close logo

ಋಗ್ವೇದದ ಋಷಿಗಳು ಮತ್ತು ನದಿಗಳು

ಮೇಲ್ನೋಟಕ್ಕೆ ಋಗ್ವೇದವು ಹಲವಾರು ದೇವತೆಗಳ ಸ್ತುತಿ ಮಾತ್ರ. ಆದರೆ ಆಳಕ್ಕೆ ಇಳಿದಾಗ ಋಗ್ವೇದದಲ್ಲಿ ಕಲಿಯಬೇಕಾದ ವಿಷಯ ಅಪಾರ. ಋಗ್ವೇದವು ಇತಿಹಾಸ, ಕಾವ್ಯ, ಭೂಗೋಳ, ತತ್ತ್ವಜ್ಞಾನಗಳ ಗಣಿ. ಸನಾತನ ಧರ್ಮದ ಹರಹು ಮತ್ತು ವಿಸ್ತಾರ, ಅದರ ತತ್ತ್ವಜ್ಞಾನದ ತಿರುಳು ಋಗ್ವೇದದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ಹಾಗಿದ್ದರೆ ಇದನ್ನೆಲ್ಲ ದೃಷ್ಟಿಸಿಕೊಂಡ ಸೂಕ್ತಕಾರರು ಯಾರು? ಋಗ್ವೇದದ ಸೂಕ್ತಕಾರರು ಯಾರು ಎಂಬುದೇ ಈ ಲೇಖನದ ಮುಖ್ಯವಸ್ತು.

ಋಗ್ವೇದದ ಋಷಿಗಳು ಎಲ್ಲ ವರ್ಣಗಳಿಂದ ಬಂದವರಾಗಿದ್ದರು. ಎಷ್ಟೋ ಕ್ಷತ್ರಿಯ ಋಷಿಗಳು ಇದ್ದರು. ಉದಾಹರಣೆಗೆ, ವೈವಸ್ವತ ಮನು ಕ್ಷತ್ರಿಯನಾಗಿದ್ದನು. ಮೊದಲು ಕ್ಷತ್ರಿಯನಾದ ವಿಶ್ವಾಮಿತ್ರನು ಕಡೆಗೆ ಬ್ರಹ್ಮರ್ಷಿಯಾದನು. ಭಲಂದನ, ವತ್ಸ, ಮತ್ತು ಸಂಕೀಲ ಎಂಬ ಋಷಿಗಳು ವೈಶ್ಯರು.

ಭಾರತೀಯ ಪರಂಪರೆಯಲ್ಲಿ ಋಷಿಗಳನ್ನು ಮಂತ್ರದ ರಚಯಿತರು ಎಂದು ಹೇಳುವುದಿಲ್ಲ, ಮಂತ್ರದ ದ್ರಷ್ಟಾರರು, ಎನ್ನುತ್ತೇವೆ. ಎಂದರೆ, ಮಂತ್ರಗಳು ಇಂದ್ರಿಯಗಳಿಗೆ ಮಾತ್ರ ಗೋಚರವಲ್ಲದೆ, ಅನುಭೂತಿಯೊಳಗೆ ಕೂಡ ಇಳಿಯುತ್ತದೆ, ಎಂದು ಅರ್ಥವಾಗುತ್ತದೆ. ಮಂತ್ರಗಳಲ್ಲಿ, ಅದನ್ನು ರಚಿಸಿದ ಋಷಿ, ಉದ್ದೇಶಿಸಿದ ದೇವತೆ, ಮತ್ತು ಅಕ್ಷರಗಳ ಅರ್ಥಬದ್ಧವಾದ ಜೋಡಣೆಗೆ ಛಂದಸ್ಸು ಎಂದು ಹೇಳುತ್ತಾರೆ. ಋಷಿಗಳು ಜ್ಞಾನಿಗಳು; ಮಂತ್ರಗಳು ಅವರ ಆಳವಾದ ಅಧ್ಯಯನದಿಂದ ಸ್ಫುರಿಸಿರುವ ಸಂಪತ್ತು.

ಬ್ರಹ್ಮನ ಹತ್ತು ಮಾನಸ ಪುತ್ರರಾದ ಭೃಗು, ಮರೀಚಿ, ಅತ್ರಿ, ಅಂಗೀರಸ, ಪುಲಹ, ಕ್ರತು, ಮನು, ದಕ್ಷ, ವಸಿಷ್ಠ, ಮತ್ತು ಪುಲಸ್ತ್ಯರು ಮಹರ್ಷಿಗಳೆಂದು ಕರೆಯಲ್ಪಟ್ಟು, ಈಶ್ವರನೆಂಬ ಅಭಿದಾನವನ್ನು ಹೊಂದಿರುತ್ತಾರೆ. ಋಷಿಗಳು, ಋಷಿಪುತ್ರರು, ಋಷೀಕರು ಮಹರ್ಷಿಗಳ ಔರಸಪುತ್ರರು, ಅಥವಾ ಶಿಷ್ಯ ಪರಂಪರೆಯವರು ಆಗಿದ್ದು ತಮ್ಮ ತಪಸ್ಸಿನಿಂದ ಋಷಿ, ಎಂಬ ಪದವಿಯನ್ನು ಗಳಿಸಿಕೊಂಡಿರುತ್ತಾರೆ.

ಋಗ್ವೇದದಲ್ಲಿ ಹತ್ತು ಮಂಡಲಗಳಿವೆ. ಈ ಮಂಡಲಗಳಲ್ಲಿ 1028 ಸೂಕ್ತಗಳೂ, 10,600 ಋಕ್ಕುಗಳೂ ಇವೆ. ಈ ಕೆಳಗಿನ ಪಟ್ಟಿಯಲ್ಲಿ ಋಗ್ವೇದದ ಮುಖ್ಯ ಸೂಕ್ತಕಾರರು ಅಥವಾ ಅವರ ವಂಶಜರು ರಚಿಸಿದ ಋಕ್ಕುಗಳ/ಮಂಡಲಗಳ ಉಲ್ಲೇಖವನ್ನು ಕೊಟ್ಟಿದೆ. ಈಗ ಅವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಈ ಪಟ್ಟಿಯಲ್ಲಿ ಕಾಣಬರುವಂತೆ, ಒಂದು, ಒಂಭತ್ತು, ಮತ್ತು ಹತ್ತನೇ ಮಂಡಲಗಳಲ್ಲಿ ಬೇರೆ ಬೇರೆ ಗುಂಪಿನ ಅನೇಕ ಋಷಿಗಳು ಇದ್ದಾರೆ.

ಋಷಿ/ವಂಶ

ಋಕ್ಕು/ಸ್ತೋತ್ರ

ಮಂಡಲ

ಅಂಗೀರಸ ಮತ್ತು ಇತರರು

3619

1

ಗೃತ್ಸಮದ

401

2

ವಿಶ್ವಾಮಿತ್ರ

983

3

ವಾಮದೇವ

4

ಅತ್ರಿ

885

5

ಭಾರದ್ವಾಜ

6

ವಸಿಷ್ಠ

1276

7

ಕಣ್ವ, ವಾಲಖಿಲ್ಯರು

1315

8

ಕಶ್ಯಪ, ಇತರ ಪಾವಮಾನಿ ಋಷಿಗಳು

415

9

ಭೃಗು

473

ಅಗಸ್ತ್ಯ

316

ಭರತ

170

ಕವಷ ಐಲೂಷರಾದಿ ಅನೇಕ ರಾಜರ್ಷಿಗಳೂ, ವತ್ಸರ್ಪಿ, ಭಲಂದನರೆಂಬ ವೈಶ್ಯರೂ, ಅತ್ರಿಪುತ್ರಿಯಾದ ಅಪಾಲಳೆಂಬ ಸ್ತ್ರೀಯೂ, ಹತ್ತನೆಯ ಮಂಡಲದ ಋಷಿಗಳಲ್ಲಿ ಸೇರಿದ್ದಾರೆ.

10

ಭೃಗು ಮತ್ತು ಅವರ ವಂಶಜರು

ಪುರಾಣಗಳಲ್ಲಿ ಭೃಗುಕುಲದ 19 ಋಷಿಗಳು ಉಲ್ಲೇಖಗೊಂಡಿದ್ದಾರೆ. ದೈತ್ಯಗುರುವಾದ ಶುಕ್ರಾಚಾರ್ಯರು ಭೃಗುವಿನ ಮಗನಾದ ಕವಿಯ ಮಗ. ಚ್ಯವನನು ಭೃಗು ಮಹರ್ಷಿಯ ಮಗ. ಚ್ಯವನನಿಗೆ ಆಪ್ನುವಾನ ಮತ್ತು ದಧ್ಯಜರೆಂಬ ಮಕ್ಕಳು.

ಭೃಗು ಮತ್ತು ಅಂಗೀರಸರ ವಂಶದಲ್ಲಿ ಎಷ್ಟೋ ಜನ ಅಥರ್ವವೇದದ ದ್ರಷ್ಟಾರರು ಆಗಿಹೋದುದು ಒಂದು ವೈಶಿಷ್ಟ್ಯ. ಹಾಗೆ ನೋಡಿದರೆ, ಅಥರ್ವವನ್ನು ಭೃಗ್ವಂಗೀರೋವೇದ ಎಂದು ಕೂಡ ಹೇಳುತ್ತಾರೆ.

ಅಂಗೀರಸ ಮತ್ತು ಅವರ ವಂಶಜರು

ನಮ್ಮ ಪರಂಪರೆಯಲ್ಲಿ ಅಂಗೀರಸರು ಬಹಳ ಮುಖ್ಯರಾದ ಋಷಿಗಳು. ಅಂಗೀರಸನು ಅನೇಕ ಪ್ರಸಿದ್ಧರಾದ ಋಷಿಗಳ ಮೂಲಪುರುಷನು. ಅಂಗೀರಸ ಪರಂಪರೆ ಅತ್ಯಂತ ಪ್ರಾಚೀನವಾದ ಋಷಿಪರಂಪರೆ. ಅಂಗೀರಸ್ಸಿನ ಕುಲದ 33 ಪ್ರಮುಖ ಋಷಿಗಳು ಆಗಿಹೋದರು. ಸ್ವತಂತ್ರವಾಗಿಯೂ, ಭೃಗುಗಳ ಜೊತೆಯೂ ಅಥರ್ವವೇದದ ಅನೇಕ ಮಂತ್ರಗಳ ಋಷಿಗಳಾಗಿದ್ದಾರೆ.

ಈತನ ಬಗ್ಗೆ ಒಂದು ರೋಚಕವಾದ ಕಥೆ ಇದೆ. ಒಮ್ಮೆ ಅಗ್ನಿಯು ಯಾವುದೋ ಕಾರಣದಿಂದ ತನ್ನ ಕರ್ತವ್ಯವನ್ನು ಬಿಟ್ಟು ಎಲ್ಲಿಗೋ ಹೊರಟುಹೋದನಂತೆ. ಆಗ ಅಂಗೀರ ಋಷಿಯು ದೇವತೆಗಳ ಹವಿರ್ಭಾಗವನ್ನು ಅವರಿಗೆ ಒಯ್ದು ಕೊಡುತ್ತ ಅಗ್ನಿಯ ಕೆಲಸವನ್ನು ನಿರ್ವಹಿಸಿದರಂತೆ. ಅದಕ್ಕೆ, ಅಂಗೀರ ಋಷಿಗೆ ಅಗ್ನಿಯ ಪುತ್ರನೆಂದೂ, ಅವನ ಮಕ್ಕಳಿಗೆ ಅಂಗೀರಸರೆಂದೂ ಹೆಸರಾಯಿತು, ಎಂದು ಪ್ರತೀತಿ.

ಗೃತ್ಸಮದ

ಎರಡನೆಯ ಮಂಡಲದ ಋಷಿಯಾದ ಗೃತ್ಸಮದನು ಅಂಗೀರಸ ವಂಶದ ಶುನಹೋತ್ರನೆಂಬ ಋಷಿಯ ಮಗನು. ಆದರೆ ಕಾರಣಾಂತರಗಳಿಂದ ಭೃಗು ಕುಲದಲ್ಲಿ ಹುಟ್ಟಿದ ಶುನಕನ ಮಗನೆಂದು ಪ್ರಸಿದ್ದಿ ಹೊಂದಿದನು. ಇಂದ್ರನು ಅಸುರರಿಂದ ಅಪಹೃತನಾದ ಇವನನ್ನು ಬಿಡಿಸಿಕೊಂಡು ಬಂದ ಕಥೆ ಇದೆ.

ಇನ್ನೊಂದು ಕಥೆಯ ಪ್ರಕಾರ, ಕಾಶಿಯ ರಾಜನಾದ ಪ್ರತರ್ದನನು ಹೈಹಯ ರಾಜನಾದ ವೀತಹವ್ಯನನ್ನು ಸೋಲಿಸಿದಾಗ, ದೇಶಭ್ರಷ್ಟನಾದ ವೀತಹವ್ಯಯನು ಭೃಗು ಮಹರ್ಷಿಯ ಬಳಿ ಆಶ್ರಯವನ್ನು ಪಡೆದನು. ಪ್ರತರ್ದನನು ವೀತಹವ್ಯನನ್ನು ತನ್ನ ವಶಕ್ಕೆ ಕೊಡಬೇಕೆಂದು ಭೃಗು ಮಹರ್ಷಿಯನ್ನು ಕೇಳಿದನು. ಭೃಗು ಮಹರ್ಷಿಯು ತನ್ನ ಆಶ್ರಮದಲ್ಲಿ ಕ್ಷತ್ರಿಯರು ಯಾರೂ ಇಲ್ಲವೆಂದನು. ಮಾತನ್ನು ಸುಳ್ಳು ಮಾಡದಿರಲು ವೀತಹವ್ಯನು ಬ್ರಾಹ್ಮಣನಾದನು. ಈ ಕಥೆಯ ಪ್ರಕಾರ, ಗೃತ್ಸಮದನು ವೀತಹವ್ಯನ ಮಗನು. ಗೃತ್ಸಮದನು ಬಹಳ ಪ್ರೌಢನಾದ ಕವಿ ಎಂಬ ಖ್ಯಾತಿಯುಳ್ಳವನು.

ಗೃತ್ಸಮದನು ಒಟ್ಟು ಎಂಟು ಋಕ್ಕುಗಳಲ್ಲಿ ಸರಸ್ವತಿಯ ಸ್ತೋತ್ರ ಮಾಡಿದ್ದಾನೆ. . ಸಂ. 2.1.11 ಮತ್ತು 2. 3. 8, 2. 3. 55ನೇ ಋಕ್ಕುಗಳಲ್ಲಿ ಸರಸ್ವತಿಯನ್ನು ಇಳಾ ಮತ್ತು ಭಾರತಿಯೊಡನೆ ಸ್ತುತಿಸಿದ್ದಾನೆ. . ಸಂ. 2. 30. 8ರಲ್ಲಿ ಸರಸ್ವತಿಯನ್ನು ದೇವತೆ ಎಂದು ಶಲಾಘಿಸಿ, ಇಂದ್ರ ಮತ್ತು ಮರುತ್ತರೊಡನೆ ಸ್ತೋತ್ರ ಮಾಡಿದ್ದಾನೆ. . ಸಂ. 2. 41. 16 ಸೂಕ್ತವು ಸರಸ್ವತಿಯು ಬಹು ದೊಡ್ಡ ನದಿಯೆಂದೂ, ದೇವತೆಯೆಂದೂ ಹೇಳುತ್ತದೆ. . ಸಂ. 2. 41. 18 ಸರಸ್ವತಿಯನ್ನು ಋತಾವರಿ ಎಂದರೆ, ಹೆಚ್ಚು ನೀರುಳ್ಳದ್ದೆಂದು ವರ್ಣಿಸುತ್ತದೆ. . ಸಂ. 2. 30. 8 ಸರಸ್ವತಿಯನ್ನು ಸಿಡಿಲು ಮಿಂಚುಗಳ ಅಧಿದೇವತೆ ಎನ್ನುತ್ತದೆ.

ವಿಶ್ವಾಮಿತ್ರ ಮತ್ತು ಅವರ ವಂಶಜರು.

ವಿಶ್ವಾಮಿತ್ರನು ಋಗ್ವೇದದ ಮೂರನೇ ಮಂಡಲದ ಋಷಿ. ಅತ್ರಿವಂಶದಲ್ಲಿ ಅತ್ರಿಋಷಿಯಿಂದ ಆರನೇ ತಲೆಯವನು. ವಿಶ್ವಾಮಿತ್ರನು ಅತ್ರಿಋಷಿಯಿಂದ ಐದನೇ ತಲೆಯವನು. ಈತನು ಎಷ್ಟೋ ಸೂಕ್ತಗಳ ಕರ್ತೃ ಮಾತ್ರವಲ್ಲ, ಋಗ್ವೇದದಲ್ಲಿ ಬರುವ ಎಷ್ಟೋ ಕಥೆಗಳ ಕಥಾನಾಯಕ. ಋಗ್ವೇದದ ಎಲ್ಲ ನದಿಗಳ, ಮುಖ್ಯವಾಗಿ ಸರಸ್ವತಿ ಮತ್ತು ಸಿಂಧೂ ನದಿ ಮತ್ತು ಅವುಗಳ ಉಪನದಿಗಳ ಜೊತೆ ವಿಶ್ವಾಮಿತ್ರನಿಗೆ ಬಹಳ ಗಾಢವಾದ ಸಂಬಂಧವಿದೆ. ವಿಶ್ವಾಮಿತ್ರನ ವಂಶಜರು ಕೂಡ ಸರಸ್ವತಿ ನದಿಯ ಬಗ್ಗೆ ಎಷ್ಟೋ ಸೂಕ್ತ/ಋಕ್ಕುಗಳನ್ನು ರಚಿಸಿದ್ದಾರೆ.

ವಿಶ್ವಾಮಿತ್ರರ ಕುಲದಲ್ಲಿ ಹದಿಮೂರು ಮುಖ್ಯ ಋಷಿಗಳು. ವಿಶ್ವಾಮಿತ್ರ ಎಂಬ ಹೆಸರಿನ ಅನೇಕ ಋಷಿಗಳಿದ್ದಂತೆ ಕಾಣುತ್ತದೆ.

. ಸಂ. 1.3.10, 11, 12 ಋಕ್ಕುಗಳನ್ನು ರಚಿಸಿದ ವಿಶ್ವಾಮಿತ್ರನ ಮಗನಾದ ಮಧುಚ್ಛಂದ ಋಷಿಯ ಆಶ್ರಮವು ಸರಸ್ವತಿ ನದಿಯ ಪಶ್ಚಿಮ ತೀರದಲ್ಲಿ ಕುರುಕ್ಷೇತ್ರದಲ್ಲಿ ಇತ್ತು, ಎಂದು ಹೇಳಲಾಗಿದೆ. ಮಹಾಭಾರತದ ಶಲ್ಯಪರ್ವದಲ್ಲೂ ಇದೇ ಉಲ್ಲೇಖವಿದೆ. ಇವು ಸರಸ್ವತಿಯನ್ನು ಆರಾಧಿಸುವ ಋಕ್ಕುಗಳು.

. ಸಂ. 3. 23ನೆಯ ಸೂಕ್ತಕಾರರಾದ ದೇವಶ್ರವ ಮತ್ತು ದೇವವಾತರು ವಿಶ್ವಾಮಿತ್ರನ ಪುತ್ರರು ಮತ್ತು ಅತ್ರಿಯ ಮರಿಮಗನಾದ ಪುರೂರವನ ವಂಶಸ್ಥರು. ಇವರು . ಸಂ. 3. 23. 4ನೆಯ ಋಕ್ಕಿನಲ್ಲಿ,

ನಿತ್ವಾ ದಧೇ ವರ ಆ ಪೃಥಿವ್ಯಾ ಇಳಾಯಾಸ್ಪದೇ ಸುದಿನತ್ವೇ ಆಹ್ನಾಮ್ ।

ದೃಷದ್ವತ್ಯಂ ಮಾನುಷಾ ಆಪಯಾಯಾಂ ಸರಸ್ವತ್ಯಾಂ ದೇವದಗ್ನೇ ದಿದೀಹಿ ।।

ಸರಸ್ವತಿಯೊಡನೆ ದೃಷದ್ವತಿ (Chetang) ಮತ್ತು ಅಪಯಾ ನದಿಗಳನ್ನು ಉಲ್ಲೇಖಿಸುತ್ತಾರೆ.

ಭರದ್ವಾಜ ಮತ್ತು ಅವರ ವಂಶಜರು

ಭರದ್ವಾಜರು ಋಗ್ವೇದದ 6ನೇ ಮಂಡಲದ ಋಷಿ. ಅವರ ಆಶ್ರಮವು ಪ್ರಯಾಗದಲ್ಲಿತ್ತು. 6. 61ನೇ ಸೂಕ್ತದ 14 ಋಕ್ಕುಗಳು ಸರಸ್ವತಿ ನದಿಯನ್ನು ವರ್ಣಿಸುತ್ತವೆ. 6. 49. 7, 6. 50. 12, 6. 52. 6 ಋಕ್ಕುಗಳ ಕತೃವಾದ, ಭರದ್ವಾಜರ ಮಗನಾದ ಋಜಿಶ್ವನು ಸರಸ್ವತಿಯನ್ನು ಬೃಹತ್ತಾದ ನದಿಯೆಂದು ವರ್ಣಿಸುತ್ತಾನೆ. ಬೃಹಸ್ಪತಿಯ ಮಗನಾದ ಭರದ್ವಾಜನು ಶಂಬರನೆಂಬ ದೈತ್ಯನನ್ನು ಸಂಹರಿಸಿದ ದಿವೋದಾಸನ ಪುರೋಹಿತನಾಗಿದ್ದನು. ದಿವೋದಾಸನೆಂಬ ರಾಜನು ವ್ಯಧ್ಯ್ರಶ್ವನ ಮಗನು, ಸುದಾಸನ ತಂದೆ.

ವಸಿಷ್ಠ ಮತ್ತು ಅವರ ವಂಶಜರು

ವಸಿಷ್ಠರು ಋಗ್ವೇದದ 7ನೇ ಮಂಡಲದ ಕರ್ತೃ. ಮೂರು ಮತ್ತು ಏಳನೇ ಮಂಡಲದ ಕತೃಗಳಾದ ವಸಿಷ್ಠ ಮತ್ತು ವಿಶ್ವಾಮಿತ್ರರ ನಡುವೆ ತೀವ್ರವಾದ ಪೈಪೋಟಿ ಇತ್ತು. ಸ್ಪರ್ಧಾತ್ಮಕ ಸಂಬಂಧ ಎಷ್ಟೋ ಬಾರಿ ಶತ್ರುತ್ವ ಮತ್ತು ಯುದ್ಧಗಳಿಗೂ ಎಡೆಮಾಡಿದೆ, ಎನ್ನುವುದು ಕಥೆಗಳ ಮೂಲಕ ತಿಳಿದುಬರುತ್ತದೆ. ತಲಗೇರಿಯವರ ಪಟ್ಟಿಯನ್ನು ನೋಡಿದರೆ, ಮೂರು ಮತ್ತು ಏಳನೇ ಮಂಡಲಗಳು ಅಕ್ಕ ಪಕ್ಕದಲ್ಲೇ ಇದ್ದು, ಹೆಚ್ಚು ಕಡಿಮೆ ಒಂದೇ/ಹತ್ತಿರದ ಕಾಲಾವಧಿಯಲ್ಲಿ ರಚಿತವಾದಂತೆ ಕಾಣಬರುತ್ತದೆ.

ವೇದವ್ಯಾಸರ ತಂದೆ, ಪರಾಶರರು ವಸಿಷ್ಠರ ವಂಶಜರು.

ವಸಿಷ್ಠರ ಆಶ್ರಮವು ರಾಜಸ್ತಾನದ ಅರಾವಳಿ ಪರ್ವತ ಶ್ರೇಣಿಯ ಅರ್ಬುದ ಬೆಟ್ಟದ (Mount Abu) ಬಳಿಯಲ್ಲಿತ್ತು. ವಸಿಷ್ಠರ (ಮತ್ತು ಅವರ ವಂಶಜರಿಂದ) ರಚಿತವಾದ . ಸಂ. 7. 9. 5, 7. 35. 11, 7. 36. 6, 7. 40. 3, 7. 95, 96 ಋಕ್ಕುಗಳು ಸರಸ್ವತಿ ನದಿಯನ್ನು ಸ್ತುತಿಸುತ್ತವೆ. ಇವುಗಳಲ್ಲಿ ಬರುವ ಸಿಂಧುಮಾತಾ ಮತ್ತು ಅಸಮುದ್ರಾತ್ ಎಂಬ ಶಬ್ದಗಳು ಸಿಂಧೂ ನದಿಗೆ ಅನ್ವಯವಾಗುತ್ತದೆ, ಎಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಆದರೆ, ಅಸಮುದ್ರಾತ್, ಎಂದರೆ, ಸಮುದ್ರಕ್ಕೆ ಹರಿಯುವ ನದಿ, ಎನ್ನುವುದು ಸರಸ್ವತಿಗೂ ಅನ್ವಯಿಸುತ್ತದೆ. ಸಿಂಧೂ ಎನ್ನುವ ಪದವು ಎಲ್ಲ ನೀರು, ನದಿ, ಸಮುದ್ರಗಳಿಗೆ ಅನ್ವಯಿಸುವ ಪದ. ಹೀಗಾಗಿ ಶಬ್ದವು ಯಾವ ನದಿಗಾದರೂ ಅನ್ವಯಿಸಬಹುದು.

ಋಗ್ವೇದದ 7.33.9ನೇ ಋಕ್ಕಿನಲ್ಲಿ ವಸಿಷ್ಠರು ತನ್ನ ಆಶ್ರಮವನ್ನು ಸ್ಥಾಪಿಸಲು ಸಿಂಧೂನದಿಯನ್ನು ದಾಟಿದರೆಂದು ಹೇಳಲಾಗಿದೆ.

6ನೇ ಮಂಡಲದಲ್ಲಿ ಕೂಡ ವಸಿಷ್ಠರು ಸರಸ್ವತಿಯನ್ನು ಶ್ಲಾಘಿಸಿರುವ ಸೂಕ್ತಗಳಿವೆ.

ಕಣ್ವರು ಮತ್ತು ಅವರ ವಂಶಸ್ಥರು

ಕಣ್ವರ ವಂಶಸ್ಥರು ಹೆಚ್ಚಿನಂಶದ ಸೂಕ್ತಗಳನ್ನು 8ನೇ ಮಂಡಲದಲ್ಲಿ ರಚಿಸಿದ್ದಾರೆ. ಎಂಟನೇ ಮಂಡಲದ . ಸಂ. 8. 21. 1718 ಋಕ್ಕುಗಳಲ್ಲಿ ಕಣ್ವ ಋಷಿಯ ಮಗನಾದ ಶೋಭಾರಿ ಋಷಿಯು ಚಿತ್ರನೆಂಬ ರಾಜನು ಸರಸ್ವತಿ ನದಿಯ ತೀರದಲ್ಲಿ, ಕುರುಕ್ಷೇತ್ರದಲ್ಲಿ ಮಾಡಿದ ಯಜ್ಞವನ್ನೂ, ರಾಜನ ವೈಭವ, ದಾನಗಳನ್ನೂ ಪ್ರಶಂಸಿಸಿದ್ದಾನೆ.

ಪೂಷಾ ವಿಷ್ಣುರ್ಹವನಂ ಮೇ ಸರಸ್ವತ್ಯವಂತು ಸಪ್ತ ಸಿಂಧವಃ ।

ಆಪೋ ವಾತಃ ಪರ್ವತಾಸೋ ವನಸ್ಪತಿಃ ಶೃಣೋತು ಪೃಥಿವೀಹವಂ ।। (. ಸಂ. 8. 54. 9)

ಋಕ್ಕಿನಲ್ಲಿ ಪೂಷಾ, ವಿಷ್ಣು, ಸರಸ್ವತಿ, ಸಪ್ತ ಸಿಂಧವಃ (ಏಳು ನದಿಗಳು) ಆಪಃ, ವಾತಃ, ಪರ್ವತಾಸಃ, ವನಸ್ಪತಿಃ, ಪೃಥಿವೀಎಲ್ಲ ದೇವತೆಗಳ ಮಧ್ಯೆ ಸರಸ್ವತಿ ನದಿಯನ್ನೂ ಸ್ತುತಿಸಲಾಗಿದೆ.

ಇತರ

. ಸಂ. 10. 64. 9ರ ಋಕ್ಕಿನ ಋಷಿಯಾದ ಅತ್ರಿ ಋಷಿಗಳ ವಂಶಸ್ಥನಾದ ಗಯನು ಸಿಂಧೂ ಮತ್ತು ಸರಯೂ ನದಿಗಳೊಡನೆ ಸರಸ್ವತಿಯನ್ನು ಉಲ್ಲೇಖಿಸುತ್ತಾನೆ. ಮಹಾಭಾರತದ ವನಪರ್ವದ ತೀರ್ಥಯಾತ್ರಾ ಪರ್ವದಲ್ಲಿ ಗಯನು ನಡೆಸಿದ ಯಜ್ಞಗಳ ಉಲ್ಲೇಖವಿದೆ.

ಋಗ್ವೇದದಲ್ಲಿ ಬರುವ ನದಿಗಳ ಕಥೆಗಳು

ಋಷಿಗಳಿಗೂ ನದಿಗಳಿಗೂ ಋಗ್ವೇದದಲ್ಲಿ ಬಹಳ ಹತ್ತಿರದ ಸಂಬಂಧ. ಈ ಭಾಗದಲ್ಲಿ ನದಿ ಮತ್ತು ಋಷಿಗಳ ಕಥೆಗಳ ಕಡೆಗೆ ಕಣ್ಣು ಹಾಯಿಸೋಣ. ಕಥೆಗಳನ್ನು ರೂಪಕಗಳ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು. ಇವೇ ಕಥೆಗಳು ಬೇರೆ ಯಾವುದೋ ರೀತಿಯಲ್ಲಿ ಇತಿಹಾಸ ಪುರಾಣಗಳಲ್ಲಿ ಮತ್ತೊಮ್ಮೆ (ಕೆಲವೊಮ್ಮೆ ಪದೇ ಪದೇ ಬೇರೆ ಬೇರೆ ಕಡೆ,) ಕಾಣಸಿಗುತ್ತವೆ.

ಶುತುದ್ರಿ ಶತದ್ರು ಆದ ಕಥೆ

ಸಟ್ಲೆಜ್ ನದಿಗೆ ಋಗ್ವೇದದ ಕಾಲದಲ್ಲಿ ಶುತುದ್ರಿ ಎಂದು ಹೆಸರು. ವೇಗವಾಗಿ ಪ್ರವಹಿಸುತ್ತಿರುವುದರಿಂದ ನದಿಗೆ ಶುತುದ್ರಿ ಎಂದು ಹೆಸರು. ನದಿಯು ಮೊದಲು ಸರಸ್ವತಿಯ ಉಪನದಿಯಾಗಿದ್ದು ಭೂಗರ್ಭದಲ್ಲಿನ ಮಾರ್ಪಾಡುಗಳ ಕಾರಣ ತನ್ನ ಪಾತ್ರವನ್ನು ಬದಲಾಯಿಸಿ ಸಿಂಧುವಿನ ಉಪನದಿಯಾಯಿತು.

ಕಥೆಯ ಪ್ರಕಾರ, ವಸಿಷ್ಠರಿಗೂ ವಿಶ್ವಾಮಿತ್ರರಿಗೂ ಮಿತಿ ಮೀರಿದ ಸ್ಪರ್ಧೆ, ವೈರ. ವಿಶ್ವಾಮಿತ್ರರು ವಸಿಷ್ಠರ ಮಕ್ಕಳನ್ನು ಕೊಂದು, ಅವರಿಗೆ ಅತೀವ ಕಷ್ಟ ಸಂಕಟಗಳನ್ನು ಸಹಿಸುವ ಹಾಗೆ ಮಾಡಿದರು. ವಸಿಷ್ಠರು ತಾಳಲಾರದೆ, ಆತ್ಮಹತ್ಯೆಯ ಯೋಚನೆ ಕೂಡ ಮಾಡಿದರಂತೆ. ಶುತುದ್ರಿ ನದಿಯಲ್ಲಿ ಧುಮುಕಿದರೆ, ನದಿಯು ಇಂಥ ಮಹಾನುಭಾವನು ಜೀವ ಕಳೆದುಕೊಂಡ ಪಾಪ ತನಗೆ ಬೇಡವೆಂದು ತಾನೇ ನೂರು ಕವಲಾಗಿ ಭಾಗವಾಯಿತಂತೆ. ಹೀಗೆ ಶುತುದ್ರಿ ಶತದ್ರು (ನೂರು ಕವಲುಗಳ ನದಿ) ವಾಗಿ ಬದಲಾಯಿತು. ನದಿಯೇ ಬದಲಾದ ಭೂಭಾಗದ ಮಾರ್ಪಾಡಿನ ಕಥೆ ಎಷ್ಟು ಚೆನ್ನಾಗಿ ಹೇಳಿದ್ದಾರಲ್ಲವೇ?

ವಿಶ್ವಾಮಿತ್ರರು ವಿಪಾಶಾ ಮತ್ತು ಶುತುದ್ರಿ ನದಿಗಳನ್ನು ದಾಟಿದ ಕಥೆ

. ಸಂ. 3. 33ನೇ ಸೂಕ್ತದಲ್ಲಿ ವಿಶ್ವಾಮಿತ್ರನಿಗೂ ವಿಪಾಟ್ (ವಿಪಾಶ/ ಬಿಯಾಸ್) ಮತ್ತು ಶುತುದ್ರಿಗೂ ನಡೆದ ಸಂವಾದದ ವೃತ್ತಾಂತವಿದೆ. ವಿಶ್ವಾಮಿತ್ರನು ಭರತ ರಾಜನಾದ ಸುದಾಸನ ಪುರೋಹಿತನು. ಪಿಜವನನ ಮಗನಾದ ಸುದಾಸನಿಗೆ ವಸಿಷ್ಠರು ಕೂಡ ಪುರೋಹಿತರು. ಸುದಾಸನು ಶತ್ರುಗಳಿಂದ ತನ್ನ ರಾಜ್ಯವನ್ನು ಸಂರಕ್ಷಿಸುವುದಕ್ಕಾಗಿ, ಹತ್ತು ರಾಜಪುತ್ರರೊಂದಿಗೆ ಘನಘೋರ ಸಂಗ್ರಾಮವನ್ನು ನಡೆಸಿದನು. ಋಗ್ವೇದದಲ್ಲಿ ದಶರಾಜ್ಞ ಯುದ್ಧದ ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ, ವಸಿಷ್ಠವಿಶ್ವಾಮಿತ್ರರ ಸ್ಪರ್ಧೆಶತೃತ್ವಗಳ ಕಥೆಗಳು ಇನ್ನೂ ಹೆಚ್ಚು ನಿಗೂಢವಾಗಿ ಕಂಡುಬರುತ್ತವೆ.

ಪ್ರಸ್ತುತ ಕಥೆಯಲ್ಲಿ ವಿಶ್ವಾಮಿತ್ರನು ಸುದಾಸನು ನಡೆಸಿದ ಒಂದು ಯಜ್ಞದ ತರುವಾಯ, ತನ್ನ ಪೌರೋಹಿತ್ಯದಿಂದ ಜನರ ಬೆಂಬಲವನ್ನು ಗಳಿಸಿ, ರಾಜನಿಂದ ಪಡೆದ ಸಕಲ ಧನವನ್ನೂ ತೆಗೆದುಕೊಂಡು ವಿಪಾಶಶುತುದ್ರಿ ಸಂಗಮವನ್ನು ತಲುಪಿದನು. ಭರತರ ಸೈನ್ಯ ಅವರನ್ನು ಹಿಂಬಾಲಿಸಿತು. ರಭಸವಾದ ಪ್ರವಾಹವನ್ನು ನೋಡಿ, ಋಷಿಯು ಅದನ್ನು ದಾಟಲು ಮೂರು ಸ್ತೋತ್ರಗಳಿಂದ ನದಿಗಳನ್ನು ಸ್ತುತಿಸಿದನು.

ಪರ್ವತಗಳಲ್ಲಿ ಉತ್ಪನ್ನವಾದವೂ, ಸಡಲಿಸಿದ ಕಡಿವಾಣದಿಂದ ಹರಿಬಿಟ್ಟಂತೆ, ಪರಸ್ಪರ ಸ್ಪರ್ಧಿಸುತ್ತ ಓಡುತ್ತಿರುವ ಅಶ್ವಗಳಂತೆ, ಕರುಗಳನ್ನು ಸೇರುವ ಆತುರದಿಂದ ಧಾವಿಸುತ್ತಿರುವ ಗೋವುಗಳಂತೆ, ವಿಪಾಟ್ (ವಿಪಾಶಾ)-ಶುತುದ್ರಿ ನದಿಗಳು ಸಾಗರದೆಡೆಗೆ ವೇಗವಾಗಿ ನಿಮ್ಮ ಪ್ರವಾಹದೊಡನೆ ಹರಿಯುತ್ತಿದ್ದೀರಿ.

ಎಲೈ ನದಿಗಳೇ, ರಥಿಕನು ತನ್ನ ಗಮ್ಯಸ್ಥಾನದೆಡೆ ಓಡುವಂತೆ, ನೀವಿಬ್ಬರೂ ಇಂದ್ರನಿಂದ ಪ್ರೇರಿತರಾಗಿ ಸಾಗರದೆಡೆಗೆ ಧಾವಿಸುತ್ತಿದ್ದೀರಿ. ಒಟ್ಟಿಗೆ ಪ್ರವಹಿಸುವಾಗ, ನಿಮ್ಮ ಅಲೆಗಳು ಪರಸ್ಪರ ಸ್ಪರ್ಧಿಸುತ್ತಲೂ, ಅನುಸರಿಸುತ್ತಲೂ, ಸುಂದರವಾಗಿವೆ.

ಅತಿಶಯವಾದ ಮಾತೃಪ್ರೇಮವುಳ್ಳ ವಿಪಾಶಾ ನದಿಯನ್ನು ನಾನು ಸಮೀಪಿಸುತ್ತಿದ್ದೇನೆ. ವಿಶಾಲವಾದ ನದಿಯು ಕರುವು ತನ್ನ ತಾಯಿಯನ್ನು ಸೇರುವಂತೆ ಶುತುದ್ರಿಯನ್ನು ಸೇರುತ್ತಲಿದೆ.”

ನದಿಗಳು ಕಲಕಲನೆ ನಕ್ಕು, ವಿಶ್ವಾಮಿತ್ರನ ಇಷ್ಟಾರ್ಥವೇನೆಂದು ಕೇಳುತ್ತವೆ.

ವಿಶ್ವಾಮಿತ್ರನು ನದಿಗಳಿಂದ ರಕ್ಷಣೆಯನ್ನು ಬೇಡುತ್ತಾ, ನದಿಗಳನ್ನು ಕೇಳುತ್ತಾನೆ. “ಎಲೈ ನದಿಗಳೇ, ಸೋಮಾಹರಣಕ್ಕೆ ಹೊರಟ ನನಗಾಗಿ ನಿಮ್ಮ ಪ್ರವಾಹವನ್ನು ಸ್ವಲ್ಪ ತಡೆಗಟ್ಟಿರಿ. ಕುಶಿಕಪುತ್ರನಾದ ನಾನು ನನ್ನ ಮುಂದಿರುವ ಶುತುದ್ರಿಯನ್ನು ನಮ್ರತೆಯಿಂದ ಪ್ರಾರ್ಥಿಸುತ್ತಿದ್ದೇನೆ.”

ಇಲ್ಲಿ ಓದುಗರೊಂದಿಗೆ, ಸೋಮ ಹರಣದ ಬಗ್ಗೆ ವಿಶ್ವಾಮಿತ್ರನು ನಮಗೆ (ನದಿಗಳಿಗೆ) ತಿಳಿಸುತ್ತಾನೆ. ಇದರಿಂದ ಅವನು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದಾನೆ, ಎಂಬುದರ ಮಾಹಿತಿ ತಿಳಿಯಬಹುದೇ?

ವಿಶ್ವಾಮಿತ್ರನು ಮುಂದುವರೆದು ಹೇಳುತ್ತಾನೆ, “ಇಂದ್ರನು ತನ್ನ ವಜ್ರಾಯುಧದಿಂದ ಕೊಂದು ಪ್ರವಾಹಕ್ಕಿದ್ದ ಪ್ರತಿಬಂಧವನ್ನು ತಪ್ಪಿಸಿ, ನೀರು ಸ್ವೇಚ್ಛೆಯಿಂದ ಹರಿಯುವಂತೆ ಮಾಡಿದ ಸ್ತುತ್ಯಾರ್ಹನು. ನದಿಗಳೇ, ನೀವು ನಿಮ್ಮನ್ನು ಸ್ತುತಿಸುವ ನನ್ನಲ್ಲಿ ಅನುಗ್ರಹ ತೋರಿಸಿ, ನಿಮ್ಮ ಪ್ರವಾಹವನ್ನು ಕಡಿಮೆ ಮಾಡಿರಿ. ನಮ್ಮ ರಥಚಕ್ರದ ಇರುಸಿನ ಕೆಳಗಿನಷ್ಟು ಮಟ್ಟಕ್ಕೆ ನಿಮ್ಮ ನೀರಿನ ಮಟ್ಟ ಕಡಿಮೆ ಮಾಡಿ.”

ನದಿಗಳು ಹೇಳುತ್ತಾರೆ, “ಸ್ತುತಿಕರ್ತನಾದ ಋಷಿಯೇ, ನಿನ್ನ ಪ್ರಾರ್ಥನೆಯನ್ನು ಮನ್ನಿಸುವೆವು. ನಿನ್ನ ಮುಂದೆ ಬಾಗಿ ನಡೆಯುವೆವು. ತನ್ನ ಮುದ್ದು ಮಗುವನ್ನು ಎತ್ತಿಕೊಳ್ಳಲು ತಾಯಿಯು ಬಾಗುವಂತೆ, ಯುವತಿಯು ತನ್ನ ಪ್ರಿಯಕರನನ್ನು ಆಲಂಗಿಸಿಕೊಳ್ಳಲು ಬಾಗುವಂತೆ, ನಾವು ಬಾಗಿ ಹರಿಯುತ್ತೇವೆ.”

ವಿಶ್ವಾಮಿತ್ರನಿಗೆ ಬಹಳ ಸಂತೋಷವಾಗುತ್ತದೆ. ಅವನು ಮತ್ತೊಮ್ಮೆ ಪ್ರಾರ್ಥಿಸುತ್ತಾನೆ, “ನನ್ನ ಜೊತೆ ಇರುವ ಭರತರು ಕೂಡ ನಿನ್ನ ಪ್ರವಾಹವನ್ನು ದಾಟುವಂತೆ ಅನುಗ್ರಹಿಸಿ. ನಾವು ದಾಟಿದ ನಂತರ ನಿಮ್ಮ ಪ್ರವಾಹವು ಪೂರ್ವಸ್ಥಿತಿಗೆ ಬರಲಿ.”

ಎಲ್ಲರೂ ದಾಟಿದ ಮೇಲೆ ನದಿಗಳು ಪ್ರವಾಹವು ಮತ್ತೆ ಪೂರ್ವ ಸ್ಥಿತಿಗೆ ಬಂದಿತು, ಎಂಬುದು ಕಥೆ.

ಎಂತಹ ಕೌತುಕಮಯವಾದ ಕಥೆ! ಯಾವ ಸಂದರ್ಭದಲ್ಲಿ ಹೀಗೆ ನದಿಯನ್ನು ದಾಟಿರಬಹುದು? ಎಂಬ ಪ್ರಶ್ನೆ ಬರುವುದಿಲ್ಲವೇ?

ಪಣಿಗಳು ಅಪಹರಿಸಿಕೊಂಡು ಹೋದ ಗೋವುಗಳನ್ನು ಸರಮೆಯು ಹುಡುಕಿದ ಕಥೆ

ದಶರಾಜ್ಞ ಯುದ್ಧದಲ್ಲಿ ಸುದಾಸನು ಪಣಿಗಳ ಎದುರು ಕೂಡ ಹೋರಾಡಿದನು.

ಪಣಿಗಳೆಂಬ ಅಸುರರು ದೇವತೆಗಳ ಗೋವುಗಳನ್ನು ಅಪಹರಿಸಿಕೊಂಡು ಹೋದರು. ದೇವತೆಗಳು ಅವರ ಬೆನ್ನಟ್ಟಿದರು. ಅಗಾಧವಾದ ಪ್ರವಾಹದಿಂದ ಕೂಡಿದ ರಸಾ ನದಿಯು ಅವರಿಗೆ ದಾರಿಯಲ್ಲಿ ಅಡ್ಡಲಾಯಿತು. ದೇವತೆಗಳು ನೀರು ಬತ್ತಿಹೋಗಲೆಂದು ನದಿಯನ್ನು ಶಪಿಸಿದರು. [ಸಾಯಣರು ರಸಾ ನದಿಯು ಒಣಗಿ ಹೋಗಲು ಅನಾವೃಷ್ಟಿಯೇ ಕಾರಣ, ಎಂದು ವ್ಯಾಖ್ಯಾನಿಸಿದ್ದಾರೆ.] ಒಣಗಿ ಹೋದ ನದಿಯ ಪಾತ್ರವನ್ನು ಸುಲಭವಾಗಿ ದಾಟಿದರು. ಇನ್ನೊಂದು ಋಕ್ಕಿನಲ್ಲಿ, (. ಸಂ. 1. 112. 12) ಅಶ್ವಿನಿ ದೇವತೆಗಳನ್ನು ಸ್ತುತಿಸುವಾಗ ಒಣಗಿಹೋದ ರಸಾ ನದಿಯನ್ನು ಮತ್ತೊಮ್ಮೆ ತುಂಬಿ ಹರಿಯುವಂತೆ ಮಾಡಿದರು, ಎಂದಿದೆ.

ಪಣಿಗಳು ಗೋವುಗಳನ್ನು ಒಂದು ಗುಹೆಯಲ್ಲಿ ಅಡಗಿಸಿಟ್ಟರು. (. ಸಂ. 10. 108. 1) ದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿ, ಇಂದ್ರನು ದೇವಲೋಕದ ನಾಯಿಯಾದ ಸರಮೆಯನ್ನು ಗೋವುಗಳನ್ನು ಹುಡುಕಿ ತರಲು ಕಳುಹಿಸಿದನು. ಸರಮೆಯು ಗೋವುಗಳನ್ನು ಅಡಗಿಸಿದ್ದ ಗುಹೆಯನ್ನು ಕಂಡುಹಿಡಿದು ಇಂದ್ರನಿಗೆ ತಿಳಿಸಿತು.

ಸಮಯದಲ್ಲಿ ಪಣಿಗಳು ನೀನು ಪ್ರವಾಹದಲ್ಲಿದ್ದ ರಸಾ ನದಿಯನ್ನು ಹೇಗೆ ದಾಟಿ ಬಂದೆ, ಎಂದು ಸರಮೆಯನ್ನು ಕೇಳುತ್ತಾರೆ. ಸರಮೆಯು ಇಂದ್ರ ಮತ್ತು ಅಂಗೀರಸರ ಪ್ರಭಾವವನ್ನು ವರ್ಣಿಸಿ, ಪಣಿಗಳನ್ನು ಎಚ್ಚರಿಸುತ್ತಾಳೆ. ಸರಮೆಯು ತನ್ನ ದೂತನ ಘನತೆಯನ್ನು ಅರಿತು ವ್ಯವಹರಿಸುವ ವಿಧಾನ ಶ್ಲಾಘನೀಯವಾಗಿದೆ. ಅವಳು ಪಣಿಗಳನ್ನು ಚೋರರು ಎನ್ನುತ್ತಾಳೆ. ರಸಾ ನದಿಯು ತನಗೆ ಸಹಾಯ ಮಾಡಿತು ಎಂದು ಅವಳು ಹೇಳಿದಾಗ ಪಣಿಗಳಿಗೆ ಆಶ್ಚರ್ಯ, ಗೌರವಗಳು ಉಂಟಾಗುತ್ತವೆ.

ಸುದಾಸ ಮತ್ತು ವಸಿಷ್ಠರ ಕಥೆ

ಭರತ ರಾಜನಾದ, ಪಿಜವನನ ಮಗನಾದ ಸುದಾಸ, ಮತ್ತು ಋಷಿಗಳಾದ ವಸಿಷ್ಠ, ವಿಶ್ವಾಮಿತ್ರರ ನಡುವೆ ಇದ್ದ ಸಂಬಂಧ ಓದುಗರನ್ನು ಗೊಂದಲದಲ್ಲಿ ಬೀಳಿಸುವಂತದ್ದು. ವಸಿಷ್ಠ ಮತ್ತು ವಿಶ್ವಾಮಿತ್ರರಿಬ್ಬರೂ ಸುದಾಸನಿಗೆ ಪುರೋಹಿತರಾಗಿದ್ದರು. ಆದರೆ, ಇವರಿಬ್ಬರ ಮಧ್ಯದಲ್ಲೂ ಇದ್ದ ಸ್ಪರ್ಧಾತ್ಮಕ ಸಂಬಂಧ ಸರ್ವವಿದಿತ. ಇಬ್ಬರೂ ಬೇರೆ ಬೇರೆ ಸಮಯದಲ್ಲಿ ಸುದಾಸನಿಗೆ ಪುರೋಹಿತರಾಗಿದ್ದಿರಬೇಕು.

ಸುದಾಸನಿಗೂ ವಸಿಷ್ಠನಿಗೂ ಗಾಢವಾದ ಮೈತ್ರಿಯಿದ್ದು ವಸಿಷ್ಠನಿಂದ ಸುದಾಸನಿಗೆ ಬಹಳ ಉಪಕಾರವಾಗಿದೆ, ಎಂಬುದನ್ನು ಎಷ್ಟೋ ಕಥೆಗಳು ಹೇಳುತ್ತವೆ. ಆದರೆ, ಸುದಾಸನಿಂದ ವಸಿಷ್ಠರು ವ್ಯಥೆಗೆ ಒಳಗಾದ ಕಥೆಯ ಒಳಗುಟ್ಟು ತಿಳಿಯಲು ಸ್ವಲ್ಪ ತ್ರಾಸವೇ ಪಡಬೇಕು. . ಸಂ. 7. 18 ಸೂಕ್ತದಲ್ಲಿ, ಇಂದ್ರನು ವಸಿಷ್ಠರ ಪ್ರಾರ್ಥನೆಯನ್ನು ಮನ್ನಿಸಿ ಸುದಾಸನನ್ನು ಆಳವಾದ, ಪ್ರವಾಹದಲ್ಲಿದ್ದ ಪರುಷ್ಣೀ (ರಾವಿ) ನದಿಯನ್ನು ದಾಟಿಸಿದ ಕಥೆ ಇದೆ. ಇನ್ನೊಂದು ಸ್ತೋತ್ರದಲ್ಲಿ, ಸುದಾಸನು ಸಿಂಧುವನ್ನು ದಾಟಿದ ಉಲ್ಲೇಖವಿದೆ.

ಏವೇನ್ನು ಕಂ ಸಿಂಧುಮೇಭಿಸ್ತತಾರೇವೇನ್ನು ಕಂ ಭೇದಮೇಭಿರ್ಜಘಾನ ।

ಏವೇನ್ನು ಕಂ ದಾಶರಾಜ್ಞೆ ಸುದಾಸಂ ಪ್ರಾವದಿಂದ್ರೋ ಬ್ರಹ್ಮಣಾ ವೋ ವಸಿಷ್ಠಾಃ ।। (. ಸಂ. 7. 33. 3)

ಎಲೈ ವಶಿಷ್ಠರೇ, ನಿಮ್ಮ ಸಹಾಯದಿಂದಲೇ, ಸುದಾಸನು ಸಿಂಧುವನ್ನು ದಾಟಲು ಶಕ್ತನಾದನು, ಅವನ ಪುರೋಹಿತರಾದ ನಿಮ್ಮ ಸ್ತುತಿಯಿಂದ ಇಂದ್ರನು ದಶರಾಜ್ಞ ಯುದ್ಧದಲ್ಲಿ ಸಹಾಯ ಮಾಡಿ ಜಯಿಸಿದನು, ಎಂದಿದೆ.

ವಸಿಷ್ಠರ ಸಹಾಯದಿಂದ ಸುದಾಸನು ಇಡೀ ಪೃಥ್ವಿಯನ್ನು ಜಯಿಸಿ ಅಶ್ವಮೇಧವನ್ನು ಆಚರಿಸಿದನು. ಆದರೆ, ಸೌದಾಸರಿಂದ ವಸಿಷ್ಠಪುತ್ರರ ಹನನವಾಗಿ, ವಸಿಷ್ಠರು ಅತೀವ ದುಃಖಿತರಾಗಿ, ತರುವಾಯ ಸುದಾಸಪುತ್ರರನ್ನು ಜಯಿಸಿದ ಕಥೆ ಇದೆ. ವಸಿಷ್ಠ, ವಿಶ್ವಾಮಿತ್ರರ ಶತ್ರುತ್ವ, ಸುದಾಸನೊಡನೆ ಇವರ ಮೈತ್ರಿ, ಪೌರೋಹಿತ್ಯ, ದಶರಾಜ್ಞ ಯುದ್ಧದಲ್ಲಿ ಇವರ ಪಾತ್ರ, ಎಲ್ಲವೂ ಸಪ್ತಸಿಂಧು ನದಿಗಳ ಭೂಭಾಗದಲ್ಲೇ ನಡೆದಿದ್ದು ಇದು ನಮ್ಮ ಇತಿಹಾಸದ ಬಹಳ ಕೌತುಕಮಯ ಅಧ್ಯಾಯ.

ಋಗ್ವೇದದ ಋಷಿಗಳಿಗೂ ನದಿಗಳಿಗೂ ಅದೆಂತಹ ಅವಿನಾಭಾವ ಸಂಬಂಧವಲ್ಲವೇ? ಮುಂದಿನ ಭಾಗಗಳಲ್ಲಿ ಋಗ್ವೇದದ ನದಿಗಳ ಕುರಿತಾಗಿ ವಿವರವಾಗಿ ತಿಳಿದುಕೊಳ್ಳೋಣ.

(ಮುಂದುವರೆಯುವುದು…)

(Image credit: tableforchange.com)

 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply