close logo

ಸೋಮದ ಐತಿಹಾಸಿಕ ಮತ್ತು ಭೌಗೋಳಿಕ ಆಯಾಮಗಳು

ಭಾರತದ ಸಂಸ್ಕೃತಿ ಅತ್ಯಂತ ಪುರಾತನವಾದದ್ದು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ವಿದೇಶಿ ವಿದ್ವಾಂಸರ ಪ್ರಕಾರ, ನಮ್ಮ ಇತಿಹಾಸ ಆರ್ಯರೊಡನೆ ಶುರುವಾಯಿತು. ವಿದೇಶೀ ವಿದ್ವಾಂಸರಿಗೆ ಸಿಂಧೂ ನದಿಯ ಬಗ್ಗೆ ತಿಳಿದಿದೆ. ಅವರ ಪ್ರಕಾರ, ಸರಸ್ವತೀ ನದಿಯು ಇರಲೇ ಇಲ್ಲ.  ಆದ್ದರಿಂದಲೇ, ನಮ್ಮ ಸಂಸ್ಕೃತಿಯನ್ನು ಅವರು ಸಿಂಧೂ ನದಿಯ ನಾಗರಿಕತೆ, ಎಂದರು. ಇತ್ತೀಚಿಗೆ ಸರಸ್ವತಿಯು ಒಂದು ಕಾಲದಲ್ಲಿ ಮಹಾನದಿಯಾಗಿತ್ತು, ಇಂದು ಗುಪ್ತಗಾಮಿನಿಯಾಗಿದೆ, ಎಂದು ತಿಳಿಯುತ್ತಲೇ, ತಮ್ಮ ಹಳೆಯ ಸಿದ್ಧಾಂತಗಳನ್ನು ಸಮರ್ಥಿಸಿಕೊಳ್ಳಲು ತುಂಬಾ ಹೆಣಗುತ್ತಿದ್ದಾರೆ. ಆದ್ದರಿಂದಲೇ, ಇನ್ನೂ ಆರ್ಯರು ಯಾವುದೋ ಮಧ್ಯ ಏಷ್ಯಾ ಖಂಡದ ತಮ್ಮ ಮೂಲ ಆವಾಸಸ್ಥಾನದಿಂದ ನಮ್ಮ ದೇಶದ ವಾಯುವ್ಯ ಭಾಗಕ್ಕೆ ಬಂದು, ಕ್ರಮೇಣ ಸಿಂಧೂ ಬಯಲಿಗೆ ಹೊಕ್ಕು, ನಂತರ ನಮ್ಮ ದೇಶದ ಕೇಂದ್ರ ಭೂಭಾಗವಾದ ಗಂಗಾ-ಯಮುನಾ ಬಯಲಿಗೆ ಬಂದರೆಂದೂ, ಇವರೇ ನಮ್ಮ ಸಂಸ್ಕೃತಿಯ ಮೂಲ ದಾತಾರರೆಂದೂ ಹೇಳುತ್ತಾರೆ. ಇದನ್ನೇ ಇಂದು ಕೂಡ ನಾವು ನಮ್ಮ ಶಾಲೆಯ ಪಠ್ಯ ಪುಸ್ತಕಗಳಲ್ಲಿ ಓದುತ್ತಿದ್ದೇವೆ.

ಇದು ನಿಜವೇ?

ಹಿಂದಿನ ಲೇಖನಗಳಲ್ಲಿ ನಾವು ನೋಡಿದಂತೆ, ಋಗ್ವೇದದ ಪ್ರತಿಯೊಂದು ಮಂಡಲದಲ್ಲೂ ಸೋಮನ ಆರಾಧನೆಗೆ ಬಹಳ ಮಹತ್ವವಿದೆ. ಇದೊಂದು ವಿಷಯವನ್ನೇ ಆಧಾರವನ್ನಾಗಿ ಇರಿಸಿಕೊಂಡು, ಸೋಮವು ಬೆಳೆಯುವ ಭೂಭಾಗದಿಂದಲೇ ಆರ್ಯರು ಪೂರ್ವಕ್ಕೆ ವಿಸ್ತರಿಸಿ, ಭಾರತಕ್ಕೆ ಬಂದಿರಬೇಕು, ಎನ್ನುವುದು ಪಾಶ್ಚಾತ್ಯ ವಿದ್ವಾಂಸರ ಅಭಿಮತವಾಗಿದೆ.

ಇದು ಸರಿಯೇ?

ಶ್ರೀಕಾಂತ ತಲಗೇರಿಯವರು ಋಗ್ವೇದವನ್ನು ಬಹಳ ಆಳವಾಗಿ ಅಭ್ಯಾಸ ಮಾಡಿದ ಮಹಾ ವಿದ್ವಾಂಸರು. ಇವರು ವಿವಿಧ ದೃಷ್ಟಿಕೋಣಗಳಿಂದ ವೈದಿಕ ಆರ್ಯರು ಯಾರು? ಇವರ ವಿಸ್ತಾರದ ಪಥ ಯಾವುದು? ಇವರನ್ನು ಎಲ್ಲಿಂದ ಎಲ್ಲಿಗೆ ಕೊಂಡೊಯ್ಯಿತು? ಯಾವ ಕಾರಣಕ್ಕಾಗಿ? ಇವರ ರಾಜರು, ಋಷಿಗಳು ಯಾರು? ಇತ್ಯಾದಿ ಪ್ರಶ್ನೆಗಳನ್ನು ಪರಿಶೀಲಿಸಿದ್ದಾರೆ.

ನಾವು ಇವರ ಗ್ರಂಥ-ಲೇಖನಗಳನ್ನು ಪರಿಶೀಲಿಸಿ, ಇವರ ಚಿಂತನೆಯ ಸಾರವನ್ನು ಸ್ವಲ್ಪ ಮಟ್ಟಿಗೆ ತಿಳಿಯಲು ಪ್ರಯತ್ನಿಸೋಣ.  ಈ ಲೇಖನವು, ತಲಗೇರಿಯವರು ಸೋಮದ ಬಗೆಗಿನ ಮಾಹಿತಿಯನ್ನು ಬಳಸಿ ಈ ಪ್ರಶ್ನೆಗಳನ್ನು ಹೇಗೆ ಉತ್ತರಿಸುತ್ತಾರೆ ಎಂಬುದನ್ನು ಪರೀಕ್ಷಿಸಲು ಪ್ರಯತ್ನಿಸುತ್ತದೆ.

ವೈದಿಕ ಆರ್ಯರು ಯಾರು?

ಮಹಾಭಾರತದ ನಹುಷನ ಮಗನಾದ ಯಯಾತಿಯ ಕಥೆ ತಿಳಿದಿದೆಯಲ್ಲವೇ? ಅವನ ಮಕ್ಕಳಾದ ಯದು, ತುರ್ವಸು, ದೃಹ್ಯು, ಅನು, ಮತ್ತು ಪೂರುಗಳ (ಮತ್ತು ಅವರ ವಂಶಜರ) ಉಲ್ಲೇಖ ಋಗ್ವೇದದಲ್ಲಿ ಮತ್ತೆ ಮತ್ತೆ ಬರುತ್ತದೆ. ನಮಗೆ ತಿಳಿದ ಕಥೆಯ ಪ್ರಕಾರ, ಯಯಾತಿಯು ತನ್ನ ಕಡೆಯ ಮಗ, ಪೂರುವಿಗೆ ಸರಸ್ವತಿ ನದೀತೀರದ ತನ್ನ ರಾಜ್ಯಕ್ಕೆ ಪಟ್ಟ ಕಟ್ಟಿದನು; ಮಿಕ್ಕ ಮಕ್ಕಳು ಬೇರೆ ಬೇರೆ ದಿಕ್ಕುಗಳಲ್ಲಿ ಚೆದರಿ ಹೋದರು. ದೃಹ್ಯುವು ಗಾಂಧಾರದ ಕಡೆಗೆ ಹೋದನು. ಅನುವು ಉತ್ತರ ದಿಕ್ಕಿನಲ್ಲೂ, ಯದುವು ನೈಋತ್ಯ ದಿಕ್ಕಿನಲ್ಲೂ ಹೊರಟನು.

ಪೂರುವಿನ ನಾಯಕತ್ವದಲ್ಲಿ ವೈದಿಕ ಸಂಸ್ಕೃತಿ ಪ್ರವರ್ಧಮಾನಕ್ಕೆ ಬಂದಿತು. ವೈದಿಕ ಆರ್ಯರು  ಪೂರುವಿನ ವಂಶಜರ ಒಂದು ಶಾಖೆಯಾದ ಭಾರತರು. ಗಂಗಾ-ಯಮುನಾ ಬಯಲಿನ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ, ಪೂರುವಿನ ವಂಶಜನಾದ, ಭರತ ರಾಜನ ಉತ್ತರಾಧಿಕಾರಿಗಳ ಕೆಳಗೆ ಬ್ರಾಹ್ಮಣ ಧರ್ಮವು ಬಹಳ ಪ್ರವರ್ಧಮಾನಕ್ಕೆ ಬಂದಿತು.  ಆ ಸಮಯದಲ್ಲಿ ಋಗ್ವೇದದ ಬಹುಭಾಗ ರಚನೆಯಾಯಿತು, ಎಂದು F E ಪಾರ್ಗಿಟರನು ಬರೆಯುತ್ತಾನೆ.

ಪೂರುವಿನ ವಂಶಜರಾದ ರಾಜರು ಯಾರು?

ಈ ವಂಶದಲ್ಲಿ ದೇವವಾತ, ಶೃಂಜಯ, ವಧ್ಯ್ರಶ್ವ, ದಿವೋದಾಸ, ಪ್ರತರ್ದನ, ಪಿಜವನ, ದೇವಶ್ರವಸ್, ಸುದಾಸ, ಸಹದೇವ, ಸೋಮಕ, ಇತ್ಯಾದಿ ಭಾರತ ರಾಜರು ಆಗಿಹೋದರು.

ದಿವೋದಾಸ ಮತ್ತು ಸುದಾಸರನ್ನು ಪೂರುಗಳು ಎಂದು ಕರೆಯಲಾಗಿದೆ.

ಭಿನತ್ಪುರೋ ನವತಿಮಿಂದ್ರ ಪೂರವೇ ದಿವೋದಾಸಾಯ ಮಹಿ ದಾಶುಷೇ ನೃತೋ ವಜ್ರೇಣ ದಾಶುಷೇ ನೃತೋ । ಅತಿಥಿಗ್ವಾಯ ಶಂಬರಂ ಗಿರೇರುಗ್ರೋ ಅವಾಭರತ್ । ಮಹೋಧನಾನಿ ದಯಮಾನ ಓಜಸಾ ವಿಶ್ವಾ ಧನಾನ್ಯೋಜಸಾ ।। (ಋ. ವೇ. 1.130.7)

[ಪೂರು ಮತ್ತು ದಿವೋದಾಸರು ಇಂದ್ರನಿಗೆ ಹವಿಸ್ಸನ್ನು ಅರ್ಪಿಸಿದಕ್ಕಾಗಿ, ಅವನು ಇವರಿಗೋಸ್ಕರ ರಣರಂಗದಲ್ಲಿ ವಜ್ರದಿಂದ ಯುದ್ಧಮಾಡಿ ತೊಂಭತ್ತು ಶತ್ರು ನಗರಗಳನ್ನು ನಾಶಪಡಿಸಿದನು. ಶಂಭರನನ್ನು ಪರ್ವತದಿಂದ ಕೆಳಗೆ ಎಳೆದು ಸೋಲಿಸಿ ಅವನಿಂದ ಗೋವುಗಳನ್ನೂ, ಅಶ್ವಗಳನ್ನೂ, ಧನವನ್ನೂ  ದಿವೋದಾಸನಿಗೆ ಕೊಡಿಸಿದನು.] ಎಂದರೆ, ಪುರುವಂಶಜನಾದ ರಾಜನಿಗೂ ದಿವೋದಾಸನಿಗೂ, ಇಂದ್ರನು ಅನುಗ್ರಹಿಸಿ ಯುದ್ಧದಲ್ಲಿ ಸಹಾಯ ಮಾಡುತ್ತಾನೆ. ದಿವೋದಾಸನು ಕೂಡ ಪುರು ವಂಶಸ್ಥನೇ.

ತ್ವಂ ಹತ್ಯದಿಂದ್ರ ಸಪ್ತ ಯುಧ್ಯನ್ಪುರೋ  ವಜ್ರಿನ್ ಪುರುಕುತ್ಸಾಯ ದರ್ದಃ | ಬಹಿರ್ನ ಯತ್ಸುದಾಸೇ ವೃಥಾ ವರ್ಗಂಹೋ ರಾಜನ್ವರಿಹಃ  ಪೂರವೇ ಕಃ ।। (ಋ. ವೇ. 1.63.7)

[ಪುರುಕುತ್ಸನೆಂಬ ಋಷಿಯ ಪರವಾಗಿ ಯುದ್ಧಮಾಡಿ ಇಂದ್ರನು ಅವನ ಶತ್ರುಗಳ ಏಳು ಪಟ್ಟಣಗಳನ್ನು ನಾಶಮಾಡಿದನೆಂದೂ, ಪೂರುವಾದ ಸುದಾಸನಿಗೊಸ್ಕರ ಅವನ ಶತ್ರುವಾದ ಅಂಹನೆಂಬ ಅಸುರನನ್ನು ನಾಶಮಾಡಿದನೆಂದೂ ಈ ಸೂಕ್ತ ಹೇಳುತ್ತದೆ.] ಹೀಗೆ, ಸುದಾಸನು ಕೂಡ ಪೂರು ವಂಶಜನು, ಇಂದ್ರನ ಮಿತ್ರನು.

ಇನ್ನೂ ಕೆಲವು ಪೂರು ರಾಜರನ್ನು (ಇವರಲ್ಲಿ ಕೆಲವರು ಭಾರತರು) ಮುದ್ಗಲ, ಋಕ್ಷ, ಶ್ರುತವಾನ, ವಿಧಾತಿ, ಶಂತನು, ಕುಶಿಕ, ಇತ್ಯಾದಿ–ಋಗ್ವೇದ ಉಲ್ಲೇಖಿಸುತ್ತದೆ. ಇತರ ಆಕರಗಳು ಕೂಡ ಕೆಲವು ಪೂರು ರಾಜರನ್ನು ಉಲ್ಲೇಖಿಸುತ್ತದವೆ. ಇವರಲ್ಲಿ ಕಾಶಿಯ ಭೀಮಸೇನ (ಯ. ವೇ,) ಪರೀಕ್ಷಿತ (ಅ. ವೇ,) ಪ್ರತೀಪ (ಅ. ವೇ,) ವಿಚಿತ್ರವೀರ್ಯ (ಅ. ವೇ,) ಧೃತರಾಷ್ಟ್ರ (ಅ. ವೇ,) ಇವರು ಸೇರಿದ್ದಾರೆ.

ಋಗ್ವೇದದಲ್ಲಿ ಉಲ್ಲೇಖವಾದ ಇನ್ನೊಂದು ವಂಶವೆಂದರೆ, ಇಕ್ಷ್ವಾಕು ವಂಶ. ಈ ವಂಶದಲ್ಲಿ ಮಾಂಧಾತ, ಪುರುಕುತ್ಸ, ತ್ರಾಸದಸ್ಯು, ಇತ್ಯಾದಿ ಮಹಾ ರಾಜರು ಆಳಿದ್ದರು. ಇಕ್ಷ್ವಾಕುವು ವೈವಸ್ವತ ಮನುವಿನ ಮಗನು. ದಾಶರಥಿ ರಾಮಚಂದ್ರನು ಇಕ್ಷ್ವಾಕುವಿನ ವಂಶಜನು.  ಆದರೆ, ನಾವು ಋಗ್ವೇದದ ಕಾಲ, ಎಂದರೆ, ಶ್ರೀರಾಮಚಂದ್ರನಿಗೆ ಎಷ್ಟೋ ತಲೆಮಾರುಗಳ ಹಿಂದಿನ ಕಾಲದ ಘಟನೆಗಳನ್ನು ವೀಕ್ಷಿಸುತ್ತಿದ್ದೇವೆ. ಋಗ್ವೇದವು ಕೆಲವೇ ಇಕ್ಷ್ವಾಕು ವಂಶಸ್ಥ ರಾಜರನ್ನು ಉಲ್ಲೇಖಿಸುತ್ತದೆ. ಈ ರಾಜರ ವೈಶಿಷ್ಟ್ಯವೆಂದರೆ ಪೂರು ವಂಶಜರ ಜೊತೆಗೆ ಅವರಿಗಿದ್ದ ಮೈತ್ರಿ. ಎಷ್ಟೋ ಬಾರಿ ಇವರು ಪೂರು ರಾಜರಿಗೆ ಸಹಾಯ ನೀಡಿದ್ದಾರೆ.

ಪುರಾಣಗಳ ಪ್ರಕಾರ, ಮಾಂಧಾತನ ತಂದೆ ಇಕ್ಷ್ವಾಕು ರಾಜ; ಅವನ ತಾಯಿ ಪೂರು ವಂಶಜಳು, ಮತಿನಾರನ ಮಗಳು. ಋಗ್ವೇದದ ಪೂರ್ವಕಾಲದಲ್ಲಿ, ಪಂಜಾಬಿನ ನಿವಾಸಿಗಳಾಗಿದ್ದ ದೃಹ್ಯು ರಾಜರು ಪೂರ್ವದಲ್ಲಿದ್ದ ಪೂರು ರಾಜರ ಮೇಲೆ ಆಕ್ರಮಣ ನಡೆಸುತ್ತಿದ್ದರು. ಮಾಂಧಾತನು ಪಶ್ಚಿಮ ದಿಕ್ಕಿಗೆ ಸೇನಾಸಮೇತ ತೆರಳಿ, ದೃಹ್ಯು ಸೇನೆಯನ್ನು ಸೋಲಿಸಿ, ಅವರನ್ನು ಅಫ್ಘಾನಿಸ್ತಾನ ಮತ್ತು ಅದರಾಚೆಗೆ ಅಟ್ಟಿದನು.

ಇಂದ್ರನು ಪುರುಕುತ್ಸನ ಮೂಲಕ ದಾಸರೊಡನೆ ಯುದ್ಧ ಮಾಡಲು ಪೂರುಗಳಿಗೆ ಸಹಾಯ ನೀಡಿದ ದಾಖಲೆಗಳು ಋಗ್ವೇದದಲ್ಲಿವೆ. (ಋ. ವೇ. 1.63.7; 6.20.10)  ಇಂದ್ರನು ಮತ್ತೊಮ್ಮೆ ಪೂರುಗಳಿಗೆ ತ್ರಾಸದಸ್ಯುವಿನ ಮೂಲಕ ನೆರವು ನೀಡಿದ ದಾಖಲೆ ಸೂಕ್ತ 7.19.3ರಲ್ಲಿದೆ. ಮಿತ್ರಾವರುಣರು ತ್ರಾಸದಸ್ಯುವಿಗೆ ಸಹಾಯಮಾಡಿದ ಸೂಚನೆ ಋ. ವೇ. 4.38.1 ಸೂಕ್ತದಲ್ಲಿದೆ.

ಪೂರುಗಳಲ್ಲದೆ, ಋಗ್ವೇದದಲ್ಲಿ ಚಾಯಮಾನ ಅಭ್ಯಾವರ್ತಿ ಮತ್ತು ವೀತಹವ್ಯರು (ಋ. ವೇ. 8.46.32 ಮತ್ತು 6.45.31) ಮಹಾಶೂರರೆಂಬ ಅಭಿದಾನವನ್ನು ಹೊಂದಿದ್ದಾರೆ.

ಅಭ್ಯಾವರ್ತಿ ಚಾಯಮಾನನು ಒಬ್ಬ ಅನು-ವಂಶಸ್ಥ ರಾಜ. ಸೂಕ್ತ 6.27ದ  ನಾಯಕ. ಭಾರತ ರಾಜ, ಶೃಂಜಯನ ಮಿತ್ರ. ಆದರೆ, ಅವನ ವಂಶಸ್ಥನಾದ ಕವಿ ಚಾಯಮಾನನು (ಋ. ವೇ. 7.18.9) ಭಾರತ ರಾಜ ಸುದಾಸನ ಶತ್ರು.

ಯದು ರಾಜ, ವೀತಹವ್ಯನನ್ನು (ಋ. ವೇ. 6.15.2, 3, 7.19.2, ಅಥರ್ವವೇದ 6.137.1) ಉಲ್ಲೇಖಿಸಿದ್ದರೂ ಸಹ ಋಗ್ವೇದದಲ್ಲಿ ಅವನ ಬಗ್ಗೆ ಹೆಚ್ಚೇನೂ ತಿಳಿದಿಲ್ಲ; 6.15ರಲ್ಲಿ ಭಾರತ ರಾಜ ದಿವೋದಾಸನ ಪುರೋಹಿತನಾದ ಭರದ್ವಾಜನೊಂದಿಗೆ ಸಂಬಂಧ ಹೊಂದಿದ್ದನೆಂದು ಗಮನಿಸಬಹುದು. [ಮಹಾಭಾರತದಲ್ಲಿ ವೀತಹವ್ಯ ದಿವೋದಾಸನ ಮಗನಾದ ಪ್ರತರ್ದನನಿಂದ ಸೋಲಪ್ಪಿ ಭೃಗುವಿನ ಶರಣಾಗಿ ಋಷಿಯಾಗುತ್ತಾನೆ].

ಪೂರುವಿನ ವಂಶಜರಾದ ಭಾರತರಿಗೂ (ಸುದಾಸ) ದೃಹ್ಯು, ಅನು, ಯದುಗಳ ಬಣಗಳೂ ಸೇರಿದಂತೆ ಹತ್ತು ವಿವಿಧ ಪಂಗಡಗಳ ರಾಜರಿಗೂ ಪರುಶ್ನಿ ನದಿಯ ತೀರದಮೇಲೆ ಒಂದು ಘನಘೋರ ಯುದ್ಧ ನಡೆಯಿತು. ಇದನ್ನು ದಶರಾಜ್ಞ ಯುದ್ಧವೆನ್ನುತ್ತಾರೆ.  ದಶರಾಜ್ಞ ಯುದ್ಧದಲ್ಲಿ ಕೂಡ,  ವೀತಹವ್ಯನ ಉಲ್ಲೇಖವಿದೆ.

ಆರ್ಯರ ಭೌಗೋಳಿಕ ಕೇಂದ್ರ ಮತ್ತು ವ್ಯಾಪ್ತಿ

ವಿದ್ವಾಂಸರು ಪಂಜಾಬದ ಸಪ್ತ-ಸಿಂಧು ಪ್ರದೇಶ ಮತ್ತು  ಸರಸ್ವತಿ-ಗಂಗೆಗಳ ನಡುವಿನ ಪ್ರದೇಶವನ್ನು ವೈದಿಕ ಆರ್ಯರು ವಾಸಿಸುತ್ತಿದ್ದ ಭೂಭಾಗವೆನ್ನುತ್ತಾರೆ. ಮೇಲಾಗಿ, ಆಧಾರವೇ ಇಲ್ಲದೆ, ಈ ಭೂಭಾಗದ ಪಶ್ಚಿಮ ಭಾಗಗಳನ್ನು “ಮರೆತುಹೋದ” ಸ್ಥಳಗಳೆಂದೂ, ಋಗ್ವೇದದಲ್ಲಿ ಹೆಸರಿಸದ ಪೂರ್ವದ ಪ್ರದೇಶಗಳನ್ನು ಇನ್ನೂ ಅರಿಯದ ಪ್ರದೇಶಗಳೆಂದೂ ಹೇಳಿ, ಪಶ್ಚಿಮದಿಂದ ಪೂರ್ವಕ್ಕೆ ವೈದಿಕ ಆರ್ಯರು ವಲಸೆ ಹೋಗಿರಬೇಕು ಎನ್ನುತ್ತಾರೆ.

ಈ ಕೆಳಗಿನ ನಕ್ಷೆಯನ್ನು ನೋಡಿ. (ಶ್ರೀಕಾಂತ ತಲಗೇರಿಯವರ ಪುಸ್ತಕದಿಂದ)

(ಕೆಂಪು ವರ್ತುಲವು ವೈದಿಕ ಆರ್ಯರ ವಾಸಸ್ಥಾನವನ್ನು  ಮತ್ತು ನೇರಳೆ ಬಣ್ಣದ ವರ್ತುಲವು ಸೋಮ ಬೆಳೆಯುವ ಸ್ಥಳಗಳನ್ನೂ ಸುಮಾರಾಗಿ ಸೂಚಿಸುತ್ತದೆ.)

ಶ್ರೀಕಾಂತ ತಲಗೇರಿಯವರ ವಾದ ಇದಕ್ಕೆ ತದ್ವಿರುದ್ಧ. ಅವರು ವೈದಿಕ ಆರ್ಯರ ಸ್ವಗೃಹ ಸರಸ್ವತಿ ಪ್ರದೇಶವೆಂದೂ, ಕ್ರಮೇಣ ಪಶ್ಚಿಮ ಮತ್ತು ವಾಯುವ್ಯ ದಿಕ್ಕುಗಳಿಗೆ ಅವರು ವಿಸ್ತರಿಸಿದರೆಂದೂ, ಆರ್ಯರು ಹೊರದೇಶಗಳಿಂದ ನಮ್ಮ ದೇಶಕ್ಕೆ ಬರುವುದು ಹಾಗಿರಲಿ, ನಮ್ಮ ದೇಶದಿಂದ ಹೊರಗೆ ನಮ್ಮ ಜನ ವಲಸೆ ಹೋದರೆಂದೂ ಪ್ರತಿಪಾದಿಸುತ್ತಾರೆ. ಮಿಗಿಲಾಗಿ, ಈ ವಿಸ್ತರಣೆಗೆ, ಸೋಮವೂ ಒಂದು ಕಾರಣ, ಎನ್ನುತ್ತಾರೆ ಶ್ರೀಕಾಂತ ತಲಗೇರಿ.

ಅವರ ಪ್ರಕಾರ, ಋಗ್ವೇದದ ಭೂಭಾಗವು ಪೂರ್ವದಲ್ಲಿ ಇಂದಿನ ಉತ್ತರ ಪ್ರದೇಶದಿಂದ ಪಶ್ಚಿಮದಲ್ಲಿ ಅಫ್ಘಾನಿಸ್ತಾನದವರೆಗೆ; ಪಶ್ಚಿಮದಲ್ಲಿ ಸಿಂಧುವಿನಿಂದ ಪೂರ್ವದಲ್ಲಿ ಗಂಗೆಯನ್ನು ಒಳಗೊಂಡ ಪ್ರದೇಶ. ಈ ವಾದಕ್ಕೆ ಆಧಾರಗಳೇನು?

ಋಗ್ವೇದದ ವಾಸ್ತವಾಂಶಗಳು

ತಲಗೇರಿಯವರು ತಮ್ಮ ವಾದಗಳನ್ನು ಮುಂದಿಡುವ ಮುಂಚೆ ಕೆಲವು ವಾಸ್ತವಾಂಶಗಳನ್ನು ಸ್ಥಿರಪಡಿಸಿ, ಇವನ್ನು ಅವರ ಮುಂದಿನ ವಾದ/ಪುರಾವೆಗಳನ್ನು ಸಿದ್ಧಪಡಿಸಲು ಉಪಯೋಗಿಸಿಕೊಳ್ಳುತ್ತಾರೆ.

1. ಮೊದಲನೆಯದಾಗಿ, ಋಗ್ವೇದದ ಆಂತರಿಕ ಕಾಲದ ಹರಹು. ಇದರಲ್ಲಿ ಯಾವ ಮಂಡಲಗಳು ಮೊದಲಿಗೆ ರಚಿತವಾಗಿವೆ, ಮಂಡಲ ಮತ್ತು ಸೂಕ್ತಗಳ ಮಂತ್ರದ್ರಷ್ಟಾರರಾದ ಋಷಿಗಳು ಯಾರು, ಯಾವ ರಾಜ/ಚಕ್ರವರ್ತಿಯರ ಕಾಲದಲ್ಲಿ ಇರುತ್ತಾರೆ, ಎಂಬುದನ್ನು ವಿಶ್ಲೇಷಿಸಿ ಪಟ್ಟಿ ಮಾಡಿಕೊಂಡಿದ್ದಾರೆ. ಇದನ್ನು ಸಿದ್ಧಪಡಿಸುವುದರಿಂದ ಅಚ್ಚರಿಪಡಿಸುವಂತಹ ಒಳನೋಟಗಳು ದೊರೆಯುತ್ತವೆ. ಋಗ್ವೇದದ ಸಂಸ್ಕೃತಿ ಯಾವ ಭೂಭಾಗಗಳಲ್ಲಿ ಯಾವ ಕಾಲದಲ್ಲಿ ಬೆಳೆಯಿತು, ಯಾವ ಋಷಿಗಳ, ರಾಜರ ಪ್ರಭಾವದ ವ್ಯಾಪ್ತಿ ಎಲ್ಲಿತ್ತು ಎಂಬುದರ ಬಗ್ಗೆ ನಮಗೆ ತಿಳುವಳಿಕೆ ಬರುತ್ತದೆ.

ಋಗ್ವೇದದ ಕಾಲದ ಹರಹನ್ನು ವಿಶ್ಲೇಷಿಸಲು, ತಲಗೇರಿಯವರು ಈ ಕೆಳಗಿನ ಆಧಾರಗಳನ್ನು ನೀಡುತ್ತಾರೆ:

–        ಋಗ್ವೇದದ ಸೂಕ್ತಿಗಳ ಮಂತ್ರದ್ರಷ್ಟ ಋಷಿಗಳ ನಡುವಿನ ಸಂಬಂಧ. (ಸಮಾನ ಕಾಲೀನರು, ವಂಶಸ್ಥರು, ಶಿಷ್ಯರು, ಇತ್ಯಾದಿ)

–        ಋಷಿಗಳ ವಂಶಾವಳಿ

–        ಮಂತ್ರದ್ರಷ್ಟಾರರು ಯಾರು ಯಾರನ್ನು ಉಲ್ಲೇಖಿಸಿದ್ದಾರೆ?

–        ರಾಜರು ಮತ್ತು ಮಂತ್ರದ್ರಷ್ಟಾರರ ನಡುವಿನ ಸಂಬಂಧ: ಯಾವ ಋಷಿಗಳು ಯಾವ ರಾಜರ ಸಮಕಾಲೀನರು, ಅಥವಾ ಹಿಂದೆ/ಮುಂದೆ ಇದ್ದರು ಎನ್ನುವ ಮಾಹಿತಿ.

–        ಭಾಷೆ ಮತ್ತು ರಚನಾ ಶೈಲಿ ಸ್ವರೂಪಗಳಲ್ಲಿ ಮಾರ್ಪಾಡು: ಸಾಧಾರಣವಾಗಿ, ಶೈಲಿಯ ಆಧಾರದ ಮೇಲೆ ಸುಮಾರು ಯಾವ ಸೂಕ್ತಗಳು ಮೊದಲು ಮತ್ತು ಯಾವುದು ನಂತರ ರಚಿತವಾಗಿದೆ, ಎಂಬುದನ್ನು ತಜ್ಞರು ನಿರ್ಧಾರ ಮಾಡಬಲ್ಲರು.

ಮೇಲಿನ ಅಂಶಗಳ ಆಧಾರದ ಮೇಲೆ, ತಲಗೇರಿಯವರು ಈ ಕೆಳಗಿನ ಮಂಡಲಗಳ ಕಾಲಾವಧಿಯನ್ನು ನಿರ್ಣಯಿಸಿದ್ದಾರೆ. ಈ ಲೇಖನದಲ್ಲಿ ಈ ಪಟ್ಟಿಯನ್ನು ಮಾತ್ರ ಕೊಟ್ಟಿದೆ. ಪಟ್ಟಿಯ ಹಿಂದಿನ ತರ್ಕವನ್ನು ಅವರ ಪುಸ್ತಕದಲ್ಲಿ ವಿಸ್ತೃತವಾಗಿ ವರ್ಣಿಸಿದ್ದಾರೆ.

ನೋಡಲು ಸುಲಭವಾಗಿ ಕಾಣಿಸುವ ಈ ಪಟ್ಟಿಯಲ್ಲಿ ತಿಳಿದುಬರುವ ಅಂಶಗಳೆಂದರೆ,

–        6ನೇ ಮಂಡಲವು ಎಲ್ಲಕ್ಕಿಂತ ಹಳೆಯದು

–        9ನೇ ಮಂಡಲವು ಇತರ ಮಂಡಲಗಳಿಗಿಂತ ಹಿಂದಿನದು, ಆದರೆ 10ಕ್ಕಿಂತ ನಂತರದ್ದು. ಈ ಮಂಡಲದಲ್ಲಿ, ಸೋಮನ ಸ್ತುತಿಗಳನ್ನು ಇತರ ಮಂಡಲಗಳ ಋಷಿಗಳೂ ರಚಿಸಿದ್ದಾರೆ. ಆದ್ದರಿಂದ, 8 ಮಂಡಲಗಳ ಸಂಗ್ರಹ ಈ ಮಂಡಲದ ಮುಂಚೆ ಅಸ್ತಿತ್ವದಲ್ಲಿತ್ತು.

–        10ನೇ ಮಂಡಲವು ಎಲ್ಲಕ್ಕಿಂತ ನಂತರದ್ದು; ಏಕೆಂದರೆ, ಬಿ. ಕೆ. ಘೋಷರ ಮತ್ತು ಇನ್ನಿತರರ ಪ್ರಕಾರ ಇದರ ಭಾಷೆ ಬದಲಾಗಿದೆ.

ಹೀಗೆ, ಮಂಡಲಗಳು ರಚಿತವಾದ ಕಾಲದ ಪರಿವಿಡಿಯು  ನಮಗೆ ತಿಳಿದರೆ, ಮಂಡಲದ ಮಾಹಿತಿಯನ್ನು ಕಾಲದ ಅಳತೆಗೋಲನ್ನು ಉಪಯೋಗಿಸಿ ವಿಶ್ಲೇಷಿಸಬಹುದು. ತಲಗೇರಿಯವರು ಈ ಮಾನದಂಡವನ್ನೇ ಉಪಯೋಗಿಸಿದ್ದಾರೆ.

2. ಎರಡನೆಯದಾಗಿ, ಋಗ್ವೇದದ ಭೂಭಾಗದ ವ್ಯಾಪ್ತಿಯನ್ನೂ ಮತ್ತು ಬರಬರುತ್ತಾ ಅದು ಹೇಗೆ ಬದಲಾಯಿತು, ಎಂಬುದನ್ನು ವಿಶ್ಲೇಷಿಸುತ್ತಾರೆ.

ತಲಗೇರಿಯವರು ನದಿಗಳ ಉಲ್ಲೇಖಗಳನ್ನು ವಿಶ್ಲೇಷಿಸಿ, 6ನೇ ಮಂಡಲದ ಸಮಯದಲ್ಲಿ, ವೈದಿಕ ಆರ್ಯರು ಸರಸ್ವತಿಯ ಪೂರ್ವದ ಪ್ರದೇಶದ ನಿವಾಸಿಗಳು, ಎಂದು ನಿರ್ಧರಿಸಿದ್ದಾರೆ. ಕ್ರಮೇಣ, 3ನೇ ಮತ್ತು 7ನೇ ಮಂಡಲಗಳಲ್ಲಿ ಪಶ್ಚಿಮದ ನದಿಗಳ ಉಲ್ಲೇಖಗಳು ಹೆಚ್ಚಾದಂತೆ, ಪಶ್ಚಿಮಕ್ಕೆ ಆರ್ಯರು ಹರಡುತ್ತಿರುವುದು ಕಾಣಬರುತ್ತದೆ. ಆದರೆ, ಅವರ ಕೇಂದ್ರ ಇನ್ನೂ ಪೂರ್ವದಲ್ಲಿಯೇ ಇದೆ. ಹಾಗೆ ನೋಡಿದರೆ, ಈ ಸಮಯದಲ್ಲಿ, ಋಗ್ವೇದದಲ್ಲಿ ಪಶ್ಚಿಮದ ನದಿಗಳ ಉಲ್ಲೇಖ ಬಹಳ ಕಡಿಮೆ.

8, 9, ಮತ್ತು 10ರ ಮಂಡಲಗಳು ಮತ್ತು ಉಪಮಂಡಲಗಳು ರಚಿತವಾಗುವ ವೇಳೆಗೆ ಆರ್ಯರು ಋಗ್ವೇದದ ಇಡೀ ಭೂಭಾಗದಲ್ಲಿ ಹಬ್ಬಿದ್ದಾರೆ.

ನದಿಗಳ ಮಾಹಿತಿಯನ್ನು, ದತ್ತಾಂಶಗಳನ್ನು ವಿಶ್ಲೇಷಿಸಿ ತಲಗೇರಿಯವರು ಋಗ್ವೇದದ ಇತಿಹಾಸ ಮತ್ತು ಭೌಗೋಳಿಕ ಸತ್ಯವನ್ನು ಹೇಗೆ ನಿರ್ಣಯಿಸಿದ್ದಾರೆ ಎಂಬುದನ್ನು ನಂತರದ ಲೇಖನಗಳಲ್ಲಿ ನೋಡೋಣ. [ಈ ಲೇಖನದ ವಸ್ತುವು ಮುಖ್ಯವಾಗಿ ಸೋಮನ (ಸೋಮದ) ಆಧಾರದ ಮೇಲೆ ತಲಗೇರಿಯವರು ಹೇಗೆ ಆರ್ಯರ ವಲಸೆಯ ಪಥ ಮತ್ತು ಋಗ್ವೇದದ ಕಾಲದ ಹರಹನ್ನು ಕಂಡುಹಿಡಿದಿದ್ದಾರೆ, ಎಂಬುದು.]

3. ಮೂರನೆಯದಾಗಿ, ಸೋಮದ ಪ್ರದೇಶ; ಕಾಲಕ್ರಮೇಣ ಸೋಮದ ಬಗೆಗಿನ ಪರಿಚಯ ಹೆಚ್ಚುತ್ತಾ, ಅದರ ಬಗೆಗಿನ ನಿಲುವು ಬದಲಾದ ರೀತಿಯಿಂದ ಬರುವ ತೀರ್ಮಾನಗಳು.

ಸೋಮಲತೆಯು ಕಾಶ್ಮೀರ, ಅಫ್ಘಾನಿಸ್ತಾನ, ಮತ್ತು ಪಂಜಾಬಿನ ವಾಯುವ್ಯ ಅಂಚಿನಲ್ಲಿ ಮಾತ್ರ ಬೆಳೆಯುತ್ತದೆ ಎಂದು ಋಗ್ವೇದದ ಉಲ್ಲೇಖಗಳಿಂದ ಸ್ಪಷ್ಟವಾಗುತ್ತದೆ. ಆದರೆ, ಇದೊಂದು ವಸ್ತುಸ್ಥಿತಿಯ ಆಧಾರದ ಮೇಲೆ, ಆ ಪ್ರದೇಶಗಳಿಂದ ಆರ್ಯರು ಭಾರತಕ್ಕೆ ವಲಸೆ ಬಂದರು, ಎಂದರೆ, ಯೂರೋಪಿನ ಜನ ಭಾರತದ ಸಾಂಬಾರ ಪದಾರ್ಥಗಳನ್ನು ಉಪಯೋಗಿಸುವ ಒಂದೇ ಕಾರಣದಿಂದ, ಅವರು ಭಾರತದಿಂದ ವಲಸೆ ಹೋದವರು, ಎಂದು ಹೇಳಿದಂತೆ, ಎಂದು ತಲಗೇರಿಯವರು ವ್ಯಂಗ್ಯವಾಡುತ್ತಾರೆ.

ನಾವು ಹಿಂದೆಯೇ ಓದಿದಂತೆ, ಒಳ್ಳೆಯ ಸೋಮ ಬೆಳೆಯುವ ಜಾಗಗಳೆಂದರೆ, ಸುಷೋಮಾ, ಆರ್ಜಿಕಿಯ ನದಿಗಳ ಹತ್ತಿರದ ಪ್ರದೇಶಗಳೆಂದು ಗುರುತಿಸಿದ್ದಾರೆ. ಇವು ಪಂಜಾಬಿನ ಉತ್ತರದ ಅಂಚಿನ ಮತ್ತು ಕಾಶ್ಮೀರದ ವಾಯುವ್ಯ ಭಾಗದಲ್ಲಿ ಇರುವ ಸಿಂಧುವಿನ ಈಶಾನ್ಯದ ಉಪನದಿಗಳ ಮತ್ತು ಪರ್ವತದ ಪ್ರದೇಶ.  ಇವಲ್ಲದೆ, ಗಾಂಧಾರದ ಬಳಿಯ (ಅಫ್ಘಾನಿಸ್ತಾನ ಮತ್ತು ಪಂಜಾಬಿನ ಉತ್ತರ ಭಾಗ) ಮೂಜವತ ಪರ್ವತದಲ್ಲಿ ಸೋಮ ಬೆಳೆಯುವ ಉಲ್ಲೇಖವಿದೆ. (ಅ. ವೇ. 5-12-5, 7, 8, 14)

ಅಧ್ಯಯನದ ತೀರ್ಮಾನಗಳು

ತಲಗೇರಿಯವರು ಋಗ್ವೇದವನ್ನು ಅಧ್ಯಯಿಸಿ ಈ ಕೆಳಗಿನ ತೀರ್ಮಾನಗಳಿಗೆ ಬರುತ್ತಾರೆ:

1. ಸೋಮವು ಬೆಳೆಯುವ ಪ್ರದೇಶ ಬಹಳ ದೂರದ್ದು ಎಂದು ಋಗ್ವೇದದ ಹಳೆಯ ಭಾಗಗಳ ಉಲ್ಲೇಖಗಳು ಹೇಳುತ್ತವೆ. ಎಷ್ಟು ದೂರದ್ದು ಎಂದರೆ, ಸೋಮವು ಸ್ವರ್ಗದಲ್ಲಿ ಬೆಳೆಯುತ್ತದೆ, ಎಂದು ಹೇಳಲಾಗುತ್ತದೆ. ಅಲ್ಲದೆ, ಹಳೆಯ ಉಲ್ಲೇಖಗಳಲ್ಲಿ,ಸೋಮವು ಪರ್ವತ ಪ್ರದೇಶಗಳಲ್ಲಿ ಬೆಳೆಯುತ್ತದೆ, ದೂರದಲ್ಲಿ ಬೆಳೆಯುತ್ತದೆ, ಎಂಬ ಅಸ್ಪಷ್ಟ ಉಲ್ಲೇಖಗಳ ಹೊರತು ಸೋಮವು ಬೆಳೆಯುವ ಪ್ರದೇಶಗಳ ಬಗ್ಗೆ ಋಗ್ವೇದದಲ್ಲಿ ಬೇರೆ ಉಲ್ಲೇಖಗಳಿಲ್ಲ.

ಸೋಮವು ಬೆಳೆಯುವ ಪ್ರದೇಶ ತ್ವಷ್ಟ್ರವಿನ ವಾಸಸ್ಥಾನ ಎಂದು ಸೂಕ್ತ 4.18.3. ಹೇಳುತ್ತದೆ.

ಪರಾಯತೀಮ್ ಮಾತರಮನ್ವ ಚಷ್ಟ ನ ನಾನು ಗಾನ್ಯನು ನೂ ಗಮಾನಿ ।

ತ್ವಷ್ಟುರ್ಗೃಹೇ ಅಪಿಬತ್ಸೋಮಮಿಂದ್ರಃ ಶತಧನ್ಯಮ್  ಚಂವೋಃ ಸುತಸ್ಯ ।।

[ಸೋಮಪಾತ್ರೆಯಲ್ಲಿ ಚೆನ್ನಾಗಿ ಹಿಂಡಿದ ಅತಿದ್ರವ್ಯದಿಂದ ಕೂಡಿದ ಸೋಮವನ್ನು ತ್ವಷ್ಟ್ರುವಿನ ಗೃಹದಲ್ಲಿ ಇಂದ್ರನು ಆಹ್ವಾನವಿಲ್ಲದೆ, ಬಲಾತ್ಕಾರವಾಗಿ ಕುಡಿದನು.]

ಹಿಲ್ ಬ್ರಾಂಡ್ಟ್ ಹೇಳುವಂತೆ, ತ್ವಷ್ಟ್ರುವು ವೈದಿಕ ಆರ್ಯರ ಪರಿಚಯದ ಹೊರಗಿನ ಆರಾಧ್ಯದೈವ.

ನಾವು ಹಿಂದಿನ ಲೇಖನದಲ್ಲಿ ಹೇಳಿದ ಕಥೆಯ ಪ್ರಕಾರ, ಸೋಮವನ್ನು ಶ್ಯೇಣ ಪಕ್ಷಿಯು ಸ್ವರ್ಗದಿಂದ ಭೂಮಿಗೆ ತಂದಿತು. ಋಗ್ವೇದದಿಂದ ಈ ಕಥೆಯು ಮತ್ತೆ ಮತ್ತೆ ಉಲ್ಲೇಖಗೊಂಡಿದೆ.

ಶ್ಯೇಣ ಪಕ್ಷಿಯು ಸೋಮಲತೆಯನ್ನು ಬೇಗನೆ ತರುವಾಗ (4.26.5), ಸೋಮಪಾಲಕರ ಜೊತೆಗೆ ಕಾದಾಡಿ ಗಾಯಗೊಂಡ ಕಥೆಯನ್ನು (4.27.3) ಓದಿದ್ದೇವೆ.

ತ್ವಷ್ಟ್ರುವು ಕೂಡ ಒಬ್ಬ ಸೋಮಪಾಲಕನು.

ಆಥರ್ವಣಾಯಾಶ್ವಿನಾ ದಧೀಚೇಶ್ವ್ಯಮ್ ಶಿರಃ ಪ್ರತ್ಯೈರಯತಂ । ಸ ವಾಂ ಮಧು ಪ್ರವೋಚದೃತಾ   ಯಂತ್ವಾಶ್ಟ್ರಮ್ ಯದ್ಧಸ್ರಾವ ಪಿಕಕ್ಷ್ಯಮ್ ವಾಂ ।। (೧. ೧೭. ೨೨) [ಇಂದ್ರನು ಸೋಮನಿಂದ ಪಡೆದ ಮಧುವಿದ್ಯೆಯನ್ನು ದಧೀಚಿಯು ಅಶ್ವಿನೀ ದೇವತೆಗಳಿಗೆ ಕೊಟ್ಟನು.]

ಆದರೆ, ಇಂದ್ರನು ಸೋಮನಿಗಾಗಿ ತ್ವಷ್ಟ್ರನೊಡನೆ ಕಾದಾಡಿದ ಕಥೆ ಕೂಡ ಇದೆ.

(ಗಾಂಧಾರದವರಾದ) ಗಂಧರ್ವರು ಸೋಮವನ್ನು ರಕ್ಷಿಸುವವರು (9.83.4); ಸೋಮದ ಎಲ್ಲ ಸ್ವರೂಪವನ್ನು ವೀಕ್ಷಿಸುತ್ತ ಸ್ವರ್ಗದ ಹೊಸಲಿನಲ್ಲಿ ನಿಂತಿರುವವರು.  (9.85.12) ಸೂರ್ಯನ ಮಕ್ಕಳೊಡನೆ, ಪರ್ಜನ್ಯನೊಡನೆ, ಗಂಧರ್ವರು ಸೋಮವನ್ನು ಸೇವಿಸುತ್ತಾರೆ. (9.113.3) ಗಂಧರ್ವರ ಮುಖದ ಮೂಲಕ ದೇವರು ಸೋಮವನ್ನು ಸೇವಿಸುತ್ತಾರೆ. (ಅ. ವೇ. 7.73.3 )

ಈ ಮೇಲೆ ತಿಳಿಸಿದ ವಿಷಯಗಳಿಂದನಮಗೆ ತಿಳಿಯುವುದು ಇದು: ಋಗ್ವೇದದ ಆದಿಭಾಗದಲ್ಲಿ ಸೋಮ ಬೆಳೆಯುವ ಪ್ರದೇಶಗಳು ವೈದಿಕರಿಗೆ ತಿಳಿದಿರಲಿಲ್ಲ. ಅವರು ಪಶ್ಚಿಮಕ್ಕೆ ವಿಸ್ತರಿಸಿದಂತೆ ಅವರಿಗೆ ಪ್ರದೇಶಗಳ ಪರಿಚಯವಾಯಿತು.

2. ಋಗ್ವೇದದ ಅತಿ ಮುಖ್ಯ ಋಷಿಗಳೆಂದರೆ ಅಂಗೀರಸ, ವಶಿಷ್ಠ, ಮತ್ತು ವಿಶ್ವಾಮಿತ್ರರು. ಇವರಿಗೆ ಸೋಮನ ಆರಾಧನೆಯಲ್ಲಿ ಹೆಚ್ಚಿನ ಸ್ಥಾನವೇನೂ ಇಲ್ಲ.

ಋಗ್ವೇದವು ಒಂಬತ್ತು ಪುರೋಹಿತರು (ಋಷಿಗಳು) ಮತ್ತು ಅವರ ವಂಶಜರಿಂದ ರಚಿಸಲ್ಪಟ್ಟಿದೆ. ಕಶ್ಯಪ ಮತ್ತು ಭೃಗು ವಂಶಜರು ಸೋಮದೊಡನೆ ವಿಶೇಷ ಸಂಬಂಧ ಇಟ್ಟುಕೊಂಡವರು. ಕಶ್ಯಪರು ರಚಿಸಿದ 415 ಸೂಕ್ತಿಗಳಲ್ಲಿ, 293 ಸೋಮನ ಬಗ್ಗೆ ರಚಿಸಲ್ಪಟ್ಟಿವೆ, ಎಂದರೆ 70 ಪ್ರತಿಶತಕ್ಕೂ ಹೆಚ್ಚು. ಅದೇ ರೀತಿ, ಭೃಗುಗಳು ಒಟ್ಟು 473ರಲ್ಲಿ 152 (ಎಂದರೆ, ಸುಮಾರು 32%) ಸೂಕ್ತಗಳನ್ನು ಸೋಮನನ್ನು ಸ್ತುತಿಸಿ ರಚಿಸಿದ್ದಾರೆ. ಭರತರು ಒಟ್ಟು 170ರಲ್ಲಿ 27 (ಎಂದರೆ, ಸುಮಾರು 16%) ಸೂಕ್ತಗಳನ್ನು ಸೋಮನನ್ನು ಸ್ತುತಿಸಿ ರಚಿಸಿದ್ದಾರೆ. ಇತರ ಋಷಿಗಳು ಸೋಮನ ಬಗ್ಗೆ ರಚಿಸಿರುವ ಸೂಕ್ತಗಳ ಸಂಖ್ಯೆ, ಇವರ ಹೋಲಿಕೆಯಲ್ಲಿ ತುಂಬಾ ಕಡಿಮೆ.

ಕಶ್ಯಪರು ನಮ್ಮ ಸಂಪ್ರದಾಯದಲ್ಲಿ ಕಾಶ್ಮೀರಕ್ಕೆ ಸೇರಿದವರು. (ಕಶ್ಯಪ-ಮಿರಾ) ಜಮದಗ್ನಿ ಮತ್ತು ಅವನ ವಂಶಸ್ಥರ ಒಂದು ಶಾಖೆಯನ್ನು ಹೊರತುಪಡಿಸಿ, ಭೃಗುಗಳು ಉತ್ತರ ಮತ್ತು ವಾಯುವ್ಯಕ್ಕೆ ವಾಸಿಸುವ ವೈದಿಕ ಆರ್ಯರ ಶತ್ರುಗಳೊಂದಿಗೆ ಸಂಬಂಧ ಇಟ್ಟುಕೊಂಡವರು. ಈ ಎರಡೂ ಗೋತ್ರಜರು ವೈದಿಕ ಆರ್ಯ ಪ್ರದೇಶದ ಉತ್ತರ ಮತ್ತು ವಾಯುವ್ಯಕ್ಕೆ ಸೋಮ-ಬೆಳೆಯುವ ಪ್ರದೇಶಗಳೊಂದಿಗೆ ನೇರವಾಗಿ ಸಂಬಂಧ ಇದ್ದವರು.

ಋಗ್ವೇದ ಮಾತ್ರವಲ್ಲ, ಪರ್ಶಿಯನ್ನರ ಅವೆಸ್ತಾ ಕೂಡ ಈ ವಿಶೇಷ ಸಂಬಂಧವನ್ನು ದೃಢಪಡಿಸುತ್ತದೆ.

ಅವೆಸ್ತಾ ಹೇಳುವಂತೆ, ಸೋಮವನ್ನು ಮೊದಲು ಸಿದ್ಧಪಡಿಸಿದವನು ವಿವಾನ್ಹವಂತ್ (ವಿವಸ್ವತ), ಎರಡನೆಯವನು ಅಥ್ವಾ (ಆಪ್ತ್ಯ) ಮತ್ತು ಮೂರನೆಯವನು ತ್ರಿತಾ (ತ್ರಿತಾ).

ಋಗ್ವೇದದಲ್ಲಿನ ವಿವಸ್ವತನು ಸಾಮಾನ್ಯವಾಗಿ ಸೂರ್ಯನು, ಆದರೆ ವಿವಸ್ವತ ಎಂದರೆ, ಯಮ ಮತ್ತು ಮನುವಿನ ತಂದೆಯ ಹೆಸರು, ಕೂಡ. ಅವೆಸ್ತಾದಲ್ಲಿಯೂ, ವಿವಾನ್ಹವಂತ್ ಯೀಮಾನ ತಂದೆ. ಯಮ, ವಿವಸ್ವತ ಇಬ್ಬರೂ ಭೃಗುಗಳೇ. ವೈವಸ್ವತ ಮನುವು ಕಾಶ್ಯಪನು. (8.29 ರ ಅನುಕ್ರಮಣಿ)

ಕಶ್ಯಪರು ಸೋಮದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ, ಎಂಬುದರಲ್ಲಿ ಸಂದೇಹವೇ ಇಲ್ಲ. ಅವರು ರಚಿಸಿದ ಶ್ಲೋಕಗಳಲ್ಲಿ 70% ಸೋಮ ಪಾವಮನೀ ಸೂಕ್ತಗಳು. ಮಾತ್ರವಲ್ಲ, ಕಶ್ಯಪರ ಆಪ್ರೀ-ಸೂಕ್ತವು ಸೋಮನಿಗೆ ಮೀಸಲಾದ ಏಕೈಕ ಅಪ್ರೀ-ಸೂಕ್ತವಾಗಿದೆ (ಉಳಿದ ಎಲ್ಲಾ ಒಂಬತ್ತು ಆಪ್ರೀ-ಸೂಕ್ತಗಳನ್ನು ಅಗ್ನಿಗೆ ಸಮರ್ಪಿಸಲಾಗಿದೆ).

ಆದರೆ ಕಶ್ಯಪರು ಋಗ್ವೇದದ ಕಡೆಯಭಾಗದಲ್ಲಿ ಪ್ರವೇಶಿಸಿದರು ಎಂಬುದು ಶತಃಸಿದ್ಧವಾಗಿದೆ: ಎಂದರೆ, ವೈದಿಕ ಆರ್ಯರು ಸೋಮ-ಬೆಳೆಯುವ ಪ್ರದೇಶಗಳಿಗೆ ವಿಸ್ತರಿಸಿದ ನಂತರದ ಅವಧಿಯಲ್ಲಿ ಅವರು ಸೋಮದ ಆರಾಧಕರಾದರು.

ಸೋಮದ ಜೊತೆ ಭೃಗುಗಳ ಸಂಬಂಧ ಇನ್ನೂ ಆಳ. ಸೋಮಲತೆಯು ಭೃಗುಗಳು ಜೀವಿಸುತ್ತಿದ್ದ ವಾಯುವ್ಯ ಪ್ರದೇಶಗಳಲ್ಲಿ ಬೆಳೆಯುತ್ತದೆ, ಎಂಬುದು ಸ್ಪಷ್ಟ. ಇವರೇ ಸೋಮವನ್ನು ಮತ್ತು ಅದರ ಆಚರಣೆಗಳನ್ನು ವೈದಿಕ ಆರ್ಯರಿಗೆ ಪರಿಚಯಿಸಿದರು, ಎಂಬುದು ಈ ಕೆಳಗಿನ ಅಂಶಗಳಿಂದ ಕಾಣಬರುತ್ತದೆ.

  • ಋಗ್ವೇದದ ಸ್ತುತಿಗಳಲ್ಲಿ ಸಾವಿರಾರು ಬಾರಿ ಕಂಡುಬರುವ ಸೋಮವೆಂಬ ಪದವು ಕೇವಲ ಸೋಮಾಹುತಿ ಭಾರ್ಗವ ಋಷಿಯಿಂದ ರಚಿಸಲ್ಪಟ್ಟಿದೆ.
  • ಸೋಮ ಪಾವಮಾನಿ ಮಂಡಲದಲ್ಲಿ ನೂರಕ್ಕೂ ಹೆಚ್ಚು ಬಾರಿ ಕಂಡುಬರುವ ಪವಮಾನ ಪದವು ಒಂಬತ್ತನೇ ಮಂಡಲದ ಹೊರಗೆ ಒಮ್ಮೆ ಮಾತ್ರ ಕಂಡುಬಂದು (8.101.14) ಇದನ್ನು ಜಮದಗ್ನಿ ಭಾರ್ಗವ ಋಷಿಯು ರಚಿಸಿದ್ದಾರೆ.
  • ಋಗ್ವೇದ ಮತ್ತು ಅವೆಸ್ತಾ ಎರಡರಲ್ಲೂ ಭೃಗುಗಳೇ ಸೋಮವನ್ನು ಮೊದಲು ತಯಾರಿಸಿದವರು ಎಂಬ ಉಲ್ಲೇಖಗಳು ದೊರಕುತ್ತವೆ.
  • ಅತ್ಯಂತ ಪುರಾತನವಾದ ಸೋಮ ಸ್ತುತಿಗಳು ಭೃಗುಗಳಿಂದ ರಚಿಸಲ್ಪಟ್ಟಿವೆ.

ಕನಿಷ್ಠ ಮೂರು ಉಲ್ಲೇಖಗಳ ಪ್ರಕಾರ (1.116.12; 1.117.22; 1.119.9), ಸೋಮನ ವಾಸಸ್ಥಾನ ಅಥವಾ ಬೆಳೆಯುವ ಪ್ರದೇಶವು ಯಾರಿಗೂ ತಿಳಿದಿರಲಿಲ್ಲ; ಮತ್ತು ಈ ರಹಸ್ಯವನ್ನು ಅಶ್ವಿನಿ ಕುಮಾರರಿಗೆ ತಿಳಿಸಿದವನು ದಧೀಚಿ ಎಂಬ ಕಥೆಯಿದೆ. ದಧೀಚಿಯು ಕವಿ ಭಾರ್ಗವ ಮತ್ತು ಕಾವ್ಯ ಉಶನಸರಿಗಿಂತ ಹಳೆಯವನಾದ ಋಷಿ.  ದಧೀಚಿಯು ಅಥರ್ವಣನ ಮಗ, ಮತ್ತು ಭೃಗು ಮಹರ್ಷಿಯ ಮೊಮ್ಮಗ.

ಸೋಮಲತೆ ಮತ್ತು ಸೋಮಯಜ್ಞದ ಆಚರಣೆಗಳು ಪ್ರಚಲಿತವಾಗಿದ್ದ ಸೋಮ ಬೆಳೆಯುವ ಪ್ರದೇಶಗಳಿಂದ ವೈದಿಕ ಆರ್ಯರು ಬಂದಿಲ್ಲ ಎಂಬುದನ್ನು ಋಗ್ವೇದ ಸ್ಪಷ್ಟವಾಗಿ ತೋರಿಸುತ್ತದೆ. ಬದಲಾಗಿ, ಭೃಗು ವಂಶಜರು ಇವನ್ನು ವಾಯುವ್ಯದ ಸೋಮ ಬೆಳೆಯುವ ಪ್ರದೇಶಗಳಿಂದ ವೈದಿಕ ಆರ್ಯರಿಗೆ ತಂದರು.

ಈ ಮೇಲೆ ತಿಳಿಸಿದ ವಿಷಯಗಳಿಂದನಮಗೆ ತಿಳಿಯುವುದು ಇದು: ಸೋಮಲತೆಯಾಗಲಿ, ಸೋಮದ ಆಚರಣೆಗಳಾಗಲಿ, ವೈದಿಕ ಆರ್ಯರಿಗೆ ತಿಳಿದಿರಲಿಲ್ಲ. ಸೋಮ ಬೆಳೆಯುವ ಪ್ರದೇಶದ ಪುರೋಹಿತರಿಂದ ಋಗ್ವೇದದ ಆದಿಯಲ್ಲೇ ಸೋಮದ ಪರಿಚಯವಾಯಿತು.

3. ವೈದಿಕ ಆರ್ಯರು ಪಶ್ಚಿಮ ಮತ್ತು ವಾಯುವ್ಯಕ್ಕೆ ವಿಸ್ತರಿಸಿದ ಕಾರಣಗಳಲ್ಲಿ ಒಂದು, ಸೋಮದ ಅನ್ವೇಷಣೆ. ಪಶ್ಚಿಮ ದಿಕ್ಕಿನ ವಿಸ್ತಾರವು ವಿಶ್ವಾಮಿತ್ರ ಮತ್ತು ಸುದಾಸನ ನೇತೃತ್ವದಲ್ಲಿ ಭಾರತರು ಶುತುದ್ರಿ ಮತ್ತು ವಿಪಾಶ ನದಿಗಳನ್ನು ದಾಟುವುದರಿಂದ ಪ್ರಾರಂಭವಾಯಿತು. (3.33. 5) ಈ ಸೂಕ್ತದಲ್ಲಿ ದಾಟಿದ ದಿಕ್ಕು ಮತ್ತು ಉದ್ದೇಶಗಳು ಸ್ಪಷ್ಟವಾಗಿ ತಿಳಿಯುತ್ತದೆ.

ಈ ವಿಜಯದ ನಂತರ, ವಿಶ್ವಾಮಿತ್ರರು ಸುದಾಸನಿಗಾಗಿ ಅಶ್ವಮೇಧ ಯಜ್ಞವನ್ನು ಆಚರಿಸಿದರು. (ಋ. ವೇ. 3.53.11) [ಕುಶಿಕರೇ, ಸುದಾಸನು ಸಂಪತ್ತನ್ನು ಗೆಲ್ಲಲು ಅವನ ಕುದುರೆಗಳನ್ನು ಸ್ವಚ್ಛಂದವಾಗಿ ಬಿಡಿ. ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳನ್ನು ಶತ್ರುಗಳನ್ನು ಜಯಿಸಿ, ರಾಜನು ಭೂಮಿಯಲ್ಲೇ  ಅತ್ಯುತ್ತಮ ಸ್ಥಳವಾದ ಕುರುಕ್ಷೇತ್ರದಲ್ಲಿ ತನ್ನ ಆರಾಧನೆಯನ್ನು ನಡೆಸಲಿ.]

ಪೂರ್ವದ ದಿಕ್ಕಿನಲ್ಲೂ ಸ್ವಲ್ಪ ಮಟ್ಟಿಗೆ ವಿಸ್ತಾರ ನಡೆಯಿತು. (ಋ. ವೇ. 3.53.14,) ಆದರೆ, ಹೆಚ್ಚಿನ ವಿಸ್ತರಣೆ ಆದದ್ದು ಪಶ್ಚಿಮ ಮತ್ತು ವಾಯುವ್ಯ ದಿಕ್ಕುಗಳಲ್ಲಿ. ಈ ದೀರ್ಘಾವಧಿಯ ಯುದ್ಧದ ಮೊದಲ ಪ್ರಮುಖ ಕಾಳಗ ಯಮುನೆಯ ತೀರದಲ್ಲಿ ನಡೆಯಿತು. ಎರಡನೆಯದು, ಪರುಶ್ನಿ ನದಿಯ ತೀರದಲ್ಲಿ ನಡೆದ ಪ್ರಸಿದ್ಧ ದಶರಾಜ್ಞ ಸಂಗ್ರಾಮ. ಮೂರನೆಯ ಮತ್ತು ಕಡೆಯ ಯುದ್ಧವು ದಕ್ಷಿಣ ಅಫ್ಘಾನಿಸ್ತಾನದಲ್ಲಿ ಸರಯು ನದಿಯನ್ನು ದಾಟಿದಾಗ ಸಂಭವಿಸಿತು.

ಯಮುನಾ ಮತ್ತು ಪರುಶ್ನಿ ಸಂಗ್ರಾಮಗಳಲ್ಲಿ ಸುದಾಸನು ಭಾರತರ ನಾಯಕನಾಗಿದ್ದನು. ಸರಯು ನದಿಯನ್ನು ದಾಟುವಾಗ ನಡೆದ ಯುದ್ಧವು ಋಗ್ವೇದದ ಮಧ್ಯದ ಅವಧಿಯಲ್ಲಿ ನಡೆದು, ಸುದಾಸನ ವಂಶಸ್ಥನಾದ  ಸಹದೇವನ ನಾಯಕತ್ವದಲ್ಲಿ ನಡೆಯಿತು.

ಸಹದೇವನ ಮಗನೂ (ಸಹದೇವನ ಪುರೋಹಿತನಾದ ವಾಮದೇವನ ಸೂಕ್ತ 4.15.7-10 ಹೇಳುವಂತೆ,) ಈ ಯುದ್ಧದಲ್ಲಿ ಭಾಗವಹಿಸಿರುವಂತೆ ಕಾಣುತ್ತದೆ. ಸರಯುವನ್ನು ದಾಟಿದ ನಂತರ ಜಯಿಸಿದ ಪೂರ್ವ ಅಫ್ಘಾನಿಸ್ತಾನದ ಸೋಮ ಬೆಳೆಯುವ ಭೂಭಾಗವನ್ನು ವಿಜಯದ ನೆನಪಿಗಾಗಿ ಸೋಮಕ ಎಂದು ಹೆಸರಿಸಲಾಯಿತು.

ಈ ಮೇಲೆ ತಿಳಿಸಿದ ವಿಷಯಗಳಿಂದನಮಗೆ ತಿಳಿಯುವುದು ಇದು: ಪಶ್ಚಿಮ ಮತ್ತು ವಾಯುವ್ಯ ದಿಕ್ಕುಗಳಿಗೆ ಆರ್ಯರು ವಿಸ್ತರಿಸಿದ ಕಾರಣಗಳಲ್ಲಿ ಸೋಮದ ಅನ್ವೇಷಣೆಯೂ ಒಂದು.

ಇರಾನದ (ಪರ್ಷಿಯನ್ನರ) ಅವೆಸ್ತಾದ ಪುರಾವೆ

ನಮ್ಮ ದೇಶದ ವಾಯುವ್ಯ ದಿಕ್ಕಿಗೆ ಮತ್ತು ಇರಾನದ ಭಾಗಗಳಿಗೆ ಸಂಬಂಧಿಸಿದ ಸ್ಥಳಗಳ ಬಗೆಗಿನ  ಪುರಾವೆಗಳನ್ನು ಋಗ್ವೇದ ಮಾತ್ರವಲ್ಲ, ಅವೆಸ್ತಾ ಕೂಡ ನೀಡುತ್ತದೆ. ಋಗ್ವೇದದ ಮಧ್ಯಕಾಲೀನ ಪುಸ್ತಕಗಳಲ್ಲಿ ಬರುವ ವ್ಯಕ್ತಿಗಳು ಅವೆಸ್ತಾದಲ್ಲಿ ಉಲ್ಲೇಖಗೊಂಡಿದ್ದಾರೆ. ಇವರು ತುರ್ವೀತಿ, ಗೋತಮ, ತ್ರಿತ, ಮತ್ತು ಕೃಶಾನು.

ತ್ರಿತನು ಝರತುಷ್ಟ್ರನ ತಂದೆಯಾದ ಪೌರುಷಸ್ಪನಿಗೂ ಹಿಂದಿನ ವ್ಯಕ್ತಿ ಎಂಬಂತೆ ಅವೆಸ್ತಾದಲ್ಲಿ ಕಾಣಬರುತ್ತಾನೆ. ಋಗ್ವೇದದಲ್ಲಿ, ತ್ರಿತನು ಅಂಗೀರಸರ ವಂಶಜರಾದ ಗೃತ್ಸಮದರಲ್ಲಿ ಒಬ್ಬನು. ಗೃತ್ಸಮದರು ಭೃಗುಗಳ ಜ್ಞಾನ ಮತ್ತು ಪದ್ಧತಿಗಳನ್ನು ಅಂಗೀಕರಿಸಿಕೊಂಡು ಕೇವಲ ಭೃಗುಗಳೆಂಬ ಹೊಸ ಶಾಖೆಯಾಗಿ ಬೆಳೆದರು.

ಹಿಂದಿನ (ಸೋಮವನ್ನು ಸ್ವರ್ಗದಿಂದ ಭೂಮಿಗೆ ತಂದ) ಕಥೆಯಲ್ಲಿ ನಾವು ಕಂಡ ಕೃಶಾನುವು ಸೋಮ ಬೆಳೆಯುವ ಪ್ರದೇಶದ ಬಿಲ್ಲುಗಾರ. ಸೋಮವನ್ನು ಕಾಪಾಡುವ ಹೊಣೆಗಾರಿಕೆ ಇವನದಾಗಿತ್ತು. ಇದೇ ಕೃಶಾನುವನ್ನು ಅವೆಸ್ತಾ ಕೂಡ ಇವನು ಇರಾನದ ಪುರೋಹಿತರ ವೈರಿಯೆಂದು ಉಲ್ಲೇಖಿಸುತ್ತದೆ.

ಅವೆಸ್ತಾ ಮತ್ತು ಋಗ್ವೇದದ ತುಲನಾತ್ಮಕ ಅಧ್ಯಯನದಿಂದ ಸಾಕಷ್ಟು ಐತಿಹಾಸಿಕ ವಿಷಯಗಳು ತಿಳಿದು ಬರುತ್ತವೆ. ಮುಖ್ಯವಾಗಿ, ವೈದಿಕ ಆರ್ಯರು ಸರಸ್ವತಿ ತೀರದಲ್ಲಿ ಇದ್ದು ಋಗ್ವೇದವನ್ನು ರಚಿಸಿ, ನಮ್ಮ ಸಂಸ್ಕೃತಿಯನ್ನು ಸ್ಥಿರಪಡಿಸಿದವರು. ಆ ಭೂಭಾಗದಿಂದ ಎಲ್ಲ ದಿಕ್ಕಿಗೂ–ಮುಖ್ಯವಾಗಿ ವಾಯುವ್ಯಕ್ಕೂ, ಉತ್ತರಕ್ಕೂ–ವಿಸ್ತರಿಸಿದರು.

ಇದುವರೆಗೂ ನಮಗೆ ತಿಳಿದದ್ದು ತುಂಬಾ ಕಡಿಮೆ. ನಮ್ಮ ಇತಿಹಾಸವನ್ನು ತಿಳಿಯಲು ಯಾವ ಪೂರ್ವಾಗ್ರಹಕ್ಕೂ ಒಳಗಾಗದೆ ಈ ವಿಷಯವನ್ನು ಓದಿಕೊಳ್ಳುವ ಪ್ರಯಾಸ ಮಾಡಬೇಕು. ಈ ದಿಶೆಯಲ್ಲಿ ನಾವು ಇಡುವ ಮೊದಲ ಹೆಜ್ಜೆ ಎಂದರೆ, ತಲಗೇರಿಯವರ ಪುಸ್ತಕಗಳನ್ನು ಓದುವುದು, ಅರ್ಥ ಮಾಡಿಕೊಳ್ಳುವುದು.

ಈ ಲೇಖನ ತಲಗೇರಿಯವರ ಸಾಕಷ್ಟು ಘನವಾದ ವಸ್ತುವನ್ನು ಚಿಕ್ಕದಾಗಿ, ಆದಷ್ಟು ಸಂಕ್ಷಿಪ್ತವಾಗಿ ಓದುಗರ ಮುಂದೆ ಇಡುವ ಒಂದು ಪ್ರಯತ್ನ. ಓದುಗರಲ್ಲಿ ಸ್ವಲ್ಪ ಮಟ್ಟಿಗೆ ಕುತೂಹಲವನ್ನು ಉಂಟು ಮಾಡಿದ್ದರೆ, ನಾನು ಋಣಿ.

ಆಕರಗಳು:

  1.     Rigveda and Avesta: The Final Evidence, Shrikant Talageri
  2.     The Rigveda: A Historical Analysis, , Shrikant Talageri

(ಈ ಲೇಖನವು ಋಗ್ವೇದದಲ್ಲಿ ಬರುವ ಸೋಮನ ಕುರಿತಾದ ಮೂರನೆಯ ಲೇಖನ. ನೀವು ಮೊದಲ ಮತ್ತು ಎರಡನೆಯ ಲೇಖನಗಳನ್ನು ಇಲ್ಲಿ ಓದಬಹುದು.)

 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply