಅನುಭವದ ಮಾತು. ಟಿಪ್ಪುವಿನ ಕಾಲದಲ್ಲಿ ಬಲವಂತವಾಗಿ ಮತಾಂತರಗೊಂಡ ಮಲಬಾರ್ ನಾಯರ್ಗಳ ಒಂದು ಪಂಗಡ ಅವನ ನಿರ್ಗಮನದ ನಂತರ ಹಿಂದೂ ಧರ್ಮಕ್ಕೆ ಮರಳಿತು. ಆದರೆ ಇತರ ನಾಯರರು ಅವರೊಡನೆ ಒಡನಾಡಲು ನಿರಾಕರಿಸಿದರು. ಹೀಗಾಗಿ, ‘ಚೇಲಾ ನಾಯರರೆಂದು ಕರೆಯಲ್ಪಡುವ ಒಂದು ಪ್ರತ್ಯೇಕ ಪಂಗಡವಾಗಿಯೇ ಅವರು ಉಳಿದುಹೋದರು. ಅನುಭವಗಳನ್ನು ನೋಡಿ ಹೆದರಿದ ಮತಾಂತರಗೊಂಡವರು ಹಿಂದೂ ಧರ್ಮಕ್ಕೆ ಮರಳುವ ಭರವಸೆಯನ್ನೇ ತೊರೆಡಿದ್ದರು. ಆರ್ಯ ಸಮಾಜವು ಅವರನ್ನು ಹಿಂದೂ ಸಮಾಜಕ್ಕೆ ಪುನಃ ಸೇರಿಸುವಲ್ಲಿ ಯಶಸ್ವಿಯಾಯಿತು. ಇದರಿಂದ ಅವರಿಗೆ ಉಂಟಾದ ಆಶ್ಚರ್ಯಸಂತೋಷ ಅಷ್ಟಿಷ್ಟಲ್ಲ

ಆದರೆ, ದುರದೃಷ್ಟವಶಾತ್, ಇಸ್ಲಾಮಿಗೆ ಮತಾಂತರಗೊಂಡ ಒಬ್ಬನೇ ಏಕಾಕಿ ಬ್ರಾಹ್ಮಣನನ್ನು ಪುನಃ ಹಿಂದು ಸಮಾಜಕ್ಕೆ ಸೇರಿಸಿಕೊಳ್ಳಲು ಸಮ್ಮತಿ ಸಿಗದೇ  ಅವನು ಮುಸ್ಲಿಮನಾಗಿ ಉಳಿದುಹೋದ.

ಕಡೆನುಡಿ 

23 ಡಿಸೆಂಬರ್ 1926ರಂದು, ಶುದ್ಧಿ ಚಳುವಳಿಯ ನೇತೃತ್ವ ವಹಿಸಿದ್ದ ಆರ್ಯಸಮಾಜದ ನಾಯಕ ಸ್ವಾಮಿ ಶ್ರದ್ಧಾನಂದರನ್ನು ಒಬ್ಬ ಹಂತಕ ಅಬ್ದುಲ್ ರಶೀದ್ ಎಂಬವನು ಕೊಂದುಹಾಕಿದ. ಗಾಂಧಿಯವರು ಕೊಲೆಗಾರನನ್ನು ತನ್ನಪ್ರಿಯ ಸಹೋದರಎಂದು ಸಂಬೋಧಿಸಿಹಿಂದೂಗಳಿಗೆ ಶಾಂತಿಯುತವಾಗಿದ್ದು ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನ ಮಾಡಬೇಡಿರೆಂದು  ಸಲಹೆ ನೀಡಿದರು.

ಸಾವರ್ಕರರ ಕರುಳು ಹಿಂಡುವ ಕಾದಂಬರಿ, ‘ದಿ ಮೋಪ್ಲಾಅನ್ನು ಓದಿದ ನಂತರ, ಮೋಪ್ಲಾ ಗಲಭೆಗಳ ಐತಿಹಾಸಿಕ ಹಿನ್ನೆಲೆಯನ್ನು ತಿಳಿಯಲು ಬಯಸಿದೆ. ಅಲ್ಲಿ ಉಲ್ಲೇಖಿತವಾದ ವ್ಯಕ್ತಿ/ಪಾತ್ರಗಳ ಬಗ್ಗೆ ತಿಳಿಯುವ ಕುತೂಹಲ ಕೂಡ ಇತ್ತು. ಗೋಪಾಲನ್ ನಾಯರರ ಪುಸ್ತಕದಲ್ಲಿ ಮಾಹಿತಿ ನನಗೆ ಸಿಕ್ಕಿದ್ದು ಮಾತ್ರವಲ್ಲ, ನಿಜವಾದ ಸತ್ಯದ ಮಾನವರಿಕೆಯಾಯಿತು. ನಾಯರರು ನಿರ್ಲಿಪ್ತರಾಗಿ, ಪತ್ರಿಕೆಗಳಲ್ಲಿ ಓದಿದ/ಪ್ರಕಟವಾದ ಸಂಗತಿಗಳನ್ನು ವಿಶ್ಲೇಷಿಸಿದ್ದಾರೆ. ಆದರೂ, ಭೀಕರ ಹತ್ಯಾಕಾಂಡವನ್ನು ಹತ್ತಿರದಿಂದ ನೋಡುವಾಗ ಅವರ ಸ್ವಂತ ಸಂಕಟವು ಕಾಣಬರುತ್ತದೆ. “ಹಿಂದೂಮುಸ್ಲಿಮರು ಸೌಹಾರ್ದತೆ ಇಲ್ಲದಿದ್ದರೆ ಬೇಡ, ಪರಸ್ಪರ ಸಹಿಷ್ಣುತೆಯ ಅಗತ್ಯವನ್ನು ಗುರುತಿಸಿ, ಪರಸ್ಪರ ಬೆಳವಣಿಗೆಗಾಗಿ ಕೆಲಸ ಮಾಡಿದಾಗ ತಮ್ಮ ಪ್ರೀತಿಯ ಮಾತೃಭೂಮಿ, ಕೇರಳದಲ್ಲಿ ಸಂತೋಷಸಮೃದ್ಧಿ ನೆಲೆಸುತ್ತದೆ,” ಎಂದಿದ್ದಾರೆ. ಎರ್ನಾಡಿನ ಹಿಂದೂಗಳನ್ನು ಕಾಪಾಡಿದ್ದಕ್ಕಾಗಿ ಕ್ಯಾಪ್ಟನ್ ಮೆಕೆನ್ರಾಯ್ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಪುಸ್ತಕ ಮೋಪ್ಲಾ ದಂಗೆಗಳ ಬಗ್ಗೆ ಸಾಕಷ್ಟು ಸಮಕಾಲೀನ ಮಾಹಿತಿಯನ್ನು ನೀಡುವ ಅಮೂಲ್ಯವಾದ ಪುಸ್ತಕವಾಗಿದೆ.

ಮಲಬಾರ್ ಸಮಯದ ನಿಜವಾದ ಇತಿಹಾಸವನ್ನು ತಿಳಿಯಲು ಪುಸ್ತಕವನ್ನು ಓದಬೇಕು. ನೂರು ವರ್ಷಗಳ ನಂತರವೂ ಹಿಂದೂ ನರಮೇಧದ ಭೀಕರತೆಯನ್ನು ನಮ್ಮ ಶಾಲೆ, ರಾಜ್ಯ ಮತ್ತು ಪತ್ರಿಕೆಗಳು ಮುಚ್ಚಿಡುವ ಪ್ರಯತ್ನ ಮಾಡಿ, ನಮಗೆ ಸುಳ್ಳು ಹೇಳುತ್ತಿರುವ ಕಾರಣ ಏನು ಎಂದು ನಾವು ತಿಳಿಯಬೇಡವೇ? ನಿಜವಾದ ಇತಿಹಾಸವನ್ನು ಅಧ್ಯಯನ ಮಾಡದೆ, ನಾವು ಅದರ ಪಾಠವನ್ನು ಕಲಿಯದಿದ್ದರೆ, ಅದು ಪುನರಾವರ್ತಿಸುವುದು ಖಂಡಿತ!

ಆಕರಗಳು:

  1. Vikram Sampath, Savarkar, Echoes from a Forgotten Past, 1883 – 1924
  2. C Gopalan Nair, The Moplah Rebellion, 1921
  3. https://aryasamajkerala.org.in/
  4. Tirur Dinesh, The Moplah Riots
  5. https://twitter.com/Janamejayan/status/1131390618406707200?s=20
  6. https://twitter.com/Janamejayan/status/1131390621799845890?s=20
  7. Ep. 43: All those anniversaries, but they all may boil down to the powerful screwing the meek – by Prof. Rajeev Srinivasan – Shadow Warrior (substack.com)

(This is a Kannada translation of an English article by Manjula Tekal)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply