ಕೃಷ್ಣ ಹುಟ್ಟಿದುದು ಶ್ರಾವಣ ಮಾಸದಲ್ಲಿ. ಮೋಡ, ಮಿಂಚು, ಮಳೆ ಇತ್ಯಾದಿಗಳೇನೂ ಇಲ್ಲದ ಶ್ರಾವಣದ ಆಕಾಶದಲ್ಲಿ ನೀಲಿ ಮಡುಗಟ್ಟುತ್ತದೆ. ಆ ನೀಲಿ ಮಲೆಯನ್ನು ಆಚ್ಛಾದಿಸುತ್ತದೆ, ಮಳೆ ಸುರಿದು ತುಂಬಿಹೋದ ಹೊಳೆಯ ನೀರನ್ನು ನೀಲಿವಸ್ತ್ರವಾಗಿಸುತ್ತದೆ. ಹಿಮವಂತನ ನೀಲಿಯ ಸಂಗದಲ್ಲಿ ಸೂರ್ಯ ಕಲೆತುಹೋಗುತ್ತದೆ. ಚಿಕ್ಕದಾದ ಹಗಲು, ದೀರ್ಘವಾದ ರಾತ್ರಿಯಲ್ಲಿ ಕಡುನೀಲಿರಜನಿ ಅನುಪಮವಾದ ತಾರೆಗಳ ಆಭರಣದಿಂದ ಶೋಭಿಸುತ್ತದೆ. ಚಂದ್ರ ಮತ್ತು ಬೆಳದಿಂಗಳಿನ ಆಹ್ಲಾದ ತುರೀಯಸ್ಥಿತಿಗೆ ಏರಿದರೆ ಭೂಮಿಯು ತನಗೆ ದೊರೆತುದುದನ್ನು ಸಾವಿರ ಸಾವಿರ ಪಟ್ಟು ವೃದ್ಧಿಸುತ್ತದೆ. ಅದನ್ನು ತೆನೆ ತೆನೆಯಲ್ಲಿ ತೂಗಾಡಿಸಿ ಪೀತಾಂಬರಧಾರಿಯಾಗುತ್ತದೆ.
ಕೃಷ್ಣ ಜನಿಸಿದ ಶ್ರಾವಣ ಮಾಸದ ಅರುಣೋದಯ ಅಂತಿಂಥದ್ದಲ್ಲ. ಅದು ಹಕ್ಕಿಗಳ ಕೊರಲ ಸೆರೆಯನ್ನು ಬಿಡಿಸುವ ಪೂರ್ವಾಸಂಧ್ಯದ ಉದಯ; ಬಗೆ ಬಗೆಯಾದ ಪುಷ್ಪಗಳ ಬಗೆ ಬಗೆಯಾದ ಅರಳುವಿಕೆಯ ಪುಷ್ಪಾಂಜಲಿಯನ್ನು ಸ್ವೀಕರಿಸುತ್ತಾ ಬರುವ ಉದಯ; ನೀಲಾಕಾಶದ ಕತ್ತಲನ್ನು ತಿಳಿಯಾಗಿಸುತ್ತಾ ಅದುವರೆವಿಗೂ ಕಾಣದಂತಿದ್ದ ವಸ್ತು–ಜೀವ ಪ್ರಪಂಚಕ್ಕೆ ಸ್ಪಷ್ಟ ಆಕಾರ, ಆಕೃತಿಯನ್ನು ಕೊಡುವ ಉದಯ. ಅರುಣೋದಯವನ್ನು ಹಿಂಬಾಲಿಸಿ ರಾಜತೇಜದಿಂದ ಬರುವ ಸೂರ್ಯೋದಯ ಮಲೆಯು ಕೊಡುವ ಮಂಜಿನ ಪಾದ್ಯವನ್ನು, ಮರಗಳು ಕೊಡುವ ಅರ್ಘ್ಯವನ್ನು, ಎಲೆಗಳ ಮತ್ತು ಹುಲ್ಲಿನ ಮೊನೆಯ ಮೇಲಿನ ಹನಿಗಳ ಆಚಮನೀಯವನ್ನು, ವನಗಳ ಗಂಧವನ್ನು, ಕೊಳಗಳ ಅಲೆಗಳ ನಗುವಿನ ಆರತಿಯನ್ನು ಸ್ವೀಕರಿಸುತ್ತಾ ಬರುವ ಉದಯ. ಕಮಲಗಳನ್ನು ಅರಳಿಸುವ ಉದಯ.
