close logo

ಭಾರತವರ್ಷ ಮಾಲಿಕೆ: ಸಂಜಯನಿಗೆ ಕಂಡ ಭಾರತವರ್ಷ 

ಮಹಾಭಾರತದಲ್ಲಿ ಭಾರತವರ್ಷದ ಉಲ್ಲೇಖ ಹಲವು ಕಡೆ ಕಾಣಸಿಗುತ್ತದೆ. ಕೆಲವು ಅಧ್ಯಾಯಗಳು ಸಂಪೂರ್ಣವಾಗಿ ಭಾರತವರ್ಷದ ವಿವರಣೆಗೇ ಮೀಸಲಾಗಿವೆ. ಅಂತಹ ಎರಡು ಅಧ್ಯಾಯಗಳು ಜಂಭೂಖಂಡವಿನಿರ್ಮಾಣ ಪರ್ವದಲ್ಲಿ ಬರುತ್ತದೆ. ಭೀಷ್ಮಪರ್ವದಲ್ಲಿ ಬರುವ ಈ ಉಪಪರ್ವದಲ್ಲಿನ ಕಡೆಯ ಎರಡು ಅಧ್ಯಾಯಗಳಲ್ಲಿ ಭಾರತವರ್ಷದ ಉಲ್ಲೇಖ ಸ್ವಾರಸ್ಯಕರವಾಗಿದೆ. ವಿಶೇಷವಾಗಿ ಇದು ವಿಷ್ಣುಪುರಾಣದ ವಿವರಣೆಯನ್ನು ಮತ್ತಷ್ಟು ಪುಷ್ಟಿಗೊಳಿಸುತ್ತದೆ. ಈ ಅಧ್ಯಾಯಗಳು ವ್ಯಾಸ ಶಿಷ್ಯನಾದ ಸಂಜಯ ಮತ್ತು ಕುರುರಾಜನಾದ ಧೃತರಾಷ್ಟ್ರ – ಇವರಿಬ್ಬರ ನಡುವಿನ ಸಂಭಾಷಣೆಯ ಸ್ವರೂಪದಲ್ಲಿದೆ. ಭಗವದ್ಗೀತೆ ಸನ್ನಿವೇಶಕ್ಕೆ ಸ್ವಲ್ಪ ಮುಂಚಿತವಾಗಿ ಬರುವ ಈ ಪರ್ವದಲ್ಲಿ ಧೃತರಾಷ್ಟ್ರನು ಕೇಳಿದ ಕೆಲವು ಪ್ರಶ್ನೆಗಳಿಗೆ ಸಂಜಯ ಉತ್ತರ ನೀಡುತ್ತಾನೆ. 

ಮೊದಲ ಎರಡು ಶ್ಲೋಕಗಳೇ ಬಹಳ ಸ್ವಾರಸ್ಯಪೂರ್ಣವಾಗಿವೆ : 

ಯದಿದಂ ಭಾರತಂ ವರ್ಷಂ ಯತ್ರೇದಂ ಮೂರ್ಛಿತಂ ಬಲಂ ।

ಯತ್ರಾತಿಮಾತ್ರ ಲುಬ್ಧೋಯಂ ಪುತ್ರೋ ದುರ್ಯೋಧನೋ ಮಮ ।। ೧।।

ಯತ್ರ ಗೃದ್ಧಾಹ್ ಪಾಂಡುಪುತ್ರಾ ಯತ್ರಮೇ  ಸಜ್ಜತೇ ಮನಃ ।

ಏತನ್ಮೇ  ತತ್ತ್ವಮಾಚಕ್ಷ ತ್ವಂ ಹಿ ಮೇ ಬುದ್ಧಿಮಾನ್ಮತಃ ।। ೨ ।।  

ಈ ಎರಡು ಪದ್ಯಗಳ ಸಾರಾಂಶವೆಂದರೆ “ಎಲೈ, ಸಂಜಯನೇ, ಯಾವ ಭಾರತವರ್ಷವನ್ನು ತಮ್ಮದಾಗಿಸಿಕೊಳ್ಳಲು ದುರ್ಯೋಧನನೂ, ಪಾಂಡು ಪುತ್ರರೂ ಉತ್ಸುಕರಾಗಿಹರೋ, ಯಾವುದರ ಮೇಲೆ ನನ್ನ ಮನಸ್ಸೂ ನೆಟ್ಟಿರುವುದೋ, ಎಲ್ಲಿ ಸಮಸ್ತರಾಜರೂ ಯುದ್ಧಕ್ಕೆ  ಸನ್ನದ್ಧರಾಗಿದ್ದಾರೋ, ಅಂತಹ ಭಾರತವರ್ಷದ ಸಂಪೂರ್ಣ ವಿವರಣೆಯನ್ನು ನನಗೆ  ನೀಡು.” 

ಈ ಶ್ಲೋಕಗಳಲ್ಲಿ ಎರಡು ಮುಖ್ಯ ಸಾರಂಶಗಳಿವೆ. 

  1. ಮೊದಲನೆಯದಾಗಿ ಒಂದು ನಿರ್ದಿಷ್ಟ ಭೂಪ್ರದೇಶವನ್ನು ಭಾರತವರ್ಷವೆಂದು ಕರೆದಿರುವುದು. ಅದರ ರೂಪುರೇಖೆಗಳೇನು ಎಂದು ನಂತರ ನೋಡೋಣ. ವಿಷ್ಣುಪುರಾಣದಂತೆಯೇ ಇಲ್ಲಿಯೂ ಭಾರತವರ್ಷವೆಂದು ಕರೆದಿರುವುದು ಈ ಪ್ರದೇಶದಕ್ಕೆ ತನ್ನದೇ ಗುರುತು-ಘನತೆಗಳಿರುವುದನ್ನು ಎತ್ತಿತೋರುತ್ತದೆ. ತನ್ಮೂಲಕ ಒಂದು ಬಗೆಯ ಐಕ್ಯತೆಯನ್ನು ಧ್ವನಿಸುತ್ತದೆ. ಅದಾವ ಬಗೆಯ ಐಕ್ಯತೆ ಎನ್ನುವುದನ್ನೂ ಸಹ ನಂತರ ನೋಡೋಣ.  
  2. ಎರಡನೆಯದಾಗಿ ಯಾವುದನ್ನು (ಭಾರತವರ್ಷವನ್ನು) ತಮ್ಮದಾಗಿಸಿಕೊಳ್ಳಲು ದುರ್ಯೋಧನ ಅತಿಲುಬ್ಧನಾಗಿರುವುದು ಮತ್ತು ಪಾಂಡವರು ಉತ್ಸುಕರಾಗಿರುವುದು, ಎಲ್ಲಕ್ಕಿಂತ ಮಿಗಿಲಾಗಿ ಸ್ವತಃ ಧೃತರಾಷ್ಟ್ರನ ಮನಸ್ಸೇ ನೆಟ್ಟಿರುವುದು – ಎನ್ನುವ ವಿಚಾರ.  (ಪಾಂಡವರ ಮನಸ್ಸು ಅದರಲ್ಲೇ ನೆಟ್ಟಿರುವುದು ಎನ್ನುವುದು ಸಂಜಯನಿಗೆ ಸರಿಬರುವುದಿಲ್ಲ. ಅದನ್ನು ಅವನು ವಿರೋಧಿಸಿ ಹೇಳುತ್ತಾನಾದರೂ ಅದು ನಮ್ಮೀ ಲೇಖನಕ್ಕೆ ಹೊರತಾದ ವಿಷಯ).

ಈ ಎರಡನೆಯ ಅಂಶವೇ ಇಲ್ಲಿ ಮುಖ್ಯವಾಗಿರುವುದು. ಯಾವುದೋ ಒಂದು ಬಗೆಯ ಐಕ್ಯತೆಯಿರುವುದು ಒಂದು ವಿಷಯ. ಆದರೆ ಕ್ಷತ್ರಿಯರು ಒಂದು ಪ್ರದೇಶವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಬಯಸುವುದು ಮತ್ತೊಂದು ವಿಷಯ. ವಿಷ್ಣುಪುರಾಣದ ಋಷಿ-ಮುನಿಗಳು, ಯಜ್ಞ, ತಪಸ್ಸು, ಮೋಕ್ಷ ಇತ್ಯಾದಿಗಳು ಈ ಪ್ರದೇಶದ ಸಾಂಸ್ಕೃತಿಕ ವೈಶಿಷ್ಟ್ಯ ಎನ್ನುವುದನ್ನು ಎತ್ತಿತೋರಿಸುತ್ತದೆ. ಮಹಾಭಾರತವಾದರೋ ಇದು ಕ್ಷತ್ರಿಯರಾಜರು ತಮ್ಮದಾಗಿಸಿಕೊಳ್ಳಲು ಬಯಸುತ್ತಿದ್ದ ಪ್ರದೇಶ ಎಂದು ಹೇಳುವಲ್ಲಿ ಭಾರತವರ್ಷಕ್ಕಿದ್ದ  ಒಂದು ರಾಜಕೀಯ ಆಯಾಮವವನ್ನೂ ಸಹ ತೋರಿಸುತ್ತಿದೆ. ಕನಿಷ್ಠ ದುರ್ಯೋಧನನಿಗಂತೂ ಈ ಹೆಬ್ಬಯಕೆ  ಇದ್ದೇಯಿತ್ತು  ಮತ್ತು ಧೃತರಾಷ್ಟ್ರನ ಮನಸ್ಸಿನಲ್ಲೂ ಅದೇ ಇತ್ತು ಎನ್ನುವುದು ಸ್ಪಷ್ಟವಾಗುತ್ತದೆ. 

ಧೃತರಾಷ್ಟ್ರನ ಈ ಪ್ರಶ್ನೆಗಳಿಗೆ ಸಂಜಯ ಹೀಗೆ ಉತ್ತರಿಸುತ್ತಾನೆ  :

ಅಪರೇ ಕ್ಷತ್ರಿಯಾಶ್ಚೈವ ನಾನಾ ಜನಪದೇಶ್ವರಾಹ್ ।।

ಏ ಗೃದ್ಧಾ  ಭಾರತೇ ವರ್ಷೇ ನ ಮೃಷ್ಯಂತಿ ಪರಸ್ಪರಂ ।। ೪।।

ಅರ್ಥಾತ್ – ‘ಕೇವಲ  ನೀವಷ್ಟೇ ಏಕೆ, ಭಾರತವರ್ಷದ ವಿಷಯದಲ್ಲಿ ಇಲ್ಲಿರುವ ಎಲ್ಲ ಜನಪದರಾಜರೂ ಅಷ್ಟೇ ಆಶಾವಂತರಾಗಿದ್ದಾರೆ. ಇದನ್ನು ತಮ್ಮದಾಗಿಸಿಕೊಳ್ಳಲು ಪರಸ್ಪರ ಯುದ್ಧದಲ್ಲಿ ತೊಡಗುತ್ತಾರೆ’. ಮಹಾಭಾರತ ಇತಿಹಾಸವಲ್ಲ ಎನ್ನುವವರೂ ಸಹ, ಮಹಾಭಾರತ ಬರೆದ ಕಾಲಕ್ಕೆ ಅಸ್ತಿತ್ತ್ವದಲ್ಲಿದ್ದ ಭರತಖಂಡವೆಂಬ ಭೂಪ್ರದೇಶವನ್ನು  ತಮ್ಮದಾಗಿಸಿಕೊಂಡು ರಾಜ್ಯಸ್ಥಾಪಿಸಬೇಕೆಂಬ ಹಿರಿಯಾಸೆ  ಆ ಕಾಲದ  ಕ್ಷತ್ರಿಯರಿಗಿದ್ದಿರಬೇಕು ಎನ್ನುವುದನ್ನು ಅಲ್ಲಗಳೆಯಲಾರರು. 

ಅಷ್ಟಕ್ಕೇ ಸಂಜಯ ನಿಲ್ಲುವುದಿಲ್ಲ. ಈ ಹಿಂದೆ ಯಾರೆಲ್ಲ  ರಾಜರು ಭರತಖಂಡವನ್ನು ತಮ್ಮದಾಗಿಸಿಕೊಳ್ಳಬಯಸಿದರು, ಭಾರತವರ್ಷ ಯಾರೆಲ್ಲರಿಗೆ ಪ್ರೀತಿಪಾತ್ರವಾಗಿತ್ತು ಎನ್ನುವುದನ್ನು ಪಟ್ಟಿಮಾಡುತ್ತಾನೆ. 

ಅತ್ರ ತೇ ಕೀರ್ತಯಷ್ಯಾಮಿ ವರ್ಷಾಮ್ ಭಾರತ ಭಾರತಂ ।

ಪ್ರಿಯಮಿಂದ್ರಸ್ಯ ದೇವಸ್ಯ ಮನೋರ್ವೈವಸ್ವತಸ್ಯ ಚ ।। ೫ ।।

ಪೃಥಾಸ್ತು ರಾಜನ್ ವೈನ್ಯಶ್ಚ ತಥೇಕ್ಷ್ವಾಕೊರ್ಮಹಾತ್ಮನಃ ।

ಯಯಾತೋಮ್ಬರೀಯಸ್ಯ ಮಾಂಧಾತುರ್ನಹುಷಸ್ಯ ಚ ।। ೬।

ತಥೈವ ಮುಚುಕುಂದಸ್ಯ ಶಿಬೇರೌಶೀನರಸ್ಯ ಚ ।

ಋಷಭಸ್ಯ ಚ ತಥೈಲಸ್ಯ ನೃಗಸ್ಯ ನೃಪತೇಸ್ತಥಾ ।। ೭।।

ಕುಶಿಕಸ್ಯಚ ದುರ್ಧರ್ಷ ಗಾಧೇಶ್ಚೈವ ಮಹಾತ್ಮನಃ ।

ಸೋಮಕಸ್ಯಚ ದುರ್ಧರ್ಷ ದಿಲೀಪಸ್ಯ ತಥೈವ ಚ ।। ೮ ।। 

ದೇವೇಂದ್ರ ಮತ್ತು ವೈವಸ್ವತಮನು ಮಾತ್ರವಲ್ಲ. ಪೃಥು ಚಕ್ರವರ್ತಿ (ವೇನನ ಮಗ), ಸೂರ್ಯವಂಶ ಕುಲದೀಪಕನಾದ ಇಕ್ಷ್ವಾಕು, ಐಲ, ಯಯಾತಿ, ನಹುಷ, ಮಾಂಧಾತ, ಮುಚುಕುಂದ, ಶಿಬಿ, ಋಷಭದೇವ, ಪುರೂರವ, ನೃಗ, ಕುಶಿಕ, ಗಾಧಿ, ಸೋಮಕ, ದಿಲೀಪ – ಈ ಎಲ್ಲ ರಾಜರಿಗೂ ಭಾರತವರ್ಷ ಅತ್ಯಂತ ಪ್ರೀತಿಪಾತ್ರವಾಗಿತ್ತು ಎಂದು ತಿಳಿದುಬರುತ್ತದೆ. ಈ ಎಲ್ಲ ರಾಜರೂ ಕುಲಪ್ರವರ್ತಕರು, ಅತ್ಯಂತ ಪ್ರಾಚೀನರೂ, ಯುಗಪ್ರವರ್ತಕರು ಎನ್ನುವುದು ಮಹತ್ವಪೂರ್ಣವಾದ ವಿಷಯ. 

ಮುಂದುವರೆದ ಸಂಜಯ ಇದು ಎಷ್ಟು ಸರ್ವೇಸಾಮಾನ್ಯವಾಗಿತ್ತು ಎಂದು ತಿಳಿಸುತ್ತಾನೆ  

ಅನ್ಯೇಷಾಂಚ ಮಹಾರಾಜ ಕ್ಷತ್ರೀಯಾಣಾಮ್ ಬಲೀಯಸಾಂ ।

ಸರ್ವೇಷಾಮೇವ ರಾಜೇಂದ್ರ ಪ್ರಿಯಂ ಭಾರತ ಭಾರತಂ ।। ೯ ।। 

“ಇದುವರೆಗಿನ ಅನೇಕಾನೇಕ ರಾಜಮಹಾರಾಜರಾಗಲೀ,  ಒಬ್ಬರಿಗಿಂತ ಒಬ್ಬರು ಬಲಿಷ್ಠರಾದ ಕ್ಷತ್ರಿಯರಿಗಾಗಲೀ ,  ಎಲ್ಲರಿಗೂ ಭಾರತವರ್ಷವು ಅತ್ಯಂತ ಪ್ರಿಯವಾಗಿದೆ.” ಎಂದು ಸಂಜಯ ಗಮನಿಸುತ್ತಾನೆ. 

ಇಲ್ಲಿ ಓದುಗರು ಸಂಜಯನ ಧ್ವನಿಯನ್ನು ಗಮನಿಸಬೇಕು. ಈ ಎಲ್ಲ ಕ್ಷತ್ರಿಯ ರಾಜರೂ ಸಹ ನಮ್ಮ ಸಾಂಸ್ಕೃತಿಕ-ಮಾನಸದಲ್ಲಿ ಉನ್ನತ ಸ್ಥಾನ ಪಡೆದಿರುವವರು. ಹೆಚ್ಚಿನವರು ರಾಜಸೂಯ-ಅಶ್ವಮೇಧಗಳನ್ನು ನಡೆಸಿದವರು. ತಮ್ಮ ತಮ್ಮ ಕಾಲಕ್ಕೆ ಮಹತ್ವಪೂರ್ಣ ಬದಲಾವಣೆಗೆ ಕಾರಣರಾದವರು. ಅವರೆಲ್ಲರಿಗೂ ಭಾರತವರ್ಷ ಪ್ರೀತಿ-ಪಾತ್ರವು, ಬಯಸತಕ್ಕ ವಸ್ತುವು ಆಗಿತ್ತು ಎಂದು ಹೇಳುವಾಗ, ಈ ಭೂಪ್ರದೇಶಕ್ಕೆ ಒಂದು ಪ್ರಾಚೀನತೆಯನ್ನು ಸಂಜಯ ಸ್ಥಾಪಿಸುತ್ತಾನೆ.

ಅಂದರೆ, ಮಹಾಭಾರತ ಬರೆದ ಕಾಲಕ್ಕೆ ಆಗಿನ ರಾಜರಿಗೆ ಅದು ಕೇವಲ ಒಂದು ಭೌತಿಕ ರಾಜಕೀಯ ವಸ್ತುಮಾತ್ರವಾಗಿಲ್ಲದೆ, ಸಾಂಸ್ಕೃತಿಕ-ರಾಜಕೀಯ ವಸ್ತುವೂ ಆಗಿತ್ತು ಎನ್ನುವುದನ್ನು ಇದು ಧ್ವನಿಸುತ್ತದೆ. ಭೌತಿಕ ಭೋಗಕ್ಕೆ ಪ್ರದೇಶವನ್ನು ಆಶಿಸುವುದು ಬೇರೆ. ಸಾಂಸ್ಕೃತಿಕವಾಗಿ ಒಂದು ಪ್ರದೇಶದಲ್ಲಿ ಐಕ್ಯತೆಯಿರುವುದು ಬೇರೆ. ಆದರೆ ಸಾಂಸ್ಕೃತಿಕ, ಪೌರಾಣಿಕ ಕಾರಣಕ್ಕೆ ಒಂದು ಪ್ರದೇಶವನ್ನು ಬಯಸುವುದು ಬೇರೆ. ಹೀಗೆ ಮೂರು ವಿವಿಧ ರೀತಿಗಳಲ್ಲಿ ಭಾರತವರ್ಷ ಎನ್ನುವುದು ಸಂಸ್ಕೃತಿಯ ಅಂಗವಾಗಿರುವುದನ್ನು ನಾವಿಲ್ಲಿ ಕಾಣಬಹುದು. ಒಂದು ಪ್ರದೇಶಕ್ಕೆ ಪೌರಾಣಿಕತೆ ಪ್ರಾಪ್ತವಾಗಿಯೆಂದರೆ ಅದು ರಾಜಕೀಯ, ಇತಿಹಾಸ, ಅರ್ಥ-ಕಾಮಗಳನ್ನು ಮೀರಿದ ಒಂದು ಸ್ಥಾನ ಪಡೆದುಕೊಂಡಿದೆ ಎಂದರ್ಥವಾಗುತ್ತದೆ. ಅರ್ಥಾತ್ ಜನ-ಮಾನಸದಲ್ಲಿ ಈ ಭೂ-ಪ್ರದೇಶದ ಸ್ಥಾನ ಅತ್ಯುನ್ನತವಾದದ್ದು ಎಂದರ್ಥ. 

ಇಷ್ಟೆಲ್ಲಾ ಪರಿಶ್ರಮಪಟ್ಟು ಸಂಜಯನಾದರೂ   ಏಕೆ ವಿವರಿಸುತ್ತಾನೆ ? ಮೊದಲನೆಯದಾಗಿ,  ಪಾಂಡವರ ಮೇಲೆ ಹೊರೆಸಿದ ಭೂಮಿಯ ಆಸೆಬುರುಕತನದ ಆರೋಪ ಸಂಜಯನಿಗಿಷ್ಟವಾಗುವುದಿಲ್ಲ. ಪಾಂಡವರು  ಧರ್ಮಕ್ಕಾಗಿ ಹೋರಾಡುತ್ತಿರುವುದಾಗಿ ಎಂದು ವಿವರಿಸಿದ ಮೇಲೆಯೂ ಸಹ ಅದಕ್ಕೆ ಮಿಗಿಲಾದ ಕಾರಣವನ್ನು ಕೊಡುವುದು ಅವನ ಉದ್ದೇಶವಾಗಿದೆ. ಪೌರಾಣಿಕತೆಯ ಮೂಲಕ ಸಂಜಯ ಇದನ್ನು ಸ್ಪಷ್ಟವಾಗಿ ಸ್ಥಾಪಿಸುತ್ತಾನೆ. ಎರಡನೆಯದಾಗಿ, ಈ ಮಹಾಯುದ್ಧದಿಂದ  ಉಂಟಾಗುವ ಪರಿಣಾಮವಾದರೂ ಏನು ಎಂದು ಸಂಜಯ ಚೆನ್ನಾಗಿ ಬಲ್ಲನು. ಮಹಾಯುದ್ಧದಲ್ಲಿ ಗೆದ್ದವರು ಸಂಸ್ಕೃತಿಯ ಹರಿಕಾರರಾಗುತ್ತಾರೆ. ಆ ಉನ್ನತ ಸಂಸ್ಕೃತಿಯ ಪ್ರತಿನಿಧಿಗಳಾಗಿದ್ದ ರಾಜರ ಉತ್ತರಾಧಿಕಾರಿಯಾಗುವವರು ಯಾರು ಎನ್ನುವ ಆತಂಕ ಸಂಜಯನಿಗಿರುವುದು ಸ್ಪಷ್ಟವಾಗುತ್ತದೆ. ಸಂಜಯನು ತನ್ನ ಉತ್ತರಗಳಿಂದ ಧೃತರಾಷ್ಟ್ರನಿಗೂ ಆ ಉನ್ನತ ಪರಂಪರೆಯನ್ನು ಎತ್ತಿತೋರಿಸುತ್ತಿದ್ದಾನೆ.

ಒಟ್ಟಿನಲ್ಲಿ ಇಷ್ಟನ್ನು ಐತಿಹಾಸಿಕವಾಗಿ ಸ್ಥಾಪಿಸಬಹುದು: ಮಹಾಭಾರತ ಬರೆದ ಕಾಲದಲ್ಲಿ ಭಾರತವರ್ಷ ಭೂಪ್ರದೇಶಕ್ಕೆ ರಾಜಕೀಯ, ಸಾಂಸ್ಕೃತಿಕ ಆಯಾಮಗಳಲ್ಲದೆ ಒಂದು ಪೌರಾಣಿಕ ಆಯಾಮವೂ ಸ್ಥಾಪಿತವಾಗಿತ್ತು . ಈ ಪ್ರದೇಶವನ್ನು ಗೆದ್ದು ಪಾಲಿಸಿದಲ್ಲಿ ಪುರಾಣೇತಿಹಾಸವಾದ ರಾಜಮಹಾರಾಜರ ಸಾಲಿನಲ್ಲಿ ನಿಲ್ಲಬಹುದು ಎನ್ನುವ ಭಾವವೊಂದು ಸಂಸ್ಕೃತಿಯಲ್ಲಿತ್ತು ಎನ್ನುವುದನ್ನಂತೂ ಸ್ಪಷ್ಟವಾಗಿ ಹೇಳಬಹುದು.  

ನಂತರ ಸಂಜಯ ಭಾರತವರ್ಷದ ಸವಿವರ ಚಿತ್ರಣವನ್ನು ಕೊಡುತ್ತಾನೆ. ಅದನ್ನು ಮುಂದಿನ ಭಾಗಗಳಲ್ಲಿ ನೋಡೋಣ.

Feature Image Credit: wikipedia.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.