close logo

ಮಹಾಭಾರತದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ವಿಚಾರ

ಮಹಾಭಾರತ ಮಹಾಕಾವ್ಯ ಆಧುನಿಕ ಕಾಲಕ್ಕೂ ಪ್ರಸ್ತುತವಾದ ಅನೇಕ ಪರಿಕಲ್ಪನೆಗಳನ್ನು ಒಳಗೊಂಡಿದೆ. ನಿತ್ಯನೂತನವೂ ಸದ್ಯಪ್ರಸ್ತುತವೂ ಆಗಿದೆ. ಆದ್ದರಿಂದಲೇ ಇಂಥ ಕಾವ್ಯಕ್ಕೆ ನಾವು ಕಾಯಾ, ವಾಚಾ, ಮನಸಾ ಸ್ಪಂದಿಸುತ್ತೇವೆ. ಕಾವ್ಯದ ಪಾತ್ರಗಳೊಂದಿಗೆ ನಮ್ಮ ಅನುಸಂಧಾನ ಆಳವಾಗಿರುತ್ತದೆ. ಅವುಗಳೊಂದಿಗೆ ನಕ್ಕು, ನಲಿದು, ಜಗಳವಾಡಿ ಸನ್ನಿವೇಶಗಳೊಳಗೆ ಪರಕಾಯಪ್ರವೇಶ ಮಾಡುತ್ತೇವೆ. ವ್ಯಾಸರ ಈ ಮಹಾಕಾವ್ಯ ಯಾವಕಾಲಕ್ಕೂ ಮಿಡಿಯುವ ಜೀವಂತಿಕೆ ಉಳಿಸಿಕೊಂಡೇ ಇರುತ್ತದೆ. ಮುಂಜಾನೆಯ ಮಂಜಿನ ಹನಿಗಳಂತೆ ಸದಾ ನವನವೀನವೂ, ಜೀವಂತವೂ ಆಗಿರುತ್ತದೆ.

ಗಮನಿಸಬೇಕಾದ ಅಂಶವೆಂದರೆ, ಹೃನ್ಮನಗಳನ್ನು ಹಿಡಿದಿಡುವ ಜೊತೆಗೇ ಜೀವನದ ವ್ಯಾವಹಾರಿಕ ವಿಷಯವಸ್ತುಗಳನ್ನೂ ಮಹಾಭಾರತ ಒಳಗೊಂಡಿದೆ. ಅದರಲ್ಲೂ ಅರ್ಥಶಾಸ್ತ್ರ, ಅರ್ಥವ್ಯವಸ್ಥೆಯ ಸಂಬಂಧವಾದ ವಿಚಾರಗಳೂ ಮಹಾಭಾರತದಲ್ಲಿ ಹೇರಳವಾಗಿದೆ. ನಮ್ಮ ಕಣ್ಣನ್ನು ತೆರೆಯಿಸುವಂತಹ ಒಳನೋಟಗಳಿವೆ. ಯುದ್ಧವೇ ಪ್ರಧಾನವೆಂಬಂತೆ ಬಿಂಬಿತವಾಗಿರುವ ಈ ಕಥೆಯಲ್ಲಿ ಮರ್ತ್ಯಲೋಕವ್ಯಾಪಾರಗಳ ಬಗ್ಗೆ ಶಾಸ್ತ್ರೀಯವೆನ್ನುವಂತಹ ಸುದೀರ್ಘ ವಿಚಾರವಿನಿಮಯಗಳಲ್ಲಿ ಕಾವ್ಯದ ಮುಖ್ಯಪಾತ್ರಧಾರಿಗಳೇ ಭಾಗಿಯಾಗಿದ್ದಾರೆ. ಕಾವ್ಯದ ಅನೇಕ ಸಂದರ್ಭಗಳಲ್ಲಿ ಅರ್ಥಶಾಸ್ತ್ರ ಮತ್ತು ವ್ಯಾಪಾರದ ಅಂಶಗಳು ಚರ್ಚಿತವಾಗಿವೆ. ತತ್ಸಂಬಂಧಿತವಾದ ಆ ಕಾಲದ ವಿಚಾರಧಾರೆ ಮತ್ತು ಇನ್ನಿತರ ಆಡಳಿತಾತ್ಮಕ ಅಂಶಗಳ ಒಳನೋಟ ಸಿಗುತ್ತದೆ.

ಪಾಂಡವರು ಇಂದ್ರಪ್ರಸ್ಥದಲ್ಲಿ ಶಾಸನ, ರಾಜ್ಯಪಾಲನೆಗೆ ಮೊದಲುಗೊಂಡಾಗ (ಸಭಾಪರ್ವದ ನಾರದಪರ್ವದಲ್ಲಿ) ನಾರದರು ಭೇಟಿ ಕೊಡುತ್ತಾರೆ. ಅರ್ಥಶಾಸ್ತ್ರದ ಕುರಿತಾಗಿ ಯುಧಿಷ್ಠಿರನೊಡನೆ ಸಂಭಾಷಣೆಯನ್ನು ನಡೆಸುತ್ತಾರೆ. (ವೈಶಂಪಾಯನರು ಅದನ್ನು ಹೀಗೆ ವಿವರಿಸಿದ್ದಾರೆ) – ಆ ಮಹೋನ್ನತ ತಪಸ್ವಿಯಾದ ನಾರದರು, ಯುಧಿಷ್ಠಿರನಿಗೆ ಹೀಗೆ ಉತ್ತರಿಸುತ್ತಾ, ರಾಜನನ್ನು ಮತ್ತೊಮ್ಮೆ ಪ್ರಶ್ನಿಸಿದರು. “ರಾಜನ್, ಜನರಿಂದ ಪ್ರಾಪ್ತವಾದ ತೆರಿಗೆಯಿಂದ ಸಂಬಳ ಪಡೆದುಕೊಳ್ಳುವ ನಿನ್ನ ಆಡಳಿತದ ಅಧಿಕಾರಿಗಳು, ದೂರದ ಪ್ರದೇಶಗಳಿಂದ ಬರುವ ವ್ಯಾಪಾರಿಗಳಿಂದ ನಿಗದಿಯಾಗಿರುವಷ್ಟೇ ತೆರಿಗೆ ತೆಗೆದುಕೊಳ್ಳುತ್ತಾರಷ್ಟೇ? ಸ್ವಾರ್ಥಾಭಿಲಾಷೆಗೆ ಬಲಿಯಾಗಿಲ್ಲವಷ್ಟೆ? ಮಹಾರಾಜ, ನಿನ್ನ ರಾಜ್ಯದಲ್ಲೂ, ರಾಜಧಾನಿಯಲ್ಲೂ ವ್ಯಾಪಾರಿಗಳನ್ನು ಗೌರವದಿಂದ ಕಾಣಲಾಗುತ್ತದೆಯಷ್ಟೆ? ಯಾವ ಮೋಸದ ಭಯವಿಲ್ಲದೆ ಉತ್ಪಾದಿತ ವಸ್ತುಗಳನ್ನು ಇಲ್ಲಿಗೆ ತರಲು ಅನುಕೂಲವಿದೆಯಷ್ಟೇ?” (..)

ಹೀಗೆ ಮೊದಲುಗೊಳ್ಳುವ ನಾರದರು ಯುಧಿಷ್ಠಿರನನ್ನು ಪ್ರಶ್ನೆ ಮಾಡುತ್ತಾ ಮುಂದುವರೆಯುತ್ತಾರೆ. (ಈ ನೆಪದಲ್ಲಿ ವೇದವ್ಯಾಸರು ಆದರ್ಶವಾದ ಅರ್ಥವ್ಯವಸ್ಥೆ, ವ್ಯಾಪಾರ, ರಾಜ್ಯಾರಕ್ಷಣೆ, ಕೃಷಿ ಮತ್ತು ಆಡಳಿತದ ಇನ್ನಿತರ ವಿಭಾಗಗಳ ಚಿತ್ರಣವೊಂದನ್ನು ಕೊಡುತ್ತಾರೆ). ನಾರದರು ರಾಜ್ಯದ ಖರ್ಚು ವೆಚ್ಚಗಳನ್ನು ವಿಚಾರಿಸುತ್ತಾರೆ. ತನ್ನ ರಾಜ್ಯದಲ್ಲಿ ಖರ್ಚು ಆದಾಯದ ೧/೪ ಅಥವಾ ೧/೩ ಅತಿ ಹೆಚ್ಚೆಂದರೆ ೧/೨ರಷ್ಟೆ ಇದೆಯಷ್ಟೆ ಎಂದು ಪ್ರಶ್ನಿಸುತ್ತಾರೆ. ಅವನ ಕರಣಿಕರು ಖರ್ಚು ವೆಚ್ಚಗಳನ್ನು ಪ್ರತಿ ಮಧ್ಯಾಹ್ನ ವಿಶದಪಡಿಸುತ್ತಾರಷ್ಟೆ? ಕುಶಲಕರ್ಮಿಗಳಿಗೆ ಸಲ್ಲಬೇಕಾದ ಸಂಬಳ ನಾಲ್ಕು ತಿಂಗಳಿಗಿಂತ ಎಂದೂ ತಡವಾಗುವುದಿಲ್ಲವಷ್ಟೆ? ಸೈನಿಕರಿಗೆ ಕೊಡಬೇಕಾದ ಸಂಬಳದಲ್ಲಿ ಯಾವ ನ್ಯೂನತೆಯೂ ಇಲ್ಲವಷ್ಟೆ ಎಂದು ವಿಚಾರಿಸುತ್ತಾರೆ. ಉತ್ತಮ ಕಾರ್ಯ ಪ್ರದರ್ಶಿಸುವ ಕುಶಲ ಕರ್ಮಿಗಳಿಗೆ ಸರಿಯಾದ ಬಹುಮಾನಗಳನ್ನು ಕೊಡಬೇಕೆನ್ನುತ್ತಾರೆ.

ನಾರದರು ನಾಲ್ಕು ಅರ್ಥಶಾಸ್ತ್ರೀಯ ವಾರ್ತೆಗಳ ಕುರಿತಾಗಿ ಹೇಳುತ್ತಾರೆ ಕೃಷಿ, ವಾಣಿಜ್ಯ/ವ್ಯಾಪಾರ, ಪಶುಸಂಗೋಪನೆ ಮತ್ತು ಬಡ್ಡಿಸಾಲ. ಇವುಗಳಿಂದ ಸಮಾಜದ ಕಲ್ಯಾಣವಾಗುತ್ತದೆಯೆನ್ನುತ್ತಾರೆ. ಇವೆಲ್ಲವನ್ನೂ ಪ್ರಾಮಾಣಿಕವಾದ ಮನುಷ್ಯರಷ್ಟೇ ನಡೆಸುತ್ತಾರಷ್ಟೆ, ರಾಜನು ಆ ರೀತಿಯಲ್ಲಿರುವಂತೆ ನಡೆಸುತ್ತಾನಷ್ಟೇ ಎಂದು ಪ್ರಶ್ನಿಸುತ್ತಾರೆ. ಕೃಷಿಕರಿಗೆ ಬೀಜಗಳನ್ನು ಖರೀದಿಸಲು ಕೊಡುವ ಸಾಲ ಉತ್ಪಾದನೆಯ ೧/೪ಗಿಂತ ಹೆಚ್ಚಿನ ಬಡ್ಡಿ ಹೊಂದಿಲ್ಲವಷ್ಟೇ ಎಂದು ಪ್ರಶ್ನಿಸುತ್ತಾರೆ. ನಾರದರು ಸಂಬಳನ್ನು ಹೆಚ್ಚಿಸುವುದರ ಬಗ್ಗೆಯೂ ವಿಚಾರಿಸುತ್ತಾರೆ. ಅವರವರ ಕಾರ್ಯಸಾಧನೆ ಮತ್ತು ಕೆಲಸದ ಗುಣಮಟ್ಟದ ಮೇಲೆಯೇ ಸಂಬಳ ಹೆಚ್ಚಿಸುವುದಾಗಬೇಕು ಎನ್ನುವುದನ್ನು ಸೂಚಿಸುತ್ತಾರೆ. ಕಾರ್ಯಸಾಧನೆಯಲ್ಲಿ ಪರಿಶ್ರಮವಿರುವ ಯಾವ ನೌಕರನೂ ಸಂಬಳ ಹೆಚ್ಚಿಸಿಲ್ಲದ ಕಾರಣಕ್ಕೆ ನಿರಾಶೆ ಅನುಭವಿಸುತ್ತಿಲ್ಲವಷ್ಟೇ ಎಂದು ಎಚ್ಚರಿಸುತ್ತಾರೆ. ಅವರವರ ಯೋಗ್ಯತಾನುಸಾರವಾಗಿಯೇ ರಾಜನು ಸಂಪತ್ತನ್ನೂ, ಉಡುಗೊರೆಯನ್ನೂ ಕೊಡುತ್ತಾನಷ್ಟೆ ಎಂದು ವಿಚಾರಿಸುತ್ತಾರೆ.

ಹೀಗೆ ನಾರದರು ತಮ್ಮ ಉಭಯಕುಶಲೋಪರಿಯಲ್ಲೇ ವಾಣಿಜ್ಯವ್ಯವಹಾರಗಳ ವಿಷಯದಲ್ಲಿ ರಾಜನ ಪಾತ್ರವನ್ನು ಒತ್ತಿಹೇಳುತ್ತಾರೆ.

ನಾರದರಿಂದ ಯುಧಿಷ್ಠಿರನಿಗೆ ಮತ್ತೊಂದಷ್ಟು ಪ್ರಶ್ನೆಗಳು

ನಿನಗೆ ಹೆಚ್ಚಿನ ಲಾಭ ಕೊಡುವ ಎಲ್ಲಾ ಉದ್ಯಮಗಳ ಜ್ಞಾನವಿದೆಯಷ್ಟೇ?

ನಿನ್ನ ರಾಜ್ಯದ ಎಲ್ಲಾ ಕೃಷಿಕರ ಜೊತೆಯಲ್ಲಿ ನಿನಗೆ ಹತ್ತಿರದ ಸಂಪರ್ಕವಿದೆಯಷ್ಟೇ?

ನಿನ್ನ ನೌಕರರು ಪ್ರಾಯೋಗಿಕ ಅನುಭವವಿದ್ದವರೂ, ಭ್ರಷ್ಟಾಚಾರ ಮುಕ್ತರೂ ಆಗಿದ್ದಾರಷ್ಟೇ?

ನಿನ್ನ ಹಾಗೂ ನಿನ್ನ ಪ್ರತಿಸ್ಪರ್ಧಿಗಳ ಬಲಾಬಲಗಳ ಕುರಿತು ಮಾಹಿತಿಯಿದೆಯಷ್ಟೇ? ಅವರಲ್ಲಿ ಇರುವ ರಥ, ಕೋಟೆ, ಆನೆಗಳು, ಕುದುರೆಗಳು, ಪದಾತಿ ಸೈನ್ಯ, ಅಧಿಕಾರಿಗಳು, ಆಹಾರ ವಿತರಣೆ, ಸೈನ್ಯ ಸಂಪತ್ತಿನ ಸಂಖ್ಯೆ, ಆದಾಯವಿದಾಯ, ಧರ್ಮಾಧರ್ಮ ಆಚರಣೆ, ಖರ್ಚುವೆಚ್ಚ ವಿವರ, ಅಂಗಡಿಗಳು ಮತ್ತು ಇನ್ನಿತರ ಅಂಶಗಳ ಜ್ಞಾನವಿದೆಯಷ್ಟೇ ಎಂದು ಪ್ರಶ್ನಿಸುತ್ತಾರೆ.

ಈ ಎಲ್ಲ ಪ್ರಶ್ನೆಗಳು ಸುಶಾಸನಕ್ಕೆ ದಾರಿಯಾಗುವ ಉತ್ತಮ ಅರ್ಥವ್ಯವಸ್ಥೆ ಅಂಶಗಳನ್ನೂ, ಆಡಳಿತಾತ್ಮಕ ಅಂಶಗಳನ್ನೂ ವಿಶದಪಡಿಸುತ್ತವೆ. ಇದು ಉಭಯಕುಶಲೋಪರಿಯ ಭಾಗವಾದರೂ ನಾರದರೇ ಹೆಚ್ಚು ವಿಚಾರಿಸಿಕೊಳ್ಳುವ ಏಕವ್ಯಕ್ತಿ ಸಂಭಾಷಣೆಯ ರೂಪದಲ್ಲಿದೆ. ಮಹಾಭಾರತ ಕಾಲದ ವೃತ್ತೀಯ, ವಾಣಿಜ್ಯ, ವ್ಯಾಪಾರ ವಿಚಾರಧಾರೆಯ ಬಗ್ಗೆ ಒಂದು ಹೊಳಹನ್ನು ಕೊಡುತ್ತದೆ.

ಶಾಂತಿಪರ್ವದ ೬೮ನೇ ಅಧ್ಯಾಯದಲ್ಲಿ ಭೀಷ್ಮನೂ ಈ ಕುರಿತಾಗಿ ವಿವರಿಸುತ್ತಾನೆ. ರಾಜನು ತನ್ನ ಪ್ರಜೆಗಳಿಂದ ಆದಾಯದ ೧/೬ ರಷ್ಟು ಕರವನ್ನು ರಕ್ಷಣವ್ಯವಸ್ಥೆಯ ಭಾಗವಾಗಿ ತೆಗೆದುಕೊಳ್ಳಬೇಕೆನ್ನುತ್ತಾನೆ. ಅದಲ್ಲದೇ (ಶಾಸ್ತ್ರವಿಧಿಯಂತೆ) ಹತ್ತು ವಿಧವಾದ ಅಪರಾಧಿಗಳಿಂದ ಅವರ ಸಂಪತ್ತಿನ ಭಾಗವೋ ಅಥವಾ ಪೂರ್ತಿಯನ್ನೋ (ಅವಶ್ಯಕತಾನುಸಾರ) ಬಲವಂತವಾಗಿಯಾದರೂ ತೆಗೆದುಕೊಳ್ಳಬೇಕೆನ್ನುತ್ತಾನೆ. ಕೃಷಿ ಮತ್ತು ವ್ಯಾಪಾರವಾಣಿಜ್ಯಗಳು ಅದೆಷ್ಟು ಮುಖ್ಯ, ರಾಜ್ಯ ಅದರ ಮೇಲೆ ಅದೆಷ್ಟು ಅವಲಂಬಿತವಾಗಿದೆ ಎನ್ನುವುದನ್ನು ಒತ್ತಿ ಹೇಳುತ್ತಾನೆ.

ರಾಜನಿಗೆ ವೈಶ್ಯರು ಒತ್ತಾಸೆಯಾಗಿರುವುದು ಅದೆಷ್ಟು ಮುಖ್ಯವೆನ್ನುದನ್ನು ಮನದಟ್ಟು ಮಾಡುತ್ತಾನೆ. ರಾಜ್ಯದ ಒಟ್ಟು ವ್ಯಾಪಾರವ್ಯವಸ್ಥೆ ಸುಸೂತ್ರವಾಗಿ ನಡೆಯಬೇಕಾದರೆ ಈ ಒತ್ತಾಸೆ ಅತಿಮುಖ್ಯ. ರಾಜನು ರಾಜ್ಯದ ರಕ್ಷಣಾವ್ಯವಸ್ಥೆ, ಕೋಟೆಗಳನ್ನು ಕಟ್ಟುವ ಯೋಜನೆಗಳ ಕುರಿತು ವೈಶ್ಯರಿಗೆ ತಿಳಿಸಬೇಕು. ರಕ್ಷಣಾ ವ್ಯವಸ್ಥೆ, ರಾಜ್ಯದ ಕಲ್ಯಾಣಕ್ಕೆ ಮಾಡುವ ವೆಚ್ಚ ಮತ್ತು ಇನ್ನಿತರ ವಿಚಾರಗಳನ್ನು ವೈಶ್ಯರಿಗೆ ಆಗಾಗ್ಗೆ ತಿಳಿಸುತ್ತಿರಬೇಕು. ತದನಂತರವೇ, ಅವರಿಂದ ಕರವಸೂಲಿ ಮಾಡಬೇಕು. ಅವರ ಮೇಲಿನ ಕರ ಅವರು ರಾಜ್ಯವನ್ನೇ ಬಿಟ್ಟು ಹೋಗುವಷ್ಟು ಅತಿಯಾಗಿರಬಾರದು. ಅವರಿಗೂ ಅವರ ವ್ಯಾಪಾರಕ್ಕೂ ಅವಶ್ಯಕತಾನುಸಾರ ರಕ್ಷಣಾವ್ಯವಸ್ಥೆಯಿರಬೇಕು. ಅವರ ವ್ಯಾಪಾರ ಸುಸೂತ್ರವಾಗಿಯೂ, ನಿರಂತರವಾಗಿಯೂ ನಡೆಯುವಂತಹ ಅನುಕೂಲಗಳಿರಬೇಕು. ಸರಿಯಾದ ಸಮಯದಲ್ಲಿ ಮಧ್ಯೇ ಮಧ್ಯೇ ಅವರಿಗೆ ಕಾರ್ಯಾನುಸಾರ ಉಡುಗೊರೆಗಳನ್ನು ಕೊಡುತ್ತಿರಬೇಕು. ಅವರ ವಿಶ್ವಾಸವನ್ನು ಸಂಪಾದಿಸಬೇಕು ಎನ್ನುವುದನ್ನು ಒತ್ತಿಹೇಳುತ್ತಾರೆ. ವೈಶ್ಯರು ರಾಜ್ಯದ ಕೃಷಿ, ಪಶುಸಂಗೋಪನೆ ಮತ್ತು ವ್ಯಾಪಾರಗಳಿಂದ ರಾಜ್ಯದ ಅರ್ಥಸಂಪತ್ತನ್ನು ಹೆಚ್ಚಿಸುತ್ತಾರೆಯಾದ್ದರಿಂದ ಅವರಿಗೆ ಉಡುಗೊರೆಗಳನ್ನು ಕೊಟ್ಟು ನೋಡಿಕೊಳ್ಳುವುದು ಅತ್ಯವಶ್ಯವೆನ್ನುವುದನ್ನು ಮನದಟ್ಟು ಮಾಡುತ್ತಾನೆ. ಒಟ್ಟಿನಲ್ಲಿ ರಾಜನು ವ್ಯಾಪಾರಿಗಳೊಡನೆ ಸೌಹಾರ್ದಯುತವಾಗಿದ್ದು ಸರಿಯಾದ ಅರ್ಥವ್ಯವಸ್ಥೆಯಿಂದ ರಾಜ್ಯದ ಐಶ್ವರ್ಯಲಕ್ಷ್ಮಿಯನ್ನು ಹೆಚ್ಚಿಸಬೇಕು ಎನ್ನುವುದನ್ನು ಗಮನಿಸುತ್ತಾನೆ.

ಅರ್ಜುನನು ಸಂಪತ್ತಿನ ಮಹತ್ವವನ್ನು ವಿವರಿಸಿದುದು

ಅರ್ಜುನ ತನ್ನ ಕಾಲದ ಅತ್ಯುನ್ನತ ಧನುರ್ವಿದ್ಯಾ ಪಾರಂಗತನಷ್ಟೇ ಅಲ್ಲದೆ, ಅರ್ಥಶಾಸ್ತ್ರದಲ್ಲಿ ಪರಿಣತನೂ ಆಗಿದ್ದನು. ಸಂಪತ್ತು, ವಾಣಿಜ್ಯವ್ಯವಹಾರ, ವ್ಯಾಪಾರ, ದಂಡನೀತಿಗಳ ಕುರಿತು ಅರ್ಜುನನ ವಿಚಾರಧಾರೆ ಒಳನೋಟವುಳ್ಳದ್ದಾಗಿದೆ.

ವೈಶಂಪಾಯನರು ನುಡಿಯುತ್ತಾರೆ ವಿದುರನ ನಂತರ ಸಂಪತ್ತುಲಾಭಗಳಲ್ಲಿ ಪರಿಶ್ರಮವುಳ್ಳವನೂ, ಧರ್ಮಾರ್ಥಗಳ ಸತ್ಯದ ವಿಚಾರವುಳ್ಳವನೂ ಆದ ಕುಂತೀಪುತ್ರ ಅರ್ಜುನ (ಯುಧಿಷ್ಠಿರನ ವಿಚಾರಮಗ್ನತೆಯನ್ನು ಕಂಡು) ಮುಂದುವರೆಸುತ್ತಾನೆ. “ಮಹಾರಾಜ, ಮರ್ತ್ಯಲೋಕವು ಕ್ರಿಯೆಗೆ ಕ್ಷೇತ್ರವಾಗಿದೆ. ಆದ್ದರಿಂದ ಕ್ರಿಯೆ, ಆಚರಣೆಯನ್ನು ಹಾಡಿಹೊಗಳುತ್ತಾರೆ. ವ್ಯಾಪಾರ, ಕೃಷಿ, ಪಶುಸಂಗೋಪನೆ ಮತ್ತು ಅನೇಕವಿಧವಾದ ಕುಶಲಕರ್ಮಗಳು ಲಾಭತರುವಂತಹ ಆರ್ಥಿಕ ಚಟುವಟಿಕೆಗಳಾಗಿವೆ. ಈ ಎಲ್ಲ ವ್ಯವಹಾರಗಳ ಗುರಿಯು ಲಾಭಾಂಶವೇ ಆಗಿವೆ. ಸಂಪತ್ತೂ, ಲಾಭವೂ ಇಲ್ಲದೆ ಧರ್ಮವೂ ಗೆಲ್ಲಲಾರದು, ಕಾಮವೂ ನೆರೆವೇರಲಾರದು. ಶ್ರುತಿಯೂ ಇದನ್ನೇ ಸಾರಿ ಹೇಳುತ್ತದೆ. ಪಾಪಾತ್ಮರೂ ಸಹ ಸಂಪತ್ತುಳ್ಳವರಾಗಿದ್ದರೆ ಅತ್ಯುನ್ನತವಾದ ಧರ್ಮಕಾರ್ಯಗಳನ್ನು ನಡೆಸಿ, ದುರ್ಲಭವಾದ ಮನೋಭಿಲಾಶೆಗಳನ್ನು ನೆರೆವೇರಿಸಿಕೊಳ್ಳಬಹುದು. ಧರ್ಮವೂ ಕಾಮವೂ ಸಂಪತ್ತಿನ ಎರಡು ಅಂಗಗಳಾಗಿವೆ ಎನ್ನುದನ್ನು ಶ್ರುತಿಯೂ ಹೇಳುತ್ತದೆ. ಅರ್ಥಸಂಪತ್ತಿಯ ಸಂಗ್ರಹದಿಂದ ಧರ್ಮವನ್ನೂ ಕಾಮವನ್ನೂ ಸಾಧಿಸಬಹುದು“. (೧೨.೧೬೧)

ಹೀಗೆ ಅರ್ಜುನನು ಕೃಷಿ, ವ್ಯಾಪಾರ, ಪಶುಸಂಗೋಪನೆ ಮತ್ತು ಕುಶಲಕರ್ಮಗಳು ಲಾಭಾರ್ಥದ ಮೂಲವೆಂದು ಘೋಷಿಸುತ್ತಾನೆ.

ಸ್ಥಿತಿಸಾತತ್ಯಗಳು ಮತ್ತು ಸಂಪತ್ತಿನ ಮಹತ್ವ

ಮುಂದುವರೆದ ಅರ್ಜುನನು ಅರ್ಥಸಂಪತ್ತಿನ ಸಂಗ್ರಹವನ್ನು ವಿವರಿಸುತ್ತಾನೆ. ಅರ್ಜುನನ ವಿಚಾರಧಾರೆ ಸಾವಿರಾರು ವರ್ಷಗಳ, ಅನೇಕ ತಲೆಮಾರುಗಳ ನಂತರವೂ ಪ್ರಸ್ತುತವಾದ ಅಂಶಗಳನ್ನೊಳಗೊಂಡಿದೆ. “ಅರ್ಥಸಂಪತ್ತಿಲ್ಲದೇ ಮನುಷ್ಯನ ಜೀವನ ಸಾಗಲಾರದು. ಸಂಪತ್ತುಳ್ಳವನಿಗೆ ಸ್ನೇಹಿತರಿರುತಾರೆ. ಅವನ ಸುತ್ತ ಪರಿಜನರಿರುತ್ತಾರೆ. ಸಂಪತ್ತುಳ್ಳವನನ್ನು ಪ್ರಪಂಚ ವಿಶೇಷವಾಗಿ ಗುರುತಿಸುತ್ತದೆ. ಅವನು ಜ್ಞಾನಿಯೆಂದೂ ಪರಿಗಣಿತನಾಗುತ್ತಾನೆ. ಅರ್ಥಸಂಪತ್ತಿಲ್ಲದವನು ತನ್ನ ಮನೋಭಿಲಾಷೆಯನ್ನೂ, ಯಾವುದೇ ಮಹತ್ವಪೂರ್ಣವಾದ ವಿಷಯವನ್ನೂ ಸಾಧಿಸಲಾರ. ಆನೆಗಳ ಸದ್ಬಳಕೆಯಿಂದ ಮತ್ತಷ್ಟು ಕಾಡಾನೆಗಳನ್ನು ಹಿಡಿಯುವ ರೀತಿಯಲ್ಲಿ ಸಂಪತ್ತಿನಿಂದ ಮತ್ತಷ್ಟು ಸಂಪತ್ತನ್ನು ಪಡೆಯಬಹುದು. ಧರ್ಮಾಚರಣೆ, ಕಾಮ, ರಾಗದ್ವೇಷ, ವಿದ್ಯೆ, ಸಾಹಸಕ್ರಿಯೆಗಳು, ಸಮಾಜಗೌರವಘನತೆ ಇವೆಲ್ಲವೂ ಸಂಪತ್ತಿನಿಂದ ಸಾಧಿತವಾಗುತ್ತವೆ, ಪ್ರಾಪ್ತಿಯಾಗುತ್ತದೆ. ಸಂಪತ್ತಿನಿಂದ ಕುಟುಂಬಕ್ಕೂ ಗೌರವಪ್ರಾಪ್ತಿಯಾಗುತ್ತದೆ“.

ಯುಧಿಷ್ಠಿರನೊಡನೆ ತನ್ನ ಮಾತುಕತೆ ಮುಂದುವರೆಸುತ್ತಾ ಶರಶಯ್ಯೆಯಲ್ಲಿ ಮಲಗಿದ ಭೀಷ್ಮನೂ ಇದನ್ನೇ ಅನುಮೋದಿಸುತ್ತಾನೆ. ರಾಜನೀತಿಯು ಧರ್ಮಾರ್ಥ, ಕಾಮಗಳ ಒಟ್ಟು ಸಾಧನೆಗೆ ಅನುಗುಣವಾಗಿರಬೇಕು ಎನ್ನುವುದನ್ನು ಒತ್ತಿ ಹೇಳುತ್ತಾನೆ. ಶ್ರುತಿವಾಕ್ಯವಾದ ಇದರ ಅನುಸಾರವಾಗಿ ನಡೆವ ಯಾವ ರಾಜನೂ ಅರ್ಥಸಂಪತ್ತಿನಿಂದ ಕೂಡಿದವನಾಗಿ ತನ್ನ ಪ್ರಜಾಪರಿಪಾಲನೆಯಲ್ಲಿ ಸಫಲನಾಗುತ್ತಾನೆ. (೧೨.೧೩೮)

ಇದೊಂದು ಕುಡಿನೋಟವಷ್ಟೇ. ಮಹಾಭಾರತದಲ್ಲಿ ಆ ದಿನಗಳ ಅರ್ಥನೀತಿ ವ್ಯಾಪಾರವ್ಯವಸ್ಥೆಯ ಕುರಿತ ಅನೇಕ ಸಂಭಾಷಣೆಗಳುಚರ್ಚೆಗಳೂ ಇವೆ. ಆದ್ದರಿಂದಲೇ ಮಹಾಭಾರತಲ್ಲಿರುವುದೇ ನಾವು ಎಲ್ಲಿಯೂ ಕಾಣುವುದು. ಮಹಾಭಾರತದಲ್ಲಿ ಕಾಣಲಾರದ್ದನ್ನು ಮತ್ತೆಲ್ಲಿಯೂ ಕಾಣಲಾರೆವುಎಂದು ಪರಂಪರೆಯು ಘೋಷಿಸಿರುವುದು. ಧರ್ಮ ಮೋಕ್ಷಗಳನ್ನು ಅರ್ಥಕಾಮಗಳಿಂದ ಹೊರತು ಪಡಿಸಿ ನೋಡುವುದು ಭಾರತೀಯ ಸಂಸ್ಕೃತಿಯ ದೃಷ್ಟಿಯಲ್ಲ. ಧರ್ಮಾರ್ಥ ಕಾಮಮೋಕ್ಷಗಳೆಲ್ಲವೂ ಒಟ್ಟಾಗಿಯೇ ನಮಗೆ ಪ್ರಸ್ತುತ ಎನ್ನುವುದನ್ನು ಈ ಸಂಭಾಷಣೆಗಳು ಒತ್ತಿ ಹೇಳುತ್ತವೆ. ವೈರಾಗ್ಯ ಮೂರ್ತಿಗಳೂ, ದೇವರ್ಷಿಗಳೂ ಆದ ನಾರದರು ರಾಜನೊಬ್ಬನನ್ನು ವಾಣಿಜ್ಯವ್ಯವಹಾರಗಳ ಕುರಿತಾಗಿ ಪ್ರಶ್ನಿಸುವುದು ಭಾರತೀಯ ಸಂಸ್ಕೃತಿಯ ಈ ಸಂಪೂರ್ಣ ದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ, ಒಂದು ಪ್ರತಿಮೆಯಾಗಿದೆ.

ಈ ಲೇಖನ indictoday.com ನಲ್ಲೇ ಪ್ರಕಟವಾದ ಡಾ|| ಲಕ್ಷ್ಮೀ ತೆಲಿದೇವರ ಅವರ ಆಂಗ್ಲ ಲೇಖನದ ಕನ್ನಡಾನುವಾದವಾಗಿದೆ.
(This is a Kannada translation of an article written in English by Dr. Lakshmi Telidevara)

(Image credit: Mythgyaan)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply