close logo

ಗೀತಾ ಜಯಂತಿ ಪ್ರಬಂಧ ಸ್ಪರ್ಧೆ: “ಭಗವದ್ಗೀತೆಯ ಆಧ್ಯಾತ್ಮಿಕ ಮಹತ್ವ”

ಭಾರತೀಯ ಪರಂಪರೆಯಲ್ಲಿ ಭಗವದ್ಗೀತೆಗೆ ಇರುವ ಪ್ರಾಧಾನ್ಯತೆ ಮಹತ್ತರವಾದುದು. ‘ಪ್ರಸ್ಥಾನತ್ರಯಿ’ ಗಳಲ್ಲಿ ಒಂದಾದ ಭಗವದ್ಗೀತೆ ಬ್ರಹ್ಮ-ಸೂತ್ರಗಳು ಮತ್ತು ಉಪನಿಷತ್ತುಗಳ ಜೊತೆಗೆ ಭಾರತೀಯ ತತ್ತ್ವಶಾಸ್ತ್ರದಲ್ಲಿ ಉನ್ನತ ಸ್ಥಾನವನ್ನು ಹೊಂದಿದೆ. ಪುರುಷಾರ್ಥ ಸಾಧನೆ, ಅದರಲ್ಲೂ ಮೋಕ್ಷದ ಅನ್ವೇಷಣೆಯಲ್ಲಿ ಭಗವದ್ಗೀತೆಯು ದಾರಿದೀಪವಾಗಿರುವ ರೀತಿಯನ್ನು ನಮ್ಮೆಲ್ಲ ಪ್ರಾಚೀನ ಆಚಾರ್ಯರು ಕಾಲ ಕಾಲಕ್ಕೆ ಎತ್ತಿ ತೋರಿಸಿದ್ದಾರೆ. ಪರಂಪರೆಯಲ್ಲಿ ಭಗವದ್ಗೀತೆಯು ಅತಿ ಹೆಚ್ಚಿನ ಸಂಖ್ಯೆಯ ವ್ಯಾಖ್ಯಾನಗಳನ್ನು ಕಂಡಿದೆ. ನಮ್ಮ ಆಚಾರ್ಯರಲ್ಲಿ ಶ್ರೇಷ್ಠರಾದ ಶ್ರೀ ಶ್ರೀ ಆದಿಶಂಕರರು, ಶ್ರೀ ಶ್ರೀ ರಾಮಾನುಜರು, ಶ್ರೀ ಶ್ರೀ ಮಧ್ವರು ಭಗವದ್ಗೀತೆಯ ಮೇಲೆ ವ್ಯಾಖ್ಯಾನವನ್ನು ಬರೆದಿದ್ದಾರೆ. ಅಭಿನವಗುಪ್ತ, ವಲ್ಲಭಾಚಾರ್ಯ, ಮಧುಸೂಧನ ಸರಸ್ವತಿ ಮುಂತಾದ ಪ್ರಮುಖ ದಾರ್ಶನಿಕರು ಕೂಡ ಬರೆದಿದ್ದಾರೆ. ಆಧುನಿಕ ಯುಗದಲ್ಲಿ ಸ್ವಾಮಿ ಚಿನ್ಮಯಾನಂದರು, ಶ್ರೀಲ ಪ್ರಭುಪಾದರು, ಶ್ರೀ ಅರಬಿಂದೋ, ಶ್ರೀ ರಮಣ ಮಹರ್ಷಿಗಳು ಸಹ ನಮಗೆ ಜ್ಞಾನೋದಯವನ್ನುಂಟುಮಾಡುವ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಪ್ರತಿಯೊಂದು ಭಾರತೀಯ ಭಾಷೆಯಲ್ಲೂ ಹಲವಾರು ದಿಗ್ಗಜರು ತಮ್ಮ ಮನೋಜ್ಞವಾದ ಗೀತಾ-ವ್ಯಾಖ್ಯಾನಗಳ ಮೂಲಕ ನಮಗೆ ಮಾರ್ಗದರ್ಶಕರಾಗಿದ್ದಾರೆ. ನಮ್ಮ ಸಂಕಷ್ಟಗಳಲ್ಲಿ ನಾವೆಲ್ಲರೂ ಅರ್ಜುನರೇ. ಶ್ರೀ ಕೃಷ್ಣ ಯೋಗೇಶ್ವರ ಭಗವದ್ಗೀತೆಯ ಮೂಲಕ ನಮ್ಮ ಜೀವನವನ್ನು ಜ್ಞಾನದ ಪ್ರಕಾಶದಿಂದ ಬೆಳಗಿದರೆ, ನಮ್ಮ ಆಚಾರ್ಯರು ಆಯಾ ಕಾಲಕ್ಕೆ ಸೂಕ್ತವಾದ ಮಾರ್ಗಗಳಲ್ಲಿ ನಮ್ಮನ್ನು ಮುನ್ನಡೆಸುತ್ತಿದ್ದಾರೆ.

ನಮಗೆಲ್ಲರಿಗೂ ತಿಳಿದಿರುವಂತೆ, ಭಗವದ್ಗೀತೆಯು ಭಕ್ತಿ, ಕರ್ಮ ಮತ್ತು ಜ್ಞಾನ ಮಾರ್ಗಗಳ ಮೂಲಕ  ಪರಮೋಚ್ಚವಾದ   ಮೋಕ್ಷ ತಲುಪುವ ರೀತಿಯನ್ನು ಬೋಧಿಸುತ್ತದೆ. ಈ ಮಾರ್ಗಗಳ ಸಾರವೇನು? ಅವುಗಳ ನಡುವಣ ಪರಸ್ಪರ  ಸಂಬಂಧವೇನು? ಈ ಮಾರ್ಗಗಳು ಸಂಪೂರ್ಣವಾಗಿ ಬೇರೆಯಾದವುಗಳೇ? ಅಥವಾ ಪರಸ್ಪರ ಪೂರಕವಾಗಿ ಒಟ್ಟಾಗಿಯೇ ಮುನ್ನಡೆಯುತ್ತವೆಯೇ? ಪುರುಷಾರ್ಥಗಳು, ದೇವತೆಗಳು, ಸನ್ಯಾಸ, ಗೃಹಸ್ಥಾಶ್ರಮಗಳ ಬಗ್ಗೆ ಭಗವದ್ಗೀತೆ ಏನು ಹೇಳುತ್ತದೆ? ವ್ಯಕ್ತಿ ಮತ್ತು ಸಮುದಾಯಗಳು ತಮ್ಮ ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ಭಗವದ್ಗೀತೆಯಿಂದ ಹೇಗೆ ಸ್ಫೂರ್ತಿ ಪಡೆಯಬಹುದು? ಭಗವದ್ಗೀತೆಯು ರಣರಂಗದಲ್ಲಿ ಬಾಂಧವ್ಯಗಳ ಹಂಗನ್ನು ಮೀರಿದ  ಧಾರ್ಮಿಕತೆ, ಕಾರ್ಯಶೀಲತೆ ಮತ್ತು ಕರ್ಮಸಾಧನೆಗೆ ನೀಡಿರುವುದನ್ನು ನಾವು ಎಂದಿಗೂ ಮರೆಯಬಾರದು. ಭಗವದ್ಗೀತೆಯಲ್ಲಿ ಅಡಕವಾಗಿರುವ ಧರ್ಮದ ದೃಷ್ಟಿಕೋನ ಯಾವುದು? ಈ ಕಾಲಕ್ಕೆ ಅಗತ್ಯವಾದ ಕಾರ್ಯಶೀಲತೆಗೆ ನಾವು ಭಗವದ್ಗೀತೆಯಿಂದ ಹೇಗೆ ಸ್ಫೂರ್ತಿ ಪಡೆಯುತ್ತೇವೆ? ನಮ್ಮ ಕಾಲಕ್ಕೆ ಅದರ ಪ್ರಸ್ತುತತೆ ಏನು? ಈ ಎಲ್ಲ ಅಂಶಗಳ ಕುರಿತು ನಿಮ್ಮಲ್ಲಿ ಒಳನೋಟಗಳಿದ್ದರೆ ಇದೋ ನೋಡಿ ನಿಮ್ಮ ಮುಂದಿದೆ ಸುವರ್ಣಾವಕಾಶವೊಂದು.

‘ಗೀತಾ ಜಯಂತಿ’ ಇನ್ನೇನು ಕೆಲವೇ ವಾರಗಳಲ್ಲಿದೆ ಮತ್ತು ಇಂಡಿಕಾ ಟುಡೇ ವಿಶೇಷ ಸ್ಪರ್ಧೆಗಾಗಿ ಎಲ್ಲಾ ಧಾರ್ಮಿಕ ಸಜ್ಜನರಿಂದ ಪ್ರಬಂಧಗಳನ್ನು ಆಹ್ವಾನಿಸುತ್ತಿದೆ. ಈ ಬಾರಿಯ ವಿಷಯ – “ಭಗವದ್ಗೀತೆಯ ಆಧ್ಯಾತ್ಮಿಕ ಮಹತ್ವ”. ಪ್ರಬಂಧ ಸ್ಪರ್ಧೆಯ ಪ್ರಮುಖ ಅಂಶಗಳು ಹೀಗಿವೆ.

  1. ಪ್ರಬಂಧಗಳು 1000 ರಿಂದ 1500 ಪದಗಳ ನಡುವೆ ಇರಬೇಕು.
  2. ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರಬಂಧಗಳನ್ನು ಪ್ರಸ್ತುತಪಡಿಸಬಹುದು.
  3. ನಿಮ್ಮ ಪ್ರಬಂಧಗಳು ನಮ್ಮನ್ನು ತಲುಪಲು ಕೊನೆಯ ದಿನಾಂಕ 26 ನವೆಂಬರ್, 2021.
  4. ಅತ್ಯುತ್ತಮ 5 ಪ್ರಬಂಧಗಳಿಗೆ ಬಹುಮಾನದೊಂದಿಗೆ ಗೌರವಿಸಲಾಗುತ್ತದೆ.
  5. ಇದರ ಹೊರತಾಗಿ, ಆಯ್ದ ಪ್ರಬಂಧಗಳನ್ನು ಭಗವದ್ಗೀತಾ ಸಪ್ತಾಹದಲ್ಲಿ ಇಂಡಿಕಾ ಟುಡೆಯಲ್ಲಿ ಪ್ರಕಟಿಸಲಾಗುವುದು.

ಸನಾತನ ಸಜ್ಜನರು ತಮ್ಮ ಪ್ರಬಂಧಗಳನ್ನು editor@indictoday.com ಗೆ ಕಳುಹಿಸಬೇಕಾಗಿ ವಿನಂತಿ.

Feature Image credit: rajiniji.com

  • ಓದುಗರ ಗಮನಕ್ಕೆ: “ಭಗವದ್ಗೀತೆಯ ಆಧ್ಯಾತ್ಮಿಕ ಮಹತ್ವ” ಪ್ರಬಂಧ ಸ್ಪರ್ಧೆಗೆ ನಿಮ್ಮ ಲೇಖನವನ್ನು ಕಳುಹಿಸಲು ಕಡೆಯ ದಿನಾಂಕವನ್ನು ೨ ಡಿಸೆಂಬರ್-ಗೆ ವಿಸ್ತರಿಸಲಾಗಿದೆ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply