close logo

ಪುಸ್ತಕವಿಮರ್ಶೆ: ವೀರಶೈವತ್ವದ ಕೈಪಿಡಿ – ಪ್ರತಿ ವೀರಶೈವ-ಲಿಂಗಾಯತ ಮನೆಯಲ್ಲಿರಲೇಬೇಕಾದ ಗ್ರಂಥ

ಶಿಕ್ಷಣ ಕ್ಷೇತ್ರದ ಮೇಲೆ ಮಾರ್ಕ್ಸ್ವಾದದ ಹಿಡಿತದಿಂದಾಗಿ ಧಾರ್ಮಿಕ ವಿಚಾರಧಾರೆ, ಧಾರ್ಮಿಕ ಸಂಘಟನೆಗಳು, ಆಧ್ಯಾತ್ಮದ ವಿಷಯಗಳ ಮೇಲೆ ಬಗ್ಗೆ ಗಂಭೀರವಾದ ಅಧ್ಯಯನ ಹಾಗೂ  ಶೋಧನಾ ಕಾರ್ಯಗಳು ನಿಂತು ಹೋದವು. ಅಂತಹ ಸ್ಥಿತಿಯಲ್ಲಿ, ಕರ್ನಾಟಕದ ಹೆಸರಾದ ವಿದ್ವಾಂಸರು, ಶಿಕ್ಷಣವೇತ್ತರೂ ಆದ ಡಾll S.C. ನಂದಿಮಠ ಅವರ ಈ ಗ್ರಂಥವು – ನಮ್ಮ ತಲೆಮಾರು, ಕಾಲದಲ್ಲಿ ಹಿಂದಿರುಗಿ, ಮರುಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದಂತಹ ಒಂದು ಕೃತಿ.  ನಮ್ಮ ತಲೆಮಾರಿಗೆ ಒಂದು ಕೊಡುಗೆಯೇ ಸರಿ.

ಪರಂಪರಾಗತವಾಗಿ ನಮ್ಮ ಬೇರು, ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯ ಮತ-ಧರ್ಮಗಳ ಬೋಧೆ ಮತ್ತು ಸಂಸ್ಕಾರ, ತಂದೆ-ತಾಯಿ ಹಾಗೂ ಹಿರಿಯರಿಂದ ಲಭ್ಯವಾಗುತ್ತಿತ್ತು. ಶತಮಾನಗಳ ವಸಾಹತುಶಾಹಿ ಆಡಳಿತ ಮತ್ತು ಆಧುನಿಕ ಜೀವನಶೈಲಿಯ ಒತ್ತಡದಿಂದಾಗಿ ಅವಿರತವಾಗಿ ಹರಿಯುತ್ತಿದ್ದ ಈ ಜ್ಞಾನಗಂಗೆಯಲ್ಲಿ ತಡೆಯುಂಟಾಗಿದೆ. ಆದರೆ, ಈಗೀಗ ಭಾರತೀಯರಲ್ಲಿ, ಅದರಲ್ಲೂ ಶಿಕ್ಷಿತರಲ್ಲಿ, ನಮ್ಮ ಗತವೈಭವ, ಸಾಮಾಜಿಕ-ಧಾರ್ಮಿಕ ಪರಂಪರೆ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಜಿಜ್ಞಾಸೆ ಹೆಚ್ಚುತ್ತಿದೆ. ವೀರಶೈವ-ಲಿಂಗಾಯತ ಸಂಪ್ರದಾಯದಲ್ಲೂ ಇದೇ ತರಹ ಕುತೂಹಲ ಹೆಚ್ಚುತ್ತಿದ್ದು, ಒಂದು ಸಮಗ್ರ ಪರಿಚಯಾತ್ಮಕ ಗ್ರಂಥ ಹಾಗೂ ಸಾಹಿತ್ಯದ ಅಭಾವದಿಂದಾಗಿ, ಜಿಜ್ಞಾಸುಗಳು ವೀರಶೈವತ್ವವನ್ನು ಅರಿತುಕೊಳ್ಳಲು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿಯಮಿತವಾಗಿ ಉಲ್ಲೇಖಿಸಲ್ಪಡುವ  ಕೆಲವು ಜನಪ್ರಿಯ ವಚನಗಳ ಮೇಲೆ ಅವಲಂಬಿಸಬೇಕಾಗಿ ಬಂದಿದೆ. ಪರಿಣಾಮವಾಗಿ, ವೀರಶೈವ ಲಿಂಗಾಯತ ಸಿದ್ಧಾಂತವನ್ನು ಕೇವಲ ಒಂದು ನೀತಿಶಾಸ್ತ್ರ ಅಥವಾ ನೈತಿಕತೆಯನ್ನು ಪ್ರತಿಪಾದಿಸುವ ಕನ್ಫ್ಯೂಷಿಯನಿಸಂ (confucianism) ತರಹ ಅರ್ಥೈಸಿಕೊಳ್ಳುತ್ತಿದ್ದಾರೆ, ತತ್ಫಲವಾಗಿ ಅದರಲ್ಲಿರುವ ಅತೀಂದ್ರಿಯ, ಧಾರ್ಮಿಕ, ತಾತ್ವಿಕ, ಹಾಗೂ ಆಧ್ಯಾತ್ಮಿಕ ಅಂಶಗಳ ಪರಿಚಯದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಡಾ. S.C ನಂದಿಮಠ ಅವರ ಈ ಗ್ರಂಥ ಸಾಮಯಿಕ ಮತ್ತು ಉಪಯುಕ್ತವಾಗಿದೆ.

ಪ್ರಸ್ತುತ ಗ್ರಂಥವು ಲೇಖಕರ ಸ್ನಾತಕೋತ್ತರ ಡಾಕ್ಟರೇಟ್ ಪದವಿಯ ಪ್ರಬಂಧದ ಒಂದು ಭಾಗವಾಗಿದ್ದು, ವೀರಶೈವ ಸಾಹಿತ್ಯ (ಡಾll ಫ.ಗು. ಹಳಕಟ್ಟಿಯವರ ಮಾಡಿರುವ ಬಸವಣ್ಣ, ಅಲ್ಲಮಪ್ರಭು ಅಕ್ಕಮಹಾದೇವಿ ಮುಂತಾದ ಶರಣರ  ವಚನಗಳ ಬೃಹತ್ಸಂಕಲನವಾದ ವಚನಶಾಸ್ತ್ರ ಸಾರ), ಚನ್ನಬಸವಣ್ಣನ ಕರಣಹಸುಗೆ, ಧರ್ಮಶಾಸ್ತ್ರ ಹಾಗೂ ಅಧ್ಯಾತ್ಮಶಾಸ್ತ್ರ, ಹೂಲಿಮಠ, ನೇಸರ್ಗಿ ಮತ್ತು ಮನಗೂಳಿಯಲ್ಲಿರುವ ಶಿಲಾಶಾಸನಗಳು, ವತುಲಸಿದ್ಧಾಖ್ಯ, ಲಕುಲಾಗಮ, ಲಕುಲಸಿದ್ಧಾಂತ ಮುಂತಾದ ಶೈವಾಗಾಮಗಳು, ಮಹಾನಿರ್ವಾಣತಂತ್ರ ಹಾಗೂ ಮಾಲಿನಿವಿಜಯತಂತ್ರ, ಮುಂತಾದ ತಂತ್ರಶಾಸ್ತ್ರಗಳ  ಸಮಗ್ರ ಅಧ್ಯಯನ, ವ್ಯಾಪಕ ಸಂಶೋಧನೆಯ ಹಾಗೂ ಆಳವಾದ ವಿಶ್ಲೇಷಣೆಯ ಆಧಾರದ ಮೇಲೆ ರಚನೆಯಾಗಿದೆ. ವೀರಶೈವತ್ವ ಅಥವಾ ಲಿಂಗಾಯತ ಸಿದ್ಧಾಂತದ ಹುಟ್ಟು ಬೆಳವಣಿಗೆ, ಮೂಲಭೂತ ಸಾಹಿತ್ಯ, ಶಾಸ್ತ್ರಗಳು, ಸೈದ್ಧಾಂತಿಕ ತಳಹದಿ,  ತತ್ವಜ್ಞಾನ, ಪರಂಪರೆ, ಧಾರ್ಮಿಕ ವಿಧಿಗಳು, ಆಚರಣೆಗಳು  ಹಾಗೂ ಸಾಮಾಜಿಕ-ಸಾಂಸ್ಕೃತಿಕ- ಆಧ್ಯಾತ್ಮಿಕ ಆಯಾಮಗಳ ಒಂದು ಅಚ್ಚುಕಟ್ಟಾದ ಚಿತ್ರಣ ಕೊಡುತ್ತದೆ.

ಅನಾದಿಕಾಲದಿಂದಲೂ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿರುವ ಶೈವಸಿದ್ಧಾಂತಗಳಲ್ಲಿ ಒಂದು ಕರ್ನಾಟಕದಲ್ಲಿಯೂ ಸಹ ಅಸ್ತಿತ್ವದಲ್ಲಿತ್ತೆಂದು,  ಅದರ ಹೆಸರು ಲಕುಲೀಶ-ಪಾಶುಪತ ಶೈವಮತ ಅಥವಾ ಕಲಾಮುಖ ಶೈವಮತ  ಇತ್ತೆಂದು, ಮತ್ತು ಈ ಶೈವರ ಮೇಲೆ ಆಗಿನಕಾಲದ ಪ್ರಬಲ ಜೈನಮತಸ್ತರಿಂದ ಆಗುತ್ತಿರುವ  ದಮನ ಹಾಗು ಅನ್ಯಾಯದಿಂದಾಗಿ ಅದು ಅವಸಾನದ ಅಂಚಿನಲ್ಲಿದ್ದು, ಶ್ರೀ ಬಸವಣ್ಣನವರ ನೇತೃತ್ವದಲ್ಲಿ ಶರಣರು ಇದನ್ನು ಪುನರುಜ್ಜೀವನಗೊಳಿಸಿದರೆಂದು ಲೇಖಕರ ಅಭಿಪ್ರಾಯ. ಹೀಗೆ ಪುನರುಜ್ಜೀವನಗೊಂಡ ಸಂಪ್ರದಾಯವೇ ವೀರಶೈವತ್ವ ಅಥವಾ ಲಿಂಗವಂತ ಸಂಪ್ರದಾಯ, ಈ ವೀರಶೈವತ್ವದ ಪ್ರಮುಖ ಲಕ್ಷಣವೆಂದರೆ, ಅದು ಸಾಮಾಜಿಕ ಸುಧಾರಣೆಯ  ಬಗ್ಗೆ ತೋರಿದ ಅತ್ಯುತ್ಸಾಹ.

ಸುಪ್ರಭೇದಾಗಮ, ಪಾಶುಪತಾಗಮ, ವೀರಶೈವಧರ್ಮಸಿಂಧು, ವೀರಶೈವಾಚಾರ ಕೌಸ್ತುಭ ಇತ್ಯಾದಿ ಪುರಾಣಗಳ ಪ್ರಕಾರ, ವೀರಶೈವತ್ವವು ಅನಾದಿಯಾಗಿದ್ದು ಸೃಷ್ಟಿಯ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಪ್ರತಿ ಯುಗದಲ್ಲಿಯೂ ಐವರು ಆಚಾರ್ಯರು ವೀರಶೈವತ್ವದ  ಬೋಧನೆ ಮತ್ತು ಪ್ರಚಾರ ಮಾಡುತ್ತಾರೆ. ಇವರೇ ಪಂಚಾಚಾರ್ಯರು!  ಕಲಿಯುಗದ ಪಂಚಾಚಾರ್ಯರೆಂದರೆ; ರೇವಣ,  ಮರುಳ, ಏಕೋ ರಾಮ, ಪಂಡಿತ ಮತ್ತು ವಿಶ್ವೇಶ್ವರ. ಪಂಚಾಚಾರ್ಯರು ಸ್ಥಾಪಿಸಿದ ಐದು ಮಠಗಳು ದೇಶದ ವಿವಿಧ ಭಾಗಗಳಲ್ಲಿ ಈಗಲೂ ಇವೆ. ಲಿಂಗಾಯತರು ತಮ್ಮ ಗೋತ್ರಗಳನ್ನು ಈ ಐವರು ಪಂಚಾಚಾರ್ಯರೊಂದಿಗೆ ಗುರುತಿಸಿಕೊಳ್ಳುತ್ತಾರೆ.

ಜೇಡರ ದಾಸಿಮಯ್ಯರಿಂದ (1040 AD) ಹಿಡಿದು, ಗುರುಬಸವಣ್ಣ ಪ್ರಭುದೇವರಿಂದ ಹಿಡಿದು ಶ್ರೀ ಷಡಕ್ಷರದೇವರವರೆಗೆ (1655 AD), 27 ಪ್ರಮುಖ ಶರಣ-ಶರಣೆಯರ (ವೀರಶೈವ ವಚನ ಸಾಹಿತಿಗಳ) ಮತ್ತವರ ಕೃತಿಗಳ ಕಿರುಪರಿಚಯ ಕೃತಿಯಲ್ಲಿದೆ. ಇವರು ಸಮಾಜದ ಎಲ್ಲ ವರ್ಗಗಳಿಂದ ಬಂದವರಾಗಿದ್ದು, ಎಲ್ಲರೂ ಸಾಮಾನ್ಯವಾಗಿ ತಮ್ಮ ವಚನಗಳಲ್ಲಿ ಏಕಮೇವ ಪರಮಾತ್ಮನಾದ  ಶಿವನ ಭಕ್ತಿ, ಇಷ್ಟಲಿಂಗದ ಪೂಜೆ, ಅಷ್ಟಾವರಣಗಳು ಮತ್ತು ಷಟ್ಸ್ಥಳ ಸಿದ್ಧಾಂತದ ಪ್ರತಿಪಾದನೆ ಮಾಡುತ್ತಾರೆ.

ವೀರಶೈವ ಸಿದ್ಧಾಂತವು ಏಕಮೇವ ಪರಮಾತ್ಮನಾದ ಪರಶಿವನ (ಶಿವನ)  ಉಪಾಸನೆಯನ್ನು ಪ್ರತಿಪಾದಿಸುತ್ತದೆ. ಶ್ರೀ ಬಸವಣ್ಣನವರು ಹೇಳಿದಂತೆ,

ಇಬ್ಬರು ಮೂವರು ದೇವರೆಂದು ಉಬ್ಬಿ ಮಾತಾಡಬೇಡ

ದೇವನೊಬ್ಬನೇ ಕಾಣಿರೋ ಇಬ್ಬರೆಂಬುದು ಹುಸಿನೋಡಾ

ಕೂಡಲ ಸಂಗಮ ದೇವನೊಬ್ಬನೇ ಅಲ್ಲದೇ  ಇಬ್ಬರಿಲ್ಲವೆಂದಿತ್ತುದಾ ವೇದವು.

ಶರಣರು ಬಹುದೇವತಾ ವಾದವನ್ನು ಒಪ್ಪುವುದಿಲ್ಲವಾದರೂ ಪ್ರತಿ  ಶರಣನು ತಮ್ಮ ಮನದಿಚ್ಛೆಯಂತೆ ಶಿವನನ್ನು ಕಲ್ಪಿಸಿಕೊಂಡಿದ್ದಾರೆ. ಶ್ರೀ ಆನಂದ ಕುಮಾರಸ್ವಾಮಿಯವರು ಹೇಳುವಂತೆ, “ಶಿವನ ಅದೆಷ್ಟು ಪ್ರಕಾರದ ನೃತ್ಯಗಳು ಅವನ ಭಕ್ತರಿಗೆ ಗೊತ್ತಿದೆಯೋ ನಾಕಾಣೆ, ಆದರೆ ಇವೆಲ್ಲದರ ಮೂಲ, ಬ್ರಹ್ಮಾಂಡದ ಮೂಲಭೂತ ಕಂಪನಶೀಲಶಕ್ತಿಯ ಮೂರ್ತಸ್ವರೂಪವಾಗಿದೆ!” (Dance of Shiva- Essay). ಸಾಮಾನ್ಯವಾಗಿ ಶರಣರು, ಪುರಾಣದಲ್ಲಿ ವರ್ಣಿಸಿರುವ ಶಿವನನ್ನು ಕಲ್ಪಿಸಿಕೊಂಡಿದ್ದು ಕಂಡುಬರುತ್ತದೆ. ಇದು ಜ್ಞಾತದ ಮೂಲಕ ಅಜ್ಞಾತದವರೆಗೆ ಪಯಣ ಮಾಡುವ ಯೋಜನೆಯಂತೆ ತೊರುತ್ತದೆ. ಪರಮಾತ್ಮನ ಕಲ್ಪನೆಯಲ್ಲಿ ವೀರಶೈವತ್ವವು, ಶೈವ-ಸಿದ್ಧಾಂತಕ್ಕಿಂತ ಕಡಿಮೆ ಇರುವುದಿಲ್ಲ. ತಮಿಳು ಶೈವಸಂತರ ಸ್ಫೂರ್ತಿ ಶರಣರ ವಚನಗಳಲ್ಲಿ ಕಂಡುಬರುತ್ತದೆಂದು ಡಾll ನಂದಿಮಠರ ಅಭಿಪ್ರಾಯ.

‘ಇಷ್ಟಲಿಂಗ’ ಕಲ್ಪನೆ ವೀರಶೈವಮತದ ವೈಶಿಷ್ಟಗಳಲ್ಲೊಂದು; ಇದು ದೇಹದ ಮೇಲೆ ಧರಿಸಲ್ಪಡುವಂಥ, ಪರಶಿವನ ಚಿಹ್ನೆ. ನಿಟ್ಟೂರ ನಂಜನಾಚಾರ್ಯರು, ”ಲಿಂಗವೇ ಪರಶಿವನು, ಲಿಂಗವೇ ಉಪನಿಷತ್ತುಗಳಲ್ಲಿ ಹೇಳಿರುವ ಪರಬ್ರಹ್ಮ” ಎಂದು ಹೇಳುತ್ತಾರೆ. ‘अथातो ब्रह्मजिज्ञासित्यादि सूत्रप्रतिपादित ब्रह्नशब्दवाच्यं शिवरुद्रादि संज्ञितं च लिंगमेवेति निरूप्यते” [The Vedanta Sara Virsaiva Cintamani Part II, p90] ನಮ್ಮೊಳಗೆ ಚೈತನ್ಯರೂಪದಲ್ಲಿ ವಾಸಿಸಿರುವ ಶಿವನನ್ನೆ ಹೊರತೆಗೆದು, ಗುರುವು ಲಿಂಗರೂಪದಲ್ಲಿ ನಮ್ಮ ಕೈಯ್ಯಲ್ಲಿ ಕೊಡುವುದೇ  ಇಷ್ಟಲಿಂಗ.

ಎನ್ನ ಪ್ರಾಣದೊಳಗಿರ್ದ ಪರಮ ಕಲೆಯ ತೆಗೆದು

ಶಿವಲಿಂಗಮೂರ್ತಿಯ ಮಾಡಿ ಎನ್ನ ಕರಸ್ಥಲಕ್ಕೆ ಕೊಟ್ಟನ್ನಯ್ಯಾ ಶ್ರೀ ಗುರು . . .

ಇದು ಕಾರಣ ಅಂಗವ ಬಿಟ್ಟು ಲಿಂಗವನಗಲಲಾಗದಯ್ಯಾ,

ಮಹಾಲಿಂಗ ಗುರುಶಿವಸಿದ್ಧೇಶ್ವರ ಪ್ರಭುವೇ

[The Vachana Sastra Sara, (1st edition), p. 390.-].

ಪ್ರಾಚ್ಯಶಾಸ್ತ್ರಜ್ಞರಲ್ಲಿ ಕೆಲವರು ಲಿಂಗವನ್ನು ಪುರುಷಜನನಾಂಗದ ರೂಪವೆಂದೂ, ಇನ್ನು ಕೆಲವರು ಅದು ಬೌದ್ಧಸ್ತೂಪದ ಕಿರುಪ್ರತಿಮೆಯೆಂದೂ ಕಲ್ಪಿಸುತ್ತಾರೆ. ಆದರೆ ಈ ಕಲ್ಪನೆಗಳು  ತಪ್ಪೆಂದು ಲೇಖಕರು ಮನವರಿಕೆ ಮಾಡಿಸುತ್ತಾರೆ.

ಅಷ್ಟಾವರಣಗಳು; ಅರ್ಥಾತ್ ಎಂಟು ಹೊದಿಕೆಗಳು, ಲಾಂಛನಗಳು, ಚಿಹ್ನೆಗಳು, ಅಥವಾ ಆಚರಣೆಗಳು, ವೀರಶೈವತ್ವದ ಇನ್ನೊಂದು ವೈಶಿಷ್ಟ್ಯ. ವೇದಗಳ ಕೊನೆಗೆ ಬರುವ ಬ್ರಾಹ್ಮಣಗಳಲ್ಲಿರುವ ಕರ್ಮಕಾಂಡ, ಧಾರ್ಮಿಕವಿಧಿ-ಆಚರಣೆಗಳನ್ನು ವೀರಶೈವತ್ವವು ತಿರಸ್ಕರಿಸುತ್ತದೆ, ಬದಲಿಗೆ ಅಷ್ಟಾವರಣಗಳನ್ನು ನೀಡುತ್ತದೆ. ೧. ಗುರು ೨. ಲಿಂಗ ೩. ಜಂಗಮ ೪. ಪಾದೋದಕ ೫. ಪ್ರಸಾದ ೬. ವಿಭೂತಿ ೭. ರುದ್ರಾಕ್ಷ ೮. ಮಂತ್ರ (ಪಂಚಾಕ್ಷರಿ ಹಾಗೂ ಷಡಕ್ಷರಿ ಮಂತ್ರ) – ಇವೇ ವೀರಶೈವನ ಅಷ್ಟಾವರಣಗಳು.  ಗುರು ಬಸವಣ್ಣನವರು ಹೇಳಿದಂತೆ,

“ಓಂ ನಮಃ ಶಿವಾಯ ಎಂಬುದೇ ಮಂತ್ರ

ಓಂ ನಮಃ ಶಿವಾಯ ಎಂಬುದೇ ತಂತ್ರ

ನಮ್ಮ ಕೂಡಲಸಂಗಮದೇವರ ನೆನೆವುದೇ ಮಂತ್ರ”.

ಅಷ್ಟಾವರಣಗಳೆೆ ವೀರಶೈವರ ಆಭರಣಗಳು. ಇದಲ್ಲದೆ ವೀರಶೈವರಲ್ಲಿ ಕಳಸ ಸ್ಥಾಪನೆ, ಲಿಂಗದೀಕ್ಷೆ, ಮದುವೆ, ವಿಭೂತಿವಿಲೆ ಮತ್ತು ಅಂತ್ಯಸಂಸ್ಕಾರದ ವಿಶಿಷ್ಟ ವಿಧಿವಿಧಾನಗಳಿರುತ್ತವೆ.

ಶೈವ ಸಿದ್ಧಾಂತ, ತ್ರಿಕಾ, ಪಂಚರಾತ್ರ ಮುಂತಾದ ಭಾರತೀಯ ದರ್ಶನಗಳಂತೆ ವೀರಶೈವತ್ವವು ಸಹ ಸೃಷ್ಟಿಯಲ್ಲಿ ಶಕ್ತಿಯ ಪಾತ್ರವನ್ನು ಗುರುತಿಸುತ್ತದೆ. ಶಿವನು ತನ್ನ ಲೀಲೆಗಾಗಿ ಸೃಷ್ಟಿಯನ್ನು ರಚಿಸಿದನು,  ಶಕ್ತಿಯು ಶಿವನಲ್ಲಿ ಉದ್ಭವಿಸಿ ನಂತರ ಸ್ವಪ್ರೇರಣೆಯಿಂದ ಕಲಾಶಕ್ತಿ ಮತ್ತು ಭಕ್ತಿಶಕ್ತಿ ಎಂಬ ಎರಡವತಾರಗಳನ್ನು ಧರಿಸುತ್ತಾಳೆ. ಕಲಾಶಕ್ತಿಯು ಮಾಯೆಯ  ಸ್ವರೂಪಳು ಅವಳೇ ಅವಿದ್ಯೆ;  ಜೀವ ಮತ್ತು ಶಿವನ ನಡುವಿನ ಭೇದಕ್ಕೆ ಕಾರಣ. ಆದರೆ ಭಕ್ತಿಶಕ್ತಿಯು ಸಚ್ಚಿದಾನಂದ ಸ್ವರೂಪಳೂ, ಮೋಕ್ಷಪ್ರದಾಯಿನಿಯೂ, ಈ ಭವದ ಬಂಧನಗಳನ್ನು ಬಿಡಿಸುವವಳೂ ಆಗಿರುವಳು.  ಹೀಗೆ ವೀರಶೈವರು ಎರಡು ವಿರುದ್ಧ ದಿಕ್ಕಿಗೆಳೆಯುವ ಶಕ್ತಿಗಳನ್ನು ನಂಬುತ್ತಾರೆ. ಭಕ್ತಿಯಿಂದ ವಾಸನಾ ಮುಕ್ತಿ, ಇದರಿಂದಾಗಿ ನಿವೃತ್ತಿ, ಅಲ್ಲಿಂದ ಮುಂದೆ ಮೋಕ್ಷ, ಹೀಗೆ ಅವಿದ್ಯೆಯ ನಿವಾರಣೆಯಾಗಿ ಜೀವವು ಶಿವನೊಡನೆ ಐಕ್ಯವಾಗುವುದು.

ಶ್ರೀ ಪ್ರಭುದೇವರ ನಂತರ  ವೀರಶೈವ  ಶರಣರನೇತೃತ್ವ ವಹಿಸಿದ ಷಟ್ಸ್ಥಳ ಜ್ಞಾನಿ ಚೆನ್ನಬಸವಣ್ಣ ನವರು ಗುರು ಬಸವಣ್ಣನವರ ಆಣತಿಯಂತೆ, ತಮ್ಮ ಅಗಾಧ ಜ್ಞಾನ ಶಕ್ತಿಯಿಂದ ವೀರಶೈವತ್ವದ ವಚನ ಸಾಹಿತ್ಯಕ್ಕೆ ಷಟ್ಸ್ಥಳದ ಚೌಕಟ್ಟು ನೀಡಿದಂಥ, ತಮ್ಮ ವಚನ ಸಾಹಿತ್ಯದ ಮಹತ್ವದ ಕೃತಿಯಾದ ಕರಣ ಹಸುಗೆಯಲ್ಲಿ, ಸೃಷ್ಟಿ-ಸ್ಥಿತಿ-ಲಯದ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾರೆ. ಇಲ್ಲಿ ಋಗ್ವೇದ(X.129), ಛಾಂದೋಗ್ಯಪನಿಷತ್(VI.2.1), ತೈತ್ತಿರಿಯೋಪನಿಷತ್(II.7), ಕಠೋಪನಿಷತ್ತಗಳ (II.5.15) ಜೊತೆಗೆ ಸಾಮ್ಯತೆ ಕಾಣುತ್ತದೆ ಇಲ್ಲಿ. ಜೀವಿಗಳ ಭೌತಿಕ ದೇಹವಾದ ಪಿಂಡಾಂಡವು, ಬ್ರಹ್ಮಾಂಡದ ಮಾದರಿಯಲ್ಲೇ, ೭೫ ಗುಣ ಹಾಗೂ ೨೫ ತತ್ವಗಳಿಂದ ಮಾಡಲ್ಪಿಟ್ಟಿದೆ. ಗುರು ಚೆನ್ನಬಸವಣ್ಣನವರು ಸೃಷ್ಟಿ ಸ್ಥಿತಿ ಲಯದ ಈ ವ್ಯವಸ್ಥೆಯನ್ನು ಮಾಲಿನಿವಿಜಯಭೈರವಿತಂತ್ರದಲ್ಲಿ (ಪರಮೇಶ್ವರಾಗಮದ ಉಪ-ಆಗಮ) ಆ ಪರಶಿವನೇ ಹೇಳಿದ್ದಾನೆಂದು ಉಲ್ಲೇಖಿಸಿದ್ದಾರೆ. ಕರುಣ ಹಸುಗೆಯಲ್ಲಿ ಶ್ರಿಗುರುಚೆನ್ನಬಸವರು ದೇಹರಚನೆ, ಶರೀರದಲ್ಲಿರುವ ಎಲವು ಕೀಲುಗಳ ಬಗ್ಗೆ, ಯೋಗಕ್ರಿಯೆ, ಪ್ರಾಣಾಯಾಮ ಮುಂತಾದವುಗಳ ಬಗ್ಗೆ ವಿವರಿಸಿದ್ದಾರೆ. ಪ್ರಭುದೇವರು ತಮ್ಮ ಸೃಷ್ಟಿಯವಚನಗಳಲ್ಲಿ ೨೫ ಅಂಗದತತ್ವಗಳು ಮತ್ತು ೧೧ ಲಿಂಗದ ತತ್ವಗಳು ಬಗ್ಗೆ ಉಲ್ಲೇಖಿಸುತ್ತಾರೆ, ಇದು ಶೈವಸಿದ್ಧಾಂತದ ೩೬ ತತ್ವಗಳ ಸಂಖ್ಯೆಯೊಂದಿಗೆ ಹೋಲುತ್ತದಾದರೂ, ಹೆಸರು ಮತ್ತು ಅರ್ಥ ಭಿನ್ನವಾಗಿವೆ.

ಷಡ್ಸ್ಥಳಸಿದ್ಧಾಂತವು ವೀರಶೈವಾಧ್ಯಾತ್ಮಶಾಸ್ತ್ರದ ಮೂಲಭೂತ ಅಂಶ ಹಾಗೂ ಅದರ ವೈಶಿಷ್ಟವೂ ಹೌದು. ಜೀವವು (ಅಂಗ) ಶಿವನೆಡೆಗೆ (ಲಿಂಗ) ಮಾಡುವ ಆರುಹಂತಗಳ ಕ್ರಮಬದ್ದ ಪ್ರಯಾಣವೇ ಈ ಷಡ್ಸ್ಥಳಸಿದ್ಧಾಂತ. ಸ್ಥಳ ಶಬ್ದಕ್ಕೆ ಮೊಗ್ಗೆಯ ಮಹದೇವರು ಮತ್ತು ಶಿವಯೋಗಿ ಶಿವಾಚಾರ್ಯಾರು ಬ್ರಹ್ಮಾಂಡದ ಮೂಲ, ಸಕಲ ಸೃಷ್ಟಿಯ ಉಗಮಸ್ಥಾನ,  ಬ್ರಹ್ಮ  ಮುಂತಾದ ಆಧ್ಯಾತ್ಮಿಕ ಸಾಂಕೇತಿಕ ಅರ್ಥವನ್ನೊದಗಿಸುತ್ತಾರೆ.  ಆದರೆ, ಸಾಮಾನ್ಯವಾಗಿ ಶರಣರು ಸ್ಥಳಶಬ್ದವನ್ನು ಜಾಗ, ಪ್ರಯಾಣದ ಹಂತ, ಭಾಗ ಅಥವಾ ಮಜಲು ಎಂದರ್ಥದಲ್ಲಿ ಬಳಸಿದ್ದಾರೆ. ೧. ಭಕ್ತ, ೨. ಮಾಹೇಶ್ವರ  ೩. ಪ್ರಸಾದಿ  ೪. ಪ್ರಾಣಲಿಂಗಿ ೫. ಶರಣ  ೬. ಐಕ್ಯ ಎಂಬವೇ ಷಟ್ಸ್ಥಳಗಳು. ಆರು ಸ್ಥಳಗಳಲ್ಲಿ ಮೊದಲೆರಡು ತ್ಯಾಗಾಂಗವೆನಿಸುತ್ತದೆ ಭಕ್ತನು ತನ್ನೆಲ್ಲವನ್ನೂ ಲಿಂಗಕ್ಕೆ ತ್ಯಾಗ ಮಾಡುತ್ತಾನೆ. ಮುಂದಿನ ಎರಡು ಸ್ಥಳಗಳು ಭೋಗಾಂಗ-ವೆನಿಸುತ್ತದೆ. ಇಲ್ಲಿ ಶರಣನು ಲಿಂಗಭೋಗೋಪಯೋಗಿಯಾಗುತ್ತಾನೆ. ಮುಂದಿನ ಎರಡು ಸ್ಥಳಗಳು ಜ್ಞಾನಾಂಗಗಳಾಗಿವೆ. ಮೊದಲನೆಯ ಮೂರು ಸ್ಥಳಗಳು ಕ್ರಿಯಾಪ್ರಧಾನ-ವಾಗಿದ್ದರೆ ನಂತರದ ಮೂರು ಸ್ಥಳಗಳು ನಿವೃತ್ತಿ ಹಾಗೂ ಜ್ಞಾನ ಪ್ರಧಾನವಾಗಿವೆ. ಪ್ರವೃತ್ತಿಯಲ್ಲಿ ಮರೆತು ಬದ್ಧನಾದ ಜೀವಾತ್ಮನಲ್ಲಿ ಪರಮಾತ್ಮನ ಬಗ್ಗೆ ಅರಿವು ಮೂಡಿ, ಪರಶಿವನ ಕಾಣುವ ಬಯಕೆ  ಮೂಡಿದಾಗ ಈ ಯಾತ್ರೆಯ ಪ್ರಾರಂಭ (ಭಕ್ತಸ್ಥಳ), ಯಾತ್ರೆಯ ಗಮ್ಯವೇ ಪರಶಿವನ ಸಾಕ್ಷಾತ್ಕಾರ (ಐಕ್ಯಸ್ಥಳ). ಶಿವನ ಸಾಕ್ಷಾತ್ಕಾರವನ್ನು, ಬಯಲು, ನಿರ್ಬಯಲು, ಐಕ್ಯ, ಮೋಕ್ಷ, ಅಥವಾ ನುಡಿಗೆಸಿಲುಕದ ಶೂನ್ಯ ಎಂತಲೂ ಶರಣರು ವರ್ಣಿಸಿದ್ದಾರೆ. ಪ್ರತಿ ಸ್ಥಳಕ್ಕೂ ತನ್ನದೇ ಆದ ಲಿಂಗ, ಶಕ್ತಿ, ವ್ರತ, ನಿಯಮ, ಶೀಲಗಳಿರುತ್ತವೆ.

ದುರಾಸೆ, ಲೋಭ, ಮತ್ಸರ, ಕಾಮುಕತೆ ಹಿಂಸಾಪ್ರವೃತ್ತಿಗಳ ತ್ಯಾಗ ಮಾಡುವುದರ ಜೊತೆಗೆ ಸದಾಚಾರ, ಸಮಚಿತ್ತತೆ ಮತ್ತು ಪಂಚಾಚಾರಗಳು ಪಾಲನೆಯೇ ವೀರಶೈವರ ವ್ರತ-ನಿಯಮ-ಶೀಲಗಳಾಗಿರುತ್ತವೆ.

ಶಿವನೇ ಪರಮಾತ್ಮ-ಪರಬ್ರಹ್ಮ, ಶಿವನನ್ನು ಇಷ್ಟಲಿಂಗದ ರೂಪದಲ್ಲಿ ತಮ್ಮ ದೇಹದಲ್ಲಿ ಧರಿಸಿ ಉಪಾಸನೆ ಮಾಡುವುದೇ ವೀರಶೈವತ್ವದ ಮೂಲ ಸಿದ್ಧಾಂತ. ಮಾನವನ ಆಧ್ಯಾತ್ಮಿಕ ಜೀವನದ ಲಕ್ಷ್ಯವೇ ಶಿವನ ಸಾಕ್ಷಾತ್ಕಾರ, ಲಕ್ಷ್ಯದ ಸಾಧನೆಗೆ ಸಹಾಯಮಾಡುವವು – ಅಷ್ಟಾವರಣಗಳು ಹಾಗೂ ಪಂಚಾಚಾರ. ಆರು ಸ್ಥಳಗಳ ಕ್ರಮಬದ್ಧ ಯಾತ್ರೆಯಾದ ಷಡ್ಸ್ಥಳಸಿದ್ಧಾಂತವೇ ವೀರಶೈವತ್ವದ ಆಧ್ಯಾತ್ಮದರ್ಶನಶಾಸ್ತ್ರ.

ವೀರಶೈವತ್ವದಲ್ಲಿ ಜಾತಿ ಲಿಂಗ ಪ್ರಭೇದಗಳಿಗೆ ತಾರತಮ್ಯ ಇರದೇ ಎಲ್ಲರಿಗೂ ಸಮಾನ ಗೌರವ, ಹಕ್ಕು ಬಾಧ್ಯತೆಗಳು ಇರುವುದರಿಂದ, ಎಲ್ಲ ಮನುಜರು ಲಿಂಗದೀಕ್ಷೆಗೆ, ಅಷ್ಟಾವರಣಗಳಿಗೆ, ಷಡ್ಸ್ಥಳ ಸಿದ್ಧಾಂತದ ಪಾಲನೆಗೆ, ಹಾಗೂ ಮೋಕ್ಷ ಪ್ರಾಪ್ತಿಗೆ ಸಮಾನ ಅಧಿಕಾರಿಗಳಾಗಿರುತ್ತಾರೆ. ಮನುಷ್ಯನ ಆಧ್ಯಾತ್ಮಿಕ ಜೀವನವನ್ನು ಲೌಕಿಕ ಜೀವನದ ಜೊತೆಗೆ ಸಮನ್ವಯಗೊಳಿಸಲು, ವೀರಶೈವತ್ವದಲ್ಲಿ, ದಿನನಿತ್ಯದ ಮತ್ತು ವ್ಯಾವಹಾರಿಕ ಚಟುವಟಿಕೆಗಳನ್ನು ಆಧ್ಯಾತ್ಮ ಸಾಧನೆಯೊಂದಿಗೆ ಏಕರೂಪವಾಗಿ ಹೆಣೆಯಲ್ಪಟ್ಟಿವೆ.

ವೀರಶೈವ ಆಧ್ಯಾತ್ಮಿಕ ಜೀವನದ ಅಂತಿಮ ಉದ್ದೇಶ ಶಿವನೊಡನೆ ಐಕ್ಯ. ಶಿವಶರಣ ರೇಕಣ್ಣ ಹೇಳಿದಂತೆ,

”ಕಲ್ಲೊಳಗಣ ಕಿಚ್ಚು ಬೂದಿಯಿಲ್ಲದಿರುವಂತಿರಿಸಯ್ಯಾ ಎನ್ನ ಲಿಂಗದೊಳಗೆ,

ಗಾಳಿ ಗಂಧ ವನ್ನಪ್ಪಿದಂತಿರಿಸಯ್ಯಾ ಎನ್ನ ಲಿಂಗದೊಳಗೆ,

ರೇಕಣ್ಣ ಪ್ರಿಯನಾಗಿನಾಥ ನಿಮ್ಮ  ನಿಲುವಿನೊಳಗಣ ನಿಲುವು ಜೋತಿಯ

ಬೆಳಗಿನೊಳಗಡಗಿದ ತೈಲದಂತಿರಿಸಯ್ಯ ಎನ್ನ ಲಿಂಗದೊಳಗೆ!”

ಆತ್ಮವು ಒಂದು ಬೆಳಕಿನ ರೂಪ  ಆದ್ದರಿಂದ  ಆತ್ಮ ಹಾಗೂ ಪರಮಾತ್ಮರಲ್ಲಿ ಭೇದವಿಲ್ಲ. ಗುರುಬಸವನ ವಚನದಲ್ಲಿ ಹೇಳುವುದಾದರೆ;

“ಅಯ್ಯಾ ಎನ್ನ ಹೃದಯದಲ್ಲಿ ನ್ಯಸ್ತವಾಗಿರುವ ಪರಮಚ್ಚಿದ್ಬೆಳಗೇ

ಹಸ್ತಮಲಕ ಸಂಯೋಗದಿಂದ ಒಂದುಗೂಡಿ ಮಹಾಬೆಳಗ ಮಾಡಿದಿರಲ್ಲಾ, . . .

ಅಯ್ಯಾ ಎನ್ನ ಆರಾಧ್ಯ ಕೂಡಲಸಂಗಮದೇವಾ

ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣುತ್ತಿರ್ದರಲ್ಲಾ”.

ಇದೇ ಕಾರಣಕ್ಕೆ, ಶ್ರೀಪತಿ ಪಂಡಿತರು ತಮ್ಮ ಶ್ರೀಕರಭಾಷ್ಯದಲ್ಲಿ (ವೀರಶೈವಭಾಷ್ಯ) ವೀರಶೈವತ್ವವನ್ನು ವಿಶೇಷಾದ್ವೈತ (ತನ್ನದೇ ಆದ ವಿಶಿಷ್ಟ ನಂಬಿಕೆಗಳಿರುವಂತಹ ಏಕತ್ವ) ಎಂದು ವ್ಯಾಖ್ಯಾನಿಸುತ್ತಾರೆ. ಶಂಕರಾಚಾರ್ಯರು ಇದನ್ನೇ ‘ಚಿದಾನಂದರೂಪಶಿವೋಹಂ’ ಅನ್ನುತ್ತಾರೆ.

ಸಂಸಾರವು ಅಂತಿಮವಾಗಿ ಸತ್ಯವೂ ಅಲ್ಲ, ಅಂತಿಮವಾಗಿ ಅಸತ್ಯವೂ ಅಲ್ಲ, ಪ್ರಾರಂಭದಲ್ಲಿ ಸಂಸಾರವು ನಿಜವೆಂದು ಪ್ರತೀತವಾಗಿ ಷಡ್ಸ್ಥಳಯಾತ್ರೆಯ ಕೊನೆಯ ಹಂತಗಳಲ್ಲಿ ಮಿಥ್ಯೆಯೆಂದು ಅರಿವಾಗುತ್ತದೆ. ಲಿಂಗವು ಈ ಬ್ರಹ್ಮಾಂಡವನ್ನು ವ್ಯಾಪಿಸಿರುವ ಒಂದು ಜ್ವಲಂತ ಬೆಳಕಿನ ಪುಂಜವಾಗಿದ್ದು ಸಕಲ ಚರಾಚರಗಳ ಮೂಲತತ್ವವಾಗಿದೆ. ಅಕ್ಕಮಹಾದೇವಿ ಹೇಳಿದಂತೆ,

ಬರಿಯ  ಕಾಡುಗಿಡ-ಮರಗಳಷ್ಟೇ ಅಲ್ಲ,

ಅವುಗಳಲ್ಲಿ ವಾಸಮಾಡುವ ವನ್ಯ ಪ್ರಾಣಿ ಪಕ್ಷಿಗಳೂ

ಚೆನ್ನಮಲ್ಲಿಕಾರ್ಜುನನ ರೂಪ

ಗುರು ಬಸವಣ್ಣನ ಒಂದು ಪ್ರಖ್ಯಾತ ವಚನದ ಬಗ್ಗೆ ವ್ಯಾಖ್ಯಾನ ಮಾಡುತ್ತಾ ಏ.ಕೆ.ರಾಮಾನುಜಮ್ ಹೀಗೆ ಹೇಳುತ್ತಾರೆ, “ಈ ಕವಿತೆಯು ಮಂದಿರ ನಿರ್ಮಾಣ ಮತ್ತು ಅಂತರಂಗದ ಪರಿವರ್ತನೆ ನಡುವೆ ಇರುವ ವ್ಯತ್ಯಾಸವನ್ನು ಸಾರುತ್ತದೆ, ಹಣವುಳ್ಳವರು ಗುಡಿಯನ್ನು ಕಟ್ಟಬಲ್ಲರು, ಆದರೆ ಗುಡಿಯ ನಿರ್ಮಾಣ ಅವರಿಗೆ ಸ್ವತಃ ಶಿವನ ಗುಡಿಯಾಗಲು ಸಹಾಯಮಾಡಲಾರದು.” [AK Ramanujam – Speaking of Siva p.20]. ವೀರಶೈವತ್ವದಲ್ಲಿ ಆಧ್ಯಾತ್ಮ ಸಾಧನೆಯನ್ನು ಜೀವದ ಅಂತರಂಗದ ಪರಿವರ್ತನೆ ಆಗುವ ಪ್ರಕ್ರಿಯೆಯೆಂಬಂತೆ ಅರ್ಥೈಸಲಾಗಿದೆ. ಡಾ. R.C. ಹಿರೇಮಠ ಅವರು ತಮ್ಮ ಗ್ರಂಥ ‘ಮಹಾಯಾತ್ರೆ’ಯಲ್ಲಿ ವರ್ಣಿಸಿದಂತೆ ಇದು ಅಂಗದಿಂದ ಲಿಂಗಕ್ಕೆ, ಲಿಂಗದಿಂದ ಅಂಗಕ್ಕೆ ಸಾಗುವ ಯಾತ್ರೆ. ಜೀವಾತ್ಮನು ಪ್ರವೃತ್ತಿಯಿಂದ ನಿವೃತ್ತಿಯೆಡೆಗೆ, ನಿವೃತ್ತಿಯಿಂದ ಭಕ್ತಿಯೆಡೆಗೆ, ಭಕ್ತಿಯಿಂದ ಜ್ಞಾನದೆಡೆಗೆ, ಜ್ಞಾನದಿಂದ ಐಕ್ಯದೆಡೆಗೆ ಸಾಗುವುದೇ ವೀರಶೈವ-ಮಹಾಯಾತ್ರೆ.

ಗುರು ಚೆನ್ನಬಸವಣ್ಣನವರು ಹೇಳಿದಂತೆ,

ಅಂಗ ಲಿಂಗ, ಲಿಂಗ ಅಂಗವೆಂದರಿದ ಬಳಿಕ, ಅಲ್ಲಿಯೇ ಕಾಣಿರೋ!

ಬೇರೆ ತೋರಲಿಲ್ಲ, ಉಂಟೆಂದರಸಲಿಲ್ಲ, ಅಲ್ಲಿಯೇ ಕಾಣಿರೋ!

ಕೂಡಲ ಚೆನ್ನಸಂಗಯ್ಯಲಿಂಗ ನಿರಂತರ ಅಲ್ಲಿಯೇ ಕಾಣಿರೊ”.

ಡಾll ನಂದಿಮಠರ ಈ ಕೃತಿ ವೀರಶೈವತ್ವದ ಒಂದು ಮೇಧಾವಿ ಸ್ಥೂಲ ಸಮೀಕ್ಷೆಯಾಗಿದ್ದು, ಅದರ ತಾತ್ವಿಕಸಿದ್ಧಾಂತ, ಆಧ್ಯಾತ್ಮಿಕದರ್ಶನ, ಧಾರ್ಮಿಕ ತಳಹದಿ, ಮುಂತಾದವುಗಳನ್ನು ಯೋಗ್ಯ ಉಲ್ಲೇಖಗಳೊಂದಿಗೆ, ಮಾರ್ಮಿಕವಾಗಿ, ಸರಳ ಭಾಷೆಯಲ್ಲಿ, ಅಚ್ಚುಕಟ್ಟಾಗಿ ಪರಿಚಯಿಸಿ, ಶೈವ-ಸಿದ್ಧಾಂತ, ತ್ರಿಕಾ, ಪಂಚರಾತ್ರ ಹಾಗೂ ಅದ್ವೈತ ಸಿದ್ಧಾಂತಗಳೊಂದಿಗೆ ವಿಮರ್ಶಾತ್ಮಕ ಹೋಲಿಕೆಗಳನ್ನು ಮಾಡುತ್ತದೆ. ಹೀಗಾಗಿ ಈ ಗ್ರಂಥವು ಆರಂಭಿಗರಿಗೆ ಹಾಗೂ ಈಗಾಗಲೇ ಈ ಪಥದಲ್ಲಿ ಸಾಗುತ್ತಿರುವವರಿಗೂ ಉಪಯೋಗಿಯಾಗಿದೆ. ಆಳವಾದ ಅಧ್ಯಯನ ಹಾಗೂ ಶೈಕ್ಷಣಿಕ ಮತ್ತು  ತಾತ್ವಿಕ ಶೋಧನಾ ಕಾರ್ಯ ಮಾಡುವವರಿಗೂ ಮಾರ್ಗದರ್ಶಿಯಾಗಬಲ್ಲದು. ತಮ್ಮ ಸಂಪ್ರದಾಯದ ಸಮಗ್ರ ಹಾಗೂ ಸರಿಯಾದ ತಿಳುವಳಿಕೆಗಾಗಿ ವೀರಶೈವ ಕಿರಿ-ಹಿರಿಯರೆಲ್ಲರೂ ಒಂದು ಬಾರಿ ಓದಲೇಬೇಕಾದಂತಹ ಕೃತಿ. ವೀರಶೈವತ್ವವು ಕೇವಲ ಸಮಾಜದಲ್ಲಿರುವ ಕುಪ್ರಥೆಗಳಿಗೆ, ಅನಿಷ್ಟಗಳಿಗೆ ಪ್ರತಿಗಾಮಿಯಾದ ವಿಚಾರವಾದವಾಗಿರದೇ, ಅದೊಂದು ಕ್ರಾಂತಿಕಾರಿ ಹಾಗೂ ಸಮಗ್ರ ಧಾರ್ಮಿಕ ಚಿಂತನೆ, ಅಂತರಂಗ-ಬಹಿರಂಗ ಪರಿವರ್ತನೆ ಮಾಡಬಲ್ಲ, ಜ್ಞಾನ ಮೋಕ್ಷ ನೀಡಬಲ್ಲ ಅಧ್ಯಾತ್ಮದರ್ಶನವೆಂದು ಮನವರಿಕೆಯಾಗುತ್ತದೆ. ಪ್ರತಿ ವೀರಶೈವ-ಲಿಂಗಾಯತ ಮನೆಯಲ್ಲಿರಲೇಬೇಕಾದ ಗ್ರಂಥವಿದು.

ಲೇಖಕರು ಪಠ್ಯಗಳ ಶೈಕ್ಷಣಿಕ ವ್ಯಾಖ್ಯಾನವನ್ನು ಮೀರಿ, ಒಟ್ಟಾರೆ ಸಮಗ್ರ ಮತ್ತು ಸಂಕ್ಷಿಪ್ತ ರೀತಿಯಲ್ಲಿ ಪರಿಕಲ್ಪನೆಗಳನ್ನು ರಚಿಸಿರುವುದನ್ನು ಮತ್ತು ವ್ಯಾಖ್ಯಾನಿಸಿರುವದನ್ನೂ ಕೃತಿಯುದ್ದಕ್ಕೂ ನೋಡಬಹುದು. ಬಹುಶಃ ಲೇಖಕರ ನಿಷ್ಠಾವಂತ ವೀರಶೈವ ಜೀವನದ ಪ್ರಭಾವ ಇರಬಹುದೋ?. ಗುರುದೇವ ರಾನಡೆ ಅವರ ಮಾತಿನಲ್ಲಿ ಹೇಳುವುದಾದರೆ, ”ಅವರ ಯಾತ್ರಿಕನ ಮುನ್ನಡೆ ಎಂಬ ಹೆಸರಿನ ಅಧ್ಯಾಯವು, ನೈಜ ವೀರಶೈವನು ತನ್ನ  ಹೃದಯದಲ್ಲಿ ಸಲಹುವ  ಆಕಾಂಕ್ಷೆಗಳ ಆಕರ್ಷಕ ಸ್ಮಾರಕವಾಗಿದೆ”.

ಪ್ರಸ್ತುತ ಕೃತಿಯು ವೀರಶೈವ-ಸಾಹಿತ್ಯ, ತತ್ವಶಾಸ್ತ್ರ ಆಧ್ಯಾತ್ಮಿಕದರ್ಶನ ಮತ್ತು ಧಾರ್ಮಿಕ ವಿಧಿವಿಧಾನಗಳಿಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡಿದೆ. ಶ್ರೀ ಬಸವಣ್ಣನ ನೇತೃತ್ವದಲ್ಲಿ ಶರಣರು ಒಂದು ಸಾಮಾಜಿಕ ಕ್ರಾಂತಿಯ ಕಹಳೆ ಮೊಳಗಿಸಿದರು,  ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಿ ಒಂದು ಸಮಾನತಾವಾದಿ ಸಮಾಜವನ್ನು ಕಟ್ಟುವ ಪ್ರಯತ್ನ ಮಾಡಿದರು. ಈ ಕ್ರಾಂತಿಯ ಪರಿಣಾಮ ಆಗಿನ ಸಮಾಜದ ಮೇಲೇನಾಯಿತು ಮತ್ತು ಪ್ರಸ್ತುತ ದಕ್ಷಿಣ ಭಾರತದ ಸಾಮಾಜಿಕ ಜೀವನದಲ್ಲಿ ಅದರ ಛಾಪುಗಳೇನಾದರೂ ಕಾಣಬಹುದೇ? ಮುಂತಾದ ವಿಷಯಗಳ ಬಗ್ಗೆ ಚರ್ಚೆ ಈ ಕೃತಿಯಲ್ಲಿಲ್ಲ. ಈ ಕೃತಿಯ ಉಲ್ಲೇಖ ನಂತರದ ವಿದ್ವಾಂಸರಾದ, J.P ಶ್ಖೌಟೆನ್ ಅವರ ‘Revolutions of the Mystics’ On the social aspects of Virashaivism’, ಡಾ. R.C. ಹಿರೇಮಠ ಅವರ ‘ಮಹಾಯಾತ್ರೆ’,  ಶ್ರೀ ಡಾ. S.S ಭೂಸನೂರಮಠ ಅವರ ‘ಶೂನ್ಯ ಸಂಪಾದನೆ’ ಮುಂತಾದ ಕೃತಿಗಳಲ್ಲಿ ಕಾಣಬಹುದು.

ಈ ಕೃತಿಯು ತನ್ನ ಸರಳ ಭಾಷೆ ಅಚ್ಚುಕಟ್ಟಾದ ಸೊಗಸಾದ ನಿರೂಪಣೆ ಮತ್ತು ಸಾಂದರ್ಭಿಕ ಉಲ್ಲೇಖಗಳಿಂದಾಗಿ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಅಧ್ಯಾಯಗಳು ಸಂಕ್ಷಿಪ್ತ ಮತ್ತು ನಿಖರ ಹಾಗೂ ಅವಶ್ಯಕವಾದ ಮಾಹಿತಿ ಹಾಗೂ ತಿಳಿವನ್ನು ನೀಡಿ, ಹೆಚ್ಚಿನ ಅಧ್ಯಯನಕ್ಕಾಗಿ ಬೇಕಾದ ಸೂತ್ರಗಳನ್ನು ಪರಿವಿಡಿಯಲ್ಲಿ ಕೊಡುತ್ತವೆ. ಹೀಗಾಗಿ ಆಳವಾದ ಪರಿಣತಿ ಹೊಂದಲು ಬಯಸುವ ವಿದ್ವಾಂಸರಿಗೂ ಹಾಗೂ ವೀರಶೈವತ್ವದ ಸಂಕ್ಷಿಪ್ತ ಪರಿಚಯ ಹೊಂದಲು ಆಸಕ್ತಿಯಿರುವ ಸಾಮಾನ್ಯರಿಗೂ ಈ ಕೃತಿ ಪ್ರಿಯವಾಗುತ್ತದೆ.

ಲೇಖಕರ ಮಾತಿನಲ್ಲಿ,”ನಿಸ್ಸಂಶಯವಾಗಿ ವೀರಶೈವತ್ವವು ಶೈವ ಸಿದ್ಧಾಂತ, ತ್ರಿಕಾ, ಪಂಚರಾತ್ರ, ಅದ್ವೈತ ಮುಂತಾದ ದರ್ಶನಗಳ ಅಂಶಗಳನ್ನು ಪುನರುಜ್ಜೀವಿಸಿ, ಉಳಿಸಿ ಬೆಳೆಸಿದೆ. ಈ ಎಲ್ಲಾ ಅಂಶಗಳನ್ನು ಸಂಯೋಜಿಸಿ ಹೆಣೆದು ವೀರಶೈವ ಸಿದ್ಧಾಂತವನ್ನು ನಿರ್ಮಿಸಿರುವುದೇ ಒಂದು ನಿಜವಾದ ಸ್ವಭಾವಸಿದ್ಧ ಸಾಧನೆ.”

ಆಗಿನಕಾಲದಲ್ಲಿ , ಜಗತ್ತಿನ ಇತರೆ ಕ್ಷೇತ್ರಗಳಲ್ಲಿ ವೀರಶೈವತ್ವದ ಬಗ್ಗೆ ಹಾಗೂ ಭಾರತದ ಸಾಮಾಜಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಯಾಣದಲ್ಲಿ ವೀರಶೈವತ್ವದ  ಪಾತ್ರದ ಬಗ್ಗೆ ಅರಿವು ಕಡಿಮೆಯಿತ್ತು. ಆಂಗ್ಲಭಾಷಾ ಜಗತ್ತಿಗೆ ವೀರಶೈವತ್ವದ ಪರಿಚಯ ಮಾಡಿಕೊಟ್ಟ ಶ್ರೇಯ ಈ ಕೃತಿಗೆ ಸಲ್ಲುತ್ತದೆ. ಅಂದಿನ ಸಮಯದಲ್ಲಿ ಈ ಪುಸ್ತಕದ ಮಹತ್ವವನ್ನು ಶ್ರೀ ಗುರುದೇವ ರಾನಡೆಯವರು ಹೀಗೆ ಹೇಳುತ್ತಾರೆ, “ವೀರಶೈವತ್ವದ ಮೇಲಿನ ಈ ಕೃತಿಯು,  ವೀರಶೈವತ್ವಕ್ಕೆ ಭಾರತೀಯ ವಿಚಾರಧಾರೆ, ದರ್ಶನಶಾಸ್ತ್ರಗಳಲ್ಲಿ ಗೌರವಯುತ ಸ್ಥಾನವನ್ನು ಗಳಿಸಿಕೊಡುತ್ತದೆ’.

ಈ ಕೃತಿಯು ಅಚ್ಚಿನಲ್ಲಿಲ್ಲದ ಕಾರಣ, ಈ ಕೊಂಡಿ ಉಪಯೋಗಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು.

The book is out of print, but available on https://archive.org/details/in.ernet.dli.2015.208450

(This is a Kannada translation of an English article by Bidari Sreenivas)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply