ಸಾಹಿತ್ಯ ಪ್ರಕಾಶನ ಪ್ರಕಟಿಸಿರುವ ಸಹನಾ-ರವರ 750+ ಪುಟಗಳ “ಮಾಗಧ” ಕಾದಂಬರಿ ಕನ್ನಡದಲ್ಲಿ ಬಂದಿರುವ ಅತಿದೊಡ್ಡ ಕಾದಂಬರಿಗಳಲ್ಲಿ ಒಂದು. ಇತ್ತೀಚೆನ ದಿನಗಳಲ್ಲಿ ಐತಿಹಾಸಿಕ ಕಾದಂಬರಿಗಳನ್ನು ಬರೆಯುವ ಪ್ರವೃತ್ತಿ ಹೆಚ್ಚುತ್ತಿದ್ದರೂ, ಈ ಕಾದಂಬರಿ ಬರೆಯುವ ಕಷ್ಟ ಬೇರೆಯದೇ ರೀತಿಯದ್ದು. ಕಾರಣವಿಷ್ಟೆ, ಅಶೋಕ ಅತಿ ಪ್ರಸಿದ್ದನಾಗಿದ್ದರೂ ಅಶೋಕನ ಬಗೆಗಿನ ಪುರಾವೆಗಳು ಕಡಿಮೆ, ಪ್ರಾಚೀನ ಸಾಹಿತ್ಯದಲ್ಲೂ ಅಶೋಕನ ಬಗೆಗಿನ ಕೃತಿಗಳು ಬಹಳ ವಿರಳ, ಆದರೆ ಅಶೋಕನ ಸುತ್ತ ಹುಟ್ಟಿರುವ (ಅಥವಾ ಉದ್ದೇಶಪೂರ್ವಕವಾಗಿ ಹುಟ್ಟಿಸಿರುವ) ಸತ್ಯವೆಂದು ನಂಬಿರುವ ಕಥೆಗಳು ಹಲವು ಮತ್ತು ಈ ಹುಸಿ ಸತ್ಯಗಳ ಮೇಲೆ ನಿಂತಿರುವ ತತ್ತ್ವಗಳನ್ನು ನಂಬಿ ಬದುಕುತ್ತಿರುವ ಉದರಗಳು, ಸಂಸ್ಥೆಗಳು ಹಲವು. ಅಶೋಕನ ಬಗ್ಗೆ ಸಿಗುವ ವಿಚಾರಗಳು ಇಲ್ಲದಂತೆಯೂ ಇಲ್ಲ, ಇದ್ದ ಹಾಗೆಯೂ ಇಲ್ಲ. ಅವನು ನಮಗೆ ಸಿಕ್ಕಿರುವುದು ಶಾಸನಗಳ ಮೂಲಕ. ಆ ಶಾಸನಗಳಲ್ಲೇ ಸಾಕಷ್ಟು ಅಸ್ಪಷ್ಟತೆಯಿದೆ. ಶಾಸನಗಳಿಲ್ಲದೆಯೂ ಚಂದ್ರಗುಪ್ತ, ಕೌಟಿಲ್ಯರು ಸಿಕ್ಕ ಹಾಗೆ ಸ್ಪಷ್ಟವಾಗಿ ಸಿಗಲಾರ ಅಶೋಕ.
ಆದರೆ ಸಹನಾರವರು ಸಿಕ್ಕಿರುವ ಪುರಾವೆಗಳಲ್ಲಿ ಸಿಗುವ ಸ್ಪಷ್ಟತೆಯ, ಬೇರೆ ಬೇರೆ ಪುರಾವೆಗಳನ್ನು ಬೆಸೆದಾಗ ಸಿಗುವ ಹೊಸ ಅಂಶಗಳನ್ನು ಬಳಸಿ, ಒಂದು ಸತ್ಯನಿಷ್ಠವಾದ ಅಚ್ಚುಕಟ್ಟಾದ ಕಥೆಯನ್ನು ನಮಗೆ ಒದಗಿಸುತ್ತಾರೆ.
ಇದನ್ನು ಓದಲೇಬೇಕೆಂದು ನಾನು ಆಗ್ರಹಿಸುವುದು ಎರಡು ಕಾರಣಗಳಿಗೆ.
ಇತಿಹಾಸ ಬರೆಯುವಾಗ ಲೇಖಕರು ತೆಗೆದುಕೊಳ್ಳಬಹುದಾದ ಸ್ವಾತಂತ್ರ್ದದ ಬಗ್ಗೆ ಭೈರಪ್ಪನವರಾದಿಯಾಗಿ ಬಹಳಷ್ಟು ಜನ ಮಾತನಾಡಿರುವುದು ದಿಟವಷ್ಟೆ. ಈ ಕಾದಂಬರಿ ಸತ್ಯದ ನೆರಳಲ್ಲೇ ಸಾದ್ಯವಾಗುವ ಸೌಂದರ್ಯ ಸೃಷ್ಟಿಗೆ ಒಂದು ಸುಂದರ ಉದಾಹರಣೆ. ಇಲ್ಲಿ ಯಾವುದೇ ಸತ್ಯವನ್ನು ಮುಚ್ಚಿಟ್ಟಿಲ್ಲ, ಹೊಸ ಸುಳ್ಳು ಸತ್ಯವನ್ನು ಸೃಷ್ಟಿಸಿಲ್ಲ. ಸಾಕ್ಷ್ಯಾಧಾರಿತ ಸತ್ಯದ ಒಡಲಲ್ಲೆ ರೂಪುಗೊಂಡಿರುವ ಪಾತ್ರಗಳು ಮತ್ತು ಸನ್ನಿವೇಶಗಳು ಕಾದಂಬರಿಯ ಸತ್ವ. ಅದೇ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಬಳಸಿ ಇತಿಹಾಸದ ಹಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, ಅಶೋಕನ ಬಗೆಗಿನ ತಪ್ಪು ಕಲ್ಪನೆಗಳನ್ನು ಸರಿ ಮಾಡುತ್ತಾ, ಅಶೋಕನನ್ನು ಹಾಗು ಅಂದಿನ ಸಮಾಜವನ್ನು ಆಪ್ತವೆನಿಸುವ ಮಟ್ಟದಲ್ಲಿ ಮುಂದೆ ನಿಲ್ಲಿಸುತ್ತಾರೆ ಸಹನಾ.
ಇದು ಕಾದಂಬರಿಯಾಗಿ ಗಟ್ಟಿಯಾಗಿ ನಿಲ್ಲಬಲ್ಲಷ್ಟೇ ಸಮನಾಗಿ ಸಂಶೋಧನೆಯ, ವೈಚಾರಿಕಾನ್ವೇಷಣೆಯ ವಿಷಯದಲ್ಲೂ ನಿಲ್ಲಬಲ್ಲ ಕೃತಿ. ಕಾದಂಬರಿ ಉತ್ತರಿಸುವ ಪ್ರಶ್ನೆಗಳು ಹಲವು. ಪ್ರಾಚೀನ ಭಾರತದಲ್ಲಿ ಅರ್ಥಶಾಸ್ತ್ರದ ಬಳಕೆ ಹೇಗಿತ್ತು? ಪುರಿ ಜಗನ್ನಾಥನ ಇತಿಹಾಸವೇನು (ಕಲಿಂಗದ ವಿಷಯದಲ್ಲಿ ಜಗನ್ನಾಥನನ್ನು ಮರೆಯುವುದು ಹೇಗೆ)? ಸಿಂಹಳದಲ್ಲಿ ಬೌದ್ದಧರ್ಮಕ್ಕೆ ಕಾರಣರಾರು? ಅಶೋಕನ ಶಾಸನಗಳ ಕಾರಣ ಮತ್ತು ಇತಿಹಾಸವೇನು? ಅಶೋಕ ಹಾಗು ಕರ್ನಾಟಕದ ಸಂಬಂಧವೇನು? ಬೌದ್ದಧರ್ಮದ ವ್ಯಾವಹಾರಿಕ ಪ್ರಜ್ಞೆ ಎಂತಹದ್ದು? ವಾಮಪಂಥೀಯರಿಗೆ ಬುದ್ದನ ಮೇಲೆ ಒಲವಾದರೂ ಏಕೆ? ಜನಪದ ಕೇಂದ್ರಿತ ಆಡಳಿತ ಹೇಗಿತ್ತು? ಕಲಿಂಗ ಯುದ್ದಾನಂತರ ಅಶೋಕ ಬದಲಾದನೇ? ಅಶೋಕ ಬೌದ್ಧನಾದನೇ? ಹೀಗೆ ಹಲವು ಪ್ರಶ್ನೆಗಳಿಗೆ ಕಾದಂಬರಿ ಉತ್ತರ ನೀಡುತ್ತಾ ಹೋಗುತ್ತದೆ.
ಕಥನ ಮತ್ತು ಕಲೆ
ಕಾದಂಬರಿ ಪ್ರಮುಖವಾಗಿ ಸಾಗುವುದು ನಾಲ್ಕು ಎಳೆಗಳಲ್ಲಿ – ಮಗಧದ ಪಾಟಲೀಪುತ್ರ, ಕಲಿಂಗದ ಸುಪರ್ದಿನಲ್ಲಿ ಬರುವ ದಂತಪುರ, ಉತ್ತರ-ತೋಸಲಿ, ದಕ್ಷಿಣ-ತೋಸಲಿ ಪ್ರದೇಶಗಳ ರಾಜಕೀಯ ಹಾಗೂ ಧಾರ್ಮಿಕ ಸಂಸ್ಥೆಗಳು, ಮತ್ತು ಸಂಬಂಧಪಟ್ಟ ಜನ ಜೀವನಗಳಿಂದ.
ಮಗಧದ ಸನ್ನಿವೇಶಗಳು ಅಶೋಕ ಕೇಂದ್ರೀಕೃತವಾಗಿದ್ದು, ಎಲ್ಲಾ ಪಾತ್ರಗಳೂ ಅಶೋಕನ ವ್ಯಕ್ತಿತ್ವ ಪೋಷಣೆಯಾಗಿ ಮೂಡಿ ಬಂದಿವೆ. ಹಲವು ಶಕ್ತಿಯುತ ಪಾತ್ರಗಳಿದ್ದರೂ. ಕೇಂದ್ರ ಅಶೋಕ ಮಾತ್ರ. ಕಾದಂಬರಿಯನ್ನು ಸುಂದರವಾಗಿಸುವುದು ಮತ್ತು ರಸಸ್ಥಾನಗಳನ್ನು ಒದಗಿಸುವುದು ಕಲಿಂಗದ ಕವಲು (ಕಾರಣ ಬಹುಶಃ ಕಲಿಂಗದ ವಿಷಯಗಳಲ್ಲಿ ಲೇಖಕರಿಗೆ ಹೆಚ್ಚಿನ ಸ್ವಾತಂತ್ರ್ಯ ತೆಗೆದುಕೊಳ್ಳಲು ಇರುವ ಸಾಧ್ಯತೆ).
ದಕ್ಷಿಣ ತೋಸಲಿಯ ಜೈನರು, ದಂತಪುರದ ಬೌದ್ದರು ಮತ್ತು ಉತ್ತರ ತೋಸಲಿಯ ಆಜೀವಕರು (ಆಜೀವಕರು ಯುದ್ದದಲ್ಲಿ ನೇರ ಮತ್ತು ಕುತೂಹಲಕಾರಿ ಪಾತ್ರ ವಹಿಸುತ್ತಾರೆ) ಕಾದಂಬರಿಯ ಕೇಂದ್ರ ಬಿಂದು. ಈ ಮೂರೂ ಧರ್ಮಗಳು ಜನ ಜೀವನದ ಜೊತೆ, ಸಮಾಜದ ಜೊತೆ, ವಾಣಿಜ್ಞದ ಜೊತೆ ಹೆಣಗಾಡುವ, ಜೊತೆಗೂಡುವ ಮತ್ತು ಕೆಲವೊಮ್ಮೆ ಸಂಘರ್ಷಿಸುವ ಸಂಕೀರ್ಣ ಸನ್ನಿವೇಶಗಳು, ಕಾದಂಬರಿಯ ರಸಕೇಂದ್ರಗಳು. ಆ ಕಾಲದ ರಾಜಕೀಯ ಹಾಗೂ ಧಾರ್ಮಿಕ ವ್ಯವಸ್ತೆಗೆ ಸಿಕ್ಕ ವ್ಯಕ್ತಿ ಮತ್ತು ಕುಟುಂಬಗಳ ಸಂಘರ್ಷವನ್ನು ರಾಜ್ಯಗಳೆರಡರ ಸಂಘರ್ಷದ ನಡುವೆ ಹೇಳುತ್ತಾ ಹೋಗುತ್ತದೆ ಕಾದಂಬರಿ. ಅಶೋಕ ಕಲಿಂಗವನ್ನು ಸೋಲಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದರ ನಡುವೆ ಇದ್ದ ಸನ್ನಿವೇಶಗಳು ಮತ್ತು ಆ ಘಟ್ಟದ ಜನಜೀವನ ಕಾದಂಬರಿಯ ಹೂರಣ.
ವಿಶೇಷವೆನಿಸುವುದು ಕಾದಂಬರಿಯಲ್ಲಿ ಸಿಗುವ ಹೆಸರುಗಳು ಮತ್ತು ಹೆಸರಿಗೆ ಸೂಚಿಸಿರುವ ಅರ್ಥಗಳು. ಅಶೋಕನ ಹೆಸರಿನ ಸ್ವಾರಸ್ಯವೇ ಇರಲಿ, ರಾಹುಲನ ಹೆಸರಲ್ಲಿ ಕಾಣುವ ತುಂಟತನವೇ ಇರಲಿ (ಒಂದು ವಾಕ್ಯದಲ್ಲಿ ವಿಶ್ಲೇಷಿಸಿರುವ ಹೆಸರು, ಈ ಕಾಲಕ್ಕೂ ಒಪ್ಪಬಹುದೆಂದು ಓದುಗರಿಗೆ ಅನ್ನಿಸುವುದು ಸಹಜ), ಶೂರ್ಮಿಕೆ, ಹಾಲಾಹಲ, ಸುಮನ ಈ ರೀತಿಯ ಧ್ವನಿಪೂರ್ಣ ಹೆಸರುಗಳೇ ಇರಲಿ, ಹೆಸರನ್ನು ಹುಡುಕಿದ್ದಕ್ಕೆ, ಹೆಸರ ಅರ್ಥ ಹೊಳೆಸಿದ್ದಕ್ಕೆ ಲೇಖಕಿಗೆ ನೂರಕ್ಕೆ ಇನ್ನೂರು ಅಂಕ.
ಇನ್ನು ರಚನೆ, ಅಚ್ಚುಕಟ್ಟು. ಬಹಳಷ್ಟು ಲೇಖಕರಿಗೆ ದುರ್ಲಭವಾಗುವಂತಹ ರಚನೆ. ಬೇರೆ ತಂತುಗಳಾಗಿ ಹರಿವ ಕಥೆಗಳನ್ನು ಕಾದಂಬರಿಯಾಗಿ ಜೋಡಿಸಿ ಅಶೋಕನೆಂಬ ಅಚ್ಚರಿಗೆ ರೂಪ ಕೊಟ್ಟಿರುವುದು ಸಹನಾರವರ ಕಲೆ. ಆದರೆ ಕಲೆಯಷ್ಟೆ ಮೆಚ್ಚಬೇಕಾದ್ದು ಅವರ ಶಿಸ್ತು ಮತ್ತು ಅಚ್ಚುಕಟ್ಟುತನ. ಸಹನಾರವರು ವೃತ್ತಿಯಿಂದ data ವಿಜ್ಞಾನಿ ಆಗಿದ್ದರು ನಿಜ, ಆದರೆ ಯಾವುದೇ data ವಿಜ್ಞಾನಿ ಗಳಿಗೂ ಕೂಡ ಕ್ಲಿಷ್ಟ ಅನ್ನಬಹುದಾದಷ್ಟು, ಸಂಕೀರ್ಣ ಮಾಹಿತಿಗಳ ಸುಂದರ ಜೋಡನೆ ಈ ಕಾದಂಬರಿ.
ಕಾದಂಬರಿಯನ್ನು ಗೊಂದಲವಿಲ್ಲದಂತೆ ನಡೆಸಿಕೊಂಡು ಹೋಗುವುದು ಲೇಖಕರಿಗಿರುವ ಇತಿಹಾಸದ ಸ್ಪಷ್ಟತೆ. ಓದುಗರು, ಉಪಸಂಹಾರವನ್ನು ಓದಿದರೆ ಸಾಕು, ಸಹನಾರವರ ಇತಿಹಾಸ ಪ್ರಜ್ಞೆಯ ದರ್ಶನವಾಗುತ್ತದೆ. ಕಡೆಯಲ್ಲಿ ಕೊಟ್ಟಿರುವ ಚಿಕ್ಕ ಟಿಪ್ಪಣಿ ಸಹನಾರವರ ಪ್ರಯತ್ನಕ್ಕೆ ನ್ಯಾಯ ಒದಗಿಸುವುದು ಅಸಾಧ್ಯ. ಸಹನಾರವರ ಪಟ್ಟಿರುವ ಶ್ರಮಕ್ಕೆ, “ಮಾಗಧ ಬರೆಯುವ ಮುನ್ನ” ಎನ್ನುವ ಇನ್ನೊಂದು 700 ಪುಟಗಳ ಬೃಹತ್ ಗ್ರಂಥದ ಅವಕಾಶವಿದೆ. ಭೈರಪ್ಪನವರ “ಪರ್ವ”ದ ಬಗ್ಗೆ ಗಣೇಶರು ಒಮ್ಮೆ ಹೇಳಿದ್ದು “ಮಹಾಭಾರತ ಹೀಗೇ ನಡೆದಿರಬೇಕು” ಎಂದು. ಇದನ್ನು ಓದಿ, ಜೊತೆಗೆ ಲೇಖಕರು ನೀಡುವ ಪುರಾವೆಗಳನ್ನು ಗಮನಿಸಿದಾಗ ನಮಗೂ ಅನ್ನಿಸುವುದು – “ಅಶೋಕ ಹೀಗೇ ಇದ್ದಿರಬೇಕು. ಬುದ್ಧ ಹೀಗೆ ಯೋಚಿಸಿರಬೇಕು, ಬೌದ್ದ ಹೀಗೆ ಬೆಳದಿರಬೇಕು ಅಥವಾ ನಾಶವಾಗಿರಬೇಕು” ಎಂದು!
ಸಹನಾರವರ ಹಿಂದಿನ ಕಾದಂಬರಿಗಳಲ್ಲಿದ್ದ ಹಿನ್ನಲೆ ಸಂಗೀತದ ಪ್ರೇಮ, ಶೋಣನ ಅಬ್ಬರದ ರೂಪದಲ್ಲಿ ಮುಂದುವರಿದಿದೆ. ಶೋಣನ ಅಬ್ಬರ ಕಾದಂಬರಿದುದ್ದಕ್ಕೂ ಮತ್ತೆ ಮತ್ತೆ ಕೇಳಿಸುತ್ತಲೇ ಸಂದರ್ಭಕ್ಕೆ ಒಂದು ಮಹತ್ವ ಕಟ್ಟಿ ಕೊಡುತ್ತದೆ.
ಕಾದಂಬರಿಯ ರಚನೆಯ ತಂತ್ರದಲ್ಲಿರುವ ಮುಖ್ಯ ಅಂಶ ಕಥೆಗಳು ಮತ್ತು ಪಾತ್ರಗನ್ನು ಬಳಸಿರುವ ರೀತಿ. ಇಲ್ಲಿ ಪಾತ್ರಗಳು ಕೇವಲ ಪಾತ್ರಗಳಲ್ಲ, ಇತಿಹಾಸದ ಪ್ರಶ್ನೆಗೆ ಸಿಗುವ ಉತ್ತರಗಳು! ಧರ್ಮ ಜಿಜ್ಞಾಸುಗಳಿಗೆ ಬೇಕಾದ ಟಿಪ್ಪಣಿಗಳು. ಪಾತ್ರಗಳೇ ಲೇಖಕರ ಆಯುಧಗಳು. ಪ್ರತಿ ಪಾತ್ರಗಳು ಮತ್ತು ಘಟ್ಟಗಳು ಸತ್ಯವನ್ನು ಅನಾವರಣಗೊಳಿಸುತ್ತಲೇ ರಸಸ್ಥಾನಗಳಾಗಿ ಕಾದಂಬರಿಯನ್ನು ಪೋಷಿಸುತ್ತವೆ! ರಾಜಕೀಯ ಮತ್ತು ಧಾರ್ಮಿಕ ಪಿತೂರಿ ಮತ್ತು ಗೀಳುಗಳ ನಡುವೆ ಆಪ್ತವೆನಿಸುವುದು – ಮಂಜರಿ ಸುಮನರ ಪ್ರೇಮ, ಆರ್ದ್ರವೆನಿಸುವುದು ಅಶೋಕನ ಅಂತಃಪುರದ ಸ್ತ್ರೀಯರ, ತಾಯಿಯ ಸನ್ನಿವೇಶಗಳು
ಕಾದಂಬರಿಯ ಪ್ರಮುಖ ಅಂಶ ಅರ್ಥಶಾಸ್ತ್ರ. ಅರ್ಥಶಾಸ್ತ್ರಕ್ಕೆ ಈ ಕಾದಂಬರಿ ದೃಷ್ಟಾಂತ. ಅಶೋಕನ ಕಾರ್ಯಕ್ರಮಗಳೇ ಇರಲಿ, ಪಾಟಲೀಪುತ್ರದ ವ್ಯವಸ್ತೆಯೇ ಇರಲಿ, ಅಶೋಕನ ಅಂಗರಕ್ಷಕ ದಳವೇ ಇರಲಿ, ಆಡಳಿತ ವಿಚಕ್ಷಣೆಯಿರಲಿ, ದೂತ ಪದ್ಧತಿಯೇ ಇರಲಿ, ಮಂತ್ರಿಗಳ ಆಯ್ಕೆಯ ಸಂದರ್ಶನದವೇ ಇರಲಿ, ಇಡೀ ಕಾದಂಬರಿ ಅಶೋಕನ ಆಡಳಿತದಂತೆ ಅರ್ಥಶಾಸ್ತ್ರ ಪ್ರೇರಿತ. ಕಾದಂಬರಿಯಲ್ಲಿ ಚಾಣಕ್ಯ ಪಾತ್ರನಲ್ಲ ಎಲ್ಲವನ್ನೂ ಸೇರಿಸಿಕೊಳ್ಳುವ ಪಾತ್ರೆ!. ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ, ಕಾದಂಬರಿ ಪ್ರಮುಖ ಓದು, ಪ್ರಾಚೀನ ಭಾರತದಲ್ಲಿನ ಅರ್ಥಶಾಸ್ತ್ರದ ಉಪಯೋಗಕ್ಕೆ ಮತ್ತು ಬಳಕೆಗೆ ನಿದರ್ಶನ. ಕಾದಂಬರಿಯ ಒಳನೋಟ – ಅರ್ಥ ವಿಮುಖವಾದ ಧರ್ಮ ಜಿಜ್ಞಾಸೆಯಲ್ಲ ಎನ್ನುವುದು. ನಿಜವಾಗಿ ನೋಡಿದಲ್ಲಿ ಅರ್ಥ ವಿಮುಖವಾದ್ದು ಧರ್ಮವೇ ಅಲ್ಲ..
ಕಾದಂಬರಿಯಲ್ಲಿ ಅರ್ಥಶಾಸ್ತ್ರ ಮತ್ತು ಕೌಟಿಲ್ಯ ಮತ್ತೆ ಮತ್ತೆ ಅನಾವರಣಗೊಳ್ಳುವುದು ಅಶೋಕನ ಅಮಾತ್ಯ ರುದ್ರದೇವರ ಮೂಲಕ, ಶೂರ್ಮಿಕೆಯ ಕರ್ತವ್ಯ ನಿಷ್ಠೆಯ ಮೂಲಕ, ಹಾಗೂ ಐಕ್ಯಮತದ ದೂರದೃಷ್ಟಿ ಇರದ ಗಣರಾಜ್ಯಗಳ ರಾಜರು ತಂದೊಡ್ಡುವ ಸಮಸ್ಯೆಗಳ ಮೂಲಕ. ಇದು ಇಂದಿನ ಕೆಲವು ಮುಖ್ಯಮಂತ್ರಿಗಳನ್ನು, ರಾಜಕಾರಣಿಗಳನ್ನು ನೆನಪಿಸಲೂಬಹುದು.
ಕಾದಂಬರಿಯಲ್ಲಿ ಬರುವ ಶೂರ್ಮಿಕೆ ಅಶೋಕರ ಸಂಬಂಧ, ಒತ್ತಡ ಮತ್ತು ಅವರಿಬ್ಬರೂ ತೋರಿಸುವ ತಾಳ್ಮೆ ಮತ್ತು ಪರಸ್ಪರ ಸಹಕಾರ ಯಾವುದೇ ಸಂಸ್ಥೆಯಲ್ಲಿ ಇರಬೇಕಾದ ಸಂಸ್ಕೃತಿಗೆ ಮಾದರಿ. ಅಶೋಕ ಶೂರ್ಮಿಕೆಯರು ಇಂದಿನ ಉದ್ಯೋಗ ಸ್ಥಳಗಳಲ್ಲಿ ಕಾಣುವ ಸಮಸ್ಯೆಗಳಾದ, ಲೈಂಗಿಕ ಕಿರುಕುಳ, ಹೆಣ್ಣು ಮಕ್ಕಳಿಗೆ ಕೆಲಸ ಮಾಡುವುದರಲ್ಲಿನ ತೊಂದರೆ, ಹೆಣ್ಣು ಮಕ್ಕಳನ್ನು ಕಡೆಗಾಣಿಸುವ ವ್ಯವಸ್ತೆಗಳಿಗೆ ಉತ್ತರ.
ಲೇಖಕರ ಶ್ರಮದ ಮತ್ತು ಅಚ್ಚುಕಟ್ಟುತನದ ಇನ್ನೊಂದು ಪರಿಚಯ ನೀಡುವುದು ಕಾದಂಬರಿ ಬಳಸುವ ಭೌಗೋಳಿಕ. ನೈಸರ್ಗಿಕ ಹಿನ್ನಲೆಗಳಲ್ಲಿ ನೌಕಾಯಾನದ ಮಾರ್ಗಗಳು, ಹವಾಮಾನದ ಮೇಲಿನ ಅವಲಂಬನೆ, ಹವಾಮಾನದ ವಿಭಿನ್ನತೆ, ನದಿಯ ಹರಿವು, ಆನೆ/ಅಶ್ವಗಳ ನಡುವಳಿಕೆ, ಸಂದರ್ಭಕ್ಕೆ ಸೂಕ್ತವಾದ ಮಂತ್ರ, ಶ್ಲೋಕಗಳು, ಅರ್ಥಶಾಸ್ತ್ರದ ಉದಾಹರಣೆಗಳು – ಇವೆಲ್ಲವೂ ಸಾರುವುದು, ಲೇಖಕರು ಸತ್ಯವನ್ನು ಪ್ರಸ್ತುತಪಡಿಸುವುದರಲ್ಲಿ ಪಟ್ಟಿರುವ ಶ್ರಮವನ್ನು.
ಕಾದಂಬರಿಯ ಬಹಳಷ್ಟು ಭಾಗ ಆ ಕಾಲದ ಧಾರ್ಮಿಕ ಪರಿಭಾಷೆಗಳ ಪರಿಭ್ರಮಣೆ. ಕಥೆ ಮುನ್ನಡೆಯುವುದು, ತಿರುವು ಪಡೆಯುವುದು ಧಾರ್ಮಿಕ ನಾಯಕರಿಂದಲೇ. ಅಶೋಕನ ಬಗ್ಗೆ ನಮಗೆ ತಿಳಿದಿರುವ ಇತಿಹಾಸ ಮತ್ತು ಸಿಕ್ಕಿರುವ ಸಾಕ್ಷಿಗಳೆಲ್ಲ ಧರ್ಮ ಮೂಲವಾದದ್ದೇ. ಆದ್ದರಿಂದ ಸಹಜವಾಗೇ ಲೇಖಕಿಯ ಬಹಳಷ್ಟು ಸಂಶೋದನೆ, ಓದು ಮತ್ತು ಬರಹ ಧರ್ಮದ ಸುತ್ತ ಸುತ್ತುತ್ತದೆ. ಆದರೆ ಜಿಜ್ಞಾಸೆಗಳು ಗೊಡ್ಡು ಉಪದೇಶಗಳಾಗದೆ, ಕಥೆಗೆ ಪೂರಕವಾಗಿ ರಸಸ್ಥಾಯಿಗಳನ್ನು ಉಣಬಡಿಸುತ್ತದೆ. ಸನ್ಯಾಸ ತರುವ ವೈಯಕ್ತಿಕ, ಸಾಮಾಜಿಕ, ರಾಜಕೀಯ ಹಾಗು ಅರ್ಥಿಕ ಸಂಕಷ್ಟಗಳನ್ನು ಮನೋಜ್ಞವಾಗಿ ಹೇಳುತ್ತಲೇ, ಸಾಮಾನ್ಯರಿಗೆ “ಪ್ರವೃತ್ತಿ ಕೊಡುವ ಮನಶಾಂತಿ ನಿವೃತ್ತಿ ಕೊಡಲಾಗುವುದಿಲ್ಲ” ಎಂದು ಸ್ಪಷ್ಟಪಡಿಸುತ್ತದೆ
ಕಥೆಯಲ್ಲಿ ಕಾಣುವ ಎಲ್ಲ ಬೌದ್ಧ ಗುರುಗಳು, ವ್ಯವಹಾರದ ಮೂಲದವರು ಅಥವಾ ವ್ಯವಹಾರದಲ್ಲಿ ಸಿಕ್ಕಿ ಹಾಕಿಕೊಂಡವರು. ಪ್ರಮಾಣ ಹೆಚ್ಚು, ಕಡಿಮೆ ಇರಬಹುದು, ಉದ್ದೇಶ ಒಳ್ಳೆಯದಿರಬಹುದು ಅಥವ ಸಂದರ್ಭಕ್ಕೆ ಸಿಕ್ಕಿರಬಹುದು ಆದರೆ ಬೌದ್ಧಗುರುಗಳ ಸ್ಥಾಯಿ ಭಾವ, ವ್ಯವಹಾರ, ವಣಿಜ ಪೋಷಣೆ ಮತ್ತು ಧರ್ಮ ಪ್ರಸಾರ. ಬೌದ್ಧವನ್ನು ಸಂರಕ್ಷಿಸಿದವರೂ ವೈಶ್ಯರಷ್ಟೇ!
ಶ್ರಮಣರಿಗೆ ಮಾಂಸಾಹರಕ್ಕೆ ಒಂದು ಸ್ತರದಲ್ಲಿ ಒಪ್ಪಿಗೆ ನೀಡುವ ರೀತಿಯ ತಂತ್ರಗಳ ಮೂಲಕ, ಬೌದ್ದಮತ ದೇಶದ ಆಚೆ ಹಬ್ಬಲು ಸಾಧ್ಯವಾಯಿತು, ಆದರೆ ರಾಜರ, ವಣಿಜರ ಸಹಾಯಕ್ಕೆ ಬೇಕಾದ ಸೂಕ್ತ ಬದಲಾವಣೆ ಮಾಡಿಕೊಳ್ಳುತ್ತಲೇ ಮೂಲ ತತ್ವದಿಂದ = ಬೇರೆಯಾಯಿತು ಎಂದು ಸಿದ್ಧಪಡಿಸುತ್ತಾ ಹೋಗುತ್ತಾರೆ. ಬೌದ್ದರ ಶಕ್ತಿಯೇ ಅವರ ದೌರ್ಬಲ್ಯವಾಗಿ ಅವರನ್ನು ಹಾದಿ ತಪ್ಪಿಸುತ್ತದೆ ಮತ್ತು ಅದರ ವಿನಾಶಕ್ಕೆ ಕಾರಣವೂ ಆಗುತ್ತದೆ. ವಾಮಪಂಥೀಯರು ಅವಲಂಬಿಸಿರುವ ರಾಹುಲ ಸಂಕೃತ್ಯಾಯನರು ತಮ್ಮ ಪುಸ್ತಕ “ಬುದ್ಧಚರ್ಯ“ದಲ್ಲಿ ತೋರಿರುವ ಕಾಣ್ಕೆಗೂ ನಿದರ್ಶನ ಸಹನಾರವರು ಸೃಷ್ಟಿಸಿರುವ ಪಾತ್ರಗಳು.
ಕಾದಂಬರಿ ಒಪ್ಪುವ ಸ್ಥಾಯಿ ಭಾವ – ಪಾತ್ರಗಳಾದ ಸುಮನ, ಅಭಿನಂದನ, ಸೋಮಶರ್ಮರ ಮತ್ತು ಮಂಜರಿ ಪಾತ್ರಗಳು ತೋರುವ ಅಂತಃಕರಣದ ಅವಶ್ಯಕತೆ. ಅದು ಧರ್ಮಪ್ರೇರಿತವಿರಬಹುದು ಆಥವ ಮತದ ವಿರುದ್ಧವೂ ಇರಬಹುದು.
ಕಾದಂಬರಿ ಮತ್ತೆ ಮತ್ತೆ ನೆನಪಿಸುವುದು ಬುಧ್ದನ ವೇದಾಂತ ಮೂಲ, ಬುದ್ದನಲ್ಲೂ ಇರಬಹುದಾದ ಧರ್ಮ ಸಂರಕ್ಷಣೆಯ, ಸಮಾಜ ಪರಿವರ್ತನೆಯ ಆಸೆ, ಬೌದ್ದರ ಧರ್ಮ ಪ್ರಚಾರದ ಗೀಳು, ಮೂಲ ತತ್ವದಿಂದ ಬಹುದೂರ ನಡೆದ ಬೌದ್ದದ ಸಂಘರ್ಷಗಳನ್ನು. ಈ ವಿಷಯವನ್ನು ಹಿಂದೆಯೂ ಬಹಳಷ್ಟು ಚಿಂತಕರು ಒಪ್ಪಿದ್ದರೂ, ಧ್ವನಿ ಪೂರ್ಣವಾಗಿ ಪರಿಚಯಿಸಿರುವುದು ಈ ಕಾದಂಬರಿ.
ನನಗೆ ಸಿಕ್ಕ ಹೊಸ ಕಾಣ್ಕೆ ಬೌದ್ದ ಮತ್ತು ಕ್ರಿಸ್ತ ಧರ್ಮದ ಸಾಮ್ಯತೆ. ಥೇರಿ ಎಂಬ ಹೆಸರು ಮೇರಿ ಅಥವಾ ತೆರೇಸಾ ಎಂಬಂತೆ ಕೇಳಿಸುವುದು, ಲೇಖಕರ ಧ್ವನಿಬದ್ದ ನಿರೂಪಣೆ. ಬೌದ್ದರ ತಪ್ಪೊಪ್ಪಿಗೆಯ ಪ್ರಕರಣ, ಸಮಾಜದ ಬೇಕು ಬೇಡಗಳ ಜೊತೆ ತೋರುವ ಹೊಂದಾಣಿಕೆ ಮತ್ತು ವಿಸ್ತಾರದ ಹಂಬಲದಂತಹ ವಿಷಯಗಳನ್ನು ನೋಡಿದಾಗ ಬೌದ್ಧಧರ್ಮ ಕ್ರಿಸ್ತರಿಗೆ ಮಾದರಿಯಾಯಿತೇ ಎನ್ನಿಸದೆ ಇರದು!
ಕಾದಂಬರಿ ಬಳಸಿರುವ ಮುಖ್ಯ ತಂತ್ರ, ಅಶೋಕನ ವ್ಯಕ್ತಿ ಪರಿಚಯಕ್ಕೆ ಅವನ ಅಂತಃಪುರವನ್ನು ಬಳಸಿರುವುದು. ಅಶೋಕನ ವ್ಯಕ್ತಿತ್ವವನ್ನು ಪರಿಚಯಿಸಲು ಬೇಕಾದ ಭೂಮಿಕೆ ಸಿಗುವುದು ಅಂತಃಪುರದಲ್ಲಷ್ಟೇ!! ಅವನನ್ನು ಬೆತ್ತಲಾಗಿಸದೆ ಸತ್ಯ ನಿರೂಪಿಸಲಾದೀತೇ? ಅವನ ಶಾಸನಗಳಲ್ಲಿ ಸಿಗುವ ಒಂದೆರಡು ಅಂಶಗಳನ್ನಿಟ್ಟುಕೊಂಡು ಅಶೋಕನ ಪಾತ್ರಪೋಷಣೆ ಮಾಡಿರುವುದು ನಿಜವಾಗ್ಯೂ ಕ್ರಿಯಾಶೀಲತೆ.
ಕಲಿಂಗದ ಕಥೆಯನ್ನು ಧರ್ಮದ ಮೂಲಕ ಹೇಳಿದರೆ, ಮಗಧವನ್ನು ಅಶೋಕನ ಮೂಲಕವೇ ಪರಿಚಯಿಸಿ, ಸತ್ಯಕ್ಕೆ ನಿಷ್ಟರಾಗಿದ್ದಾರೆ ಲೇಖಕಿ. ಇವರು ಬಿಂಬಿಸಿರುವ, ನಿರೂಪಿಸಿರುವ, ಅಶೋಕನ ವ್ಯಕ್ತಿತ್ವ, ವಾಮ ಪಂಕ್ತೀಯರ, “ನವಬೌದ್ದರ” ಬುಡ ಅಲ್ಲಾಡಿಸುವುದಂತು ಸತ್ಯ.
ನನ್ನನ್ನು ಕಾಡಿದ್ದು, ಯಾವ ಕಾರಣಕ್ಕಾಗಿ ಅಶೋಕನ ತಾಯಿ, ಅಥವಾ ಶೂರ್ಮಿಕೆಯನ್ನು ಪಾಟಲಿಪುತ್ರದ ಕೇಂದ್ರವಾಗಿಸಲಿಲ್ಲ ಅನ್ನುವ ಪ್ರಶ್ನೆ. ಈ ಎರಡೂ ಪಾತ್ರಗಳ ವಿಶೇಷತೆ ಅನನ್ಯವಾಗಿ ಮೂಡಿದೆ. ಅಶೋಕನ ಅಮ್ಮನ ಅಕ್ಕರೆ ವ್ಯಕ್ತಪಡಿಸಲು ಸಿಗುವ ಯಾವುದೇ ಅವಕಾಶವನ್ನು ಲೇಖಕರು ಮರೆತಿಲ್ಲ. ಹಾಗೇ ಶೂರ್ಮಿಕೆಯ ಸೌಂದರ್ಯ, ಸ್ಥೈರ್ಯ ಮತ್ತು ಪ್ತಜ್ಞೆಯನ್ನು ಸಹಾ. ಲೇಖಕರು ಸೂಚಿಸುವ ಗಂಡು ನವಿಲು ಮತ್ತು ಮನುಷ್ಯರ ನಡುವೆ ಇರುವ ಅಂತರ, ಹಾಗು ಮೌರ್ಯ ಮಾಂಸದ ಉಲ್ಲೇಖ ಮಾರ್ಮಿಕವಾಗಿ ಮೂಡಿವೆ. ಚಂದ್ರಗುಪ್ತನಿಗೆ ನಾಲ್ಕೂ ವರ್ಣಗಳ ಜೊತೆ ಸಮಭಂಧ ಕಲ್ಪಿಸಿರುವ ಕ್ರಿಯಾಶೀಲತೆ ಪುಸ್ತಕ ಓದಿದವರಿಗೆ ತಿಳಿಯಲು ಸಾಧ್ಯ. ಈ ಮೂಲಕ ಮೌರ್ಯವಂಶದ ಮೂಲವೇ ಸಮತಾ ಭಾವದಿಂದ ಕೂಡಿದೆ ಎಂಬ ಧ್ವನಿಪೂರ್ಣ ಗ್ರಹಿಕೆ ಸುಂದರ. ಹಾಗೇ ಕಾಡುವುದು ಅಪ್ಪನ ಪ್ರೀತಿಯ ಕೊರತೆ ಹೇಗೆ ಸಂತಾನದ ಸಾಮರ್ಥ್ಯಕ್ಕೆ ಕುಂದು ತಂದೀತೆನ್ನುವ ಪ್ರಜ್ಞೆ.
ಭೈರಪ್ಪನವರ ಪರ್ವ, ಅಂಚುಗಳ ಸ್ತ್ರೀಪಾತ್ರಗಳ ಗಟ್ಟಿತನ, ಮೊನಚು, ಭಾವ ತೀವ್ರತೆಗಿನಾಚೆಗಿನ ಸತ್ಯಪರತೆ ಇಲ್ಲೂ ಮೂಡಿವೆ. ಶೂರ್ಮಿಕೆ, ಪ್ರಭೆ, ಅಶೋಕನ ಅಮ್ಮ, ಮಂಜರಿ ಹೀಗೆ ಕಾದಂಬರಿಯುದ್ದಕ್ಕೂ ಕಾಣುವ ಪ್ರಬಲ ಸ್ತ್ರೀ ಪಾತ್ರಗಳು ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುತ್ತವೆ. ಆದರೆ, ಭೈರಪ್ಪನವರ ಕಾದಂಬರಿಯಲ್ಲಿ ಕಾಣುವ ವ್ಯಕ್ತಿ ಭಂಜನೆ ಇಲ್ಲಿ ಕಾಣಿಸುವುದಿಲ್ಲ ಹಾಗೆ ಸಂದರ್ಭಗಳು ಸೃಷ್ಟಿಸುವ ವ್ಯಕ್ತಿತ್ವದ ಆಳ ಅಗಲಗಳೂ ಸಹ.
ಕಡೆಯ 150 ಪುಟಗಳು ಸ್ವಲ್ಪ ಆತುರವಾಗಿ ಮುನ್ನಡೆಯುತ್ತವೆ ಎನಿಸುತ್ತದೆ. ಆ ಭಾಗದಲ್ಲಿ ಬರುವ ಮಂಕ, ಹಾಲಹಲ, ಸಮರಸೇನ, ಸುಪ್ರಿಯ ಶಾಂತಿನಾಥ ಇವರ ಪಾತ್ರಗಳು ಮೊದಲ ಓದಿನಲ್ಲಿ ಸ್ವಲ್ಪ ನಾಟಕೀಯವೆನಿಸುತ್ತದೆ. ಹಾಗೇ ಅಶೋಕನ ಬದಲಾವಣೆ ಕೂಡ ಸ್ವಲ್ಪ ಹೆಚ್ಚು ನಾಟಕೀಯವಾಗುತ್ತದೆ. ಈ ಕಾದಂಬರಿಯಲ್ಲಿ ಕಾಣಸಿಗುವ ಅಶೋಕನ ಬದಲಾವಣಿ ಯುದ್ಧದ ಸಾವು ನೋವಿಗೆ ಕರಗಿ ಬುದ್ಧ ಮತ ಸ್ವೀಕರಿಸಿದ ಎಂಬುದಷ್ಟೇ ನಾಟಕೀಯ. ಅಥವಾ ಕಾದಂಬರಿಕಾರರ ಉದ್ದೇಶವೇ ಅಶೋಕನ ಆತುರದ ಪ್ರವೃತ್ತಿಯನ್ನು ತೋರಿಸುವುದಾಗಿತ್ತೇನೋ!
ಮುಖ್ಯವಾಗಿ ಗಮನಿಸಬೇಕಾದ್ದು ಈ ಕಾದಂಬರಿದ ಓದು ತರುವ ಚಿಂತನೆ.
ತಾನು ಮಾಡಿದ ಚಿಕ್ಕ ಮಾರ್ಪಾಡು ಹಾಗು ತೋರಿಸಿದ ಸ್ವಲ್ಪ ಒಂದಿಷ್ಟು ಹೇಗೆ ಧರ್ಮದ ಮೂಲ ಸ್ವರೂಪವನ್ನೇ ಬದಲಿಸಬಹುದು ಎಂಬ ಅರಿವು ಬುದ್ಧನಿಗಿತ್ತೇ? ಇಂದಿಗೂ ಸನಾತನ ಧರ್ಮದ ಒಂದು ಎಳೆಯನ್ನು ಹಿಡಿದು ಜೀವಿಸುತ್ತಿರುವ, ಸಮಾಜದಲ್ಲಿ ಹೊಸ ಗೀಳನ್ನು ಹುಟ್ಟು ಹಾಕುತ್ತಿರುವ ನಮ್ಮ ನವಪೀಳಿಗೆಯ ಆಧ್ಯಾತ್ಮ ನಾಯಕರಿಗೆ ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆ ಸೃಷ್ಟಿಸಬಹುದಾದ ಸಮಸ್ಯೆಗಳ ಬಗ್ಗೆ ಯೋಚಿಸುವ ಸಾಮರ್ಥ್ಯ ಹಾಗು ನೈತಿಕ ಅಡಿಪಾಯವಿದೆಯೇ? ರಾಷ್ಟ್ರಭಕ್ತಿಗೆ ಮನ್ನಣೆ ಕೊಡದ ಧರ್ಮಗಳನ್ನು, ವಿಚಾರಗಳನ್ನು ಪೋಷಿಸುವ ರಾಜಕೀಯ ನಾಯಕರಿಗೆ ಈ ಧರ್ಮ, ವಿಚಾರಗಳು ತಂದಿಟ್ಟಿರುವ, ತಂದಿಡಬಹುದಾದ ಸಮಸ್ಯೆಗಳ ಬಗೆಗಿನ ಅರಿವು ಮೂಡಿಸುವ ಕೆಲಸ ಹೇಗೆ ಸಾದ್ಯ?
ಇಂದಿಗೂ ಭಾರತದಲ್ಲಿ ರಾಜ್ಯಗಳ ಸ್ವಾಯತ್ತತೆ ಹಾಗು ರಾಷ್ಟ್ರೀಯ ಐಕ್ಯತೆಯ ನಡುವೆ ಸಾಮರಸ್ಯ ಏಕೆ ಸಾಧ್ಯವಾಗಿಲ್ಲ?
ಮಕ್ಕಳ ಮೇಲೆ ಅತೀ ಅಪೇಕ್ಷೆ ಹೊತ್ತ, ಪೋಷಕರು ಆ ಮಕ್ಕಳ ಮೇಲೆ ಮತ್ತು ತಮ್ಮದೇ ಶಾಂತಿಯ ಮೇಲೆ ತಂದುಕೊಳ್ಳುವ ಪರಿಣಾಮಕ್ಕೆ ಉತ್ತರವೇನು? ಯೋಚಿಸಿದಷ್ಟೂ ಭೈರಪ್ಪನವರು ಒಮ್ಮೆ ಅನೌಪಚ್ಚರಿಕವಾಗಿ ಆಡಿದ್ದ ಮಾತು ಕಾಡುತ್ತಾ ಹೋಗುತ್ತದೆ “ ನಮ್ಮ ಅಪೇಕ್ಷೆ ಮತ್ತು ಪ್ರಯತ್ನ, ನಮ್ಮ ಸಂತತಿಯನ್ನು ಮೀರಿ ಯೋಗ್ಯತೆಯನ್ನು ಅನುಸರಿಸಿದಾಗ ಸ್ವಸ್ಥ ಸಮಾಜ ರೂಪಗೊಳ್ಳುತ್ತದೆ”.
ಒಟ್ಟಿನಲ್ಲಿ ಈ ರೀತಿಯಾದ ಚಿಂತನೆಯನ್ನು ಹುಟ್ಟುಹಾಕುತ್ತಿದೆಯೆಂದ ಮೇಲೆ ಸಹನಾರವರ ಪರಿಶ್ರಮ ಸಾರ್ಥಕವಾಗಿದೆ ಎಂದರ್ಥ, ಹಾಗೆ ಓದುಗರ ಹಣ, ಸಮಯ ಮತ್ತು ಆಶಯ ಕೂಡ. ಇಂತಹ ಉತ್ತಮ ಕೃತಿಯನ್ನು ಓದಿ ಗೆಲ್ಲಿಸುವುದು ನಮ್ಮೆಲ್ಲರ ಬಾಧ್ಯತೆ. ಈ ಕಾದಂಬರಿ ತರ್ಜುಮೆಗೊಂಡು ಹಲವು ಭಾರತೀಯರನ್ನು ಮುಟ್ಟಲಿ, ಹೊಸ ಸಂವಾದಗಳನ್ನು ಹುಟ್ಟು ಹಾಕಲಿ, ಹಾಗು ಹೊಸ ಲೇಖಕರು ಇದರ ಆಧಾರವಾಗಿಟ್ಟುಕೊಂಡು ಅಶೋಕನ ಮುಂದಿನ ಕಥೆಯನ್ನು ರಚಿಸಲಿ ಎನ್ನುವುದು ನನ್ನ ಹಾರೈಕೆ.
(ವಿ.ಸೂ. ಇತ್ತೀಚೆಗಷ್ಟೇ ನಾನು ಓದಿದ ಕಾದಂಬರಿ ‘ರೇಷ್ಮೆಬಟ್ಟೆ’ ಯಲ್ಲಿ ಬರುವ ಅನೇಕ ವಿಷಯಗಳಿಗೆ ಪೂರ್ಣ ಕಾಲದ ಸಂವಾದಿಯಾಗಿ ಈ ಕಾದಂಬರಿ ಮೂಡಿದೆ. ಆಸಕ್ತರು, ಈ ಕಾದಂಬರಿದ ನಂತರ ರೇಷ್ಮೆ ಬಟ್ಟೆ ಮತ್ತು ಸಾರ್ಥ ಕಾದಂಬರಿಗಳನ್ನು ಓದಿದರೆ ಚೆಂದ).
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.