close logo

ಕಾಶಿಗೂ ಕರ್ನಾಟಕಕ್ಕೆ ಇರುವ ಪ್ರಾಚೀನ ಸಂಬಂಧದ ಕುರಿತು ಒಂದು ನೋಟ

ಇತ್ತೀಚಿಗೆ ವಾರಣಾಸಿಯ ಜ್ಞಾನವಾಪಿ ವಿಚಾರವಾಗಿ ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆಯಲ್ಲಿನ ಒಂದಷ್ಟು ಅಂಶಗಳನ್ನು  2024 ಜನವರಿ 25  ರಂದು  ಬಹಿರಂಗಪಡಿಸಲಾಗಿದೆ. .  ಈ ಹಿನ್ನಲೆಯಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ವಾರಣಾಸಿಯಲ್ಲಿನ ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಬೃಹತ್ ಹಿಂದೂ ದೇಗುಲವಿತ್ತು ಎಂದು ಈಗಾಗಲೇ ಭಾರತೀಯ ಪುರಾತತ್ವ ಇಲಾಖೆಯ ವರದಿಯಲ್ಲಿನ ಅಂಶಗಳು ಬಹಿರಂಗಪಡಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ . ಇದಕ್ಕೆ ಪೂರಕವಾಗಿ ಈ ಸ್ಥಳದಲ್ಲಿ ಶಿವಲಿಂಗ ಸೇರಿದಂತೆ ಕೆಲವೊಂದು ವಿಗ್ರಹಗಳ ಅವಶೇಷಗಳು  ಇರುವುದನ್ನು ಭಾರತೀಯ ಪುರಾತತ್ವ ಇಲಾಖೆ ವರದಿಯಲ್ಲಿ ದೃಢಪಡಿಸಿದೆ. ಹನುಮಂತ, ಗಣೇಶ, ನಂದಿ, ಶಿವಲಿಂಗಗಳು ಪತ್ತೆಯಾಗಿವೆ. ಇದನ್ನು ವರದಿಯಲ್ಲಿ ಉಲ್ಲೇಖಸಲಾಗಿದೆ. ಇವು ದಾಳಿಯಲ್ಲಿ ಭಗ್ನಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಅಲ್ಲದೆ, ಕೆಲವೊಂದು ನಾಣ್ಯಗಳು, ನಾಗರಿ, ಸಂಸ್ಕೃತ, ಕನ್ನಡ ತೆಲುಗು ಗ್ರಂಥ ಲಿಪಿ ಶಾಸನಗಳು, ಪರ್ಶಿಯಾ ಭಾಷೆಯಲ್ಲಿನ ಕೆಲವು ಶಾಸನಗಳು ಸಿಕ್ಕಿವೆ. 839 ಪುಟಗಳಷ್ಟು ಸುದೀರ್ಘವಾಗಿರುವ ಈ ವರದಿಯಲ್ಲಿ  ಜ್ಞಾನವಾಪಿ ಮಸೀದಿ ಸ್ಥಳದಲ್ಲಿ ವಿಶಾಲ ದೇಗುಲವೊಂದಿತ್ತು   ಎಂದು ತಿಳಿದುಬರುತ್ತದೆ. ಭಾರತೀಯ ಪುರಾತತ್ವ ಇಲಾಖೆಯ ವರದಿಯ ಪ್ರಕಾರ,  ಔರಂಗಜೇಬನ ಅಧಿಕಾರಕಾಲದಲ್ಲಿ  ಈ ವಿಶಾಲ ದೇಗುಲವನ್ನು ನಾಶ ಮಾಡಲಾಗಿದೆ. ಅಂದರೆ, 1676-1677ರ  ಅವಧಿಯಲ್ಲಿ  ಈ ದುಷ್ಕೃತ್ಯ  ನೆಡೆದಿದೆ ಮತ್ತು ಸುಮಾರು 1792-93ರ ಅವಧಿಯಲ್ಲಿ ಮಸೀದಿ ನಿರ್ಮಿಸಲಾಗಿದೆ. ಅಂದರೆ ಇದಕ್ಕಿಂತ ಹಿಂದಿನ ದೇಗುಲದಲ್ಲಿ ಎಂದರೆ  1600-1650ರ ಅವಧಿಯ  ಶಾಸನಗಳು ಲಭ್ಯವಾಗಿವೆ. ಹೀಗೆ ಲಭ್ಯವಾಗಿರುವ ಹಳೆಯ ಪುರಾವೆಗಳಲ್ಲಿ ಪತ್ತೆಯಾದ ಕನ್ನಡ ಶಾಸನಗಳ ಬಗ್ಗೆ  ಈ ಲೇಖನ. 

ಭಾರತೀಯ ಇತಿಹಾಸದ ಬಗ್ಗೆ ಹೆಚ್ಚು ತಿಳಿಯದವರಿಗೆ ಮತ್ತುಸಾಮಾನ್ಯ ಪ್ರಜೆಗಳಿಗೆ, . , “ಅರೆ ! ಎಲ್ಲಿಯ ಕಾಶಿ, ಎಲ್ಲಿಯ ಕರ್ನಾಟಕ! ಅಲ್ಲಿ ಕನ್ನಡ ಶಾಸನಗಳೇ”ಎಂದು  ಕುತೂಹಲ ಮೂಡುವುದು ಸಹಜವೇ 

(ಚಿತ್ರ 1  : ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಜ್ಞಾನವಾಪಿ ವರದಿ ದಾಖಲಿಸಿದ ದೇವನಾಗರಿ, ತೆಲುಗು, ಕನ್ನಡ ಮತ್ತು ಇತರ ಲಿಪಿಗಳಲ್ಲಿ ಬರೆಯಲಾದ ಪ್ರಾಚೀನ ಹಿಂದೂ ದೇವಾಲಯಕ್ಕೆ ಸೇರಿದ ಶಾಸನಗಳು )

