close logo

ಭಾರತೀಯ ಸನಾತನಧರ್ಮದಲ್ಲಿ ಅಪ್ಸರೆಯರು – ಭಾಗ ಒಂದು 

ಇಂದ್ರಪುರಿಯ ಆಕಾಶ ಕನ್ಯೆಯರಾದ ಅಪ್ಸರೆಯರು ಮೋಹಕವಾದ ಸೊಬಗನ್ನು ಹೊಂದಿರುವ ನಿಗೂಢ ಸೃಷ್ಟಿ. ದೇವತೆಗಳು ಸೃಷ್ಟಿಸಿದ ಈ ಮಾಯಕನ್ಯೆಯರಿಗೆ ಕನ್ಯೆಯರಿಗೆ ಒಂದು ಸೃಷ್ಟಿಯಲ್ಲಿ ಮಹತ್ತರ ಪಾತ್ರವಿದೆ. ಆಕರ್ಷಿಸಿಸುವುದು, ವಿನೋದಪಡಿಸುವುದು ಮತ್ತು ರಮಿಸಿವುದು ಅವರ ಕರ್ತವ್ಯ ಮತ್ತು ಸ್ವಭಾವ. ಅಪ್ಸರೆಯರು ಮುಕ್ತವಾಗಿ ಹರಿಯುವ ಸ್ತ್ರೀ ಶಕ್ತಿಗಳು ಅಲೌಕಿಕ ಶಕ್ತಿಗಳು. ತಮ್ಮ ಮೋಹಕ ಶಕ್ತಿಯಿಂದ ಯಾವುದೇ ಕ್ಷಣದಲ್ಲಿ ತಮ್ಮ ಆಕರ್ಷಣೆಯ ಆವರಣವನ್ನು ಪ್ರಾರಂಭಿಸುವ ಅಥವಾ ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿರುವ ಶಾಂತ ಸುಂದರಿಯರು. ಸೃಜನಾತ್ಮಕ ತೇಜಸ್ಸಿನಿಂದ ಕೂಡಿರುವ ದೇವಾಂಗನೆಯರು.  ನೃತ್ಯ ಮತ್ತು ಸಂಗೀತದಲ್ಲಿ ಪರಿಣತರು; ಈ ಆಕರ್ಷಕ ಕನ್ಯೆಯರರಾದ ಅಪ್ಸರೆಯರು ದೇವತೆಗಳ ರಾಜನಾದ ಇಂದ್ರನ ಸ್ವರ್ಗೀಯ ಸಾಮ್ರಾಜ್ಯವಾದ ಇಂದ್ರ ಪುರಿಯ ಆಸ್ಥಾನದ ಮನರಂಜಕರು. ಸಾಮಾನ್ಯವಾಗಿ ಅಪ್ಸರೆಯರು ಗಂಧರ್ವರ ಒಡನಾಡಿಗಳು. ಕೆಲವೊಮ್ಮೆ ವಿಶೇಷ  ಕಾರಣಗಳಿಗಾಗಿ, ಉದ್ದಿಶ್ಯಗಳಿಗೋಸ್ಕರವಾಗಿಯೇ ಹುಟ್ಟಿದ್ದು ಅದೇ ಧ್ಯೇಯದಲ್ಲಿರುವವರು. ಸಂಸ್ಕೃತ ಪದವಾದ ‘ಆಪಸ್ (ಎಂದರೆ ನೀರಿನಿಂದ)’ ಅಪ್ಸರಾ ಎಂದು ಕರೆಯಲ್ಪಡುವವರು – ಮೋಡಗಳು ಮತ್ತು ನೀರಿನಿಂದ ಹೊರಹೊಮ್ಮಿದವರು ಎಂದರ್ಥ. ನೀರು ಯಾವಾಗಲೂ ಹರಿಯುವಂತೆಯೇ, ಅಪ್ಸರೆಯರು ಆಕಾಶದ ದಿವ್ಯತೆಯ ಹರಿವನ್ನು ಪ್ರತಿನಿಧಿಸುವವರು, ಅನಿಯಂತ್ರಿತರು. ನಮ್ಮ ಪುರಾಣಗಳಲ್ಲಿ ಊರ್ವಶಿ, ಮೇನಕಾ, ರಂಭಾ ಮತ್ತು ತಿಲೋತ್ತಮ ಪ್ರಮುಖರು.

ಋಗ್ವೇದ ಅಪ್ಸರೆಯರು ನೀರಿನಲ್ಲಿ ಹರಿದಾಡುವ ದಿವ್ಯ ಜೀವಿಗಳೆಂದು ಉಲ್ಲೇಖಿಸಲಾಗಿದೆ. ಅಥರ್ವವೇದವು ಜಲವಾಸಿಗಳೆಂದು ಅಪ್ಸರೆಯರನ್ನು ಪರಿಚಯಿಸುತ್ತದೆ. ನಕ್ಷತ್ರಗಳು, ಮೋಡಗಳು ಮತ್ತು ಮಳೆಯೊಂದಿಗೆ ಅವರ ಸ್ವರ್ಗೀಯ ಸಂಬಂಧವನ್ನು ವಿಷಾದಪಡಿಸುತ್ತದೆ. ಶತಪಥ ಬ್ರಾಹ್ಮಣ ಸಂಹಿತಾ ಅಪ್ಸರೆಯರನ್ನು ಕಡಲ ಹಕ್ಕಿಗಳಾಗಿ ಪರಿವರ್ತಿತರಾಗುವವರು ಎಂದು ವರ್ಣಿಸುತ್ತದೆ. ಕಾಡುಗಳು ಮತ್ತು ನೀರಿನೊಂದಿಗೆ ನಿಕಟ ಸಂಪರ್ಕದಲ್ಲಿ ಇರುವವರಾಗಿ ಕಾಣುತ್ತಾರೆ. ಅಥರ್ವವೇದ ಅಪ್ಸರೆಯರನ್ನು ಪಗಡೆಯಾಟದಲ್ಲಿ ನಿರುತರಾಗಿರುವವರು ಮತ್ತು ಆಟದಲ್ಲಿ ಒಳ್ಳೆಯ ದೆಸೆಯನ್ನು ಸೃಷ್ಟಿಮಾಡುವವರಾಗಿಯೂ ವರ್ಣಿಸುತ್ತದೆ. ಅದೇ ಸಮಯದಲ್ಲಿ ಅವರು ಮಾನಸಿಕ ಶೂನ್ಯವನ್ನು  ಉಂಟುಮಾಡುತ್ತಾರೆ ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತದೆ. ಅಪ್ಸರೆಯರಲ್ಲಿ ಎರಡು ಬಗೆಯವರಿರುತ್ತಾರೆ – ಲೌಕಿಕ  ಮತ್ತು ದೈವಿಕ .

ಸಮುದ್ರ ಮಂಥನದ ಸಮಯದಲ್ಲಿ ಕ್ಷೀರಸಾಗರದಿಂದ ಅನೇಕ ಮಹತ್ವಪೂರ್ಣ ವಸ್ತುಗಳು, ಸ್ತ್ರೀ-ಪುರುಷರು ಹೊರಬಂದರು. ಪ್ರಸಿದ್ಧ ಅಪ್ಸರೆಯರಾದ ರಂಭಾ, ಮೇನಕಾ, ಪುಂಜಿಕಸ್ಥಲಾ ಅವರಲ್ಲಿ ಕೆಲವರು. ಕಲ್ಪವೃಕ್ಷ ಕಾಣಿಸಿಕೊಂಡ ನಂತರ ಅವರು ಹೊರಹೊಮ್ಮಿದರು ಎಂದು ಹೇಳಲಾಗುತ್ತದೆ. ಈ ಅಪ್ಸರೆಯರು ಬಹುಕಾಂತೀಯ ಸ್ತ್ರೀಯರು, ಆಕರ್ಷಕವಾದ ನಿಲುವಂಗಿಯನ್ನು ಧರಿಸಿದ್ದರು, ಚಿನ್ನದ ಆಭರಣಗಳಿಂದ ಅಲಂಕರಿಸಲ್ಪಟ್ಟಿದ್ದರು. ಈ ಆಕಾಶದ ಅಪ್ಸರೆಗಳು ತಮ್ಮ ಮೋಹಕ ಚಲನೆಗಳು ಮತ್ತು ಚಿತ್ತಾಕರ್ಷಕ ನೋಟಗಳಿಂದ ಇತರರನ್ನು ಆಕರ್ಷಿಸುವಲ್ಲಿ ತೊಡಗಿದ್ದರು. ಮನು ಧರ್ಮಶಾಸ್ತ್ರವು ಮನ್ವಂತರದ ಮೊದಲಿನಲ್ಲಿ ಮನುಗಳ ಜೊತೆಯಲ್ಲಿಯೇ ಅಪ್ಸರೆಯರು ಹುಟ್ಟಿರುವರು, ದೇವತೆಗಳ ಪತ್ನಿಯರು ಮತ್ತು ಆನಂದ-ಆಹ್ಲಾದವನ್ನು ಹರಡುವವರಾಗಿಯೂ ವರ್ಣಿಸುತ್ತದೆ.

ಮತ್ಸ್ಯ ಪುರಾಣದ ಪ್ರಕಾರ ಕಶ್ಯಪ ಋಷಿ ದಕ್ಷ ಪ್ರಜಾಪತಿಯ ಹದಿಮೂರು ಹೆಣ್ಣುಮಕ್ಕಳ್ಳನ್ನು ಮದುವೆಯಾದನು. ತನ್ನ ಪತ್ನಿಯರೊಂದಿಗೆ ವಿಹರಿಸುತ್ತಾ ದೇವತೆಗಳು, ಅಸುರರು, ಸಸ್ಯ-ಪ್ರಾಣಿಗಳು, ನಾಗಗಳು, ಗಂಧರ್ವರು, ಅಪ್ಸರೆಯರ ತಂದೆಯಾದನು. ಅಪ್ಸರೆಯರು ಋಷಿ ಕಶ್ಯಪ ಮತ್ತು ಅವನ ಪತ್ನಿಯಾದ ಮುನಿಯ ಪುತ್ರಿಯರೆಂದು ಹೇಳಲಾಗುತ್ತದೆ. ಋಷಿ ಕಶ್ಯಪನ ಈ ಸ್ವರ್ಗೀಯ ಪುತ್ರಿಯರು – ಅಲಂಬುಷಾ, ಮಿಶ್ರಕೇಶೀ, ವಿದ್ಯುತ್ಪರ್ಣಾ, ತಿಲೋತ್ತಮಾ, ರಕ್ಷಿತಾ, ರಂಭಾ, ಮನೋರಮಾ, ಕೇಶಿನೀ, ಸುಬಾಹು, ಸುರಜಾ, ಸುರತಾ ಮತ್ತು ಸುಪ್ರಿಯಾ. ಬ್ರಹ್ಮಾಂಡ ಪುರಾಣ ಪ್ರಕಾರ ವಾಸುದೇವ ಕೃಷ್ಣನ ಪತ್ನಿಯರು ಆಗಲು ತನ್ನ ಅರಮನೆಯಿಂದ ಆಯ್ದ ಅಪ್ಸರೆಯರನ್ನು ಕಳುಹಿಸಲು ಇಂದ್ರನನ್ನ ಚತುರ್ಮುಖ ಬ್ರಹ್ಮ  ಆಗ್ರಹಪಡಿಸುತ್ತಾನೆ.

ನಾಟ್ಯ ಶಾಸ್ತ್ರದ ಪ್ರಕಾರ, ಅಪ್ಸರೆಯರು ಸೃಷ್ಟಿಕರ್ತ ಬ್ರಹ್ಮನ ಮಾನಸ ಪುತ್ರಿಯರು. ತ್ರೇತಾಯುಗದ ಆರಂಭದಲ್ಲಿ, ಬ್ರಹ್ಮನು ಆಳವಾದ ತಪಸ್ಸಿಗೆ ಮೊದಲಾದನು;  ನಾಲ್ಕು ವೇದಗಳನ್ನು ನೆನಪಿಸಿಕೊಂಡನು, ಅವುಗಳಿಂದ ಸೂಕ್ತವಾದ ಭಾಗಗಳನ್ನು ಎತ್ತಿಕೊಂಡು ಹೊಸ ವೇದವನ್ನು ರಚಿಸಿದನು. ಋಗ್ವೇದದಿಂದ ಋಕ್ಕುಗಳನ್ನೂ, ಸಾಮವೇದದಿಂದ ಸಂಗೀತ, ಮಾಧುರ್ಯಗಳನ್ನೂ, ಯಜುರ್ವೇದದಿಂದ ಸಂಜ್ಞೆ-ಭಾವಾಭಿನಯಗಳನ್ನೂ ಮತ್ತು ಅಥರ್ವವೇದದಿಂದ ರಸ-ಸೌಂದರ್ಯಗಳನ್ನು ಆಯ್ದುಕೊಂಡನು. ಅವುಗಳು ವಿಶೇಷವಾಗಿ ಸಂಯೋಜಿಸಿ ಹೊಸವೇದವನ್ನು ಸೃಷ್ಟಿಸಿ ಅದನ್ನು ನಾಟ್ಯಶಾಸ್ತ್ರವೆಂದು ಕರೆದನು. ನಾಟ್ಯ-ಕಲೆಗಳ ಗ್ರಂಥವಾದ ನಾಟ್ಯಶಾಸ್ತ್ರವನ್ನು ಬ್ರಹ್ಮನು ಇಂದ್ರನಿಗೆ ಪ್ರದಾನ ಮಾಡಿದನು. ದೇವತೆಗಳು ನಾಟ್ಯವೇದವನ್ನು ಅಭ್ಯಾಸ ಮಾಡಬೇಕೆಂದು ಸೂಚಿಸಿದನು. ಆದರೆ ದೇವತಾಗಳು ಪ್ರದರ್ಶನ ಕಲೆಯ ಬಗೆಗಾಗಲೀ, ಹೊಸ ಗ್ರಂಥವನ್ನು ಕಲಿಯಲಾಗಲೀ, ಪ್ರದರ್ಶಿಸುವುದಕ್ಕಾಗಲ್ಲೇ ಸಾಕಷ್ಟು ಸಮರ್ಪಿತರಾಗಿರಲಿಲ್ಲ. ಬ್ರಹ್ಮನು ತನ್ನ ನೂರು ಮಕ್ಕಳಿಗೆ ನಾಟ್ಯವೇದದಲ್ಲಿ ತರಬೇತಿ ನೀಡಲು ನಿರ್ಧರಿಸಿದನು. ಭರತ ಮುನಿಗೆ ಈ ಕಾರ್ಯವನ್ನು ವಹಿಸಿಕೊಟ್ಟನು. ತನ್ನ ನೂರು ಮಕ್ಕಳ ನಾಟ್ಯ ಗುರುವಾಗುವ ಗುರುತರ ಕರ್ತವ್ಯವನ್ನು ಅವನಿಗೆ ವಹಿಸಿದನು. ಭರತ ಮುನಿ ಅವರಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದನೇನೋ ಸರಿ. ಆದರೆ ಬ್ರಹ್ಮನ ನೂರು ಮಕ್ಕಳು ಸ್ತ್ರೀ-ಸಹಚರರಿಲ್ಲದೆ ನಾಟ್ಯದಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತನು. ಆಗ ಬ್ರಹ್ಮನು ಅಪ್ಸರೆಯರನ್ನು ಸೃಷ್ಟಿಸಿದನು. ಈ ಆಕಾಶ ಸುಂದರಿಯರಿಗೆ ನೃತ್ಯ, ಸಂಗೀತ ಮತ್ತು ನಾಟಕದ ಕೌಶಲ್ಯವನ್ನು ನೀಡಿದನು. ನಂತರ ಬ್ರಹ್ಮನು ಅಪ್ಸರೆಯರನ್ನು ಭರತ ಮುನಿಗೆ ಕಳುಹಿಸಿದನು. ಬ್ರಹ್ಮನಿಂದ ರಚಿಸಲ್ಪಟ್ಟ ಈ ಅಪ್ಸರೆಯರನ್ನು – ನಾಟ್ಯಾಲಂಕಾರರು ಎಂದು ಕರೆಯಲ್ಪಟ್ಟರು. ಅವರ ಸಹಚರ್ಯದೊಂದಿಗೆ ಬ್ರಹ್ಮನ ನೂರು ಮಕ್ಕಳು ನಾಟ್ಯಶಾಸ್ತ್ರದಲ್ಲಿ ನುರಿತರಾದರು. ಇಲ್ಲಿ  ಉಲ್ಲೇಖಿಸಲಾದ ಅಪ್ಸರೆಯರೆಂದರೆ ಮಂಜುಕೇಶೀ, ಸುಕೇಶೀ, ಮಿಶ್ರಕೇಶೀ, ಸುಲೋಚನಾ, ಸೌದಾಮಿನೀ, ದೇವದತ್ತಾ, ದೇವಸೇನಾ, ಮನೋರಮಾ, ಸುದತೀ, ಸುಂದರಿ, ವಿದಗಧಾ, ಸುಮಲಾ, ಸಂತತೀ, ಸುನಂದಾ, ಸುಮುಖೀ, ಮಾಗಧೀ, ಅರ್ಜುನೀ, ಸರಳಾ,  ಕೇರಳಾ, ಧೃತೀ, ನಂದಾ, ಸುಪುಷ್ಕಲಾ ಮತ್ತು ಕಲಾಭಾ.

ವಾಯುಪುರಾಣ ಅಪ್ಸರಾ ಮೂಲವನ್ನು ವಿವಿಧ ಮೂಲಗಳಿಂದ ವಿವರಿಸುತ್ತದೆ. ಇದು ಅಪ್ಸರೆಯರನ್ನು ಮಾನಸ ಕನ್ಯಾ ಎಂದು ಕರೆಯುತ್ತದೆ – ಬ್ರಹ್ಮನ ಮಾನಸ ಸೃಷ್ಟಿಯಾದ ಅವರಿಗೆ ಬ್ರಹ್ಮ ಸೌಂದರ್ಯ, ಶಕ್ತಿ ಮತ್ತು ಪ್ರಕೃತಿಯ ಗುಣವನ್ನು ವಿಶೇಷ ಉಡುಗೊರೆಯಾಗಿ ನೀಡಿದ್ದಾನೆ ಎನ್ನುತ್ತದೆ. ಅವರನ್ನು ಬೆರಗುಗೊಳಿಸುವ ಕನ್ಯೆಯರಂತೆ ಪ್ರಸ್ತುತಪಡಿಸುತ್ತದೆ,  ಸೂರ್ಯನ ಚಾಚಿದ ಕಿರಣಗಳಂತೆಯೂ, ಚಂದ್ರ-ಕಿರಣಗಳಂತೆ ಮೃದುವಾದ-ಹಿತಕರವಾದ ಬೆಳಕಿನಂತೆಯೂ ಅಪ್ಸರೆಯರನ್ನು ಬಣ್ಣಿಸುತ್ತದೆ. ಯಜ್ಞದ ಅಗ್ನಿಗೆ ಅವರ ಜನ್ಮವನ್ನು ಹೋಲಿಸುತ್ತದೆ. ಸಾಗರ, ಅಮೃತ, ಗಾಳಿ ಮತ್ತು ಮಿಂಚಿನಿಂದ ಹುಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ. ಅಪ್ಸರೆಯರು ಕಾಳಜಿಯುಳ್ಳ, ಪ್ರೀತಿಯ, ಮಾಂತ್ರಿಕ ಮತ್ತು ಉಗ್ರ ಸ್ವಭಾವದಂತಹ ವೈವಿಧ್ಯಮಯ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎನ್ನುತ್ತದೆ. ವಾಯು ಪುರಾಣವು ಈ ಆಕಾಶ ಕನ್ಯೆಯರನ್ನು ಸಿಹಿ ಸುಗಂಧವುಳ್ಳವರು, ಚಿನ್ನದ ವರ್ಣದವರಾಗಿಯೂ ಅವರನ್ನು ಬಣ್ಣಿಸುತ್ತದೆ. ಯಾವ ಮಾದಕ-ವಸ್ತುವಿನ ಸಹಾಯವಿಲ್ಲದೆಯೂ ಕೇವಲ ಸ್ಪರ್ಶಮಾತ್ರದಿಂದಲೇ ತಮ್ಮ ಕಾರ್ಯ ಸಾಧಿಸುತ್ತಾದೆ ಎಂದು ವಿವರಿಸುತ್ತದೆ. ಇಂದ್ರಪುರಿಯಲ್ಲಿ ಅಪ್ಸರೆಯರ ಹೆಸರನ್ನೂ ಕೊಡುತ್ತದೆ – ಮಿಶ್ರಕೇಶೀ, ಚಾಶೀ, ವರ್ಣಿನೀ, ಅಲಂಬುಷಾ, ಮರೀಚೀ, ಪುತ್ರಿಕಾ, ವಿದ್ಯುತ್ಪರ್ಣಾ, ತಿಲೋತ್ತಮಾ, ಅದ್ರಿಕಾ, ಲಕ್ಷಣಾ, ದೇವೀ, ರಂಭಾ, ಮನೋರಮಾ, ಸುವರಾ, ಸುಬಾಹು, ಪೂರ್ಣಿತಾ, ಸುಪ್ರತಿಷ್ಠಿತಾ, ಪುಂಡರೀಕಾ, ಸುರ್ಧಾ, ಸುರ್ಧಾಸಾ,  ಹೇಮಾ, ಶರದ್ವತೀ, ಸುವ್ರತಾ, ಸುಭುಜಾ ಮತ್ತು ಹಂಸಪದಾ.

ವಿಷ್ಣು ಪುರಾಣಗಳಲ್ಲಿ ಅಪ್ಸರೆಯರು ಸೂರ್ಯನ ಪರಿಚಾರಕರು ಉಲ್ಲೇಖಿಸಲಾಗಿದೆ. ಅವರು ಹನ್ನೆರಡು ಆದಿತ್ಯರ ರೂಪದಲ್ಲಿ ಸೂರ್ಯನಿಗೆ ಹಾಜರಾಗುತ್ತಾರೆ, ಅವರು ವರ್ಷವಿಡೀ ಸಂಭವಿಸುವ ವಿವಿಧ ಕಾಲೋಚಿತ ಬದಲಾವಣೆಗಳ ಸೂಚಕರು. ವಿಷ್ಣು ಪುರಾಣದಲ್ಲಿ, ಋಷಿ ಪರಾಶರರು ಉತ್ತರ ಮತ್ತು ದಕ್ಷಿಣದ ತೀವ್ರ ಬಿಂದುಗಳ ನಡುವೆ, ಸೂರ್ಯನು ಒಂದು ವರ್ಷದಲ್ಲಿ ನೂರಾ ಎಂಬತ್ತು ಡಿಗ್ರಿಗಳಷ್ಟು ಆರೋಹಣ ಮತ್ತು ಅವರೋಹಣದಲ್ಲಿ ಸಂಚರಿಸಬೇಕು ಎಂದು ವಿವರಿಸುತ್ತಾರೆ. ಅವನ ರಥದ ಚಲನೆಯನ್ನು ದೈವಿಕ ಆದಿತ್ಯ, ಋಷಿಗಳು, ಗಂಧರ್ವರು ಮತ್ತು ಅಪ್ಸರೆಯರು, ಯಕ್ಷರು, ನಾಗರು ಮತ್ತು ರಾಕ್ಷಸರು ವಹಿಸುತ್ತಾರೆ.

ವಾಮನ ಸರೋಮಾಹಾತ್ಮ್ಯದ ಪ್ರಕಾರ, ವಾಮನ ವಟು ತನ್ನ ಕುಬ್ಜ ರೂಪವನ್ನು ತ್ಯಜಿಸಿದಾಗ, ಕಣ್ಣು ಮಿಟುಕಿಸುವುದರಲ್ಲಿ ಎಲ್ಲಾ ದೇವರುಗಳನ್ನು ಒಳಗೊಂಡಿರುವ ಒಂದು ಹೊಸ ರೂಪವನ್ನು ಧರಿಸಿದನು. ಸೂರ್ಯ-ಚಂದ್ರರು ಅವನ ಕಣ್ಣುಗಳಾದರು, ಆಕಾಶವೇ ಅವನ ತಲೆಯಾಯಿತು. ಭೂಮಿಯು ಅವನ ಪಾದವಾಯಿತು, ಪಿಶಾಚಗಳು ಅವನ ಕಾಲ್ಬೆರಳುಗಳಾದವು. ಗುಹ್ಯಕಗಳು ಅವನ ಬೆರಳುಗಳಾದವು. ವಿಶ್ವೇದೇವತೆಗಳು ಅವನ ಮೊಣಕಾಲುಗಳಲ್ಲಿದ್ದರು. ಸಾಧ್ಯರು ಅವನ ಚರ್ಮದಲ್ಲಿದ್ದರು. ಅವನ ಉಗುರುಗಳಲ್ಲಿ ಯಕ್ಷ ಮತ್ತು ಅವನ ದೇಹದ ಬಾಹ್ಯರೇಖೆಗಳಲ್ಲಿ ಅಪ್ಸರೆಯರು ಕಾಣಿಸಿಕೊಂಡರು.

ವೈದಿಕ ವಾಂಗ್ಮಯದಲ್ಲಿ ಅಪ್ಸರೆಯರು ಮಹತ್ತರವಾದ ಸ್ಥಾನ ಹೊಂದಿದ್ದು, ಭಾರತೀಯ ಸನಾತನ ಧರ್ಮದ ಸ್ಥಿರವಾದ ಭಾಗವಾಗಿದ್ದಾರೆ. ತಮ್ಮ ಸೃಷ್ಟಿಕರ್ತರಲ್ಲಿ ಸಮರ್ಪಣಾ ಭಾವ ಹೊಂದಿರುವ ಈ ಅಪ್ಸರೆಯರು, ಮಹತ್ತರವಾದ ಶಕ್ತಿಯುಳ್ಳ ಸ್ತ್ರೀಯರು ಎನ್ನುವುದು ಈ ಎಲ್ಲ ವಾಂಗ್ಮಯದ ಸಾಮಾನ್ಯ ಅಂಶ.

Link to the Original article by Shalini Mahapatra

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply