close logo

ರಸರಾಮಾಯಣ ಮತ್ತು ತಾಯ್ತನ

ಮಾತೃ ದೇವೋ ಭವ ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವ ತೈತ್ತಿರೀಯ ಉಪನಿಷತ್ತು ತಾಯಿಯನ್ನು ಆಚಾರ್ಯ ಅಂದರೆ ಗುರುವಿಗೆ ಸಮಾನವಾದ ಸ್ಥಾನದಲ್ಲಿರಿಸಿದೆ. ಗುರು ಎನ್ನುವುದನ್ನು ನಡತೆಯಲ್ಲಿ ಗುರುತ್ವ ಅಂದರೆ ಎಲ್ಲ ರೀತಿಯ ಜವಾಬ್ದಾರಿ ಉಳ್ಳವನು ಎಂದು ಅರ್ಥ ಮಾಡಿಕೊಳ್ಳಬಹುದು. ಆಗ ತಾಯ್ತನದ ಸಾರವೂ ಅದೇ ಎಂದಾಗುತ್ತದೆ. ತಾಯಿಯ ಭಾವ ಎನ್ನುವುದು ಕೇವಲ ವಾತ್ಸಲ್ಯಕ್ಕೆ ಸೀಮಿತವಲ್ಲ. ಅಗತ್ಯ ಬಂದಾಗ ಕಠಿಣವಾದ ಶಿಕ್ಷೆ ನೀಡುವಂತಹ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೂ ಅನ್ವಯಿಸುತ್ತದೆ. ಸ್ವಂತ ಮಕ್ಕಳನ್ನು ಹಿತದ ದಾರಿಯಲ್ಲಿ ಇರಿಸುವುದಕ್ಕೆ ಅದು ಸೀಮಿತವಲ್ಲ. ತನ್ನ ವ್ಯಾಪ್ತಿಗೆ ಬರುವವರನ್ನೆಲ್ಲಾ ಹಿತದ ದಾರಿಯಲ್ಲಿ ಇರಿಸುವುದಕ್ಕೆ ತಾಯ್ತನದ ಭಾವ ವಿಸ್ತೃತಗೊಳ್ಳುತ್ತದೆ. ಮಕ್ಕಳನ್ನೂ ಒಳಗೊಂಡಂತೆ ಮನೆಯವರನ್ನೆಲ್ಲಾ ಮತ್ತು ಸಂಪರ್ಕಕ್ಕೆ ಬರುವ ಸುತ್ತಲಿನವರನ್ನೆಲ್ಲಾ ಸರಿಯಾದ ದಾರಿಯಲ್ಲಿ ಇರಿಸುವ ಸಾಮಾಜಿಕ ಹೊಣೆಗಾರಿಕೆಯೂ ತಾಯ್ತನದ ಭಾವದ ವ್ಯಾಪ್ತಿಗೇ ಬರುತ್ತದೆ. ಭಾರತೀಯ ಗ್ರಹಿಕೆಯಲ್ಲಿ ಮನೆಯ ಮಾತೆಯಲ್ಲದೆ ಜಗನ್ಮಾತೆಯ ಪರಿಕಲ್ಪನೆಗೂ ಜಾಗ ಇದೆ ಜಗನ್ಮಾತೆಯು ಸೃಷ್ಟಿ, ಸ್ಥಿತಿಗಳ ಜೊತೆಗೆ ಲಯಕತೃತ್ವವನ್ನೂ ಒಳಗೊಳ್ಳುವಂಥವಳು. ಕೋಮಲವಾದ ಎಲ್ಲಾ ಭಾವಗಳಿಗೂ ಮತ್ತು ಎಲ್ಲಾ ಬಗೆಯ ಶಿಸ್ತು-ಕ್ರಮಗಳಿಗೂ ಮೂಲ ಆಕರವಾಗಿ ಜಗನ್ಮಾತೆಯ ಪರಿಕಲ್ಪನೆ ರೂಪುಗೊಂಡಿದೆ. 

ತಾಯ್ತನದ ಬಹುಮುಖಿ ಭಾವಗಳನ್ನು ಪ್ರಕಾಶ ಪಡಿಸುವ ಮೊಟ್ಟಮೊದಲನೆಯ ಕಾವ್ಯ ವಾಲ್ಮೀಕಿಯ ರಾಮಾಯಣ. ರಾಮನನ್ನೂ, ವಾಲ್ಮೀಕಿಯನ್ನೂ ಗೌರವಿಸುವ ಶ್ಲೋಕ “ಕೂಜಂತಂ ರಾಮ ರಾಮೇತಿ| ಮಧುರಂ ಮಧುರಾಕ್ಷರಂ| ಆರೋಹ್ಯ ಕವಿತಾಶಾಖಾಂ| ವಂದೇ ವಾಲ್ಮೀಕಿ ಕೋಕಿಲಂ||” ಎನ್ನುವುದು. ಇದು ಬುಧ ಕಷ್ಯಪರ ರಾಮರಕ್ಷಾ ಸ್ತೋತ್ರದ ಒಂದು ಶ್ಲೋಕ. ಇದು ವಾಲ್ಮೀಕಿಯನ್ನು ಕವಿತೆಯ ಶಾಖೆಯನ್ನು ಏರಿ ರಾಮ ರಾಮ ಎಂದು ಮಧುರವಾದ ಅಕ್ಷರವನ್ನು ಉಲಿಯುತ್ತಿರುವ ಕೋಗಿಲೆ ಎನ್ನುತ್ತಿದೆ. ರಾಮ ಯಾಕೆ, ಹೇಗೆ ಕವಿತೆಯ ಅಕ್ಷರ ಮತ್ತು ಮಧುರವಾದ ಅಕ್ಷರ? ಯಾವುದು ಕವಿತೆಯೊಂದರ ಮೂಲಭಾವವೋ ಅದು ಅದರ ಅಕ್ಷರ. ಮೂಲಭಾವವು ಹಿತವಾದ ಮನಸ್ಥಿತಿಯನ್ನು ಮೂಡಿಸಿದರೆ ಅದು ಮಧುರ. ಈ ಅರ್ಥದ ವ್ಯಾಖ್ಯೆಗೆ ಒಂದು ಉದಾಹರಣೆ ಗಜಾನನ ಈಶ್ವರ ಹೆಗಡೆಯವರ “ರಸರಾಮಾಯಣ”. 

“ರಸರಾಮಾಯಣ” ಸ್ವತಂತ್ರವಾದ ಮತ್ತು ಪರಸ್ಪರ ಸಂಬಂಧಿತವಾದ 180 ಪದ್ಯಗಳಿರುವ ವಿಶಿಷ್ಟ ಕಾವ್ಯ-ಕೃತಿ. ಇಲ್ಲಿ ರಾಮಾಯಣದ ಕಥೆ ಹಿನ್ನೆಲೆಯಲ್ಲಿದ್ದು ರಾಮಾಯಣದ ಕಥಾಪ್ರಸಂಗಗಳ ವಿಶೇಷತೆಯನ್ನು ಪದ್ಯಗಳು ಸೂಚಿಸುತ್ತವೆ. ರಾಮ “ರಸರಾಮಾಯಣ” ಕೃತಿಯ ಸ್ಥಾಯೀಭಾವವಾಗಿ ಅಕ್ಷರ.ರಸರಾಮಾಯಣ”ದ ಪ್ರತಿಯೊಂದು ಪದ್ಯವೂ “ಎದೆಯ ಮೊಗ್ಗರಳಿ ಮದು ದ್ರವಿಸಲಿ” ಎನ್ನುವ ಹಿತವಾದ ಮನಸ್ಥಿತಿಯ ಅಭಿವ್ಯಕ್ತಿಯಾಗಿ ಮಧುರ. ಭಾರತೀಯ ಚಿಂತನೆ ಒಳಗೊಳ್ಳುವ ಜಗನ್ಮಾತೆಯ ಪರಿಕಲ್ಪನೆಯಲ್ಲಿ ಸರಸ್ವತಿ ಮೊಟ್ಟಮೊದಲನೆಯವಳು. “ರಸರಾಮಾಯಣ”ದ ಆರಂಭದ ಪದ್ಯ ಸರಸ್ವತಿ, ಗಣಪತಿಯರನ್ನು ಸ್ತುತಿಸುವ “ರಸವತಿ”

“ರಸವತಿ ಸರಸವತಿ ಸರಸ್ವತಿ| ಆಯ್ದು ನನ್ನಿಂದ ತಿದ್ದಿ ಬರೆಸಿದ ರಸರಾಮಾಯಣ|| ನನ್ನ ಕುಲದೈವ ಸಿದ್ಧಿವಿನಾಯಕ| ಕಾವೂರ ಗಣಪ| ತನ್ನ ಹಿರಿಮೆ ಕಂದ ನಿನಗಿರಲೆಂದು| ಚಂದ ಚಂದದ ನುಡಿಯಲ್ಲಿ| ಮಂದಹಾಸದಿ ಹಾರೈಸಿದ|| ನೆಲದೊಳಗಿನ ಜಲ ಕಲ್ಪವೃಕ್ಷದ ಕಂಕುಳಲ್ಲಿ ತೂಗಾಡುವುದ ಕಂಡೆ{ ಎದೆಯ ಮೊಗ್ಗರಳಿ ಮಧು ದ್ರವಿಸಲಿ||” 

ಎದೆಯ ಮೊಗ್ಗರಳಿ ಮಧು ದ್ರವಿಸಲಿ ಎಂದು ಪ್ರಾರ್ಥಿಸುವ ಈ “ರಸವತಿ” ಪದ್ಯ ಸರಸ್ವತಿಯನ್ನೂ, ಗಣಪತಿಯನ್ನೂ, ಮಣ್ಣಿನ ಕಂಪಿನ ಪರಂಪರೆಯನ್ನೂ ಒಟ್ಟಾಗಿ ಚಿತ್ರಿಸುತ್ತಿದೆ. ಅದರ ಮೂಲಭಾವ ತಾಯ್ತನದ ವಾತ್ಸಲ್ಯ ಎಂದು ಸೂಚಿಸುತ್ತಿದೆ. ಯಜುರ್ವೇದದಲ್ಲಿ “ಯಸ್ತೇ ಸ್ತನಃ ಶಶಯೋ ಯೋ ಮಯೋಭೂಃ | ಯೇನ ವಿಶ್ವಾ ಪುಷ್ಯಸಿ ವಾರ್ಯಾಣಿ | ಯೋ ರತ್ನಧಾ ವಸುವಿದ್ಯಃ ಸುದತ್ರಃ | ಸರಸ್ವತಿ ತಮಿಹ ಧಾತವೇsಕಃ ||” ಎನ್ನುವ ಸರಸ್ವತಿ-ಸೂಕ್ತ ಒಂದಿದೆ. ಅದರ ಭಾವಾರ್ಥ ಸರಸ್ವತಿ ಹಾಲು ಕುಡಿಸುವ ತಾಯಿ. ಅವಳು ಕುಡಿಸುವುದು ಕರ್ಮಫಲವಾದ ಹಾಲು; ಅದು ಸುಸಹಿತವಾದದ್ದು, ಏನೇನು ಒಳ್ಳೆಯದು ಇವೆಯೋ ಅವನ್ನೆಲ್ಲಾ ಒಳಗೊಂಡದ್ದು, ಸರ್ವಪೋಷಕ, ದೈವಿಕವಾದದ್ದೆಲ್ಲದರ ರಕ್ಷಕ; ಸಹಜವಾಗಿ ರಸವತಿ, ಸಂತೋಷವನ್ನುಂಟುಮಾಡುವ ಸರಸವತಿ. 

ಪದ್ಯದ “ರಸವತಿ ಸರಸವತಿ| ಆಯ್ದು ನನ್ನಿಂದ ತಿದ್ದಿ ಬರೆಸಿದ ರಸರಾಮಾಯಣ” ಎನ್ನುವ ಸಾಲಿನ ಒಂದು ಅರ್ಥ ‘ತಾಯಿ ಪುಟ್ಟ ಮಗುವಿನ ಕೈಹಿಡಿದು ಬರೆಸಿದಂತೆ ಸರಸ್ವತಿ ಕವಿಯ ಕೈಹಿಡಿದು ಬರೆಸಿದುದು, ಬರೆದುದನ್ನು ತಿದ್ದಿ ತಿದ್ದಿ ಬರೆಸಿದುದು ರಸರಾಮಾಯಣ. ಈ ಆಯ್ಕೆ ಅವಳದೇ ಎಂದಾಗ ರಸವತಿ ಸರಸವತಿ ಸರಸ್ವತಿಯೇ ರಸರಾಮಾಯಣ. ರಸರಾಮಾಯಣವೇ ರಸವತಿ ಸರಸವತಿ ಸರಸ್ವತಿ. ರಸರಾಮಾಯಣದ ಆಶಯ, ಸ್ವರೂಪವೇ ಎದೆಯ ಮೊಗ್ಗರಳಿ ಮಧು ದ್ರವಿಸಲಿ’ ಎಂದಾಗುತ್ತದೆ. ಎರಡನೆಯ ಅರ್ಥ – ರಸವತಿ, ಸರಸವತಿ ಎಂಬುದು ಸರಸ್ವತಿಯ ಸಾರಲಕ್ಷಣಗಳು; ಅವಳು ಎದೆಯ ಮೊಗ್ಗರಳಿ ಮಧು ದ್ರವಿಸಲಿ ಎಂಬ ಮನವಿಗೆ ಸ್ಪಂದಿಸುವ ರೀತಿಯೇ ಮಧು ಸ್ರವಿಸುವ ಹಾಗೆ ರಾಮಾಯಣವನ್ನು ಭಾವಿಸುವಂತೆ ಮನಸ್ಸನ್ನು ತಿದ್ದುವುದು ಎಂದಾಗುತ್ತದೆ.

ಪದ್ಯದಲ್ಲಿ “ಕಾವೂರ ಗಣಪ ಸಿದ್ಧಿವಿನಾಯಕ| ಕಂದ ನನ್ನ ಹಿರಿಮೆ ನಿನಗಿರಲೆಂದು ಹಾರೈಸಿದ” ಎಂದೂ ಇದೆ. ಮಹಾಭಾರತವನ್ನು ತನ್ನ ಮನಸ್ಸಿನಲ್ಲಿ ಮೂಡಿದ ಹಾಗೆ ಬರೆದುಕೊಳ್ಳುವವರು ಇದ್ದರೆ ಚೆಂದ ಎಂದು ವ್ಯಾಸ ಯೋಚಿಸಿದಾಗ ಅವರ ಸಹಾಯಕ್ಕೆ ಬಂದವನು ಗಣಪತಿ. ಅವನು ಸಹಜವಾಗಿ ಕಾವು=ಕಾಪು, ರಕ್ಷಣೆ; ಊರು=ಆಧಾರ ಎರಡೂ ಆದ ಕಾವೂರ ಗಣಪ. ಗಣಪತಿ ಕವಿಯಿಂದ ಸಾಧಿಸಬೇಕಾದ ಹಿರಿಮೆ ಮಧು ದ್ರವಿಸುವಿಕೆ; ರಸವತಿ ಸರಸವತಿ ಸರಸ್ವತಿಯಾದ ರಸರಾಮಾಯಣದ ಮೂಡುವಿಕೆ. ಅದಕ್ಕೆ ಅವನ ಮಂದಹಾಸದ ಚೆಂದ-ನುಡಿಗಳ ಹಾರೈಕೆ ಒಂದು ಪ್ರತೀಕ. ಇನ್ನೊಂದು ಪ್ರತೀಕ ಕಲ್ಪವೃಕ್ಷದ ಕಂಕುಳಲ್ಲಿ ಎಳನೀರು ಗೊಂಚಲಾಗಿ ತೂಗಾಡುವುದು. ಇದನ್ನು ಗಮನಿಸುತ್ತಾ ಹೆಚ್.ಎಸ್.‌ ವೆಂಕಟೇಶಮೂರ್ತಿಯವರು ವಾಲ್ಮೀಕಿ “ರಾಮಾಯಣ ರಸರಾಮಾಯಣ ಕೃತಿಯಲ್ಲಿ ಹೇಗೆ ನೆಲದೊಳಗಿನ ಜಲ ಕಲ್ಪವೃಕ್ಷದ ಕಂಕುಳಲ್ಲಿ ತೂಗಾಡುವ ಕಾವ್ಯವಾಗಿದೆ ಎಂಬುದನ್ನು ಕಣ್ಕಾಣಿಕೆಯ ಚಿತ್ರವಾಗಿ ಕಲ್ಪಿಸಿಕೊಡುತ್ತಿದೆ. ನೆಲದೊಳಗಿನ ಜಲ ಕಲ್ಪವೃಕ್ಷದ ಕಂಕುಳಲ್ಲಿ ತೂಗಾಡುತ್ತಿದೆಯಂತೆ! ತಾಯಿಯೊಬ್ಬಳು ತನ್ನ ಕೂಸನ್ನು ಪ್ರೀತಿಯಿಂದ ಕಂಕುಳಲ್ಲಿ ಎತ್ತಿಹಿಡಿದ ಮಾತೃವಾತ್ಸಲ್ಯದ ಅಚ್ಚರಿಯ ಚಿತ್ರವಲ್ಲವೇ!” ಎಂದು ಉದ್ಗರಿಸುತ್ತಾರೆ.   

ಪದ್ಯದ ಪಲ್ಲವಿ “ರಸವತಿ ಸರಸವತಿ ಸರಸ್ವತಿ”. ವನಸ್ಪತಿಗಳೆಲ್ಲ ರಸವುಳ್ಳದ್ದಾಗಿ ರಸವತಿ. ಆ ರಸ ಮಣ್ಣಿನಿಂದ ಹೀರಿಕೊಂಡು ರೂಪಾಂತರಿಸಿದ ಮತ್ತು ಇಡೀ ವನಸ್ಪತಿಯನ್ನು ಆವರಿಸಿರುವ ಜೀವಜಲ. ಅದರ ಅಂತಿಮ ರೂಪ ವನಸ್ಪತಿಯಲ್ಲಿ ತೂಗಾಡುವ ಫಲಗಳು. ಇಡೀ ಜೀವಜಾತಕ್ಕೆ ಯಾವ ಯಾವುದೋ ವನಸ್ಪತಿ, ಜೀವಾಧಾರ; ಅಂದರೆ ಕಲ್ಪವೃಕ್ಷ, ಪ್ರತಿಯೊಂದು ವನಸ್ಪತಿಯೂ ಮೂಕಂ ಕರೋತಿ ವಾಚಾಲಂ ಎಂದೆಲ್ಲಾ ಹೇಳುವಂತೆ ಬೀಜರೂಪದಲ್ಲಿ ಸ್ಥಗಿತವಾಗಿದ್ದ ಚಿಗುರುವ ಶಕ್ತಿ ಸಾಮರ್ಥ್ಯವನ್ನು ಪ್ರಕಾಶ ಪಡಿಸುವ, ಚರಾಚರಗಳಿಗೆ ಸ್ವ-ಅಭಿವ್ಯಕ್ತಿ ಕೊಡುವ ವೃದ್ಧಿಕಾರಕವಾದ ಮಧು ದ್ರವಿಸುವ ಅಂತಶ್ಶಕ್ತಿಯೇ ಆಗಿದೆ,

ರಸರಾಮಾಯಣ ಕೃತಿಯಲ್ಲಿ “ರಾಮಾಯಣ” ಎನ್ನುವ ಪದ್ಯ ಇದೆ. ಅದು “ಗಗನದಲ್ಲಾಡುವ ಜೋಡಿ ಹಕ್ಕಿ| ಗುರಿ ತಲುಪುವ ಬಾಣ| ಉರುಳಿ ನೆಲದಲ್ಲೊಂದು| ಆಕ್ರಂದನ| ಕಂಡ ಕವಿ ಹೃದಯ ಕರಗಿ| ಹಾಡಿದ್ದು ರಾಮಾಯಣ| ಎದೆಯ ಮೊಗ್ಗರಳಿ ಮಧು ದ್ರವಿಸಲಿ||” ಎನ್ನುತ್ತದೆ. ಪದ್ಯ ಬೇಟೆಗಾರನೊಬ್ಬ ಜೋಡಿ ಹಕ್ಕಿಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಹೆಣ್ಣು ಹಕ್ಕಿಗೆ ವಿರಹವನ್ನು ಉಂಟುಮಾಡಿದ ವಿಷಾದದ ಘಟನೆಗೆ ಸ್ಪಂದಿಸಿದ ವಾಲ್ಮೀಕಿಯ ಕವಿ – ಹೃದಯವನ್ನು ಕುರಿತು ಹೇಳುತ್ತಿದೆ. ಯಾವುದೇ ಕಾವ್ಯ ರಚನೆಯ ಮೂಲಸ್ರೋತ ಸಹೃದಯ ಕವಿ ಸ್ಪಂದನೆಯೇ. 

ಯಾವುದೋ ಒಂದು ಸಂದರ್ಭದಲ್ಲಿ ಯಾವುದೋ ಒಂದು ಮೂಕ ಜೀವದ ಅಸ್ತಿತ್ವದ ಮೌಲ್ಯಕ್ಕೆ ಸ್ಪಂದಿಸಿದ ವಾಲ್ಮೀಕಿಯ ಮನಸ್ಸು ಬದುಕುವ ಹಕ್ಕಿಯಂಥವುಗಳಿಗೆಲ್ಲಾ, ಅವುಗಳ ಅಸ್ತಿತ್ವಕ್ಕ ಧಕ್ಕೆ ಒದಗಿದ ಸಂದರ್ಭಗಳಲ್ಲೆಲ್ಲಾ ಸೂಕ್ತವಾಗಿ ಸ್ಪಂದಿಸುವ ಭಾವ, ವಿಚಾರ, ಮೌಲ್ಯಗಳ ಗ್ರಹಿಕೆಯನ್ನು ಒಳಗೊಳ್ಳುವ ಆವರಣವನ್ನು ರಾಮಾಯಣ ಕಾವ್ಯರಚನೆಯ ಮೂಲಕ ರೂಪಿಸಿಕೊಟ್ಟಿದೆ. ಮೂಕ ಹಕ್ಕಿಯ ರೋದನಕ್ಕೆ ದೊರೆತ ಮಹಾಕಾವ್ಯದ ವ್ಯಾಪ್ತಿಯ ಸಹೃದಯ ಸ್ಪಂದನೆ ರಾಮಾಯಣ! ಇದರ ಆಶಯ ಸಹಜವಾಗಿ ತಾಯ್ತನದ ಪರಮ ಮೌಲ್ಯ ಆದ ಎದೆಯ ಮೊಗ್ಗರಳಿ ಮಧು ದ್ರವಿಸಲಿ ಎನ್ನುವುದೇ ಆಗಿರುತ್ತದೆ. 

ಎದೆಯ ಮೊಗ್ಗರಳಿ ಮಧು ದ್ರವಿಸಲಿ ಎನ್ನುವ ಆಶಯವೇ ತಾಯ್ತನದ ಮೂಲಭೂತ ಸ್ವರೂಪ, ಅದು ನೆಲದಾಳದಿಂದ ಬದುಕನ್ನು ಮೇಲಕ್ಕೆತ್ತುತ್ತದೆ, ಬದುಕನ್ನು ರಸಭರಿತವಾಗಿಸುತ್ತದೆ, ವೃದ್ಧಿಕಾರಕ ಅಂತಶ್ಶಕ್ತಿಯನ್ನು ಬದುಕಿಗೆ ಒದಗಿಸಿಕೊಡುತ್ತದೆ. ಮುಖ್ಯವಾಗಿ ಸುತ್ತಲಿನ ಚರಾಚರ ಜಗತ್ತಿಗೆ, ಜೀವ-ಅಜೀವ ಪ್ರಪಂಚಕ್ಕೆ ಸೂಕ್ತವಾಗಿ ಸ್ಪಂದಿಸುವ ಸಹೃದಯ ವ್ಯಕ್ತಿತ್ವವನ್ನು ರೂಢಿಸುತ್ತದೆ. ಅದಕ್ಕೆ ಅಸಾಧ್ಯವಾದದ್ದೇ ಇಲ್ಲ. मूकं करोति वाचालं पंगुं लंघयते गिरिं। यत्कृपा तमहं वन्दे परमानंद माधवम्।। ಎಂದು ಶ್ಲೋಕವೊಂದು ಹೇಳುವಂತೆ ಮೂಕನನ್ನು ವಾಗ್ವಿದನನ್ನಾಗಿಸುತ್ತದೆ, ಹೆಳವನನ್ನು ಪರ್ವತಾರೋಹಿ ಆಗಿಸುತ್ತದೆ, ವ್ಯಕ್ತಿಯನ್ನು ಪರಮಾನಂದಿಯನ್ನಾಗಿಸುತ್ತದೆ. ಸ್ಥಗಿತವಾಗಿರುವ ಬದುಕನ್ನು ಸಂತೃಪ್ತ ಸ್ವತಂತ್ರ ಸ್ವಾವಲಂಬಿ ಸೃಜನಶೀಲ ಮಾನವೀಯ ಬದುಕನ್ನಾಗಿಸುತ್ತದೆ. ಇದು ತಾಯ್ತನದ ಮುಖ್ಯವಾದ ಸಾರ. 

ರಸರಾಮಾಯಣ ಕೃತಿಯಲ್ಲಿ ತಾಯ್ತನದ ಬಹುಮುಖಿ ಆಯಾಮಗಳನ್ನು ಪರಿಚಯಿಸುವ ಹಲವಾರು ಪದ್ಯಗಳಿವೆ. ಅವುಗಳಲ್ಲಿಒಂದು “ಹರಿದಂತೆ ಗಂಗಾ”:

ಆಟವಾಡುವ ಕಾಲ| ಮಾಟ ಸೆಳೆಯುವ ಕಾಲ| ಸಾಟಿಯಿಲ್ಲದ ಪ್ರೀತಿ| ಹಿರಿಯರಲಿ ಕಂಡ ಕಾಲ|| ಆತುಕೊಂಡನು ರಾಮ| ಬೇಕೆನುತ ಕೌಶಿಕನು| ಯಜ್ಞರಕ್ಷಣೆಗಿವನೆ ವರಯೋಗ್ಯನೆಂದು|| ಬ್ರಹ್ಮರ್ಷಿ ಹಿತವೊಂದೆ| ಮತಿಯ ತುಂಬ| ಹೊರಟಿದ್ದ ಕೈಹಿಡಿದು| ಪ್ರಾಣಬಿಂಬ|| ವರವಸಿಷ್ಠನು ನಿಂತ| ನಡೆದ ಕೌಶಿಕನು| ಹಿಮಶಿಖರದೆದೆಯಿಂದ| ಹರಿದಂತೆ ಗಂಗಾ| ಎದೆಯ ಮೊಗ್ಗರಳಿ ಮಧು ದ್ರವಿಸಲಿ|| 

ಈ ಪದ್ಯದ ಹಿನ್ನೆಲೆಯಲ್ಲಿ ʼಕೌಶಿಕ ದಶರಥನ ಆಸ್ಥಾನಕ್ಕೆ ಬಂದಿದ್ದಾನೆ. ಲೋಕ ಕಲ್ಯಾಣಕ್ಕಾಗಿ ಅವನು ಮಾಡಲು ಬಯಸಿದ ಯಜ್ಞಕ್ಕೆ ರಾಕ್ಷಸರಿಂದ ವಿಘ್ನ ಆಗುತ್ತಿದೆ. ಅದನ್ನು ನಿವಾರಿಸಿ ಯಜ್ಞದ ರಕ್ಷಣೆ ಮಾಡಬಲ್ಲವನು ರಾಮ ಮಾತ್ರ ಎಂದು ರಾಮನನ್ನು ತನ್ನೊಂದಿಗೆ ಕರೆದೊಯ್ಯಲು ಬಯಸಿದ್ದಾನೆʼ ಎನ್ನುವ ವಿಷಯ ಇದೆ. ಹೀಗೆ ಕರೆದೊಯ್ಯಲು ಬಂದಿರುವ ರಾಮ ಹೇಗಿದ್ದಾನೆ? ಅವನಿಗೆ “ಸಾಟಿಯಿಲ್ಲದ ಪ್ರೀತಿ ಹಿರಿಯರಲ್ಲಿ” ಇದೆ. ಅಪ್ಪ, ಅಮ್ಮ, ಬಂಧು ಬಾಂಧವರು, ಹಿರಿಯರಾದ ಗುರುಜನರು, ಮಂತ್ರಿ ಮಾನ್ಯರು ಇವರೆಲ್ಲರ ಪ್ರೀತಿಯನ್ನು ಗೌರವಿಸುವ ಜವಾಬ್ದಾರಿಯುತ ನಡೆ ಇದೆ. ಅವನದು “ಮಾಟ ಸೆಳೆಯುವ ಕಾಲ”. ಅವನಿಗೆ ಸುಂದರವಾದದ್ದು ಏನು ಕಂಡರೂ ಅದರ ಆಕರ್ಷಣೆಗೆ ಒಳಗಾಗುವ ವಯಸ್ಸು, ಮನಸ್ಸು ಸಹ ಇದೆ. ಆದರೆ ಅವನದು ಇನ್ನೂ ಆಟವಾಡುವ, ಹುಡುಗಾಟವಾಡುವ ವಯಸ್ಸು ಎನ್ನುತ್ತಿದೆ ಪದ್ಯ.

ರಾಮ ಹಾಗಿದ್ದರೂ ಕೌಶಿಕ ಮಾತ್ರ ಈ ರಾಮನೇ ತನ್ನ ಯಜ್ಞದ ರಕ್ಷಣೆ ಮಾಡಬಲ್ಲವನು ವರ ಯೋಗ್ಯನು ಎಂದು ಅವನನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಯಾಕೆ? ಪದ್ಯ ಹೇಳುತ್ತಾ ಇದೆ ಕೌಶಿಕನು ಹಿತವೊಂದೆ ಮತಿಯ ತುಂಬ ಇರುವ ಬ್ರಹ್ಮರ್ಷಿ, ವಿಶ್ವಕ್ಕೆಲಾ ಮಿತ್ರ ಆಗುವ ವಿಶ್ವಾಮಿತ್ರ ಎಂದು. ಮಾಟ ಎಂದರೆ ಸುಂದರವಾದದ್ದು. ಸುಂದರವಾದದ್ದು ಎನ್ನುವುದಕ್ಕೆ ವ್ಯವಸ್ಥಿತವಾದದ್ದು ಎನ್ನುವ ಅರ್ಥವೂ ಇದೆ. ಸುಂದರವಾದುದರ ಕಡೆಗೆ ರಾಮನಿಗೆ ಆಕರ್ಷಣೆ ಇದೆ ಎಂದರೆ ಅವನು ಕಾಲೋಚಿತವಾದುದನ್ನು, ಸಮಯ ಸಂದರ್ಭಕ್ಕೆ ಸೂಕ್ತವಾದುದನ್ನು ಗುರುತಿಸ ಬಲ್ಲ, ಅದನ್ನು ತನ್ನದನ್ನಾಗಿಸಿಕೊಳ್ಳಬಲ್ಲ ಎಂದರ್ಥ. 

ಮನೆ ಬಿಟ್ಟು ಹೊರಗೆ ಬಂದ ಹೊರತೂ, ಅನಿರೀಕ್ಷಿತವಾದ ಸಂದರ್ಭಗಳಿಗೆ ಮುಖಾಮುಖಿ ಆದ ಹೊರತೂ ಸೂಕ್ತವಾದದ್ದು ಯಾವುದು ಎನ್ನುವುದನ್ನು ಯಾರಿಗೂ ಕಂಡುಕೊಳ್ಳುವುದಿಕ್ಕೆ ಆಗುವುದಿಲ್ಲ. ಅಂಥ ಸಂದರ್ಭಗಳನ್ನು ಕೌಶಿಕ ʼಮಾಟ ಸೆಳೆಯುವ ಕಾಲʼದ ರಾಮನಿಗೆ ಒದಗಿಸಿಕೊಡುವುದಕ್ಕೆ, ಅವುಗಳನ್ನು ಎದುರಿಸುವುದಕ್ಕೆ ಬೇಕಾದ ಸಿದ್ಧತೆ, ಅರ್ಹತೆಗಳನ್ನು ಕಲ್ಪಿಸಿಕೊಡುವುದಕ್ಕೆ ಬಂದಿದ್ದಾನೆ. ತಾಯಿಯ ಮನಸ್ಸು ಇದ್ದವರು ಮಾತ್ರ ಇಂಥ ನಡೆಯನ್ನು ತೋರುತ್ತಾರೆ. ಅಂಥವರಿಗೆ ಯಾರಿಗೆ ತನ್ನಿಂದಲಾಗಲೀ ಅಥವಾ ಇತರರಿಂದಲಾಗಲೀ ಒಳ್ಳೆಯದು ಆದರೂ ಅದು ಸಂತೋಷದ ವಿಷಯವೇ. 

ಪದ್ಯದ ಹೆಸರು “ಹರಿದಂತೆ ಗಂಗಾ”. ಗಂಗೆ ತಾನೇ ತಾನಾಗಿ ಭೂಮಿಗೆ ಬಂದ ನದಿಯಲ್ಲ. ಅದಕ್ಕೊಂದು ಕಥೆ ಇದೆ. ಸಗರ ಎನ್ನುವವನೊಬ್ಬ ರಘುವಂಶದ ರಾಜ. ಅವನ ಯಜ್ಞದ ಕುದುರೆಯನ್ನು ದೇವೇಂದ್ರ ಕದ್ದು ಕಪಿಲ ಮುನಿಯ ಆಶ್ರಮದಲ್ಲಿ ಇಟ್ಟ. ಅದು ತಪಸ್ಸು ಮಾಡುತ್ತಿದ್ದ ಋಷಿಯ ಗಮನಕ್ಕೆ ಬಂದಿರಲಿಲ್ಲ. ಸಗರನ ಅರವತ್ತೂ ಸಾವಿರ ಮಕ್ಕಳು ಯಜ್ಞಾಶ್ವವನ್ನು ಹುಡುಕುತ್ತಾ ಈ ಮುನಿಯ ಆಶ್ರಮಕ್ಕೆ ಬಂದರು. ಕುದುರೆಯನ್ನು ನೋಡಿ ಹಿಂದೆ ಮುಂದೆ ಆಲೋಚಿಸದೆ ಆ ಮುನಿಯೇ ಅದನ್ನು ಕದ್ದಿದ್ದಾನೆ ಎಂದು ಶಿಕ್ಷಿಸಲು ಹೊರಟರು ಋಷಿಯ ತಪೋಗ್ನಿಯಲ್ಲಿ ಸುಟ್ಟು ಭಸ್ಮ ಆದರು. ಅವರಿಗೆ ಸದ್ಗತಿ ಸಿಗಲಿಲ್ಲ. ಅದನ್ನು ಅವರಿಗೆ ದೊರಕಿಸಿ ಕೊಡುವುದಕ್ಕೆ ಗಂಗಾನದಿಯನ್ನು ಸುರಲೋಕದಿಂದ ಭೂಲೋಕಕ್ಕೆ ಕರೆತರಬೇಕು ಎಂದು ತಿಳಿದವರು ಸಲಹೆ ಕೊಟ್ಟರು. 

ಸಗರನ ಮುಂದಿನ ತಲೆಮಾರಿನ ಭಗೀರಥ ಎನ್ನುವವನು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿ ಗಂಗೆ ಭೂಮಿಗೆ ಹರಿದು ಬರುವ ವರವನ್ನು ಪಡೆದ. ರಭಸದಿಂದ ಬಂದ ಗಂಗೆ ಶಿವನ ಜಟೆಯಲ್ಲಿ ಸಿಕ್ಕಿ ಬಿದ್ದಿತು. ಭಗೀರಥ ಪುನಃ ತಪಸ್ಸು ಮಾಡಿ ಶಿವನ ಜಟೆಯಿಂದ ಅದನ್ನು ಹೊರಗೆ ಕರೆತಂದ. ಅದು ಶಿವನ ತಲೆಯ ಮೇಲಿಂದ ಚಿಲುಮೆಯಂತೆ ಹೊರಬಿದ್ದು ಹರಿದು ಬರುವಾಗ ಜಹ್ನು ಋಷಿಯ ಆಶ್ರಮದ ಮೇಲೆ ನುಗ್ಗಿ ಅದನ್ನು ಹಾಳುಮಾಡಿತು. ಅದನ್ನು ಸಂಪೂರ್ಣವಾಗಿ ಜಹ್ನು ಋಷಿ ಕುಡಿದುಬಿಟ್ಟ. ಮತ್ತೆ ಅವನನ್ನು ಪ್ರಾರ್ಥಿಸಿದಾಗ ಗಂಗೆಯನ್ನು ಅವನು ತನ್ನ ಕಿವಿಯಿಂದ ಹೊರಗೆ ಹರಿಸಿದ. ಅದನ್ನು ಆ ಅರವತ್ತು ಹಿರಿಯರ ಬೂದಿಯ ಮೇಲೆ ಹರಿಸಿ ಅವರಿಗೆ ಸದ್ಗತಿ ದೊರೆಯುವಂತೆ ಭಗೀರಥ ಮಾಡಿದ. 

ಇದು ಗಂಗೆಯ ತಾಯ್ತನದ ಭಾವವನ್ನೂ ಹೇಳುತ್ತದೆ, ಭಗೀರಥನ ತಾಯ್ತನದ ಮನಸ್ಸನ್ನು ಕುರಿತೂ ಹೇಳುತ್ತದೆ. ಹಾಗೆಯೇ ಬದುಕು ತನಗೆ ತಾನೇ ಅರಳುವುದಿಲ್ಲ, ಮಧು ದ್ರವಿಸುವುದಿಲ್ಲ. ಅದಕ್ಕೆ ಹರಿಯುವ ಹರಿಸುವ ಗಂಗೆಯ ಪರಿಶ್ರಮ ಬೇಕಾಗುತ್ತದೆ. ಇದು ವೈಯಕ್ತಿಕ ಹಾಗೂ ಸಾಮುದಾಯಿಕ ನೆಲೆಯೆರಡರಲ್ಲೂ ನಡೆಯಬೇಕು ಎಂದೂ ಹೇಳುತ್ತದೆ. ಗಂಗೆ ಪರಿಶುದ್ಧತೆಗೆ, ಎಲ್ಲಾ ರೀತಿಯ ಮಾಲಿನ್ಯವನ್ನು ನಿವಾರಿಸುವುದಕ್ಕೆ ಒಂದು ಸಂಕೇತ. ಇದು ಬ್ರಹ್ಮರ್ಷಿ ದೀರ್ಘಕಾಲದ ತಪಸ್ಸಿನಿಂದ ಕಂಡುಕೊಂಡ ಮತ್ತು ರೂಢಿಸಿಕೊಂಡ ಹಿತದ ಮತಿ. ಇದು ರಾಮನ ಸ್ವಾನುಭವದ ಹಿತದ ಮತಿ ಆಗಬೇಕು ಎಂದು ಕೌಶಿಕ ರಾಮನನ್ನು ಕೈಹಿಡಿದು ಆತುಕೊಂಡಿದ್ದಾನೆ. “ಹೊರಟಿದ್ದಾನೆ ಕೈಹಿಡಿದು| ಪ್ರಾಣಬಿಂಬ”!

ಕೌಶಿಕ ಬ್ರಹ್ಮರ್ಷಿಯಾದದ್ದೂ ಒಂದು ವಿಶಿಷ್ಟವಾದ ಸುದೀರ್ಘವಾದ ಪ್ರಯತ್ನದ ಕಥೆಯೇ. ಅದಕ್ಕೆ ಸಹಕಾರಿಯಾದದ್ದು ಬ್ರಹ್ಮರ್ಷಿಯಾದ ವಸಿಷ್ಠನೇ ಎನ್ನುವುದು ಕುತೂಹಲಕಾರಿಯಾದದ್ದೇ. ತಾನು ಎಷ್ಟು ರೀತಿಯಲ್ಲಿ ವಿನಂತಿಸಿದರೂ ಅವನಲ್ಲಿ ಇದ್ದ ನಂದಿನಿ ಧೇನುವನ್ನು ವಸಿಷ್ಠ ಕೊಡಲು ಒಪ್ಪಲಿಲ್ಲ ಎಂದು ಕೌಶಿಕ ಎಷ್ಟು ಬಾರಿ ಅಸ್ತ್ರ ಶಸ್ತ್ರಗಳೊಂದಿಗೆ ವಸಿಷ್ಠನ ಆಶ್ರಮದ ಮೇಲೆ ಧಾಳಿ ಮಾಡಿದರೂ ಅದನ್ನು ನಿವಾರಿಸಿಕೊಂಡು ಕೌಶಿಕ ಮತ್ತಷ್ಟು ಧಾಳಿ ಮಾಡಲು ವಸಿಷ್ಠ ಪ್ರೇರೇಪಿಸುತ್ತಿದ್ದ. ಕೌಶಿಕನ ಮನಸ್ಸು ವಿಶ್ವಾಮಿತ್ರ ಆಗಿ ರೂಪಾಂತರ ಆಗುವವರೆಗೂ ವಸಿಷ್ಠ ಕೌಶಿಕನನ್ನು ತನ್ನ ಆಶ್ರಮದ ಮೇಲೆ ಧಾಳಿಮಾಡಲು ಪ್ರೇರೇಪಿಸುತ್ತಲೇ ಇದ್ದ. 

ಬ್ರಹ್ಮರ್ಷಿ ಆದ ವಸಿಷ್ಠ ಹಿಮಾಲಯದಂತೆ ಸ್ಥಿರ, ತನ್ನನ್ನು ನೋಡಿ ಯಾರು ಎದೆಯ ಮೊಗ್ಗರಳಿಸಿಕೊಂಡರೂ ಅವನಿಗೆ ಸಂತೋಷವೇ. ಕೌಶಿಕ ಹಾಗಲ್ಲ. ಅವನು ದೇವರ ಉತ್ಸವಮೂರ್ತಿಯಂತೆ. ಮನೆಬಾಗಿಲಿಗೆ ಹೋಗಿಯಾದರೂ ಹಿತದ ಮಾರ್ಗವನ್ನು ತೋರುವ ಚೈತನ್ಯದ ಚಿಲುಮೆ. ವಸಿಷ್ಠ, ಕೌಶಿಕರು ಎದೆಯ ಮೊಗ್ಗರಳಿಸಿ ಮಧು ದ್ರವಿಸುವ ರೀತಿಗೆ, ತಾಯ್ತನದ ಭಾವಕ್ಕೆ ಎರಡು ವಿಶಿಷ್ಟ ಪ್ರತೀಕಗಳು. ಇವರಿಬ್ಬರದಂತೆ ದಶರಥ ಮತ್ತು ಮಂಥರೆಯ ತಾಯ್ತನದ ಭಾವವನ್ನೂ ಗಮನಕ್ಕೆ ತರುವ ಪದ್ಯ ರಸರಾಮಾಯಣದಲ್ಲಿದೆ ಅದು “ನೆರಳು”:

ಭರತ ರಾಮರಲ್ಲಿ ವಾತ್ಸಲ್ಯ|  ನಿಡುಗಾಲ ಬದುಕಲೆಂಬ ಪ್ರೀತಿ| ಋಷಿಶಾಪ ಮನದಾಳದಲ್ಲಿ| ಬೆಂಬಿಡದ ಬ್ರಹ್ಮಾಸ್ತ್ರ|  ಹಗಲಿರುಳು ಜಾಗರಣ||  ವ್ಯಾಮೋಹಿ ಮಂಥರೆಗೆ| ಮಂದವಾಗಿತ್ತು ಚಿಂತನೆಯ ದೃಷ್ಟಿ| ಸ್ವರ್ಗದಿಂದಿಳಿದು ಜಾರಿದ್ದ ಪತಿತೆ|| ಇವಳ ಮಾತಿನ ಸಾಣೆಯಲ್ಲಿ| ಕೈಕೇಯಿ ನಾಲಿಗೆ ಮಸೆದ ಖಡ್ಗ| ದಶರಥನ ಹೃದಯದಲ್ಲೂರಿ| ರಾಮನಗಲಿಕೆ ಗೆಲಿಸಿತು ಋಷಿಶಾಪ|| ಗಗನದಲ್ಲಾಡುವ ನುಡಿಹಕ್ಕಿ| ತನ್ನಡಿ ಗುರುತು ತೋರದು| ಚಿಗುರು ತಾಯಿಯ ಬಯಕೆ| ಎದೆಯ ಮೊಗ್ಗರಳಿ ಮಧುದ್ರವಿಸಲಿ||

ದಶರಥ ತಂದೆಯಾದರೂ ಅವನದು ತಾಯಿಯ ಕರುಳು. ಅವನಿಗೆ ಭರತ ಮತ್ತು ರಾಮರಿಬ್ಬರಲ್ಲಿ ಸಮಾನವಾದ ವಾತ್ಸಲ್ಯ. ಇಬ್ಬರೂ ದೀರ್ಘಕಾಲ ಬದುಕಿ ಬಾಳಬೇಕು ಎನ್ನುವುದು ಅವನ ಅಭಿಲಾಷೆ. ಅದನ್ನು ಪದ್ಯ ಚಿಗುರು ತಾಯಿಯ ಬಯಕೆ ಎಂದು ವರ್ಣಿಸುತ್ತಿದೆ. ತಾಯ್ತನದ ಭಾವವೇ ಚಿಗುರುವುದು. ಅದರ ಒಂದು ರೂಪ ಮಕ್ಕಳನ್ನು ಪಡೆಯುವುದು, ಮುಂದುವರೆಯುತ್ತಾ ಹೋಗುವ ಸಂತಾನೋತ್ಪತ್ತಿಯನ್ನು ಆಶಿಸುವುದು. ದಶರಥನಿಗೆ ಸಂಬಂಧಿಸಿದಂತೆ ಈ ಆಶಯಕ್ಕೆ ಅಡ್ಡವಾಗಿರುವುದು ಋಷಿಯ ಶಾಪ. ರಾತ್ರಿಯ ಕತ್ತಲಲ್ಲಿ ಶಬ್ದವೇದಿ ವಿದ್ಯೆಯನ್ನು ತಪ್ಪಾಗಿ ಬಳಸಿ ದಶರಥ ಮುನಿಕುಮಾರನನ್ನು ನೀರು ಕುಡಿಯುತ್ತಿರುವ ಪ್ರಾಣಿ ಎಂದು ಬಾಣ ಬಿಟ್ಟು ಕೊಂದಿದ್ದ. ಅವನ ವೃದ್ಧ ಅಂಧ ತಾಯ್ತಂದೆಯರು ನಮಗೆ ಬಂದ ಗತಿಯೇ ನಿನಗೂ ಉಂಟಾಗಲಿ ಎಂದು ದಶರಥನನ್ನು ಶಪಿಸಿ ಪ್ರಾಣ ಬಿಟ್ಟಿದ್ದರು. ಋಷಿ ಕೊಟ್ಟ ಶಾಪದ ಭಾವವು ವೃದ್ಧ ಅಂಧ ಋಷಿದಂಪತಿಗಳ ಬದುಕು ಮುಂದುವರೆಯುವ ಸಾಧ್ಯತೆಯನ್ನು ಅವರ ವಂಶೋದ್ಧಾರಕ ಮಗನನ್ನು ಸಾಯಿಸುವ ಮೂಲಕ ದಶರಥ ಕಳೆದಿದ್ದಾನೆ, ದಶರಥನಿಗೂ ಅದೇ ಗತಿ ಬರಲಿ ಎಂಬುದಾಗಿತ್ತು. 

ಮುನಿಯ ಶಾಪ ದಶರಥನ ಸಾವನ್ನೂ ಸೂಚಿಸುತ್ತಿತ್ತು ಹಾಗೆಯೇ ದಶರಥನ ವಂಶೋಧ್ದಾರಕ ಉತ್ತರಾಧಿಕಾರಿಗಳು ಯಾರಾಗುತ್ತಾರೆಯೋ ಅವರ ಸಾವನ್ನೂ ಸೂಚಿಸುತ್ತಿತ್ತು. ಅಂದರೆ ರಾಮ ಮತ್ತು ಭರತರಿಬ್ಬರ ಸಾವನ್ನೂ ಸೂಚಿಸುತ್ತಿತ್ತು. ಹಿರಿಯ ಮಗನಾಗಿ ರಾಮ, ಕೈಕೇಯಿಯ ತಂದೆಗೆ ಕೊಟ್ಟ ವಾಗ್ದಾನಕ್ಕೆ ಅನುಸಾರವಾಗಿ ಭರತ ದಶರಥನ ಮತ್ತು ಅವನ ರಾಜ್ಯದ ಉತ್ತರಾಧಿಕಾರಿಗಳಾಗಿ ವಂಶೋದ್ಧಾರಕರಾಗಿದ್ದರು. ದಶರಥ ವೃದ್ಧನಾಗಿದ್ದ, ಅವನಿಗೆ ತನ್ನ ಸಾವಿನ ಆತಂಕ ಅಷ್ಟಾಗಿ ಕಾಡುವ ಸಂಗತಿ ಅಲ್ಲ. ಆದರೆ ಕಣ್ಣಮುಂದೆ ಆಗಬಹುದಾದ ಮಕ್ಕಳ ಸಾವು ಅವನನ್ನು ಕಂಗೆಡಿಸುತ್ತಿತ್ತು. ಅದನ್ನು ತಪ್ಪಿಸುವುದು ಹೇಗೆ ಎಂಬುದು ಅವನನ್ನು ಕಾಡುತ್ತಿತ್ತು. ಅದು ಅವನಿಗೆ ಹಗಲೂ ರಾತ್ರಿ ಜಾಗರಣೆ ಮಾಡಿಸುತ್ತಿತ್ತು. ಸಂಭವಿಸಬಹುದಾದ ಸಾವಿನ ಭಯ, ಅದನ್ನು ತಪ್ಪಿಸುವುದು ಹೇಗೆ ಎಂಬ ಆತಂಕಗಳಾಗಿ ಋಷಿಶಾಪವು ಅವನನ್ನು ಬಿಡದೆ ಹಿಂಬಾಲಿಸುವ ಬ್ರಹ್ಮಾಸ್ತ್ರದಂತಹ ನೆರಳು ಆಗಿತ್ತು. 

ತನ್ನನ್ನೂ, ತನ್ನ ವಂಶ ಮತ್ತು ತನ್ನ ಕುಲಗಳನ್ನೂ ಉದ್ಧರಿಸುವ, ಮುಂದುವರೆಸುವ ಪುತ್ರ ಬೇಕು ಎಂದು ಪುತ್ರಕಾಮೇಷ್ಠಿ ಯಾಗ ಮಾಡಿದ್ದ ದಶರಥ. ಒಂದು ಮಗನ ಬದಲಿಗೆ ನಾಲ್ಕು ಗಂಡುಮಕ್ಕಳನ್ನು ಪಡೆದಿದ್ದ. ಪಟ್ಟದರಾಣಿಯ ಮಗನಾಗಿ ಮತ್ತೆ ಮೊದಲ ಮಗನಾಗಿ ಶ್ರೀರಾಮ ದಶರಥನ ಉತ್ತರಾಧಿಕಾರಿ ಕುಲಪುತ್ರ. ಶ್ರೀರಾಮ ತನ್ನ ಉತ್ತಮ ನಡೆನುಡಿಯಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಅವನನ್ನು ಯುವರಾಜನನ್ನಾಗಿಸಲು ಯಾರ ಅಭ್ಯಂತರವೂ ಇರಲಿಲ್ಲ. ರೂಢಿಯ ಪ್ರಕಾರ ಅವನನ್ನು ಯುವರಾಜನನ್ನಾಗಿ ಮಾಡುವುದು ಅತ್ಯಗತ್ಯವಾಗಿತ್ತು. ದಶರಥ ಕೈಕೇಯಿಯನ್ನು ಮದುವೆಯಾದಾಗ ಆಕೆಯ ಮಗನಿಗೆ ರಾಜ್ಯಾಭಿಷೇಕ ಎಂದು ವಾಗ್ದಾನ ಮಾಡಿದ್ದ. ಅದರಂತೆ ಕೈಕೇಯಿಯ ಮಗ ಭರತನನ್ನು ತನ್ನ ಉತ್ತರಾಧಿಕಾರಿ ಎಂದು ದಶರಥ ಯುವರಾಜನ್ನಾಗಿ ಮಾಡಬೇಕಿತ್ತು. 

ಭರತ ಮಾತಾಮಹನನ್ನು ಹೆಚ್ಚು ಅಂಟಿಸಿಕೊಂಡು ಬಹು ಕಾಲ ಕೇಕಯದಲ್ಲೇ ಇರುತ್ತಿದ್ದ, ಅವನೊಂದಿಗೆ ಶತ್ರುಘ್ನನೂ ಇರುತ್ತಿದ್ದ. ಅದನ್ನು ದಶರಥನೂ ಪೋಷಿಸುತ್ತಿದ್ದ. ಅವನನ್ನು ಕೇಕಯಕ್ಕೆ ಸೀಮಿತವಾಗಿರಿಸಿ ಅವನ ರಾಜ್ಯದ ಹಕ್ಕುದಾರಿಕೆಯನ್ನು ಬದಿಗಿರಿಸಿ ಅವನನ್ನು ಬದುಕಿಸುವುದು ಮತ್ತು ಹಿರಿಯ ಮಗನಿಗೆ ಪಟ್ಟಾಧಿಕಾರ ಎನ್ನುವ ಕುಲಾಚರಣೆಯನ್ನು ಬೆಂಬಲಿಸುವುದು ಮಕ್ಕಳ ಸಾವನ್ನು ತಡೆಯ ಬಯಸಿದ ದಶರಥನ ಯೋಜನೆಯ ಒಂದು ಭಾಗ. ಶ್ರೀರಾಮನನ್ನು ತನ್ನ ಮಗ ಎನ್ನುವ ಕಾರಣಕ್ಕಾಗಿ ರಾಜ್ಯಾಧಿಕಾರಿಯಾಗಿಸುವುದರ ಬದಲಿಗೆ ಅವನು ಗುರು ಹಿರಿಯರು ಪ್ರಜಾಪ್ರಮುಖರು, ಅಧೀನ ಮತ್ತು ಮಿತ್ರ ರಾಜರು ಆಯ್ಕೆ ಮಾಡಿದವನು ಎಂದು ರಾಜ್ಯಾಧಿಕಾರಿಯಾಗಿಸಿದರೆ ಶ್ರೀರಾಮ ಪ್ರಜಾಪ್ರತಿನಿಧಿ ಆಗುತ್ತಾನೆ, ತನ್ನ ವಂಶೋದ್ಧಾರಕನಾಗಿ ಉತ್ತರಾಧಿಕಾರಿ ಆಗುವುದಿಲ್ಲ; ಅವನನ್ನೂ ಹೀಗೆ ಬದುಕಿಸಬಹುದು ಎನ್ನುವುದು ದಶರಥನ ಯೋಜನೆಯ ಇನ್ನೊಂದು ಭಾಗ. 

ಮಂದ ದೃಷ್ಟಿಯ ಮಂಥರೆಗೆ ಇವೆಲ್ಲದರ ತಿಳುವಳಿಕೆ ಇರುವುದು ಸಹಜವಾಗಿ ಅಸಾಧ್ಯ. ಅವಳು ಪೂರ್ವಜನ್ಮದಲ್ಲಿ ಸ್ವರ್ಗದವಳೇ ಆಗಿದ್ದರೂ ಅಲ್ಲಿಂದ ಜಾರಿಬಿದ್ದವಳು. ಅವಳಿಗೆ ಒಳಿತಿನ ಮುಖಕ್ಕಿಂತಲೂ ಅಡ್ಡದಾರಿಯ ಸಂಗತಿಗಳು ಸುಲಭವೇದ್ಯ. ಮದುವೆ, ಮಕ್ಕಳಿಲ್ಲದ ಅವಳು ಭರತನನ್ನೇ ತನ್ನ ಮಗನೆಂದು ಸಲಹಿದ ಸಾಕುತಾಯಿ. ಅವನ ಹಕ್ಕುದಾರಿಕೆಗೆ ಅಡ್ಡವಾಗಿರುವ ಶ್ರೀರಾಮನ ಪಟ್ಟಾಭಿಷೇಕವನ್ನು ಶತಾಯ ಗತಾಯ ತಡೆಯಲೇಬೇಕು ಎಂದು ಅವಳು ನಿರ್ಧರಿಸಿದರೆ ಅದು ಬಹಳ ಸಹಜವಾದದ್ದು. ಕೈಕೆ ಭರತನ ಉನ್ನತ ಸ್ಥಾನಮಾನಗಳನ್ನು ಸಹಜವಾಗಿ ಬಯಸುವ ಸ್ವಂತ ತಾಯಿ. ಅವಳಿಗೆ ರಾಮನಿಂದಾಗಲೀ, ಕೌಸಲ್ಯೆಯಿಂದಾಗಲೀ ತನ್ನ ಮತ್ತು ಭರತನ ಗೌರವಾನ್ವಿತ ಸ್ಥಾನಕ್ಕೆ ಧಕ್ಕೆ ಬರುತ್ತದೆ ಎಂಬ ಯಾವ ಆತಂಕವೂ ಇರಲಿಲ್ಲ, ಸಂಶಯವೂ ಇರಲಿಲ್ಲ. ಆದರೆ ಮಂಥರೆ ತನ್ನ ಮಾತಿನ ಸಾಣೆಯಲ್ಲಿ ಕೈಕೆಯ ಮನಸ್ಸನ್ನು ಉಜ್ಜಿ ಉಜ್ಜಿ ರಾಮ ಪಟ್ಟಕ್ಕೆ ಬಂದಮೇಲೆ ಭರತನನ್ನು ಕೊಲ್ಲುತ್ತಾನೆ ಅಥವಾ ದಾಸನನ್ನಾಗಿ ಮಾಡಿಕೊಳ್ಳುತ್ತಾನೆ; ಹಿಂದೆ ಕೈಕೆ ಕೌಸಲ್ಯೆಗೆ ಮಾಡಿದ ಅವಮರ್ಯಾದೆಯ ಸಂಗತಿಗಳನ್ನೆಲ್ಲ ಕೌಸಲ್ಯೆ ನೆನಪಿನಲ್ಲಿಟ್ಟುಕೊಂಡು ಕೈಕೆಯನ್ನು ಅವಮರ್ಯಾದಿಸುತ್ತಾಳೆ, ಮೂಲೆಗುಂಪು ಮಾಡುತ್ತಾಳೆ, ತನ್ನ ದಾಸಿಯನ್ನಾಗಿ ಪರಿಗಣಿಸುತ್ತಾಳೆ ಎನ್ನುವುದನ್ನೆಲ್ಲ ಸತ್ಯಸ್ಯ ಸತ್ಯ ಎಂದು ನಂಬುವಂತೆ ಮಾಡುತ್ತಾಳೆ. ಅದು ತನ್ನ ಮಗ ಭರತನಿಗೇ ಪಟ್ಟ, ರಾಮನಿಗೆ 14 ವರ್ಷದ ವನವಾಸ ಎಂಬ ಹರಿತವಾದ ಇಬ್ಬಾಯ ಖಡ್ಗವಾಗಿ ರೂಪಾಂತರಗೊಳ್ಳುತ್ತದೆ. ಹಿಂದೆ ಮುಂದೆ ನೋಡದೆ ಅದನ್ನು ಬೀಸಿ ದಶರಥನ ಎದೆಯನ್ನು ಆಳವಾಗಿ ತಿವಿದಿದ್ದಾಳೆ ಕೈಕೆ. ಪುತ್ರನ ಅಗಲಿಕೆ ಎನ್ನುವ ಸೀಮಿತ ವ್ಯಾಪ್ತಿಯಲ್ಲಿ ಋಷಿಯ ಶಾಪ ಫಲಿಸುತ್ತದೆ. ದಶರಥ ಮರಣ ಹೊಂದುತ್ತಾನೆ. 

ಕೈಕೇಯಿ ಕೇಳಿದಳು ಎನ್ನುವ ಕಾರಣಕ್ಕಾಗಿ ಶ್ರೀರಾಮ ದಶರಥನ ಉತ್ತರಾಧಿಕಾರಿತ್ವದಿಂದ ದೂರ ಸರಿದಿದ್ದಾನೆ, ಭರತ ಕುತಂತ್ರದಿಂದ ದಕ್ಕಿದ ರಾಜ್ಯಾಧಿಕಾರ ತನಗೆ ಸಲ್ಲದ್ದು ಎಂದು ದಶರಥನ ಉತ್ತರಾಧಿಕಾರಿತ್ವದಿಂದ ಹಿಂದೆ ಸರಿದಿದ್ದಾನೆ. ಕೈಕೇಯಿ ಕೇಳಿದ ವರ ಭರತನ ಪಾಲಿಗೆ ಅವನು ಬದುಕಿದ್ದರೂ ಸತ್ತಂತಾಗಿಸಿತ್ತು. ದಶರಥನ ಮರಣದ ನಂತರ ಮಾತಾಮಹನ ಮನೆಯಿಂದ ಹಿಂತಿರುಗಿದ ಅವನನ್ನು ಯಾರೂ ಸಜ್ಜನನೆಂದು ನಂಬಲಿಲ್ಲ. ಶ್ರೀರಾಮ ತನ್ನೊಂದಿಗೆ ಸೀತೆ, ಲಕ್ಷ್ಮಣರನ್ನೂ ಕರೆದೊಯ್ದರೂ ತಂದೆ ತಾಯಿಯರೊಂದಿಗೆ ಅಪಾರ ಜನಸಮೂಹದ ಪ್ರೀತ್ಯಾದರಗಳನ್ನು ಕೈಬಿಟ್ಟು, ಎಲ್ಲವನ್ನೂ ಅವರವರ ಮತ್ತು ಅದರದರ ಪಾಡಿಗೆ ಬಿಟ್ಟು ಅಯೋಧ್ಯೆಯಿಂದ ಹೊರಬಿದ್ದಿದ್ದಾನೆ, ಅಪರಿಚಿತ ಕಾಡಿನಲ್ಲಿ ಪರದೇಶಿಯಾಗಿದ್ದಾನೆ, ಬದುಕಿದ್ದರೂ ಸತ್ತಂತಾಗಿದ್ದಾನೆ. ನಿಶ್ಚಿತವಾಗಿ ಮರಣಕಾರಕ ಬ್ರಹ್ಮಾಸ್ತ್ರದಂತಿದ್ದ ಶಾಪ ರಾಮ ಭರತರನ್ನು ತಾಗದೆ ಅವರಿಗೆ ಅತಿ ಸಮೀಪದಲ್ಲಿ ಹಾದುಹೋಗಿದೆ, ಶಾಪದ ಪರಿಣಾಮವನ್ನು ಮೃದುಗೊಳಿಸಿದೆ, ಆದರೂ ಫಲಿಸಿದೆ. 

ಈ ಘಟನಾವಳಿಗಳ ಒಂದು ಸಾರ ತಾಯ್ತನದ ಸದಾಶಯ ಕ್ರೂರವಾದ ಶಾಪವನ್ನೂ, ಇಲ್ಲದ ಸಲ್ಲದ ನಿಂದೆ ಆರೋಪಗಳನ್ನೂ, ನಿಂತ ಕಾಲ್ಬುಡವನ್ನೇ ಕತ್ತರಿಸುವ ವರಗಳೇ ಮೊದಲಾದವುಗಳನ್ನೂ ಹಿತದ ಭಾವವಾಗಿ ಎದೆಯ ಮೊಗ್ಗರಳಿಸಿ ಮಧುದ್ರವಿಸುವಂತೆ ರೂಪಾಂತರಿಸಬಲ್ಲುದು ಎನ್ನುವುದೇ ಆಗಿದೆ. 

“ಹರಿದಂತೆ ಗಂಗಾ” ಪದ್ಯ ಬ್ರಹ್ಮರ್ಷಿಗಳ ತಾಯ್ತನದ ವಿಸ್ತತ ಸ್ವರೂಪವನ್ನು ಗಮನಕ್ಕೆ ತಂದರೆ “ನೆರಳು” ಪದ್ಯ ಸೀಮಿತವಾಗಿ ತೋರಿಸುವ ತಾಯ್ತನದ ಸ್ವರೂಪ ಹೇಗಿರುತ್ತದೆ ಎನ್ನುವುದನ್ನು ಗಮನಕ್ಕೆ ತರುತ್ತದೆ. ರಸರಾಮಾಯಣದ “ಅಹಲ್ಯೆ” ಪದ್ಯವಾದರೋ ರಾಮನ ತಾಯ್ತನದ ಘನ ಸ್ವರೂಪವನ್ನು ಚಿತ್ರಿಸುತ್ತದೆ:

ರಾಮ ಸೋಂಕಿದ್ದು| ಹೆಣ್ಣನ್ನೆ| ತಾಯನ್ನೆ| ತನ್ನೊಳಗೆ ತಾನೆ| ಕುದಿ ಕುದಿದು| ಬಿಕ್ಕಿ ಮೊರೆವ} ಮನವನ್ನೆ| ತಾಗಿದ್ದು ಪಾದ| ಧ್ವನಿಸಿದ್ದು ನಾದ| ರಾಮ ರಾಮ| ಒಜ್ಜೆ ಲಜ್ಜೆ ಸರಿದ ಸುನಾದ| ಗುರು ಪತ್ನಿ ಪಾವನಾಂಗನೆ| ಎದೆಯ ಮೊಗ್ಗರಳಿ ಮಧು ದ್ರವಿಸಲಿ||         

ಕೆಲವು ಪುರಾಣಗಳು ಹೇಳುವ ಹಾಗೆ ಸ್ವರ್ಗಾಧಿಪತಿ ಇಂದ್ರನೇ ಬಂದಿದ್ದಾನೆ ಎಂಬ ಹೆಮ್ಮೆಯೋ, ತನ್ನ ಪರಮ ಸೌಂದರ್ಯದ ಬಗೆಗಿನ ಅಹಂಕಾರವೋ ಗೌತಮ ಋಷಿಯ ಹೆಂಡತಿ ಅಹಲ್ಯೆ ಋಷಿಯ ಸರ್ವಸಾಮರ್ಥ್ಯದ ಅರಿವಿದ್ದರೂ ದೇವೇಂದ್ರನೊಂದಿಗೆ ಕೂಡಿದಳು. ಯಾರಿಗೂ ಕಾಣದಂತೆ ನೀರಸ ಕಗ್ಗಲ್ಲ ಬಂಡೆಯಂತಿರಲಿ ಎನ್ನುವ ಶಾಪಕ್ಕೆ ತುತ್ತಾದಳು. ಇದೊಂದೇ ಅವಿವೇಕದ ನಡೆ ಅಹಲ್ಯೆಯದು. ಅವಳ ಪತಿವ್ರತಾಧರ್ಮಕ್ಕೆ ಸತ್ಫಲ ದೊರೆಯಬೇಕೆಂಬುದು ಗೌತಮನ ಆಶಯ. ರಾಮನ ಅಮೃತದಾಯಕ ಸ್ಪರ್ಶಕ್ಕಾಗಿ ಕಾಯಬೇಕಾದ ಗಡಿರೇಖೆ ಅಹಲ್ಯೆಗೆ ಶಾಪದಿಂದ ಬಿಡುಗಡೆ ದೊರೆಯುವ ಕಾಲ-ದೇಶ ಆಯಿತು. ಅದರಂತೆ ರಾಮನ ಪಾದಸ್ಪರ್ಶದಿಂದ ಅಹಲ್ಯೆ ಪವಿತ್ರಾತ್ಮಳಾಗಿ ರೂಪುತಳೆದಳು.

ಈ ಅಹಲ್ಯೆ ಯಾರು? ಅತಿಯಾಗಿ ಭಂಗಪಟ್ಟ ಹೆಣ್ಣೇ? ಒಳಿತು-ಕೆಡುಕುಗಳೆಲ್ಲವನ್ನೂ ಸುಮ್ಮನೆ ಒಪ್ಪಿಕೊಳ್ಳುವ ತಾಯಿಯೇ? ಅಹಂಕಾರದ ಮಾಯೆಗೆ ಸಿಕ್ಕಿ, ಕುದಿಕುದಿಯುತ್ತಾ ಅತಿಯಾದ ಅವಮಾನಕಾರಿಯಾದ ಶಿಕ್ಷೆ ಅನುಭವಿಸಿ, ಪಶ್ಚಾತ್ತಾಪದ ಬೆಂಕಿಯಲ್ಲಿ ಮಿಡುಕಾಡಿದವಳೆ ಅಥವಾ ಪುಟಕ್ಕಿಟ್ಟ ಚಿನ್ನದಂತಾದವಳೇ? ಪದ್ಯದ ಉತ್ತರ ಅಹಲ್ಯೆಯು ರಾಮ-ರಾಮ ಎಂಬ ಸುನಾದದ ಮೂರ್ತರೂಪವಾಗಿ ಮೂಡಿಬಂದ ಪಾವನಾಂಗನೆ ಗುರುಪತ್ನಿ ಎಂಬುದು. ವಾಲ್ಮೀಕಿ ಬ್ರಹ್ಮಸಾಕ್ಷಾತ್ಕಾರ ಪಡೆದದ್ದು ರಾಮ ರಾಮ ಎನ್ನುವ ಮಂತ್ರಜಪದಿಂದ. ಬ್ರಹ್ಮಸಾಕ್ಷಾತ್ಕಾರ ಆಗುವುದು ಎನ್ನುವುದರ ಒಂದು ಅರ್ಥ ಎದೆ ಮೊಗ್ಗರಳಿ ಮಧು ದ್ರವಿಸುವ ಯೌಗಿಕ ಸಿದ್ಧಿಯನ್ನು ಪಡೆಯುವುದು ಎಂದು. ರಾಮನಿಗಾಗಿ ಕಾಯುತ್ತಾ ಸಹಸ್ರಾರು ವರ್ಷಗಳಿಂದ ರಾಮನ ಜಪ ಮಾಡುತ್ತಾ ಇದ್ದ ಅಹಲ್ಯೆ ಇಂಥ ಯೌಗಿಕಸಿದ್ಧಿಯನ್ನು ಪಡೆದವಳು ಎನ್ನುತ್ತಿದೆ ಪದ್ಯ. ಇದಕ್ಕೊಂದು ರೂಪಕ ಬಂಡೆಯೊಂದು ಪ್ರಾಣ-ಚೈತನ್ಯ ಪಡೆದು ಸುನಾದದೊಂದಿಗೆ ನರ್ತಿಸುವ ಮಾನವಜೀವಿಯಾಗಿ ರೂಪಾಂತರಗೊಳ್ಳುವುದು. 

ವಾಲ್ಮೀಕಿ ಬೇಡನಾಗಿದ್ದವನು ಮಹರ್ಷಿ ಆದದ್ದು ರಾಮನಾಮ ಜಪದಿಂದ. ಬಂಡೆಯಂತೆ ಜಡವಾಗಿ ಇದ್ದವಳು ಪವಿತ್ರಾತ್ಮಳಾಗಿ ರೂಪಾಂತರಗೊಂಡದ್ದೂ ರಾಮನಾಮ ಜಪದಿಂದಲೇ.  ರಾಮನಾಮ ಜಪದಿಂದ. ವ್ಯಕ್ತವಾದ ತಾಯ್ತನದ ಸ್ವರೂಪವನ್ನು ವರ್ಣಿಸುವ ಪದ್ಯ “ಅಹಲ್ಯೆ” ಆಗಿದ್ದರೆ ರಾಮನ ನಡೆಯಿಂದ ವ್ಯಕ್ತವಾದ ತಾಯ್ತನದ ಸ್ವರೂಪವನ್ನು ವರ್ಣಿಸುವ ಪದ್ಯ “ಬಿಡುಗಡೆ”:

ತಾಟಕಿಯ ಕೊಂದ ರಾಮನಿಗೆ| ಅಹಲ್ಯ ಬಿಡುಗಡೆಗೆ ಕಾಯ್ದ| ಪಾಪದ ಹೆಣ್ಣು|| ಮೂಗು ಕಿವಿ ಕೊಯ್ದಿಟ್ಟಿದಾ ಶೂರ್ಪಣಖಿಗೆ| ಸೀತೆಯಾದಳು ಹಣ್ಣುಹಣ್ಣು|| ತೂಗುತಕ್ಕಡಿ ಕೊನೆಗೆ ತೂಗಿದ್ದು| ಸ್ವರ್ಣಪುತ್ಥಳಿ| ಎದೆಯ ಮೊಗ್ಗರಳಿ ಮಧು ದ್ರವಿಸಲಿ|| 

ರಾಮನ ಬದುಕಿನಲ್ಲಿ ಮೂವರು ಸ್ತ್ರೀಯರಿಗೆ – ತಾಟಕಿ, ಅಹಲ್ಯೆ, ಶೂರ್ಪಣಖಿಯರಿಗೆ – ವಿಶೇಷ ಪಾತ್ರವಿದೆ. ಮೊಟ್ಟಮೊದಲಿಗೆ ಮುಖಾಮುಖಿಯಾದವಳು ತಾಟಕಿ. ರಾಮ ಲಕ್ಷ್ಮಣನೊಂದಿಗೆ ಯಜ್ಞರಕ್ಷಣೆಗಾಗಿ ಕೌಶಿಕನೊಡನೆ ಹೋಗುತ್ತಿದ್ದಾಗ ದಾರಿಯಲ್ಲಿದ್ದ ತಾಟಕಿಯ ಸರ್ವಾಧಿಕಾರದ ತಾಟಕಾವನವನ್ನು ಪ್ರವೇಶಿಸಿದ. ಅನಧಿಕೃತ ಪ್ರವೇಶವನ್ನು ಪ್ರತಿಭಟಿಸಿ ಅವಳು ರಾಮ ಲಕ್ಷ್ಮಣರ ಮೇಲೆ ಬಗೆಬಗೆಯಾಗಿ ಧಾಳಿಮಾಡಿದಳು. ಅದನ್ನೆಲ್ಲಾ ನಿರೋಧಿಸಿ ಅವಳ ತೋಳುಗಳನ್ನು, ಕಿವಿ ಮೂಗುಗಳನ್ನು ಕತ್ತರಿಸಿ ಅವಳನ್ನು ಹಿಮ್ಮೆಟ್ಟಿಸಲು ರಾಮ ಲಕ್ಷ್ಮಣರು ಮಾಡಿದ ಪ್ರಯತ್ನ ವಿಫಲವಾಯಿತು. ಅವಳು ರಾಮನ ಮೇಲೆ ನೇರವಾಗಿ ಮುನ್ನುಗ್ಗಿದಳು. ನಿರುಪಾಯನಾಗಿ ರಾಮ ಅವಳನ್ನು ಕೊಂದ. ಶಾಪದಿಂದ ರಾಕ್ಷಸಿಯಾಗಿದ್ದ ತಾಟಕೆಗೆ ಬಿಡುಗಡೆ ದೊರೆಯಿತು. 

ರಾಕ್ಷಸ-ಸಮೂಹ ಧಾಳಿಮಾಡಿದರೂ ಕೌಶಿಕರ ಯಜ್ಞವು ರಾಮ ಲಕ್ಷ್ಮಣರಿಂದಾಗಿ ನಿರ್ವಿಘ್ನವಾಗಿ ಮುಕ್ತಾಯವಾಯಿತು. ರಾಮ, ಲಕ್ಷ್ಮಣ, ಕೌಶಿಕ ಜನಕರಾಜನ ಯಜ್ಞದಲ್ಲಿ ಭಾಗಿಯಾಗಲು ಹೊರಟರು. ಪಾಳುಬಿದ್ದ ಆಶ್ರಮವೊಂದನ್ನು ಕಂಡ ರಾಮನಿಗೆ ಅದರ ಹಿನ್ನೆಲೆಯನ್ನು ತಿಳಿಯುವ ಕುತೂಹಲ ಉಂಟಾಯಿತು. ಅತ್ಯಂತ ಗೌರವಾನ್ವಿತ ಗೌತಮ ಮುನಿಯ ಪತ್ನಿ ಅಹಲ್ಯೆ ತಿಳಿದೋ ತಿಳಿಯದೆಯೋ ದೇವೇಂದ್ರನೊಡನೆ ಸುಖಿಸಿ ಮುನಿಯ ಶಾಪದಿಂದ ಬಂಡೆಯಾಗಿದ್ದಾಳೆ, ತನ್ನಿಂದ ಅವಳಿಗೆ ಶಾಪವಿಮೋಚನೆ ಎನ್ನುವುದು ಅವನಿಗೆ ಗೊತ್ತಾಯಿತು. ಅವನ ಪಾದಸ್ಪರ್ಶದಿಂದ ಅವಳು ಮೊದಲಿನಂತಾದಳು. ಒಬ್ಬಳಿಗೆ ಸಾವನ್ನು ಕೊಡುವುದರ ಮೂಲಕ ಅವಳ ವರ್ತಮಾನದ ರಾಕ್ಷಸೀ ಬದುಕಿಗೆ ಕೊನೆ ಹಾಡಿದರೆ ಸತ್ತಂತೆ ಇದ್ದ ಇನ್ನೊಬ್ಬಳಿಗೆ ಜೀವವನ್ನು ಕೊಟ್ಟು ಅವಳ ವರ್ತಮಾನದ ನಿಶ್ಚೇತನದ ಬದುಕಿಗೆ ಇತಿಶ್ರೀ ಹಾಡಿದ್ದಾನೆ ರಾಮ. ಬಿಡುಗಡೆ ದೊರಕಿಸಿಕೊಟ್ಟಿದ್ದಾನೆ.

ಕೈಕೇಯಿಯ ಅಪೇಕ್ಷೆಯಂತೆ ರಾಮ ಹದಿನಾಲ್ಕು ವರ್ಷದ ವನವಾಸಕ್ಕೆ ಹೋದ. ಅವನೊಂದಿಗೆ ಲಕ್ಷ್ಮಣ, ಸೀತೆಯರೂ ಹೋದರು. ದಂಡಕಾರಣ್ಯದ ಪಂಚವಟಿಯಲ್ಲಿ ಆಶ್ರಮ ಕಟ್ಟಿಕೊಂಡರು. ದಂಡಕಾರಣ್ಯವು ರಾವಣನ ರಕ್ತಸಂಬಂಧಿಗಳ, ಬಂಧುಬಾಂಧವರ, ಮತ್ತಿತರ ರಾಕ್ಷಸರ ಪ್ರಶ್ನಾತೀತ ಏಕಮೇವಾಧಿಕಾರದ ನೆಲೆ ಆಗಿತ್ತು. ಅಲ್ಲಿದ್ದ ರಾವಣನ ತಂಗಿ ಶೂರ್ಪಣಖಿ ರಾಮನನ್ನು ನೋಡಿದಳು. ಅತ್ಯಂತ ಸುಂದರನಾದ ರಾಮ ತನ್ನನ್ನು ವರಿಸಲೇಬೇಕು ಎಂದು ಒತ್ತಾಯಿಸಿದಳು. ರಾಮ ತನಗೆ ಹೆಂಡತಿಯಿದ್ದಾಳೆ, ಬೇಕಿದ್ದರೆ ಲಕ್ಷ್ಮಣನನ್ನು ಮದುವೆಯಾಗು ಎಂದು ಅವಳನ್ನು ಸಾಗುಹಾಕಿದ. ಲಕ್ಷ್ಮಣ ತನ್ನನ್ನು ಮದುವೆಯಾದರೆ ತನ್ನಂತೆ ಅವಳೂ ರಾಮ ಸೀತೆಯರಿಗೆ ದಾಸಿಯಾಗಬೇಕಾಗುತ್ತದೆ, ರಾಮನನ್ನೇ ಮದುವೆಯಾಗು ಎಂದು ಹಿಂದಕ್ಕೆ ಕಳಿಸಿದ. ಇದರಿಂದ ಸಿಟ್ಟುಗೊಂಡ ಶೂರ್ಪಣಖಿ ಸೀತೆಯನ್ನೇ ಮುಗಿಸಿಬಿಡುತ್ತೇನೆ ಎಂದು ನುಗ್ಗಿದಳು. ರಾಮನ ಆದೇಶದಂತೆ ಲಕ್ಷ್ಮಣ ಅವಳ ಮೂಗು ಕಿವಿ ಕತ್ತರಿಸಿ ಓಡಿಸಿದ. ರಾಮನ ಆದೇಶ ಅವಳ ನಿರಂಕುಶ ಕಾಮದ ಅಪೇಕ್ಷೆಯನ್ನು ಭಂಗಗೊಳಿಸಿ ಅವಳನ್ನು ಅದರಿಂದ ಬಿಡುಗಡೆ ಮಾಡಿತು. 

ಅವಳು ಇದನ್ನು ಅವಮರ್ಯಾದೆ ಎಂದು ಬಿಂಬಿಸಿ ಸೇಡು ತೀರಿಸಿಕೊಳ್ಳಲು ಸೀತೆಯನ್ನು ವಶಪಡಿಸಿಕೊ ಎಂದು ರಾವಣನನ್ನು ಎತ್ತಿಕಟ್ಟಿದಳು. ಸೀತಾಪಹರಣ ಆಯಿತು, ಸೀತೆ ಶೂರ್ಪಣಖಿಯಿಂದಾಗಿ ಲಂಕೆಯಲ್ಲಿ ರಾಕ್ಷಸರ ನೆಲೆಯಲ್ಲಿ ಜೀವನ್ಮರಣಶಯ್ಯೆಯಲ್ಲಿ ಇರುವಂತಾಯಿತು. ರಾಮ ರಾವಣನನ್ನು ಕೊಂದ, ಸೀತೆಯನ್ನು ಅಗ್ನಿಪರೀಕ್ಷೆಗೂ ಒಳಪಡಿಸಿದ, ಅವಳ ಬಗೆಗೆ ಯಾವ ಕೊಂಕಿಗೂ ಅವಕಾಶವಿಲ್ಲದಂತೆ ಬಂಧಮುಕ್ತ ಆಗಿಸಿದ, ಪ್ರಿಯಪತ್ನಿಯೆಂದು ಸ್ವೀಕರಿಸಿದ, ತನ್ನೊಂದಿಗೆ ಸಿಂಹಾಸನದಲ್ಲಿ ಕೂಡಿಸಿಕೊಂಡ. 

ಪದ್ಯದ ಹೆಸರು ಬಿಡುಗಡೆ. ಇಲ್ಲಿ ಪ್ರಸ್ತಾಪಿತರಾದವರು ಮೂವರು  ಸ್ತ್ರೀಯರು ಮಾತ್ರ. ಸ್ತ್ರೀಯರ ಬಿಡುಗಡೆಯ ಬಗ್ಗೆ ರಾಮನ ತಾಯ್ತನಭಾವದ ಒಟ್ಟಾರೆ ನಿಲುವು ಏನು? “ಬಿಡುಗಡೆ” ಪದ್ಯ “ತೂಗುತಕ್ಕಡಿ ಕೊನೆಗೆ ತೂಗಿದ್ದು| ಸ್ವರ್ಣ ಪುತ್ಥಳಿ|” ಎನ್ನುತ್ತದೆ. ಅವನಿಗೆ ಸ್ತ್ರೀಯಾದವಳು ಕೇವಲ ತಾಯಿ, ಹೆಂಡತಿ, ಕಾಮಿನಿ, ಆಕ್ರಮಣಕಾರಿ ಅಥವಾ ಆಕ್ರಮಣಕ್ಕೆ ಒಳಗಾಗುವ ಬಲಿಪಶು ಇತ್ಯಾದಿ ಯಾವುದೇ ಗುಣವಿಶೇಷಣವುಳ್ಳವಳು ಅಲ್ಲ. ಸೀಮಿತತೆಗಳನ್ನು ಮೀರಿ ಎದೆಯ ಮೊಗ್ಗರಳಿ ಮಧುದ್ರವಿಸುವವಳು ಅಷ್ಟೇ. ಅದಕ್ಕೊಂದು ರೂಪಕ ಸೀತೆಯ ಸ್ವರ್ಣಪುತ್ಥಳಿ.  ಚಿನ್ನ ಪರಿಶುದ್ಧತೆಗೆ ಮತ್ತು ಪರಬ್ರಹ್ಮನಿಗೆ ಒಂದು ಪ್ರತೀಕ. ಇದು ರಾಮನ ತಾಯ್ತನದ ಭಾವ ದೊರಕಿಸಿಕೊಟ್ಟ ಪರಮಗತಿ. ರಾಮಾಯಣದಲ್ಲಿ ಇಂಥ ಸದ್ಗತಿ‌ ದೊರೆತದ್ದು‌ ಸೀತೆಯನ್ನು ಬಿಟ್ಟರೆ ಹನುಮಂತನಿಗೆ ಮಾತ್ರ. 

Feature Image Credit: pinterest.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.