ನೀವು ದಕ್ಷಿಣ ಭಾರತದ ಶಾಸನಗಳಲ್ಲಿ ಅದರಲ್ಲೂ ಕರ್ನಾಟಕದ ಪ್ರಾಚೀನ ಶಾಸನಗಳಲ್ಲಿ ಇರುವಂತಹ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ದಕ್ಷಿಣದ ವಾರಣಾಸಿ, ದಕ್ಷಿಣದ ಕಾಶಿ ಎಂದು ಶಾಸನೋಕ್ತವಾಗಿ ಉಲ್ಲೇಖವಾಗಿರುವುದು ನಾವು ಕಾಣಬಹುದು, ಇಂದಿನ ನವನಿರ್ಮಿತ ಧಾರ್ಮಿಕ ಕ್ಷೇತ್ರಗಳನ್ನು ಸಹ ದಕ್ಷಿಣ ಕಾಶಿ ಎಂದು ಕರೆಯುವುದು ನಮ್ಮ ಸಂಪ್ರದಾಯಿಕ ರೂಢಿಯಾಗಿದೆ. ಕಾಶಿ ಎನ್ನುವ ಧಾರ್ಮಿಕ ಪುಣ್ಯಭೂಮಿ ನಮ್ಮ ಜನರಲ್ಲಿ ಧಾರ್ಮಿಕ ನಂಬಿಕೆಗಳಲ್ಲಿ ಹಾಸುಹೊಕ್ಕಾಗಿದೆ, ವಾರಣಾಸಿ ಅಥವಾ ಕಾಶಿ ಹಿಂದೂಗಳಿಗೆ ಪವಿತ್ರವಾದ ಸ್ಥಳ. ಗಂಗಾನದಿಯ ದಂಡೆಯೂ  ಪವಿತ್ರಭೂಮಿವೂ ರುದ್ರಭೂಮಿಯೂ ಹೌದು. ಈ ಕ್ಷೇತ್ರದಲ್ಲಿ ಗಂಗಾನದಿಯಲ್ಲಿ ಮಿಂದರೆ ಪಾಪಗಳೆಲ್ಲಾ ಪರಿಹಾರವಾಗುತ್ತವೆಯೆಂಬುದು ಗಾಢವಾದ ನಂಬಿಕೆ ಹಿಂದೂಗಳಲ್ಲಿದೆ. ಇದು ವಿಶ್ವೇಶ್ವರನ ಸ್ಥಾನವೂ ಹೌದು. ಈ ಸ್ಥಳದಲ್ಲಿ ಮಾಡಿದ ದಾನ ಶ್ರೇಷ್ಠವಾಗುತ್ತದೆ. ಹಾಗೆಯೇ ಈ ಸ್ಥಳದಲ್ಲಿ ಪಾಪ ಮಾಡಿದರೆ ಮುಕ್ತಿಯಿಲ್ಲ ಎಂಬುದು ಭಾವನೆ. ಇಂತಹ ಸ್ಥಳದಲ್ಲಿ ಗೋವನ್ನೂ ಬ್ರಾಹ್ಮಣನನ್ನೂ ಕೊಂದರೆ ಅವನಿಗೆ ಪಾಪದಿಂದ ಮುಕ್ತಿಯಿಲ್ಲ ಎಂಬಂತೆ ಶಾಸನಗಳು ತಿಳಿಸಿವೆ. 

ಮಹಾಕೂಟದ ಶಾಸನವೊಂದರಲ್ಲಿ ಪುಣ್ಯಸ್ಥಾನದ ಬಗ್ಗೆ ಹೀಗೆ ಹೇಳಲಾಗಿದ-  

‘ಅನ್ಯಸ್ಥಾನೇ  ಕೃತಂ  ಪಾಪಂ ಪುಣ್ಯಸ್ಥಾನೇ  ವಿಪಶ್ಯತಿ ಪುಣ್ಯಸ್ಥಾನೇ  ಕೃತಂ  ಪಾಪಂ ವಜ್ರಲೇಪನತಿಷ್ಯತಿ’ *

ಅಂದರೆ ಬೇರೆಡೆಯಲ್ಲಿ ಮಾಡಿದ ಪಾಪ ಪುಣ್ಯಸ್ಥಾನದಲ್ಲಿ ನಾಶವಾಗುತ್ತದೆ. ಪುಣ್ಯಸ್ಥಾನದಲ್ಲಿ ಮಾಡಿದ ಪಾಪವು ವಜಲೇಪನದಂತೆ ಅಂಟಿಕೊಳ್ಳುತ್ತದೆ.

ಶಾಪಾಶಯ**ಗಳಲ್ಲಿ ವಾರಣಾಸಿ ಮುಂತಾದ ಪವಿತ್ರಕ್ಷೇತ್ರಗಳಲ್ಲಿ ಸಾವಿರಾರು ಕವಿಲೆಗಳನ್ನು, ಅದರಲ್ಲೂ ಉಭಯಮುಖಿ (ಗಬ್ಬದ ಹಸು) ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದಪುಣ್ಯವೆಂದರೆ ಕೆಲವೊಂದು ಶಾಸನಗಳಲ್ಲಿ ಕೊಂಬುಗಳಿಗೆ ಚಿನ್ನದ ಹೊದಿಕೆ ಮತ್ತು ಕಾಲುಗಳಿಗೆ ಬೆಳ್ಳಿಯ ಗೊರಸುಗಳಿಂದ ಅಲಂಕರಿಸಿ ದಾನ ನೀಡಿದರೆ ಹೆಚ್ಚಿನ ಪುಣ್ಯವೆಂದೂ ಹೇಳಿದೆ. ಇನ್ನೊಂದು ಶಾಸನದಲ್ಲಿ ಈ ಮೇಲಿನ ಅಲಂಕಾರಗಳೊಂದಿಗೆ ಚಿನ್ನದ ಹಗ್ಗದ ಸಮೇತ ಕವಿಲೆಗಳನ್ನು ವಾರಣಾಸಿ ಮುಂತಾದ ಪುಣ್ಯತೀರ್ಥಗಳಲ್ಲಿ ವೇದಪಾರಂಗತರಾದ ಬ್ರಾಹ್ಮಣರಿಗೆ ದಾನ ನೀಡಬೇಕೆಂದು ಹೇಳಿದೆ. ಹೀಗೆ ಮಾಡಿದಲ್ಲಿ ಹೆಚ್ಚಿನ ಪುಣ್ಯ ಬರುವುದೆಂದು ಶಾಪಾಶಯದಲ್ಲಿ ಹೇಳಿದೆ. ಈ ಬಗೆಯ ಪುಣ್ಯ ಬರಬೇಕಾದಲ್ಲಿ ಇಂತಹ ದಾನಗಳನ್ನು ನೀಡಬೇಕೆಂದೇನೂ ಇಲ್ಲ. ಇದಕ್ಕೆ ಪಾಯವಾಗಿ ನೀಡಿರುವ ದಾನವನ್ನು ಕಾಪಾಡಿದರೆ ಪುಣ್ಯ ಬರುತ್ತದೆ ಎಂದೂ ಕನ್ನಡ ಶಾಸನಗಳ ಶಾಪಾಶಯಗಳು* ಸಾರಿ ಹೇಳಿವೆ. ದೇವಾಲಯಕ್ಕಾಗಲೀ, ಬ್ರಾಹ್ಮಣರಿಗಾಗಲೀ ನೀಡಿದ ದಾನವನ್ನಾಗಲೀ, ದಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ಅಪಹರಿಸಿದಲ್ಲಿ ಮತ್ತು ದೇವದಾನಗಳ ಬ್ರಹ್ಮದೇಯಗಳ ಮೇಲೆ ತೆರಿಗೆ ವಸೂಲಿ ಮಾಡುವುದಾಗಲೀ ಮಾಡಿದಲ್ಲಿ ಮೇಲೆ ಹೇಳಿದಂತೆ ವಾರಣಾಸಿಯಲ್ಲಿ ಗೋವುಗಳನ್ನು, ಬ್ರಾಹ್ಮಣರನ್ನೂ ಕೊಂದ ಪಾಪ ಬರುತ್ತದೆ ಎಂದು ಶಾಪಾಶಯಗಳಲ್ಲಿ ಹೇಳಲಾಗಿದೆ.

