close logo

ಋಗ್ವೇದದಲ್ಲಿ ಇಂದ್ರ

ಋಗ್ವೇದದಲ್ಲಿ ಹಲವಾರು ದೇವತೆಗಳ, ರಾಜರ, ಋಷಿಗಳ ಪಾತ್ರಗಳು ಬರುತ್ತವೆ. ಋಗ್ವೇದವನ್ನು ರಚಿಸಿದ ನಂತರ ಯುಗಗಳೇ ಉರುಳಿಹೋಗಿವೆ. ಇಷ್ಟು ಕಾಲದ ನಂತರವೂ, ಮಾನವ ಜನಾಂಗದ ಇತಿಹಾಸದ ನಿಜಾಂಶಗಳನ್ನು ಬಗೆಹರಿಸಿ ಅರ್ಥ ಮಾಡಿಕೊಳ್ಳಲು ಬೇಕಾದ ವಸ್ತುವಿಶೇಷಗಳು ಮತ್ತು ಪರಿಕಲ್ಪನೆಗಳು, ಪ್ರಭಾವಶಾಲಿ ಪಾತ್ರಗಳ ಸಾಧನೆಗಳಲ್ಲಿ ಅಡಗಿವೆ. ಇವರು ಯಾರಾಗಿದ್ದಿರಬಹುದು? ಎಲ್ಲಿಂದ ಬಂದವರು? ಎಲ್ಲಿ ವಾಸಿಸುತ್ತಿದ್ದರು? ಯಾವ ಸಾಮ್ರಾಜ್ಯಗಳನ್ನು ಕಟ್ಟಿದರು, ಆಳಿದರು? ಇವರಿಂದ ಭೂಭಾಗಗಳು ಬದಲಾದವೇ? ನಮ್ಮ ಸಂಸ್ಕೃತಿಯು ಇವರಿಂದ ಹೇಗೆ ಬೆಳೆಯಿತು, ಅರಳಿತು? ಇತ್ಯಾದಿ ಪ್ರಶ್ನೆಗಳನ್ನು ಪಾತ್ರಗಳ ಅಧ್ಯಯನದಿಂದ ಸ್ವಲ್ಪವಾದರೂ ಅರ್ಥಮಾಡಿಕೊಳ್ಳುವ ಪ್ರಯಾಸವನ್ನು ನಾವು ಮಾಡಬಹುದು. ಪಾತ್ರಗಳಲ್ಲಿ ಅತಿ ಪ್ರಮುಖನಾದವನು ಇಂದ್ರ.

ಆಧುನಿಕ ಇತಿಹಾಸಕಾರರ ಪ್ರಕಾರ, ದೇವಾಸುರರು ಯಾವುದೋ ಕಾಲ್ಪನಿಕವಾದ ಜೀವಿಗಳಲ್ಲ; ಇವರು ಬೇರೆ ಜನಾಂಗದವರಾಗಿದ್ದಿರಬೇಕು, ಅಥವಾ ಪಂಗಡಗಳಾಗಿದ್ದಿರಬೇಕು, ಇತ್ಯಾದಿ ತರ್ಕವಿತರ್ಕಗಳು ಪ್ರಚಲಿತವಾಗಿವೆ. [ಹಾಗೆ ನೋಡಿದರೆ, ಮನುಷ್ಯ (ಮಾನವ) ಎಂಬ ಪದವನ್ನು ವಿಶ್ಲೇಷಿಸಿದರೆ, ಮನುವಿನ ಸಂತತಿಯವರು ಎಂದು ಮಾತ್ರ.]

ಇಂದ್ರನಿಗೆ ಮನುಷ್ಯಲಕ್ಷಣಗಳೇ ಇವೆ. ಮಾತ್ರವಲ್ಲ, ಇಂದ್ರನ ಐತಿಹಾಸಿಕ ವರ್ಣನೆಗಳು ಸಾಕಷ್ಟಿವೆ. ಇವನು ವಿದ್ಯುದ್ದೇವತೆ. ತಮಸ್ಸಿನ, ಅನಾವೃಷ್ಟಿಯ ಅಸುರರನ್ನು (ಕಾರಣಗಳನ್ನು) ಜಯಿಸಿ, ನೀರನ್ನು, ಬೆಳಕನ್ನು ಮತ್ತೆ ಸ್ಥಾಪಿಸುವುದೇ ಇವನ ಮುಖ್ಯ ಕೆಲಸ. ಋಗ್ವೇದದ ಅಗ್ನಿ, ವಾಯು, ವರುಣ (ಸೂರ್ಯ?) ಎಂಬ ದೇವತಾತ್ರಯಗಳಲ್ಲಿ ಇಂದ್ರನು ವಾಯುವಿನ ಪ್ರತಿನಿಧಿ.

ಎಲ್ಲರಿಗೂ ಗೊತ್ತಿರುವ ಹಾಗೆ, ಇಂದ್ರನು ದೇವತೆಗಳ ರಾಜ. ಇಂದ್ರನು ಒಬ್ಬನೇ ದೇವನಲ್ಲ. ಇಂದ್ರನದು ಒಂದು ಪದವಿ ಮಾತ್ರ. ಲೆಕ್ಕದಲ್ಲಿ ಹಲವಾರು ಇಂದ್ರರು ಆಗಿ ಹೋಗಿರಬೇಕು. ನಹುಷನು ಇಂದ್ರನಾದ ಕಥೆಯನ್ನು ಪುರಾಣ, ಇತಿಹಾಸಗಳಲ್ಲಿ ಮತ್ತೆ ಮತ್ತೆ ವರ್ಣಿಸಲಾಗಿದೆ.

ಈಗ ಋಗ್ವೇದಕ್ಕೆ ಬರೋಣ. ಇಂದ್ರನು ಬಹಳ ಪ್ರಮುಖನಾದ ದೇವತೆ. 250ಕ್ಕೂ ಹೆಚ್ಚು ಸೂಕ್ತ/ಭಾಗಗಳು ಇಂದ್ರನನ್ನು ಸ್ತುತಿಸುತ್ತವೆ. ಅಂದರೆ, ಋಗ್ವೇದದ 1,028 ಋಕ್ಕುಗಳಲ್ಲಿ ಕಾಲುಭಾಗಕ್ಕೂ ಹೆಚ್ಚು ಇಂದ್ರನನ್ನು ದೇವತೆಗಳ ರಾಜನೆಂದು ಸ್ತುತಿಸಿ ಉಲ್ಲೇಖಿಸುತ್ತವೆ. ಇಂದ್ರನ ಬಲ, ಸಾಮರ್ಥ್ಯ, ಔದಾರ್ಯ, ಮಹತ್ವಗಳ ಚಿತ್ರಣ ಮಾತ್ರವಲ್ಲ, ಅವನ ಕೋಪ, ಕ್ರೌರ್ಯಗಳ, ಸೋಮನಿಗಾಗಿ ಅವನ ಅತಿ ಆಸೆಯ ಸಂಕೀರ್ಣ ವರ್ಣನೆ ಋಗ್ವೇದದಲ್ಲಿ ಪ್ರಸ್ತುತಗೊಂಡಿದೆ. ಇಂದ್ರನು ಗುಡುಗುಸಿಡಿಲುಮಳೆಗಳ ದೇವತೆ ಎಂದು ಹೇಳಬಹುದಾದರೂ, ಪ್ರಕೃತಿಯ ಇದೇ ಅಂಶವನ್ನು ಪ್ರತಿಬಿಂಬಿಸುತ್ತಾನೆ, ಎಂದು ಖಚಿತವಾಗಿ ಹೇಳಲಾರೆವು. ಇಂದ್ರನ ಜೊತೆಗೆ ಇತರ ದೇವತೆಗಳನ್ನೂ ಋಗ್ವೇದದಲ್ಲಿ ಸ್ತುತಿಸಿದ್ದಾರೆ.

ಋಗ್ವೇದದಲ್ಲಿ ಇಂದ್ರನ ವರ್ಣನೆ

ಋಗ್ವೇದದಲ್ಲಿ ಎಲ್ಲೆಲ್ಲೂ ಇಂದ್ರನ ವರ್ಣನೆ ಮಾಡಲಾಗಿದೆ. ಅವನ ಹೊಟ್ಟೆ ಸೋಮದಿಂದ ತುಂಬಿದ ಸರೋವರಕ್ಕೆ ಹೋಲಿಸಲ್ಪಟ್ಟಿದೆ. ಅವನ ಕೇಶ, ಗಡ್ಡಮೀಸೆಗಳು ಕಂದು ಬಣ್ಣದವು. ಅವನ ದೇಹವನ್ನು ಕೆಲವೊಮ್ಮೆ ಕಂದು ಬಣ್ಣದ್ದು, ಇನ್ನು ಕೆಲವೊಮ್ಮೆ ಸುವರ್ಣವೆಂದೂ ಹೇಳಲಾಗಿದೆ. ಅವನಿಗೆ ಕಬ್ಬಿಣದಂತೆ ಗಟ್ಟಿಯಾದ, ಉದ್ದವಾದ ಬಾಹುಗಳಿವೆ. ತನಗೆ ಬೇಕಾದಾಗ ಇಂದ್ರನು ನಾನಾ ರೂಪಗಳನ್ನು ಧರಿಸಬಲ್ಲನು. ಇಂದ್ರನು ಪ್ರಪಂಚವನ್ನೇ ವ್ಯಾಪಿಸುವಷ್ಟು ಬೃಹದಾಕಾರ ಉಳ್ಳವನು. ನೂರು ಸ್ವರ್ಗಗಳೂ, ನೂರು ಭೂಮಿಗಳೂ, ಸಾವಿರ ಸೂರ್ಯರು ಸೇರಿದರೂ ಅವನಿಗೆ ಸಮವಾಗಲಾರರು. ವರ್ಣನೆಯನ್ನು ನೋಡಿದರೆ, ಇಂದ್ರನು ಮನುಷ್ಯರೂಪಿಯೋ ಅಥವಾ ಪ್ರಕೃತಿಯ ಒಂದು ಪ್ರಕ್ರಿಯೆಯೋ, ಎನ್ನುವ ಸಂದೇಹ ಹುಟ್ಟುವುದಿಲ್ಲವೇ?

ಇಂದ್ರನು ವಜ್ರಾಯುಧವನ್ನು ಧರಿಸಿದ್ದಾನೆ. ತ್ವಷ್ಟ್ರವು ಇದನ್ನು ಧಧೀಚಿಯ ಬೆನ್ನುಮೂಳೆಯಿಂದ ರೂಪಿಸಿದವನು. ಧಧೀಚಿಯು ಲೋಕಕಲ್ಯಾಣಾರ್ಥವಾಗಿ ತನ್ನ ಬೆನ್ನು ಮೂಳೆಯನ್ನೇ ತ್ಯಾಗ ಮಾಡಿದ ಕಥೆ ಬಲು ಹೃದಯಂಗಮವಾದುದು. ವಜ್ರಾಯುಧಕ್ಕೆ ನೂರು, ಸಾವಿರ ಮೂಲೆಗಳಿವೆ, ನೂರು ಕೀಲುಗಳಿವೆ, ಬಲು ಹರಿತವಾಗಿದೆ, ಇತ್ಯಾದಿ ವರ್ಣನೆಗಳಿವೆ. ವಜ್ರಾಯುಧವನ್ನು ಸೂರ್ಯನಿಗೆ ಹೋಲಿಸಲಾಗಿದೆ. ಇಂದ್ರನನ್ನು ವಜ್ರಧಾರಿ, ವಜ್ರಭೃತ್ ಎಂದು ವರ್ಣಿಸಿದ್ದಾರೆ. ಆದರೆ, ವಜ್ರಬಾಹು, ವಜ್ರದೇಹಿ ಇತ್ಯಾದಿ ಉಪಮಾನಗಳು ಬೇರೆ ದೇವತೆಗಳಿಗೂ, ಯೋಧರಿಗೂ ಕೂಡ ಸಲ್ಲುತ್ತವೆ.

ಇಂದ್ರ ಮತ್ತು ಸೋಮಪಾನ

ಎಲ್ಲ ದೇವತೆಗಳಿಗೂ ಸೋಮಪಾನವೆಂದರೆ ಇಷ್ಟವೇ. ಆದರೆ, ಇಂದ್ರನಿಗೆ ಸೋಮವೆಂದರೆ, ಎಲ್ಲರಿಗಿಂತ ಹೆಚ್ಚಾಗಿ ಇಷ್ಟ. ಸೋಮವನ್ನು ಪಾನಮಾಡಲು ಅವನು ಸೋಮವನ್ನು ಕದಿಯಲು ಕೂಡ ಹಿಂಜರಿಯುವುದಿಲ್ಲ. ಆದ್ದರಿಂದಲೇ ಅವನಿಗೆ ಸೋಮಪಾ ಎನ್ನುವ ವಿಶೇಷಣ ಸಲ್ಲುತ್ತದೆ. ಸೋಮವು ಅವನಿಗೆ ಪುಷ್ಟಿ ನೀಡುತ್ತದೆ. ಸೋಮಪಾನ ಮಾಡಿದಾಗ ಅವನು ಯುದ್ಧಗಳನ್ನು ಗೆಲ್ಲುತ್ತಾನೆ. ವೃತ್ರನನ್ನು ಗೆಲ್ಲಲು ಸೋಮದ ಪಾತ್ರ ಬಹಳ ಹೆಚ್ಚಿನದು. ವೃತ್ರವಧೆಗೆ ಸಿದ್ಧನಾಗುವಾಗ ಅವನು ಮೂರು ಸರೋವರಗಳಷ್ಟು ಸೋಮಪಾನ ಮಾಡಿದನು, ಎನ್ನಲಾಗಿದೆ! ಅತಿಯಾದ ಸೋಮಪಾನ ಮಾಡಿ, ಅವನಿಗೆ ಬಂದ ಜಾಡ್ಯವನ್ನು ಸೌತ್ರಾಮಣಿ ಎಂಬ ಯಾಗದಿಂದ ದೇವತೆಗಳು ಗುಣಪಡಿಸಿದರಂತೆ!

[ಋಗ್ವೇದದಲ್ಲಿ ಬರುವ ಸೋಮನ ವೃತ್ತಾಂತವನ್ನು ಇಲ್ಲಿ ಓದಬಹುದು.]

ಇಂದ್ರನ ಜನ್ಮ ವೃತ್ತಾಂತ

ಪುರುಷ ಸೂಕ್ತದಲ್ಲಿ, “ಮುಖಾತ್ ಇಂದ್ರಶ್ಚ ಅಗ್ನಿಶ್ಚ, ಪ್ರಾಣಾತ್ ವಾಯುರಜಾಯತ,” ಎಂದರೆ, ಅಗ್ನಿಯೂ, ಇಂದ್ರನೂ ವಿರಾಟ್ ಪುರುಷನ ಮುಖದಿಂದ ಹೊರಹೊಮ್ಮಿದರು, ಎಂಬ ವರ್ಣನೆ ಬರುತ್ತದೆ. ಇನ್ನು ಕೆಲವೆಡೆ, ತ್ವಷ್ಟ್ರವೇ ಅವನ ತಂದೆ ಎಂಬ ಉಲ್ಲೇಖವಿದೆ. ಅವನ ತಾಯಿಯ ಉಲ್ಲೇಖ ಹಲವಾರು ಕಡೆ ಇದೆ. ಅವನು ಗೋವಿನಿಂದ, ಮೇಘಪಾರ್ಶ್ವದಿಂದ (ಹುಟ್ಟಿದ ಸಿಡಿಲಿನಂತೆ), ನಿಷ್ವಿಗ್ರಿಯಿಂದ (ಸಾಯಣರ ಪ್ರಕಾರ ಇವಳು ಅದಿತಿ) ಹುಟ್ಟಿದವನು. ಪ್ರಜಾಪತಿಯು ಇಂದ್ರ, ಅಗ್ನಿ, ಸೋಮ, ಪರಮೇಷ್ಠಿಗಳನ್ನು ಸೃಜಿಸಿದನು, ಎಂಬ ಉಲ್ಲೇಖ ಶತಪಥ ಬ್ರಾಹ್ಮಣದಲ್ಲಿದೆ.

ಅಗ್ನಿಯು ಇಂದ್ರನ ಅವಳಿ ಸಹೋದರನು. ಪೂಷಣನು ಇನ್ನೊಬ್ಬ ಸೋದರನು. ಶಚಿಯು ಇಂದ್ರಾಣಿ, ಅವನ ಪತ್ನಿ. ಮಿತ್ರರು, ಮರುತ್ತುಗಳು ಅವನ ಸ್ನೇಹಿತರು. ಇಂದ್ರನಿಗೆ ಮರುತ್ವಾನ್ ಎಂಬ ವಿಶೇಷಣವಿದೆ. ವಿಷ್ಣುವು ಇಂದ್ರನ ಪರಮ ಮಿತ್ರ. ಇಂದ್ರನ ಸ್ನೇಹಿತರು ಅವನಿಗೆ ಯುದ್ಧಗಳಲ್ಲಿ ಸಹಾಯ ನೀಡಿದ್ದಾರೆ.

ಪರ್ಜನ್ಯನು ಕೂಡ ಇಂದ್ರನಂತೆಯೇ ಗುಡುಗುಸಿಡಿಲುಗಳ ದೇವತೆ. (ಆದರೆ, ಪರ್ಜನ್ಯನಿಗೆ ಮೂರೇ ಋಕ್ಕುಗಳು ಮೀಸಲಾಗಿವೆ.)

ಇಂದ್ರನ ಶಕ್ತಿ ಸಾಮರ್ಥ್ಯಗಳ ವರ್ಣನೆ

ಋಗ್ವೇದದಲ್ಲಿ ಇಂದ್ರನ ಮಹತ್ತನ್ನು, ಶಕ್ತಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸ್ವರ್ಗದಲ್ಲೂ, ಭೂಮಿಯಲ್ಲೂ ಅವನ ಸಮಾನರು ಯಾರೂ ಇಲ್ಲ. ದೇವತೆಗಳಲ್ಲಿ ಅವನ ಸಮಾನರಿಲ್ಲ. ವರುಣ, ಸೂರ್ಯರೂ ಅವನ ಅಪ್ಪಣೆಗೆ ಒಳಪಟ್ಟವರು. ಇಂದ್ರನು ಮುಪ್ಪಿಲ್ಲದವನು, ಅಜರ (ರೋಗಗಳಿಲ್ಲದವನು,) ಮತ್ತು ಪುರಾತನನು. ಇಂದ್ರನು ಆನೆಯಂತೆ ಶಕ್ತಿಶಾಲಿ. ಅವನನ್ನು ಸಾಮ್ರಾಟ್, ಶಕ್ರ, ಶಚೀಪತಿ, ಶತಕ್ರತು (ನೂರು ಶಕ್ತಿಗಳುಳ್ಳವನು,) ಸತ್ಪತಿ (ಸಮರ್ಥ,) ಶೂರ, ಜಯಶಾಲಿ, ಇತ್ಯಾದಿ ಹಲವಾರು ವಿಶೇಷಣಗಳಿಂದ ಬಣ್ಣಿಸಲಾಗುತ್ತದೆ.

ಔದಾರ್ಯವೆಂಬುದು ಇಂದ್ರನ ವಿಶೇಷ ಗುಣ. ಆದ್ದರಿಂದ, ಅವನನ್ನು ಮಘವನ್, ವಸುಪತಿ ಇತ್ಯಾದಿ ವಿಶೇಷಣಗಳಿಂದ ವರ್ಣಿಸಲಾಗಿದೆ.

ವೃತ್ರನ ವಧೆ

ಇಂದ್ರನ ಎಲ್ಲಕ್ಕಿಂತ ಹೆಚ್ಚಿನ ಮಹತ್ವಶಾಲಿ ಸಾಧನೆ, ಎಂದರೆ ವೃತ್ರವಧೆ. ಋಗ್ವೇದದಲ್ಲಿ ವೃತ್ರನು ನೀರುಆಕಾಶಗಳನ್ನು ಅಡ್ಡಿಮಾಡುತ್ತಿದ್ದ ಸರ್ಪರೂಪವೆಂಬಂತೆ ವರ್ಣಿಸಿದ್ದಾರೆ. ವೃತ್ರನು ನೀರನ್ನು ಸರ್ಪದಂತೆ ಸುತ್ತಿದ್ದಾನೆ. ಕೆಲವೊಮ್ಮೆ ಮಾನವ ರೂಪದಲ್ಲಿ, ಕೆಲವೊಮ್ಮೆ ಸರ್ಪರೂಪದಲ್ಲಿ ವರ್ಣಿಸಲಾದ ವೃತ್ರನು ಕೂಡ ಗೊಂದಲವುಂಟುಮಾಡುವ ಪಾತ್ರ. ಅದೇ ರೀತಿ, ಕೆಲವೊಮ್ಮೆ ಪ್ರಕೃತಿಯ ಶಕ್ತಿ, ಮತ್ತು ಕೆಲವೆಡೆ ಪ್ರಪಂಚವನ್ನೇ ಆವರಿಸಿದ ಬೃಹದಾಕೃತಿ, ಕೆಲವೊಮ್ಮೆ ದೇವತೆಗಳಮನುಷ್ಯರ ಮಿತ್ರನಾಗಿ ಅವರೊಡನೆ ಒಡನಾಡುವ ಮಾನವರೂಪಿಯಾದ ಇಂದ್ರನ ಚಿತ್ರಣ ಕೂಡ ಅಷ್ಟೇ ಗೊಂದಲದಲ್ಲಿ ಬೀಳಿಸುವಂತಹುದು. ಮಾತ್ರವಲ್ಲ, ಇಂದ್ರನು ವೃತ್ರನನ್ನು ವಧಿಸಿದನು, ವಧಿಸುತ್ತಾನೆ, ಇತ್ಯಾದಿ ಕಾಲದ್ಯೋತಕವಾದ ಪದಗಳನ್ನು ಉಪಯೋಗಿಸಿದಾಗ, ವೃತ್ರವಧೆಯು ಇನ್ನೂ ಸತತವಾಗಿ ನಡೆಯುತ್ತಲೇ ಇರುವ ಘಟನೆಯೇ, ಎನ್ನುವ ಪ್ರಶ್ನೆ ಬರುತ್ತದೆ. (ಎಂದರೆ, ಪ್ರತಿಬಾರಿಯೂ ಅನಾವೃಷ್ಟಿಯಾದ ನಂತರ ಮಳೆ ಬಂದರೆ, ವೃತ್ರವಧೆ ನಡೆಯುತ್ತಿರುವ ಊಹಾಚಿತ್ರವನ್ನು ನಾವು ಕಲ್ಪಿಸಿಕೊಳ್ಳಬಹುದೇ?)

ವೃತ್ರನನ್ನು ವಧಿಸಿ ಇಂದ್ರನು ಅನೇಕ ಉಷಃಕಾಲಗಳಲ್ಲಿ ಮತ್ತು ಶರದೃತುಗಳಲ್ಲಿ ನೀರನ್ನು ಬಿಡುಗಡೆ ಮಾಡಿದ್ದಾನೆ. ಪರ್ವತಗಳನ್ನು ಸೀಳಿ ನೀರು ಹರಿಯುವಂತೆ ಮಾಡುವ, ಅಥವಾ ಗೋವುಗಳನ್ನು ಬಿಡುಗಡೆ ಮಾಡುವ ಉಲ್ಲೇಖಗಳು ಎಷ್ಟೋ ಋಕ್ಕುಗಳಲ್ಲಿವೆ. ಪರ್ವತಗಳನ್ನು ಚೂರು ಚೂರು ಮಾಡುವ ಉಲ್ಲೇಖಗಳನ್ನು ನೋಡಿದರೆ, ಇವು ಭೂಕಂಪಗಳ ಉಲ್ಲೇಖಗಳೇ, ಎನ್ನುವ ಸಂದೇಹ ಬರುತ್ತದೆ. ಇಂದ್ರನು ಗೋವುಗಳನ್ನೂ, ಸೋಮರಸವನ್ನೂ ಪಡೆದು ಏಳು ನದಿಗಳು ಹರಿಯುವಂತೆ ಮಾಡಿದನು; ಪ್ರವಾಹಗಳಿಗಾಗಿ ವಜ್ರಾಯುಧದಿಂದ ನಾಲೆಗಳನ್ನು ತೋಡಿದನು; ಇತ್ಯಾದಿ ಋಕ್ಕುಗಳು ನದಿಯ ಪಾತ್ರಗಳು ಬದಲಾಗುತ್ತಿರುವ ಉಲ್ಲೇಖಗಳೇ? ಒಟ್ಟಿನಲ್ಲಿ ವೃತ್ರವಧೆಯು ನೀರಿನ, ಪ್ರವಾಹದ, ಪರ್ವತಗಳನ್ನು ಪುಡಿಪುಡಿ ಮಾಡುವ, ಬಿರುಗಾಳಿ, ಮಳೆ, ಗುಡುಗುಸಿಡಿಲು, ಇತ್ಯಾದಿಗಳ ದ್ಯೋತಕವಾಗಿದೆ. ಇಂದ್ರನ ಪಾತ್ರವನ್ನು ದೀರ್ಘವಾಗಿ, ಆಳವಾಗಿ ವಿಶ್ಲೇಷಿಸಿದರೆ, ಋಕ್ಕುಗಳಲ್ಲಿ ಅಡಕವಾದ ಭೌಗೋಳಿಕ, ಐತಿಹಾಸಿಕ ರಹಸ್ಯಗಳನ್ನು ಅರಿಯಬಹುದು, ಎನ್ನಿಸುತ್ತದೆ.

ಋಗ್ವೇದದಲ್ಲಿ ವೃತ್ರವಧೆಯು ಎಷ್ಟು ಮಹತ್ವದ್ದೆಂದರೆ, ಇಂದ್ರನಿಗೆ ವೃತ್ರಹಾ ಎಂಬ ಹೆಸರಿದೆ. ವಿಶೇಷಣವನ್ನು 70 ಬಾರಿ ಉಪಯೋಗಿಸಲಾಗಿದೆ. ಇಂದ್ರನೇ ವೃತ್ರನನ್ನು ವಧೆ ಮಾಡಿದ್ದರೂ ಕೂಡ, ದೇವತೆಗಳು, ಸೋಮನು, ಮರುತ್ತುಗಳು, ಅಗ್ನಿ, ವಿಷ್ಣು, ಅಷ್ಟೇಕೆ, ಋಷಿಗಳು ಕೂಡ ಕಾರ್ಯದಲ್ಲಿ ಇಂದ್ರನಿಗೆ ನೆರವಾಗಿದ್ದಾರೆ.

ಇಂದ್ರನು ವೃತ್ರನನ್ನು ಮಾತ್ರವಲ್ಲ, ಇತರ ಅಸುರರನ್ನೂ ಕೊಂದಿದ್ದಾನೆ. ಉದಾಹರಣೆಗೆ, ವಿಶ್ವರೂಪ ಅಥವಾ ತ್ರಿಶಿರಸ್ಸು. ಇವನನ್ನು ವೃತ್ರನ ಅಣ್ಣ ಎಂದು ಹೇಳುವ ಕಥೆ ಇದೆ. ಅರ್ಬುದ ಎಂಬ ರಾಕ್ಷಸನನ್ನು ಒದ್ದು, ಮಂಜುಗಡ್ಡೆಯಿಂದ ಇರಿದು ಸಾಯಿಸುತ್ತಾನೆ. ಹೀಗೆ, ಅಸುರರನ್ನು ವಧಿಸಿದ ನಂತರ ಬೆಳಕು ಮೂಡಿ, ನೀರು ಬಿಡುಗಡೆಯಾಗುತ್ತದೆ. ಸೂರ್ಯ ಮತ್ತು ಉಷಸ್ಸುಗಳನ್ನು ಇಂದ್ರನು ಉತ್ಪತ್ತಿ ಮಾಡುತ್ತಾನೆ.

ಇಂದ್ರನ ಸಾಧನೆಗಳ ವರ್ಣನೆ ಎಷ್ಟು ಅತಿಶಯವಾಗಿ, ಕಾವ್ಯಮಯವಾಗಿದೆ, ಎಂದರೆ, ಓದುಗರಲ್ಲಿ ಅದರ ನಿಜವಾದ ಅರ್ಥದ ಬಗ್ಗೆ ಕೌತುಕವುಂಟಾಗುತ್ತದೆ. ಇಂದ್ರನು ಅಂತರಿಕ್ಷದಲ್ಲಿ ಬೆಳಗುವ ಪ್ರದೇಶಗಳನ್ನು ಸ್ಥಾಪಿಸಿ, ಭೂಮಿ, ಆಕಾಶಗಳಿಗೆ ಆಧಾರಭೂತನಾಗಿದ್ದಾನೆ; ಇಂದ್ರನು ಕಂಪಿಸುತ್ತಿದ್ದ ಪರ್ವತ, ಭೂಪ್ರದೇಶಗಳನ್ನು ಸ್ಥಿಮಿತಕ್ಕೆ ತಂದನು; ಇತ್ಯಾದಿ.

ದಸ್ಯುಗಳ ಶತ್ರು

ಎಲ್ಲಕ್ಕಿಂತ ಹೆಚ್ಚಾಗಿ, ಇಂದ್ರನು ವಜ್ರಧಾರಿಯಾದ ಧೀರ ಯೋಧ. ಅವನು 50000 ದಸ್ಯುಗಳನ್ನು ನಿರ್ನಾಮ ಮಾಡಿ ಅವರ ಗೋಪುರಗಳನ್ನು ಕೆಡವುತ್ತಾನೆ. “ಕರ್ಮರಹಿತರಾದ ದಸ್ಯುಗಳನ್ನು ನಾಶಮಾಡಿ ಕರ್ಮನಿರತರಾದ ಆರ್ಯರಿಗೆ ಪುತ್ರಾದಿ ಪ್ರಜೆಗಳನ್ನು ನೀಡಿದ್ದಾನೆ. ಈ ಋಕ್ಕಿನಲ್ಲಿ ಕವಿ ಹೇಳುತ್ತಾನೆ:

ತ್ವಂ ನು ತ್ಯದದಮಾಯೋ ದಸ್ಯೂರೇಕಃ ಕೃಷ್ಟೀರವನೋರಾರ್ಯಾಯ
ಅಸ್ತಿ ಸ್ವಿನ್ನು ವೀರ್ಯಂ ತತ್ತ ಇಂದ್ರ ಸ್ವಿದಸ್ತಿ ತದೃತುಥಾ ವಿ ವೋಚಃ ।।
(. ಸಂ. 6.18.3)

ನಿನ್ನ ಸಾಧನೆಗಳಿಂದ ಪ್ರಸಿದ್ಧನಾದ ಎಲೈ ಇಂದ್ರನೇ, ನೀನು ಕರ್ಮರಹಿತರಾದ ದಸ್ಯು ಜನರನ್ನು ಶಮನ ಮಾಡಿ, ಕರ್ಮನಿರತನಾದ ಆರ್ಯನಿಗೆ ಪುತ್ರಾದಿ ಪ್ರಜೆಗಳನ್ನು ಕೊಟ್ಟಿರುವೆ. ನಿನ್ನ ಸಾಮರ್ಥ್ಯವನ್ನು ಕಾಲಾನುಗುಣವಾಗಿ ಪ್ರಕಾಶಪಡಿಸು. ಇದರಲ್ಲಿ ಆರ್ಯ ಮತ್ತು ದಸ್ಯುಗಳ ಮಧ್ಯೆ ಇರುವ ಒಂದು ವ್ಯತ್ಯಾಸವೆಂದರೆ, ಕರ್ಮಾನುಷ್ಠಾನ ಎಂದು ತಿಳಿಯುತ್ತದೆ.

ಇನ್ನೊಂದು ಋಕ್ಕನ್ನು ನೋಡಿ.

ರುಕ್ಷಾದಂಹಸೋ ಮುಚದ್ಯೋ ವಾರ್ಯಾತ್ಸಪ್ತ ಸಿಂಧುಷು
ವಧರ್ದಾಸಸ್ಯ ತುವಿ ನೃಮ್ಣ ನೀನಮಃ ।।
(. ಸಂ. 8.24.27)

ಯಾರು ಹಿಂಸ್ರ ರಾಕ್ಷಸರಿಂದ ಉತ್ಪನ್ನವಾದ ಪಾಪದಿಂದ ಬಿಡಿಸಿ, ಸಪ್ತ ಸಿಂಧು ಪ್ರದೇಶದಲ್ಲಿ ವಾಸಿಸುವವರನ್ನು ಸಂಪನ್ನರನ್ನಾಗಿ ಮಾಡುತ್ತಾನೋ, ಅಂತಹ ಶ್ರೀಮಂತನಾದ ಇಂದ್ರನೇ, ದಾಸರ ಮೇಲೆ ವಧಸಾಧನವಾದ ಆಯುಧವನ್ನು ಪ್ರಯೋಗಿಸು. ಅರ್ಥಾತ್, ದಾಸರೆಂದರೆ, ಸಪ್ತಸಿಂಧು ಪ್ರದೇಶದ ವಾಸಿಗಳ ಹಿಂಸ್ರಕರಾದ ಶತ್ರುಗಳು.

ಹೀಗೆ, ಆರ್ಯರೆಂದರೆ ಯಾರು, ದಸ್ಯುಗಳೆಂದರೆ ಯಾರು, ಎನ್ನುವುದನ್ನು ಮೂಲವನ್ನು ಓದಿ ಅರ್ಥಮಾಡಿಕೊಳ್ಳಬೇಕು. ಪೂರ್ವಾಗ್ರಹ ಇರುವ ಪಂಡಿತರ, ಅದರಲ್ಲೂ ಪಾಶ್ಚಾತ್ಯ ಪಂಡಿತರ ವ್ಯಾಖ್ಯಾನವನ್ನು ಓದಿಕೊಂಡರೆ, ದಾರಿತಪ್ಪುವ ಸಾಧ್ಯತೆಗಳೇ ಹೆಚ್ಚು.

ಶ್ರೀಕಾಂತ ತಲಗೇರಿಯವರ ಪ್ರಕಾರ ದಸ್ಯು ಅಥವಾ ದಾಸ ಎಂಬ ಪದವು ಪೂರುಗಳಲ್ಲದ, ಅಂದರೆ, “ವೈದಿಕರಲ್ಲದ,ಆದರೆ ವಿಶೇಷವಾಗಿ ಇರಾನಿಯನ್ನರನ್ನು ಸೂಚಿಸುವ ಪದವಾಗಿದೆ. ಇದು 54 ಸ್ತೋತ್ರಗಳಲ್ಲಿ (63 ಋಕ್ಕುಗಳಲ್ಲಿ ಕಂಡುಬರುತ್ತದೆ. ಇವು ಹೆಚ್ಚುಮಟ್ಟಿಗೆ ದಸ್ಯುಗಳಿಗೆ ಪ್ರತಿಕೂಲವಾಗಿ ಅವರನ್ನು ದೂರುತ್ತವೆ. ಆದರೆ ಮೂರು ಋಕ್ಕುಗಳಲ್ಲಿ ದಾಸರನ್ನು ಹೊಗಳುವ ಚಿತ್ರಣವಿದೆ.

ಅಶ್ವಿನಿ ದೇವತೆಗಳು ದಸ್ಯುಗಳ ಹವಿಸ್ಸನ್ನು ಸ್ವೀಕರಿಸುವಂತೆ ಚಿತ್ರಿಸಲಾಗಿದೆ. (8.5.31)

ಯಜ್ಞದ ಯಜಮಾನನನ್ನು ದಾಸ ಎಂದು ಕರೆಯಲಾಗಿದೆ. (8.46.32)

ಇಂದ್ರನನ್ನು ಆರ್ಯ ಮತ್ತು ದಾಸ ಎರಡೂ ಪಂಗಡಕ್ಕೆ ಸೇರಿದವನು ಎಂದು ಹೇಳಲಾಗಿದೆ. (8.51.9)

ಯಸ್ಯಾಯಂ ವಿಶ್ವ ಆರ್ಯೋ ದಾಸಃ ಶೇವಧಿಪಾ ಅರಿಃ ।
ತಿರಶ್ಚಿದರ್ಯೇ ರುಶಮೇ ಪವೀರವಿ ತುಭ್ಯೇತ್ಸೋ ಅಜ್ಯತೇ ರಯಿಃ ।।
(. ಸಂ. 8.51.9)

ಇದರ ಅರ್ಥ, ಯಾವ ಇಂದ್ರನಿಗೆ ಸಮಸ್ತವಾದ ಅಸುರ ಗಣಗಳು ಶತ್ರುಗಳೋ, ಅದೇ ಇಂದ್ರನು ದಾಸನಾಗಿ, ಸ್ವಧನವನ್ನು ರಕ್ಷಿಸುವವನೂ ಹೌದು. ಎಲೈ ಇಂದ್ರನೇ, ಅಮಂಗಳಕರನೂ ಚಕ್ರದಂತೆ ಭ್ರಮಣ ಮಾಡುವ ಶತ್ರುವಿನಲ್ಲಿ ಅಂತರ್ಹಿತನಾದರೂ ಧನವೆಲ್ಲವೂ ನಿನಗೇ ಅರ್ಪಿತವಾಗುತ್ತದೆ.

ಎಂದರೆ, ಎಲ್ಲ ಜನರೂ (ಜನಾಂಗಗಳೂ) ಸಂಕರವಾಗುತ್ತ ಬಂದಿರಬೇಕು. ಅಥವಾ, ದೇವ/ಮಾನವರೇ ದಸ್ಯುಗಳೊಡನೆ ಸ್ನೇಹ ಮಾಡಿಕೊಳ್ಳುವ ಪ್ರಸಂಗಗಳು ಬಂದಿರಲು ಸಾಧ್ಯವೇ? ಕಾಲಾಂತರದಲ್ಲಿ ಸಂದರ್ಭಗಳು ಕೂಡ ಸಂಭವಿಸಿರಲು ಸಾಧ್ಯ.

ಇಂದ್ರನ ಇತರ ಕಥೆಗಳು

ಬಿರುಗಾಳಿಯಿಂದ ಉಷಸ್ಸು ಮರೆಯಾಗುವುದನ್ನು ಬಹಳ ಕಾವ್ಯಮಯವಾಗಿ ಚಿತ್ರಿಸುವ ಕಥೆಯೊಂದಿದೆ. ಇಂದ್ರನು ವಜ್ರಾಯುಧದಿಂದ ಉಷೋದೇವಿಯ ಬಂಡಿಯನ್ನು ವಜ್ರಾಯುಧದಿಂದ ಚೂರು ಚೂರು ಮಾಡಿ, ತನ್ನ ಅತಿ ವೇಗದ ಅಶ್ವಗಳಿಂದ ಅವಳ ನಿಧಾನವಾದ ಕುದುರೆಗಳನ್ನು ನಾಶಮಾಡಿದನು. ಇಂದ್ರನ ವಜ್ರಕ್ಕೆ ಹೆದರಿ ಉಷೋದೇವಿಯು ತನ್ನ ರಥವನ್ನು ಪರಿತ್ಯಾಗ ಮಾಡಿದಳಂತೆ. ಅವಳ ಮುರಿದುಬಿದ್ದ ರಥವು ವಿಪಾಶಾ ನದಿಯಲ್ಲಿ ಬಿದ್ದಿತಂತೆ.

ಪಣಿಗಳೆಂಬ ಬಲು ಲೋಭಿಗಳಾದ ಅಸುರರು ಒಮ್ಮೆ ಗೋವುಗಳನ್ನು ಅಪಹರಿಸಿ ಗುಹೆಗಳಲ್ಲಿ ಬಚ್ಚಿಟ್ಟರಂತೆ. ಇಂದ್ರನ ದೂತಳಾದ ಸರಮೆಯೆಂಬ ನಾಯಿಯು ಬಚ್ಚಿಟ್ಟ ಸ್ಥಳವನ್ನು ಕಂಡುಹಿಡಿದು ಗೋವುಗಳನ್ನು ಹಿಂದಕ್ಕೆ ಕೊಡಬೇಕೆಂದು ಕೇಳಿದಳಂತೆ. ಪಣಿಗಳು ಅವಳನ್ನು ಅಪಹಾಸ್ಯ ಮಾಡುತ್ತಾ ನಕ್ಕರಂತೆ. ಇಂದ್ರನು ವಲನೆಂಬುವನ ಕೋಟೆಯನ್ನು ಭೇದಿಸಿ ಪಣಿಗಳನ್ನು ಸೋಲಿಸಿ, ಗೋವುಗಳನ್ನು ಬಿಡುಗಡೆ ಮಾಡಿದ ಕಥೆ ಇದೆ.

ಇಂದ್ರನು ತುರ್ವಶರನ್ನೂ, ಯದುಗಳನ್ನೂ ಸುರಕ್ಷಿತವಾಗಿ ನದಿ ದಾಟಿಸಿದ ಕಥೆ ಇದೆ.

ಅಪಾಲಾ ಎಂಬುವಳು ನದೀತೀರದಲ್ಲಿ ಸೋಮಲತೆಯನ್ನು ಕಂಡು, ಹಲ್ಲಿನಿಂದ ಜಜ್ಜಿ, ಸೋಮರಸವನ್ನು ಇಂದ್ರನಿಗೆ ಅದನ್ನು ಅರ್ಪಿಸಿ ವರ ಗಳಿಸಿದ ಕಥೆಯನ್ನು ಮುಂಚೆಯೇ ಹೇಳಿದ್ದೇವೆ.

ಕಥೆಗಳಿಂದ ಇಂದ್ರನ ವ್ಯಕ್ತಿತ್ವದ ಚಿತ್ರಣ ಮಾತ್ರವಲ್ಲ, ಕಾಲದ ಸಾಂದರ್ಭಿಕ ಚಿತ್ರಣ ಕೂಡ ಮೂಡಿಬರುತ್ತದೆ.

ಭರತರ ಮಿತ್ರ

ಎಲ್ಲಕ್ಕಿಂತ ಮುಖ್ಯವಾದ, ಕೌತುಕಮಯವಾದ ಕಥೆಗಳೆಂದರೆ, ಸುದಾಸನು ಕಾದಿದ ಅನೇಕ ಯುದ್ಧಗಳಲ್ಲಿ ಇಂದ್ರನು ಅವನಿಗೆ ಹೇಗೆ ಸಹಾಯ ನೀಡಿದನೆಂಬುದು.

ಭರತರು (ಪೂರುಗಳು) ಇಂದ್ರನಿಗೆ ವಿಶೇಷವಾದ ಮಿತ್ರರು. ದಶರಾಜ್ಞ ಯುದ್ಧದಲ್ಲಿ ಭರತರು ಹತ್ತು ರಾಜಪುತ್ರರೊಡನೆ ಕಾದಿ ಜಯ ಗಳಿಸುತ್ತಾರೆ. ಇವರಲ್ಲಿ ದಸ್ಯುಗಳು, ಪಣಿಗಳು, ದೃಹ್ಯುಗಳು, ಅನುಗಳು, ತುರ್ವಶರು, ಯದುಗಳು ಕೂಡ ಸೇರಿದ್ದಾರೆ.

[ಸ್ವಾರಸ್ಯವಾದ ವಿಷಯವೆಂದರೆ, ಪುರುಷ ಎಂಬ ಪದವು ಪೂರು ಎಂಬ ಬೇರಿನಿಂದ ಬಂದಿರಬೇಕೆಂದು ಋಗ್ವೇದವನ್ನು ಅನುವಾದಿಸಿದ ಗ್ರಿಫಿನ್ ಮಹಾಶನು ಹೇಳುತ್ತಾನೆ. ಪೂರುಗಳೇ ವೈದಿಕ ಆರ್ಯರೆಂದು ಎಷ್ಟು ನಿಸ್ಸಂದಿಗ್ಧವಾಗಿ ಹೇಳಬಹುದು ಎಂದರೆ, ಪೂರು ಮತ್ತು ಪುರುಷ ಎಂಬ ಪದಗಳ ನಡುವಿನ ವ್ಯತ್ಯಾಸವು ಋಗ್ವೇದದಲ್ಲಿ ಎಷ್ಟೋ ಬಾರಿ ಕಾಣಬರುವುದಿಲ್ಲ ಎಂದು ಗ್ರಿಫಿತ್ ಹೇಳುತ್ತಾನೆ. ಪೂರು ಪದವನ್ನು ಕನಿಷ್ಠ ಐದು ಋಕ್ಕುಗಳಲ್ಲಿ ನೇರವಾಗಿ ಪುರುಷನೆಂದು ಅನುವಾದಿಸಲು ಸಾಧ್ಯವೆನ್ನುತ್ತಾನೆ.]

ಋಗ್ವೇದದ ಈ ಋಕ್ಕುಗಳನ್ನು ಗಮನಿಸಿ: ಮತ್ತೊಮ್ಮೆ ವರಗಳನ್ನು ಪಡೆಯಲು ಪೂರುಗಳು ಇಂದ್ರನಿಗಾಗಿ ಯಜ್ಞಗಳನ್ನು ಆಚರಿಸಿದರು. ಇಂದ್ರನಿಗೆ ಪೂರುಗಳು ಸೋಮವನ್ನು ಅರ್ಪಿಸಿದರು. ಇಂದ್ರನು ಪೂರುಗಳ ಶತ್ರುಗಳನ್ನು ಸಂಹರಿಸಿ ಅವರಿಗೆ ಸ್ವಾತಂತ್ರ್ಯವನ್ನು ನೀಡಿ, ಯುದ್ಧದಲ್ಲಿ ಅವರಿಗೆ ಸಹಾಯ ಮಾಡುತ್ತಾನೆ. ಪೂರುಗಳಿಗಾಗಿ ಶತ್ರುಗಳ ಕೋಟೆಗಳನ್ನು ಒಡೆಯುತ್ತಾನೆ. ಇಂದ್ರನು ಪೂರುಗಳನ್ನು ಸಂಬೋಧಿಸಿ, ತನಗಾಗಿ ಮಾತ್ರ ಹವಿಸ್ಸನ್ನು ನೀಡುವಂತೆ ಹೇಳುತ್ತಾನೆ. ಪ್ರತಿಯಾಗಿ ತನ್ನ ಸ್ನೇಹ, ರಕ್ಷಣೆ ಮತ್ತು ಔದಾರ್ಯಗಳನ್ನು ಕೊಡುವುದಾಗಿ ಭರವಸೆ ನೀಡುತ್ತಾನೆ. ಅಶ್ವಿನಿ ದೇವತೆಗಳನ್ನು ದೃಹ್ಯು, ಅನು, ಯದು ಮತ್ತು ತುರ್ವಸು, ಇವರನ್ನು (ನಿರ್ದಿಷ್ಟವಾಗಿ ಹೆಸರಿಸಿ ) ತ್ಯಜಿಸಿ ತಮ್ಮ” (ಇಂದ್ರ ಮತ್ತು ಪೂರುಗಳ) ಬಳಿ ಬರಲು ವಿನಂತಿಸುತ್ತಾರೆ .

ದಶರಾಜ್ಞ ಯುದ್ಧದ ಕಥಾನಕವನ್ನು ಮುಂದೆ ಬರುವ ಲೇಖನಗಳಲ್ಲಿ ವಿಸ್ತೃತವಾಗಿ ತಿಳಿದುಕೊಳ್ಳೋಣ.

ಕಡೆಯ ಮಾತು

ಈ ಲೇಖನದಲ್ಲಿ, ಇಂದ್ರನ ಬಗ್ಗೆ ಋಗ್ವೇದ ಹೇಳುವ ಕೆಲವು ವಿಷಯಗಳನ್ನು ಪ್ರಸ್ತುತ ಪಡಿಸಿದೆವು. ಇವನ್ನು ವಿಶ್ಲೇಷಿಸಿದಾಗ, ಗೋಚರವಾಗುವ ಇಂದ್ರನ ಚಿತ್ರಣವೇನು?

ಮೇಲ್ನೋಟಕ್ಕೆ ಇಂದ್ರನು ಮನುಷ್ಯ ಮಾತ್ರದವನಾಗಿ, ಮನುಷ್ಯ ರೂಪಿಯಾಗಿ ಕಂಡು ಬರುತ್ತಾನೆ. ಅವನಿಗೆ ರೂಪ, ಸಾಮರ್ಥ್ಯ, ಸಾಧನಾ ವಿಶೇಷಣಗಳಿವೆ. ಅಷ್ಟು ಮಾತ್ರವಲ್ಲ, ಮನುಷ್ಯ ಮಾತ್ರದವರಿಗೆ ಇರುವ ಆಸೆ, ಕೋಪ, ಇತ್ಯಾದಿ ದೌರ್ಬಲ್ಯಗಳು ಕೂಡ ಇಂದ್ರನನ್ನು ಕಾಡಿಸುತ್ತವೆ. ಅವನು ದೇವತೆಗಳ ರಾಜನಾಗಿ ಮನುಷ್ಯರ (ಅದರಲ್ಲೂ ಕೆಲವು ರಾಜರ, ಋಷಿಗಳ) ಮಿತ್ರನಾಗಿದ್ದಾನೆ.

ಆದರೆ, ಅವನು ಅಗ್ನಿ ಮತ್ತು ವರುಣರ ಜೊತೆಗೆ, ಪ್ರಕೃತಿಯ ಮಹಾ ಶಕ್ತಿ, ಸಾಮರ್ಥ್ಯ, ಪ್ರಾಬಲ್ಯಗಳ, ಮತ್ತು ಅವುಗಳ ಮೇಲಿನ ವಿಕ್ರಮದ ರೂಪಕ. ಈ ದೃಷ್ಟಿಕೋಣದಿಂದ ನೋಡಿದಾಗ, ವೃತ್ರನ ಸಂಹಾರವು ಲೋಕಕಲ್ಯಾಣಕ್ಕೋಸ್ಕರ (ಮತ್ತು ಅವನ ಮಿತ್ರರ ಏಳಿಗೆಗೋಸ್ಕರ) ಪ್ರಕೃತಿಯನ್ನು ತಡೆದಿಡಲು ಮಾಡಿದ ರಾಕ್ಷಸ ಶಕ್ತಿಯ ಮೇಲೆ ಅವನು ಗಳಿಸಿದ ವಿಕ್ರಮವನ್ನು ವರ್ಣಿಸುತ್ತದೆ.

ಆದರೆ, ಯಾವ ಕೆಲಸವನ್ನು ಮಾಡಲು ಕೂಡ ಅವನಿಗೆ ಸೋಮನ ಸಹಕಾರ ಬೇಕು. ಇದನ್ನು ಮತ್ತು ಬರುವ ಪಾನೀಯವನ್ನಾಗಿ ಕಡೆಗಣಿಸುವುದು ಒಂದು ವೈಪರೀತ್ಯವಾದರೆ, ಇನ್ನೊಂದು ಕಡೆ, ಸೋಮನು ಅವನಿಗೆ ಕಲ್ಪನಾಶಕ್ತಿ, ಭಾವನಶಕ್ತಿ, ಮತ್ತು ಧೃತಿಗಳನ್ನು ಕೊಡುತ್ತಾನೆ. ಸೋಮನಿಂದಲೇ, ಇಂದ್ರನಿಗೆ ಮಹತ್ಕಾರ್ಯಗಳನ್ನು ಸಾಧಿಸುವ ಬಲಸ್ಥೈರ್ಯಗಳು ಸಿಗುತ್ತವೆ.

ಋಗ್ವೇದದ ಕಾಲದಲ್ಲಿದ್ದ ಇಂದ್ರವರುಣಅಗ್ನಿಗಳ ಉಪಾಸನೆಯಿಂದ ನಾವು ಇಂದು ಬ್ರಹ್ಮವಿಷ್ಣುಮಹೇಶ್ವರರ ಸ್ತೋತ್ರಪೂಜೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಇಂದ್ರವರುಣಅಗ್ನಿಗಳ ಉಪಾಸನೆಯು ಮೇಲೆ ಹೇಳಿದಂತೆ, ಪ್ರಕೃತಿಯ ಪೂಜೆಯ ಪ್ರತೀಕ. ಬದಲಾವಣೆ ಹೇಗೆ ಸಂಭವಿಸಿತು; ಹಿಂದೆ ಋಗ್ವೇದದ ಸಮಯದಲ್ಲಿ ನಡೆದಂತಹ ಪೂಜೆ ಇಂದು ಎಲ್ಲಿ, ಹೇಗೆ ನಡೆಯುತ್ತಿದೆ, ಎಂಬ ಪ್ರಶ್ನೆಗಳು ಒಬ್ಬ ಇತಿಹಾಸಕಾರನ ಕಲ್ಪನೆಯನ್ನು ಪ್ರಚೋದಿಸುತ್ತವೆ.

ಇಂದ್ರನು ಭರತರ ಶತ್ರುಗಳಾದ ದಸ್ಯುಗಳ ಶತ್ರು. ಎಂದರೆ, ಭರತರು ವೈದಿಕ ಆರ್ಯರ ಸಂಸ್ಕೃತಿಯ ಪ್ರತೀಕವಾದರೆ, ಇಂದ್ರನು ಸಂಸ್ಕೃತಿಯನ್ನು ನಿಸ್ಸಂದಿಗ್ಧವಾಗಿ ಬೆಂಬಲಿಸುತ್ತಾನೆ.

ವಜ್ರಾಯುಧದ ಪರಿಕಲ್ಪನೆಯು ಎಲ್ಲಕ್ಕಿಂತ ಹೃದಯಂಗಮವಾದ ಚಿತ್ರಣ. ದಧೀಚಿಯ ಅತುಲ್ಯನೀಯ ತ್ಯಾಗದಿಂದ ರೂಪಿಸಿದ ವಜ್ರವನ್ನು ಇಂದ್ರನು ಲೋಕಕಲ್ಯಾಣಕ್ಕಾಗಿ ರಾಕ್ಷಸ ಶಕ್ತಿಯನ್ನು ಧ್ವಂಸಮಾಡಲು ಉಪಯೋಗಿಸಿದನು. ನಮ್ಮ ದೇಶದಲ್ಲಿ ಇಂದಿಗೂ ದಧೀಚಿಯ ನೆನಪು ಜನಮನದಲ್ಲಿ ಹಸಿರಾಗಿದೆ. ಭಾರತೀಯ ಸೈನ್ಯದಲ್ಲಿ ಯುದ್ಧ ಸಮಯದ ಸಾಧನೆಗಾಗಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಪರಮವೀರ ಚಕ್ರವು ದಧೀಚಿಯ ತ್ಯಾಗದಿಂದ ಉದ್ಭವಿಸಿದ ಇಂದ್ರನ ವಜ್ರಾಯುದ್ಧವನ್ನು ತನ್ನ ಸಂಕೇತವನ್ನಾಗಿ ಸ್ವೀಕರಿಸಿದೆ.

ಆಕರಗಳು

1. www.vyasaonline.com
2. Srikant G Talageri The Rigveda and the Aryan Theory: A Rational Perspective THE FULL OUT-OF-INDIA CASE IN SHORT
3. Param Vir Chakra – Wikipedia, Vajra – Wikipedia

(Image credit: subpng.com)

 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply

More about: