close logo

ಭಾರತವರ್ಷ ಮಾಲಿಕೆ : ವಿಷ್ಣುಪುರಾಣದಲ್ಲಿ ಭಾರತ-ಭಾರತಿ – ಒಂದು ಐತಿಹಾಸಿಕ ಬೆಳಕು 

ವ್ಯಾಸರಚಿತವೆನ್ನಲಾದ ೧೮ ಮಹಾಪುರಾಣಗಳ ತಾತ್ವಿಕ ಹಾಗು ಸಾಂಸ್ಕೃತಿಕ ಪ್ರಮುಖತೆ ನಮಗೆಲ್ಲ ಚೆನ್ನಾಗಿ ತಿಳಿದಿದೆ. ಅಂತಹ ಪುರಾಣಗಳಲ್ಲಿ ವಿಷ್ಣುಪುರಾಣವೂ ಒಂದು. ಪುರಾಣದ  ಆರು ಭಾಗಗಳಿಗೆ  ಪಾರಂಪರಿಕವಾಗಿ  ಆರು ಅಂಶಗಳು ಎಂದು ಕರೆಯಲಾಗುತ್ತದೆ. 

  • ಮೊದಲನೆಯ ಅಂಶ ಸೃಷ್ಟಿ, ದೇವತಾ ತತ್ವ ಮತ್ತು ಇನ್ನಿತರ ತಾತ್ವಿಕ ವಿಷಯಗಳಿಂದ ಕೂಡಿದೆ. 
  • ಎರಡನೆಯ ಅಂಶದಲ್ಲಿ ಲೋಕಗಳ ವಿವರಣೆಯನ್ನು ಕಾಣುತ್ತೇವೆ.
  • ಮೂರನೆಯ ಅಂಶ  ಧಾರ್ಮಿಕ ಜೀವನ, ಮನು, ವ್ಯಾಸರ ಕುರಿತಾಗಿದೆ. 
  • ನಾಲ್ಕನೆಯ ಅಂಶದಲ್ಲಿ ಮನುವಿನಿಂದ ಕಲಿಯುಗದವರೆಗಿನ ಭಾರತೀಯ ಇತಿಹಾಸದ ಪಾರಂಪರಿಕ ದೃಷ್ಟಿಯನ್ನು ಕಾಣಬಹುದು. 
  • ಐದನೆಯ ಅಂಶ ಶ್ರೀಕೃಷ್ಣನ ಚರಿತ್ರೆ. 
  • ಆರನೆಯ ಅಂಶ ಕಲಿಯುಗ ನಿರೂಪಣೆ, ಪ್ರಳಯ ಮತ್ತು ಕಾಲ-ಕಾಲಾಂತರ ಜಿಜ್ಞಾಸೆಯಿಂದ ಕೂಡಿದೆ.

ತಾತ್ವಿಕತೆಯೇ ಪ್ರಧಾನವಾದರೂ, ಎಲ್ಲ ಪುರಾಣಗಳಂತೆಯೇ, ವಿಷ್ಣುಪುರಾಣದಲ್ಲಿಯೂ ಇಹಲೋಕ-ವ್ಯವಹಾರಕ್ಕೆ ಆಸಕ್ತಿಕರವೆನ್ನಿಸುವ ಅನೇಕ ಅಂಶಗಳಿವೆ. ಅವುಗಳಲ್ಲಿ ಬಹುಮುಖ್ಯವಾದದ್ದು ಆಧುನಿಕ ದೃಷ್ಟಿಕೋನಕ್ಕೆ ಸೆಡ್ಡು ಹೊಡೆಯುವಂತಹ ಐತಿಹಾಸಿಕತೆ. ವಸ್ತುತಃ ಪುರಾಣಗಳ ಪ್ರಮುಖ ಕಾಳಜಿ ಐತಿಹಾಸಿಕತೆಯಲ್ಲ. ಆದಾಗ್ಯೂ ಆಧುನಿಕ ದೃಷ್ಟಿಕೋನದಿಂದ ಇತಿಹಾಸದ ಮೇಲೆ ಬೆಳಕು ಚೆಲ್ಲಬಹುದಾದ ಅನೇಕ ಅಂಶಗಳು ಪುರಾಣಗಳಲ್ಲಿ  ಹುದುಗಿವೆ.  ಅಂತಹ ಒಂದು ಸ್ವಾರಸ್ಯಕರವಾದ ಭಾಗವನ್ನು ಸನಾತನ-ಸಜ್ಜನಿಗಳ ಮುಂದಿಡುವುದೇ ಈ ಲೇಖನದ ಉದ್ದೇಶ. 

ಭಾರತ-ಭಾರತಿ

ವಿಷ್ಣುಪುರಾಣದ ದ್ವಿತೀಯಾಂಶದ ಮೂರನೆಯ ಅಧ್ಯಾಯವು ಈ ದಿಶೆಯಲ್ಲಿ ಚಿಂತನಾರ್ಹವಾದ ವಿಚಾರವನ್ನು ಹೊಂದಿದೆ. ಮಹರ್ಷಿ ಪರಾಶರರಿಂದ ಉಚ್ಛರಿಸಲ್ಪಟ್ಟಿರುವ ಅದರ ಮೊದಲನೆಯ ಶ್ಲೋಕವೇ ಮಹತ್ತರವಾದುದಾಗಿದೆ. ಈ ಶ್ಲೋಕ ಹೀಗಿದೆ. 

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ । 

ವರ್ಷಮ್ ತದ್ಭಾರತಂ ನಾಮ  ಭಾರತೀ ಯತ್ರ ಸಂತತಿಃ  ॥ 1 ॥ 

ಅರ್ಥ: ಸಮುದ್ರದ ಉತ್ತರದಲ್ಲಿ ಮತ್ತು ಹಿಮಾಲಯದ 

ದಕ್ಷಿಣದಲ್ಲಿರುವ ಈ ದೇಶಕ್ಕೆ (ವರ್ಷ) ಭಾರತ ಎನ್ನುತ್ತಾರೆ. 

ಇಲ್ಲಿರುವ ಸಂತತಿಗೆ, ಅಂದರೆ ಜನಕ್ಕೆ, ಭಾರತೀ ಎನ್ನುತ್ತಾರೆ. 

ಈ ಒಂದು ಶ್ಲೋಕದಲ್ಲಿ ಅನೇಕ ಸ್ವಾರಸ್ಯಕರ ಸಂಗತಿಗಳಿವೆ. ಅವುಗಳನ್ನು ಒಂದೊಂದಾಗಿ ಪರಾಮರ್ಶಿಸೋಣ. 

  1. ಮೊದಲನೆಯದಾಗಿ – ಇಲ್ಲಿರುವ ಭೂಭಾಗದ ವರ್ಣನೆ. ಹಿಮಾಲಯದ ದಕ್ಷಿಣದಲ್ಲಿರುವ ಭಾಗ ಮತ್ತು ಸಮುದ್ರದ ಉತ್ತರದ ಭಾಗ ಎಂದು ಸುಸ್ಪಷ್ಟವಾಗಿ ಹೇಳಿರುವ ಕಾರಣ ಆ ಭೂಭಾಗ ಯಾವುದಿರಬಹುದು? ಹಿಮಾಲಯವೆಂದ ಮೇಲೆ ಅದು ಇಂದಿನ ಪಾಕಿಸ್ತಾನದ ಉತ್ತರದ ತುದಿಯಿಂದ ಹಿಡಿದು ಇಂದಿನ ಅರುಣಾಚಲದವರೆಗೆ ಯಾವುದೇ ಭಾಗವಾಗಿರಬಹುದು. ಅಂತೆಯೇ ಸಮುದ್ರವೆಂದ ಮೇಲೆ ಅರಬ್ಬೀ ಸಮುದ್ರದಿಂದ ಬಂಗಾಳ ಕೊಲ್ಲಿಯವರೆಗೆ, ಹಿಂದೂ ಮಹಾಸಾಗರವನ್ನೊಳಗೊಂಡು,  ಯಾವುದೇ ಭಾಗವಾಗಿರಬಹುದು.                                                                                                                                ಇಷ್ಟು ಮಾತ್ರದಿಂದ ಅಷ್ಟು ವಿಶಾಲವಾದ ಪ್ರದೇಶವನ್ನು ಈ ಶ್ಲೋಕ ಸಂಕೇತಿಸುತ್ತಿದೆ ಎಂದು ಖಚಿತವಾಗಿ ಹೇಳುವಂತಿಲ್ಲ. ನೇಪಾಳದಿಂದ ಒಡಿಶಾವರೆಗಿನ ಚಿಕ್ಕಭಾಗಕ್ಕೂ ಇದೇ  ಶ್ಲೋಕದ ವಿವರಣೆ ಅನ್ವಯಿಸುತ್ತದೆ ಎಂದು ಯಾರಾದರೂ ಪ್ರತಿವಾದ ಮಾಡಬಹುದು. ಮತ್ತೊಂದು ದೃಷ್ಟಿಯಿಂದ ನೋಡಿದರೆ ಹಾಗಿರಲಾರದು ಎನ್ನಿಸುತ್ತದೆ. ಎಷ್ಟೆಲ್ಲಾ ವಿವರಣೆಗಳನ್ನು ಕೊಡುವ ನಮ್ಮ ಪುರಾಣಗಳು ಅಷ್ಟು ಚಿಕ್ಕ ಭಾಗಕ್ಕೆ ಇನ್ನಷ್ಟು ಸ್ಪಷ್ಟವಾದ ಗಡಿ-ವಿವರಣೆಯನ್ನೇ ಕೊಡುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಹಿಮಾಲಯ ಮತ್ತು ಸಮುದ್ರಗಳಂತಹ ಹೆಗ್ಗುರುತುಗಳಿಂದ ಅಳೆಯುವ ಭೂಭಾಗವು ಬೃಹದಾಕಾರವೇ ಆಗಿರಬೇಕು. ಅಸ್ಪಷ್ಟತೆಗೆ ಮೊರೆ ಹೋಗುವ ಅವಶ್ಯಕತೆ ಪುರಾಣಕ್ಕಿಲ್ಲ. ಆದ್ದರಿಂದ ಇದು ಇಲ್ಲಿ ಸಮಸ್ತ-ಭೂಭಾಗಕ್ಕೆ ಸಂಬಂಧಿಸಿದ್ದು ಎಂದು ಕನಿಷ್ಠ ಗಣನೆಗೆ ತೆಗೆದುಕೊಳ್ಳಬಹುದು. ಇರಲಿ, ಈ ಪ್ರಶ್ನೆಯನ್ನು ಸದ್ಯಕ್ಕೆ  ಒಂದಷ್ಟು ಕಾಲ ಮುಂದೂಡೋಣ.
  2. ಎರಡನೆಯದಾಗಿ – ಈ ಭಾಗಕ್ಕೆ ಭಾರತ ಎನ್ನುವ ಹೆಸರನ್ನು ಸ್ಪಷ್ಟವಾಗಿ ಕೊಟ್ಟಿರುವುದು. ಈ ಬೃಹತ್  ಭೂಭಾಗವನ್ನು ಎಷ್ಟೆಲ್ಲಾ ರಾಜರು ಪ್ರತ್ಯೇಕ ರಾಜ್ಯಗಳಾಗಿ ಆಳುತ್ತಿದ್ದರೂ, ಒಟ್ಟಿಡೀ ಪ್ರದೇಶಕ್ಕೆ  ಒಂದು ಹೆಸರಿನಿಂದ ಅದೂ ಭಾರತವೆಂದು ಗುರುತಿಸಿರುವುದು ಒಂದು ವೈಶಿಷ್ಟ್ಯವೇ ಸರಿ. ಕಾಲ-ಕಾಲದ ರಾಜಕೀಯ ಪರಿಸ್ಥಿತಿ ಏನೇ ಇರಲಿ, ಪ್ರಾಚೀನ ಕಾಲದಲ್ಲೇ ಈ ಭೂಭಾಗವನ್ನು ಭಾರತ ಎಂದು ಕರೆದಿರುವುದರಿಂದ ಇಲ್ಲಿ ಯಾವುದೊ ಒಂದು ಬಗೆಯ ಐಕ್ಯತೆ ಮತ್ತು ಸಾಮರಸ್ಯವಿತ್ತು ಎನ್ನುವ ಅಂಶವನ್ನು ಈ ಶ್ಲೋಕ ಸ್ಪಷ್ಟಪಡಿಸುತ್ತದೆ. 
  3. ಇನ್ನು ಮೂರನೆಯ ಅಂಶವೆಂದರೆ, ಇಲ್ಲಿಯ ಜನರನ್ನು (ಸಂತತಿ) ಭಾರತೀ ಎಂದು ಹೆಸರಿಸಿರುವುದು.   ಮೇಲ್ನೋಟಕ್ಕೆ ಇದು ಸಾಮಾನ್ಯ ವಿಷಯವೆನ್ನಿಸುವುದಾದರೂ ಇದು ಮಹತ್ವಪೂರ್ಣವಾದ ವಿಷಯ. ಭೂಭಾಗಕ್ಕೆ ಭಾರತ ಎನ್ನುವುದು ಕೇವಲ ಪಂಡಿತರು ಗುರುತಿಸುವ ಪರಿಪಾಠ ಎಂದು ಗಾಳಿಗೆ ತೂರಿಬಿಡಬಹುದು. ಆದರೆ ಜನರನ್ನು ಭಾರತೀ ಎಂದು ಗುರುತಿಸಿರುವುದನ್ನು ಹಾಗೆ ನಿಕೃಷ್ಟ ಮಾಡಲಾಗದು. ಇದರಿಂದ ರಾಜಕೀಯ ಭಿನ್ನತೆ, ಸನ್ನಿವೇಶಗಳನ್ನು ಮೀರಿದ ಸಾಂಸ್ಕೃತಿಕ ಐಕ್ಯತೆಯಿಂದ  ಈ ಪ್ರದೇಶ ಕೂಡಿತ್ತು ಎಂದು ಈ ಶ್ಲೋಕ ಒತ್ತಿ ಹೇಳುತ್ತಿದೆ. ಭೂಭಾಗಕ್ಕೂ ಮತ್ತು ಅಲ್ಲಿ ವಾಸಿಸುವ ಜನಸಮೂಹದ ನಡುವಿನ ತಾದಾತ್ಮ್ಯವನ್ನು ಶ್ಲೋಕವು ಸಾರಿ ಹೇಳುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.  ಭಾರತ ಎನ್ನುವ ಹೆಸರಿಗೂ ಋಗ್ವೇದಕ್ಕೂ, ವೈದಿಕ-ಜೈನ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಭಾರತವೆಂದು ಕರೆಯಲಾಗುವ ಈ ಭೂಭಾಗಕ್ಕೂ, ಇಲ್ಲಿನ ಜನರಾದ ಭಾರತೀಯರಿಗೂ ಆ ವೈದಿಕ-ಜೈನ ಸಂಸ್ಕೃತಿಯ ಜೊತೆಗೆ  ಬಿಡಿಸಲಾರದ ಸಂಬಂಧವಿರುವುದನ್ನು ಈ ನಾಮಧೇಯಗಳು ಎತ್ತಿ ತೋರುತ್ತಿವೆ. ಭಾರತ-ಭಾರತವರ್ಷ ವೆನ್ನುವ ಹೆಸರು ಏಕಾಯಿತು ಎನ್ನುವುದನ್ನು ಮತ್ತೊಂದು ಈ ಮಾಲಿಕೆಯ ಮತ್ತೊಂದು ಲೇಖನದಲ್ಲಿ ನೋಡೋಣ.  

ನಮ್ಮ ಭವ್ಯ ಪರ್ವತಗಳು

ಈ ಸಂಬಂಧ ಮತ್ತು ಐಕ್ಯತೆಗಳನ್ನು ಮುಂದಿನ ಶ್ಲೋಕಗಳಲ್ಲಿ  ಮತ್ತಷ್ಟು ಸ್ಪಷ್ಟವಾಗಿ ಕಾಣಬಹುದು.   ದ್ವಿತೀಯಾಂಶದ ಮೂರನೆಯ ಅಧ್ಯಾಯದ ಮೂರನೆಯ ಶ್ಲೋಕವನ್ನು ನೋಡೋಣ. ಅದು ಹೀಗಿದೆ. 

ಮಹೇಂದ್ರೋ ಮಲಯಃ ಸಹ್ಯಃ ಶುಕ್ತಿಮಾನೃಕ್ಷ  ಪರ್ವತಃ ।

ವಿಂಧ್ಯಶ್ಚ ಪಾರಿಯಾತ್ರಶ್ಚ ಸಪ್ತಾತ್ರ ಕುಲಪರ್ವತಾಃ ॥ 3 ॥

ಅರ್ಥ: ಮಹೇಂದ್ರ, ಮಲಯ, ಸಹ್ಯ, ಶುಕ್ತಿಮಾನ್, ಋಕ್ಷ , 

ವಿಂಧ್ಯ ಮತ್ತು ಪಾರಿಯಾತ್ರ – ಇವು ಏಳು ಇಲ್ಲಿರುವ 

(ಅರ್ಥಾತ್ ಭಾರತವರ್ಷದಲ್ಲಿರುವ) ಕುಲಪರ್ವತಗಳು. 

ಈ ಶ್ಲೋಕ ಭಾರತವರ್ಷದಲ್ಲಿರುವ ಪರ್ವತಗಳು ಯಾವುವು ಎನ್ನುವುದನ್ನು ವಿವರಿಸುತ್ತಿದೆ. ಮಹೇಂದ್ರ ಪರ್ವತಶ್ರೇಣಿ ಒಡಿಶಾದಲ್ಲಿದೆ. ಸಹ್ಯವೆಂದರೆ ಇಂದಿನ ಸಹ್ಯಾದ್ರಿ – ಕರ್ನಾಟಕ, ಮಹಾರಾಷ್ಟ್ರ ದೇಶಗಳಲ್ಲಿ ಸಮುದ್ರಕ್ಕೆ ಹೊಂದಿಕೊಂಡಂತಹ ಪರ್ವತಶ್ರೇಣಿ. ಮಲಯವೆಂದರೆ ಸಹ್ಯಾದ್ರಿಯ ಕೆಳಗಿನ ಬೆಟ್ಟಗುಡ್ಡಗಳು, ಮಂಗಳೂರಿನಿಂದ ಕೇರಳದ ತುದಿಯವರೆಗೆ. ಮಲಯಾಳಂ ಎಂದು ಆ ಭಾಷೆಗೆ ಹೆಸರು ಬಂದಿರುವುದೇ ಮಲಯ ಪರ್ವತಶ್ರೇಣಿಯಿಂದ. ಇನ್ನು ವಿಂಧ್ಯ ಪರ್ವತಶ್ರೇಣಿ ಭಾರತದ ಮಧ್ಯಭಾಗದಲ್ಲಿರುವುದು ಎಲ್ಲರಿಗೂ ತಿಳಿದಿದೆ. ಮಧ್ಯಭಾರತವೆಂದರೆ ಮಧ್ಯಪ್ರದೇಶ. ಋಕ್ಷವೆಂದರೆ ವಿಂಧ್ಯಪರ್ವತದ ಪಕ್ಕದಲ್ಲಿರುವ ಪರ್ವತಶ್ರೇಣಿ – ಇವತ್ತಿನ ಝಾರ್ಖಂಡ್ ರಾಜ್ಯದಲ್ಲಿರುವ ಬೆಟ್ಟಗುಡ್ಡಗಳು. ಶುಕ್ತಿಮಾನ್ ಮತ್ತು ಪಾರಿಯಾತ್ರ ಪರ್ವತಗಳೂ ಸಹ ವಿಂಧ್ಯೆಯ ಅಕ್ಕಪಕ್ಕದಲ್ಲೇ ಇರುವಂತಹ ಪರ್ವತಗಳು. ಒಟ್ಟಿನಲ್ಲಿ ಇಂದಿನ ಭಾರತದ ಮಧ್ಯಭಾಗದಲ್ಲಿ ಪೂರ್ವದಿಂದ ಪಶ್ಚಿಮದವರೆಗೆ ಹರಡಿಕೊಂಡಿರುವಂತಹದ್ದು. ಇವತ್ತಿನ ಉತ್ತರಭಾರತ, ಮಧ್ಯಭಾರತ, ದಕ್ಷಿಣದ ತುದಿಯವರೆಗಿನ ಪರ್ವತಶ್ರೇಣಿಗಳನ್ನು ಒಳಗೊಂಡಿರುವಂತಹ ಭೂಭಾಗವೆಂದ ಮೇಲೆ ಇದರಿಂದ ಒಂದಂತೂ ಸ್ಪಷ್ಟವಾಗುತ್ತದೆ. “ಉತ್ತರಂ ಯತ್ಸಮುದ್ರಸ್ಯ” ಎಂದಿರುವುದು ನಿಸ್ಸಂಶಯವಾಗಿ ಹಿಂದೂ ಮಹಾಸಾಗರದಿಂದ ಉತ್ತರಭಾಗದ ಉಲ್ಲೇಖ, ಅರ್ಥಾತ್ ಇವತ್ತಿನ ಕೇರಳ ಮತ್ತು ತಮಿಳುನಾಡಿನ ತುತ್ತ ತುದಿಯಿಂದ. “ಹಿಮಾದ್ರೇಶ್ಚೈವ ದಕ್ಷಿಣಂ” ಎನ್ನುವುದು ಕನಿಷ್ಠ ಕಾಶ್ಮೀರದಿಂದ ಇವತ್ತಿನ ಭೂತಾನದವರೆಗೆ ಎನ್ನುವುದು ಸುಸ್ಪಷ್ಟವಾಗುತ್ತದೆ. ಅರ್ಥಾತ್ ಇಂದಿನ ಭಾರತದ ಹೆಚ್ಚೂ ಕಡಿಮೆ ಎಲ್ಲಾ ಭಾಗಗಳನ್ನು ಆ ಕಾಲಕ್ಕೆ ಭಾರತ, ಭಾರತವರ್ಷ ಎಂದು ಕರೆಯಲಾಗುತ್ತಿತ್ತು. ಇನ್ನು, ಅಸ್ಸಾಂ ಮುಂತಾದ ಪೂರ್ವೋತ್ತರ ಭಾಗದ ಉಲ್ಲೇಖವಿದೆಯೇ – ಎನ್ನುವ ಪ್ರಶ್ನೆಯೇಳುವುದು ಸಹಜವೇ.

ಮುಂದೆ ನೋಡೋಣ. ಕಥೆಯಿಲ್ಲಿಗೇ ಮುಗಿಯಲಿಲ್ಲ. 

ಭಾರತವರ್ಷದ ಭೂಭಾಗಗಳು 

ಇನ್ನು ಒಂದಿಷ್ಟು ಕಠಿಣವಾದ ವಿವರಣೆಯನ್ನು ನೋಡೋಣ. ಆರು, ಏಳು ಮತ್ತು ಎಂಟನೆಯ ಶ್ಲೋಕಗಳನ್ನು ನೋಡೋಣ. ಅವು ಹೀಗಿವೆ:

ಭಾರತಸ್ಯಾಸ್ಯ ವರ್ಷಸ್ಯ ನವಭೇದಾನ್ನಿಶಾಮಯ ।

ಇಂದ್ರದ್ವೀಪಃ ಕಸೇರುಶ್ಚ ತಾಮ್ರಪರ್ಣೋ ಗಭಸ್ತಿಮಾನ್ ॥ 6 ॥

ನಾಗದ್ವೀಪಸ್ತಥಾ ಸೌಮ್ಯೋ ಗಂದರ್ವಸ್ಥ ವಾರುಣ:।

ಅಯಂ ತು ನವಮಸ್ತೇಷಾಮ್ ದ್ವೀಪಃ ಸಾಗರಸಂವೃತಃ ॥ 7 ॥

ಅರ್ಥ: ಈ ಭಾರತದೇಶದಲ್ಲಿ ಒಂಭತ್ತು ವಿಭಾಗಗಳಿವೆ. 

ಅವುಗಳನ್ನು ಕೇಳು. ಇಂದ್ರದ್ವೀಪ, ಕಶೇರು, ತಾಮ್ರಪರ್ಣ, 

ಗಭಸ್ತಿಮಾನ್, ನಾಗದ್ವೀಪ, ಸೌಮ್ಯ, ಗಂಧರ್ವ, ವಾರುಣ. 

ಅವುಗಳಲ್ಲಿ ಒಂಭತ್ತನೆಯ ದ್ವೀಪವಾದರೋ ಸಮುದ್ರದಿಂದ 

ಸುತ್ತುವರಿಯಲ್ಪಟ್ಟಿದೆ. 

ಯೋಜನಾನಾಂ ಸಹಸ್ರಮ್ ತು ದ್ವೀಪೋಯಮ್ ದಕ್ಷಿಣೋತ್ತರಾತ್ ।

ಪೂರ್ವೇ ಕಿರಾತಾ ಯಸ್ಯಾಂತೇ ಪಶ್ಚಿಮೇ ಯವನಾಃ ಸ್ಥಿತಾಃ  ॥ 8 ॥ 

ಅರ್ಥ: ಈ ದ್ವೀಪವು (ಭಾರತವರ್ಷವು) ದಕ್ಷಿಣೋತ್ತರವಾಗಿ ಒಂದು 

ಸಾವಿರ  ಯೋಜನವಿದೆ. ಇದರ ಪೂರ್ವದಲ್ಲಿ ಕಿರಾತರೂ ಪಶ್ಚಿಮದಲ್ಲಿ 

ಯವನರು ವಾಸವಾಗಿದ್ದಾರೆ. 

ಈಗ ಆರು ಮತ್ತು ಏಳನೆಯ ಶ್ಲೋಕಗಳಲ್ಲಿ ಕೊಟ್ಟಿರುವ ಭಾರತವರ್ಷದ ಭೂಭಾಗಳಾದರೂ ಯಾವುವು ಎಂದು ಪರಾಮರ್ಶಿಸೋಣ. ಹೆಚ್ಚಿನ ವಿದ್ವಾಂಸರು ಇಂದ್ರದ್ವೀಪವನ್ನು ಈಗಿನ ಭಾರತದ ಆಗ್ನೇಯ ಭಾಗವೆಂದು, ಕೆಲವರು ಬರ್ಮಾ ಎಂದು ಗುರುತಿಸುತ್ತಾರೆ. ಸಾಗರದಿಂದ ಸಂಪೂರ್ಣವಾಗಿ ಆವೃತವಾದ ದ್ವೀಪವಾದ್ದರಿಂದ ಇದು ಶ್ರೀಲಂಕಾ ಅಥವಾ ಇಂದಿನ ದಕ್ಷಿಣಭಾಗವಾಗಿರಬಹುದು. ತಾಮ್ರಪರ್ಣ ದ್ವೀಪ ಇವತ್ತಿನ ತಮಿಳುನಾಡಿನಲ್ಲಿರುವ ತಾಮ್ರಪರ್ಣಿ ನದಿಯ ಕೆಳಗಿನ ಭಾಗವಾಗಿರಬಹುದು. ಕಶೇರು ಕಾಶ್ಮೀರವಾಗಿರಬಹುದು. ಗಂಧರ್ವ ಇವತ್ತಿನ ಅಫ್ಘಾನಿಸ್ತಾನ, ಪಾಕಿಸ್ತಾನವಾಗಿರಬಹುದು. ನಾಗದ್ವೀಪ ಗುಜರಾತ್ ಆಗಿರಬಹುದು. ಒಟ್ಟಿನಲ್ಲಿ ಬರ್ಮಾದಿಂದ ಅಫ್ಘಾನಿಸ್ತಾನ ಮತ್ತು ತಮಿಳುನಾಡಿನಿಂದ ಹಿಮಾಲಯದವರೆಗೆ ಎಲ್ಲ ಭೂಭಾಗಗಳು ಇಲ್ಲಿ ಉಲ್ಲೇಖಿಸಲ್ಪಟ್ಟಿವೆ. ಆದರೆ ಭೂ-ವಿಭಾಗಗಳನ್ನು ಅಷ್ಟೊಂದು ನಿಖರವಾಗಿ ಗುರುತಿಸುವುದು ಸಾಧ್ಯವಿಲ್ಲ. ಈ ಹೆಸರುಗಳನ್ನು ಇನ್ನಷ್ಟು ಖಚಿತವಾಗಿ ಸಿದ್ಧಪಡಿಸಬೇಕಾದ ಅವಶ್ಯಕತೆಯಿದೆ. 

ಎಂಟನೆಯ ಶ್ಲೋಕದಲ್ಲಿ ಎರಡು ಮಹತ್ವಪೂರ್ಣವಾದ ಸಾಕ್ಷಿಗಳನ್ನು ಗಮನಿಸಬೇಕು. ಮೊದಲನೆಯದಾಗಿ ಉತ್ತರದಿಂದ ದಕ್ಷಿಣದವರೆಗೆ ಒಂದು ಸಾವಿರ ಯೋಜನೆಗಳ ವಿಸ್ತೀರ್ಣವಿದೆ ಎಂಬ ಸ್ಪಷ್ಟವಾದ ಉಲ್ಲೇಖವಿದೆ. ಒಂದು ಯೋಜನಾ ಸಾಮಾನ್ಯವಾಗಿ ೧೨-೧೫ ಕಿ.ಮೀ.. ಶಾಸ್ತ್ರಗಳಲ್ಲಿ ಈ ವಿಷಯವಾಗಿ ಒಮ್ಮತವಿಲ್ಲದಿದ್ದರೂ ಇದಕ್ಕೆ ಈ ಒಂದು ಅಂದಾಜಿದೆ. ಅರ್ಥಾತ್ ಭಾರತವರ್ಷ ಕನಿಷ್ಠ ೧೨೦೦೦ ಕಿ.ಮೀ.  ಉದ್ದವೆಂದಾಯಿತು.  ಇವತ್ತಿನ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕೇವಲ ೩೨೦೦ ಕಿ.ಮೀ.  ಇದರ ನಾಲ್ಕು ಪಟ್ಟು ಎಂದರೆ ಕಜಾಖಿಸ್ತಾನ್, ಟಿಬೆಟ್ ಮುಂತಾದ ಭಾಗಗಳನ್ನು ಒಳಗೊಂಡಿರಬಹುದೇ ಎನ್ನುವ ಸಂಶಯ ಬರಬಹುದು. ಆದರೆ, ಹಿಮಾಲಯದಿಂದ ದಕ್ಷಿಣವೆಂದರೆ ಆ ಭಾಗಗಳು ಸೇರಿರುವುದು ಸಾಧ್ಯವಿಲ್ಲ. ಹಾಗಿದ್ದರೆ, ಮಿಕ್ಕ ಭಾಗಗಳು ಎಲ್ಲಿಹೋದವು ಎನ್ನುವ ಪ್ರಶ್ನೆಯೇಳುತ್ತದೆ? ಅದಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ಏನೇ ಇರಲಿ.  ಕನಿಷ್ಠ ಇವತ್ತಿನ ಭಾರತವನ್ನಾದರೂ ಇಲ್ಲಿನ ವಿವರಣೆ ಸಂಪೂರ್ಣವಾಗಿ ಒಳಗೊಂಡಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಮತ್ತೊಂದು ದಿಶೆಯಲ್ಲಿ ನೋಡುವುದಾದರೆ, ಶ್ರೀಲಂಕಾದಿಂದ ದಕ್ಷಿಣಕ್ಕಿರುವ ಭಾಗವೇನಾದರೂ ಇದ್ದು, ಅದು  ಭಾರತವರ್ಷಕ್ಕೆ ಸೇರಿತ್ತೇ ಎನ್ನುವ ಅನುಮಾನವುಂಟಾಗುತ್ತದೆ. ಒಟ್ಟಿನಲ್ಲಿ ಇದು ಅಸ್ಪಷ್ಟ.  

ಆದರೆ ಎಂಟನೆಯ ಶ್ಲೋಕದ ಕಡೆಯ ಸಾಲು ಮಾತ್ರ ಸುಸ್ಪಷ್ಟವಾಗಿ ಪೂರ್ವ-ಪಶ್ಚಿಮಗಳನ್ನು ದಾಖಲಿಸುತ್ತದೆ. ಪಶ್ಚಿಮದಲ್ಲಿ ಯವನರಿದ್ದಾರೆ ಎನ್ನುವ ಉಲ್ಲೇಖ – ಗ್ರೀಕರು, ಅಥವಾ ಆ ಕಡೆಯ ಜನರ ರಾಜ್ಯ ಭಾರತದ ಪಶ್ಚಿಮಕ್ಕಿತ್ತು ಎಂದು ಹೇಳುತ್ತಿದೆ. ಗ್ರೀಕರು ಒಂದು ಕಾಲದಲ್ಲಿ  ಇವತ್ತಿನ ಪಾಕಿಸ್ತಾನದವರೆಗೆ ರಾಜ್ಯವಾಳಿದ್ದರು  ಎಂದ ಮೇಲೆ ಕನಿಷ್ಠ ಪಕ್ಷ ಇವತ್ತಿನ ಪಂಜಾಬ್-ರಾಜಸ್ಥಾನ-ಗುಜರಾತ್ ಪ್ರಾಂತ್ಯಗಳು ಆ  ಕಾಲದಲ್ಲೇ ಭಾರತವರ್ಷಕ್ಕೆ ಸೇರಿತ್ತು  ಎಂದು ಸ್ಪಷ್ಟವಾಗುತ್ತದೆ. ಅಂತೆಯೇ ಪೂರ್ವದಲ್ಲಿ ಕಿರಾತರು ಎನ್ನುವಲ್ಲಿಗೆ ಮತ್ತೊಂದು ಗಡಿ ಸ್ಪಷ್ಟವಾಗುತ್ತದೆ. ಕಿರಾತರು ಬೇರೆ ಬೇರೆ ಕಾಲದಲ್ಲಿ ನೇಪಾಳದಿಂದ ಹಿಮಾಲಯದ ಪೂರ್ವಭಾಗದ ತುತ್ತ ತುದಿಯವರೆಗಿದ್ದರೂ,  ಪ್ರಾಗ್ಜ್ಯೋತಿಷಪುರ ಮತ್ತು ಅರುಣಾಚಲದ ಆಚೆಗಿರುವ ಪರ್ವತ ಭಾಗಗಳಲ್ಲೇ ಅವರ ಸಂಖ್ಯೆ ಹೆಚ್ಚು. ಕನಿಷ್ಠ ಇವತ್ತಿನ ಅಸ್ಸಾಮಿನವರೆಗೆ ಭಾರತವರ್ಷ ಸುವಿಸ್ತಾರವಾಗಿ ಹರಡಿತ್ತು ಎಂದು ಇದರಿಂದ ಸ್ಪಷ್ಟವಾಗಿ ಹೇಳಬಹುದಾಗಿದೆ. 

ಭಾರತದ  ಪುಣ್ಯನದಿಗಳು 

ಇಷ್ಟೆಲ್ಲಾ ಪುರಾವೆಗಳಿದ್ದರೂ ಇನ್ನೂ ಅಸ್ಪಷ್ಟ ಎಂದು ಕೊರಗುವವರು ೧೦-೧೪ ಶ್ಲೋಕಗಳನ್ನು ಪರಾಮರ್ಶಿಸಬೇಕು. ನದಿಗಳ ಉಲ್ಲೇಖಗಳನ್ನು ಕಂಡಾಗಲಂತೂ ಭರತವರ್ಷದ ವಿಸ್ತೀರ್ಣ ಮತ್ತಷ್ಟು  ಧೃಢವಾಗುತ್ತದೆ. 

ಶತದ್ರುಚಂದ್ರಭಾಗಾದ್ಯಾ ಹಿಮವತ್ಪಾದನಿರ್ಗತಾಃ ।

ವೇದಸ್ಮೃತಿಮುಖಾದ್ಯಶ್ಚ ಪಾರಿಯತ್ರೋದ್ಭವಾ ಮುನೇ ॥ 10 ॥

ನರ್ಮದಾ ಸುರಸಾದ್ಯಾಶ್ಚ ನದ್ಯೋ ವಿಂಧ್ಯಾದ್ರಿನಿರ್ಗತಾಃ ।

ತಾಪೀ ಪಯೋಷ್ಣೀನಿರ್ವಿನ್ಧ್ಯಾ ಪ್ರಮುಖಾ ಋಕ್ಷಸಂಭವಾಹ್ ॥ 11 ॥

ಗೋದಾವರೀಭೀಮರಥೀಕೃಷ್ಣವೇಣ್ಯಾದಿಕಾಸ್ತಥಾ ।

ಸಹ್ಯಪಾದೋದ್ಭವಾ ನದ್ಯಹ್ ಸ್ಮೃತಾಃ ಪಾಪಭಯಪಹಾಹ್ ॥ 12 ॥

ಕೃತಮಾಲಾತಾಮ್ರಪರ್ಣೀಪ್ರಮುಖಾ ಮಲಯೋದ್ಭವಾಹ ।

ತ್ರಿಸಾಮಾ ಚಾರ್ಯಾಕುಲ್ಯಾಡಿಯಾ ಮಹೇಂದ್ರಪ್ರಭವಾಹ ಸ್ಮೃತಾಃ ॥ 13 ॥

ಋಷಿಕುಲ್ಯಾಕುಮಾರಾದ್ಯಾಹ್  ಶುಕ್ತಿಮತ್ಪಾದಸಂಭವಾಹ್ ।

ಆಸಾಂ ನದ್ಯುಪನದ್ಯಶ್ಚ   ಸಂತ್ಯನಾಶ್ಚ ಸಹಸ್ರಶಃ  ॥ 14 ॥

ಇವುಗಳ ಸಾರಾಂಶವಿಷ್ಟು  : . 

  1. ಶತದ್ರು (ಸಟ್ಲೆಜ್), ಚಂದ್ರಭಾಗಾ (ಚೀನಾಬ್) ನದಿಗಳು ಹಿಮಾಲಯದ ತಪ್ಪಲಿನಿಂದ ಹರಿಯುತ್ತವೆ. 
  2. ವೇದಸ್ಮೃತಿ ಮೊದಲಾದ ನದಿಗಳು ಪಾರಿಯಾತ್ರ ಪರ್ವತದಿಂದ ಹರಿಯುತ್ತದೆ. 
  3. ನರ್ಮದಾ, ಸುರಸಾ ನದಿಗಳ ಉಗಮಸ್ಥಾನ  ವಿಂಧ್ಯ ಪರ್ವತ. 
  4. ತಾಪೀ, ಪಾಯೋಶ್ನಿ, ನಿರ್ವಿನ್ಧ್ಯಾ ನದಿಗಳು ಋಕ್ಷ ಪರ್ವತದಿಂದ ಕೆಳಗಿಳಿಯುತ್ತವೆ . . 
  5. ಗೋದಾವರೀ, ಭೀಮರಥೀ (ಇಂದಿನ ಭೀಮಾ), ಕೃಷ್ಣವೇಣೀ (ಇಂದಿನ ಕೃಷ್ಣಾ) ನದಿಗಳು ಸಹ್ಯಾದ್ರಿಯಿಂದ ಹರಿಯುತ್ತವೆ.
  6. ಕೃತಮಾಲಾ (ಇಂದಿನ ವೈಗೈ), ತಾಮ್ರಪರ್ಣೀ (ಇಂದಿನ ತಾಮಿರಭರಣಿ) ನದಿಗಳು ಮಲಯಪರ್ವತದಿಂದ ಹರಿಯುತ್ತವೆ. 
  7. ತ್ರಿಸಾಮಾ, ಆರ್ಯಕುಲ್ಯಾ ನದಿಗಳು ಮಹೇಂದ್ರಗಿರಿಯಿಂದ ಹರಿಯುತ್ತವೆ. 
  8. ಋಷಿಕುಲ್ಯಾ ಮತ್ತು ಕುಮಾರ ನದಿಗಳು ಶುಕ್ತಿಮತ್ ಪರ್ವತದಿಂದ ಹರಿಯುತ್ತವೆ. 

ಈ ನದಿಗಳು ಇಂದಿಗೂ ಸರಿಸುಮಾರು ಅವೇ ಹೆಸರನ್ನು ಉಳಿಸಿಕೊಂಡಿವೆ ಎನ್ನುವುದು ನಿಜಕ್ಕೂ ಸ್ವಾರಸ್ಯಕರ.  ಕೆಲವು ನದಿಗಳು ಮತ್ತೊಂದು ಹೆಸರನ್ನು ಪಡೆದರೂ ಹಳೆಯದನ್ನು ಉಳಿಸಿಕೊಂಡಿವೆ. ಇವೆಲ್ಲ ಪ್ರಮುಖವಾದ ನದಿಗಳಾಗಿದ್ದು ಇಂದಿಗೂ ಜನಸಾಮಾನ್ಯರು ಸುಲಭವಾಗಿ ಗುರುತಿಸಬಹುದಾಗಿವೆ. ಸಟ್ಲೆಜ್, ಚೀನಾಬ್ ನದಿಗಳು ಕಾಶ್ಮೀರ, ಹಿಮಾಚಲಗಳ ಆಚೆಯಿಂದ ಹರಿದು ಪಾಕಿಸ್ತಾನದ ಮೂಲಕ ಸಮುದ್ರ ಸೇರುತ್ತದೆ. ನರ್ಮದಾ ನದಿಯಂತೂ ಇಡಿಯ ಮಧ್ಯಭಾರತವನ್ನು ಆವರಿಸಿಕೊಂಡಿದೆ. ಅದರ ಜೊತೆಯಲ್ಲೇ ತಾಪೀ ಮತ್ತು ನಿರ್ವಿನ್ಧ್ಯಾ ನದಿಗಳು. ಗೋದಾವರೀ, ಕೃಷ್ಣಾ, ಭೀಮಾ ನದಿಗಳು ಮಹಾರಾಷ್ಟ್ರ, ಕರ್ನಾಟಕ, ಆಂಧ್ರದ ಪ್ರಮುಖ ನದಿಗಳು. ವೈಗೈ ಮತ್ತು ತಾಮಿರಭರಣಿಗಳಂತೂ ದಕ್ಷಿಣದ ಕೇರಳ ತಮಿಳುನಾಡಿನ ನದಿಗಳು. ತ್ರಿಸಾಮಾ, ಆರ್ಯಕುಲ್ಯಾ, ಋಷಿಕುಲ್ಯಾ, ಕುಮಾರ ನದಿಗಳು ಝಾರ್ಖಂಡ್ ಮತ್ತು ಒಡಿಶಾದ ನದಿಗಳು. 

ಇಲ್ಲಿ ಉಲ್ಲೇಖಗೊಳ್ಳದ ನದಿಗಳೆಂದರೆ  ಕೇವಲ ಗಂಗೆ, ಯಮುನೆ, ಬ್ರಹ್ಮಪುತ್ರಾ ಮತ್ತು ಸರಸ್ವತೀ. ಸರಸ್ವತೀ ನದೀ ಆ ಕಾಲಕ್ಕೆ ಒಣಗಿಹೋದ್ದಿರಬೇಕು. ಮಿಕ್ಕ ಮೂರು ಪ್ರಮುಖ ನದಿಗಳನ್ನೇಕೆ ಹೆಸರಿಸಿಲ್ಲ ಎನ್ನುವ ಪ್ರಶ್ನೆಯೇಳುವುದು ಸಹಜ. ಅವೇನು ಬಿಟ್ಟುಹೋಗಿಲ್ಲ ಕೇವಲ ಪುರಾಣದ ಈ ಭಾಗದಲ್ಲಿ ಉಲ್ಲೇಖವಿಲ್ಲ ಅಷ್ಟೇ. ಗಂಗೆ, ಯಮುನೆ, ಬ್ರಹ್ಮಪುತ್ರಾ ನದಿಗಳು ಕೇವಲ ನದಿಗಳಷ್ಟೇ ಅಲ್ಲದೆ ದೇವತೆಗಳು.  ಆ  ಕಾರಣಕ್ಕಾಗಿ ಮರ್ತ್ಯಲೋಕದ ವರ್ಣನೆಯಲ್ಲಿ ಇವುಗಳ ಕೈ ಬಿಟ್ಟಿರುವ ಸಾಧ್ಯತೆಯಿದೆ. ವಿಷ್ಣುಪುರಾಣದಲ್ಲೇ ಬೇರೆಡೆ ಅವುಗಳ ಉಲ್ಲೇಖವಾಗುತ್ತದೆ. ಇದೇ ರೀತಿಯಲ್ಲಿ ಕಾವೇರಿ ನದಿಯ ಹೆಸರೂ ಇಲ್ಲದಿರುವುದನ್ನು ಗಮನಿಸಬಹುದು. ಅಗಸ್ತ್ಯರ ಪತ್ನಿಯಾಗಿ ಸಂಸ್ಕೃತಿಯಲ್ಲಿ ಕಾವೇರಿಗೆ ಬೇರೆಯದೇ ಸ್ಥಾನಮಾನವಿದೆ. 

ಈ ನದಿಗಳ ನೀರನ್ನು ಸವಿಯುವ ಜನರಾರು?

ಇಷ್ಟಕ್ಕೇ ನಿಲ್ಲಲಿಲ್ಲ ವಿಷ್ಣು ಪುರಾಣದ ಭಾರತವರ್ಣನೆ. ಭಾರತ ಎಂಬ ಹೆಸರಿನ ಭೂಭಾಗದಲ್ಲಿ ಹುಟ್ಟುವ ನದಿಗಳ ಹೆಸರಿಸಿಯಾಯಿತು. ಇನ್ನು ಅವುಗಳ ನೀರನ್ನು ಸವಿಯುವ ಜನರಾದರೂ ಯಾರು-ಯಾರು? ಎನ್ನುವ ಪ್ರಶ್ನೆಗೆ   ವಿಷ್ಣುಪುರಾಣದಲ್ಲಿ ಉತ್ತರಗಳಿವೆ. 

  1. ಆ ನದೀತೀರಗಳಲ್ಲಿ ಕುರು, ಪಾಂಚಾಲ, ಮಧ್ಯದೇಶ ನಿವಾಸಿಗಳು ಮಾತ್ರವಲ್ಲ. ಕಾಮರೂಪ (ಅಸ್ಸಾಮ್) ಮುಂತಾದ ಪೂರ್ವದೇಶಗಳು ಸೇರಿವೆ. 
  2. ಇದೇ  ಸಾಲಿನಲ್ಲಿ ಪುಂಡ್ರ-ದೇಶವು ಸೇರಿದೆ. ಅರ್ಥಾತ್ ಇವತ್ತಿನ ಪೂರ್ವಬಂಗಾಳ. 
  3. ಕಳಿಂಗ-ಮಗಧರು ಸೇರಿದ್ದಾರೆ.
  4. ಒಟ್ಟಿಡೀ  ದಕ್ಷಿಣಭಾರತವನ್ನು ದಾಕ್ಷಿಣಾತ್ಯರು ಎಂದು ಉಲ್ಲೇಖಿಸಲಾಗಿದೆ.  
  5. ಇವತ್ತಿನ ಗುಜರಾತ್, ದಕ್ಷಿಣ ರಾಜಾಸ್ಥಾನಕ್ಕೆ ಸೇರಿದ  – ಸೌರಾಷ್ಟ್ರ, ಶೂರ, ಅಭೀರಾ, ಅರ್ಬುದರ ಉಲ್ಲೇಖವಿದೆ. 
  6. ಇವತ್ತಿನ ಭಾರತದ ಹೃದಯಭಾಗ ಮತ್ತು ಪಂಜಾಬನ್ನೊಳಗೊಂಡ ಮಾಳವ, ಪಾರಿಯಾತ್ರ ನಿವಾಸಿಗಳಿದ್ದಾರೆ. 
  7. ಪಶ್ಚಿಮೋತ್ತರ ಭಾಗವಾದ ಸೈಂಧವ(ಗುಜರಾತ್, ಸಿಂಧ್), ಹೂಣ, ಮದ್ರ, ಅಂಬಷ್ಠ (ಪಾಕಿಸ್ತಾನ, ಆಫ್ಘಾನಿಸ್ತಾನದ ಭಾಗಗಳು) – ಅಷ್ಟೇಕೆ ಪಾರಸೀಕರೂ ಇದ್ದಾರೆ. ಆ ಕಾಲಕ್ಕೆ ಪಾರಸೀಕರು ಇವತ್ತಿನ ಪಾಕಿಸ್ತಾನ, ಆಫ್ಘಾನಿಸ್ತಾನ-ದಲ್ಲಿ ಹೆಚ್ಚಾಗಿದ್ದುದಂತೆ ಕಂಡುಬರುತ್ತಿದೆ. 

ಈ ಪ್ರದೇಶಗಳು ಮತ್ತು ಅಲ್ಲಿನ ಜನರನ್ನು  ಸಹ ಇಂದಿಗೂ ಗುರುತಿಸಬಹುದಾಗಿದೆ. ಕಟ್ಟ ಕಡೆಯಲ್ಲಿ ಬರುವ ಈ ನದಿಗಳ ಮತ್ತು ರಾಜ್ಯಗಳ ಹೆಸರುಗಳು ಭರತವರ್ಷದ ಪ್ರದೇಶವನ್ನು ಯಾವ ಪಂಡಿತರೂ ತಿರಸ್ಕರಿಸಲಾರದಷ್ಟು   ನಿಖರವಾಗಿ ಗುರುತಿಸುತ್ತದೆ.  ವಿಷ್ಣುಪುರಾಣದ ಭಾರತ ಕೇವಲ ಇವತ್ತಿನ ಆಧುನಿಕ ಭಾರತ ಮಾತ್ರವಲ್ಲ, ಇವತ್ತಿನ ಪಾಕಿಸ್ತಾನ, ಆಫ್ಘಾನಿಸ್ತಾನ ದೇಶಗಳ ಆಚೆಗೂ ಮೀರಿ ಮತ್ತಷ್ಟು ವಿಸ್ತಾರವಾದ ಭೂಭಾಗವಾಗಿ ಚಾಚಿತ್ತು ಎನ್ನುವುದೇ ಸರಿ.

  ಅರ್ಥಾತ್ ಪೌರಾಣಿಕ ಕಾಲದಿಂದಲೂ  ಭಾರತವರ್ಷ ಮತ್ತು ಭಾರತೀ ಜನ ಎನ್ನುವ ಐಕ್ಯತೆಯ ಪರಿಕಲ್ಪನೆ ಈ ಭೂಭಾಗ ಮತ್ತು ಸಂಸ್ಕೃತಿಗಳಿಗೆ  ಸ್ಪಷ್ಟವಾಗಿ ಅನ್ವಯಿಸಿತ್ತು ಎಂದು ತಿಳಿದು ಬರುತ್ತದೆ. ವಿಷ್ಣುಪುರಾಣದ ಕಾಲವಾದರು ಏನು ಎನ್ನುವ ಪ್ರಶ್ನೆ ಆಧುನಿಕರಾದ ನಮ್ಮ ಮನಸ್ಸಿನಲ್ಲಿ ಏಳುತ್ತದೆ. ನಮ್ಮ ಪಾರಂಪರಿಕ ದೃಷ್ಟಿಯೇನೆಂದರೆ ಇದಕ್ಕೆ ಇಂತಹ ಕಾಲಮಾನದ ಮಿತಿಯನ್ನು ಹಾಕಲಾಗದು. ವೈದಿಕ ಸಂಸ್ಕೃತಿ ಎಷ್ಟು ಹಳೆಯದೋ ಇದು ಅಷ್ಟೇ ಪುರಾತನವಾದದ್ದು. ಒಂದಷ್ಟು ಜೋಡಣೆಯಾಗಿದ್ದಿರಬಹುದು. ಆದರೆ ಆಧುನಿಕ ಮನಸ್ಸು ಇದನ್ನು ಒಪ್ಪದು. ಆದರೆ ಈ ಕುರಿತು ವಿದ್ವಾಂಸರಲ್ಲಿ ಒಮ್ಮತವಿಲ್ಲ.  ಇದಕ್ಕೆ ೩೦೦ ಕ್ರಿ.ಪೂ. ದಿಂದ ಹಿಡಿದು ೯೦೦ ಕ್ರಿ.ಶ.ದವರೆಗೆ ಕಾಲವನ್ನು ನಿಗದಿ ಮಾಡಿದ್ದಾರೆ. ಆದರೆ ಹೆಚ್ಚಿನವರು ಕ್ರಿ.ಶ. ಒಂದನೆಯ ಶತಮಾನದ ಹೊತ್ತಿಗೆ ಇದರ ಬಹುಭಾಗವಾದರೂ ಬಳಕೆಯಲ್ಲಿತ್ತು ಎನ್ನುವನ್ನು ಒಪ್ಪುತ್ತಾರೆ. ಗುಪ್ತರ ಕಾಲಕ್ಕಾಗಲೇ ಪುರಾಣಗಳು ಸಾಕಷ್ಟು ಬಳಕೆಯಲ್ಲಿದ್ದದ್ದಕ್ಕೆ ಪುರಾವೆಗಳಿವೆ. ಒಟ್ಟಿನಲ್ಲಿ ಆಧುನಿಕರ ಪ್ರಕಾರ ಅಷ್ಟರಮಟ್ಟಿಗಾದರೂ ಈ ಭಾರತವರ್ಷದ ಪ್ರಜ್ಞೆ ಹಳೆಯದು. ಸಂಪ್ರದಾಯದಲ್ಲಾದರೂ ಇದು ಕಾಲಕಾಲಾಂತರವನ್ನು ಮೀರಿದ ಜ್ಞಾನ. 

ಐಕ್ಯತೆಯ ಪರಿಕಲ್ಪನೆಯ ಪ್ರಾಮುಖ್ಯತೆಯಾದರೂ ಏನು?

ಇತ್ತೀಚಿಗೆ ಆಧುನಿಕರು ಮತ್ತು ಎಡಪಂಥೀಯರು ಬ್ರಿಟಿಷರ ಕಟ್ಟುಕಥೆಯೊಂದನ್ನು ಮತ್ತೆ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಅದೇನೆಂದರೆ – 

  1. ಭಾರತದ ಪರಿಕಲ್ಪನೆ ಬ್ರಿಟಿಷರು ಬರುವವರೆಗೆ ಇರಲೇ ಇಲ್ಲವೆನ್ನುವ ವಾದ. 
  2. ಭಾರತವರ್ಷವೆನ್ನುವ ಪದ ಬಳಕೆಯಲ್ಲಿದ್ದರೂ ಅದು ಇವತ್ತಿನ ಒಟ್ಟಿಡೀ ಭಾರತ ಭೂಪ್ರದೇಶವಲ್ಲ ಎನ್ನುವ ವಾದ. 
  3. ಸಾಂಸ್ಕೃತಿಕವಾದ ಒಂದು ಐಕ್ಯತೆ ಅಥವಾ ಪರಿಕಲ್ಪನೆಯಂತೂ ಎಂದೂ ಇರಲಿಲ್ಲವೆನ್ನುವ ವಾದ. 
  4. ಒಂದು ಪಕ್ಷ ಇವೆಲ್ಲವೂ ಸುಳ್ಳಾದರೂ ಭಾರತವು ರಾಜಕೀಯವಾಗಿ ಒಂದಾಗಿದ್ದು ಬ್ರಿಟಿಷರ ಕಾಲದಲ್ಲೇ ಎನ್ನುವ ವಾದ. 
  5. ಒಟ್ಟಾರೆ ಇವತ್ತಿನ ಭಾರತದಲ್ಲಿ  ರಾಷ್ಟ್ರೀಯತೆಯ ಐಕ್ಯಭಾವ ಹುಟ್ಟಿದ್ದೇ ಬ್ರಿಟಿಷರ ನಂತರ ಎನ್ನುವ ವಾದ. 

ಇವುಗಳಲ್ಲಿ ಮೊದಲ ಮೂರು ಪ್ರಶ್ನೆಗಳಿಗೆ ವಿಷ್ಣುಪುರಾಣದ ಈ ೧೦-೧೨ ಶ್ಲೋಕಗಳೇ  ಸಮರ್ಥ ಉತ್ತರವನ್ನು ಕೊಡುತ್ತವೆ. ಭಾರತವರ್ಷವೆನ್ನುವ ಪರಿಕಲ್ಪನೆ, ನಿಖರವಾದ ಭೂಪ್ರದೇಶ ಮತ್ತು  ‘ಭಾರತೀ’ ಜನ ಎನ್ನುವಲ್ಲಿ ಒಂದು ಸಾಂಸ್ಕೃತಿಕ ಐಕ್ಯತೆ ಇವೆಲ್ಲವನ್ನೂ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತುಪಡಿಸುತ್ತದೆ. 

ಈ ಭೂಪ್ರದೇಶ ಒಂದೇ ಆಡಳಿತಕ್ಕೆ ಒಳಪಟ್ಟಿತ್ತೇ ಎಂದರೆ ಮೌರ್ಯರ ಕಾಲದಲ್ಲಿ ನಿಸ್ಸಂಶಯವಾಗಿ ಹೌದು. ನಂತರದಲ್ಲಿ ಒಡೆದು ಅನೇಕ ರಾಜ್ಯಗಳಾಗಿರಬಹುದು. ಆದರೆ ಅದೇನು ಅಷ್ಟೊಂದು ಮುಖ್ಯವಲ್ಲ. ರಾಜಕೀಯವನ್ನು ಮೀರಿ ಒಟ್ಟು ಪ್ರದೇಶದ ಸಾಂಸ್ಕೃತಿಕ ಐಕ್ಯತೆಯನ್ನು ಸಾಬೀತುಪಡಿಸುವ ಅನೇಕ ಅಂಶಗಳಿವೆ. ಇದನ್ನು ಮುಂಬರುವ ಲೇಖನಗಳಲ್ಲಿ ತಿಳಿಪಡಿಸಲಾಗುತ್ತದೆ.

ಐದನೆಯ ವಾದವಂತೂ ಸಂಪೂರ್ಣ ಸುಳ್ಳು. ಭಾರತದ ಸ್ವಾತಂತ್ರ್ಯ ಹೋರಾಟದ ಪರಿಚಯವಿದ್ದವರಿಗೆ ಇದರ ಸ್ಪಷ್ಟ ಅರಿವಿದೆ. ಅವನೀಂದ್ರನಾಥರ ಸುಪ್ರಸಿದ್ಧ ಭಾರತಮಾತೆಯ ಚಿತ್ರದ ಪ್ರೇರಣೆ ಈ ‘ಭಾರತ-ಭಾರತಿ’ ದೃಷ್ಟಿಕೋನವೇ. ಆ ಕಾಲದ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಈ ದೃಷ್ಟಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಅಷ್ಟೇಕೆ ಭಾರತದ ಸಂವಿಧಾನ-ರಚನಾ-ಸಭೆಯ (Constituent Assembly) ಚರ್ಚೆಗಳನ್ನು ಓದಿದರೂ ಅಲ್ಲಿಯವರೆಗೆ ಈ ಪ್ರಜ್ಞೆ ಗಾಢವಾಗಿದ್ದದ್ದು ನಿಖರವಾಗಿ ತಿಳಿಯುತ್ತದೆ. ಸಂವಿಧಾನದಲ್ಲಿ “India – that is Bharat” ಎಂದು ಉಲ್ಲೇಖಿಸಿರುವುದು ಅದೇ ಕಾರಣಕ್ಕೆ. ಆದ್ದರಿಂದ ಇವತ್ತಿನ ಈ ಅನುಮಾನ ಅಪ್ರಸ್ತುತ ಮತ್ತು ಅನವಶ್ಯಕ. ನಮ್ಮ ಆಧುನಿಕ ಶಿಕ್ಷಣದಲ್ಲಿ ಇವೆಲ್ಲ ಬಿಟ್ಟುಹೋದ್ದರಿಂದ ಈ ಬಗೆಯ ವಿಕೃತವಾದಗಳನ್ನು ಆಧುನಿಕರು ಸಮಾಜದಲ್ಲಿ ಹರಿಬಿಡಬಹುದಾದ ಪರಿಸ್ಥಿತಿ ಬಂದೊದಗಿದೆ ಎನ್ನುವುದೇ ವಿಪರ್ಯಾಸ. 

ಭಾರತವರ್ಷದ ಸಾಂಸ್ಕೃತಿಕ ಐಕ್ಯತೆ 

ವಿಷ್ಣುಪುರಾಣದಲ್ಲಿ ಕಂಡುಬರುವ ಭಾರತವರ್ಷದ ವರ್ಣನೆಯ ಪರಿಪೂರ್ಣತೆಯನ್ನು ಮತ್ತೊಮ್ಮೆ ಗಮನಿಸೋಣ. ಭೂಪ್ರದೇಶ, ರಾಜ್ಯಗಳು, ಪರ್ವತಗಳು, ನದಿಗಳು ಮತ್ತು ಕೊನೆಯಲ್ಲಿ ಅಲ್ಲಿ ವಾಸಿಸುವ  ಜನರು – ಹೀಗೆ ಇಲ್ಲಿ ಒಂದು ಐಕ್ಯತೆಯ ಪರಿಕಲ್ಪನೆಯಿದೆ. ‘ಈ ನದಿಗಳ ನೀರನ್ನು ಕುಡಿಯುವ ಜನರು’ ಎನ್ನುವಲ್ಲಿ ನದಿಗಳ ಪಾವಿತ್ರ್ಯ ಮತ್ತು ಜನರ ಭಕ್ತಿ-ಭಾವ – ಇವೆಲ್ಲವೂ ಸೇರಿಕೊಂಡಿವೆ. ಅರ್ಥಾತ್ ಈ ಎಲ್ಲ ನದಿಗಳ ನೀರನ್ನು ಸವಿಯುವ  ಜನ ಒಂದೇ ಎನ್ನುವ ‘ಭಾರತ-ಭಾರತಿ’ ಭಾವ ಸ್ಪಷ್ಟವಾಗಿದೆ. ಇಲ್ಲಿನ ಜನರ ಬಗೆಗಿನ ಹೆಚ್ಚಿನ ವಿವರಣೆಗಳನ್ನು  ವಿಷ್ಣುಪುರಾಣದ ದ್ವಿತೀಯಾಂಶದ ಮೂರನೆಯ ಅಧ್ಯಾಯದ ಮುಂದಿನ  ಶ್ಲೋಕಗಳಲ್ಲಿ  ಕೆಳಗಿನಂತಿವೆ:   

  • ಇಲ್ಲಿರುವ ಜನರು ಒಳ್ಳೆಯ ದೃಢಕಾಯವನ್ನು ಹೊಂದಿದ್ದಾರೆ.  
  • ಇಲ್ಲಿ ಮಾತ್ರವೇ ನಾಲ್ಕು ಯುಗಗಳ ಪ್ರಜ್ಞೆಯಿದೆ. ಮತ್ತೆಲ್ಲಿಯೂ ಇಲ್ಲ. 
  • ಇಲ್ಲಿ ಋಷಿ-ಮುನಿಗಳು ಪರಲೋಕವನ್ನು ಹೊಂದಲು ತಪಸ್ಸನ್ನಾಚರಿಸುತ್ತಾರೆ.  
  • ಇಲ್ಲಿ ಯಾಜಕರು ಯಜ್ಞವನ್ನಾಚರಿಸುತ್ತಾರೆ. ದಾನಿಗಳು ದಾನ ಮಾಡುತ್ತಾರೆ. 
  • ಇದು ಕರ್ಮಭೂಮಿಯಾದ್ದರಿಂದ ಭಾರತವರ್ಷ ಜಂಬೂದ್ವೀಪದಲ್ಲೇ ಶ್ರೇಷ್ಠವಾದುದು. 
  • ಭರತಖಂಡದಲ್ಲಿ ಹುಟ್ಟುವ ಜನರೇ ಶ್ರೇಷ್ಠರು. 
  • ಸ್ವರ್ಗ-ಮೋಕ್ಷಗಳಿಗೆ ದಾರಿತೋರುವಂತಹ ಕರ್ಮಭೂಮಿ ಭಾರತವರ್ಷ. 

ಹೀಗೆ ಭಾರತವರ್ಷದೆಲ್ಲೆಡೆ ಸಾಂಸ್ಕೃತಿಕ ಸಾಮ್ಯತೆ ಹರಡಿದೆ ಎನ್ನುವುದನ್ನು ವಿಷ್ಣುಪುರಾಣದ ಈ ಭಾಗ ಸ್ಪಷ್ಟಪಡಿಸುತ್ತದೆ. ತಪಸ್ಸು-ಯಜ್ಞ-ಕರ್ಮಗಳು, ಮೋಕ್ಷ (ತನ್ಮೂಲಕ ಚತುರ್ವಿಧ ಪುರುಷಾರ್ಥ), ಯುಗ-ಪುನರ್ಜನ್ಮಗಳು ಇಲ್ಲಿನ ಸಾಂಸ್ಕೃತಿಕ ಚಿಹ್ನೆಗಳು. ಹೀಗೆ, ರಾಜಕೀಯ ಐಕ್ಯತೆಯನ್ನು ಮೀರಿದಂತಹ ಸಾಂಸ್ಕೃತಿಕ ಸಾಮರಸ್ಯ-ಐಕ್ಯತೆಗಳು ಭಾರತವರ್ಷವನ್ನು ಆವರಿಸಿವೆ ಎನ್ನುವುದನ್ನು ವಿಷ್ಣುಪುರಾಣ ಸುಂದರವಾಗಿ ಪ್ರಸ್ತುತಪಡಿಸುತ್ತದೆ. ಅದರಲ್ಲೂ, ಪ್ರತಿಯೊಂದು ಸ್ವತಂತ್ರವಾದ ರಾಜ್ಯವನ್ನು (ಜನರನ್ನು) ಹೆಸರಿಸಿಯೂ ಈ ಸಾಂಸ್ಕೃತಿಕ ಐಕ್ಯತೆಯಿತ್ತು ಎಂದ ಮೇಲೆ ಅದು ರಾಜಕೀಯವನ್ನು ಮೀರಿದ ಸಾಂಸ್ಕೃತಿಕ ಐಕ್ಯತೆ ಎನ್ನುವುದು  ಸ್ಪಷ್ಟಗೋಚರವಿದೆ. ಈ ಸಂಸ್ಕೃತಿಯ ನೂಲನ್ನು  ಸಹಸ್ರಮಾನಗಳ  ಕಾಲ ಮೌನವಾಗಿ ಹೆಣೆಯುತ್ತಿರುವವರು ಬೇರಾರೂ ಅಲ್ಲ, ಅವರೇ  ನಮ್ಮ ಋಷಿಗಳು. 

ಇದು ಕೇವಲ ವಿಷ್ಣುಪುರಾಣದ ವಿವರಣೆಯಾಯಿತು. ನಮ್ಮ ಇನ್ನಿತರ ಇತಿಹಾಸ-ಪುರಾಣ-ಶಾಸ್ತ್ರಗಳಲ್ಲಿ ಭಾರತವರ್ಷದ ವರ್ಣನೆ ಹೇಗಿದೆ, ಅದರ ಸಾಂಸ್ಕೃತಿಕ ಮಹತ್ವವೇನು ಎನ್ನುವುದರ ಆಳ-ವಿಸ್ತಾರಗಳನ್ನು, ಈ ಭಾರತವರ್ಷ ಮಾಲಿಕೆಯ ಮೂಲಕ ಅರಿತುಕೊಳ್ಳೋಣ. ಈ ಎಲ್ಲವೂ ನಮ್ಮ ಪಠ್ಯ ಪುಸ್ತಕಗಳಲ್ಲಿದ್ದು ಸಹಜವಾಗೇ ಶಿಕ್ಷಣದಲ್ಲಿ ಬಂದುಬಿಟ್ಟಿದ್ದರೆ ನಮ್ಮ ಇವತ್ತಿನ ಸಾಂಸ್ಕೃತಿಕ ಸಮಸ್ಯೆಗಳು ಇರುತ್ತಲೇ ಇರಲಿಲ್ಲ. ಆದರೆ ಭಾರತವರ್ಷ ಪ್ರಜ್ಞೆಯ ಕುರಿತು ಈಗುಂಟಾಗಿರುವ ಅನುಮಾನಗಳನ್ನು ಪರಿಹರಿಸಲಾದರೂ ಮತ್ತೊಮ್ಮೆ ನಮ್ಮ ಪುರಾಣಗಳತ್ತ ಹೊರಳಿ ನೋಡುವುದು ಅತ್ಯವಶ್ಯಕ. ಕನಿಷ್ಠಪಕ್ಷ ಈ ಒಂದು ಶ್ಲೋಕವನ್ನಂತೂ ಭಾರತದೇಶದ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಹೇಳಿಕೊಡುವುದು ಇವತ್ತಿನ ಸಂದರ್ಭಕ್ಕೆ ಅತ್ಯವಶ್ಯಕ. 

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ ।

ವರ್ಷಮ್ ತದ್ಭಾರತಂ ನಾಮ ಭಾರತೀ ಯತ್ರ ಸಂತತಿಃ ।।

Feature Image Credit: news18.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.