ಪೂರ್ವಕಾಲದಲ್ಲಿ ಮದ್ರದೇಶವನ್ನು ಅಶ್ವಪತಿಯೆಂಬ ರಾಜನು ಪಾಲಿಸುತ್ತಿದ್ದನು. ಮಹಾಧಾರ್ಮಿಕನಾದ ಅವನ ರಾಜ್ಯದಲ್ಲಿ ಸಕಲ ಸಮೃದ್ಧಿ ಮತ್ತು ವೈಭೋಗಗಳಿಗದ್ದವು. ಆದರೂ ರಾಜನ ಮನಸ್ಸಿಗೆ ನೆಮ್ಮದಿಯಿರಲಿಲ್ಲ. ರಾಜರಾಣಿಯರಿಗೆ ಮಕ್ಕಳಿರಲಿಲ್ಲ.
ಒಂದು ದಿನ ರಾಜ ತನ್ನ ಆಪ್ತಮಂತ್ರಿಗಳೊಡನೆ ದುಃಖವನ್ನ್ನು ತೋಡಿಕೊಂಡನು. “ಮಂತ್ರಿಗಳೇ, ನನ್ನಿಂದ ಯಾವುದೇ ದೇವತಾಕಾರ್ಯದಲ್ಲಿ ಲೋಪವಾಗಿಲ್ಲ. ಹೀಗಿದ್ದರೂ ದೈವಕೃಪೆ ನನಗಿನ್ನೂ ದೊರೆತಿಲ್ಲ” ಎಂದು ನೊಂದು ನುಡಿದನು. ಆಗ ರಾಜನ ಆಪ್ತೇಷ್ಟರು “ಮಹಾರಾಜ! ಸವಿತೃ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಯಜ್ಞಕಾರ್ಯ ನಡೆಸಿದರೆ ಸಕಲ ಇಷ್ಟಾರ್ಥಗಳು ಪೂರೈಸುವುದು ಎಂದು ಕೇಳಿದ್ದೇವೆ” ಎಂದು ಸಲಹೆ ನೀಡಿದರು. ರಾಜನು ತಕ್ಷಣವೇ ಒಂದು ದಿನ ನಿಗದಿ ಮಾಡಿ ಸವಿತೃ ದೇವತೆಯ ಮಂದಿರಕ್ಕೆ ತೆರಳಿ ರಾಜಪರಿವಾರ ಸಮೇತನಾಗಿ ಪೂಜೆ ಸಲ್ಲಿಸಿ, ಯಜ್ಞ ಕಾರ್ಯ ನಡೆಸಿದನು. ಅವನ ಭಕ್ತಿಗೆ ಮೆಚ್ಚಿದ ಸವಿತೃ ದೇವತೆ ಪ್ರತ್ಯಕ್ಷನಾಗಿ ರಾಜನ ಇಷ್ಟಾರ್ಥ ನೆರೆವೇರುತ್ತದೆ ಎಂದು ವರವನ್ನು ಕೊಟ್ಟು ಅಂತರ್ಧಾನನಾದನು. ಅದರಂತೆ ಅವನ ಮಹಾರಾಣಿ ಶೀಘ್ರದಲ್ಲಿ ಗರ್ಭವತಿಯಾಗಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ರಾಜಪರಿವಾರ ಮತ್ತು ರಾಜ್ಯದ ಜನತೆ ಸಂತಸದಲ್ಲಿ ಮುಳುಗಿತು. ಸವಿತೃ ದೇವತೆಯ ವರದಿಂದ ಹುಟ್ಟಿದ ಪುತ್ರಿಗೆ ರಾಜನು ಸಾವಿತ್ರಿ ಎಂದು ಹೆಸರಿಟ್ಟನು.
ಕ್ಷತ್ರಿಯ ಕುಲಸಂಜಾತೆಗೆ ಅನುಗುಣವಾದ ರೀತಿಯಲ್ಲಿ ಸಾವಿತ್ರಿಯ ವಿದ್ಯಾಭಾಸ ಮೊದಲಾಯಿತು. ದೈವೀಕ ಸುಂದರಿಯಾದ ಸಾವಿತ್ರಿ ಸಂಗೀತ, ತತ್ವಶಾಸ್ತ್ರ, ಜ್ಯೋತಿಷ್ಯವೇ ಮೊದಲಾದ ವಿದ್ಯೆಗಳಲ್ಲಿ ಪರಿಣತಳಾದಳು. ಹೀಗಿರುವಾಗ ಒಮ್ಮೆ ಸಾವಿತ್ರಿ ತನ್ನ ಸ್ನೇಹಿತೆಯರೊಂದಿಗೆ ದೇವಮಂದಿರವೊಂದಕ್ಕೆ ತೆರಳಿದಳು. ಆಕಸ್ಮಿಕವಾಗಿ ಎದುರಾಗಿ ಬಂದ ಅರಮನೆಯ ಕುದುರೆಸವಾರನೊಬ್ಬ ಅವಳಿಗೆ ಗೌರವದಿಂದ ನಮಸ್ಕರಿಸಿದನು. ಮುಜುಗರಕ್ಕೊಳಗಾದ ಸಾವಿತ್ರಿ “ಚಿಕ್ಕವಳಾದ ನನಗೇಕೆ ನಮಸ್ಕರಿಸುತ್ತಿದ್ದೀರಿ?” ಎಂದು ಕೇಳಿದಾಗ ಸವಾರನು “ನೀವು ನಮ್ಮ ರಾಜಕುಮಾರಿಯಾದುದರಿಂದ ನಮಸ್ಕರಿಸಿದೆನು. ಅದಿಲ್ಲದಿದ್ದರೂ ನಿಮ್ಮ ದೈವೀಕ ಸೌಂದರ್ಯಕ್ಕೆ ತಲೆಬಾಗುತ್ತಿದ್ದೆನು” ಎಂದು ಉತ್ತರಿಸಿದನು. ಈ ಘಟನೆಯನ್ನು ಅರಮನೆಯಿಂದ ನೋಡಿದ ಮಹಾರಾಜನು ಸಾವಿತ್ರಿಯ ಘನಗಾಂಭೀರ್ಯಕ್ಕೆ ಹೆಮ್ಮೆಪಡುತ್ತಾ, ಅವಳು ವಿವಾಹಯೋಗ್ಯಳಾಗಿದ್ದಾಳೆಂದು ಗುರುತಿಸಿದನು. ಅವಳಿಗೆ ತಕ್ಕ ವರನನ್ನು ಹುಡುಕಲು ಅರಮನೆಯಿಂದ ದೂತರನ್ನು ವಿವಿಧ ರಾಜ್ಯಗಳಿಗೆ ಕಳುಹಿಸಿ, ಅಲ್ಲಿನ ರಾಜರಿಗೆ ವಿವಾಹಪ್ರಸ್ತಾವ ಸಲ್ಲಿಸಿದನು.
ಆದರೆ ಸಾವಿತ್ರಿಯ ವಿದ್ಯೆ, ಜ್ಞಾನ, ಕೌಶಲ್ಯಗಳು ಅದಾಗಲೇ ಉದ್ದಗಲ ಹಬ್ಬಿದ್ದವು. ಎಲ್ಲ ರಾಜರೂ ತಮ್ಮ ಯಾವ ಮಕ್ಕಳೂ ಸಾವಿತ್ರಿಗೆ ತಕ್ಕವರಲ್ಲವೆಂದು ತಿಳಿದು ಪ್ರಸ್ತಾವವನ್ನು ಸ್ವೀಕರಿಸುವುದಕ್ಕೆ ಗೌರವದಿಂದಲೇ ಹಿಂಜರಿದರು. ಅಶ್ವಪತಿ ರಾಜನು ಚಿಂತೆಗೊಳಗಾದನು. ಅಷ್ಟರಲ್ಲಿ ಅರಮನೆಯ ಆಪ್ತೇಷ್ಟರು “ಸಕಲವಿದ್ಯಾಪಾರಂಗತಳಾದ ಸಾವಿತ್ರಿ ತನ್ನ ಪತಿಯನ್ನು ತಾನೇ ಆಯ್ಕೆ ಮಾಡಿಕೊಂಡರೆ ಹೇಗೆ?” ಎನ್ನುವ ಸಲಹೆ ಕೊಟ್ಟರು. ಮಂತ್ರಾಲೋಚನೆ ನಡೆಸಿದ ಅಶ್ವಪತಿ ರಾಜನಿಗೆ ಈ ಸಲಹೆ ಸೂಕ್ತವೆಂದೆನಿಸಿತು. ಸಾವಿತ್ರಿಯನ್ನು ಕರೆದು ತನ್ನ ಪತಿಯನ್ನು ತಾನೇ ಆಯ್ಕೆಮಾಡಿಕೊಳ್ಳುವಂತೆ ಅನುಮತಿ ಕೊಟ್ಟನು. ನಂಬಿಕಸ್ಥ ರಾಜಪರಿಜನರನ್ನು ಸಾವಿತ್ರಿಯ ಜೊತೆಮಾಡಿ ಅನೇಕಾನೇಕ ರಾಜ್ಯಗಳ ಪರ್ಯಟನೆ ಕೈಗೊಳ್ಳತಕ್ಕದ್ದು ಮತ್ತು ಸೂಕ್ತನಾದ ವರನನ್ನು ಸಾವಿತ್ರಿಯೇ ಆಯ್ಕೆಮಾಡಿಕೊಳ್ಳತಕ್ಕದ್ದು ಎಂದು ರಾಜನು ಅಪ್ಪಣೆಮಾಡಿದನು. ರಾಜಪರಿವಾರ ಅನೇಕ ರಾಜ್ಯಗಳು ಮತ್ತು ಪುಣ್ಯಕ್ಷೇತ್ರಗಳನ್ನು ಪರ್ಯಟಿಸಿ ಒಂದು ಕಾಡಿನ ಮೂಲಕ ಹಾದುಹೋಗುತ್ತಿದ್ದಾಗ ಸಾವಿತ್ರಿ ಒಬ್ಬ ಸುಂದರನಾದ ತಪಸ್ವಿಯನ್ನು ಕಂಡಳು. ‘ಸುಂದರನಾದ ಈ ಯುವಕ ಇಷ್ಟು ಚಿಕ್ಕವಯಸ್ಸಿಗೇ ತಪಸ್ವಿ ಹೇಗಾದನು’ ಎಂದು ಆಶ್ಚರ್ಯಗೊಂಡಳು. ಅವಳ ಮನಸ್ಸು ಮೋಹಪೂರ್ವಕವಾಗಿ ವಿಚಲಿತಗೊಂಡಿತು. ನಂತರದಲ್ಲಿ ಯಾವುದೇ ರಾಜ್ಯದಲ್ಲಿ ಯಾವ ರಾಜಕುಮಾರನೂ ಸಾವಿತ್ರಿಗೆ ಸೂಕ್ತವೆನಿಸಲಿಲ್ಲ. ಮನಸ್ಸಿನಲ್ಲಿ ಆ ತಪಸ್ವೀ ಕುಮಾರನೇ ಮೂಡುತ್ತಿದ್ದನು.
ಕಡೆಗೆ ಮಹಾಮಂತ್ರಿ “ರಾಜಕುಮಾರಿ, ನಿನಗೆ ಸೂಕ್ತನಾದ ವರ ಹೇಗಿರಬೇಕು ಎಂದು ವಿವರಿಸುವೆಯಾ?” ಎಂದು ಕೇಳಿದನು. ಪೂರ್ವಾಪರ, ಹೆಸರು ಗೊತ್ತಿಲ್ಲದ ಆ ಯುವಕನ ಬಗ್ಗೆ ಏನು ಹೇಳುವುದು ಎಂದು ಗೊತ್ತಾಗದೇ ಸಾವಿತ್ರಿ ಅನ್ಯಮನಸ್ಕಳಾದಳು. ಮದ್ರದೇಶಕ್ಕೆ ವಾಪಸಾಗುವುದೆಂದು ತೀರ್ಮಾನಿಸಿದರು. ಹಿಂದಿರುಗಿ ಹೋಗುತ್ತಿದ್ದಾಗ ಪರಿವಾರ ಮತ್ತೆ ಅದೇ ಕಾಡಿನಲ್ಲಿ ಹಾದುಹೋಯಿತು. ಬಾಯಾರಿಕೆ ತಣಿಸಿಕೊಳ್ಳಲು ಸಾವಿತ್ರಿ ಕೊಳವೊಂದರ ಹತ್ತಿರ ಇಳಿದಳು. ಅದೃಷ್ಟವಶಾತ್ ಮತ್ತೆ ಅದೇ ತಪಸ್ವೀ ಕುಮಾರನು ಕಾಣಿಸಿಕೊಂಡನು. ‘ಅವನೇ, ಅವನೇ….’ ಎಂದು ರಾಜಕುಮಾರಿ ಸಂತೋಷಪಟ್ಟಳು. ತಪಸ್ವೀಕುಮಾರ ರಾಜಕುಮಾರಿಗೆ ಸ್ವತಃ ತಾನೇ ನೀರನ್ನು ಕೊಟ್ಟನು. ತಕ್ಷಣವೇ ತನ್ನ ಮಂತ್ರಿಗೆ ಅವನ ಪೂರ್ವಾಪರವನ್ನು ತಿಳಿದುಕೊಳ್ಳುವಂತೆ ವಿನಂತಿಸಿದಳು. ಸ್ವಲ್ಪದರಲ್ಲೇ ಹಿಂದಿರುಗಿದ ಮಂತ್ರಿ, ಅವನು ನಿಜದಲ್ಲಿ ತಪಸ್ವೀಕುಮಾರನಲ್ಲವೆಂದೂ, ರಾಜಕುಮಾರನಾದ ಅವನ ಹೆಸರು ಸತ್ಯವಾನನೆಂದೂ ತಿಳಿಸಿದನು. ಅವನ ತಂದೆಯಾದ ದ್ಯುಮತ್ಸೇನ ಸಾಲ್ವದೇಶದ ರಾಜನಾಗಿದ್ದವನು ಮತ್ತು ಇತ್ತೀಚಿನ ಯುದ್ಧದಲ್ಲಿ ರಾಜ್ಯ ಮತ್ತು ಕಣ್ಣುಗಳೆರಡನ್ನೂ ಕಳೆದುಕೊಂಡು ಕಾಡಿನಲ್ಲಿ ತಪಸ್ವಿಯಂತೆ ಜೀವಿಸುತ್ತಿದ್ದನು. ಯಶಸ್ಸಿನ ಸಂತೋಷದೊಂದಿಗೆ ರಾಜಪರಿವಾರ ಅರಮನೆಗೆ ಹಿಂದಿರುಗಿತು.
ಅರಮನೆಯಲ್ಲಿ ಸ್ವತಃ ಅಶ್ವಪತಿಯೇ ಸಾವಿತ್ರಿಯನ್ನು ಸ್ವಾಗಿತಿಸಿ “ಮಗಳೆ, ನಿನ್ನ ಪತಿಯನ್ನು ಆಯ್ಕೆಮಾಡಿಕೊಂಡೆಯಾ, ವಿವರವಾಗಿ ತಿಳಿಸು” ಎಂದು ಕೇಳಿದನು. ಸಾವಿತ್ರಿ ಮತ್ತು ಮಂತ್ರಿಗಳು ವಿಷಯವನ್ನು ತಿಳಿಸಿ ಮುಗಿಸುವಷ್ಟರಲ್ಲಿ ಮಹರ್ಷಿ ನಾರದರು ಪ್ರತ್ಯಕ್ಷರಾದರು. ಅರಮನೆಯ ಸಡಗರಕ್ಕೆ ಕಾರಣವೇನು ಎಂದು ನಾರದರು ಕೇಳಿದಾಗ ಅಶ್ವಪತಿರಾಜನು ತನ್ನ ಮಗಳು ಸೂಕ್ತ ವರನನ್ನು ತಾನೇ ಆಯ್ಕೆಮಾಡಿಕೊಂಡದ್ದನ್ನು ವಿವರವಾಗಿ ತಿಳಿಸಿದನು. ಆದರೆ, ಸತ್ಯವಾನನ ಹೆಸರನ್ನು ಕೇಳಿದ ಕ್ಷಣವೇ ನಾರದರು ಗಂಭೀರರಾದರು – ‘ದೈವವೇ, ಅವನನ್ನೇಕೆ ಆಯ್ಕೆ ಮಾಡಿಕೊಂಡಳೋ’ ಎಂದು ಮರುಗಿದರು. ನಾರದರ ಪ್ರತಿಕ್ರಿಯೆಯಿಂದ ರಾಜ ವಿಚಲಿತನಾಗಿ “ಮಹರ್ಷಿಗಳೇ, ನಿಮಗೆ ಸತ್ಯವಾನ ಗೊತ್ತೇ” ಎಂದಾಗ ನಾರದರು ಸತ್ಯವಾನ, ಅವನ ತಂದೆ ದ್ಯುಮತ್ಸೇನ ಮತ್ತು ಅವರು ರಾಜ್ಯಕಳೆದುಕೊಂಡು ಕಾಡಿನ ಪಾಲಾದ್ದದನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಅಶ್ವಪತಿ ನಾರದರನ್ನು ಮತ್ತೂ ಪ್ರಶ್ನಿಸಿದನು. “ನಾರದರೆ, ನೀವೇಕೆ ವಿಚಲಿತರಾದಿರಿ, ಸತ್ಯವಾನ ರಾಜ್ಯಕಳೆದುಕೊಂಡದ್ದರಿಂದಲೇ, ಅಥವಾ ಅವನು ಸೂಕ್ತ ವರನಲ್ಲವೇ, ಧಾರ್ಮಿಕನಲ್ಲವೇ, ಕ್ಷತ್ರಿಯಗುಣಸಂಪನ್ನನಲ್ಲವೇ?” ಎಂದು ಕೇಳಿದನು. ನಾರದರು “ಅಯ್ಯೋ, ಅದಾವುದೂ ಅಲ್ಲ. ಎಲ್ಲ ವಿಧದಲ್ಲಿ ಸತ್ಯವಾನ ಸೂಕ್ತ. ಆದರೆ ಅವನ ಆಯಸ್ಸು ಇನ್ನೊಂದು ವರ್ಷವಷ್ಟೇ” ಎಂದು ರಹಸ್ಯವಾಗಿ ತಿಳಿಸಿದರು. ಅಧೀರನಾದ ರಾಜ ಮಗಳನ್ನು ಕರೆದು ಘನಘೋರ ಸತ್ಯವನ್ನು ತಿಳಿಸಿ ತನ್ನ ಆಯ್ಕೆಯನ್ನು ಬದಲಿಸಬೇಕೆಂದು ಆದೇಶಿಸಿದನು.
ಆದರೆ ಸಾವಿತ್ರಿ ಮಾತ್ರ ತನ್ನ ಆಯ್ಕೆ ಪೂರ್ಣವಾಗಿದೆಯೆಂದೂ ವಿವಾಹವಾದರೆ ಸತ್ಯವಾನನ್ನೇ ಎಂದೂ ಖಚಿತವಾಗಿ ತಿಳಿಸಿದಳು. ಇತ್ತ ನಾರದರೂ ಸಹ “ರಾಜ ನಿನ್ನ ಮಗಳು ಧೀರಳು. ಅವಳ ಆಯ್ಕೆಯನ್ನು ಒಪ್ಪಿಕೊ, ದೈವಕೃಪೆಯು ಹೇಗಿದೆಯೋ ನೋಡೋಣ” ಎಂದು ಸಲಹೆ ಕೊಟ್ಟರು. ಅಶ್ವಪತಿಗೆ ಸಮ್ಮತಿಸದೇ ಬೇರೆ ದಾರಿಯಿರಲಿಲ್ಲ. ಮಗಳ ಮಾತಿಗೆ ಬೆಲೆ ಕೊಟ್ಟು ಸಕಲ ರಾಜಪರಿವಾರದೊಂದಿಗೆ ದ್ಯುಮತ್ಸೇನ ರಾಜನ ಆಶ್ರಮಕ್ಕೆ ಹೊರಟನು. ದ್ಯುಮತ್ಸೇನ ಮತ್ತು ಅಲ್ಲಿನ ಋಷಿವರ್ಗ ರಾಜನನ್ನು ಆದರರಿಂದ ಬರಮಾಡಿಕೊಂಡಿತು. ಅಶ್ವಪತಿಯ ಪ್ರಸ್ತಾವದಿಂದ ಚಕಿತನಾದ ದ್ಯುಮತ್ಸೇನ “ರಾಜಕುಮಾರಿಯಾದ ಸಾವಿತ್ರಿ ಈ ಕಾಡಿನಲ್ಲಿ ಹೇಗೆ ಸಂತೊಷದಿಂದಿದ್ದಾಳು” ಎಂದು ಅನುಮಾನ ಪಟ್ಟನು. ಕಡೆಗೆ ಸಾವಿತ್ರಿಯ ಖಚಿತವಾದ ನಿರ್ಧಾರಕ್ಕೆ ಬದ್ಧರಾಗಿ ವಿವಾಹಕ್ಕೆ ಎಲ್ಲರೂ ಸಮ್ಮತಿಸಿದರು. ಸಕಲ ಸಂಪ್ರದಾಯದೊಂದಿಗೆ ಅವರಿಬ್ಬರ ವಿವಾಹ ನೆರೆವೇರಿತು. ಸಾವಿತ್ರಿಯನ್ನು ಆಶೀರ್ವದಿಸಿ ಅಶ್ವಪತಿ ಮತ್ತು ಸಕಲ ರಾಜಪರಿವಾರ ಹಿಂದಿರುಗಿತು.
ತಂದೆ ಅಶ್ವಪತಿ ಅರಮನೆಗೆ ಹಿಂದಿರುಗಿದ ನಂತರ ಸಾವಿತ್ರಿ ಆಶ್ರಮ ನಿವಾಸಿಯಾದಳು. ರಾಜಕುಮಾರಿಯಂತೆ ಬೆಳೆದ ಸಾವಿತ್ರಿಯನ್ನು ಅತಿಸರಳ ವೇಷದಲ್ಲಿ ನೋಡಿ ನೊಂದ ಸತ್ಯವಾನ ಸಾವಿತ್ರಿಗೆ ಉಂಗುರವೊಂದನ್ನು ಕೊಟ್ಟನು. ಅದರ ಹೊಳಪಿನಲ್ಲಿ ಅವಳ ಸೌಂದರ್ಯದ ಸೊಬಗನ್ನು ಕನ್ನಡಿಯಂತೆ ನೋಡಿಕೊಳ್ಳುವಂತೆ ಹೇಳಿದನು. ನಕ್ಕಳು ಸಾವಿತ್ರಿ. ಹೀಗೆ ಕಣ್ಮುಚ್ಚಿ ತೆರೆಯುವುದರಲ್ಲಿ ಅನೇಕ ದಿನಗಳು ಕಳೆದವು. ಆಶ್ರಮ ಜೀವನದ ಸೌಂದರ್ಯದಲ್ಲಿ ಸಾವಿತ್ರಿ ಮುಂದೆ ಬರಲಿರುವ ದುರಂತವನ್ನು ಸ್ವಲ್ಪ ಮರೆತಳು.
ಸ್ವಲ್ಪ ಕಾಲಾನಂತರ ಸಾವಿತ್ರಿ ಎಚ್ಚೆತ್ತಳು. ಸತ್ಯವಾನನ ಆಯಸ್ಸು ಮುಗಿಯುವುದಕ್ಕೆ ಕೇವಲ ಮೂರೇ ತಿಂಗಳುಗಳಿದ್ದವು. ಸಾವಿತ್ರಿಯ ಎದೆಬಡಿತ ದಿನದಿನಕ್ಕೆ ಏರುತ್ತಿದ್ದರೂ ವಿಧಿಸಂಕಲ್ಪದ ವಿರುದ್ಧ ಮಾಡುವುದೇನು ಎನ್ನುವುದು ಸಾವಿತ್ರಿಗೂ ಸ್ಪಷ್ಟವಿರಲಿಲ್ಲ. ಆದರೆ ಅವಳ ತಪಸ್ಸು, ಉಪವಾಸ, ಧ್ಯಾನ, ಪೂಜೆಗಳು ಹೆಚ್ಚುತ್ತಾ ಹೋದವು. ಅತ್ತೆ, ಮಾವ ಮತ್ತು ಪತಿ ಅವಳ ಕಠಿಣ ಜೀವನ ರೀತಿಗೆ ಗಾಬರಿಗೊಂಡರೂ ಸಾವಿತ್ರಿ ಮಾತ್ರ ತನ್ನ ದೈನಿಕ ನಿಷ್ಠೆಯನ್ನ್ನು ಸಡಿಲಿಸಲಿಲ್ಲ. ಕಟ್ಟಕಡೆಗೆ ಆದಿನ ಬಂದೇಬಂದಿತು. ಸತ್ಯವಾನನ ಆಯಸ್ಸಿಗೆ ಇನ್ನೊಂದೇ ರಾತ್ರಿಯಿತ್ತು. ಮರುದಿನ ಪೂರ್ತಿ ಸತ್ಯವಾನನ ಜೊತೆಗೇ ಕಳೆಯುವುದೆಂದು ತೀರ್ಮಾನಿಸಿದಳು.
ಮರುದಿನ – ತನ್ನ ಬೆಳಗಿನ ದೈನಿಕಗಳನ್ನು ಬಿಟ್ಟು ಇಂದು ಸಾವಿತ್ರಿ ತನ್ನ ಜೊತೆ ಕಾಡಿಗೆ ಬರಬೇಕೆಂದು ಹಠ ಹಿಡಿದದ್ದು ನೋಡಿ ಸತ್ಯವಾನನಿಗೆ ಆಶ್ಚರ್ಯ. ಸಾವಿತ್ರಿಗೋ ಮುಖದಲ್ಲಿ ಮಂದಹಾಸ, ಎದೆಯಲ್ಲಿ ಡಮರುಗ. ಅವಳ ಜೊತೆ ಕಾಡಿನಲ್ಲಿ ಏಕಾಂತ ದೊರೆಯುವುದೆಂದು, ಕಾಡಿನಲ್ಲಿ ಅವಳ ಕಾಲ್ಗೆಜ್ಜೆಯ ಸಪ್ಪಳ ಮಧುರವಾಗಿರುತ್ತದೆಯೆಂದು ಸತ್ಯವಾನನಿಗೆ ಸಂತೋಷ. ಹೆಜ್ಜೆ ಹೆಜ್ಜೆಗೂ ಏರುತ್ತಿರುವ ಆತಂಕದೊಂದಿಗೆ ಭಾರದ ಹೆಜ್ಜೆಯಿಡುತ್ತಾ ಸಾವಿತ್ರಿ ನಡೆದಳು. ಕಾಡಿನ ಸೌಂದರ್ಯವನ್ನು ಸವಿಯುತ್ತಾ, ಎಲ್ಲದರ ನಶ್ವರತೆಯ ಬಗ್ಗೆ ದುಃಖಿಸುತ್ತಾ ಮುನ್ನಡೆದಳು. ಮಧ್ಯೆಮಧ್ಯೆ ಸತ್ಯವಾನನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಳು. ಒಂದೆಡೆ ಸತ್ಯವಾನ ಕಟ್ಟಿಗೆ ಕಡಿಯುತ್ತಿರುವಾಗ ಆ ಕ್ಷಣ ಬಂದೇ ಬಿಟ್ಟಿತು. ‘ಸಾವಿತ್ರಿ’ ಎಂದು ಜೀವಬಿರಿಯುವ ಧ್ವನಿಯಲ್ಲಿ ಸತ್ಯವಾನ ಚೀರಿದನು. “ಸಾವಿತ್ರಿ ನನಗೆ ಎಲ್ಲೆಡೆ ಶಕ್ತಿ ಕುಸಿಯುತ್ತಿದೆ, ಸ್ವಲ್ಪ ಮಲುಗುತ್ತೇನೆ” ಎಂದು ಭೂಮಿಗೊರಗಿದ ಸತ್ಯವಾನ ಮತ್ತೆ ಮೇಲೇಳಲಿಲ್ಲ. ಕ್ರಮೇಣ ಅವನ ದೇಹ ನಿಶ್ಚಲವಾಯಿತು. ‘ಇನ್ನೇನು’ ಎಂದೆನ್ನುವಷ್ಟರಲ್ಲಿ ಮತ್ತೆ ವಾತಾವರಣ ಬದಲಾಯಿತು. ಕಾಡಿನಲ್ಲಿ ಕತ್ತ್ತಲೆಯಾವರಿಸಿತು. ಎಲ್ಲೆಡೆ ಭಾರವಾದ ಭಾವ ನೆಲೆಯಾಯಿತು. ತಲೆಯೆತ್ತಿ ನೋಡಿದ ಸಾವಿತ್ರಿಗೆ ದೂರದಲ್ಲಿ ಕಡುಗತ್ತಲಿನ ಒಂದು ಆಕಾರ ಕಂಡಿತು, ತಲೆಯ ಮೇಲೆ ವಿಚಿತ್ರ ಕಿರೀಟವೊಂದು ಮೆರೆಯುತ್ತಿತ್ತು. ಕ್ರಮೇಣ ಆಕಾರ ಹತ್ತಿರ ಬಂದಿತು.
ಹೆದರದ ಸಾವಿತ್ರಿ “ಯಾರು ನೀವು” ಎಂದು ಕೇಳಿದಳು. ಆಕಾರ ನಕ್ಕಿತು. “ಏನು, ನನ್ನ ಗುರುತು ಸಿಗಲಿಲ್ಲವೇ ನಿನಗೆ? ನಾನೇ ಯಮಧರ್ಮರಾಜ – ಮೃತ್ಯುದೇವತೆ. ಗೊತ್ತಲ್ಲವೇ ನಿನಗೆ ಸತ್ಯವಾನನ ಆಯಸ್ಸು ಮುಗಿಯಿತೆಂದು. ಅವನ ಜೀವವನ್ನು ನನ್ನ ಜೊತೆ ಕೊಂಡೊಯ್ಯುವುದಕ್ಕೆ ಬಂದಿದ್ದೇನೆ” ಎಂದನು. ಇಷ್ಟು ಹೊತ್ತಿಗೆ ಕೋಣನ ಮೇಲೆ ಕೂತಿರುವ ಯಮಧರ್ಮ ಸ್ಪಷ್ಟವಾಗಿ ಗೋಚರಿಸುತ್ತಿದ್ದನು. ಸ್ವಲ್ಪ ಸಾವರಿಸಿಕೊಂಡ ಸಾವಿತ್ರಿಗೆ ಎಲ್ಲವನ್ನೂ ನಿಧಾನಗೊಳಿಸುವ ಆಸೆ. “ಯಮಧರ್ಮ, ಸಾಮಾನ್ಯವಾಗಿ ಈ ಕೆಲಸ ನಿನ್ನ ದೂತರದ್ದಲ್ಲವೇ, ನೀನೇ ಬಂದೆಯೇಕೆ?” ಎಂದು ಪ್ರಶ್ನಿಸಿದಳು. ಅವಸರದಲ್ಲಿದ್ದ ಯಮಧರ್ಮ “ನಿಷ್ಕಲ್ಮಷನಾದ ಸತ್ಯವಾನ ಸಾಮಾನ್ಯನಲ್ಲವಾದ್ದರಿಂದ ನಾನೇ ಬರಬೇಕಾಯಿತು” ಎಂದನು. ಸ್ವಲ್ಪವೂ ಸಮಯಕಳೆಯದೇ ತನ್ನ ಪಾಶದಿಂದ ಸತ್ಯವಾನನ ಜೀವವನ್ನು ಹೀರಿ ಹಿಂದಿರುಗತೊಡಗಿದನು. ಸತ್ಯವಾನನ ಜೀವರಹಿತ ಮುಖನೋಡಿದ ಸಾವಿತ್ರಿಗೆ ಎಲ್ಲವೂ ವ್ಯರ್ಥವೆಂದೆನ್ನಿಸಿ, ಮರುಕ್ಷಣವೇ ಸತ್ಯವಾನನ ಜೀವವಿರುವ ಯಮಧರ್ಮನನ್ನೇ ಹಿಂಬಾಲುಸುವ ಮನಸ್ಸಾಯಿತು.
ಒಂದಿಷ್ಟು ದೂರದಲ್ಲಿ ಯಮಧರ್ಮನಿಗೆ ಕಾಣದ ಹಾಗೆ ಹಿಂಬಾಲಿಸುತ್ತಾ ನಡೆದಳು. ಅವಳ ಗೆಜ್ಜೆಯ ಸಪ್ಪಳವಿದ್ದರೂ ಗಾಳಿ, ಹುಲ್ಲು, ನೆರೆ-ತೊರೆಗಳು ಇವುಗಳ ಧ್ವನಿಯಲ್ಲಿ ಅದು ಕರಗಿಹೋಗುತ್ತಿತ್ತು. ಬೆಟ್ಟದ ಕಠಿಣವಾದ ನೆಲದ ಮೂಲಕ ಹಾದುಹೋಗುವಾಗ ಯಮಧರ್ಮನಿಗೆ ಗೆಜ್ಜೆಯ ಸಪ್ಪಳ ಕೇಳಿ ಯಾರೋ ತನ್ನನ್ನು ಹಿಂಬಾಲಿಸುತ್ತಿರುವ ಭಾಸವಾಯಿತು. ಹಿಂದೆ ತಿರುಗಿ ಸಾವಿತ್ರಿಯನ್ನು ಕಂಡನು. ಜಾಣೆಯಾದ ಸಾವಿತ್ರಿ ಪತಿಯಿರುವೆಡೆ ತಾನೂ ಇರಬಯಸುತ್ತೇನೆಂದೂ, ಅವನಿಲ್ಲದೆ ತಾನು ಹಿಂದಿರುಗುವುದಿಲ್ಲವೆಂದರೂ ನಿಶ್ಚಯದಿಂದ ಹೇಳಿದಳು. ಸಾವಿತ್ರಿಯ ಆಸೆ ಪ್ರಕೃತಿಗೆ ವಿರುದ್ಧವಾದದ್ದೆಂದೂ, ನೆರೆವೇರುವುದು ಅಸಾಧ್ಯವೆಂದು ಎಷ್ಟು ವಿವರಿಸಿದರೂ ಸಾವಿತ್ರಿ ಜಗ್ಗಲಿಲ್ಲ.
ಕಡೆಗೆ ಯಮಧರ್ಮ ಸ್ವಲ್ಪ ತುಂಟತನದಿಂದ “ನಾನೇಕೆ ನಿನ್ನ ಮಾತನ್ನು ಕೇಳಬೇಕು, ನಾನೇಕೆ ನಿನಗೆ ಸಹಾಯ ಮಾಡಬೇಕು” ಎಂದು ಕುಳಿತನು. ಜಾಣೆಯಾದ ಸಾವಿತ್ರಿ ಈ ಅವಕಾಶಕ್ಕಾಗೇ ಕಾಯುತ್ತಿದ್ದಳು. “ಯಮನೇ, ಏಳು ಹೆಜ್ಜೆಗಳನ್ನು ಯಾರ ಜೊತೆಯಾದರೂ ನಡೆದರೆ ಅವರು ನಮಗೆ ಸ್ನೇಹಿತರೆಂದು ಶಾಸ್ತ್ರ ಹೇಳುತ್ತದೆ. ನಿನ್ನೊಡನೆಯಾದರೋ ಅನೇಕ ಯೋಜನೆಗಳನ್ನೇ ಕಳೆದಿದ್ದೇನೆ. ಕಷ್ಟದಲ್ಲಿರುವ ಸ್ನೇಹಿತರಿಗೆ ಸಹಾಯ ಮಾಡುವುದು ಸ್ನೇಹಧರ್ಮ” ಎಂದಳು ಸಾವಿತ್ರಿ. ಅವಳ ಬುದ್ಧಿವಂತಿಕೆ, ಜ್ಞಾನವನ್ನು ಮೆಚ್ಚಿದ ಯಮ “ಸಾವಿತ್ರಿ, ನಿನ್ನನ್ನು ಮೆಚ್ಚಿದೆ. ನಿನ್ನ ಪತಿಯ ಜೀವವೊಂದನ್ನು ಬಿಟ್ಟು ಬೇರೆ ಇನ್ನೇನಾದರೂ ವರವನ್ನು ಬೇಡು” ಎಂದನು. ಹಿಂದೆ ಮುಂದೆ ನೋಡದ ಸಾವಿತ್ರಿ “ನಮ್ಮ ಮಾವಂದಿರ ದೃಷ್ಟಿ ಮತ್ತು ರಾಜ್ಯ ಎರಡೂ ಅವರಿಗೆ ಮತ್ತೆ ದೊರೆಯುವಂತಾಗಲಿ” ಎಂದು ಬೇಡಿದಳು. ತನಗಾಗಿ ಅವಳು ಏನನ್ನೂ ಬೇಡದೇ ಇರುವುದು ಯಮನಿಗೆ ಮಹದಾಶ್ಚರ್ಯವಾಯಿತು.
“ಸರಿ, ನೀನಿನ್ನು ಹಿಂದಿರುಗು. ಇಲ್ಲಿಂದ ಮುಂದಿನ ದಾರಿ ದುರ್ಗಮ ಅದು ನಿನಗಲ್ಲ” ಎಂದನು. ಸಾವಿತ್ರಿಗೆ ಮಾತ್ರ ಈ ಸಂಭಾಷಣೆಯಿಂದ ಹೆಚ್ಚಿನ ಸ್ಥೈರ್ಯ ಬಂದಿತ್ತು. “ಬದುಕೋ ಸಾವೋ ಅದು ಸತ್ಯವಾನನ ಜೊತೆಯಲ್ಲೇ ಎಂದು ನಾನು ಎಂದೋ ನಿರ್ಧರಿಸಿಯಾಯಿತು ಯಮಧರ್ಮ” ಎಂದಳು. “ನೋಡು ಮಗಳೇ ನಿನ್ನ ಪತಿ ಅಲ್ಲಿ ಕಾಡಿನಲ್ಲಿ ನಿರ್ಜೀವವಾಗಿದ್ದಾನೆ. ಅವನ ಅಂತ್ಯಸಂಸ್ಕಾರ ನಡೆಯಬೇಕಲ್ಲವೇ” ಎಂದು ಮನಸ್ಸನು ತಿರುಗಿಸಲು ಪ್ರಯತ್ನಿಸಿದ ಯಮ. “ಯಮನೇ, ದೇಹಕ್ಕೂ ಜೀವಾತ್ಮನಿಗೂ ವ್ಯತ್ಯಾಸವನ್ನು ನಾನು ನಿನಗೆ ಹೇಳಿಕೊಡಬೇಕೇ” ಎಂದಳು. ಹೀಗೇ ನಡೆದ ಮಾತುಕತೆಯಿಂದ ಕಾಡು ವಿಶೇಷ ಜೀವಪಡೆದಿತ್ತು. ಯಮನಿಗೇ ತನ್ನ ಉಸಿರು ಹೆಚ್ಚು ಹಿತವಾದಂತೆ ಅನ್ನಿಸಿತು. ಮತ್ತೆ ನಿಧಾನದಿಂದ ಮುಂದುವರೆಯುತ್ತಾ “ನೋಡು ಸಾವಿತ್ರಿ, ನಿನ್ನ ಪತಿಯ ಜೀವ ಇನ್ನು ಮರಳುವುದು ಅಸಾಧ್ಯ. ಆದರೆ ನಿನ್ನ ಶ್ರದ್ಧೆ, ಅಚಲ ಮನಸ್ಸು, ಕಠಿಣ ಪರಿಶ್ರಮ ಮತ್ತು ಅಸಾಧಾರಣ ಬುದ್ಧಿವಂತಿಕೆಗೆ ನಾನು ಮನಸೋತಿದ್ದೇನೆ. ಇನ್ನೆರಡು ವರಗಳನ್ನು ಬೇಡಿಕೊ” ಎಂದನು. ಸಾವಿತ್ರಿಯ ಮನಸ್ಸು ಸಿದ್ಧವಾಗಿತ್ತು. “ನಾನು ಮದುವೆಯಾಗಿ ಮತ್ತೊಂದು ರಾಜ್ಯಕ್ಕೆ ಹೋಗುವೆನಾಗಿ ನಮ್ಮ ತಂದೆಯ ರಾಜ್ಯವನ್ನು ಮುಂದುವರೆಸುವುದಕ್ಕೆ ಯಾರೂ ಇಲ್ಲ. ದಯವಿಟ್ಟು ನನ್ನ ತಂದೆಗೆ ಮಕ್ಕಳನ್ನು ಕರುಣಿಸು” ಎಂದಳು. “ತಥಾಸ್ತು” ಎಂದನು ಯಮ. ಇಷ್ಟು ಹೊತ್ತಿಗೆ ಯಮ ಸಾವಿತ್ರಿಯ ಮಾತಿನ ಮೋಡಿಗೆ ಮರುಳಾಗಿದ್ದನು. ಸಂದರ್ಭ ನೋಡಿದ ಸಾವಿತ್ರಿ “ಮೂರನೇಯ ವರವಾಗಿ ನನಗೆ ನೂರು ಮಕ್ಕಳನ್ನು ಕರುಣಿಸು” ಎಂದಳು. ಹಿಂದೆ ಮುಂದೆ ನೋಡದ ಯಮ “ತಥಾಸ್ತು” ಎಂದುಬಿಟ್ಟನು. “ಧನ್ಯೋಸ್ಮಿ” ಎಂದ ಸಾವಿತ್ರಿ ಮತ್ತೆ ಯಮನ ಜೊತೆ ನಡೆದಳು.
“ಸಾವಿತ್ರಿ, ಆಯಿತಲ್ಲ ಮೂರು ವರಗಳು. ಇನ್ನು ವಾಪಸ್ಸು ನಡೆ” ಎಂದನು. ವಿನೀತಳಾಗಿ ಸಾವಿತ್ರಿ “ಯಮನೇ, ಪತಿಯಿಲ್ಲದೇ ನಾನು ನೂರು ಮಕ್ಕಳನ್ನು ಹೇಗೆ ಪಡೆಯುವುದು” ಎಂದು ಕೈಮುಗಿದು ಕೇಳಿದಾಗ ಯಮನಿಗೆ ಎಚ್ಚರವಾಯಿತು. ಸಾವಿತ್ರಿಯ ಮಾತಿನ ಮೋಡಿಗೆ ಮರುಳಾದ ಪರಿಣಾಮ ಗೋಚರಿಸಿತು. “ಎಲಾ ಸಾವಿತ್ರಿ! ಕಡೆಗೂ ನೀನೇ ಗೆದ್ದೆ” ಎಂದು ಮನದಲ್ಲೇ ಮೆಚ್ಚಿಕೊಂಡನು. “ಸಾವಿತ್ರಿ, ನಿನ್ನ ಅಪರಿಮಿತ ಶ್ರದ್ಧೆ ಮತ್ತು ಏಕಾತ್ಮತೆಗೆ ನಾನು ಮೆಚ್ಚಿದೆ. ಇಗೋ, ನಿನ್ನ ಪತಿಯ ಪ್ರಾಣವನ್ನು ಹಿಂದಿರುಗಿಸುತ್ತಿದ್ದೇನೆ, ಹೋಗು” ಎಂದನು. ಸಾವಿತ್ರಿ ಒಂದೇ ಉಸಿರಿಗೆ ಹಿಂದಿರುಗಿ ಓಡಿ ಸತ್ಯವಾನನ ಬಳಿ ಬಂದಳು. ಸತ್ಯವಾನನಿಗೆ ನಿಧಾನವಾಗಿ ಜೀವ ಹಿಂದಿರುಗಿ ಬರುತ್ತಿರುವಂತಿತ್ತು. “ಇದೇನು ಅದೆಷ್ಟು ಹೊತ್ತು ನಾನು ಮಲಗಿದ್ದೆ” ಎಂದು ಸತ್ಯವಾನ ಏನೂ ಆಗಿಲ್ಲದವನಂತೆ ಎದ್ದನು. ಸಾವಿತ್ರಿ ಅತಿಸಂತೋಷದಿಂದ, ಆದರೆ ಮೌನವಾಗಿ, ತಲೆಯಾಡಿಸಿ ಸತ್ಯವಾನನ ಜೊತೆ ಹೆಜ್ಜೆ ಹಾಕುತ್ತಾ “ನೂರು ಮಕ್ಕಳು, ಇದು ಯಮನ ವರ” ಎಂದು ಮೆಲುಕು ಹಾಕುತ್ತಾ ಆಶ್ರಮಕ್ಕೆ ನಡೆದಳು. ನಡೆದದ್ದೊಂದೂ ಸತ್ಯವಾನನಿಗೆ ತಿಳಿಯಲಿಲ್ಲ.
ಇತ್ತ ಆಶ್ರಮದಲ್ಲಿ ದ್ಯುಮತ್ಸೇನನಿಗೆ ದೃಷ್ಟಿ ವಾಪಸಾಗಿ ದಂಪತಿಯರಿಬ್ಬರೂ ಆಶ್ಚರ್ಯಗೊಂಡಿದ್ದರು. ಸಾವಿತ್ರಿ ಸತ್ಯವಾನರು ಏಕಿಷ್ಟು ತಡಮಾಡಿದರು ಎಂದು ಕಾಯುತ್ತಿದ್ದ ಅವರನ್ನು ನೋಡಲು ಅವರ ಸೈನಿಕರು ನೋಡುವುದಕ್ಕೆ ಬಂದರು. ಶತ್ರುಗಳು ಮತ್ತೊಂದು ಯುದ್ಧದಲ್ಲಿ ಸೋತು ಈಗ ಸಾಲ್ವ ರಾಜ್ಯ ಮತ್ತೆ ತಮ್ಮ ವಶವಾದ ಶುಭವಾರ್ತೆ ತಿಳಿಸಿದರು. ಅದೇ ಹೊತ್ತಿನಲ್ಲಿ ಸಾವಿತ್ರಿ ಸತ್ಯವಾನರು ಕಾಡಿನಿಂದ ಹಿಂದಿರುಗಿದರು. ದ್ಯುಮತ್ಸೇನನಿಗೆ ಮಾತ್ರ ಇದೆಲ್ಲದರ ಹಿಂದೆ ಸಾವಿತ್ರಿಯ ಪುಣ್ಯಶಕ್ತಿಯಿರುವ ಹಾಗೆ ಭಾಸವಾಯಿತು. “ಮಗಳೇ, ನೋಡು ನೀನು ಬಡವನ ಮನೆಗೆ ಸೊಸೆಯಾಗಿ ಬಂದೆ, ಆದರೆ ಈಗ ರಾಣಿಯಾಗಿ ಮುಂದೆ ನಿನ್ನ ಮಕ್ಕಳು ರಾಜಯೋಗ ಪಡೆಯುವರು” ಎಂದು ಮಾರ್ಮಿಕವಾಗಿ ನುಡಿದನು. ಎಲ್ಲರೂ ಸಾಲ್ವ ದೇಶಕ್ಕೆ ಹಿಂದಿರುಗಿ ದ್ಯುಮತ್ಸೇನ ಮತ್ತೆ ರಾಜನಾದನು.
ಹೀಗೆ, ಸಾವಿತ್ರಿ ತನ್ನ ಜಾಣ್ಮೆ, ಜ್ಞಾನ, ಧೀಶಕ್ತಿಯಿಂದ ಯಮನನ್ನೇ ಗೆದ್ದಳು.
(ಈ ಕಥೆ ಮಹಾಭಾರತದ ವನಪರ್ವದಲ್ಲಿ ಬರುತ್ತದೆ. ‘ದ್ರೌಪದಿಗಿಂತ ಮಿಗಿಲಾದ ಶ್ರದ್ಧೆ, ತಪಸ್ಸು ಇರುವ ಸ್ತ್ರೀ ಹಿಂದೆ ಯಾರಾದರೂ ಇದ್ದರೇ‘ ಎಂದು ಯುಧಿಷ್ಠಿರನು ಕೇಳಿದ ಪ್ರಶ್ನೆಗೆ ಉತ್ತರವಾಗಿ ಮಾರ್ಕಂಡೇಯ ಮುನಿಗಳು ಸಾವಿತ್ರಿಯ ಕಥೆಯನ್ನು ವಿವರಿಸುತ್ತಾರೆ. ಆಧುನಿಕ ಕಾಲದಲ್ಲಿ ಸಾವಿತ್ರಿಯೆಂದರೆ ಪತಿಯ ನೆರಳಾಗಿ ಹೆಚ್ಚಿನ ಸ್ವಾತಂತ್ರ್ಯವಿಲ್ಲದೆ ಬದುಕುತ್ತಿರುವ ಮಹಿಳೆಯಾಗಿ ಬಿಂಬಿತಳಾಗಿದ್ದಾಳೆ. ಆದರೆ ನಮ್ಮ ಮಹಾಭಾರತದ ಧೀರೆ. ಧರ್ಮವನ್ನು ಅರಿತವಳು. ಶಸ್ತ್ರ-ಶಾಸ್ತ್ರಗಳಲ್ಲಿ ಜ್ಞಾನವಿದ್ದು ತನ್ನ ಬದುಕಿನ ಎಲ್ಲ ನಿರ್ಧಾರಗಳನ್ನು ಸ್ವತಃ ತಾನೇ ತೆಗೆದುಕೊಂಡವಳು. ಸತ್ಯವಾನನನ್ನು ಪ್ರೀತಿಸಿ ಎಲ್ಲವನ್ನೂ ತಿಳಿದೂ ಸ್ವತಃ ತನ್ನ ಆಯ್ಕೆಯಿಂದಲೇ ಅವನನ್ನು ಮದುವೆಯಾದಳು. ಕಡೆಗೆ ಯಮನನ್ನೇ ಗೆದ್ದಳು. ಈ ನಮ್ಮ ಕಾಲಕ್ಕೂ, ಎಲ್ಲ ಕಾಲಕ್ಕೂ ಆದರ್ಶ ಧೀರೆ ಸಾವಿತ್ರಿ.)
Feature Image Credit: youtube.com
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.