ಕಾಡುಮೇಡುಗಳನ್ನು ರಂಗುರಂಗಾಗಿಸುವ ಶ್ರಾವಣದ ಸಂಧ್ಯೋದಯದೊಂದಿಗೆ ಆಗಮಿಸುವ ಚಂದ್ರ ತನ್ನ ಮುಗ್ಧ, ಸರಳ, ಅದ್ಭುತ, ಅಮೃತ–ಸಮ ಬೆಳದಿಂಗಳಿನಿಂದ ಜಗತ್ತನ್ನು ತೋಯಿಸಿಬಿಡುವವನು. ಈಶ್ವರ ಕುಡಿದ ವಿಷವನ್ನು ತಾನು ಹೀರಿಕೊಂಡು ಅವನ ತಾಪವನ್ನು ತನ್ನದಾಗಿಸಿಕೊಂಡಂತೆ ಕಪ್ಪುಮೋಡವೂ ತಂಪನ್ನೆರೆಯಲು ಚಂದ್ರನೊಂದಿಗೆ ಕಾಣಿಸಿಕೊಳ್ಳುತ್ತದೆ. ಇದು ಜಯಂತೀ ಎನ್ನುವ ಬಿರುದು ಇರುವ ವೈಜಯಂತೀದಾಮನಾದ ಇಂದ್ರನು ಆವಿರ್ಭವಿಸಿದ ಒಂದು ಚೆಲುವಿನ ಮಹೋತ್ಸವ. ಚೆಲುವರಾಯ ವಿಷ್ಣು ಕೃಷ್ಣನಾಗಿ ಅವತರಿಸಿದ ಶ್ರಾವಣಮಾಸದ ಸಂಭ್ರಮ, ಉತ್ಸಾಹಗಳು ಸುಂದರವಾದ ವೈದೃಶ್ಯಗಳುಳ್ಳದ್ದು. ಅದು ತ್ರಿಭಂಗ ಸೂಚಕ. ತ್ರಿಭಂಗಿ ಸಂಪೂರ್ಣ ಸಮಸ್ಥಿತಿಯ ಭಂಗಿ. ಕೃಷ್ಣನ ಭಂಗಿಯೇ ತ್ರಿಭಂಗಿ (ಕುಂಚಿತ ಭಂಗಿ). ಕುಂಚಿತ ಭಂಗಿಯು ಅಸಮವಾದುದನ್ನು ಸೂಕ್ತವಾಗಿ ಸಮಗೊಳಿಸುವ ಭಂಗಿ. ಇದು ಚಲನಶೀಲ ಬಲ–ಶಕ್ತಿಗಳ ಪ್ರಭಾವಗಳನ್ನು ಮರುಹೊಂದಾಣಿಕೆಗೆ ಒಳಪಡಿಸುತ್ತದೆ. ಇದರ ಗೋಲ್ಡನ್ ಅನುಪಾತವು 1 1, 2 3, 5 8, 13 21……. ಈ ಅನುಪಾತೀಯ ಮುಂದುವರಿಕೆಯು 2\1, 3\2, 5\3, 8\5….. ಇದರ ಮೌಲ್ಯ 1.6180339…. ಇದು ಸೀಮಿತ ಅವಧಿಯಲ್ಲಿ ಕಾಲವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರ ಮೂಲಕ ಕಾಲಾತೀತತೆಯನ್ನು ಸಾಧಿಸುವ ಉದ್ದೇಶವುಳ್ಳದ್ದು. ಇದರ ಹಿಂದೆ ಇರುವ ಆಶಯ ರಸೋತ್ಪತ್ತಿಯೇ. ಕೃಷ್ಣ ‘ರಾಸಕ್ಕೆ ಒಂದು ಹೆಸರು. ರಾಸ ಎಲ್ಲರನ್ನೂ ಒಬ್ಬರನ್ನೂ ಬಿಡದೆ ಒಳಗೊಳ್ಳುತ್ತಾ ಹೋಗುವ ತಾಳ ಲಯ ಪ್ರಧಾನವಾದ ನೃತ್ಯ–ಪ್ರಕಾರ. ಹೀಗೆ ಸಮೂಹವೊಂದು ಬನದಲ್ಲಿ ನಾದಯೋಗದಲ್ಲಿ ಹೆಜ್ಜೆ ಇರಿಸಿದುದು ಹಿಂದೆಂದೂ ಸಂಭವಿಸಿರಲಿಲ್ಲ. ಅಡವಿಯಲ್ಲಿ ಋಷಿ ಮುನಿಗಳು ಪ್ರತ್ಯೇಕ ಪ್ರತ್ಯೇಕವಾಗಿ ಸಾಧನೆಯನ್ನು ಮಾಡಿ ಸಿದ್ಧಿಯನ್ನು ಪಡೆದಿದ್ದರು, ಅಷ್ಟೇ. ಅದು ಒಂದರ್ಥದಲ್ಲಿ ಅಡವಿಯ ಮೇಲೆ ಮನುಷ್ಯನ ಹಿಡಿತ ಆಗಿತ್ತು. ಆದರೆ ಕೃಷ್ಣನ ಅನುಭಾವದಲ್ಲಿ ಕಾಂತಾರದ ಮೇಲೆ ಮನುಷ್ಯನ ಹಿಡಿತವಿಲ್ಲ, ಬದಲಿಗೆ ಮಾನುಷ್ಯಭಾವವಿದೆ; ಪ್ರಭುತ್ವದ ಭಾವವಿಲ್ಲ; ಬದಲಿಗೆ ತನ್ನದೆಲ್ಲವನ್ನೂ ನಿರಪೇಕ್ಷವಾಗಿ ಕೊಟ್ಟುಬಿಡುವ ಕಾಂತಾರದ ಭಾವವಿದೆ, ಇತರರಿಂದ ಏನನ್ನೂ ಅಪೇಕ್ಷಿಸದ ಭಾವಕ್ಕೆ ಜಯ ಉಂಟಾಗಿದೆ. ರಾಸದಲ್ಲಿ ಭಾಗಿಯಾದ ಯಾರ ಮನಸ್ಸಿನಲ್ಲೂ ಯೋಗಕ್ಷೇಮದ ಕಾತರ ಸ್ವಲ್ಪವೂ ಇಲ್ಲ, ಮನಸ್ಸು ನಿರಾಳವಾಗಿದೆ. ಇದೂ ಹಿಂದೆಂದೂ ಸಂಭವಿಸದಿದ್ದದ್ದು.
ಕೃಷ್ಣ ನಾದಲೋಲ. “ನಾದಲೋಲುಡೈ ಬ್ರಹ್ಮಾನಂದಮೇ” ಎನ್ನುತ್ತಾರೆ ತ್ಯಾಗರಾಜರು. ಅವನು ಮುರಳೀಧರ. ಮುರಳಿ ಆಹತ ಅನಾಹತ ನಾದಗಳೆರೆಡನ್ನು ಪ್ರಕಟಪಡಿಸುವ ಮೂಲ ಸಾಧನ. ಶಬ್ದ ಬಾಹ್ಯ ಜಗತ್ತು, ಶಬ್ದಾತೀತತೆ ಅಂತರ್ಜಗತ್ತು. ಅವೆರೆಡನ್ನು ಸಮನ್ವಯಿಸುವುದು ಮುರಳೀಗಾನ. ಕೊಳಲು ನುಡಿಸಬೇಕಾದರೆ ಮೊದಲು ಹೊರಗಿನ ಗಾಳಿಯನ್ನು ಉಚ್ವಾಸವಾಗಿ ತೆಗೆದುಕೊಳ್ಳಬೇಕು. ಹೊರಗಿನ ಗಾಳಿ ಇಡೀ ಜಗತ್ತಿನ ಪ್ರಾಣ. ಒಳಗೆ ತೆಗೆದುಕೊಂಡ ಗಾಳಿಯನ್ನು ಕೊಳಲಿನ ರಂಧ್ರಗಳಿಂದ ನಾದ ಮೂಡಿಬರುವಂತೆ ಹೊರಹಾಕಬೇಕು. ಅದು ನಿಶ್ವಾಸ, ವ್ಯಕ್ತಿಯ ಒಳಗಿನ ಪ್ರಾಣ. ಉಛ್ವಾಸ ನಿಶ್ವಾಸಗಳು ಕ್ರಮಾಗತವಾಗಿದ್ದರೆ ಅದು ಯೋಗದ ಭಾಷೆಯಲ್ಲಿ ಪ್ರಾಣಾಯಾಮ, ಸಂಗೀತದ ಭಾಷೆಯಲ್ಲಿ ಸುಮಧುರ ಗಾನ. ಹೊರಗಿನ ಗಾಳಿಯಿಂದ ತೆಗೆದುಕೊಳ್ಳುವಂತಹುದು ಹೂಗಳ ಮೌನ ಭಾಷೆ, ವೃಕ್ಷದ ಮರ್ಮರ, ಹೊನಲಿನ ಜುಳುಜುಳು, ಗುಡುಗಿನ ಧುಮುದುಡುಗುಡಿಕೆ, ಮಳೆಯ ಹುಯ್ ಸ್ವರ, ಹಸುವಿನ ಅಂಬಾರವ, ಗೂಳಿ, ಕುರಿ, ಮೇಕೆ, ಆನೆ, ಕುದುರೆ, ನೀರುಕೊಕ್ಕರೆ, ನವಿಲು, ಕಾಗೆ, ಕೇಗೆ, ಗುಬ್ಬಿ, ಗಿಳಿ, ಕೋಗಿಲೆ, ಪಾರಿವಾಳ, ಬೆಳವ, ಗಂಟೆಯ ಹಕ್ಕಿ, ಚುಕ್ಕಿಹಕ್ಕಿ, ದುಂಬಿ, ಝಲ್ಲಿಕೆ ಮೊದಲಾದ ಹೆಸರು ಇರುವ ಮತ್ತು ಇರದ ಇಂಚರದ ಮೇಳ. ಇದು ಕಿವಿಯ ಮೂಲಕ ಅಂತಃಕರಣವನ್ನು ತಲುಪುತ್ತದೆ. ಇದರ ಜೊತೆಗೆ ಕಣ್ಣು ಗ್ರಹಿಸುವ ನಕ್ಷತ್ರಗಳ ಹೊಳಪಿನಂತಹ ಮಿಡಿತಗಳ ಭಾವವೂ ಬೆರೆಯುತ್ತದೆ. ಈ ಸಮ್ಮಿಳನದ ಸಾರ ಪ್ರಕೃತಿ ತೋರುವ ಪುನರ್ ಸೃಷ್ಟಿ, ಸಾಮರಸ್ಯತೆ, ಹೊಂದಾಣಿಕೆ, ಒಳಗೊಳ್ಳುವಿಕೆಗಳ ರೂಪದಲ್ಲಿ ತೋರಿಬರುವ ಸ್ನೇಹ, ಪ್ರೀತಿ. ಉಚ್ವಾಸದಿಂದ ಪಡೆದದ್ದು ಇದೇ. ನಿಶ್ವಾಸದ ಮೂಲಕ ನಾದವಾಗಿ ಹೊರಹೊಮ್ಮಿಸಲು ಅಂತರಂಗದಲ್ಲಿ ಭದ್ರಪಡಿಸಿಕೊಂಡದ್ದೂ ಇದನ್ನೇ. ಇದೇ ಹೊರಹೊಮ್ಮಿ ಬರುವ ನಾದದ ಆತ್ಮದ್ರವ್ಯ.
ಕೃಷ್ಣ ಒಳಗೆ ತೆಗೆದುಕೊಂಡ ಉಸಿರು ಹೆಸರು ಇರುವ ಮತ್ತು ಹೆಸರು ಇರದ ಚರಾಚರ ಸಂಗತಿಗಳಿಂದ ಆಯ್ದ ಇಂಚರದ ಮೇಳ. ಅದು ಅಂತಃಕರಣದ ಹೊಳಪಿನ ವಾತ್ಸಲ್ಯ ಪ್ರೇಮಾದ್ರ ಮಿಡಿತದ ಭಾವಗಳೊಂದಿಗೆ ಸಮರಸಗೊಂಡ ಇಡೀ ಜಗತ್ತಿನ ಪ್ರಾಣ, ಇರುವಿಕೆಯ ಮೂಲನಿಧಿ. ಇದೇ ಉಪನಿಷತ್ತುಗಳು ಹೇಳುವ ಆತ್ಮನ್(=ಆತ್ಮದ್ರವ್ಯ), ಬ್ರಹ್ಮನ್. ಈ ಉಸಿರನ್ನು (ಪ್ರಾಣವನ್ನು) ಬುದ್ಧಿಪೂರ್ವಕವಾಗಿ ಸ್ವರವೈಭವವಾಗಿಸಿ ಕೊಳಲಿನ ರಂಧ್ರಗಳ ಮೂಲಕ ಹೊರಚಿಮ್ಮಿಸಿದಾಗ ಆತ್ಮವು ತನ್ನ ಹೃದಯದಲ್ಲಿ ಅಡಗಿದ್ದ ನಿಧಿಯ ಅರಿವನ್ನು ಪಡೆಯುತ್ತದೆ, ಆ ನಿಧಿಯೇ ಆನಂದಸ್ವರೂಪಿ ಸದ್ವಸ್ತು, ಅದೇ ತನ್ನ ಮೂಲಭೂತ ಇರುವಿಕೆ ಎಂಬುದನ್ನು ಮನಗಾಣುತ್ತದೆ.
ಉಸಿರಿನ ಮೂಲಕ ಸ್ವೀಕರಿಸಿದುದು ಚರಾಚರ ಸಂಗತಿಗಳ ನಾದ–ಆಕರಗಳನ್ನು; ನಾದದ ಆಕರಗಳು ಮತ್ತು ಉಂಟಾದ ನಾದಗಳೆರಡೂ ಸ್ವರೂಪದಲ್ಲಿ ಒಂದೇ ಎಂಬುದನ್ನೂ ಆತ್ಮ ಮನಗಾಣುತ್ತದೆ. ಗ್ರಹಿಕೆ, ಭಾವ, ಅನುಭವಗಳು ನಾದ–ಅದ್ವೈತ, ನಾದರಸ–ಅದ್ವೈತ, ನಾದ–ಆನಂದ–ಅದ್ವೈತ. ಉಛ್ವಸಿಸಿದಾಗ ಅನಾಹತನಾದ, ನಿಶ್ವಸಿಸಿದಾಗ ಆಹತನಾದ. ಸಂಗೀತವಾಗಿ ಹೊರಹೊಮ್ಮದೇ ಇದ್ದಾಗ ಅದು ಕೇವಲ ಆನಂದ; ಅದು ಸಂಗೀತವಾಗಿ ರಸಗಂಗೆಯಾದಾಗ ಸತ್ ಚಿತ್ ಆದ ಜಗತ್ತು. ಇದು ಆಧ್ಯಾತ್ಮಿಕ ಭಾಷೆ. ಈ ಭಾಷೆಯಲ್ಲಿ ಮೂಲ ಸದ್ವಸ್ತು ಮತ್ತು ಜಗತ್ತು ಬೇರೆ ಬೇರೆಯಾದದ್ದು ಅಲ್ಲ. ಜಗತ್ತಿನ ಮೂಲಕ ಸದ್ವಸ್ತುವಿನ ಆನಂದಾನುಭೂತಿ. ಸದ್ವಸ್ತುವಿನ ಮೂಲಕ ಆನಂದಮಯ ಜಗತ್ತು. ಕೊಳಲುವಾದನವನ್ನು ಯೌಗಿಕ ಸಾಧನಾಮಾರ್ಗವನ್ನಾಗಿಸಿಕೊಂಡ ಕೃಷ್ಣನಿಗೆ ವೇಣು ಒಂದು ಸಾಧನ, ಅದರ ಮೂಲಕ ಅವನು ಅನಾಹತ–ನಾದಸಿದ್ಧಿಯನ್ನು ಪಡೆದವನು. ಕೃಷ್ಣ ಮುರಲೀವಾದನದ ಮೂಲಕ ನಾದಸಿದ್ಧಿಯನ್ನು ಪಡೆದ ನಾದಯೋಗಿಯಾದವನು, ತ್ರಿಭಂಗಿಯಲ್ಲಿ ಕೊಳಲನ್ನೂದುತ್ತಾ ಮುರಲೀಧರನಾದವನು. ಅವನು ನಾದಯೋಗ ಸಾಧಕರ ಜಗದ್ಗುರು.
ವೇಣುಗಾನವೆಂದರೆ ಕೃಷ್ಣ, ಕೃಷ್ಣನೆಂದರೆ ವೇಣುಗಾನ. ವೇಣುಗಾನವು ತ್ಯಾಗರಾಜರು ಹೇಳುವಂತೆ ಸಪ್ತಸ್ವರಗಳಿಗೆ ಮಿಗಿಲಾದ, ಪ್ರಾಣಾನಲ ಸಂಯೋಗದ ಪ್ರಣವ–ನಾದ. ಆ ಪ್ರಣವ–ನಾದವೇ ಪರವಸ್ತು. ಕೃಷ್ಣ ಭೂಮಿಯಲ್ಲಿ ಅವತರಿಸಿದ ಎನ್ನುವುದರ ಒಂದು ಅರ್ಥ ವೇಣುಗಾನ ಎನ್ನುವ ಪರಿಕಲ್ಪನೆ ಪರಿಪೂರ್ಣವಾಗಿ ರೂಪುಗೊಂಡಿತು ಎಂದು. ಪ್ರಪಥಮ ಯೋಗಿ ಶ್ರೀಹರಿಯೇ; ಸೃಷ್ಟಿಯ ಮೂಲ ಅನಾಹತ ನಾದ; ಸೃಷ್ಟಿಯ ವಿವರಗಳು ಆಹತ ನಾದ. ಅವನು ತೋರಿದ ಮಾರ್ಗದಲ್ಲಿ ಉಳಿದವರು ತಮ್ಮ ಹೃದಯದಲ್ಲಿ ಆನಾಹತನಾದದ ದರ್ಶನಾನಂದವನ್ನು ಅನುಭವಿಸಿದ ಯೋಗಿಗಳು. ಕೃಷ್ಣನನ್ನು ಯೋಗೀಶ್ವರ ಎಂದೇ ಗುರುತಿಸುವುದು. ಸಾಂಖ್ಯಯೋಗದಲ್ಲಿ ಯೋಗಾಭ್ಯಾಸದ ವಿವರಗಳು, ಯೋಗ ಸಿದ್ಧಿಗಳು, ಸವಿಕಲ್ಪ ನಿರ್ವಿಕಲ್ಪ ಸಮಾಧಿಗಳ ಪ್ರಸ್ತಾಪ ಇವೆ. ಕೃಷ್ಣನ ಯೌಗಿಕ ಪಥ ನಿರ್ವಿಕಲ್ಪ ಸಮಾದಿಯಲ್ಲಿ ಕೊನೆಗೊಳ್ಳುವುದಿಲ್ಲ. ಅವನ ಯೋಗ ಯೋಗಾಭ್ಯಾಸಿಯನ್ನು ಯೋಗಿಯನ್ನಾಗಿ ಮಾಡುತ್ತದೆ, ಆ ಯೋಗಿಯನ್ನು ಸಾವಿರಾರು ಮುಖಗಳಲ್ಲಿ ತನ್ನ ಸುತ್ತಲಿನವರ ಆಧಾರಸ್ಥಂಭವನ್ನಾಗಿಸುತ್ತದೆ.
ನಮ್ಮ ಜಗತ್ತು ಮತ್ತು ಪ್ರಾಪಂಚಿಕ ಬದುಕುಗಳೆರಡೂ ತಮ್ಮ ಮೂಲವನ್ನು ಮೇಲುಗಡೆಯೂ, ವಿವರಗಳನ್ನು ಕೆಳಗಡೆಯೂ ಹೊಂದಿದೆ ಎನ್ನುತ್ತದೆ ಭಗವದ್ಗೀತೆ. ಇದರ ಅರ್ಥ ಎಲ್ಲದರ ಪರಮಗತಿ ಅತ್ಯೌನ್ನತ್ಯವೇ; ಇರುವ ರೀತಿ ಅತ್ಯುನ್ನತಿಯ ವಿವರಗಳು ಮಾತ್ರ; ಏಕವಾದದ್ದು ಅನೇಕ ಆಯಿತು ಎಂದರೆ ಅವತಾರಗಳಾದವು ಎಂದು; ನಾವು ನಮ್ಮ ಕರ್ಮವನ್ನು ವಿವಿಧತೆಗಳ ಮೂಲಕವೇ ಏಕಾಗ್ರಗೊಳಿಸಬೇಕು ಎಂಬುದು ಭಗವದ್ಗೀತೆಯ ನಿಲುವು. ಇದಕ್ಕೊಂದು ರೂಪಕ ಭಾಂಡೀರ ಮರ. ದಾಕ್ಷಿಣಾತ್ಯ ಪಾಠದ ಮಹಾಭಾರತದ ಸಭಾಪರ್ವದ 38ನೇಅಧ್ಯಾಯದಲ್ಲಿ ಭಾಂಡೀರ ಎನ್ನುವುದು ಭಂಡೀರ ವನದಲ್ಲಿರುವ ಒಂದು ದೊಡ್ಡದಾದ ಮರ; ಅದರ ಅಡಿಯಲ್ಲಿ ಕೃಷ್ಣ ಮತ್ತು ಅವನ ಗೆಳೆಯರು ದಿನವೂ ಆಟವಾಡುತ್ತಿದ್ದರು ಎನ್ನುವ ವಿಷಯ ಇದೆ. ಎಲ್ಲಾ ಮರಗಳಂತೆ ಭಾಂಡೀರವೂ ಮೇಲ್ಮುಖವಾಗಿಯೇ ಬೆಳೆಯುತ್ತದೆ. ಆದರೆ ಇದರ ವಿಶಿಷ್ಟತೆ ಇದರ ರೆಂಬೆ ಕೊಂಬೆಗಳಿಂದ ಬಿಳಲುಗಳು ಹುಟ್ಟಿಕೊಳ್ಳುವುದು; ಅವು ಅಧೋಮುಖವಾಗಿ ಬೆಳೆಯುವುದು; ಬೆಳೆದು ಒಂದೊಂದು ಸ್ವತಂತ್ರ ಮರವಾಗಿ ಮೇಲ್ಮುಖವಾಗುವುದು. ಹಾಗೆ ಬೆಳೆದ ಆ ಮರಗಳು ಒಂದಕ್ಕೊಂದು ಅಂಟಿಕೊಂಡೇ ಇರುತ್ತವೆ. ಅವು ಪ್ರತ್ಯೇಕ ಮರವಾಗಿದ್ದರೂ ಜೊತೆಯ ಮರಗಳಿಂದ ತಾನು ಬೇರೆ ಎನ್ನುವ ಪ್ರತ್ಯೇಕತೆಯನ್ನು ತೋರುವುದಿಲ್ಲ. ಪರಸ್ಪರ ಬೆರೆತುಹೋಗಿ ಒಂದಾಗಿಬಿಟ್ಟರೂ ಅನನ್ಯತೆಯನ್ನು ಉಳಿಸಿಕೊಳ್ಳುತ್ತವೆ. ಇದೊಂದು ಸಾಹಸೋದ್ಯಮ.
ಭಾಂಡೀರ ವಿಶಿಷ್ಟಾದ್ವೈತದ ಪರಮ ವಾಸ್ತವತೆಯ ಪರಿಕಲ್ಪನೆಗೊಂದು ದೃಷ್ಟಾಂತ. ಅದರ ಪ್ರಕಾರ ಜೀವ ಮತ್ತು ಜಗತ್ತು ಈಶ್ವರನ ವಿಶೇಷಣಗಳಾಗಿ ಈಶ್ವರನೊಂದಿಗೆ ಒಂದಾಗಿಯೂ ಇರುತ್ತವೆ, ತಮ್ಮದೇ ಆದ ಅನನ್ಯತೆಯನ್ನೂ ಹೊಂದಿರುತ್ತವೆ. ಇದೇ ಮನುಷ್ಯನೂ ಸಾಧಿಸಬೇಕಾದದ್ದು. ಈಗಾಗಲೇ ಹಲವು ಬಿಳಲುಗಳು ನೆಲದಿಂದ ಒಂದೊಂದು ಮರವಾಗಿ ಎದ್ದುಬಂದಿವೆ. ಇದರ ಅರ್ಥ ಮನುಷ್ಯ ಸಾಧಿಸಬೇಕಾದದ್ದು ಕಪೋಲಕಲ್ಪಿತವಾದದ್ದು ಅಲ್ಲ, ಬದಲಿಗೆ ಸ್ವಾಭಾವಿಕವಾದದ್ದು ಎನ್ನುವುದು. ಇದನ್ನು ಮೊದಲಿಗೆ ತೋರಿಸಿಕೊಟ್ಟವನೂ ಕೃಷ್ಣನೇ. ಭೂಮಿಯ ಪೋಷಕಾಂಶ ದ್ರವವನ್ನು, ಆಕಾಶದ ಬೆಳಕು ಮತ್ತು ಅನಿಲಗಳೆರಡನ್ನೂ ಹೀರಿ ಅಪ್ರತಿಮ ಜೀವೇಚ್ಛೆಯನ್ನು ಮೂರ್ತೀಕರಿಸುವ ಹಾಗೆ ನಿಂತಿರುವ ಈ ಮರ ಮೋಡವನ್ನು ಸೆಳೆದು, ಬಿಸಿಲನ್ನು ತಡೆದು ತಂಪನ್ನು ಕೊಟ್ಟು ತಂಪನ್ನು ಆಳುತ್ತದೆ. ಇದು ಭಗವದ್ಗೀತೆ ಹೇಳುವ ಸುಖ ದುಃಖಗಳೆರಡರ ಬಗೆಗೂ ತಟಸ್ಥವಾಗುವ ಸ್ಥಿತಪ್ರಜ್ಞೆಯ ಭಾವಕ್ಕೊಂದು ಪ್ರತೀಕ; ಅಚಲವೂ, ಅತ್ಯಂತ ಘನವಾದ ಸ್ಥಾವರವೂ ಆದ ಈ ಮರ ಅಕ್ಷರ ಅಂದರೆ ನಾಶ ರಹಿತವಾದುದರ ಬೋಧೆಯನ್ನು ಕೊಡುವ ಆಚಾರ್ಯ=ಗುರು.
ಶ್ರೀಕೃಷ್ಣ ಚರಿತೆ ಎಂದರೆ ರಸೋದ್ಭವ (ಕೃಷ್ಣನ ಜನನ), ರಸದ ಹರಡುವಿಕೆ (ಕೃಷ್ಣನ ಬಾಲಲೀಲೆ), ರಸ ಸಾಂದ್ರವಾಗುವಿಕೆ (ದುಷ್ಟರ ಮತ್ತು ಇಂದ್ರನ ಮರ್ದನ ಹಾಗೂ ಗೋವರ್ಧನೋದ್ಧರಣ). ಇಡೀ ಕೃಷ್ಣಚರಿತೆಯ ಹೃದಯ ಬೃಂದಾವನ. ಬಯಸುವವರಿಗೆ ಅಲ್ಲಿಯೇ ಪರಮವಾಸ್ತವಿಕತೆಯ ಅರಿವು; ಅಲ್ಲಿಯೇ ಅನಾಹತ ನಾದದ ಯೌಗಿಕ ಅನುಭಾವ, ಜಗದ್ಗುರು ಆಗುವ ಪುರುಷೋತ್ತಮನೆನ್ನಿಸಿಕೊಳ್ಳುವ ವ್ಯಕ್ತಿತ್ವದ ಸಿದ್ಧಿ. ಕೃಷ್ಣನನ್ನು ಕುರಿತ ಸ್ತೋತ್ರದಲ್ಲಿ ಅವನು ಪರಮ ಯೋಗೀಶ್ವರ.
ಹೀಗೆ ಕೃಷ್ಣ ಬಹು ಅರ್ಥದಲ್ಲಿ ಜಗದ್ಗುರು.
ಮೊದಲ ಲೇಖನವನ್ನು ಇಲ್ಲಿ ಓದಬಹುದು.
Feature Image Credit: istockphoto.com
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.