close logo

ಐಹೊಳೆ ಪ್ರಶಸ್ತಿ: ಮೇಗುತಿ ದೇವಸ್ಥಾನದಲ್ಲಿರುವ ಮಹತ್ತರವಾದ ಶಾಸನ

ಬಾದಾಮಿ ಚಾಲುಕ್ಯರ ಕಾಲ ಕನ್ನಡಿಗರಿಗೆ ಮಾತ್ರವಲ್ಲ ಸಮಸ್ತ ಭಾರತೀಯರಿಗೂ ಸಾಂಸ್ಕೃತಿಕವಾಗಿ ಬಹುಮುಖ್ಯ. ವಾಸ್ತುಶಿಲ್ಪದ ದೃಷ್ಟಿಕೋನದಿಂದ ಚಾಲುಕ್ಯರ ಮಹತ್ವ ತಿಳಿದದ್ದೇ ಆಗಿದೆ. ಸಾಹಿತ್ಯಸಂಬಂಧದ ಪ್ರಮುಖತೆಯೂ ತಿಳಿದಿದೆ. ಆದರೆ ತನ್ನ ಐತಿಹಾಸಿಕ ಮಹತ್ವವನ್ನೂ ಮೀರಿದ ಒಟ್ಟಿಡೀ  ಭಾರತದ ಇತಿಹಾಸಕ್ಕೆ ಪ್ರಮುಖವಾದ ಕಾಣಿಕೆ ನೀಡಬಲ್ಲ ಅನೇಕ ವಿಷಯಗಳನ್ನು ಚಾಲುಕ್ಯರ ಕಾಲ ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಅಂತಹ ಒಂದು ಮಹತ್ವಪೂರ್ಣವಾದ ವಿಚಾರ ಐಹೊಳೆಯ ಮೇಗುತಿ ಮಂದಿರದಲ್ಲಿರುವ ಶಾಸನದಲ್ಲಿದೆ. ಇದನ್ನು ಬರೆಯಿಸಿದವನು ಜೈನ ಕವಿಯಾದ ರವಿಕೀರ್ತಿ. ಪಂಚಮವೇದವೆಂದೇ ಖ್ಯಾತಿ ಪಡೆದಿರುವ ಮಹಾಭಾರತ ನಡೆದಿರಬಹುದಾದ ಕಾಲವೇನು ಎನ್ನುವ ಚರ್ಚೆಗೆ ಈ ಶಾಸನ ಮಹತ್ತರವಾದ ವಸ್ತುವನ್ನು ಒದಗಿಸುತ್ತದೆ. ಮಹಾಭಾರತದ ಐತಿಹಾಸಿಕತೆಯ ಬಗ್ಗೆ ಭಾರತೀಯ ಮನಸ್ಸಿನಲ್ಲಿ ಯಾವುದೇ ಅನುಮಾನವಿಲ್ಲ. ಅದರ ದೃಷ್ಟಿ-ದರ್ಶನ-ವಿಚಾರಧಾರೆಗೆ ಅದರ ಖಚಿತವಾದ ಕಾಲಮಾನ ಅವಶ್ಯವೂ ಅಲ್ಲ. ಆದರೆ ಇತಿಹಾಸವೇ ಅದರ ಕಾಲಮಾನದ ಕುರಿತಾಗಿ ವಸ್ತು ಒದಗಿಸುತ್ತದೆಯಾದರೆ ಅದನ್ನು ಪರಿಗಣಿಸುವುದು ಅತ್ಯಗತ್ಯ.

ಶಾಲಾ ಪುಸ್ತಕಗಳಲ್ಲಿ ಈ ಶಾಸನದ ಹೆಸರನ್ನು ನಾವು ಓದದೇ ಇರಬಹುದು. ಆದರೆ ಈ ಶಾಸನದ  ಬಹಳಷ್ಟು ವಸ್ತುವಿಶೇಷವನ್ನು ಒಂದಿಷ್ಟು  ಓದಿಯೇ ಇರುತ್ತೇವೆ. ಕಾರಣ – ಈ ಶಾಸನ ಬಾದಾಮಿ ಚಾಲುಕ್ಯ ವಂಶದ ಮೇರುಸದೃಶ ರಾಜನಾದ, ದಕ್ಷಿಣಪಥೇಶ್ವರ, ಪೃಥ್ವೀವಲ್ಲಭ, ಸತ್ಯಾಶ್ರಯ ಇಮ್ಮಡಿ ಪುಲಿಕೇಶಿಯ ನೆನಪಿಗೆ ಮಹತ್ತರವಾದ್ದು. ೩೬ ಸಾಲುಗಳುಳ್ಳ ಈ ಶಾಸನ ಸಂಸ್ಕೃತದಲ್ಲಿದೆ ಎನ್ನುವುದೂ ಅಷ್ಟೇ ಮುಖ್ಯವಾದ ವಿಷಯ. ಆದರೆ, ಈ ಶಾಸನದ ಕರ್ತೃವಾದ ರವಿಕೀರ್ತಿಯ ಹೆಸರು ಪುಸ್ತಕಗಳಲ್ಲಿ ಬರದೇ ಇರುವುದು ದುಃಖದ ವಿಷಯ. ಅದಕ್ಕಿಂತ ಮಿಗಿಲಾದ ದುಃಖವೆಂದರೆ ಮಹಾಭಾರತಕ್ಕೂ, ಒಟ್ಟು ಭಾರತೀಯ ಇತಿಹಾಸಕ್ಕೂ, ಈ ಶಾಸನಕ್ಕೂ ಇರುವ ಸಂಬಂಧ ಯಾವ ಪುಸ್ತಕದಲ್ಲೂ ಉಲ್ಲೇಖವಾಗದಿರುವುದು. 

ಪ್ರಶಸ್ತಿಯ ಒಟ್ಟು ವಿವರ 

ಈ ವಿಷಯಕ್ಕೆ ಬರುವ ಮೊದಲು ಪ್ರಶಸ್ತಿಯಲ್ಲಿರುವ ಒಟ್ಟಂಶಗಳನ್ನು ಸ್ವಲ್ಪ ಗಮನಿಸೋಣ. ಶಾಸನದಲ್ಲಿ ಈ ೫ ಅಂಶಗಳನ್ನು ಕಾಣಬಹುದು.

  • ಚಾಲುಕ್ಯ ವಂಶ ಪ್ರವರ್ಧಮಾನಕ್ಕೆ ಬಂದ ಪರಿ
  • ಇಮ್ಮಡಿ ಪುಲಿಕೇಶಿ ಸಿಂಹಾಸನವನ್ನೇರಿದ ಪರಿ
  • ಪುಲಿಕೇಶಿರಾಜನ ವಿಜಯಯಾತ್ರೆಯ ಪರಿ – ಹರ್ಷನ ಮೇಲಿನ ಗೆಲುವನ್ನು ಒಳಗೊಂಡಂತೆ
  • ಪ್ರಶಸ್ತಿ ಬರೆಯಿಸಿದ ವರ್ಷ ಮತ್ತು ಮಹಾಭಾರತದ ಕಾಲಮಾನ
  • ಇದೆಲ್ಲದರ ನೆನಪಿಗಾಗಿ ಜೈನನಾದ ರವಿಕೀರ್ತಿ ಕಟ್ಟಿದ ಈ ಮೇಗುತಿ ಮಂದಿರ.
  • ರವಿಕೀರ್ತಿಯ ಮೇಲ್ಮೆ

ಮೊದಲಲ್ಲಿ ಜಿನೇಂದ್ರನಿಗೆ ನಮನ. ನಂತರ ಮೂವತ್ತು ಸಾಲುಗಳಲ್ಲಿ ಚಾಲುಕ್ಯ ವಂಶ, ಪುಲಿಕೇಶೀ ಸಿಂಹಾಸನವನ್ನೇರಿದುದು ಮತ್ತು ರಾಜನ ದಿಗ್ವಿಜಯ ಯಾತ್ರೆಗಳ ವಿವರ ಬರುತ್ತದೆ. ಅದರಲ್ಲಿ ಹರ್ಷನ ಮೇಲಿನ ವಿಜಯವೂ ಸೇರಿದೆ. ನಂತರದ ಒಂದು ಸಾಲಿನಲ್ಲಿ ರಾಜ ತನ್ನ ವಿಜಯವನ್ನು ಯಾವ ರೀತಿ ಆಚರಿಸಿಕೊಂಡನು ಎನ್ನುವುದು ಒಂದು ಸಾಲಿನಲ್ಲಿ ಬರುತ್ತದೆ. ನಂತರದ ಒಂದು ಸಾಲಿನಲ್ಲಿ ಮಹಾಭಾರತದ ಕಾಲಮಾನ. ಕಡೆಯಲ್ಲಿ ರವಿಕೀರ್ತಿಯ ಮೇಲ್ಮೆ.  ಕಡೆಯಲ್ಲಿ ಜೈನ ದೇವಸ್ಥಾನಕ್ಕೆ ಕೊಟ್ಟ ದಾನ ಇತ್ಯಾದಿ. ಈ ಧಾರೆಯಲ್ಲಿ ಒಂದಿಷ್ಟು ಸ್ವಾರಸ್ಯಕರವಾದ ಅಂಶಗಳೂ ಇದೆ. 

  • ಒಂದು ಸಾಲಿನಲ್ಲಿ ಪಾಣಿನಿಯ ಪರೋಕ್ಷವಾದ ಉಲ್ಲೇಖವೂ ಬರುತ್ತದೆ. ಪಾಣಿನಿ ಬರೆದಿರುವ ಒಂದು ಪ್ರಮುಖವಾದ ರಾಜಲಕ್ಷಣದ ಉಲ್ಲೇಖ ಬರುತ್ತದೆ. 
  • ಪುಲಿಕೇಶಿಯೂ ಸಹ ಅಶ್ವಮೇಧಯಾಗ ನಡೆಸಿದುದರ ಉಲ್ಲೇಖವಿದೆ. ದೇವತೆಗಳು ಮತ್ತು  ಬ್ರಾಹ್ಮಣರನ್ನು ಗೌರವಿಸಿದುದರ ಉಲ್ಲೇಖವಿದೆ.  
  • ಧರ್ಮ-ಅರ್ಥ-ಕಾಮ-ಗಳು ರಾಜನಿಗೆ ಪ್ರಮುಖವಾದವು ಎನ್ನುವ ಉಲ್ಲೇಖ ಬರುತ್ತದೆ. 
  • ಒಂದೆಡೆ ಪುಲಿಕೇಶಿಯ ಸಮುದ್ರ ಸೇನೆಯನ್ನು ವರುಣದೇವನ ಶಕ್ತಿಗೆ ಹೋಲಿಸಲಾಗಿದೆ. 
  • ರವಿಕೀರ್ತಿ ತನ್ನನ್ನು ತಾನೇ ಕಾಳಿದಾಸ-ಭಾರವಿಗಳಿಗೆ ಹೋಲಿಸಿಕೊಳ್ಳುತ್ತಾನೆ. 

ಆದರೆ, ಶಾಸನ-ಪ್ರಶಸ್ತಿಯ ಅತ್ಯುನ್ನತ ಮಹತ್ವವಿರುವುದು ಮಹಾಭಾರತದ ಸಂದರ್ಭದಲ್ಲಿ.  

ಶಾಸನಕ್ಕೂ ಮಹಾಭಾರತಕ್ಕೂ ಇರುವ ಸಂಬಂಧ

ಸ್ವಾರಸ್ಯವೆಂದರೆ, ಈ ಶಾಸನಕ್ಕೂ ಮಹಾಭಾರತಕ್ಕೂ ಇರುವ ಸಂಬಂಧ ಪ್ರಾಸಂಗಿಕವಾದುದು. ಮಹಾಭಾರತದ ಕುರಿತು ಏನನ್ನಾದರೂ ಹೇಳುವುದು ಈ ಶಾಸನದ ಉದ್ದೇಶ ಅಲ್ಲವೇ ಅಲ್ಲ. ಆದರೂ ಒಂದು ಮಹತ್ತರವಾದ ವಿಷಯ ಶಾಸನದಲ್ಲಿ ಸೇರಿಕೊಂಡಿದೆ. ಮೇಗುತಿ ಮಂದಿರ ಸ್ಥಾಪನೆಯಾದ ಸಂದರ್ಭದಲ್ಲಿ ಈ ಶಾಸನವನ್ನು ಬರೆದ ವರ್ಷವನ್ನು ಸುಸ್ಪಷ್ಟವಾಗಿ ಬರೆದುಬಿಟ್ಟಿದ್ದಾನೆ ರವಿಕೀರ್ತಿ – ಒಂದು ಶ್ಲೋಕದಲ್ಲಿ. ಮಹಾಭಾರತ ಯುದ್ಧದ ನಂತರ ಎಷ್ಟು ವರ್ಷಗಳಾದ ಮೇಲೆ ಈ ಶಾಸನ ಬರೆಯಲಾಗಿದೆ ಎಂದು ಶ್ಲೋಕ ವರ್ಣಿಸುತ್ತದೆ. ಆ ಶ್ಲೋಕ ಹೀಗಿದೆ.  

ತ್ರಿಮ್ಶಸ್ತು ತ್ರಿಸಹಸ್ರೇಷು ಭಾರತಾದಾಹವಾದಿತಃ ।

ಸಪ್ತಾಬ್ಧ ಶತಯುಕ್ತೇಷು ಶತೇಷ್ವಬ್ದೇಷು ಪಂಚಸು ।।

ಪಂಚಾಶತ್ಸು ಕಲೌ ಕಾಲೌ ಷಟ್ಸು ಪಂಚಶತಾಸು ಚ । 

ಸಮಯಾಸು ಸಮತೀತಾಸು ಶಾಕಾನಾಮಪಿ ಭೂಭುಜಾಮ್  ।। 

ಮೊದಲನೆಯ ಶ್ಲೋಕ ಶಾಸನವನ್ನು ಬರೆದ ವರ್ಷವನ್ನು ವಿವರಿಸುತ್ತಿದೆ. ಸಾಮಾನ್ಯ ಶಾಸನವಾದರೋ ಇಂತಹ ಶಕ ವರ್ಷವೆಂದು ಚಿಕ್ಕದಾಗಿ ಹೇಳಿ ಮುಂದುವರೆಯುತ್ತದೆ. ಆದರೆ ಇದು ಕವಿಯೊಬ್ಬ ಬರೆಯಿಸಿರುವುದಾದ್ದರಿಂದ ಕಾವ್ಯಮಯ ಚಾತುರ್ಯದಿಂದ ಕೂಡಿದೆ. “ಮೂವತ್ತು ವರ್ಷ, ಮೂರು ಸಾವಿರದ ಐದು ವರ್ಷ ಮಾತ್ರವಲ್ಲದೆ, ಅದಕ್ಕೆ ಏಳುನೂರು ವರ್ಷ ಸೇರಿಸಿದರೆ ಆಗುವಷ್ಟು ವರ್ಷಗಳು ಭಾರತ ಯುದ್ಧವಾದ ನಂತರ” ಎಂದು ಶಾಸನದ ವರ್ಷವನ್ನು ವಿವರಿಸುತ್ತಾನೆ ರವಿಕೀರ್ತಿ. ಇದನ್ನು ನೇರವಾಗಿ ಬರೆಯುವುದು ಸ್ವಾರಸ್ಯ ರಸಭಂಗವೆಂದು  ಕವಿಯಾದ ರವಿಕೀರ್ತಿಗೆ ಅನ್ನಿಸಿರಬಹುದು. ಒಟ್ಟಿನಲ್ಲಿ ಹೆಚ್ಚಿನ ವಿದ್ವಾಂಸರು ಈ ಶ್ಲೋಕವನ್ನು ೩೭೭೫ (೭೦ + ೫ + ೩೦೦೦ + ೭೦೦) ವರ್ಷಗಳ ನಂತರ ಎಂದು ಅದನ್ನು ಓದುತ್ತಾರೆ. ಮೇಲ್ನೋಟಕ್ಕೆ ಅದು ಹಾಗೆ ಎನ್ನಿಸುತ್ತದೆ. ಕೆಲವು ವಿದ್ವಾಂಸರು ಅದನ್ನು ೨೫೦೦+ ಎಂದು ಬೇರೆಯ ವಿಧದಲ್ಲಿ ಓದುತ್ತಾರಾದರೂ ಅದಕ್ಕಿಂತ ತೀರಾ ಹೊಸತೆಂದು ಯಾರೂ ಓದುವುದಿಲ್ಲ. ಅದೆಲ್ಲ ಹೇಗೂ ಇರಲಿ, ಇಲ್ಲಿ ಮುಖ್ಯವಾದ ಪದವೆಂದರೆ “ಭಾರತದಾಹಾವಾದಿತಃ” ಎನ್ನುವುದು. ಅರ್ಥಾತ್ “ಭಾರತ ಯುದ್ಧದ ನಂತರ” ಎನ್ನುವುದು. 

ಇಷ್ಟೇ ಆಗಿದ್ದರೆ ನಿಗದಿ ಪಡಿಸುವುದು ಕಷ್ಟವಾಗುತ್ತಿತ್ತು. ಆದರೆ ಮುಂದಿನ ಶ್ಲೋಕ ಅದನ್ನು ಖಚಿತಪಡಿಸುತ್ತದೆ.  “ಐವತ್ತು ಆರು ಐದು ನೂರು ವರ್ಷಗಳು ಕಲಿಯುಗದಲ್ಲಿ ಶಕ ರಾಜರ ಕಾಲವಾದ ನಂತರ’ ಎನ್ನುವುದು ಮುಂದಿನ ಶ್ಲೋಕದ ವಿವರ. ಮತ್ತೆ ಹಿಂದಿನ ಶ್ಲೋಕದ ರೀತಿಯಲ್ಲಿಯೇ ಸ್ವಾರಸ್ಯದಿಂದ ಬರೆದಿರುವಂತಹದ್ದು. ಶಾಲಿವಾಹನ ಶಕ ಪ್ರಾರಂಭವಾಗುವುದು ಕ್ರಿಶ ೭೮ರಿಂದ. ಶಕ-ರ ಕಾಲ ಸಂಪೂರ್ಣವಾದುದನ್ನೇ ಶಾಲಿವಾಹನ ಶಕ ಪ್ರತಿನಿಧಿಸುವುದು ಎನ್ನುವುದು ಇತಿಹಾಸದಲ್ಲಿ ಸಿದ್ಧವಾದ ವಿಷಯ. ಇದು ಗೌತಮೀ ಪುತ್ರ ಶಾತಕರ್ಣಿ ಶಕ-ರಾಜರನ್ನು ಸೋಲಿಸಿ ಶಾತವಾಹನ ಸಾಮ್ರಾಜ್ಯವನ್ನು ಸ್ಥಾಪಿಸಿದ ದಿನ. ಅದರ ನಂತರ ೫೫೭ ವರ್ಷಗಳೆಂದರೆ (೫೦ + ೬ + ೫೦೦) ಕ್ರಿ.ಶ. ೬೩೪-೩೫ ಎನ್ನುವುದು. ಆ ವರ್ಷದಲ್ಲಿ ಈ ಶಾಸನ ಬರೆಯಿಸಲಾಗಿದೆ ಎನ್ನುವುದು ಈ ಸಾಲುಗಳ ಅರ್ಥ. ಅಂದರೆ ‘ಮಹಾಭಾರತ ಯುದ್ಧ ನಡೆದುದು ಇದಕ್ಕಿಂತ ೩೭೭೫ ವರ್ಷಗಳು ಹಿಂದೆ’ ಎಂದರೆ ಕ್ರಿ.ಪೂ. ೩೧೦೧-೨  (3101-2) ಎಂದಾಗುತ್ತದೆ ಎನ್ನುವುದು ಈ ಎರಡು ಸಾಲುಗಳ ಮಹತ್ವಪೂರ್ಣ ಹಿನ್ನೋಟ.  

ಶಾಸನದ ಐತಿಹಾಸಿಕ ಮಹತ್ವ

ಒಟ್ಟು ಈ ಶ್ಲೋಕದ ಪ್ರಮುಖತೆಯೆಂದರೆ ಇದು “ಪಾಶ್ಚಾತ್ಯ ಪ್ರಣೀತ ಭಾರತೀಯ ಇತಿಹಾಸಕ್ಕೆ” ಸೆಡ್ಡು ಹೊಡೆಯುತ್ತದೆ ಎನ್ನುವುದು. ಮ್ಯಾಕ್ಸ್ ಮುಲಾರ್ ಆರ್ಯರು ಭಾರತಕ್ಕೆ ಕ್ರಿ.ಪೂ. ೧೫೦೦-ರಲ್ಲಿ ದಂಡೆತ್ತಿ ಬಂದರು ಮಾತ್ರವಲ್ಲದೆ ವೇದಗಳ ಕಾಲವನ್ನು ಕ್ರಿಪೂ ೧೫೦೦-೧೦೦೦ ಎಂದು ನಿಗದಿಪಡಿಸಿದ್ದಾನೆ. ನಂತರದ ಎಡಪಂಥೀಯ ವಿಚಾರಧಾರೆ ಕಾಲ-ಕಾಲಕ್ಕೆ ಎದುರಾದ ಸಮಸ್ಯೆಗಳಿಗೆ ಒಂದಿಷ್ಟು ಬದಲಾಯಿಸಿಕೊಂಡಿದೆಯಾದರೂ ಕ್ರಿಪೂ. ೧೮೦- ಕ್ಕಿಂತ ಹಿಂದೆ ಹೋಗಿಲ್ಲ. ಅದರ ಜೊತೆಯಲ್ಲಿ ಇಂದು ನಾವು ಭಾರತೀಯ ಸಂಸ್ಕೃತಿ ಎಂದು ಯಾವುದನ್ನು ಕರೆಯುತ್ತೇವೆಯೋ ಅದು ಹೊರಗಿನಿಂದ ಬಂದುದು ಮತ್ತು ದಾಳಿಯ ಮೂಲಕ ಬಂದಿರುವುದು ಎನ್ನುವ ಒಂದು ಅಪರಾಧಿ-ಪ್ರಜ್ಞೆಯನ್ನು ಆಧುನಿಕ ಭಾರತೀಯರಲ್ಲಿ ತುಂಬುವುದರಲ್ಲಿ ಯಶಸ್ವಿಯಾಗಿದೆ. ಈ ಎರಡು ಶ್ಲೋಕಗಳಂತಹ ಸಾಲುಗಳು ಆಧುನಿಕ ಇತಿಹಾಸದ ದೃಷ್ಟಿಕೋನಕ್ಕೆ ಬಲವಾದ ಪೆಟ್ಟು ಕೊಡುತ್ತದೆ. ಅದು ಹೇಗೆ ಎನ್ನುವುದನ್ನು ನೋಡೋಣ.   

  • ಮೊದಲನೆಯದಾಗಿ ಇದು ಮಹಾಭಾರತ ಕಾಲವನ್ನು ಕನಿಷ್ಠ ೧೫೦೦ ವರ್ಷಗಳಷ್ಟು ಹಿಂದಕ್ಕೊಯ್ಯುತ್ತದೆ. ಅರ್ಥಾತ್, ಈ ಮೊದಲೇ ಹೇಳಿದ ಹಾಗೆ ಕ್ರಿಪೂ ೩೦೦೦ಕ್ಕಿಂತ ಹಿಂದಿನದ್ದು ಎನ್ನಬೇಕಾಗುತ್ತದೆ. 
  • ಮಹಾಭಾರತವೇ ಅಷ್ಟು ಹಳೆಯದೆನ್ನಬೇಕಾದರೆ, ಋಗ್ವೇದದ ಕಾಲ ಅದಕ್ಕಿಂತಲೂ ಹಿಂದಿನದ್ದು ಎನ್ನಬೇಕಾಗುತ್ತದೆ. ಮ್ಯಾಕ್ಸ್-ಮುಲಾರ್ ವೇದಗಳಿಗೆ ಮುನ್ನೂರು ವರ್ಷಗಳಷ್ಟು ಕಾಲ ನಿಗದಿಪಡಿಸಿದ್ದಾನೆ. ಆದರೆ ಶ್ರೀಕಾಂತ ತಲಗೇರಿಯವರು ಋಗ್ವೇದದ ಒಂದೊಂದು ಮಂಡಲವೂ ೧೦೦-ವರ್ಷಗಳು ಎಂದಿದ್ದಾರೆ. ಮಹಾಭಾರತ ಕಾಲಕ್ಕೆ ಋಗ್ವೇದ ನಿಸ್ಸಂಶಯವಾಗಿ ಸಂಪೂರ್ಣವಾಗಿತ್ತು ಎನ್ನುವುದಾದರೆ ಭಾರತೀಯ ಸಂಸ್ಕೃತಿಯ ಉಗಮ ೪೦೦೦ ಕ್ರಿ. ಪೂ ಎನ್ನಬೇಕಾಗುತ್ತದೆ. 
  • ಇಷ್ಟೆಲ್ಲಾ ಆಗಿಬಿಟ್ಟ ಮೇಲೆ, ಭಾರತದ ಮೇಲೆ ಆರ್ಯರು ದಾಳಿಯೆತ್ತಿ ಬಂದ ವರ್ಷ ಕ್ರಿ.ಪೂ. ೧೫೦೦ ಎನ್ನುವುದು ದುಃಸ್ಸಾಧ್ಯ. 
    • ಒಂದೋ  ದಾಳಿಯೇ ನಡೆದಿಲ್ಲವೆನ್ನಬೇಕಾಗುತ್ತದೆ. 
    • ದಾಳಿ ನಡೆದಿದ್ದರೆ ಅದು ೧೫೦೦ ವರ್ಷಗಳಿಗಿಂತಲೂ ಹಿಂದಿನದ್ದು ಎನ್ನಬೇಕಾಗುತ್ತದೆ. ಆಗ ಯಾವ-ಯಾವ ಕಾಲದಲ್ಲಿ ಎಲ್ಲಿಂದ ಜನರು ಬಂದಿದ್ದರು ಅಥವಾ ದಾಳಿ ಮಾಡಿದ್ದರು ಎನ್ನುವುದನ್ನು ಖಚಿತಪಡಿಸಬೇಕಾಗುತ್ತದೆ. 
    • ಮಿಗಿಲಾಗಿ, ಸಿಂಧು-ಸರಸ್ವತೀ  ನಾಗರಿಕತೆ ವೇದಸಂಸ್ಕೃತಿಯ ಒಳಗಿನದ್ದೇ ಆಗಬೇಕಾಗುತ್ತದೆ. ಅಥವಾ ಒಂದಕ್ಕೊಮ್ದು ಪೂರಕವಾಗಬೇಕಾಗುತ್ತದೆ. ಕನಿಷ್ಠ ಶತ್ರು-ಸಂಸ್ಕೃತಿಗಳಂತೂ ಅಲ್ಲವಾಗುತ್ತದೆ.   
  • ಮಹಾಭಾರತದಲ್ಲಿ ಸರಸ್ವತೀ ನದಿಯ ಉಲ್ಲೇಖ ಬಹುವಾಗಿ ಬರುತ್ತದೆ. ಅದರಲ್ಲೂ ಬಲರಾಮನ ತೀರ್ಥಯಾತ್ರೆ ಪ್ರಭಾಸ ಕ್ಷೇತ್ರದಿಂದ ಶುರುವಾಗಿ ನದಿಯ ದಡದಲ್ಲೇ ನಡೆದು ಹಿಮಾಲಯದವರೆಗೆ ತಲುಪುವುದು ವಿವರವಾಗಿ ಬರುತ್ತದೆ. ಸರಸ್ವತೀ ನದಿ ಒಣಗುತ್ತಿದೆ ಎನ್ನುವುದು ಆ ವಿವರಣೆಯಿಂದ ಸ್ಪಷ್ಟವಾಗುತ್ತದೆ. ನದಿಯು ಕ್ರಿಪೂ. ೨೦೦೦ ಸಂಪೂರ್ಣ ಒಣಗಿಹೋದದ್ದು ಎನ್ನುವುದು ಆಧುನಿಕ ‘ಪೇಲಿಯೋಗ್ರಫಿ’ ವಿಜ್ಞಾನದಿಂದ ತಿಳಿಯುತ್ತದೆ. ಶಾಸನದಿಂದ ಮಹಾಭಾರತಕ್ಕೆ ನಿಗದಿಯಾಗುವ ಕಾಲ ಸರಸ್ವತೀ ನದಿಯ ಪೇಲಿಯೋಗ್ರಫಿಯ ಕಾಲದ ನಿಗದಿಗೆ ಹೊಂದಿಕೊಳ್ಳುತ್ತದೆ. ಹೀಗೆ ಒಂದು ಸಾಕ್ಷ್ಯ ಮತ್ತೊಂದು ಸಾಕ್ಷ್ಯಕ್ಕೆ ಹೊಂದಿಕೊಳ್ಳುವುದು ಮಹತ್ತರವಾದ ವಿಷಯ. ಆಧುನಿಕ ಇತಿಹಾಸ ಅಧ್ಯಯನದಲ್ಲಿ ಇಂತಹ ಹೊಂದಾಣಿಕೆಗೆ ಪ್ರಮುಖತೆಯಿದೆ.
  • ಇಷ್ಟೆಲ್ಲಾ ಆಗಿಬಿಟ್ಟರೆ ಒಟ್ಟು ಭಾರತೀಯ ಇತಿಹಾಸವನ್ನು ವೇದಕಾಲದಿಂದ ಬುದ್ಧನ ಕಾಲದವರೆಗೆ ಮತ್ತೆ ಬರೆಯಬೇಕಾಗುತ್ತದೆ. ೨-೩ ಸಾವಿರ ವರ್ಷಗಳಷ್ಟು ದೀರ್ಘ ಇತಿಹಾಸ ಸಾಮಗ್ರಿ ಇಲ್ಲವಾದರೆ ಅದನ್ನು ತುಂಬುವುದಕ್ಕೆ ಮತ್ತಷ್ಟು ಸಂಶೋಧನೆ ನಡೆಸಬೇಕಾಗುತ್ತದೆ. ವ್ಯಾಸರಿಂದ ರಚಿತವಾದ ಪುರಾಣಗಳೇ ಮತ್ತೆ ಆಕರಗಳ ಹೊಸ ಸಂಶೋಧನೆ ಮೊದಲಾಗಬೇಕಾಗುತ್ತದೆ. ಸಿಂಧು-ಸರಸ್ವತೀ ನಾಗರೀಕತೆಯನ್ನು ವೈದಿಕ ದೃಷ್ಟಿಕೋನದಿಂದ ನೋಡುವ ಪ್ರಕ್ರಿಯೆ ಮೊದಲಾಗುವುದಕ್ಕೆ ಅವಕಾಶವಾಗುತ್ತದೆ.

ಹೀಗೆ, ಯಾವ ರೀತಿಯಲ್ಲಿ ನೋಡಿದರೂ, ಭಾರತವರ್ಷದ ಇತಿಹಾಸವನ್ನು ಸುಸ್ಪಷ್ಟಗೊಳಿಸುವ, ವಿಸ್ತರಿಸುವ  ಅಂಶವನ್ನು ಈ ಒಂದು ಶಾಸನದ ನಾಲ್ಕು ಸಾಲುಗಳು ಹೊಂದಿವೆ. ಆಧುನಿಕ ಇತಿಹಾಸಕಾರರು ಹಾಕಿರುವ ಭಾರತೀಯ ಪರಂಪರೆಗೆ ಹಾಕಿರುವ ಮಿತಿಯ ಬೇಲಿಯನ್ನು ಈ ಶಾಸನ ಛಿದ್ರಗೊಳಿಸುತ್ತದೆ.

