close logo

ಪುಸ್ತಕ ಪರಿಚಯ : ಪುಟಗಳ ನಡುವಣ ನವಿಲುಗರಿ –  ಅಭಿಜಾತ ಭಾರತೀಯ ಕಥಾಕಲಾಪ

“ಪುಟಗಳ ನಡುವಣ ನವಿಲುಗರಿ”,  ಶತಾವಧಾನಿ ಡಾ. ಆರ್ ಗಣೇಶರ ಇತ್ತೀಚಿನ ಕಥಾ ಸಂಕಲನ.

ಈ ಪುಸ್ತಕದ ಅನೇಕ ಕಥೆಗಳು ನಾಡಿನ ಹೆಸರಾಂತ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಇವೆಲ್ಲವನ್ನೂ ಸಂಕಲಿಸಿ  ಕನ್ನಡಿಗರಿಗೆ ಒದಗಿಸಿರುವುದು ಬೆಂಗಳೂರಿನ “ ವಸಂತ ಪ್ರಕಾಶನ” . 2024, ಏಪ್ರಿಲ್‌ ತಿಂಗಳಲ್ಲಿ ಲೋಕಾರ್ಪಣೆಗೊಂಡ ಪುಸ್ತಕ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಇನ್ನೂರಕ್ಕೂ ಹೆಚ್ಚು ಪುಠಗಳಿರುವ ಗಣೇಶರ ಪ್ರೌಡ ಭಾಷೆಯಲ್ಲಿ ಮೂಡಿರುವ ಈ ಪುಸ್ತಕ ವಾರಾಂತ್ಯದ ಓದಿಗೆ ಉತ್ತಮ ಆಯ್ಕೆ.

ಇಲ್ಲಿಯ ಕಥೆಗಳು  ಸಂಸ್ಕೃತದ ಕಾವ್ಯನಾಟಕಗಳ ವಿದ್ಯಾರ್ಥಿಗಳಿಗೆ  ಹೊಸ ಹೊಳವನ್ನು ತಂದರೆ, ಸಂಸ್ಕೃತ ಕಾವ್ಯ ನಾಟಕಗಳ  ಪರಿಚಯವಿಲ್ಲದಿರುವವರಿಗೆ ಹೊಸ ಲೋಕ್ಕೇ  ಕರೆದೊಯ್ಯುತ್ತವೆ! ಭಾರತೀಯ ಅಭಿಜಾತ ಕಥಾ ಕಲಾಪ ಎಂಬ ಉಪಶೀರ್ಷಿಕೆ ಹೊತ್ತ ಈ ಪುಸ್ತಕ ಆರ್ಷಕಾವ್ಯಗಳನ್ನಾದರಿಸಿದ ಕಥೆಗಳು ಹೇಗೆ ಮೂಲ ಕವಿಯ ಆಶಯಕ್ಕೆ ವಿರುದ್ಧವಾಗದೆಯೇ  ಮೂಡಬಹುದು, ಹೇಗೆ ಒಂದು ಸಾಹಿತ್ಯದ ಕೃತಿ ಹಲವು ಕಾಲ ಘಟ್ಟಗಳ ಸಂಸ್ಕೃತಿಯನ್ನು ಅನಾವರಣ ಗೊಳಿಸಬಹುದು, ಪೋಣಿಸಬಹುದು ಎಂಬುದಕ್ಕೆ ಮಾದರಿ.  ಅಭಿಜಾತ ಭಾರತೀಯ ಕಾವ್ಯ, ಕಲೆ , ಸಂಸ್ಕೃತಿಗಳ ಸುತ್ತ  ಹೆಣದಿರುವ ಕಥೆಗಳು, ಆ ಕಾಲಘಟ್ಟವನ್ನು ಇಂದಿನ ದಿನದ ಕಲಾಪಕ್ಕೆ ಕಾಲಕ್ಷೇಪಕ್ಕೆ ಆಪ್ಯಾಯವೆನಿಸುವುದು  ಎರಡು ಕಾರಣಗಳಿಂದ. ನಮ್ಮ ಅಭಿಜಾತ ಕಾವ್ಯಗಳ, ಸಂಸ್ಕೃತಿಯ ಜೀವಸತ್ಸತ್ತ್ವ  ಹಾಗು ಗಣೇಶರ ಕೌಶಲ್ಯ.

ಪುಸ್ತಕದಲ್ಲಿರುವ ಹತ್ತು ಕಥೆಗಳ ಸಾರಾಂಶ ಹೀಗಿದೆ .

ಸೀತಾಸಂದೇಹ

  • ಈ ಕಥಾನಕವು ವಾಲ್ಮೀಕಿಗಳ ಆಶ್ರಮದಲ್ಲಿ ಸೀತೆಯು ತನ್ನ ಅವಳಿ ಮಕ್ಕಳ ಜೊತೆ ಸಾಮಾನ್ಯ ಹೆಣ್ಣಿನಂತೆ ಬದುಕು ಸಾಗುತ್ತಿರುವಾಗ,  ಅಯೋಧ್ಯೆಯಿಂದ ಬಂದ ಸುದ್ಧಿ ಸೀತೆಯನ್ನು ತಳಮಳಕ್ಕೀಡು ಮಾಡುವ ರಸವತ್ತಾದ ಸನ್ನಿವೇಶ.  ಪತ್ನಿವಿಹೀನನಿಗೆ ಯಜ್ಞಾಧಿಕಾರವಿಲ್ಲದಾಗ  ರಾಮ ಯಜ್ಞದೀಕ್ಷಿತನಾಗಿದ್ದಾನೆ ಎಂದರೆ ಅವನಿಗೆ ಮರುವಿವಾಹವಾಗಿರಬಹುದೇ? ಈ ಸಂದೇಹ ಸೀತೆಯನ್ನು ಬಸವಳಿಯುವಂತೆ ಮಾಡುತ್ತದೆ. ನಮ್ಮೆಲ್ಲರಿಗೂ ಗೊತ್ತಿರುವ ಸೀತೆಯ ಸುವರ್ಣ ಪುತ್ತಳಿಯ ಕಥೆಗೆ ಹೊಸ ಕಾಣ್ಕೆಯನ್ನು ನೀಡಿದ್ದಾರೆ ಶತಾವದಾಣಿಗಳು. ಹಾಗೆ ಸೀತಾರಾಮರ ಪ್ರೇಮದ ಪರಾಕಾಷ್ಠೆಯನ್ನು ಸೂಚಿಸುತ್ತಾರೆ.

ಆತ್ಮಾನಂ ಮಾನುಷಂ ಮನ್ಯೇ

  • ರಾಮನೇ ಹೇಳಿರುವ ಮಾತನ್ನು ರಾಮನನ್ನೇ ಪರೀಕ್ಷಿಸುವ ಕಥೆಗೆ ಶೀರ್ಷಿಕೆಯಾಗಿ ಹೊಂದಿಸಿರುವುದು ಸುಂದರ. ೧೪ ವರ್ಷಗಳೂ ನಂದಿಗ್ರಾಮದಿಂದ ರಾಜ್ಯವನ್ನು ನೋಡಿಕೊಂಡ ಭರತನಂಥ ಸೋದರನನ್ನು ರಾಮ ಒಂದು ಕ್ಷಣ ಸಂದೇಹಿಸಿದ ಸಂಗತಿಯ ಸುತ್ತ ಹೆಣೆದ ಕಥೆ. ಕೊನೆಯಲ್ಲಿ ಆದಿಕವಿಗಳು ತನ್ನನ್ನು  ಎಷ್ಟೇ ಹಾಡಿ ಹೊಗಳಿದರೂ “ ನಾನು ಕೇವಲ ಒಬ್ಬ ಮನುಷ್ಯ ಮಾತ್ರ “ ಎಂದು ರಾಮನ ಕೈಲಿ ಹೇಳಿಸುವ ರಾಮಾಯಣದ ಓದಿಗೆ ಹೊಸ ದೃಷ್ಟಿ ಕೊಡುವ ಪ್ರಯತ್ನ ಎನ್ನಬಹುದು.

ಶತಶೃಂಗಪರ್ವತ

  • ಈ ಕಥೆಯಲ್ಲಿ ಮಾದ್ರಿ ಮತ್ತು ಪಾಂಡುವಿನ ಕೊನೆಯ ಮಿಲನದ ಚಿತ್ತಾರವಿದೆ. ಎಲ್ಲ ಜೀವಿಗಳಲ್ಲೂ ಬದುಕಿನ ಮೂಲಸೆಲೆಯಾಗಿರುವ ಸೃಷ್ಟಿಸಬೇಕೆಂಬ ತೀವ್ರವಾದ ಹಂಬಲ ಹಾಗು ಬದುಕಬೇಕೆಂಬ ಆಸೆಗಳ ನಡುವಿನ ಸಂಘರ್ಷದ ಚಿತ್ರಣ. ಪಾಂಡುವಿನ ಮರಣಾನಂತರದ ಅನುಭವವನ್ನು ಹೇಳುವ ಕಥೆಯ ಅನ್ತ್ಯಅಂತ್ಯ ಸುಂದರವಾಗಿದೆ. ಆಶ್ಚರ್ಯವೆನಿಸುವಷ್ಟು ವಿಸ್ತೃತವಾದ  ಶೃಂಗಾರದ ಕಥನ . ಮಹಾಭಾರತದ ಈ ಪ್ರಸಂಗವನ್ನು ವಿಭಿನ್ನವಾದ ದೃಷ್ಟಿಕೋಣದಿಂದ ಬೆಳೆಸಿರುವ ಕಥೆ.

ಗೋಪಿಕೆಯ ಪತ್ರ

  • ಬೃಂದಾವನವನ್ನು ಬಿಟ್ಟು ಭರತವರ್ಷದ ರಾಜಕಾರಣಕ್ಕೆ ಹೋದ ಕೃಷ್ಣ ಮತ್ತೆಂದೂ ಬೃಂದಾವನಕ್ಕೆ ಬರದೇ ಇದ್ದಾಗ ಕೃಷ್ಣನ ಸ್ನೇಹದ ನೆನಪಿಗೆ, ಗೊಲ್ಲತಿಯರ ಪ್ರೇಮಕ್ಕೆ ಹಿಡಿದ ಕನ್ನಡಿ.  ಕೃಷ್ಣನಿಗೆ ನೆಮ್ಮದಿಯ ಸಾವು ಬರಲಿ ಎಂಬ ಹರಕೆಯ ಜೊತೆಗೆ ನಮ್ಮನ್ನು ಚಿಂತನೆಗೆ ಹಚ್ಚುವ ಸುಂದರವಾದ ಕಥೆ. ಲೋಕದ ಎಲ್ಲ ನಾಯಕರ ಕಥೆ.  ʼ ತಲೆತಟ್ಟಿ ಬೆನ್ನುಸವರಿ ನೆಮ್ಮದಿ ನೀಡಬಲ್ಲವರು ಆ ನಿನ್ನ ಪಾಂಡವರೂ ಅಲ್ಲ, ಆ ನಿನ್ನ ಯಾದವರೂ ಅಲ್ಲ; ಹೆಮ್ಮೆಯಿಂದ ಹೇಳುತ್ತೇನೆ ಗೋವಿಂದ! ಈ ಗೊಲ್ಲಿತಿಯರಿಗಷ್ಟೇ ಅದು ಸಾಧ್ಯ” ಎಂದು ಹೇಳುವ ಸಂಗತಿಗಳು ಭಾವೋದ್ದೀಪದ ಪರಾಕಾಷ್ಟೆ।

ಬೆಳಕಿನ ಕತ್ತಲೆ” 

  • ನನಗೆ ಬಹಳ ಇಷ್ಟವಾದ ಕಥೆ. ನರಕಾಸುರನನ್ನು ಸತ್ಯಭಾಮೆಯ ಮಗ ಎಂಬ ಸತ್ಯದ ಮೇಲೆ ಬೆಳಕ ಚೆಲ್ಲಿ ಅವಳ ಹೃದಯದಲ್ಲಿ ಕತ್ತಲೆ ಮೂಡಿಸುವ ಅನನ್ಯ ಕಥಾ ಸೃಷ್ಟಿ. ಬುದ್ಧಿ ನರಕಾಸುರ ನಂತ ಲಂಪಟನನ್ನು ಕೊಂದದ್ದು ಸರಿ ಎಂದು ಒಪ್ಪಿಕೊಳ್ಳುತ್ತಿದೆ. ಆದರೆ ಹೃದಯ ಅಯ್ಯೋ ಹೆತ್ತಮಗನನ್ನು ನನ್ನಿಂದಲೇ ವಿಧಿ ಕೊಲ್ಲಿಸಿತಲ್ಲಾ ಎಂದುಮಮ್ಮಲ ಮರುಗುತ್ತಿದೆ. ಸತ್ಯಭಾಮೆಯು ಅನುಭವಿಸುವ ಬುದ್ಧಿ-ಭಾವಗಳ ತಾಕಲಾಟ ನನಗೆ ಗೊತ್ತಿರುವ ಮಟ್ಟಿಗೆ ಹೊಸ ಬೆಳಕು. ಕಥೆ ಕೃಷ್ಣನ ಅಷ್ಟಮಹಿಷಿಯರ ಸ್ವಭಾವಗಳು, ಸಂಬಂಧಗಳ ಬಗ್ಗೆಯೂ ಬೆಳಕ ಚೆಲ್ಲುತ್ತದೆ

ಪ್ರಣಯಪತ್ರಗಳ ಪದರಗಳಲ್ಲಿ” 

  • ಕವಿ ಮರೆತ ಒಂದು ಸುಂದರ ಸನ್ನಿವೇಶದ ಮೆಲುಕು. ಶತವಾದಾನಿಗಳ ಕಲ್ಪನೆ ಗುಪ್ತಸಾಮ್ರಾಜ್ಯದ ಹಲವಾರು ಐತಿಹಾಸಿಕ ಸಂಗತಿಗಳು ಈ ಕಥೆಗೆ ವಸ್ತು. ಆದರೆ ಕಥೆಯಿಂದ ಗಣೇಶರು ಕಾಳಿದಾಸನನ್ನೂ,ಗುಪ್ತಯುಗವನ್ನು ಕುರಿತು ಬರೆಯುತ್ತಿರುವ ಕಾದಂಬರಿಯ ಸುದ್ದಿ ಹೊರಬಂದಿರುವುದು ಸಂತಸದ ವಿಷಯ

“ ಶ್ಯಾಮಲ ಶಾರದೆ” ಮತ್ತು “ವಾರಣಾಸಿಯ ವಾರಾಂಗನೆ”   ಭಾರತದ ಕವಿಯತ್ರಿ ಗಳನ್ನು ಪರಿಚಯಿಸುವ ಗಣೇಶರ ಉದ್ದೇಶಕ್ಕೆ ಹಿಡಿದ ಕನ್ನಡಿ.

ಶ್ಯಾಮಲ ಶಾರದೆ

  • ವಿಜ್ಜಿಕೆ, ಎಂದು ಪ್ರಸಿದ್ಧಳಾದ ಇಮ್ಮಡಿ ಪುಲಿಕೇಶಿಯ ಸೊಸೆ . ಚಂದ್ರಾದಿತ್ಯನ ಪತ್ನಿ, ಸಂಸ್ಕೃತದ ಸುಪ್ರಸಿದ್ಧ ಕವಯಿತ್ರಿ. ರಾಜ್ಯಭಾರದಲ್ಲೂ ಕುಶಲೆಯಾಗಿದ್ದವಳ.ಸುತ್ತ ಹೆಣೆದಿರುವ ಕಥೆಇದು. ಕಥೆಯಲ್ಲಿ ಬಾಣ, ದಂಡಿ, ಶಂಕರಾಚಾರ್ಯರು ಬರುವುದು ವಿಶೇಷವಾದ ಕಾಲದ ಬಗೆಗಿನ ಕಾಣ್ಕೆ

ವಾರಣಾಸಿಯ ವಾರಾಂಗನೆ

  • ಮತ್ತೊಬ್ಬ ಸಂಸ್ಕೃತದ ಶ್ರೇಷ್ಠ ಕವಯಿತ್ರಿ, ಕಾಶ್ಮೀರದ ವಿಕಟನಿತಂಬೆಯ ಬದುಕಿನ ಸುತ್ತ  ವಿಸ್ತರಿಸಿರುವ ಕಥೆ. ವೈದುಷ್ಯವಿದ್ದ ವಿಕಟನಿತಂಬಿ ವಾರಣಾಸಿಯನ್ನು ಸೇರಿ ವಾರಾಂಗನೆಯಾಗುವ ಆಶ್ಚರ್ಯದ ಹಾಗೆ ನಮ್ಮ ಸಂಸ್ಕೃತಿಯ ಔದಾರ್ಯದ ಕಥೆ.  ಇಲ್ಲಿ ಕಲ್ಪನೆಯ ಅಂಶವೇ ಅಧಿಕವಾಗಿದೆ.

ʼಭವದ ಬಸುರಿನ ಭಾವʼ ಸಂಸ್ಕೃತದ ಮತ್ತೊಬ್ಬ ಶ್ರೇಷ್ಠ ನಾಟಕಕಾರ ಭವಭೂತಿಯ ಜೀವನ ಕಥೆ. ಭವಭೂತಿಯ ಸಾಹಿತ್ಯದ ವಿಶ್ಲೇಷಣೆಯ ಜೊತೆಗೆ ಆ ಕಾಲದ ಸಂಸ್ಕೃತಿ, ಸಾಹಿತ್ಯದ ಪರಿಸರವನ್ನು ಪರಿಚರಿಸುವ ಕೃತಿ

ಗಣೇಶರು  ಬರೆದಿದ್ದಾರೆಂದರೆ ಭಾಷೆಯ ಉತ್ಕೃಷ್ಟತೆಯ ಬಗ್ಗೆ ಹೇಳಲೇಬೇಕಿಲ್ಲ. ಸಾಹಿತ್ಯಮೀಮಾಂಸೆಯ ಪರಿಕರಗಳ ಅಳತೆಗೋಲಿನಲ್ಲಿ ಅಳೆಯಬಹುದಾದಷ್ಟು ದೃಷ್ಟಾಂತಗಳು, ಉದಾಹರಣೆಗಳಿಂದ,. ಅಂತರ್ನೋಟ, ವಿಚಾರಗಳು ಅಪಾರವಾಗಿ ಈ ಪುಸ್ತಕದಲ್ಲಿ ಮೂಡಿವೆ.

ಪುಸ್ತಕ ಓದಿದಾಗಲೇ ಆ ಅನುಭವದ ಸಾಂದ್ರತೆ  ಓದುಗರಿಗೆ ಸಿಗುವುದು ಸಾಧ್ಯವಾದೀತು. ಈ ಅಂಕಣದಲ್ಲಿ , ನನಗೆ ಅನಿಸಿದ ಕೆಲವು ವಿಶೇಷ ಗಳನ್ನು ತಿಳಿಸುವುದಷ್ಟೇ ನನ್ನ ಜವಾಬ್ದಾರಿ. ಆ ಮೂಲಕ ನಿಮಗೆ ಪುಸ್ತಕ ಓದಬೇಕು ಎನಿಸಿದರೆ ಈ ಅಂಕಣಕ್ಕೆ ಸಾರ್ಥಕತೆ.

ಮಿತ್ರ ಶಶಿಕಿರಣರವರು ಹಿನ್ನುಡಿಯಲ್ಲಿ, ಪುಸ್ತಕದ ಹೆಸರಿನ ಬಗ್ಗೆ ಬಹಳ ಸುಂದರ ನುಡಿಗಳನ್ನಾಡಿದ್ದಾರೆ. ಆದರೆ ನನಗೆ ಅನಿಸಿದ್ದು, ಈ ಪುಸ್ತಕ ಆರ್ಷ ಕಾವ್ಯಗಳ, ಪಾತ್ರಗಳ ಜೀವನದ ಪುಟಗಳ ನಡುವಣ ನವಿಲು ಗರಿ. ಅಷ್ಟೆ ಅಲ್ಲ ಓದುಗರಿಗೆ “ನಲಿವ ಗರಿ”

ಕಥೆಗಳು ಆಪ್ತವಾಗುವುದು, ಆಕರ್ಷಣೀಯವಾಗುವುದು, ಗಣೇಶರು ಗುರುತಿಸಿರುವ ಹೊಸ ಕಾಣ್ಕೆಗಳು ಮತ್ತು ಹೊಸೆದಿರುವ ಪ್ರಸಂಗಗಳಿಂದ! ರಾಮ ಸೀತೆಯನ್ನು ತೊರೆದ ನಂತರ  ಯಜ್ಞದೀಕ್ಷಿತನಾದಾಗ ಬರುವ ಸಂಕಟ, ಹೇಗೆ ಸಮಯ ರಾಮನನ್ನೂ ವಿಹ್ವಲ ಮಾಡಿತು ಎಂಬ ಕಾಣ್ಕೆ, ನರಕಾಸುರನನ್ನು ಸತ್ಯಭಾಮೆಯ ಮಗ ಎಂದಾಗ ಕಾಡುವ ಒಂದು ಪುಟ್ಟ ಸಂಕಟ, ಹೀಗೆ ಕಥಾವಸ್ತು ಗಳನ್ನೇ ಪುಟಗಳ ನಡುವೆ ಹೆಕ್ಕಿ ತೆರದಿದ್ದಾರೆ ಗಣೇಶರು. ಸೀತೆ, ಭರತ, ಶಾಕುಂತಲೆ, ಮೇನಕೆ, ಮಾದ್ರಿ, ಕುಂತಿ ಹೀಗೆ ಹಲವು ಪಾತ್ರಗಳ ಜೀವನದಲ್ಲಿ ನಾವು ಈವರೆಗೆ ಗಮಣಿಸದೆ ಇದ್ದ ಎಲೆಯೊಂದನ್ನು ಗಣೇಶರೂ ಕಾಣಿಸುತ್ತಾರೆ.

ನಮ್ಮ ಕಾಲದ ಅತಿ ಶ್ರೇಷ್ಠ ಸಾಂಸ್ಕೃತಿಕ ವಕ್ತಾರರಾದ ಗಣೇಶರು,  ಕಥಾರಚನೆಯ  ಓಘಕ್ಕೆ ಅಡಚಣೆ ತರದೆ ನಮ್ಮ ಹಬ್ಬ, ಆಚರಣೆಗಳ, ಸಂಸ್ಕೃತಿ, ಸಲಕರಣೆಗಳ ಬಗ್ಗೆ ಮಾಹಿತಿ ನೀಡುತ್ತಲೇ ಬರುತ್ತಾರೆ. ಉದಾ. ಹಿಂದೆ ಪುಸ್ತಕಗಳನ್ನು ಪ್ರತಿ ಮಾಡುತ್ತಿದ್ದ ವಿಧಾನ, ಆಚರಣೆಯಲ್ಲಿದ್ದ ಹಬ್ಬಗಳು , ನಾಟಕ ತಂಡಗಳ ರಚನೆ, ಗಣಿಕಾವೃತ್ತಿಯ ಗಹನತೆ ಹೀಗೆ ಬಹಳಷ್ಟು ಪ್ರಸಂಗಗಳು ಅಂದಿನ ಜನಜೀವನ, ಬದುಕಿದ ವಿದಾನ ಹೀಗೆ ಇರಬೇಕು ಎನ್ನುವಷ್ಟು ಸಹಜತೆಯಿಂದ ಮೂಡಿ ಬಂದಿವೆ.

ಇಡೀ ಪುಸ್ತಕದಲ್ಲಿ  ಉನ್ನತ ಶೃಂಗಾರ ಹಾಗು ತೀವ್ರ ವೈರಾಗ್ಯಗಳ ಸಮನ್ವಯ ಎದ್ದು ಕಾಣುತ್ತದೆ.  ಮಡಿವಂತ ಅಭಿಮಾನಿಗಳು ಅಚ್ಚರಿ ಪಡುವಷ್ಟು ಶೃಂಗಾರ, ರಾಸಿಕ್ಯ ತುಂಬಿದ ಕಥೆಗಳು ಪುಸ್ತಕಕ್ಕೆಕಳೆ ತಂದಿವೆ. ಗಣೇಶರು ಬಹಳವಾಗಿ ಗೌರವಿಸುವ ಡಿವಿಜಿ ಇಂದು ಬದುಕಿದ್ದರೆ , ಗಣೇಶರ ಶೃಂಗರೋಪಾಸನೆ ನೋಡಿ ಬಾಯಿ ಚಪ್ಪರಿಸಿ, ಬೆನ್ನ ಮೇಲೆ ನಾಕು ಗುದ್ದು ಹಾಕಿ ಮೆಚ್ಚುಗೆ ನೀಡುತ್ತಿದ್ದರು ಎಂಬುದು 100% ಸತ್ಯ. ಪಾಂಡುವಿನ ವಿರಹದ ವಿವರವನ್ನು . ಗಣೇಶನ ಮೂಲಕ ತೋರಿಸುವ ಗಣೇಶರೂ ತೋರಿಸಹೊರಟಿರುವುದು, ಭಾರತದ ಅಂದಿನ ಸಮಾಜದಲ್ಲಿನ ಉದಾರತೆ, ಮಡಿವಂತಿಕೆ ಮೀರಿದ ಜೀವನ ಪ್ರೀತಿ ಮತ್ತು ಸತ್ಯದ ದೃಷ್ಟಿ. ಕುಮಾರವ್ಯಾಸ ಗಣೇಶರೂ ಮೆಚ್ಚುವ ಕವಿಯಷ್ಟೆ. ಪುಸ್ತಕದುದ್ದಕ್ಕೂ ನನಗೆ ಕುಮಾರವ್ಯಾಸನ ರೂಪಕಗಳ, ಹಾಸ್ಯದ ಸೊಗಡು ಎದ್ದು ಕಾಣುತ್ತದೆ, ಉದಾಹರಣೆಗೆ ಪಾಂಡುವಿನ ವಿರಹದ ಪ್ರಸಂಗ ಕುಮಾರವ್ಯಾಸನ ಅಸಾಮಾನ್ಯ ಎನ್ನಬಹುದಾದ ಖಾಂಡವ ದಹನದ ಪ್ರಸಂಗವನ್ನು ನೆನಪಿಸಿದ್ದು , ತೀಕ್ಷ್ಣತೆಯ ಪರಿಭಾಷೆಯ ಮೂಲಕ. ಅಷ್ಟೇ ಏಕೆ ಸ್ವರ್ಗದ ನಿರರ್ಥಕಥೆ, ದೇವತೆಗಳ ಸಾರವಿಲ್ಲದ ಬದುಕಿನ ಮೇಲಿನ ವ್ಯಂಗ್ಯ ನಗೆಯನ್ನಷ್ಟೇ ಉಕ್ಕಿಸುವುದಿಲ್ಲ ಆದರೆ, ನಮ್ಮನ್ನು ಆಲೋಚನಾಶೀಲರನ್ನಾಗಿಸುತ್ತದೆ.

ವಿಶೇಷ ಸೂಚನೆ: ಪುಸ್ತಕದಲ್ಲಿ ಗಣೇಶರು ಕೆಲವು ಗುಟ್ಟುಗಳನ್ನು ಬಿಟ್ಟು ಕೊಟ್ಟಿದ್ದಾರೆ! ಕಾಳಿದಾಸನ ಬಗ್ಗೆ ಬರೆಯುತ್ತಿರುವ ಹೊಸ ಕಾದಂಬರಿಯ ಪ್ರಸ್ತಾಪ, ಎಲ್ಲಾ ಗಣೇಶರ ಅಭಿಮಾನಿಗಳಿಗೆ ಸಕ್ಕರೆ ತಿಂದಷ್ಟು ಖುಷಿ ನೀಡುವುದು ಸತ್ಯ. ಭವಭೂತಿಯ ಬಹಳಷ್ಟು  ಚಿಂತನೆ ಗಣೇಶರದೇ ಇರಬೇಕು ಎಂದು ಬಹಳಷ್ಟು ಜನರಿಗೆ ಅನ್ನಿಸದೆ ಇರದು. ತಂತ್ರದ ದೃಷ್ಟಿಯಿಂದ ಗಮನಿಸಿದಾಗ ನನಗನಿಸಿದ್ದು, ಕಾಳಿದಾಸನ ಕಥೆ , ಪಾಂಡುವಿನ ಕಥೆಗಳಲ್ಲಿ ಕಥೆಯೊಳಗಿನ ಕಥನ ತಂತ್ರವನ್ನು ಬಳಸದೆ ಇದ್ದರೆ , ಕಥೆಗಳು ಹೆಚ್ಚು ವಿಷಯದ ಮಟ್ಟಿಗೆ ಆಪ್ತವಾಗಬಹುದಿತ್ತು. ಸಂಭಾಷಣೆಗಳ ಮೂಲಕ ಕಥೆಯನ್ನು ತೆರೆದಿಡುವ ಅಗತ್ಯ ಕಾಣಿಸಲಿಲ್ಲ.

ಕಡೆಯದಾಗಿ ಒಂದು ಮಾತು – ಬಹಳಷ್ಟು ಜನರಿಗೆ ತಿಳಿದುರುವಂತೆ ಗಣೇಶರೂ ಸಾವಿರ ಅಷ್ಟಾವಧಾನಗಳ ಸರದಾರ. ಗಣೇಶರ ಯಾವುದೇ ಅವಧಾನದಲ್ಲಿ ಈ ಮಟ್ಟದ ಎರಡು ಪುಸ್ತಕಗಳಿಗೆ ಬೇಕಾದ ಕಲ್ಪನೆ/ ಕಾವ್ಯಗಾರಿಕೆ ಸುಲಭವಾಗಿ ಸಿಗುತ್ತದೆ. ಉದಾಹರಣೆಗೆ “ಸೀತೆ ಸಂದೇಹಿಸಿದಳು ರಾಮನನು” ಎಂಬ ಸಮಸ್ಯೆಯ ಪೂರಣದ ನಡುವೆ, ನಾಲ್ಕು ಸ್ತ್ರೀ ಪತ್ರಗಳ ಮೇಲಿನ ಆಶು ಕವಿತೆ, ಪುಸ್ತಕದಲ್ಲಿ ಕಥೆಯಾಗಿರುವ ನಾಲ್ಕು ಕವಿಗಳ ಕಾವ್ಯ ವಾಚನದ ಜೊತೆ ಒಳ್ಳೆಯ ಅಪ್ರಸ್ತುತ ಪ್ರಸಂಗಿಯೊಬ್ಬರಿದ್ದರೆ , ಈ ಪುಸ್ತಕದ ಎಲ್ಲ ಕಥೆಗಳ ವಸ್ತು ಸಿದ್ದವಾಗುತ್ತದೆ.

ಇದರರ್ಥ ಗಣೇಶರ ಪ್ರತೀ ಅವಧಾನದಲ್ಲಿ ಈ ಮಟ್ಟದ ಎರಡು ಕಥಾ ಸಂಕಲನದ ಸಾಧ್ಯತೆ ಇದೆ ಎಂಬುದು . “ಇದು ಗಣೇಶರ ವಿಷಯ ವ್ಯಾಪ್ತಿಗೆ, ಕ್ರಿಯಾತ್ಮಕಥೆಗೆ ನಾವು ಪಡಬೇಕಾದ ಅಚ್ಚರಿ” ಹಾಗು ಗಣೇಶರು ಮತ್ತು ಅಷ್ಟಾವಧಾನದ ನಡುವೆ ಇರುವ “ಇದಕ್ಕಾಗಿ ನೀವು , ನಿಮ್ಮಿಂದ ಮಾತ್ರ ಇದು” ಎಂಬ ಮಟ್ಟದ ಬಾಂದವ್ಯ

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.