“ನಮ್ಮ ಊರು ಮಲೆನಾಡಿನ ಸೆರಗಿನಲ್ಲಿದೆ. ಮಧ್ಯಕ್ಕಿಂತಲೂ ಯಾವುದರಲ್ಲೂ ಯಾವಾಗಲೂ ಸೆರಗು ಹೆಚ್ಚು ಸೊಗಸು” — ಇಂತಹ ಸೊಗಸಾದ ಸಾಲಿನೊಂದಿಗೆ ತಮ್ಮ ರಸಿಕತೆಯನ್ನು ಪ್ರಕಟಿಸುತ್ತಲೇ ‘ನಮ್ಮ ಊರಿನ ರಸಿಕರು’ ಪುಸ್ತಕದ ಮೊದಲ ರಸಿಕರಾಗುತ್ತಾರೆ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರರು. ಈ ಪುಸ್ತಕವು ಹದಿನಾಲ್ಕು ಮುದ್ರಣಗಳನ್ನು ಕಂಡ ಮೇಲೆಯೂ ಇಷ್ಟು ದಿವಸ ನನ್ನ ಕೈಗೆ ಸಿಗದಿರುವುದು ದುರದೃಷ್ಟ. ಆದರೂ, ಅಂತೂ ಇಂತೂ ಓದಿದೆನಲ್ಲಾ ಎಂಬುದೇ ಸಂತೋಷ. ಆ ಸಂತೋಷವೂ ಬಗೆಬಗೆಯದು. ಕಣ್ಮುಚ್ಚಿ ನೆನೆಯುವಂತಹುದು. ಮತ್ತೊಮ್ಮೆ ಮಗುದೊಮ್ಮೆ ಮೊಗದಲ್ಲಿ ಕಿರುನಗೆಯನ್ನು ಬೀರಿಸುವಂತಹುದು. ಘಕ್ಕನೆ ನಕ್ಕ ನನ್ನ ಸುತ್ತಲಿರುವ ಜನ ಇವನಿಗೇನಾಗಿದೆ ಎಂಬ ಪ್ರಶ್ನೆಯನ್ನು ಕೇಳಿಸುವಂತಹುದು. ಜೊತೆಗೆ ಆ ನೆನಪನ್ನು ಹಂಚಿಕೊಂಡು ಹೆಚ್ಚಿಸಿಕೊಳ್ಳುವ ಹುನ್ನಾರ ಮಾಡಿಸುವಂತಹುದು. ನಮ್ಮ ಬಳಿಯಿದ್ದು ನಮಗೆ ತಿಳಿಯದಿರುವ ಹೊನ್ನು ನಮಗೆ ಕಂಡು ಮತ್ತೆ ಕೈತಪ್ಪಿ ಹೋದ ಮಧುರವಿಷಾದವನ್ನು ತರುವಂತಹುದು. ಅಂದ ಹಾಗೆ ಈ ಪುಸ್ತಕ ದೊಡ್ಡದಲ್ಲ. ಕೇವಲ ನೂರಿಪ್ಪತ್ತು ಪುಟಗಳ ಗದ್ಯಕಾವ್ಯ.
ಹಾಸನದಿಂದ ಇಪ್ಪತ್ತೈದು ಕಿಲೋಮೀಟರ್ ಮತ್ತು ರಾಜಧಾನಿಯಾದ ಬೆಂಗಳೂರಿನಿಂದ ಇನ್ನೂರು ಕಿಲೋಮೀಟರ್ ದೂರದಲ್ಲಿರುವ ಗೊರೂರಿಗೆ ಆಧುನಿಕತೆ ೧೯೩೦ರಲ್ಲಿಯೇ ಪ್ರವೇಶ ಮಾಡಿರುವುದು ತಿಳಿಯುತ್ತದೆ. ೧೯೩೦ರ ಕಾಲದಲ್ಲಿ ಬಸ್ಸಿನ ಸೌಕರ್ಯವಿದ್ದ ಕರ್ಣಾಟಕದ ಹಳ್ಳಿಗಳು ಹೆಚ್ಚಿರಲಾರವು. ಹೇಮಾವತಿ ನದಿಯ ದಯೆಯಿಂದ ಫಸಲು ಚೆನ್ನಾಗಿದ್ದು ಗೊರೂರು ಸಮೃದ್ಧವಾಗಿತ್ತೆಂದು ಪುಸ್ತಕದಿಂದಲೇ ತಿಳಿಯುತ್ತದೆ. ಲಕುಮಿ ಬಂದಾಗ ಆಧುನಿಕತೆಯ ಸವಲತ್ತುಗಳು ದೂರ ಉಳಿಯುವವೇ? ಆಗ ಆಧುನಿಕತೆಗೂ ಹಿಂದಿನಿಂದ ಬಂದ ಆಚರಣೆಗೂ ಸಂಧಿಕಾಲ. ಇಂತಹ ಸಂಧಿಕಾಲದಲ್ಲಿ ಎರದೂ ದಾರಿಗಳ ಒಳಿತು ಕೆಡಕುಗಳು ಚೆನ್ನಾಗಿ ತಿಳಿಯುತ್ತವೆ. ಆಧುನಿಕತೆಯ ಭರದಲ್ಲಿ ನಲುಗಲು ಆರಂಭಿಸಿದ ಹಳೆಯ ತತ್ತ್ವಗಳನ್ನು ಕಂಡೇ ರಾಮಸ್ವಾಮಿ ಅಯ್ಯಂಗಾರರು ಈ ಪುಸ್ತಕ ರಚನೆಗೆ ಕೈ ಹಾಕಿದರೆ? ಏಕೆಂದರೆ, ನಮ್ಮ ದೈನಂದಿನ ಜೀವನದಿಂದ ದೂರವಾಗುತ್ತಿರುವ ಸಂಗತಿಗಳನ್ನು ನೆನಪಿಸಿಕೊಳ್ಳಲು ತಾನೇ ಪುಸ್ತಕಗಳನ್ನು ಬರೆಯುವುದು? ಕಣ್ಣಿನ ಮುಂದಿರುವ ಸಂಗತಿಗೆ ದಿನಪತ್ರಿಕೆಯನ್ನೋದುತ್ತಾರೆ. ಹಾಗೆ — “ನಮ್ಮ ಊರಿನ ರಸಿಕರು” — ಕಳೆದು ಹೋಗುತ್ತಿರುವ ಪ್ರಪಂಚದ ಸವಿಯನ್ನು ಹಿಡಿದಿಡುವ ಪ್ರಯತ್ನವಾಗಿ ತೋರುತ್ತದೆ. ಒಂದು ವಸ್ತು ಕಳೆದು ಹೋಗುತ್ತಿರುವಾಗ ಅದರ ಮೇಲಿನ ಪ್ರೀತಿ ಹೆಚ್ಚುತ್ತದೆಯಲ್ಲವೇ? ಆ ಪ್ರೀತಿಯೇ ಇಲ್ಲಿಯೂ ಕಾಣಿಸುತ್ತದೆ. ಅಥವಾ ಕನ್ನಡನಾಡಿನಲ್ಲಿ ಓದುವ ಅಭ್ಯಾಸ ಹೆಚ್ಚುತ್ತಿರುವ ಆ ನವೋದಯದ ಕಾಲದಲ್ಲಿ ಹೊಸ ಸಾಹಿತ್ಯಪ್ರಕಾರವಾಗಿ ಕೂಡ ಇದು ನಿರ್ಮಾಣಗೊಂಡಿರಬಹುದು. ಏನೇ ಇರಲಿ, ಪುಸ್ತಕ ನಮ್ಮೊಂದಿಗಿರುವುದು ನಮಗೆ ಸುಗ್ಗಿ.
೧೯೦೪ರಲ್ಲಿ ಹುಟ್ಟಿದ ಗೊರೂರು ರಾಮಸ್ವಾಮಿ ಅಯ್ಯಂಗಾರರ ಈ ಪುಸ್ತಕ ಮೊದಲು ಪ್ರಕಟವಾದದ್ದು ೧೯೩೨ರಲ್ಲಿ. ಅಂದರೆ ೨೬-೨೭ ವರ್ಷದ ಪ್ರಾಯದವರಿದ್ದಾಗ ಬರೆದ ಪುಸ್ತಕ. ಮೊದಲ ಮತ್ತು ಎರಡನೆಯ ಮಹಾಯುದ್ಧಗಳ ನಡುವಣ ಕಾಲವದು. ಒಂದೆಡೆ ನವನಾಗರಿಕತೆಯ ಹುಮ್ಮಸ್ಸಿದ್ದರೆ ಇನ್ನೊಂದೆಡೆ ಪರಂಪರೆಯ “ಪರ್ದಿಷ್ಟದ” (ಪ್ರತಿಷ್ಠೆಯ) ಸೌಖ್ಯ. ನವಮಾರ್ಗವು ಪುರಾಣ ಮತ್ತು ಪುರಾಣಿಕರನ್ನು ಕಂಡು ನಗುವ ಕಾಲ. ಹಳೆಯವರು ಹೊಸತನ್ನು ಕಂಡಾಗ ಮೂಗಿನ ಜೊತೆಗೆ ಕಾಲನ್ನೂ ಮುರಿಯುವ ಹಾಗಿದ್ದ ಕಾಲ. ಎರಡರ ಪರವಾಗಿಯೂ ವಿರುದ್ಧವಾಗಿಯೂ ವಕಾಲತ್ತು ವಹಿಸುವ ಗೊರೂರರು ನವನಾಗರಿಕತೆಯ ಆತುರ ಬೇಕಾದರೂ ಹಳ್ಳಿಯ ನೆಮ್ಮದಿಯೇ ಲೇಸು ಎಂದು ಸಾರಿದ ಹಾಗಿದೆ. ಯಾವ ವಯಸ್ಸಿನವರೇ ಆಗಲಿ, ತಮ್ಮ ಅನುಭವವನ್ನು ಪ್ರೀತಿಯಿಂದ, ಸಾವಧಾನರಾಗಿ, ಸೆರೆ ಹಿಡಿದುಕೊಳ್ಳುವವರು ವಿರಳ. ಸೆರೆ ಹಿಡಿದವರು ಚೆನ್ನಾಗಿ ಬರೆದಿಡುವುದು ಇನ್ನೂ ವಿರಳ. ಮುವ್ವತ್ತಕ್ಕಿಂತ ಚಿಕ್ಕ ವಯಸ್ಸಿನಲ್ಲೇ ಇಂತಹ ಅನುಭವದ ಮತ್ತು ಕಥನಕೌಶಲದ ಪಾಕ ಅತಿವಿರಳ. ರಾಮಸ್ವಾಮಿಗಳು ಈ ಅತಿವಿರಳರ ಚಿಕ್ಕ ಗುಂಪಿಗೆ ಸೇರತಕ್ಕವರು. ಅದರಿಂದಲೇ ಏನೋ ಇವರ ಪುಸ್ತಕಕ್ಕೆ ಡಿವಿಜಿ ಮುನ್ನುಡಿ ಬರೆಯಲು ಒಪ್ಪಿದ್ದು. ಅಂದ ಹಾಗೆ ಮೈಸೂರು ಮಲ್ಲಿಗೆಗೂ ಡಿವಿಜಿಯವರದೇ ಮುನ್ನುಡಿ ಎಂದು ನೆನಪು.
ಜ್ಞಾಪಕಚಿತ್ರಶಾಲೆಯನ್ನು ನಮಗಾಗಿ ತೆರೆದ ದಿವಿಜ ಗುಂಡಪ್ಪನವರ ಮುನ್ನುಡಿಯು ಒಂದು ಭಾವಿಭಾಗ್ಯದ ಹಾರೈಕೆಯ ಹಾಗೆ ನಮ್ಮಲ್ಲಿ ನಿರೀಕ್ಷೆಯನ್ನು ಮೂಡಿಸುತ್ತದೆ. ಹಾಸ್ಯರಸದ ಅಂತರಾಳವನ್ನು ಹೊಕ್ಕ ಅವರ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು — “ಜೀವನದ ಸಣ್ಣ ಸಣ್ಣ ವಿಕಾರಗಳು ಚಕ್ಕುಲಗುಲಿಯಿಡುವ ಬೆರಳುಗಳು; ದೊಡ್ಡ ದೊಡ್ಡವು ಶೂಲದ ಮೊನೆಗಳು”. ಅವರ ಹೋಲಿಕೆಯೂ ಮನೋಜ್ಞ — “ಸೀಹಣ್ಣುಗಳ ನಡುವೆ ಇರುವ ಹುಳಿದಾಳಿಂಬೆಯಂತೆ ಪ್ರಿಯವೂ ಹೌದು, ಹಿತವೂ ಹೌದು”. ಇನ್ನು ಕೆಲವೇ ವರ್ಷಗಳಲ್ಲಿ ಶತಮಾನೋತ್ಸವ ಮುಟ್ಟುವ ‘ರಸಿಕರು’ ಡಿವಿಜಿಯವರ ಜ್ಞಾಪಕಚಿತ್ರಶಾಲೆಗೂ ಪ್ರೇರಣೆಯಾಗಿರಬಹುದೇ?
ಒಲವು ನೆನಪನ್ನು ಬರೆಯುವ ಬಣ್ಣಬಣ್ಣದ ಓಕುಳಿ. ಒಲವು ಅಥವಾ ಅದರದೇ ಇನ್ನೊಂದು ಮೊಗವಾದ ನೋವು ಹೆಚ್ಚಿದಾಗ ನೆನಪಿನ ದಟ್ಟಣವೂ ಆಳವೂ ಹೆಚ್ಚಿ ಅನುಭವಗಳನ್ನು ಚಿತ್ತದ ಹೊತ್ತಗೆಯಲ್ಲಿ ರಂಗುರಂಗಾಗಿ ಉಳಿಸಿಕೊಳ್ಳುವುದು ಮನುಜರ ಪರಿ. ಆದರೆ ಆ ಒಲವು ಮೂಡಲು ಸಮಯದ ವ್ಯವಧಾನವೂ ಬೇಕು. ಸಮಯ ಮತ್ತು ಅವಧಾನಗಳಲ್ಲಿ ದರಿದ್ರರಾದ ಇಪ್ಪತ್ತೊಂದನೆಯ ಶತಮಾನದ ನಮ್ಮಲ್ಲಿ ಇಂತಹ ಒಲವು ಪ್ರಾಚ್ಯವಸ್ತುಸಂಗ್ರಹಾಲಯದ ಬೆಲೆಬಾಳುವ ಸಿಕ್ಕದ ಸರಕಾಗಿದೆ. ಕನ್ನಡಿಗರ ಸೌಭಾಗ್ಯವೆಂಬಂತೆ ರಾಮಸ್ವಾಮಯ್ಯಂಗಾರರಿಗೆ ಮತ್ತವರ ಹಳ್ಳಿಯ ಸಂಗಡಿಗರಿಗೆ ಈ ಸಮಯದ ಜೊತೆಗೆ ಸರಸತೆಯೂ ಸಮೃದ್ಧವಾಗಿತ್ತು. ತಮ್ಮ ಪರಿಸರ ಮತ್ತು ಅದಲ್ಲಿರುವ ಜನರ ಬಗೆಗಿನ ಒಲವು ಅವರ ರಸವತ್ತಾದ ನೆನಪುಗಳಿಂದಲೇ ತಿಳಿದು ಬರುವುದು. ಇವರ ಮತ್ತಿವರ ಒಡನಾಡಿಗಳ ಪ್ರೇಮ ಸಂಕುಚಿತವಲ್ಲ. ಮತಜಾತಿಗಳ ಬೇಲಿಯನ್ನು ಮೀರಿದ ಈ ಅಕ್ಕರೆ ಹಳ್ಳಿಯೆಲ್ಲವನ್ನೂ ಆವರಿಸಿತ್ತು. ಇಂತಹ ನೆನಪಿನ ಚಿತ್ತಾರದ ಚಿತ್ರಶಾಲೆಯಿದು. ಹದಿನೆಂಟು ಹೆಸರಿಲ್ಲದ ಅಧ್ಯಾಯಗಳಿರುವ “ನಮ್ಮ ಊರಿನ ರಸಿಕರು” ಪುಸ್ತಕದಲ್ಲಿ ಹದಿನೆಂಟು ಪರ್ವದ ಮಹಾಭಾರತದ ಹಾಗೆ ಪ್ರತಿಪರ್ವರಸೋದಯ.
ಹೀಗೆಂದ ಮಾತ್ರಕ್ಕೆ ಗೊರೂರು ನಂದನವನವೇನಾಗಿರಲಿಲ್ಲ. ನಗೆಯು ಅಳುವ ಕಡಲೊಳು ತೇಲಿ ಬರುವ ಹಾಯಿ ದೋಣಿ ಮಾತ್ರ ತಾನೆ? ಧರ್ಮದ ನೆಪದಲ್ಲಿ ಹಳ್ಳಿಯಿಂದ ಬಹಿಷ್ಕೃತವಾಗಿ ಹೆಸರಿನಲ್ಲಿ ಮಾತ್ರ ಲಕ್ಷ್ಮೀಪತಿಯಾಗಿದ್ದ ಅರ್ಚಕರ ಕುಟುಂಬ ಹೇಗೆ ವಿವಶತೆಯ ಕೂಪದಿಂದ ಪಾಚಿಯ ಕೊಳವನ್ನು ಸೇರಿತೆಂಬುದು ಕಣ್ಣೀರು ಮಿಡಿಸುವ ಕತೆ. ತೊಂಭತ್ತು ವರ್ಷದ ಮುದುಕಿ ತನ್ನ ಜೀವನವನ್ನೆಲ್ಲ ಬಾಲವಿಧವೆಯಾಗಿ ಬಂಧುಗಳ ಪರಿಚರ್ಯೆ ಮಾಡಿಕೊಂಡು ಸವೆಸಿದ ಕಥೆಯೂ ನಿಟ್ಟುಸಿರು ತರಿಸುತ್ತದೆ. ಆದರೆ ಈ ಸಂಗತಿಗಳು ತಂದ ಬದಲಾವಣೆ ಮಾತ್ರ ದೊಡ್ಡದು. ಧರ್ಮದ ಪರಿಧಿಯಲ್ಲೇ ಔದಾರ್ಯವನ್ನು ಹೇಗೆ ಮೆರೆಯಬಹುದೆಂಬ ಪಾಠವನ್ನು ಓದುಗರ ಮನಸ್ಸಿನಲ್ಲಿ ಅಯತ್ನವಾಗಿಯೇ ‘ರಸಿಕರು’ ಮೂಡಿಸುತ್ತದೆ. ಧರ್ಮದ ಕಟ್ಟಳೆಗಳು ಔದಾರ್ಯವನ್ನು ನಿಷೇಧಿಸಿಲ್ಲ. ಆದರೆ ಧರ್ಮವನ್ನು ನೆಪಮಾಡಿಕೊಂಡು ಔದಾರ್ಯವನ್ನು ಮರೆಮಾಚುವ ಜನರಿಗೆ ಕೊರತೆಯೂ ಇಲ್ಲ.
ಇದೇನು ಹಾಸ್ಯದ ಪುಸ್ತಕದ ಮೇಲಿನ ಬರೆಹ ಇಷ್ಟು ಗಂಭೀರವಾಯ್ತು ಎಂದುಕೊಳ್ಳಬೇಡಿ. ಈ ಒಂದೆರಡು ವಾಸ್ತವದ ಬೇವಿನ ಕಹಿಯನ್ನು ಬಿಟ್ಟರೆ ಈ ಹೊತ್ತಗೆಯೆಲ್ಲವೂ ರಂಗೇಗೌಡನ ಆಲೆಯ ಮನೆಯ ಶುಂಠಿ ನಿಂಬೆ ಮೊದಲಾದ ಪರಿಕರಗಳು ಸೇರಿದ ಕಬ್ಬಿನ ರಸದ ಹಾಗೆ ಬಲು ರುಚಿ. ಏಳನೇ ತರಗತಿಯನ್ನು ಕಷ್ಟ ಪಟ್ಟು ದಾಟಿದ ರಂಗೇಗೌಡ “ಪಾಣಿನಿ॑”ಯಾದ ಪರಿಯಿರಬಹುದು. ಈತ ವ್ಯಾಕರಣಜ್ಞಾನ ಹೆಚ್ಚಿದರೂ ಸಾಮಾನ್ಯಜ್ಞಾನವು ಸೊರಗಿ ಹಾಸ್ಯಕ್ಕೆ ಗುರಿಯಾದದ್ದರ ಬಗೆಯಿರಬಹುದು. ದಾಸಯ್ಯಗಳು ‘ಹರಿಸೇವೆ’ಯ ಸೋಗಿನಲ್ಲಿ ಮಾಡುತ್ತಿದ್ದ ದೌರ್ಜನ್ಯವಿರಬಹುದು. ಅವರ ಬೂಟಾಟಿಕೆಯನ್ನು ಲೇವಡಿಸಿದ ಶೀನಪ್ಪ ಮತ್ತವನ ಗೆಳೆಯರ ತೀಟೆಯಿರಬಹುದು. ಪ್ರಾಸದ ನಾಣಿಯಿರಬಹುದು.ಕಠಾರಿಯ ರುಜುವಿನ ಟಿಪ್ಪು ಸುಲ್ತಾನನ ವಂಶದವನಾದ ಶಾಲು ಸಾಬಿಯಿರಬಹುದು. ಬಸ್ಸಿನ ರಾಜಯ್ಯಂಗಾರಿ ಇರಬಹುದು. ದೊರೆತನ ಮೆರೆದ ಜೋಡೀದಾರ್ ರಾಮಯ್ಯಂಗಾರರ ಕಥೆಯಿರಬಹುದು. ಒಂದೊಂದೂ ನಮ್ಮ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸಿದ್ದಾರೆ ಗೊರೂರರು.
ನನಗೆ ಇದರಲ್ಲಿ ಮುಖ್ಯವಾಗಿ ಕಂಡಿದ್ದು ಎರಡು ಅಂಶಗಳು. ಒಂದು — ಕೊನೆಯಿರದ ಜೀವನೋತ್ಸಾಹ. ಇನ್ನೊಂದು — ಹಳ್ಳಿಯ ಜನರ ಅಕೃತಕತೆ. “ಬ್ರಾಹ್ಮಣರೂ ಶೂದ್ರರೂ ಸಾಹೇಬರೂ ಆರಂಭಗಾರರು. ಎಲ್ಲರೂ ಹೇಗೆ ಹೇಗೋ ವರ್ಷಕ್ಕೆ ಸಾಕಾಗುವಷ್ಟು, ನವರಾತ್ರಿ, ಉಗಾದಿ. ಮೊಹರಂ, ಹಬ್ಬಗಳಲ್ಲಿ ಆನಂದದಿಂದ ಕುಣಿದಾಡಲು ಬೇಕಾಗುವಷ್ಟು ಪೈರನ್ನು ಬೆಳೆಯುತ್ತಾರೆ” ಎಂದ ಗೊರೂರರಿಗೆ ತಮ್ಮೂರಿನ ಜನರ ಬಗ್ಗೆ ಅದೆಷ್ಟು ವಿಶ್ವಾಸ! ಹೇಮಾವತಿ ನದಿಯ ಕೃಪೆಯು ಇವರಿಗೆ ದೊರೆತರೂ ಮೈಮುರಿದು ದುಡಿಯಬೇಕಲ್ಲ?
ವೇದಾದರ್ಶದ “ಕುರ್ವನ್ನೇವೇಹ ಕರ್ಮಾಣಿ” ಎಂಬಲ್ಲಂತೆ ಗ್ರಾಮಜನರ ಜಿಜೀವಿಷೆಯು ನಿಜಕ್ಕೂ ಅನುಕರಣೀಯ. ಈಗಿನ ಕಾಲದಲ್ಲಿ ಒಂದು ದಿನದ ಕೆಲಸ ಮಾಡಿ ವಾರಾಂತ್ಯ ಯಾವಾಗಪ್ಪ! ಎಂದು ಹಲುಬುತ್ತಾ ಕಾಯುವ ಜನರು ನಾವು. ಆಗಿನ ಹಳ್ಳಿಯ ರೈತರದು ಮೈಮುರಿಯುವ ಕೆಲಸ. ಹತ್ತು ನಿಮಿಷ ಗದ್ದೆಯಲ್ಲಿ ನಿಂತರೂ ಮಂಡಿ ನೋವು ಬರುವ ಬ್ರಾಹ್ಮಣಕುಟುಂಬಗಳಿಗೂ ತದೇಕಚಿತ್ತತೆಯಿಂದ ಬಿಡದೆ ಕೆಲಸ ಮಾಡುವ ರಂಗೇಗೌಡ ಮತ್ತವನ ಕುಟುಂಬದವರಿಗೂ ಹೋಲಿಸಿ ತಮ್ಮ ಮೆಚ್ಚಿಗೆ ಎಲ್ಲಿದೆ ಎಂದು ಗೊರೂರರು ಸೂಚಿಸುತ್ತಾರೆ. ‘ಹಸಿದಿರುವ ಹೊಟ್ಟೆ’ ಎಂಬ ಒಂದು ಚಿಕ್ಕಮಾತಿನಲ್ಲಿ ಗೊರೂರರು ಆರೋಗ್ಯದ ಗುಟ್ಟನ್ನು ಬಿಚ್ಚಿಡುತ್ತಾರೆ. ಹಸಿದ ಹೊಟ್ಟೆ, ನಿಯಮಿತವಾದ ಊಟ. ಕಷ್ಟದ ಕೆಲಸ — ಈ ಮೂರೂ ಸೇರಿ ರೈತನಿಗೆ ಆರೋಗ್ಯ!
ರಂಗೇಗೌಡನ ಏಳನೇ ಕ್ಲಾಸಿನ ಪರೀಕ್ಷೆಯ ಪಾಸಿನ ಕಥೆ ಯಾವ ವಿರಾಟಪರ್ವಕ್ಕೂ ಸಮ! ಮರಳಿ ಯತ್ನವ ಮಾಡು ಎಂಬುದರ ಸಾಕಾರ ರೂಪವೇ ರಂಗೇಗೌಡ. ವಿಶೇಷವೆಂದರೆ ಇವನ ‘ವರ’ಪರೀಕ್ಷೆಗೆ ಇವನಿಂದ ಜೈಮಿನಿಯನ್ನು ಓದಿಸುವುದು. “ಆಳೇಮೈದೀರಾಗೋರ್ ಕೈಲಿ ಜೈಮಿನಿ ಓದ್ಸಿ. ಕೂಲಿಮಠದಲ್ಲಿ ಐದು ವರ್ಸ ಓದವರಲ್ಲಾ!” ಎಂದು ಇವರ ಭಾವಿ ಅತ್ತೆಯ ನಿರೀಕ್ಷೆ! ಏಳನೇ ಕ್ಲಾಸು ಪಾಸಾದವನು ಜೈಮಿನಿಯನ್ನು ಓದುವಷ್ಟು ಸಮರ್ಥನಾಗಿರಬೇಕು ಎಂಬುದು ಅಂದಿನ ವಿದ್ಯಾಮಾನ. ಛಂದಸ್ಸಿನಲ್ಲಿ ಇಂದು ಅದೆಷ್ಟು ಕನ್ನಡದ ಪದವೀಧರರು ಜೈಮಿನಿಯನ್ನು ಓದಬಲ್ಲರು?
ಇಷ್ಟು ದುಡಿದ ಮೇಲೆಯೂ ರಂಗೇಗೌಡನಿಗೆ ಬೆಳೆಯ ಮೇಲೆ ಮಮಕಾರವಿಲ್ಲ! ಕಬ್ಬನ್ನು ಬೆಳೆದ ರಂಗೇಗೌಡನು ಹಲವರನ್ನು ತನ್ನ ಅಲೆಯ ಮನೆಗೆ ಕರೆಸಿ ಕಬ್ಬಿನ ಹಾಲಿನ ಔತಣ ಮಾಡಿಸುತ್ತಾನೆ. ನಮ್ಮಂತಹ ಆಧುನಿಕರ ಪ್ರತೀಕವಾಗಿರುವ ಗುಂಡನಿಗೆ ರಂಗೇಗೌಡನ ದಾನದಿಂದ ಒಂದು ಮುಜುಗರ — “ಅಯ್ಯೋ ಇಷ್ಟು ದಾನ ಮಾಡುತ್ತಿದ್ದಾನಲ್ಲ!” ಎಂದು. ತನ್ನಳಲನ್ನು ರಂಗೇಗೌಡನಲ್ಲಿ ತೋಡಿಕೊಂಡಾಗ ರಂಗೇಗೌಡ ಕೊಡುವ ಉತ್ತರ ನಮ್ಮಲ್ಲಿನ ಎಷ್ಟೋ ಟೆಡ್ ಟಾಕಿನ ಮುಖಗಳಿಗೆ ಬೀಗ ಬೀಳಿಸುತ್ತದೆ. “ಕೊಟ್ಟು ಕೆಟ್ಟೋನ್ನ ನಾವ್ ಕಂಡಿಲ್ಲ. ದಾನ ಮಾಡಿದರೆ ಕೊಡೋ ಭಗವಂತ ಒಂದ್ಕೆರಡು ಕೊಡ್ತಾನೆ” — ಎಂದು ಉಪನಿಷತ್ತಿನ ಸಾರವನ್ನೇ ತನ್ನ ಜೀವನದ ಅನುಭವವನ್ನಾಗಿ ಮಾಡಿಕೊಂಡ ಈ ಮಹನೀಯ. ಒಂದು ಚೂರೂ ಪರರಿಗೆ ಕೊಡದ ನಂಜಪ್ಪನ ಬೆಳೆ ಹೇಗೆ ಕ್ರಮೇಣ ಕುಂದಿತು ಎಂದು ವಿವರಿಸುತ್ತಾ ಒಂದು ಸರ್ವಜ್ಞನ ವಚನವನ್ನು ಉದ್ಧರಿಸುತ್ತಾನೆ –
“ಕೊಟ್ಟದ್ದು ತನಗೆ ಬಯ್ತಿಟ್ಟದ್ದು ಪರರಿಂಗೆ
ಕೊಟ್ಟು ಕೆಟ್ಟೆನೆನಬೇಡ ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ”.
ಈಗಿನ ಸಾಮಾಜಿಕನ್ಯಾಯದ ಹೋರಾಟಗಾರರು ಮಾತ್ರವಲ್ಲದೆ ಎಲ್ಲರೂ ಕಲಿಯಬೇಕಾದ ಪಾಠ ಬಹಳಷ್ಟಿದೆ. ರಂಗೇಗೌಡನಂತಹ ರೈತರ ಮುಂದೆ “ನೇಗಿಲ ಯೋಗಿ” ಎಂಬ ಕುವೆಂಪುರವರ ಉದ್ಗಾರವೂ ಸವಕಲಾಗುತ್ತದೆ.
ಗೊರೂರಿನ ಜನತೆಯ ಆನಂದಾನುಭವದ ಕ್ಷಮತೆ ಯಾವ ದೇವತೆಗೂ ಕಡಮೆಯಿಲ್ಲ! ಅವರು ಕಟ್ಟುವ ಯಕ್ಷಗಾನವಾಗಲಿ, ಮಾಡಿದ ಕಿಟ್ಟುವಿನ ಸಂಭ್ರಮದ ಮದುವೆಯಿರಲಿ, ಸುಗ್ಗಿಯ ಕಾಲದ ದುಡಿತ-ಕುಣಿತಗಳಿರಲಿ — ಅದೆಷ್ಟು ಸಂತೋಷದಿಂದ ಅನುಭವಿಸುತ್ತಾರೆ! ಅವರನ್ನು ನೋಡಿ ಅಸೂಯೆಯಾಗುತ್ತದೆ. ಸ್ವಲ್ಪ ಯೋಚಿಸಿದ ಮೇಲೆ ಜೀವನಸಂಸ್ಕಾರವಾಗುತ್ತದೆ.
ಇನ್ನೋರ್ವ ವಿಶೇಷರಸಿಕ ಶೀನಪ್ಪ. ಎಲ್ಲ ಕೆಲಸದಲ್ಲೂ — ಗುಂಪು ಕಟ್ಟುವುದರಲ್ಲಿ, ಊರನ್ನು ಚೊಕ್ಕಟ ಮಾಡುವುದರಲ್ಲಿ, ತಕ್ಕ ಶಾಸ್ತಿ ಕಲಿಸುವುದರಲ್ಲಿ, ಹಾಸ್ಯ ಮಾಡುವುದರಲ್ಲಿ, ಸಜ್ಜನಿಕೆಯಲ್ಲಿ, ಕಬ್ಬನ್ನು ಅಗೆಯುವುದರಲ್ಲಿ — ಎಲ್ಲದರಲ್ಲೂ ಈತ ಮುಂದು! ಮಂತ್ರವಾದಿಯ ವೇಷವನ್ನು ಧರಿಸಿ ಒಂದು ಹಾರದ ಕಳ್ಳತನದ ನಾಜೂಕಿನ ಸಮಸ್ಯೆಯನ್ನು ಪರಿಹರಿಸುವ ಬಗೆ — ಆಹಾ! ಊರಿನವರಲ್ಲಿ ಮನಸ್ತಾಪವಾಗಬಾರದು, ಹಾರದ ಕಳವೂ ಪರಿಹಾರವಾಗಬೇಕು — ಇವೆಲ್ಲದರ ಮಧ್ಯೆ out of the box thinking ಮಾಡಿ ತ್ವರೆಯಿಂದಲೇ ತೊಂದರೆಯನ್ನು ದೂರಮಾಡಿದ ಶೀನಪ್ಪನ ಬುದ್ಧಿ ನಿಶಿತ! ಇಂಥವರು ನಮ್ಮ ಹಳ್ಳಿಗಳಲ್ಲಿ ಇದ್ದುದರಿಂದಲೇ ಭಾರತ ಹಳ್ಳಿಗಳ ದೇಶವಾಗಿ ಕೂಡ ಹಿಂದೆ ಅಷ್ಟು ಸಂಪದ್ಭರಿತವಾಗಿತ್ತು. ಶೀನಪ್ಪ ಊರಿಗೆಷ್ಟು ಬೇಕಾದವನು ಎಂದು ಅವನ ಬಗ್ಗೆ ಆಶುವಾಗಿ ಬೋರೇಗೌಡ ನುಡಿದ ಪದ್ಯವೇ ಸಾಕ್ಷಿ.
“ಬೇಸಿಗೆಯ ಬಿಸಿಲಿಗೆ ಬೇವಿನ ಮರ ತಂಪು
ಹೇಮಾವತಿ ಎಂಬ ನದಿ ತಂಪು
ಹೇಮಾವತಿ ಎಂಬ ನದಿ ತಂಪು
ನೀನಿರಲು ತಂಪು ನಮ್ಮೂರಿಗೆ”
ಇಂತಹ ಪದ್ಯವನ್ನು ಅಲ್ಲೇ ಹೇಳಿದ ಬೋರೇಗೌಡನ ರಾಸಿಕ್ಯ ಎಷ್ಟೋ ಸುಸಂಸ್ಕೃತರನ್ನು ನಾಚಿಸುವಂತಹುದು! ಜೊತೆಗೆ “ನೀನು” ಎಂದು ಏಕವಚನದಲ್ಲಿ ಕರೆದುದಕ್ಕೆ ಸಂತಾಪ ಬೇರೆ. ಕೆಲವೊಂದು ಶುಷ್ಕಪ್ರತಿಷ್ಠೆಗಳ ಕಾಲದಲ್ಲಿ ಈ ಏಕವಚನಕ್ಕೆ ಶೀನಪ್ಪ ಕೋಪ ಮಾಡಿಕೊಳ್ಳದೇ ಇದ್ದುದು ಕೂಡ ಆತನ ಸಜ್ಜನಿಕೆಯನ್ನು ತೋರಿಸುತ್ತದೆ.
ನಮ್ಮ ಊರಿನ ರಸಿಕರು ಪುಸ್ತಕದ ಮುಖಪುಟ (ಆಕರ: Bookbrahma)
ಇಲ್ಲಿ ಶಾಲು ಸಾಬಿಯ ಮಾತನ್ನು ಹೇಳಲೇ ಬೇಕು. ಬಿರುಬೇಸಗೆಯಾಗಲಿ ಚಳಿಯೇ ಇರಲಿ ಮಳೆಯೇ ಬರಲಿ, ಸದಾ ಶಾಲುವನ್ನು ಧರಿಸುತ್ತಿದ್ದ ಈತನಿಗೆ ಊರು ಕೊಟ್ಟ ಹೆಸರು ಶಾಲು ಸಾಬಿ. ಟಿಪ್ಪುವಿನ ವಂಶಸ್ಥ ಎಂದು ಬೀಗುವನೀತ. ಆದರಿಂದ ಬರೆಹ ಬರದಿದ್ದರೂ ಕಠಾರಿಯಲ್ಲೇ ಸಹಿ ಹಾಕುತ್ತೇನೆ ಎಂಬ ಬಿಂಕ ಬೇರೆ. “ಆರಡಿಯ ಎತ್ತರದ, ಶಕ್ತಿಯುಕ್ತವಾದ ಮಾಂಸಖಂಡಗಳುಳ್ಳ, ಪಶುಶಕ್ತಿಯನ್ನು ಬಿಂಬಿಸುವ ಕಣ್ಣುಗಳ, ಭಯವನ್ನುಂಟು ಮಾಡುವ” ಶಾಲು ಸಾಬಿ ಗೊರೂರರಿಗೆ ಮಾತ್ರ ಕಂಡದ್ದು ಊರಿನ “ಧರ್ಮಾವತಾರ”ವಾಗಿ. ತಿಮ್ಮನ ಮೇಲಿದ್ದ ಸುಳ್ಳು ಆಪಾದನೆಯನ್ನು ಯಾವ ಷರ್ಲಾಕ್ ಹೋಮ್ಸಿಗೂ ಕಡಮೆಯಿಲ್ಲದ ಹಾಗೆ ತನಿಖೆ ನಡೆಸಿ ತೀರ್ಪು ನೀಡುವ ಕಥೆ ಒಂದು ಪ್ಯಾರಾದಲ್ಲಿ ಬಂದರೂ ಒಂದು ಲಘುಚಿತ್ರ ಮಾಡುವಷ್ಟು ಸರಕಿದೆ. ಜೊತೆಗೆ ಈತನ ತೀರ್ಮಾನದ ಉದಾಹರಣೆಗಳೆಲ್ಲವೂ ಖುರಾನಿಗಿಂತ ಹೆಚ್ಚಾಗಿ ರಾಮಾಯಣ-ಮಹಾಭಾರತಗಳಿಂದ ಬರುತ್ತಿದ್ದವು. ಯಕ್ಷಗಾನದಲ್ಲಿ ಮುಂದೆ ಚಾಪೆ ಹಾಕಿಕೊಂಡು ನೋಡುವ ಆಸಕ್ತಿ ಈತನದು. ರಥೋತ್ಸವದಲ್ಲಿ ದೇವಸ್ಥಾನದ ಕೈಂಕರ್ಯಗಳಲ್ಲಿ ಶಾಲು ಸಾಬಿಯದೇ ಓಡಾಟ. ಗೊರೂರರ ಮಾತಿನಲ್ಲೇ — “ಇದು ವಿಗ್ರಹಾರಾಧನೆ, ತಾನು ಮುಸಲ್ಮಾನ, ವಿಗ್ರಹಗಳನ್ನು ಕಂಡರೆ ತನಗಾಗದು ಎಂಬ ಭಾವನೆ ಅವನಿಗೆ ಹೊಳೆದಿಲ್ಲ”. ಹರಿಶ್ಚಂದ್ರನ ಪಾತ್ರಧಾರಿಗೆ ತನ್ನ ರುಮಾಲನ್ನೇ ಕೊಡುವಷ್ಟು ಔದಾರ್ಯ. ಧನದಲ್ಲಿ ಹಿರಿಯನಲ್ಲದಿದ್ದರೂ ಗುಣದಲ್ಲಿ ದೊಡ್ಡವನು. “ಹೇಗೋ” ವರ್ಷಕ್ಕಾಗುವಷ್ಟು ಪೈರನ್ನು ಬೆಳೆದು ಬಿಡುತ್ತಿದ್ದನು. ಶಾಲು ಸಾಬಿಯ ಕನ್ನಡ — ಅವಿದ್ಯಾವಂತರಿಗೆ ‘ಕರ್ನಾಟ್ಕೆ ಜನ’, ಹಿಂದುಳಿದ ಜನರಿಗೆ — ‘ಹಿಂದೂ’ — ಕುತೂಹಲಕ್ಕೆ ಕಾರಣ. ಈತನ ದೊಡ್ಡತನ ಜ್ಞಾಪಕಚಿತ್ರಶಾಲೆಯ ಬಂಡಿ ರಸೂಲ್ ಖಾನರನ್ನು ನೆನಪಿಸುತ್ತದೆ. ತಮ್ಮ ಮತಾಚರಣೆಗಳನ್ನೂ ಬಿಡದೆ ಬೇರೆಯ ಮತದವರೊಡನೆ ಸಮರಸತೆಯಿಂದ ಬಾಳುವ ಇಂಥ ಮುಸ್ಲಿಮರು ಈಗ ಇದ್ದಾರೆಯೇ ಎಂಬ ಪ್ರಶ್ನೆ ಈಗಿನ ಕಾಲಕ್ಕೆ ಸಹಜವಾಗಿದೆ. ಮಾಧ್ಯಮಗಳ ಕಾಮಾಲೆ ಕಣ್ಣಿನಿಂದ ನೋಡದಿದ್ದರೆ ಈಗಲೂ ಇದ್ದಾರೆ ಎಂದು ನನ್ನ ನಂಬಿಕೆ.
ಹುಟ್ಟಿನಿಂದ ಬ್ರಾಹ್ಮಣರಾದ ರಾಮಸ್ವಾಮಿ ಅಯ್ಯಂಗಾರರು ತಮ್ಮವರನ್ನೇ ಸಾಧುವಾಗಿ ಕಟುವಾಗಿ ಆಕ್ಷೇಪಿಸುತ್ತಾರೆ. ಮೃತಿ ಹೊಂದಿದ ವ್ಯಕ್ತಿಯ ಮನೆಯವರಿಂದ ದಕ್ಷಿಣೆಗಾಗಿ ಆಸೆ ಪಡುವ, ಕೊಡದಿದ್ದರೆ ಬಹಿಷ್ಕಾರ ಹಾಕುವ ಬ್ರಾಹ್ಮಣರ ಬಗ್ಗೆ ಇವರಿಗೆ ತಾತ್ಸಾರವೇ. “ಅವರು ಆತ್ಮಹತ್ಯೆ ಮಾಡಿಕೊಂಡರು. ಹೋದರೆ ಹೋಗಲಿ; ಬ್ರಾಹ್ಮಣ ಧರ್ಮಕ್ಕೆ ನಮ್ಮ ಊರಿನಲ್ಲಿ ಬಂದ ಕಳಂಕ ನಾಶವಾಯಿತು” ಎಂದು ಮೊನಚಾಗಿ ತಿವಿದಿದ್ದಾರೆ. ಹುಡುಗಿಯೊಬ್ಬಳ ತಂದೆಯು ಮಗಳು ವಿಧವೆಯಾದಾಗ “ಕ್ಷೌರ ಮಾಡಿಸಿ ಆ ಹಸುಗೂಸಿನ ಅಂದವನ್ನು ಕೆಡಿಸಿ ತನ್ನ ಧರ್ಮವನ್ನು ಉಳಿಸಿಕೊಂಡುದು” ಗೊರೂರರಿಗೆ ಸುತರಾಮ್ ಇಷ್ಟವಿಲ್ಲ. ಏಕಾಹವೆಂಬ ಶ್ರೀವೈಷ್ಣವರ ಕಷ್ಟದ ಆಚರಣೆಯೂ ಇವರ ನುಡಿಕತ್ತಿಯ ದಾಳಿಗೆ ಪಾತ್ರವಾಯಿತುು. ಇದಕ್ಕೆ ವಿರುದ್ಧವಾಗೆದ್ದ ರಾಮಣ್ಣನವರು ರಸಿಕ ಶೀನಣ್ಣನ ತಂದೆ. ಅವರೇ “ಹೇಮಾವತಿ”ಎಂಬ ಕಾದಂಬರಿಯ ಮುಖ್ಯಪಾತ್ರಕ್ಕೆ ಸ್ಫೂರ್ತಿಯೇ? ಆದರೂ ತಮ್ಮ ಕುಲದವರೇ ಆದ ರಾಮಯ್ಯಂಗಾರರ ಶೌರ್ಯಕ್ಕೂ ದಾನಶಕ್ತಿಗೂ ಇವರ ಮೆಚ್ಚಿಗೆಯಿದೆ. ಗೊರೂರರ ಈ ಆತ್ಮವಿಮರ್ಶೆಯ ಗುಣ ಎಲ್ಲ ಮತದವರಿಗೂ ಕುಲದವರಿಗೂ ಬರಲಿ ಎಂದು ಹಾರೈಕೆ.
ಈ ಊರಿನವರಿಗೆ ಇಟ್ಟ ಅಡ್ಡ ಹೆಸರುಗಳ ಕಥೆಗಳೇ ಚೆಂದ. ಕೆಲವನ್ನು ಇಲ್ಲಿ ಚಪ್ಪರಿಸಿ! “ರೂಟರ್ (Reuter) ಏಜೆನ್ಸಿ” ತಿರುಮಲಮ್ಮ, ಬಾವುಟದ ಅಥವಾ ನಿಶಾನೆಯ ಮಣೇಗಾರ್ರು, ಶಾಲು ಸಾಬಿ, ಪಾಣಿನಿ ರಂಗೇಗೌಡ, ‘ದಡದಲ್ಲಿದೆ’ ರಂಗೇಗೌಡ. (ರಸಿಕಶಿಖಾಮಣಿ ರಂಗೇಗೌಡನಿಗೆ ಹಲವು ಅಡ್ಡ ಹೆಸರುಗಳು!), ಗುಂಡಿನ ರಾಮಯ್ಯಂಗಾರ್ರು. ಸರ್ವಜ್ಞ ನಾಣಪ್ಪ, ಕೃಷ್ಣಯ್ಯಂಗಾರರ ಎಮ್ಮೆ, ಝಾಡಮಾಲಿ ಶೀನಪ್ಪ, “ಜೂತನ ದೊಡ್ದಕ್ಷಭೂ” ಶಿಂಗ್ಲಾಚಾರ್ರು, “ತೃಣಪರ್ವತದ ಮರೆಯಲ್ಲಿ ಕೇಳಿಕಾಗೃಹದ” ನರಸಿಂಹಾಚಾರ್ರು — ಇವರ ಬಗ್ಗೆ ನೀವೇ ಓದಿ ನಲಿಯಿರಿ!
ಲಲಿತವಾದ ‘ಸುಲಿದ ಬಾಳೆಯ’ ಹಣ್ಣಿನಂತಹ ಭಾಷೆ ‘ರಸಿಕರು’ ಪುಸ್ತಕದ್ದು. ಸಂಸ್ಕೃತಭೂಯಿಷ್ಠವೂ ಆಗದೆ ಅಚ್ಚಗನ್ನಡವನ್ನೇ ಬಳಸಬೇಕೆಂಬ ಮಡಿಯಾಗಲಿ ಇಲ್ಲಿಲ್ಲ. ಸೊಗಸಾದ ಹದದ ಸಿರಿಗನ್ನಡ. ಕೆ ಎಸ್ ನರಸಿಂಹಸ್ವಾಮಿಗಳು ಇಷ್ಟ ಪಡುವ ಕನ್ನಡದ ಹದ. ಈ ಹದವು ನಿಜಕ್ಕೂ ಅನುಕರಣೀಯ. ಹಳ್ಳಿಯ ಭಾಷೆಯ ಸೊಗಡು ಲಘುವಾಗಿ ಸೇರಿದೆ. ‘ಕೊಡಿಯಾಲ್ಕೆ’ (ಯಮಪುರಿ), ಪರ್ದಿಷ್ಟ (ಪ್ರತಿಷ್ಠೆ?), ‘ಉರಿಸಿಂಗ’, ‘ಅಗಸರ ನರಸಿ’, ‘ಮನ್ನುಗ’ — ಇವೆಲ್ಲ ದೆವ್ವಗಳ ಹೆಸರುಗಳು. ‘ಹೊನ್ನಾರು’ — ಗ್ರಹಗಳ ಅನುಕೂಲಕ್ಕಾಗಿ ಯಾವ ಬಣ್ಣದ ಎತ್ತಿನೊಂದಿಗೆ ಉಳಬೇಕೆಂಬ ಆಚರಣೆ. ಈ ಕೆಲವು ಪದಗಳನ್ನು ನಾನು ಮೊದಲು ಕೇಳಿರಲಿಲ್ಲ.
ವಿಶೇಷವಾದ ಅಲಂಕಾರದ ನವುರಿನ ನುಡಿ ಗೊರೂರರಿಗೆ ಸಾಧ್ಯವಾದರೂ ಅದನ್ನು ಬೇಕೆಂದೇ ಅವರ ಬರೆವಣಿಗೆಯ ಬಾಳಿನ ಆರಂಭದ ಈ ಪುಸ್ತಕದಲ್ಲಿ ಬಳಸಿಲ್ಲವೆಂದು ತೋರುತ್ತದೆ. ಇವರ ವಿವರಣೆಯ ರೀತಿ ವಿಶಿಷ್ಟ. ತೊಂಭತ್ತೈದು ವರ್ಷದ ಮಡಿದ ಮುದುಕಿಯ ಇಡಿಯ ಜೀವನವನ್ನು ಒಂದು ಪ್ಯಾರಾದಲ್ಲಿ ಭಟ್ಟಿ ಇಳಿಸುತ್ತಾರೆ. ಕಥೆಯ ಅಸ್ಥಿಪಂಜರವನ್ನು ಕೊಟ್ಟು ಇದನ್ನು ನಿಮ್ಮ ಕಲ್ಪನಾಶಕ್ತಿಯಿಂದಲೇ ಜೀವಂತವಾಗಿಸಿ ಎಂಬ ಅಭ್ಯಾಸವನ್ನು ಓದುಗರಿಗೆ ಬಿಡುತ್ತಾರೆ. ಇದರ ಮೂಲಕ ಓದುಗರಿಗೆ ಚರ್ವಿತಚರ್ವಣವಾಗದಿರುವುದು ಒಳ್ಳೆಯ ಫಲಿತ. ಕಲ್ಪನೆಗೆ ಗ್ರಾಸವನ್ನೊದಗಿಸುವಷ್ಟು ವಿಷಯಸಾಮಗ್ರಿ ಅಲ್ಲಿರುತ್ತದೆ. ಆದರೂ ಬೇಕೆಂದು ಅಡಕ ಮಾಡಿದ ಹಾಗೆ ತೋರುವುದಿಲ್ಲ. ಅತಿವರ್ಣನೆಯಿಂದ ರೋಸಿ ಹೋಗಿದ್ದರು ಅನ್ನಿಸುತ್ತದೆ. ಉಪಮೆಗಳೂ ರೂಪಕಗಳೂ ವಿರಳ. ಸ್ವಭಾವೋಕ್ತಿಯೇ ಅಲಮ್ (ಸಾಕು) ಆಗಿರುವಾಗ ಉಪಮೆಯೇ ಮೊದಲಾದ “ಅಲಂ”ಕಾರಗಳ ಪ್ರಯೋಗ ಔಚಿತ್ಯಘಾತಕವೆಂದು ಇವರು ಮನಗಂಡಿರಬೇಕು. “ನಮ್ಮೂರಿನ ರಸಿಕರು” ಎಂದಲ್ಲದೆ “ನಮ್ಮ ಊರಿನ ರಸಿಕರು” ಎಂದು ಸಂಧಿ ಬಿಡಿಸಿ ಪುಸ್ತಕದ ಶೀರ್ಷಿಕೆಗೆ ಬಳಸುವುದು ಹಳೆಯ ದಾರಿಯಿಂದ ದೂರ ಸರಿಯುವ ಇವರ ಯತ್ನವಿರಬಹುದೇ?
ಗೊರೂರರ ಕೃತಿಗಳಾದ “ಭೂತಯ್ಯನ ಮಗ ಅಯ್ಯು” (ಕತೆ), “ಹೇಮಾವತಿ” (ಕಾದಂಬರಿ) ಯಶಸ್ವಿಯಾದ ಚಿತ್ರಗಳಾಗಿವೆ. ಪೂರ್ಣಚಂದ್ರ ತೇಜಸ್ವಿಗಳ “ಕಿರಗೂರಿನ ಗೈಯಾಳಿಗಳು” ಕೂಡ ಚಿತ್ರವಾಗಿದೆ. “ನಮ್ಮ ಊರಿನ ರಸಿಕರಿಗೂ” ಚಿತ್ರೀಕರಣದ ಕಣ್ಣು ಇತ್ತೀಚಿಗೆ ದೊರೆತಿದೆ ಎನ್ನುವುದು ಸಂತೋಷದ ವಿಷಯ. ಇದು ಭಾಗ್ಯವೋ ಇಲ್ಲವೋ ಎಂದು ನೋಡಿದವರು ಹೇಳಬೇಕು. ಎರಡು ವರ್ಷಗಳ ಹಿಂದೆ ಧಾರಾವಾಹಿಯಾಗಿದೆ ಎಂದು ಜಾಲಸ್ಥಾನದಲ್ಲಿ ತಿಳಿದುಕೊಂಡೆ.
ಮತ್ತೆ ಮತ್ತೆ ಓದಿಸಿಕೊಳ್ಳುವ ಕೃತಿ — ನಮ್ಮ ಊರಿನ ರಸಿಕರು. ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ಓದಬೇಕಾದ ಕೃತಿಯಿದು. ಹಳ್ಳಿಯ ಸೊಗಸನ್ನೂ ಸೊಬಗನ್ನೂ ತಿಳಿಯಲು ಇದಕ್ಕಿಂತ ಒಳ್ಳೆಯ ದಾರಿಯಿಲ್ಲ. ಏಕೆಂದರೆ ಇಂದಿನ ಹಳ್ಳಿಗಳು ಸೀರಿಯಲ್ಲುಗಳ ಸಹವಾಸದಿಂದ ಅತ್ತ ನಗರಗಳಿಗೆ ಹತ್ತಿರವಾಗದೆ ಇತ್ತ ಹಳ್ಳಿಯ ಸೊಗಡನ್ನೂ ಉಳಿಸಿಕೊಳ್ಳದೆ ಅಸ್ತಿತ್ವದ ಆಕಾಶದಲ್ಲಿ ತ್ರಿಶಂಕುಗಳಾಗಿವೆ. ಇದನ್ನು ಓದಿದರೆ ಆ ರಮ್ಯತೆಯ ಮಿಂಚಾದರೂ ಸುಳಿಯದಿರದು. ನೀವಿನ್ನೂ ಇದನ್ನು ಓದಿಲ್ಲವೆಂದರೆ ದೊಡ್ಡ ಸೊಬಗಿನ ಜಗತ್ತನ್ನೇ ಕಳೆದುಕೊಳ್ಳುತ್ತಿದ್ದೀರಿ. ಆಗಲೇ ಓದಿದ್ದರೆ ಮತ್ತೊಮ್ಮೆ ಓದುವಿರಿ ಎಂದು ನನಗೆ ಗೊತ್ತು.
ಈ ಕಿರುಹೊತ್ತಗೆಯ ಕೊನೆಯಲ್ಲಿ ಉಗಾದಿಯ ಉತ್ಸವದ ವರ್ಣನೆಯ ಮೂಲಕ ಒಂದು ಬರೆವಣಿಗೆಯ ಹೊಸಯುಗಕ್ಕೆ ನಾಂದಿ ಹಾಡಿದ ಹಾಗಿದೆ. ಬೆಳಗಿನ ಜಾವದ ಐದು ಘಂಟೆಯಲ್ಲಿ ಕಣದಲ್ಲಿ ಹುಡುಗಿಯೊಬ್ಬಳು ಹಾಡುವ ಅರ್ಥಗರ್ಭಿತವಾದ, ನಮ್ಮ ದೇಶದ ಆಗ ಇನ್ನು ಸಿಕ್ಕಿರದ ಸ್ವಾತಂತ್ರ್ಯಕ್ಕೆ ನಾಂದಿ ಎನ್ನಬಹುದಾದ, ಹಾರೈಕೆಯಿಂದ ಅವರು ಪುಸ್ತಕವನ್ನು ಮುಗಿಸುತ್ತಾರೆ. ಅದೇ ಹಾರೈಕೆಯಿಂದ ಈ ಬರೆಹವೂ ಸಂಪನ್ನ.
“ಹಸುಗೂಸು ಹುಟ್ಟಲಿ ಹೊಸಪೇಟೆ ಕಟ್ಟಲಿ
ರಸಬಾಳೆ ಕಬ್ಬು ಬೆಳೆಯಲಿ
ರಸಬಾಳೆ ಕಬ್ಬು ಬೆಳೆಯಲಿ — ನಮ್ಮೂರ
ಬಸವನ ತೇರು ಎಳೆಯಲಿ”.
।। ಇತಿ ಶಮ್ ।।
This article was first published on Auther’s blog and has been republished with auther’s permission.
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.