ಹಿಂದೂಗಳ ಪವಿತ್ರ ತೀರ್ಥಗಳ ಪಟ್ಟಿಯಲ್ಲಿ ಹಿಂದೆ ಹೇಳಿದಂತೆ ವಾರಣಾಸಿ ಅಥವಾ ಕಾಶಿ ಪ್ರಮುಖಸ್ಥಾನ ಪಡೆದಿದೆ. ಇದರ ನಂತರದ ಸ್ಥಾನ ಕುರುಕ್ಷೇತ್ರ ಮತ್ತು ಪ್ರಯಾಗ. ಇವಲ್ಲದೆ ಶಾಸನಗಳಲ್ಲಿ ಶ್ರೀಪರ್ವತ ಅಥವಾ ಶ್ರೀಶೈಲ, ರಾಮೇಶ್ವರ, ಗಯ, ಕೇದಾರ, ತ್ರಿಪುರಾಂತಕ ಮುಂತಾದ ಸ್ಥಳಗಳನ್ನು ಹೆಸರಿಸಲಾಗಿದೆ. ಈ ಸ್ಥಳಗಳಲ್ಲಿ ಪುಣ್ಯಕರವಾದ ಕಾರ್ಯಗಳನ್ನೇ ಮಾಡಬೇಕು. ಪಾಪಕಾರ್ಯಗಳನ್ನು ಮಾಡಿದರೆ ನರಕ ಪ್ರಾಪ್ತಿ ಎಂದು ಹೇಳಲಾಗಿದೆ. ಅಷ್ಟರಮಟ್ಟಿಗೆ ಪ್ರಾಚೀನ ಕಾಲದಿಂದಲೂ ಕೂಡ ಕಾಶಿ ಎಂಬ ಪುಣ್ಯಭೂಮಿಯ ಮೇಲೆ ನಮ್ಮ ಪೂರ್ವಜರಲ್ಲಿ ಇದ್ದಂತಹ ಪೂಜ್ಯನೀಯ ಭಾವ ಹಾಗೂ ಧಾರ್ಮಿಕ ಪವಿತ್ರತೆ ಭಾರತೀಯರ ಜನಜೀವನದಲ್ಲಿ ಹಾಸುಹೊಕ್ಕಾಗಿದೆ.

(ಚಿತ್ರ 2  : ಕಾಶಿಯ ಗಂಗಾತಟದಲ್ಲಿ ಅನಾದಿಕಾಲದಿಂದಲೂ ವಿಜೃಂಭಿಸುತ್ತಿರುವ ಮಿನಿ ಭಾರತ )

ಕಾಶಿಯ ಹೆಸರನ್ನು ಕೇಳದ ಯಾವ ಭಾರತೀಯನೂ ಇರುವುದಿಲ್ಲ. ವಿಶ್ವದಲ್ಲೇ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದಾದ ಕಾಶಿ ಹಿಂದೂಗಳ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರ. 

ಚಾಳುಕ್ಯರಕಾಲದ ಶಾಸನದಲ್ಲಿ ಕಾಶಿಯ ಉಲ್ಲೇಖ 

ನೊಳಂಬ ಪಲ್ಲವ ಪೆರ್ಮಾನಡಿ ಉದಯಾದಿತ್ಯದೇವನ ತಾಯಿ ಮಹಾದೇವಿ ಹಾಗೂ ತನ್ನ ತಂಗಿ ದೇವಳದೇವಿ (ಚಾಳುಕ್ಯದೊರೆ ಜಗದೇಕಮಲ್ಲ ಎರಡನೇ ಜಯಸಿಂಹನ ಪತ್ನಿ) ಮರಣ ಹೊಂದಿರುವ ವಿಷಯವನ್ನು ಬಳ್ಳಾರಿ ತಾಲ್ಲೂಕಿನ ಒರುವಾಯಿ ಗ್ರಾಮದಲ್ಲಿನ ಶಾಸನದಿಂದ ತಿಳಿದುಬರುತ್ತದೆ.  ಉದಯಾದಿತ್ಯನ ತಾಯಿ ಮಹಾದೇವಿ ವಯೋಸಹಜವಾಗಿ ಮರಣಿಸಿರಬಹುದು. ದೇವಳದೇವಿ ಯಾವ ಕಾರಣಕ್ಕೆ ಮರಣಿಸಿದಳೆಂದು ತಿಳಿದುಬರುವುದಿಲ್ಲ. ಯಾವುದಾದರೂ ಯುದ್ಧ ಸಂಭವಿಸಿ ಶತ್ರುಗಳಿಂದ ಮರಣಿಸಿದಳೋ ಅಥವಾ ಅಕಾಲಿಕ ರೋಗಬಾಧೆಯಿಂದ ಮರಣಿಸಿದಳೋ ತಿಳಿದುಬರುವುದಿಲ್ಲ. ಶಾಸನವು “ಪರಮಕಲ್ಯಾಣಾಭ್ಯುದಯ, ಸಹಸ್ರ ಫಳಭೋಗಭಾಮಿನಿ, ದ್ವಿತೀಯ ಲಕ್ಷ್ಮೀಸಮಾನೆ” ಎಂದು ಹೊಗಳಿದೆ. ಸನಾತನ ಧರ್ಮ ಪರಂಪರೆಯಲ್ಲಿ ಶವಸಂಸ್ಕಾರ ಮುಗಿದ ತರುವಾಯ ಆಸ್ಥಿಯನ್ನು ಪವಿತ್ರ ನದಿಗಳಲ್ಲಿ ವಿಸರ್ಜನೆ ಮಾಡುವ ಸಂಪ್ರದಾಯಯಿದೆ ಆದ್ದರಿಂದ ಉದಯಾದಿತ್ಯದೇವನು ತನ್ನ ತಾಯಿ ಮತ್ತು ತಂಗಿಯ ಆತ್ಮಕ್ಕೆ ಮುಕ್ತಿ ಸಿಗಲಿ ಎನ್ನುವ ಆಶಯದೊಂದಿಗೆ ಇಬ್ಬರ ಆಸ್ತಿಯನ್ನು ವಾರಣಾಸಿಯ ಗಂಗಾ ನದಿಯಲ್ಲಿ ವಿಸರ್ಜನೆ ಮಾಡಲು ವ್ಯೆವಸ್ಥೆ ಮಾಡುತ್ತಾನೆ. ಈ ಕಾರ್ಯವನ್ನು ಮಾಡಿ ಬಂದಂತಹವರಿಗೆ ದಾನದತ್ತಿ ನೀಡಿರುವುದು ಶಾಸನದಿಂದ ತಿಳಿದು ಬರುತ್ತದೆ. ಗಂಗಾನದಿಯಲ್ಲಿ ಅಸ್ಥಿಯನ್ನು ವಿಸರ್ಜಿಸಿ ಬಂದ ಬ್ರಾಹ್ಮಣ ಮಾಧವಷಡಂಗಿಗೆ, ಕೃಷ್ಣಯ್ಯನಿಗೆ, ತುಪ್ಪದ ದೇವಯ್ಯರಿಗೆ ಭೂಮಿಯನ್ನು ದಾನನೀಡಿರುವ ವಿಷಯ ತಿಳಿಯುತ್ತದೆ. ಈ ದಾನವನ್ನು ಕ್ರಿ.ಶ.ಸು 1036ರ ಡಿಸೆಂಬರ್ 24ರಂದು ನೀಡಲಾಗಿದೆ.

ಹೆಬ್ಬಾಲೆ ಶಾಸನದಲ್ಲಿ ಕಾಶಿಯ ಉಲ್ಲೇಖ  

(ಚಿತ್ರ 3 : ಎಪಿಗ್ರಾಫಿಯಾ ಕರ್ನಾಟಕ. ಸಂ.8. ಶಾ. ನಂ,15 ಪಾಠ )

ಹೊಯ್ಸಳ ಚಕ್ರವರ್ತಿ ಮೊದಲನೇ ನರಸಿಂಹನ ಕಾಲದಲ್ಲಿ ಕಾಶಿಯ ವಿಶ್ವೇಶ್ವರ ದಾನ ದತ್ತಿ ನೀಡಿರುವ ಮಾಹಿತಿ ಅರಕಲಗೂಡು ತಾಲ್ಲೂಕಿನ ಹೆಬ್ಬಾಲೆ ಗ್ರಾಮವೂ ಸಾಕ್ಷಿಯಾಗಿದೆ. ಹೆಬ್ಬಾಲೆ ಅನ್ನೋದು ಸಣ್ಣ ಗ್ರಾಮವಾಗಿದೆ, ಈ ಗ್ರಾಮದಲ್ಲಿರುವ ಶಾಸನದಿಂದ ಕರ್ನಾಟಕಕ್ಕೂ ಮತ್ತು ಕಾಶಿಗೂ ಇದ್ದ ‌ಸಂಬಂಧವನ್ನು ಸೂಚಿಸುತ್ತದೆ. ಹೆಬ್ಬಾಲೆ ಗ್ರಾಮದ ಬಸವನ ಗುಡಿಯ ಬಳಿಯಿರುವ ಹೊಯ್ಸಳ ಚಕ್ರವರ್ತಿ ಮೊದಲನೇ ನರಸಿಂಹನ ಕ್ರಿ.ಶ. 1159ರ ಶಾಸನವೂ (ಎಪಿಗ್ರಾಫಿಯಾ ಕರ್ನಾಟಕ. ಸಂ.8. ಶಾ. ನಂ,15) ಕೊಂಗನಾಡೂಳಗಣ ಹೆಬ್ಬಾಲೆ ಗ್ರಾಮವನ್ನು ಕುತ್ತುವಿತ್ತಿಯಾಗಿ ದಾನ ನೀಡಿ ಬರುವ ಆದಾಯವನ್ನು ಮಹಾನ್ ತೀರ್ಥಕ್ಷೇತ್ರವಾದ ವಾರಣಾಸಿ ವಿಶ್ವೇಶ್ವರ ದೇವಾಲಯದಲ್ಲಿ ಪೂಜೆ ಮತ್ತು ನೈವೇದ್ಯಾದಿ ಸೇವೆಗಳಿಗೆ ನೀಡಲಾಗಿದೆ ಎಂದು ಈ ಶಾಸನವು ತಿಳಿಸುತ್ತದೆ. ಈ ಶಾಸನದ ಪ್ರಕಾರ ನಾಡಿನ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಹೋಗಕೂಡದು ಹಾಗೂ  ಮಂಗಳವಾರದ ಸಂತೆಯಲ್ಲಿ ಅಧಿಕಾರಿಗಳು ತೆರಿಗೆ ವಸೂಲಿಗೆ ಮುಂದಾದರೆ ಅರಸನ ಆಣೆಯೆಂದು ಸಹ ತಿಳಿಸಿದೆ. ಈ ಶಾಸನವು ಗ್ರಾಮವನ್ನು ವಾರಣಾಸಿ ವಿಶ್ವೇಶ್ವರ ದೇವರ ನೈವೇದ್ಯಾದಿ ಪೂಜೆಗಳಿಗೆ ದತ್ತಿ ನೀಡಿರುವುದು ಹೊಯ್ಸಳ ಸಾಮ್ರಾಜ್ಯಕ್ಕೂ ಮತ್ತು ವಾರಣಾಸಿಗೆ ಇದ್ದಂತಹ ಪ್ರಾಚೀನ ಸಂಬಂಧಕ್ಕೆ ಸಾಕ್ಷಿಯಾಗಿದೆ. ಹೊಯ್ಸಳ ಚಕ್ರವರ್ತಿ ಮುಮ್ಮಡಿ ನರಸಿಂಹನ ಕಾಲದ ಕ್ರಿ.ಶ. 1279ರ ತಾಮ್ರ ಶಾಸನವೂ (ಎಪಿಗ್ರಾಫಿಯಾ ಕರ್ನಾಟಕ. 9. ಶಾಸನ ಸಂ,181) ಕಾಶಿ ವಿಶ್ವೇಶ್ವರ ದೇವರ ಪೂಜೆಗೆ ಕೊಂಗನಾಡು ಹೆಬ್ಬಾಲೆ ಗ್ರಾಮವನ್ನು ದಾನ ನೀಡಿ 645 ಗದಾಣ್ಯ (ಚಿನ್ನದ ನಾಣ್ಯ) ಗಳನ್ನು ನೀಡಿರುವುದನ್ನು ಈ ತಾಮ್ರ ಶಾಸನವು ತಿಳಿಸುತ್ತದೆ. ಅಷ್ಟೇ ಅಲ್ಲದೇ ಹಿಂದೂಗಳು ಧಾರ್ಮಿಕಯಾತ್ರೆಗೆಂದು ಹೋಗುವವರು ಅಂದಿನ ತುರುಕರ ರಾಜರಿಗೆ ಸಲ್ಲಬೇಕಾದ ತೆರಿಗೆಯನ್ನು ಸಲ್ಲಿಸಲು ಧನ ಸಹಾಯ ಮಾಡಿಕೊಟ್ಟಿರುವುದು   ಹೊಯ್ಸಳರ ಧರ್ಮನಿಷ್ಠೆಯನ್ನು ಎತ್ತಿ ತೋರಿಸುತ್ತದೆ.

ಉತ್ತರ ಭಾರತದಲ್ಲಿ 13ನೇ ಶತಮಾನದಲ್ಲಿ ಆಳ್ವಿಕೆ ಮಾಡುತ್ತಿದ್ದ ಇಸ್ಲಾಂ ದೊರೆಗಳ ಕಾಲದ ವಾರಣಾಸಿಯ ರಾಜಕೀಯ ಪರಿಸ್ಥಿತಿ ಕಡೆ ಗಮನ ಹರಿಸಬೇಕಾಗುತ್ತದೆ. ಕುತುಬ್ ಇನ್ ಐಬಕ್ ಉತ್ತರ ಭಾರತದ ಮೇಲೆ ಅವ್ಯಾಹತವಾಗಿ ದಾಳಿಗಳು ನಡೆಸಿ ವಾರಣಾಸಿಯಲ್ಲಿ ಹಲವು ದೇವಾಲಯಗಳನ್ನು ನೆಲ ಸಮಗೊಳಿಸಿದ್ದನು. ಹಾಗೆಯೆ ಅಲ್ಲಿಗೆ ವಾರಣಾಸಿಯಲ್ಲಿ ಹಿಂದೂ ರಾಜರ ಆಳ್ವಿಕೆ ಕೊನೆಗೊಂಡು ಮುಸ್ಲಿಂ ರಾಜರ ರಾಜ್ಯಭಾರ ಆರಂಭವಾಯಿತು. ಹೊಯ್ಸಳ ಚಕ್ರವರ್ತಿ ಮುಮ್ಮಡಿ ವೀರನರಸಿಂಹ ಆಳ್ವಿಕೆ ಮಾಡುತ್ತಿದ್ದ ಸಮಯದಲ್ಲಿ ವಾರಣಾಸಿಯಲ್ಲಿ ಗಿಯಾಸುದ್ದೀನ್ ಬಲ್ಬನ್ ಎಂಬ ಮುಸ್ಲಿಂ ರಾಜನೋರ್ವ ಆಳ್ವಿಕೆ ಮಾಡುತ್ತಿದ್ದನು. ಆ ಸಮಯದಲ್ಲಿ ಹಿಂದೂಗಳ ಮೇಲೆ ಜಜಿಯಾ ಎಂಬ ತೆರಿಗೆಯನ್ನು ವಿಧಿಸುತ್ತಿದ್ದನು.  ಹೊಯ್ಸಳ ಸಾಮ್ರಾಜ್ಯದಿಂದ ಹಿಂದೂ ಧಾರ್ಮಿಕರು ವಾರಣಾಸಿ ಯಾತ್ರೆಯನ್ನು ಕೈಗೊಂಡರೆ ಸುಗಮವಾಗಿ ನಡೆಯಲು ಹೊಯ್ಸಳ ಚಕ್ರವರ್ತಿಗಳು ಹೆಬ್ಬಾಲೆ ಗ್ರಾಮವನ್ನು ದತ್ತಿ ನೀಡಿ, ಅದರಲ್ಲಿ ಬರುವ ಆದಾಯದಲ್ಲಿ  ಮುಸಲ್ಮಾನರಿಗೆ ಸಲ್ಲಬೇಕಾದ ತೆರಿಗೆಯನ್ನು ಪಾವತಿಸಲಾಗುವಂತೆ ಶಾಸನ ಮಾಡಿದ್ದರು. ಅದರಂತೆ ವಾರಣಾಸಿಯಲ್ಲಿರುವ ಎಲ್ಲ ಕ್ಷೇತ್ರವಾಸಿಗಳು ತುರುಕರಿಗೆ ಸೇರುವ ಸಿದ್ದಾಯಕ್ಕೆ ಕೂಟ್ಟ ಹೂನ್ನಿನ ಕುಳ ಎಂದು ಸ್ಪಷ್ಟಪಡಿಸಿ ಅದರಲ್ಲಿ ಕನ್ನಡಿಗರಿಗೆ ತಿಗುಳರಿಗೆ ತೆಲುಗರಿಗೆ ಮಲಯಾಳಿಗಳಿಗೆ ಹೀಗೆ ಎಲ್ಲ ಭಾಷೆ ಮಾತನಾಡುವ ಪ್ರತಿ ಹಿಂದೂಗಳಿಗೂ ಕೂಡ ಇಂತಿಷ್ಟು ಹಣ ಪಾವತಿಸಬೇಕೆಂದು ಶಾಸನದಲ್ಲಿ ತಿಳಿಸಲಾಗಿದೆ. 

(ಚಿತ್ರ 4 : ಹೆಬ್ಬಾಲೆ ಗ್ರಾಮದ ಶಾಸನದ ಒಂದು ಪಾಠ )

ಅಷ್ಟೇ ಅಲ್ಲದೆ ವಾರಣಾಸಿಯ ವಿಶ್ವೇಶ್ವರ ದೇವರರಿಗೆ ಅಮೃತಪಡಿಗೆಗೆ, ನಂದಾದೀವಿಗೆಗೆ, ಆಚಾರ್ಯರಿಗೆ, ಪಾರುಪತ್ತೆಗಾರರಿಗೆ, ಭಿಕ್ಷೆ ಗೆ, ಬಾಣಸಿಗರಿಗೆ ಹೀಗೆ ಇನ್ನೂ ಅನೇಕ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳಿಗೂ ಇಂತಿಷ್ಟು ಹಣ ಎಂದು ನಿಗದಿಪಡಿಸಿದ್ದಾರೆ. ಎಲ್ಲ ಧರ್ಮ ಕಾರ್ಯಗಳಿಗೂ ದಾನ ದತ್ತಿಗಳು ಆಚಂದ್ರಾರ್ಕವಾಗಿ ಸಲ್ಲುವಂತೆ ಆಗಬೇಕೆಂದು ಆದೇಶಿಸುವ ಮಹಾನ್ ಶಾಸನ ಇದಾಗಿದೆ. ಹೊಯ್ಸಳರ ಕಾಲದಲ್ಲಿ ಹೀಗೆ ವಾರಣಾಸಿಯವರಿಗೂ ಕನ್ನಡಿಗರು ಸಂಬಂಧ ಇಟ್ಟುಕೊಂಡಿದ್ದಾರೆ.

ವಿಜಯನಗರದ ಕಾಲದಲ್ಲಿ 

ಗೌರಿಬಿದನೂರಿನ ತಾಲೂಕಿನ ಗುಲಗಂಜಿಹಳ್ಳಿಯಲ್ಲಿರುವ ವಿಜಯನಗರದ ಚಕ್ರವರ್ತಿ ಇಮ್ಮಡಿ ಹರಿಹರನ ಕಾಲದ ಶಾಸನದಲ್ಲಿ ಗುಲಗಂಜಿಹಳ್ಳಿಯ ಊರಿನ ಪ್ರಮುಖರು ವಾರಣಾಸಿಯಿಂದ ಬಾಣಲಿಂಗವನ್ನು ವಿಶ್ವೇಶ್ವರ ಲಕ್ಷ್ಮಿನಾರಾಯಣ ದೇವರ ಪ್ರತಿಷ್ಠಾಪನೆ ಮಾಡಿಸಿ ದಾನ ದತ್ತಿ ನೀಡಿರುವ ವಿಷಯ ತಿಳಿಸುತ್ತದೆ. ಹೆಸರುಘಟ್ಟದ ಕ್ರಿ.ಶ.ಸು 1533ರ ವಿಜಯನಗರ ದೊರೆ ಅಚ್ಯುತದೇವನ ಶಾಸನವೂ ಶ್ರೀ ಮನ್ಮಹಾರಾಜಾಧಿರಾಜ ಪರಮೇಶ್ವರ ಶ್ರೀ ವೀರ ಪ್ರತಾಪ ಅಚ್ಚುತದೇವಮಹಾರಾಯರು ಪೃಥ್ವಿರಾಜ್ಯಂಗೈಯುತ್ತಿರಲು ಬೇಲೂರು ಚಾವುಡಿಗೆ ಸಲುವ ಎಲಹಂಕನಾಡ ಸಿವನಸಮುದ್ರ ಸೀಮೆಯೊಳಗಣ ಕಾಕೋಳಲ ಸ್ಥಲದ ಹೆಸರುಘಟ್ಟಕೆ ಪ್ರತಿನಾಮವಾದ ಸಿವನಸಮುದ್ರವೆಂಬ ಸರ್ವಮಾನ್ಯದ ಅಗ್ರಹಾರದಲೂ ಭಾರದ್ವಾಜ ಗೋತ್ರದ ಅಶ್ವಲಾಯನ ಸೂತ್ರದರು ಶ್ಯಾಖೆಯ ಈ ಗುಡಿಯನು ಕಟ್ಟಿಸಿ ಕಾಶೀಲಿಂಗವ ತಂದು ಚಂದ್ರಮೌಳೀಶ್ವರ ದೇವರು ವಿಶ್ವೇಶ್ವರ ನಂದಿಕೇಶ್ವರ ದೇವ ದೇವರ ಪ್ರತಿಷ್ಟೆಯನು ಮಾಡಿ ಮಹಾಜನಂಗಳಿಗೆ ಬಿನ್ನಹಂ ಮಾಡಲಾಗಿ ನಾನಾ ಗೋತ್ರದ ನಾನಾ ಸೂತ್ರದ ನಾನಾ ಶಾಖೆಯ ನಾನಾ ನಾಮಧೇಯರಾದ ಅನೇಕ ವಿದ್ವನ್ಮಹಾಜನಂಗಳು ಪ್ರತಿಷ್ಟಾ ಪುಣ್ಯಕಾಲ ಅರ್ಕ್ಕವತೀವೊಳಗಾದ ನದೀ ತಟಾಕ ತೀರ ಚಂದ್ರಮೌಳೀಶ್ವರ ದೇವರ ಸನ್ನಿಧಿಯಲೂ ಚಂದ್ರಮೌಳೀಶ್ವರ ದೇವರ ಅಮೃತಪಡಿ ನೈವೇದ್ಯ ದೀಪಾರಾಧನೆಗೆ ಮೊದಲಾದ ದಾನವಂ ಕೊಟ್ಟು ಸಮರ್ಪಿಸಿದ ಹೊಲ ಗದ್ದೆ ತೋಟ ಇತ್ಯಾದಿ ಉಲ್ಲೇಖ ಸಿಗುತ್ತದೆ.

ಕೆಳದಿ ಅರಸರು 

ಕೆಳದಿ ಅರಸ ದೊಡ್ಡ ಸಂಕಣ್ಣ ಕಾಶಿಯಿಂದ ಹೊರಡುವ ಮುಂಚೆ ಕೆಲ ಮಠಗಳನ್ನು ಸ್ಥಾಪಿಸಿ ಅಲ್ಲಿಂದ ಒಂದು ದಿವ್ಯ ಶಿವಲಿಂಗವನ್ನು ಪಡೆಯುತ್ತಾರೆ. ಇಲ್ಲಿಂದ ಮುಂದೆ ಗಯಾ, ನೇಪಾಲ, ಕೇದಾರನಾಥ, ಹರಿದ್ವಾರ ಮತ್ತು ಕಾಶ್ಮೀರ (ಶ್ರೀ ಶಾರದಾ ಸನ್ನಿಧಿ) ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಕುರುಕ್ಷೇತ್ರ, ಗುಜರಾತ್ ಮತ್ತು ಮಹಾರಾಷ್ಟ್ರದ ಮೂಲಕ ಕೆಳದಿಗೆ ಆಗಮಿಸುತ್ತಾರೆ. ದೊಡ್ಡಸಂಕಣ್ಣ ನಾಯಕರ ಈ ತೀರ್ಥಯಾತ್ರೆ ಕೇವಲ ಧಾರ್ಮಿಕ ಯಾತ್ರೆ ಆಗದೆ ಮಲೆನಾಡು ಮತ್ತು ವಾರಣಾಸಿ ಮಧ್ಯೆ ಹೊಸ ಸಂಬಂಧಕ್ಕೆ ನಾಂದಿ ಆಗುತ್ತದೆ. ಮಲೆನಾಡಿನ ಅಡಿಕೆ ಮತ್ತು ವೀಳ್ಯದೆಲೆ ಅದರಲ್ಲೂ ವಿಶೇಷವಾಗಿ ತೀರ್ಥಹಳ್ಳಿ ಭಾಗದ ರಾಮ ಅಡಿಕೆ ಕಾಶಿಯಲ್ಲಿ ಪ್ರಖ್ಯಾತಿ ಪಡೆದರೆ ಇತ್ತ ಮಲೆನಾಡಿನಲ್ಲಿ ಬನಾರಸ್ ರೇಷ್ಮೆ ಮನೆಮಾತಾಗುತ್ತದೆ. ಇಂದಿಗೂ ಸಹಾ ಅದೆಷ್ಟೋ ಮನೆತನಗಳು ದಕ್ಷಿಣದ ಕಂಚಿಯ ರೇಷ್ಮೆ ಬದಲು ಮದುವೆಗೆ ದೂರದ ಕಾಶಿಯ ರೇಷ್ಮೆ ಸೀರೆಯನ್ನೇ ಮಲೆನಾಡಿನಲ್ಲಿ ಬಳಸುತ್ತಾರೆ. ಇಂದಿಗೂ ಸಹಾ ಮಲೆನಾಡಿನ ಹಲವಾರು ಮನೆಗಳಲ್ಲಿ ಪುರಾತನವಾದ ಬಹು ಅಮೂಲ್ಯವಾದ ಚಿನ್ನ ಮತ್ತು ಬೆಳ್ಳಿ ಸರಿಗೆಯಿಂದ‌ ಕುಸುರಿ ಕೆಲಸ ಮಾಡಿದ ರೇಷ್ಮೆ ಸೀರೆಗಳನ್ನು ನೋಡಬಹುದು. ಅದೇ ರೀತಿ ಗಂಡಸರು ತೊಡುವ ರೇಷ್ಮೆಯ ವಸ್ತ್ರಗಳು ಸಹಾ ಕಾಶಿಯಿಂದಲೇ ಬರುತ್ತಿದ್ದವು. ಇನ್ನೂ ಕಾಶಿಯಿಂದ ದೊಡ್ಡಸಂಕಣ್ಣ ನಾಯಕರು ತಂದ ಶಿವಲಿಂಗವನ್ನು ಅವರ ಎರಡನೆಯ ಪುತ್ರ ಹಿರಿಯ ವೆಂಕಟಪ್ಪ ನಾಯಕರು ಮಲೆನಾಡಿನಲ್ಲಿ ಹಿಂದಿನಿಂದಲೂ ಇರುವ ವಾಡಿಕೆಯಂತೆ ಕಾಶಿಯಿಂದ ತಂದ ಲಿಂಗವನ್ನು ಉತ್ತರಾಭಿಮುಖವಾಗಿ ಭುವನಗಿರಿದುರ್ಗ (ಕವಲೆದುರ್ಗ) ಕೋಟೆಯಲ್ಲಿ ಕಾಶಿವಿಶ್ವನಾಥ ದೇವಾಲಯದಲ್ಲಿ ಪ್ರತಿಷ್ಠಾಪಿಸುತ್ತಾರೆ. .

ದೊಡ್ಡಸಂಕಣ್ಣ ನಾಯಕರಿಂದ ಪ್ರಾರಂಭವಾದ ಕಾಶಿಯ ಜೊತೆಗಿನ ಸಂಪ್ರದಾಯವನ್ನು ನಡೆಸಿಕೊಂಡು ಹೋದ ಹಿರಿಯ ವೆಂಕಟಪ್ಪ ನಾಯಕರು ತಮ್ಮ ಮೊಮ್ಮಗ ವೀರಭದ್ರ ನಾಯಕರಿಗೂ ಇದನ್ನು ಮುಂದುವರಿಸಲು ಹಿತವಚನ ನೀಡುತ್ತಾರೆ. ಇನ್ನೂ ವೀರಭದ್ರ ನಾಯಕರು 1641ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಚಕ್ಕೋಡ್ಬೈಲು ಗ್ರಾಮವನ್ನು ಶಿವನ ಹೆಸರಿನಲ್ಲಿ ಧರ್ಮಕ್ಕೆ ದಾನವಾಗಿ ನೀಡುತ್ತಾರೆ. 61 ವರಾಹ ಮೌಲ್ಯದ ಚಕ್ಕೋಡ್ಬೈಲು ಗ್ರಾಮದ ಭೂಮಿಯನ್ನು ತಾಮ್ರಶಾಸನದ (ಎಪಿಗ್ರಾಫಿಯಾ ಕರ್ನಾಟಕ..8, ತೀರ್ಥಹಳ್ಳಿ 43) ಮೂಲಕ ವೀರಭದ್ರ ನಾಯಕರು ದಾನ ನೀಡುತ್ತಾರೆ. ಚಕ್ಕೊಡಬಯಲಿನಲ್ಲಿ ಕಪ್ಪಗಳಲೆ ಬಸವಣ್ಣ ಕಟ್ಟಿಸಿದ ಮಹತ್ತಿನ ಮಠದ ಧರ್ಮಕ್ಕೆ 37 ವರಾಹ ಭೂಮಿ ಮತ್ತು ಕಾಶಿಯಲ್ಲಿ ಪ್ರತಿ ಸೋಮವಾರದ ಮೊದಲ ಪೂಜೆಗೆ ಅಂದರೆ ಪರ್ವದ ಧರ್ಮಕ್ಕೆ 24 ವರಾಹ ಮೌಲ್ಯದ ಭೂಮಿಯನ್ನು ಮೀಸಲಿಡಲಾಗಿತ್ತು. ಇದರಿಂದ ತಿಳಿಯುವ ಅಂಶ ಏನೆಂದರೆ ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ ಚಕ್ಕೋಡ್ಬೈಲು ದೂರದ ಕಾಶಿಯಲ್ಲಿ ನಡೆಯುವ ಸೋಮವಾರದ ಪರ್ವಕ್ಕೆ ಪರೋಕ್ಷವಾಗಿ ತನ್ನ ಕೊಡುಗೆಯನ್ನು ನೀಡುತ್ತಿತ್ತು.

ವಿಜಯನಗರ ಕಾಲದಲ್ಲಿ ವೀರಶೈವ ಧರ್ಮ ವ್ಯಾಪಕವಾಗಿ ಪ್ರಸರಿಸಿ  ಶ್ರೀಲಂಕಾದಿಂದ ನೇಪಾಳದ ವರೆಗೂ   ಹಬ್ಬಿತ್ತು , ಇಂದಿಗೂ ನೇಪಾಳ ಶ್ರೀಲಂಕಾದಲ್ಲಿ  ವೀರಶೈವ ಕುರುಹುಗಳು ಕಾಣುತ್ತೇವೆ. ಕೇದಾರನಾಥ ದೇವಾಲಯಕ್ಕೆ ವೀರಶೈವ ಅರ್ಚಕರನ್ನೇ ಇಟ್ಟುಕೊಳ್ಳುವುದನ್ನು ನಾವು ಕಾಣಬಹುದು. ಈ ಸಂದರ್ಭದಲ್ಲಿ ಕಾಶಿಯ ವಿಶ್ವನಾಥನಿಗೆ ದಾನ ಧರ್ಮಗಳನ್ನು ನೀಡಿರುವ ಸಂಭವ ಇರುತ್ತದೆ. ಇದಕ್ಕೆ ಪುಷ್ಟಿ  ಕೊಡುವಂತೆ ಕೊಡಗು ಸಂಸ್ಥಾನದ ಕೊನೆಯ ಅರಸು ಚಿಕ್ಕ ವೀರ ರಾಜೇಂದ್ರ ಒಡೆಯರ್. ಇವರ ಗದ್ದುಗೆ ಮಂದಿರ ಉತ್ತರ ಪ್ರದೇಶ ರಾಜ್ಯದ ಕಾಶಿಯ ಜಂಗಮವಾಡಿ ಮಠದ ಆವರಣದಲ್ಲಿದ್ದು, ಈ ಬಗ್ಗೆ ಒಂದು ಶಿಲಾಶಾಸನವೂ ಆ ಮಂದಿರದ ಹೊರಗೋಡೆಯಲ್ಲಿದೆ. ಶಾಸನ ಸರಳವಾಗಿದ್ದು, ನೇರವಾಗಿ ವಿಷಯವನ್ನು ಹೇಳುತ್ತಿದೆ. “ಹಾಲೇರಿ ಸಂಸ್ಥಾನದ ಕೊಡಗು ದೇಶದ ಮಹಾರಾಜ ಶ್ರೀ ವೀರರಾಜೇಂದ್ರ ಒಡೆಯರ್ ರವರು ವಿಲಾಯತಿಯಲ್ಲಿ ಶಿವಾಧೀನವಾದರೂ. ಇವರ ದೇಹವನ್ನು ಹಿಂದೂಸ್ತಾನದ ಕಾಶೀಕ್ಷೇತ್ರಕ್ಕೆ ತಂದು, ಅವರ ಪಟ್ಟದ ರಾಣಿಯಾದ ನಂಜಮ್ಮಾಜಿ ಮತ್ತು ಪುತ್ರನಾದ ಲಿಂಗರಾಜ ಒಡೆಯರ್, ಸೋಮಶೇಖರ ಒಡೆಯರ್, ವೀರಭದ್ರ ಒಡೆಯರ್, ನಂಜರಾಜ ಒಡೆಯರ್, ಪದ್ಮರಾಜ ಒಡೆಯರ್ ಎಲ್ಲರೂ ಕೂಡಿ, ಸುಬೇದಾರ ಕೊಡಗರ ಮಹಾವೀರ ಅಚ್ಛೇಯ್ಯನಿಗೆ ಅಪ್ಪಣೆಕೊಟ್ಟು, ಅಂದಿನ ಒಡೆಯರ್ ಶೈವಮಠ (ಇಂದು ವೀರಶೈವ ಮಠ) ಜಂಗಮವಾಡಿಯಲ್ಲಿ ಲಿಂಗಮುದ್ರೆ ಕಲ್ಲಿನೊಳಗೆ ಸಮಾಧಿ ಮಾಡಿ, ಗದ್ದಿಗೆ ಕಟ್ಟಿಸಿ, ಕ್ರಿ.ಶ 1862ನೆಯ ಸೆಪ್ಟೆಂಬರ್ 12ರಂದು ಲಿಂಗ ಪ್ರತಿಷ್ಠೆ ಮಾಡಿಸಿ, ಆ ಲಿಂಗಕ್ಕೆ ಶ್ರೀ ವಿರೇಶ್ವರ ಎಂದು ಹೆಸರಿಟ್ಟರು. ಇದನ್ನು  ಮೂಲ್ ಚಂದ್ ಎಂಬುವನು ನಿರ್ಮಿಸಿದನು. ಸರ್ವಜನರು ತಿಳಿಯುವ ಉದ್ದೇಶ ಇದನ್ನು ಬರೆಸಿದೆ.” ಹೀಗೆ ಈ ಶಾಸನ ಕೊಡಗಿನ ಅಂತಿಮ ಅರಸು ಇಮ್ಮಡಿ ವೀರರಾಜೇಂದ್ರ ಒಡೆಯರ್ ಸಮಾಧಿ ಮಂದಿರದ ಬಗ್ಗೆ ಬೆಳಕು ಚೆಲ್ಲುತ್ತದೆ. 

ಶಾಸನ 19ನೇ ಶತಮಾನದ್ದು ಆದರೂ ಸಹ ಕಾಶಿಗೂ ಮತ್ತು ವೀರಶೈವಕ್ಕೆ ಸಂಬಂಧಪಟ್ಟಂತಹ ಪ್ರಾಚೀನ ನಂಟಿಗೆ ಇಂಬು ಕೊಡುತ್ತದೆ. 1650ರ ವೇಳೆಗೆ ವೀರಶೈವ ಧರ್ಮ ವ್ಯಾಪಕವಾಗಿ ಪ್ರಸಾರಗೊಂಡಿತು, ಇನ್ನೂ ಕರಾವಳಿ ಗೌಡ ಸರಸ್ವತರ ಮಠ 1475ರ ವೇಳೆಗೆ ಕಾಶಿಯಲ್ಲಿ ನೆಲೆಗೊಂಡಿತ್ತು ಮತ್ತು ಹಲವಾರು ದಾಳಿಗೆ ಒಳಾಗಿತ್ತ. ಹಾಗಾಗಿ  ಆ ವೇಳೆಯಲ್ಲಿ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಕನ್ನಡ ಶಾಸನಗಳು ಇರುವುದರಲ್ಲಿ ಅನುಮಾನವೇ ಇಲ್ಲ. ಮೈಸೂರು ಯದುಕುಲ ಮಹಾರಾಜರಾದ ಕಂಠೀರವ ನರಸಿಂಹರಾಜ ಒಡೆಯರ್ ಕಾಶಿಗೆ ಪೂಜೆ ಸಲ್ಲುವುದಕ್ಕಾಗಿ ದಾನ ದತ್ತಿ ಕೊಟ್ಟಿರೋ ಶಾಸನವೂ ಉಲ್ಲೇಖ ಸಿಗುತ್ತದೆ. ಹಾಗೇ ದಕ್ಷಿಣದ ಸಣ್ಣಪುಟ್ಟ ಪಾಳೆಯಗಾರರು ಸಹ ಕಾಶಿಯ ವಿಶ್ವೇಶ್ವರನಿಗೆ ದಾನದತ್ತಿಗಳು ನೀಡಿರುವುದು ಉಲ್ಲೇಖ ಸಿಗುತ್ತದೆ. ಉದಾಹರಣೆಗೆ ಸಣ್ಣ ಪಾಳೆಯಪಟ್ಟಗಿದ್ದ ತಾಡಿಗೊಳ್ ಸಂಸ್ಥಾನವೂ ಕಾಶಿಯ ವಿಶ್ವೇಶ್ವರನಿಗೆ ದಾನ ನೀಡಿರುವ ಉಲ್ಲೇಖ ಸಿಗುತ್ತದೆ.

ಹೀಗೆ ನನ್ನ ಗಮನಕ್ಕೆ ಬಂದಂತಹ ಶಾಸನಗಳಿಂದ ನಮ್ಮ ಕನ್ನಡ ನಾಡಿಗೂ ವಾರಣಾಸಿಗೂ ಸಂಬಂಧದ ಕುರಿತು ತಿಳಿಯುತ್ತದೆ. ಬಹುಶಃ ಕನ್ನಡ ಪ್ರಾಚೀನ ಸಾಹಿತ್ಯ ಹಾಗೂ ಪುರಾಣಗಳನ್ನು ಅಧ್ಯಾಯನ ಮಾಡಿದರೆ ಮತ್ತಷ್ಟು ಮಾಹಿತಿ ಲಭ್ಯವಾಗಬಹುದು.

* ಪುಣ್ಯಸ್ಥಾನ/ಧರ್ಮಸ್ಥಾನ 

**ಭಾರತೀಯ ಶಾಸನಗಳ ಶಾಪಾಶಯ – ಭಾರತದ ಇತಿಹಾಸ ಪರಂಪರೆಯಲ್ಲಿ ಎಪಿಗ್ರಾಫಿ /ಶಾಸನಗಳ ಪಾತ್ರ ಅತ್ಯಂತ ಮಹತ್ವವಾದದ್ದು. ಶಾಸನ ಎಂದರೆ ಆದೇಶ/ಆಜ್ಞೆ ಎಂಬ ಅರ್ಥವಿದೆ. ಬದಲಾಗದಂತದ್ದು ಅಥವಾ ಶಾಶ್ವತವಾದದ್ದು  ಎನ್ನುವುದೂ ಒಂದರ್ಥ. ಸಾವಿರಾರು ವರ್ಷಗಳ ಕಾಲ ಉಳಿಯುವಂತಹ ಜೇಡಿಮಣ್ಣು, ಕಲ್ಲುಬಂಡೆ , ಶಂಖ,  ಲೋಹ ಇತ್ಯಾದಿಗಳ ಮೇಲಿನ ಬರಹಕ್ಕೆ ಶಾಸನ ಎನ್ನುತ್ತಾರೆ. ಇವು ಒಂದು ಬಗೆಯ ಟೈಮ್ ಕ್ಯಾಪ್ಸೂಲ್ ಗಳಂತೆ. ಆ ಕಾಲದ ರಾಜರ ಆದೇಶ, ಸಾಮಾನ್ಯ ಪ್ರಜೆಗಳ ಆಶಯ ಎಲ್ಲವನ್ನೂ ಶಾಸನಗಳ ಮೇಲೆ ದಾಖಲೆ ಮಾಡಲಾಗುತ್ತಿತ್ತು. ಯಾವುದೇ ಸ್ಥಳದ ಇತಿಹಾಸದ ನಿಖರವಾದ ಚಿತ್ರಣವನ್ನು ನೀಡುವ ಈ ಶಾಸನಗಳಲ್ಲಿ  ಹಲವು ಬಗೆಗಳಿವೆ – ದಾನ ಶಾಸನ ,ಕೂಟ ಶಾಸನ , ವೀರಗಲ್ಲು ಇತ್ಯಾದಿ. ಶಾಸನಗಳನ್ನು ಬರೆಯುವ ಒಂದು ವಿಶಿಷ್ಟ  ಕ್ರಮವೂ ನಮ್ಮ ಇತಿಹಾಸ ಪರಂಪರೆಯಲ್ಲಿತ್ತು. ಓಂ, ಸ್ವಸ್ತಿ ಇತ್ಯಾದಿಯಾಗಿ ಆರಂಭಗೊಂಡು ದೇವರನ್ನು ಸ್ತುತಿಸಿದ ನಂತರ ಮುಖ್ಯ ವಿಷಯವನ್ನು ದಾಖಲಿಸಲಾಗುತ್ತಿತ್ತು. ಈ ಮೂಲಕ ಆ ಕಾಲದ ರಾಜರು. ದಾನಿಗಳು , ಅವರ ಇಷ್ಟ ದೈವ, ಸಂಪ್ರದಾಯಗಳ ಪರಿಚಯ ಲಭ್ಯವಾಗುವುದು. ಶಾಪಾಶಯ/ ಶಾಪವೂ ಶಾಸನಗಳಲ್ಲಿ  ಸಾಮಾನ್ಯವಾಗಿ ಕಂಡುಬರುವ ಅಂಶವಾಗಿವೆ. ಶಾಸನಗಳನ್ನು ಉಲ್ಲಘಂನೆ ಮಾಡದಂತೆ ಅಥವಾ ನಾಶ ಪಡಿಸದಂತೆ ಸಂರಕ್ಷಿಸುವ ದೃಷ್ಟಿಯಿಂದ ಶಾಪಾಶಯಗಳನ್ನು ಬರೆಯಲಾಗುತ್ತಿತ್ತು. ಉದಾಹರಣೆಗೆ : ಈ ಶಾಸನವನ್ನು ಹಾಳು  ಮಾಡುವವರು ನರಕಕ್ಕೆ ಹೋಗುತ್ತಾರೆ. 

(ಈ ಲೇಖನವು ಮೊದಲ ಬಾರಿಗೆ  ವಿಶ್ವವಾಣಿ ಆರಾಮ ಸಂಚಿಕೆಯಲ್ಲಿ  ಪ್ರಕಟವಾಗಿತ್ತು. . ಲೇಖಕರ ಅನುಮತಿಯಂತೆ ಹೆಚ್ಚಿನ ಆಕಾರ ಅಂಶಗಳನ್ನು ಸೇರಿಸಿ ಮರುಮುದ್ರಣ ಮಾಡಲಾಗಿದೆ. )

Feature Image Credit: istockphoto.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.