close logo

ಗುಡಿಯ ಸಂಭ್ರಮ ೨೦೨೩ – ಸರ್ವಶಕ್ತಿಮಯೀ ದೇವೀ

ಬೆಂಗಳೂರಿನಲ್ಲೊಂದು ಸಂಭ್ರಮ ನಡೆಯುತ್ತಿದೆ – ಬಲ್ಲಿರಾ? ಅದು ಗುಡಿಯ ಸಂಭ್ರಮ.

ಬೆಂಗಳೂರು-ದಕ್ಷಿಣ ಭಾಗ ಕನ್ನಡ ಸಂಸ್ಕೃತಿಯ ಕೇಂದ್ರಗಳಲ್ಲೊಂದು. ಕರ್ನಾಟಕ ರಾಜ್ಯ ಆಧುನಿಕತೆಯತ್ತ ದಾಪುಗಾಲಿಡುತ್ತಿರುವುದೇನೋ ನಿಜ. ಅದು ತನ್ನ ಪ್ರಾಚೀನ ಸಂಸ್ಕೃತಿಯೊಂದಿಗೆ ಸಾತತ್ಯವನ್ನು ಸಾಧಿಸುವ ಪ್ರಯತ್ನದಲ್ಲಿರುವುನ್ನು ಬೆಂಗಳೂರು-ದಕ್ಷಿಣದಲ್ಲಿ ಕಾಣಬಹುದು. ಅದರಲ್ಲಿಯೂ ಜಯನಗರ-ಬನಶಂಕರಿ ಪ್ರದೇಶಗಳಲ್ಲಿ. ಅತ್ಯಾಧುನಿಕ ಸೌಲಭ್ಯಗಳಿರುವ ಈ ಪ್ರದೇಶದಲ್ಲಿ ಅನೇಕ ಪ್ರಾಚೀನ ಮಂದಿರಗಳು ಹಾಗೆಯೇ  ಉಳಿದು ಯಾವತ್ತಿನ ಅನುಷ್ಠಾನಗಳು ನಡೆದೇ  ಬಂದಿದೆ. 

ಬನಶಂಕರಿಯ ದೇವಗಿರಿ ದೇವಸ್ಥಾನ ಆ ಸಂಸ್ಕೃತಿಯ ಒಂದು ಉದಾಹರಣೆ. ಅಲ್ಲಿ ೧೫ ದಿನಗಳಿಂದ ಒಂದು ಉತ್ಸವ ನಡೆಯುತ್ತಿದೆ. ಅದೇ ಗುಡಿಯ ಸಂಭ್ರಮ. ಅದನ್ನು Heritage ಸಂಸ್ಥೆ ನಡೆಸುತ್ತಿದ್ದು – ಅವರ ಜೊತೆ ಕೈಜೋಡಿಸಿರುವವರು ವರಪ್ರದ ಶ್ರೀ ದೇವಗಿರಿ ದೇವಸ್ಥಾನಂ ಟ್ರಸ್ಟ್. Heritage  ಸಂಸ್ಥೆಯ ರೂವಾರಿ ಶ್ರೀಮತಿ. ವಿಜಯಲಕ್ಷ್ಮಿ ವಿಜಯಕುಮಾರ್

ಏನಿದು ಗುಡಿಯ ಸಂಭ್ರಮ? ಪ್ರಾಚೀನ ಭಾರತದಲ್ಲಿ ದೇವಸ್ಥಾನಗಳು ಜನ-ಜೀವನದ ಕೇಂದ್ರವಾಗಿದ್ದುದು ಗೊತ್ತಿರುವ ವಿಷಯವೇ. ಧರ್ಮ-ಅರ್ಥ-ಕಾಮ-ಮೋಕ್ಷ ನಾಲ್ಕೂ ದಿಕ್ಕಿನಿಂದ ದೇವಸ್ಥಾನಗಳು ಜೀವನಾಧಾರವಾಗಿದ್ದವು. ಆಧುನಿಕ ಕಾಲದಲ್ಲಿ ಜೀವನ ಮತ್ತೊಂದು ದಿಕ್ಕಿನಲ್ಲಿ ಸಾಗಿದ್ದು ಆ ಅನುಭವದ ಸಮಗ್ರತೆ ಮತ್ತು ನೇಯ್ಗೆ ಕಳೆದಿರುವುದಂತೂ ನಿಜ. ಒಟ್ಟು ಜೀವನದಲ್ಲಿ ಒಂದು ಬಗೆಯ ಪಾವಿತ್ರ್ಯ, ದೈವೀಕ ಭಾವ ಇಹ ಜೀವನದ ಅತಿರೇಕಕ್ಕೆ ಒಳಗಾಗದೆ ಇರುವುದಕ್ಕೆ, ಸೌಂದರ್ಯಯುತ ಜೀವನ ನಡೆಸುವುದಕ್ಕೆ ಅವಶ್ಯಕ. ಆ ಸಾಂಸ್ಕೃತಿಕ ಸಮಗ್ರತೆಯನ್ನು ವಾಪಸು ತರುವ ಒಂದು ಪ್ರಯತ್ನವೇ Heritage ಸಂಸ್ಥೆಯ ಗುಡಿಯ ಸಂಭ್ರಮ. ಇದರ ಪ್ರಮುಖ ಕಾಳಜಿ – ಪವಿತ್ರ ಸ್ಥಳಗಳು, ಕಲೆ ಮತ್ತು ಪ್ರಕೃತಿ. 

ಪ್ರತಿವರ್ಷವೂ ಜನವರಿ ಕೊನೆಯ ವಾರದಲ್ಲಿ ನಡೆಯುವ ಈ ಉತ್ಸವ ಈ ಬಾರಿ ೨೬ ಜನವರಿಯಿಂದ ೫ ಫೆಬ್ರವರಿ ವರೆಗೆ ನಡೆಯಲಿದೆ. ಈಗಾಗಲೇ ಪ್ರಾರಂಭವಾಗಿದೆ.  ಈ ಬಾರಿಯ ಗುಡಿಯ ಸಂಭ್ರಮದ ವಿವರ ಹೀಗಿದೆ. 

ವಿವರಗಳನ್ನು ನೋಡಿದಿರಾದರೆ ನಿಮಗೆ ಕಾಣಸಿಗುವುದು – ವೇದಪಠಣ, ಕಥಾ ಕಾಲಕ್ಷೇಪ, ಉಪನ್ಯಾಸ, ಅನೇಕ ಬಗೆಯ ಶಾಸ್ತ್ರೀಯ ಸಂಗೀತ-ನೃತ್ಯ, ಚಿತ್ರಕಲಾ ಪ್ರದರ್ಶನ, ಭಾರತೀಯ ಕ್ರೀಡೆಗಳು, ದೇವಸ್ಥಾನಗಳ ಅನುಭವ ಹೀಗೆ ವೈವಿಧ್ಯತೆಯಿಂದ ಕೂಡಿರುವ ಕಾರ್ಯಕ್ರಮಗಳು. 

ಒಂದೇ  ದೇವಸ್ಥಾನವೇ? ಇಲ್ಲ. ದೇವಗಿರಿಯಿಂದ ಆರಂಭವಾಗಿ ಕಾಡುಮಲ್ಲೇಶ್ವರ, ದೊಮ್ಮಲೂರಿನ ಶ್ರೀದೇವಿ-ಭೂದೇವಿ ದೇವಸ್ಥಾನ, ಬಸವನಗುಡಿಯ ದೊಡ್ಡ ಗಣೇಶ ಹೀಗೆ ಎಲ್ಲೆಡೆ ವ್ಯಾಪಿಸುತ್ತದೆ. ಮುಂದೊಮ್ಮೆ ಇಡಿಯ  ಬೆಂಗಳೂರಿನ ದೇವಸ್ಥಾನಗಳನ್ನು ವ್ಯಾಪಿಸಲಿ ಎನ್ನುವುದೇ ನಮ್ಮ ಆಶಯ.  

ಗುಡಿಯ ಸಂಭ್ರಮ ೨೦೨೩

ಗುಡಿಯ ಸಂಭ್ರಮ ೨೦೨೩ ರ ಪ್ರಮುಖ ವಿಷಯ ‘ಸರ್ವಶಕ್ತಿಮಯೀ ದೇವೀ’. ಸೃಷ್ಟಿಗೆ ಮೂಲಾಧಾರವೇ ದೇವಿಯ ಶಕ್ತಿಸ್ವರೂಪ. ಈ ದೇವಿಯನ್ನು ನಾವು ವಿವಿಧ ರೂಪಗಳಲ್ಲಿ ಪೂಜಿಸುತ್ತೇವೆ. ಸಹಸ್ರಾರು ನಾಮಗಳಿಂದ ಆರಾಧಿಸುತ್ತೇವೆ. ಪ್ರಕೃತಿಯಲ್ಲಿ ವಿವಿಧ ರೂಪಗಳಿಂದ ದೇವಿಯನ್ನು ಕಾಣುತ್ತೇವೆ, ಸಾಕ್ಷಾತ್ಕರಿಸಿಕೊಳ್ಳುತ್ತೇವೆ. ನಮ್ಮ ಪವಿತ್ರ ಗ್ರಂಥಗಳಲ್ಲಿ, ಪ್ರದರ್ಶನ ಕಲೆಗಳಲ್ಲಿ, ದೇವಸ್ಥಾನದ ಪ್ರತಿಮೆಗಳಲ್ಲಿ, ಚಿತ್ರಕಲೆಯಲ್ಲಿ ಇವೆಲ್ಲವನ್ನೂ ಕಾಣಬಹುದು. ಗುಡಿಯ ಸಂಭ್ರಮದಲ್ಲಿ ಈ ಬಾರಿ ಇದೆಲ್ಲವನ್ನು ಒಟ್ಟಿಗೆ ಕೆಲವೇ ದಿನಗಳಲ್ಲಿ ಅನುಭವಕ್ಕೆ ತಂದುಕೊಳ್ಳಬಹುದು. 

ಮೊದಲ ದಿನದ ಸಂಜೆಯಲ್ಲಿ ಅತ್ಯದ್ಭುತ ಸಂಗೀತ ಕಛೇರಿಯಿತ್ತು. ಕು|| ಸ್ಫೂರ್ತಿ ರಾವ್ ಬೆಂಗಳೂರಿನ ಸಂಗೀತ ರಸಿಕರಿಗೆ ಪರಿಚಿತರೇ. ಅತಿ ಚಿಕ್ಕ ವಯಸ್ಸಿನಲ್ಲಿ ಮಹತ್ತರ ಸಾಧನೆ ಮಾಡಿರುವ ಈ ಕಲಾವಿದೆ ಮುಂದೆ ಕರ್ನಾಟಕ ಸಂಗೀತದ ಮಹತ್ತರ ರತ್ನಗಳಲ್ಲಿ ಒಬ್ಬರಾಗುವುದರಲ್ಲಿ ಸಂಶಯವಿಲ್ಲ. 

ಎರಡನೆಯ ದಿನದ ಮುಂಜಾನೆ ಡಾ। ರಂಗನ್-ರ ವಿದ್ವತ್ಪೂರ್ಣ ಉಪನ್ಯಾಸ ‘ದಶಮಹಾವಿದ್ಯಾ’. ತಂತ್ರಶಾಸ್ತ್ರದಲ್ಲಿ ದಶಮಹಾವಿದ್ಯಾ ಎಂದು ಹತ್ತು ದೇವತೆಯರು ಹೆಸರಾಗಿರುವರು. ಶಕ್ತಿ ದೇವತೆಯ ಹತ್ತು ಸ್ವರೂಪ ‘ದಶ ಮಹಾವಿದ್ಯಾ’ – ಕಾಳಿ, ತಾರಾ, ತ್ರಿಪುರಸುಂದರಿ, ಭುವನೇಶ್ವರಿ, ಭೈರವೀ, ಚಿನ್ನಮಸ್ತಾ, ಧೂಮವತಿ, ಬಗಲಾಮುಖಿ, ಮಾತಂಗಿ ಮತ್ತು ಕಮಲಾ. ಡಾ| ರಂಗನ್ ಈ ದೇವತೆಗಳ ಸ್ವರೂಪವನ್ನು ವಿವರಿಸಿದರಷ್ಟೇ ಅಲ್ಲದೇ ಅದರ ಹಿಂದಿನ ವೈದಿಕತೆಯನ್ನೂ ವಿವರಿಸಿದರು. ವಿದ್ವಾಂಸರಾದ ಡಾ| ರಂಗನ್-ರ ಕೆಲ ಪುಸ್ತಕಗಳೂ ಅಲ್ಲಿ ದೊರೆಯುತ್ತಿದ್ದವು. 

ಕೇವಲ ಹಿರಿಯರಷ್ಟೇ ಅಲ್ಲ ಚಿಕ್ಕವಯಸ್ಸಿನ ಪ್ರಯತ್ನಶೀಲ ವ್ಯಕ್ತಿ-ಸಂಸ್ಥೆಗಳಿಗೂ ಇಲ್ಲಿ ಅವಕಾಶವಿದೆ. ದೃಷ್ಟಿ ಆರ್ಟ್ ಫೌಂಡೇಶನ್ ಎನ್ನುವ ಸಂಸ್ಥೆಯ ಮಕ್ಕಳೂ ಸಹ ಒಂದು ಚಿಕ್ಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದರ ಸೊಬಗನ್ನೊಮ್ಮೆ ನೋಡಿ. 

ದೇವಸ್ಥಾನದ ಆವರಣದಲ್ಲಿರುವ ಈ ರಂಗೋಲಿಯ ಸೌಂದರ್ಯ ಒಟ್ಟು ಗುಡಿಯ ಸಂಭ್ರಮದ ಸಂಕೇತವಾಗಿದೆ. 

ಒಳಗೆ ಇಷ್ಟು ಸಂಭ್ರಮವಿರುವಾಗ ಇನ್ನೂ ದೇವಸ್ಥಾನ ಹೊರಾಂಗಣದಲ್ಲಿ ಸಡಗರ ಇರದೇ ಹೋಗುತ್ತದೆಯೇ?

ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆಯೇ? ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವುದಕ್ಕೆ, ಅದರ ಸೌಂದರ್ಯದ ಅನುಭೂತಿಗೆ, ಚಿಕ್ಕ ವಯಸ್ಸಿನಲ್ಲಿಯೇ ಶ್ರದ್ಧೆ ಮೊದಲಾಗುವುದಕ್ಕೆ ‘ಗುಡಿಯ ಸಂಭ್ರಮ’-ಕ್ಕಿಂತ ಒಳ್ಳೆಯ ಅವಕಾಶವಿಲ್ಲ. ಬೆಂಗಳೂರಿನ ಸನಾತನ ಸಜ್ಜನಿಗಳು ಈ ಉತ್ಸವವನ್ನು ಪ್ರೋತ್ಸಾಹಿಸಿ, ಸಂಭ್ರಮಿಸಿ, ಯಶಸ್ವಿಗೊಳಿಸಬೇಕು. ೫-ನೇ ಫೆಬ್ರವರಿಯವರೆಗೆ ಉತ್ಸವ ನಡೆಯುತ್ತದೆ. 

ಗುಡಿಯ ಸಂಭ್ರಮ ಉತ್ಸವಕ್ಕೆ Indica ಪರಿವಾರದ ಸಂಪೂರ್ಣ ಸಹಯೋಗವಿದೆ. 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.