close logo

ಭಾರತವರ್ಷ ಮಾಲಿಕೆ: ಮಹಾಭಾರತದಲ್ಲಿ ಸಂಜಯ ಜ್ಞಾಪಿಸಿಕೊಳ್ಳುವ ನದಿಗಳು

 ಹಿಂದಿನ ಲೇಖನದಲ್ಲಿ ಜಂಬೂಖಂಡವಿನಿರ್ಮಾಣ ಉಪಪರ್ವದ ಒಂದು ಅಧ್ಯಾಯದಲ್ಲಿ ಭಾರತವರ್ಷದ ಘನತೆ-ಗೌರವವನ್ನು ಸಂಜಯ ಯಾವ ರೀತಿಯಲ್ಲಿ ಎತ್ತಿ ಹಿಡಿಯುತ್ತಾನೆ ಎನ್ನುವುದನ್ನು ಕಂಡೆವು. ಮುಂದುವರೆದ ಸಂಜಯ ಅದರ ಭೌತಿಕ, ರಾಜಕೀಯ ಸ್ವರೂಪವನ್ನು ವಿವರಿಸುತ್ತಾನೆ. ‘ಇದು ಭಾರತವರ್ಷದ ಯಥಾವತ್ತಾದ ವಿವರ, ಧೃತರಾಷ್ಟ್ರ’ ಎಂದು ಒತ್ತುಕೊಡುತ್ತಾನೆ. 

ತತ್  ತೇ ವರ್ಷೇ ಪ್ರವಕ್ಷ್ಯಾಮಿ ಯಥಾಯಥಾಮರಿಂದಮ ।

ಶ್ರುಣುಮೇ ಗದತೋ ರಾಜನ್ ಯನ್ ಮಾಮ್ ತ್ವಮ್ ಪರಿಪೃಚ್ಛಸಿ ।। ।।

ಹಾಗೆ ಮೊಟ್ಟಮೊದಲಿಗೆ ಕೊಡುವ ವಿವರವೇ ವಿಷ್ಣುಪುರಾಣದಲ್ಲಿ ಕಂಡುಬರುವ ಪರ್ವತಗಳ ವಿವರ. 

ಮಹೇಂದ್ರೋ ಮಲಯಃ ಸಹ್ಯಃ ಶುಕ್ತಿಮಾನೃಕ್ಷವಾನಪಿ ।

ವಿಂಧ್ಯಶ್ಚ ಪಾರಿಯಾತ್ರಶ್ಚ ಸಪ್ತೈತೇ ಕುಲಪರ್ವತಾಃ ॥ ॥

ಈ ಶ್ಲೋಕ ಹೆಚ್ಚು-ಕಡಿಮೆ ವಿಷ್ಣುಪುರಾಣದ್ದೇ ಆಗಿದೆ. ಒಂದೆರಡು ಪದಗಳ ವ್ಯತ್ಯಾಸವಿದ್ದರೂ ವಿವರವಷ್ಟೇ ಅಲ್ಲದೆ ಧ್ವನಿಯೂ ವಿಷ್ಣುಪುರಾಣದ್ದೇ ಆಗಿದೆ. ಅರ್ಥಾತ್ ಒಂದು ಪುರಾಣ ಮತ್ತೊಂದು ಇತಿಹಾಸ-ಕಾವ್ಯ, ಇವೆರಡರ ವಿವರ ಮತ್ತು ಧ್ವನಿ ಒಂದೇ ಆಗಿರುವುದು ಅದರ ಹಿಂದಿನ ಸಾಂಸ್ಕೃತಿಕ ಐಕ್ಯತೆ ಮತ್ತು ಘನತೆಯನ್ನು ಎತ್ತಿತೋರಿಸುತ್ತದೆ. ಅಲ್ಲಿನಂತೆಯೇ ಇಲ್ಲಿಯೂ ಸಹ ಈ ಕೆಳಗಿನ ಪರ್ವತಗಳನ್ನು ಭಾರತವರ್ಷದ ಕುಲಪರ್ವತಗಳೆಂದು ಶ್ಲಾಘಿಸಲಾಗಿದೆ:  

  1. ಮಹೇಂದ್ರ ಪರ್ವತ (ಒಡಿಶಾ ಪ್ರಾಂತ್ಯ)
  2. ಮಲಯ ಪರ್ವತ  (ಕೇರಳ ಪ್ರಾಂತ್ಯ)
  3. ಸಹ್ಯ (ಸಹ್ಯಾದ್ರಿ – ಪಶ್ಚಿಮ ಘಟ್ಟ)
  4. ಶುಕ್ತಿಮಾನ್ ಪರ್ವತ (ವಿಂಧ್ಯೆಯ ಉತ್ತರದ ಭಾಗ)
  5. ಋಕ್ಷ ಪರ್ವತ (ವಿಂಧ್ಯದ ಬಲಭಾಗ – ಝಾರ್ಖಂಡ್)
  6. ವಿಂಧ್ಯ ಪರ್ವತ (ಮಧ್ಯಪ್ರದೇಶ)
  7. ಪಾರಿಯಾತ್ರ ಪರ್ವತ (ವಿಂಧ್ಯಪರ್ವತದ ಎಡದಲ್ಲಿ –  ಮಧ್ಯಪ್ರದೇಶ/ರಾಜಸ್ಥಾನ)

ಇಷ್ಟಲ್ಲದೆ ಮತ್ತಷ್ಟು ಚಿಕ್ಕದಾದ ವೈವಿಧ್ಯಮಯವಾದ, ವಿಶೇಷ-ವಿಚಿತ್ರ ವಸ್ತುಗಳಿಂದ ಕೂಡಿದ ಸಾವಿರಾರು ಪರ್ವತಗಳಿವೆ ಎನ್ನುತ್ತಾನೆ ಸಂಜಯ. ಮುಖ್ಯವಾದ ವಿಷಯವೆಂದರೆ, ಈ ಪರ್ವತಗಳು ಆಧುನಿಕ ಭಾರತದ ಹೆಚ್ಚಿನ ಪ್ರದೇಶವನ್ನು ಅವರಿಸಿರುವುದು. 

ನದಿಗಳನ್ನು ವಿವರಿಸುವಾಗ ಮಾತ್ರ ಮಹಾಭಾರತ ವಿಷ್ಣುಪುರಾಣವನ್ನು ಮೀರಿಸಿಬಿಡುತ್ತದೆ. ಈ ನದಿಗಳ ನೀರನ್ನು ಕುಡಿಯುವವರಾದರೂ ಯಾರು.

  1. ಆರ್ಯರು
  2. ಮ್ಲೇಚ್ಛರು 
  3. ಆರ್ಯ-ಮ್ಲೇಚ್ಛ ಸಂಕರ ಜಾತಿಯವರು

ಮಹಾಭಾರತ ಈ ಮೂರೂ ವರ್ಗದವರು ಭಾರತವರ್ಷದಲ್ಲಿರುವುದನ್ನು ಗುರುತಿಸುತ್ತದೆ. ಹೀಗೆ ಮೂವರನ್ನೂ ವಿಶೇಷವಾಗಿ ಹೆಸರಿಸಬೇಕಾದ ಆವಶ್ಯಕತೆಯಾದರೂ ಏನು ಎನ್ನುವುದು ಆಲೋಚನಾರ್ಹ. ಈಗಾಗಲೇ ಶ್ರೀಕಾಂತ ತಲಗೇರಿಯವರು ತಮ್ಮ “ಋಗ್ವೇದ: ಅ ಹಿಸ್ಟಾರಿಕಲ್ ಅನಾಲಿಸಿಸ್”-ನಲ್ಲಿ ತೋರಿಸಿರುವ ಹಾಗೆ ಆರ್ಯ ಎನ್ನುವ ಪದ ಪುರು-ಭರತ ವಂಶಾವಳಿಯ ರಾಜರಿಗೆ ವಿಶೇಷವಾದ ಸಂಬೋಧನೆ. ವೈದಿಕ ಸಂಸ್ಕೃತಿಯ ಹರಿಕಾರರು ಎನ್ನುವ ಕಾರಣಕ್ಕೆ. ಶಕುಂತಲೆ ದುಷ್ಯಂತನನ್ನು “ಅನಾರ್ಯ” ಎಂದು ತುಂಬು ಸಭೆಯಲ್ಲಿ ನಿಂದಿಸುವುದು ಇಲ್ಲಿ ಉಲ್ಲೇಖಾರ್ಹ. ಮಹಾಭಾರತ ಕಾಲಕ್ಕೆ ಆರ್ಯವೆನ್ನುವುದು ವೈದಿಕಸಂಸ್ಕೃತಿಯ ಪಾಲಕರಿಗೆ ಮತ್ತು ಸಂಸ್ಕೃತಿವಂತ ಜನರಿಗೆ ಸಂಬೋಧನೆಯಾಗಿರುವ ಪದ. ಆ ಸಂಸ್ಕೃತಿಗೆ ಹೊರತಾದ ಜನರು ಇರುವುದು ಮತ್ತು ಅವರೊಡನೆ ನಡೆಯುವ ಘರ್ಷಣೆ ಇಲ್ಲಿ ಪ್ರತಿಧ್ವನಿಯಾಗಿದೆ. 

ಅಷ್ಟೇ ಅಲ್ಲದೆ ಸಂಕರ ಜಾತಿಯವರು ಇಲ್ಲಿನ ನೀರು ಕುಡಿಯುತ್ತಿದ್ದಾರೆ ಎನ್ನುವುದು ಗಮನಾರ್ಹವಾದ ವಿಷಯ.   ವೈದಿಕ ಸಂಸ್ಕೃತಿಗೆ ಹೊರಗಾದ ಪ್ರದೇಶಗಳ ಜನರ ಜೊತೆಗೆ ಆರ್ಯರ ಸಂಬಂಧವೇರ್ಪಡುತ್ತಿರುವುದು ಗಮನಕ್ಕೆ ಬರುತ್ತದೆ. ಅರ್ಥಾತ್ ಘರ್ಷಣೆಯ ಜೊತೆಗೆ ಅನುಸಂಧಾನವಿರುವುದನ್ನೂ ಮಹಾಭಾರತ ಬರೆದ ಕಾಲ ಪ್ರತಿಧ್ವನಿಸುತ್ತಿದೆ. ಈ ದ್ವಿದಳ ಯಾತ್ರೆ ಏಕಕಾಲದಲ್ಲಿ ಭಾರತವರ್ಷದ ಒಳಗಿರುವ ಜನರ ನಡುವಿನದ್ದೂ, ಹೊರಗಿನಿಂದ ಬರುತ್ತಿರುವವರ ಜೊತೆಗಿನದ್ದೂ ಆಗಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಆ ಕಾಲದ ಭಾರತವರ್ಷ ವಿಶಿಷ್ಟವಾದ ಸಾಂಸ್ಕೃತಿಕ ಕ್ರಿಯಾತ್ಮಕತೆಯಿಂದ ಕೂಡಿರುವುದು ಕಂಡುಬರುತ್ತದೆ. ಇಲ್ಲಿನ ನದಿಗಳ ನೀರು ಎನ್ನುವುದು ವಿವಿಧತೆಯಲ್ಲಿ ಸಾಂಸ್ಕೃತಿಕ ಐಕ್ಯತೆಯನ್ನು ಗುರುತಿಸುತ್ತದೆ. ಮ್ಲೇಚ್ಛರೂ-ಸಂಕರ  ಜಾತಿಯವರೂ ಈ ನದಿಯ ನೀರನ್ನು ಕುಡಿಯುತ್ತಿದ್ದಾರೆ ಎಂದರೆ ಇವರೆಲ್ಲರ ನಡುವಿನ ಘರ್ಷಣೆಯಲ್ಲಿ ಹೊಸತೊಂದು ಸಮಾಜ ಸೃಷ್ಟಿಯಾಗುತ್ತಿರುವೂ, ಅದಕ್ಕೂ ವೈದಿಕ ಸಂಸ್ಕೃತಿಯೇ ತಳಹದಿಯಾಗಿರುವನ್ನು ಇದು ಧ್ವನಿಸುತ್ತಿದೆ ಎನ್ನಿಸುತ್ತದೆ. ಈ ದೃಷ್ಟಿಕೋನದಿಂದ ಮಹಾಭಾರತದ ಮತ್ತಿತರ ವಿವರಗಳನ್ನು ಅಧ್ಯಯನ ಮಾಡಬೇಕಾದ ಅವಶ್ಯಕತೆಯಿದೆ. 

ಮುಂದಿನ ಶ್ಲೋಕಗಳಲ್ಲಿ ಇಲ್ಲಿ ಹರಿಯುತ್ತಿರುವ ನದಿಗಳ ಒಂದು ದೊಡ್ಡ ಪಟ್ಟಿಯೇ ಇದೆ. ಆ ಪಟ್ಟಿಯನ್ನು ಅವು ಹರಿಯುತ್ತಿರುವ ಆಧುನಿಕ ರಾಜ್ಯಗಳಿಗೆ ಈ ಕೆಳಕಂಡಂತೆ ಹೊಂದಿಸಬಹುದು. 

ಸುಮಾರು ೭೫-ಕ್ಕೂ ಹೆಚ್ಚು ನದಿಗಳು ಇಂದಿಗೂ ಹರಿಯುತ್ತಿವೆ ಮತ್ತು ಅವುಗಳನ್ನು ಗುರುತಿಸಬಹುದಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವು ಆಧುನಿಕ ಭಾರತದ ಎಲ್ಲಾಪ್ರದೇಶಗಳನ್ನೊಳಗೊಂಡಿದೆಯಲ್ಲದೆ ಆಧುನಿಕ ಪಾಕಿಸ್ತಾನ, ಆಫ಼ಘಾನಿಸ್ತಾನಕ್ಕೂ ಚಾಚುತ್ತದೆ. ಅದಲ್ಲದೆ ೭೫ಕ್ಕೂ ಹೆಚ್ಚಿನ ನದಿಗಳನ್ನು ಇನ್ನೂ ಗುರುತಿಸಬೇಕಾಗಿದೆ. ವಿಷ್ಣುಪುರಾಣದಲ್ಲಾದರೋ ಕೆಲವೇ ನದಿಗಳನ್ನು ಉಲ್ಲೇಖಿಸಲಾಗಿದೆ. ಅಲ್ಲಿ ಬರುವ ಎಲ್ಲ ನದಿಗಳನ್ನೂ ಇಲ್ಲಿ ಕಾಣಬಹುದು. ಆದರೆ ಅದನ್ನು ಮೀರಿದ ನದಿಗಳ ಚಿತ್ರಣವನ್ನು ಮಹಾಭಾರತದಲ್ಲಿ ಕಾಣಬಹುದು. ಇಷ್ಟೆಲ್ಲವನ್ನೂ ವಿವರವಾಗಿ ಪಟ್ಟಿ ಕೊಟ್ಟಿರುವುದಲ್ಲದೆ ‘ಸಂಜಯ ನನಗೆ ನೆನಪಿರುವಷ್ಟು ನದಿಗಳನ್ನು ಹೇಳಿದ್ದೇನೆ. ಇದಕ್ಕೂ ಮೀರಿ ಅನೇಕ ಸಂಖ್ಯೆಯಲ್ಲಿ ನದಿಗಳಿವೆ, ಗುಪ್ತಗಾಮಿನಿಯಾದ ನದಿಗಳೂ ಇವೆ’ ಎಂದು ಉದ್ಗರಿಸುತ್ತಾನೆ. ಈ ರೀತಿಯಾಗಿ ಹರಡಿರುವ ವಿವರಗಳಿಂದ ಇಷ್ಟನ್ನು ಹೇಳಬಹುದು. ಇಂದು ನಾವು ಆಧುನಿಕ ಭಾರತರಾಷ್ಟ್ರವೆಂದು ಯಾವುದನ್ನು ಕರೆಯುತ್ತೇವೋ ಅದರ ಸಾಂಸ್ಕೃತಿಕ-ಭೌಗೋಲಿಕ ಐಕ್ಯತೆಯನ್ನು ಮಹಾಭಾರತದ ಕಾಲದಲ್ಲೇ ಗುರುತಿಸಬಹುದು. ಕೇವಲ ನದಿ-ಪರ್ವತಗಳಿಂದಲೇ ಆಗಿನ ಸಾಂಸ್ಕೃತಿಕ ಮನಸ್ಸಿನಲ್ಲಿ ಭಾರತವರ್ಷ ಯಾವ ವಿಸ್ತಾರವನ್ನು ಪಡೆದುಕೊಂಡಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. 

ಇದೆಲ್ಲವನ್ನೂ ಮೀರಿ ಮತ್ತೊಂದು ಮಾತನ್ನು ಪ್ರಾಸಂಗಿಕವಾಗಿ ಹೇಳಲೇಬೇಕು. ಭೂಪ್ರದೇಶ, ಪರ್ವತ, ರಾಜ್ಯಗಳಿಗೆ ಬೇರೆ ಸಂಸ್ಕೃತಿಗಳಲ್ಲಿ ಪ್ರಾಶಸ್ತ್ಯವನ್ನು ಕಾಣಬಹುದು. ಆದರೆ ಈ ಬಗೆಯಲ್ಲಿ ನದಿಗಳಿಗೆ ಮತ್ತು ತೀರ್ಥಗಳಿಗೆ ಕೇವಲ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಪ್ರಾಶಸ್ತ್ಯವನ್ನು ಕಾಣಬಹುದಾಗಿದೆ. ಇದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ಇದಕ್ಕೆ ಮೂಲಕಾರಣ ನೀರು ಮತ್ತು ನದಿಗಳಿಗೆ ವೇದಗಳಲ್ಲಿರುವ ಪ್ರಾಮುಖ್ಯತೆ. 

ಮುಂದಿನ ಲೇಖನದಲ್ಲಿ ಇದೇ ಪರ್ವದಲ್ಲಿ ಬರುವ ರಾಜ್ಯಗಳ ವಿವರವನ್ನು ನೋಡೋಣ.

Feature Image Credit: youtube.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.