ಈ ಶ್ಲೋಕಕ್ಕೆ ಬರಬಹುದಾದ ಆಕ್ಷೇಪಣೆಯಾದರು ಏನು?

ಈ ಸಾಂಸ್ಕೃತಿಕ ಯುದ್ಧವನ್ನು ಅಷ್ಟು ಸುಲಭವಾಗಿ ಗೆಲ್ಲಲಾಗುತ್ತದೆಯೇ? ಇದಕ್ಕೆ ಅನೇಕ ಆಕ್ಷೇಪಣೆಗಳು ಏಳಬಹುದು.

  • ಮೊದಲನೆಯದಾಗಿ, ಇಲ್ಲಿ ‘ಭಾರತದಾಹವಾದಿತಃ’ ಮಹಾಭಾರತವನ್ನೇ ಉಲ್ಲೇಖಿಸುತ್ತದೆ ಎಂದು ಹೇಳುವುದಾದರೂ ಹೇಗೆ? ಬೇರಾವುದೋ ‘ಭಾರತ’ ಯುದ್ಧವಿರಬಹುದೇ?
  • ಆ ಶ್ಲೋಕದಲ್ಲಿ ವರ್ಷಗಳ ಉಲ್ಲೇಖವಿರುವುದು ಬಿಡಿ-ಬಿಡಿ ಅಂಕಿಗಳ ಮೂಲಕ. ಅವುಗಳನ್ನು ಒಟ್ಟುಗೂಡಿಸಿರುವ ಗಣನೆ ಹಾಗೆ ಎಂದು ಹೇಗೆ ಹೇಳುವುದು?
  • ಶಕರಾಜರ ನಂತರವೆಂದರೆ ಶಾಲಿವಾಹನ ಶಕವನ್ನೇ ಹೇಳುತ್ತಿದೆ ಎಂದು ಹೇಗೆ ಹೇಳುವುದು?
  • ಕವಿ ಜೈನ-ನಾದ ಮೇಲೆ ಮಹಾಭಾರತವನ್ನೇಕೆ ಕಾಳಗಣನೆಗೆ ತೆಗೆದುಕೊಳ್ಳುತ್ತಾನೆ?

ಈ ಎಲ್ಲಾ ಪ್ರಶ್ನೆಗಳು ಉಚಿತವೇ ಸರಿ. ಆದರೆ ಈ ಎಲ್ಲಕ್ಕೂ ಉಚಿತವಾದ ಉತ್ತರವಿದೆ. ಕವಿ ಜೈನನಾಗಿರಬಹುದು. ಆದರೆ ವೈದಿಕ ಅಂಶಗಳನ್ನು ಉಲ್ಲೇಖಿಸುವುದಿಲ್ಲ ಎಂದು ಹೇಳಲಾಗದು. ಜೈನಕವಿಗಳಾದ ಪಂಪ, ರನ್ನರು ಮಹಾಭಾರತವನ್ನೇ ಆಕರವಿಟ್ಟುಕೊಂಡು ಕಾವ್ಯವನ್ನು ಬರೆದವರು. ಇದೇ ಶಾಸನದಲ್ಲಿ ಜೈನನಾದ ರವಿಕೀರ್ತಿಯೇ ಪುಲಿಕೇಶಿಯನ್ನು ಹೋಲಿಸುವಾಗ – ಚಂದ್ರವಂಶದ ದೊರೆ ನಹುಷನಿಗೆ ಹೋಲಿಸುತ್ತಾನೆ. ನಹುಷ ರಾಜ ಸೂರ್ಯವಂಶದಲ್ಲಿ ಬರುತ್ತಾನಾದರೂ ಅವನು ವೈದಿಕ ರಾಜನೇ ಸರಿ. ಜೈನ ಪರಂಪರೆಯಲ್ಲೂ ಅವನಿಗೆ ಸ್ಥಾನವಿದೆ. ಮತ್ತೊಂದೆಡೆ ರವಿಕೀರ್ತಿ ‘ತನ್ನ ವಿಜಯಯಾತ್ರೆಯ ನಂತರ ಪುಲಿಕೇಶಿ ದೇವತೆಗಳನ್ನೂ, ಬ್ರಾಹ್ಮಣರನ್ನೂ ಗೌರವಿಸಿದನು’ ಎನ್ನುವುದನ್ನು ಎತ್ತಿ ಹಿಡಿಯುತ್ತಾನೆ. ಆದ್ದರಿಂದ ಕವಿ ಜೈನನಾಗಿರುವುದು ಅಡ್ಡಿಬರುವುದಿಲ್ಲ. ಮಿಗಿಲಾಗಿ, ಜೈನರು ವೈದಿಕಪರಂಪರೆಯ ಒಳಗಿದ್ದೇ ಮತ್ತೊಂದು ಧಾರೆಯಾಗಿದ್ದರು ಎನ್ನಿಸುತ್ತದೆ. ಅದಲ್ಲದೆ, ಕಡೆಯಲ್ಲಿ ತನ್ನನ್ನು ತಾನೇ ವೈದಿಕ ಕವಿಗಳಾದ ಕಾಳಿದಾಸ, ಭಾಸರ ಪರಂಪರೆಗೆ ಹೋಲಿಸಿಕೊಳ್ಳುತ್ತಾನೆ. ಜೈನ-ವೈದಿಕ ಪರಂಪರೆಗಳು ಎದಿರು-ಬದಿರಾಗೇನು ಇರಲಿಲ್ಲ, ಒಂದರ ಪಕ್ಕ ಒಂದು, ಒಂದೇ ಆಗಿ ಬೆಳೆದವು ಎನ್ನುವುದನ್ನು ಇದು ಸಾರುತ್ತದೆ.

ಶ್ಲೋಕಗಳಲ್ಲಿರುವ ಸಂಖ್ಯೆಗಳನ್ನು ಬೇರೆ-ಬೇರೆ ರೀತಿಯಲ್ಲಿ ಓದಲು ಸಾಧ್ಯವಿದೆ. ಸಾಮಾನ್ಯವಾಗಿ ಎಲ್ಲರೂ ಅಂಕಿಗಳು ಕೊಟ್ಟಿರುವ ರೀತಿಯಲ್ಲೇ ಕೂಡಿಸುತ್ತಾರೆಯಾದರು ಕೆಲವರು ಬೇರೆ ರೀತಿಯಲ್ಲಿ ಗಣನೆ ಮಾಡುತ್ತಾರೆ. ಅಂತಹ ಒಂದು ರೀತಿ ಇಲ್ಲಿದೆ. ಆದರೆ ಅದೂ ಕೂಡಾ ಮಹಾಭಾರತಕ್ಕೆ ಕ್ರಿಪೂ ೨೫೦೦ ವರ್ಷವನ್ನು ನಿಗದಿಮಾಡುತ್ತದೆ. ತೀರಾ ಈ ಶ್ಲೋಕ ವರ್ಷಗಳ ಕುರಿತು ಹೇಳುತ್ತಲೇ ಇಲ್ಲ ಎಂದು ವಾದ ಮಾಡಿದರೆ ಮಾತ್ರ ಅದರ ಐತಿಹಾಸಿಕತೆಯನ್ನು ನಾಶ ಮಾಡಬಹುದು. ಅದನ್ನು ಯಾರೂ ಈ ರೀತಿ ವಾದ ಮಾಡುತ್ತಿಲ್ಲವಾಗಿ ಅದು ಮಹಾಭಾರತ ಕಾಲವನ್ನು ಕುರಿತೇ ಹೇಳುತ್ತಿರುವುದು ಸ್ಪಷ್ಟವಾಗಿದೆ. ಆಧುನಿಕ ಭಾರತೀಯ ಇತಿಹಾಸಕಾರರು, ಅದರಲ್ಲೂ ಎಡಪಂಥೀಯರು, ಇದನ್ನು ಸಂಪೂರ್ಣವಾಗಿ ಅವಗಣನೆ ಮಾಡಿದ್ದಾರೆಂದರೆ ಇಲ್ಲಿರುವ ಕಾಲನಿಗದಿ ಅವರ ದೃಷ್ಟಿಕೋನಕ್ಕೆ ವಿರುದ್ಧವಾಗಿರುವುದು ಸ್ಪಷ್ಟವಾಗುತ್ತದೆ. ಅದೇ ರೀತಿ ಯಾವ ಇತಿಹಾಸಕಾರಿಗೂ ಶಕರಾಜರ ಕಾಲದ ಬಗ್ಗೆ ಅನುಮಾನವಿಲ್ಲ. ಶಕ ಸಾಮ್ರಾಜ್ಯವನ್ನು ಸೋಲಿಸಿ ಒಂದು ಹೊಸಕಾಲಮಾನವನ್ನು ಸೃಷ್ಟಿ ಮಾಡಿದ್ದು ಗೌತಮೀಪುತ್ರನೇ ಸರಿ. ಚಂದ್ರಗುಪ್ತನೂ ಶಕರಾಜರನ್ನು ಸೋಲಿಸಿದ್ದರೂ ಅದೊಂದು ಕಾಲಮಾನವನ್ನು ಸೃಷ್ಟಿಸಲಿಲ್ಲ. 

ಇನ್ನುಳಿಯುವುದು ಒಂದೇ. ‘ಭಾರತದಾಹಾವಾದಿತಃ’ ಎನ್ನುವುದು ನಿಜಕ್ಕೂ ಮಹಾಭಾರತ ಯುದ್ಧವನ್ನು ಉಲ್ಲೇಖಿಸುತ್ತಿದೆಯೇ ಎನ್ನುವುದು. ಇತಿಹಾಸಲ್ಲಿ ಮತ್ತೊಂದು ಭಾರತಯುದ್ಧವಿಲ್ಲ. ಆದರೆ, ಜೈನ ಪುರಾಣದಲ್ಲಿ ಭರತ-ಬಾಹುಬಲಿಗಳಿದ್ದಾರೆ. ಅವರಿಬ್ಬರ ನಡುವೆ ಮಹತ್ತರವಾದ ದ್ವಂದ್ವ ಯುದ್ಧ ನಡೆದು ಭರತ ಸೋಲುತ್ತಾನೆ. ಬಾಹುಬಲಿಗೆ ವೈರಾಗ್ಯ ಬರುತ್ತದೆ. ಅವರಿಬ್ಬರೂ ಮೊದಲ ಜೈನ ತೀರ್ಥಂಕರರಾದ, ಇಕ್ಷ್ವಾಕು-ಕುಲದ ಅರ್ಥಪ್ರವರ್ತಕ ರಾಜರಾದ ಋಷಭದೇವನ ಮಕ್ಕಳು. ಭಾಗವತದಲ್ಲೂ ಇವರ ಉಲ್ಲೇಖ ಬರುತ್ತದೆ. ಆದರೆ, ಜೈನ ಪರಂಪರೆಯಲ್ಲಿ ಆ ಯುದ್ಧದಿಂದ ಒಂದು ಕಾಲಮಾನವೇನೂ ಸ್ಥಾಪನೆಯಾಗಿಲ್ಲ. ಅದರಲ್ಲೂ ಜೈನಪರಂಪರೆ ಈ ವಿಷಯಗಳಲ್ಲಿ ವಿವರಗಳನ್ನು ಪೋಷಿಸಿಕೊಂಡು ಬರುವಂತಹ ಶಾಸ್ತ್ರೀಯ-ಜ್ಞಾನ ಪರಂಪರೆ. ಅಂತಹ ಪರಂಪರೆಯಲ್ಲಿ ಈ ಯುದ್ಧ ಒಂದು ಕಾಲಮಾನವಾಗಿಲ್ಲದಿರುವುದರಿಂದ, ಬೇರಾವ ಜೈನ ಸಾಹಿತ್ಯದಲ್ಲಿಯೂ ಅಂತಹ ಉಲ್ಲೇಖವಿಲ್ಲದಿರುವುದರಿಂದ ಇದು ಹೀಗಿರಲಾರದು. ಮಹಾಭಾರತವಾದರೋ ಕಲಿಯುಗದ ಕಾಲಮಾನದ ಕಾರಣ ಕಾಲಮಾನ ಪ್ರವರ್ತಕವೇ ಸರಿ. ಆದರೆ ಇದು ಋಷಭದೇವನ ಕಾಲವಾದರೂ ಭಾರತೀಯ ಸಂಸ್ಕೃತಿಯ ಪ್ರಾಚೀನತೆಗೆ ಕಾರಣವಾಗುತ್ತದೆ ಮತ್ತು ಮಹಾಭಾರತ ಕನಿಷ್ಠ ಕ್ರಿಪೂ ೨೦೦೦ವಾಗುತ್ತದೆ. ಆರ್ಯರಂತೂ ೧೫೦೦ಕ್ಕೆ ಭಾರತಕ್ಕೆ ಬಂದು ಹೊಸದೊಂದು ಸಂಸ್ಕೃತಿಯ ಹರಿಕಾರರಾಗುವುದು ದುಃಸಾಧ್ಯವಾಗುತ್ತದೆ. 

ಆಧುನಿಕ ಇತಿಹಾಸ ಮತ್ತು ಭಾರತೀಯ ಇತಿಹಾಸ-ಪುರಾಣ ಪರಂಪರೆ      

ಹಾಗೆ ನೋಡಿದರೆ ಈ ರೀತಿಯಾಗಿ ಕಾಲದ ಹರಿವಿನ ಬಿಂದುವಿನೊಂದರಲ್ಲಿ ಏನಾಯಿತು ಎನ್ನುವುದು ಭಾರತೀಯ ಮನಸ್ಸಿಗೆ ಅಷ್ಟಾಗಿ ಹಿಡಿಸಿದ ಕಲ್ಪನೆಯಲ್ಲ. ಕಾಲದ ಹರಿವನ್ನು ನೇರಗತಿಯಲ್ಲಿ ಒಂದು ರೇಖೆಯಲ್ಲಿ ನಾವು ನೋಡುವುದೂ ಇಲ್ಲ. ಕಲ್ಪ-ಮನ್ವಂತರ-ಯುಗ-ವರ್ಷಗಳಲ್ಲಿ ನಮ್ಮ ಕಾಲ ಹರಿಯುತ್ತದೆ. ಮಹಾಭಾರತ ನಮಗೆ “ಹೀಗೆ ನಡೆದಿರುವ” ಇತಿಹಾಸವಾದರೂ ಇಂತಹ ವರ್ಷದಲ್ಲೇ ಸಂಭವಿಸಿರುವ ಇತಿಹಾಸ ಎನ್ನುವ ಹಠ ನಮಗಿಲ್ಲ. ಹೀಗಿದ್ದಾಗ ಇಷ್ಟೆಲ್ಲವನ್ನೂ ವಿವರಿಸಿ ನಾವು ಸಿದ್ಧಮಾಡಬೇಕಾಗಿರುವುದಾದರೂ ಏನು ಎನ್ನುವ ಪ್ರಶ್ನೆ ಏಳುತ್ತದೆ.

ಈ ಪ್ರಶ್ನೆಗೆ ಒಂದು ಪ್ರಮುಖ ಉತ್ತರವಿದೆ. ಚಾಲುಕ್ಯರ ಕಾಲದಲ್ಲಿ ‘ಮಹಾಭಾರತದ ಕಾಲದ’ ಬಗ್ಗೆ ಒಂದು ಸ್ಪಷ್ಟವಾದ ಕಲ್ಪನೆಯಿತ್ತು ಎನ್ನುವುದಂತೂ ಈ ಶಾಸನದಿಂದ ಸಿದ್ಧವಾಗುತ್ತದೆ. ಆ ಎರಡು ಶ್ಲೋಕಗಳು ಯಾವ ಖಚಿತವಾದ ಸಂಖ್ಯೆ ಮತ್ತು ವರ್ಷ ಎನ್ನುವುದರ ಬಗ್ಗೆ ಭಿನ್ನಾಭಿಪ್ರಾಯ ಇರಬಹುದಾಗಿದೆ. ಆದರೆ ಅಂತಹ ಯಾವುದೋ ಒಂದು ಸಂಖ್ಯೆಯನ್ನು ಮಹಾಭಾರತ ಕಾಲಕ್ಕೆ ನಿಗದಿಪಡಿಸಿಕೊಂಡಿದ್ದರು ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅರ್ಥಾತ್ ಆಧುನಿಕ-ಪೂರ್ವಕಾಲದಲ್ಲಿ ಮಹಾಭಾರತ ಹಿಂದೆ ನಡೆದಿರುವ ಇತಿಹಾಸ ಎಂದು ಪರಿಗಣಿತವಾಗಿತ್ತು ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆಧುನಿಕ ಪೂರ್ವ ಕಾಲದಲ್ಲಿ ಮಹಾಭಾರತ-ಕಾಲದ ಸ್ಪಷ್ಟಪರಿಕಲ್ಪನೆಯಿತ್ತು, ಅದರ ಐತಿಹಾಸಿಕತೆಯ ನಂಬಿಕೆಯಿತ್ತು ಎಂದಾದ ಮೇಲೆ ಆಧುನಿಕ ಕಾಲದಲ್ಲಿ ನಾವು ಮಾಡುವ ವಿಶ್ಲೇಷಣೆ ಅದಕ್ಕೆ ಪೂರಕವಾಗಿರಬೇಕು. ಆದ್ದರಿಂದ ಆಧುನಿಕ ಇತಿಹಾಸ ಇದಕ್ಕೆ ವಿರುದ್ಧವಾದ ಐತಿಹಾಸಿಕತೆಯನ್ನು ಸೃಷ್ಟಿಸುವುದು ತಪ್ಪಾಗುತ್ತದೆ. ಅಲ್ಲದೆ, ಮಹಾಭಾರತದಲ್ಲಿ ಇರಬಹುದಾದ ಇನ್ನಿತರ ಐತಿಹಾಸಿಕವೆನ್ನಬಹುದಾದ ವಿವರಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡು ಆಧುನಿಕ ಇತಿಹಾಸವನ್ನು ಬೆಳೆಸಬೇಕಾಗುತ್ತದೆ. ವೇದ, ಪುರಾಣಗಳಲ್ಲಿಯೂ ಅಂತಹ ಐತಿಹಾಸಿಕ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. 

ಹೀಗೆ ಅನೇಕ ಸ್ತರಗಳಲ್ಲಿ ಈ ಶಾಸನ ಪ್ರಮುಖವಾಗಿದ್ದು ಭಾರತೀಯ ಇತಿಹಾಸಕ್ಕೆ ಹೊಸದಿಕ್ಕನ್ನು ತೋರಿಸಬಲ್ಲದಾಗಿದೆ.

Feature Image Credit: wikipedia.org

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.