close logo

ದೇವೀ ಸೂಕ್ತ – ಒಂದು ಕಿರುನೋಟ

ಋಗ್ವೇದದ ಹತ್ತನೇಯ ಮಂಡಲದಲ್ಲಿನ ೧೨೫ನೇಯ ಸೂಕ್ತವು ದೇವೀ ಸೂಕ್ತವೆಂದೂ, ವಾಕ್ ಸೂಕ್ತವೆಂದೂ ಖ್ಯಾತಿ ಪಡೆದಿದೆ. ಸಂಪ್ರದಾಯದಲ್ಲಿ ದೇವೀ ಸೂಕ್ತಕ್ಕೆ ಅದೆಷ್ಟು ಮಹತ್ವವಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಆಧುನಿಕ ಅಧ್ಯಯನದಲ್ಲಿಯೂ ಪಡೆದಿದೆ. ಸೂಕ್ತದ ವೈಶಿಷ್ಟ್ಯವೆಂದರೆ ಅದರ ಮಂತ್ರದೇವತೆಯೂ ವಾಗಾಂಭೃಣೀ ಮತ್ತು ಮಂತ್ರದ್ರಷ್ಟಾರಳೂ ವಾಗಾಂಭೃಣೀ. ಗಾತ್ರದಲ್ಲಿ ಚಿಕ್ಕದಾದ ಸೂಕ್ತ ತನ್ನ ಭಾವ, ಶಿಲ್ಪ, ಅಂತಃಸತ್ವ, ಕಾವ್ಯಾತ್ಮಕತೆಗಳಲ್ಲಿ ಮಾತ್ರ ಮಿಗಿಲಾಗಿದೆ.

ಸಂಪ್ರದಾಯದಲ್ಲಿ ಸೂಕ್ತಕ್ಕಿರುವ ಮಹತ್ವ ಸ್ಪಷ್ಟವಾಗಿದೆ. ಏಕಕಾಲದಲ್ಲಿ ಸೂಕ್ತ ಶಾಕ್ತರಿಗೂ ಅದ್ವೈತಿಗಳಿಗೂ ತಾತ್ವಿಕವಾಗಿ ಮೂಖ್ಯವಾಗಿದೆ. ದೇವೀ ಸೂಕ್ತ ಸ್ತ್ರೀಶಕ್ತಿ ಮತ್ತು ಪ್ರಕೃತಿಯ ಸತ್ವ ಇವುಗಳನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ, ಅದರ ಉಪಾಸನೆಗೆ ಪ್ರೇರೇಪಿಸುತ್ತದೆ. ಪೂಜೆಪುನಸ್ಕಾರ, ಹವನಹೋಮಗಳಲ್ಲಿ ಇದಕ್ಕೆ ಪ್ರಾಶಸ್ತ್ಯವಿದೆ. ಆದರೆ ಆಧುನಿಕರಿಗಾದರೋ ಅದೇ ವಸ್ತು ಬೇರೆಯ ಕಾರಣಕ್ಕೆ ಮುಖ್ಯವಾಗಿದೆ. ಸೂಕ್ತದಲ್ಲಿ ಸ್ತ್ರೀಶಕ್ತಿ ಪುರುಷನ ಊರುಗೋಲಿಲ್ಲದೆ ಸ್ವತಂತ್ರವಾಗಿ ಸ್ಥಾಪಿತವಾಗಿರುವಂತಿದೆ. ಸಹಜವಾಗೇ ಆಧುನಿಕ ಸ್ತ್ರೀವಾದದ ವಿಶೇಷ ದೃಷ್ಟಿಗೂ ಈ ಸೂಕ್ತ ಪಾತ್ರವಾಗಿದೆ. ಅನೇಕ ಅಕ್ಯಾಡಮಿಕ್ ಪ್ರಬಂಧಗಳಲ್ಲಿ ಈ ಸೂಕ್ತದ ವಿವರಣೆಯನ್ನೂ, ವಿಶ್ಲೇಷಣೆಯನ್ನೂ ಕಾಣಬಹುದು. ಅವುಗಳ ತುಲನಾತ್ಮಕ ವಿಶ್ಲೇಷಣೆಗೆ ಮತ್ತೊಂದು ಬರಹವೇ ಬೇಕಾದೀತು. ಸೂಕ್ತಕ್ಕೆ ಒಂದು ಕಿರುನೋಟವನ್ನು ಕಲ್ಪಿಸುವುದಷ್ಟೇ ಈ ಲೇಖನದ ಉದ್ದೇಶ.

ಸಾಯಣಾಚಾರ್ಯರ ಪ್ರಕಾರ ವಾಗಾಂಭೃಣಿ ಒಬ್ಬ ಋಷಿಕೆ. ಅವಳ ನಿಜನಾಮಧೇಯ ವಾಕ್ ಮತ್ತು ತಂದೆಯ ಹೆಸರು ಆಂಭೃಣ. ಮೈತ್ರೇಯಿ, ಶಾಂಡಿಲಿ, ವೃದ್ಧಕನ್ಯಾ ಮುಂತಾದ ಋಷಿಕೆಯರಂತೆ ಅವಳೂ ಒಬ್ಬ ಬ್ರಹ್ಮವಾದಿನಿ. ವಾಗಾಂಭೃಣಿಯ ತಪಸ್ಸು ಸಫಲವಾಗಿ ಜ್ಞಾನೋದಯವಾದಾಗ ಈ ಮಂತ್ರವನ್ನು ದರ್ಶಿಸಿಕೊಳ್ಳುತ್ತಾಳೆ. ಒಟ್ಟು ಸೃಷ್ಟಿಯ ಅಂತಃಸತ್ವದ ಅವಿಭಾಜ್ಯ ಅಂಗವಾಗಿ ತನ್ನನ್ನು ತಾನೇ ಕಂಡುಕೊಳ್ಳುತ್ತಾಳೆ. ಆ ಅಂತಃಸತ್ವವೇ ಪುರುಷನ ಚಲನಶೀಲತೆಯಾದ ದೇವಿಯಲ್ಲದೇ ಮತ್ತೇನೂ ಅಲ್ಲ ಎನ್ನುವುದನ್ನು ಮನಗಾಣುತ್ತಾಳೆ. ಸಹಜವಾಗೇ ಅದ್ವೈತ ಸಂಪ್ರದಾಯದಲ್ಲಿ ದೇವೀ ಸೂಕ್ತ ಪ್ರಾಶಸ್ಯ್ತ ಪಡೆದಿದೆ. ಜೀವಾತ್ಮಪರಮಾತ್ಮರ ನಡುವಿನ ಭೇದ ಅಳಿಸಿಹೋಗುವ ಕ್ಷಣದಂತೆ ಸೂಕ್ತದ ಧ್ವನಿಯಿದೆ. ಆದರೆ ಕೆಲವು ಆಧುನಿಕರ ಪ್ರಕಾರ ಇದು ಹಾಗಲ್ಲ. ವಾಗಾಂಭೃಣಿ ಒಬ್ಬ ಋಷಿಕೆಯೆಂದು ಅವರು ಒಪ್ಪುವುದಿಲ್ಲ. ಅವಳು ಈ ಮಂತ್ರದ ದೇವತೆಯಷ್ಟೇ. ದೇವಿ ಸ್ವತಃ ತನ್ನ ಮಹತ್ವವನ್ನು ಈ ಸೂಕ್ತದಲ್ಲಿ ಸಾರುತ್ತಿರುವುದು. ಋಷಿಕೆಯಾಗಿದ್ದರೆ ನಾಮಧೇಯದಲ್ಲಿಯಾದರೂ ಭಿನ್ನತೆಯಿರುತ್ತಿತ್ತು. ಭಾರತೀಯರಿಗಾದರೋ ಇದು ವೇದಕಾಲದಲ್ಲಿನ ಸ್ತ್ರೀಯರ ಉನ್ನತಮಟ್ಟವನ್ನು ಸಾರುವ ಸೂಕ್ತ. ಆದರೆ ಆಧುನಿಕರ ಅಭಿಪ್ರಾಯದಲ್ಲಿ ಈ ಉದಾಹರಣೆಯಿಂದ ವೇದಕಾಲದ ಯಾವ ಒಳನೋಟವೂ ದೊರೆಯುವುದಿಲ್ಲ.

ಒಟ್ಟಿನಲ್ಲಿ ಒಂದಂತೂ ಸ್ಪಷ್ಟ. ದೇವಿಯೇ ಸೂಕ್ತದಲ್ಲಿ ಹೇಳಿಬಿಡುತ್ತಾಳೆ – “ದೇವತೆಗಳೇ ನನ್ನನ್ನು ವಿವಿಧೆಡೆ ಸ್ಥಾಪಿಸಿಬಿಟ್ಟಿದ್ದಾರೆ“. ಏಕಾದರೂ ಸ್ಥಾಪಿಸಿದ್ದಾರೆ ತನ್ನ ಸೃಷ್ಟಿಶೀಲತೆಯಿಂದ ವೈವಿಧ್ಯವಾದ ಪ್ರಪಂಚದ ಸೃಷ್ಟಿಗೋಸ್ಕರ. ಪ್ರಪಂಚದ ಒಟ್ಟು ಅಸ್ತಿತ್ವದ ಸಾಮ್ರಾಜ್ಞಿ ಈ ದೇವಿ (ರಾಷ್ಟ್ರೀ). ದೇವೀ ಸೂಕ್ತಕ್ಕೆ ಎರಡು ಆಯಾಮಗಳಿವೆ. ಮೊದಲನೇಯದಾಗಿ ಸೃಷ್ಟಿಯ ಅಂತಃಸತ್ವಸ್ವರೂಪದ ಆಯಾಮ. ಎರಡನೇಯದಾಗಿ ವಾಕ್ನ ಮಹತ್ವ ಮತ್ತು ಸ್ವರೂಪ. ಸೂಕ್ತದ ವಿವರ ಹೀಗಿದೆ.

ಎಲ್ಲ ದೇವತೆಗಳ ಚಲನಶೀಲತೆಯಾಗಿ ದೇವಿ ತನ್ನನ್ನು ಸ್ಥಾಪಿಸಿಕೊಂಡಿದ್ದಾಳೆ. ಇದು ಅರ್ಧನಾರೀಶ್ವರತೆಯ ಮತ್ತೊಂದು ಅಭಿವ್ಯಕ್ತಿಯಾಗಿದೆ. ರುದ್ರ, ವಸು, ಆದಿತ್ಯ, ಮಿತ್ರರ ಜೊತೆಯಲ್ಲಿಯಲ್ಲೇ ಚಲಿಸುವ ದೇವಿ. ಚಲಿಸುವಿಕೆಯಂದರೆ ಚಲನಶೀಲತೆ ಎಂದರ್ಥ. ಯಜ್ಞ ಕಾರ್ಯಗಳ ಹವಿಸ್ಸಿನಿಂದಾಗುವ ಎಲ್ಲಾ ಸತ್ಕಾರ್ಯಗಳನ್ನು ನಡೆಸುವವಳೂ ಈ ದೇವಿಯೇ. ಅರ್ಥಾತ್ ದೇವಿಯೇ ಆ ಹವಿಸ್ಸಿನಲ್ಲಿರುವವಳು. ಈ ಕಾರಣವಾಗಿ ನಿಜ ಸಂಪತ್ತೆಲ್ಲವೂ ಈ ದೇವಿಯ ಅಧೀನವೇ ಆಗಿದೆ. ದೇವಿಗೆ ಸದಾಕಾಲಕ್ಕೂ ಪರಮಾತ್ಮ ಸ್ವರೂಪದ ಅರಿವಿದೆ. ಈ ಕಾರಣವಾಗಿ ದೇವಿ ಅಗ್ರಪೂಜಾರ್ಹಳಾಗಿದ್ದಾಳೆ. ಅಷ್ಟಲ್ಲದೇ ದೇವಿ ಮಾನವರ ಅಸ್ತಿತ್ವದ ವ್ಯವಹಾರಗಳನ್ನು ನಡೆಯಿಸುವ ಚಲನಶಕ್ತಿಯೂ ಆಗಿದ್ದಾಳೆ. ಆಹಾರಸೇವನೆ, ಉಸಿರಾಡುವುದು, ಮಾತನಾಡಿ ಕೇಳುವುದು ಇವೆಲ್ಲವೂ ದೇವಿಯ ಮೂಲಕವೇ ಸಾಗುವ ಆಚರಣೆ. ಯಾರು ದೇವಿಯನ್ನರಿಯದೇ ಈ ವ್ಯಾಪಾರಗಳನ್ನು ನಡೆಸಬಯಸುತ್ತಾರೋ ಅವರು ನಾಶಹೊಂದುತ್ತಾರೆ. ಅರ್ಥಾತ್ ಅದರ ಪೂರ್ಣ ಫಲಗಳು ಸಿಗಲಾರದು. ಮಿಗಿಲಾಗಿ, ಶ್ರದ್ಧೆಗೆ ಅರ್ಹವಾದ್ದನ್ನು ಒದಗಿಸುವವಳು ದೇವಿಯೇ. ದೇವಿಯ ಸೃಷ್ಟಿಶೀಲತೆಯ ಶಕ್ತಿ ಹಿರಿದಾದದ್ದು. ದೇವೀ ಘೋಷಿಸುತ್ತಿದ್ದಾಳೆ ದೇವತೆಗಳೂ ಮನುಷ್ಯರೂ ಸದಾ ಒಪ್ಪಿರುವ ಮಾತೆಂದರೆ ದೇವಿ ತನ್ನ ಅನುಗ್ರಹದಿಂದ ಯಾರನ್ನಾದರೂ ಬ್ರಹ್ಮನನ್ನಾಗಿಯೂ (ಸೃಷ್ಟಿ ಕಾರ್ಯ ನಡೆಸುವ ವ್ಯಕ್ತಿ), ಋಷಿಯನ್ನಾಗಿಯೂ, ಮೇಧಾಶಕ್ತಿಯುಳ್ಳವನನ್ನಾಗಿಯೂ ಪರಿವರ್ತಿಸಬಲ್ಲಳು. ಸೃಷ್ಟಿಯಲ್ಲಿ ರಕ್ಷಣಾ ಕಾರ್ಯವನ್ನು ಮಾಡುವ ಇದೇ ದೇವಿ, ದುಷ್ಟಸಂಹಾರಕ್ಕಾದರೂ ಹೇಗೆ ರೂಪವಾಗುತ್ತಾಳೆ? ದೇವಿ ತಾನು ರುದ್ರದೇವನ ಧನುಸ್ಸನ್ನು ಹೆದೆಯೇರಿಸುವುದಕ್ಕೆ ಬೇಕಾದ ಶಕ್ತಿಯೆನ್ನುತ್ತಾಳೆ. ಆ ಮೂಲಕ ಬ್ರಾಹ್ಮಣ ವೈರಿಗಳ ಸಂಹಾರಕ್ಕೆ ದೇವಿ ಕಾರಣಳಾಗುತ್ತಾಳೆ. ಈ ರೀತಿಯಾಗಿ ದೇವಿ ದ್ಯಾವಾಪೃಥಿವಿಗಳನ್ನು ಆವರಿಸಿದ್ದಾಳೆ ಚಲನಶೀಲತೆಯ ಸ್ವರೂಪಿಣಿಯಾಗಿ.

ದೇವಿ ಮಹತ್ತರವಾದ ವಿಷಯವೊಂದನ್ನು ಘೋಷಿಸುತ್ತಾಳೆ. ಸೃಷ್ಟಿಯ ದಿವ್ಯವಾದ ಜಲಸಮೃದ್ಧಿಯೇ ದೇವಿಯ ಮೂಲ. ತನ್ಮೂಲಕ ಎಲ್ಲ ಜೀವನಿರ್ಜೀವ ವಸ್ತುಗಳನ್ನಾವರಿಸುವ ದೇವಿ ಕಡೆಗೆ ತನ್ನದೇ ಸ್ವರೂಪದಲ್ಲಿ ಸ್ವರ್ಗವನ್ನೇರುತ್ತಾಳೆ. ಇದ್ದೊಂದು ಮಹತ್ತರವಾದ ಒಳನೋಟ. ಆ ಕಾರಣದಿಂದಲೇ ದೇವಿಯೆನ್ನುತ್ತಾಳೆ ಗಾಳಿಯಂತೆ ಉಸಿರಾಡುವ ನಾನು, ನನ್ನ ಉಸಿರಿನಿಂದಲೇ ಸೃಷ್ಟಿಯ ಸಕಲವಸ್ತುಗಳಿಗೂ ಒಂದು ಸ್ವರೂಪವನ್ನು ಕೊಡುತ್ತೇನೆ. ಆದ್ದರಿಂದಲೇ ನಾನು ಸ್ವರ್ಗವಾಗಲೀ, ಇನ್ನ್ನಿತರ ಲೋಕಗಳಾಗಲೀ ಎಲ್ಲವನ್ನೂ ಮೀರಿ ನಿಂತಿದ್ದೇನೆ, ಮಿಗಿಲಾಗಿದ್ದೇನೆ. ಹೀಗೆ ಸೃಷ್ಟಿಯ ಚಲನಶೀಲತೆಯ ಅಂಶಗಳ ಜೊತೆಗೆ ತನ್ನನ್ನು ಗುರುತಿಸಿಕೊಳ್ಳುವ ದೇವಿ ಕಡೆಗೆ ಅವೆಲ್ಲವನ್ನೂ ಒಟ್ಟಾಗಿ ಪ್ರತಿನಿಧಿಸುವ ದೇವಿಯಾಗಿ ಬೆಳೆದು ತೋರುತ್ತಾಳೆ.

ಈ ವಿವರಣೆಯಲ್ಲಿ ನಾವು ಸೃಷ್ಟಿಯ ಚಲನಶೀಲತೆಯ ಅಂತಃಸತ್ವವನ್ನು ಕಾಣಬಹುದು. ಇದು ಸೂಕ್ತದ ಮೊದಲನೇಯ ಆಯಾಮ. ಎರಡನೇಯ ಆಯಾಮ ಗೂಡವಾದದ್ದಾಗಿದೆ. ಸೂಕ್ತದ ವಿವರಣೆಯನ್ನು ಒಮ್ಮೆ ಮಹಾಭಾರತದಲ್ಲಿ ಬರುವ ಸರಸ್ವತೀ ನದಿಯ ವಿವರಣೆಗೆ ಹೋಲಿಸಿದರೆ ಮರ್ಮ ತಿಳಿದೀತು. ಬಲರಾಮ ತೀರ್ಥಯಾತ್ರೆಯಲ್ಲಿ ಸರಸ್ವತೀ ನದಿಯ ಕುರಿತಾದ ಕಥೆಗಳು ಇದೇ ಬಗೆಯ ಚಲನಶೀಲತೆ ಮತ್ತು ಸೃಷ್ಟಿಶೀಲತೆಯನ್ನು ತೋರುತ್ತದೆ. ಅಷ್ಟೇ ಆಗಿದ್ದರೆ ಕಾಕತಾಳೀಯವೆನ್ನಬಹುದಾಗಿತ್ತು. ಆದರೆ ಮಂತ್ರದೇವತೆ ಇಲ್ಲಿ ’ವಾಕ್ ಆಂಭೃಣಿ’. ಸರಸ್ವತಿಯಾದರೋ ಮಹಾಭಾರತದ ಕಾಲಕ್ಕೆ ವಾಗ್ದೇವತೆಯೇ. ಋಗ್ವೇದದಲ್ಲಿ ಸರಸ್ವತಿ ನದಿಯಷ್ಟೇ ಅಲ್ಲದೇ ಮಹಾನ್ದೇವತೆಯೂ ಹೌದು. ಆಪ್ರೀ ಸೂಕ್ತಗಳಲ್ಲಿ ಭಾರತಿ ಮತ್ತು ಇಳೆಯರ ಜೊತೆಗೇ ಸರಸ್ವತಿಗೆ ವಿಶೇಷ ಗೌರವ. ಅದಲ್ಲದೇ ತನ್ನ ಮೂಲವೂ ಸೃಷ್ಟಿಯ ದಿವ್ಯಜಲರಾಶಿಯೆಂದು ಘೋಷಿಸಿದ್ದಾಳೆ. ಋಗ್ವೇದದಲ್ಲಿಯಂತೂ ಸರಸ್ವತಿ ದಿವ್ಯಜಲರಾಶಿಯೇ. ಈ ದೇವಿಯ ಹೆಸರಿನಲ್ಲಿ ವಾಕ್ ಇರುವುದೂ, ದೇವಿಯ ಮೂಲ ಜಲರಾಶಿಯಾಗಿರುವುದೂ, ದೇವಿಯ ಸ್ವರೂಪಕ್ಕೂ ಸರಸ್ವತೀ ನದಿಯ ಕಥೆಗಳಿಗೂ ಇರುವ ಸಾಮ್ಯ, ಋಗ್ವೇದದಲ್ಲಿಯೇ ಸರಸ್ವತಿಗಿರುವ ಪ್ರಾಮುಖ್ಯತೆ ಇವುಗಳನ್ನು ಗಮನಿಸಿದಾಗ ಇಲ್ಲಿ ಮಹತ್ತರವಾದ ಸಂಬಂಧವಿರುವಂತಿದೆ. ಅಲ್ಲದೇ ಮುಂದೆ ಸರಸ್ವತಿ ವಾಗ್ದೇವತೆಯಾದುದಕ್ಕೇ ಋಗ್ವೇದದಲ್ಲಿಯೇ ಒಂದು ಎಳೆಯಿರುವಂತಿದೆ.

ಈ ಎಲ್ಲಾ ಅರ್ಥಸಂಪತ್ತೂ, ಪ್ರತಿಮಾಸಂಪತ್ತುಗಳ ಹೊರತಾಗಿ ದೇವೀ ಸೂಕ್ತ ತನ್ನ ಅಭಿವ್ಯಕ್ತಿಯಲ್ಲೇ ಅತ್ಯಂತ ಕಾವ್ಯಾತ್ಮಕವಾಗಿದೆ. ಈ ಎಲ್ಲ ಕಾರಣಗಳಿಂದ ಸಂಪ್ರದಾಯದಲ್ಲಿ ದೇವೀ ಸೂಕ್ತ ಮಿಗಿಲಾದ ಸ್ಥಾನವನ್ನು ಪಡೆದಿದೆ. ಸೂಕ್ತದ ಅಂಶಗಳನ್ನು ಹಿಡಿದು ಪರಂಪರೆಯ ಅನೇಕ ಎಳೆಗಳನ್ನು ಬಿಡಿಸಿ ನೋಡಬೇಕಿದೆ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply

IndicA Today - Website Survey

Namaste,

We are on a mission to enhance the reader experience on IndicA Today, and your insights are invaluable. Participating in this short survey is your chance to shape the next version of this platform for Shastraas, Indic Knowledge Systems & Indology. Your thoughts will guide us in creating a more enriching and culturally resonant experience. Thank you for being part of this exciting journey!


Please enable JavaScript in your browser to complete this form.
1. How often do you visit IndicA Today ?
2. Are you an author or have you ever been part of any IndicA Workshop or IndicA Community in general, at present or in the past?
3. Do you find our website visually appealing and comfortable to read?
4. Pick Top 3 words that come to your mind when you think of IndicA Today.
5. Please mention topics that you would like to see featured on IndicA Today.
6. Is it easy for you to find information on our website?
7. How would you rate the overall quality of the content on our website, considering factors such as relevance, clarity, and depth of information?
Name

This will close in 10000 seconds