close logo

 ಭಾರತದ ಪಂಚಾಂಗ : ಒಂದು ಕಿರುನೋಟ 

ಭಾರತದಲ್ಲಿ ಹಬ್ಬಗಳ ದಿನಾಂಕಗಳು ಪ್ರತೀ ವರ್ಷವೂ ಬದಲಾಗುತ್ತಲೇ ಇರುತ್ತವೆಯಲ್ಲ, ಅದು ಹೇಗೆ? ಮತ್ತು ಏಕೆ? ಎಂಬುದು ಜನರಲ್ಲಿ ಸಾಮಾನ್ಯವಾಗಿ ಮೂಡಿಬರುವ ಪ್ರಶ್ನೆ.  ಈ ಸಂಶಯ ನಿವಾರಣೆಗೆಂದೇ ಸಂಕ್ಷಿಪ್ತವಾದ ಪಂಚಾಂಗ ಪರಿಚಯವನ್ನು ಇಲ್ಲಿ ಸಿದ್ದ ಪಡಿಸಿದ್ದೇವೆ. 

ಭಾರತೀಯ ಪಂಚಾಂಗವು ಪ್ರತೀ ವರ್ಷದ, ಪ್ರತೀ ದಿನದ ಮಾಹಿತಿಯನ್ನು ಒದಗಿಸುವ ಕೈಪಿಡಿ. ಆಯಾ ದಿನದ ವಿಶೇಷತೆ, ಪ್ರಾಮುಖ್ಯತೆ, ಆಚರಣೆ ಮತ್ತು ಉಳಿದ ಮಾಹಿತಿಗಳನ್ನು ತಿಳಿಸಿಕೊಡುಲು ಪಂಚಾಂಗವು ಮುಖ್ಯವಾಗಿ ಐದು ಅಂಗ, ಎಂದರೆ ಐದು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಅವುಗಳು, ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಎಂದು. ಭಾರತದಲ್ಲಿ ಆಚರಿಸಲ್ಪಡುವ ಹಬ್ಬ-ಹರಿದಿನಗಳು, ತಿಥಿ, ನಕ್ಷತ್ರ ಮತ್ತು ಮಾಸವನ್ನು (ಹಿಂದೂ ತಿಂಗಳನ್ನು) ಅನುಸರಿಸುತ್ತದೆ ಎಂದು ಗಮನದ್ಲಲ್ಲಿ ಇಟ್ಟುಕೊಳ್ಳುತ್ತ  ಸಂಕ್ಷಿಪ್ತವಾಗಿ ಪಂಚಾಂಗವನ್ನು  ಪರಿಚಯಿಸಿಕೊಳ್ಳೋಣ ಬನ್ನಿ. ಈ ಲೇಖನದಲ್ಲಿ ಯೋಗ ಮತ್ತು ಕರಣಗಳ ಬಗ್ಗೆ ವಿವರಿಸುವುದಿಲ್ಲ. ಏಕೆಂದರೆ, ಸಾಮಾನ್ಯವಾದ ಹಬ್ಬ ಹರಿದಿನಗಳ ಬಗ್ಗೆ ತಿಳಿಯಲು, ಅವುಗಳ ಅಗತ್ಯ ಅಷ್ಟಾಗಿ ಬಾರದು. ವಾರಗಳ ಆಧಾರದ ಮೇಲೂ  ಕೆಲವು ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಬರಹದಲ್ಲಿ ನಕ್ಷತ್ರ ಮತ್ತು ತಿಥಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ.

ಜಗಮಗಿಸುವ ತಾರೆಗಳಿಂದ ಕೂಡಿದ ಆಕಾಶವು ಬಹಳ ಹಿಂದಿನಿಂದಲೂ ಮಾನವರ ಕುತೂಹಲ ಕೆರಳಿಸಿದೆ. ಸೂರ್ಯಾಸ್ತದ ನಂತರ ಆಗಸದ ಅಂಗಳದಲ್ಲಿ ಹೊಳೆಯುವ ಅದೆಷ್ಟೋ ಚುಕ್ಕಿಗಳಿಗೆ ಚಕ್ರಗತಿಯಿರುತ್ತದೆಂದು ನಮ್ಮ ಪೂರ್ವಿಕರು ಬಹಳ ಹಿಂದೆಯೇ ತಿಳಿದುಕೊಂಡಿದ್ದರು. ಬಾನಂಗಳವನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿಯು  ಪ್ರಪಂಚದ ಹಲವಾರು ನಾಗರಿಕತೆಗಳಲ್ಲಿ  ಸಾಮಾನ್ಯವಾಗಿ ಕಂಡುಬರುತ್ತದೆಯಾದರೂ ಭಾರತೀಯರು ಈ ಕ್ಷೇತ್ರದಲ್ಲಿ  ನಿಸ್ಸೀಮರೆಂದು ಹೇಳಬಹುದು. 3,5೦೦ ವರ್ಷಗಳ ಹಿಂದೆಯೇ ಸಮಯಮಾಪನದ ಲೆಕ್ಕಾಚಾರ ಮತ್ತು ಕಾಲಜ್ಞಾನದ ಮುನ್ಸೂಚನೆಗಳನ್ನು ಲೆಕ್ಕಹಾಕುವುದರಲ್ಲಿ ಭಾರತೀಯರು ಸಾಕಷ್ಟು ಮುಂದುವರೆದಿದ್ದರು. ಮಹರ್ಷಿ ಲಗದ ರವರ ವೇದಾಂಗಜ್ಯೋತಿಷ ಎಂಬ ಗ್ರಂಥವನ್ನು ಸುಮಾರು 35೦೦ ವರ್ಷಗಳಷ್ಟು ಹಳೆಯದು ಎಂದು ಗುರುತಿಸಲಾಗಿದೆ. ಇದರ ಕಾಲವನ್ನು ಸುಮಾರು 38೦೦ವ ರ್ಷಗಳಷ್ಟು ಹಳೆಯದು ಎಂದೂ, 31೦೦ ವರ್ಷ ಹಿಂದಿನದು ಎಂಬ ಅಭಿಪ್ರಾಯಗಳನ್ನು ಕೆಲವು ವಿದ್ವಾಂಸರು ವ್ಯಕ್ತಪಡಿಸಿದ್ದರೂ, ಈ ಮುಂದೆ ನೋಡುವ ವಿವರಗಳಿಗೆ  ಇದು ಅಂಥ ವ್ಯತ್ಯಾಸವನ್ನು ಮಾಡುವುದಿಲ್ಲ. 

ವೇದಾಂಗಜ್ಯೋತಿಷವು 366 ದಿನಗಳನ್ನು ಒಂದು ವರ್ಷ ಎಂದು ಮತ್ತು 5 ವರ್ಷಗಳನ್ನು  ಒಂದು ಯುಗ ಎಂದು ಗುರುತಿಸಿದೆ.  ವರ್ಷದ  366  ದಿನಗಳನ್ನು 3೦ ದಿನಗಳಿರುವ 12 ತಿಂಗಳುಗಳನ್ನಾಗಿ ವಿಭಜಿಸಲಾಗಿದೆ. ಹೀಗೆ ಮಾಡಿದ್ದಲ್ಲಿ ಕೆಲವು ಹೆಚ್ಚುವರಿ ದಿನಗಳು ಉಳಿದುಕೊಳ್ಳುತ್ತದೆ. ಆಗ ಒಂದು ಯುಗದಲ್ಲಿ ಇರಬೇಕಾದ ದಿನಗಳನ್ನು ಲೆಕ್ಕದಲ್ಲಿಟ್ಟುಕೊಂಡು ಋತುಮಾನಕ್ಕೆ ಹೊಂದಾಣಿಕೆ ಆಗುವಂತೆ, ಹೆಚ್ಚುವರಿ ದಿನಗಳನ್ನು ಅದೇ ಯುಗದ ವರ್ಷದಲ್ಲಿ ಅಧಿಕ ಮಾಸವಾಗಿ ಸೇರಿಸಲಾಗುತ್ತದೆ. ಅಲ್ಲಿಗೆ ಒಂದು ವರ್ಷ ಎಂದರೆ 366 ದಿನಗಳಿರುತ್ತದೆ ಎಂಬ ಲೆಕ್ಕ ಸರಿಹೋಗುತ್ತದೆ. ಒಂದು ಯುಗದಲ್ಲಿ  19 ವರ್ಷಗಳಿರುತ್ತವೆ  ಎಂಬ ವ್ಯಾಖ್ಯಾನಗಳೂ ಕಾಣಸಿಗುತ್ತದೆಯಾದರೂ ಯುಗದ ಬಗೆಗಿನ ಚರ್ಚೆ ಈ ಲೇಖನಕ್ಕೆ ಅನವಶ್ಯಕ. ಇಲ್ಲಿ ಮತ್ತೊಂದು ಗಮನಾರ್ಹವಾದ ವಿಷಯವೆಂದರೆ ವೇದಾಂಗಜ್ಯೋತಿಷದ ಯುಗಕ್ಕೂ ತ್ರೇತಾಯುಗ, ದ್ವಾಪರ ಮತ್ತು ಕಲಿಯುಗಗಳಿಗೂ ಯಾವುದೇ ನೇರ ಸಂಬಂಧವಿಲ್ಲ. ತ್ರೇತಾ, ದ್ವಾಪರ ಮತ್ತು ಕಲಿಯುಗಗಳಲ್ಲಿ ಹೇಳುವ ಯುಗಗಳ ಸಮಯ ಬಹಳ ದೀರ್ಘವಾದದ್ದು ಮತ್ತು ಇವುಗಳ ಪರಿಕಲ್ಪನೆ ವೇದಾಂಗಜ್ಯೋತಿಷದ  ರಚನೆಯ ನಂತರ ಮೂಡಿಬಂದಿರುವಂತದ್ದು  ಎಂಬ ಅನಿಸಿಕೆಯಿದೆ. 

ಭಾರತದ ಪೂರ್ವಿಕರು ಸೂರ್ಯ, ಚಂದ್ರ ಮತ್ತು ತಾರೆಗಳ ಚಲನವಲನಗಳನ್ನು ಬಹಳ ಕೂಲಂಕಷವಾಗಿ ತಿಳಿದುಕೊಂಡಿದ್ದರು ಎಂಬುದನ್ನು ವೇದಾಂಗಜ್ಯೋತಿಷವು ದೃಢೀಕರಿಸುತ್ತದೆ. ಭೂಮಿಯ ಮೇಲಾಗುವ ಋತು ಬದಲಾವಣೆಗೆ ಸೂರ್ಯನ ಉತ್ತರಾಯಣ ಮತ್ತು ದಕ್ಷಿಣಾಯನಗಳೇ ಕಾರಣವೆಂದು ಅವರು ಸ್ಪಷ್ಟವಾಗಿ ಅರಿತುಕೊಂಡಿದ್ದರು. ಒಟ್ಟಿನಲ್ಲಿ ವೇದಾಂಗಜ್ಯೋತಿಷವು ಆ ಸಮಯಕ್ಕೇ ಮಾನವನ ಜೀವನದಲ್ಲಿ ಇಂದಿನ ಕ್ಯಾಲೆಂಡರ್ ನಂತಹ ಒಂದು ವ್ಯವಸ್ಥೆಯನ್ನು ಪರಿಚಯಿಸುತ್ತ, ವ್ಯವಸಾಯಕ್ಕೆ ಬೇಕಾದಂತಹ ತಿಳುವಳಿಕೆ, ವಿಶೇಷ ಮತ್ತು ಪ್ರಮುಖ ದಿನಗಳ ಸೂಚನೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ಬೇಕಾದಂತಹ ಸಾಕಷ್ಟು ಮಾಹಿತಿಗಳನ್ನು ಒದಗಿಸಲು ಯಶಸ್ವಿಯಾಗಿತ್ತು. 

ಹಬ್ಬ ಹರಿದಿನಗಳನ್ನು ಗುರುತಿಸುವ ಸಲುವಾಗಿ ಬಳಕೆಯಲ್ಲಿರುವ ಇಂದಿನ  ಪಂಚಾಂಗವು ಕಡಿಮೆಯೆಂದರೆ ಸುಮಾರು 15೦೦ ವರ್ಷಗಳಷ್ಟು ಹಳೆಯದು ಎನ್ನಬಹುದು ಮತ್ತು ಇದು ವೇದಾಂಗಜ್ಯೋತಿಷಕ್ಕಿಂತ ಪ್ರೌಢವಾಗಿರುವಂತದ್ದು. ಈ ಲೇಖನದಲ್ಲಿ  ಸ್ವಲ್ಪ ಸುಲಭವಾಗಿ ಈ ಪಂಚಾಂಗದ ಮೂಲತತ್ವಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. 

ಮೊದಲಿಗೆ, ವರ್ಷವನ್ನು ಗುರುತಿಸಿಕೊಳ್ಳುವ ಬಗೆ. ಭಾರತದಲ್ಲಿ ಪಾಶ್ಚಾತ್ಯ ದೇಶಗಳಂತೆ ಜನವರಿ ಒಂದರಿಂದ ವರ್ಷದ ಆರಂಭವಾಗುವುದಿಲ್ಲ, ಬದಲಿಗೆ ಸೌರಮಾನ ವರ್ಷ ಮತ್ತು ಚಾಂದ್ರಮಾನ ವರ್ಷ ಎಂದು ವರ್ಷವನ್ನು ಎರಡು ರೀತಿಯಲ್ಲಿ ಗುರುತಿಸಲಾಗುತ್ತದೆ. ಸೂರ್ಯನ ಚಲನೆಯನ್ನು ಅನುಸರಿಸಿ ಲೆಕ್ಕ ಹಾಕುವ ವರ್ಷವನ್ನು ಸೌರಮಾನ ಸಂವತ್ಸರ ಎಂದು, ಅದೇ ರೀತಿ ಚಂದ್ರನ ಚಲನೆಯನ್ನು ಅನುಸರಿಸುತ್ತ ಲೆಕ್ಕ ಹಾಕುವ ವರ್ಷವನ್ನು ಚಾಂದ್ರಮಾನ ಸಂವತ್ಸರ ಎಂದು ಕರೆಯಲಾಗಿದೆ. ಚಾಂದ್ರಮಾನವೆಂಬ ಹೆಸರಿದ್ದರೂ, ಅದು ನಿಜವಾಗಿ ಸೂರ್ಯ ಮತ್ತು ಚಂದ್ರ, ಇಬ್ಬರ ಚಲನೆಯನ್ನೂ ಅವಲಂಬಿಸಿದೆ ಎನ್ನುವುದನ್ನು ಗಮನದಲ್ಲಿ ಇಡಬೇಕು.

ಬಾನಂಗಳದಲ್ಲಿ ಸೂರ್ಯನಿಗೆ ಹತ್ತಿರವಾದ ಒಂದು ನಕ್ಷತ್ರವನ್ನು ಗುರುತಾಗಿ ಇಟ್ಟುಕೊಂಡರೆ, ಸೂರ್ಯನು ಆ ನಕ್ಷತ್ರಕ್ಕೆ ಅನುಗುಣವಾಗಿ ಎಲ್ಲಿಂದ ಹೊರಟಿರುತ್ತಾನೋ ಅಲ್ಲಿಗೇ ಪುನಃ ಬಂದು ನಿಲ್ಲಲು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತಾನೋ ಆ ಸಮಯಕ್ಕೆ ಒಂದು ಸೌರ-ವರ್ಷ ಎಂದು ಕರೆಯಲಾಗುತ್ತದೆ. ಇಲ್ಲೊಂದು ಪ್ರಶ್ನೆ ಮೂಡುತ್ತದೆ. ಸೂರ್ಯನ ಬೆಳಕಿನಲ್ಲಿ, ಸೂರ್ಯನಿಗೇ ಹತ್ತಿರವಾದ  ನಕ್ಷತ್ರವನ್ನು ಗುರುತಿಸುವುದಾದರೋ ಹೇಗೆ? ಎಂದು. ಸೂರ್ಯೋದಯಕ್ಕೆ ಮೊದಲು ಎಂದರೆ ಸೂರ್ಯನ ಬೆಳಕು ಕಣ್ಣು ಕುಕ್ಕುವ ಮುನ್ನ  ಮತ್ತು ಸೂರ್ಯಾಸ್ತದ ನಂತರ ಮಾಡುವ ಆಕಾಶವೀಕ್ಷಣೆ ಸೂರ್ಯನ ನಿಜವಾದ ಸ್ಥಾನವನ್ನು ನಿರ್ಧರಿಸಲು ಸಹಾಯಕರವಾಗುತ್ತದೆ. ಹೀಗೆ ಸಾವಿರಾರು ವರ್ಷಗಳ ಹಿಂದೆಯೇ ಸೂರ್ಯನು ಒಂದು ಜಾಗದಿಂದ ಹೊರಟು ಮತ್ತೆ ಅದೇ ಜಾಗಕ್ಕೆ ಹಿಂದಿರುಗಲು 365 ರಿಂದ 366 ದಿನಗಳನ್ನು ತೆಗೆದುಕೊಳ್ಳುತ್ತಾನೆಂದು ಸ್ಪಷ್ಟವಾಗಿ ತಿಳಿದುಕೊಂಡಿದ್ದರು. ಭೂಮಿ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ಇದೇ ಸಮಯವನ್ನು ತೆಗೆದುಕೊಳ್ಳುತ್ತದೆಯೆಂದು ಸ್ಪಷ್ಟವಾದಮೇಲೆ, ದೇಶ ಕಾಲಕ್ಕೆ ತಕ್ಕಂತೆ ಋತುಮಾನಗಳನ್ನು ನಿಖರವಾಗಿ ಪತ್ತೆಹಚ್ಚುವ ವಿಧಾನ ಕೈಗೂಡಿತು. ಎಂದರೆ, ಈ ಪದ್ಧತಿಯಲ್ಲಿ, ವರ್ಷದ ಆರಂಭವನ್ನು ಸೂರ್ಯ ಒಂದು ನಕ್ಷತ್ರದ ಬಳಿ ಬರುವುದರಿಂದ ಲೆಕ್ಕಿಸಲಾಗುತ್ತದೆ. ಉದಾಹರಣೆಗೆ, ಈ ವರ್ಷವು, ಸೂರ್ಯನು ಅಶ್ಬಿನೀ ನಕ್ಷತ್ರದ ಬಳಿ ಬರುವುದರಿಂದ ಲೆಕ್ಕ ಹಾಕಲಾಗುತ್ತದೆ. ಇದೇ ವೇದಾಂಗಜ್ಯೋತಿಷದ ಕಾಲದಲ್ಲಿ, ಒಂದು ಯುಗವು, ಸೂರ್ಯ ಮತ್ತೆ ಚಂದ್ರರು ಧನಿಷ್ಟಾ (ಶ್ರವಿಷ್ಟಾ) ನಕ್ಷತ್ರದ ಬಳಿ ಬರುವುದರಿಂದ ಲೆಕ್ಕ ಹಾಕಲಾಗುತ್ತಿತ್ತು.

ಇಲ್ಲಿ ಮತ್ತೊಂದು ಸಹಜವಾದ ಪ್ರಶ್ನೆಯೇಳುತ್ತದೆ. ಹೀಗಿದ್ದ ಮೇಲೆ ಚಾಂದ್ರಮಾನದ ಅವಶ್ಯಕತೆಯಾದರೂ ಏನಿದೆ? ಎಂದು. ಮಾನವ ಅನುಕೂಲ ಸಿಂಧು. ಸೂರ್ಯೋದಯದ ಮುನ್ನ ಹಾಗು ಸೂರ್ಯಾಸ್ತದ ನಂತರ ನಕ್ಷತ್ರವನ್ನು ಮತ್ತು ಅದಕ್ಕೆ ಅನುಗುಣವಾಗಿ ಸೂರ್ಯನನ್ನು ಗುರುತಿಸುವುದು ಸುಲಭದ ಕೆಲಸವೇನಲ್ಲ. ಆದರೆ, ಚಂದ್ರ ಹಾಗಲ್ಲ. ತಂಪಾದ ಇರುಳಿನ ಸಮಯದಲ್ಲಿ ಸಾಕಷ್ಟು ಕಾಲ ಆಕಾಶವನ್ನೇ ಗಮನಿಸುತ್ತ ಹಲವಾರು ವಿಷಯಗಳನ್ನು ಕರಗತ ಮಾಡಿಕೊಳ್ಳುತ್ತ ತಾರೆಗಳ ಜಾಡು ಹಿಡಿದು ಕಾಲಮಾನದ ಮತ್ತು ಋತುಮಾನದ ಅಂದಾಜು ಮಾಡುವುದು ಸುಲಭ. ಆದ್ದರಿಂದ ಚಾಂದ್ರಮಾನ ವರ್ಷವು ಸಾಮಾನ್ಯವಾಗಿ ಬಳಕೆಗೆ ಬಂತು. 

ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಹಲವಾರು ನಾಗರಿಕತೆಗಳಲ್ಲಿ ಜನರು ಚಂದ್ರನನ್ನು, ಅವನ ಚಲನವಲನ ಮತ್ತು ಚಕ್ರಗತಿಯನ್ನು ಗಮನಿಸುತ್ತಲೇ ಬಂದಿದ್ದಾರೆ. ಒಂದು ನಕ್ಷತ್ರವನ್ನು ಗುರುತಾಗಿ ಇಟ್ಟುಕೊಂಡು, ಆ ನಕ್ಷತ್ರಕ್ಕೆ ಅನುಗುಣವಾಗಿ ಚಂದ್ರನ ಪಥವನ್ನು ಗಮನಿಸಲಾಯಿತು. ಚಂದ್ರನು ಎಲ್ಲಿಂದ ಹೊರಟಿದ್ದಾನೋ ಅಲ್ಲಿಗೆ ಮರಳಿ ಬರಲು 27 ರಿಂದ 28 ದಿನಗಳನ್ನು ತೆಗೆದುಕೊಳ್ಳುತ್ತಾನೆ ಎಂದು ಬಹಳ ಹಿಂದೆಯೇ ತಿಳಿದುಬಂದಿದ್ದಂತಹ ವಿಷಯ. ಚಂದ್ರನು ಬೆಳೆಯುವ ಮತ್ತು ಕುಗ್ಗುವ ಹಂತಗಳನ್ನು  ಗಮನಿಸಿ, ಪ್ರತೀ 29 ಅಥವಾ 30 ದಿನಗಳಿಗೊಮ್ಮೆ ಹುಣ್ಣಿಮೆ ಚಂದ್ರ ಎಂದರೆ ಅತ್ಯಂತ ಪ್ರಕಾಶಮಾನವಾದ ಪೂರ್ಣಚಂದ್ರನು ಮೂಡಿಬರುತ್ತಾನೆಂದು ತಿಳಿದು ಬಂತು. 30 ದಿನಗಳ ಅವಧಿಯ ಒಂದು ತಿಂಗಳು ಚಾಲ್ತಿಗೆ ಬಂದದ್ದು ಹೀಗೆ. ಒಂದು ತಿಂಗಳಲ್ಲಿ ಅಮಾವಾಸ್ಯೆಯಿಂದ ಹುಣ್ಣಿಮೆಯ ದಿನ ತಲುಪಲು 15 ಚಾಂದ್ರಮಾನ ದಿನಗಳ ಅವಧಿ ಬೇಕಾಗುತ್ತದೆ. ಈ ಚಾಂದ್ರಮಾನ ದಿನಗಳನ್ನು ‘ತಿಥಿ’ ಎಂದು ಕರೆಯಲಾಯಿತು. 

ಪ್ರತಿಯೊಂದು ತಿಥಿಯಂದೂ ಚಂದ್ರನು ಆಕಾಶದಲ್ಲಿ ಸಮದೂರದ ಪ್ರಯಾಣ ಸಾಗಿಸುತ್ತಾನೆ. ಸೂರ್ಯೋದಯಕ್ಕೂ ತಿಥಿಗೂ ಯಾವುದೇ ಹೊಂದಾಣಿಕೆ ಇರಬೇಕಾಗಿಲ್ಲ. ಪಾಶ್ಚಾತ್ಯ ಕ್ಯಾಲೆಂಡರ್ ನಂತೆ ಸೂರ್ಯೋದಯವು ತಿಥಿಯನ್ನು ನಿರ್ಧರಿಸುವುದಿಲ್ಲ. ಅಂತೆಯೇ, ಒಂದು ತಿಥಿಯ ಅವಧಿಯು ಕೂಡ 24 ಘಂಟೆಗಳೇ ಆಗಿರಬೇಕಾಗಿಲ್ಲ, ಸ್ವಲ್ಪ ಹೆಚ್ಚು-ಕಡಿಮೆಯಿರುತ್ತದೆ. ಆಯಾ ದಿನದ ತಿಥಿಯು, ಭೂಮಿಯ ಸುತ್ತಲು ತನ್ನ ಕಕ್ಷೆಯಲ್ಲಿ (orbit) ತಿರುಗುತ್ತಿರುವ ಚಂದ್ರನು ಎಲ್ಲಿದ್ದಾನೆ ಎಂಬುದನ್ನು ಅವಲಂಬಿಸಿರುತ್ತದೆ. 

ಒಂದು ಸೌರಮಾನ ವರ್ಷ, ಎಂದರೆ 365/366 ದಿನಗಳಲ್ಲಿ 12 ಹುಣ್ಣಿಮೆಗಳು ಸಂಭವಿಸುತ್ತದೆ ಎಂದು ಗಮನಿಸಿದ ನಂತರ, ಒಂದು ವರ್ಷದಲ್ಲಿ 12 ತಿಂಗಳುಗಳಿರುತ್ತವೆ ಎಂಬುದಾಗಿ ನಿರ್ಧರಿಸಲಾಯಿತು. ಈ ಸಮನ್ವಯಗಳನ್ನು ಉಪಯೋಗಿಸಿ ವರ್ಷದ ಮಾಸ (ತಿಂಗಳು) ಮತ್ತು ತಿಥಿ (ಚಾಂದ್ರಮಾನ ದಿನ) ಗಳನ್ನು ಕಂಡುಕೊಳ್ಳಬಹುದು. 

ಚಂದ್ರನು ಆಕಾಶವನ್ನು ಸುತ್ತಲು 27/28 ದಿನಗಳನ್ನು ತೆಗೆದುಕೊಳ್ಳುತ್ತಾನೆ ಎಂದು ಆಗಲೇ ಹೇಳಿದೆವಲ್ಲ, ಅಂತೆಯೇ ಆಕಾಶವನ್ನು 27/28 ಸಮಭಾಗವಾಗಿ ವಿಂಗಡಿಸಲಾಗಿದೆ. ಈ ವಿಭಾಗಗಳಿಗೆ “ನಕ್ಷತ್ರ” ಎಂದು ಹೆಸರು. ಪ್ರತಿಯೊಂದು ವಿಭಾಗದಲ್ಲೂ ಒಂದು ನಕ್ಷತ್ರವನ್ನು ಆಯಾ ನಕ್ಷತ್ರದ ವಿಭಾಗದ ಪ್ರತಿನಿಧಿಯಾಗಿ ಗುರುತಿಸಲಾಗಿದೆ, ಆ ಪ್ರತಿನಿಧಿಯನ್ನು  ‘ಯೋಗತಾರೆ’ ಎನ್ನಲಾಗಿದೆ. ಈ ವ್ಯವಸ್ಥೆ ವೇದಗಳಲ್ಲಿಯೇ ಕಾಣಸಿಗುತ್ತದೆ. ಅಂತೆಯೇ ಭಾರತೀಯ ನಾಗರಿಕತೆಯ ಆರಂಭದ ದಿನಗಳಿಂದಲೂ ಕಾಲಮಾನದ ಪರಿಜ್ಞಾನವಿತ್ತೆಂದು ಹೇಳಬಹುದು. ವೇದಗಳಲ್ಲಿ ಉಲ್ಲೇಖಿಸಿರುವ ನಕ್ಷತ್ರಗಳ ಮೂಲಕ ವೇದಗಳ ಪ್ರಾಚೀನತೆಯನ್ನೂ ಅಂದಾಜು ಮಾಡುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ಅದು ಈ ಲೇಖನದ ವ್ಯಾಪ್ತಿಗೆ ಬರುವುದಿಲ್ಲ. 

ಒಂದು ಕಾಲದಲ್ಲಿ ಅಭಿಜಿತ್ ನಕ್ಷತ್ರವನ್ನು ತ್ಯಜಿಸಲಾಗಿ ಈಗ ಅಶ್ವಿನಿಯಿಂದ ರೇವತಿ ನಕ್ಷತ್ರದ ವರೆಗಿನ ಎಣಿಕೆಯಿರುವ 27 ನಕ್ಷತ್ರಗಳ ಆವರ್ತವಿದೆ. ಚಂದ್ರನು ಒಂದು ಯೋಗತಾರೆಗೆ ನಿಗದಿಪಡಿಸಲಾದ ಗಡಿಯನ್ನು ದಾಟುವ ಸಮಯವನ್ನು ಆ ನಕ್ಷತ್ರದ ಹೆಸರಿನಿಂದ ಗುರುತಿಸಲಾಗುತ್ತದೆ. ಉದಾಹರಣೆಗೆ ಇಂದು ಚಂದ್ರನು ಅಶ್ವಿನಿಯಲ್ಲಿದ್ದರೆ, ನಾಳೆ ಅವ ಭರಣಿಯಲ್ಲಿರುತ್ತಾನೆ. ಚಂದ್ರನ ಕಕ್ಷೆಯು ವೃತ್ತಾಕಾರವಲ್ಲದ ಕಾರಣ, ಚಂದ್ರನು ಒಂದರಿಂದ ಮತ್ತೊಂದು ನಕ್ಷತ್ರಕ್ಕೆ ಹೋಗಲು ಬೇರೆ ಬೇರೆ ಕಾಲಾವಧಿ ಹಿಡಿಯುತ್ತದೆ ಮತ್ತು ಪ್ರತಿಯೊಂದು ನಕ್ಷತ್ರದಲ್ಲೂ ವಿಭಿನ್ನವಾದ ಸಮಯವನ್ನು ಕಳೆಯಬೇಕಾಗುತ್ತದೆ. ದಿನದ ಯಾವುದೇ ಅನಿರ್ದಿಷ್ಟವಾದ ಸಮಯದಲ್ಲಿ ಚಂದ್ರನು ನಕ್ಷತ್ರದ ಗಡಿಯನ್ನು ದಾಟಬಹುದಾದ್ದರಿಂದ, ದಿನದ ನಕ್ಷತ್ರವು ದಿನದ ಯಾವುದೇ ಸಮಯದಲ್ಲಾದರೂ  ಬದಲಾಗಬಹುದು. ಪ್ರಾಯೋಗಿಕ ಅನುಕೂಲಗಳನ್ನು ಗಮದಲ್ಲಿಟ್ಟುಕೊಂಡು, ಸೂರ್ಯೋದಯದ ಸಮಯದಲ್ಲಿನ ತಿಥಿ ಮತ್ತು ನಕ್ಷತ್ರವನ್ನು ಆ ದಿನದ ತಿಥಿ ಮತ್ತು ನಕ್ಷತ್ರ ಎಂದು ಬಳಸಲಾಗುತ್ತದೆ. 

ಒಂದು ವರ್ಷದಲ್ಲಿ 12 ತಿಂಗಳುಗಳಿರುವ ಕಾರಣ ಆಕಾಶವನ್ನು 12 ಸಮಭಾಗಗಳಾಗಿ ವಿಭಜಿಸಲಾಯಿತು. ಸೂರ್ಯನು ಒಂದು ತಿಂಗಳಲ್ಲಿ ಕ್ರಮಿಸುವ ದೂರಕ್ಕೆ ಅನುಗುಣವಾಗಿ 2.25 ನಕ್ಷತ್ರಗಳನ್ನು ಪ್ರತಿಯೊಂದು ಭಾಗಕ್ಕೂ ನಿಗದಿ ಪಡಿಸಲಾಯಿತು (2.25×12=27,  2.25 ನಕ್ಷತ್ರಪುಂಜಗಳೇ ‘ರಾಶಿ’ ). ಹೀಗೆ ಸೂರ್ಯನು ಒಂದು ವರ್ಷದಲ್ಲಿ ನಿಖರವಾಗಿ 27 ನಕ್ಷತ್ರಗಳಲ್ಲಿಯೂ ಸಂಚರಿಸುತ್ತಾನೆ. ಸೂರ್ಯನು ಒಂದು ತಿಂಗಳಲ್ಲಿ ಒಂದು ರಾಶಿಯಲ್ಲಿರುತ್ತಾನೆಂದು ಮುಖ್ಯವಾಗಿ  ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ತಿಂಗಳುಗಳಿಗೆ ಸೌರಮಾನ ತಿಂಗಳು ಅಥವಾ ಸೌರಮಾನ ಮಾಸಗಳೆಂದು ಕರೆಯಬಹುದು. ಯಾವ ದಿನದಂದು ಸೂರ್ಯನು ಒಂದು ರಾಶಿಯನ್ನು ಬಿಟ್ಟು  ಮತ್ತೊಂದು ರಾಶಿಗೆ ಪ್ರವೇಶಿಸುತ್ತಾನೋ ಆ ದಿನವನ್ನು ಸಂಕ್ರಮಣ  ಎಂದು ಕರೆಯಲಾಗುತ್ತದೆ. ಸಕ್ರಮಣಕ್ಕೆ ಸಂಕ್ರಾಂತಿ ಎಂಬ ಹೆಸರು ಸಹ ಉಂಟು. ಆದ್ದರಿಂದ ಒಂದು ವರ್ಷದಲ್ಲಿ 12 ಸಂಕ್ರಮಣಗಳಿರುತ್ತವೆ. ಜನವರಿ 14 ರಂದು ಸಂಭವಿಸುವ ಮಕರ ಸಂಕ್ರಮಣವನ್ನು ಮತ್ತು ಏಪ್ರಿಲ್ 14 ರಂದು ಸಂಭವಿಸುವ ಮೇಷ ಸಂಕ್ರಮಣವನ್ನು ಭಾರತದ ಹಲವಾರು ಕಡೆ ವಿಭಿನ್ನವಾದ ಹೆಸರುಗಳಿಂದ ಆಚರಿಸಲಾಗುತ್ತದೆ. ಏಪ್ರಿಲ್ 14 ರಂದು ಆಚರಿಸಲ್ಪಡುವ ವಿಷು ಹಬ್ಬವನ್ನು ಸೌರಮಾನ ವರ್ಷದ ಮೊದಲನೇ ದಿನವೆಂದು ಪರಿಗಣಿಸಲಾಗಿದೆ. ಭೂಮಿಯು ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ಬೇಕಾಗಿರುವ ಸಮಯ ಬದಲಾಗುವುದಿಲ್ಲವಲ್ಲ ಆ ಕಾರಣದಿಂದ, ಜನವರಿ 14 ರಂದು ಆಚರಿಸುವ ಸಂಕ್ರಾಂತಿ ಹಬ್ಬ ಮತ್ತು ಏಪ್ರಿಲ್ 14 ರಂದು ಬರುವ ವಿಷು ಹಬ್ಬಗಳು ಪ್ರತೀ ವರ್ಷವೂ ಒಂದೇ ದಿನಾಂಕದಂದು ಆಚರಿಸಲಾಗುತ್ತದೆ. 

ಈಗ ಮತ್ತೊಮ್ಮೆ ಚಾಂದ್ರಮಾನದ ಕಡೆ ಗಮನವರಿಸೋಣ. (ಅನುವಾದಕರ ಸೂಚಿ : ಚಂದ್ರನಿಗೆ ಒಂದು ಹುಣ್ಣಿಮೆ ಮತ್ತು ಅಮಾವಾಸ್ಯೆಯನ್ನು ಸಂಪೂರ್ಣವಾಗಿ ಕೈ ಗೊಳ್ಳಲು ಬೇಕಾದ ಸಮಯವನ್ನು ಸೂಕ್ಷ್ಮವಾಗಿ ಗಮನಿಸಿ ನಿರ್ದಿಷ್ಟವಾದ ಸಮಯವನ್ನು ಲೆಕ್ಕ ಹಾಕುವುದುರ ಮೂಲಕ ಒಂದು ಚಾಂದ್ರಮಾನ ತಿಂಗಳಲ್ಲಿ 29.5 ದಿನಗಳಿರುತ್ತವೆ ಎಂದು ಗೊತ್ತಾಗುತ್ತದೆ.)

ಒಂದು ಚಾಂದ್ರಮಾನ ಮಾಸವು 29.5 ದಿನಗಳು ಮತ್ತು ಒಂದು ವರ್ಷವು 365 ದಿನಗಳೆಂದರೆ, 11 ಹೆಚ್ಚುವರಿ ದಿನಗಳು ಉಳಿದುಕೊಳ್ಳುತ್ತವೆ. (29.5 X 12 = 254, 365-254 = 11). ಈ 11 ದಿನಗಳನ್ನು ನಿರ್ಲಕ್ಷಿಸುವಂತಿಲ್ಲ. ಹಾಗೆ ಮಾಡಿದರೆ, ವರ್ಷ ವರ್ಷ ಋತುಮಾನ ಮತ್ತು ಮಾಸಕ್ಕೆ ತಕ್ಕಂತೆ ಆಚಾರಿಸಬೇಕಾದ ದಿನಗಳು ಜಾರಿ ಹೋಗುತ್ತವೆ. ಉದಾಹರಣೆಗೆ, ಎಳೆ ಬಿಸಿಲು ಮೂಡಿ ಬರುವ ವಸಂತ ಋತುವಿನಲ್ಲಿ ಆಚಾರಿಸಬೇಕಾದ ಯುಗಾದಿ ಹಬ್ಬವು ಕೆಲವೇ ವರ್ಷಗಳಲ್ಲಿ ಚಳಿಗಾಲದ ಶರದ್ ಋತುವಿನಲ್ಲಿ ಆಚರಿಸಬೇಕಾಗುತ್ತದೆ. ಈ ಪರಿಸ್ಥಿತಿಯನ್ನು ತಪ್ಪಿಸಲು, 3 ವರ್ಷಗಳಿಗೊಮ್ಮೆ, ಎಂದರೆ ಸುಮಾರು 33 ತಿಂಗಳ ಮಧ್ಯಂತರದಲ್ಲಿ ಈ ಮೇಲ್ಕಂಡ ಹೆಚ್ಚುವರಿ ದಿನಗಳನ್ನು ಒಗ್ಗೂಡಿಸಿ ಒಂದು ಹೆಚ್ಚುವರಿ ಚಾಂದ್ರಮಾನ ಮಾಸವನ್ನಾಗಿ (ತಿಂಗಳನ್ನು) ಸೇರಿಸಲಾಗುತ್ತದೆ. ಈ ಹೆಚ್ಚುವರಿ ತಿಂಗಳನ್ನೇ ಅಧಿಕ ಮಾಸ  ಎನ್ನುವುದು. ಆಗ ಸೌರಮಾನ ಮತ್ತು ಚಾಂದ್ರಮಾನದ ವರ್ಷಗಳ ಲೆಕ್ಕಾಚಾರವು ಹೊಂದಿಕೊಳ್ಳುತ್ತದೆ. ಹೀಗೆ ಮಾಡಿದ್ದಲ್ಲಿ ಹಬ್ಬಗಳನ್ನು ನಿಗದಿತವಾದ ಋತಮಾನದಲ್ಲೇ ಆಚರಿಸಬಹುದು. ಚಾಂದ್ರಮಾನವೆಂದರೆ ಸೂರ್ಯ ಮತ್ತು ಚಂದ್ರ ಎರಡರ ಚಲನೆಯನ್ನೂ ಅವಲಂಬಿಸಿದೆ ಎಂದು ಏಕೆ ಹೇಳಿದೆವೆಂದು ಈಗ ತಿಳಿದಿರಬಹುದು. 

ಹಾಗಾದರೆ ಅಧಿಕಮಾಸವನ್ನು ನಿಖರವಾಗಿ ಎಲ್ಲಿ ಸೇರಿಸಬೇಕು? ಎನ್ನುವ ಪ್ರಶ್ನೆ ಏಳುತ್ತದೆ. ಯಾವ ಚಾಂದ್ರಮಾನ ಮಾಸದಲ್ಲಿ ಸೂರ್ಯನ ಸಂಕ್ರಮಣವಿರುವುದಿಲ್ಲವೋ ( ಎಂದರೆ, ಸೂರ್ಯ, ಒಂದು ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಗೆ ಹೋಗುವುದಿಲ್ಲವೋ) ಆ ಮಾಸದ ಜೊತೆಗೇ ಅಧಿಕಮಾಸವನ್ನು ಸೇರಿಸಲಾಗುತ್ತದೆ. ಉದಾಹರಣೆಗೆ, ಆಷಾಢದ ಮಾಸದಲ್ಲಿ ಸಂಕ್ರಮಣವಿಲ್ಲ ಎಂದು ತಿಳಿದಾಗ, ಅದು ಅಧಿಕ ಆಷಾಢ ಮಾಸವಾಗುತ್ತದೆ. ಅದರ ನಂತರ ಬರುವ ತಿಂಗಳು ನಿಜ-ಆಷಾಢವಾಗುತ್ತದೆ. ಯಾವ ಮಾಸದ ಆರಂಭದಲ್ಲಿ ಅಧಿಕ ಮಾಸ ಸೇರ್ಪಡೆಯಾಗಿರುತ್ತದೆಯೋ ಅದೇ ಮಾಸದ ಹೆಸರಿನಿಂದ ಅಧಿಕ ಎಂಬ ಪದ ಸೇರಿಸಿ ಅಧಿಕ ಮಾಸವನ್ನು ಗುರುತಿಸಲಾಗುತ್ತದೆ. 

ಅಧಿಕಮಾಸವನ್ನು ಆಧಾರಿಸಿದ ಒಂದು ಉದಾಹರಣೆಯನ್ನು ಗಮನಿಸೋಣ. 2021 ರಲ್ಲಿ, ಚಂದ್ರಮಾನ ಯುಗಾದಿಯನ್ನು ಏಪ್ರಿಲ್ 13 ರಂದು ಆಚರಿಸಲಾಯಿತು. 2022 ರಲ್ಲಿ, ಏಪ್ರಿಲ್ 2 ರಂದು. 2023 ರಲ್ಲಿ ಇದು ಮಾರ್ಚ್ 22 ರಂದು ಇರುತ್ತದೆ. ದಿನಗಳ ಲೆಕ್ಕಾಚಾರವಾಗಿ 2024 ರಲ್ಲಿ ಮಾರ್ಚ್ 11ಕ್ಕೇ ಯುಗಾದಿ ಹಬ್ಬವನ್ನು ಆಚಾರಿಸಬೇಕು ಆದರೆ 2024 ರ ಮೊದಲು ಎಂದರೆ 2023 ರಲ್ಲಿ ಅಧಿಕ ಮಾಸ ಸಂಭವಿಸುತ್ತದೆ. ಹೀಗೆ ಅಧಿಕ ಮಾಸವಿಲ್ಲದೇ ಹೋಗಿದ್ದರೆ ಯುಗಾದಿ ಹಬ್ಬವು ಮಾರ್ಚ್-ಏಪ್ರಿಲ್ ನಿಂದ ಫೆಬ್ರವರಿ-ಮಾರ್ಚ್ ಗೆ, ನಂತ ಜನವರಿ-ಫೆಬ್ರವರಿ ಹೀಗೆಲ್ಲ ಹಿಂದೆ ಸರಿದು ಹೋಗಿಬಿಡುತ್ತಿತ್ತು.

ನಾವು ಹುಟ್ಟಿದ ದಿನದಂದು ಚಂದ್ರ ಯಾವ ನಕ್ಷತ್ರಕ್ಕೆ ಹತ್ತಿರದಲ್ಲಿರುತ್ತಾನೆಯೋ ಪ್ರತೀ ವರ್ಷವೂ ಚಂದ್ರ ಅದೇ ನಕ್ಷತ್ರಕ್ಕೆ  ಹತ್ತಿರದಲ್ಲಿರುವ ದಿನವನ್ನು  ತಿಳಿದುಕೊಂಡು ನಕ್ಷತ್ರದ ಪ್ರಕಾರ ಮತ್ತು ಹಿಂದೂ ಪಂಚಾಂಗದ ಪ್ರಕಾರ ನಾವು ಜನ್ಮದಿನವನ್ನಾಗಲಿ ಅಥವಾ ಹಬ್ಬ ಹರಿದಿನಗಳನ್ನಾಗಲಿ ಆಚರಿಸುತ್ತೇವೆ. ಎಂದರೆ, ಪ್ರತೀ ವರ್ಷವೂ ನಾವು ಆಚಾರಿಸುತ್ತಿರುವ ವಿಶೇಷ ದಿನಕ್ಕೆ ಸಂಬಂಧಿಸಿರುವ ನಕ್ಷತ್ರ ಮತ್ತು ಚಂದ್ರಮರ ಸ್ಥಾನಗಳು ಹೆಚ್ಚುಕಡಿಮೆ ಸಾಪೇಕ್ಷಿತವಾಗಿರುತ್ತದೆ.  ಆದ್ದರಿಂದ  ಪಾಶ್ಚಾತ್ಯ ಕ್ಯಾಲೆಂಡರ್ ಪ್ರಕಾರ ಹಬ್ಬಗಳ ದಿನಾಂಕಗಳು ಬೇರೆಬೇರೆಯಾಗಿದ್ದರು ಚಂದ್ರ-ತಾರೆಯರ ಸ್ಥಾನ ಒಂದೇ ಆಗಿರುತ್ತದೆ.  ಹಾಗಾಗಿ ಭಾರತೀಯ ಪಂಚಾಂಗವನ್ನು ಅನುಸರಿಸಿ ನಡೆಯುವ ಆಚರಣೆಗಳನ್ನು ಅವೈಜ್ಞಾನಿಕವೆಂದು ಎಂದಿಗೂ  ಹೇಳಲಾಗುವುದಿಲ್ಲ, ಕೇವಲ ದೃಷ್ಟಿಕೋನ ಬದಲಾಗಿದೆಯಷ್ಟೇ. 

ಇದುವರೆಗೆ ಭಾರತೀಯ ಕ್ಯಾಲೆಂಡರ್‌ನಲ್ಲಿ ಈ ಎಲ್ಲಾ ಸಮಯದ ಅಳತೆಗಳನ್ನು ಲೆಕ್ಕಹಾಕುವುದನ್ನು ತಿಳಿದುಕೊಂಡಿದ್ದೇವೆ, ಇದು ಆಕಾಶದಲ್ಲಿ ಕಂಡುಬರುವ ಪ್ರಕಾಶಮಾನವಾದ ಕಾಯಗಳ ಚಲನೆಯನ್ನು ಆಧರಿಸಿದೆ, ಅಂದರೆ ಸೂರ್ಯ ಮತ್ತು ಚಂದ್ರನ ಚಲನೆಯನ್ನು ಆಧರಿಸಿದೆ. ಅಂತೆಯೇ ಗುರು ಮತ್ತು ಶನಿ ಗ್ರಹಗಳ ಚಲನಗಳನ್ನು ಗಣನೆಗೆ ತೆಗೆದುಕೊಂಡು ಮಾಡಿರುವ ಲೆಕ್ಕಾಚಾರವೂ ಉಂಟು. ಸೂರ್ಯನನ್ನು ಸುತ್ತಲು ಗುರುವಿಗೆ 12 ವರ್ಷಗಳು ಬೇಕಾಗುತ್ತದೆ, ಅಂತೆಯೇ ಒಂದು ನಕ್ಷತ್ರಕ್ಕೆ ಅನುಗುಣವಾಗಿ  ಗುರು ಗ್ರಹದ ಪಥವನ್ನು ಗಮನಿಸಿದಾಗ ಮತ್ತೆ ಅದು ಸಾಪೇಕ್ಷಿತ ಸ್ಥಾನಕ್ಕೆ ಮರಳಲು 12 ವರ್ಷಗಳ ಸಮಯ ಹಿಡಿಯುತ್ತದೆ ಎಂದು ತಿಳಿಯುತ್ತದೆ. ಹೀಗೆ ಮಾಡಲು ಶನಿ ಗ್ರಹಕ್ಕೆ 30 ವರ್ಷಗಳ ಸಮಯ ಬೇಕಾಗುತ್ತದೆ. ಗುರು ಗ್ರಹವು ಸೂರ್ಯನ ಸುತ್ತ 5 ಬಾರಿ ಪ್ರದಕ್ಷಿಣೆ ಹಾಕುವ ಸಮಯಕ್ಕೆ ಶನಿ ಗ್ರಹ 2 ಬಾರಿ ಮುಗಿಸಿರುತ್ತದೆಯಷ್ಟೆ. ಎಂದರೆ, ಸುಮಾರು ಅರವತ್ತು ವರ್ಷಗಳಿಗೆ ಒಮ್ಮೆ ಶನಿ ಮತ್ತು ಗುರು ಗ್ರಹಗಳು, ನಕ್ಷತ್ರಗಳೊಂದಿಗೆ ಅದೇ ಸಾಪೇಕ್ಷ ಸ್ಥಾನದಲ್ಲಿರುತ್ತವೆ. ಉದಾಹರಣೆಗೆ ೨೦೨೦ರಲ್ಲಿ ಶ್ರವಣ ನಕ್ಷತ್ರದ ಬಳಿ, ಶನಿ ಮತ್ತು ಗುರು ಗ್ರಹಗಳು ಒಟ್ಟಾಗಿ ಕಂಡು ಬಂದಿದ್ದವು. ೨೦೮೦ರಲ್ಲಿ ಮತ್ತೆ ಶನಿ-ಗುರುಗಳು ಒಟ್ಟಾಗಿ ಶ್ರವಣ ನಕ್ಷತ್ರದ ಬಳಿ ಕಂಡು ಬರುತ್ತವೆ. ಈ 6೦ ವರ್ಷದ ಅವಧಿಯನ್ನೇ ಹಿಂದೂ ಪಂಚಾಂಗದಲ್ಲಿ ‘ಸಂವತ್ಸರ ಚಕ್ರ’ ಎಂದು ಕರೆಯುವುದು. 

ಈ ಲೇಖನದ ಪರಿಧಿಯಲ್ಲಿ ಕೇವಲ ಕೆಲವು ಮೂಲ ಅಂಶಗಳನ್ನು ಪರಿಚಯಿಸಿದ್ದೇವೆ. ಇದು ಕುತೂಹಲಿಗಳಿಗೆ ಇನ್ನೂ ಹೆಚ್ಚಿನ ವಿಷಯಗಳನ್ನು ಓದಲು, ಆಳವಾಗಿ ಅಭ್ಯಸಿಸಲು ಆಸಕ್ತಿ ಮೂಡಿಸುತ್ತದೆ ಎಂದು ಆಶಿಸುತ್ತೇವೆ.

(Editor’s Note: This article was originally published in hamsanandi.medium.com in English. This is a translation of the article, published here with the author’s permission.)

Feature Image Credit: indiatvnews.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply