close logo

ಋಗ್ವೇದದಲ್ಲಿ ವರುಣ

ಋಗ್ವೇದದ ಅತಿ ಪುರಾತನ ಮಂಡಲಗಳಲ್ಲಿ ಉಲ್ಲೇಖಗೊಳ್ಳುವ ವರುಣನ ಸ್ತುತಿಗಳು ಅವೆಸ್ತಾದ ಗಾಥೆಗಳಲ್ಲೂ, ಭೃಗು ಮಹರ್ಷಿ ಮತ್ತು ಅವರ ಸಂತತಿಯ ಋಕ್ಕುಗಳಲ್ಲೂ ಕಾಣಬರುತ್ತವೆ. ಋಗ್ವೇದದಲ್ಲಿ ವರುಣನು ಬಹಳ ಹಿಂದಿನ, ಜಗತ್ತನ್ನೇ (ವರ್) ಆವರಿಸಿರುವ ದೇವತೆ; ಇಂದ್ರನಿಗೂ ಹಳೆಯ ತಲೆಮಾರಿನ ದೇವತೆ. ವರುಣನ ಉಲ್ಲೇಖಗಳು ಋಗ್ವೇದದಲ್ಲಿ ಮಾತ್ರವಲ್ಲ, ಯಜುರ್ವೇದ, ಅಥರ್ವವೇದ, ಮತ್ತು ಬ್ರಾಹ್ಮಣಗಳಲ್ಲೂ ಕಾಣಸಿಗುತ್ತವೆ. ಹಾಗೆ ನೋಡಿದರೆ, ವರುಣನು ಋಗ್ವೇದಕ್ಕೂ ಪೂರ್ವದವನು; ವರುಣನು ಸೃಷ್ಟಿಯ ಆದಿಯಲ್ಲಿ ಸ್ವತಃ ಪ್ರಕಟಗೊಂಡವನು ಎಂದು ಅವನನ್ನು ಸ್ತುತಿಸಲಾಗಿದೆ.

ಋಗ್ವೇದದ ಅತಿ ಹಳೆಯ ದೇವತೆಗಳಲ್ಲಿ ಒಬ್ಬನಾದ ವರುಣನನ್ನು ಹಲವಾರು ವಿಶೇಷಣಗಳಿಂದ ಕರೆಯಲಾಗುತ್ತದೆ; ವರುಣನು ದೇವತೆಗಳ ರಾಜ, ಪ್ರಪಂಚದ ಎಲ್ಲೆಡೆ ವ್ಯಾಪಿಸಿರುವ ಸಾರ್ವಭೌಮ; ಆದಿತ್ಯರಲ್ಲಿ ಉತ್ತಮೋತ್ತಮ; ಆಕಾಶದ ಒಡೆಯ; ಬೆಳಕಿನ ದೇವತೆ; ಋತ-ನಿಯಮಗಳ ಅಧಿಪತಿ; ಧರ್ಮವನ್ನು ಎತ್ತಿಹಿಡಿಯುವವನು; ಜೀವಿಗಳ ತಪ್ಪೊಪ್ಪುಗಳನ್ನು ನಿರ್ಣಯಿಸುವ, ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸುವ/ಕ್ಷಮಿಸುವ ಕರುಣಾಮಯಿ; ಸಾವಿರ ಔಷಧಿಗಳ ವೈದ್ಯ; ಸರ್ವವ್ಯಾಪಿ ಮತ್ತು ಸರ್ವಜ್ಞ, ಅಪಾರ ಜ್ಞಾನದ ಗಣಿ; ಕವಿ, ಋಷಿ; ಅನುಪಮ ಬುದ್ಧಿವಂತ; ದೈವಿಕ/ನಿಗೂಢ ಮಾಯಾ ಶಕ್ತಿಇರುವವನು; ನಿಯಮ-ವಿಧಿಗಳ ನಿಯಂತ್ರಕ; ಉದಕಗಳ ರಾಜ; ಮೋಡ, ಸಮುದ್ರ, ನದಿ, ಮತ್ತು ನೀರಿನ ರಾಜ.

ಋಗ್ವೇದದಲ್ಲಿ ವರುಣನ ಮಹತ್ವವನ್ನು ಅವನನ್ನು (ಮಾತ್ರ) ಕುರಿತು ರಚಿತವಾದ ಸೂಕ್ತಗಳ ಸಂಖ್ಯೆಯನ್ನು ನೋಡಿ ಅರಿಯಲಾರೆವು. ಮಂತ್ರಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ವರುಣನು ಮೂರನೆಯ ಸ್ಥಾನಕ್ಕೆ ಇಳಿಯುತ್ತಾನೆ. ವರುಣನನ್ನು ಮಾತ್ರ ಸ್ತುತಿಸುವ ಸೂಕ್ತಗಳು 12. ಮಿತ್ರನನ್ನು ಸದಾ ವರುಣನೊಡನೆ ಜೊತೆಮಾಡಿ ಸ್ತುತಿಸುತ್ತಾರೆ: ಮಿತ್ರ-ವರುಣರನ್ನು ಒಟ್ಟಾಗಿ ಸ್ತುತಿಸುವ ಸೂಕ್ತಗಳು 24. ಸಂಖ್ಯಾವಾರು ವಿಶ್ಲೇಷಣೆಗೆ ಒಳಪಡಿಸಿದರೆ, ವರುಣನ ಸ್ಥಾನ ಅಶ್ವಿನಿ ದೇವತೆಗಳಿಗಿಂತ ಕೆಳಗೆ, ಮರುತ್ತುಗಳ ಸುಮಾರು ಸಮವಾಗಿ ಇರುತ್ತದೆ.

ಋಗ್ವೇದದಲ್ಲಿ ವರುಣನ ವರ್ಣನೆ

ಋಗ್ವೇದದಲ್ಲಿ ವರುಣನನ್ನು ಸ್ವಲ್ಪ ವಿಭಿನ್ನ ರೀತಿಯಲ್ಲಿ ವರ್ಣಿಸಿದ್ದಾರೆ. ಮೇಲೆ ಹೇಳಿದಂತೆ, ವರುಣನನ್ನು ಬೇರೆ ದೇವತೆಗಳ ಹೋಲಿಕೆಯಲ್ಲಿ ಕೆಲವೇ ಸೂಕ್ತಗಳಲ್ಲಿ ವರ್ಣಿಸಲಾಗಿದೆ. ಸೃಷ್ಟಿಯ ಆದಿಯಲ್ಲೇ  ಅಸ್ತಿತ್ವದಲ್ಲಿದ್ದವನು, ಸೃಷ್ಟಿಯೊಡನೆ ಸ್ವಯಂ ಪ್ರಕಟಗೊಂಡವನು, ಎಂದು ವರ್ಣಿಸಲಾಗಿ, ವೇದಪೂರ್ವ ಯುಗದಲ್ಲಿ ಮೊದಲಾಗುವ ವರುಣನ ಪ್ರಾಧಾನ್ಯತೆಯ ಕಥೆಯು, ತರುವಾಯ ಬರುವ ಮಂಡಲಗಳಲ್ಲಿ ಕ್ರಮೇಣ ಕಡಿಮೆಯಾಗುತ್ತದೆ. ಋಗ್ವೇದದ ಆರಂಭದ ಭಾಗಗಳಲ್ಲಿ ವರುಣನು ಸರ್ವತ್ರ ಅತ್ಯಂತ ಶಕ್ತಿಶಾಲಿಯಾದ ದೇವನು. ಋಗ್ವೇದದ ಪ್ರಕಾರ, ವರುಣನು ಜನ್ಮ/ಸೃಷ್ಟಿಗಳಿಗೆ ಅತೀತನು. ಅವನ ಮಹತ್ವದ ವರ್ಣನೆ ಇತರ ವೇದ, ಬ್ರಾಹ್ಮಣ, ಮತ್ತು ಉಪನಿಷತ್ತುಗಳಲ್ಲಿ ಕೂಡ ಕಂಡುಬರುತ್ತದೆ.

ವರುಣನು ಆಕಾಶ, ನೀರು, ಬ್ರಹ್ಮಾಂಡದ ಕ್ರಿಯಾ-ವ್ಯಾಪಾರಗಳ, ಮತ್ತು ಪ್ರಪಂಚದ ನೀತಿ-ನಿಯಮಗಳ ನಡಾವಳಿಗಳ ದೇವತೆ.

ವರುಣನ ಮುಖವನ್ನು ಅಗ್ನಿಯ ಮುಖವೆಂದೇ ಹೇಳಲಾಗಿದೆ. ಮಿತ್ರ-ವರುಣರಿಗೆ ಸೂರ್ಯನೇ ಕಣ್ಣು. ವರುಣನು ದೂರದೃಷ್ಟಿಯುಳ್ಳವನು, ಸಹಸ್ರಾಕ್ಷನು. ಮಿತ್ರನೊಡನೆ ಯಾಗಶಾಲೆಯಲ್ಲಿ ಇತರ ದೇವತೆಗಳಂತೆ ದರ್ಭೆಯ ಮೇಲೆ ಕುಳಿತು ವರುಣನು ಸೋಮಪಾನ ಮಾಡುತ್ತಾನೆ. ವರುಣನು ಸುವರ್ಣಮಯವಾದ ನಿಲುವಂಗಿ (ಅಥವಾ, ದ್ರಾಪಿ) ಯನ್ನು ಧರಿಸುತ್ತಾನೆ. ಅವನ ಸಾಧನ-ಸಲಕರಣೆಗಳಲ್ಲಿ ಮುಖ್ಯವಾದುದು ಅವನ ಸೂರ್ಯನಂತೆ ಕಾಂತಿಯುಕ್ತವಾದ ಹೊಳೆಯುವ ರಥ. ಮಿತ್ರಾವರುಣರು ಆಕಾಶದ ಪರಾಕಾಷ್ಠೆಯಲ್ಲಿ ರಥಾರೋಹಣ ಮಾಡುತ್ತಾರೆ.

ಆಕಾಶದ ಮೇಲಿರುವ ಮಿತ್ರಾವರುಣರ ಸುವರ್ಣಮಯವಾದ, ಸಹಸ್ರ ದ್ವಾರಗಳ ವಾಸಗೃಹದಲ್ಲಿ ವರುಣನು ಪ್ರಪಂಚದಲ್ಲಿ ನಡೆಯುವ ವ್ಯಾಪಾರಗಳನ್ನೆಲ್ಲ ವೀಕ್ಷಿಸುತ್ತಾನೆ. ಮಿತ್ರಾವರುಣರ ದೃಢವಾದ ಆಸನವು ಎತ್ತರವಾಗಿ ಸಹಸ್ರ ಸ್ಥಂಭಗಳನ್ನು ಆಧರಿಸಿದೆ. ಸರ್ವದರ್ಶಿಯಾದ ಸೂರ್ಯನು ಮನುಷ್ಯರ ಕೆಲಸಗಳ ವರದಿ ಸಲ್ಲಿಸಲು ಅವರ ಮನೆಗೆ ಹೋಗುತ್ತಾನೆ.

ಬುದ್ಧಿವಂತರಾದ ಮಿತ್ರಾವರುಣರ ಗೂಢಚಾರರು ಸ್ವರ್ಗ-ಭೂಲೋಕಗಳನ್ನು ನೋಡಿ, ಪ್ರಪಂಚದ ವಿದ್ಯಮಾನಗಳನ್ನು ತಿಳಿಸುತ್ತಾರೆ. ಇಂದ್ರನಂತೆ, ಮಿತ್ರಾವರುಣರಿಗೂ ಸಾಮ್ರಾಟ್ ಎಂಬ ವಿಶೇಷಣವನ್ನು ಉಪಯೋಗಿಸುತ್ತಾರೆ.

ಈಗ, ವಿಭಿನ್ನವಾದ ವಿಶೇಷಣಗಳನ್ನು ನೋಡೋಣ. ಮಿತ್ರಾವರುಣರಿಗೆ ಕ್ಷತ್ರ ಮತ್ತು ಅಸುರ ಎಂಬ ಅಭಿದಾನಗಳಿವೆ. (ಇತರ ದೇವತೆಗಳಿಗೆ ಕೂಡ ಈ ಹೆಸರುಗಳು ಕೆಲವು ಬಾರಿ ಸಲ್ಲುತ್ತವೆ; ಆದರೆ, ಇವರಿಗೆ ಇವು ಹೆಚ್ಚಾಗಿ ಅನ್ವಯಿಸುತ್ತವೆ.)

ಶಕ್ತಿಯನ್ನು ‘ಮಾಯಾ’ ಎಂದು ವರ್ಣಿಸುವಾಗ, ದೇವತೆಗಳಿಗಿರುವ ಶಕ್ತಿ ಒಳ್ಳೆಯದು ಮಾಡಲು, ರಾಕ್ಷಸರಿಗೆ ಅನ್ವಯಿಸಿದಾಗ ಕೆಟ್ಟದ್ದನ್ನು ಮಾಡುವ ನಿಗೂಢ ಶಕ್ತಿ ಎಂತಲೂ ಉಪಯೋಗಿಸುತ್ತಾರೆ. ಮಿತ್ರಾವರುಣರು ತಮ್ಮ ಮಾಯೆಯಿಂದ ಉಷಸ್ಸನ್ನು ಕಳುಹಿಸುತ್ತಾರೆ; ಸೂರ್ಯನನ್ನು ಅಂತರಿಕ್ಷವನ್ನು ದಾಟುವಂತೆ ಮಾಡಿ, ಅವನನ್ನು ಮಳೆಯ ಮೇಘಗಳಿಂದ ಮಸಕಾಗುವಂತೆ ಮಾಡಿದಾಗ, ಮಧು ಮಿಶ್ರಿತವಾದ ಸಿಹಿ ಹನಿಗಳು ಆಕಾಶದಿಂದ ಮಳೆಯಾಗಿ ಹನಿಯುತ್ತವೆ.

ಅಂತರಿಕ್ಷದ ರಾಜ: ದ್ಯೌಃ ಪಿತಾ

ಪೃಥ್ವಿಯನ್ನು ತಾಯಿಯೆಂದು, ದ್ಯೌಃ ಎಂದರೆ ಅಂತರಿಕ್ಷವನ್ನು ತಂದೆಯೆಂದು ಕರೆಯುವುದು ಋಗ್ವೇದದಲ್ಲಿ ಮಾತ್ರವಲ್ಲ, ಹಲವಾರು ಪರಂಪರೆಗಳ ರೂಢಿ.

ತನ್ನೋ ವಾತೋ ಮಯೋಭು ವಾತು ಭೇಷಜಂ ತನ್ಮಾತಾ ಪೃಥಿವೀ ತತ್ಪಿತಾ ದ್ಯೌಃ
(ಋ.ಸಂ.1.89.4)

ದ್ಯೌಃ ಮತ್ತು ಪೃಥ್ವಿ ಅಥವಾ ದ್ಯಾವಾ-ಪೃಥ್ವಿ ಅಂತರಿಕ್ಷ ಮತ್ತು ಭೂಮಿಗಳ ಸಂಗಮದ ಸಂಕೇತ. ಇವರು ಜಗತ್ತಿಗೇ ತಾಯಿ-ತಂದೆ. ಎಲ್ಲ ಜೀವಿಗಳನ್ನೂ ಪಾಲಿಸಿ ಅವರನ್ನು ರಕ್ಷಣೆ ನೀಡುತ್ತಾರೆ. ಮೊದಲಿನ ಋಕ್ಕುಗಳಲ್ಲಿ ದ್ಯೌಃ ಅಂತರಿಕ್ಷದ ರಾಜ, ಕ್ರಮೇಣ ದ್ಯೌಃ ಅಂದರೆ, ಆಕಾಶ, ಅಂತರಿಕ್ಷ ಎಂಬ ಅರ್ಥವೇ ಪ್ರಧಾನವಾಗಿ, ನಂತರದ ಋಕ್ಕುಗಳಲ್ಲಿ ವರುಣನಿಗೆ ಅಂತರಿಕ್ಷದ ಒಡೆಯನೆಂಬ ಅಭಿದಾನ ಬಂದಿತು. ಇನ್ನೂ ನಂತರದ ಋಕ್ಕುಗಳಲ್ಲಿ, ಇಂದ್ರನು ಅಂತರಿಕ್ಷದ ಪ್ರಭುವಾದನು. ಮಾತ್ರವಲ್ಲ, ಕಾಲಕ್ರಮೇಣ, ಪೃಥ್ವಿಗೆ ಭೂಮಿ-ತಾಯಿ, ಜೀವದಾಯಿತ್ವದ (ಮಾತುಷ್ಪದೇ ಪರಮೇ) ಮಾತೃತತ್ವದ ಮಹತ್ವ ನೀಡಲಾಯಿತು.

ಉದಕಗಳ ರಾಜ

ಮಿತ್ರಾವರುಣರು ನದಿಗಳ ಒಡೆಯರು.

ಆ ರಾಜಾನಾ ಮಹ ರುತಸ್ಯ ಗೋಪಾ ಸಿಂಧುಪತೀ ಕ್ಷತ್ರಿಯಾ ಯಾತಮರ್ವಾಕ್
ಇಳಾಂ ನೋ ಮಿತ್ರಾವರುಣೋತ ವೃಷ್ಟಿಮವ ದಿವ ಇನ್ವತಂ ಜೀರದಾನೂ ।।
(ಋ.ಸಂ.7.64.2) 

[ಸರ್ವರಿಗೂ ಪ್ರಭುವಾದವರೂ, ಮಹನೀಯರೂ, ಉದಕಕ್ಕೂ, ಯಜ್ಞಕ್ಕೂ ರಕ್ಷಕರೂ, ನದಿಗಳ ಪಾಲಕರೂ, ಶಕ್ತಿಯುತರೂ ಆದ ಎಲೈ ಮಿತ್ರಾವರುಣರೇ, ನಮಗೆ ಅಭಿಮುಖವಾಗಿ ಬನ್ನಿರಿ. ಬೇಗನೆ ನಮ್ಮ ಇಷ್ಟಾರ್ಥಗಳನ್ನು ಪೂರೈಸುವ ನೀವು ನಮಗೆ ಅನ್ನವನ್ನೂ, ಪುಷ್ಟಿಪ್ರದವಾದ ವೃಷ್ಟಿಯನ್ನೂ ಅಂತರಿಕ್ಷದಿಂದ ಅಧೋಮುಖವಾಗಿ ಬೀಳುವಂತೆ ಮಾಡಿರಿ.]

ವರುಣನು ಉದಕಗಳನ್ನು ಕ್ರಮಪಡಿಸುವವನು; ನದಿಗಳನ್ನು ಹರಿಯುವಂತೆ ಮಾಡುವವನು. ವರುಣನ ಅಪ್ಪಣೆಯ ಮೇರೆಗೆ ನದಿಗಳು ಸತತವಾಗಿ ಪ್ರವಹಿಸುತ್ತವೆ.

ಪ್ರ ಸೀಮಾದಿತ್ಯೋ ಅಸೃಜತ್ವಿ ಧರ್ತಾ ಋತಂ ಸಿಂಧವೋ ವರುಣಸ್ಯ ಯಂತಿ
ನ ಶ್ರಾಮ್ಯಂತಿ ನ ವಿ ಮುಂಚಂತ್ಯೇತೇ ವಯೋ ನ ಪಪ್ತೂ ರಘುಯಾ ಪರಿಜ್ಮನ್  ।।
(ಋ.ಸಂ.2.28.4) 

[ಆದಿತ್ಯನಾದ ವರುಣನು ಈ ಉದಕವನ್ನು ಸೃಷ್ಟಿಸಿ, ತನ್ನ ಆಜ್ಞೆಯಿಂದ ನದಿಗಳು ನಿರಂತರವಾಗಿ ಆಯಾಸವಿಲ್ಲದೆ, ಪಕ್ಷಿಗಳಂತೆ ವೇಗಾಗಾಮಿಗಳಾಗಿ ಪ್ರವಹಿಸುವಂತೆ ಮಾಡುತ್ತಾನೆ.]

ಇಮಾಮೂ ನು ಕವಿತಮಸ್ಯ ಮಾಯಾಂ ಮಹೀಂ ದೇವಸ್ಯ ನಕಿರಾ ದಧರ್ಷ
ಏಕಂ ಯದುದ್ನಾ ನ ಪೃಣಂತ್ಯೇನೀರಾಸಿಂಚಂತೀರವನಯಃ ಸಮುದ್ರಂ  ।।
(ಋ.ಸಂ.5.85.6) 

[ನದಿಗಳು ವೇಗವಾಗಿ ಸಮುದ್ರದೊಳಗೆ ನೀರು ತಂದು ಸುರಿಯುತ್ತಿದ್ದರೂ ಅವು ತುಂಬದಿರುವುದು ವರುಣನ ನಿಗೂಢ ಮಹಿಮೆಯಿಂದಲೇ.]

ನೀಚೀನಬಾರಂ ವರುಣಃ ಕಬಂಧಂ ಪ್ರ ಸಸರ್ಜ ರೋದಸೀ ಅಂತರಿಕ್ಷಮ್
ತೇನ ವಿಶ್ವಸ್ಯ ಭುವನಸ್ಯ ರಾಜಾ ಯವಂ ನ ವೃಷ್ಟಿರ್ವ್ಯುನತ್ತಿ ಭೂಮ ।।
(ಋ.ಸಂ.5.85.3)

[ವರುಣನು ದ್ಯಾವಾಪೃಥಿವಿ, ಅಂತರಿಕ್ಷಗಳಿಗಾಗಿ ಮೇಘವನ್ನು ಅಧೋಮುಖವಾಗಿ ನೀರನ್ನು ಸುರಿಸುವಂತೆ ಮಾಡಿದನು. ವೃಷ್ಟಿಯೂ ಯವಧಾನ್ಯವನ್ನು ಸಂಪೂರ್ಣವಾಗಿ ತೋಯಿಸುವಂತೆ, ಸಮಸ್ತ ಪ್ರಪಂಚಕ್ಕೂ ವರುಣನು ಉದಕದಿಂದ ಭೂಮಿಯನ್ನು ತೋಯಿಸುತ್ತಾನೆ.]

ಉನತ್ತಿ ಭೂಮಿಂ ಪೃಥಿವೀಮುತ ದ್ಯಾಮ್ ಯಥಾ ದುಗ್ಧಂ ವರುಣೋ ವಷ್ಟ್ಯಾದಿತ್
ಸಮಭ್ರೇಣ ವಸತ ಪರ್ವತಾಸಸ್ತವಿಷೀಯಂತಃ ಶ್ರಥಯಂತ ವೀರಾಃ ।।
(ಋ.ಸಂ.5.85.4)

[ವರುಣನು ಮಳೆಸುರಿಸಬೇಕೆಂದು ಇಚ್ಛಿಸಿದೊಡನೆಯೇ ಪೃಥ್ವಿ, ಅಂತರಿಕ್ಷ, ದ್ಯುಲೋಕಗಳನ್ನು ಉದಕದಿಂದ ತೋಯಿಸುತ್ತಾನೆ. ಒಡನೆಯೇ, ಪರ್ವತಗಳು ಮೇಘಗಳಿಂದ ತಮ್ಮ ಶಿಖರಗಳನ್ನು ಆಚ್ಛಾದಿಸಿಕೊಳ್ಳುತ್ತವೆ. ಬಲದಿಂದ ಉತ್ಸಾಹಗೊಂಡ ಮರುತ್ತುಗಳು ಮೇಘಗಳನ್ನು ಚಲಿಸುವಂತೆ ಮಾಡುತ್ತವೆ.]

ಹೀಗೆ, ವರುಣನು ಸಾಗರಗಳ ಒಡೆಯ. ಪರ್ವತಗಳೆಲ್ಲ ಮೋಡದಿಂದ ಆವೃತವಾದಾಗ, ಸ್ವರ್ಗ, ಭೂಮಿ, ಆಕಾಶಗಳಿಗೆ ನೀರೆರೆದು ಭೂಮಿಯನ್ನೆಲ್ಲ ತೇವ ಮಾಡುವವನು ವರುಣನು. ಸೋಮನಿಗೆ ಪರ್ವತಗಳ ಜೊತೆ ಇರುವಷ್ಟೇ ಗಾಢವಾದ ಸಂಬಂಧ, ವರುಣನಿಗೆ ನೀರಿನೊಡನೆ ಇದೆ.

ವರುಣನ ಆಧ್ಯಾತ್ಮಿಕ ಆಯಾಮ

ವರುಣನು ನೀರಿನ ಅಧಿಪತಿ. ಋಗ್ವೇದದಲ್ಲಿ ಆಪಃ ಅಥವಾ ಸಲಿಲಃ ಎಂಬ ಪದಗಳ ಒಳ ಅರ್ಥ ಬಹಳ ಆಳವಾದದ್ದು. ಸಲಿಲವೆಂದರೆ, ಮೂರ್ತಾಮೂರ್ತತೆಗೆ, ವ್ಯಕ್ತ-ಅವ್ಯಕ್ತಗಳ, ನಡುವಿನ ಅನುಭೂತಿ. ಈ ಗಹನವಾದ, ಗಭೀರವಾದ ಆಪವು ತನ್ನ ಒಡಲಿನಲ್ಲಿ ಅಪ್ರಕಟಿತವಾದ ಜಗತ್ತನ್ನೇ ಹಿಡಿದಿದೆ. ಜಗತ್ತು ಪ್ರಕಟಗೊಳ್ಳುವಾಗ, ಮೊದಲು ನೀರು ಸೃಷ್ಟಿಯಾಯಿತು; ಅಂದರೆ, ನೀರೇ ಜಗತ್ತಿನ ಸೃಷ್ಟಿಯ ಪ್ರತೀಕ. ಮಾತ್ರವಲ್ಲ, ನೀರು ಗತಿ/ಗಮನದ, ಕರ್ಮದ ಸಂಕೇತ.

ವರುಣನು ಜಗತ್ತನ್ನು ಆವರಿಸಿದ ನೀರಿನ ಪ್ರತೀಕ. [ವಾರ್, ಆವರಣ] ವರುಣನು ಸರ್ವವ್ಯಾಪಿ; ಗೋಚರ ಮತ್ತು ಅಗೋಚರ ಜಗತ್ತಿನ ಅಧಿಪತಿ. ನೀರಿನ ಅಧಿಪತಿಯಾದ ವರುಣನು ಪ್ರಕೃತಿಯ ಸಂಕೇತ.

ವರುಣನು ತನ್ನ ಇಚ್ಛಾಮಾತ್ರದಿಂದ ತನ್ನ ಅಸಾಧಾರಣ ಬುದ್ಧಿ, ‘ಮಾಯೆ’ಗಳ ಮೂಲಕ ನಿರಾಕಾರ ವಸ್ತುವಿನಿಂದ ಮೂರ್ತ ರೂಪವನ್ನು ಸಾಕಾರಗೊಳಿಸುತ್ತಾನೆ. ಈ ಅರ್ಥದಲ್ಲಿ ವರುಣನು ಸೃಷ್ಟಿಕರ್ತ; ಜಗತ್ತು ಅವನ ಮನಸ್ಸಿನಿಂದ ಹುಟ್ಟಿದೆ; ಹೀಗೆ, ಅವನು ಸೃಷ್ಟಿಯ ಸಂಕೇತ.

ಆನಂದ ಕುಮಾರಸ್ವಾಮಿಯವರು ವರುಣನನ್ನು ಪ್ರಕೃತಿಯ ಸಂಕೇತ, ಎನ್ನುತ್ತಾರೆ.

ಶಾಸನಗಳ ಒಡೆಯ

ವರುಣನ ಶಾಸನಗಳು ಎಷ್ಟು ದೃಢವಾಗಿವೆ, ಎಂದರೆ, ಅವನಿಗೆ ಧೃತವ್ರತ ಎಂಬ ಅಭಿದಾನವಿದೆ. ಮಿತ್ರಾವರುಣರು ಋತ, ಸತ್ಯ, ಮತ್ತು ನ್ಯಾಯಗಳ ನಿಯಾಮಕರು (ಋ.ಸಂ.1.2.8)

ಇಮೇ ಚೇತಾರೋ ಅನೃತಸ್ಯ ಭೂರೇರ್ಮಿತ್ರೋ ಆರ್ಯಮಾ ವರುಣೋ ಹಿ ಸಂತಿ
ಇಮ ಋತಸ್ಯ ವಾವೃಧುರ್ದುರೋಣೇ  ಶಗ್ಮಾ ಸಃ ಪುತ್ರಾ ಅದಿತೇರದಬ್ಧಾಃ  ।।
(ಋ.ಸಂ.7.60.5) 

[ಮಿತ್ರಾವರುಣರೂ, ಆರ್ಯಮನೂ ಅಧಿಕವಾದ ಪಾಪಗಳನ್ನು ನಾಶಮಾಡುವ ದೇವತೆಗಳು. ಸುಖಕಾರಕರೂ, ಅದಿತಿಪುತ್ರರೂ, ಅಹಿಂಸಿತರೂ ಆದ ಈ ದೇವತೆಗಳು ಯಜ್ಞದ ಹವಿಸ್ಸಿನಿಂದ ಪುಷ್ಟಿಗೊಳ್ಳುತ್ತಾರೆ.]

ಋತಾವಾನ ಋತಜಾತಾ ಋತಾವೃಧೋ ಘೋರಾಸೋ ಅನೃತದ್ವಿಷಃ
ತೇಷಾಮ್ ವಃ ಸುಮ್ನೇ ಸುಚ್ಚರ್ದಿಷ್ಟಮೇ  ನರಃ ಸ್ಯಾಮ ಯೇ ಚ ಸೂರಯಃ ।।
(ಋ.ಸಂ.7.66.13) 

[ಎಲೈ ಮಿತ್ರಾವರುಣರೇ, ಯಜ್ಞ ನಿರ್ವಾಹಕರಾಗಿ, ನೀವು ವೃಷ್ಟಿರೂಪವಾದ ಉದಕವನ್ನು ಜನರಿಗೆ ದಯಪಾಲಿಸುವವರು, ಯಜ್ಞಾರ್ಥವಾಗಿ, ಉದಕಾರ್ಥವಾಗಿಯೇ ಉತ್ಪನ್ನರಾದವರು, ಯಜ್ಞವನ್ನು, ಉದಕವನ್ನು ವೃದ್ಧಿಯಾಗುವಂತೆ ಮಾಡುವವರು. ಶತ್ರುಗಳ ವಿಷಯದಲ್ಲಿ ಕ್ರೂರ ಸ್ವಭಾವವುಳ್ಳವರು. ಅನೃತವಾದಿಗಳನ್ನು, ಯಜ್ಞ ಮಾಡದವರನ್ನು ಶಿಕ್ಷಿಸುವವರು. ನಿಮ್ಮನ್ನು ಸ್ತೋತ್ರ ಮಾಡುವವರು ನಿಮ್ಮ ಅನುಗ್ರಹಕ್ಕೆ ಪಾತ್ರರಾಗಲಿ.]

ವರುಣನನ್ನು ‘ಋತಸ್ಯ ಗೋಪಃ,’ ‘ಋತಾವನ್’ (ನಿಯಮಪಾಲಕ) ಎನ್ನುತ್ತಾರೆ. ನಿಯಮಗಳನ್ನು ಉಲ್ಲಂಘಿಸುವವರಿಗೆ ವರುಣನು ಕ್ರೂರವಾದ ಶಿಕ್ಷೆಗಳನ್ನು ವಿಧಿಸುತ್ತಾನೆ. ಮಿತ್ರಾವರುಣರು ಅನೃತವನ್ನು ದ್ವೇಷಿಸಿ, ಶಿಕ್ಷಿಸುತ್ತಾನೆ.

ವರುಣನು ಭೌತಿಕ, ನೈತಿಕ ವಿಧಿಗಳ ನಿಯಾಮಕನು. ಪ್ರಾಕೃತಿಕ ನಿಯಮಗಳನ್ನು ವಿಧಿಸುವವನು. ತೈತ್ತರೀಯ ಸಂಹಿತೆಯಲ್ಲಿ ಮಿತ್ರನು ಹಗಲನ್ನೂ ವರುಣನು ರಾತ್ರಿಯನ್ನೂ ಸೃಜಿಸಿದನು, ಹೇಳಿದೆ. ಶತಪಥ ಬ್ರಾಹ್ಮಣದಲ್ಲಿ ಭೂಲೋಕವು ಮಿತ್ರನಿಗೂ ಸ್ವರ್ಗಲೋಕವು ವರುಣನಿಗೂ ಸೇರಿದೆ, ಎಂದು ಹೇಳಿದೆ.

ವರುಣನಲ್ಲಿ ನೂರುಗಟ್ಟಲೆ, ಸಾವಿರಗಟ್ಟಲೆ ಔಷಧಿಗಳಿವೆ. ಅವನು ಮೃತ್ಯುವನ್ನು ದೂರಮಾಡಬಲ್ಲನು; ಪ್ರಾಣಾಪಹಾರ ಮಾಡಬಲ್ಲನು, ಜೀವದಾನವನ್ನೂ ಮಾಡಬಲ್ಲನು.

ವರುಣನು ನಿತ್ಯತ್ವವನ್ನು ಸದಾ ರಕ್ಷಿಸುವವನು.

ಋತ

ವರುಣನನ್ನು ಮತ್ತೆ ಮತ್ತೆ ‘ಋತ,’ ನಿಯಮ, ಶಾಸನಗಳ ಪಾಲಕ, ಇತ್ಯಾದಿಯಾಗಿ ವರ್ಣಿಸುತ್ತಾರೆ. ಹಾಗಾದರೆ, ಋತವೆಂದರೆ, ಏನು?

ಋತವೆಂದರೆ, ಪ್ರಾಕೃತಿಕ, ನೈಸರ್ಗಿಕ ಸ್ವಯಂ-ನಿಯಂತ್ರಿತವಾದ ನಿಯಮಗಳ ಒಂದು ಚೌಕಟ್ಟು. ಈ ಚೌಕಟ್ಟಿನಲ್ಲಿ ಎಲ್ಲ ಜೀವಿಗಳೂ ಇದ್ದು, ತಮ್ಮದೇ ಸ್ವಭಾವದ ಅನುಗುಣವಾಗಿ ನಿತ್ಯ-ಕಾರ್ಯಗಳನ್ನು ನಿರ್ವಹಿಸುತ್ತಾರೆ. ಋತ, ಎನ್ನುವುದು ತುಂಬಾ ಗಂಭೀರವಾದ ಪರಿಕಲ್ಪನೆ. ನೈಸರ್ಗಿಕ ನಿಯಮ-ಸಾಮರಸ್ಯಗಳನ್ನು ಅನೂಚಾನವಾಗಿ ನಡೆಸಿಕೊಂಡು ಹೋಗಲು, ಎಲ್ಲ ಜೀವಿಗಳೂ ಪ್ರಕೃತಿಯ ಪವಿತ್ರತೆಯನ್ನು ಗೌರವಿಸಿ, ತಮ್ಮ ಜೀವನದ ನಡಾವಳಿಯನ್ನು ಈ ಚೌಕಟ್ಟಿನೊಳಗೆ ಅಳವಡಿಸಿ ಕೊಳ್ಳಬೇಕು. ಋತವೆಂದರೆ ಎಲ್ಲ ಜೀವಿಗಳೂ ತಮ್ಮ ಸ್ವಭಾವದ ಅನುಸಾರ ಜೀವಿಸಬೇಕು; ಅದೇ ರೀತಿ, ಸುತ್ತಲ ಪರಿಸರ ವ್ಯವಸ್ಥೆಗಳ ಸಮಗ್ರತೆಯ ಚೌಕಟ್ಟಿನಲ್ಲಿ ಜೀವಿಸಬೇಕು. ಋತ-ತತ್ವವು ನಮ್ಮ ಪ್ರಾಕೃತಿಕ ಪರಿಸರದ ಸಮಗ್ರತೆಯನ್ನು, ಮತ್ತು ಪ್ರಪಂಚದ ಎಲ್ಲ ಜೀವಗಳೊಂದಿಗಿನ ನಮ್ಮ ಏಕತೆಯನ್ನು ಗುರುತಿಸುತ್ತದೆ. ಇದು ಮನುಷ್ಯನನ್ನು ಪ್ರಕೃತಿ ಮತ್ತು ಅವನ  ಶ್ರದ್ಧಾಕೇಂದ್ರಗಳ (ಅವನು ಪೂಜಿಸಿವ ದೈವ) ಜೊತೆಗೆ ಜೋಡಿಸುವ ಒಂದು ಚೌಕಟ್ಟು, ಹೀಗೆ ಎಲ್ಲಾ ಜೀವಗಳನ್ನು ವ್ಯಾಪಿಸುವ ಮತ್ತು ರಕ್ಷಿಸುವ ಧರ್ಮ, ನಿಯಮ. ಋತವೆಂಬ ಪರಿಕಲ್ಪನೆ, ಹೀಗೆ ಇಡೀ ಬ್ರಹ್ಮಾಂಡದ ಭೌತಿಕ ಕ್ರಮವು ಒಂದು ನೈತಿಕ ಚೌಕಟ್ಟಿನಲ್ಲಿ ಹೊಂದಿಸಲಾಗಿದೆ, ಎಂಬ ತತ್ವವನ್ನು ಇದು ಪ್ರತಿಪಾದಿಸುತ್ತದೆ.

ಈ ನಿಯಮವನ್ನು ಪಾಲಿಸದೆ ಇದ್ದರೆ, ಸಮಾಜದ, ಅಷ್ಟೇಕೆ ಪ್ರಾಕೃತಿಕ ವ್ಯವಸ್ಥೆಯೇ ಅಲ್ಲೋಲ-ಕಲ್ಲೋಲವಾಗುತ್ತದೆ. ವಿಚ್ಛಿದ್ರಕಾರಕ ಶಕ್ತಿಗಳು ಹುಟ್ಟಿಕೊಳ್ಳುತ್ತವೆ. ಅಪ್ರಾಮಾಣಿಕತೆ, ಸುಳ್ಳು ಮತ್ತು ಕಲ್ಮಶಗಳು ಜೀವನದಲ್ಲಿ ಅಡಿಯಿಡುತ್ತವೆ.

ಹಾಗಾದರೆ, ‘ಪಾಪ’ ಎಂದರೆ ಏನು? ಪಾಪವೆಂದರೆ, ಧರ್ಮಕ್ಕೆ, ಋತಕ್ಕೆ ವಿರುದ್ಧವಾದ ಪರಿಕಲ್ಪನೆ. ಪಾಪವೆಂದರೆ, ಯಾವುದೋ ಕ್ಷಣಿಕವಾದ, ಅಥವಾ ತಾತ್ಕಾಲಿಕವಾದ ಲಾಭವನ್ನು ಗಳಿಸಲು ನೈಸರ್ಗಿಕ ನಿಯಮವನ್ನು ಉಲ್ಲಂಘಿಸಿ ಮಾಡಿದ ಒಂದು ಕ್ರಿಯೆ. ಪ್ರಕೃತಿಯ ಮತ್ತು ಜೀವಿಗಳ ನಡುವೆ  ಇರುವ ಸಾಮರಸ್ಯವನ್ನು ಘಾಸಿಮಾಡುವುದು ಶಿಕ್ಷಾರ್ಹವಾದ ಪಾಪ. ಜೀವ-ಸಹಜ ದೌರ್ಬಲ್ಯಗಳಿಂದಾಗಿ ಪಾಪ ಉದ್ಭವಿಸುತ್ತದೆ. ದೇವಾಸುರ ಯುದ್ಧವೆಂದರೆ, ಇದೇ ಇರಬಹುದೇ?

ಪಾಪವೆಂಬುದು ಅನೃತ, ಅಥವಾ ಋತಕ್ಕೆ ವಿರುದ್ಧವಾದ ಪರಿಕಲ್ಪನೆ. ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಿ, ಪ್ರಕೃತಿಯ ಸಾಮರಸ್ಯಕ್ಕೆ ಭಂಗ ತರುವುದು ಋಜುಮಾರ್ಗದಿಂದ ನಿರ್ಗಮಿಸಿದಂತೆ. ಅದು ಅವ್ಯವಸ್ಥೆಯನ್ನು ಉಂಟುಮಾಡುತ್ತದೆ. ಅನೃತವೆಂದರೆ, ಪ್ರತಿಷ್ಠಾಪಿಸಿರುವ ನೈತಿಕ ಕ್ರಮದ ನಿರಾಕರಣೆ. ಇದು ಪ್ರಕೃತಿ ವಿರೋಧಿಯಾದ ಅಸ್ವಾಭಾವಿಕ ಪ್ರಕ್ರಿಯೆ; ವರುಣನ ನಿಯಮಗಳ ಉಲ್ಲಂಘನೆ. ವರುಣನು ಅನೃತದ ವಿರೋಧಿ.

ತೀರಿಸಲಾಗದ ಸಾಲಕ್ಕೆ ಪಾಪವನ್ನು ಹೋಲಿಸುತ್ತಾರೆ. ಪ್ರಾಯಶ್ಚಿತ್ತವೆಂದರೆ, ತಮ್ಮ ಪಾಪವನ್ನು ಗುರುತಿಸಿ, ಒಪ್ಪಿ, ಇನ್ನೊಮ್ಮೆ ಇದೇ ತಪ್ಪನ್ನು ಮಾಡಬಾರದು ಎಂದು ಮಾಡುವ ನಿರ್ಧಾರ.

ಅಸುರ

ವರುಣನನ್ನು ಅಸುರನೆಂದು ವರ್ಣಿಸಿದ್ದಾರೆ. ಆದರೆ, ಈ ಅಸುರನೆಂಬ ಅಭಿದಾನವೂ ಕೌತುಕವನ್ನು ಉಂಟುಮಾಡಿತ್ತದೆ. ಈ ಕೆಳಗಿನ ಸೂಕ್ತದಲ್ಲಿ, ಮಿತ್ರಾ-ವರುಣರನ್ನು ಅಸುರರಲ್ಲಿ ಆರ್ಯರೆಂದು ಕರೆದಿದ್ದಾರೆ.

ತಾ ಹಿ ದೇವಾನಾಮಸುರಾ ತಾವರ್ಯಾ ತಾ ನಃ ಕ್ಷಿತೀಃ ಕರತಮೂರ್ಜಯಂತೀಃ ।
ಅಶ್ಯಾಮ ಮಿತ್ರಾವರುಣಾ ವಯಂ ವಾ ದ್ಯಾವಾಚ ಯತ್ರ ಪೀಪಯನ್ನ ಹಾ ಚ ।।
(ಋ.ಸಂ.7.65.2)

ಈ ಋಕ್ಕಿನಲ್ಲಿ ಅಸುರ ಎಂಬ ಶಬ್ದವನ್ನು ಶಕ್ತಿಶಾಲಿ ಎಂಬ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಋಕ್ಕಿನ ಅರ್ಥ ಹೀಗಿದೆ: ಸಮಸ್ತ ದೇವತೆಗಳ ಮಧ್ಯದಲ್ಲಿ ಅಸುರರಾದ (ಶಕ್ತಿಶಾಲಿಗಳಾದ) ಮಿತ್ರಾವರುಣರು ನಮ್ಮ ಮಕ್ಕಳನ್ನು ಪ್ರವರ್ಧಮಾನಕ್ಕೆ ಬರುವಂತೆ ಮಾಡಲಿ; ನಾವು ನಿಮ್ಮನ್ನು ಸಮೀಪವರ್ತಿಗಳಾಗಿ ಇರುವಂತೆ ಆಗಲಿ. ನೀವು ವ್ಯಾಪಿಸಿರುವ ದ್ಯಾವಾ ಪೃಥಿವಿಗಳು ನಮಗೆ ಸಂತೋಷ ತರಲಿ.

ಈ ಸೂಕ್ತವು ಹಳೆಯ ಮಂಡಲಗಳಲ್ಲಿ ಒಂದಾದ ಏಳನೇ ಮಂಡಲದಲ್ಲಿದೆ. ಇದರಲ್ಲಿ ದ್ಯಾವಾ-ಪೃಥ್ವಿಗಳ ಉಲ್ಲೇಖ ಮಾತ್ರವಲ್ಲ, ಅಸುರರು ದುಃಖ ಕಾರಕರು ಎಂಬ ಅರ್ಥದ ಛಾಯೆ ಕೂಡ ಇಲ್ಲ. ಹಾಗೆ ನೋಡಿದರೆ, ಅಸುರರನ್ನು ಶಕ್ತಿಶಾಲಿಗಳೆಂದು ಹೊಗಳುವ ಮಾತಿದೆ. ಅರ್ಥಾತ್, ಇದು ದೇವಾಸುರ ಯುದ್ಧದ ಹಿಂದಿನ ಅಥವಾ ಇನ್ನೂ ನಡೆಯುತ್ತಾ ಇದ್ದಾಗಿನ ಮಾತೇ?

ದೇವಾಸುರರ ಮಧ್ಯೆ ವ್ಯತ್ಯಾಸವು ಒಂದು ಕಾಲದಲ್ಲಿ ಇರಲಿಲ್ಲ. ಆಗ, ಅಸುರನೆಂದು ಕರೆಯಲಾಗುತ್ತಿದ್ದ ವರುಣನಿಗೆ ಇದ್ದ ಸ್ಥಾನಮಾನ-ಗೌರವಗಳು ನಂತರದ ಕಾಲದಲ್ಲಿ ಕಡಿಮೆಯಾಯಿತು, ಎಂದು ಪ್ರತೀತಿ. ತೈತ್ತರೀಯ ಬ್ರಾಹ್ಮಣದಲ್ಲಿ, ದಯಾಪರನಾದ ಮಿತ್ರನು ಕ್ರೂರನಾದ ವರುಣನನ್ನು ಸಮಾಧಾನಪಡಿಸುತ್ತಾನೆ, (ಮಿತ್ರೋ ಹಿ ಕ್ರೂರಂ ವರುಣಂ ಶಾಂತಂ ಕರೋತಿ –ತೈ ಸಂ. 2.1.9.5) ಎಂಬ ಉಲ್ಲೇಖವಿದೆ.

ಇಂದ್ರನು ವರುಣನನ್ನು ದೇವತೆಗಳ ಆಧಿಪತ್ಯದಿಂದ ಸ್ಥಾನಪಲ್ಲಟಗೊಳಿಸಿದನೇ?

ಈ ವಿಚಾರ ಎಷ್ಟೋ ವಿಮರ್ಶಕರ ಮನಸ್ಸಿನಲ್ಲಿ ಬಂದಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಹಲಕೆಲವು ವಾದ-ಪ್ರತಿವಾದಗಳು ಹೀಗಿವೆ.

  • ಮೇಲೆ ಹೇಳಿದಂತೆ, ವರುಣನು ಆಕಾಶ/ಅಂತರಿಕ್ಷದ ಒಡೆತನವನ್ನು ಇಂದ್ರನಿಗೆ ಕಳೆದುಕೊಂಡನು; ಕ್ರಮೇಣ ಮಿತ್ರನ ಜೊತೆಗೆ ಅವನು ತನ್ನ ಪ್ರಭುತ್ವವನ್ನು ಹಂಚಿಕೊಳ್ಳಬೇಕಾಯಿತು; ಇತ್ಯಾದಿ ಊಹೆಗಳ ಸಮಾಧಾನ,  ಬೇರೆ ದೇವತೆಗಳಲ್ಲಿ ಅವನ ಗುಣ, ವ್ಯಕ್ತಿತ್ವಗಳು ಸಮ್ಮಿಳಿತವಾಗಿ, ಅವನ ಪ್ರತ್ಯೇಕತೆ ಮಾಯವಾಯಿತು, ಎಂದಿರಬಹುದು.
  • ಭೃಗು ಸಂತತಿಯ ಋಷಿಗಳು ಅನು-ರಾಜವಂಶದವರ ಪುರೋಹಿತರಾಗಿ, ಅಂಗೀರಸರು ಪುರು-ಭಾರತರ ಪಕ್ಷಪಾತಿಗಳಾದ ನಂತರ ದಶರಾಜ್ಞದಂತಹ ಮಹಾಯುದ್ಧಗಳೇ ನಡೆದು ಹೋದವು. ಅವರ-ಇವರ ದೇವತೆಗಳೂ ಬದಲಾದವು. ಸಿಂಧು ನದಿಯ ಪಶ್ಚಿಮದ ಅಸುರ ದೇವತೆಗಳಲ್ಲಿ ವರುಣನು ಸೇರಿ ಹೋದನು; ಅಂಗೀರಸರು ಇಂದ್ರನನ್ನು ದೇವೇಂದ್ರನನ್ನಾಗಿ ಪ್ರತಿಷ್ಠಾಪಿಸಿದರು.
  • ಇದಕ್ಕೆ ಒಟ್ಟು ಕೊಡುವಂತೆ, ಇನ್ನೊಂದು ಅಭಿಮತ ಹೀಗಿದೆ. ವರುಣನು ನೀರಿನ ರಾಜ. ವೃತ್ರನು ನೀರನ್ನು ಬಂಧಿಸಿದ ಅಸುರ. ಇಂದ್ರನು ವೃತ್ರನನ್ನು ಸೋಲಿಸಿ ಜಲರಾಶಿಯನ್ನು ಬಿಡುಗಡೆ ಮಾಡಿ, ತನ್ನ ಮಹತ್ವವನ್ನೂ, ಆಧಿಪತ್ಯವನ್ನೂ ಸ್ಥಾಪಿಸಿಕೊಂಡನು. ಜೊತೆಗೇ, ವರುಣನ ಪ್ರಾಧಾನ್ಯ ಕೆಳಮುಖವಾಯಿತು.

ಕಡೆಯ ಮಾತು

ಋಗ್ವೇದದಲ್ಲಿ ವರುಣನು ಅತ್ಯಂತ ಮಹತ್ವದ ಸ್ಥಾನ ಹೊಂದಿದ್ದಾನೆ. ಅವನು ನೀರಿನ ಒಡೆಯ, ಇಡೀ ಜಗತ್ತನ್ನು ವ್ಯಾಪಿಸಿದವನು. ಪಾರಮಾರ್ಥಿಕ ದೃಷ್ಟಿಯಲ್ಲಿ ವರುಣನು ಪ್ರಕೃತಿಯ ಸಂಕೇತ. ನಿಯಮ, ವಿಧಿ, ಋತಗಳ ಅಧಿಪತಿ. ಅವನ ಪ್ರತಿ ಸ್ವರೂಪಕ್ಕೂ ಒಂದು ಆಳವಾದ ಅರ್ಥವಿದೆ.

ಆಕರಗಳು-

  1. http://www.vyasaonline.com/rig-veda/
  2. Srikant G Talageri The Rigveda and the Aryan Theory: A Rational Perspective THE FULL OUT-OF-INDIA CASE IN SHORT
  3. Varuna | sreenivasarao’s blogs

(Image credit: soulveda.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply