close logo

ಬೌದ್ಧಿಕಸಮರಾಂಗಣದ ಕ್ಷಾತ್ರತೇಜೋನ್ವಿತ ಚೇತನ ‘ಸಾವರ್ಕರ್’ – ಒಂದು ಕಿರು ಪರಿಚಯ

ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್ ಎಂದು ತಮ್ಮ ಕವಿತೆಯ ಮುಖಾಂತರ ಅವರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿ ಕೊಡಲು ಪ್ರಯತ್ನಿಸಿದ್ದು ದೇಶದ ಅಜಾತಶತ್ರು ಎಂದೇ ಖ್ಯಾತರಾದ ದಿವಂಗತ ಅಟಲ್ ಬಿಹಾರಿ ವಾಜಪೇಯೀಯವರು

ನೆರೆಯ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಭಗೂರು ಎಂಬುದು ಒಂದು ಚಿಕ್ಕ ಹಳ್ಳಿ. 1883 ಮೇ ತಿಂಗಳ 28 ನೇ ತಾರೀಖಿನಂದು ಭಗೂರು ಗ್ರಾಮದಲ್ಲಿದ್ದ ದಾಮೋದರಪಂತ್ ಸಾವರ್ಕರರ ಮನೆಯಲ್ಲಿ ಅವರ ಧರ್ಮಪತ್ನಿ ರಾಧಾಬಾಯಿಯವರ ಒಡಲಲ್ಲಿ ಒಂದು ಗಂಡುಮಗುವಿನ ಜನನವಾಯಿತು. ದಾಮೋದರ ಪಂತರಿಗೆ ಮೊದಲೇ ಗಣೇಶನೆಂಬ ಮಗನಿದ್ದ. ಗಣೇಶನ ತರುವಾಯ ಹುಟ್ಟಿದ ಮಗುವಿಗೆ ವಿನಾಯಕ ಎಂಬ ಹೆಸರನ್ನಿಟ್ಟರು. ಗಣೇಶ, ವಿನಾಯಕ ಎರಡೂ ಒಂದೇ ದೇವರ ಹೆಸರುಗಳಷ್ಟೇ! ಸಮಾನ ಅರ್ಥದ ಹೆಸರುಗಳನ್ನು ಧರಿಸಿದ ಅಣ್ಣತಮ್ಮಂದಿರು ಮುಂದೆ ಸಮಸಮಾನವಾಗಿ ದೇಶಕಾರ್ಯದಲ್ಲಿ ತಮ್ಮ ದೇಹ ಸವೆಸಿದುದನ್ನು ಕಂಡಾಗ ನಾಮಕರಣ ಅರ್ಥಪೂರ್ಣವಾಗಿ ಹೊಮ್ಮಿದುದನ್ನು ಕಾಣುತ್ತೇವೆ. ನಾಸಿಕದ ಶಿವಾಜಿ ಶಾಲೆಯಲ್ಲಿ ಅವರ ಪ್ರಾಥಮಿಕ ಶಿಕ್ಷಣವಾಯಿತು. 9ನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆಯ ಪೋಷಣೆಯಲ್ಲಿ ಬೆಳೆದ ವಿನಾಯಕರು  ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತರಾದರು. ಭಾರತವು ಆಗ ಬ್ರಿಟಿಷರ ಆಳ್ವಿಕೆಯಲ್ಲಿತ್ತು. 1897ನೇ ಇಸ್ವಿಯಲ್ಲಿ ಭಾರತದಾದ್ಯಂತ ವಿಕ್ಟೋರಿಯ ಮಹಾರಾಣಿಯ ಸಿಂಹಾಸನಾರೋಹಣದ ವಜ್ರ ಮಹೋತ್ಸವ ಆಚರಿಸುವಂತೆ ಬ್ರಿಟಿಷ್ ಸರಕಾರ ಏರ್ಪಾಡು ಮಾಡಿತ್ತು. ಅದೇ ಸಮಯಕ್ಕೆ ಮಹಾರಾಷ್ಟ್ರದಲ್ಲೆಲ್ಲ ಪ್ಲೇಗಿನ ಪಿಡುಗು ಬೇರೆ! ಜನರು ನೊಣಗಳಂತೆ ಪಟಪಟನೇ ಸಾಯುತ್ತಿದ್ದರು. ಎತ್ತ ನೋಡಿದತ್ತ ಪ್ಲೇಗಿನ ಹಾವಳಿ. ಇಂಥ ಸಂದರ್ಭದಲ್ಲಿ ಆಳರಸಿಯ ಸಿಂಹಾಸನಾರೋಹಣದ ಉತ್ಸವ ಆಚರಿಸಬೇಕೆಂಬ ಒತ್ತಾಯವು ನೋವಿನ ಮೇಲೆ ಬರೆ ಎಳೆದಂತೆ ಆಗಿತ್ತು. ದೇಶಪ್ರೇಮಿ ತರುಣರಿಗೆ ಇಂಥ ಅಪಮಾನ ಸಹಿಸುವುದಾಗಲಿಲ್ಲ. ಚಾಪೇಕರ್ ಸಹೋದರರು ಎಂಬ ದೇಶಭಕ್ತರು ಆಳರಸರ ಧೋರಣೆಯನ್ನು ಪ್ರತಿಭಟಿಸುವುದಕ್ಕಾಗಿ ಇಬ್ಬರು ಆಂಗ್ಲ ಅಧಿಕಾರಿಗಳನ್ನು ಗುಂಡಿಟ್ಟು ಕೊಂದರು. ಚಾಪೇಕರ್ ಸಹೋದರರನ್ನು ಬಂಧಿಸಿ ಆಂಗ್ಲ ಸರಕಾರ ಅವರನ್ನು ಗಲ್ಲಿಗೇರಿಸಿತು. ಚಾಪೇಕರ್ ಸಹೋದರರ ಸಾಹಸ ಮತ್ತು ಬಲಿದಾನ ಸಾವರ್ಕರ್ ಸಹೋದರರ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಮೂಡಿಸಿದವು. 1899ರಲ್ಲಿ ದೇಶವನ್ನು ಮುತ್ತಿದ ಪ್ಲೇಗ್ ಪಿಡುಗಿಗೆ ಅವರ  ತಂದೆ ತುತ್ತಾದರು. ಆದರೂ ಧೃತಿಗೆಡದ  ಬಾಲಕ ವಿನಾಯಕರಂತೂ ಚಾಪೇಕರ್ ಸಹೋದರರ ಸಾಹಸ ಮತ್ತು ಬಲಿದಾನದ ವೀರಕವನವನ್ನು ರಚಿಸಿದರು. ಕವನದ ಕೊನೆಯ ನುಡಿ ಹೀಗಿದೆ;

ನೀವು ಕೈಗೊಂಡ ಕಾರ್ಯ ಅರ್ಧಕ್ಕೆ ಉಳಿಯಿತು ಎಂಬ ನಿರಾಸೆ ಹೊಲ್ಲ!

ಅದನ್ನು ಮುಂದುವರಿಸಲು ನಾವಿದ್ದೇವೆ; ಇದಕ್ಕೆ ಸಂದೇಹವಿಲ್ಲ!!

ಬರಿ ಬಾಯಿಮಾತಿನ ಕವಿತೆ ಹೊಸೆದು ಸುಮ್ಮನುಳಿಯಲಿಲ್ಲ ಸಾವರ್ಕರ್. ತಮ್ಮ ಕುಲದೇವಿಯಾಗಿದ್ದ ಅಷ್ಟಭುಜೆ ದುರ್ಗಾಮಾತೆಯ ಎದುರು  “ದೇಶಕ್ಕೆ ಸ್ವಾತಂತ್ರ್ಯಗಳಿಸಲೋಸುಗ ಸಶಸ್ತ್ರಕ್ರಾಂತಿಯ ಗುಡಿನೆಟ್ಟು ಪ್ರಾಣದ ಹಂಗುದೊರೆದು ಹೋರಾಡುವೆನು ನಾನು!”  ಎಂದು ಪ್ರತಿಜ್ಞೆಯನ್ನು ಕೂಡ  ಮಾಡಿದರು.

1901ರಲ್ಲಿ ಅವರಿಗೆ  ಯಮುನಾಬಾಯಿಯೊಂದಿಗೆ ಮದುವೆಯಾಯಿತು. 1902ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿದರು. ಜೂನ್ 1906ರಲ್ಲಿ ಶಿಷ್ಯವೃತ್ತಿ ದೊರೆತದ್ದರಿಂದ, ಕಾನೂನು ಶಾಸ್ತ್ರ ವ್ಯಾಸಂಗಕ್ಕಾಗಿ ಲಂಡನ್ಗೆ ತೆರಳಬೇಕಾಯಿತು.  

ಇನ್ನು ಮ್ಯಾಝಿನಿ (1805-72) ಸಾವರ್ಕರರ ಅತ್ಯಂತ ಹೆಮ್ಮೆಯ ಸ್ವಾತಂತ್ರ್ಯವೀರ. ಇಟಲಿ ದೇಶದ ದೇಶಭಕ್ತ ಸಾವರ್ಕರರ ಆದರ್ಶ ನಾಯಕ. 1906 ಜುಲೈ ತಿಂಗಳಲ್ಲಿ ಇಂಗ್ಲೆಂಡ್ ತಲುಪುವುದೊಂದೆ ತಡ ಮ್ಯಾಝಿನಿಯ ಬಗೆಗೆ ಇದ್ದ ಪುಸ್ತಕಗಳನ್ನೆಲ್ಲ ಓದಿ ಮುಗಿಸಿದರು. ಸ್ವಾತಂತ್ರ್ಯವೀರ ಮ್ಯಾಝಿನಿಯ ಚರಿತ್ರೆಯನ್ನು ಭಾರತೀಯರಿಗಾಗಿ ಅಂದರೆ ಭಾರತೀಯರು ತಮ್ಮ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲು ಪ್ರೇರೇಪಿಸುವಂತೆ, ಪ್ರಚೋದಿಸುವಂತೆ ಅತ್ಯಂತ ವೀರಾವೇಶಯುಕ್ತವಾದ ಭಾಷೆಯಲ್ಲಿ ಬರೆದು ಪ್ರಕಟಣೆಗಾಗಿ ಭಾರತಕ್ಕೆ ಕಳುಹಿಸಿದರು. ಲೋಕಮಾನ್ಯ ತಿಲಕರು ಪುಸ್ತಕದ ಕೈಬರಹದ ಪ್ರತಿಯನ್ನು ಓದಿದರು. ಮೂಲಚರಿತ್ರೆಯಂತೂ ಸ್ಫೂರ್ತಿಪ್ರದವಾದುದು ಹೌದೇ ಹೌದು; ಆದರೆ ಭಾಷೆ ಮತ್ತು ಬರವಣಿಗೆಯ ಶೈಲಿಯು ಅತ್ಯಂತ ಓಜಸ್ಸು ಮತ್ತು ತೇಜಸ್ಸುಗಳಿಂದ ಕೂಡಿ ಎಂಥ ಉತ್ತರಕುಮಾರರನ್ನೂ ಉತ್ತಮ ಸ್ವಾತಂತ್ರ್ಯ ವೀರರನ್ನಾಗಿಸುವಷ್ಟು ಮೊನಚಾಗಿತ್ತು. ತಿಲಕರೆಂದರು, “ ಗ್ರಂಥ ಪ್ರಕಟವಾದರೆ ಬ್ರಿಟಿಷ್ ಸರಕಾರ ಖಂಡಿತವಾಗಿಯೂ ಅದಕ್ಕೆ ಮುಟ್ಟುಗೋಲು ಹಾಕುತ್ತದೆ.” ತಿಲಕರು ನುಡಿದ ಭವಿಷ್ಯವು ಸತ್ಯವಾಯಿತು. ಸಾವರ್ಕರ್ ಬರೆದಮ್ಯಾಝಿನಿಪುಸ್ತಕ ಮುಟ್ಟುಗೋಲು ಹಾಕಲ್ಪಟ್ಟಿತು. 1929 ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ನಮ್ಮ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕೆನ್ನುವ ನಿರ್ಣಯ ಅಂಗೀಕಾರವಾಗುತ್ತದೆ. ಆದರೆ ಅಧಿವೇಶನ ನಡೆಯುವ ಎರೆಡು ದಶಕಗಳ ಪೂರ್ವದಲ್ಲೇ ಸ್ವಾತಂತ್ರಕ್ಕಾಗಿ ಸಾವರ್ಕರರು ತಮ್ಮ ಹೋರಾಟವನ್ನು ಆರಂಭಿಸಿದ್ದರು. 1909 ರಲ್ಲಿ ಪ್ರಕಟಣೆಗೊಂಡ ‘THE INDIAN WAR OF INDEPENDENCE ‘ ಎಂಬ ಕೃತಿ ಸ್ವತಂತ್ರ ಹೋರಾಟದ ಪರ್ವದಲ್ಲೇ ಅತ್ಯಂತ ಮಹತ್ತರ ಬೌದ್ಧಿಕ ಘಟ್ಟವನ್ನು ತಲುಪಿ, ದೇಶದ  ಮಾನಸಿಕ ದಾಸ್ಯತ್ವ ತೊಡೆದುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  

ಕೃತಿಯೇನಾದರೂ ರಚಿತವಾಗದೇ ಹೋಗಿದ್ದಲ್ಲಿ ಇಂದಿಗೂ ಕೂಡ 1857 ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಬ್ರಿಟಿಷ್ ದೊರೆಗಳು ಬಣ್ಣಿಸಿದಂತೆ ಕೇವಲಸಿಪಾಯಿ ದಂಗೆಎಂದುಬಿಡುತ್ತಿದ್ದೆವು. ಸ್ವಂತ ಆಲೋಚನಾ ಬಲದ ಮೇಲೆ ಐತಿಹಾಸಿಕ ಸಂಗ್ರಾಮವೊಂದರ ಅಂತರ್ಯವನ್ನು ಅರಿಯದೇ, ಪಾಶ್ಚಿಮಾತ್ಯರ ನಿರ್ಣಯಕ್ಕೆ ತಲೆಬಾಗಿರುತ್ತಿದ್ದೆವು. ‘ಸಾಹಿತ್ಯ ಉಳಿಯಬೇಕಾದರೆ, ದೇಶದ ಆತ್ಮ ಉಳಿಯಬೇಕುಎಂದು ಹೇಳಿದ್ದ ಸಾವರ್ಕರ್ ಅವರ ಹೋರಾಟ ಅವರ ಆದರ್ಶವಾದಬಾಲ ಗಂಗಾಧರ ತಿಲಕರಹಾದಿಯಲ್ಲೇ ಸಾಗಿತ್ತು. ‘ಸಾಹಿತ್ಯ ಸ್ವರಾಜ್ಯ ಪ್ರಾಮುಖ್ಯತೆಯನ್ನು ಅರಿತಿದ್ದ ಸಾವರ್ಕರ್ ಕೇವಲ ಒಬ್ಬ ಲೇಖಕರಷ್ಟೇ ಅಲ್ಲ, ಅದ್ಭುತ ಕವಿ, ರಾಜತಾಂತ್ರಿಕ ತಜ್ಞ ಮತ್ತು ಕ್ರಾಂತಿಕಾರಿಯಾಗಿದ್ದರು. ಅವರು ಹಚ್ಚಿದ್ದ ಕ್ರಾಂತಿಯ ಕಿಚ್ಚು ಬ್ರಿಟನ್ನಿನ ನೆಲದಲ್ಲೇ  ‘ವಿಲಿಯಂ ಹಟ್ ಕರ್ಜನ್ ವಿಲ್ಲಿಯನ್ನು ಕೊಂದ ಮದನ್ ಲಾಲ್ ಧಿಂಗ್ರಾರ ಮೂಲಕ, ಬಾಂಬ್ಗಳನ್ನು ತಯಾರಿಸುವುದು ಮತ್ತು ಗೆರಿಲ್ಲಾ ಯುದ್ಧವನ್ನು ನಡೆಸುವುದರ ಬಗ್ಗೆ ರಚಿಸಿದ್ದ ಕಿರು ಹೊತ್ತಿಗೆಯ ಮೂಲಕ, ಒಂದು ಎತ್ತಿನ ಗಾಡಿಯ ತುಂಬಾ ಸಂಗ್ರಹಿಸಿ ತಂದಿದ್ದ ವಿದೇಶಿ ಬಟ್ಟೆಗಳನ್ನು ಸಾರ್ವಜನಿಕವಾಗಿ ಸುಡುವ ಮುಖಾಂತರ ತಿಲಕರ ಸಲಹೆಯಂತೆ ಹೋಳಿಯಾಡಿ ಪಸರಿಸಿದ್ದ ಬೆಂಕಿಯ ಕೆನ್ನಾಲಿಗೆಯಲ್ಲಿ, ಮಿತ್ರಮೇಳ ಮತ್ತು ಅಭಿನವ ಭಾರತದ ಧೃಢ ಸೇತುವೆಯಲ್ಲಿ, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರಲ್ಲಿ, ಅಂಡಮಾನಿನ ಖೈದಿಗಳಲ್ಲಿ ಹೊತ್ತಿಸಿದ ಜ್ವಾಲಾಗ್ನಿಯಲ್ಲಿ, ಹಿಂದವೀ ಸಾಮ್ರಾಜ್ಯದ ಪುನರುತ್ಥಾನವಾದ ಹಿಂದುತ್ವದ ನೆಲೆಯಲ್ಲಿ ಮತ್ತು ಪ್ರತೀ ಕ್ರಾಂತಿಕಾರಿಯ ಹೃದಯದಲ್ಲಿ ಪಸರಿಸಿತ್ತು.

ಮರದ ತುಂಡನ್ನು ಮತ್ತು ಹುಲ್ಲನ್ನು ಸಂಗ್ರಹಿಸಿ, ಅದರಲ್ಲೊಂದು ಮನೆಯನ್ನು ತಮ್ಮ ಸಂಸಾರಕ್ಕಾಗಿ ಮತ್ತು ಮಕ್ಕಳಿಗಾಗಿ ನಿರ್ಮಿಸುವುದನ್ನೇ ನಿಜವಾದ ಕರ್ತವ್ಯ ಮತ್ತು ಜೀವನವೆಂದುಕೊಂಡರೆ, ಅಂತಹ ಜಗತ್ತನ್ನು ಕಾಗೆಗಳು ಮತ್ತು ಪಕ್ಷಿಗಳು ಕೂಡ ಸ್ಥಾಪಿಸಬಲ್ಲವುಪ್ರತಿಯೊಬ್ಬರೂ ತಮ್ಮ ಮನೆ, ಕುಟುಂಬ ಮತ್ತು ಮಕ್ಕಳಿಗಾಗಿ ಕೆಲಸ ಮಾಡುತ್ತಾರೆ. ನಾನು ನನ್ನ ದೇಶವನ್ನು ನನ್ನ ಕುಟುಂಬ ಎಂದು ಪರಿಗಣಿಸಿದ್ದೇನೆ. ಅದರ ಬಗ್ಗೆ ಹೆಮ್ಮೆ ಪಡುತ್ತೇನೆಬಿತ್ತದೆ ಜಗತ್ತಿನಲ್ಲಿ ಯಾವುದೂ ಬೆಳೆಯುವುದಿಲ್ಲ. ಜೋಳದ ಬೆಳೆಯನ್ನು ಭೂಮಿಯಿಂದ ಬೆಳೆಯಬೇಕಾದರೆ, ಅದರ ಕೆಲವು ಧಾನ್ಯಗಳನ್ನು ನೆಲದಲ್ಲಿ ಹೂಳಬೇಕು. ಅವುಗಳು ಭೂಮಿಯ ಮಧ್ಯದಲ್ಲಿ, ಗದ್ದೆಯಲ್ಲಿ, ವಿಲೀನಗೊಂಡಾಗ ಮಾತ್ರ ಮುಂದಿನ ಜೋಳದ ಬೆಳೆ ಬರುತ್ತದೆಎಂದು ಸಾವರ್ಕರ್ ತಮ್ಮ ಪತ್ನಿಗೆ ಹೇಳಿದ್ದರಂತೆ! ಎರೆಡು ಬಾರಿ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸುವ ಪರಿಸ್ಥಿತಿ ಬಂದಾಗ, ಜೈಲಿನಲ್ಲಿ ಅತ್ಯಂತ ಅಮಾನವೀಯವಾಗಿ ಅವರನ್ನು ನಡೆಸಿಕೊಂಡ ವ್ಯವಸ್ಥೆಯ ಮಧ್ಯೆ ಲೇಖನಿ ಮತ್ತು ಕಾಗದಗಳನ್ನು ಕೂಡ ಅವರಿಂದ ಕಿತ್ತುಕೊಂಡಾಗ, ತಮ್ಮ ಉಗುರು, ಮೊಳೆ ಮತ್ತು ಮುಳ್ಳುಗಳನ್ನೇ ಬಳಸಿ ಗೋಡೆಯನ್ನೇ ಕಾಗದವನ್ನಾಗಿಸಿ ಭಾರತಿಯನ್ನು ಸ್ಮರಿಸಿದರು. ಸರೀಕರ ಸೆರೆಯಾಳುಗಳು ಕೊಲೆಗಾರರೋ, ಸುಲಿಗೆಗಾರರೋ ಆಗಿದ್ದರೂ ಸಾವರ್ಕರ್ ಅವರೊಡನೆ ಪ್ರೀತಿಯಿಂದ ವರ್ತಿಸಿ ಅವರ ಪ್ರೇಮ, ಅಭಿಮಾನ ಗಳಿಸಿಕೊಂಡಿದ್ದರು. ಜೊತೆಯ ಸೆರೆಯಾಳುಗಳಿಗೆ ಅಕ್ಷರ ಜ್ಞಾನ ಮಾಡಿಕೊಡುತ್ತಿದ್ದರು. ಭಾರತ ಇತಿಹಾಸದ, ಪರಂಪರೆಯ ಕಥೆಗಳನ್ನು ಹೇಳುತ್ತಿದ್ದರು. ಕಾರಾಗೃಹವಾಸದ  ಕಾಲದಲ್ಲಿ ತಮ್ಮ ಮನವನ್ನು ಚಿಂತೆಯಲ್ಲಿ ಕೊಳೆಯಗೊಡದೆ ಚಿಂತನ ಮನನಗಳಿಂದ ಒಳ್ಳೊಳ್ಳೆಯ ಕಾವ್ಯವನ್ನು ರಚಿಸುವುದಕ್ಕಾಗಿ ಬಳಸಿದರು. ಅವರ ಶರೀರವೇನೋ  ಸಂಕೋಲೆಯ ಕಾರಾಗೃಹದಲ್ಲಿ ಬಂಧಿಸಲ್ಪಟ್ಟಿತ್ತು. ಆದರೆ ಅವರ ಬುದ್ಧಿ ಕಲ್ಪನಾಶಕ್ತಿಗಳಿಗೆ ಯಾವ ಅಡೆತಡೆ ಇರಲಿಲ್ಲ. ಕಾವ್ಯರಚನೆ ಮಾಡಿ ಕಾರಾಗೃಹದ ಗೋಡೆಗಳ ಮೇಲೆ ಮೊಳೆಯಿಂದ ಬರೆಯುತ್ತಿದ್ದರು. ರಚಿಸಿದ ಕಾವ್ಯಭಾಗವನ್ನು ಓದಿ ಓದಿ ಗಟ್ಟಿಮಾಡಿಕೊಳ್ಳುತ್ತಿದ್ದರು. ಅದು ತಮ್ಮ ನೆನಪಿನ ಪಟಲದ ಮೇಲೆ ಅಚ್ಚಳಿಯದಂತೆ ಒಡಮೂಡಿತೆಂದರೆ ಮುಂದಿನ ರಚನೆ ಕೈಗೊಳ್ಳುತ್ತಿದ್ದರು. ‘ಕಮಲಾ’, ‘ಗೋಮಾಂತಕ’, ‘ಮಹಾಸಾಗರಎಂಬ ಅನೇಕ ಕಾವ್ಯಗಳನ್ನು ವಿನಾಯಕ ಸಾವರ್ಕರ್ ರೀತಿಯಲ್ಲಿ ಅಂಡಮಾನದ ಕಾರಾಗೃಹವಾಸದಲ್ಲಿ ಸೃಷ್ಟಿಸಿದರು. ಮಣ್ಣಿನವಾಸನೆಯ ಕಾವ್ಯಗಳು ಅನೇಕರಿಂದ ರಚಿಸಲ್ಪಟ್ಟಿರಬಹುದು. ಆದರೆ ಅಂಡಮಾನದ ಗೋಡೆಗಳ ಕಲ್ಲಿನ ವಾಸನೆಯ ಕಾವ್ಯಗಳಿಗೆ ಇರುವ ವಿಶೇಷತೆ ಅಪೂರ್ವವೇ ಹೌದು!

ಭಗವತಿ ಸ್ವರೂಪಿಯಾದ ತಾಯಿ ಭಾರತಿಯೇ ನಿನಗೆ ಜಯವಾಗಲಿ

ಸ್ವತಂತ್ರದ ಪ್ರತಿರೂಪವಾದ ನಿನ್ನ ಆಶೀರ್ವಾದ ಸದಾ ನಮ್ಮ ಮೇಲಿರಲಿ

ನಮ್ಮ ರಾಷ್ಟ್ರದ ಹೆಮ್ಮೆ, ನೀತಿ ಮತ್ತು ಸಂಪತ್ತಿನ ಪ್ರತೀಕಳಾದ ನೀನು ಪರಮ ಪವಿತ್ರಳು‘ 

ಸ್ವಾತಂತ್ರದ ಆಗಸದಲ್ಲಿ ಮಿನುಗುತ್ತಿರುವ ನಕ್ಷತ್ರದಂತಿರುವ ನೀನು ನಮ್ಮ ಭರವಸೆಯ ಮೂಲ ಸೆಲೆಯಾಗಿರುವೆ‘,

ಜನರ ಮುಖದ ಸಂತೃಪ್ತಿಯ ಕೆಂಪಿನಲ್ಲಿ, ದೇಶದ ತುಂಬೆಲ್ಲ ಅರಳಿದ ಹೂದೋಟಗಳಲ್ಲಿ ನಿನ್ನ ವಿಶ್ವಾಸದ ಕೆಂಬಣ್ಣ ಆವರಿಸಿದೆ

ಎಂದು ಸಾವರ್ಕರರು ಭಾರತಿಯ ಹೃದಯಾಂತರಾಳದಲ್ಲಿ ಸದಾ ಸ್ಮರಿಸಲ್ಪಡುವಂತೆ ಕಟ್ಟಿಕೊಟ್ಟ  ಜಯಘೋಷದ ವೀರತತ್ವ ಸದಾ ಅಮರ

ಬಹುಶಃ ಭಾರತ ದೇಶದ ಇತಿಹಾಸದ ಸಂಪುಟಗಳಲ್ಲಿ ಅತಿಯಾಗಿ ಕಡೆಗಣಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರೆಂದರೆ ವೀರ ಸಾವರ್ಕರ್ ಎಂದೇ ಹೇಳಬಹುದುಭರತಭೂಮಿಯ ಅಂತಸ್ಸತ್ವವನ್ನು ಸಂಪೂರ್ಣವಾಗಿ ಅರಿಯಲು ಪ್ರಯತ್ನಿಸಿ, ಬೌದ್ಧಿಕ ದಾಸ್ಯತ್ವಕ್ಕೆ ಒಳಗಾಗಿದ್ದ ತನ್ನ ಮಾತೃಭೂಮಿಯ ಅಂತಃಕರಣಕ್ಕೆ ಪುನಶ್ಚೇತನ ನೀಡಲು ಪ್ರಾಮಾಣಿಕವಾಗಿ ಯತ್ನಿಸಿದ ಸ್ವತಂತ್ರಯೋಧರಲ್ಲಿ ಸಾವರ್ಕರ್ ಅಗ್ರಗಣ್ಯರು. ಕರಿನೀರ ಶಿಕ್ಷೆಯಂತಹ ಭೀಕರ ನರಕದಲ್ಲೂ, ‘ಜಯೋಸ್ತುತೆ ಜಯೋಸ್ತುತೆ ಶ್ರೀ ಮಹಾಮಂಗಳೇ ಶಿವಸ್ಪದೆ ಶುಭದೇ‘, ಎಂದು ತಮ್ಮಂತರಂಗದ ಹೃದಯದರಮನೆಯಲ್ಲಿ ಭಗವತಿ ತಾಯಿ ಭಾರತಿಗೆ ಸ್ವರ್ಗವನ್ನೇ ಕಟ್ಟಿ, ಸ್ವದೇಶಧ್ವಜವನ್ನು ಶತ್ರುವಿನ ಗುಹೆಯೊಳಗೆ ಆರೋಹಣ ಮಾಡಿ, ಅಭಿನವ ಭಾರತದ ಮೂಲಕ ಶ್ರದ್ಧಾವಂತ ನಾಯಕರನ್ನು ನಿರ್ಮಿಸಿದ ಶ್ರೇಯ ಸಾವರ್ಕರರಿಗೆ ಸಲ್ಲುತ್ತದೆ.

ಒಂದೆಡೆ ಶ್ರೀ ಅರವಿಂದರು ಹೇಳುವಂತೆರಾಷ್ಟೀಯತೆ ಎಂದರೇನು? ರಾಷ್ಟ್ರೀಯತೆ ಕೇವಲ ಒಂದು ರಾಜಕೀಯ ಕಾರ್ಯನೀತಿಯಲ್ಲ. ಅದು ಭಗವಂತನಿಂದಲೇ ಬಂದ ಒಂದು ಧರ್ಮ. ಅದೊಂದು ಅಚಲ ಧೃಢ ನಂಬುಗೆ. ಅದನ್ನು ಅಕ್ಷರಶಃ ಬಾಳಿ ಬದುಕಬೇಕು. ರಾಷ್ಟ್ರೀಯತೆ ಅಂದರೇನೆಂದು ನಿಮಗೆ ಅರಿವಾಗಿದೆಯೇ? ನೀವು ಅಂಗೀಕರಿಸಿ ಎದೆಗಪ್ಪಿಕೊಳ್ಳಬೇಕಾದ ಧರ್ಮ ಅದೆಂದು ಅರಿವಾಗಿದೆಯೇ? ಹಾಗಿದ್ದರೆ ಮಾತ್ರ ನೀವು ರಾಷ್ಟೀಯರೆಂದು ಕರೆದುಕೊಳ್ಳಿ, ಹಾಗೆ ಕರೆದುಕೊಂಡಾದ ಮೇಲೆ ಅದರಂತೆ ಬಾಳಿ ಬದುಕಲು ಯತ್ನಿಸಿ. ನಿಮ್ಮಲ್ಲಿರುವ ಶಕ್ತಿಯನ್ನು ಅರಿಯಲು ಪ್ರಯತ್ನಿಸಿ. ಶಕ್ತಿಯನ್ನು ಹೊರಗೆಳೆದು ಮುಂದೆ ತನ್ನಿ. ಆಗ ನೀವು ಏನನ್ನೇ ಮಾಡಿದರೂ ಅದು ನಿಮ್ಮ ಕಾರ್ಯವಾಗಿರುವುದಿಲ್ಲ. ಬದಲಿಗೆ ನಿಮ್ಮ ಅಂತರಂಗದಲ್ಲಿರುವ ಸತ್ಯದ ಪ್ರತೀಕವಾಗಿರುತ್ತದೆ‘. ಅರವಿಂದರು ಹೇಳಿದ್ದ ಅಂತಹ ಪ್ರಖರ ರಾಷ್ಟೀಯತೆಯ ಪ್ರತೀಕವೇವೀರ ಸಾವರ್ಕರ್‘! 

ಭಾರತ ಒಂದು ಸಜೀವ ಆತ್ಮ. ಭಾರತಮಾತೆ ಇಡೀ ಭೂಲೋಕದ ಆಧ್ಯಾತ್ಮಿಕ ಜ್ಞಾನದ ಅಧಿದೇವತೆ. ಆಕೆಯೇ ಸಾವರ್ಕರರಲ್ಲಿ ಪ್ರಕಟಿತಗೊಂಡಿರುವಾಗ ವಿತಂಡವಾದಿಗಳು ಅದನ್ನೊಪ್ಪಲಿ ಅಥವಾ ಬಿಡಲಿ, ಆಕೆಯ ಸ್ಮೃತಿಪಟಲದಲ್ಲಿ ಬೌದ್ಧಿಕಸಮರಾಂಗಣದ ಕ್ಷಾತ್ರತೇಜೋನ್ವಿತ ಚೇತನವಾಗಿ ಅವರು ಸದಾ ನೆಲೆನಿಂತಿರುತ್ತಾರೆ

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.