close logo

ಕೃಷ್ಣಂ ವಂದೇ ಜಗದ್ಗುರುಂ ಭಾಗ 1

ಎಲ್ಲರೊಳಗೊಂದಾಗು ಮಂಕುತಿಮ್ಮ

ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ

ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ

ಶ್ರೀಕೃಷ್ಣನ ಜಗದ್ಗುರುತ್ವವನ್ನು ಸಾರುವ ಮೇಲಿನ ಸಾಲುಗಳು ಆದಿ ಶಂಕರಾಚಾರ್ಯರು ರಚಿಸಿದರೆನ್ನಲಾದ ಕೃಷ್ಣಾಷ್ಟಕದ ಮೊದಲನೇ ಶ್ಲೋಕಕ್ಕೆ ಸೇರಿವೆ. ಇಲ್ಲಿ ವಸುದೇವಸುತಂ (ವಸುದೇವನ ಸುತ) ಎನ್ನುವಾಗ ಸೃಷ್ಟಿಯನ್ನು ಉಲ್ಲೇಖಿಸಿ, ಕಂಸ ಚಾಣೂರ ಮರ್ದನಂ ಎನ್ನುವಾಗ ಲಯವನ್ನು ಸೂಚಿಸಿ ಮತ್ತು ದೇವಕೀ ಪರಮಾನಂದಂ  ಎಂದು ಹೇಳುವಾಗ ಮಾತೃವಾತ್ಸಲ್ಯದ ಪರಮಾನಂದದ ಸ್ಥಿತಿಯನ್ನು ಉದ್ದೇಶಿಸಿ ಹೇಳಲಾಗಿದೆ. ಸೃಷ್ಟಿಸ್ಥಿತಿಲಯಗಳ ಸಮನ್ವಯವೇ ಜಗದ್ಗುರುತ್ವ.

ಜಗತ್ತಿನ ಗುರು ಜಗದ್ಗುರು. ಜಗತ್ತಿಗೆ ಅಂತರ್ಜಗತ್ತು ಮತ್ತು ಬಾಹ್ಯಜಗತ್ತು ಎಂಬ ಎರಡು ಮುಖಗಳಿವೆ. ಯಾರೊಬ್ಬನು ಅಂತರ್ಜಗತ್ತಿನ ಗುರುವಾಗುತ್ತಾನೋ ಆತನು ಸಹಜವಾಗಿಯೇ ಬಾಹ್ಯಜಗತ್ತಿನ ಗುರುವಾಗುತ್ತಾನೆ ಎಂದು ಯೋಗಶಾಸ್ತ್ರ ಹೇಳುತ್ತದೆ. ಅಂತರ್ಜಗತ್ತು ಮಹತ್ (ಬುದ್ಧಿ), ಅಹಂಕಾರ, ಮನಸ್ಸುಗಳನ್ನು ಒಳಗೊಂಡದ್ದು. ಇವುಗಳನ್ನು ಹಿಡಿತದಲ್ಲಿ ಇಟ್ಟುಕೊಂಡವನು ಅಂತರ್ಜಗತ್ತಿನ ಗುರು. ಬಾಹ್ಯ ಜಗತ್ತು ಇಂದ್ರಿಯಗಳ ಮೂಲಕ ಗ್ರಹಿಕೆಗೆ ದೊರೆಯುವಂತಹುದು. ಗ್ರಹಿಕೆಯ ಲಗಾಮು ಮಹತ್, ಅಹಂಕಾರ ಮತ್ತು ಮನಸ್ಸು. ಮೂರೂ ಗ್ರಹಿಕೆಯನ್ನು ರೂಪಿಸುತ್ತವೆ, ನಿರ್ದೇಶಿಸುತ್ತವೆ ಮತ್ತು ರೂಪಾಂತರಿಸುತ್ತವೆ. ಇವುಗಳಿಗೆ ಕಡಿವಾಣ ಹಾಕುವ ಅಂತರ್ಜಗತ್ತಿನ ಗುರು ಸಹಜವಾಗಿ ಬಾಹ್ಯ ಜಗತ್ತಿನ ಗುರುವೂ ಆಗುತ್ತಾನೆ. ಒಟ್ಟಾರೆ ಗುರುತ್ವ ಎನ್ನುವುದು ಬುದ್ಧಿಅಹಂಕಾರಮನಸ್ಸುಗಳನ್ನು ಮಾತೃಸ್ವರೂಪಿಯಾದ ಆನಂದದೆಡೆಗೆ ಕರೆದೊಯ್ಯುವಂಥದ್ದು

ಬುದ್ಧಿ ತರ್ಕ ಪ್ರಧಾನವಾದದ್ದು. ತರ್ಕ ಪಾಸಿಟೀವ್ ಚಿಂತನೆಯೂ ಆಗಬಹುದು, ನೆಗಟಿವ್ ಚಿಂತನೆಯೂ ಆಗಬಹುದು. ಉದಾಹರಣೆಗೆ ನಿನಗೆ ವಿದ್ಯಾರೇಖೆ ಇಲ್ಲ ಎಂದರೆ ವಿದ್ಯಾರೇಖೆ ಇರುವೆಡೆಯಲ್ಲಿ ಹರಿತ ಆಯುಧದಿಂದ ಗೆರೆ ಕೊರೆದುನೋಡಿ ವಿದ್ಯಾರೇಖೆ ಇದೆ ಎಂದೂ ತರ್ಕ ಸಾಧಿಸಬಹುದು. ವಿದ್ಯಾರೇಖೆ ಇಲ್ಲ ಎಂದಾದಮೇಲೆ ಅದಕ್ಕಾಗಿ ಪ್ರಯತ್ನಿಸುವುದೇ ಬೇಡ, ಕೈಕಟ್ಟಿ ಕುಳಿತುಕೊಳ್ಳುವುದೇ ಒಳ್ಳೆಯದು ಎಂದೂ ತರ್ಕ ಸಾಧಿಸಬಹುದು. ಇಂಥ ತರ್ಕಪ್ರಧಾನ ಬುದ್ಧಿಯನ್ನು ತರ್ಕಾತೀತವಾಗಿಸುವುದು ಅಂತರ್ಜಗತ್ತಿನ ಗುರುತ್ವದ ಒಂದು ಭಾವ. ತರ್ಕಾತೀತವಾಗಿಸುವುದು ಎಂದರೆ ಎಲ್ಲವನ್ನು ಸಹಜವಾಗಿ ಸ್ವೀಕರಿಸುವುದು. ಪ್ರತಿಯೊಬ್ಬರಿಗೂ ಬದುಕುವ ಅವಕಾಶ ಇದೆ ಎನ್ನುವುದೇನೋ ನಿಜ . ಆದರೆ, ಅವಕಾಶವನ್ನು ಬಳಸಿಕೊಳ್ಳುವಾಗ ಇದನ್ನು ತಮ್ಮ ಮೂಗಿನ ನೇರಕ್ಕೆ ಗಮನಿಸುವುದರ ಬದಲು ಅವಕಾಶದ ಸಾಧ್ಯತೆಗಳ ಇತಿಮಿತಿಗಳನ್ನು ಗುರುತಿಸಿ, ಅದರಂತೆ ನಡೆಯನ್ನು ರೂಪಿಸಿಕೊಳ್ಳುವುದು ಬುದ್ಧಿಯ ಮೇಲಿನ ಗುರುತ್ವ.

ಅಹಂಕಾರ ನಾನು ಎಲ್ಲಕ್ಕೂ ಮಿಗಿಲು ಎನ್ನುವ ಭಾವ ಮತ್ತು ಅದನ್ನು ಆಧರಿಸಿದ ನಡೆ. ಇದು ತಪ್ಪು ಸರಿಗಳ ವಿವೇಚನೆಯನ್ನು ಮಾಡಗೊಡದು. ಹಿತ ಅಹಿತಗಳನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ನಡೆಯನ್ನು ರೂಪಿಸಲು ರೂಢಿಸಿಕೊಳ್ಳಲು ಸಾಧ್ಯವಾದರೆ ಅದುವೇ ಅಹಂಕಾರದ ಮೇಲಿನ ಗುರುತ್ವ. ಮನಸ್ಸು ಭಾವಪ್ರಧಾನವಾದದ್ದು. ಅದು ನೋವು, ದುಃಖ, ಕೊರತೆಗಳನ್ನೂ ವೈಭವೀಕರಿಸುತ್ತದೆ. ಅವುಗಳ ನಿವಾರಣೆಯನ್ನು ಪ್ರತಿಬಂಧಿಸುತ್ತದೆ. ಹೀಗಾಗದಂತೆ ನೋಡಿಕೊಳ್ಳುವುದೇ ಮನಸ್ಸಿನಮೇಲೆ ಪಡೆದ ಗುರುತ್ವ.

ಜಗತ್ತು ಗತಿಶೀಲವಾದದ್ದು. ಅದರ ಸ್ವರೂಪ ಸೃಷ್ಟ್ಯಾತ್ಮಕತೆ. ಸೃಷ್ಟಿಯು ನಿರಂತರವಾಗಿ ಸ್ಥಿತಿ, ಲಯಗಳಿಗೆ ಒಳಪಡುವ ಸೃಜನಶೀಲತೆ. ಅಂತಹ ಸೃಜನಶೀಲ ಸಹಜವಾಗಿ ಜಗದ್ಗುರು. ತನ್ನನ್ನು ತಾನೇ ಸದಾ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು, ಪಾಸಿಟೀವ್ ಚಿಂತನೆಗೆ ತೆರೆದುಕೊಳ್ಳುವುದು, ಭಾವಾವೇಗಕ್ಕೆ ಒಳಪಡದೆ ಇರುವುದು ಗುರುತ್ವ. ಇದು ವ್ಯಕ್ತಿಗೂ ಮಾರ್ಗದರ್ಶಕ, ಸಮುದಾಯ, ಸಮಾಜಕ್ಕೂ ಮಾರ್ಗದರ್ಶಕ. ಬಾಹ್ಯ ಜಗತ್ತು ಮತ್ತು ಅಂತರ್ಜಗತ್ತುಗಳನ್ನು ಸ್ಥಿತಪ್ರಜ್ಞೆ, ನಿಷ್ಕಾಮ ಕರ್ಮದ ಮೂಲಕ ತನ್ನ ಹಿಡಿತದಲ್ಲಿಟ್ಟುಕೊಂಡ ಕೃಷ್ಣ ಸಹಜವಾಗಿ ಜಗದ್ಗುರು.

ಸನಾತನಧರ್ಮದ ದೇವದೇವತೆಗಳಲ್ಲಿ ಭಕ್ತರಿಗೆ ಅತ್ಯಂತ ಆಪ್ತದೈವ ಶ್ರೀ ಕೃಷ್ಣನೇ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಉತ್ತರದ ಬಂಗಾಳದಲ್ಲಿ ರಾಧಾ ಕೃಷ್ಣನಾಗಿ, ಪೂರ್ವದ ಒರಿಸ್ಸಾದಲ್ಲಿ ಜಗನ್ನಾಥನಾಗಿ, ಪಶ್ಚಿಮದ ಗುಜರಾತಿನಲ್ಲಿ ರಾಠೋಡನಾಗಿ, ರಾಜಸ್ಥಾನದಲ್ಲಿ ಶ್ರೀನಾಥಜೀ ಎಂದು ಕರೆಸಿಕೊಂಡು, ಮಹಾರಾಷ್ಟ್ರದಲ್ಲಿ ವಿಠೋಬಾ ಎನ್ನಿಸಿಕೊಂಡು, ದಕ್ಷಿಣ ಭಾರತದ ಕರ್ನಾಟಕದಲ್ಲಿ ಮುರಳೀಕೃಷ್ಣನಾಗಿಯೂ ಮತ್ತು ಕೇರಳದಲ್ಲಿ ಗುರುವಾಯೂರಪ್ಪನಾಗಿಯೂ ಇವನು ಭಾರತದಾದ್ಯಂತದ ಕೃಷ್ಣಭಕ್ತರನ್ನು ಒಗ್ಗೂಡಿಸುವ ಆರಾಧ್ಯದೈವ. ಕನಕದಾಸರನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಕೃಷ್ಣಾಎನ್ನುವ ದೇವರನಾಮದ ಕೊನೆಯಲ್ಲಿನಾ ನಿನ್ನೊಳಗೋ ನೀನು ನನ್ನೊಳಗೋ ಕೃಷ್ಣಾ ಎಂದು ಕನಕದಾಸರು ಉದ್ಗರಿಸುತ್ತಾರೆ. ಮಧುರೆಯ ಸೆರೆಮನೆಯಲ್ಲಿ, ಯಮುನಾ ನದಿಯ ದಂಡೆಯಲ್ಲಿ, ಗೊಲ್ಲವಾಡಿಯ ಬನದಲ್ಲಿ, ಸಮುದ್ರದ ಅಲೆಗಳ ತೆಕ್ಕೆಯಲ್ಲಿದ್ದ ದ್ವಾರಕೆಯಲ್ಲಿ ಮಾತ್ರವಲ್ಲದೆ ಭಾರತದ ಮೂಲೆ ಮೂಲೆಗಳಲ್ಲಿ ಭಕ್ತರ ಆರ್ದ್ರವಾದ ಭಕ್ತಿರಸದಲ್ಲಿ, ರಸಸೂಕ್ತಿಯಲ್ಲಿ ಶ್ರೀಕೃಷ್ಣ ನೆಲೆಸಿದ್ದಾನೆ .

ನಮಗೆ ಇಬ್ಬರು ಅಧಿದೈವಗಳುಹರಿ, ಹರ. ಹರಿ ಯಾರು? ಪ್ರಶ್ನೆಗೆ ಒಂದು ಉತ್ತರ ಅವನು ಅನುಪಮ, ಅಪ್ರಮೇಯ, ಪ್ರಣವ ಸ್ವರೂಪಿ, ತತ್(ಅದು) ಸತ್(ಇರುವಿಕೆ/ ಬೀಯಿಂಗ್) ಎನ್ನುವ ವ್ಯಾಖ್ಯೆಗೆ ಮಾತ್ರ ನಿಲುಕುವವನು. ಇನ್ನೂ ಒಂದು ಉತ್ತರ ಇದೆ: ಸೃಷ್ಟಿಕರ್ತ ಆಗಿರುವ ಬ್ರಹ್ಮ ಸ್ಥಿತಿಕರ್ತನಾಗಿರುವ ಹರಿಯ ನಾಭಿಕಮಲದಿಂದ ಮೂಡಿಬಂದ ಮಗನಾಗಿರುವುದರಿಂದ ಹರಿ ಸೃಷ್ಟಿಯ ಮೂಲಾಧಾರನೂ ಹೌದು, ಹಾಗೆಯೇ ಯುಗ ಯುಗಗಳಲ್ಲೂ ಸಂಭವಿಸುವವನೂ ಹೌದು. “ಕೃಷ್ಣಕಾಲ ದೇಶದ ಒಳಗಿನ ಹರಿಯ ಒಂದು ಅವತಾರ, ಹುಟ್ಟಿಬಂದವನು, ಸೃಷ್ಟಿಯ ಒಂದು ವಿಶಿಷ್ಟವಾದ ರೂಪ.

ನಮ್ಮ ಜೀವನಕ್ಕೆ ಸಂತೃಪ್ತಿ ದೊರೆಯುವುದು ಸೌಂದರ್ಯದ ರಸಾನುಭವ ಆದಾಗಲೇ. ವಾಸ್ತವವಾಗಿ ನಮ್ಮ ಸುತ್ತಲಿನ ಸೃಷ್ಟಿಯೇ ಸೌಂದರ್ಯರಸಾನುಭವದ ಆಕರ. ಕೃಷ್ಣ ಸಹಜವಾಗಿ ಚೆಲುವ, ಸಮ್ಮೋಹಕ, ಎಲ್ಲ ಸಿರಿ ಸೊಬಗುಗಳ ಕಳೆಗಳ ಗಣಿ, ಚಿಗುರು ತುಟಿಯ ಮಂದಹಾಸ ಉಳ್ಳವನು, ಕೌಸ್ತುಭ ಮಣಿಯಿಂದ ಬೆಳಗುತ್ತಿರುವವನು, ಕಾಮನಬಿಲ್ಲಿನಂತಹ ವರ್ಣರಂಜಿತ ದುಕೂಲ ಉಟ್ಟ ಚೆಲುವರಾಯ. ನಮಗೆ ಸೃಷ್ಟಿಯೇ ಮುಖ್ಯವಾದದ್ದು, ಏಕೆಂದರೆ ಅದು ಆಕರ್ಷಕವಾದದ್ದು ಮತ್ತೆ ಆನಂದವನ್ನು ಕೊಡುವಂತಹುದು. ಜಗತ್ತುಅಮೃತಾನಂದ ಭೋಗವನ್ನು ಅನುಭವಿಸಲು ಮೂಲ ಆಕರ . ಅದು ಸೌಂದರ್ಯದಲ್ಲಿ, ಪೌರುಷದಲ್ಲಿ, ತೇಜಸ್ಸಿನಲ್ಲಿ, ಜ್ಞಾನಕುತೂಹಲದಲ್ಲಿ, ವಾಸ್ತವಿಕತೆಯ ಅರಿವಿನಲ್ಲಿಪರಮ ಮನುಷ್ಯತ್ವವನ್ನು ಮೆರೆಯಲು ಅವಕಾಶ ಕೊಡುವ ಮಧ್ಯವರ್ತಿ.

ಸ್ವಾರ್ಥದಿಂದ ಹಿತದ ಸಾಧ್ಯತೆಯನ್ನು ಮಿತಗೊಳಿಸುವವರಲ್ಲಿ ಕೆಲವರನ್ನು ಪ್ರೀತಿಯಂದ ತಿದ್ದುತ್ತಾ, ಮತ್ತೆ ಕೆಲವರನ್ನು ಅಸ್ತ್ರ/ಶಸ್ತ್ರ ಚಿಕಿತ್ಸೆಯಿಂದ ಸರಿಪಡಿಸುತ್ತಾ, ಕ್ಷೇಮವನ್ನು ಪ್ರತಿಷ್ಠಾಪಿಸಿ ಮಾನವೀಯತೆಯನ್ನು ಎತ್ತಿಹಿಡಿಯಲು ಸಾಧ್ಯವಿರುವುದು ಜಗತ್ತಿನಲ್ಲಿಯೇ. ಶಿವಸತ್ವವನ್ನು ಕಾಣಲು ಸಾಧ್ಯವಿರುವುದು ಸೃಷ್ಟಿಯಲ್ಲಿ ಮಾತ್ರ. ಸೃಷ್ಟಿಯಿಂದಾಗಿಯೇ ಕಿವಿಯಿಂದ ಕೇಳಿ ಸಂತೋಷಪಡುವ ಸ್ವರ ಸಂಗಮಕ್ಕೆ, ಸ್ವರ ಸಂಗಮ ಹೊರಹೊಮ್ಮಿಸುವ ನಾದಾನಂದಕ್ಕೆ, ನಾದ ಮೂಡಿಸುವ ಅರ್ಥಪೂರ್ಣ ಸಾಹಿತ್ಯಕ ಗೀತಕ್ಕೆ ಸ್ಥಾನಮಾನ. ಎಲ್ಲಿ ನೋಡಿದರೂ, ಎಲ್ಲಿ ಸ್ಪರ್ಶಿಸಿದರೂ, ಎಲ್ಲಿ ಆಲಿಸಿದರೂ, ಯಾವುದರ ಅರಿವನ್ನು ಪಡೆದರೂ ಸೃಷ್ಟಿ ನಮ್ಮನ್ನು ಸಂತೋಷ ಪಡಿಸುತ್ತದೆ, ಆಶ್ಚರ್ಯಚಕಿತರನ್ನಾಗಿಸುತ್ತದೆ. ಊರಿದ ಒಂದು ಬೀಜ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಹೆಮ್ಮರದ ಶಾಖೋಪಶಾಖೆಗಳಾಗಿ, ಶಾಖೆಗಳಲ್ಲಿಯ ಎಲೆಗಳಾಗಿ, ಹೂವಾಗಿ, ಕಾಯಾಗಿ, ಹಣ್ಣಾಗಿ ರೂಪಾಂತರಗೊಳ್ಳುತ್ತದೆ. ತಾನು ಮೊದಲು ಇದ್ದುದಕ್ಕಿಂತಲೂ ನೂರ್ಮಡಿಯಾಗಿ ತನ್ನನ್ನು ತೋರಿಸಿಕೊಳ್ಳುತ್ತದೆ. ಸೃಷ್ಟಿ ಎಲ್ಲೆಡೆಯಲ್ಲೂ ಹೀಗೇ. ಇಂಥ ಮಾಟದ ರಹಸ್ಯ ಪ್ರೇಮನಿಷ್ಠರಿಗೆ, ಆಪ್ತವಾದ ಭಾವ ಇರುವವರಿಗೆ, ಆರ್ದ್ರ ಹೃದಯಿಗಳಿಗೆ, ಮಹಾತ್ಯಾಗಿಗಳಿಗೆ, ಸ್ವಾರ್ಥರಹಿತರಿಗೆ ಖಂಡಿತವಾಗಿ ಅರ್ಥವಾಗುತ್ತದೆ. ಲೋಕದಿಂದ ಸುಖಕ್ಕೆ ಬೆಲೆ, ಸುಖದಿಂದಾಗಿ ಲೋಕಕ್ಕೆ ಬೆಲೆ ಎಂಬುದು ಸೃಷ್ಟಿ ಹೊರಸೂಸುವ ರಸರೂಪೀ ಅರಿವು. ಇದನ್ನು ಪ್ರಪ್ರಥಮವಾಗಿ ತೋರಿಸಿಕೊಟ್ಟವನು ಶ್ರೀಕೃಷ್ಣ

ವಿಶ್ವದ ಧಾರ್ಮಿಕ ಇತಿಹಾಸದಲ್ಲಿ, ಬಹುಸಂಖ್ಯಾತರು ತಮ್ಮನ್ನು ಉದ್ಧಾರ ಮಾಡುವವನೊಬ್ಬ ಬರುತ್ತಾನೆ ಎಂದು ಉದ್ಧಾರಕನಿಗಾಗಿ ಕಾಯುತ್ತಾ ಇರುವುದು ಸರ್ವೇ ಸಾಮಾನ್ಯವಾಗಿದೆ. ಆದರೆ, ನಮ್ಮ ಸನಾತನ ಧರ್ಮದ ಕಾಯುವಿಕೆಗೂ ಉಳಿದವರ ಕಾಯುವಿಕೆಗೂ ಬಹಳ ಅಂತರ ಇದೆ. ನಮ್ಮಲ್ಲಿ ಉದ್ಧಾರಕನೊಬ್ಬ ಪ್ರತಿ ಯುಗದಲ್ಲೂ ಪ್ರಕಟನಾಗುತ್ತಾನೆ. ಉದ್ಧರಿಸುವ ಕೆಲಸ ಮನುಷ್ಯನ ರೂಪದಲ್ಲಿಯೇ ಆಗುತ್ತದೆ ಎಂದೇನೂ ಇಲ್ಲ. ಸೃಷ್ಟಿಯ ಯಾವ ರೂಪ, ಯಾರನ್ನು, ಯಾವ ಜನಸಮೂಹವನ್ನು ಉದ್ಧರಿಸುತ್ತದೆ ಎಂಬುದು ದೇವ ರಹಸ್ಯ. ನಮ್ಮಲ್ಲಿ ಅಧಿದೈವಕ್ಕೂ ಸೃಷ್ಟಿಗೂ ಭಿನ್ನಾ ಭಿನ್ನ ಸಂಬಂಧ.

ಶ್ರೀಕೃಷ್ಣ ವಾಸ್ತವವಾಗಿ ಅವತರಿಸಿ ತನ್ನದೇ ಆದ ಮಾರ್ಗದಲ್ಲಿ ನಡೆದು ಒಂದು ಚರಿತ್ರೆಯನ್ನು ನಿರ್ಮಿಸಿದವನು. ಕಾಲದ ಒಂದು ಗತಿ ಚರಿತ್ರೆ. ಕಾಲ ಅಖಂಡವಾದದ್ದು. ಇಂದು ಎನ್ನುವುದು ಏನಿದೆಯೋ ಅದು ಸದಾ ಹಿಂದಿನದು ಆಗುತ್ತಲೇ ಇರುತ್ತದೆ. ಹಾಗೆಯೇ ಮುಂದಿನದು ಎನ್ನುವುದು ಏನಿದೆಯೋ ಅದೂ ಸಹ ಸದಾ ಇಂದಿನದು  ಆಗುತ್ತಲೇ ಇರುತ್ತದೆ. ಹಿಂದಿನದು ಎನ್ನುವುದು ಇರದಿದ್ದರೆ ಇಂದಿನದು ಎನ್ನುವುದು ಇರಲಾರದು. ಅದನ್ನು ಗ್ರಹಿಸುವ ಜೀವ ಎನ್ನುವುದೊಂದು ಇರದಿದ್ದರೆ ಹಿಂದಿನದುಇಂದಿನದುಮುಂದಿನದು ಎನ್ನುವುದಕ್ಕೆ ಅರ್ಥವೇ ಇರುವುದಿಲ್ಲ. ಶ್ರೀಕೃಷ್ಣ ಹಿಂದೆ ಆದವನು, ಈಗ ಇಲ್ಲ ಎಂದರೆ ಕಾಲದ ಅಖಂಡತೆಗೆ ಅಪಚಾರ.

ಹಿಂದೆ ಬದುಕಿಗೆ ಮಾರ್ಗದರ್ಶಕವಾಗಿ ಏನೇನು ಸಂಭವಿಸಿತೋ ಅದೆಲ್ಲಾ ಇಂದಿಗೂ ಮಾರ್ಗದರ್ಶಕವಾದದ್ದೇ. ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ ಕೃಷ್ಣನ ಬೃಹತ್ ರೂಪದ ತೇಜಸ್ಸಿನ ಒಂದು ಬಿಂದು, ಜೀವಜ್ಯೋತಿ. “ಜೀವ ಜ್ಯೋತಿ ಎಂದೂ ಜೀವಜ್ಯೋತಿಯೇ.” ಅದು ಮನಸ್ಸಿನ ಕತ್ತಲೆ, ಅಜ್ಞಾನವನ್ನು ನಿವಾರಿಸುವ ಬೆಳಕು. (ಹರಿಗೆ)ಕೃಷ್ಣನಿಗೆ ಅರ್ಥ(ಲಕ್ಷ್ಮಿ) ಮತ್ತು ಕಾಮ(ಸರ್ಪ) ಅವನ ಅರಿವಿನ ಆಭೂಷಣಗಳು, ಸುಖವಾಗಿ ನಿದ್ರಿಸುವ ಹಾಸಿಗೆ; ಪೋಷಕತೆ ಮತ್ತು ಮಾಧುರ್ಯಗಳ ಪ್ರತೀಕ ಆದ ಕ್ಷೀರಸಾಗರ ಅವನಿಗೆ ಮಂಚ. ಹೀಗಿರುವುದರಿಂದಲೇ ಅವನು ಯಾವಾಗಲೂ ಸಹಜವಾಗಿಸಾಧು ಸಮುಧೃತಂ; ಬೇಡವಾದುದನ್ನು ತೆಗೆದುಹಾಕಿ, ಬೇಕಾದುದನ್ನು ಸ್ಥಿರೀಕರಿಸಿ ವ್ಯವಸ್ಥೆಯನ್ನು ಅಚ್ಚುಕಟ್ಟುಗೊಳಿಸುವ ಅಸ್ತ್ರ ಶಸ್ತ್ರ ಚಿಕಿತ್ಸಕ. ಕೃಷ್ಣ ಅವತರಿಸಿದುದು ಮಾನವನ ಐಹಿಕ ಜೀವನದ ದುಃಸ್ಥಿತಿಯನ್ನು ಸರಿಪಡಿಸುವುದಕ್ಕೇ ವಿನಃ ಗುಡಿಗಳಲ್ಲಿ ಪೂಜೆಗೊಳ್ಳುವುದಕ್ಕಲ್ಲ.

ಭಾಗವತದಲ್ಲಿ ಕೃಷ್ಣನ ಜನನದಿಂದ ಹಿಡಿದು ಅವನು ಪ್ರೌಢನಾಗುವವರೆಗಿನ ಅವನ ಜೀವನಗತಿಗೆ ಸಂಬಂಧಿಸಿದ ವಿಶೇಷ ಘಟನೆಗಳ ವರ್ಣನೆ ಇದೆ. ಪ್ರಾರಂಭದಲ್ಲಿ ರಕ್ಷಣೆಗಾಗಿ ಭೂದೇವಿ ಮೊರೆ ಇಟ್ಟಿದ್ದಾಳೆ; ಅದಕ್ಕೆ ಬ್ರಹ್ಮ, ರುದ್ರರದು ಒಮ್ಮುಖ ಪ್ರತಿಕ್ರಿಯೆಯಾದರೆ, ವಿಷ್ಣುವಿನದು ದಿವ್ಯ ಕರುಣೆಯಿಂದ ಆಪ್ಲಾವಿತ ಆದ ಅಭಯ. ಇದರಿಂದ ಭೂಮಿಗೂ ಪರಮ ವಾಸ್ತವತೆಗೂ ಆತ್ಮೀಯ ಬೆಸುಗೆಯ ಬಂಧ ಮೂಡುತ್ತದೆ. ಇದು ಕೃಷ್ಣನ ಜನನಕ್ಕೆ ಒಂದು ಪೀಠಿಕೆ, ಹರಿಯ ಗುರುತ್ವದ ಚರಿತ್ರೆಗೆ ದೊರೆಯುವ ಭೂ ಸಂಬಂಧದ ಮೂಲ ಎಳೆ. ಕೃಷ್ಣಯೋಗೀಶ್ವರ ಆದ ಶ್ರೇಷ್ಠ ಮನುಷ್ಯ, ಮಾನವೀಯ ತುಡಿತದ ಒಡನಾಡಿ. ಕೃಷ್ಣ ವೈಯಕ್ತಿಕವಾಗಿ ಆರಾಧ್ಯದೈವ ಆಗಿರುವಂತೆ ಸಮಷ್ಟಿ ತತ್ತ್ವದ ಪ್ರತೀಕವೂ ಆಗಿದ್ದಾನೆ. ಕೃಷ್ಣ ಪ್ರತಿನಿಧಿಸುವ ಸಮಷ್ಟಿ ತತ್ತ್ವದ ಅರಿವು ಮತ್ತು ಅದರ ಒಂದು ರೂಪವಾದ ನಿಷ್ಕಾಮ ಕರ್ಮ ಪ್ರತಿಯೊಬ್ಬನಲ್ಲೂ ವಾತ್ಸಲ್ಯ ಭಾವವಾಗಿ ಅಂತರ್ಗತ. ಸಮಷ್ಟಿಯ ಪ್ರತಿನಿಧಿಯಾದ ಶ್ರೀಕೃಷ್ಣನ ಮಾತನ್ನು ನಡೆಸಲು ಅರ್ಜುನ ಸ್ವಲ್ಪವೂ ಸಂದೇಹ ಇಲ್ಲದ ಮನಸ್ಸಿನಿಂದ ಸಂಪೂರ್ಣವಾಗಿ ಸನ್ನದ್ಧನಾದುದರಿಂದಲೇ ನೆಮ್ಮದಿಯನ್ನು ಪಡೆದದ್ದು, ಜಯಗಳಿಸಿದುದು.

ಶ್ರೀಕೃಷ್ಣ ರೂಢಿಸಬಯಸುವ, ಎಲ್ಲರನ್ನೂ ಉದ್ಧರಿಸುವ ಲೋಕತಾರಕ ಪ್ರಕ್ರಿಯೆಯಾದ ಕರ್ಮಯೋಗ ಸೋಮಾರಿಗಳಿಗೆ, ಲೋಭಿಗಳಿಗೆ, ಶೋಷಕರಿಗೆ ಅವಕಾಶ ಕೊಡದ ವ್ಯವಸ್ಥೆ, ನಮ್ಮ ಸಾಂಸ್ಕೃತಿಕ ಪ್ರಜ್ಞೆ, ಎಲ್ಲದರಲ್ಲೂ ತಾದಾತ್ಮ್ಯತೆ, ಪ್ರೀತಿದ್ವೇಷರಹಿತವಾದ ಸಮದೃಷ್ಟಿ. ಕೃಷ್ಣ ನಿರೂಪಿಸಿದ ಕರ್ಮಯೋಗದ ದೃಷ್ಟಿಯಲ್ಲಿ ವ್ಯಕ್ತಿಯ ಫಲಾಸಕ್ತಿ ಆತ ಸಮಷ್ಟಿಗೆ ಎಸಗುವ ದ್ರೋಹ. ಸಮಷ್ಟಿಯ ಫಲವಿತರಣೆಯಲ್ಲಿ ಅನ್ಯಾಯ, ಅದಕ್ಷತೆ, ಪಕ್ಷಪಾತ ತಲೆದೋರಿದರೆ ಅದು ವ್ಯಕ್ತಿಗೆ ಎಸಗುವ ದ್ರೋಹ. ಕೃಷ್ಣ ತೋರಿದ ಕರ್ಮಯೋಗ ವ್ಯಕ್ತಿಗೂ ಸಮಷ್ಟಿಗೂ ನಡುವೆ ಇರಲೇಬೇಕಾದ ಅನ್ಯೋನ್ಯ ಹಿತಾಕಾಂಕ್ಷೆಯ ದೃಷ್ಟಿಯಿಂದ ಮಾತ್ರವಲ್ಲದೆ ಜಗತ್ತಿನ ವ್ಯವಸ್ಥಿತ ನಿರ್ವಹಣೆಯ ದೃಷ್ಟಿಯಿಂದ, ಆರೋಗ್ಯಯುತ ದೇಹ ಮತ್ತು ಮನಸ್ಸಿನ ದೃಷ್ಟಿಯಿಂದಲೂ ಎಲ್ಲಾ ಕಾಲಕ್ಕೂ ಪ್ರಸ್ತುತ.

ವಸುದೇವನಂತಹವರನ್ನು ಕಟ್ಟಿಹಾಕಿದ ಬಗೆ ಬಗೆಯ ರೂಪದ ನಿರ್ಬಂಧಗಳ ಬಂಧನಗಳಿಂದ ವಸುದೇವನೇ ಆದಿಯಾಗಿ ಉಳಿದವರೂ ಬಿಡುಗಡೆ ಪಡೆಯುವುದು ಕೃಷ್ಣನ ಆಪ್ತಸಂಗಮದಿಂದಲೇ. ನಂದ ವಸುದೇವನ ಪ್ರಿಯ ಸ್ನೇಹಿತ. ಅವನನ್ನು ನಂಬಿ ವಸುದೇವ ಸುರಿಯುತ್ತಾ ಇರುವ ಧಾರಾಕಾರ ಮಳೆಯಲ್ಲಿಯೇ ಕಂಸನ ಸೆರೆಮೆನೆಯಿಂದ ಹೇಗೋ ಹೊರಬಂದಿದ್ದಾನೆ. ರಾತ್ರೋ ರಾತ್ರಿ ಕಾಲ್ನಡಿಗೆಯಲ್ಲಿಯೇ ಯಮುನಾ ನದಿ ದಾಟಿದ್ದಾನೆ. ನಂದನ ಪಾಳೆಯ ತಲುಪಿ ಮಲಗಿ ನಿದ್ರಿಸುತ್ತಿದ್ದ ನಂದನ ಹೆಂಡತಿ ಯಶೋದೆಯ ಬಳಿ ತನ್ನ ಮಗುವನ್ನು ಬಿಟ್ಟುಬಂದಿದ್ದಾನೆ. ಅದನ್ನು ಅವನು ನಂದನಿಗೆ ಆಗಲೇ ಹೇಳಬೇಕಿತ್ತು, ಆದರೆ ಹೇಳಲು ಸಮಯವಿಲ್ಲ, ಹೇಳಬೇಕೋ ಬೇಡವೋ ತಿಳಿದಿಲ್ಲ. ವಸುದೇವನ ಮಗು ಹುಟ್ಟಿದ ಸಮಯದಲ್ಲೇ ಯಶೋದೆಗೂ ಮಗು ಹುಟ್ಟಿತ್ತು. ಅದು ಯಶೋದೆಯ ಮಗ್ಗುಲಲ್ಲಿ ಇತ್ತು. ನಂದನ ಮಗುವನ್ನು ಅವನಿಗೆ ಹೇಳದೆ ಕೇಳದೆ ವಸುದೇವ ತಂದುಬಿಟ್ಟಿದ್ದಾನೆ. ಅದು ಹೆಣ್ಣು ಮಗು ಆಗಿದ್ದುದರಿಂದ ಕಂಸ ಅದನ್ನು ಕೊಲ್ಲಲಾರ ಎಂದು ನಂಬಿದ್ದಾನೆ. ನಂಬಿಕೆ ನಿಜವೋ ಹುಸಿಯೋ ತಿಳಿಯದು. ಮಗುವಿಗೆ ಕಂಸನಿಂದ ಆಪತ್ತು ಬಂದರೆ ಎನ್ನುವ ಆತಂಕ ಇದ್ದೇ ಇತ್ತು. ಸದ್ಯ! ಮಗುವೋ ಕಂಸನಿಗೆ ತನ್ನನ್ನು ಕೊಲ್ಲಲು ಬಿಡದೆ ನಿನ್ನ ಸಾವು ನಿನಗಾಗಿ ಕಾದಿದೆ ಎಂದು ಕಂಸನನ್ನು ಹೆದರಿಸಿ ಪಾರಾಗಿಹೋಗಿದೆ. ಅಷ್ಟರ ಮಟ್ಟಿಗೆ ವಸುದೇವನಿಗೆ ಅಪರಾಧಿ ಪ್ರಜ್ಞೆಯಿಂದ ಬಿಡುಗಡೆ ದೊರೆತಿದೆ.

ವಸುದೇವ ತಾನು ದೇವಕಿಯಿಂದ ಪಡೆಯುವ ಮಕ್ಕಳನ್ನೆಲ್ಲಾ ನಿನಗೆ ಒಪ್ಪಿಸುತ್ತೇನೆ ಎಂದು ಕಂಸನಿಗೆ ವಚನ ನೀಡಿ ತನ್ನನ್ನು ತಾನೇ ಕಟ್ಟಿಹಾಕಿಕೊಂಡಿದ್ದ. ಆಕಾಶವಾಣಿ ದೇವಕಿಯ ಎಂಟನೇ ಮಗು ಕಂಸನನ್ನು ಕೊಲ್ಲುತ್ತದೆ ಎಂದು ಘೋಷಿಸಿತ್ತು. ದೇವಕಿಯ ಆರೂ ಮಕ್ಕಳೂ ಗಂಡೇ ಆಗಿದ್ದವು. ಎಂಟನೇ ಮಗು ಎಂದು ಕಂಸ ಅಂದುಕೊಂಡದ್ದು ಗಂಡು ಮಗುವೇ ಆಗಿರಲಿಲ್ಲ. ಅದು ಹೆಣ್ಣು ಮಗುವಾಗಿತ್ತು. ಏನಾದರೂ ಅದು ಎಂಟನೇ ಮಗುವೇ, ತನ್ನನ್ನು ಕೊಲ್ಲುವ ಮಗುವೇ ಎಂದು ಕಂಸ ಅದನ್ನು ಕೊಲ್ಲಲು ಪ್ರಯತ್ನಿಸಿದರೆ ಅದು ಅವನ ಕೈಯಿಂದ ತಪ್ಪಿಸಿಕೊಂಡಿದೆ. ಅಷ್ಟೇ ಅಲ್ಲದೆ ಅವನನ್ನು ಕೊಲ್ಲುವ ಮಗು ಇನ್ನೆಲ್ಲೋ ಹುಟ್ಟಿದೆ ಎಂದು ಮತ್ತೊಂದು ಆಕಾಶವಾಣಿಯನ್ನು ಬಿತ್ತರಿಸಿದೆ. ಇದನ್ನು ಕ್ಷಣದಲ್ಲಿ ಕಂಸ ನಂಬಿದ. ವಸುದೇವ ದೇವಕಿಯರಿಗೆ ಇನ್ನೆಷ್ಟು ಮಕ್ಕಳಾದರೂ ತನಗೆ ಸಂಬಂಧವಿಲ್ಲ ಎಂದುಕೊಂಡ. ಅವರನ್ನು ತನ್ನ ಬಂಧನದಿಂದ ಬಿಡಿಸಿಬಿಟ್ಟ. ವಸುದೇವನಿಗೆ ಅವನ ವಚನದ ಬದ್ಧತೆಯಿಂದಲೂ ಬಿಡುಗಡೆ ದೊರೆತಿದೆ.

ಕಂಸ ದೇವಕಿ ವಸುದೇವರನ್ನು ನಾಲ್ಕು ಗೋಡೆಗಳ ಮಧ್ಯೆ ಗೃಹಬಂಧನದಲ್ಲಿರಿಸಿದ್ದ. ಅವರಿಗೆ ಹುಟ್ಟಿದ ಮಗು ತಕ್ಷಣವೇ ತನ್ನ ಕೈಸೇರಬೇಕು ಎಂದುಕೊಂಡಿದ್ದ. ಸೆರೆಮನೆಯಲ್ಲಿ ಸಿಕ್ಕಿಕೊಂಡು ಹೊರ ಜಗತ್ತಿನ ಸಂಪರ್ಕ ಸ್ವಲ್ಪವೂ ಇಲ್ಲದಂತೆ ಹಲವಾರು ವರ್ಷಗಳಿಂದ ನೀರಸವಾಗಿ ಬದುಕುತ್ತಿದ್ದ ವಸುದೇವ. ಅವನು ಬಂಧನದಲ್ಲಿ ಇದ್ದದ್ದು ಕಂಸನ ಆವರಣದಲ್ಲಿ. ಅಲ್ಲಿ ಅವನಿಗೆ ಅಯ್ಯೋ ಪಾಪ ಎನ್ನುವವರು ಇದ್ದರೂ ಅವನು ಅವರಲ್ಲಿ ಯಾರ ಹತ್ತಿರವೂ ತನ್ನ ಸಂಕಟವನ್ನಾಗಲೀ, ಸಂತೋಷವನ್ನಾಗಲೀ ಮುಕ್ತವಾಗಿ ಹೇಳಿಕೊಳ್ಳುವಂತಿಲ್ಲ. ಅವರೆಲ್ಲಾ ಕಂಸನ ಆಶ್ರಿತರು. ಅವನು ಏನು ಹಂಚಿಕೊಳ್ಳುವುದಿದ್ದರೂ ಅದು ಅವನಿಗೆ ಯಾವ ಕಾರಣಕ್ಕೂ ಅಹಿತ ಬಯಸದವರ ಹತ್ತಿರ ಮಾತ್ರ. ವಸುದೇವ ಆಪ್ತ ಎಂದುಕೊಳ್ಳಬಹುದಾದದ್ದು ನಂದನನ್ನು ಮಾತ್ರ. ಅವನನ್ನು ನಂಬಿ ವಸುದೇವ ತನ್ನ ಮಗುವನ್ನು ಅವನ ಮನೆಯಲ್ಲಿ ಬಿಟ್ಟು ಬಂದಿದ್ದ. 8ನೇ ಮಗುವಾಗಿ ಜನಿಸಿದ ಕೃಷ್ಣ ನಂದನ ಮನೆಯನ್ನು ಸೇರಿದ್ದಾನೆ, 8ನೇ ಮಗುವಾಗಿ ತೋರಿಬಂದ ಯೋಗಮಾಯೆ ಪಾರಾಗಿಹೋಗಿದ್ದಾಳೆ. ಅದರಿಂದಾಗಿ ಕಂಸ ದೇವಕಿಯೊಂದಿಗೆ ವಸುದೇವನನ್ನೂ ಬಂಧನದಿಂದ ಬಿಡಿಸಿದ್ದಾನೆ. ಅವನಿಗೆ ಈಗ ಎಲ್ಲಿ ಬೇಕಾದರೂ ಓಡಾಡುವ, ವ್ಯವಹರಿಸುವ ಸ್ವಾತಂತ್ರ್ಯ ದೊರೆತಿದೆ. ಮುಂಚೆ ಇದ್ದ ನಿರ್ಬಂಧದಿಂದಲೂ ಬಿಡುಗಡೆ ದೊರೆತಿದೆ.

ಯದುಗಳ ರಾಜ ಶೂರಸೇನನು ಮಥುರೆ ಮತ್ತು ಶೂರಸೇನ ರಾಜ್ಯಗಳ ಅರಸ. ರಾಜ ಶೂರಸೇನನು ಮಾರೀಶಾಳಿಂದ ಪಡೆದ ಒಂಬತ್ತು ಗಂಡು ಮಕ್ಕಳಲ್ಲಿ ವಸುದೇವ ಒಬ್ಬ. ರಾಜನ ಮಗನಾಗಿದ್ದುದರಿಂದ ಅವನಿಗೆ ಅವನದೇ ಆದ ಆಡಳಿತ ಕೇಂದ್ರ ಇತ್ತು, ಅದಕ್ಕೆ ಸೇರಿದ ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಅವನದಾಗಿತ್ತು. ಹರಿವಂಶದ ಪ್ರಕಾರ ಕಂಸನ ಅಪ್ಪ ಉಗ್ರಸೇನನ ರಾಜಶಾಹಿ ಇದ್ದಾಗ ವಸುದೇವ ಅವನ ಮಂತ್ರಿಯಾಗಿದ್ದ. ವಸುದೇವನು ಕಂಸನ ಬಂಧಿ ಆದಮೇಲೆ ಪ್ರಜಾ ವರ್ಗದ ಯೋಗಕ್ಷೇಮದ ಜವಾಬ್ದಾರಿಯನ್ನು ನಿರ್ವಹಿಸಲಾಗದ ಬಂಧಿತ ಆಗಿದ್ದ. ಪರಿಸ್ಥಿತಿಯಿಂದಲೂ ವಸುದೇವನಿಗೆ ಬಿಡುಗಡೆ ದೊರೆತಿದೆ.

ಬಿಡುಗಡೆ ಎನ್ನುವ ಪರಿಕಲ್ಪನೆಯೇ ವ್ಯಕ್ತಿಗೆ ವೈಯಕ್ತಿಕವಾಗಿ ಆಪ್ತಸಂಗಮ. ಬಿಡುಗಡೆ ಸಾಧ್ಯವಾಗುವುದೂ ಆಪ್ತಸಂಗಮದಿಂದಲೇ. ಬಂಧನದಲ್ಲಿದ್ದೇನೆ, ಅದರಿಂದ ಬಿಡಿಸಿಕೊಳ್ಳಬಹುದು ಎಂಬ ಅರಿವು ಒಬ್ಬನಿಗೆ ಆಪ್ತವಾದದ್ದು. ಅರಿವು ಬಿಡುಗಡೆ ಪಡೆಯ ಬಹುದಾದ ದಾರಿಗಳನ್ನು ತೆರೆದು ತೋರಿಸುತ್ತದೆ. ದಾರಿಗಳೂ ಆಪ್ತವಾದದ್ದೇ. ಹಣ, ಐಶ್ವರ್ಯ, ಆಸ್ತಿ ಇವೆಲ್ಲಾ ಬಡತನದ ಮಿತಿಗಳನ್ನು, ಬಂಧಗಳನ್ನು ಮೀರಲು ಸಹಾಯಕವಾದದ್ದು ಆಗಿ ಆಪ್ತ. ನೈತಿಕತೆಯ ಬದ್ಧತೆಯಿರುವವರಿಗೆ ಅವರ ಹಾಗೆ ಇರುವವರು ಜೊತೆಯಾದರೆ ಸಹಜವಾಗಿ ಅವರಿಗೆ ತಮ್ಮ ಜೀವನರೀತಿಗೆ ಸಂಬಂಧಿಸಿದಂತೆ ಉತ್ಸಾಹ ಹುಮ್ಮಸ್ಸು ಹೆಚ್ಚಾಗುತ್ತದೆ; ಅವರಿಗೆ ಜೊತೆಗಾರರು ಸಹಜವಾಗಿ ಆಪ್ತರೇ. ಆಪ್ತತೆಯಿಂದಾಗಿ ಅವರು ತಮಗೆ ತಾವೇ ಆಪ್ತ ಆಗುತ್ತಾರೆ. ಅದೇ ರೀತಿ ಮಾನಸಿಕ ಮಿತಿಗಳನ್ನು ವಾಸ್ತವವಾಗಿ ಮೀರಲು ಸಾಧನಸಂಪತ್ತು ಆಗುವ ಔದಾರ್ಯ, ಸಹೃದಯತೆ, ಹೃದಯವೈಶಾಲ್ಯ, ನಿಷ್ಕಲ್ಮಶ ಪ್ರೀತಿಗಳೆಲ್ಲಾ ಆಪ್ತವಾದದ್ದೇ. ಇದಕ್ಕೆಲ್ಲ ಒಂದು ಮೂರ್ತರೂಪವಾಗಿ ಶ್ರೀಕೃಷ್ಣ ಜಗದ್ಗುರು.

Feature Image Credit: istockphoto.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

IndicA Today - Website Survey

Namaste,

We are on a mission to enhance the reader experience on IndicA Today, and your insights are invaluable. Participating in this short survey is your chance to shape the next version of this platform for Shastraas, Indic Knowledge Systems & Indology. Your thoughts will guide us in creating a more enriching and culturally resonant experience. Thank you for being part of this exciting journey!


Please enable JavaScript in your browser to complete this form.
1. How often do you visit IndicA Today ?
2. Are you an author or have you ever been part of any IndicA Workshop or IndicA Community in general, at present or in the past?
3. Do you find our website visually appealing and comfortable to read?
4. Pick Top 3 words that come to your mind when you think of IndicA Today.
5. Please mention topics that you would like to see featured on IndicA Today.
6. Is it easy for you to find information on our website?
7. How would you rate the overall quality of the content on our website, considering factors such as relevance, clarity, and depth of information?
Name

This will close in 10000 seconds