ಮಹಾಭಾರತದಲ್ಲಿ ಮಹಾಗಣಪತಿಯ ಪಾತ್ರ ಭಾರತೀಯ ಪರಂಪರೆಯ ಸ್ಮೃತಿಯಲ್ಲಿ ಚಿರಸ್ಥಾಯಿಯಾಗಿದೆ. ವ್ಯಾಸ ಮಹರ್ಷಿಗಳಿಗೂ ಗಣಪತಿಗೂ ನಡೆಯುವ ಸಂವಾದ ಜನಮಾನಸದಲ್ಲಿಯೂ, ಪಂಡಿತರ ಪರಾಮರ್ಶೆಯಲ್ಲೂ ಉನ್ನತವಾದ ಸ್ಥಾನವನ್ನು ಪಡೆದಿದೆ. ಇಷ್ಟಾಗಿಯೂ ಈ ಪ್ರಸಂಗದ ಪ್ರತಿಮಾತ್ಮಕ ಸೌಂದರ್ಯ, ಕಾವ್ಯಾತ್ಮಕತೆಗಳು ರಸಿಕರ ಗಮನವನ್ನು ಅಷ್ಟಾಗಿ ಸೆಳೆದಂತಿಲ್ಲ. ಕಥೆಯ ಸೌಂದರ್ಯದ ಅಲೆಯಲ್ಲಿ ಮುಳುಗುವ ರಸಿಕರು ಅದರ ಕಾವ್ಯಾತ್ಮಕ ಪ್ರತಿಮೆಗಳನ್ನು ತೇಲಿಬಿಡುವ ಸಾಧ್ಯತೆಯೇ ಹೆಚ್ಚು. ಆದರೆ, ದೈವೀಕ ಆಟದಂತೆ ನಡೆಯುವ ಈ ಸಂವಾದ ತನ್ನೊಡಲಲ್ಲಿ ಭಾರತೀಯ ಪರಂಪರೆಯ ಮಹತ್ತರ ಗ್ರಹಿಕೆಯೊಂದನ್ನು ಅಡಗಿಸಿಕೊಂಡಿದೆ.
ವ್ಯಾಸ ಮಹರ್ಷಿಗಳು ಋಷಿಪರಂಪರೆಯ ಅತ್ಯುತ್ತಮ ಪ್ರತಿನಿಧಿ ಮಾತ್ರವಲ್ಲದೆ ಮಹಾಪ್ರತಿಭೆಯ ಕವಿಯೂ ಹೌದು. ಋಷಿಕವಿಗೆ ಭಾರತೀಯ ಪರಂಪರೆಯಲ್ಲಿ ಎತ್ತರದ ಸ್ಥಾನವಿದೆ. “ನಾನೃಷಿ: ಕುರುತೇ ಕಾವ್ಯಮ್” ಎನ್ನುವ ಪರಂಪರೆಯ ವಾಕ್ಯ ಅದನ್ನು ಸಾರುತ್ತದೆ. ಋಷಿಯಾದವನು ಕವಿಯಾದಾಗ ಹುಟ್ಟುವ ಕಾವ್ಯಕ್ಕೆ ಒಂದು ಸಾರ್ವಕಾಲಿಕವಾದ ಗುಣವಿರುತ್ತದೆ. ಆದ್ದರಿಂದಲೇ ರಾಮಾಯಣ ಮಹಾಭಾರತಗಳು ಜನಮಾನಸವನ್ನು ಅಷ್ಟರಮಟ್ಟಿಗೆ ಮಿಡಿದಿವೆ. ಸಾವಿರಾರು ವರ್ಷಗಳಲ್ಲಿ ಹುಟ್ಟಿರುವ ಯಾವ ಕವಿಯೂ ಪರಂಪರೆಯಲ್ಲಿ ವ್ಯಾಸ-ವಾಲ್ಮೀಕಿಗಳ ಎತ್ತರವನ್ನೇರುವುದು ಸಾಧ್ಯವಾಗಿಲ್ಲ.
ವ್ಯಾಸ ಮಹರ್ಷಿಗಳಾದರೋ ತಮ್ಮ ಕಾಲದಲ್ಲಿ “ನ ಭೂತೋ ನ ಭವಿಷ್ಯತಿ” ಎನ್ನುವಂತಹ ಕುಲಕ್ಷಯವನ್ನು ಕಂಡವರು. ತಾವು ಯಾವ ಕುಲದ ಹಿರಿಮೆಯನ್ನು ಎತ್ತಿಹಿಡಿಯುವದಕ್ಕಾಗಿ ಪರಿಶ್ರಮಿಸಿದರೋ ಆ ಕುಲ ತಮ್ಮ ಮುಂದೆಯೇ ಸಕಲ ನಾಮಾವಶೇಷ ಎನ್ನುವಂತಹ ಪರಿಸ್ಥಿತಿ ತಲುಪುವುದಕ್ಕೆ ಸಾಕ್ಷಿಯಾದವರು. ಅದನ್ನು ನೋಡಿಯೂ ಸ್ಥಿತಪ್ರಜ್ಞರಾಗಿರುವುದು ಋಷಿಯಾದವರಿಗೆ ಮಾತ್ರವೇ ಸಾಧ್ಯ.
ಒಂದು ಮಹಾನ್ ಪರ್ವಕಾಲ ಮಾನವಸ್ವಭಾವದ ವಿಶಿಷ್ಟ ಒಳನೋಟಕ್ಕೆ ಅವಕಾಶವೂ ಹೌದು. ಕರುಣಾಳುವಾದ ವ್ಯಾಸರು ಎರಡೂ ಕಡೆಯ ಸರಿ-ತಪ್ಪುಗಳನ್ನು ಗ್ರಹಿಸಿ ಅಳೆದು ತೂಗಬಲ್ಲವರಾಗಿದ್ದರು. ಕೌರವ ಪಾಂಡವರಿಬ್ಬರೂ ಅವರಿಗೆ ಸಮಾನವಾಗಿ ಪ್ರೀತಿಪಾತ್ರರಾಗಿದ್ದರು. ಆದ್ದರಿಂದ ದಾರುಣವಾದ ಆ ಕುರುಕ್ಷೇತ್ರ ಯುದ್ಧ ಕವಿಮನಸ್ಸನ್ನು ಮಿಡಿದಿದ್ದರೆ ಆಶ್ಚರ್ಯವೇನೂ ಇಲ್ಲ. ಆದರೆ, ಅಷ್ಟೆಲ್ಲವನ್ನೂ ಆ ಬೃಹತ್ತಿನಲ್ಲಿ ಗ್ರಹಿಸಿ, ಸಾರ್ವಕಾಲಿಕವಾದ ಅಂಶಗಳನ್ನು ಬೇರ್ಪಡಿಸುವುದು ಮಹತ್ತರ ಕಾರ್ಯವೇ ಸರಿ. ಅದಕ್ಕೂ ಮಿಗಿಲಾಗಿ, ವ್ಯಾಸರು ಋಷಿಕವಿಗಳಾದ್ದರಿಂದ ಸಹಸ್ರಾರು ವರ್ಷಗಳ ಕಾಲ ಉಳಿಯುವ ಹೃದಯಸ್ಪರ್ಶಿಯಾದ ಕೃತಿಯೊಂದು ರೂಪುಗೊಂಡಿತು. ಮನುಕುಲದ ಎಲ್ಲ ಅಂಶಗಳನ್ನೂ ಒಳಗೊಂಡಂತಹ ಒಂದು ಕಥೆಯಾಯಿತು. ಕಾಲ ಪುರುಷನ ಎಲ್ಲ ಪರೀಕ್ಷೆಗಳನ್ನೂ ಮೀರಿ ಉಳಿಯುವಂತಹ ಮಹಾಕಾವ್ಯವಾಯಿತು. ಕುಲಕ್ಷಯದ ಮಹಾವ್ಯಾಪ್ತಿ, ಸಕಲಪ್ರಾಣಿಗಳ ಕುರಿತ ಜೀವದಯೆ, ಋಷಿತ್ವದಿಂದ ಬರುವ ತ್ರಿಕಾಲ ಜ್ಞಾನ ಇವುಗಳ ಸಂಗಮದಿಂದ ವ್ಯಾಸರು ಅತ್ಯುನ್ನತವಾದ ಮಹಾಭಾರತ ಕಾವ್ಯವನ್ನು ಸೃಷ್ಟಿಸಿದರು. ಮನುಕುಲ ಅದನ್ನು ಇಂದಿಗೂ ಆರಾಧಿಸುತ್ತಿದೆ.
ಧರ್ಮ ಅದೆಷ್ಟು ಸೂಕ್ಷ್ಮ, ಆ ದಾರಿ ಅದೆಷ್ಟು ಕಠಿಣ ಎನ್ನುವುದು ವ್ಯಾಸರಿಗೆ ಗೊತ್ತಿರುವುದೇ ಸರಿ. ಈ ದಿಸೆಯಲ್ಲಿ ಮನುಷ್ಯರು ಪಡುವ ಪಡಿಪಾಟಲಿನ ಬಗ್ಗೆ ವ್ಯಾಸರಿಗೆ ಅದೆಷ್ಟು ಮರುಕವಿದೆ ಎನ್ನುವುದು ಮಹಾಭಾರತದಲ್ಲಿ ನಮ್ಮ ಅರಿವಿಗೆ ಬರುತ್ತದೆ. ಆದರೆ ಕಡೆಯಲ್ಲಿ ಧರ್ಮವನ್ನು ಎತ್ತಿಹಿಡಿಯದೇ ಇರಲಾಗದು. ಸಮಸ್ತ ಮನುಕುಲದ ಹಿತವಾಗಬೇಕಾದರೆ ಅದಕ್ಕೆ ಧರ್ಮವೇ ಬೇಕು. ಆಗಾಗ್ಗೆ ಧರ್ಮಾಧರ್ಮ ವಿವೇಕ ಕ್ಷೀಣಿಸಿದ್ದಕ್ಕೂ, ಧರ್ಮದ ದಾರಿಯಿಂದ ಮನುಕುಲ ವಿಚಲಿತವಾಗುವುದಕ್ಕೂ ವ್ಯಾಸರಿಗೆ ಅತೀವ ದುಃಖವಾದದ್ದಿದೆ. ಆದರೆ ಅದರಿಂದ ವ್ಯಾಸರ ದೃಷ್ಟಿಗೇನೂ ವ್ಯತ್ಯಾಸವಾಗಲಿಲ್ಲ. ತಮ್ಮೆರಡೂ ಕೈಗಳನ್ನೆತ್ತಿ ಧರ್ಮವೇ ಎಲ್ಲಕ್ಕೂ ಮಿಗಿಲು, ಆಧಾರಸ್ಥಂಭ, “ಧಾರಯತಿ ಇತಿ ಧರ್ಮ” ಎನ್ನುವುದನ್ನು ವ್ಯಾಸರು ಸದಾ ಎತ್ತಿ ಹಿಡಿದರು. ತಮ್ಮೆಲ್ಲಾ ದಿವ್ಯದೃಷ್ಟಿಯನ್ನು ಮಹಾಕಾವ್ಯದೊಳಗೆ ಸಮ್ಮಿಳಿಸಿದರು.
ವ್ಯಾಸರ ಮನಸ್ಸಿನಲ್ಲಾಗಲೇ ಈ ಮಹಾಕಾವ್ಯದ ಬೀಜ ಮೊಳಕೆಯೊಡೆದು ತನ್ನ ಶಿಲ್ಪ ಮತ್ತು ಸೌಷ್ಠವ ಪಡೆದುಕೊಳ್ಳತೊಡಗಿತ್ತು. ಆದರೆ ಮರ್ತ್ಯಲೋಕದಲ್ಲಿ ರೂಪುತಳೆದ ಮಹಾಕಾವ್ಯವಾಗಬೇಕಾದರೆ ಒಬ್ಬ ಬರಹಗಾರನ ಅವಶ್ಯಕತೆಯಿತ್ತು. ಈ ಮಹತ್ತರ ಹೊಣೆಗಾರಿಕೆಗೆ ಯಾರು ಸಮರ್ಥರು, ಅದಕ್ಕೆ ಹಿಡಿಯುವ ಕಾಲವಾದಾರೂ ಎಷ್ಟು ಎನ್ನುವುದು ವ್ಯಾಸರಿಗೆ ಬಗೆಹರಿಯಲಿಲ್ಲ. ಚತುರ್ಮುಖ ಬ್ರಹ್ಮನಿಗೆ ತಿಳಿಯದುದಾದರೂ ಯಾವುದು? ವ್ಯಾಸರ ಸಮಸ್ಯೆ ಬಗೆಹರಿಸಲು ಸ್ವತಃ ಬ್ರಹ್ಮನು ತಾನೇ ಅವರ ಆಶ್ರಮಕ್ಕೆ ಭೇಟಿ ಕೊಟ್ಟನು. ನಮಸ್ಕರಿಸಿದ ವ್ಯಾಸರು ತಮ್ಮ ಕಾವ್ಯವ್ಯಾಕುಲತೆಯನ್ನು ನಿವೇದಿಸಿದರು. ನಸುನಕ್ಕ ಬ್ರಹ್ಮನು ವಿಘ್ನೇಶ್ವರನಾದ ಗಣಪತಿಯನ್ನು ಪ್ರಾರ್ಥಿಸುವುದಕ್ಕೆ ಸೂಚಿಸಿದನು. ಆದರೆ ಅದೇನೂ ಸುಲಭವಾದ ವಿಷಯವಾಗಿರಲಿಲ್ಲ. ಅದಕ್ಕೊಂದು ತಪಸ್ಸಿನ ಅವಶ್ಯಕತೆಯಿತ್ತು. ವ್ಯಾಸರು ಗಣಪತಿಯನ್ನು ಪ್ರಾರ್ಥಿಸಿ ಒಲಿಸಿಕೊಳ್ಳಬೇಕೆಂದು ಬ್ರಹ್ಮನು ಸೂಚಿಸಿದನು. ತದನಂತರ ಅಂತರ್ಧಾನನಾದನು. ಆಶ್ರಮದ ಮರದಕೆಳಗೆ ಕುಳಿತು ವ್ಯಾಸರು ಗಣಪತಿಯನ್ನು ನೆನೆಯುತ್ತಾ ಧ್ಯಾನಕ್ಕೆ ಮೊದಲಾದರು. ವ್ಯಾಸರ ವಿನಮ್ರ ಪ್ರಾರ್ಥನೆಗೆ ಓಗೊಡದವರಾದರೂ ಯಾರು? ವಿಘ್ನಕರ್ತನೂ, ವಿಘ್ನಹರ್ತನೂ ಆದ ಗಣಪತಿ ಶೀಘ್ರದಲ್ಲಿ ಪ್ರತ್ಯಕ್ಷನಾದನು.
ಪ್ರತಿಯೊಂದು ಕಾರ್ಯಸಾಧನೆಗೂ ಒಂದು ಪ್ರತ್ಯೇಕವಾದ ತಪಸ್ಸಿನ ಅವಶ್ಯಕತೆ ಇರುವುದನ್ನು ನಮ್ಮ ಪರಂಪರೆ ಸಾರಿ ಹೇಳುತ್ತದೆ. ನಮ್ಮ ಇತಿಹಾಸ-ಪುರಾಣ-ಮಹಾಕಾವ್ಯಗಳಲ್ಲಿ ಈ ಒಂದು ಬಗೆಯನ್ನು ನಾವು ಕಾಣಬಹುದು. ದೇವಗಂಗೆ ಭೂಮಿಗಿಳಿದುಬರುವುದನ್ನೇ ಪರಿಗಣಿಸಿ. ಭಗೀರಥನು ಬ್ರಹ್ಮನ ಕುರಿತು ತಪಸ್ಸನ್ನು ಮಾಡಿ ಅವನನ್ನೊಲಿಸಿಕೊಂಡದ್ದು ಸರಿಯೇ. ದೇವಗಂಗೆಯನ್ನು ಭೂಮಿಗೆ ತರಲು ಒಪ್ಪಿಗೆ ಪಡೆದುಕೊಂಡದ್ದೂ ಸರಿ. ಆದರೆ ಗಂಗೆ ಸುಸ್ಥಿರವಾಗಿ ಭೂಮಿಗಿಳಿದು ಬರುವುದಕ್ಕೆ ಮಹಾದೇವನ ಕುರಿತು ಮತ್ತೊಂದು ತಪಸ್ಸನ್ನು ಆಚರಿಸಬೇಕಾಯಿತು. ನಮ್ಮ ಪರಂಪರೆಯಲ್ಲಿ ಇದೊಂದು ಮಹತ್ತರವಾದ ಗ್ರಹಿಕೆ. ಸಂಪೂರ್ಣವಾದ ಕಾರ್ಯಸಾಧಗೆ ಪ್ರತ್ಯೇಕವಾದ ವಿಶಿಷ್ಟವಾದ ತಪಸ್ಸಿನ ಅವಶ್ಯಕತೆಯಿರುತ್ತದೆ. ಅರ್ಧವಾದ ಕೆಲಸ ಅವಾಂತರವೇ ಸರಿ.
ಮಹರ್ಷಿ ವ್ಯಾಸರು ಭಕ್ತಿಯಿಂದ ಗಣೇಶನನ್ನು ಬರಮಾಡಿಕೊಂಡರು. ತಾವು ತಪಸ್ಸನಾಚರಿಸಿದ, ಅಧ್ಯಯನವನ್ನು ಕೈಗೊಂಡಿದ್ದ ಅದೇ ಮರದ ಕೆಳಗೆ ಆಸನವನ್ನು ಕೊಟ್ಟರು. ತಮ್ಮ ಮಹದಾಶೆಯನ್ನು ಗಣಪತಿಗೆ ಅರುಹಿದರು. ಗಣಪತಿಯಾದರೋ ವ್ಯಾಸರಿಗೆ ಮಹತ್ತರವಾದ ಪರೀಕ್ಷೆಯೊಡ್ಡಿದನು. ವ್ಯಾಸರ ಮಹಾಕಾವ್ಯಕ್ಕೆ ಲೇಖನಿಯಾಗುವುದಕ್ಕೆ ಗಣಪತಿಗೇನೂ ಅಭ್ಯಂತರವಿರಲಿಲ್ಲ. ಆದರೆ, ಒಮ್ಮೆ ಬರವಣಿಗೆಯಲ್ಲಿ ತೊಡಗಿದನೆಂದರೆ ಅದನ್ನು ಮಧ್ಯದಲ್ಲಿ ನಿಲ್ಲುಸುವುದಾಗಬಾರದು ಎನ್ನುವುದು ಗಣಪತಿಯ ಶರತ್ತು. ವ್ಯಾಸರ ಕಾವ್ಯಪ್ರವಾಹ ಅವ್ಯಾಹತವಾಗಿರಬೇಕು. ವ್ಯಾಸರು “ಇನ್ನೇನು ಬರೆಯಬೇಕು” ಎನ್ನುವ ಯೋಚನೆಗೇನಾದರೂ ಬಿದ್ದರೋ ಗಣಪತಿ ಬರೆಯುದನ್ನು ಅಲ್ಲಿಯೇ ನಿಲ್ಲಿಸಿ ಮುಂದೆ ನಡೆಯುವುದು ಖಚಿತವಾಗಿತ್ತು. ಮಹಾಕಾವ್ಯ ಅಲ್ಲಿಗೆ ನಿಂತುಹೋಗುವ ಅಪಾಯವಿತ್ತು. ಒಟ್ಟಿನಲ್ಲಿ, ವ್ಯಾಸರು ತಮ್ಮ ಕಾವ್ಯಮನಸ್ಸನ್ನು ಸದಾ ಸೃಷ್ಟಿಶೀಲತೆಯ ಸುಸ್ಥಿತಿಯಲ್ಲಿ ನಡೆಸುವುದಕ್ಕೆ ಗಣಪತಿಯ ಸವಾಲು ಪ್ರೇರಣೆಯಾಯಿತು.
ಮೇಲ್ನೋಟಕ್ಕೆ ಗಣಪತಿ ಅಸಹನೆಯಿಂದ ಕೂಡಿದವನಾಗಿ ತೋರಬಹುದು. ಆದರೆ ಗಣಪತಿಯ ಆಲೋಚನೆಯೇ ಬೇರೆ. ಕೇಳಿದ್ದನ್ನು ಬರೆಯುವವನೂ ಕಾವ್ಯಾಸ್ವಾದನೆಯ ಸೌಖ್ಯವನ್ನು ಅನುಭವಿಸಬೇಕಲ್ಲವೆ? ವ್ಯಾಸರು ತಮ್ಮ ಪ್ರತಿಭಾಸೃಷ್ಟಿಯನ್ನು ನಿರೀಕ್ಷೆಯ ಆ ಮಟ್ಟಕ್ಕೆ ಏರಿಸಬೇಕಾದೀತು. ಕಾವ್ಯವನ್ನು ಲೇಖನಿಗಿಳಿಸುವುದೂ ಒಂದು ಬೃಹತ್ ಕಾರ್ಯ. ಆ ಕಾರ್ಯದಲ್ಲಿ ಮನಸ್ಸು ಉಲ್ಲಾಸದಿಂದರಬೇಕಾದ್ದು ಸಾಧುವಾದ ನಿರೀಕ್ಷೆಯೇ ಸರಿ. ಒಟ್ಟಿನಲ್ಲಿ, ಗಣಪತಿಯ ಈ ಸವಾಲಿಲ್ಲದಿದ್ದರೆ ಮಹಾಭಾರತ ಕಾವ್ಯ ಬೇರೆಯ ಸ್ವರೂಪದ್ದಾಗಿರಬಹುದಾದ ಸಾಧ್ಯತೆಯೇ ಹೆಚ್ಚು. ವಿಘ್ನವೊಂದನ್ನು ಸೃಷ್ಟಿಸುವ ನೆಪದಲ್ಲಿ ಗಣಪತಿ ಅನೇಕ ವಿಘ್ನಗಳನ್ನು ತೊಡೆದನಲ್ಲದೇ ಕಾವ್ಯಪ್ರವಾಹಕ್ಕೆ ಘನತೆಯನ್ನೇ ತಂದುಕೊಟ್ಟನು.
ವ್ಯಾಸರಿಗಾದರೋ ಗಣೇಶನು ಸುಲಭದವನಲ್ಲವೆನ್ನುವುದು ತಿಳಿದೇ ಇತ್ತು. ಸವಾಲನ್ನು ಭಕ್ತಿಯಿಂದ ಸ್ವೀಕರಿಸಿ ತಮ್ಮ ಮನಸ್ಸಿನೊಳಗೊಂದಿಷ್ಟು ವಿಹರಿಸಿದರು. ಕಡೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರಲ್ಲದೇ ಗಣಪತಿಗೆ ಒಂದು ಮರುಸವಾಲನ್ನು ಹಾಕಿದರು. ತಮ್ಮ ಕಾವ್ಯದ ಸಾಲುಗಳನ್ನು ಅರ್ಥೈಸಿ ಅಂತರ್ಗತ ಮಾಡಿಕೊಂಡ ಹೊರತು ಗಣಪತಿ ಅದನ್ನು ಬರಹಕ್ಕಿಳಿಸುವ ಹಾಗಿರಲಿಲ್ಲ. ಸಂದರ್ಭ, ಅರ್ಥ, ಮಹತ್ವಗಳೆಲ್ಲವನ್ನೂ ಮನನ ಮಾಡಿಕೊಂಡ ನಂತರವೇ ಗಣಪತಿ ಲೇಖನಿಯನ್ನು ಹಿಡಿಯಬೇಕಾಗಿತ್ತು.
ವ್ಯಾಸರ ಸವಾಲನ್ನು ಕೇಳಿ ನಸುನಕ್ಕನು ಗಣಪತಿ. ತಮ್ಮ ಕಾವ್ಯಸೃಷ್ಟಿಯಲ್ಲಿ ಮುಂದಿರುವುದಕ್ಕೆ ಯಾವ ಉಪಾಯ ಬೇಕೋ ಅದು ವ್ಯಾಸರಿಗೆ ತಿಳಿದಿದೆ ಎನ್ನುವುದು ಗಣಪತಿಗೆ ಅರಿವಾಯಿತು. ಸೃಷ್ಟಿ-ಬರಹಗಳ ಈ ಆಟದಲ್ಲಿ ಮಹಾಕಾವ್ಯ ಸೃಷ್ಟಿಯಾಗುವುದು ಖಚಿತ ಎನ್ನುವುದು ಗಣಪತಿಗೆ ತಿಳಿದುಹೋಯಿತು. ವ್ಯಾಸರಿಗೆ ತಮ್ಮ ಮುಂದಿನ ಸಾಲುಗಳನ್ನು ತಮ್ಮ ಕಾವ್ಯಭೂಮಿಕೆಯಲ್ಲಿ ಚಿತ್ರಿಸುವುದಕ್ಕೆ ಬೇಕಾದ ಸಮಯ ಹೀಗೆ ಒದಗಿತು. ತಮ್ಮ ಸಾಲುಗಳನ್ನು ಗಣಪತಿ ಅರ್ಥೈಸುತ್ತಿರಬೇಕಾದರೆ ವ್ಯಾಸರು ಮುಂದಿನ ಸಾಲುಗಳನ್ನು ವ್ಯವಧಾನದಿಂದ ಸೃಷ್ಟಿಸುತ್ತಿದ್ದರು. ವ್ಯಾಸರು ಆಗಾಗ್ಗೆ ಅತಿ ಕಠಿಣವಾದ, ಅರ್ಥಗರ್ಭಿತವಾದ, ಮಹತ್ವಪೂರ್ಣವಾದ, ಕಾಲಾತೀತವೆನ್ನುಂತಹ ಪದ್ಯಗಳನ್ನು ಸೃಷ್ಟಿಸುತ್ತಿದ್ದರು. ಅದನ್ನು ಗಣಪತಿ ಅರ್ಥೈಸಿಕೊಳ್ಳುತ್ತಿರಬೇಕಾದರೆ ವ್ಯಾಸರು ಅನೇಕ ಸಾಲುಗಳನ್ನು ಸೃಷ್ಟಿಮಾಡಿಕೊಂಡಿರುತ್ತಿದ್ದರು. ಹೀಗೆ ಕಾವ್ಯದ ಸೃಷ್ಟಿ-ಬರಹಗಳ ಆಟ ಸುಂದರವಾಗಿ ಮೊದಲುಗೊಂಡಿತ್ತು. ಪದ್ಯಗಳು ಕಾವ್ಯಸೌಂದರ್ಯ, ಭಾವಪೂರ್ಣತೆ ಮತ್ತು ಅರ್ಥಸಂಪತ್ತಿಯಿಂದ ಕೂಡಿ ಬೆಳೆಯತೊಡಗಿತು. ಹೀಗೆ ಮನಃಪೂರ್ಣ, ಚಿಂತನಶೀಲ ಕಾವ್ಯಸೃಷ್ಟಿ ಮತ್ತು ಧ್ಯಾನಪೂರ್ಣ ಬರವಣಿಗೆಯ ಈ ದ್ವಂದ್ವದಲ್ಲಿ ಮಹಾಕಾವ್ಯ ನದಿಯೊಂದರ ಹರಿವನ್ನು ಪಡೆದುಕೊಂಡಿತು.
ವ್ಯಾಸರ ಸೃಷ್ಟಿಯಿಂದ ಗಣಪತಿಯ ಮನಸ್ಸು ಆಗಾಗ್ಗೆ ತುಂಬಿ ತಲೆದೂಗುವಾಂತಾಗುತ್ತಿತ್ತು. ಮಗದೊಮ್ಮೆ ಒಂದು ವಿಷಯವನ್ನೇ ಚಿಂತಿಸುತ್ತಾ ಗಣಪತಿ ಮಗ್ನನಾಗಿಬಿಡುತ್ತಿದ್ದನು. ಇನ್ನೂ ಕೆಲವೆಡೆ ಗಣಪತಿಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸದೇ ಇರಲಾಗುತ್ತಿರಲಿಲ್ಲ. ಒಟ್ಟಿನಲ್ಲಿ, ವ್ಯಾಸರಿಗೆ ತಮ್ಮ ಮುಂದಿನ ಸಾಲುಗಳನ್ನು ಸೃಷ್ಟಿಸಲು ಬೇಕಾದ ಕಾಲಾವಕಾಶ ನಿರಂತರವಾಗಿ ದೊರೆಯಿತು. ಈ ಆಟದ ಕಾರಣವಾಗಿ ಇಂದಿಗೂ ಮಹಾಭಾರತ ಒಂದು ಮಹತ್ತರ ಕಾವ್ಯವಾಗಿ ಉಳಿದಿದೆ. ಪ್ರತಿ ಓದಿನಲ್ಲಿಯೂ ಹೊಸ ಅರ್ಥಗಳನ್ನು ಹೊಳೆಸುತ್ತದೆ. ಪಂಡಿತಪಾಮರರೆನ್ನದೆ ಎಲ್ಲರಲ್ಲಿಯೂ ಧರ್ಮದ ಸತ್ವವೊಂದನ್ನು ಸೃಷ್ಟಿಸುವ ಶಕ್ತಿಯನ್ನು ಪಡೆದಿದೆ. ಕಾಲಕಾಲಾಂತರಗಳಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಸಾಹಿತ್ಯಕೃತಿಯಾಗಿದೆ.
ಆದರೆ ಇವೆಲ್ಲವನ್ನೂ ಮೀರಿದ ಒಂದು ಪ್ರತಿಮಾತ್ಮಕ ಸೌಂದರ್ಯ ಈ ಕಥೆಯಲ್ಲಡಗಿದೆ. ಒಂದೆಡೆ ಗಣಪತಿಯಿಂದ ಅವಿರತವಾಗಿ ಕಾವ್ಯ ಪ್ರವಾಹದ ನಿರೀಕ್ಷೆ, ಮತ್ತೊಂದೆಡೆ ವ್ಯಾಸರಿಂದ ಕಾವ್ಯವನ್ನು ಸಂಪೂರ್ಣ ಅಂತರ್ಗತ ಮಾಡಿಕೊಳ್ಳದೆ ಬರೆಯದಂತೆ ಪ್ರತಿಬಂಧ. ಇದು ಕೇವಲ ಕಥಾಸೌಂದರ್ಯವನ್ನು ಹೆಚ್ಚಿಸುವ ಒಂದು ಆಟವಲ್ಲ. ಇದು ಸಂಸ್ಕೃತಿಯೊಂದರಲ್ಲಿ ಮಹಾಕಾವ್ಯದ ಸೃಷ್ಟಿಯಾಗುವ ಪ್ರಕ್ರಿಯೆಗೆ ಒಂದು ಸುಂದರವಾದ ಪ್ರತಿಮೆಯೇ ಸರಿ.
ಈ ಪ್ರತಿಮೆಯಲ್ಲಿ ಗಣಪತಿ ಕಾವ್ಯವನ್ನು ಆಸ್ವಾದಿಸುವ ರಸಿಕನ ಪ್ರತಿನಿಧಿ. ಈ ರಸಿಕ ಕಾವ್ಯದಲ್ಲಿ ಮಹೋನ್ನತವಾದ ಕಲಾವಂತಿಕೆಯನ್ನೂ, ಮನದುಂಬುವಂತಹ ಅರ್ಥವಂತಿಕೆಯನ್ನ್ನೂ, ಹೃದಯದುಂಬುವಂತಹ ಭಾವಸಂಪತ್ತನ್ನೂ, ಅದೆಲ್ಲವನ್ನೂ ಹಿಡಿದಿಡುವಂತಹ ಲಯವನ್ನೂ ಬಯಸುತ್ತಾನೆ. ಭಾರತೀಯ ಸಂಸ್ಕೃತಿಯ ಮಹತ್ತರವಾದ ಕಾವ್ಯಗಳಲ್ಲೆಲ್ಲ ಈ ಒಂದು ಅಂಶವನ್ನು ಕಾಣಬಹುದು. ಅವೆಲ್ಲವೂ ಕಾಲಕಾಲಾಂತರದಲ್ಲಿ ಸಮಾಜವನ್ನೂ ರಸಿಕರನ್ನೂ ಸಂಪೂರ್ಣವಾಗಿ ಆವರಿಸಿಕೊಂಡಿವೆ, ಜನರ ಮನಮಿಡಿದಿವೆ. ಒಟ್ಟು ಕಥಾಸೌರಭವನ್ನು ಜನರು ಆಸ್ವಾದಿಸುವಂತಹ ಲಯದಲ್ಲಿ ಪ್ರಸ್ತುತಪಡಿಸುವುದರಲ್ಲಿ ಯಶಸ್ವಿಯಾಗಿವೆ. ಮಿಗಿಲಾಗಿ, ಕಾವ್ಯಾತ್ಮಕ ಸೂತ್ರಗಳಗಿಗೆ ಅನುಗುಣವಾಗಿಯೇ ಇದ್ದು, ಬೃಹತ್ತಾಗಿದ್ದೂ ಇವೆಲ್ಲವನ್ನು ಸಾಧಿಸಿವೆ. ಸಾಮಾನ್ಯ ಮನುಷ್ಯರ ದೈನದಿಂದಿನ ಬದುಕಿಗೆ ಪ್ರಸ್ತುತವಾಗಿವೆ. ಅದೇ ಸಮಯದಲ್ಲಿ ರಸಿಕರಿಗೆ ಸಾರ್ವಕಾಲಿಕತೆಯ ದರ್ಶನ ಮಾಡಿಸುವುದರಲ್ಲಿ ಯಶಸ್ವಿಯೂ ಆಗಿವೆ. ಹೀಗೆ ನಿತ್ಯ-ಸತ್ಯಗಳ ದರ್ಶನದಲ್ಲಿ ಭಾರತೀಯ ಕಾವ್ಯಗಳು ಯಶಸ್ವಿಯಾಗಿವೆ. ಅಂತೆಯೇ ಇಂದು ನಾವು ರಾಮಾಯಾಣ-ಭಾರತ-ರಘುವಂಶಗಳನ್ನು ಪಾರಾಯಣ ಮಾಡುತ್ತೇವೆ. ತತ್ಸಂಬಂಧಿತವಾದ ವಿದ್ವಾಂಸರ ವ್ಯಾಖ್ಯಾನಗಳಿಗೆ ಹಾತೊರೆಯುತ್ತೇವೆ.
ಮತ್ತೊಂದೆಡೆ, ರಸಿಕನಾಗಲಿ, ಮರುಪ್ರಸ್ತುತಿ ನಡೆಸುವ ಬರಹಗಾರನಾಗಲೀ, ಹಾಡುಗಾರನಾಗಲೀ ಕಾವ್ಯಸೃಷ್ಟಿಯಿಂದ ಹೊರತಾದ ಮನುಷ್ಯನಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಅವರೆಲ್ಲರೂ ಕಾವ್ಯಸೃಷ್ಟಿಯಲ್ಲಿ ಸಹಭಾಗಿಗಳೇ, ಕಾವ್ಯದಿಂದ ಅವರಿಗೂ ನಿರೀಕ್ಷಿಯಿದೆ. ಅದರಂತೆ ಪ್ರತಿಯೊಂದು ಪ್ರಸ್ತುತಿಯೂ ಮರುಸೃಷ್ಟಿಯೇ. ಒಮ್ಮೆ ಬರೆದಂತೆ ಮತ್ತೊಮ್ಮೆ ಬರೆಯುವುದಿಲ್ಲ. ಮರುಪ್ರಸ್ತುತಿಯ ಈ ಪ್ರಕ್ರಿಯೆಯಲ್ಲಿ ಅವನು ತತ್ಸಂಬಂಧಿತ ಕಾಲ, ದೇಶಗಳ, ಸಮಾಜಗಳ ಒಟ್ಟು ಪ್ರತಿನಿಧಿಯಾಗಿದ್ದಾನೆ. ಬರಹಗಾರನೋ, ಹಾಡುಗಾರನೋ ಕಾವ್ಯವೊಂದನ್ನು ಅಂತರ್ಗತ ಮಾಡಿಕೊಳ್ಳದೇ ಮರುಪ್ರಸ್ತುತಿ ಮಾಡುವಹಾಗೆಯೇ ಇಲ್ಲ. ಯಾವ ಸಮಾಜ, ಸಂಸ್ಕೃತಿ ಹೀಗೆ ಅಂತರ್ಗತ ಮಾಡಿಕೊಳ್ಳುವುದನ್ನು ತಾಳ್ಮೆಯಿಂದ ಉಳಿಸಿ-ಬೆಳೆಸುತ್ತದೆಯೋ, ಗೌರವಿಸುತ್ತದೆಯೋ, ಅಂತಹ ರಸಿಕರನ್ನು ಸೃಷ್ಟಿಸುತ್ತದೆಯೋ ಅಂತಹ ಸಮಾಜ ವ್ಯಾಸರಂತಹ ಋಷಿಕವಿಗಳನ್ನೂ ಬೆಳೆಸುತ್ತದೆ. ತಮ್ಮ ಮನಸ್ಸಿನಾಳದಲ್ಲಿ ಹುದುಗಿರುವ ಕಾವ್ಯಬೀಜದಿಂದ ಮಹಾಭಾರತದಂತಹ ಮಹಾವೃಕ್ಷವೊಂದನ್ನು ಬೆಳೆಸುವುದಕ್ಕೆ ಪ್ರೇರೇಪಿಸುತ್ತದೆ. ಅದಕ್ಕೆ ಬೇಕಾದ ಅವಕಾಶವನ್ನು ಸೃಷ್ಟಿಸುತ್ತದೆ. ತಮ್ಮ ಹೊಳಹುಗಳನ್ನು ಕಾಲಾಂತರದಲ್ಲಿ ಸ್ಥಿರವಾಗಿ ನಿಲ್ಲಬಲ್ಲ ಪ್ರತಿಮೆಗಳನ್ನಾಗಿಸುವುದಕ್ಕೆ ಜೊತೆಯಾಗುತ್ತದೆ.
ಪ್ರತಿಯೊಬ್ಬ ವ್ಯಾಸನಿಗೂ ತನ್ನ ಮಹಾಭಾರತವನ್ನು ಸೃಷ್ಟಿಸುವುದಕ್ಕೆ ಗಣಪತಿಯೊಬ್ಬನ ಅವಶ್ಯಕತೆಯಿದೆ. ಗಣಪತಿಯಿದ್ದರೆ ಮಾತ್ರ ಕವಿಯ ಮೇಲೆ ಕಾವ್ಯಾತ್ಮಕತೆಯ ಜವಾಬ್ದಾರಿಯನ್ನು ಹೊರಿಸುವುದಕ್ಕೆ ಸಾಧ್ಯ. ಅದರಂತೆಯೇ, ಗಣಪತಿಯಿದ್ದರೆ ಮಾತ್ರವೇ ಕಾವ್ಯವನ್ನು ಅಂತರ್ಗತ ಮಾಡಿಕೊಂಡು ಬರೆಯುವುದು ಸಾಧ್ಯ. ಕೇವಲ ಬರವಣಿಗೆಯೂ ಕಾವ್ಯದ ಮರುಸೃಷ್ಟಿಯ ಎತ್ತರಕ್ಕ್ಕೆ ಏರುವುದು ಸಾಧ್ಯ. ಕಾವ್ಯದ ಸೃಷ್ಟಿಕ್ರಿಯೆಯಲ್ಲಿ ಭಾಗಿಯಾಗುವುದು ಸಾಧ್ಯ. ವ್ಯಾಸರಿಗೆ ತಾವು ವ್ಯಾಸರಾಗುವುದಕ್ಕೆ ಅವಕಾಶವನ್ನು ಕಲ್ಪಿಸುವುದು ಸಾಧ್ಯ. ಯಾವ ಸಂಸ್ಕೃತಿ ಮಹತ್ತರವಾದ ಕಾವ್ಯಗಳನ್ನು ಸೃಷ್ಟಿಸಬಯಸುತ್ತದೆಯೋ ಅವು ಈ ಪ್ರಕ್ರಿಯೆಗಳನ್ನು ಉಳಿಸಿ ಬೆಳೆಸಿಯೇ ತೀರಬೇಕಾಗುತ್ತದೆ. ಅವುಗಳನ್ನು ಆಸ್ವಾದಿಸಬೇಕಾಗುತ್ತದೆ.
ಚತುರ್ಮುಖ ಬ್ರಹ್ಮನು ಗಣಪತಿಯನ್ನೇ ಕಾವ್ಯದ ಬರಹಗಾರನಾಗಿ ಸೂಚಿಸುವುದರಲ್ಲಿ ಒಂದು ಮಾರ್ಮಿಕವಾದ ವಿಚಾರವಿದೆ. ಗಣಪತಿಯು ವಿಘ್ನಕರ್ತನೂ ಹೌದು, ವಿಘ್ನಹರ್ತನೂ ಹೌದು. ತಡೆಗಳನ್ನೊಡ್ಡುವವನೂ ಅವನೇ, ನಿವಾರಿಸುವವನೂ ಅವನೇ. ಅವುಗಳ ನಡುವಣ ಸಂಘರ್ಷದಲ್ಲಿಯೇ ಮಹತ್ತರವಾದ ಸೃಷ್ಟಿಯಾಗುವುದು. ಮಹಾಕಾವ್ಯ ಸೃಷ್ಟಿಯಾಗಬೇಕಾದರೆ ವ್ಯಾಸರು ಈ ಹಾದಿಯಲ್ಲಿ ಸಾಗಿಯೇ ತೀರಬೇಕು. ಈ ಅಗ್ನಿಪರೀಕ್ಷೆಯಲ್ಲಿ ಗೆದ್ದೇ ಸೌಂದರ್ಯ, ಮಹತ್ತು ಮತ್ತು ನಿರಂತರತೆಯ ಸೃಷ್ಟಿ ಸಾಧ್ಯವಾಗುವುದು. ಸೃಷ್ಟಿಕ್ರಿಯೆಗೆ ತನ್ನದೇ ಆದ ಲಯ ಮತ್ತು ಕ್ರಿಯಾತ್ಮಕತೆ ಇರುತ್ತದೆ. ಅದಕ್ಕೊಂದು ತಪಸ್ಸಿನ ಅವಶ್ಯಕತೆಯಿದೆ. ಪುರಾಣಗಳಲ್ಲೆಲ್ಲ ದೇವತೆಗಳೂ ಸಹ ಮಹತ್ತರವಾದ ಕಾರ್ಯ ಕೈಗೊಳ್ಳುವ ಮೊದಲು ತಪಸ್ಸೊಂದನ್ನು ಆಚರಿಸಿಯೇ ಕಾರ್ಯಸಿದ್ಧಿ ಪಡೆಯುತ್ತಾರೆ.
ಇಲ್ಲಿ ಮತ್ತೊಂದು ಸ್ವಾರಸ್ಯವಿದೆ. ವ್ಯಾಸರು ಸರಿಯಾದ ಸಮಯ ಬರುವವರೆಗೂ ತಮ್ಮ ಮಹಾಕಾವ್ಯವಾದ ’ಜಯ’-ದ ಪಾರಾಯಣವನ್ನೂ, ಹಾಡುವುದನ್ನೂ ಅನುಮೋದಿಸಲಿಲ್ಲ. ಅದರಲ್ಲಿಯೂ ಸಾರ್ವಜನಿಕವಾಗಿಯಂತೂ ಮಾಡುವಂತೆಯೇ ಇರಲಿಲ್ಲ. ಕಾವ್ಯಸೃಷ್ಟಿಗೆ ಒಂದು ಜವಾಬ್ದಾರಿಯಿದೆ. ಕಾವ್ಯದಿಂದ ವರ್ತಮಾನ ಕಾಲಕ್ಕೆ ಯಾವುದೇ ಘಾಸಿಯಾಗುವ ಹಾಗಿರಲಿಲ್ಲ. ಕಾವ್ಯದ ರಚನೆಯಾಗುವ ಸಮಯದಲ್ಲಿ ಅದರಲ್ಲಿನ ಅನೇಕ ಪಾತ್ರಧಾರಿಗಳು ಜೀವಂತರಾಗಿಯೇ ಇದ್ದರು. ಅಂತೆಯೇ, ಕಾವ್ಯದ ಸಾರ್ವಜನಿಕ ಆಸ್ವಾದನೆಯೂ, ಮನುಕುಲಕ್ಕೆ ದಾರಿದೀಪವಾಗುವ ಬಗೆಯೂ ಸರಿಯಾದ ಸಮಯದ ಬರುವುದಕ್ಕೆ ನಿರೀಕ್ಷಿಸುವಂತಾಯಿತು.
ಒಟ್ಟು ಪರಿಣಾಮಕ್ಕೆ ನಮ್ಮ ಸಂಸ್ಕೃತಿಯಲ್ಲಿ ಎಂತಹ ಪ್ರಾಮುಖ್ಯತೆಯಿದೆ ಎನ್ನುವುದನ್ನು ಇದು ಸಾರುತ್ತದೆ. ಸೃಷ್ಟಿಯಾದ ವಸ್ತು ಅದೆಷ್ಟೇ ಸುಂದರವಾಗಿರಬಹುದು. ಆದರೆ ಅದರ ಆಸ್ವಾದನೆಗೆ ಸರಿಯಾದ ಪರಿಣಾಮಕ್ಕೆ ತನ್ನದೇ ಆದ ಸಮಯವಿದೆ. ಅದಕ್ಕಾಗಿ ಕಾದೇ ತೀರಬೇಕಾಗುತ್ತದೆ. ಇದು ಸೃಷ್ಟಿಕ್ರಿಯೆಯ ತಪಸ್ಸಿನ ಭಾಗವೇ ಆಗಿದೆ. ತಮ್ಮ ಸೃಷ್ಟಿಯ ಸೌಂದರ್ಯದಲ್ಲಿ ಯಾರೂ ಮೈಮರೆಯುವ ಹಾಗಿಲ್ಲ. ಸೃಷ್ಟಿಯೆನ್ನುವುದು ತನ್ನ ಒಟ್ಟು ಪರಿಣಾಮದಲ್ಲಿ ಸ್ಥಿತಿಗೆ ಬದ್ಧವಾಗಿರುವುದೇ ಭಾರತೀಯ ಸಂಸ್ಕೃತಿಯ ಮಹತ್ವವಾಗಿದೆ.
ಶ್ರೀ ಗಣೇಶಾಯ ನಮಃ.
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.